ನಾಗೇಶ್ವರ ಗುಡಿಯ ಹಿಂಭಾಗದ ಆವರಣವೊಂದರಲ್ಲಿ ದೊಡ್ಡದೊಂದು ಗಣಪತಿಯ ವಿಗ್ರಹವನ್ನೂ ನಂದಿ, ಶಿವಲಿಂಗಗಳನ್ನೂ ಇರಿಸಲಾಗಿದೆ. ಪಕ್ಕದಲ್ಲಿಯೇ ಚಾಲುಕ್ಯರ ನಿರ್ಮಾಣದ ಪುರಾತನ ಬಾವಿಯೊಂದಿದೆ. ಬಾವಿಯೂ ಸುತ್ತಲಿನ ಭವ್ಯಕಟ್ಟಡವೂ ಸೊಗಸಾಗಿವೆ. ಇನ್ನಷ್ಟು ಮುಂದೆ ಓಣಿಯೊಂದರಲ್ಲಿ ಸಾಗಿದರೆ, ಅಚಲೇಶ್ವರ ದೇವಾಲಯವು ಕಾಣಸಿಗುತ್ತದೆ. ಪೂರ್ವದಲ್ಲಿ ಗುಡಿಗೆ ಅಕ್ಕೇಶ್ವರ ದೇವಾಲಯವೆಂಬ ಹೆಸರಿದ್ದಿತು. ಇದು ಸತ್ಯಾಶ್ರಯ ಚಕ್ರವರ್ತಿಯ ಮಗಳು ಅಕ್ಕಾದೇವಿಯು ನಿರ್ಮಿಸಿದ ದೇಗುಲಗಳಲ್ಲೊಂದು. ಅಕ್ಕಾದೇವಿಯು ಕಾಲದ ಸಮರ್ಥ ಆಡಳಿತಗಾರರಲ್ಲೊಬ್ಬಳಾಗಿದ್ದವಳೆಂದು ಶಾಸನಗಳು ವರ್ಣಿಸುತ್ತವೆ. ದೇಗುಲದ ಮುಖಮಂಟಪ, ಭುವನೇಶ್ವರಿ, ಕಂಬಗಳು ಎಲ್ಲದಕ್ಕೂ ಪುರಾತತ್ವ ಇಲಾಖೆ ಪುನಶ್ಚೇತನ ನೀಡಿದೆ. ಆರು ಪಟ್ಟಿಕೆಗಳುಳ್ಳ ಬಾಗಿಲವಾಡದ ಕೆತ್ತನೆ ಆಕರ್ಷಕವಾಗಿದೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಆರನೆಯ ಕಂತು

 

ಸೂಡಿ ಎಂಬ ಹೆಸರನ್ನು ಅಂತರ್ಜಾಲದಲ್ಲಿ ಹುಡುಕಿದರೆ ಅದಕ್ಕೆ ಸಂಬಂಧಿಸಿದ ಇತಿಹಾಸದ ಅನೇಕ ಪುಟಗಳು ಒಮ್ಮೆಗೇ ತೆರೆದುಕೊಳ್ಳುತ್ತವೆ. ಕಲ್ಯಾಣದ ಚಾಲುಕ್ಯ ಚಕ್ರವರ್ತಿಗಳ ರಾಜಧಾನಿಯಾಗಿದ್ದ ಸ್ಥಳವೆಂದರೆ ಕಡಿಮೆಯೇ? 990 ರಲ್ಲಿ ಸಿಂಹಾಸನವೇರಿದ ಸತ್ಯಾಶ್ರಯ ಮತ್ತು ಆತನ ಹಿರಿಯ ಮಗಳು ಅಕ್ಕಾದೇವಿ ಇಲ್ಲಿಂದ ರಾಜ್ಯಭಾರ ನಡೆಸಿದರು, ಇಲ್ಲಿ ಗದ್ಯಾಣ ಮತ್ತಿತರ ನಾಣ್ಯಗಳನ್ನು ಮುದ್ರಿಸುವ ಟಂಕಸಾಲೆಯೂ ಇತ್ತಂತೆ.

