ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಕೊರೊನಾ ಸೋಂಕಿನ ಭಯವಿತ್ತು. ಆದರೆ ಸೋಂಕು ಎಲ್ಲೋ ದೂರದಲ್ಲಿದೆ ಎಂಬ ರಿಯಾಯಿತಿಯನ್ನು ನಾವೇ ಪಡೆದುಕೊಂಡಿದ್ದೆವು. ಲಾಕ್ ಡೌನ್ ಅವಧಿಯಲ್ಲಿ ಎಷ್ಟೊಂದು ಸಾಹಿತ್ಯ ಚಟುವಟಿಕೆಗಳು ನಡೆದವು. ಪುಸ್ತಕ ಬಿಡುಗಡೆಗಳು, ವೆಬಿನಾರ್ ಗಳು ಸಾಲು ಸಾಲಾಗಿ ನಡೆದವು. ಆದರೆ ಈ ವರ್ಷ ಸೋಂಕು ಒಂದಲ್ಲ ಒಂದು ರೀತಿಯಲ್ಲಿ ಎಲ್ಲರ ಮನೆಯ ಕದ ತಟ್ಟಿದೆ. ಜೀವಹಾನಿ, ಸೋಂಕಿತರ ಶುಶ್ರೂಷೆ, ಕೆಟ್ಟ ಸುದ್ದಿಯನ್ನು ಅರಗಿಸಿಕೊಳ್ಳುವ ನೋವು.. ಹೀಗೆ.
ಬರವಣಿಗೆಯ ಉತ್ಸಾಹದ ಅಲೆಯು ತಗ್ಗಿರುವ ಈ ಸಂದರ್ಭದ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಬರಹ ಇಲ್ಲಿದೆ.

 

ಪ್ರಸ್ತುತ ಜೀವನದ ಓಟದಲ್ಲಿಯೇ ತಲ್ಲೀನವಾಗಿರುವ ನಾವು, ಇಷ್ಟೊಂದು ವೇಗವಾಗಿ ಓಡಲು ಶುರು ಮಾಡಿದ್ದು ಯಾವಾಗ ಎಂದು ಯೋಚನೆ ಮಾಡಬೇಕು ಅನಿಸುತ್ತದೆ. ಜೀವನವೆಂದರೆ ಅದೊಂದು ಪ್ರಯಾಣವೆಂದು ಒಪ್ಪಿಕೊಳ್ಳುತ್ತೇವಷ್ಟೇ. ಈ ಜೀವನ ಶೈಲಿಯನ್ನು ಸುಲಭವಾಗಿಸುವ ಒಂದೊಂದೇ ಸೌಕರ್ಯಗಳು ದೊರೆತಾಗ, ನಮ್ಮ ಪ್ರಯಾಣಕ್ಕೆ ವೇಗ ಹೆಚ್ಚುತ್ತಾ ಹೋಯಿತು. ಬಹುಶಃ ಯಂತ್ರಜ್ಞಾನ- ತಂತ್ರಜ್ಞಾನವಮ್ಮಿ ನಾವು ವೇಗವರ್ಧಕಗಳು ಎನ್ನಬಹುದು. ಡಿಜಿಟಲ್ ಯುಗ ಕಾಲಿರಿಸಿದ ಮೇಲಂತೂ, ‘ಜೀವನದ ಸಾರ್ಥಕತೆ ದೊರೆಯಬೇಕಾದರೆ ವೇಗವೊಂದೇ ಮಂತ್ರ’ ಎಂಬ ಧೋರಣೆಯು ಪ್ರಚಲಿತವಾಗುವಂತೆ ಮಾಡಿತು. ಅಂತಹ ಹುಸಿ ಸಾರ್ಥಕತೆಯತ್ತ ಓಡುತ್ತಿರುವ ಮನುಷ್ಯವರ್ಗ ಮುಗ್ಗರಿಸುವಂತೆ ಮಾಡಿದ್ದು ಈ ಜಾಗತಿಕ ಸೋಂಕು ಕೊರೊನಾ.

