ಕುರುಡು ರಾತ್ರಿ

ತಲೆನೇವರಿಸುವ ಕಲೆಯನ್ನು ಕರಗತ ಮಾಡಿಕೊಂಡವರ ಕೈಗೆ ತಲೆಕೊಟ್ಟು
ಬದುಕುವ ಕಲೆಗೆ ಬೆಲೆಯನ್ನು
ನಿರ್ಧರಿಸಿಕೊಂಡಿರುವ
ಬೇಸತ್ತ ಹೆಜ್ಜೆಗಳು ನಡೆಯುವದನ್ನು ಮರೆತು
ನಶೆಯ ಡಬ್ಬಿಯಲಿ ಉಷೆಯ ಬೆಳಕಿಲ್ಲದೆ ನರಳುತಿವೆ.

ಬೀದಿ ಬದಿಯಲಿ ಬಿಲ್ಡಿಂಗಿನಂತಹ
ಬೃಹತ್ತಾದ ಕನಸೊಂದು ಬೆಳೆದು
ಮುಗಿಲಿನತ್ತ ದೃಷ್ಠಿ ಹಾಯಿಸುವಂತೆ ಮಾಡಿದೆ
ಅಂಗಾಲಲ್ಲಿ ನೆಟ್ಟ ಕೊಳೆತ ಮುಳ್ಳೊಂದು
ತನ್ನಷ್ಟಕ್ಕೆ ತಾ ಮನೆಮಾಡಿಕೊಂಡು
ಖುಷಿಯಿಂದ ಬೀಗುತ್ತಿದೆ.

ಈಗೀಗ ಜೋಪಡಿಯೂ ಗೋಡೆಗಳ
ಬೆನ್ನೇರಿ ನಿಂತು ತನ್ನಿರುವಿಕೆಯನು ಬದಲಾಯಿಸಿಕೊಂಡಿದೆ
ಮಳೆಹನಿಗಳು ಸೋರಿದ್ದರ ಸಾಕ್ಷಿಯಾಗಿ
ಬಿದ್ದ ತೂತುಗಳೂ ಕೂಡಾ ನಾವೀಗ ಬೆಳಕ ನೀಡುವ ಬೆಳಕಿಂಡಿಗಳೆಂದು
ಭಾವಿಸಿಕೊಂಡಿವೆ.

ಆಹಾ..! ಬದಲಾವಣೆಯೇ?
ಹೌದು! ಇದು
ಚಂಚಲತೆಯಲಿ ಚಲಿಸುತ್ತಲೇ
ಸ್ಖಲಿಸುವ ಸುಖ
ಕ್ಷಣಿಕವಾದರೂ ಕ್ಷಣಕಾಲವಾದರೂ
ಸುಖಿಸಿದ ತೃಪ್ತಿ
ಈಗವರು ಕುಣಿದರೂ ಕುಣಿಸಿದರೂ
ನಡೆದರೂ ಮಡಿದರೂ
ನಡೆಯುತ್ತದೆ.

ಮನೆಯಂಗಳದಿ ಮಲಗಿದ ನಾಯಿಗೆ
ಮೂಳೆಯ ರುಚಿಯೇನು ಈಗ ಹೊಸದಲ್ಲ
ಅದು ಬಿಸ್ಕತ್ತನ್ನು ನಿರಾಕರಿಸಿತ್ತೆಂಬುದರ ಸಾಕ್ಷಿಯಾಗಿ ಬೀಸಾಡಿದ ಬಿಸ್ಕತ್ತನ್ನು ತಿಂದು
ಹೊಟ್ಟೆ ತುಂಬಿಸಿಕೊಂಡ ಹುಡುಗಿ
ಪ್ಯಾಕೆಟನ್ನು ಬಚ್ಚಿಟ್ಟಿದ್ದ
ಪಾಪದ ಸುದ್ದಿ ಬಹಿರಂಗಗೊಂಡಿದೆ.

ಕೈಮಾಡಿ ಕರೆದವರ ಕಾಲಡಿಯ ಕಸವಾಗಿ
ಮೈವುಂಡು ನಡೆವವರ ಮನಕೆ ರಸವಾಗಿ
ನೋವುಣ್ಣುತ ಬದುಕುವವಳ
ನೋವನ್ನೇ ಹೇಳುತ ಅರಚುವ ಶಬ್ದಗಳ
ಬಾಯಿ ಬಿದ್ದು ಹೋಗಿದೆ
ಬದುಕುವ ಕನಸು ಕತ್ತಲೆಯಡಿ
ಬೆತ್ತಲೆಯಾಗಿ ಮಲಗಿದೆ
ಅಚ್ಚರಿಯಂದರೆ ಆಕಾಶದ ನಕ್ಷತ್ರಗಳು
ಬೇಡುವ ಭಿಕ್ಷಾಪಾತ್ರೆಯಲಿ ಬಿದ್ದು ಅಳುತ್ತಿವೆ
ದಿನ ಬೆಳಗಾದರೆ ಹೆಗಲಿಗೆ ಹಾಕುವ
ಚಿಂದಿ ಆಯುವ ಚೀಲದಿಂದ ಕರುಳೊಂದು
ಹೊರಬಿದ್ದಿದೆ
ವಿಪರ್ಯಾಸವೆಂದರೆ ಈಗ ರಾತ್ರಿಗೂ
ಕಣ್ಣು ಕಾಣುತ್ತಿಲ್ಲ..

 

ಸುರೇಶ ಎಲ್.ರಾಜಮಾನೆ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ರನ್ನಬೆಳಗಲಿಯವರು.
ಸಧ್ಯ ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ಪ್ರಾಥಮಿಕಶಾಲಾ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕವಿತೆ ಕಥೆ ಗಜಲ್ ಬರವಣಿಗೆ ಇವರ ಹವ್ಯಾಸ.
‘ಸುಡುವ ಬೆಂಕಿಯ ನಗು’, ‘ಮೌನ ಯುದ್ಧ ಮಾತಿಗೂ ಮನಸಿಗೂ’ ಎಂಬ ಎರಡು ಕವನಸಂಕಲನಗಳು ಪ್ರಕಟವಾಗಿವೆ.