ದಶಕದ ಹಿಂದೆ ಸಮುದ್ರಕ್ಕೆ, ಪಾರ್ಕುಗಳಿಗೆ, ಹೋದಾಗಲೆಲ್ಲಾ ನನ್ನಂತೆ ಕರಿಕಂದು ಚರ್ಮದ ಜನ ಕಂಡರೆ ಸಾಕು ಉತ್ಸಾಹ ಗರಿಗೆದರುತ್ತಿತ್ತು. ನಂತರ ಮನಸ್ಸು ಚಿಂತೆಗೊಳಗಾಗುತ್ತಿತ್ತು. ಬಿಳಿಯರಲ್ಲದ ಇತರರು ಅಷ್ಟಾಗಿ ಕಾಣದಿದ್ದದ್ದು ಇನ್ನಷ್ಟು ಎತ್ತಿಕಾಣುತ್ತಿತ್ತು. ಯಾಕೆಂದು ಪ್ರಶ್ನೆ ಮೂಡುತ್ತಿತ್ತು. ನೇರ ಕಾರಣವೆಂದರೆ ಪಾಳೆಗಾರಿಕೆಯಿಂದ ದೇಶವನ್ನು ಆಕ್ರಮಿಸಿಕೊಂಡು ಆಸ್ಟ್ರೇಲಿಯಾವನ್ನು ಬಿಳಿಯರ ಪಾಶ್ಚಿಮಾತ್ಯ ಸಮಾಜವನ್ನಾಗಿ ಪರಿವರ್ತಿಸಿದ್ದು. ಬ್ರಿಟನ್ ಮತ್ತು ಯೂರೋಪಿನ ಮೂಲದ ಜನರಿಗೆ ಕಡಲು ಮತ್ತು ಬಿಸಿಲು ಎಂದರೆ ‘ಅದಪ್ಪಾ ಜೀವನ ಅಂದ್ರೆ’ ಅನ್ನೋವಷ್ಟು ಮೋಹ. ಹಾಗಾಗಿ ಹೊರಾಂಗಣ ಚಟುವಟಿಕೆಗಳಲ್ಲಿ ಅವರದ್ದೇ ಎತ್ತಿದ ಕೈ.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ.

 

ತಲೆಯೆತ್ತಿ, ಎದೆಯುಬ್ಬಿಸಿ ರಭಸದಿಂದ ಮುನ್ನುಗ್ಗುತ್ತಿರುವ ಹತ್ತಡಿ ಎತ್ತರದ ನೀಲಿ ಅಲೆ ಇನ್ನೇನು ತಲೆಯ ಮೇಲೆ ಅಪ್ಪಳಿಸಿ… ಬಲಿ ಚಕ್ರವರ್ತಿಯನ್ನ ವಾಮನ ತುಳಿದಂತೆ ನಮ್ಮನ್ನು ಸಾಗರದ ನೆಲಕ್ಕೆ ತಳ್ಳಿ, ತುಳಿಯುವ ಮುನ್ನವೇ ಚಂಗನೆ ಚಿಮ್ಮಿ ಅಲೆಯ ಮೇಲೆ ನೆಗೆದು ಒಂದು ಕ್ಷಣ ಗಾಳಿಯಲ್ಲಿ ತೇಲಾಡಿ, ಮರುಕ್ಷಣವೇ ಅಷ್ಟರಲ್ಲಿ ಒಡೆದು ಬಿಳಿನೊರೆಯಾಗಿದ್ದ ಅಲೆಗೆ ಮರಳುವ ಆ ಅನುಭವ! ಆ ಕ್ಷಣ ನನ್ನದಾಗಲು ವರ್ಷಗಳೇ ಬೇಕಾಯ್ತು. ಸಮುದ್ರದೂರು ವಲಂಗಾಂಗ್ ನಲ್ಲಿ ವಾಸವಿರುವಷ್ಟೂ ಕಾಲ ದಿನದಿನಕ್ಕೆ ಬದಲಾಗುವ ಅಲ್ಲಿನ ಹವಾಮಾನವನ್ನು ಆ ದಿನ ಹೇಗೋ ಹಾಗೇ ಎಂಬಂತೆ ಒಪ್ಪಿಕೊಂಡು ನಿರಾಳವಾಗಿದ್ದೆ. ಆದರೆ ನಯನಮನೋಹರ ಪಚ್ಚೆನೀಲಿ ನವಿಲುಬಣ್ಣದ ಶರಧಿಯ ಭಾಷೆಯನ್ನು ಕಲಿಯಲು ಹೆಣಗಾಡಿದ್ದೆ.

