ಚಂದ್ರಶೇಖರ್ ಇಂಗ್ಲೆಂಡ್ ಬಿಟ್ಟು ಅಮೆರಿಕ ತಲುಪಿದ ನಂತರವೂ, ಕೆಲವೊಂದು ವೈಜ್ಞಾನಿಕ ಕಾನ್ಫರೆನ್ಸ್‌ಗಳಲ್ಲಿ, ಎಡ್ಡಿಂಗ್‌ಟನ್ ಜೊತೆಗೆ ಮುಖಾಮುಖಿಯಾಗುವ ಸಂದರ್ಭಗಳು ಎದುರಾದವು. ಒಮ್ಮೆ ಹೀಗೆ ಎದುರಾದಾಗ, ಎಡ್ಡಿಂಗ್‌ಟನ್ ತಮ್ಮ ಹಿಂದಿನ ನಡೆವಳಿಕೆಯ ಬಗೆಗೆ, ಚಂದ್ರಶೇಖರ್ ಅವರಲ್ಲಿ ಕ್ಷಮೆ ಬೇಡಿದರಂತೆ. ಆಗ ಚಂದ್ರಶೇಖರ್, “ಹಾಗಿದ್ದರೆ ನನ್ನ ಅಧ್ಯಯನದ ತೀರ್ಮಾನಗಳನ್ನು ನೀವು ಈಗ ಒಪ್ಪುತ್ತೀರೇ?” ಎಂದು ಕೇಳಿದರಂತೆ.
ಶೇಷಾದ್ರಿ ಗಂಜೂರು ಬರೆಯುವ ವಿಜ್ಞಾನ ಸರಣಿ

 

೧೯೦೫ರಲ್ಲಿ, ಐನ್‌ಸ್ಟೈನ್ ತನ್ನ ಸ್ಪೆಷಲ್ ಥಿಯರಿ ಆಫ್ ರಿಲೆಟಿವಿಟಿಯ ಮೂಲಕ “ಏಕ ಕಾಲ” (Simultaneity) ಎನ್ನುವುದು ಕೇವಲ ನಾವು ಅನುಭವಿಸುವ ಮಾಯೆಯಷ್ಟೇ ಎಂದು ತೋರಿಸಿಕೊಟ್ಟ ಮೇಲೆ, ಅದರ ಬಗೆಗೆ ಮತ್ತಷ್ಟು ಚಿಂತನೆ ನಡೆಸಿದವನು ಹರ್ಮನ್ ಮಿಂಕೋವ್ಸ್ಕಿ. ಪ್ರೊ. ಮಿಂಕೋವ್ಸ್ಕಿ, ಐನ್‌ಸ್ಟೈನನ ಗಣಿತದ ಶಿಕ್ಷಕ ಸಹ; ಐನ್‌ಸ್ಟೈನ್ ಜ಼್ಯೂರಿಕ್‌ನ ಪಾಲಿಟೆಕ್ನಿಕ್‌ನಲ್ಲಿ (ಇಂದು ETH Zurich ಎಂದು ಪ್ರಸಿದ್ಧವಾಗಿರುವ ವಿಶ್ವವಿದ್ಯಾಲಯ ಅದು) ವಿದ್ಯಾರ್ಥಿಯಾಗಿದ್ದಾಗ, ಮಿಂಕೋವ್ಸ್ಕಿ ಅಲ್ಲಿ ಗಣಿತದ ಪ್ರೊಫೆಸರ್ ಆಗಿದ್ದ.

ತನ್ನ ಹಳೆಯ ಶಿಷ್ಯ ಐನ್‌ಸ್ಟೈನ್‌ನ ಸ್ಪೆಷಲ್ ಥಿಯರಿ ಆಫ್ ರಿಲೆಟಿವಿಟಿಯನ್ನು, ನಾಲ್ಕು ಆಯಾಮಗಳ (ಎಡ-ಬಲ, ಹಿಂದೆ-ಮುಂದೆ, ಮೇಲೆ-ಕೆಳಗೆ ಮತ್ತು ಕಾಲ) ಸ್ಪೇಸ್-ಟೈಮ್ ಮೂಲಕ ವ್ಯಾಖ್ಯಾನಿಸಬಹುದೆಂದು ತೋರಿಸಿ, ಅದಕ್ಕೆ ಬೇಕಿದ್ದ ಗಣಿತವನ್ನೂ ಒದಗಿಸಿದವನು ಈ ಮಿಂಕೋವ್ಸ್ಕಿಯೇ. ಇಂದು, ಈ ನಾಲ್ಕು ಆಯಾಮಗಳ ಸ್ಪೇಸ್-ಟೈಮ್ ಅನ್ನು “ಮಿಂಕೋವ್ಸ್ಕಿ ಸ್ಪೇಸ್-ಟೈಮ್” ಎಂದೇ ಕರೆಯಲಾಗುತ್ತದೆ.

(ಹರ್ಮನ್ ಮಿಂಕೋವ್ಸ್ಕಿ)

೧೯೦೮ರಲ್ಲಿ, ಜರ್ಮನಿಯ ವೈಜ್ಞಾನಿಕ ಕಾನ್ಫರೆನ್ಸ್ ಒಂದರಲ್ಲಿ, ಈ ಸ್ಪೇಸ್-ಟೈಮ್ ಪರಿಕಲ್ಪನೆಯನ್ನು ವಿವರಿಸುತ್ತಾ ಅವನೆಂದ ಈ ಮಾತುಗಳು ಇಂದಿಗೂ ಪ್ರಸಿದ್ಧವಾಗಿವೆ: “ಇಂದು, ಸ್ಪೇಸ್ ಮತ್ತು ಟೈಮ್‌ಗಳ ಪ್ರತ್ಯೇಕ ಅಸ್ತಿತ್ವದ ಅಳಿವು ನಿಶ್ಚಿತ. ಉಳಿಯುವುದು ಅವೆರಡೂ ಜೊತೆಗೂಡಿದ ವಾಸ್ತವವಷ್ಟೇ.”

*****

ಐಸಾಕ್ ನ್ಯೂಟನ್ ಗುರುತ್ವಾಕರ್ಷಣೆ ಪಾಲಿಸುವ ಗಣಿತದ ನಿಯಮಗಳನ್ನು ತೋರಿಸಿಕೊಟ್ಟನಾದರೂ, ಅದು ಏಕೆ ಅಥವಾ ಹೇಗೆ ಆ ನಿಯಮಗಳನ್ನು ಪಾಲಿಸುತ್ತದೆ ಎಂದು ನಿರೂಪಿಸಲು ಹೋಗಲಿಲ್ಲ; ಅವನ ಮನದಲ್ಲಿ ಅಂತಹ ಪ್ರಶ್ನೆಗಳು ಇದ್ದಿತಾದರೂ. ಅವನೇ ಬರೆದಂತೆ, ಆ ವಿಷಯದಲ್ಲಿ ಅವನದು “Hypotheses non fingo”; “ನನ್ನದೇನೂ ಸಿದ್ಧಾಂತವಿಲ್ಲ.”