ಈ ಸೋಂಕು ಜಗತ್ತಿಗೆ ಕಾಲಿರಿಸಿದ ಮೂರೇ ತಿಂಗಳಲ್ಲಿ ನಮ್ಮ ದೇಶವೂ ಬೆಚ್ಚಿ ಬೀಳುವಂತಾಯಿತು. ಕಳೆದ ವರ್ಷ ದೇಶಾದ್ಯಂತ ಲಾಕ್ ಡೌನ್ ವಿಧಿಸಿದ್ದಾಗ, ಅಂಜುತ್ತ ಅಂಜುತ್ತಲೇ ಮನೆಯೊಳಗೆ ಇರುವುದನ್ನು ರೂಢಿಸಿಕೊಂಡರೂ, ಹೊಸ ವಿಷಯಗಳನ್ನು ಅರಿತುಕೊಳ್ಳುವ ಸಣ್ಣ ಸಂಭ್ರಮವನ್ನೂ ಅನುಭವಿಸುತ್ತಿದ್ದೆವು. ಆನ್ ಲೈನ್ ಚಟುವಟಿಕೆಗಳನ್ನು ಕಲಿತುಕೊಳ್ಳುವುದು, ಭಾಗವಹಿಸುವುದು, ಓದು ಬರಹಗಳಿಗೆ ಸಮಯ ಸಿಕ್ಕಿತಲ್ಲಾ ಎಂದು ಸಂಭ್ರಮಿಸುವುದು, ಬಂಧುಗಳೊಂದಿಗೆ ಸಮಯ ಕಳೆಯಲು ಸಿಕ್ಕಿದ ಸಂತೋಷವನ್ನು ಹಂಚಿಕೊಳ್ಳುವುದು.. ಹೀಗೆ. ದೂರದಲ್ಲಿ ಬೆಂಕಿ ಉರಿಯುತ್ತಿದ್ದರೂ, ಅದರ ಬಿಸಿಗೆ ಅಂಜುತ್ತ, ಅದರ ಬೆಳಕಿನಲ್ಲೇ ಪರಸ್ಪರರನ್ನು ಮಾತನಾಡಿಸುತ್ತ… ಬಾಳಿದಂತೆ.

ಓದುವಿಕೆ ಮತ್ತು ಬರವಣಿಗೆಗೆ ಕಳೆದ ವರ್ಷದ ಬೇಸಿಗೆ ಅನುಕೂಲ ವಾತಾವರಣವನ್ನು ಕಲ್ಪಿಸಿತ್ತು. ಯಾವುದೋ ಧಾವಂತದಲ್ಲಿ ತಲ್ಲೀನರಾಗಿ, ಬರವಣಿಗೆಗೆ ಸಮಯ ಒದಗದೇ ಬೇಸರಿಸಿಕೊಳ್ಳುತ್ತಿದ್ದವರು, ಕಳೆದ ವರ್ಷ ಲಾಕ್ ಡೌನ್ ಸಂದರ್ಭವನ್ನು ಸದುಪಯೋಗ ಮಾಡಿಕೊಂಡರು. ಪುಸ್ತಕಗಳ ರಚನೆಗೆ ಸಿದ್ಧತೆ, ವೆಬಿನಾರ್ ಗಳ ಮೂಲಕ ಚರ್ಚೆ, ಕವನ ವಾಚನ, ಫೇಸ್ ಬುಕ್ ಲೈವ್ ನಲ್ಲಿ ಅನೇಕ ಸಂದರ್ಶನಗಳು, ಪುಸ್ತಕ ಬಿಡುಗಡೆಗಳು, ಯೂಟ್ಯೂಬ್ ತುಂಬ ಕನ್ನಡ ಸಾಹಿತ್ಯದ ಧ್ವನಿ.. ಹೀಗೆ ಕನ್ನಡ ಸಾಹಿತ್ಯ ಕ್ಷೇತ್ರವು ಕಲರವದಿಂದ ಕಂಗೊಳಿಸುತ್ತಿತ್ತು. ಆದರೆ ಒಂದೇ ವರ್ಷದಲ್ಲಿ ಎಷ್ಟೊಂದು ಬದಲಾವಣೆ ಆಗಿ ಹೋಯಿತು!!

