ನನಗೆ ಎರಡು ಆಸೆಗಳಿದ್ದವು. ಎರಡೆನೆಯದ್ದು ಒಂದು ಶಾಲು. ದ್ರಾಕ್ಷೆ ಬಳ್ಳಿಗಳ ಅಂಚು ಇರುವ ಖಾದಿ ಶಾಲನ್ನು ಮಿಸ್ಟರ್ ಅಚ್ಚುತನ್ ನನಗೆ ಕೊಡಿಸಿದರು. ಮೊದಲನೇ ಆಸೆ 270ನ್ನು ಕೊಲ್ಲಬೇಕು! ಅದಕೆ ನನ್ನ ಕೈಯಲ್ಲಿ ಆಯುಧಗಳೊಂದೂ ಇಲ್ಲ. ಒಂದು ರಿವಾಲ್ವರ್ ಸಿಕ್ಕಿದ್ದರೆ ಸಾಕಿತ್ತು! ಎಂದು ಮನಸು ಹೇಳುತ್ತಿತ್ತು. ಆತ ಪಾಳಯಂ ಅಲ್ಲಿ ಟ್ರಾಫಿಕ್ ಡ್ಯೂಟಿಯಲ್ಲಿದ್ದದ್ದನ್ನು ನಾನು ನೋಡಿದೆ. ಆರಡಿ ಎತ್ತರದ ಒಬ್ಬ ರಾಕ್ಷಸ. ನಾನು ಹೊಡೆದರೆ ಆತನಿಗೆ ನಾಟದು. ಸಣ್ಣ ಚೂರಿಯಿದ್ದಿದ್ದರೆ ಎದೆಗೆ ಇರಿದು ಗೀರಬಹುದಿತ್ತು!
ಸುನೈಫ್ ವಿಟ್ಲ ಅನುವಾದಿಸಿರುವ ಮಲಯಾಳಂ ಕತೆಗಾರ ವೈಕಂ ಮುಹಮ್ಮದ್ ಬಷೀರ್ ಅವರ ಕತೆಗಳ ಸಂಕಲನ “ಭೂಮಿಯ ಹಕ್ಕುದಾರರು” ಶೀಘ್ರದಲ್ಲಿ ಬಿಡುಗಡೆಗೊಳ್ಳಲಿದ್ದು, ಅದರ ಒಂದು ಕತೆ ನಿಮ್ಮ ಓದಿಗೆ

 

ದೂರದೂರಿನ ಯಾವುದೋ ಪಟ್ಟಣದಲ್ಲಿ ಸಂಕಟಗಳ ಮೂಟೆ ಹೊತ್ತು ದಿನದೂಡುತ್ತಿರುವ ಮಗನಿಗೆ ಅಮ್ಮ ಎದೆ ಭಾರ ಹೊತ್ತ ಕಾಗದ ಬರೆಯುತ್ತಾಳೆ.
‘ಮಗನೇ, ನಮಗೆ ನಿನ್ನನ್ನೊಮ್ಮೆ ನೋಡಬೇಕು.’

ಪತ್ರ ಇಷ್ಟಕ್ಕೇ ಮುಗಿಯುವುದಿಲ್ಲ. ಸುಮಾರು ಸಾಲುಗಳಾಗಿ ಮುಂದುವರಿಯುತ್ತವೆ. ವ್ಯಾಕರಣ ನಿಯಮಗಳಾಗಲೀ, ಅಕ್ಷರ ಚೆಂದವಾಗಲೀ ಅಲ್ಲಿರುವುದಿಲ್ಲ. ಪರಸ್ಪರ ಕಂಡು ಅದೆಷ್ಟು ಕಾಲವಾಯಿತೋ.

ಅಮ್ಮ ದಿನವೂ ಮಗನ ದಾರಿ ಕಾದು ಕೂರುವ ಸಂಗತಿ ಅವನಿಗೆ ಗೊತ್ತಿಲ್ಲದೇನಿಲ್ಲ. ಆದರೇನು ಮಾಡುವುದು? ಮನೆಯ ದಾರಿ ಹಿಡಿಯೋಣವೆಂದರೆ ಕೈಯಲ್ಲಿ ಬಿಡಿಗಾಸಿಲ್ಲ. ದಿನದೂಡುವುದೇ ಕಷ್ಟ. ‘ನಾಳೆ ಹೊರಡಬೇಕು. ಅಮ್ಮನನ್ನು ಒಮ್ಮೆ ನೋಡಬೇಕು.’ ಎಂದು ದಿನವೂ ಸಮಾಧಾನಿಸಿಕೊಳ್ಳುವುದು. ಹೀಗಿರುವಾಗ, ದಿನಗಳು ವಾರಗಳಾಗಿಯೂ, ವಾರಗಳು ತಿಂಗಳುಗಳಾಗಿಯೂ, ತಿಂಗಳುಗಳು ವರ್ಷಗಳಾಗಿಯೂ ಬದಲಾಗುತ್ತಲೇ ಇರುತ್ತದೆ.
ಅಮ್ಮ ಮಾತ್ರ ದಿನವೂ ಮಗನ ದಾರಿ ಕಾದೇ ಕಾಯುತ್ತಾಳೆ.

(ವೈಕಂ ಮುಹಮ್ಮದ್ ಬಷೀರ್)

ನಾನು ಇಲ್ಲಿಯ ತನಕ ಹೇಳಿದ್ದು ಮತ್ತು ಮುಂದಕ್ಕೆ ಹೇಳ ಹೊರಟಿರುವುದು ಬೇರೆ ಯಾರ ಕುರಿತೂ ಅಲ್ಲ, ಆಕೆ ನನ್ನ ಅಮ್ಮ. ಭಾರತದ ಪ್ರತಿಯೊಬ್ಬ ಮಕ್ಕಳಿಗೂ ತಮ್ಮ ಅಮ್ಮಂದಿರ ಬಗ್ಗೆ ಇಂತಹ ಕತೆಗಳನ್ನು ಹೇಳಲಿಕ್ಕಿರಬಹುದು. ನಾನಿಲ್ಲಿ ಹೇಳುತ್ತಿರುವುದು ಇಂಡಿಯಾದ ಸ್ವಾತಂತ್ರ್ಯ ಹೋರಾಟದ ಬಗ್ಗೆ. ನನಗೆ ಅಮ್ಮನೊಂದಿಗೆ ಅಂತಹ ಗಾಢ ನಂಟೇನೂ ಇರಲಿಲ್ಲ. ಅವಳ ಮಗ ಎಂಬುದಷ್ಟೇ ನನಗೂ ಅವಳಿಗೂ ನಡುವೆ ಇರುವ ಗಂಟು. ಆದರೂ ನೆನಪಾದಾಗಲೆಲ್ಲ ಬೇಸರ ಕವಿಯುತ್ತದೆ. ನನ್ನಂತಹ ಸಂತತಿಗಳನ್ನು ಹುಟ್ಟಿಸಿದ ಅಮ್ಮಂದಿರು ಭಾರತದ ತುಂಬ ತುಂಬಿದ್ದಾರೆ. ಆ ಮಕ್ಕಳು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲಿಗೆ ತಳ್ಳಲ್ಪಟ್ಟಾಗ ಆ ಅಮ್ಮಂದಿರೆಲ್ಲ ಏನು ಮಾಡಿದರು? ಎಲ್ಲಿಂದಲೋ ನುಸುಳಿ ಬಂದ ಬಿಳಿಯರಿಗೆ ತಮ್ಮತನವನ್ನೇ ಅರ್ಪಿಸಿ ಅವರ ಕಿಂಕರರಂತೆ ವರ್ತಿಸುತ್ತಿದ್ದ ಭಾರತೀಯರೇ ನಮ್ಮ ದೇಶದ ಯುವಕ, ಯುವತಿಯರನ್ನು ಸಾಯುವಂತೆ ಹೊಡೆದು ಹಿಂಡಿ ಹಿಪ್ಪೆ ಮಾಡಿ ಜೈಲಿಗೆ ತಳ್ಳುತ್ತಿದ್ದ ಕಾಲದಲ್ಲಿ ಅವರ ಅಮ್ಮಂದಿರು ಮನೆಗಳಲ್ಲಿ ಕೂತು ತಮ್ಮ ಮಕ್ಕಳಿಗಾಗಿ ಏನು ಮಾಡುತ್ತಿದ್ದರು? ಯೋಚಿಸಲೂ ಆಗುತ್ತಿಲ್ಲವಲ್ಲ? ನನ್ನ ಯೋಚನೆಗೂ ನಿಲುಕುತ್ತಿಲ್ಲ. ಆದರೆ ನನ್ನ ಅಮ್ಮ ಏನು ಮಾಡುತ್ತಿದ್ದರು ಎಂಬುದು ಮಾತ್ರ ನನಗೆ ಗೊತ್ತು.

ಈ ಹಳೆ ಪುರಾಣಗಳನ್ನು ಬರೆಯಲು ಅಂತಹ ದೊಡ್ಡ ಕಾರಣಗಳೇನೂ ಇಲ್ಲ. ಅಮ್ಮನ ಪತ್ರ ಓದುತ್ತಿದ್ದಾಗ ಹಳೆಯ ನೆನಪುಗಳು ಹೀಗೇ ನುಸುಳಿದವು. ಅದು ವೈಕ್ಕಂನ ತಲಯೋಲಪ್ಪರಂಬಿನಿಂದ ನೂರು ಚಿಲ್ಲರೆ ಮೈಲು ದೂರದ ಕೋಳಿಕ್ಕೋಡಿಗೆ ಉಪ್ಪು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಹೋದ ಕತೆ.

‘ಉಪ್ಪು ಸತ್ಯಾಗ್ರಹ! ನೆನಪುಂಟು ತಾನೇ?’