ಅವನ ನಂತರ, ಮೈಕೇಲ್ ಫ್ಯಾರಡೆ, ಎಲೆಕ್ಟ್ರೋ-ಮ್ಯಾಗ್ನೆಟಿಸಂ ವಿಷಯವನ್ನು ತನ್ನ “ಫೀಲ್ಡ್” ಪರಿಕಲ್ಪನೆಯ ಮೂಲಕ ವಿವರಿಸಿದ್ದು, ತದನಂತರ ಬಂದ ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್‌ವೆಲ್ ಈ ಫೀಲ್ಡ್ ಪರಿಕಲ್ಪನೆಗೆ ಗಣಿತದ ಬುನಾದಿ ನೀಡಿದ್ದಲ್ಲದೆ, ಬೆಳಕೂ ಸೇರಿದಂತೆ ಎಲ್ಲ ಎಲೆಕ್ಟ್ರೋ-ಮ್ಯಾಗ್ನೆಟಿಕ್ ಅಲೆಗಳಿಗೆ ಒಂದು ವೇಗ-ಮಿತಿ ಇರುವುದೆಂದು ತೋರಿಸಿಕೊಟ್ಟದ್ದನ್ನು ಈ ಲೇಖನ ಮಾಲೆಯ ಹಿಂದಿನ ಲೇಖನಗಳಲ್ಲಿ ನೋಡಬಹುದು. “ಈಥರ್”ನಲ್ಲಿ ಎಲೆಕ್ಟ್ರೋ-ಮ್ಯಾಗ್ನೆಟಿಕ್ ಅಲೆಗಳ ಚಲನೆಯ ಕುರಿತು ಚಿಂತನೆ ನಡೆಸಿದ ಆಲ್ಬರ್ಟ್ ಐನ್‌ಸ್ಟೈನ್ ೧೯೦೫ರಲ್ಲಿ ತನ್ನ ಸ್ಪೆಷಲ್ ಥಿಯರಿ ಆಫ್ ರಿಲೆಟಿವಿಟಿಯ ಮೂಲಕ ಕ್ರಾಂತಿಕಾರಕ ಸಿದ್ಧಾಂತವನ್ನು ಮುಂದಿಟ್ಟಿದ್ದೂ ಈಗಾಗಲೇ ತಿಳಿದ ವಿಷಯ.

“ಸ್ಪೆಷಲ್ ಥಿಯರಿ” ಪ್ರಕಟಿಸಿದ ಹತ್ತು ವರ್ಷಗಳ ನಂತರ, ೧೯೧೫ರಲ್ಲಿ, ಐನ್‌ಸ್ಟೈನ್ ತನ್ನ “ಜೆನೆರಲ್ ಥಿಯರಿ ಆಫ್ ರಿಲೆಟಿವಿಟಿ”ಯನ್ನು ಪ್ರಕಟಿಸಿದ. ಇದು, “ಗುರುತ್ವಾಕರ್ಷಣೆ” ಎನ್ನುವುದು ಮಿಂಕೋವ್ಸ್ಕಿಯ “ಸ್ಪೇಸ್-ಟೈಮ್”ನ ಒಂದು ಗುಣ ಎನ್ನುವುದು ತೋರಿಸಿಕೊಟ್ಟಿತು. ಒಂದು ಬೆಡ್ ಶೀಟಿನ ನಾಲ್ಕು ಮೂಲೆಗಳನ್ನು ನಾಲ್ಕು ಜನ ಹಿಡಿದೆಳೆದ ಮೇಲೆ, ಅದರ ಮೇಲೆ ಭಾರದ ವಸ್ತುವೊಂದನ್ನು ಇಟ್ಟರೆ, ಆ ಬೆಡ್ ಶೀಟ್ ಕೆಳ ಜಗ್ಗುವಂತೆ, ಭಾರದ ವಸ್ತುಗಳೂ ಸ್ಪೇಸ್-ಟೈಮ್ ಅನ್ನು ಬಗ್ಗಿಸುವುದನ್ನು ಐನ್‌ಸ್ಟೈನ್ ತೋರಿಸಿಕೊಟ್ಟ. (ಕೆಳಗಿನ ಚಿತ್ರವನ್ನು ನೋಡಿ)

ಐನ್‌ಸ್ಟೈನ್‌ನ ಜೆನೆರಲ್ ಥಿಯರಿ ಆಫ್ ರಿಲೆಟಿವಿಟಿಯನ್ನು ಇಂದು ಭೌತ ಶಾಸ್ತ್ರದ ಅತ್ಯಂತ ಸುಂದರ ಸಿದ್ಧಾಂತವೆಂದೇ ಹೇಳಲಾಗುತ್ತದೆ. ಸುಬ್ರಹ್ಮಣ್ಯಂ ಚಂದ್ರಶೇಖರ್ ಅಂತಹ ಮಹಾನ್ ವಿಜ್ಞಾನಿಗಳು ಕೂಡಾ, ಐನ್‌ಸ್ಟೈನ್‌ ಈ ಸಿದ್ಧಾಂತವನ್ನು ಕಂಡುಕೊಂಡ ಪರಿಯನ್ನು ಒಂದು “ದರ್ಶನ” (Revelation) ಎಂದೇ ಬಣ್ಣಿಸುತ್ತಾರೆ. ಆದರೆ, ೧೯೧೫ರಲ್ಲಿ, ಅವನು ಈ ಸಿದ್ಧಾಂತವನ್ನು ಪ್ರತಿಪಾದಿಸಿದಾಗ, ಅದು ಬಹುಮಟ್ಟಿಗೆ ಕುತೂಹಲದ ವಿಷಯವಾಗಿತ್ತೇ ಹೊರತು ಇಂದು ಎಲ್ಲ ವಿಜ್ಞಾನಿಗಳೂ ಒಪ್ಪುವ ಸತ್ಯವಾಗಿರಲಿಲ್ಲ. ಐನ್‌ಸ್ಟೈನ್ ಒಬ್ಬ ಯೆಹೂದಿ ಜರ್ಮನ್ ಆಗಿದ್ದುದು, ಐನ್‌ಸ್ಟೈನ್ ಹೇಳುವಂತೆ, ಭಾರದ ವಸ್ತುಗಳು ಸ್ಪೇಸ್-ಟೈಮ್ ಅನ್ನು ಜಗ್ಗಿಸುವುದು ನಿಜವೇ ಆದಲ್ಲಿ, ಆ ಜಗ್ಗುವಿಕೆಗೆ ಬೆಳಕೂ ಸಹ ಬಗ್ಗಲೇಬೇಕಲ್ಲವೇ?

ಈ ಪ್ರಶ್ನೆಗೆ ಉತ್ತರ ನಾಲ್ಕು ವರ್ಷಗಳ ನಂತರ, ೧೯೧೯ರಲ್ಲಿ ದೊರಕಿತು. ಅದನ್ನು ದೊರಕಿಸಿ ಕೊಟ್ಟವನು ಪ್ರಖ್ಯಾತ ಬ್ರಿಟಿಷ್ ವಿಜ್ಞಾನಿ ಆರ್ಥರ್ ಎಡ್ಡಿಂಗ್‌ಟನ್.

*****

ನಾನು ಪ್ರಥಮ ಬಾರಿಗೆ ಎಡ್ಡಿಂಗ್‌ಟನ್ ಬಗೆಗೆ ಕೊಂಚ ಹೆಚ್ಚಿಗೆ ಗಮನ ಕೊಟ್ಟದ್ದು ೧೯೮೦ ದಶಕದ ಆರಂಭದಲ್ಲಿ. ಆಗಂತೂ, ನನ್ನ ದೃಷ್ಟಿಯಲ್ಲಿ ಆತ ಒಬ್ಬ ಖಳನಾಯಕನೇ ಎನಿಸಿದ್ದ. ಅವನು (ನನ್ನ ಪಾಲಿಗೆ) ಖಳನಾಯಕನಾದ ಕತೆ ಇಲ್ಲಿದೆ.

೧೯೩೦ರಲ್ಲಿ, ಭಾರತೀಯ ತರುಣನೊಬ್ಬ ನಾವೆಯೊಂದರಲ್ಲಿ ಭಾರತದಿಂದ ಇಂಗ್ಲೆಂಡಿಗೆ ಪ್ರಯಾಣ ಬೆಳೆಸುತ್ತಾನೆ. ಅವನಿಗಿನ್ನೂ ಹತ್ತೊಂಬತ್ತೇ ವಯಸ್ಸು. ಭೌತಶಾಸ್ತ್ರದಲ್ಲಿ ಮದ್ರಾಸ್ ಯೂನಿವರ್ಸಿಟಿಯಿಂದ ಪದವಿ ಪಡೆದಿದ್ದ ಆತನ ಗುರಿ ಸುವಿಖ್ಯಾತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡುವುದು.

