”ಅವನು ಸೂಜಿ ದಾರವನ್ನು ಕೈಯಲ್ಲಿ ಹಿಡಿದು ಮನೆಯ ಮುಂದಿರುವ ಬೀದಿ ದೀಪದ ಬೆಳಕಲ್ಲಿ ಹರಿದ ತನ್ನ ಕೋಟಿಗೆ ತೇಪೆ ಹಚ್ಚಲು ಎಷ್ಟು ಬಟ್ಟೆ ಬೇಕಾಗಬಹುದೆಂದು ಅಳತೆ ಮಾಡಿದ. ಚಾಪೆಯ ಕೆಳಗಿಟ್ಟ ಹರಿದ ಬಟ್ಟೆಯ ಗಂಟನ್ನು ಹೊರ ತೆಗೆದು ಆ ಕೋಟಿಗೆ ಸರಿ ಹೊಂದುವ ಬಟ್ಟೆ ನೋಡಿದ. ಆದರದು ಸಿಗಲಿಲ್ಲ. ಆ ಹರಿದ ಕೋಟಿನ ತೋಳಿಗೆ ತೇಪೆ ಹಚ್ಚಲು ಒಂದೇ ತರದ ಬಟ್ಟೆ ಹುಡುಕುವುದಾದರು ಹೇಗೆ?”
ಪರಿಮಳ ಜಿ. ಕಮತರ್ ಅನುವಾದಿಸಿದ ಗುಜರಾತೀ ಸಣ್ಣ ಕಥೆಯೊಂದು ನಿಮ್ಮ ಈ ಭಾನುವಾರದ ಓದಿಗಾಗಿ.

 

ಅಸ್ತಂಗತವಾಗುತಿರುವ ಸೂರ್ಯನ ಕೆಂಪು ಕಿರಣಗಳೂ ಕಾಣದಷ್ಟು ಮೋಡ ಮುಸುಕಿತ್ತು ಪಡುವಣದಿ. ಇಳಿಸಂಜೆಯ ಕೆಂಬಣ್ಣದ ಕಿರಣಗಳು ಹೊಳಪು ಬೀರುವ ಮುನ್ನವೆ ಕತ್ತಲಲಿ ಮಾಯವಾಗಿದ್ದವು. ಮೋಡಗಳ ದಾಳಿಗೊಳಪಟ್ಟ ಸಂಜೆಯ ಸೂರ್ಯನಂತೆ ಪ್ರಭಾಶಂಕರನೂ ಎಲ್ಲ ಕಡೆಗಳಿಂದ ಕತ್ತಲ ದಾಳಿಗೊಳಪಟ್ಟಿದ್ದ. ಆ ಕತ್ತಲಲೆ ಅವನು ತನ್ನ ಎಲೆ-ಅಡಿಕೆ ಚೀಲವನ್ನು ಬಿಚ್ಚಿದ. ಚೀಲದೊಳು ಇದ್ದದ್ದು ಬರಿ ಒಂದೇ ಎಲೆ. ಅದರಲ್ಲಿ ಅರ್ಧ ಎಲೆ ಒಣಗೇ ಹೋಗಿತ್ತು. ಎಲೆಗಳನ್ನು ತೆಗೆದುಕೊಂಡು ಬಾ ಎಂದು ಎರಡು ದಿನಗಳಿಂದ ತನ್ನ ಮಗ ಹಸ್ಮುಖನಿಗೆ ಹೇಳುತ್ತಿದ್ದರೂ ಅವನು ತಂದಿಲ್ಲ ಎಂದು ಗೊಣಗುತ್ತಾ ಉಳಿದ ಒಂದೆಲೆಯಲ್ಲೆ ಅರ್ಧ ಹರಿದು ಚೀಲದೊಳಿಟ್ಟ. ಇನ್ನರ್ಧ ಎಲೆಗೆ ಸುಣ್ಣ ಹಚ್ಚಿ ತಂಬಾಕೂ ಸೇರಿಸಿ ಬಾಯಿಗಿಟ್ಟುಕೊಂಡ.

ಮರುದಿನ ಮುಂಜಾನೆ, ಒಳ ನುಸುಳಿದ ಬೀದಿ ದೀಪದ ಬೆಳಕಲ್ಲೆ ಮನೆಯ ಮುಂಬಾಗಿಲ ಕೋಣೆಯ ಗೋಡೆಗೆ ಜೋತು ಹಾಕಿದ ಕೋಟು ಧರಿಸಿ, ಟೊಪಿಗೆ ಹಾಕಿಕೊಂಡು ಕೆಲಸಕ್ಕೆ ಹೊರಡಲು ಸಜ್ಜಾದ. ಪ್ರತಿದಿನ ಹೊರಗೆ ಹೋಗುವಾಗ ಸ್ವಲ್ಪ ನೀರು ಕುಡಿದೇ ಹೋಗುವ ಅಭ್ಯಾಸ ಅವನಿಗೆ. ಅದಕ್ಕೆ, ದಿನವೂ ನೀರಿನ ಲೋಟ ಹಿಡಿದು ಬಾಗಿಲಿಗೆ ನಿಲ್ಲುತ್ತಿದ್ದಳು ಅವನ ಹೆಂಡತಿ ಪಾರ್ವತಿ. ಆದರೆ ಅವನು ಕಳೆದ ಒಂದು ವರ್ಷದಿಂದ ಇಂತಹ ಎಲ್ಲ ಚಿಕ್ಕ ಪುಟ್ಟ ಕೆಲಸಗಳನ್ನು ತಾನೇ ಮಾಡಿಕೊಳ್ಳುತ್ತಿದ್ದಾನೆ. ಆ ದಿನ ಕೆಲಸಕೆ ಹೋಗುವ ಮುನ್ನ, ಎಂದಿನಂತೆ ನೀರು ಕುಡಿದು ತಿರುಗುವಾಗ ಯಾರೋ ಅವನ ಕೋಟಿನ ತೋಳುಗಳನ್ನು ಜಗ್ಗಿ ಹಿಡಿದು ನಿಲ್ಲಿಸಿದಂತಾಯಿತು. ‘ಯಾಕೆ ಪಾರ್ವತಿ, ಏನಾಯಿತು’? ಎಂದ ಪ್ರಭಾಶಂಕರ. ಮೇಲಿಂದ ಮೇಲೆ ಅವನು ಕೇಳುವ ಇಂತಹ ಸಹಜ ಪ್ರಶ್ನೆಗಳಿಗೆ ಉತ್ತರ ಸಿಗದೆ ಕತ್ತಲೆಯ ಮೌನದಲಿ ಕಳೆದು ಹೋಗುತ್ತಿದ್ದವು.