ಆ ಕತೆ ಬರೆಯುವ ಮುನ್ನ ಒಂದು ಸಂಗತಿ ಹೇಳಲಿಕ್ಕಿದೆ. ನಾನಿದನ್ನು ಬರೆಯುತ್ತಿರುವುದು ಸಾವಿರದೊಂಬೈನೂರ ಮೂವತ್ತೆಂಟರಲ್ಲಿ ಎಂಬುದೋ, ಭಾರತ ಈಗಲೂ ಸ್ವಾತಂತ್ರ್ಯ ಹೊಂದಿಲ್ಲ ಎಂಬುದೋ ಅಲ್ಲ. ಇಲ್ಲಿ ಕೇಳಿ ಆ ಗುಟ್ಟನ್ನು. ನಾನು ಮೊದಲ ಬಾರಿ ಪೆಟ್ಟು ತಿಂದದ್ದು ಮೋಹನದಾಸ ಕರಮಚಂದ ಗಾಂಧಿ ಎಂಬ ಮನುಷ್ಯನ ಕಾರಣದಿಂದ! ಅಮ್ಮ ನನ್ನನ್ನು ಹಡೆಯದಿರುತ್ತಿದ್ದರೆ ಈ ಗಲಾಟೆಗಳೊಂದೂ ನನ್ನ ಸುತ್ತ ನಡೆಯುತ್ತಿರಲಿಲ್ಲ. ನನ್ನಿಂದಾಗಿ ಆಕೆ ನೋವುಣ್ಣುವುದೂ ತಪ್ಪುತ್ತಿತ್ತು. ಗುಲಾಮಿತನ, ದಾರಿದ್ರ್ಯ ಮತ್ತನೇಕ ಭಯಾನಕ ವ್ಯಾಧಿಗಳಿರುವ ಈ ಹತಭಾಗ್ಯ ನಾಡಿನಲ್ಲಿ ಯಾಕಾಗಿ ನನ್ನನ್ನು ಹೆತ್ತಳು? ಇಂಡಿಯಾದ ಪ್ರತಿಯೊಬ್ಬ ತಾಯಿಯೊಂದಿಗೆ ಅವರ ಗಂಡು-ಹೆಣ್ಣು ಸಂತತಿಗಳು ಈ ಪ್ರಶ್ನೆಯನ್ನು ಕೇಳುತ್ತವೆಯೇ? ಇಂಡಿಯಾ ದೇಶ ಹೇಗೆ ಇಷ್ಟೊಂದು ದರಿದ್ರವಾಯಿತು? ನಾನೊಬ್ಬ ಭಾರತೀಯ ಎಂದು ಅಭಿಮಾನದಿಂದ ಹೇಳಲಾಗುತ್ತಿಲ್ಲವಲ್ಲ. ನಾನೊಬ್ಬ ಬರಿಯ ಗುಲಾಮ. ಈ ಗುಲಾಮಿ ದೇಶವನ್ನು ನಾನು ದ್ವೇಷಿಸುತ್ತೇನೆ! ಆದರೆ ಇಂಡಿಯಾ ನನ್ನ ತಾಯಿಯಲ್ಲವೆ? ನನ್ನನ್ನು ಹೆತ್ತ ತಾಯಿ ನನಗಾಗಿ ಕಾಯುತ್ತಿರುವಂತೆ ನನ್ನ ದೇಶವು ನನಗಾಗಿ ಕಾಯುತ್ತಿಲ್ಲವೇ? ಭಾರತವು ಸತ್ತ ನನ್ನನ್ನು ಮತ್ತು ನನ್ನ ಅಮ್ಮ ಬದುಕಿರುವ ನನ್ನನ್ನು ಕಾಯುತ್ತಿಲ್ಲವೇ?
ಭರವಸೆ!

ನನಗೆ ನೆನಪುಂಟು.
ಅಮ್ಮ ನನ್ನನ್ನು ಹೆತ್ತಳು. ಮೊಲೆ ಹಾಲು ಕುಡಿಸಿ ಉಣ್ಣಿಸಿ ಬೆಳೆಸಿದಳು. ನನ್ನನ್ನು ಒಬ್ಬ ಮನುಷ್ಯನನ್ನಾಗಿ ಮಾಡಿದಳು. ದಾಹ ಮೋಹದಿಂದ ಹುಟ್ಟಿದ ಕೂಸು ನೀನು ಎಂದು ಅಮ್ಮ ವಾದಿಸುತ್ತಾಳೆ. ‘ನೀನು ದಾಹಿಸಿ ಮೋಹಿಸಿ ಉಂಟಾದ ಸಂತಾನ ಮಗಾ’ ಎಂದು ಎಲ್ಲ ಅಮ್ಮಂದಿರು ತಮ್ಮ ಮಕ್ಕಳೊಂದಿಗೆ ಹೇಳಿಕೊಳ್ಳುವುದಿಲ್ಲವೇ. ನನ್ನೆದೆಯಲ್ಲಿ ಉರಿಯುತ್ತಿರುವುದನೆಲ್ಲ ಇಲ್ಲಿ ಬರೆಯಲಾಗುತ್ತಿಲ್ಲ. ಕೈಕೋಳ ತೊಡಿಸಿ ಬಂಧಿಸಿದಂತೆ. ಪೋಲೀಸ್ ಲಾಕಪ್ಪುಗಳು, ಜೈಲು, ಗಲ್ಲುಮರ… ಏನನ್ನು ಯೋಚಿಸುತ್ತಿದ್ದೀರಿ?

‘ಮನಸ್ಸು ಮತ್ತು ದೇಹಗಳೆರಡನ್ನೂ ಉಸಿರುಗಟ್ಟಿಸುವ ಎತ್ತರೆತ್ತರದ ಗೋಡೆಗಳಿರುವ ಕಾರಾಗೃಹ ಈ ಇಂಡಿಯಾ.’ ಎಂದು ಗಾಂಧೀಜಿ ಹೇಳಿದ್ದರು. ಸಂದರ್ಭ ಸರಿಯಾಗಿ ನೆನಪಿಲ್ಲ. ಆದರೆ ಗಾಂಧೀಜಿಯ ಕಾರಣದಿಂದ ಒದೆ ತಿಂದದ್ದು ಮಾತ್ರ ಸರಿಯಾಗಿ ನೆನಪುಂಟು. ಹೊಡೆದಾತ ಒಬ್ಬ ಬ್ರಾಹ್ಮಣ. ಹೆಸರು ವೆಂಕಟೇಶ್ವರ ಅಯ್ಯರ್. ವೈಕ್ಕಂ ಇಂಗ್ಲಿಷ್ ಹೈಸ್ಕೂಲ್ ಹೆಡ್ ಮಾಸ್ಟರ್. ನಾಗರ ಬೆತ್ತದಿಂದ ಚೆನ್ನಾಗಿ ಏಳು ಏಟು ಕೊಟ್ಟಿದ್ದರು. ಅದು ವೈಕ್ಕಂ ಸತ್ಯಾಗ್ರಹ ಕಾಲದಲ್ಲಿ. ಎಲ್ಲ ಕೆಳಜಾತಿ ಹಿಂದೂಗಳಿಗೆ ದೇವಸ್ಥಾನ ಪ್ರವೇಶಕ್ಕೆ ಅನುಮತಿ ಕೊಡಬೇಕು. ಸತ್ಯಾಗ್ರಹಿಗಳ ಕಣ್ಣಿಗೆ ಸವರ್ಣೀಯರು ಹಸಿ ಸುಣ್ಣ ಬಳಿಯುತ್ತಿದ್ದರು. ಹೊಡೆಯುತ್ತಿದ್ದರು. ಇದಕ್ಕೆಲ್ಲ ಕೊನೆ ಹಾಡಬೇಕು. ಬರುತ್ತಿದ್ದಾರೆ ಗಾಂಧೀಜಿ!

ವೈಕ್ಕಂ ಬೋಟ್ ಜೆಟ್ಟಿ ಮತ್ತು ಸರೋವರದ ದಡದಲ್ಲಿ ದೊಡ್ಡ ಜನಸಂದಣಿ. ಸುತ್ತಲೂ ಗಲಾಟೆ. ಉಳಿದ ವಿದ್ಯಾರ್ಥಿಗಳೊಂದಿಗೆ ನುಸುಳಿಕೊಂಡು ನಾನೂ ಆ ಜನ ಸಾಗರದ ಮುಂಚೂಣಿ ತಲುಪಿದೆ. ಬೋಟಿನಲ್ಲಿದ್ದ ಗಾಂಧೀಜಿಯನ್ನು ದೂರದಿಂದ ಕಂಡೆ. ಬೋಟು ಜೆಟ್ಟಿಗೆ ಬಂತು. ಸಾವಿರ ಸಾವಿರ ಕಂಠಗಳು ಧ್ವನಿಸಿದವು. ಇಂಡಿಯಾದ ಸಕಲ ಅನ್ಯಾಯಗಳ ವಿರುದ್ಧದ ಸಮರ ಕಹಳೆಯಂತೆ. ಕದನಕ್ಕೆ ತೊಡೆ ತಟ್ಟಿದಂತೆ; ಸಾವಿರ ಸಾವಿರ ಕಂಠಗಳಿಂದ ಕಡಲ ಮೊರೆತದಂತೆ: ‘ಮಹಾತ್ಮ ಗಾಂಧೀ… ಕೀ… ಜೇ!’

ಆ ಅರೆಬೆತ್ತಲೆ ಫಕೀರ ಎರಡು ಹಲ್ಲುದುರಿದ್ದ ಮುಖ ತೋರಿಸುತ್ತಾ ನಸುನಕ್ಕು ಕೈ ಜೋಡಿಸಿ ನಮಸ್ಕರಿಸುತ್ತಾ ದಡಕ್ಕಿಳಿದರು. ಅಬ್ಬಾ ಬೊಬ್ಬೆಯೇ! ತೆರೆದ ಕಾರಿನಲ್ಲಿ ಅವರು ಮೆಲ್ಲಗೆ ಕೂತರು. ಆ ಜನಸಾಗರದ ನಡುವಿನಿಂದ ನಿಧಾನಕ್ಕೆ ಕಾರು ಸತ್ಯಾಗ್ರಹಾಶ್ರಮದ ಕಡೆಗೆ ಚಲಿಸಿತು. ವಿದ್ಯಾರ್ಥಿಗಳು ಕೆಲವರು ಕಾರಿನ ಬಾಡಿಗೆ ಹತ್ತಿ ನಿಂತರು; ಅವರಲ್ಲಿ ನಾನೂ ಒಬ್ಬ. ಈ ಗಲಾಟೆಯ ನಡುವೆ ನನಗೆ ಒಂದು ಬಯಕೆ. ಲೋಕವಂದಿತನಾದ ಈ ಮಹಾತ್ಮನನ್ನು ಒಮ್ಮೆ ಮುಟ್ಟಬೇಕು! ಈಗ ಒಂದು ಬಾರಿ ಮುಟ್ಟಲಾಗದಿದ್ದರೆ ನಾನಿಲ್ಲಿಯೇ ಬಿದ್ದು ಸಾಯುತ್ತೇನೆ ಎಂದು ಅನಿಸತೊಡಗಿತು. ಲಕ್ಷೋಪಲಕ್ಷ ಜನರ ನಡುವೆ ಯಾರಾದರೂ ನೋಡಿದರೆ? ಭಯ ಆತಂಕ. ಎಲ್ಲ ಮರೆತು ನಾನು ಗಾಂಧೀಜಿಯ ಬಲ ತೋಳನ್ನು ಮುಟ್ಟಿಯೇ ಬಿಟ್ಟೆ! ಬೀಳುವಂತೆ ವಾಲಿಕೊಂಡಿದ್ದರಿಂದ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಬಲವಿಲ್ಲದ ಮಾಂಸಖಂಡ. ಮೆತ್ತಗಿದೆ. ಗಾಂಧೀಜಿ ನನ್ನನ್ನು ನೋಡಿ ಮಂದಹಾಸ ಬೀರಿದರು.