ಭಾರತದಿಂದ ಇಂಗ್ಲೆಂಡ್ ವರೆಗಿನ ಸುದೀರ್ಘ ನೌಕಾಯಾನದಲ್ಲಿ, ಸಮುದ್ರದ ಮಧ್ಯೆ, ರಾತ್ರಿಯ ಆಕಾಶದಲ್ಲಿ ಕಾಣುವ ತಾರೆಗಳನ್ನು ಕಾಣುವ ಅವನಿಗೆ ಈ ನಕ್ಷತ್ರಗಳು ಸತ್ತಾಗ ಏನಾಗಬಹುದೆಂಬ ಆಲೋಚನೆ ಬಂದಿತು. (ನಕ್ಷತ್ರಗಳು “ಸಾಯುವುದು” ಎಂದರೇನು? ನಮ್ಮ ಸೂರ್ಯನೂ ಸೇರಿದಂತೆ, ಎಲ್ಲ ತಾರೆಗಳೂ ಹೈಡ್ರೋಜೆನ್-ಹೀಲಿಯಂ ಅನಿಲಗಳ ದೈತ್ಯ ಚೆಂಡುಗಳು. ಇವುಗಳಲ್ಲಿ ಹೈಡ್ರೋಜೆನ್ ಪರಮಾಣುಗಳು ಇಂಧನದಂತೆ ಕೆಲಸ ಮಾಡುತ್ತವೆ. ಪ್ರತಿ ಕ್ಷಣವೂ, ಈ ತಾರೆಗಳಲ್ಲಿ ಹೈಡ್ರೋಜೆನ್ “ಬಾಂಬ್‌”ಗಳ ಸ್ಫೋಟ ನಡೆಯುತ್ತಲೇ ಇರುತ್ತವೆ. ಈ ಸ್ಫೋಟಗಳಿಗೆ ಬೇಕಿರುವ ಹೈಡ್ರೋಜೆನ್ ಇಲ್ಲದಾದಾಗ ಅದನ್ನು ನಕ್ಷತ್ರಗಳ “ಸಾವು” ಎಂದು ಕರೆಯುವುದು ವಾಡಿಕೆ)

ಆಗಿನ ಕಾಲದ ವೈಜ್ಞಾನಿಕ ಅಭಿಪ್ರಾಯದಂತೆ, ನಕ್ಷತ್ರಗಳು ಸತ್ತಾಗ, ಅವು, ಶ್ವೇತ ಕುಬ್ಜಗಳಾಗುತ್ತವೆಂಬ ನಂಬಿಕೆ ಇತ್ತು. ಈ ಶ್ವೇತ ಕುಬ್ಜಗಳಲ್ಲಿ, ತಾರೆಗಳಲ್ಲಿ ನಡೆಯುವ ನಿರಂತರ ಸ್ಫೋಟಕ್ಕೆ ಬೇಕಿರುವ ಹೈಡ್ರೋಜೆನ್ ಅನಿಲ ಇರುವುದಿಲ್ಲವಾದರೂ, ಅವುಗಳಲ್ಲಿರುವ ಶಾಖದ ಚೈತನ್ಯ ಶ್ವೇತ ವರ್ಣದ ಬೆಳಕಿನ ಮೂಲಕ ಹೊರ ಹೊಮ್ಮುತ್ತಿರುತ್ತದೆ. ಒಡಲೊಳಗಿನ ಇಂಧನ ಮುಗಿದ ನಂತರ, ಅವು ತಮ್ಮೊಳಗೇ ಕುಸಿಯುವುದರಿಂದ, ಆವುಗಳ ದ್ರವ್ಯರಾಶಿ ನಮ್ಮ ಸೂರ್ಯನ ದ್ರವ್ಯರಾಶಿಯಷ್ಟಿದ್ದರೂ, ಅವುಗಳ ಗಾತ್ರ ಮಾತ್ರ ಹೆಚ್ಚು ಕಡಿಮೆ ನಮ್ಮ ಭೂಮಿಯಷ್ಟೇ. (ಇನ್ನೂ ತಾರೆಯಾಗಿಯೇ ಉಳಿದಿರುವ ನಮ್ಮ ಸೂರ್ಯನ ಡಯಾಮೀಟರ್ ಭೂಮಿಯ ಡಯಾಮೀಟರಿಗಿಂತ ಸುಮಾರು ನೂರು ಪಟ್ಟಿಗೂ ಹೆಚ್ಚು! ಸೂರ್ಯನಲ್ಲಿ ಹದಿಮೂರು ಲಕ್ಷ ಭೂಮಿಗಳನ್ನು ತುಂಬಿಸಿಡುವಷ್ಟು ಜಾಗವಿದೆ!!)

ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದ ಈ ಹತ್ತೊಂಬತ್ತು ವರ್ಷದ ಭಾರತೀಯ ನವ ಯುವಕ, ತಾರೆಗಳು ಸತ್ತು ಶ್ವೇತ ಕುಬ್ಜವಾಗುವುದರ ಹಿಂದಿನ ಗಣಿತದ ವಿಚಾರ ಮಾಡತೊಡಗಿದ. ಐನ್‌ಸ್ಟೈನನ ರಿಲೆಟಿವಿಟಿ ಥಿಯರಿಗೆ ಆಗಿನ್ನೂ ಹದಿನೈದೇ ವರ್ಷವಾಗಿದ್ದರೂ, ಅವನಿಗೆ ಅದರ ಜ್ಞಾನವಿತ್ತು. (ನಕ್ಷತ್ರಗಳ ಒಳಗೆ ಚಲಿಸುವ ಕಣಗಳಿಗೆ ಬೆಳಕಿನ ವೇಗವಿರುತ್ತದೆ. ರಿಲೆಟಿವಿಟಿ ಸಿದ್ಧಾಂತದ ಸಹಾಯವಿಲ್ಲದೆ, ನಕ್ಷತ್ರಗಳ ಒಡಲನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳುವುದು ಅಸಾಧ್ಯವೆಂದೇ ಎನ್ನಬಹುದು) ಈ ಆಲೋಚನೆ ಬಂದೊಡನೆಯೇ, ಅವನು ಪೇಪರ್-ಪೆನ್ಸಿಲ್ ಹಿಡಿದು, ಗಣಿತದ ಲೆಕ್ಕಾಚಾರ ಮಾಡತೊಡಗಿದ. ಅವನು ಪ್ರಯಾಣ ಮಾಡುತ್ತಿದ್ದ ನಾವೆ ಇಂಗ್ಲೆಂಡ್ ತಲುಪುವ ವೇಳೆಗೆ, ಅವನ ಆ ಗಣಿತದ ಲೆಕ್ಕಾಚಾರಗಳು ಹೊಸದೊಂದು ವಿಚಾರವನ್ನು ಹೇಳುತ್ತಿತ್ತು: ನಮ್ಮ ಸೂರ್ಯನಿಗಿಂತ ಹೆಚ್ಚಿನ ದ್ರವ್ಯರಾಶಿಯುಳ್ಳ ಶ್ವೇತ ಕುಬ್ಜವೊಂದು ಇರುವುದು ಸಾಧ್ಯವೇ ಇಲ್ಲ; ಅಂತಹ ಕಾಯಗಳು, ತಮ್ಮೊಳಗೇ ಕುಸಿಯುತ್ತಾ ಹೋಗಿ, ಅವು ಅನಂತ ಸಾಂದ್ರತೆಯುಳ್ಳ ಬಿಂದುಗಳಾಗಿ ಬಿಡುತ್ತವೆ; ಈ ಬಿಂದುಗಳೊಳಗೆ ದೇಶ-ಕಾಲ (ಸ್ಪೇಸ್-ಟೈಮ್) ಗಳೂ ಸತ್ತು, ಬೆಳಕೂ ಸಹ ಹೊರಬರದಂತಾಗುತ್ತದೆ. ಇನ್ನೂ ಇಪ್ಪತ್ತೂ ಮುಟ್ಟದ ಈ ನವ ತರುಣ, ನಾವು ಇಂದು ಕೃಷ್ಣ-ರಂಧ್ರಗಳು (ಬ್ಲ್ಯಾಕ್ ಹೋಲ್) ಎಂದು ಕರೆಯುವ ಆಕಾಶ ಕಾಯಗಳ ಇರುವಿಕೆಯ ಬಗೆಗೆ ಪ್ರಪ್ರಥಮ ಬಾರಿಗೆ, ತನ್ನ ಗಣಿತದ ಮೂಲಕ ಆಧಾರ ಒದಗಿಸಿಕೊಟ್ಟಿದ್ದ!

