ಇವರು ಹಕ್ಕಿಪಿಕ್ಕಿ ಜನ. ಒಂದು ಕಾಲದಲ್ಲಿ ಒರಿಜಿನಲ್ ಹುಲಿಯ ಉಗುರು, ಒರಿಜಿನಲ್ ನವಿಲು ತುಪ್ಪ, ಒರಿಜಿನಲ್ ಆನೆ ಬಾಲ, ಉಡದ ಚರ್ಮ ಮಾರುತ್ತಾ ತಿರುಗುತ್ತಿದ್ದ ಇವರಿಗೆ ದೇವರಾಜ ಅರಸರು ಕಾಲೊನಿ ಕಟ್ಟಿಸಿಕೊಟ್ಟರು. ಹುಲಿ ಸುದ್ದಿಗೆ ಹೋಗಬಾರದು, ಆನೆ ಬಾಲ ಕೀಳಬಾರದು, ಉಡ ಹಿಡಿಯಬಾರದು ಒಟ್ಟಾರೆ ಕಾಡಿನ ಕಡೆ ತಲೆ ಹಾಕಿ ಮಲಗಬಾರದು. ಬೇಕಾದರೆ ಬೇಸಾಯ ಮಾಡಬಹುದು ಅಂತ ಹೇಳಿ ಒಂದಿಷ್ಟು ಭೂಮಿಯನ್ನೂ ಮಂಜೂರು ಮಾಡಿಸಿದರು. ಆದರೆ ಇವರಿಗೆ ಬೇಸಾಯ ಹಿಡಿಸುತ್ತಿಲ್ಲ. ತಿರುಗಾಡದೆ ಇರಲಾಗುವುದಿಲ್ಲ. ಹಾಗಾಗಿ ದನದ ಕೊಂಬು ಸೀಳಿ, ಅರದಿಂದ ಉಜ್ಜಿ ದಾರದಂತೆ ಮಾಡಿ, ನೀರಲ್ಲಿ ಮುಳುಗಿಸಿಟ್ಟು, ಕಪ್ಪು ಬಣ್ಣದ ಡೈ ಹಾಕಿ ಸಂಸ್ಕರಿಸಿ ಆನೆ ಬಾಲ ಅಂತ ಮಾರುತ್ತಾರೆ.

ದನದ ಗೊರಸನ್ನು ಕತ್ತರಿಸಿ ಬಣ್ಣ ಹಾಕಿ ಹೊಳಪು ಬರಿಸಿ ಹುಲಿ ಉಗುರು, ಆಡಿನ ಚರ್ಬಿಯನ್ನು ಕಾಯಿಸಿ ಹುಲಿ ತುಪ್ಪ ಅಂತ ಮಾರುತ್ತಾರೆ. ಉಂಗುರಕ್ಕೆ ಆನೆ ಬಾಲ ಸಿಕ್ಕಿಸಿಕೊಂಡರೆ ಅದೃಷ್ಟ, ಕೊರಳಿಗೆ ಹುಲಿ ಉಗುರಿರುವ ದಾರ ಪುರುಷತ್ವ ಅಂತ ನಂಬುವ ನಮ್ಮಂತಹವರು ಅನುಮಾನ ಪರಿಹಾರಕ್ಕಾಗಿ ಕೊಂಚ ಬೆಂಕಿಯಲ್ಲಿ ಸುಟ್ಟು ತೋರಿಸಿ ಅಂತ ಕೇಳಿದರೆ ಇವರು ಸುಟ್ಟು ತೋರಿಸುತ್ತಾರೆ. ಆಗ ಬರುವ ಕಮಟುವಾಸನೆ ಆನೆ ಬಾಲದ ವಾಸನೆಯ ಹಾಗೇ ಇರುತ್ತದೆ. ದನದ ಗೊರಸಿಗೂ ಹುಲಿಯ ಉಗುರಿಗೂ ಸುಟ್ಟಾಗ ಬರುವ ವಾಸನೆಯಲ್ಲಿ ಅಂತಹ ವ್ಯತ್ಯಾಸವೇನೂ ಇರುವುದಿಲ್ಲ. ಆದರೆ ವನ್ಯ ಜೀವಿ ಕಾಯ್ದೆಯನ್ನೇನಾದರೂ ಇವರ ಮೇಲೆ ಜಡಿದರೆ ಇವರು ಜೈಲು ಪಾಲಾಗಬೇಕಾಗುತ್ತದೆ. ಆಗ ಇವರು ಇದು ನಿಜವಾಗಿಯೂ ಆನೆಬಾಲ ಅಲ್ಲ, ನಿಜವಾಗಿಯೂ ಹುಲಿತುಪ್ಪ ಅಲ್ಲ ಎಂದು ನ್ಯಾಯಾಲಯದ ಮುಂದೆ ಸಾಬೀತು ಮಾಡಬೇಕಾಗುತ್ತದೆ. ಹಾಗೆ ಸಾಬೀತಾದರೆ ಮೋಸ ಮತ್ತು ವಂಚನೆಯ ಅಪರಾಧ ಎದುರಿಸಬೇಕಾಗುತ್ತದೆ.