ಅಂದು ಸಂಜೆ ಮನೆಗೆ ಬಂದವನೇ ಅಭಿಮಾನದಿಂದ ಅಮ್ಮನ ಬಳಿ ಹೇಳಿದೆ:
“ಉಮ್ಮಾ ನಾನು ಗಾಂಧಿಯನ್ನು ಮುಟ್ಟಿದೆ.”

ಗಾಂಧೀಜಿ ಎಂದರೆ ಏನೆಂದೇ ಗೊತ್ತಿಲ್ಲದ ನನ್ನ ತಾಯಿ ಭಯಗೊಂಡಿದ್ದಳು.

“ಹೋ… ನನ್ನ ಮಗನೇ…” ಅಮ್ಮ ತೆರೆದ ಬಾಯಿ ಮುಚ್ಚದೆ ನನ್ನನ್ನು ನೋಡುತ್ತಿದ್ದರು.

ನನಗೆ ನೆನೆಪುಂಟು:
ಹೆಡ್ ಮಾಸ್ಟರ್ ದೇವಸ್ಥಾನ ಪ್ರವೇಶ ಸತ್ಯಾಗ್ರಹಕ್ಕೆ ವಿರುದ್ಧವಾಗಿದ್ದರು. ಗಾಂಧೀಜಿಯನ್ನೂ ವಿರೋಧಿಸುತ್ತಿದ್ದರು. ಆದ್ದರಿಂದಲೇ ವಿದ್ಯಾರ್ಥಿಗಳು ಯಾರೂ ಖಾದಿ ಧರಿಸಬಾರದೆಂದು ನಿಷೇಧ ಹೇರಿದ್ದರು. ಸತ್ಯಾಗ್ರಹಾಶ್ರಮದ ಕಡೆಗೂ ಹೋಗುವಂತಿರಲಿಲ್ಲ.

ಆ ಕಾಲದಲ್ಲಿ ನಾನು ಖಾದಿ ಧರಿಸುತ್ತಿದ್ದೆ; ಆಶ್ರಮಕ್ಕೂ ಹೋಗುತ್ತಿದ್ದೆ. ಒಂದು ದಿನ ಕ್ಲಾಸಿಗೆ ಹೋಗುತ್ತಿದ್ದಾಗ ನನ್ನನ್ನು ಕರೆದ ಹೆಡ್ ಮಾಸ್ಟರ್ ವ್ಯಂಗ್ಯ ಮಿಶ್ರಿತ ಕೋಪದಿಂದ ಹೇಳಿದರು:

“ಅಯ್ಯೋ.. ಇವನದ್ದೊಂದು ವೇಷ ನೋಡಿದ್ರಾ?”
ನಾನು ಸುಮ್ಮನಿದ್ದೆ, ಆತ ಮತ್ತೆ ಕೇಳಿದ:
“ನಿನ್ನ ಅಪ್ಪ ಹಾಕಿದ್ದನೇನೋ ಇದನ್ನ.”
“ಇಲ್ಲ” ಎಂದೆ.

ಮತ್ತೊಂದು ದಿನ ನಾನು ಕ್ಲಾಸ್ ತಲುಪುವಾಗ ಗಂಟೆ ಹೊಡೆದು ಒಂದೆರಡು ನಿಮಿಷ ಕಳೆದಿತ್ತು. ಅವರು ನಾಗರಬೆತ್ತ ಹಿಡಿದು ವರಾಂಡದಲ್ಲಿ ನಿಂತಿದ್ದರು. ನನ್ನನ್ನು ಕರೆದು ಕೇಳಿದಾಗ ನಾನು ಆಶ್ರಮಕ್ಕೆ ಹೋಗಿದ್ದೆನೆಂದು ಹೇಳಿದೆ.

“ಅಲ್ಲಿ ನಿನಗೆ ಯಾರಿದ್ದಾರೆ?” ಆತ ನೆಟ್ಟಗೆ ನಿಂತು ಫಡಫಡಾ ಅಂತ ಆರು ಏಟು ಅಂಗೈಗೆ ಕೊಟ್ಟರು. “ಇನ್ನು ಹೋಗಬಾರದು! ಗೊತ್ತಾಯ್ತಾ?” ಇನ್ನೊಂದೇಟು ಕುಂಡೆಗೆ.
“ಇನ್ನೊಮ್ಮೆ ಹೋದರೆ ನಿನ್ನನ್ನು ಡಿಸ್ಮಿಸ್ ಮಾಡುತ್ತೇನೆ.”
ಆದರೆ ನಾನು ಪುನಃ ಹೋದೆ!

ನನಗೆ ನೆನಪುಂಟು:
ಆ ಕಾಲದಲ್ಲಿ ನನಗೆ ಒಂದು ಖಾದಿ ಅಂಗಿ ಮತ್ತು ಲುಂಗಿ ಇತ್ತು. ಅಂದರೆ ಒಂದೇ ಅಂಗಿ ಮತ್ತು ಲುಂಗಿ ಮಾತ್ರ. ಆಗೆಲ್ಲ ಖಾದಿ ಸ್ವಾತಂತ್ರ್ಯ ಮತ್ತು ಹೋರಾಟದ ಪ್ರತೀಕವಾಗಿತ್ತು. ವಿದೇಶಿ ಬಟ್ಟೆ ತೊಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದೆ.

ಈಗೇನಾದರು ನಾನು ಸತ್ತರೆ ನನ್ನನ್ನು ಈ ಖಾದಿಯಲ್ಲೇ ಅಂತ್ಯ ಸಂಸ್ಕಾರ ಮಾಡಿ ಎಂದು ಹೇಳುತ್ತಿದ್ದೆ. ಉಮ್ಮ ಕೇಳುತ್ತಾರೆ:
“ಕಾಂದಿಗೆ ಎಲ್ಲಿ ಸಿಕ್ಕಿದ್ದಾ ಈ ಗೋಣಿಚೀಲ ಲುಂಗಿ?” ಖಾದಿ ತಾಗಿದರೆ ತುರಿಕೆ ಉಂಟಾಗುತ್ತದೆ ಎಂದೇ ಉಮ್ಮ ನಂಬಿದ್ದರು.

ಆಗೆಲ್ಲ ನಾನು ಹೇಳುವೆ:
“ಇದು ನಮ್ಮ ದೇಶದಲ್ಲಿ ತಯಾರು ಮಾಡಿದ್ದು.”

ಹಾಗೆ ಗಾಂಧೀಜಿ, ಅಲಿ ಸಹೋದರರು, ಮೌಲಾನಾ ಅಬುಲ್ ಕಲಾಂ ಆಝಾದ್, ಜವಾಹರಲಾಲ್ ನೆಹರು, ಸ್ವಯಂ ಆಡಳಿತ, ಬ್ರಿಟಿಷರ ದರ್ಪ – ಇವೆಲ್ಲ ನಮ್ಮ ಚರ್ಚಾ ವಿಷಯಗಳು. ಚೈನಾದ ಬಗ್ಗೆಯೋ ಇಂಗ್ಲೆಂಡಿನ ಬಗ್ಗೆಯೋ ಆ ಊರಿನ ಹಿರಿಯರು ಏನಾದರೂ ಕೇಳಿದರೆ ಉತ್ತರಿಸಲು ಆ ಊರಿನಲ್ಲಿ ಇದ್ದದ್ದು ಇಬ್ಬರು ಯುವಕರು ಮಾತ್ರ. ಒಬ್ಬರು ಮಿಸ್ಟರ್ ಕೆ.ಆರ್. ನಾರಾಯಣನ್. ಕಠಿಣ ಪರಿಶ್ರಮಿಯಾಗಿದ್ದ ಆತ ಅಂದಿನ ಎಲ್ಲ ಪ್ರಮುಖ ಸುದ್ದಿ ಪತ್ರಿಕೆಗಳ ಲೇಖಕರಾಗಿದ್ದರು. ನನ್ನಲ್ಲಿ ಯಾರೇ ಏನೇ ಕೇಳಲಿ ‘ನನಗೆ ಗೊತ್ತಿಲ್ಲ’ ಎಂದು ಹೇಳಿದ್ದು ನೆನಪಿಲ್ಲ. ಆದರೆ, ಒಮ್ಮೆ ಮಾತ್ರ ತಬ್ಬಿಬ್ಬಾಗಿ ಹೋದೆ.

ಉಮ್ಮಾ ಕೇಳಿದರು:
“ಮಗಾ, ನಿನ್ನ ಕಾಂದಿ ನಮ್ಮ ಹಸಿವು ನೀಗಿಸ್ತಾರಾ?”

ಇದೊಂದು ದೊಡ್ಡ ಪ್ರಶ್ನೆ, ದೇಶವನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆ. ಅದರ ಬಗ್ಗೆ ನನಗೆ ಏನೇನೂ ತಿಳಿದಿಲ್ಲ. ಆದರೂ ನಾನು ಹೇಳಿದೆ:
“ಭಾರತ ಸ್ವತಂತ್ರಗೊಂಡಾಗ ನಮ್ಮ ಹಸಿವು ಕೂಡ ತೀರುತ್ತದೆ.”