ಒಳನಾಡು ಪ್ರದೇಶದ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದು, ಸಿಡ್ನಿ ನಗರದಲ್ಲಿ ಉಪಯೋಗಕ್ಕೆ ಬಂದಿತ್ತೇ ಹೊರತು ವಾಸವಾಗಿದ್ದ ವಲಂಗಾಂಗ್ ಕಡಲತೀರದ ಜೀವನಕ್ಕೆ ಹೊಂದಿಕೆಯಾಗಿರಲಿಲ್ಲ. ಮೊಟ್ಟಮೊದಲ ಬಾರಿ ಸ್ನೇಹಿತರೊಬ್ಬರು ವಿಶಾಲ ಸಾಗರದ ಮಡಿಲಿನತ್ತ ದಿಟ್ಟಿಸುತ್ತಾ, ಅದೋ ಅಲ್ಲಿ ನೋಡು ಎಷ್ಟೊಂದು ಬಿಳಿ ಕುದುರೆಗಳಿವೆ ಎಂದಾಗ ನನ್ನ ಮುಖ ನೂರಕ್ಕೆ ನೂರು ಭಾಗ ತಬ್ಬಿಬ್ಬಾಗಿತ್ತು. ನನ್ನ ಮುಖದ ಪೆದ್ದು ಭಾವನೆಯನ್ನ ನೋಡಿ ಅವರು ಎದೆಬಿರಿದು ನಕ್ಕು, ಸಮುದ್ರದ ಬಿಳಿಬಣ್ಣದ ಅಲೆಗಳಿಗೆ ‘ಬಿಳಿ ಕುದುರೆ’ ಎಂದು ಹೇಳುತ್ತಾರೆ ಎಂದಾಗ ಆ ವರ್ಣನೆಯೇ ಕುತೂಹಲಕಾರಿ ಎನ್ನಿಸಿತು. ಕಡಲಿನ ದೊಡ್ಡ ನೀಲಿಅಲೆಗಳು ದಡಕ್ಕೆ ಧಾವಿಸಿ ಬರುವಾಗ ತಮ್ಮ ಹುರುಪನ್ನು ಕಡಿಮೆಯಾಗಿಸಿ ‘ಒಡೆದಾಗ’ ಅವು ಬಿಳಿಕುದುರೆಗಳಾಗುತ್ತವೆ. ಒಡೆಯುವ ಹಂತದ ಅರೆಕ್ಷಣದಲ್ಲಿ ಅವು ಬಿಳಿಕುದುರೆಯ ಕತ್ತಿನ ಹಾರಾಡುವ ನೀಳ ಕೇಸರದಂತೆ ಕಾಣುತ್ತವೆಯಂತೆ. ಅವು ಹೊರಡಿಸುವ ಶಬ್ದವೂ ಕೂಡ ಕುದುರೆಯ ಲಘುಕೆನೆತದಂತೆ ಕೇಳಿಸುತ್ತದೆಯಂತೆ. ಅಷ್ಟೆಲ್ಲಾ ಕಷ್ಟ ಯಾಕೆ, ದೊಡ್ಡ ನೀಲಿಅಲೆ, ಬಿಳಿಹಾಲು ನೊರೆಯ ಚಿಕ್ಕಅಲೆ ಅಂದರೆ ಸಾಕಲ್ಲವೇ ಎಂದು ಆಗ ಕನ್ನಡದಲ್ಲಿ ಗೊಣಗಿದ್ದರೂ, ಸಮುದ್ರದ ಭಾಷೆಯನ್ನು ಕಲಿತರೆ ಧೈರ್ಯ ಹೆಚ್ಚುತ್ತದೆ ಎಂದು ಮುಂದೆ ಅನುಭವಪಾಠವೇ ಹೇಳಿಕೊಟ್ಟಿತು.

ಸಮುದ್ರದ ಮಡಿಲೊಳಗೆ ಮೂವತ್ತು-ಐವತ್ತು ಮೀಟರ್ ದೂರ ಹೋಗಿ ನಿಂತು ಧಾವಿಸಿ ಬರುತ್ತಿರುವ ನೀಲಿಅಲೆಯ ಗೋಡೆಗೆ ಎದೆಯೊಡ್ಡಿ ನಿಲ್ಲಲು ಕೈಕಾಲು, ಗುಂಡಿಗೆ, ಮನಸ್ಸು ಎಲ್ಲಾ ಸ್ವಲ್ಪ ಗಟ್ಟಿ ಇರಬೇಕು ಅನ್ನೋದನ್ನ ಅನುಭವಗಳು ನಗರದಲ್ಲಿ ಬೆಳೆದ ಪುಕ್ಕಲು ದೇಹಕ್ಕೆ ಮನದಟ್ಟು ಮಾಡಿವೆ. ಕಾಲೆರಡನ್ನೂ ಹಗುರವಾಗಿ ನೀರಲ್ಲಿ ಬಡಿಯುತ್ತಿರಬೇಕು. ಕೈಗಳಲ್ಲಿ ನೀರನ್ನು ಸವರುತ್ತಿರಬೇಕು. ಅಕ್ಕಪಕ್ಕ ತೇಲುತ್ತಿರುವ ಜನರಿಗೂ ನಮಗೂ ಇರುವ ಅಂತರದ ಅರಿವಿರಬೇಕು. ಅನತಿದೂರದಲ್ಲಿ ಅಲೆಗಳು ನಾಗರಹಾವಿನ ಹೆಡೆಯಂತೆ ತಲೆಯೆತ್ತುವುದನ್ನ ಗಮನಿಸುತ್ತಿರಬೇಕು. ಕೆಲ ಅಲೆಗಳು ನಮ್ಮತ್ತ ಬರುವ ಮುನ್ನವೇ ಗೋಡೆಯಲ್ಲಿ ಬಿರುಕು ಬಿಡುವಂತೆ ಒಡೆದು ಬಿಳಿ ಕುದುರೆಗಳಾಗಿ ಮೃದುವಾಗಿ ನಮ್ಮನ್ನು ಸವರುತ್ತಾ ಮುತ್ತಿಡುತ್ತಾ ಹಾದು ಹೋಗುತ್ತವೆ. ಕೆಲ ನೀಲಿಗಳು ನಮ್ಮತ್ತ ಬಂದು ಇನ್ನೇನು ಹಾದುಹೋಗುತ್ತವೆ ಎಂದು ಭಾಸವಾದರೆ ಆ ಕ್ಷಣದಲ್ಲಿ ಅವುಗಳ ಮೇಲೆ ಚಿಮ್ಮಿ ಜಿಗಿಯಬಹುದು. ಜಿಗಿದು ನೀರಿಗೆ ಮರಳಿದಾಗ ಬಲವಾಗಿ ಮರಳಲ್ಲಿ ಕಾಲೂರಿ ನಿಲ್ಲಬೇಕು. ಇಲ್ಲವೇ ಬಂದು ಬಡಿಯುವ ಮತ್ತೊಂದು ಅಲೆಯನ್ನು ಎದುರುಗೊಳ್ಳುವ ನೀರೊಳಗಿನ ಸಮಯಪ್ರಜ್ಞೆ ಇರಬೇಕು.