ತನ್ನ ಹಿರಿಯ ಮಗನ ಸಾವಿನಿಂದಾಗಿ ಪ್ರಭಾಶಂಕರ ಶೂನ್ಯ ಮನಸ್ಕನಾಗಿದ್ದ. ಅವನ ಹೆಂಡತಿಯೂ ಮಾನಸಿಕ ಆಘಾತಕ್ಕೊಳಗಾಗಿದ್ದಳು. ಆಗಿನಿಂದ ಆಕೆ ಪ್ರಭಾಶಂಕರನ ತೋಳುಗಳನ್ನು ಜಗ್ಗಿ ಜಗ್ಗಿ ಮಾತನಾಡುವ ಅಸಹಜ ಅಭ್ಯಾಸ ಬೆಳೆಸಿಕೊಂಡಿದ್ದಳು. ಒಂದು ಕ್ಷಣ ಮೌನವಾದ ಪ್ರಭಾಶಂಕರ ಹಿಂದಿನ ನೆನಪುಗಳನ್ನು ಮೆಲುಕು ಹಾಕತೊಡಗಿದ. ಮದುವೆಯಾಗಿ ಆಗಿನ್ನು ಎರಡೇ ವರ್ಷಗಳಾಗಿರಬಹುದೇನೊ? ಪ್ರಭಾಶಂಕರನ ತಂದೆ-ತಾಯಿ, ಅವರೆಲ್ಲರೂ ಕೂಡಿಯೆ ವಾಸಿಸುತ್ತಿದ್ದರು. ಒಂದು ದಿನ ಮುಂಜಾನೆ ಕೆಲಸಕ್ಕೆ ಹೊರಡುವ ವೇಳೆ ಪಾರ್ವತಿ ಅವನ ತೋಳುಗಳನ್ನು ಜಗ್ಗುತ್ತಾ, ನಾನು ತಾಯಿಯಾಗುತ್ತಿದ್ದೇನೆ ಎಂಬ ಸಂತಸದ ಸುದ್ದಿ ಹೇಳಿದ್ದಳು.

ಅವರದ್ದು ಸಂಪ್ರದಾಯಸ್ಥ, ಕಟ್ಟು ನಿಟ್ಟಿನ ಕೂಡು ಕುಟುಂಬವಾದ್ದುದರಿಂದ ಪ್ರಭಾಶಂಕರ ತನ್ನ ಹೆಂಡತಿಯೊಡನೆ ಕುಳಿತು ಮಾತಾಡಿದ ಗಳಿಗೆಗಳು ಬಹಳ ಕಡಿಮೆಯೆ. ತನ್ನ ತಂದೆ-ತಾಯಿಗೆ ಭಗವದ್ಗೀತೆ ಓದಿ ಹೇಳುವುದು ಅವನಿಗೆ ಪ್ರತಿರಾತ್ರಿಯ ಕೆಲಸ. ಅದನು ಮುಗಿಸುವ ಹೊತ್ತಿಗೆ, ದಿನದ ಕೆಲಸದ ಭಾರ ಹೊತ್ತು ದಣಿದ ಪಾರ್ವತಿ ಮಂಚದ ತುದಿಗೆ ಬಂದು ಕುಳಿತಿರುತ್ತಿದ್ದಳು. ಅವಳು ಎಚ್ಚರದಿಂದಿರಲು ಪ್ರಯತ್ನಿಸಿದರೂ ಕಣ್ರೆಪ್ಪೆಗಳು ಹಾಗೇ ನಿದ್ದೆಗೆ ಜಾರುತ್ತಿದ್ದವು.