ಅದು ಸಾವಿರದೊಂಬೈನೂರ ಮೂವತ್ತರ ಕಾಲ. ಆಗಲೇ ಇರಬೇಕು, ಪ್ರಸಿದ್ಧವಾದ ಹನ್ನೊಂದು ಬೇಡಿಕೆಗಳ ಪತ್ರವನ್ನು ಅಂದಿನ ವೈಸ್ರಾಯ್ ಇರ್ವಿನ್ ಪ್ರಭುವಿಗೆ ಗಾಂಧೀಜಿ ಸಾಬರ್ಮತಿ ಆಶ್ರಮದಿಂದ ಕಳಿಸಿ ಕೊಟ್ಟಿದ್ದರು. ರೆನಾಲ್ಡ್ ಎಂಬ ಒಬ್ಬ ಇಂಗ್ಲಿಷ್ ಯುವಕ ಅದನ್ನು ಕೊಂಡುಹೋಗಿದ್ದ ಎಂದು ಕಾಣುತ್ತದೆ. ಆದರೆ ಪ್ರತಿಕ್ರಿಯೆ ನಿರಾಶಾದಾಯಕವಾಗಿತ್ತು. ಗಾಂಧೀಜಿ ಮಾತ್ರ ಪತ್ರದಲ್ಲಿ ಹೇಳಿದ್ದಂತೆ ಅಸಹಕಾರ ಚಳುವಳಿಗೆ ಇಳಿದರು. ಉಪ್ಪು ನಿಯಮ ಉಲ್ಲಂಘಿಸಲು ತನ್ನ ಎಪ್ಪತ್ತು ಅನುಯಾಯಿಗಳೊಂದಿಗೆ ದಂಡೀ ಸಮುದ್ರ ತೀರಕ್ಕೆ ಹೊರಟು ನಿಂತರು. ಇಂಡಿಯಾದ ದರಿದ್ರಕೋಟಿಗಳು ಗಂಜಿಗೂ ಸಾರಿಗೂ ಹಾಕುತ್ತಿದ್ದ ಉಪ್ಪಿಗೆ ಎಲ್ಲಿಂದಲೋ ಬಂದು ಇಲ್ಲಿ ನೆಲೆಯೂರಿರುವ ಬ್ರಿಟಿಷರು ಕರ ಹಾಕಿದ್ದರು. ಇಂಡಿಯಾವನ್ನೇ ನಡುಗಿಸಿದ್ದ ಆ ದಂಡೀ ಯಾತ್ರೆಗೂ ಮೊದಲು ಗಾಂಧೀಜಿ ಹೇಳಿದ್ದರು:

“ಒಂದೋ ನನ್ನ ಬೇಡಿಕೆಗಳನ್ನು ಈಡೇರಿಸಿಕೊಂಡು ಆಶ್ರಮಕ್ಕೆ ಮರಳುವೆ, ಇಲ್ಲದಿದ್ದರೆ ನನ್ನ ದೇಹ ಅರಬ್ಬೀ ಸಮುದ್ರದಲ್ಲಿ ತೇಲುವುದನ್ನು ಕಾಣುವಿರಿ!”
ಗಾಂಧೀಜಿ ಸಾಯುವುದೇ? ಹಿಮಾಲಯದಿಂದ ಕನ್ಯಾಕುಮಾರಿ ತನಕ ಪ್ರತಿಧ್ವನಿಸಿತು. ಭಾರತ ಒಟ್ಟಾಗಿ ಅಲ್ಲೋಲ ಕಲ್ಲೋಲವಾಯಿತು. ಬ್ರಿಟಿಷ್ ಸರಕಾರ ಮತ್ತು ಇಂಡಿಯಾದ ರಾಜರುಗಳು ಅವರ ಸಕಲ ಶಕ್ತಿ ಉಪಯೋಗಿಸಿ ನಿರಾಯುಧರಾದ ಹಿಂದು, ಮುಸ್ಲಿಂ, ಕ್ರೈಸ್ತ, ಫಾರ್ಸಿ, ಸಿಖ್ ಮೊದಲಾದ ಸತ್ಯಾಗ್ರಹಿಗಳನ್ನು ಎದುರಿಸಿ ನಿಂತರು. ಸೈನ್ಯ, ಪೋಲೀಸ್, ಜೈಲು, ಗಲ್ಲು – ಇವಿಷ್ಟೇ ಸರಕಾರದ ಆಡಳಿತವಾಯಿತು. ಗಾಂಧೀಜಿ ಮತ್ತು ಸಂಗಡಿಗರನ್ನು ದಂಡೀ ಸಮುದ್ರ ತೀರದಲ್ಲಿ ಅರೆಸ್ಟ್ ಮಾಡಲಾಯಿತು. ಉಳಿದೆಡೆ ಇದ್ದ ಪರಿಸ್ಥಿತಿಯೇ ಕೇರಳದಲ್ಲೂ ಇತ್ತು. ವಾತಾವರಣ ಸಂಪೂರ್ಣ ಪ್ರಕ್ಷುಬ್ದ.

ಕೋಳಿಕ್ಕೋಡು ಸಮುದ್ರ ತೀರದಲ್ಲಿ ಉಪ್ಪು ನಿಯಮ ಉಲ್ಲಂಘನೆಯಲಿ ತೊಡಗಿದವರ ಮೇಲೆ ಭಾರತೀಯನೆ ಆಗಿದ್ದ ಪೋಲೀಸ್ ಸುಪ್ರೆಂಟ್ ಆಜ್ಞೆಯಂತೆ ಕಠಿಣವಾಗಿ ಮರ್ದಿಸಲಾಯಿತು. ಬೂಟುಕಾಲಿನ ಒದೆ, ಲಾಠಿಯೇಟು. ಅದೂ ಕೂಡ ಭಾರತೀಯರೇ ಆಗಿದ್ದ ಪೋಲೀಸ್ ಮತ್ತು ಸೈನ್ಯದಿಂದ!
ಕೇಳಪ್ಪನ್, ಮುಹಮ್ಮದ್ ಅಬ್ದುರ್ರಹ್ಮಾನ್ ಮೊದಲಾದವರನ್ನು ಅರೆಸ್ಟ್ ಮಾಡಿದರು. ನಿಯಮ ಉಲ್ಲಂಘನೆ, ಅರೆಸ್ಟ್, ಪೋಲೀಸರ ಅಟ್ಟಹಾಸ ಮುಂದುವರಿಯಿತು. ಅವುಗಳಲ್ಲಿ ಅತ್ಯಂತ ದಾರುಣವಾದದ್ದು ಕೋಳಿಕ್ಕೋಡ್ ಸಮುದ್ರತೀರದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಸಿದ ದಾಳಿ. ಎಳೆ ಹುಡುಗರು! ಭವಿಷ್ಯ ಭಾರತದ ಪ್ರಜೆಗಳು. ಅವರನ್ನು ಕೇರಳೀಯರೇ ಆಗಿದ್ದ ಪೋಲೀಸರು ಹೊಡೆದು ಹಾಕಿದರು. ತಲೆ ಹೊಡೆದು, ರಕ್ತದ ಕೋಡಿ ಹರಿಯಿತು. ನೂರಾರು ಮಕ್ಕಳು! ‘ಮಾತೃಭೂಮಿ’ ಪತ್ರಿಕೆಯಲ್ಲಿ ನಾಯಕನೊಬ್ಬ ಕೊಟ್ಟ ಕರುಣಾಜನಕ ಸ್ಟೇಟ್ಮೆಂಟ್ ಒಂದು ಹೀಗಿತ್ತು:

“ಮಾತೃನೆಲದ ಮೇಲಿನ ನಿಮ್ಮ ಕರ್ತವ್ಯ ನಿರ್ವಹಿಸಲು ಕೋಳಿಕ್ಕೋಡ್ ಕಿನಾರೆಯಲ್ಲಿ ಸೇರಿದ ವಿದ್ಯಾರ್ಥಿಗಳೇ, ನಿರಾಯುಧರೂ, ನಿರಪರಾಧಿಗಳೂ ಆದ ಹುಡುಗರೇ, ನಿರ್ದಯೆಯಿಂದ ಕ್ರೂರವಾಗಿ ಲಾಠಿಯಿಂದ ಹೊಡೆದು ತಲೆ ಹೊಡೆಯಲು, ಕೈಕಾಲುಗಳು ಮುರಿದು ಹಾಕಲು ಮಲಯಾಳಿ ಮಹಿಳೆಯರು ಹೆತ್ತವರೆಂದು ಕರೆಯಲ್ಪಡುವ ಈ ಪೋಲೀಸರು ಕೈ ಎತ್ತಿಯೇ ಬಿಟ್ಟರಲ್ಲ! ಈ ನಗರದ ಗೌರವಾನ್ವಿತರು, ಧನಿಕರು, ಪ್ರಜಾ ಪ್ರತಿನಿಧಿಗಳು ಎಂದೆಲ್ಲ ಕರೆದುಕೊಳ್ಳುವವರು ಇದನ್ನೆಲ್ಲ ಕಂಡೂ ಕಾಣದಂತೆ ಸುಮ್ಮನಿರುವುದನ್ನು ನೋಡುವಾಗ, ಬರೀ ಮೇಲಧಿಕಾರಿಗಳ ಆಜ್ಞೆಯನ್ನು ಕಣ್ಣು ಮುಚ್ಚಿ ಪಾಲಿಸುವ ಈ ಬುದ್ದಿಯಿಲ್ಲದ ಪೋಲೀಸರನ್ನು ನಾನೇಕೆ ಬಯ್ಯಬೇಕು?”

ದಾಹ ಮೋಹದಿಂದ ಹುಟ್ಟಿದ ಕೂಸು ನೀನು ಎಂದು ಅಮ್ಮ ವಾದಿಸುತ್ತಾಳೆ. ‘ನೀನು ದಾಹಿಸಿ ಮೋಹಿಸಿ ಉಂಟಾದ ಸಂತಾನ ಮಗಾ’ ಎಂದು ಎಲ್ಲ ಅಮ್ಮಂದಿರು ತಮ್ಮ ಮಕ್ಕಳೊಂದಿಗೆ ಹೇಳಿಕೊಳ್ಳುವುದಿಲ್ಲವೇ. ನನ್ನೆದೆಯಲ್ಲಿ ಉರಿಯುತ್ತಿರುವುದನೆಲ್ಲ ಇಲ್ಲಿ ಬರೆಯಲಾಗುತ್ತಿಲ್ಲ. ಕೈಕೋಳ ತೊಡಿಸಿ ಬಂಧಿಸಿದಂತೆ.