ಈ ವರ್ಷದ ಬೇಸಿಗೆಯಲ್ಲಿಯೂ ಲಾಕ್ ಡೌನ್ ಹೇರಲಾಗಿದೆ. ಹಲವರಿಗೆ ಬಿಡುವು ಎಂಬುದು ಆಕಾಶದಷ್ಟು ವಿಸ್ತಾರವಾಗಿದೆ ಎಂದೆನಿಸುತ್ತಿದೆ. ಇಷ್ಟೊಂದು ರಜೆ, ಅಥವಾ ಮನೆಯಿಂದಲೇ ಕೆಲಸ ಮಾಡುವ ಅವಕಾಶಗಳ ನಡುವೆ ಬರವಣಿಗೆಗೆ ಸಮಯ, ವಿಷಯಗಳು ದೊರೆತರೂ, ರಚನಾತ್ಮಕವಾಗಿ ಏನನ್ನೂ ಮಾಡಲಾಗುತ್ತಿಲ್ಲವಲ್ಲ ಎನ್ನುವ ಬೇಸರವೇ ಬಿರುಬಿಸಿಲಿನಂತೆ ಸುಡುತ್ತಿದೆ.

(ಅನಸೂಯಾ ಕಾಂಬ್ಳೆ)

‘ಬಿಡುವಾದಾಗ ಬರೆಯಬೇಕು ಎಂದುಕೊಂಡಿದ್ದೆ. ಆದರೆ ಈಗ ನೋಡಿದರೆ ಏನನ್ನು ಬರೆಯಲಿ. ಬರೆದ ಪದಗಳನ್ನು ಮತ್ತೊಮ್ಮೆ ಓದಿದರೆ, ನಾನೇನು ಬರೆಯಬೇಕೆಂದಿದ್ದೆನೋ, ಅದು ಅಲ್ಲಿ ಸ್ಪಷ್ಟವಾಗಿ ಪಡಿಮೂಡಿಲ್ಲ ಎಂದೆನಿಸುತ್ತದೆ. ಅಥವಾ ಬರೆಯಲು ಸರಿಯಾದ ಅಕ್ಷರಗಳು ಸಿಗುತ್ತಿಲ್ಲ. ಬಹುಶಃ ನೋವನ್ನು ಹೊತ್ತುಕೊಂಡು, ಬರೆಯಲು ಹವಣಿಸಿದರೆ, ಅದು ಸಮಾಧಾನ ಕೊಡುವುದೇ ಇಲ್ಲವೇನೋ.. ಕಾಲವಿನ್ನೂ ಸರಿಯಬೇಕಾಗಿದೆ. ಈ ಮಬ್ಬುಗತ್ತಲು ಕಳೆದ ಮೇಲೆ ಬರವಣಿಗೆ ಸಾಧ್ಯವಾಗಬಹುದೇನೋ’ ಎಂದು ಇತ್ತೀಚೆಗೆ ಬರವಣಿಗೆ ಕುರಿತು ಮಾತನಾಡುತ್ತ ಕವಯಿತ್ರಿ ಅನಸೂಯಾ ಕಾಂಬ್ಳೆ ಹೇಳಿದರು.