ಒಂದೊಮ್ಮೆ ಅಲೆಯಡಿ ಸಿಕ್ಕಿದರೂ ನೀರು ಕುಡಿಯದೆ ಎದ್ದು ನಿಂತು ದೇಹವನ್ನು ಸ್ಥಿಮಿತದಲ್ಲಿ ನಿಲ್ಲಿಸಿಕೊಂಡು ಅಲೆಗೆದುರಾಗಬೇಕು ಅಥವಾ ಬೆನ್ನಾಗಿ ನಿಲ್ಲಬೇಕು. ನೀರಿನ ನಿರಂತರ ಚಲನೆಗೆ ದೇಹವನ್ನು ಪರಿಚಯಿಸಬೇಕು. ಇನ್ನು ಕೈಯಲ್ಲಿ ಬೂಗಿ ಬೋರ್ಡ್ ಹಿಡಿದಿದ್ದರಂತೂ ಆ ಬೋರ್ಡನ್ನ ಮತ್ತು ನಮ್ಮ ದೇಹದ ಸಮತೋಲನವನ್ನ ಕಾಯ್ದುಕೊಳ್ಳಬೇಕು. ಗೋಡೆಅಲೆ ಇನ್ನೇನು ಒಡೆಯುತ್ತಿದೆ ಅನ್ನುವ ಒಂದು ಕ್ಷಣದ ಮುಂಚೆ ಬೂಗಿಬೋರ್ಡನ್ನ ತಿರುಗಿಸಿಕೊಂಡು ಕಡಲಕಿನಾರೆಗೆ ಸಮಾನಾಂತರವಾಗಿಟ್ಟು, ಅದರ ಮೇಲೆ ದೇಹವನ್ನು ಪೇರಿಸಿಕೊಂಡು ಕಾಲನ್ನು ಹೊಡೆಯುತ್ತಾ ಅಣಿಯಾಗಬೇಕು. ಕ್ಷಣದಲ್ಲಿ ಈ ತಯಾರಿ ನಡೆದರೆ ಆ ರಭಸದ ನೀಲಿಯಿಂದ ಮಾರ್ಪಾಡಾಗುವ ಬಿಳಿಕುದುರೆ ಅಲೆ ನಮ್ಮನ್ನು ದಡಕ್ಕೆ ನೂಕುತ್ತದೆ. ಇನ್ನೊಂದು ಕ್ಷಣದಲ್ಲಿ ಜುಯ್ಯನೆ ನೀರಿನ ಮೇಲೆ ತೇಲುತ್ತಾ ಹೋಗುವುದು. ಸರ್ಫ್ ಬೋರ್ಡ್ ಇದ್ದರೆ ಚಾಕಚಕ್ಯತೆಯಿಂದ ಅದರ ಮೇಲೆ ನಿಂತು, ಬೋರ್ಡನ್ನ ಕಾಲಿನ ಒತ್ತುವಿಕೆಯ ಮೂಲಕ ನಿಯಂತ್ರಿಸುವ ಕಲೆಯಂತೂ ಅಚ್ಚರಿ ತರಿಸುತ್ತದೆ. ನೋಡುತ್ತಾ ನಿಂತರೆ ಸಮಯ ಹೋಗುವುದೇ ತಿಳಿಯುವುದಿಲ್ಲ. ಅಬ್ಬಾ, ಸಮುದ್ರದಲ್ಲಿ ಇಳಿಯುವುದೆಂದರೆ ಎಷ್ಟೊಂದು ಕಲಿಯುವುದಿದೆ. ವರ್ಷಾನುಗಟ್ಟಲೆ ಸ್ವಲ್ಪಸ್ವಲ್ಪವಾಗಿ ಇದೆಲ್ಲಾ ಕಲಿಯುತ್ತಾ ನಾನಿನ್ನೂ ಎಲ್ ಬೋರ್ಡ್ ಅಂದುಕೊಳ್ಳುತ್ತಲೇ ಇದ್ದೀನಿ.