ಹೀಗೆ ವಾಗ್ಯುದ್ಧ ಮತ್ತು ಕಿವಿ ಕಳೆದುಕೊಂಡವರ ಕಾಲ. ಆದರೂ ಬಹುಜನರು ಸುಮ್ಮನಾಗಲಿಲ್ಲ. ಒಕ್ಕೊರೊಳ ಕ್ರಾಂತಿಗೀತೆ ಮೊಳಗಿತು.
‘ಬನ್ನಿ ಬನ್ನಿ ಜನಗಳೇ. ಅಹಿಂಸ ಸಮರ ಕಾದಿದೆ!’

ಹಾಗೇ ನಾನೂ ಹೋದೆ. ಯಾರಲ್ಲೂ ಹೇಳದೆ ಕೇಳದೆ. ಓದು ನಿಲ್ಲಿಸಿ ಕೋಳಿಕ್ಕೋಡಿಗೆ ಹೊರಟು ನಿಂತೆ. ಅವತ್ತು ಸಂಜೆ ಉಮ್ಮ ಅಡುಗೆ ಕೆಲಸದಲ್ಲಿದ್ದಳು. ಉಮ್ಮನಿಗೆ ಯಾವ ಸೂಚನೆಯೂ ಬಿಟ್ಟು ಕೊಡಲಿಲ್ಲ. ಒಂದು ಗ್ಲಾಸ್ ನೀರು ಅವಳ ಕೈಯಿಂದ ಕೇಳಿ ಕುಡಿದು ಅವಳನ್ನೊಮ್ಮೆ ನೋಡಿ ಇಳಿದು ನಡೆದೇಬಿಟ್ಟೆ.
ಯಾರಾದರೂ ಹಿಂಬಾಲಿಸುತ್ತಿರಬಹುದು ಎಂದು ಭಯಗೊಂಡಿದ್ದೆ. ಮರುದಿನ ಎರ್ನಾಕುಳಂ ಅಲ್ಲಿ ಬೋಟ್ ಇಳಿದು ಇಡಪ್ಪಳ್ಳಿಯ ತನಕ ನಡೆದು ರೈಲ್ವೆ ಸ್ಟೇಷನ್ ತಲುಪುವಾಗ ಸಂಜೆಯಾಗಿತ್ತು. ಗಾಡಿ ಬರಲು ತುಂಬಾ ತಡವಾಗಿತ್ತು. ಆಗ ನಾಲ್ಕೈದು ಪೋಲೀಸರು ಲ್ಯಾಂಟೀನ್ ಹಿಡಿದುಕೊಂಡು ಬಂದರು. ಭಯದಿಂದ ನಡುಗ ತೊಡಗಿದೆ.

ಒಬ್ಬೊಬ್ಬರನ್ನು ಎಬ್ಬಿಸಿ ಅವರು ಪ್ರಶ್ನಿಸುತ್ತಿದ್ದಾರೆ. ನಾನು ನಿದ್ದೆ ಮಾಡಿದವನಂತೆ ಮಲಗಿದೆ. ಒಬ್ಬಾತ ಲಾಠಿಯಿಂದ ನನ್ನ ಹೊಟ್ಟೆಗೆ ತಿವಿದು ಎಬ್ಬಿಸಿದ.

ಬೆಳಕನ್ನು ನನ್ನ ಮುಖದ ಹತ್ತಿರ ಹಿಡಿದು ಕೇಳಿದ:
“ಎಲ್ಲಿಗೆ ಹೋಗುತ್ತಿದ್ದೀಯಾ ನೀನು?”

ಏನು ಹೇಳುವುದು? ಕಾಂಗ್ರೆಸ್ ಸೇರಲು ತಿರುವಾಂಕೂರಿನಿಂದ ಕೋಳಿಕ್ಕೋಡಿಗೆ ಹೋಗುತ್ತಿದ್ದೇನೆಂದು ಹೇಳಲು ನನ್ನಿಂದ ಸಾಧ್ಯವಿರಲಿಲ್ಲ.
ನಾನು ಸುಳ್ಳು ಹೇಳಿದೆ: “ಶೋರನೂರಿಗೆ ಹೋಗ್ತಿದ್ದೇನೆ.”
“ಯಾಕೆ?”
ಮತ್ತೊಂದು ಸುಳ್ಳು: “ಅಲ್ಲಿ ನನ್ನ ಮಾವನಿಗೆ ಚಾದಂಗಡಿ ಉಂಟು.”

ನನ್ನ ಭಾಗ್ಯಕ್ಕೆ ಅವರು ಇನ್ನೇನು ಕೇಳಲಿಲ್ಲ. ಅವರು ಒಬ್ಬ ಕಳ್ಳನನ್ನು ಹುಡುಕಿ ಹೊರಟಿದ್ದರು. ಶೋರನೂರಿಗೆ ಟಿಕೆಟ್ ತೆಗೆದುಕೊಂಡೆ. ಅಲ್ಲಿ ಇಳಿದು ಪಟ್ಟಾಂಬಿ ತನಕ ನಡೆದೆ. ಪುನಃ ರೈಲು ಗಾಡಿ ಹತ್ತಿ ಕೋಳಿಕ್ಕೋಡ್ ತಲುಪಿದೆ. ಮುಹಮ್ಮದ್ ಅಬ್ದುರ್ರಹಮಾನರ ‘ಅಲ್ ಅಮೀನ್’ ಪತ್ರಿಕೆಯ ಅಲ್ ಟಮೀನ್ ಲಾಡ್ಜಿನಲ್ಲಿ ಉಳಿದುಕೊಂಡೆ. ಅಲ್ಲಿ ನಾನು ಮಾಡಿದ ಮೊದಲ ಕೆಲಸ ಬಳ್ಳಾರಿ ಜೈಲಿನಲ್ಲಿದ್ದ ನನ್ನ ಊರಿನವರೇ ಆಗಿದ್ದ ಸೈದ್ ಮುಹಮ್ಮದಿಗೆ ರಹಸ್ಯವಾಗಿ ಒಂದು ಪತ್ರ ಕಳಿಸಿದ್ದು. ನನ್ನ ಸರ್ವಸ್ವವನ್ನು ಭಾರತ ಮಾತೆಯ ಪಾದಗಳಿಗೆ ಅರ್ಪಿಸಿಯಾಗಿತ್ತು. ಕೂಡಲೇ ನಾನು ಕೂಡ ಬಂಧಿಸಲ್ಪಡುವೆ!

ಆ ಪತ್ರಕ್ಕೆ ಅವರು ಉತ್ತರ ಬರೆದರು: “ಇನ್ನು ನನಗಿಲ್ಲಿ ಕೆಲ ದಿನಗಳೇ ಬಾಕಿ ಇರುವುದು. ಬೇಗನೆ ಇಲ್ಲಿಂದ ಬಿಡುಗಡೆಯಾಗಿ ಬರುವೆ. ಇಬ್ಬರು ಕೂತು ಚರ್ಚಿಸಿ ಕಾಂಗ್ರೆಸ್ ಸೇರುವ ತೀರ್ಮಾನ ಮಾಡಿದರೆ ಸಾಕು.” ಅವರು ಅಲ್ ಅಮೀನ್ ಪತ್ರಿಕೆಯ ಸಹ ಸಂಪಾದಕರು ಮತ್ತು ಆ ಕಾಲದ ನಾಯಕರಲ್ಲಿ ಒಬ್ಬರೂ ಆಗಿದ್ದರು. ಒಟ್ಟಪಾಲದಲ್ಲಿ ಇ. ಮೊಯಿದು ಮೌಲವಿ ಮೊದಲಾದವರೊಂದಿಗೆ ಸುಪ್ರೆಂಟಿನ ನಿರ್ದಾಕ್ಷಿಣ್ಯ ಬೂಟಿನೇಟು ತಿಂದವರೂ ಆಗಿದ್ದರು. ಅವರು ಬರುವ ತನಕ ಕಾಯುವುದಕ್ಕೆ ನನ್ನಿಂದ ಸಾಧ್ಯವಿರಲಿಲ್ಲ. ಭಾರತ ನಾಳೆ ಸ್ವತಂತ್ರಗೊಂಡರೆ; ಸ್ವಾತಂತ್ರ್ಯ ಹೋರಾಟದಲ್ಲಿ ನನಗೂ ಪಾಲು ಬೇಕು! ನನ್ನ ನಾಡಿನಿಂದ ನನ್ನ ಜಾತಿಯ ಜನಗಳು ಅಷ್ಟೇನೂ ಸೇರಿಕೊಂಡಿಲ್ಲ. ಆ ಕೊರತೆಯನ್ನು ನಾನು ನೀಗಿಸಬೇಕು. ಆ ಸಮಯದಲ್ಲಿ ನನ್ನ ತಂದೆಯೂ ಹುಡುಕಿಕೊಂಡು ಬಂದರು. ಸೈದ್ ಮುಹಮ್ಮದರ ಪತ್ರ ತೋರಿಸಿ “ನಾನು ಕಾಂಗ್ರೆಸ್ ಸೇರುವುದಿಲ್ಲ, ಸ್ಕೂಲಿಗೂ ಹೋಗುವುದಿಲ್ಲ. ಬದಲಾಗಿ ಒಂದು ಕೆಲಸ ಹುಡುಕುತ್ತಿದ್ದೇನೆ. ಸದ್ಯದಲ್ಲೇ ಸಿಗುತ್ತದೆ.” ಎಂದು ಹೇಳಿದೆ.

