”ಮಗ ಹುಟ್ಟಿ ಒಂದು ವರ್ಷವಾಗಿರಬೇಕು. ಒಂದು ದಿನ ಸೂರಳ್ಳಿ ಅಣ್ಣ ಸಂತೆಗೆ ಹೋದ ಸಮಯ, ಸುಶೀಲಕ್ಕ ತನ್ನ ಮಗುವನ್ನು ಮನೆಯ ಹೊರಗಡೆಯ ಕಟ್ಟೆಯ ಮೇಲೆ ಮಲಗಿಸಿ ನಾಪತ್ತೆಯಾದಳು.ಸಂತೆ ಮುಗಿಸಿಕೊಂಡು ಮನೆಗೆ ಹೋಗುತ್ತಾನೆ. ಮನೆಯಲ್ಲಿ ಏನೋ ಗಲಾಟೆ, ತುಂಬ ಜನ ಸೇರಿದ್ದರು. ಏನೆಂದು ಮುಂದೆ ಬರುವಷ್ಟರಲ್ಲಿ ಅಮ್ಮ “ಮಗಾ… ನಿನ್ನ ಹೆಂಡ್ತಿಮೋಸ ಮಾಡ್ಚಲ್ಲೋ…” ಎಂದು ಹಣೆಹಣೆ ಕುಟ್ಟಿಕೊಂಡು ಅಳುತ್ತಿದ್ದಳು”
ಪತ್ರಕರ್ತೆ ಭಾರತಿ ಹೆಗಡೆ ಬರೆಯುವ ಸಿದ್ದಾಪುರ ಸೀಮೆಯ ಕಥೆಗಳ ಐದನೆಯ ಕಂತು.

ಸಿದ್ಧಾಪುರದ ಸಂತೆಯ ದಿವಸ ನಮ್ಮ ಮನೆಗೆ ಕಾಯಂ ಅತಿಥಿ ಎಂದರೆ ಸೂರಳ್ಳಿ ಅಣ್ಣ. ದೊಡ್ಡ ಹೊಟ್ಟೆಯ, ಗಿಡ್ಡಕೆ ಇರುವ ಸೂರಳ್ಳಿ ಅಣ್ಣ ಮೋಟು ಪಂಚೆಯುಟ್ಟು ಮೇಲೊಂದು ಅಂಗಿ, ಕೈಯ್ಯಲ್ಲೊಂದು ಚೀಲ ಹಿಡಿದುಕೊಂಡು, ಮನೆಯಲ್ಲೇ ಬೆಳೆದ ಬದನೆಕಾಯಿಯನ್ನೋ, ಸಂತೆಮೆಣಸಿನಕಾಯಿಯನ್ನೋ ತಂದು ನಮ್ಮನೆಗೆ ಹಾಕಿ ಗಡದ್ದಾಗಿ ಊಟ ಮಾಡಿಕೊಂಡು ಹೋಗುವುದು ಪ್ರತಿವಾರದ ನಿಯಮವಾಗಿಬಿಟ್ಟಿತ್ತು. ನಮಗೆ ಸದಾ ನೆನಪಿರುವುದು ಸಂತೆಗಿಂತಲೂ ಸೂರಳ್ಳಿ ಅಣ್ಣನ ಊಟ ಮಾಡುವ ಪರಿ. ಸಿಕ್ಕಾಪಟ್ಟೆ ಊಟ ಮಾಡುತ್ತಿದ್ದ ಸೂರಳ್ಳಿ ಅಣ್ಣನ ಊಟದ ಕತೆ ಆ ಭಾಗದಲ್ಲೆಲ್ಲ ಪ್ರಸಿದ್ಧಿ ಪಡೆದಿತ್ತು. ನಮ್ಮ ಮನೆಯ ನಾಲ್ಕೂ ಜನ ಊಟ ಮಾಡುವ ಎರಡರಷ್ಟು ಅವನಿಗೆ ಒಂದುಸಲಕ್ಕೆ ಬೇಕಾಗುತ್ತಿತ್ತು. ಹಾಗಾಗಿ ಸಂತೆಯ ದಿವಸಅಮ್ಮ ಒಂದು ಚರಿಗೆ ಅನ್ನ ಹೆಚ್ಚಿಗೆ ಮಾಡುತ್ತಿದ್ದಳು.

ಇಂಥ ಸೂರಳ್ಳಿ ಅಣ್ಣ ನಮ್ಮ ಮನೆಗೆ ಬರದೇ ಸುಮಾರು ವಾರಗಳೇ ಸಂದುಹೋಗಿ ಅಮ್ಮನಿಗೆ ವಿಪರೀತ ಕುತೂಹಲ ಹೆಚ್ಚಿತ್ತು. ಮೊದಲೆರಡು ವಾರ ಹೆಚ್ಚಿಗೆ ಅನ್ನ ಮಾಡಿ ದಂಡಮಾಡಿದ್ದಳು ಕೂಡ. ತುಂಬ ದಿನಗಳ ನಂತರ ಸುದ್ದಿ ಸಿಕ್ಕಿದ್ದು ಸೂರಳ್ಳಿ ಅಣ್ಣನ ಹೆಂಡತಿ ಅವನನ್ನೂ, ಮಗುವನ್ನೂ ಬಿಟ್ಟು ಓಡಿಹೋಗಿದ್ದಾಳೆ ಎಂದು. “ಅಯ್ಯೋ ಪಾಪವೇ… ಅವಂಗೆ ಹೀಂಗೆಲ್ಲ ಆಗಕ್ಕಾಗಿತ್ತಿಲ್ಲೆ. ಪಾಪ, ಒಳ್ಳೆಯವ, ಏನೋ ಜಾಸ್ತಿ ಊಟ ಮಾಡ್ತ ಹೇಳದೊಂದು ಬಿಟ್ರೆ ಉಳಿದಂತೆ ಅವ ಒಳ್ಳೆಯವನೇ ಆಗಿಯಿದ್ದ, ಅವನ ಜೊತೆ ಮಧ್ಯರಾತ್ರಿ ಯಾವುದಾದರೂ ಹುಡುಗಿನ ಕಳ್ಸಿದ್ರೂ ಸುರಕ್ಷಿತವಾಗಿರ್ತು. ಅಷ್ಟು ಗನಾವ ಅವ” ಎಂದು ಅಮ್ಮ ಅನ್ನಕ್ಕೆ ಅಕ್ಕಿ ತೊಳೆದು ಸ್ಟೌ ಮೇಲೆ ಇಡುತ್ತಲೇ ಹೇಳಿದ್ದಳು. ಅದೇ ಅಲ್ಲಿ ಸಮಸ್ಯೆಯಾಗಿದ್ದು ಎಂಬುದು ಯಾರಿಗೂ ಆಗ ಹೊಳೆದಿರಲಿಲ್ಲ. ಒಂದು ಹೆಣ್ಣು ಮದುವೆಯಾದ ಮೇಲೆ ಬಯಸುವುದೇನನ್ನು ಎಂಬ ಪ್ರಶ್ನೆ ಆಗಲ್ಲ, ಈಗಲೂ ಕೇಳಿಕೊಳ್ಳುವುದು ಅಪರೂಪ. ಅವರ ಮನೆಗೆ ಇವಳು ಹೊಂದಿಕೊಂಡು ಹೋಗಬೇಕು ಅಷ್ಟೆ. ಸೂರಳ್ಳಿ ಅಣ್ಣನ ಮನೆಯಲ್ಲಿ ಅವನಿಗೂ, ಅವನ ಹೆಂಡತಿಗೂ, ಅಮ್ಮ ಮಂಕಾಳಮ್ಮನಿಗೂ ನಡುವೆ ಏನು ನಡೆಯಿತೋ…? ಒಟ್ಟಿನಲ್ಲಿ ಅವನ ಹೆಂಡತಿಯಂತೂ ಓಡಿಹೋದದ್ದು ಖರೆಯಾಗಿತ್ತು. ಹಾಗೆ ನೋಡಿದರೆ ಅವನ ಹೆಂಡತಿ ಅವನನ್ನು ಒಪ್ಪಿ ಮದುವೆಯಾಗಿ ಆ ಮನೆಗೆ ಬಂದದ್ದೇ ಒಂದು ದೊಡ್ಡ ಪವಾಡ.!