ಪಾರ್ವತಿ, ಸಾಯುವ ದಿನವೂ ಅವನ ತೋಳನ್ನು ಜಗ್ಗಿ ಹಿಡಿದು, ‘ಇವತ್ತೊಂದು ದಿನ ನೀವು ಕೆಲಸಕ್ಕೆ ಹೋಗದಿದ್ದರೆ ನಡೆಯುವುದಿಲ್ಲವೇನು’? ಎಂದು ಕೇಳಿದ್ದಳು. ಕೆಲಸವನ್ನು ಒಂದು ದಿನವೂ ತಪ್ಪಿಸದ ತನ್ನ ಗಂಡ. ಕರ್ತವ್ಯ ನಿಷ್ಠೆ ನೆನೆದು, ‘ಇಲ್ಲ, ನೀವು ಕೆಲಸ ಬಿಟ್ಟರೆ ನಡೆಯುವುದಿಲ್ಲ ಬಿಡಿ. ನಾನು ಹಾಗೇಕೆ ಕೇಳಿದೆನೊ ತಿಳಿಯದು. ತೆಗೆದುಕೊಳ್ಳಿ, ಈ ನೀರು ಕುಡಿದು ಕೆಲಸಕ್ಕೆ ಹೋಗಿ’ ಎಂದಿದ್ದಳು. ಅದಕ್ಕೇ ಏನೊ, ಪ್ರಭಾಶಂಕರ ಆ ಮುಂಜಾನೆ, ಕೆಲಸಕ್ಕೆ ಹೊರಡುವಾಗ ಮೊಣಕೈ ಹತ್ತಿರ ಹರಿದ ಅವನ ಕೋಟು ಬಾಗಿಲ ಚಿಲಕಕ್ಕೆ ಸಿಕ್ಕು ಅವನನ್ನು ತಡೆದು ನಿಲ್ಲಿಸಿತ್ತು. ಆಗವನು, ‘ಏಕೆ ಪಾರ್ವತಿ, ಏನಾಯ್ತು’? ಎಂದು ಕೇಳಿದ್ದ. ಆಗಿನಿಂದ ಹಾಗೆ ಕೇಳುವುದು ಅವನಿಗೆ ರೂಢಿಯಾಗಿಬಿಟ್ಟಿತ್ತು. ಅವನ ಆ ಪ್ರಶ್ನೆಗೆ ಉತ್ತರವಾದರು ಹೇಗೆ ಸಿಕ್ಕೀತು? ಅವನು ಮತ್ತೆ ಮಾತು ಮುಂದುವರೆಸುತ್ತಾ, ‘ಈ ಕೋಟು ಹರಿದು ಹೋಗಿದೆ ಎಂದು ಹೇಳುತ್ತಿದ್ದೆಯೇನು? ಇದಕ್ಕೆ ತೇಪೆ ಹಚ್ಚಲೇನು? ಹಂಗಾದರೆ ಸೂಜಿ, ದಾರ ಎಲ್ಲಿದೆ’? ಎಂದು ತನಗೆ ತಾನೇ ಮಾತಾಡುತ್ತಾ ಯಾವುದೊ ಯೋಚನೆಯಲ್ಲಿ ಒಂದು ಕ್ಷಣ ನಿಂತಲ್ಲಿಯೆ ನಿಂತ. ಆ ಕ್ಷಣ ಪಾರ್ವತಿಯ ಮುಖದಲ್ಲಿ ಕಳವಳ ಕಂಡವನ ಹಾಗೆ, ‘ನೀನೇ ಹೇಳು, ನಾನೇನು ಮಾಡಲಿ ಇದಕ್ಕೆ? ನಿನಗೆ ಗೊತ್ತು, ನನ್ನ ಕೋಟಿಗೆ ತೇಪೆ ಹಚ್ಚಿಕೊಡೆಂದು ನಾನು ಪದೇ ಪದೇ ನಮ್ಮ ಸೊಸೆಯನ್ನು ಕೇಳಲಾರೆ. ನಾನೇ ತೇಪೆ ಹಚ್ಚಿಕೊಳ್ಳುತ್ತೇನೆ, ಸರಿ ತಾನೇ’? ಎಂದು ತನ್ನ ಪ್ರಶ್ನೆಗಳಿಗೆ ತಾನೇ ಉತ್ತರಗಳ ಕೊಟ್ಟುಕೊಳುತ್ತಾ, ‘ತೇಪೆ, ತೇಪೆ, ತೇಪೆ’ ಎಂದು ಬಾರಿಬಾರಿ ಅನ್ನುತ್ತಾನೆ. ತಕ್ಷಣವೆ ಮತ್ಯಾವುದೊ ವಿಚಾರದಲ್ಲಿ ಮುಳುಗಿ ಬಹಳ ವರ್ಷಗಳ ಹಿಂದೆ ನಡೆದು ಹೋದ ಹಳೆಯ ಘಟನೆಗಳನ್ನು ನೆನೆಸಿಕೊಳ್ಳುತ್ತಾನೆ; ಹಲವು ವರ್ಷಗಳ ಹಿಂದೆ ಅವರ ಇಡೀ ಮನೆ ಬೆಂಕಿಗಾಹುತಿಯಾಗಿದ್ದರಿಂದ ಅವರು ಎಲ್ಲವನ್ನು ಕಳೆದುಕೊಂಡರು. ಅವರಪ್ಪ ಒಬ್ಬ ಅರ್ಚಕ. ಆಗ ಅವನಿಗೆ ಹದಿನೈದೇ ವರುಷ. ಮದುವೆ ವಯಸ್ಸಿಗೆ ಬಂದ ಅಕ್ಕ-ತಂಗಿಯರಿದ್ದರು. ಇಡೀ ಮನೆಯ ಜವಾಬ್ದಾರಿ ಅವನ ಹೆಗಲ ಮೇಲಿದ್ದರಿಂದ ಒಂದು ಅಂಗಡಿಯಲಿ ಅವನು ಬೀಡಿ ಕಟ್ಟುವ ಕೆಲಸಕ್ಕೆ ಸೇರಿಕೊಂಡ. ಆ ನಡುವೆ ವರ್ನಾಕುಲರ ಪೈನಲ್ ಎಕ್ಸಾಮ್ ಪಾಸ್ ಮಾಡಿಕೊಂಡ. ನಂತರ, ಐದು ವರ್ಷಗಳವರೆಗು ಮಾಡುತ್ತಾ ಬಂದ ಬೀಡಿ ಕಟ್ಟುವ ಕೆಲಸ ಬಿಟ್ಟು ದೂರದ ಹಳ್ಳಿಯ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕನಾಗಿ ನೇಮಕಗೊಂಡ. ಸಿಕ್ಕ ಹೊಸ ನೌಕರಿಯಿಂದ ತಿಂಗಳಿಗೆ ಹದಿನೈದೇ ರೂಪಾಯಿ ಸಂಬಳ ಸಿಗುತ್ತಿತ್ತು. ಮನೆಯ ಜವಾಬ್ದಾರಿ, ಅಕ್ಕ-ತಂಗಿಯರ ಮದುವೆ ಇತ್ಯಾದಿ ಹೊಣೆಗಾರಿಕೆ ಮುಗಿಸಿ ತಾನೂ ವೈವಾಹಿಕ ಜೀವನ ಪ್ರವೇಶಿಸುವುದರ ಹೊತ್ತಿಗೆ ಅವನಿಗೆ ಮೂವತ್ತೈದರ ಹರೆಯ. ಮದುವೆಯಾದ ಹೊಸತರಲ್ಲಿ ತನ್ನ ಹೆಂಡತಿಯನ್ನು ಕರೆಯಲೆಂದು ಅತ್ತೆಯ ಮನೆಗೆ ಹೋಗಿದ್ದ. ಅವಳ ಜೊತೆ ಮಾತಾಡುತ್ತಾ, ‘ನೋಡು ಪಾರ್ವತಿ, ಎಲ್ಲರ ಬದುಕಿನಲೂ ಬರುವ ಮುಖ್ಯ ಘಟ್ಟ ತಾರುಣ್ಯಾವಸ್ಥೆ. ನಾನೀಗ ಅದನ್ನು ದಾಟಿದ್ದೇನೆ. ಬದುಕು ಬಳುವಳಿಯಾಗಿ ನೀಡಿದ ಕಷ್ಟಗಳ ಅನುಭವದ ಮೂಸೆಯಲ್ಲಿ ನನ್ನ ಕನಸುಗಳೆಲ್ಲ ಬೆಂದುಹೋಗಿವೆ. ಹೀಗಿರುವಾಗ ನನ್ನ ಜೊತೆಗೆ ನೀನು ಸಂತೋಷದಿಂದ ಬದುಕಲು ಸಾಧ್ಯವೆ’? ಎಂದು ಕೇಳಿದನು. ‘ಹಾಗೇಕೆ ಕೇಳುತ್ತೀರಿ? ನನಗೆ ನೀವೇ ಎಲ್ಲಾ. ನಿಮ್ಮನ್ನು ಬಿಟ್ಟು ನಾನು ಮಾಡುವುದೇನಿದೆ?’ ಎಂದಳು ಪಾರ್ವತಿ. ‘ಆದರೆ ನನ್ನ ಮನೆಗೆ ನಾನೇ ಹಿರಿಯ ಮಗ. ಆದ್ದರಿಂದ ಮನೆಯ ಎಲ್ಲಾ ಜವಾಬ್ದಾರಿಗಳು ನನ್ನ ಮೇಲಿವೆ. ಒಂದು ಮುಗಿಸುವುದರಲೆ ಇನ್ನೊಂದು ತಾಪತ್ರಯ ಶುರುವಾಗುತ್ತದೆ. ಈ ಸಂಸಾರದ ಜಂಜಾಟದಲಿ ನಮ್ಮನೆಯ ಸಮಸ್ಯೆಗಳಿಗೆ ತೇಪೆ ಹಚ್ಚುವುದರಲ್ಲಿಯೇ ನಿನ್ನ ಬದುಕು ಮುಗಿದು ಹೋಗುತ್ತದೆ. ನನ್ನ ಜೊತೆಗಿದ್ದರೆ ನಿನಗ್ಯಾವ ಖುಷಿಯು ಇರದು’ ಎಂದನು. ‘ನನಗೆ ತೇಪೆ ಹಚ್ಚುವುದರಲ್ಲೇನು ಬೇಸರವಿಲ್ಲ ಬಿಡಿ, ಬದುಕಿದರೆ ನಾನು ನಿಮ್ಮೊಂದಿಗೇ ಬದುಕುತ್ತೇನೆ’ ಎಂದು ಮರುನುಡಿದಿದ್ದಳಾಕೆ.

‘ಆದರೀಗ ಆಕೆ ಎಲ್ಲಿದ್ದಾಳೆ? ತೇಪೆ ಹಚ್ಚಿ ಹಚ್ಚಿ ಅವಳಿಗೂ ದಣಿವಾಯಿತೇನೊ. ಅವಳು ಅದಕ್ಕೆ ನನ್ನ ಬಿಟ್ಟು ಹೋದಳು’ ಎಂದು ಬೇಸರ ವ್ಯಕ್ತಪಡಿಸುತ್ತಾ ತನ್ನ ಮನೆ ದೇವರ ಮುಂದೆ ದೀಪ ಹಚ್ಚಲು ಪ್ರಭಾಶಂಕರ ಕಡ್ಡಿಪೊಟ್ಟಣ ಹುಡುಕತೊಡಗಿದ. ಒಂದು ದೀಪದ ಕಡ್ಡಿಯು ಸಿಗಲಿಲ್ಲ ಅವನಿಗೆ. ಆದರೆ ಯಾವುದೊ ಒಂದು ಕಡ್ಡಿಪೊಟ್ಟಣದಲ್ಲಿ ದೀಪದ ಕಡ್ಡಿಯ ಬದಲು ಆಗಿ ಸೂಜಿ- ದಾರ ಸಿಕ್ಕಿತು. ಆಗ ಅವನು ಸೂಜಿ ದಾರವನ್ನು ಕೈಯಲ್ಲಿ ಹಿಡಿದು ಮನೆಯ ಮುಂದಿರುವ ಬೀದಿ ದೀಪದ ಬೆಳಕಲಿ, ಹರಿದ ತನ್ನ ಕೋಟಿಗೆ ತೇಪೆ ಹಚ್ಚಲು ಎಷ್ಟು ಬಟ್ಟೆ ಬೇಕಾಗಬಹುದೆಂದು ಅಳತೆ ಮಾಡಿದ. ಚಾಪೆಯ ಕೆಳಗಿಟ್ಟ ಹರಿದ ಬಟ್ಟೆಯ ಗಂಟನ್ನು ಹೊರ ತೆಗೆದು ಆ ಕೋಟಿಗೆ ಸರಿ ಹೊಂದುವ ಬಟ್ಟೆ ನೋಡಿದ. ಆದರದು ಸಿಗಲಿಲ್ಲ. ಆ ಹರಿದ ಕೋಟಿನ ತೋಳಿಗೆ ತೇಪೆ ಹಚ್ಚಲು ಒಂದೇ ತರದ ಬಟ್ಟೆ ಹುಡುಕುವುದಾದರು ಹೇಗೆ?