ಸೂಡಿ ಎಂಬ ಊರು ಇಂದಿನ ಗದಗ ಜಿಲ್ಲೆಯಲ್ಲಿದೆ. ಗದಗದಿಂದ 45 ಕಿಮೀ ದೂರದಲ್ಲಿರುವ ಈ ಐತಿಹಾಸಿಕ ಸ್ಥಳವನ್ನು ಬಾದಾಮಿಯ ಕಡೆಯಿಂದ ಬರುವವರು ಮೂವತ್ತು ಕಿಮೀಗಳಷ್ಟು ಕ್ರಮಿಸಿ ತಲುಪಲು ಸಾಧ್ಯ. ರೋಣದಿಂದ ಗಜೇಂದ್ರಗಡದತ್ತ ಹೋಗುವ ದಾರಿಯಲ್ಲಿರುವ ಸೂಡಿಯನ್ನು ತಲುಪುತ್ತಿದ್ದಂತೆಯೇ ದೂರದ ಮೈದಾನದಲ್ಲಿ ಜೋಡುಕಳಸದ ಗುಡಿ ಕಾಣಸಿಗುತ್ತದೆ. ಇದೇ ಹನ್ನೊಂದನೆಯ ಶತಮಾನದಲ್ಲಿ ಚಾಲುಕ್ಯರ ದಂಡನಾಯಕ ನಾಗದೇವನು ಕಟ್ಟಿಸಿದ ನಾಗೇಶ್ವರ ದೇವಾಲಯ. ಗುಡಿಗೆ ಎರಡು ವಿಮಾನಗೋಪುರಗಳಿರುವುದರಿಂದ ಜೋಡು ಕಳಶದ ಗುಡಿಯೆಂದು ಹೆಸರುಪಡೆದಿದೆ.


ಎತ್ತರವಾದ ಜಗಲಿಯ ಮೇಲಿರುವ ದ್ವಿಕೂಟ ದೇವಾಲಯ. ಎರಡು ಗರ್ಭಗುಡಿಗಳನ್ನು ಸಂಪರ್ಕಿಸುವ ನಡುಮಂಟಪಕ್ಕೆ ಎರಡು ಬದಿಗಳಿಂದ ಪ್ರವೇಶವಿದೆ.

ಪ್ರವೇಶದ್ವಾರದ ಸೋಪಾನಗಳನ್ನೇರಿ ಹೋದರೆ ಶಿವನ ಗುಡಿಗೆದುರಾಗಿ ಕುಳಿತ ನಂದಿ. ಮಂಟಪವನ್ನು ಆಧರಿಸಿ ನಿಂತ ಸೊಗಸಾದ ಕಂಬಗಳು. ಮಂಟಪದ ಅಂಚಿನಲ್ಲಿರುವ ಕಕ್ಷಾಸನದ ಹೊರಭಾಗದಲ್ಲಿ ಕುಂಭ, ಆನೆ ಮೊದಲಾದವನ್ನು ಚಿತ್ರಿಸಿದೆ. ಮುಂಚಾಚಿದ ಇಳಿಜಾರು ಸೂರು ಮಂಟಪಕ್ಕೆ ಸೊಬಗನ್ನು ತಂದಿದೆ. ನಂದಿ, ಕಂಬಗಳು, ಬಾಗಿಲ ಪಟ್ಟಿಕೆಗಳ ಕೆತ್ತನೆ ಅಸಾಧಾರಣವಲ್ಲದಿದ್ದರೂ ಗಮನಸೆಳೆಯುವಂತಿವೆ. ಇಲ್ಲಿರುವ ಶಾಸನಗಳನ್ನು ಕಿಡಿಗೇಡಿಗಳು ರೂಪಗೆಡಿಸಿದ್ದಾರೆ. ಪುರಾತನ ಶಿವಲಿಂಗದ ಪಾಣಿಪೀಠ ನಕ್ಷತ್ರಾಕಾರದಲ್ಲಿದ್ದು ಆಕರ್ಷಕವಾಗಿದೆ.