ಯಾಕೆಂದರೆ ಸೂರಳ್ಳಿ ಅಣ್ಣನ ಮನೆಯಲ್ಲಿ ತುಂಬ ಬಡವರು. ಮೂರು ಅಣ್ಣ-ತಮ್ಮಂದಿರಿರುವ ಮನೆಯಲ್ಲಿ ಒಂದೂ ಹೆಣ್ಣುಮಕ್ಕಳಿರಲಿಲ್ಲ. ಅವನ ಅಮ್ಮ ಮಂಕಾಳಮ್ಮನೇ ಇರುವ ಏಕೈಕ ಹೆಣ್ಣು ಜೀವಿ. ಅವಳೋ ಸಿಕ್ಕಾಪಟ್ಟೆ ಜೋರು. ಸದಾ ಹೊಗೆಸೊಪ್ಪು ಹಾಕಿದ ಕವಳವನ್ನು ಜಗಿಯುತ್ತ, ಕೈಯ್ಯಲ್ಲೊಂದು ಕವಳದ ಸಂಚಿಯನ್ನು ನೇತು ಹಾಕಿಕೊಂಡೇ ಇರುವ ಮಂಕಾಳಮ್ಮನಿಗೆ ಮನೆಗೆಲಸಕ್ಕಿಂತಲೂ ಊರೊಟ್ಟಿಗಿನ ಪಂಚಾಯ್ತಿಯೇ ಹೆಚ್ಚು ಆಪ್ಯಾಯಮಾನವಾಗಿತ್ತು. ಯಾರದ್ದೇ ಮನೆಗೆ ಅವಳು ಬೆಳಗ್ಗೆ ತಿಂಡಿ ತಿಂದು, ಮನೆಗೆಲಸವನ್ನೂ ಹಾಗೆಯೇ ಬಿಟ್ಟು ಹೊರಟಳೆಂದರೆ ಅವರ ಮನೆಯ ಕಟ್ಟೆಯ ಮೇಲೆ ಕೂತು ಅವರಿವರ ಮನೆಯ ಕತೆ ಹೇಳಿ ಚೊಂಬುಗಟ್ಟಲೆ ಚಾ ಕುಡಿದು ಬರುವವಳೇ. ಮನೆಗೆ ಬಂದವಳಾದರೂ ಸರಿಯಾಗಿ ಮನೆಗೆಲಸ, ಅಡುಗೆ ತಿಂಡಿ ಮಾಡುವವಳೇ ಎಂದು ಕೇಳಿದರೆ ಖಂಡಿತ ಇಲ್ಲ. ಬದಲಾಗಿ ಅಲ್ಲಿ ಇಲ್ಲಿ ಕದ್ದ ವಸ್ತುವನ್ನು ಗಂಡನ ಕೈಗೂ ಸಿಕ್ಕದಂತೆ ಬಚ್ಚಿಡುತ್ತಿದ್ದಳು. ಅವಳ ಈ ಆಟಾಟೋಪಕ್ಕೆ ಹೆದರಿಯೋ ಏನೋ.. ಒಂದು ದಿನ ಸಂಜೆ “ಪ್ಯಾಟಿಗೆ ಹೋಗ್ಬತ್ತಿ…” ಎಂದು ಹೋದವ ಕಡೆಗೆ ಬರಲೇ ಇಲ್ಲ. ಮಂಕಾಳಿ ಏನು ಕಡಿಮೆಯವಳಾ? ಗಂಡನನ್ನೇ ಓಡಿಸಿದವಳು ಎಂದೆಲ್ಲ ಆಡಿಕೊಂಡರೂ ಅದಕ್ಕೆಲ್ಲ ಸೊಪ್ಪು ಹಾಕುವವಳೇ ಆಗಿರಲಿಲ್ಲ ಮಂಕಾಳಕ್ಕ. ಯಾಕೆಂದರೆ ಅವಳಿಗೆ ಗಂಡ ಇದ್ದರೂ ಒಂದೇ, ಬಿಟ್ಟರೂ ಒಂದೆ ಎಂಬಂತೆ ಇದ್ದಳು. ಅವಳಿಗೆಂದು ಯಾವ ಆಸ್ತಿಯೂ ಇರಲಿಲ್ಲ. ಇರುವುದು ಈಗಲೋ ಆಗಲೋ ಹರಕಂಡು ಬೀಳುವ ಮಣ್ಣಿನ ಮನೆ, ಮೇಲೆಲ್ಲ ಸೋಂಗೆ ಮುಚ್ಚಿಗೆ, ಮೂರೋ ನಾಲ್ಕೋ ಗುಂಟೆಯಷ್ಟು ಜಾಗ, ಅಲ್ಲೇ ತರಕಾರಿ, ಸೊಪ್ಪುಗಳನ್ನು ಬೆಳೆದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ದುಡಿಮೆಯ ವಿಷಯದಲ್ಲಿ ಅವನ ಪಾತ್ರವೇನೂ ಇರದ ಕಾರಣಕ್ಕಾಗಿ, ಇವಳೇ ಜಾಸ್ತಿ ದುಡಿದು ಮಕ್ಕಳನ್ನೆಲ್ಲ ಸಾಕಿರುವ ಕಾರಣಕ್ಕೆ ಗಂಡ ಓಡಿ ಹೋಗಿದ್ದರಿಂದ ಮನೆಯಲ್ಲಿ ಊಟಕ್ಕೊಂದು ಜನ ಕಡಿಮೆಯಾಯಿತು ಎಂದೇ ಯೋಚಿಸುವವಳಾಗಿದ್ದಳು. ಅವರಿವರ ಮನೆಯಿಂದ ಕದ್ದು, ಬೇಡಿತಂದ ವಸ್ತುಗಳನ್ನು ಮಾರಿಕೊಂಡು, ಸಿಗುವ ಪುಡಿಗಾಸು, ಉಳಿದಂತೆ ಅಲ್ಲಿ ಇಲ್ಲಿ ಅಡಕೆ, ಚಾಲಿ ಸುಲಿಯುವುದು, ಇನ್ನೂ ಉಳಿದ ದಿನಗಳಲ್ಲಿ ಬೇರೆಯವರ ಗದ್ದೆಕೆಲಸಕ್ಕೆ ಹೋಗಿ ಜೀವನ ಸಾಗಿಸುತ್ತಿದ್ದಳು.

ಇಂಥವಳ ಮಗನಾದ ಸೂರಳ್ಳಿ ಅಣ್ಣನಿಗೂ ಈ ಕದಿಯುವ ಚಟವಿತ್ತು. ಯಾರದ್ದೇ ಮನೆಯ ಶ್ರಾದ್ಧ, ಸಂತರ್ಪಣೆ, ಮದುವೆ, ಮುಂಜಿಗೆ ಹೋದರೆ ಅಲ್ಲಿಂದ ಏನಾದರೂ ಕಳವುಮಾಡಿಕೊಂಡು ಬರುವವರೇ. ಅವರ ಮನೆಗೆ ಈ ಇಬ್ಬರೂ ಕರೆದರೂ, ಕರೆಯದೇ ಇದ್ದರೂ ಕಾಯಂ ಆಗಿ ಬರುವ ಅತಿಥಿಗಳು. ಅವರು ಬಂದರೆಂದರೆ ಅವತ್ತು ಒಂದಾದರೂ ಸ್ಟೀಲ್ ಪಾತ್ರೆ ಮಾಯವಾಗುತ್ತಿತ್ತು. ಆಗೆಲ್ಲ ಮದುವೆ ಮನೆಯ ಊಟಕ್ಕೆ ಪಂಕ್ತಿಯಲ್ಲಿ ಸಾಲಾಗಿ ಹಿತ್ತಾಳೆ ಲೋಟವನ್ನೇ ಇಡುತ್ತಿದ್ದರು. ಆದರೆ ದೊಡ್ಡವರು ಅಂದರೆ ಪುರೋಹಿತರು, ಸ್ವಲ್ಪ ಶ್ರೀಮಂತರಿಗೆ ಮಾತ್ರ ಸ್ಟೀಲ್ ಲೋಟ ಇಡುತ್ತಿದ್ದರು. ಹಾಗಾಗಿ ಫಳಫಳ ಹೊಳೆಯುವ ಸ್ಟೀಲ್ ಲೋಟ ಎಲ್ಲರ ಆಕರ್ಷಣೆ ಆಗ. ಇವರಿಬ್ಬರು ಆ ಸಮಾರಂಭಕ್ಕೆ ಬಂದರೆ ಯಾರದ್ದೇ ಮನೆಯಲ್ಲೂ ಒಂದಲ್ಲಒಂದು ಸ್ಟೀಲ್ ಲೋಟ ಕಳುವಾಗಿದೆ ಎಂದೇ ಅರ್ಥ. ಮಜಾ ಅಂದರೆ ಅವರ ಮನೆಗೆ ಬರುವಾಗ ಈ ಇಬ್ಬರ ಚೀಲ ಸಣ್ಣದಾಗಿದ್ದದ್ದು, ಹೋಗುವಾಗ ಮಾತ್ರ ದೊಡ್ಡದಾಗಿರುತ್ತಿತ್ತು. ಆದರೆ ಯಾರೊಬ್ಬರೂ ಅದನ್ನು ಕೇಳುತ್ತಿರಲಿಲ್ಲ. ನೀನು ಕದ್ದಿದ್ದೀಯಾ ಎಂದು ಕೇಳುವುದಕ್ಕೆ ಕದ್ದವರಿಗಿಂತ ಹೆಚ್ಚಾಗಿ ಕೇಳುವವರಿಗೇ ಅವಮಾನವಾದಂತಾಗಿ ಕೇಳುತ್ತಿರಲೇ ಇರಲಿಲ್ಲ.