ಹಲವು ವರ್ಷಗಳ ಹಿಂದೆ ಅವರ ಇಡೀ ಮನೆ ಬೆಂಕಿಗಾಹುತಿಯಾಗಿದ್ದರಿಂದ ಅವರು ಎಲ್ಲವನ್ನು ಕಳೆದುಕೊಂಡರು. ಅವರಪ್ಪ ಒಬ್ಬ ಅರ್ಚಕ. ಆಗ ಅವನಿಗೆ ಹದಿನೈದೇ ವರುಷ. ಮದುವೆ ವಯಸ್ಸಿಗೆ ಬಂದ ಅಕ್ಕ-ತಂಗಿಯರಿದ್ದರು. ಇಡೀ ಮನೆಯ ಜವಾಬ್ದಾರಿ ಅವನ ಹೆಗಲ ಮೇಲಿದ್ದರಿಂದ ಒಂದು ಅಂಗಡಿಯಲಿ ಅವನು ಬೀಡಿ ಕಟ್ಟುವ ಕೆಲಸಕ್ಕೆ ಸೇರಿಕೊಂಡ.

ಹೇಗೊ, ಒಂದು ಬಟ್ಟೆ ತುಂಡು ಸಿಕ್ಕಿತು. ಅದನ್ನು ತೆಗೆದುಕೊಂಡು ಮನೆಯ ಮುಂದೆ ಬಿದ್ದ ಬೀದಿ ದೀಪದ ಬೆಳಕಿನೆಡೆ ನಡೆದ. ಆ ಮಬ್ಬುಗತ್ತಲಿಗೋ, ದೇಹಕೆ ಮುಪ್ಪಡರಿದ ಕಾರಣವೊ ಸೂಜಿಗೆ ದಾರ ಪೋಣಿಸುವ ಸತತ ಪ್ರಯತ್ನದಲಿ ಪ್ರಭಾಶಂಕರ ಸೋತು ಹೋದ. ಅಲ್ಲಿಯೆ ಗೋಡೆಯ ಮೇಲೆ ಅಂಟಿಸಿರುವ ಪ್ಲಾಸ್ಟರ್ ಕೀಳುತ್ತಾ ನಿಂತಿದ್ದ ಹುಡುಗನೊಬ್ಬ, ಸೂಜಿಗೆ ದಾರ ಪೋಣಿಸಲು ಪ್ರಯತ್ನಿಸುತ್ತಲೇ ಇರುವ ಪ್ರಭಾಶಂಕರನನ್ನು ಗಮನಿಸಿದ. ಹಾಗೂ ಕುತೂಹಲದಿಂದ ಇವನೆಡೆ ಬಂದ. ಪ್ರಭಾಶಂಕರ ಅವನನ್ನು ನೋಡಿ, ‘ಮಗಾ ನೀನ್ಯಾರು? ಆ ದಯಾಶಂಕರನ ಮಗ, ಮನು ಅಲ್ಲವೆ ನೀನು?’ ಎಂದು ಕೇಳಿದ. ‘ಹೌದು, ಅಜ್ಜ’ ಎಂದು ಆ ಹುಡುಗ ನೀಡಿದ ಗೌರವಪೂರ್ಣ ಪ್ರತಿಕ್ರಿಯೆಗೆ ಖುಷಿ ಪಟ್ಟ. ‘ತಮ್ಮಾ, ಈ ಸೂಜಿಯಲ್ಲಿ ಸ್ವಲ್ಪ ದಾರ ಪೋಣಿಸಿ ಕೊಡುವೆಯಾ?’ ಎಂದು ಕೇಳಿದ. ‘ಆಯ್ತು ಅಜ್ಜ, ಪೋಣಿಸಿ ಕೊಡುತ್ತೇನೆ. ಆದರೆ ನನದೊಂದು ಶರತ್ತು. ನಾನ್ ಈ ಕೆಲಸ ಮಾಡಿದರೆ ನೀನು ನನಗೊಂದು ಕಥೆ ಹೇಳಬೇಕು’ ಎಂದು ಕೇಳಿದ. ಆಗ ಪ್ರಭಾಶಂಕರ ಮುಗುಳ್ನಗುತ, ‘ನಿಮ್ಮ ಅಜ್ಜಿಗೆ ಕಥೆ ಹೇಳಲು ಬರುತ್ತಿತ್ತು. ನನಗೆ……..’ ಎನ್ನುವುದರಲ್ಲೆ ಮದ್ಯ ಪ್ರವೇಶಿಸಿದ. ‘ಅಜ್ಜ ನೆಪ ಹೇಳಬೇಡ. ಅಜ್ಜಿ ನಿನಗೆ ಹಲವಾರು ಕಥೆಗಳನ್ನು ಹೇಳಿರಬೇಕಲ್ಲವೆ? ಅದರಲ್ಲಿ ಯಾವುದಾದರು ಒಂದನ್ನು ನನಗೆ ಹೇಳು ಪ್ಲೀಜ್’ ಅಂದ. ‘ಆಯ್ತು, ನೀನು ದಾರ ಪೋಣಿಸಿ ಕೊಡು, ನಾನು ಕಥೆ ಹೇಳುತ್ತೇನೆ’ ಎಂದು ಒಪ್ಪಿಕೊಂಡ. ಆ ಹುಡುಗ ಸೂಜಿಯಲ್ಲಿ ದಾರ ಪೋಣಿಸಿ ಕೊಟ್ಟ. ಪ್ರಭಾಶಂಕರ ಕಥೆ ಹೇಳಲು ಶುರು ಮಾಡಿದ.