ಇದು ಅವನಲ್ಲಿ ಹೊಸ ಉತ್ಸಾಹ ಒಂದಕ್ಕೆ ಕಾರಣವಾಯಿತು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೆಜ್ ಭೌತ ಶಾಸ್ತ್ರದ “ಕಾಶಿ” ಎಂದೆನ್ನಬಹುದಾದಂತಹ ಜ್ಞಾನ ಕೇಂದ್ರ. ಅದನ್ನು ತಲುಪಿದಾಗ, ಅಂತಹ ಪ್ರತಿಷ್ಠಿತ ಜಾಗದಲ್ಲಿ, ನಕ್ಷತ್ರಗಳ ಸಾವಿನ ಕುರಿತು ತಾನು ಮಾಡಿರುವ ಈ ಅಧ್ಯಯನವನ್ನು ಅಲ್ಲಿನ ವಿಜ್ಞಾನಿಗಳು ಮುಕ್ತ ಮನಸ್ಸಿನಿಂದ ಸ್ವಾಗತಿಸುವರೆಂದೇ ಅವನು ಭಾವಿಸಿದ್ದ. ಆದರೆ, ಟ್ರಿನಿಟಿ ಕಾಲೇಜಿನಲ್ಲಿ, ಅವನ ಈ ಅಧ್ಯಯನಕ್ಕೆ ಬಹುಮಟ್ಟಿಗೆ ದೊರಕಿದ್ದು ಕೇವಲ ನಿರಾಸಕ್ತಿಯಷ್ಟೇ. ಅದು ಅವನನ್ನು ಖಿನ್ನತೆಗೆ ದೂಡಿತಾದರೂ, ತನ್ನ ಪ್ರತಿಭೆ, ಅಧ್ಯಯನಶೀಲತೆಯಿಂದ ಅವನು ಕೇವಲ ಮೂರೇ ವರ್ಷಗಳಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯ ಜೊತೆಗೆ ಟ್ರಿನಿಟಿ ಕಾಲೇಜಿನ ಪ್ರತಿಷ್ಠಿತ ಪ್ರೈಜ಼್‌ ಫೆಲೋಷಿಪ್ ಸಹ ಪಡೆದ. (ಇದಕ್ಕೆ ಮುನ್ನ, ಇದೇ ಫೆಲೋಷಿಪ್ ಇನ್ನೊಬ್ಬ ಮಹಾನ್ ಭಾರತೀಯನಿಗೆ ದೊರಕಿತ್ತು. ಆತನ ಹೆಸರು: ಶ್ರೀನಿವಾಸ ರಾಮಾನುಜನ್)

ಒಂದರ ಹಿಂದೆ ಒಂದು ದೊರಕಿದ ಈ ಯಶಸ್ಸುಗಳು ಅವನಿಗೆ ಮತ್ತೊಮ್ಮೆ ಹುರುಪು ನೀಡಿದವು. ಅವನು ನಕ್ಷತ್ರಗಳ ಸಾವಿನ ಕುರಿತಾದ ತನ್ನ ಅಧ್ಯಯನವನ್ನು ಮತ್ತೊಮ್ಮೆ ಮುಂದುವರೆಸುವ ಆಲೋಚನೆ ಮಾಡಿದ.

*****

ಆ ಕಾಲದಲ್ಲಿ, ಆರ್ಥರ್ ಎಡ್ಡಿಂಗ್‌ಟನ್ ಎಂದರೆ ಭೌತ ಶಾಸ್ತ್ರದಲ್ಲಿ ಅತಿ ದೊಡ್ಡ ಹೆಸರು. ಸ್ವಿಟ್ಜ಼ರ್‌ಲೆಂಡಿನ ಸರ್ಕಾರಿ ಸಂಸ್ಥೆಯೊಂದರಲ್ಲಿ ಕಾರಕೂನನಾಗಿ ಕೆಲಸ ಮಾಡುತ್ತಿದ್ದ ಜೆರ್ಮನ್ ಯೆಹೂದಿ ಯುವಕನೊಬ್ಬ ಆಲ್ಬರ್ಟ್ ಐನ್‌ಸ್ಟೈನ್ ಎಂದು ಇಡೀ ಜಗತ್ತಿಗೇ ಪ್ರಖ್ಯಾತನಾಗಿದ್ದರ ಹಿಂದೆ ಎಡ್ಡಿಂಗ್‌ಟನ್‌ನ ಪರಿಶ್ರಮ, ಪ್ರತಿಭೆ, ಅನುಭೂತಿಗಳು ಕಡಿಮೆ ಏನೂ ಅಲ್ಲ. ೧೯೧೫ರಲ್ಲಿ, ಐನ್‌ಸ್ಟೈನ್ ತನ್ನ ಜೆನೆರಲ್ ಥಿಯರಿ ಆಫ್ ರಿಲೆಟಿವಿಟಿಯನ್ನು ಪ್ರಕಟಿಸಿದಾಗ, ಅವನಿಗೆ ಬಹುಮಟ್ಟಿಗೆ ದೊರಕಿದ್ದು, ದಿವ್ಯ-ನಿರ್ಲಕ್ಷ್ಯ. ಅದನ್ನು ಗಂಭೀರವಾಗಿ ಪರಿಗಣಿಸಲೂ ಅಂದಿನ ವೈಜ್ಞಾನಿಕ ರಂಗ ಸಿದ್ಧವಿರಲಿಲ್ಲ. ನಮ್ಮ ಕಾಮನ್ ಸೆನ್ಸಿಗೆ “ನಾನ್-ಸೆನ್ಸ್” ಎನ್ನಿಸಬಹುದಾದಂತಹ ಕಾಲದ ಬಗ್ಗುವಿಕೆಯಂತಹ ವಿಚಾರವುಳ್ಳ ಅವನ ಸಿದ್ಧಾಂತವನ್ನು ಹಲವಾರು ಹೆಸರಾಂತ ವಿಜ್ಞಾನಿಗಳೂ “ವಾಸ್ತವಕ್ಕೆ ದೂರವಾದ ಗಣಿತದ ಚಾತುರ್ಯ” ಎಂದು ತಳ್ಳಿ ಹಾಕಿದರು. ಅವನ ಸಿದ್ಧಾಂತವನ್ನು ಒಪ್ಪಲು ಪ್ರಯೋಗದ ಸಾಕ್ಷಿ ಬೇಕಿತ್ತು.