“ಅಯ್ಯೋ ಪಾಪವೇ… ಅವಂಗೆ ಹೀಂಗೆಲ್ಲ ಆಗಕ್ಕಾಗಿತ್ತಿಲ್ಲೆ. ಪಾಪ, ಒಳ್ಳೆಯವ, ಏನೋ ಜಾಸ್ತಿ ಊಟ ಮಾಡ್ತ ಹೇಳದೊಂದು ಬಿಟ್ರೆ ಉಳಿದಂತೆ ಅವ ಒಳ್ಳೆಯವನೇ ಆಗಿಯಿದ್ದ, ಅವನ ಜೊತೆ ಮಧ್ಯರಾತ್ರಿ ಯಾವುದಾದರೂ ಹುಡುಗಿನ ಕಳ್ಸಿದ್ರೂ ಸುರಕ್ಷಿತವಾಗಿರ್ತು. ಅಷ್ಟು ಗನಾವ ಅವ” ಎಂದು ಅಮ್ಮ ಅನ್ನಕ್ಕೆ ಅಕ್ಕಿ ತೊಳೆದು ಸ್ಟೌ ಮೇಲೆ ಇಡುತ್ತಲೇ ಹೇಳಿದ್ದಳು.

ಆದರೆ ಈ ಥರ ಬಕಾಸುರನಂತೆ ಊಟ ಮಾಡುವುದು ಮಾತ್ರ ಅವರ ಮನೆಯಲ್ಲಿ ಅವನೊಬ್ಬನಿಗೇ ಇತ್ತು. ಮನೆಯಲ್ಲಿ ತಿಂಡಿಗೆ, ಊಟಕ್ಕೂ ಗತಿ ಇಲ್ಲದಿರುತ್ತಿದ್ದುದ್ದರಿಂದ ಯಾರದ್ದಾದರೂ ಮನೆಗೆ ಹೋದರೆ ತುಸು ಹೆಚ್ಚೇ ಊಟ ಮಾಡಿಕೊಂಡೇ ಬಂದುಬಿಡು, ಮತ್ತೆ ಅಡುಗೆ ಮಾಡತ್ನಿಲ್ಲೆ ಎಂದು ಚಿಕ್ಕಂದಿನಲ್ಲೇ ಅವನಮ್ಮ ಅವನಿಗೆ ಹೇಳಿಕಳಿಸುತ್ತಿದ್ದಳು. ಇದರಿಂದ ಎಲ್ಲಾದರೂ ಊಟ, ತಿಂಡಿ ಸಿಕ್ಕರೆ ಸಾಕು ಗಡದ್ದಾಗಿ ಉಂಡುಬರುತ್ತಿದ್ದ. ಉಳಿದ ಸಮಯ ಊಟವಿಲ್ಲದಿದ್ದರೆ ಹೊಟ್ಟೆ ತುಂಬ ನೀರು ಕುಡಿದು ಮಲಗಿಬಿಡುತ್ತಿದ್ದ. ಇದರಿಂದಾಗಿಯೇ ಅವನ ಹೊಟ್ಟೆ ದೊಡ್ಡದಾಗಿ ಖಂಡಗಟ್ಟಲೆ ಊಟ ಮಾಡುವುದು ಸಾಧ್ಯವಾಯಿತು ಎನಿಸುತ್ತದೆ. ಆದರೆ ಊಟಕ್ಕೆ ಸಿಕ್ಕದಿದ್ದರೂ ಯಾರ್ಯಾರದ್ದೋ ಹಿತ್ತಲಲ್ಲಿ ಸಿಗುವ ಪೇರಲೆ ಹಣ್ಣು, ನೇರಳೆ, ಜಂಬೆಹಣ್ಣುಗಳನ್ನು ತಿಂದು ಹೊಟ್ಟೆಯನ್ನು ಸುಮ್ಮನಿರಿಸುತ್ತಿದ್ದುದೂ ಉಂಟು. ಸೂರಳ್ಳಿ ಅಣ್ಣನಿಗೆ ಹಲಸಿನ ಹಣ್ಣಿನ ಕಾಲದಲ್ಲಂತೂ ಅವನಿಗೆ ಹಬ್ಬ. ಅದು ಹೊಟ್ಟೆಗೆ ದಡವಾದ್ದರಿಂದ ದಿನಗಳಲ್ಲಿ ಹಲಸಿನ ಹಣ್ಣು ತಿಂದೇ ಹೊಟ್ಟೆ ತುಂಬಿಸಿಕೊಂಡು ಬಿಡುತ್ತಿದ್ದ. ಬೇಕಿದ್ದರೆ ಎರಡೆರಡು ಹಲಸಿನ ಹಣ್ಣುಗಳನ್ನೂ ಒಟ್ಟಿಗೇ ಹೊಟ್ಟೆಗೆ ಇಳಿಸುವವನೇ.. ಅಂಥ ತಾಕತ್ತಿದ್ದವ. ಇವನಿಗೆ ಮರಹತ್ತುವುದೆಂದರೆ ತುಂಬ ಸುಲಭ. ಬೇರೆಯವರ ಮನೆಯವರ ಮರವನ್ನೆಲ್ಲ ಅವರಿಗೆ ತಿಳಿಯದಂತೆ ಹತ್ತಿ ಹಲಸಿನ ಹಣ್ಣು ಇಳಿಸಿ ತಿಂದದ್ದು ಎಷ್ಟು ಬಾರಿಯೋ!

ಒಂದು ಸಲ ಊರಿನ ಶಿವಜ್ಜನ ಮನೆಯ ಹಲಸಿನ ಹಣ್ಣನ್ನು ಕದಿಯಲು ಹೋಗಿ ಶಿವಜ್ಜನಿಗೇ ಟೋಪಿಹಾಕಿ ಓಡಿದ್ದ ಘಾಟಿ ಮನುಷ್ಯನೀತ. ಅದು ಆಗಿದ್ದು ಹೀಗೆ. ಅವತ್ತು ಬೆಳಗ್ಗೆ ತೋಟದ ಹಾದಿಯಲ್ಲಿ ಬರುತ್ತಿದ್ದ ಸೂರಳ್ಳಿ ಅಣ್ಣನನ್ನು ತಡೆದು ನಿಲ್ಲಿಸಿದ ಶಿವಜ್ಜನ ಮನೆಯದೇ ಆಳು ದ್ಯಾವ, ಯಾವುದೋ ಘನಂಧಾರಿ ಗುಟ್ಟು ಹೇಳುವವನಂತೆ ಒಳಬಾಯಲ್ಲಿ, “ಸೂರಳ್ಳಿ ಅಣ್ಣ, ಶಿವಜ್ಜನ ಮನೆ ತೋಟದ ತುದಿ ಮರ ಐತಲ್ಲ, ಅಲ್ಲೊಂದು ದೊಡ್ಡ ಹಲಸಿನ ಹಣ್ಣು ಬೆಳದೈತೆ, ನಾ ಮೊನ್ನೀಕೇ ನೋಡ್ಕಂಡು ಬಂದೀನಿ. ಕೊಯ್ಯುವಾ ಹ್ಯಾಂಗೆ..” ಎಂದು ಹುರಿದುಂಬಿಸಿದ. ಮಾರನೇ ದಿನದ ಮಧ್ಯಾಹ್ನದ ಊಟ ಮಾಡಿ ಎಲ್ಲರೂ ಮಲಗಿರುವ ಹೊತ್ತಿನಲ್ಲಿ ದ್ಯಾವ ಮತ್ತು ಸೂರಳ್ಳಿ ಅಣ್ಣ ಇಬ್ಬರೂ ತೋಟದ ತುದಿಗೆ ಬಂದರು. ಸೂರಳ್ಳಿ ಅಣ್ಣ ಮರ ಹತ್ತುವವ. ದ್ಯಾವ ಕೆಳಗೇ ನಿಂತು ಯಾರಾದರೂ ಬರುತ್ತಾರಾ ಎಂದು ನೋಡುವವ. ದುರಾದೃಷ್ಟಕ್ಕೆ ಅವತ್ತು ಶಿವಜ್ಜ ಬಂದುಬಿಟ್ಟ. ನಿದ್ದೆ ಬರದೇ ತೋಟದಲ್ಲಿ ಒಂದು ಸುತ್ತು ಹಾಕಿದವನು ಇದೇ ಮರದ ಕೆಳಗೆ ಉಚ್ಚೆ ಹೊಯ್ಯಲು ಬಂದ. ದೂರದಿಂದಲೇ ಅವನನ್ನು ನೋಡಿದ ದ್ಯಾವ “ಅಯ್ಯಯ್ಯೋ… ಶಿವಜ್ಜ ಬಂನ್ನೆ… ನಾ ಬತ್ನೀ..” ಎಂದು ಕೂಗಿ ಓಡಿಬಿಟ್ಟ. ಮರಹತ್ತಿದ್ದ ಸೂರಳ್ಳಿ ಅಣ್ಣನಿಗೂ ಏನು ಮಾಡುವುದೆಂದು ತಿಳಿಯದೇ, ಅರ್ಧ ಕೊಯ್ದಿದ್ದ ಗಳುವಾದ ಹಲಸಿನ ಹಣ್ಣು, ಇನ್ನೇನು ಕೆಳಗೆ ಹಾಕುಬೇಕು ಎನ್ನುವಷ್ಟರಲ್ಲಿ, ಉಚ್ಚೆ ಹೊಯ್ಯುತ್ತಿದ್ದ ಶಿವಜ್ಜ ಮೇಲಕ್ಕೆ ನೋಡಿಬಿಟ್ಟ. ಇನ್ನು ತಾನೇ ಎಂದು ಇವನಿಗೆ ತಿಳಿಯುತ್ತದೆಂಬ ಭಯಕ್ಕೆ ಕೆಳಕ್ಕೆ ಬೀಳಿಸಿಬಿಟ್ಟ. ಹಲಸಿನ ಹಣ್ಣು ಧೂಪ್ಪೆಂದು ಶಿವಜ್ಜನ ಬೋಳು ತಲೆಯ ಮೇಲೆ ಬಿದ್ದು ಅಪ್ಪಚ್ಚಿಯಾಗಿ ಹೋಗಿ ಅವನಕುತ್ತಿಗೆಯವರೆಗೂ ಸಿಕ್ಕಿಕೊಂಡು ಬಿಟ್ಟಿತು. ಆಗ ಸರಸರನೆ ಮರ ಇಳಿದ ಸೂರಳ್ಳಿ ಅಣ್ಣ ಓಟ ಕಿತ್ತ. ಶಿವಜ್ಜ ಅದೇ ಹಲಸಿನ ಹಣ್ಣನ್ನು ಹೊತ್ತೇ ಕೂಗುತ್ತ ಮನೆಯವರೆಗೂ ಬಂದದ್ದು, ಅದು ಯಾರೆಂದು ಕಡೆಗೂ ತಿಳಿಯದೇ ಹೋಗಿದ್ದು ಎಲ್ಲವೂ ಕತೆಯಾಗಿಹೋಗಿತ್ತು.

ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಇಷ್ಟೆಲ್ಲ ಸಾಹಸ ಮಾಡುವ ಸೂರಳ್ಳಿ ಅಣ್ಣ ಊಟ ಮಾಡುವುದನ್ನು ನೋಡುವುದೆಂದರೆ ಊರವರಿಗೆಲ್ಲ ಒಂದು ಮೋಜು. “ಹ್ವಾ.. ಸೂರಳ್ಳಿ ಅಣ್ಣ, ಇವತ್ತು ಎಮ್ಮನೇಲಿ ಶ್ರಾದ್ಧ ಇದ್ದು, ಬಂದು ಬಿಡು ಮತ್ತೆ…” ಎಂದು ಸುಳ್ಳುಸುಳ್ಳೇ ಕರೆಯುತ್ತಿದ್ದರು. ಮೊದಮೊದಲು ಹೌದೆಂದು ನಂಬಿಕೊಂಡು ಅವರ ಮನೆಗೆ ಹೋಗಿ ಸೀದಾಸಾದಾ ಊಟ ಮಾಡಿಬಂದದ್ದೂ ಇದೆ. “ಎಮ್ಮನೆಲಿ ಶ್ರಾದ್ಧ ಇಲ್ಲೆ ತಮಾ. ನೀ ಈ ಪೋರಗಳ ಮಾತು ಕಟ್ಟಿಗ್ಯಂಡೆಲ್ಲ ಬರಡ ಮಾರಾಯ” ಎಂದೆಲ್ಲ ಹೇಳಿಕಳಿಸುತ್ತಿದ್ದರು. ಹೀಗೆ ಅವರಿವರ ಬಳಿ ಬೈಸಿಕೊಂಡು, ಮನೆಗೆ ಬಂದು ಬೆಳೆದ ತರಕಾರಿಗಳನ್ನೆಲ್ಲ ಸಿದ್ಧಾಪುರದ ಸಂತೆಗೆ ತಂದು ಮಾರಿ ನಮ್ಮನೆಗೆ ಬಂದು ಊಟ ಮಾಡಿಕೊಂಡು ಸಂಜೆ ನಾಕು ಗಂಟೆ ಗಾಡಿಗೆ ಮನೆ ಹಾದಿ ಹಿಡಿಯುತ್ತಿದ್ದ. ನಾವು ಸಿದ್ದಾಪುರಕ್ಕೆ ಬರುವ ಮೊದಲು ಅಲ್ಲಿನ ಭಾರೀ ಶ್ರೀಮಂತರಾದ ಚಿದಂಬರ ಹೆಗಡೇರ ಮನೆಗೆ ಹೋಗುತ್ತಿದ್ದ. ಒಂದೆರೆಡು ಸಲ ಇವ ಊಟ ಮಾಡುವುದನ್ನು ನೋಡಿದ ಆ ಶ್ರೀಮಂತರು ಕಡೆಗೆ ಅವನಿಗೆ, 5 ರೂ. ಕೊಟ್ಟು ನೀ ಹೋಟೆಲ್ ಗೆ ಹೋಗು ಎಂದು ಕಳಿಸುತ್ತಿದ್ದರು. ಆ 5 ರೂ. ತೆಗೆದುಕೊಂಡ ಅವ ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದ. ಅವರಂಥ ಶ್ರೀಮಂತರಿಗೇ ಊಟ ಹಾಕಲು ಆಗದಿರುವವರಿಗೆ ನಮ್ಮಂಥ ಅಡಬಡವರಿಗೆ ಸಾಧ್ಯವೇ ಎಂದು ಗೊಣಗುತ್ತಲೇ ಅಮ್ಮ ಚರಿಗೆ ಅನ್ನ ಇಡುತ್ತಿದ್ದಳು.