ಇದೆಲ್ಲದರ ಸಹವಾಸವೇ ಬೇಡ ಅಂತ ಇವರು ಹುಡುಕಿಕೊಂಡಿರುವ ಬದುಕಿನ ಬೇರೆ ದಾರಿಗಳು ಇನ್ನಷ್ಟು ಜಟಿಲವೂ ಹಾಸ್ಯಾಸ್ಪದವೂ ಆಗಿವೆ. ಉದಾಹರಣೆಗೆ ಊರೂರು ತಿರುಗಿ ಪ್ಲಾಸ್ಟಿಕ್ ಹೂವು ಮಾರುವುದು. ಮೈಸೂರಿನಿಂದ ಬಣ್ಣದ ಪ್ಲಾಸ್ಟಿಕ್ ಹಾಳೆಗಳನ್ನು ತಂದು ಮನೆಯಲ್ಲಿ ಎಲ್ಲರೂ ರಾತ್ರಿಯೆಲ್ಲಾ ಕುಳಿತು ಹೂವಿನಂತೆ ಸುತ್ತುತ್ತಾರೆ. ಮನೆಯ ಗಂಡಸು ಬೆಳಗೆಯೇ ಎದ್ದು ಊರೂರು ಹೂ ಮಾರಲು ಹೊರಡುತ್ತಾನೆ. ಬಹುತೇಕ ಸಂದರ್ಭಗಳಲ್ಲಿ ಆತ ತಿರುಗಿ ಬರುವಾಗ ಪೂರ್ತಾ ಕುಡುಕನಾಗಿ ಹೋಗಿರುತ್ತಾನೆ. ಕಳೆದ ಬಾರಿ ಇಲ್ಲಿನ ಬಹುತೇಕ ಗಂಡಸರು ಕೇರಳದ ಕಡೆ ಪ್ಲಾಸ್ಟಿಕ್ ಹೂ ಮಾರಲು ಹೋಗಿದ್ದರು. ಏಕೆಂದರೆ ಕೇರಳದಲ್ಲಿ ಹೂಗಳ ಹಬ್ಬ ಓಣಂ ಇತ್ತು. ಆದರೆ ಕೇರಳಕ್ಕೆ ಹೋದ ಇವರು ಸಖತ್ ಲಾಸು ಮಾಡಿಕೊಂಡು ಬಂದಿದ್ದರು. ಏಕೆಂದರೆ ಕೇರಳದಲ್ಲಿ ಪ್ಲಾಸ್ಟಿಕ್ ವಿರುದ್ಧ ಜನಾಂದೋಲನ ಶುರುವಾಗಿತ್ತು. ಅದೂ ಅಲ್ಲದೆ ಕಳೆದ ಸಲದ ಮುಂಗಾರು ಮಳೆಯೂ ಜೋರಾಗಿಯೇ ಸುರಿದು ಸಹಜ ಹೂಗಳೂ ಸಖತ್ತಾಗಿ ಅರಳಿ ಇವರೆಲ್ಲ ಹ್ಯಾಪು ಮೋರೆ ಹಾಕಿಕೊಂಡು ವಾಪಾಸು ಬರಬೇಕಾಯಿತು.