ಕವಿ, ಅಥವಾ ಬರಹಗಾರರ ಯಾವುದೇ ವಿಷಯವನ್ನು ಗುರುತಿಸಿದರೂ, ವಿಷಯವನ್ನು ಪ್ರಸ್ತುತಪಡಿಸುವ ಸಂದರ್ಭದಲ್ಲಿ ನವರಸಗಳನ್ನು ಸೃಷ್ಟಿಸುವ ಸಾಮರ್ಥ್ಯ ಆತನಲ್ಲಿರುತ್ತದಂತೆ.
ರಮ್ಯಂ ಜುಗುಪ್ಸಿತಮುದಾರಮಥಾಪಿ ನೀಚಂ
ಉಗ್ರಂ ಪ್ರಸಾದಿ ಗಹನಂ ವಿಕೃತಂ ಚ ವಸ್ತು
ಯದ್ವಾಪ್ಯವಸ್ತು ಕವಿಭಾವಕಭಾವ್ಯಮಾನಂ
ತನ್ನಾಸ್ತಿ ಯನ್ನ ರಸಭಾವಮುಪೈತಿ ಲೋಕೇ
ಎಂಬ ಸಾಲುಗಳನ್ನು ಓದಿದ್ದು ನೆನಪು. ರಮ್ಯ, ಅಸಹ್ಯ, ಉದಾರ, ನೀಚ, ಉಗ್ರ, ಪ್ರಸನ್ನ, ಕ್ಲಿಷ್ಟ, ವಿಕೃತ-ವಸ್ತು ಹೀಗೆ ಯಾವುದಾದರೂ ಆಗಿರಲಿ, ಕೊನೆಗೆ ವಸ್ತುವಲ್ಲದ್ದೇ ಆಗಿರಲಿ – ಕವಿಭಾವಕರ ಭಾವನೆಗೆ ವಿಷಯವಾದ ಮೇಲೆ ರಸಮಯವಾದ್ದು ಲೋಕದಲ್ಲಿ ಏನೊಂದೂ ಇಲ್ಲ – ಎಂಬ ವಿವರ ಕಾವ್ಯಮೀಮಾಂಸೆಯಲ್ಲಿದೆ. ಆದರೆ ಕವಿ ಅಥವಾ ಬರಹಗಾರರ ಮನಸ್ಸು ಅಂತಹ ಸಾಧ್ಯತೆಗಳನ್ನು ಅನ್ವೇಷಿಸುವಷ್ಟು ಹುಮ್ಮಸ್ಸಿನಿಂದ ಇರಬೇಕಲ್ಲವೇ. ಸದ್ಯದ ಪರಿಸ್ಥಿತಿಯಂತೂ ಹಾಗಿಲ್ಲವೇನೋ.
ಈ ಬೇಸರವನ್ನು ಅನೇಕರ ಬರಹಗಾರರೂ ಗುರುತಿಸಿದ್ದಾರೆ. ಪ್ರಕಾಶಕರೂ ಗುರುತಿಸಿದ್ದಾರೆ. ‘ಹೌದು.. ಬರವಣಿಗೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಬೇಕು ಎಂದು ಯೋಚಿಸಿದ್ದುಂಟು. ಆದರೆ ಪ್ರತಿದಿನ ಬೆಳಗಾದರೆ ಕೇಳುವ ಕೆಡುಕಿನ ಸುದ್ದಿಗಳನ್ನು ಅರಗಿಸಿಕೊಳ್ಳುವುದಾದರೂ ಹೇಗೆ..’ ಎಂದು ಹಿರಿಯ ಲೇಖಕ ಅಗ್ರಹಾರ ಕೃಷ್ಣಮೂರ್ತಿ ಪ್ರಶ್ನಿಸುವಾಗ ಸದ್ಯಕ್ಕಂತೂ ಓದುವುದಷ್ಟೇ ಉಳಿದಿರುವ ದಾರಿ ಎನಿಸುತ್ತದೆ.

ಬಿಡುವಾದಾಗ ಬರೆಯಬೇಕು ಎಂದುಕೊಂಡಿದ್ದೆ. ಆದರೆ ಈಗ ನೋಡಿದರೆ ಏನನ್ನು ಬರೆಯಲಿ. ಬರೆದ ಪದಗಳನ್ನು ಮತ್ತೊಮ್ಮೆ ಓದಿದರೆ, ನಾನೇನು ಬರೆಯಬೇಕೆಂದಿದ್ದೆನೋ, ಅದು ಅಲ್ಲಿ ಸ್ಪಷ್ಟವಾಗಿ ಪಡಿಮೂಡಿಲ್ಲ ಎಂದೆನಿಸುತ್ತದೆ. ಅಥವಾ ಬರೆಯಲು ಸರಿಯಾದ ಅಕ್ಷರಗಳು ಸಿಗುತ್ತಿಲ್ಲ.