ಹೀಗೆ ಊಟ ಮಾಡುತ್ತಿದ್ದ ಸೂರಳ್ಳಿ ಅಣ್ಣ ಎಷ್ಟೋ ದಿವಸ ಮನೆಯಲ್ಲಿ ಉಪವಾಸವಿರುತ್ತಿದ್ದುದ್ದೂ ಇತ್ತು. ಆಗೆಲ್ಲ ಉಸ್ ಎಂದು ಕುಳಿತು ಅಮ್ಮನಲ್ಲಿ ಹೇಳುತ್ತಿದ್ದ. “ಈ ತರಕಾರಿ ಬೆಳೆಯೋದ್ರಿಂದ ಎಂತ ಹೊಟ್ಟೆಯೂ ತುಂಬ್ತಿಲ್ಲೆ, ಬೇರೇನಾದ್ರೂ ಮಾಡದೇಯ..” “ಎಂತ ಮಾಡಲಾಗ್ತು… ಈ ಮಂಜ್ಞಾತ, ನಾರಾಯಣ, ಎಲ್ಲ ಭೂಮಿಗೆ ದಂಡಾಕ್ಯಂಡು ಇದ್ದ ತಮ..” ಎಂದು ನಿಟ್ಟುಸಿರು ಬಿಡುತ್ತ ಹೇಳಿದಳು ಮಂಕಾಳಮ್ಮ. ಅವಳಿಗೆ ಗೊತ್ತಿತ್ತು, ತನ್ನೊಂದಿಗೆ ಕದಿಯುವುದಕ್ಕಾದರೂ ಸೈ, ದುಡಿಯುವುದಕ್ಕಾದರೂ ಸೈ, ಈ ಮಗನೊಬ್ಬನೇ ಎಂದು.
ಇರುವ ತುಂಡು ಜಾಗದಲ್ಲೇ ಬದನೆಕಾಯಿ, ಹೀರೆಕಾಯಿ, ಸಂತೆಮೆಣಸು, ಹರಿವೇ ಸೊಪ್ಪು, ಹಾಗಲಕಾಯಿಗಳನ್ನು ಬೆಳೆದು ಮಾರಾಟ ಮಾಡುತ್ತಿದ್ದರೂ ಯಾವ ಲಾಭವಾಗುತ್ತಿರಲಿಲ್ಲ. ತಮ್ಮ ಮಂಜ್ಞಾತ ಒಬ್ಬ ಅಡುಗೆಗೆ ಹೋಗುತ್ತಿದ್ದ. ಮತ್ತೊಬ್ಬ ಊರೊಟ್ಟಿಗಿನ ಕೆಲಸ ಮಾಡಿಕೊಂಡಿದ್ದ. ಮೊದಲು ಸೂರಳ್ಳಿ ಅಣ್ಣನೂ ಅಡುಗೆಗೆ ಹೋಗುತ್ತಿದ್ದ. ಆದರೆ ಇವನ ಊಟ ಮಾಡುವ ಪ್ರಮಾಣ ನೋಡಿ ಅವನನ್ನು ಅಡುಗೆಗೆ ಕರೆಯುವುದನ್ನೇ ಬಿಟ್ಟುಬಿಟ್ಟರು. ಇದು ಬಿಟ್ಟರೆ ಬೇರೆ ಏನೂ ಕೆಲಸ ಅವನಿಗೆ ಗೊತ್ತಿರಲಿಲ್ಲ. ಹೀಗೆ ಹೊಟ್ಟೆ ಖಾಲಿ ಬಿಟ್ಟುಕೊಂಡು ಇರುವ ಹೊತ್ತಲ್ಲೇ ಆ ಊರಿನ ರಸ್ತೆಗೆ ಡಾಂಬರು ಹಾಕುವ ಕೆಲಸ ಪ್ರಾರಂಭವಾಯಿತು. ಸಿದ್ದಾಪುರದ ಸುತ್ತಮುತ್ತ ಶಿರಳಗಿ, ಮುಗದೂರು, ಕೊಂಡ್ಲಿ, ಕೊಳಗಿ ಎಲ್ಲ ಇರುವ ಹಾಗೆಯೇ ಇವನ ಊರು ಸೂರಳ್ಳಿ ಈ ಎಲ್ಲ ಊರುಗಳಾಚೆ ಇರುವ ಒಂದು ಕೊಂಪೆಯಾಗಿತ್ತು.. ಅಲ್ಲಿ ಬಸ್ ಸಂಚಾರ ಇರದೇ ನಾಲ್ಕೈದು ಮೈಲಿ ನಡೆದುಕೊಂಡೇ ಹೋಗಬೇಕಿತ್ತು. ಇವನು ಬೆಳೆದ ತರಕಾರಿಗಳನ್ನು ನಾಲ್ಕರಿಂದ ಐದು ಮೈಲಿ ನಡೆದು ಬಸ್ಸು ಬರುವ ರಸ್ತೆಗೆ ಬಂದು ಬಸ್ ಹತ್ತಿ ಸಿದ್ದಾಪುರದಲ್ಲಿ ಮಾರಿ ಯಾರದ್ದಾದರೂ ಮನೆಯಲ್ಲಿ ಊಟ ಮಾಡಿ ಮತ್ತೆ ಮನೆ ಹಾದಿ ಹಿಡಿಯಬೇಕಿತ್ತು. ಇಂಥ ಹೊತ್ತಲ್ಲಿ ಅವನ ಊರಿಗೆ ರಸ್ತೆಮಾಡುತ್ತಾರೆಂಬ ಸುದ್ದಿ ಸಿಕ್ಕಿತು. ಸುದ್ದಿಯೇನು, ಸ್ವತಃ ಅವನೇ ನೋಡಿದ್ದ, ರಸ್ತೆಗೆ ಜಲ್ಲಿ ಹಾಕಿದ್ದು, ಹಂಡೆಯಂತಹದ್ದರಲ್ಲಿ ಜಲ್ಲಿ, ಡಾಂಬರು ಹಾಕಿ ಗರಗರನೆ ತಿರುಗಿಸುವುದು, ಸುಮಾರು ಜನ ಕೆಲಸಕ್ಕೆಂದು ಅಲ್ಲಿಯೇ ಟೆಂಟ್ ಹಾಕಿದ್ದು ಎಲ್ಲವನ್ನೂ ನೋಡಿದವನಿಗೆ ಏನೋ ಹೊಳೆಯಿತು. ಅಲ್ಲೇ ರಸ್ತೆಯಲ್ಲಿ ಕೆಲಸ ಮಾಡುವವನೊಬ್ಬನನ್ನು ಕರೆದು, ಎಷ್ಟು ಸಂಬಳ ಏನು ಇತ್ಯಾದಿಗಳ ಕುರಿತು ಲೋಕಾಭಿರಾಮದ ರೀತಿಯಲ್ಲೇ ಮಾತನಾಡಿದ. ದಿನಗೂಲಿಯ ಮೇಲೆ ಕೆಲಸ ಇಲ್ಲಿ. ದಿವಸಕ್ಕೆ 30 ರೂ. ಕೊಡುತ್ತಾರೆ ಎಂದ ರಸ್ತೆಗೆ ಜಲ್ಲಿ ಹಾಕುತ್ತ. ಅರೆ. ತಾನು ವಾರಕ್ಕೊಮ್ಮೆ ತರಕಾರಿ ಮಾರಿದರೂ ಇಷ್ಟು ದುಡ್ಡು ಸಿಗುವುದಿಲ್ಲವೆಂದು ನನಗೂ ಒಂದು ಕೆಲಸ ಕೊಡಿ ಎಂದು ಕೇಳಿದ. ಅವರೆಲ್ಲ ನಕ್ಕು, “ಈ ಹೊಗೆ, ಈ ಡಾಂಬರು, ಇಷ್ಟೆಲ್ಲ ಮೈ ಬಗ್ಗಿಸಿ ನಿನಗೆ ಕೆಲಸ ಮಾಡಲು ನಿಂಗೆ ಸಾಧ್ಯವಾ, ಊರಿಂದೂರಿಗೆ ತಿರುಗುವ ನಮ್ಮಂಥವರ ಜೊತೆ ಬ್ರಾಂಬ್ರುಗಳು ನೀವು, ನಿಮ್ ಕೂಡೆ ಆಗ್ತದಾ..? ಕೆಲ್ಸ ನೋಡು ಹೋಗು” ಎಂದು ಹೇಳಿ ಕಳಿಸಿಬಿಟ್ಟರು. ಆದರೆ ಸೂರಳ್ಳಿ ಅಣ್ಣನಿಗದೇನೋ ಆ ಡಾಂಬರು ರಸ್ತೆಯ ಮೇಲೆ ತುಂಬ ಆಕರ್ಷಣೆ ಹುಟ್ಟಿಕೊಂಡು, ಹೇಗಾದರೂ ಮಾಡಿ ಅಲ್ಲಿ ಕೆಲ್ಸ ಗಿಟ್ಟಿಸಿಕೊಳ್ಳಲೇ ಬೇಕೆಂದು ಊರಿನ ಪಟೇಲ ಶಿವರಾಂ ಭಟ್ರ ಹತ್ರ ಹೋಗಿ ಹೇಗಾದರೂ ಮಾಡಿ ಕೆಲ್ಸಕೊಡಿಸಿ ಎಂದು ಕೇಳಿದ. “ಬ್ರಾಹ್ಮಣ ಆಗಿ ಗಾರೆ ಕೆಲ್ಸ ಮಾಡತ್ಯನೋ… ಜಾತಿ ಪೀತಿ ಅಂತ ಸ್ವಲ್ಪನಾದ್ರೂ ಬ್ಯಾಡ್ದನಾ ನಿಂಗೆ… ಅದೆಲ್ಲ ನಿಂಗಾಪ್ದಲ್ಲ ಸುಮ್ಮಂಗಿರು..” ಎಂದು ಹೇಳಿ ಕಳಿಸಿಬಿಟ್ಟರು. ಮಂಕಾಳಮ್ಮನೂ “ಯಾವ ಜಾತಿಯೋ ಏನೋ.. ಅವರ ಜೊತಿ ರಾತ್ರಿ ಹಗಲೂ ಸೇರಿ ಕೆಲ್ಸ ಮಾಡದಾ… ಬ್ಯಾಡ್ದತಮಾ…” ಎಂದು ಕಕ್ಕುಲಾತಿಯಿಂದ ಹೇಳಿದಳು. ಆದರೆ ಸೂರಳ್ಳಿ ಅಣ್ಣ ಯಾರಮಾತೂ ಕೇಳಲಿಲ್ಲ. ಅವನಿಗೆ ಯಾವ ಜಾತಿಯ ಕುರಿತೂ ಎಂಥ ವ್ಯಾಮೋಹವೂ ಇರಲಿಲ್ಲ. ಅವನಿಗಿದ್ದದ್ದು ಇಷ್ಟೇ, ತನ್ನ ಹೊಟ್ಟೆ ತುಂಬಬೇಕೆಂದು. ಹೌದೌದು, ಈ ಜಾತಿ ಹೇಳಕ್ಯಂಡು ಕುಂತಗಂಡ್ರೆ ನಮ್ ಹೊಟ್ಟೆ ತುಂಬ್ತ? ಇವರು ಯಾರಾದ್ರೂ ನಮ್ಗೆ ಹೊಟ್ಟೆ ತುಂಬ ಅನ್ನ ಹಾಕ್ತ ಮಾಡಿದ್ದೆನೀನು? ಹೋರ್ಯ ಇದ್ದ ನೋಡು ಅಮ್ಮಾ…” ಎಂದು ಅಮ್ಮನ ಬಾಯಿ ಮುಚ್ಚಿಸಿ, ಮಾರನೇ ದಿನ ಸೀದ ರಸ್ತೆ ಮಾಡುವ ಮುಖಂಡನಿಗೇ ಹೋಗಿ ತನಗೊಂದು ಕೆಲ್ಸ ಬೇಕೇಬೇಕೆಂದು ಅಂಗಲಾಚಿ ಕೆಲಸ ಗಿಟ್ಟಿಸಿಕೊಂಡ.
ಹೀಗೆ ಒಂದು ಅಲ್ಪಾವಧಿಯ ಕೆಲಸ ಹಿಡಿದುಕೊಂಡ ಸೂರಳ್ಳಿ ಅಣ್ಣನ ಹೊಟ್ಟೆಪಾಡಿನ ಸಮಸ್ಯೆ ಸ್ವಲ್ಪ ದಿವಸಗಳವರೆಗೆ ಬಗೆಹರಿಯಿತು. ಬೆಳಗ್ಗೆ ಬೇಗ ಒಂದು ದೊಡ್ಡ ಗಂಟಲ್ಲಿ ಬುತ್ತಿ ತೆಗೆದುಕೊಂಡು ಹೋದರೆ ಬರುವುದು ರಾತ್ರಿಯಾಗುತ್ತಿತ್ತು. ಹೇಗೂ ಮಗಂಗೆ ನೌಕರಿಯೂ ಸಿಗ್ತು, ಇನ್ನು ಅವನ ಮದುವೆ ಮಾಡಲಡ್ಡಿಲ್ಲ ಎಂದು ಘಟ್ಟದ ಕೆಳಗಿನಿಂದ ಒಂದು ಹೆಣ್ಣನ್ನೂ ಗೊತ್ತುಮಾಡಿ ಮದುವೆಯನ್ನೂ ಮಾಡಿಬಿಟ್ಟಳು ಮಂಕಾಳಮ್ಮ.