ಆಸ್ಟ್ರೇಲಿಯಾದಲ್ಲಿ ಹೆಚ್ಚುಜನರು ಹೋಗುವ ಕಡಲ ಕಿನಾರೆಗಳಲ್ಲಿ ಲೈಫ್ ಗಾರ್ಡ್ ಸೇವೆಯಿರುತ್ತದೆ. ಈ ಲೈಫ್ ಗಾರ್ಡ್ ಗಳು ಇದ್ದಾರೆಂದರೆ ಜನರಿಗೆ ನೆಮ್ಮದಿ. ಸಮುದ್ರ ದಂಡೆಯಲ್ಲಿ ಅವರು ಕೆಂಪು ಮತ್ತು ಹಳದಿ ಬಾವುಟಗಳನ್ನು ನೆಟ್ಟಿದ್ದಾರೆಂದರೆ ಆ ಬಾವುಟಗಳ ಮಧ್ಯೆ ಇರುವ ನೀರಿನ ಪರಿಧಿ ಸುರಕ್ಷಿತ ಎಂದರ್ಥ. ಮಕ್ಕಳಿಗೆ, ಅಪ್ಪ-ಅಮ್ಮಂದಿರಿಗೆ, ಕಡಲ ನೋಡಲು ಬಂದ ಹೊಸಬರಿಗೆ, ಸರಿಯಾಗಿ ಈಜು ಬಾರದೇ ಇರುವವರಿಗೆ, ಸಾಹಸ ಮಾಡಲು ಹೋಗಿ ಪೆಟ್ಟುಮಾಡಿಕೊಂಡವರಿಗೆ, ಕಳ್ಳಕಾಕರ ಬಗ್ಗೆ ದೂರು ದಾಖಲು ಎಂಬಂತೆ ಎಲ್ಲರಿಗೂ ಲೈಫ್ ಗಾರ್ಡ್ ಗಳು ಸಹಾಯ ಮಾಡುತ್ತಾರೆ. ಸಾರ್ವಜನಿಕರಿಗೆಂದು ಅವರು ಪ್ರತಿ ಗಂಟೆಗೊಮ್ಮೆ ಕಡಲ ಹವಾಮಾನವನ್ನು ದಾಖಲಿಸುತ್ತಾರೆ, ಸಮುದ್ರದ ಉಬ್ಬರ, ಏರಿಳಿತಗಳು, ಗಾಳಿಯ ವೇಗ, ಬಿಸಿಲಿನ ಪ್ರಖರತೆ, UV ಅಂಶ ಎಲ್ಲವನ್ನೂ ತಿಳಿಸುತ್ತಾರೆ. ಹೆಲಿಕಾಪ್ಟರ್ ಹಾರಿಸುತ್ತಾ ಸುತ್ತಮುತ್ತ ಶಾರ್ಕ್ ಇಲ್ಲದಿರುವುದನ್ನು ಖಾತ್ರಿಪಡಿಸುತ್ತಾರೆ. ಎಲ್ಲಿ ನೀರಿನ ಸೆಳೆತವಿದೆ, ಎಲ್ಲಿ ಈಜಲು ಹೋದರೆ ಅಪಾಯವಾಗಬಹುದು, ಸರ್ಫಿಂಗ್ ಮಾಡುವ ಸಾಹಸಿಗರು ಎಲ್ಲಿದ್ದರೆ ಒಳಿತು ಎನ್ನುವ ಸೂಚನೆಗಳ ಫಲಕಗಳನ್ನು ದಂಡೆಯಲ್ಲಿ ನೆಟ್ಟಿರುತ್ತಾರೆ. ಅವನ್ನು ನೋಡಿಕೊಂಡೆ ನಾವು ನೀರಿನಲ್ಲಿ ಇಳಿಯುವುದು. ಸ್ಥಳೀಯ ಸರ್ಕಾರದಿಂದ ಸ್ವಲ್ಪ ನೆರವಿರುವುದರಿಂದ ಅವರು ವರ್ಷಕ್ಕೊಮ್ಮೆ ಸಾರ್ವಜನಿಕರಿಂದ ಕೊಡುಗೆ ಕೇಳುತ್ತಾರೆ. ನಮ್ಮ ಕೊಡುಗೆ ಸಣ್ಣದಾದರೂ ದೊಡ್ಡದಾದರೂ ನಗುನಗುತ್ತಾ ಸೀ ಯು ಆನ್ ದ ಬೀಚ್, ಹ್ಯಾವ್ ಆ ಗುಡ್ ಡೇ, ಎನ್ನುತ್ತಾರೆ.