“ಪ್ರಕಟಿತ ಪುಸ್ತಕಗಳನ್ನಾದರೂ ಕೊಂಡುಕೊಳ್ಳಿ ಎಂದು ರಾಜಾರೋಷವಾಗಿ ಜಾಹೀರಾತು ಮಾದರಿಯಲ್ಲಿ ಹೇಳಿಕೊಳ್ಳಲೂ ತುಸು ಮುಜುಗರವಾಗುತ್ತಿದೆ. ಸಾಮಾನ್ಯವಾಗಿ ಬರುವ ಕೃತಿಗಳು, ಆ ಕೃತಿಗಳ ಕುರಿತು ಬರುವ ವಿಮರ್ಶೆ, ವಿಚಾರಗಳನ್ನಷ್ಟೇ ತಿಳಿಸಿ, ಪುಸ್ತಕ ಕೊಂಡುಕೊಳ್ಳಿ ಎಂದಷ್ಟೇ ಹೇಳಬಹುದು. ‘ಖರೀದಿಸಿ..’ ಎಂದು ಒತ್ತಾಯಿಸುವುದಕ್ಕೇ ಬೇಸರದ ಛಾಯೆಯ ನಡುವೆ ಮನವೊಪ್ಪುವುದಿಲ್ಲ’ ಎಂದು ಅಭಿನವ ಪ್ರಕಾಶನದ ನ. ರವಿಕುಮಾರ್ ಹೇಳುತ್ತಾರೆ.

ಇದೇ ಮಾತನ್ನು ಒಪ್ಪುವ ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ, “ಕಳೆದ ವರ್ಷದ ಲಾಕ್ ಡೌನ್ ಸಂದರ್ಭದಲ್ಲಿ ಪುಸ್ತಕಗಳ ಆನ್ ಲೈನ್ ವ್ಯವಹಾರಗಳು ಚುರುಕುಗೊಂಡವು. ಪುಸ್ತಕ ಮಾರಾಟ ಲೋಕವು ಆನ್ ಲೈನ್ ಗ್ರಾಹಕರಿಗೆ ಹತ್ತಿರವಾಯಿತು. ಈ ಬಾರಿ ಕೊರೊನಾ ಸೋಂಕು ಬಹುತೇಕರ ಮನೆಬಾಗಿಲು ತಟ್ಟಿರುವುದರಿಂದ ವಹಿವಾಟು ನಡೆಯುತ್ತಿದ್ದರೂ, ಅದರಲ್ಲಿ ಸಂಭ್ರಮದ ಹೊಳಪೊಂದು ಮಾಯವಾಗಿರುವುದು ನಿಜ” ಎನ್ನುತ್ತಾರೆ. ಪುಸ್ತಕಗಳ ಹಸ್ತಪ್ರತಿ ಬಂದರೂ, ಪ್ರಕಾಶನ ಈಗ ಅಷ್ಟೇನೂ ಸುಲಭವಾಗಿಲ್ಲ ಎಂಬುದು ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಅನಿಸಿಕೆ.

‘ಬರವಣಿಗೆಯೆಲ್ಲ ಹಾಗಿರಲಿ, ಯಾರ ಬಳಿಯಾದರೂ ಬಾಯಿ ತುಂಬಾ ಹರಟಿದರೆ ಸಾಕೆನಿಸಿದೆ. ಯಾಕೆಂದರೆ ಎಲ್ಲ ಮಾತುಗಳೂ ಈ ನೋವಿನ ಸುತ್ತವೇ ಸುತ್ತುತ್ತಿರುವಾಗ, ಹರಟೆ ಎನ್ನುವುದೇ ಇಲ್ಲವಾಗಿದೆ. ಮನಸ್ಸು ಹಗುರವಾಗುವುದು ಹೇಗೆ..’ ಎಂಬ ಪ್ರಶ್ನೆ ಲೇಖಕಿ ಎಂ.ಎಸ್.ವೇದಾ ಅವರದ್ದು. ‘ಆನ್ ಲೈನ್ ತರಗತಿಗಳು, ಪರೀಕ್ಷೆಗಳು ಎಂಬೆಲ್ಲ ಹೊಸಕಲಿಕೆಗಳ ನಡುವೆ ದಿನವೇನೋ ಬ್ಯುಸಿಯಾಗಿದೆ. ಆದರೆ ಅವೆಲ್ಲದರ ನಡುವೆ ಉತ್ಸಾಹವನ್ನು ಜತನ ಮಾಡಿ ಉಳಿಸಿಕೊಳ್ಳಬೇಕಾಗಿದೆ. ಕಾದಂಬರಿಯೊಂದನ್ನು ಬರೆಯಬೇಕೆಂದು ತಯಾರಿ ಮಾಡಿಕೊಂಡಿದ್ದರೂ, ಸದ್ಯಕ್ಕೆ ಅದು ಸಾಧ್ಯವೇ ಆಗುತ್ತಿಲ್ಲ..’