ಮರಹತ್ತಿದ್ದ ಸೂರಳ್ಳಿ ಅಣ್ಣನಿಗೂ ಏನು ಮಾಡುವುದೆಂದು ತಿಳಿಯದೇ, ಅರ್ಧ ಕೊಯ್ದಿದ್ದ ಗಳುವಾದ ಹಲಸಿನ ಹಣ್ಣು, ಇನ್ನೇನು ಕೆಳಗೆ ಹಾಕುಬೇಕು ಎನ್ನುವಷ್ಟರಲ್ಲಿ, ಉಚ್ಚೆ ಹೊಯ್ಯುತ್ತಿದ್ದ ಶಿವಜ್ಜ ಮೇಲಕ್ಕೆ ನೋಡಿಬಿಟ್ಟ. ಇನ್ನು ತಾನೇ ಎಂದು ಇವನಿಗೆ ತಿಳಿಯುತ್ತದೆಂಬ ಭಯಕ್ಕೆ ಕೆಳಕ್ಕೆ ಬೀಳಿಸಿಬಿಟ್ಟ. ಹಲಸಿನ ಹಣ್ಣು ಧೂಪ್ಪೆಂದು ಶಿವಜ್ಜನ ಬೋಳು ತಲೆಯ ಮೇಲೆ ಬಿದ್ದು ಅಪ್ಪಚ್ಚಿಯಾಗಿ ಹೋಗಿ ಅವನಕುತ್ತಿಗೆಯವರೆಗೂ ಸಿಕ್ಕಿಕೊಂಡು ಬಿಟ್ಟಿತು.

ನೋಡಲು ಕುಳ್ಳಗೆ, ಮುಖ ಚಿಕ್ಕದಾಗಿರುವ ಸೂರಳ್ಳಿ ಅಣ್ಣನಿಗೆ ಹೊಟ್ಟೆ ಮಾತ್ರ ಹಂಡೆ ಗಾತ್ರದಷ್ಟು ದಪ್ಪವಿತ್ತು. ಅಂಥ ಇವನಿಗೆ ಹೆಣ್ಣು ಸಿಕ್ಕಿದ್ದಲ್ಲದೆ ವರದಕ್ಷಿಣೆಯನ್ನೂ ಕೊಟ್ಟು ಮದುವೆ ಮಾಡಿದರು. ಆಗ ಏನು, ಗಂಡು ಎಂಬ ಆಕಾರವೊಂದಿದ್ದರೆ ಸಾಕಿತ್ತು ಅವನಿಗೆ ಹೆಣ್ಣು ಕೊಟ್ಟು ಬಿಡುತ್ತಿದ್ದರು. ಇಂಥ ಸೂರಳ್ಳಿ ಅಣ್ಣನಿಗೂ ವರದಕ್ಷಿಣೆ ಕೊಟ್ಟೇ ಮದುವೆ ಮಾಡಿದ್ದು. ಐದಾರು ತೊಲ ಬಂಗಾರ, ಕೈಗೆ ಐದು ಸಾವಿರ ದುಡ್ಡನ್ನು ಮಂಕಾಳಮ್ಮನ ಕೈಗಿಟ್ಟಮೇಲೆಯೇ ಮದುವೆ ಮುಗುದದ್ದು. ಅಂಥ ಬಡತನದ ಮನೆಗೆ, ಇಂಥ ಹೊಟ್ಟೆಬಾಕ ಗಂಡನ, ಗಯ್ಯಾಳಿ ಅತ್ತೆಗೆ ಸೊಸೆಯಾಗಿ ಬಂದ ಸುಶೀಲಕ್ಕ ನೋಡಲು ಚೆಂದವಿದ್ದಳು. ಉದ್ದಕ್ಕೆ, ದಪ್ಪ ಇದ್ದಳು. ಸೂರಳ್ಳಿ ಅಣ್ಣನಿಗೆ ಯಾವ ರೀತಿಯಲ್ಲೂ ಸರಿಸಮಾನವಾಗಿದ್ದವಳಲ್ಲ ಎಂದು ಮದುವೆಗೆ ಬಂದವರೆಲ್ಲರೂ ಆಡಿಕೊಂಡರು. ಅವಳು ಗಂಡನ ಹೊಟ್ಟೆಬಾಕತನ ಮದುವೆಯ ದಿವಸವೇ ನೋಡಿಬಿಟ್ಟಿದ್ದಳು. ಅವಳ ಕಡೆಯ ನೆಂಟರೆಲ್ಲ ಮದುವೆಯ ದಿವಸವೇ ಅವ ಊಟ ಮಾಡಿದ್ದು, 15-20 ಜಿಲೇಬಿಗಳನ್ನು ಒಂದೇ ಏಟಿಗೆ ತಿಂದಿದ್ದು, ಇಷ್ಟಾದರೂ ಇನ್ನೂ ಏನಾದರೂ ಹಾಕಿದ್ದರೆ ತಿನ್ನುವ ಇರಾದೆಯುಳ್ಳವನನ್ನು ನೋಡಿ ಸುಶೀಲಕ್ಕನ ಬಳಿ “ಹೋಯ್, ಅನ್ನ ಮಾಡುವ ನಿನ್ನ ಕೈ ಗಟ್ಟಿ ಇರವುಬಿಡು…” ಎಂದೆಲ್ಲ ತಮಾಷೆ ಮಾಡಿದ್ದರು.

ಆದರೆ ಮದುವೆಯಾಗಿ ಬಂದ ಸುಶೀಲಕ್ಕ ಗಂಡನೊಡನೆ ಸಲುಗೆಯಿಂದಿರಲಿಲ್ಲ. ಅವನೊಡನೆ ಮಾತಾಡಿದ್ದೂ ಅಪರೂಪವೇ. ಗಂಡ-ಹೆಂಡತಿ ಎಂದರೆ ಹೀಗೇ ಇರುತ್ತಾರೇನೋ ಅಂದುಕೊಂಡು ಸೂರಳ್ಳಿ ಅಣ್ಣನೂ ಸುಮ್ಮನಾಗಿಬಿಟ್ಟ. ಅವನಿಗೆ ಅಮ್ಮನ ಗಯ್ಯಾಳಿತನದಿಂದ ಅಪ್ಪ ಮನೆಬಿಟ್ಟು ಹೋಗಿದ್ದು ನೆನಪಿತ್ತು. ಹಾಗಾಗಿ ಅಮ್ಮನ ಮುಂದೆ ಮಾತನಾಡದ ತನ್ನ ಹೆಂಡತಿಯೇ ಪರವಾಗಿಲ್ಲ ಎಂದುಕೊಂಡಿದ್ದ. ಆದರೆ ಸುಶೀಲಕ್ಕ ಅಷ್ಟಾಗಿ ಮಾತನಾಡದಿದ್ದರೂ ಗಂಡನಿಗೆ ತಕ್ಕನಾಗಿ ಅಡುಗೆ ಮಾಡಿ ಬಡಿಸುತ್ತಿದ್ದಳು. ಅವನಿಗೆ ದಿನಾ ಮಧ್ಯಾಹ್ನ ಬಿಸಿಬಿಸಿಯಾಗಿ ಊಟವನ್ನು ಅವ ಕೆಲಸ ಮಾಡುವ ರಸ್ತೆ ಬಳಿಯೇ ತರುತ್ತಿದ್ದಳು. ಅಲ್ಲೇ ಕೆಲಸ ಮಾಡುತ್ತಿದ್ದ ಬೇರೆ ಹೆಂಗಸರು ಗಂಡಸರ ಜೊತೆಯೆಲ್ಲ ಹರಟುತ್ತಿದ್ದಳು. ಅದೊಂದು ಅವಳಿಗೆ ಸಮಯ ಕಳೆಯುವ ಕೆಲಸವಾಗಿತ್ತು.