**********

ನಾಲಕ್ಕು ವರ್ಷಗಳ ಹಿಂದೆ ಈ ಹಕ್ಕಿಪಿಕ್ಕಿಗಳ ಒಂದು ತಂಡ ಸುಳ್ಳು ಆನೆ ಬಾಲ, ಸುಳ್ಳು ಹುಲಿ ಉಗುರು, ಸುಳ್ಳು ನರಿ ಬಾಲ ಮಾರಿ ಬರಲು ಸಿಂಗಾಪುರಕ್ಕೆ ಹೊರಟಿದ್ದರು. ಆದರೆ ವೀಸಾ ಸಿಗುವುದು ತಡವಾಗಿ ಇನ್ನೇನು ಮಾಡುವುದು ಎಂದು ಗೊತ್ತಾಗದೆ ನೇಪಾಳದ ಮಹೇಂದ್ರನಗರ ಎಂಬ ಪಟ್ಟಣ ಸೇರಿಕೊಂಡಿದ್ದರು. ಅಲ್ಲಿಂದ ಅವರು ಕಠ್ಮಂಡು ತಲುಪ ಬೇಕಿತ್ತು. ಅಲ್ಲಿ ಮಾವೋವಾದಿಗಳ ದೆಸೆಯಿಂದಾಗಿ ಕಠ್ಮಂಡುವಿನ ದಾರಿ ಬಂದ್ ಆಗಿತ್ತು. ಇನ್ನೇನು ಮಾಡುವುದು ಎಂದು ಅರಿವಾಗದೆ ಮಹೇಂದ್ರನಗರದಲ್ಲೇ ಉಳಿದುಕೊಂಡು ಕಾಯತೊಡಗಿದರು. ಕಾದು ಬೇಜಾರಾಗಿ ಗಂಡಸರು ಕುಡಿಯಲು ತೊಡಗಿದರು. ಹೆಂಗಸರು ಹೊಟ್ಟೆಪಾಡಿಗೆ ಅಲ್ಲೇ ಹುಲಿ ಉಗುರು, ಆನೆಬಾಲ ಎಂದು ಮಾರಲು ತೊಡಗಿದರು. ಹೀಗೆ ರಾಜಾರೋಷವಾಗಿ ಆನೆಬಾಲ ಹುಲಿತುಪ್ಪ ಎಂದು ಯಾರಾದರೂ ಗುಂಪಾಗಿ ಕೂಗುತ್ತಾ ನಡೆದರೆ ನೇಪಾಳದ ಅರಣ್ಯ ಅಧಿಕಾರಿಗಳಿಗೆ ಹೇಗಾಗಬೇಡ. ಸರಿ ಒಳಗೆ ನಡೆಯಿರಿ ಎಂದು ಮುದುಕಿಯೊಬ್ಬಳನ್ನು ಬಿಟ್ಟು ಅಷ್ಟೂ ಜನರನ್ನು ವನ್ಯಜೀವಿ ಸಂರಕ್ಷಣಾ ಕಾನೂನಿನ ಅಡಿಯಲ್ಲಿ ಮಹೇಂದ್ರನಗರದ ಸಬ್ ಜೈಲಿಗೆ ತಳ್ಳಿದರು.

‘ಏನು ಮಾಡೋದು ಸಾರ್. ನಿಜವಾದ ಆನೆ ಬಾಲವಾದರೆ ೧೦ ವರ್ಷ ಜೈಲು. ಸುಳ್ಳು ಆನೆ ಬಾಲವಾದರೆ ಸುಳ್ಳು ಹೇಳಿದ್ದಕ್ಕೆ ಅದಕ್ಕೂ ಜೈಲು. ಅಕಸ್ಮಾತ್ ಅಷ್ಟು ಸುಳ್ಳು ಬಾಲಗಳಲ್ಲಿ ಒಂದಾದರೂ ನಿಜದ ಬಾಲವಾಗಿದ್ದರೆ ಏನು ಗತಿ ಎಂದು ಗಡಗಡ ನಡುಗಿಬಿಟ್ಟೆ ಸಾರ್’ ಎಂದು ಒಂದು ತಿಂಗಳು ಜೈಲು ಮುಗಿಸಿ ಬಂದ ಹಕ್ಕಿಪಿಕ್ಕಿ ಹೆಂಗಸೊಬ್ಬಳು ನಗುತ್ತಾ ಹೇಳಿದ್ದಳು. ಆಕೆ ಜೈಲು ಪಾಲಾಗಿದ್ದಾಗ ಆಕೆಯನ್ನು ನೆನೆದು ಗೊಳೋ ಎಂದು ಅಳುತ್ತಾ ಹಾಡುತ್ತಿದ್ದ ಆಕೆಯ ಗಂಡ ಆಕೆ ಹಿಂತಿರುಗಿದ ಮೇಲೆ ಯಾಕೋ ಮ್ಲಾನ ವದನನಾಗಿದ್ದ. ಹೆಂಡತಿಯನ್ನು ನೆನೆದು ಅವನು ಹಾಡುತ್ತಿದ್ದ ಹಾಡುಗಳು, ಅವನ ಕಣ್ಣಿನ ಕೊನೆಯಲ್ಲಿದ್ದ ವಿರಹ, ಕುಡಿದಾಗ ಅವನು ಮಾತನಾಡುತ್ತಿದ್ದ ವೇದಾಂತ ಎಲ್ಲವೂ ಹಿನ್ನೆಲೆಗೆ ಸರಿದು ಇದೀಗ ಅವನ ಹಣೆಯಲ್ಲಿ ಜವಾಬ್ದಾರಿಯ ಗೆರೆಗಳು ನಿಚ್ಚಳವಾಗಿ ಕಾಣಿಸುತ್ತಿದ್ದವು.