೧೯೧೮ರ ಹೊತ್ತಿಗೆ ಪ್ರಥಮ ಮಹಾಯುದ್ಧ ಮುಗಿದಿತ್ತಾದರೂ, ಇಂಗ್ಲೆಂಡಿನಲ್ಲಿ ಶತ್ರುಗಳಾದ ಜರ್ಮನರ ಬಗೆಗೆ ಒಳ್ಳೆಯ ಅಭಿಪ್ರಾಯವೇನೂ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಜರ್ಮನ್‌ನಾದ ಐನ್‌ಸ್ಟೈನ್‌ನ ರಿಲೆಟಿವಿಟಿ ಸಿದ್ಧಾಂತವನ್ನು ಗಂಭೀರವಾಗಿ ಪರಿಗಣಿಸಲು ಒಂದು ಮುಕ್ತ ಮನಸ್ಸು ಮಾತ್ರವಲ್ಲ, ಭೌತಶಾಸ್ತ್ರ ಮತ್ತು ಗಣಿತಗಳ ಆಳವಾದ ಜ್ಞಾನವೂ ಬೇಕಿತ್ತು. ಎಡ್ಡಿಂಗ್‌ಟನ್‌ಗೆ ಅವೆಲ್ಲವೂ ಇದ್ದವು. ಅಹಿಂಸೆಯನ್ನು ಪ್ರತಿಪಾದಿಸುತ್ತಿದ್ದ ಎಡ್ಡಿಂಗ್‌ಟನ್ ಯುದ್ಧದಲ್ಲಿ ಭಾಗವಹಿಸಿರಲಿಲ್ಲ. ಜರ್ಮನಿಯಿಂದ ಹೊರ ಹೊಮ್ಮುವ ಹೊಸ ಅಲೋಚನೆಗಳನ್ನು “ಅವು ನಿಷಿದ್ಧ”ವೆಂದು ಪರಿಗಣಿಸುವ ಮನಸ್ಥಿತಿ ಅವನದಾಗಿರಲಿಲ್ಲ.

ಭಾರದ ವಸ್ತುವಿನಿಂದಾಗುವ ಸ್ಪೇಸ್-ಟೈಮ್‌ನ ಜಗ್ಗುವಿಕೆಯಿಂದ ಬೆಳಕೂ ಸಹ ಬಾಗುತ್ತದೆ ಎಂಬ ರಿಲೆಟಿವಿಟಿ ಸಿದ್ಧಾಂತವನ್ನು ಪ್ರತ್ಯಕ್ಷವಾಗಿ ಪ್ರಮಾಣಿಸಿ ನೋಡಲು ಎಡ್ಡಿಂಗ್‌ಟನ್ ಸಿದ್ಧನಾದ.

(ಸುಬ್ರಹ್ಮಣ್ಯನ್ ಚಂದ್ರಶೇಖರ್)

ಐನ್‌ಸ್ಟೈನ್ ಒಬ್ಬ ಯೆಹೂದಿ ಜರ್ಮನ್ ಆಗಿದ್ದುದು, ಐನ್‌ಸ್ಟೈನ್ ಹೇಳುವಂತೆ, ಭಾರದ ವಸ್ತುಗಳು ಸ್ಪೇಸ್-ಟೈಮ್ ಅನ್ನು ಜಗ್ಗಿಸುವುದು ನಿಜವೇ ಆದಲ್ಲಿ, ಆ ಜಗ್ಗುವಿಕೆಗೆ ಬೆಳಕೂ ಸಹ ಬಗ್ಗಲೇಬೇಕಲ್ಲವೇ?

ನಾವು ರಾತ್ರಿಯಷ್ಟೇ ಕಾಣುವ ತಾರೆಗಳು, ದಿನದ ಬೆಳಕಿನಲ್ಲಿ ಕಾಣುವುದಿಲ್ಲವಾದರೂ, ಗಣಿತದ ಮೂಲಕ ಆಕಾಶದಲ್ಲಿನ ಅವುಗಳ ಸ್ಥಾನವನ್ನು ನಿರ್ಧರಿಸಬಹುದು. ಅವುಗಳಿಂದ ಹೊರಡುವ ಬೆಳಕು, ಐನ್‌ಸ್ಟೈನ್ ಹೇಳುವಂತೆ, ಸೂರ್ಯನ ಗುರುತ್ವಾಕರ್ಷಣೆಗೆ ಒಳಗಾಗಿ ಬಾಗುತ್ತವೆಯೇ? ಎಡ್ದಿಂಗ್‌ಟನ್ ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲು ನಿರ್ಧರಿಸಿದ.

೧೯೧೯ರ ಮೇ ೨೯ರಂದು, ಆಫ್ರಿಕಾ ಖಂಡದ ಪಶ್ಚಿಮ ತೀರದಲ್ಲಿರುವ ಪ್ರಿನ್ಸಿಪಿ ದ್ವೀಪದಿಂದ ಪೂರ್ಣ ಸೂರ್ಯಗ್ರಹಣ ಕಾಣ ಬಹುದಿತ್ತು. ಆ ಸಮಯದಲ್ಲಿ, ಸೂರ್ಯ ಕಣ್ಮರೆಯಾದಾಗ, ಆಕಾಶದಲ್ಲಿನ ತಾರೆಗಳು ದಿನದಲ್ಲೂ ಕಾಣುತ್ತವೆ. ಆಗ, ಆ ತಾರೆಗಳಿಂದ ಹೊರಡುವ ಬೆಳಕನ್ನು ಗಮನಿಸಿ, ಲೆಕ್ಕಾಚಾರ ಮಾಡಿದರೆ, ಬೆಳಕು ಬಾಗುತ್ತದೆಯೋ ಇಲ್ಲವೋ ಎಂಬುದನ್ನು ಗಮನಿಸಬಹುದಷ್ಟೇ ಅಲ್ಲ, ಅದು ಎಷ್ಟರ ಮಟ್ಟಿಗೆ ಬಾಗುತ್ತದೆ ಎಂಬುದನ್ನೂ ತಿಳಿದುಕೊಳ್ಳಬಹುದು.

ಎಡ್ಡಿಂಗ್‌ಟನ್ ಮತ್ತು ಅವನ ತಂಡದವರು, ತಮ್ಮ ವೈಜ್ಞಾನಿಕ ಸಲಕರಣೆಗಳೊಂದಿಗೆ ನಾವೆಯೊಂದರಲ್ಲಿ ಪ್ರಿನ್ಸಿಪಿ ದ್ವೀಪಕ್ಕೆ ಬಂದಿಳಿದರು. ಮೇ ೨೯ರ ಮಧ್ಯಾಹ್ನ ಸುಮಾರು ಎರಡು ಗಂಟೆಯ ವೇಳೆಗೆ ಪೂರ್ಣ ಗ್ರಹಣ ಆಗುವುದಿತ್ತು. ಆದರೆ, ಮಧ್ಯಾಹ್ನ ಒಂದೂವರೆಯವರೆಗೂ ಭಾರೀ ಗಾಳಿ ಮತ್ತು ಮಳೆ. ಆದರೆ, ಪವಾಡ ಸದೃಶವೆಂಬಂತೆ, ಮೋಡ ಚದುರಿತು. ಎಡ್ಡಿಂಗ್‌ಟನ್ ಮತ್ತು ಆತನ ತಂಡದವರು ತಮ್ಮ ಕ್ಯಾಮೆರಾ ಸಲಕರಣೆಗಳ ಮೂಲಕ ಗ್ರಹಣದ ಹದಿನಾರು ಫೋಟೋಗಳನ್ನು ಸೆರೆ ಹಿಡಿದರು.

ಆ ಫೋಟೋಗಳನ್ನು ಮತ್ತಷ್ಟು ಅಧ್ಯಯನ ಮಾಡಿದ ಎಡ್ಡಿಂಗ್‌ಟನ್, ಬೆಳಕು ಬಾಗುವುದು ನಿಜವಷ್ಟೇ ಅಲ್ಲ, ಅದರ ಬಾಗುವಿಕೆಯ ಪರಿಮಾಣ ರಿಲೆಟಿವಿಟಿ ಸಿದ್ಧಾಂತದ ಲೆಕ್ಕಾಚಾರಕ್ಕೆ ಹೊಂದುತ್ತದೆ ಎಂಬುದನ್ನೂ ತೋರಿಸಿಕೊಟ್ಟ.