ದೇವಾಲಯದ ಹೊರಗೋಡೆಯ ಮೇಲೆ ಕೆಳಭಾಗದಿಂದ ಶಿಖರದವರೆಗೆ ಕಂಬಗಳು ಮೇಲೆದ್ದಂತೆ ವಿನ್ಯಾಸಗೊಳಿಸಿದೆ. ಕೆಳಭಾಗದಲ್ಲಿ ಕಂಬದ ಬುಡವು ಒಳಹೊರಗೆ ಚಾಚಿಕೊಂಡಂತಿರುವುದರಿಂದ ಅಲಂಕಾರಪಟ್ಟಿಕೆಯ ವಿನ್ಯಾಸದಂತೆ ಗೋಚರಿಸುತ್ತದೆ. ಕಂಬಗಳ ಹರವಿನಲ್ಲಿ ಮಂಟಪಗಳಂಥ ರಚನೆಗಳೂ, ಎರಡೆರಡು ಕಂಬಗಳ ನಡುವಿನ ತೆರವಿನಲ್ಲಿ ಕಿರುಗೋಪುರಗಳೂ ಕಂಡುಬರುತ್ತವೆ. ಚಾಲುಕ್ಯ ಅಥವಾ ವೇಸರ ಶೈಲಿಯೆಂದು ಕರೆಯಲಾಗುವ ಶಿಖರಗಳೂ ಈ ಕಂಬಗಳ ಮುಂದುವರೆದ ಭಾಗದಂತೆ ಭಾಸವಾಗುತ್ತದೆ. ಸ್ತೂಪಿ, ಮೇಲಿನ ಕಳಶಗಳು ಸುಸ್ಥಿತಿಯಲ್ಲಿವೆ. ಶಿವನ ಗುಡಿಗೆ ಹೋಲಿಸಿದರೆ ಇನ್ನೊಂದು ಗುಡಿಯ ಶಿಖರ, ಕಳಶಗಳು ಸಣ್ಣವು. ಗರ್ಭಗುಡಿಯಲ್ಲಿ ವಿಗ್ರಹವಿಲ್ಲ.

ನಾಗೇಶ್ವರ ಗುಡಿಯ ಹಿಂಭಾಗದ ಆವರಣವೊಂದರಲ್ಲಿ ದೊಡ್ಡದೊಂದು ಗಣಪತಿಯ ವಿಗ್ರಹವನ್ನೂ ನಂದಿ, ಶಿವಲಿಂಗಗಳನ್ನೂ ಇರಿಸಲಾಗಿದೆ. ಪಕ್ಕದಲ್ಲಿಯೇ ಚಾಲುಕ್ಯರ ನಿರ್ಮಾಣದ ಪುರಾತನ ಬಾವಿಯೊಂದಿದೆ. ಬಾವಿಯೂ ಸುತ್ತಲಿನ ಭವ್ಯಕಟ್ಟಡವೂ ಸೊಗಸಾಗಿವೆ. ಇನ್ನಷ್ಟು ಮುಂದೆ ಓಣಿಯೊಂದರಲ್ಲಿ ಸಾಗಿದರೆ, ಅಚಲೇಶ್ವರ ದೇವಾಲಯವು ಕಾಣಸಿಗುತ್ತದೆ. ಪೂರ್ವದಲ್ಲಿ ಈ ಗುಡಿಗೆ ಅಕ್ಕೇಶ್ವರ ದೇವಾಲಯವೆಂಬ ಹೆಸರಿದ್ದಿತು. ಇದು ಸತ್ಯಾಶ್ರಯ ಚಕ್ರವರ್ತಿಯ ಮಗಳು ಅಕ್ಕಾದೇವಿಯು ನಿರ್ಮಿಸಿದ ದೇಗುಲಗಳಲ್ಲೊಂದು. ಅಕ್ಕಾದೇವಿಯು ಆ ಕಾಲದ ಸಮರ್ಥ ಆಡಳಿತಗಾರರಲ್ಲೊಬ್ಬಳಾಗಿದ್ದವಳೆಂದು ಶಾಸನಗಳು ವರ್ಣಿಸುತ್ತವೆ.