ಈಕೆ ಆತನ ಐದನೆಯ ಹೆಂಡತಿ. ಮೊದಲ ನಾಲಕ್ಕು ಹೆಂಡತಿಯರೂ ಇವನನ್ನು ತ್ಯಜಿಸಿ ಬೇರೆಬೇರೆ ಕಡೆ ಕೂಡಿಕೆ ಮಾಡಿಕೊಂಡಿದ್ದರು. ಐದನೆಯ ಹೆಂಡತಿಗೆ ಆರು ಜನ ಮಕ್ಕಳು – ಗಂಡು ಮಕ್ಕಳೆಲ್ಲ ಆನೆಬಾಲ, ಹುಲಿ ಉಗುರು, ಪ್ಲಾಸ್ಟಿಕ್ ಹೂವು ಎಂದು ದೇಶಾಂತರ ಹೋಗಿದ್ದರು. ಹಾಗೆ ನೋಡಿದರೆ ಹೆಂಡತಿಯ ಜೊತೆ ಈ ಗಂಡ ಕೂಡಾ ಜೈಲಲ್ಲಿರಬೇಕಿತ್ತು. ಏಕೆಂದರೆ ಅವನೂ ಅವಳ ಜೊತೆ ಚೀಲದಲ್ಲಿ ಸುಳ್ಳು ಹುಲಿ ಉಗುರು, ಸುಳ್ಳು ಆನೆಬಾಲ ತುಂಬಿಕೊಂಡು ರೈಲು ಹತ್ತಿದ್ದ. ಮೈಸೂರಿನ ರೈಲು ನಿಲ್ದಾಣದಲ್ಲಿ ದೆಹಲಿಯ ರೈಲು ಹೊರಡಲು ಇನ್ನೂ ತುಂಬಾ ಹೊತ್ತಿತ್ತು. ಅದೇನು ಪುಣ್ಯವೋ ಏನೋ! ಈತನಿಗೆ ರೈಲಿನಲ್ಲಿ ಜಗಿಯಲು ಎಲೆ ಅಡಿಕೆ ಇಲ್ಲವಲ್ಲಾ ಅನಿಸಿತಂತೆ. ನಿಂತಿದ್ದ ರೈಲಿನಿಂದ ದಿಗ್ಗನೆ ಎದ್ದು ರೈಲು ನಿಲ್ದಾಣದ ಹೊರಗೆ ಬಂದು ಆಟೋ ಹತ್ತಿ ಮೈಸೂರಿನ ಬೀದಿಗಳಲ್ಲಿ ಎಲೆ ಅಡಿಕೆ ಮಾರುವ ಅಂಗಡಿಗಳನ್ನು ಹುಡುಕುತ್ತಾ ಹೊರಟಿದ್ದ. ಹೊರಟವನು ಹಾಗೇ ಇನ್ನೂ ಕೊಂಚ ಹೊತ್ತು ಅನವಶ್ಯಕವಾಗಿ ಅಲೆದ. ಅಲೆದು ರೈಲು ನಿಲ್ದಾಣಕ್ಕೆ ಬಂದು ನೋಡಿದರೆ ರೈಲು ಹೊರಟು ಹೋಗಿತ್ತು.