ಒಂದು ವಿಧದಲ್ಲಿ ಬಾಪ್ಪನನ್ನು ಸಮಾಧಾನ ಪಡಿಸಿದೆ. ನಂತರ ಸೀದಾ ಹೋಗಿದ್ದು ಕಾಂಗ್ರೆಸ್ ಆಫೀಸಿಗೆ. ಅಲ್ಲಿಯೂ ನನಗೆ ನಿರಾಶೆ ಕಾದಿತ್ತು. ನಾನೊಬ್ಬ ಸಿಐಡಿ ಆಗಿರಬಹುದೆಂದು ಅವರು ಶಂಕಿಸಿದರು. ಅದಕ್ಕೆ ಕಾರಣವಾಗಿದ್ದು ನನ್ನ ಡೈರಿ. ಅದರಲ್ಲಿ ಇಂಗ್ಲಿಷ್, ತಮಿಳು, ಹಿಂದಿ, ಅರಬ್ಬೀ, ಮಲಯಾಳಂ ಮೊದಲಾದ ಭಾಷೆಗಳಲ್ಲಿ ಬರೆದುಕೊಂಡಿದ್ದೆ. ಅದನ್ನು ಬೆಂಚಿನಲ್ಲಿಟ್ಟು ನಾನು ಮೂತ್ರಕ್ಕೆಂದು ಹೋಗಿದ್ದೆ. ತಿರುಗಿ ಬಂದಾಗ ಸೆಕ್ರೆಟರಿ ಅದನ್ನು ಓದುತ್ತಿದ್ದರು. ಅವರಿಗೆ ಪೂರ್ತಿ ಓದಲಾಗಿರಲಿಕ್ಕಿಲ್ಲ. ಆದರೂ ನನ್ನ ಮೇಲೆ ಸಂಶಯ ಮೂಡಲು ಅದು ಸಾಕಾಗಿತ್ತು. ನಾನು ಸೈದ್ ಮುಹಮ್ಮದರ ಪತ್ರ ತೋರಿಸಿದೆ. ಅವರ ಸಂಶಯ ಮುಗಿಯಲಿಲ್ಲ. ನನ್ನ ಹಾವ ಭಾವಗಳನ್ನು ಅವರು ಗಮನಿಸುತ್ತಿದ್ದರು.

ಆಫೀಸಲ್ಲಿ ರಾಜಕೀಯ ನಾಯಕರ ಪಟಗಳನ್ನು ತೂಗು ಹಾಕಿದ್ದರು. ಫೆಲ್ಟ್ ಹ್ಯಾಟ್ ಸ್ವಲ್ಪ ಓರೆಯಾಗಿಸಿ, ದೊಡ್ಡ ಕಾಲರ್ ಇರುವ ಬಿಳಿ ಬಟ್ಟೆ ಧರಿಸಿದ, ಮೇಲ್ತುಟಿ ತುಂಬ ಚಾಚಿಕೊಂಡ ಸಪೂರ ಮೀಸೆಯ, ಶೋಕಗಂಭೀರ ಮುಖಭಾವದ ಆ ಚಿತ್ರ ಯಾರದ್ದೆಂದು ನಾನು ಕೇಳಿದೆ. ಬಿಳಿಯರ ವೇಷ ಧರಿಸಿದ್ದ ಆ ನಾಯಕ ನನಗೆ ಚೂರೂ ಇಷ್ಟವಾಗಲಿಲ್ಲ.
ಸೆಕ್ರೆಟರಿ ಹೇಳಿದ:
‘ಭಗತ್ ಸಿಂಗ್’

ಅದು ಕೇಳಿದಾಗ ನನ್ನೊಳಗೆ ಮಿಂಚು ಹೊಕ್ಕಂತಾಯಿತು. ವೀರ ಪರಾಕ್ರಮಿ ಭಗತ್ ಸಿಂಗ್! ಅಂದು ಆತನನ್ನು ಗಲ್ಲಿಗೇರಿಸಿರಲಿಲ್ಲ. ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್ – ಪಂಜಾಬ್ ಗೂಢಾಲೋಚನೆಯಲ್ಲಿ ಭಾಗಿಯಾಗಿದ್ದ ಆ ಮೂವರು ಕ್ರಾಂತಿಕಾರಿಗಳ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೆ. ಅಸ್ಸೆಂಬ್ಲಿ ಹಾಲಲ್ಲಿ ಬಾಂಬ್ ಹಾಕಿದ್ದು, ವೈಸ್ರಾಯಿಯ ರೈಲನ್ನು ಹೊಡೆಯಲು ಪ್ರಯತ್ನ ಮಾಡಿದ್ದು ನನಗೆ ತಿಳಿದಿರಲಿಲ್ಲ. ಆ ಪಟವನ್ನು ಹಾಗೆ ನೋಡುತ್ತಲೇ ನಿಂತಿದ್ದೆ. ಸೆಕ್ರೆಟರಿ ಹೇಳಿದರು:

“ಭಗತ್ ಸಿಂಗನ ಛಾಯೆ ನಿಮಗುಂಟು. ಮೀಸೆ ಮತ್ತು ಕಾಲರ್ ಹಾಗೆಯೆ ಇವೆ. ಒಂದು ಫೆಲ್ಟ್ ಹ್ಯಾಟ್ ಇದ್ದರೆ ಆಯಿತು!”

ನಾನು ಏನನ್ನೂ ಹೇಳಲಿಲ್ಲ. ಭಗತ್ ಸಿಂಗನಂತೆ ಕಾಣುತ್ತಿದ್ದೇನೆ ಎಂಬುದರ ಬಗ್ಗೆ ಯೋಚಿಸುತ್ತಿದ್ದೆ. ಆಗ ಸೆಕ್ರೆಟರಿ ಪುನಃ ಕೇಳಿದರು:
“ನಿಜದಲ್ಲಿ ನೀವು ಮುಸಲ್ಮಾನ ಹೌದಾ?”

ನಾನು ಕೇಳಿದೆ: “ನಿಮಗೆ ಸಂಶಯ ಉಂಟಾ?” ನಂತರ ಅಲ್ಲಿಯ ತನಕದ ನನ್ನ ಆತ್ಮಕತೆಯನ್ನು ಹೇಳಿ ಮುಗಿಸಿದೆ. ಕೊನೆಗೆ ಅವರು ಕೇಳಿದರು:
“ನಾಳೆ ಸಮುದ್ರ ದಡದಲ್ಲಿ ಉಪ್ಪು ಶೇಖರಿಸಲು ನೀವು ತಯಾರಿದ್ದೀರಾ?”

“ತಯಾರಿದ್ದೇನೆ.” ತಕ್ಷಣ ಸಮ್ಮತಿಸಿದೆ.

ಮರುದಿನ ಬೇಗನೆ ಎದ್ದು ಪಾತ್ರೆ, ಬಾವುಟ ಎಲ್ಲ ಹಿಡಿದು ಹೊರಡಲು ತಯಾರಾಗುತ್ತಿದ್ದೆವು. ಆಗ ಮೆಟ್ಟಿಲುಗಳ ಮೇಲೆ ‘ಚಡ ಪಡ’ ಸದ್ದು ಕೇಳಿ ನಾವು ಗಾಬರಿಯಿಂದ ಆ ಕಡೆ ನೋಡಿದೆವು. ಆರೇಳು ಪೋಲೀಸರೊಂದಿಗೆ ಇನ್ಸ್ಪೆಕ್ಟರ್ ಒಳಗೆ ಬಂದ. ನಾವು ಹನ್ನೊಂದು ಜನರನ್ನೂ ಅರೆಸ್ಟ್ ಮಾಡಿಕೊಂಡು ಹೋದರು.

ಅದೊಂದು ಭಾನುವಾರದ ದಿನ. ನಾವು ಯಾರೂ ಏನೂ ತಿಂದಿರಲಿಲ್ಲ. ನಿದ್ರೆಯ ಮಂಪರೂ ನನಗಿತ್ತು. ನಮ್ಮ ಹಿಂದೆಯೇ ಜನರ ಗುಂಪೊಂದು ಸೇರಿತು. ಸ್ಟೇಷನ್ ಹತ್ತಿರ ಆದಂತೆ ನನ್ನ ಧೈರ್ಯವೆಲ್ಲ ಕರಗಿ ಮಾಯವಾಗಿ ಹೋಗಿತ್ತು. ಮೊದಲ ಬಾರಿಗೆ ಪೋಲೀಸ್ ಸ್ಟೇಷನ್ ಹತ್ತುತ್ತಿರುವುದು. ಖಡ್ಗಗಳು, ಬಯನೆಟ್ಟುಗಳು, ಕೈಕೋಳಗಳು ಭಿತ್ತಿಯಲ್ಲಿ ಭೀಕರವಾಗಿ ಮಿನುಗುತ್ತಿದ್ದವು. ಅದರ ತೀಕ್ಷ್ಣ ಬೆಳಕು ಮತ್ತು ಅಲ್ಲಿದ್ದ ಪೋಲೀಸರ ಕ್ರೂರ ಮುಖಭಾವ ನನ್ನನ್ನು ತುಂಬಾ ಭಯಗೊಳಿಸಿದವು. ನರಕದ ನೆನಪು ಒಮ್ಮೆ ಸುಳಿದು ಹೋಯಿತು.

ನಮ್ಮನ್ನು ಸಾಲಾಗಿ ವರಾಂಡದಲ್ಲಿ ನಿಲ್ಲಿಸಿದರು. ಬೆಕ್ಕಿನ ಕಣ್ಣಿನ ಇನ್ಸ್ಪೆಕ್ಟರ್ ಒಳಗೆ ಹೋದ. ನಮ್ಮ ಮುಂದಿನಿಂದ ಒಬ್ಬ ಅಜಾನುಬಾಹು ಪೋಲೀಸ್ ಅತ್ತಿಂದಿತ್ತ ನಡೆಯುತ್ತಿದ್ದ. ಕೆಂಪಗಿನ ಕಣ್ಣುಗಳಿಂದ ನಮ್ಮನ್ನು ದುರುಗುಟ್ಟಿ ನೋಡುತ್ತಿದ್ದ. ಆತನ ನಂಬರ್ 270. ಸಾಲಿನ ಮೊದಲಿಗೆ ನಿಂತಿದ್ದ ಕ್ಯಾಪ್ಟನ್ನಿನ್ನ ಕತ್ತು ಹಿಡಿದು ಒಳಗೆ ನೂಕಿದ. ಒಳಗಿನಿಂದ ಒದೆ, ಹೊಡೆತ ಮತ್ತು ಆರ್ತನಾದ ಕೇಳಿತು. ನನ್ನ ಹೃದಯದ ಸದ್ದು ನಿಂತಂತೆ ಅನಿಸಿತು. ಸಾಲಿನಲ್ಲಿ ನಾಲ್ಕನೆಯವ ನಾನು. ಹತ್ತು ನಿಮಿಷದ ನಂತರ ಎರಡನೆಯವನನ್ನು ಕೊಂಡು ಹೋದರು.