ಹೀಗೆಲ್ಲ ಮಾಡಿದರೂ ಸುಶೀಲಕ್ಕನ ಒಳಗು ಬೇರೆಯದೇ ಕತೆ ಹೇಳುತ್ತಿತ್ತು. ಅವಳಿಗೆ ಈ ಮದುವೆ, ಈ ಗಂಡ ಇಷ್ಟ ಇರಲಿಲ್ಲವೆಂಬುದು ಅವಳ ನಡವಳಿಕೆಯಿಂದಲೇ ಸ್ಪಷ್ಟವಿತ್ತು. ಒಂದು ಸಲ ಯಾರೊಡನೆಯೋ ಸುಶೀಲಕ್ಕ ಹೇಳುತ್ತಿದ್ದದ್ದು ಊರಲ್ಲೆಲ್ಲ ಸುದ್ದಿಯಾಗಿಬಿಟ್ಟಿತ್ತು. “ಅಪ್ಪ, ಮಾವ ಹೋಗಿ ಗಂಡನ್ನು ನೋಡಿ ಒಪಗ್ಯಂಡು ಬಂದ. ಮಂಟಪದಲ್ಲಿ ಮಾಲೆ ಹಾಕುವಾಗಪರದೆ ಸರಿಸ್ತ್ವಲೀ, ಆವಾಗ್ಲೇ ಇವರನ್ನು ನೋಡಿದ್ದು. ಕುಳ್ಳಗೆ, ದೊಡ್ಡ ಹೊಟ್ಟೆ, ಸಣ್ಣ ಮುಖ, ಗೋಡೆಗೊಂದು ಮೂಗು ಹಚ್ಚಿಟ್ಟ ಹಾಗೆ ಕಾಣ್ತಿತ್ತು.. ಭಗವಂತಾ… ಯಾಕಾದ್ರೂ ಹೆಣ್ಣಾಗಿ ಹುಟ್ಟಿದ್ನೇನೋ ಎನಿಸಿತ್ತು…” ಎಂದದ್ದನ್ನು ಕೇಳಿ ಅಲ್ಲಿರುವವರೆಲ್ಲ ಗೊಳ್ಳೆಂದು ನಕ್ಕಿದ್ದರು. ಅವತ್ತೆಲ್ಲ ಅದದೇ ಸುದ್ದಿ. ಆದರೆ ತಲೆಬೋಳಿಸಿಕೊಂಡು ಕೆಂಪು ಸೀರೆ ಉಟ್ಟು ಮೂಲೆಯಲ್ಲಿ ಜಪಸರಹಿಡಿದು ಜಪ ಮಾಡುತ್ತಿದ್ದ ಹಳೆ ಅಮ್ಮಮ್ಮಂದಿರೆಲ್ಲ “ಆ ಮಳ್ಳರಂಡೆ… ನೋಡು ಗಂಡನ ಬಗ್ಗೆ ಹ್ಯಾಂಗ್ ಹೇಳ್ತು ಹೇಳಿ. ಗಂಡನ ಬಗ್ಗೆ ಹೇಳದೂ ಒಂದೇಯ. ನಮ್ಮ ತೊಡೆನ ನಾವೇ ತೋರಿಸ್ಕ್ಯಂಬದೂ ಒಂದೇಯ… ಅಷ್ಟೂ ಗೊತ್ತಾಗ್ತಿಲ್ಲೆ ಖರ್ಮಕ್ಕೆ…” ಎಂದು ಬೈದುಕೊಂಡರು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಆದರೆ ಅದಕ್ಕೆಲ್ಲ ಕೇರೇ ಅನ್ನದ ಸುಶೀಲಕ್ಕನ ಲಹರಿಯೇ ಬೇರೆ ಇತ್ತು. ಅವಳು ಒಳ್ಳೆಯವಳಾ, ಕೆಟ್ಟವಳಾ ಎಂಬುದು ತಿಳಿಯದ ಹಾಗಿರುತ್ತಿದ್ದಳು. ಆದರೆ ಒಂದು ವಿಷಯವನ್ನು ಮಂಕಾಳಮ್ಮನಾಗಲಿ, ಸೂರಳ್ಳಿ ಅಣ್ಣನಾಗಲಿ ತಿಳಿಯದ್ದು ಊರ ಇತರರು ಗಮನಿಸಿದ್ದರು. ಅದೆಂದರೆ ರಸ್ತೆಗೆ ಡಾಂಬರು ಹಾಕುವವರ ಪೈಕಿಯ ನಾಗ ಎಂಬುವನ ಬಳಿ ಸುಶೀಲಕ್ಕ ತುಂಬ ಹೊತ್ತು ಮಾತನಾಡುತ್ತ ನಿಲ್ಲುತ್ತಿದ್ದಳು. ತುಂಬ ತಮಾಷೆಯಾಗಿ ಮಾತನಾಡುತ್ತಿದ್ದ ಅವನೆಂದರೆ ಆ ಗುಂಪಿನ ಇತರರಿಗೂ ಅಚ್ಚುಮೆಚ್ಚು. ಸದಾ ಕೆಲಸ, ಆ ಧೂಳು, ಡಾಂಬರು ತಿರುಗಿಸುವ ಗರಗರ ಸದ್ದುಗಳ ನಡುವೆ ನಾಗನ ಜೋಕುಗಳು ಅವರಿಗೆ ಒಂದು ಬಿಡುಗಡೆಯ ಥರವೇ ಇತ್ತು. ಅದೇ ರೀತಿ ಸುಶೀಲಕ್ಕನಿಗೂ ಒಂದು ಬಿಡುಗಡೆಯೇ ಆಗಿತ್ತು ಎನಿಸುತ್ತದೆ. ಆದರೆ ಇಂಥವನ್ನೆಲ್ಲ ನೋಡುವಷ್ಟು ಸೂಕ್ಷ್ಮತೆ ಸೂರಳ್ಳಿ ಅಣ್ಣನಿಗಿರಲಿಲ್ಲವೇನೋ…?
ಒಮ್ಮೊಮ್ಮೆ ರಸ್ತೆ ಕೆಲಸ ನಿಲ್ಲಿಸಿ ಅವರಿವರ ಮನೆಯ ಶ್ರಾದ್ಧ, ಸಂತರ್ಪಣೆಗೆ ಊಟಕ್ಕೆ ಹೋಗಿಬಿಡುತ್ತಿದ್ದ ಸೂರಳ್ಳಿ ಅಣ್ಣನನ್ನು, ರಸ್ತೆ ಕೆಲಸಕ್ಕೆ ಹೋಗುವವನು, ಯಾವ್ಯಾವುದೋ ಜಾತಿ ಸಹವಾಸ ಮಾಡಿದವನು ಎಂದು ಅವನನ್ನು ಮನೆಯೊಳಗೆ ಸೇರಿಸುತ್ತಿರಲಿಲ್ಲ. ಜೊತೆಗೆ, ‘ನೀ ಹೀಂಗೆ ಅವರ ಮನೆ ಶ್ರಾದ್ಧ, ಸಂತರ್ಪಣೆ ಎಂದು ಓಡಾಡಕ್ಯಂಡು ಇರ ನೀನು.. ಅಲ್ಲಿ ನಿನ್ನ ಹೆಂಡತಿ ಯಾರನ್ನಾದರೂ ಕಟ್ಟಿಗ್ಯಂಡು ಓಡಿಹೋಗ್ತು ನೋಡು” ಎಂದು ಹಂಗಿಸುತ್ತಿದ್ದರು. “ಇಲ್ಲೆ.. ಇಲ್ಲೆ. ಹಂಗೆಲ್ಲ ಆಗ್ತಿಲ್ಲೆ” ಎಂದು ಅದನ್ನೆಲ್ಲ ಒಪ್ಪಲೂ ಸಿದ್ಧವಿಲ್ಲದವನಂತೆ ನಡೆಯುತ್ತಿದ್ದ.

ಇಂಥ ಸಮಯದಲ್ಲೇ ಮಂಕಾಳಮ್ಮನ ಸೊಸೆ ಸುಶೀಲಕ್ಕನಿಗೆ 3 ತಿಂಗಳಾಗಿತ್ತು. ಇತ್ತ ರಸ್ತೆ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿತ್ತು. ಒಮ್ಮೊಮ್ಮೆ ಹೀಗೆ ರಸ್ತೆ ಕೆಲಸ ಮಾಡುತ್ತ ಮಾಡುತ್ತ ಬೇರೆ ಬೇರೆ ಊರಿಗೆ ಹೋಗಿದ್ದೂ ಇದೆ. ಈಗೀಗ ಸೂರಳ್ಳಿ ಅಣ್ಣ ಆ ರಸ್ತೆಯವನೇ ಆಗಿಬಿಟ್ಟಿದ್ದ. ರಸ್ತೆ ಹೋದಲ್ಲೆಲ್ಲ ಇವನದ್ದೂ ಪಯಣ ಎಂಬಂತಾಗುತ್ತಿತ್ತು. ನಡುನಡುವೆ ತಿಂಗಳುಗಟ್ಟಲೆ ಬೇರೆ ಊರಿಗೆ ಹೋಗಿದ್ದೂ ಇದೆ. ಹೀಗೆ ಬೇರೆ ಊರಿಗೆ ಹೋದಾಗಲೇ ಅವನಿಗೆ ಮಗ ಹುಟ್ಟಿದ ಸುದ್ದಿ ಸಿಕ್ಕಿತು. ಆ ದಿನ ಎಲ್ಲ ರಸ್ತೆಯಲ್ಲಿ ಕೆಲಸ ಮಾಡುವ ಈರ, “ಬುದ್ಯಾ… ಎಲ್ಲ ಏನ್, ಸೂರಳ್ಳಿ ಅಣ್ಣ, ಅಪ್ಪ ಆಗ್ಬಿಟ್ಟಂತೆ… ಇನ್ನೇನು ಬುಡು, ನಿಂಗೆ..? ನಮ್ಗೆಲ್ಲ ಸಿಹಿ ಹಂಚೋದ್ಯಾವಾಗ?” ಎಂದೆಲ್ಲ ಕಿಚಾಯ್ಸಿದರು. ಅವರೆಲ್ಲರಿಗೂ ಮುಗುಳು ನಗೆ ನಕ್ಕು, ಮನೆಯಿಂದ್ಲೇ ತರ್ತೇನೆ ಎಂದು ಊರಿಗೆ ಬಂದು, ಮಗನ ಮುಖ ನೋಡಿ ಇನ್ನಿಲ್ಲದಂತೆ ಸಂಭ್ರಮಿಸಿ ಮತ್ತೆ ರಸ್ತೆ ಕೆಲಸಕ್ಕೆ ವಾಪಸಾದ. ಹೀಗೆ 7-8 ತಿಂಗಳು ರಸ್ತೆ ಕೆಲಸ ಮುಗಿಸಿ, ಮನೆಗೆ ಬಂದವನು ಮತ್ತೆ ತನ್ನ ಎಂದಿನ ಕೆಲಸವಾದ ತರಕಾರಿ ಬೆಳೆಸುವುದು, ಮಾರಾಟ ಮಾಡುವ ಕಾಯಕದಲ್ಲಿ ತೊಡಗಿದ.