ದೇಗುಲದ ಮುಖಮಂಟಪ, ಭುವನೇಶ್ವರಿ, ಕಂಬಗಳು ಎಲ್ಲದಕ್ಕೂ ಪುರಾತತ್ವ ಇಲಾಖೆ ಪುನಶ್ಚೇತನ ನೀಡಿದೆ. ಆರು ಪಟ್ಟಿಕೆಗಳುಳ್ಳ ಬಾಗಿಲವಾಡದ ಕೆತ್ತನೆ ಆಕರ್ಷಕವಾಗಿದೆ. ಒಳಗುಡಿಯಲ್ಲಿ ಶಿವಪಾರ್ವತಿಯರ ಸುಂದರವಾದ ವಿಗ್ರಹವಿದೆ. ಚತುರ್ಭುಜನಾದ ಶಿವ ಎಡಗೈಯಲ್ಲಿ ಪಾರ್ವತಿಯನ್ನು ಬಳಸಿ ನಿಂತ ಭಂಗಿ ಮನಮೋಹಕ. ಅಕ್ಕಪಕ್ಕಗಳಲ್ಲಿ ನಂದಿಯೂ ಗಣಪತಿಯೂ ಇದ್ದಾರೆ. ಪ್ರಭಾವಳಿಯ ಸುತ್ತ ದೇವಗಣಗಳನ್ನು ಚಿತ್ರಿಸಿದೆ. ಇಷ್ಟೇ ಸೊಬಗಿನ ಇನ್ನೊಂದು ವಿಗ್ರಹ ಶೇಷಶಯನ ವಿಷ್ಣು. ಭೂದೇವಿ-ಶ್ರೀದೇವಿಯರಿಂದ ಸೇವಿತನಾದ ವಿಷ್ಣು ಎಡಬದಿಗೆ ಒರಗಿಕೊಂಡು ಮಲಗಿರುವುದೊಂದು ವಿಶೇಷ. ಹೊಕ್ಕುಳಿಂದ ಹೊರಟ ತಾವರೆಯಲ್ಲಿ ಬ್ರಹ್ಮನೂ ಸುತ್ತ ದೇವಾನುದೇವತೆಯರೂ ಸೇರಿರುವಂತೆ ಚಿತ್ರಿಸಿದ್ದು ವಿಗ್ರಹವು ಈ ಮಾದರಿಯ ಶಿಲ್ಪಗಳಲ್ಲೇ ಅತಿವಿಶಿಷ್ಟವೆಂದು ಹೇಳಬಹುದು.

ಇತ್ತೀಚಿನ ವರುಷಗಳಲ್ಲಿ ಪುರಾತತ್ವ ಇಲಾಖೆಯ ಗಮನ ಸೆಳೆದಿರುವ ಸೂಡಿಯ ಪುರಾತನ ಸ್ಮಾರಕಗಳನ್ನು ಸಂರಕ್ಷಿಸಿ ಉತ್ತಮಪಡಿಸುವ ಕೆಲಸ ಇನ್ನೂ ಆಗಬೇಕಿದೆ. ಶಾಲೆಯ ಮೈದಾನಕ್ಕೆ ಹೊಂದಿಕೊಂಡಂತಿರುವ ಜೋಡಿ ಕಳಸದ ಗುಡಿ, ತೆರೆದ ಆವರಣದಲ್ಲಿರುವ ಗಣಪತಿ, ನಂದಿ ಮತ್ತಿತರ ಪುರಾತನ ವಿಗ್ರಹಗಳು, ಕಳೆ ಬೆಳೆದುಕೊಂಡ ಪುರಾತನ ಬಾವಿ, ಬಡಗಿಗಳ ಮರಗೆಲಸಕ್ಕೆ ಅನುಕೂಲಮಾಡಿಕೊಟ್ಟ ಶಿವದೇಗುಲದ ಜಗಲಿ, ಸಾವಿರ ವರುಷಗಳಿಗೂ ಹಿಂದಿನ ದೇವಾಲಯದ ಬಾಗಿಲೆಡೆಯಲ್ಲಿ ಗುಂಪುಕಟ್ಟಿಕೊಂಡು ಚೌಕಾಬಾರ ಆಡುವ ಯುವಕರು – ಇವೆಲ್ಲವನ್ನು ಕಾಣುವಾಗ ಸ್ವಲ್ಪ ನಿರಾಶೆಮೂಡುವುದು ಸಹಜ. ಇಲಾಖೆ ಮತ್ತಷ್ಟು ಸುರಕ್ಷಣಾ ಕ್ರಮಗಳನ್ನು ಕೈಗೊಂಡು ಈ ಐತಿಹಾಸಿಕ ಕೇಂದ್ರವನ್ನು ಸುಸ್ಥಿತಿಯಲ್ಲಿಡಬೇಕಾಗಿದೆ.