‘ಬಹಳ ವರ್ಷಗಳ ಹಿಂದೆ’…………..ಎಂದವನು ಕಥೆ ಶುರು ಮಾಡಿದ ಕೂಡಲೆ ಅವನನ್ನು ತಡೆದ ಮನು, ‘ನೂರು ವರ್ಷಗಳ ಹಿಂದೆಯೆ’? ಎಂದು ಪ್ರಶ್ನಿಸಿದ. ಅದಕ್ಕವನು, ‘ಇಲ್ಲ, ಇದು ಸಾವಿರ ವರುಷಗಳ ಹಿಂದಿನ ಕಥೆ ಎನ್ನುತಾ ಕಥೆ ಮುಂದುವರೆಸಿದ: ‘ಒಂದೂರಿನಲ್ಲಿ ಒಬ್ಬ ರಾಜನಿದ್ದ. ಅವನಿಗೆ ಚಿರಾಯು ಎಂಬ ಒಬ್ಬನೆ ಒಬ್ಬ ಮಗನಿದ್ದ. ಅವನು ಬಹಳ ಸುಂದರವಾಗಿದ್ದ. ನೋಡಿದವರೆಲ್ಲ ಪ್ರೀತಿಸುವಷ್ಟು ಮುದ್ದಾಗಿದ್ದ. ಅವನು ಬೆಳೆದಂತೆ ಅವನ ಸೌಂದರ್ಯವೂ ಇಮ್ಮಡಿಯಾಗುತ್ತಿತ್ತು. ಆದರೆ ಅವನನ್ನು ನೋಡಿದಾಗಲೆಲ್ಲ ರಾಜ- ರಾಣಿಯರ ದುಃಖ ಉಮ್ಮಳಿಸಿ ಕಣ್ಣಿರು ಹಾಕುತ್ತಿದ್ದರು’ ಎಂದೊಡನೆ ‘ಇದೆಂಥಾ ವಿಚಿತ್ರ? ಅವನಷ್ಟು ಸುಂದರವಾಗಿದ್ದರೂ ಅವನನ್ನು ನೋಡಿದಾಗಲೆಲ್ಲ ಖುಷಿಪಡುವುದ ಬಿಟ್ಟು ರಾಜ ರಾಣಿಯರು ಏಕೆ ಅಳುತ್ತಿದ್ದರು’ ಎಂದು ಮನು ಕೇಳಿದ.

‘ಹೌದು ತಮ್ಮ, ಅವನು ಬಹಳ ಸುಂದರವಿದ್ದುದರಿಂದಲೆ ಅವರು ಚಿಂತಿಸತೊಡಗಿದ್ದರು. ಕಾಲ ಕಳೆದಂತೆ ಅವನ ಸೌಂದರ್ಯವೂ ಮಾಸಿ ಹೋಗುತ್ತದೆ ಎನ್ನುವ ಕಾರಣಕ್ಕೆ ಅವರು ಚಿಂತಿಸತೊಡಗಿದ್ದರು. ರಾಜಕುಮಾರ ಹದಿನಾರರ ಹೊಸ್ತಿಲಲಿ ಕಾಲಿಟ್ಟಾಗ ಇಡಿ ರಾಜ್ಯವೇ ಸಂಭ್ರಮಿಸಿತು. ಅದೆ ಹೊತ್ತಿಗೆ ಅವರ ರಾಜ್ಯಕ್ಕೆ ಪವಾಡ ಪುರುಷ ಸಾಧು ಒಬ್ಬ ಬಂದಿದ್ದಾನೆಂದು, ಆತ ನಗರದ ಹೊರಗಿರುವ ಆಲದ ಮರದ ಕೆಳಗೆ ತಂಗಿದ್ದಾನೆಂಬ ಸುದ್ದಿ ರಾಜನಿಗೆ ತಲುಪಿತು. ಆಗ, ರಾಜ- ರಾಣಿ ಆ ಪವಾಡ ಪುರುಷನನ್ನು ಭೇಟಿಯಾಗಲು ನಿರ್ಧರಿಸಿದರು. ಅವನನ್ನು ಬೇಟಿಯಾದ ಅವರು ಬಂಗಾರದ ತಟ್ಟೆಯಲ್ಲಿ ಹಣ್ಣು ಹಂಪಲುಗಳನ್ನು ಅರ್ಪಿಸುತಾ, ‘ಮಹಾರಾಜರೆ, ದಯವಿಟ್ಟು ನಮ್ಮದೊಂದು ಆಸೆಯನ್ನು ನೆರವೇರಿಸುವಿರಾ?’ ಎಂದು ವಿನಂತಿಸಿದರು. ‘ಹೇಳಿ ಏನಾಗಬೇಕಾಗಿತ್ತು’ ಎಂದು ಸಾಧು ಕೇಳಿದ. ‘ನಮ್ಮ ರಾಜಕುಮಾರ ನಮಗಿರುವ ಒಬ್ಬನೆ ಮಗ. ಅವನಿಗೆ ಈಗಿರುವಷ್ಟೆ ಯವ್ವನ ಮತ್ತು ಆಕರ್ಷಣೆ ಯಾವಾಗಲು ಇರಬೇಕು’ ಎಂದವರು ಕೇಳಿಕೊಂಡರು. ‘ಆಗಲಿ. ನೀವು ಹೇಳಿದಂತೆ ಮಾಡಬಹುದು ಆದರೆ ಇದರ ಕುರಿತು ಇನ್ನೊಮ್ಮೆ ವಿಚಾರಿಸಿ’ ಎಂದ ಸಾಧು. ‘ನಾವು ದಿನವಿಡೀ ಇದರ ಕುರಿತೆ ವಿಚಾರ ಮಾಡುತ್ತೇವೆ. ಇದರ ಬಗ್ಗೆ ಇನ್ನೊಮ್ಮೆ ವಿಚಾರ ಮಾಡುವಂತದೇನು ಇಲ್ಲ’ ಎಂದರು. ‘ಆಯ್ತು, ನಿಮ್ಮಿಚ್ಚೆಯಂತೆ ಮಾಡುವೆ’ ಎಂದ ಸಾಧು, ‘ನಾನೀಗ ನಿಮ್ಮ ಮಗನಿಗೆ ಒಂದು ಮಂತ್ರ ಶಕ್ತಿ ಇರುವ ರೇಶಿಮೆ ಉಡುಪು ಕೊಡುತ್ತೇನೆ. ಇದನ್ನು ಅವನಿಗೆ ತೊಡಿಸಿ. ಆದರೆ ಅವನು ಇದನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು. ಆ ರೇಶಿಮೆ ಅಂಗಿ ಅವನ ಮೈ ಮೇಲೆ ಇರುವವರೆಗೂ ಅವನ ಮೇಲೆ ಕಾಲ ಯಾವ ಪರಿಣಾಮನ್ನೂ ಬೀರುವುದಿಲ್ಲ. ಅವನಿಗೆ ವಯಸ್ಸೂ ಆಗುವುದಿಲ್ಲ, ಸೌಂದರ್ಯವೂ ನಶಿಸುವುದಿಲ್ಲ’ ಎಂದನು. ರಾಜ- ರಾಣಿಯರಿಗಾದ ಸಂತೋಷ ಇಮ್ಮಡಿಗೊಂಡು ಅವರು ಮತ್ತೆ ಆ ಪವಾಡ ಪುರುಷನಿಗೆ ನಮಸ್ಕರಿಸಿದರು.

‘ನಮ್ಮ ರಾಜಕುಮಾರ ನಮಗಿರುವ ಒಬ್ಬನೆ ಮಗ. ಅವನಿಗೆ ಈಗಿರುವಷ್ಟೆ ಯವ್ವನ ಮತ್ತು ಆಕರ್ಷಣೆ ಯಾವಾಗಲು ಇರಬೇಕು’ ಎಂದವರು ಕೇಳಿಕೊಂಡರು. ‘ಆಗಲಿ. ನೀವು ಹೇಳಿದಂತೆ ಮಾಡಬಹುದು ಆದರೆ ಇದರ ಕುರಿತು ಇನ್ನೊಮ್ಮೆ ವಿಚಾರಿಸಿ’ ಎಂದ ಸಾಧು. ‘ನಾವು ದಿನವಿಡೀ ಇದರ ಕುರಿತೆ ವಿಚಾರ ಮಾಡುತ್ತೇವೆ. ಇದರ ಬಗ್ಗೆ ಇನ್ನೊಮ್ಮೆ ವಿಚಾರ ಮಾಡುವಂತದೇನು ಇಲ್ಲ’ ಎಂದರು.