(ಸಿಗ್ನಸ್(‌ Sygnus)

ಆ ವರ್ಷದ ನವೆಂಬರಿನಲ್ಲಿ, ರಿಲೆಟಿವಿಟಿ ಸಿದ್ಧಾಂತಕ್ಕೆ ಪ್ರಾತ್ಯಕ್ಷಿಕ ಪ್ರಮಾಣ ದೊರಕಿರುವುದನ್ನು ಎಡ್ಡಿಂಗ್‌ಟನ್ ಪ್ರಕಟಿಸಿದ. ಆ ಸಿದ್ಧಾಂತವನ್ನು “ಅವಾಸ್ತವಿಕ” ಮತ್ತು “ಜರ್ಮನ್ ಯೆಹೂದಿಯೊಬ್ಬನ ಗಣಿತದ ಚಾತುರ್ಯ” ಎಂದು ಕೇವಲವಾಗಿ ಪರಿಗಣಿಸುತ್ತಿದ್ದವರೂ ಈಗ ಅದರ ಬಗೆಗೆ ಗಂಭೀರವಾಗಿ ಚಿಂತಿಸಬೇಕಾಯಿತು.

ರಾಯಲ್ ಸೊಸೈಟಿಯಲ್ಲಿ ಈ ಕುರಿತು ಅವನು ಮಾಡಿದ ಭಾಷಣದಲ್ಲಿ ಹೇಳಿದ ಕೆಳಗಿನ ಸಾಲುಗಳು ಈಗಲೂ ಪ್ರಸಿದ್ಧವಾಗಿವೆ:

“ಪಂಡಿತರಿಗಿರಲಿ ಅದರ ಅಳತೆ, ಮಾನದಂಡ
ಆದರೆ, ಒಂದಂತೂ ನಿಜ – ಬೆಳಕಿಗೂ ಇಹುದು ಭಾರ
ಒಂದಂತೂ ನಿಜ – ಇನ್ನು ಬೇಡ ವಾದ-ವಿತಂಡ
ಬೆಳಕಿನ ಕಿರಣಗಳೂ ಸೂರ್ಯನ ಬಳಿ ಇರವವು ನೇರ”

*****

ಮತ್ತೆ ನಮ್ಮ ಭಾರತೀಯ ನವ ಯುವಕನ ಕತೆಗೆ ವಾಪಸಾಗೋಣ.

ಮೊದಲೇ ಹೇಳಿದಂತೆ, ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ದೊರೆತ ಗೌರವ-ಮನ್ನಣೆಗಳು, ನಕ್ಷತ್ರಗಳ ಸಾವಿನ ಕುರಿತಾದ ತನ್ನ ಅಧ್ಯಯನವನ್ನು ಮತ್ತೊಮ್ಮೆ ಕೈಗೆತ್ತಿಕೊಳ್ಳುವಂತೆ ಅವನನ್ನು ಪ್ರೇರೇಪಿಸಿದವು. ಅವನು ಹೊಸದೊಂದು ಹುರುಪಿನೊಂದಿಗೆ ಆ ಕಾರ್ಯದಲ್ಲಿ ನಿರತನಾದ.

ಆರ್ಥರ್ ಎಡ್ಡಿಂಗ್‌ಟನ್ ಸಹ ಆ ದಿನಗಳಲ್ಲಿ, ಕೇಂಬ್ರಿಜ್‌ನ ಟ್ರಿನಿಟಿ ಕಾಲೇಜಿನಲ್ಲೇ ಭೌತ ಶಾಸ್ತ್ರದ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ. ಆ ಹೊತ್ತಿಗೆ, ಐನ್‌ಸ್ಟೈನ್‌ನ ಸಿದ್ಧಾಂತಕ್ಕೆ ಪ್ರಮಾಣ ಒದಗಿಸಿ ಒಂದು ದಶಕಕ್ಕೂ ಹೆಚ್ಚಿನ ಕಾಲವಾಗಿತ್ತು. ಅತಿ ಕ್ಲಿಷ್ಟ ವೈಜ್ಞಾನಿಕ ವಿಚಾರಗಳನ್ನೂ ಸರಳವಾಗಿ ವಿವರಿಸಬಲ್ಲನಾಗಿದ್ದ ಅವನ ಕೀರ್ತಿ ಎಲ್ಲೆಡೆ ಹರಡಿತ್ತು.

(ಆರ್ಥರ್ ಎಡ್ಡಿಂಗ್‌ಟನ್)

ಟ್ರಿನಿಟಿ ಕಾಲೇಜಿನಲ್ಲಿಯೇ, ಭಾರತೀಯ ಯುವಕನೊಬ್ಬ ನಕ್ಷತ್ರಗಳ ಸಾವಿನ ಕುರಿತು ಅಧ್ಯಯನ ನಡೆಸುತ್ತಿರುವುದು ಎಡ್ಡಿಂಗ್‌ಟನ್ ಕಿವಿಗೆ ಬಿತ್ತು. ಅವನು, ನಮ್ಮ ಭಾರತೀಯ ತರುಣನನ್ನು ಕರೆಯಿಸಿ ಈ ಅಧ್ಯಯನದ ಕುರಿತು ಕೂಲಂಕುಶವಾಗಿ ತಿಳಿದುಕೊಳ್ಳಲು ಪ್ರಾರಂಭಿಸಿದ. ಎಡ್ಡಿಂಗ್‌ಟನ್‌ನಂತಹ ಮಹಾನ್ ವಿಜ್ಞಾನಿಯೊಬ್ಬ ತನ್ನ ಅಧ್ಯಯನದ ಕುರಿತು ಅಷ್ಟೊಂದು ಅಸ್ಥೆ ತೋರಿಸುತ್ತಿರುವುದು, ಈ ತರುಣನಿಗೆ ಮತ್ತಷ್ಟು ಉತ್ಸಾಹವನ್ನು ತುಂಬಿಸಿತು.

ಅದೇ ಸಮಯಕ್ಕೆ, ಲಂಡನ್ನಿನ ರಾಯಲ್ ಸೊಸೈಟಿ, ವೈಜ್ಞಾನಿಕ ಕಾನ್ಫರೆನ್ಸ್ ಒಂದನ್ನು ಏರ್ಪಡಿಸಿತ್ತು. ಆ ಕಾನ್ಫರೆನ್ಸಿನಲ್ಲಿ, ನಕ್ಷತ್ರಗಳ ಸಾವಿನ ಕುರಿತಾದ ಅಧ್ಯಯನವನ್ನು ಪ್ರಕಟಿಸುವಂತೆ ಎಡ್ಡಿಂಗ್‌ಟನ್ ಈ ತರುಣನಿಗೆ ಕರೆ ನೀಡಿದ. ಅದರಂತೆ, ಈ ತರುಣ, ಜನವರಿ ೧೧, ೧೯೩೫ರಂದು, ದೇಶ-ವಿದೇಶಗಳ ವಿಜ್ಞಾನಿಗಳನ್ನುದ್ದೇಶಿಸಿ ಭಾಷಣ ಮಾಡಿ ತನ್ನ ಅಧ್ಯಯನದ ವಿಚಾರವನ್ನು ವಿವರಿಸಿದ. ಅದರ ಮುಖ್ಯ ಸಾರ: ನಕ್ಷತ್ರಗಳ ಸಾವಿನ ನಂತರ ಅವು ಶ್ವೇತ ಕುಬ್ಜಗಳಾದಾಗ, ಅವುಗಳ ದ್ರವ್ಯರಾಶಿ ಕೆಲ ಮಟ್ಟಕ್ಕಿಂತ ಹೆಚ್ಚಿದ್ದರೆ (ನಮ್ಮ ಸೂರ್ಯನ ದ್ರವ್ಯರಾಶಿಗಿಂತ ಸುಮಾರು ಒಂದೂವರೆ ಪಟ್ಟು ಹೆಚ್ಚಿದ್ದರೆ), ಅವು ತಮ್ಮೊಳಗೇ ಕುಸಿಯುತ್ತಾ ಅನಂತ ಸಾಂದ್ರತೆಯುಳ್ಳ (Infinitely dense) ಬಿಂದುಗಳಾಗುತ್ತವೆ.