ಆತನ ಹೃದಯ ವಿದ್ರಾವಕ ಆರ್ತನಾದಕ್ಕೆ ನಾನು ಕುಸಿದೇ ಬಿಟ್ಟೆ. ಕ್ಷಮೆ ಕೇಳಿ ಬಿಡುವುದೇ ಒಳಿತೆಂದು ಭಾವಿಸಿದೆ. ಒಂದು ನಿಮಿಷವಷ್ಟೇ ಆ ಯೋಚನೆಯ ಆಯುಸ್ಸು. ತಕ್ಷಣ ನಾನು ಯೋಚಿಸಿದೆ. ಯಾಕಾಗಿ ಕ್ಷಮೆ ಕೇಳಬೇಕು? ನಾನು ತಪ್ಪೇನೂ ಮಾಡಿಲ್ಲವಲ್ಲ. ಸ್ವಾತಂತ್ರ್ಯಕ್ಕಾಗಿ ಅದೆಷ್ಟು ಸಾವಿರ ಯುವಕ ಯುವತಿಯರು ಮರಣದ ರುಚಿ ನೋಡಿದರು. ಭಗತ್ ಸಿಂಗ್ ಮತ್ತು ಸಂಗಾತಿಗಳನ್ನು ನೆನೆದೆ. ಮರಣವೇ ನನ್ನ ದಾರಿ ಮತ್ತು ಕರ್ತವ್ಯ!

ಮುಂದಿನಿಂದ ನಡೆಯುತ್ತಿದ್ದ 270 ಎಲ್ಲರ ಬಳಿಯೂ ಅವರವರ ಊರು ಕೇಳಿದ. ಒಬ್ಬೊಬ್ಬರೂ ಹೇಳಿದರು:
“ಕಣ್ಣೂರು”, “ತಲಶೇರಿ”, “ಪೊನ್ನಾಣಿ”.

ಆತ ಈಗ ನನ್ನ ಬಳಿ ಬಂದು ಕೇಳಿದ:
“ನಿನ್ನದು?”
“ವೈಕ್ಕಂ”
“ವೈಕ್ಕಂ!” ಆತ ಆಶ್ಚರ್ಯದಿಂದ ನನ್ನನ್ನು ನೋಡಿದ. ತಿರುವಾಂಕೂರಿನವ!

“ಹೆಸರು?”

ನಾನು ಹೆಸರು ಹೇಳಿದೆ. ಆತ ತಲೆಯೆತ್ತಿ ಕೇಳಿದ:
“ತಿರುವಾಂಕೂರಿನಲ್ಲಿ ಸ್ವಯಂ ಆಡಳಿತ ಬಂತೋ ಹೇಗೆ?”

ನಾನು ಹೇಳಿದೆ:
“ಇಲ್ಲ. ರಾಜಾಡಳಿತ ಇರುವ ಕಡೆ ಹೋರಾಟ ಬೇಡವೆಂದು ಗಾಂಧೀಜಿ ಹೇಳಿದ್ದಾರೆ.”

“ಹುಂ!” ಆತ ಭಯಂಕರವಾಗಿ ಹೂಂಗುಟ್ಟಿದ. ಹಾಗೇ ಹತ್ತಿರ ಬಂದವ ನನ್ನ ಎರಡು ಕೆನ್ನೆಗಳಿಗೂ ಫಡ ಫಡಾ ಅಂತ ಎರಡೇಟು ಬಿಗಿದ! ನಂತರ ಬಗ್ಗಿಸಿ ಬೆನ್ನಿಗೆ ಗುದ್ದತೊಡಗಿದ. ತಾಮ್ರದ ಪಾತ್ರೆಗೆ ಗುದ್ದಿದ ಸದ್ದು. ಹದಿನೇಳರ ತನಕವೋ ಇಪ್ಪತ್ತೇಳರ ತನಕವೋ ನಾನು ಎಣಿಸಿದೆ. ನಂತರ ಎನಿಸಲಿಲ್ಲ. ಎಣಿಸಿ ಮಾಡೋದೇನಿದೆ?

ಕೊನೆಗೆ ಇಬ್ಬರು ಪೋಲೀಸರು ಬಳಲಿದ್ದ ನನ್ನನ್ನು ಒಳಗೆ ಕೊಂಡು ಹೋದರು. ಇನ್ಸ್ಪೆಕ್ಟರ್ ನನ್ನನ್ನು ನೋಡಿ ಕೇಳಿದ:

“ಊಂ?”
ಒಬ್ಬ ಪೋಲೀಸ್ ಹೇಳಿದ:
“ನಂಬಿಯಾರ್ ಚೆನ್ನಾಗಿ ಕೊಟ್ಟರು.”
ಪರವಾಗಿಲ್ಲ ಎಂಬಂತೆ ಇನ್ಸ್ಪೆಕ್ಟರ್ ಹೂಂಗುಟ್ಟಿದ.

ಮತ್ತೊಬ್ಬ ಪೋಲೀಸ್ ನನ್ನ ಅಂಗಿಯೆಲ್ಲ ಕಳಚಿ ಎತ್ತರ, ದಪ್ಪ, ಗುರುತುಗಳನ್ನೆಲ್ಲ ಹೇಳಿದ.

ಕೊನೆಗೆ ನಮ್ಮನ್ನು ಹನ್ನೊಂದು ಜನರನ್ನು ಲಾಕಪ್ಪಿಗೆ ಹಾಕಿದರು. ಸಿಮೆಂಟು ಹಾಕಿದ ಒಂದು ಸಣ್ಣ ಕೋಣೆ. ಅದರ ಒಂದು ಮೂಲೆಯಲ್ಲಿ ಉಗ್ರ ವಾಸನೆಯೊಂದಿಗೆ ಒಂದು ಕೊಡ ಮೂತ್ರ ಇತ್ತು. ಅವತ್ತು ನಮಗೆ ಆಹಾರ ಏನೂ ಸಿಗಲಿಲ್ಲ. ಭಯಂಕರ ಛಳಿಯ ಆ ರಾತ್ರಿ ನಮಗೆ ಮಲಗಲು ಚಾಪೆ ಕೂಡ ಇರಲಿಲ್ಲ. ಮರುದಿನ ಬೆಳಿಗ್ಗೆ ಏಳುವ ಹೊತ್ತಿಗೆ ಎಲ್ಲರ ಮುಖ ಊದಿಕೊಂಡಿತ್ತು. ನಡೆಯಲು ಸಾಧ್ಯವೇ ಆಗುತ್ತಿರಲಿಲ್ಲ. ಕೈಕೋಳ ತೊಡಿಸಿ ಕೋಳಿಕ್ಕೋಡ್ ಅಂಗಡಿ ಬೀದಿಯ ಮೂಲಕ ಗನ್ನು, ಖಡ್ಗಗಳ ಪೋಲೀಸ್ ರಕ್ಷಣೆಯಲ್ಲಿ ನಮ್ಮನ್ನು ಕೋರ್ಟಿಗೆ ಹಾಜರು ಪಡಿಸಿದರು.

ಹನ್ನೊಂದು ದಿನಗಳ ರಿಮ್ಯಾಂಡಿನ ಮೇಲೆ ನಮ್ಮನ್ನು ಕೋಳಿಕೋಡ್ ಸಬ್ ಜೈಲಿಗೆ ಕಳಿಸಲಾಯಿತು. 270 ಮುಷ್ಟಿಯಿಂದ ಹೊಡೆದೂ ಹೊಡೆದು ನಂತರ ಮೊಣಕೈಯಿಂದ ನನ್ನ ಬೆನ್ನಿಗೆ ಗುದ್ದಿದ್ದ ಎಂದು ಗೆಳೆಯರು ಹೇಳಿದರು. ಎಣ್ಣೆ ಹಾಕಿ ತಿಕ್ಕಿದ ಒಬ್ಬ ಧರ್ಮಭಟ. ಆದರೂ, ಒಂಬತ್ತು ಸ್ಥಳಗಳಲ್ಲಿ ರೂಪಾಯಿಯಗಲ ಕಪ್ಪು ಗುರುತು ಮೂಡಿದೆ ಎಂದು ಹೇಳಿದ.

ನನಗೆ ಮೂರು ತಿಂಗಳ ಕಠಿಣ ಸಜೆ ಸಿಕ್ಕಿತು. ಆದ್ದರಿಂದ ನನ್ನನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ಹಾಕಿದರು. ಟಿ. ಪ್ರಕಾಶಂ, ಬಾಟ್ಲಿವಾಲಾ, ಇ. ಮೊಯಿದು ಸಾಹೇಬ್ ಮೊದಲಾದ ಸುಮಾರು ಆರುನೂರು ರಾಜಕೀಯ ಖೈದಿಗಳು ಅಲ್ಲಿದ್ದರು. ಜೈಲಿನ ಊಟ ತುಂಬಾ ಕಳಪೆಯಾಗಿತ್ತು. ಗಂಜಿಯಲ್ಲಿ ಹುಳಗಳು ಹೀರೇಕಾಯಿಯಂತೆ ತೇಲುತ್ತಿದ್ದವು. ಅದನ್ನು ತೆಗೆದು ಹಾಕಿ ಗಂಜಿ ಕುಡಿಯುವುದು. ಹೊರಗಿನ ಸುದ್ದಿ ನಮಗೆ ತಲುಪುತ್ತಿದ್ದದ್ದು ಹೊಸದಾಗಿ ಶಿಕ್ಷಿಸಲ್ಪಟ್ಟ ಖೈದಿಗಳಿಂದ. ಈ ನಡುವೆ ಭಗತ್ ಸಿಂಗ್ ಮತ್ತು ಸಂಗಾತಿಗಳನ್ನು ಗಲ್ಲಿಗೇರಿಸಿದ ಸುದ್ದಿ ತಿಳಿದು ನಾವೆಲ್ಲ ಮೂರು ದಿನಗಳ ಕಾಲ ಉಪವಾಸ ಕೂತೆವು. ನನ್ನ ಮೊದಲ ಉಪವಾಸ ವ್ರತ. ಮೂರನೆಯ ದಿನ ನೀರು ಕುಡಿದಾಗ ಗಂಟಲು ಒಡೆದಂತೆ ಅನ್ನಿಸಿತು.