ಆಗ ಸಾಧು ತನ್ನ ಮಾತು ಮುಂದುವರಿಸುತ್ತಾ, ‘ಆದರೆ ಒಂದು ಶರತ್ತು, ನಿಮ್ಮ ಮಗ ಈ ಅಂಗಿಯನ್ನು ಧರಿಸಿದ ನಂತರ ನೀವು ಅವನ ಬಗೆಗೆ ಒಂದು ಸ್ವಲ್ಪವು ಕೆಟ್ಟ ಯೋಚನೆ ಮಾಡಬಾರದು. ನೀವು ಹಾಗೇನಾದರೂ ಅವನ ಬಗ್ಗೆ ಕೆಟ್ಟದಾಗಿ ಯೋಚನೆ ಮಾಡಿದ್ದಾದರೆ ತಕ್ಷಣ ಆ ಅಂಗಿಯ ಮೇಲೊಂದು ತೂತು ಬೀಳುತ್ತದೆ. ಅದು ಕ್ರಮೇಣ ದೊಡ್ಡದಾಗುತ್ತಲೇ ಸಾಗುತ್ತದೆ’ ಎಂದು ಹೇಳಿದ. ಸಾಧುವಿನ ಮಾತು ಕೇಳಿದ ರಾಜ- ರಾಣಿ ಕಳವಳಗೊಂಡರು. ‘ನಾವು ನಮ್ಮ ಮಗನನ್ನು ತುಂಬಾ ಪ್ರೀತಿಸುತ್ತೇವೆ. ಹಾಗಾಗಿ ಅವನ ಕುರಿತು ಕೆಟ್ಟ ವಿಚಾರ ಮಾಡುವ ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ’ ಎಂದ ರಾಜ, ಮಾತು ಮುಗಿಸುವ ಮುನ್ನವೆ, ರಾಣಿ ಮಧ್ಯ ಪ್ರವೇಶಿಸಿ, ‘ಅಕಸ್ಮಾತ್ ಹಾಗೇನಾದರು ಆದರೆ ಆ ಅಂಗಿಗೆ ತೇಪೆ ಹಚ್ಚಬಹುದೇ?’ ಎಂದು ಕೇಳಿದಳು. ‘ತೇಪೆ ಹಚ್ಚಬಹುದು. ಆದರೆ ಅದು ತುಂಬಾ ಕಷ್ಟದ ಕೆಲಸ’ ಎಂದು ಸಾಧು ಹೇಳುವುದರಲ್ಲಿಯೆ, ‘ಕಷ್ಟ ಏಕೆ?’ ಎಂದು ಆ ದಂಪತಿಗಳು ಕೇಳಿದರು. ಅದಕ್ಕೆ ‘ತೇಪೆ ಹಚ್ಚಲು ಒಪ್ಪಿಕೊಂಡವರು ಆ ಅಂಗಿಗೆ ಎಷ್ಟು ಹೊಲಿಗೆಗಳನ್ನು ಹಾಕುತ್ತಾರೊ ಅಷ್ಟೆ ಸಂಖ್ಯೆಯಲ್ಲಿ ಅವರ ಜೀವಿತಾವಧಿಯ ವರುಷಗಳನ್ನವರು ಸಮರ್ಪಿಸಬೇಕು. ಅಷ್ಟೇ ಅಲ್ಲದೆ ಅವರು ತಮ್ಮ ಆ ಜೀವಿತಾವಧಿಯಲ್ಲಿ ಯಾವ ಪಾಪದ ಕೆಲಸಗಳನ್ನು ಮಾಡಿರಬಾರದು’ ಎಂದನು ಸಾಧು. ಸಾಧುವಿನ ಮಾತು ಕೇಳಿ ಒಂದು ಕ್ಷಣ ಮೌನಕೆ ಶರಣಾದ ರಾಜ- ರಾಣಿ ಅರೆಗಳಿಗೆಯಲಿ ಮೌನ ಮುರಿದು, ‘ಹಾಗೇ ಆಗಲಿ; ಈ ಶರತ್ತುಗಳಿಗೆ ನಮ್ಮ ಒಪ್ಪಿಗೆ ಇದೆ’ ಎಂದರು. ‘ಇದರ ಕುರಿತು ಇನ್ನೊಮ್ಮೆ ಯೋಚಿಸಿ. ಆ ಅಂಗಿಯ ಮೇಲೆ ತೂತು ಬಿದ್ದ ಕ್ಷಣವೆ, ಈ ಮಾಂತ್ರಿಕ ರೇಶಿಮೆ ಅಂಗಿ ಅಷ್ಟು ವರ್ಷಗಳವರೆಗೆ ತಡೆ ಹಿಡಿದ ಕಾಲದ ಪ್ರಭಾವ ಒಮ್ಮೆಲೆ ನಿಮ್ಮ ಮಗನ ಶರೀರದ ಮೇಲೆ ಗೋಚರಿಸುತ್ತದೆ. ಆ ಅಂಗಿಗೆ ತೇಪೆ ಹಚ್ಚುವವರೆಗೂ ಅವನಲ್ಲಿ ಶಾರೀರಿಕ ದೌರ್ಬಲ್ಯ ಹೆಚ್ಚಾಗುತ್ತಾ ಹೋಗುತ್ತದೆ. ಒಟ್ಟಾರೆ ಆ ರೇಶಿಮೆಯ ಅಂಗಿ ಅವನ ಮೈಮೇಲಿರುವವರೆಗೂ ಅವನಿಗೆ ಸಾವಿನ ಭಯವಿಲ್ಲ’. ಸಾಧುವಿನ ಯಾವ ಮಾತೂ ಕೇಳುವ ಒಲವನ್ನು ಅವರು ತೋರದೆ ಆ ಅಂಗಿಯನ್ನು ಕೊಡಬೇಕೆಂದು ಕೇಳಿಕೊಂಡರು. ಆಗ ಸಾಧು ಆ ಅಂಗಿಯ ನಟ್ಟ ನಡುವೆ ಸ್ವಸ್ತಿಕ್ ಚಿಹ್ನೆ ಬರೆದು ಅವರಿಗೆ ಕೊಟ್ಟ. ಆ ಮಾಂತ್ರಿಕ ರೆಶಿಮೆಯ ಅಂಗಿ ಪಡೆದ ರಾಜ- ರಾಣಿ ಸಂತೋಷದಿಂದ ಅರಮನೆಯತ್ತ ಹೆಜ್ಜೆ ಹಾಕಿದರು. ಮರುದಿನವೆ ಅವರು ಏರ್ಪಡಿಸಿದ ಒಂದು ದೊಡ್ಡ ದರ್ಬಾರಿನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ರಾಜಕುಮಾರ ಆ ರೇಶಿಮೆಯ ಅಂಗಿ ತೊಟ್ಟು ಆಡಂಬರ ಮತ್ತು ವೈಭವದಿಂದ ವಿಜೃಂಭಿಸಿದ’.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

‘ಮುಂದೇನಾಯ್ತು’ ಎಂದು ಮನು ಕುತೂಹಲದಿಂದ ಕೇಳಿದೊಡನೆ ಪ್ರಭಾಶಂಕರ ಕಥೆ ಮುಂದುವರೆಸಿದ; ‘ಕಾಲ ಕಳೆದಂತೆ ರಾಜ- ರಾಣಿ ವೃದ್ಯಾಪಕ್ಕೆ ಕಾಲಿಟ್ಟರು. ಚಿರಾಯು ಮಾತ್ರ ತನ್ನ ಸೌಂದರ್ಯ ತುಂಬಿದ ಯೌವನದ ದಿನಗಳನ್ನು ಖುಷಿಯಿಂದ ಕಳೆಯತೊಡಗಿದ. ಅವನು ಮದುವೆ ಮಾಡಿಕೊಂಡ. ಅವನ ಹೆಂಡತಿಗೆ ಸ್ವಲ್ಪ ವಯಸ್ಸಾದಾಗ ಅವಳನ್ನು ಬಿಟ್ಟು ಬೇರೆಯವಳನ್ನು ಮದುವೆಯಾಗುತ್ತಾ ಅನುಭವಿಸಿದ ಅವನ ಖುಷಿಗೆ ಕೊನೆಯೇ ಇರಲಿಲ್ಲ.