ಇದು ಕಡುಬೇಸಿಗೆಯ ಕಾಲ. ಎಲ್ಲೆಡೆ ಬೇಸಿಗೆಯ ರಜೆಯಲಿ ಮಜಾ ಮಾಡುವ ಜನರು. ಹಾಗೇ ಸುಮ್ಮನೆ ಯೋಚಿಸಿದರೆ ಈ ದೇಶದ ಹೊರಾಂಗಣ ಪ್ರಾಕೃತ್ರಿಕ ಸೌಂದರ್ಯದ ಜೊತೆಗೇ ಸಾಮಾನ್ಯ ಜನರಿಗೆಂದು ಸರಕಾರ ಕಲ್ಪಿಸುವ ಸೌಲಭ್ಯಗಳೂ ಕೂಡ ಬಹಳ ಚೆನ್ನಿವೆ ಅನಿಸುತ್ತದೆ. ಜನಜಂಗುಳಿಯಿಲ್ಲದ ಪರಿಶುದ್ಧ ಕಡಲಕಿನಾರೆಗಳು, ಭಾರವೇ ಇಲ್ಲದೆ ಮೈಮನಸ್ಸಿಗೆ ಬಲು ಮುದ ಕೊಡುವ ಹಗುರವಾದ ಸಮುದ್ರದ ನೀರು, ಸಮುದ್ರಕ್ಕೆ ಅಂಟಿಕೊಂಡಿರುವ ಪುಟ್ಟಪುಟ್ಟ ಊರುಗಳು… ನಗರದ ವಾಹನ ವಾಸನೆಯಿಂದ ದೂರವಾಗೋಣ ಅಂದರೆ ಹೊರವಲಯಗಳ ಎಲ್ಲಾ ದಿಕ್ಕಿನಲ್ಲೂ ತೊರೆಗಳು, ಪೊದೆಕಾಡುಗಳು, ಕೆರೆಗಳು, ನಿಸರ್ಗಧಾಮಗಳು… ನಡಿಗೆ ಇಷ್ಟವಾಗುವವರಿಗೆ ಬೇಕಾದಂತೆ ಇರುವ ಗುರುತುಮಾಡಿರುವ ನಡಿಗೆ ದಾರಿಗಳು, ದೊಡ್ಡದೊಡ್ಡ ಪಾರ್ಕುಗಳು, ಮಕ್ಕಳ ಆಟದ ತಾಣಗಳು, ಸಾರ್ವಜನಿಕ ಈಜುಕೊಳಗಳು… ಏನೆಲ್ಲಾ ಇವೆ. ಅನೇಕ ನೀರಿನ ಪ್ರದೇಶಗಳಲ್ಲಿ ನಮ್ಮಿಷ್ಟದಂತೆ ಕಯಾಕ್, ಕಿರುದೋಣಿ, ನಿಂತು ಹಾಯಿ ಹಾಕುವ ಬೋರ್ಡ್, ಎಲ್ಲವನ್ನೂ ಬಳಸಬಹುದು. ಪಾರ್ಕುಗಳಲ್ಲಿ ಪುಕ್ಕಟೆಯಾಗಿ ಇರುವ ಗ್ಯಾಸ್ ಅಥವಾ ವಿದ್ಯುಚ್ಛಕ್ತಿ ಒಲೆ ಅಥವಾ ಕಟ್ಟಿಗೆ ತುಂಡು ಬಳಸುವ ಒಲೆಗಳನ್ನ ನಾವು ಉಪಯೋಗಿಸಿಕೊಂಡು ಅಡುಗೆ ಮಾಡಬಹುದು. ಬಹುತೇಕ ಜನರು BBQ ಮಾಡುತ್ತಾರೆ. ಇವೆಲ್ಲವೂ ಪ್ರತಿ ವಾರಾಂತ್ಯದ ಮತ್ತು ಎಲ್ಲ ರಜೆಗಳಲ್ಲೂ ನಡೆಯುವ ಚಟುವಟಿಕೆಗಳು.

ಬ್ರಿಸ್ಬನ್ ನಗರದ ಕಣ್ಮನ ಸೆಳೆಯುವ ಕುಟುಂಬ-ಸ್ನೇಹಿ ಸ್ಥಳ ಸೌಥ್ ಬ್ಯಾಂಕ್ (South Bank). ಈ ಹೊರಾಂಗಣ ಮನರಂಜನೆಯ ಸಂಕೀರ್ಣದಲ್ಲಿ ಈಜುಕೊಳಗಳಿವೆ, ನೀರಿನ ಚಿಲುಮೆ, ಬುಗ್ಗೆಗಳು, ದೊಡ್ಡವರು ಮತ್ತು ಮಕ್ಕಳು ನೆಮ್ಮದಿಯಾಗಿ ಓಡಾಡುವ ಸ್ಥಳಗಳು, ದೊಡ್ಡ ಮರಗಳು, ಹುಲ್ಲುಹಾಸು, ತರಕಾರಿ ಮತ್ತು ಹೂ ಬೆಳೆಯುವ ಜಾಗಗಳು, ಸಂಗೀತ, ನೃತ್ಯ, ನಾಟಕಗಳನ್ನು ನಡೆಸುವ ಚಿಕ್ಕದೊಂದು ರಂಗ ಮಂಟಪ, ಬ್ರಿಸ್ಬನ್ ‘eye’, ಪಕ್ಕದಲ್ಲೇ ಬ್ರಿಸ್ಬನ್ ನದಿ, ನದಿಯಲ್ಲಿ ಓಡಾಡಲು ದೋಣಿ, ಫೆರ್ರಿ – ಎಲ್ಲಾ ಬಗೆಯ ಅನುಕೂಲಗಳಿರುವುದರಿಂದ ಸೌಥ್ ಬ್ಯಾಂಕ್ ಸಂಕೀರ್ಣ ಎಲ್ಲರೂ ಎಡತಾಕುವ ನಗರದ ಅತ್ಯಂತ ಹೆಸರುವಾಸಿ ಸ್ಥಳ. ನಮ್ಮ ಸ್ನೇಹಿತರೊಬ್ಬರು ಅದರ ಬಗ್ಗೆ ಮಾತನಾಡುತ್ತಾ ಅಂತಹ ಒಂದು ಪುಕ್ಕಟೆ ಹೊರಾಂಗಣ ಮನರಂಜನಾ ಸಂಕೀರ್ಣವಿರುವುದರಿಂದ ನೂರಾರು ಕುಟುಂಬಗಳಿಗೆ ಅದೆಷ್ಟು ಸಹಾಯವಾಗಿದೆ ಎಂದರು. ಸರಕಾರ ಒದಗಿಸುವ ಇಂತಹ ಸಾರ್ವಜನಿಕ ಸೌಲಭ್ಯದಿಂದ ಮಧ್ಯಮ ಮತ್ತು ಕೆಳ ಆರ್ಥಿಕ ವರ್ಗದ ಜನರಿಗೆ ತುಂಬಾ ಅನುಕೂಲವಾಗಿದೆ.