ಅವನು ತನ್ನ ಭಾಷಣ ಮುಗಿಸಿ ಕುಳಿತಾಗ ಅವನಲ್ಲಿ ಒಂದು ವಿಜಯೋತ್ಸಾಹ ಮೂಡಿತ್ತು. ಭಾರತದಿಂದ ಇಂಗ್ಲೆಂಡಿಗೆ ಪ್ರಯಾಣ ಮಾಡುವಾಗ ಅವನ ಮನದಲ್ಲಿ ಮೂಡಿದ್ದ ಆಲೋಚನೆಗಳು ಕೊನೆಗೂ ಮಹಾನ್ ವಿಜ್ಞಾನಿಗಳನ್ನು ತಲುಪಿದ್ದವು!

ಆದರೆ, ಅವನ ಮನದಲ್ಲಿ ಮೂಡಿದ್ದ ಈ ಸಂತಸ ನಾಶವಾಗಲು ಹೆಚ್ಚು ಕಾಲ ಬೇಕಿರಲಿಲ್ಲ.

ಅವನ ಭಾಷಣದ ನಂತರದ ಭಾಷಣ ಬೇರಾರದ್ದೂ ಆಗಿರಲಿಲ್ಲ. ಅದನ್ನು ಮಾಡುತ್ತಿದ್ದವನು ಆರ್ಥರ್ ಎಡ್ಡಿಂಗ್‌ಟನ್. ಅವನ ಭಾಷಣದ ವಿಚಾರವೂ, ನಕ್ಷತ್ರಗಳು ಶ್ವೇತ ಕುಬ್ಜಗಳಾಗುವ ವಿಷಯವೇ ಆಗಿತ್ತು. ಇದು, ನಮ್ಮ ಭಾರತೀಯ ತರುಣನಿಗೆ ತಿಳಿಯದ ವಿಚಾರವೇನೂ ಅಗಿರಲಿಲ್ಲ. ಅದರ ಬಗೆಗೆ ಅವನಲ್ಲಿ ಯಾವುದೇ ಆಶ್ಚರ್ಯವೂ ಇರಲಿಲ್ಲ. ತನ್ನ ವೈಜ್ಞಾನಿಕ ಅಧ್ಯಯನದ ತೀರ್ಮಾನಗಳಿಗೆ, ಎಡ್ಡಿಂಗ್‌ಟನ್ ತನ್ನ ಭಾಷಣದಲ್ಲಿ ಪುಷ್ಟಿಯೊದಗಿಸುತ್ತಾನೆಂದೇ ಅವನು ಎಣಿಸಿದ್ದ.

ಆದರೆ, ಆದದ್ದೇ ಬೇರೆ. ಎಡ್ಡಿಂಗ್‌ಟನ್, ತನ್ನ ಭಾಷಣದಲ್ಲಿ, ಶ್ವೇತ ಕುಬ್ಜಗಳು ತಮ್ಮೊಳಗೇ ಕುಸಿದು ಬಿಂದುಗಳಾಗುವ ವಿಷಯವನ್ನು, ಅವಾಸ್ತವಿಕವೆಂದೂ, “ಕೇವಲ ಗಣಿತದ ಆಟ”ವೆಂದು ಪೂರ್ಣವಾಗಿ ತಿರಸ್ಕರಿಸಿದ.

ಮಹಾನ್ ವಿಜ್ಞಾನಿ ಎಂದೆಣಿಸಿಕೊಂಡಿದ್ದವನೊಬ್ಬ, ಪ್ರತಿಷ್ಠಿತ ಕಾನ್ಫರೆನ್ಸ್ ಒಂದರಲ್ಲಿ, ದೇಶ-ವಿದೇಶಗಳ ವಿಜ್ಞಾನಿಗಳೆದುರಿಗೆ ಈ ರೀತಿ ತನ್ನ ಅಧ್ಯಯನವನ್ನು ಸಾರಾಸಗಟು ನಗಣ್ಯವಾಗಿಸಿದ್ದು ನಮ್ಮ ಭಾರತೀಯ ತರುಣನ ಸ್ಥೈರ್ಯವನ್ನು ಒಮ್ಮೆಲೆ ಕುಗ್ಗಿಸಿತು. ಅವನು, ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯವಷ್ಟನ್ನೇ ಅಲ್ಲ, ಇಂಗ್ಲೆಂಡನ್ನೇ ಬಿಟ್ಟು ಅಮೆರಿಕದ ಯೂನಿವರ್ಸಿಟಿ ಆಫ್ ಷಿಕಾಗೋ ಅನ್ನು ಸೇರಿಕೊಂಡ. ತನ್ನ ಉಳಿದ ಆಯುಷ್ಯವನ್ನು ಅವನು ಅಲ್ಲಿಯೇ ಕಳೆದ. ಅಲ್ಲಿ ಭೌತಶಾಸ್ತ್ರದಲ್ಲಿ ಮಹತ್ತರ ಅಧ್ಯಯನವನ್ನು ನಡೆಸಿದನಾದರೂ, ತನ್ನ ಹಳೆಯ ಅಧ್ಯಯನವನ್ನು ಬಹುಮಟ್ಟಿಗೆ ಕೈಬಿಟ್ಟ.

ಆ ಭಾರತೀಯ ತರುಣ ಬೇರಾರೂ ಅಲ್ಲ. ಆತನ ಹೆಸರು ಸುಬ್ರಹ್ಮಣ್ಯನ್ ಚಂದ್ರಶೇಖರ್.

ಚಂದ್ರಶೇಖರ್ ಇಂಗ್ಲೆಂಡ್ ಬಿಟ್ಟು ಅಮೆರಿಕ ತಲುಪಿದ ನಂತರವೂ, ಕೆಲವೊಂದು ವೈಜ್ಞಾನಿಕ ಕಾನ್ಫರೆನ್ಸ್‌ಗಳಲ್ಲಿ, ಎಡ್ಡಿಂಗ್‌ಟನ್ ಜೊತೆಗೆ ಮುಖಾಮುಖಿಯಾಗುವ ಸಂದರ್ಭಗಳು ಎದುರಾದವು. ಒಮ್ಮೆ ಹೀಗೆ ಎದುರಾದಾಗ, ಎಡ್ಡಿಂಗ್‌ಟನ್ ತಮ್ಮ ಹಿಂದಿನ ನಡೆವಳಿಕೆಯ ಬಗೆಗೆ, ಚಂದ್ರಶೇಖರ್ ಅವರಲ್ಲಿ ಕ್ಷಮೆ ಬೇಡಿದರಂತೆ. ಆಗ ಚಂದ್ರಶೇಖರ್, “ಹಾಗಿದ್ದರೆ ನನ್ನ ಅಧ್ಯಯನದ ತೀರ್ಮಾನಗಳನ್ನು ನೀವು ಈಗ ಒಪ್ಪುತ್ತೀರೇ?” ಎಂದು ಕೇಳಿದರಂತೆ. ಆ ಪ್ರಶ್ನೆಗೆ ಎಡ್ಡಿಂಗ್‌ಟನ್ “ಇಲ್ಲ” ಎಂದೇ ಉತ್ತರಿಸಿದರಂತೆ. ಅದಕ್ಕೆ ಪ್ರತಿಕ್ರಿಯಿಸಿದ ಚಂದ್ರಶೇಖರ್, “ಮತ್ತೇಕೆ ಕ್ಷಮೆ ಕೇಳುತ್ತಿದ್ದೀರಿ?” ಎಂದು ಹೊರ ನಡೆದರಂತೆ.

ಇದೆಲ್ಲಾ ಆದ ಹಲವಾರು ದಶಕಗಳ ನಂತರವೂ, ಚಂದ್ರಶೇಖರ್ ಅವರ ಅಧ್ಯಯನದ ಸಂಗತಿಗಳು “ಕೇವಲ ಗಣಿತದ ಆಟಗಳಷ್ಟೇ” ಆಗಿದ್ದವು. ಅದಕ್ಕೆ ಯಾವುದೇ ತರಹದ ಪ್ರತ್ಯಕ್ಷ ಪ್ರಮಾಣಗಳಿರಲಿ, ಅದಕ್ಕೊಂದು ಹೆಸರೂ ಸಹ ಇರಲಿಲ್ಲ. ೧೯೬೦ರ ದಶಕದಲ್ಲಿ, ಪ್ರಖ್ಯಾತ ಅಮೆರಿಕನ್ ಭೌತ ಶಾಸ್ತ್ರಜ್ಞ ಜಾನ್ ವೀಲರ್ ಅದಕ್ಕೊಂದು ಹೆಸರನ್ನಿತ್ತ: ಬ್ಲ್ಯಾಕ್ ಹೋಲ್ ಅಥವಾ ಕೃಷ್ಣ-ರಂಧ್ರ.