(ಅಗ್ರಹಾರ ಕೃಷ್ಣಮೂರ್ತಿ)

ಹಾಗಂತ ಇದೇನೂ ಶೂನ್ಯದ ಸ್ಥಿತಿಯಲ್ಲ. ಚಲಿಸುತ್ತಲೇ ಇರುವ ಜಗತ್ತಿನಲ್ಲಿ ಸಾಹಿತ್ಯ ಸೃಷ್ಟಿಯೂ ನಿರಂತರ. ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಸಾಮರ್ಥ್ಯ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದಲ್ಲವೇ. ಸಾಹಿತ್ಯವು ಜೀವನದ ಪ್ರತಿಬಿಂಬ ಎಂಬಂತೆ, ಜೀವನಾನುಭವಗಳು ಒಂದಲ್ಲ ಒಂದು ರೀತಿಯಲ್ಲಿ ಅಕ್ಷರ ರೂಪಕ್ಕೆ ಇಳಿಯುತ್ತಲೇ ಇರುತ್ತವೆ. ಅದಾಗಲೇ ಪಾಕಗೊಂಡ ಅನುಭವ, ವಿಚಾರಗಳು- ಸೃಜನಶೀಲತೆಯ ಚೌಕಟ್ಟಿನಲ್ಲಿ ಹೊರಹೊಮ್ಮುವುದು ಕೆಲವೆಡೆ ಸಾಧ್ಯವಾಗಿದೆ.

ಕೊರೊನಾ ಎಂಬ ಹೊಸ ಸೋಂಕು ಮನುಷ್ಯ ಜೀವನಶೈಲಿಯ ಮೇಲೆ ಮಾಡಿದ ಪರಿಣಾಮಗಳಿಗೆ ಸಂಬಂಧಿಸಿದ ಬರಹಗಳಿರಬಹುದು, ಅಥವಾ ಅವುಗಳ ಹೊರತಾದ ಬರಹಗಳಿರಬಹುದು, – ಅವು ಆಯಾ ಸಂದರ್ಭಗಳು ತಿಳಿಯಾಗುತ್ತಿದ್ದಂತೆಯೇ ಪಡಿಮೂಡುತ್ತವೆ. ಬರಹದ ಹೂರಣಗಳಿಗಾಗಿ ಆಯ್ಕೆ ಮಾಡಿಕೊಳ್ಳುವ ಪ್ರಕಾರಗಳು ಏನೇ ಆಗಿರಲಿ. ಬದಲಾವಣೆಯೇ ಜಗದ ನಿಯಮ ಎಂಬಂತೆ ಅಭಿವ್ಯಕ್ತಿಯ ಸ್ವರೂಪದಲ್ಲಿಯೂ ಅಗಾಧವಾದ ಬದಲಾವಣೆಗಳು ಆಗಿವೆ.

ಸದ್ಯದ ಅಭಿವ್ಯಕ್ತಿ ವೇದಿಕೆಗಳಾಗಿ ಸಾಮಾಜಿಕ ಜಾಲತಾಣಗಳು ಗೋಚರಿಸಬಹುದು. ದಿನಪತ್ರಿಕೆಗಳಲ್ಲಿ ಅವು ವಿವಿಧ ಮಾದರಿಯಲ್ಲಿ ವ್ಯಕ್ತವಾಗಬಹುದು.