ದಶಕದ ಹಿಂದೆ ಸಮುದ್ರಕ್ಕೆ, ಪಾರ್ಕುಗಳಿಗೆ, ಹೋದಾಗಲೆಲ್ಲಾ ನನ್ನಂತೆ ಕರಿಕಂದು ಚರ್ಮದ ಜನ ಕಂಡರೆ ಸಾಕು ಉತ್ಸಾಹ ಗರಿಗೆದರುತ್ತಿತ್ತು. ನಂತರ ಮನಸ್ಸು ಚಿಂತೆಗೊಳಗಾಗುತ್ತಿತ್ತು. ಬಿಳಿಯರಲ್ಲದ ಇತರರು ಅಷ್ಟಾಗಿ ಕಾಣದಿದ್ದದ್ದು ಇನ್ನಷ್ಟು ಎತ್ತಿಕಾಣುತ್ತಿತ್ತು. ಯಾಕೆಂದು ಪ್ರಶ್ನೆ ಮೂಡುತ್ತಿತ್ತು. ನೇರ ಕಾರಣವೆಂದರೆ ಪಾಳೆಗಾರಿಕೆಯಿಂದ ದೇಶವನ್ನು ಆಕ್ರಮಿಸಿಕೊಂಡು ಆಸ್ಟ್ರೇಲಿಯಾವನ್ನು ಬಿಳಿಯರ ಪಾಶ್ಚಿಮಾತ್ಯ ಸಮಾಜವನ್ನಾಗಿ ಪರಿವರ್ತಿಸಿದ್ದು. ಬ್ರಿಟನ್ ಮತ್ತು ಯೂರೋಪಿನ ಮೂಲದ ಜನರಿಗೆ ಕಡಲು ಮತ್ತು ಬಿಸಿಲು ಎಂದರೆ ‘ಅದಪ್ಪಾ ಜೀವನ ಅಂದ್ರೆ’ ಅನ್ನೋವಷ್ಟು ಮೋಹ. ಹಾಗಾಗಿ ಹೊರಾಂಗಣ ಚಟುವಟಿಕೆಗಳಲ್ಲಿ ಅವರದ್ದೇ ಎತ್ತಿದ ಕೈ. ಎಲ್ಲೆಲ್ಲೂ ಅವರದ್ದೇ ಮುಖ. ಬಿಳಿಯರಲ್ಲದ ಇತರರಲ್ಲಿ ಇರುವ ನಮ್ಮನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನ ಮತ್ತೊಂದು ಕಾರಣವೇನೋ ಅಂತಲೂ ಅನ್ನಿಸುತ್ತಿತ್ತು.

ಉದಾಹರಣೆಗೆ, ಭಾರತೀಯರಿಗೆ ಹಬ್ಬಹರಿದಿನಗಳಂದು ಮನೆಮನೆಗಳಲ್ಲಿ ಎಲ್ಲರೂ ಸೇರಿ ಸಂಭ್ರಮಿಸುವುದು ಇಷ್ಟ. ಕೆಲ ಸಂಸ್ಕೃತಿಗಳಲ್ಲಿ ಗಂಡಸರು ಮತ್ತು ಮಕ್ಕಳು ಮಾತ್ರ ನೀರಿಗೆ ಇಳಿಯುತ್ತಾರೆ. ಇದೆಲ್ಲಾ ಸರಿ, ಇದೇ ದೇಶದ ಅಬರಿಜಿನಿಗಳು ಮತ್ತು ದ್ವೀಪಗಳ ಜನರು ಯಾಕೆ ಅಷ್ಟೊಂದು ಸಾರ್ವಜನಿಕ ಹೊರಾಂಗಣ ಸ್ಥಳಗಳಲ್ಲಿ ಕಾಣಿಸುವುದಿಲ್ಲ ಅನ್ನಿಸಿತ್ತು. ನಮ್ಮ ಭಾರತೀಯರ ಹಾಗೆ ಅವರೂ ಕೂಡ ಸಮುದಾಯ ಜೀವನವನ್ನು ಇಷ್ಟಪಡುತ್ತಾರಲ್ಲವೇ ಎಂದುಕೊಂಡು ಸುಮ್ಮನಾಗಿದ್ದೆ.