ಮಗ ಹುಟ್ಟಿ ಒಂದು ವರ್ಷವಾಗಿರಬೇಕು. ಒಂದು ದಿನ ಸೂರಳ್ಳಿ ಅಣ್ಣ ಸಂತೆಗೆ ಹೋದ ಸಮಯ, ಸುಶೀಲಕ್ಕ ತನ್ನ ಮಗುವನ್ನು ಮನೆಯ ಹೊರಗಡೆಯ ಕಟ್ಟೆಯ ಮೇಲೆ ಮಲಗಿಸಿ ನಾಪತ್ತೆಯಾದಳು. ಸಂತೆ ಮುಗಿಸಿಕೊಂಡು ಮನೆಗೆ ಹೋಗುತ್ತಾನೆ. ಮನೆಯಲ್ಲಿ ಏನೋ ಗಲಾಟೆ, ತುಂಬ ಜನ ಸೇರಿದ್ದರು. ಏನೆಂದು ಮುಂದೆ ಬರುವಷ್ಟರಲ್ಲಿ ಅಮ್ಮ “ಮಗಾ… ನಿನ್ನ ಹೆಂಡ್ತಿಮೋಸ ಮಾಡ್ಚಲ್ಲೋ…” ಎಂದು ಹಣೆಹಣೆ ಕುಟ್ಟಿಕೊಂಡು ಅಳುತ್ತಿದ್ದಳು. ಮಗ ಒಂದೇ ಸಮನೆ ಅಳುತ್ತಿದ್ದ. ಆ ಹೊತ್ತಿಗೆ ಸೂರಳ್ಳಿ ಅಣ್ಣನಿಗೆ ಯಾರ್ಯಾರೆಲ್ಲ ಹೇಳಿದ್ದೆಲ್ಲ ನೆನಪಿಗೆ ಬಂದವು. ಹಾಗೇ ಕುಸಿದು ಕೂತ. “ಎಲ್ಲ ತೊಳದು ಗುಂಡಾಂತರ ಮಾಡಿ ಹೋತಲ್ಲ ನಿನ್ನ ಹೆಂಡ್ತಿ” ಎಂದು ಇರಬರ ಬೈಯ್ಗುಳದ ಪದಗಳನ್ನೆಲ್ಲ ಬಳಸಿ ಒಂದೇ ಸಮನೆ ಸೊಸೆಗೆ ಶಾಪ ಹಾಕಿದಳು ಮಂಕಾಳಮ್ಮ. ಆದರೆ ಯಾವುದಕ್ಕೂ ಕಿವಿಗೊಡದ ಸೂರಳ್ಳಿ ಅಣ್ಣ ಕಟ್ಟೆಯ ಮೇಲೆ ಮಲಗಿದ್ದ ಮಗನನ್ನು ಎತ್ತಿಕೊಂಡ…

ಇಷ್ಟೆಲ್ಲ ಸುದ್ದಿ ಕೇಳಿದ ಅಮ್ಮ, “ಛೇ… ಅದಕ್ಕೆಂತ ದುರ್ಬುದ್ಧಿ ಬಂತು. ಮನೆ, ಮಠ, ಗಂಡ ಎಲ್ಲ ಹೋಗಲಿ, ಆ ಎಳೆ ಮಗನ್ನು ಬಿಟ್ಟು ಹೋಪಲೆ ಮನಸ್ಸಾದ್ರೂ ಹ್ಯಾಂಗೆ ಬಂತು? ಅವಳೆಂಥ ತಾಯಿ..?” ಎಂದು ಒಂದಷ್ಟು ಬೈದಳು. ಅಷ್ಟರ ನಂತರ ಯಾವತ್ತೂ ಸಂತೆಯ ದಿವಸ ನಮ್ಮ ಮನೆಯಲ್ಲ ಯಾರ ಮನೆಯಲ್ಲೂ ಸೂರಳ್ಳಿ ಅಣ್ಣ ಕಾಣಿಸಿಕೊಳ್ಳಲೇ ಇಲ್ಲ. ಹಾಗಿದ್ದರೆ ಅವನೇನು ಮಾಡುತ್ತಾನೆ? ಈಗಲೂ ಅಷ್ಟೇ ಊಟ ಮಾಡುತ್ತಾನಾ? ಊಟ ಮಾಡಲು ಕಂಡವರ ಮನೆಗೆ ಹೋಗುತ್ತಾನಾ? ರಸ್ತೆ ಕೆಲಸಕ್ಕೆ ಹೋಗುತ್ತಾನಾ? ಹೆಂಡತಿಯನ್ನು ಎಂದಾದರೂ ನೆನೆಸಿಕೊಳ್ಳುತ್ತಾನಾ? ತಾಯಿ ಇಲ್ಲದ ಆ ಮಗುವನ್ನು ಇವ ಹೇಗೆ ಸಂಬಾಳಿಸುತ್ತಾನೆ? ಇನ್ನೊಂದು ಮದುವೆಯಾದನಾ? ಮುಂತಾಗಿ ಅನೇಕ ಪ್ರಶ್ನೆಗಳು ನಮ್ಮನ್ನೂ ಸೇರಿದಂತೆ ಅನೇಕರಿಗೆ ಕಾಡುತ್ತಿದ್ದವು. ಆದರೆ ಹಾಗೇನೂ ಆಗಲಿಲ್ಲ. ಮಂಕಾಳಮ್ಮನೇನೋ ಮಗನಿಗೆ ಇನ್ನೊಂದು ಮದುವೆಮಾಡಲು ಒಂದೇ ಸಮನೆ ಒತ್ತಾಯಿಸಿದಳು. “ಮಗನನ್ನು ನೋಡಕ್ಯಂಬ್ಲಾದ್ರೂ, ಅನ್ನ ಬೇಯಿಸಿ ಹಾಕಲಾದ್ರೂ ಇನ್ನೊಂದು ಮದುವೆ ಮಾಡಕ್ಯ” ಎಂದೆಲ್ಲ ಹೇಳಿದಳು. ಆದರೆ ಯಾವ ಮಾತನ್ನೂ ಅವನು ಕಿವಿಮೇಲೆ ಹಾಕಿಕೊಳ್ಳಲಿಲ್ಲ.

ಹೆಂಡತಿ ಓಡಿ ಹೋದ ನಂತರ ಅವನಿಗೆ ರಸ್ತೆ ಕೆಲಸಕ್ಕೂ ಹೋಗಲು ಮನಸ್ಸಾಗಲಿಲ್ಲ. ಮನೆಯಲ್ಲೇ ಇರುತ್ತಿದ್ದ. ಒಂದು ದಿನ ಅವನೂ ನಾಪತ್ತೆಯಾದ. ಹಾಗೆ ನಾಪತ್ತೆಯಾದವನು ಹುಬ್ಬಳ್ಳಿಯ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದಾನೆ. ದುಡ್ಡೂ ಸಿಗುತ್ತಿದೆ. ಮನೆಗೂ ಅಷ್ಟಿಷ್ಟು ದುಡ್ಡು ಕಳಿಸುತ್ತಿದ್ದ. ಮಂಕಾಳಮ್ಮ ಮೊಮ್ಮಗನನ್ನು ಅವನ ತಾಯಿಯ ಊರಿಗೆ ಕಳುಹಿಸಿ ಮಗ ಕಳುಹಿಸಿದ ದುಡ್ಡಲ್ಲಿ ಬದುಕು ನೂಕುತ್ತಿದ್ದಾಳೆ ಎಂಬ ಸುದ್ದಿ ಸಿಕ್ಕಿತು.