ಹೀಗೆ ಜಾಗತಿಕ ಬಿಕ್ಕಟ್ಟು, ತುಮುಲಗಳು ಇದ್ದಾಗ, ಅವುಗಳ ಕುರಿತಂತೆ ಯಾರೂ ಆಯಾ ಕಾಲದಲ್ಲಿಯೇ ಸಾಹಿತ್ಯ ಸೃಷ್ಟಿ ಮಾಡಿಲ್ಲ ಎನ್ನುವುದನ್ನು ನಾವು ಗಮನಿಸಬೇಕು ಎಂದು ಹಿರಿಯ ವಿಮರ್ಶಕರಾದ ಓ.ಎಲ್. ನಾಗಭೂಷಣ ಸ್ವಾಮಿ ಗುರುತಿಸುತ್ತಾರೆ: “ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದಾಗಲೇ ಶಿವರಾಮಕಾರಂತರು ಬರೆಯುವುದು ಸಾಧ್ಯವಾಗಲಿಲ್ಲ. ಹೋರಾಟದ ಬಳಿಕವಷ್ಟೇ ಆ ಎಳೆಯನ್ನು ಒಳಗೊಂಡ ಕಾದಂಬರಿಗಳು ಪ್ರಕಟವಾದವು. ಸ್ವಾತಂತ್ರ್ಯ ಸಿಕ್ಕಿದ ಎಷ್ಟೋ ವರ್ಷಗಳ ನಂತರವೂ ಸಾಹಿತ್ಯ ಸೃಷ್ಟಿ ಆಯಿತು. ಪ್ಲೇಗ್ ರೋಗ ವ್ಯಾಪಿಸಿದಾಗಲೂ ಹಾಗೆಯೇ, ಅದು ಉಂಟು ಮಾಡಿದ ಸಾಮಾಜಿಕ ಪರಿಣಾಮಗಳ ಕುರಿತು ನಂತರದ ದಿನಗಳಲ್ಲಿ ಅನೇಕ ಸೃಜನಶೀಲ ಕೃತಿಗಳು ಬಂದವು. ಅಥವಾ ಅನೇಕ ಕೃತಿಗಳಲ್ಲಿ ಪ್ಲೇಗಿನ ಉಲ್ಲೇಖ ಕಾಣಿಸಿತು. ಆದ್ದರಿಂದ, ಯಾವುದೇ ಅನುಭವಗಳು ಹರಳುಗಟ್ಟುವವರೆಗೆ ಕಾಯಬೇಕಾಗುತ್ತದೆ. ಮಡುಗಟ್ಟಿದ ನೋವು, ತುಮುಲ ಪ್ರಕಟವಾಗಲು ಸಮಯ ಬೇಕಾಗುತ್ತದೆ” ಎಂಬುದು ಅವರ ಮಾತು.

ಸಾಹಿತ್ಯ ಸೃಷ್ಟಿ ಅಥವಾ ಬರವಣಿಗೆಗೆ ಆಯ್ಕೆ ಮಾಡಿಕೊಂಡ ವಿಷಯ ಎಷ್ಟೇ ತೀವ್ರತರವಾದ ನೋವಿಗೆ ಸಂಬಂಧ ಪಟ್ಟಿದ್ದಿರಲಿ, ಆ ಬರವಣಿಗೆಯ ಪ್ರಕ್ರಿಯೆಯು ಸಾಗುವಾಗ ಸಂಕಟ, ನೋವಿನ ಅನುಭವವಾಗುವ ಸಂದರ್ಭವೇ ಇರಲಿ, ‘ಈ ವಿಷಯವನ್ನು ನಾನು ಬರೆಯಬೇಕು’ ಎಂಬ ಮೂಲ ವಿಚಾರದಲ್ಲಿಯೇ ಉತ್ಸಾಹದ ಎಳೆಯಿರಬೇಕಾಗುತ್ತದೆ. ಸಂಭ್ರಮದ ಬೀಜವಿರಬೇಕಾಗುತ್ತದೆ. ಬರಹವು ಮುಕ್ತಾಯವಾದ ಬಳಿಕ ಪ್ರತಿಯೊಬ್ಬ ಲೇಖಕನಲ್ಲಿಯೂ ಹಗುರವಾದ ಭಾವನೆ ಮೂಡುತ್ತದೆ. ಕೊರೊನಾ ಸೋಂಕಿನ ನೋವು ಈ ಬರವಣಿಗೆಯ ಉತ್ಸಾಹವನ್ನು ಕಡಿಮೆ ಮಾಡಿರಬಹುದು. ಆದರೆ ಚಿಗುರನ್ನು ಚಿವುಟುವುದಂತೂ ಸಾಧ್ಯವಿಲ್ಲ. ಹೊಸ ಕಾಲ, ಹೊಸಗಾಳಿ ಹೊಸ ಬೆಳಕನ್ನೂ ತರುವುದಲ್ಲವೇ.