ಆದರೆ ವರ್ಷಗಳ ನಂತರ, ಬ್ರಿಸ್ಬನ್ ನಗರಕ್ಕೆ ಬಂದು ಸಾಕಷ್ಟು ರೇಸಿಸಮ್ ಅನುಭವಗಳಾದ ಮೇಲೆ ಈ ದೇಶದ ಮೂಲನಿವಾಸಿಗಳು ಯಾಕೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲೂ ಕಂಡುಬರುವುದಿಲ್ಲ ಅನ್ನುವುದು ತಿಳಿಯಿತು. ಅಬರಿಜಿನಿ ಸಹೋದ್ಯೋಗಿಗಳು ಅದನ್ನು ಬಿಡಿಸಿ ಹೇಳಿ ಅರ್ಥಮಾಡಿಸಿದರು, ಎನ್ನಬೇಕು.

ಆಂಗ್ಲರು ಈ ದೇಶವನ್ನು ಆಕ್ರಮಿಸಿ ನೆಲೆಯೂರುವ ಶತಮಾನಗಳಲ್ಲಿ, ದಶಕಗಳಲ್ಲಿ ಅಬರಿಜಿನಿ ಜನರನ್ನು ಎಷ್ಟು ದೂರವಿಡಲು ಸಾಧ್ಯವೋ ಅಷ್ಟು ದೂರ ಹೊರದೂಡಿದ್ದರಂತೆ. ಒಂದೊಮ್ಮೆ ಅವರದ್ದೇ ಆಗಿದ್ದ ಮನೆ, ಹೊಲ, ನೆಲೆ, ನೀರು, ಭೂಮಿಗಳನ್ನು ಅವರಿಂದ ಕಿತ್ತುಕೊಂಡಿದ್ದೂ ಅಲ್ಲದೇ ಬಿಳಿ Settlers ಜನ ಇರುವ ಕಡೆ ಅಬರಿಜಿನಿ ಜನರು ಬಂದರೆ ಅವರನ್ನು ತೀವ್ರವಾಗಿ ಶಿಕ್ಷಿಸುತ್ತಿದ್ದರಂತೆ. ಹಾಗಾಗಿ ಕ್ರಮೇಣ ಸಾರ್ವಜನಿಕ ಸ್ಥಳಗಳಲ್ಲಿ ಅಬರಿಜಿನಿ ಜನರು ಕಾಣಿಸಿಕೊಳ್ಳುವುದು ನಿಂತೇಹೋಯಿತು. ಈಗಲೂ ಕೂಡ ಒಬ್ಬಂಟಿಯಾಗಿ ಒಬ್ಬ ಅಬರಿಜಿನಿ ಯುವಕ ಮನೆಯಿಂದಾಚೆ ಇದ್ದಾನೆಂದರೆ ಅವನ ಕುಟುಂಬದಲ್ಲಿ ಆತಂಕ, ಭಯ ಇದ್ದೇ ಇರುತ್ತದೆ ಅನ್ನುತ್ತಾರೆ. ಅಬರಿಜಿನಿ ಯುವಕರ ಮೇಲೆ ಪೊಲೀಸರ ಕಣ್ಣು ಜಾಸ್ತಿ ಎನ್ನುತ್ತಾರೆ. ಗಮನ ಕೊಟ್ಟು ನೋಡಿದರೆ ಪಾರ್ಕುಗಳಲ್ಲಿ, ನೀರಿರುವ ಮನರಂಜನಾ ಸ್ಥಳಗಳಲ್ಲಿ, ಸೌಥ್ ಬ್ಯಾಂಕ್ ನಲ್ಲಿ ಅವರುಗಳು ಚಿಕ್ಕ ಗುಂಪುಗಳಲ್ಲಿ ಕಾಣಿಸುತ್ತಾರೆ. ಇಲ್ಲವೆಂದರೆ, ಅವರ ಜನ ಸಂಖ್ಯೆ ಹೆಚ್ಚಿರುವ ನಗರದ ಕೆಲವೇ ಕೆಲವು ಬಡಾವಣೆಗಳಲ್ಲಿ ಓಡಾಡುತ್ತಾರೆ. ಈ ಕತೆಗಳನ್ನು ಕೇಳಿದರೆ ಖಂಡಿತವಾಗಲೂ ವಿಚಿತ್ರವೆನಿಸುತ್ತದೆ. ಆದರೆ ನನ್ನದೇ ಅನುಭವಗಳನ್ನು ಮೆಲುಕು ಹಾಕಿದರೆ ಅದೆಷ್ಟು ಸತ್ಯ ಎನ್ನುವುದು ಮನದಾಳಕ್ಕಿಳಿದು ಬೆನ್ನು ಹುರಿಯಲ್ಲಿ ಚಳಿ ಹುಟ್ಟುತ್ತದೆ.