೧೯೭೨ರಲ್ಲಿ, ಸಾಗರದ ಮಧ್ಯೆ ನಾವೆಯೊಂದರಲ್ಲಿ ಪ್ರಯಾಣಿಸುತ್ತಿದ್ದ ಹತ್ತೊಂಬತ್ತು ವರ್ಷದ ನವ ಯುವಕನೊಬ್ಬ, ವಿಶಾಲವಾದ ಆಕಾಶವನ್ನು ನೋಡುತ್ತಾ, ನಕ್ಷತ್ರಗಳ ಅಂತ್ಯದ ಬಗೆಗೆ ಆಲೋಚನೆ ಮಾಡತೊಡಗಿದ ನಲವತ್ತು ವರ್ಷಗಳ ನಂತರ, ಸಿಗ್ನಸ್ ತಾರಾಪುಂಜವನ್ನು ವೀಕ್ಷಿಸುತ್ತಿದ್ದ ಖಗೋಳ ಶಾಸ್ತ್ರಜ್ಞರಿಗೆ, ಕೃಷ್ಣ-ರಂಧ್ರವೊಂದರ ಇರುವು ಗಮನಕ್ಕೆ ಬಂದಿತು. (ಈ ಸಿಗ್ನಸ್ ತಾರಾಪುಂಜ ಪುರಾತನ ಭಾರತೀಯ ಖಗೋಳ ಶಾಸ್ತ್ರಕ್ಕೆ ಅಪರಿಚಿತವಾದದ್ದೇನೂ ಅಲ್ಲ. ಇಡೀ ಸೃಷ್ಟಿಯ ಕಾರಣೀಭೂತವೆನಿಸಿದ “ಬ್ರಾಹ್ಮೀ ಮುಹೂರ್ತ”ಕ್ಕೆ ಸಂಬಂಧಿಸಿದ ತಾರಾಪುಂಜವಿದು. ಹೊಚ್ಚ ಹೊಸ ನಕ್ಷತ್ರಗಳು ಸೃಷ್ಟಿಯಾಗುವ, ಸಿಗ್ನಸ್-ಎಕ್ಸ್ ಎಂಬ ನಕ್ಷತ್ರಗಳ ಫ್ಯಾಕ್ಟರಿಯೂ ಇಲ್ಲಿಯೇ ಇದೆ.) ನಂತರದ ವರ್ಷಗಳಲ್ಲಿ, ಇನ್ನೂ ಎಷ್ಟೋ ಕೃಷ್ಣ-ರಂಧ್ರಗಳನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಎಸ್.ಚಂದ್ರಶೇಖರ್ ಅವರ ಅಧ್ಯಯನ ಇಂದು “ಕೇವಲ ಗಣಿತದ ಆಟವಷ್ಟೇ” ಆಗಿ ಉಳಿದಿಲ್ಲ. ಅದರ ವಾಸ್ತವತೆಗೆ ಪ್ರಮಾಣ ಮತ್ತೆ-ಮತ್ತೆ ದೊರಕುತ್ತಲೇ ಇದೆ. ಶ್ವೇತ ಕುಬ್ಜಗಳ ದ್ರವ್ಯರಾಶಿ, ಕೃಷ್ಣ-ರಂಧ್ರಗಳಾಗುವ ಮಟ್ಟವನ್ನು ಇಂದು “ಚಂದ್ರಶೇಖರ್ ಲಿಮಿಟ್” ಎಂದೇ ಕರೆಯಲಾಗುತ್ತದೆ. ಚಂದ್ರಶೇಖರ್‌ಗೆ ಈ ಅಧ್ಯಯನಕ್ಕಾಗಿಯೇ ೧೯೮೩ರಲ್ಲಿ ನೊಬೆಲ್ ಪ್ರಶಸ್ತಿ ದೊರಕಿದ್ದಷ್ಟೇ ಅಲ್ಲ, ಇಂದು, ಅಮೆರಿಕದ ಅತ್ಯಂತ ಪ್ರತಿಷ್ಠಿತ ದೂರದರ್ಶಕ-ವೀಕ್ಷಣಾಲಯಕ್ಕೆ “ಚಂದ್ರಶೇಖರ್ ಅಬ್ಸರ್ವೇಟರಿ” ಎಂದೇ ಹೆಸರಿಡಲಾಗಿದೆ.

ಎಡ್ಡಿಂಗ್‌ಟನ್, ಚಂದ್ರಶೇಖರ್ ಅವರನ್ನು ಹೀಗೆಳೆಯಲೆಂದೇ ಅವರ ಆಪ್ತತೆ ಬೆಳೆಸಿಕೊಂಡರೆ? ನಮ್ಮ “ಕಾಮನ್ ಸೆನ್ಸಿ”ಗೆ ಸುಲಭವಾಗಿ ದಕ್ಕದ, ಅವಾಸ್ತವ ಎನ್ನಿಸುವ ರಿಲೆಟಿವಿಟಿ ಸಿದ್ಧಾಂತವನ್ನು “ಗಣಿತದ ಆಟ” ಎಂದು ವೈಜ್ಞಾನಿಕ ರಂಗ ದಿವ್ಯ ನಿರ್ಲಕ್ಷ್ಯ ತೋರಿದಾಗ, ಅದರ ಪರವಾಗಿ ನಿಂತು, ದೂರದ ಆಫ್ರಿಕಕ್ಕೆ ಪ್ರಯಾಣ ಮಾಡಿ, ಆ ಸಿದ್ಧಾಂತಕ್ಕೆ ಪ್ರಮಾಣ ಒದಗಿಸಿದ ಎಡ್ಡಿಂಗ್‌ಟನ್, ತನ್ನದೇ ಕಾಲೇಜಿನ, ತನ್ನ ಪಕ್ಕದ ರೂಮಿನಲ್ಲೇ ಕೂರುವ ತರುಣನೊಬ್ಬನ ಅಧ್ಯಯನವನ್ನು “ಕೇವಲ ಗಣಿತದ ಆಟ” ಎಂದು ತುಚ್ಛೀಕರಿಸಿದ್ದು ಏತಕ್ಕೆ? ಗಣಿತ ನಮ್ಮ ಮನಕ್ಕೆ ತೋರುವ ಸತ್ಯಗಳು, ನಮ್ಮ ಇಂದ್ರಿಯಾನುಭವಗಳಿಗೆ ಸಿಗದಿದ್ದರೆ, ಅವು ಅವಾಸ್ತವವೇ?

ಮೊದಲೆರಡು ಪ್ರಶ್ನೆಗಳಿಗೆ ಉತ್ತರ ನೀಡುವುದು ಕಷ್ಟ. ಆದರೆ, “ಯಾವುದು ಸತ್ಯ?” ಎಂಬುದರ ಬಗೆಗೆ ತತ್ವಶಾಸ್ತ್ರಜ್ಞರು, ಕಲಾವಿದರು, ಸಾಹಿತಿಗಳು, ವಿಜ್ಞಾನಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಲೇ ಇದ್ದಾರೆ.

ಕಾಲದ ಸತ್ಯದ ಕುರಿತು ವಿಜ್ಞಾನಿ-ತತ್ವಜ್ಞಾನಿಗಳ ಚರ್ಚೆಯನ್ನು ಗಮನಿಸೋಣ.

(ಮುಂದುವರೆಯುವುದು)