‘ಏನು ಹೇಳುವುದು ಸಾರ್? ಇದು ನನ್ನ ಅದೃಷ್ಟವೋ ದುರಾದೃಷ್ಟವೋ?’ ಸಂತೋಷ ಹಾಗೂ ಕಣ್ಣೀರು ಎರಡನ್ನೂ ಸಮನಾಗಿ ತುಂಬಿಕೊಂಡು ಆತ ನನ್ನನ್ನು ಕೇಳಿದ್ದ. ಎರಡೂ ಹೌದು ಎನ್ನುವಂತೆ ನಾನು ಅವನನ್ನು ನೋಡಿದ್ದೆ. ‘ನಾಳೆ ಬೆಳಗ್ಗೆ ಏಳುಗಂಟೆಗೆ ಕೇರಳ ಸಾರ್. ಕಣ್ಣಾನೂರಿನಲ್ಲಿ ಟ್ರೈನು ನಿಲ್ಲುತ್ತಲ್ಲ ಸಾರ್ ಅದರ ಪಕ್ಕ ಒಂದು ಸೇತುವೆ ಇದೆ ಸಾರ್. ಅಲ್ಲಿ ಯಾರಾದರೂ ಕೈಯಲ್ಲಿ ಪ್ಲಾಸ್ಟಿಕ್ ಹೂ ಹಿಡಿದುಕೊಂಡು ಪೂವೇ ಪೂವೇ ಎಂದು ಕೂಗುತ್ತಾ ಇದ್ದರೆ ಅದು ನಾನೇ ಸಾರ್.’ ಎಂದು ಚೀಲ ರೆಡಿ ಮಾಡಿಕೊಳ್ಳುತ್ತಿದ್ದ. ಅವನು ಬೇರೆ ಎಲ್ಲೂ ಹೋಗದಂತೆ ಅಥವಾ ಕತೆ ಹೇಳುತ್ತಾ ನನ್ನ ಜೊತೆ ಕಾಲ ಹಾಳುಮಾಡದಂತೆ ಅವನ ಹೆಂಡತಿ ಕಣ್ಣಲ್ಲೇ ಕಾವಲು ಕಾಯುತ್ತಿದ್ದಳು. ‘ಹಾಗಾದರೆ ನಿನ್ನ ಉಳಿದ ಕತೆಗಳನ್ನು ಕೇಳುವುದು ಇನ್ನು ಯಾವಾಗ’ ಎಂದು ಕೇಳಿದೆ. ಅದಕ್ಕೆ ಆತ ‘ಅಯ್ಯೋ ಇನ್ನು ಯಾವಾಗ ಸಾರೇ’ ಎಂದು ತಾನೂ ನಿಸ್ಸಹಾಯಕನಾಗಿ ನಕ್ಕಿದ್ದ. ಆಗ ಇದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ಹೆಂಡತಿ ‘ಇದೆಲ್ಲಾ ಯಾಕೆ ಸಾರ್, ನಾವು ಜೈಲಿಗೆ ಹೋಗಿ ಆಯಿತು ಬಂದೂ ಆಯಿತು. ಈಗ ನೀವು ಸಾಧ್ಯ ಆದರೆ ಒಂದು ಫ್ಯಾಕ್ಟರಿ ಶುರುಮಾಡಿ, ನಮಗೆಲ್ಲಾ ಕೆಲಸ ಕೊಡಿಸಿಕೊಡಿ. ನಾವೆಲ್ಲಾ ಬಂದು ಅಲ್ಲೇ ಕೆಲಸ ಮಾಡುತ್ತೇವೆ. ಈ ಆನೆ ಬಾಲವೂ ಬೇಡ ಹುಲಿ ಉಗುರೂ ಬೇಡ. ಹೂ ಮಾರುವುದೂ ಬೇಡ – ಸುಮ್ಮನೆ ಕಥೆ ಹೇಳುವುದೂ ಬರೆಯುವುದೂ ಬೇಡ’ ಎಂದು ನನ್ನನ್ನು ಬೈದು ಕಳಿಸಿದ್ದಳು

(ಫೋಟೋಗಳೂ ಲೇಖಕರವು)