ಒಂದು ದಿನ ರಾಜ- ರಾಣಿ ಬಾಲ್ಕನಿಯಲ್ಲಿ ಕುಳಿತು ಹರಟೆಯಲಿ ತೊಡಗಿದಾಗ ಯಾವುದೋ ಹೆಣ್ಣುಮಗಳು ಅಳುವ ದನಿ ಕೇಳಿದರು. ಅವಳು ಚಿರಾಯುವನ್ನು ಮದುವೆಯಾದ ರಾಜಕುಮಾರಿಯರಲ್ಲಿ ಒಬ್ಬಳಾಗಿದ್ದಳು ಎಂದು ತಿಳಿದೊಡನೆ ಬೇಸರ ವ್ಯಕ್ತಪಡಿಸಿದರು. ಆ ರಾಜಕುಮಾರಿಗೆ ಸ್ವಲ್ಪ ವಯಸ್ಸಾದ ಕಾರಣ ರಾಜಕುಮಾರ ಅವಳನ್ನು ಬಿಟ್ಟು ಬೇರೆಯವಳನ್ನು ಮದುವೆಯಾಗಿದ್ದ. ಅವಳ ದುಃಖಕೆ ಕಾರಣ ತಿಳಿದ ರಾಜ ಅವಳನ್ನು ಸಮಾಧಾನ ಮಾಡಲು ಪ್ರಯತ್ನಿಸಿದ. ಆದರವಳು ವ್ಯಥೆಯಿಂದ ತನ್ನ ನಾಲಿಗೆ ಕಡಿದುಕೊಂಡು ಸತ್ತು ಹೋದಳು. ‘ಇದನ್ನೆಲ್ಲಾ ನೋಡುವುದರ ಬದಲು ಚಿರಾಯುಗೆ ಆ ರೇಶಿಮೆ ಅಂಗಿ ತಂದು ಕೊಡದಿದ್ದರೆ ಚೆನ್ನಾಗಿತ್ತು’ ಎಂದು ವೇದನೆಯಿಂದ ನುಡಿದರು ರಾಜ- ರಾಣಿ. ಆ ಸಾಧು ಭವಿಷ್ಯ ನುಡಿದಂತೆ ಮುಂದೊಂದು ದಿನ ರಾಜಕುಮಾರನ ರೇಶಿಮೆಯ ಅಂಗಿಯ ಮೇಲೆ ತೂತು ಕಾಣಿಸಿಕೊಂಡಿತು. ಆಗ ಅವನ ಶರೀರದೆಲ್ಲೆಡೆ ನೆರಿಗೆಗಟ್ಟಿ ಜೋತುಬಿದ್ದ ಚರ್ಮ ಮತ್ತು ರಕ್ತಸ್ರಾವ ಕಾಣಿಸಿಕೊಂಡಿತು. ಅವನ ಆ ಭಯಂಕರ ದೇಹಸ್ಥಿತಿಯಿಂದಾಗಿ, ಅವನನ್ನು ಕಂಡ ಜನ ಮುಖ ತಿರುಗಿಸಿ ಓಡತೊಡಗಿದರು. ಇದರಿಂದ ದಿಗ್ಭ್ರಾಂತನಾದ ರಾಜಕುಮಾರ ರಾಜ- ರಾಣಿಯರ ಹತ್ತಿರ ಓಡಿ ಬಂದು ಅಳತೊಡಗಿದ. ‘ದಯವಿಟ್ಟು ನನ್ನನ್ನು ರಕ್ಷಿಸಿ, ಇದರಿಂದ ನನ್ನನ್ನು ರಕ್ಷಿಸಿ’ ಎಂದು ಗೋಗರೆದ. ಮಗನ ಆ ದುರ್ಬಲ ಪರಿಸ್ಥಿತಿ ಕಂಡು ರಾಣಿಯ ದುಃಖ ಹೆಚ್ಚಿತು. ಆಗ ಅವಳೂ ಅಳುತ್ತ ತಾನೇ ಅವನ ಅಂಗಿಗೆ ತೇಪೆ ಹಚ್ಚಲು ಮುನ್ನಡೆದಳು. ಆದರೆ ರಾಜ- ರಾಣಿಯರೂ ಒಂದಿಲ್ಲೊಂದು ಪಾಪದ ಕೆಲಸ ಮಾಡಿದ್ದಕ್ಕೊ ಏನೊ, ಒಂದೂ ಹೊಲಿಗೆ ಕೂಡಲಿಲ್ಲ. ರಾಜಕುಮಾರನ ಆ ಹರಿದ ಅಂಗಿಗೆ ತೇಪೆ ಹಚ್ಚುವಲ್ಲಿ ಅರಮನೆಯ ಆಸ್ಥಾನಿಕರೂ ಪ್ರಯತ್ನಿಸಿ ಸೋತರು. ದಿನೆ ದಿನೆ ಅಂಗಿಗೆ ಬಿದ್ದ ಆ ತೂತು ದೊಡ್ಡದಾಗತೊಡಗಿತು. ಅದಕ್ಕೆ ತೇಪೆ ಹಚ್ಚಲು ಒಂದೂ ಕುಂದು ಕೊರತೆಯಿರದ ಮನುಷ್ಯರಾದರು ಎಲ್ಲಿದ್ದಾರೆ? ತಮ್ಮ ಮಗನ ಆ ಭಯಂಕರ ದೇಹ, ಅವನ ವ್ಯಥೆ ನೋಡಲಾಗದೆ ವೇದನೆಯಿಂದ ನರಳಿದ ರಾಜ-ರಾಣಿ ಒಂದು ದಿನ ತೀರಿ ಹೋದರು. ಮುಂದೊಂದು ದಿನ ಚಿರಾಯುವೂ ಮರಣ ಹೊಂದಿದ’.