ಇಂಡಿಯಾದ ಹಲವು ಭಾಗಗಳಿಂದ ಬಂದಿದ್ದ ಖೈದಿಗಳು ಅಲ್ಲಿದ್ದರು. ಕ್ರಾಂತಿಕಾರಿಗಳು, ಅರಾಜಕತಾವಾದಿಗಳು, ಸೊಷಿಯಲಿಸ್ಟುಗಳು, ಕಮ್ಯುನಿಸ್ಟರು ಹೀಗೆ ಹಲವು ಆದರ್ಶವಾದಿಗಳು. ಎಲ್ಲರ ಗುರಿಯೂ ಭಾರತದ ಸ್ವಾತಂತ್ರ್ಯ. ತಿಂಗಳುಗಳು ಕಳೆದಾಗ ಗಾಂಧಿ-ಇರ್ವಿನ್ ಒಪ್ಪಂದಂತೆ ನಮ್ಮನ್ನೆಲ್ಲ ಬಿಡುಗಡೆಗೊಳಿಸಿದರು. ಹೊರಗಡೆ ಬಂದಾಗ ಎಲ್ಲಿಗೆ ಹೋಗುವುದು ಎಂದೇ ಯೋಚಿಸಿರಲಿಲ್ಲ. ನನ್ನ ಹಾಗೆ ಕಷ್ಟ ಪಟ್ಟಿದ್ದ ಧರ್ಮಭಟರು ಹಲವರಿದ್ದರು. ಬಹುತೇಕರಿಗೆ ರೈಲ್ವೆ ಪಾಸ್ ಕೂಡ ಸಿಕ್ಕಿರಲಿಲ್ಲ.

ನನಗೆ ಎರಡು ಆಸೆಗಳಿದ್ದವು. ಎರಡೆನೆಯದ್ದು ಒಂದು ಶಾಲು. ದ್ರಾಕ್ಷೆ ಬಳ್ಳಿಗಳ ಅಂಚು ಇರುವ ಖಾದಿ ಶಾಲನ್ನು ಮಿಸ್ಟರ್ ಅಚ್ಚುತನ್ ನನಗೆ ಕೊಡಿಸಿದರು. ಮೊದಲನೇ ಆಸೆ 270ನ್ನು ಕೊಲ್ಲಬೇಕು! ಅದಕೆ ನನ್ನ ಕೈಯಲ್ಲಿ ಆಯುಧಗಳೊಂದೂ ಇಲ್ಲ. ಒಂದು ರಿವಾಲ್ವರ್ ಸಿಕ್ಕಿದ್ದರೆ ಸಾಕಿತ್ತು! ಎಂದು ಮನಸು ಹೇಳುತ್ತಿತ್ತು. ಆತ ಪಾಳಯಂ ಅಲ್ಲಿ ಟ್ರಾಫಿಕ್ ಡ್ಯೂಟಿಯಲ್ಲಿದ್ದದ್ದನ್ನು ನಾನು ನೋಡಿದೆ. ಆರಡಿ ಎತ್ತರದ ಒಬ್ಬ ರಾಕ್ಷಸ. ನಾನು ಹೊಡೆದರೆ ಆತನಿಗೆ ನಾಟದು. ಸಣ್ಣ ಚೂರಿಯಿದ್ದಿದ್ದರೆ ಎದೆಗೆ ಇರಿದು ಗೀರಬಹುದಿತ್ತು! ‘ಅಲ್ ಅಮೀನ್’ ಲಾಡ್ಜಿನಿಂದ ಒಂದು ಚೂರಿಯನ್ನು ಎಗರಿಸಿದ್ದೂ ಆಯಿತು. ಅದನ್ನು ಹಿಡಿದುಕೊಂಡು ಹೋಗುತ್ತಿದ್ದಾಗ ದಾರಿಯಲ್ಲಿ ಮಿಸ್ಟರ್ ಅಚ್ಚುತನ್ ಸಿಕ್ಕಿದರು. ಅವರು ಆಶ್ಚರ್ಯದಿಂದ ಕೇಳಿದರು:

“ಹೋಗಿಲ್ವಾ?”
ಇಲ್ಲವೆಂದೆ.
“ಮನೆಗೆ ಹೋಗಿ ಬಾಪಾ ಉಮ್ಮನನ್ನು ನೋಡುವುದಿಲ್ಲವೇ?”

ನಾನು ಹೇಳಿದೆ: “ಅದಕ್ಕೂ ಮುಂಚೆ ನನಗೊಂದು ಕೆಲಸ ಮುಗಿಸಲಿಕ್ಕುಂಟು.” ವಿಷಯಗಳನ್ನೆಲ್ಲ ಅವರಿಗೆ ಹೇಳಿದೆ. ಅವರು ನನ್ನನ್ನು ಮನಾಂಚಿರ ಕೊಳದ ಬಳಿ ಕರೆದುಕೊಂಡು ಹೋಗಿ ಶಾಂತವಾಗಿ ಹೇಳಿದರು:

“ನೀವೂ ಒಬ್ಬ ಸತ್ಯಾಗ್ರಹಿಗಳಾ?” ನಂತರ ಗಾಂಧೀಜಿಯ ಹಲ್ಲು ಹೋದ ಕತೆಯನ್ನು ಹೇಳಿದರು.

“ಮತ್ತೆ ನೀವು ಕೊಲ್ಲುವುದೇ ಆಗಿದ್ದರೆ ಬದುಕಲು ಅರ್ಹತೆ ಇರುವ ಯಾವೊಬ್ಬ ಪೋಲಿಸನೂ ಈಗ ಇಲ್ಲ. ಪೋಲೀಸರೆಂದರೆ ಈಗಿನ ಆಡಳಿತದಿಂದ ಬೇರ್ಪಡಿಸಲಾಗದ ಒಂದು ಸಂಗತಿ. ಸರಕಾರದ ದಾಳಗಳು ಮಾತ್ರ ಈ ಬಡಪಾಯಿಗಳು. ಅವರನ್ನು ಬಯ್ಯುತ್ತಾ ಕೂತರೆ ಏನು ಬಂತು? ಕ್ಷಮಿಸು. ಈಗ ಮನೆಗೆ ಹೋಗು.”

ಮಿಸ್ಟರ್ ಅಚ್ಚುತನ್ ಅವರೇ ನನ್ನನ್ನು ಗಾಡಿ ಹತ್ತಿಸಿದರು. ಎರ್ನಾಕುಳಂ ಬಂದು ಒಂದು ತಿಂಗಳು ಮುಸ್ಲಿಂ ಹಾಸ್ಟೆಲಲ್ಲಿ ತಂಗಿದೆ. ಮನೆಗೆ ಹೋಗಲು ನಾಚಿಕೆ. ನಿರಾಶೆ, ಬೇಸರ ಮತ್ತೆ ಸೋಮಾರಿತನ! ಕೊನೆಗೆ, ಒಂದು ರಾತ್ರಿ ಬೋಟ್ ಹತ್ತಿ ವೈಕ್ಕಂ ತಲುಪಿದೆ. ಅಲ್ಲಿಂದ ತಲಯೋಲಪ್ಪರಂಬಿಗೆ ನಡೆದೆ. ನಾಲ್ಕೈದು ಮೈಲುಗಳು. ಕತ್ತಲ ರಾತ್ರಿ. ಹಾವುಗಳು ತುಂಬಿರುವ ದಾರಿ. ಶ್ರುವೇಲಿಕುನ್ನು ಎಂಬಲ್ಲಿ ಮಾವಿನ ಕೊಂಬೆಗೆ ನೇಣು ಬಿಗಿದು ಯಾರೋ ಸತ್ತಿದ್ದರು. ರಾತ್ರಿ ಮೂರು ಗಂಟೆ ಕಳೆದಿತ್ತು. ನಾನು ಮನೆಯಂಗಳ ತಲುಪಿದಾಗ “ಯಾರದು?” ಎಂದು ಉಮ್ಮ ಕೇಳಿದರು. ನಾನು ವರಾಂಡ ಹತ್ತಿದೆ. ಉಮ್ಮ ದೀಪ ಹಚ್ಚಿದರು. ಏನೂ ಸಂಭವಿಸಿಯೇ ಇಲ್ಲವೆನ್ನುವಂತೆ ಉಮ್ಮ ಕೇಳಿದರು:

“ಏನಾದ್ರೂ ತಿಂದಿದ್ದೀಯಾ ಮಗಾ?”

ನಾನು ಸುಮ್ಮನಿದ್ದೆ. ದುಃಖ ಉಮ್ಮಳಿಸುತ್ತಿತ್ತು. ಲೋಕ ನಿದ್ರೆಯಲ್ಲಿ ಮುಳುಗಿದೆ. ನನ್ನ ಉಮ್ಮಾ ಮಾತ್ರ ನಿದ್ದೆ ಬಿಟ್ಟು ಕೂತಿದ್ದಾರೆ! ನೀರು ಮತ್ತು ಬಿಂದಿಗೆ ತಂದಿಟ್ಟು ಕೈಕಾಲು ತೊಳೆಯಲು ಹೇಳಿದರು. ನಂತರ ಊಟದ ತಟ್ಟೆ ತಂದಿಟ್ಟರು. ಬೇರೇನೂ ಕೇಳಲಿಲ್ಲ.

ನನಗೆ ಆಶ್ಚರ್ಯ. “ನಾನು ಇವತ್ತೇ ಬರುತ್ತೇನೆ ಅಂತ ಉಮ್ಮಾಗೆ ಹೇಗೆ ಗೊತ್ತಾಯಿತು?”

ಉಮ್ಮ ಹೇಳಿದರು: “ಓ.. ಅನ್ನ ಸಾರು ಮಾಡಿಟ್ಟು ನಾನು ದಿನಾ ಕಾಯುತ್ತೇನೆ.”

ಯಾವ ಭಾವೋದ್ವೇಗವೂ ಇಲ್ಲದ ಒಂದು ಮಾತು. ನಾನಿಲ್ಲದಿದ್ದ ಅಷ್ಟೂ ರಾತ್ರಿಗಳಲ್ಲಿ ಅಮ್ಮ ನಿದ್ದೆ ಬಿಟ್ಟು ನನಗಾಗಿ ದಾರಿ ಕಾಯುತ್ತಿದ್ದರು. ವರ್ಷಗಳು ಮತ್ತೆಯೂ ಉರುಳಿದವು. ಬದುಕಿನಲ್ಲಿ ಹಲವು ಸಂಗತಿಗಳು ಬಂದು ಹೋದವು.

ಅಮ್ಮ ಇಂದೂ ಮಗನ ದಾರಿ ಕಾಯುತ್ತಾಳೆ:

“ಮಗನೇ, ನಮಗೆ ನಿನ್ನನ್ನೊಮ್ಮೆ ನೋಡಬೇಕು…”