ಅತ್ಯಂತ ಆಸಕ್ತಿಯಿಂದ ಕಥೆ ಕೇಳಿದ ಮನು, ಪ್ರಭಾಶಂಕರನನ್ನೆ ದಿಟ್ಟಿಸುತ್ತಾ ಗಂಭಿರನಾಗಿ ಕೇಳಿದ, ‘ಅವನ್ಯಾಕೆ ಆ ಅಂಗಿಯನ್ನು ತೆಗೆದು ಚೆಲ್ಲಲಿಲ್ಲ’? ಎಂದು. ‘ಅವನ ಅಂಗಿಗೆ ತೇಪೆ ಹಚ್ಚಲು ಯಾರಾದರು ಸಿಗಬಹುದೇನೋ ಎಂಬ ನಿರೀಕ್ಷೆಯಿಂದಲೂ ಮತ್ತೆ ಅದೆ ಯೌವನ ಪಡೆಯಬೇಕೆಂಬ ಆಸೆಯಿಂದಲೂ ಅವನು ಆ ಅಂಗಿ ತೆಗೆದು ಚೆಲ್ಲಿರಲಿಕ್ಕಿಲ್ಲ’ ಎಂದ ಪ್ರಭಾಶಂಕರ. ‘ಕೆಲವೊಂದು ಸಲ ಈ ಕತ್ತಲೆಯ ರಾತ್ರಿಯಲಿ, ಹರಿದ ಬಟ್ಟೆ ತೊಟ್ಟ ವಯೋವೃದ್ಧನೊಬ್ಬ ಹೆಜ್ಜೆಯ ಮೇಲೊಂದ್ ಹೆಜ್ಜೆಯನಿಡುತಾ, ಮನೆ ಮನೆಗೆ ಹೋಗಿ ‘ಇದಕ್ಕೆ ತೇಪೆ ಹಚ್ಚಿಕೊಡುವಿರಾ’? ಎಂದು ಕೇಳುತ್ತಾನಂತೆ. ಸ್ವಲ್ಪ ಹೊತ್ತು ಅವರ ಮನೆಗಳ ಮುಂದೆ ಕಾಯ್ದು, ಆ ಜನರಿಂದ ಮರು ಉತ್ತರ ಬರದಿದ್ದಾಗ ಅಲ್ಲಿಂದ ಹೊರಟು ಹೋಗುತ್ತಾನೆ ಎಂದು ಜನರು ಹೇಳುತ್ತಾರೆ’ ಎಂದ ಪ್ರಭಾಶಂಕರ. ಕೊನೆಗೆ ಹೇಳಿದ ಆ ಮಾತುಗಳ ಬಗೆಗೆ ಯೋಚಿಸುತ್ತಲೆ ಮನು ಮೌನವಾಗುತ್ತಾನೆ. ತಕ್ಷಣವೆ, ತಲೆಯಲಿ ಯಾವುದೆ ವಿಚಾರ ಹೊಳೆದಂತಾಗಿ, ಕಣ್ಣಗಲ ಮಾಡಿ ಹೇಳುತ್ತಾನೆ, ‘ಅಜ್ಜಾ, ನೀನು ಈ ರಾತ್ರಿ ಇದೇ ಈ ಮೆಟ್ಟಿಲುಗಳ ಮೇಲೆ ನಿದ್ದೆ ಮಾಡದೆ ಹಾಗೆ ಕುಳಿತಿರು. ಏಕೆಂದರೆ ಅವನು ಇಲ್ಲಿ ಬಂದರು ಬರಬಹುದು. ಒಂದು ವೇಳೆ, ಇಂದು ನೀನವನನ್ನು ಕಂಡರೆ ದಯವಿಟ್ಟು ನನ್ನನ್ನು ಕರೆ. ನಾವಿಬ್ಬರು ಸೇರಿ ಅವನ ಮೈಮೇಲಿನ ಆ ಅಂಗಿಯನ್ನು ಕಿತ್ತೊಗೆಯೋಣ. ಆಗಲಾದರೂ ತೇಪೆಗಾಗಿ ಅವನ ಅಲೆದಾಟ ತಪ್ಪಬಹುದು’.

ಮನು ಹೇಳಿದ ಮಾತು ಕೇಳಿದ ಪ್ರಭಾಶಂಕರ, ‘ಆಯ್ತು ಹಾಗೆ ಮಾಡೋಣ’ ಎಂದುತ್ತರಿಸಿದ. ನಂತರ, ಮನು ನಿರಾಳ ಭಾವದಿಂದ ಮನೆಯೆಡೆಗೆ ನಡೆದ. ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತು ಪ್ರಭಾಶಂಕರ ತನ್ನ ಹರಿದ ಕೋಟಿಗೆ ತೇಪೆ ಹಚ್ಚತೊಡಗಿದ. ಆ ಕ್ಷಣ, ಸೂಜಿ ಅವನ ಬೆರಳೊಳಗೆ ಆಳವಾಗಿ ತೂರಿಕೊಂಡಿತು. ಆಗವನು, ಸ್ಸ್ ಎನ್ನತಾ ಬೆರಳಿಗೆ ಚುಚ್ಚಿದ ಸೂಜಿ ದಾರ ಕೈಯಲ್ಲಿ ಹಿಡಿದು ಮನೆಯ ಮುಂಭಾಗದಲಿ ಆವರಿಸಿದ ಕತ್ತಲಲಿ ಅದೃಶ್ಯನಾದ.

 

ಸುರೇಶ್ ಜೋಶಿ (1921-1986)
ಅನುವಾದಕರಾಗಿ ಗುರುತಿಸಿಕೊಂಡಿರುವ ಗುಜರಾತಿನ ಸುರೇಶ್ ಜೋಷಿಯವರು ಆಧುನಿಕ ಗುಜರಾತಿ ಸಾಹಿತ್ಯದ ಹರಿಕಾರ ಎಂದೇ ಖ್ಯಾತಿ ಪಡೆದಿದ್ದರು. ಇವರು ಕಥೆಕಾರ, ಕವಿ, ವಿಮರ್ಶಕ ಹಾಗೂ ಕಾದಂಬರಿಕಾರರೂ ಹೌದು. ಪ್ರಬಂದ ಸಂಕಲನ, ವಿಮರ್ಶೆ, ಸಣ್ಣ ಕಥೆ, ಕಾವ್ಯ, ಕಾದಂಬರಿ ಮತ್ತು ಅನುವಾದವೂ ಸೇರಿದಂತೆ ಸುಮಾರು ನಲವತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರ ಸಾಹಿತ್ಯ ಕೃಷಿಗೆ 1971ರಲ್ಲಿ ರಂಜಿತ್ರಂ ಸುವರ್ಣ ಚಂದ್ರಕ ಎಂಬ ಪ್ರಶಸ್ತಿ ಬಂದಿದೆ. 1983 ರಲ್ಲಿ ಇವರ ವಿಮರ್ಶಾ ಕೃತಿ ‘ಚೈತನ್ಯ ಮಾನಸ’ಕ್ಕೆ ದೊರೆತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಇವರು ತಿರಸ್ಕರಿಸಿದ್ದಾರೆ.
ಪ್ರಸ್ತುತ ಕಥೆಯು ಮೂಲತಃ ಗುಜರಾತಿ ಭಾಷೆಯಲ್ಲಿ ಬರೆಯಲ್ಪಟ್ಟಿದ್ದು ಆಂಗ್ಲಭಾಷೆಗೆ ಅನುವಾದಿಸಲ್ಪಟ್ಟಿದೆ. ಆಂಗ್ಲಭಾಷೆಯಿಂದ ನಾನು ಕನ್ನಡೀಕರಿಸಿದ್ದೇನೆ. ಮನುಷ್ಯನ ದೇಹಕ್ಕೆ ಮುಪ್ಪಡರುವ ಪ್ರಕೃತಿದತ್ತ ಕ್ರಿಯೆಗೆ ವಿರುದ್ದವಾಗಿ ಹೋಗುವ ಯಾವ ಮನುಷ್ಯನು ಕಾಲಕ್ಕೆ ತಲೆಬಾಗಲೇಬೇಕೆಂಬ ಸಂದೇಶ ನೀಡುವ ಕಥೆಯೊಳಗಿನ ಕಥೆ ವಿಶಿಷ್ಟವಾಗಿ ಮೂಡಿಬಂದಿದೆ.