ನಮ್ಮ ಪಾಡಿಗೆ ನಾವಿದ್ದರೂ ಬೇರೆಯವರು ನಮ್ಮನ್ನ ಅದೇನೋ ಅನುಮಾನದಿಂದ, ಅಪನಂಬಿಕೆಯಿಂದ ನೋಡಿದರೆ ಅದೆಷ್ಟು ಮುಜುಗರವಾಗುತ್ತದೆ. ಅಂತಹ ಮುಜುಗರವನ್ನು ಪದೇ ಪದೇ ಅನುಭವಿಸುತ್ತಿದ್ದರೆ ಹೇಗನ್ನಿಸಬಹುದು?! ಫ್ರೆಂಚರು, ಡಚ್ಚರು, ಇಂಗ್ಲಿಷರ ಆಳ್ವಿಕೆಯಲ್ಲಿ ನಲುಗಿದ್ದ ೧೯೪೭ ರ ಮುನ್ನಿನ ನಮ್ಮ ಭಾರತ ದೇಶದ ಕತೆಗಳು ಹೀಗೆಯೇ ಇದ್ದವೇನೋ ಎನ್ನಿಸುತ್ತದೆ.

ಇಷ್ಟೆಲ್ಲಾ ಅಲ್ಲದೆ ನನ್ನ ಅಬರಿಜಿನಿ ಸ್ನೇಹಿತರು ಇನ್ನೊಂದಷ್ಟನ್ನ ಮನದಟ್ಟು ಮಾಡಿಸಿದ್ದರು. ಬೆಟ್ಟಗಳು, ಸಮುದ್ರಗಳು, ನೀರಿನ ಕೊಳ, ಕೆರೆ, ಕಾಡುಗಳು, ಒಟ್ಟಾರೆ ಪ್ರಕೃತಿ ಎಂದರೆ ಅವರಿಗೆ ‘ಮನರಂಜನೆ’ ಅಂತ ಅನ್ನಿಸುವುದಿಲ್ಲವಂತೆ. ವಾರಾಂತ್ಯ ಬಂತು ಎಂದರೆ ಸಮುದ್ರಕ್ಕೆ ಹೋಗಿ ಆನಂದಿಸಬೇಕು ಅಥವಾ ಪ್ರತಿದಿನವೂ ನಡಿಗೆ ಅಥವಾ ಓಡುವುದು ಎಂಬ ಚಟುವಟಿಕೆಗಳ ಬಗ್ಗೆ ಆಸಕ್ತಿ ಹುಟ್ಟುವುದಿಲ್ಲವಂತೆ. ಅದೆಷ್ಟೋ ಸಾವಿರಾರು ವರ್ಷಗಳ ಕಾಲ ಅವರ ಹಿರೀಕರು, ಸಮುದಾಯದ ಜನರು, ಮಕ್ಕಳು ಮರಿಗಳು ಎಲ್ಲರೂ ಗುಂಪಿನಲ್ಲಿ ಒಟ್ಟಾಗಿ ಬಾಳಿದ್ದರು. ಪ್ರಕೃತಿಯ ಬಗ್ಗೆ ಅಗಾಧ ಪವಿತ್ರತೆ, ಕೂತೂಹಲ, ಗೌರವವಿತ್ತಂತೆ. ಮನುಷ್ಯರು ಈ ದೊಡ್ಡ ವಿಶ್ವದಲ್ಲಿ ಗುಲಗಂಜಿಯಂತೆ ಮಾತ್ರ, ಅನ್ನುವುದು ಅವರ ಡ್ರೀಮ್ ಟೈಂ ಸ್ಟೋರೀಸ್ (Dreamtime Stories) ಗಳಲ್ಲಿ, ಮೌಖಿಕ ಸಂಸ್ಕೃತಿಯಲ್ಲಿ, ಹಾಡುಗಳಲ್ಲಿ ಇವೆ. ಪ್ರಕೃತಿಯಲ್ಲಿ ಒಂದು ಭಾಗವಾಗಿ ಬದುಕುತ್ತಿದ್ದ ಜನರು ಅವರು. ಹಾಗಾಗಿ ತಮ್ಮ ಪ್ರಕೃತಿಯನ್ನು ಮತ್ತು ತಮ್ಮನ್ನು ಬೇರ್ಪಡಿಸಿ ನೋಡಿ, ಪ್ರಕೃತಿಯನ್ನು ‘ಬಳಸಿಕೊಳ್ಳುವ’ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲಿಲ್ಲ.

ಸಮುದ್ರವೆಂದರೆ, ಕಾಡೆಂದರೆ, ಬೆಟ್ಟವೆಂದರೆ ಅವರಿಗೆ ಅದು ಮನರಂಜನೆಯ ಮೂಲ ಎನ್ನಿಸುವುದಿಲ್ಲವಂತೆ. ನಿಜವೇ! ಮೌಂಟ್ ಎವರೆಸ್ಟ್ (Mount Everes)t ಎಂಬ ಪರ್ವತವನ್ನು ನಾ ಮುಂದು ತಾ ಮುಂದು ಎನ್ನುತ್ತಾ ಹತ್ತಿ ಜಯಕಹಳೆಯನ್ನು ಮೊಳಗಿಸುವ ಪಂದ್ಯದಲ್ಲಿ ಅದೆಷ್ಟು ಬಿಳಿಯರ ದೇಶಗಳಿದ್ದವು, ಅದೇನೆಲ್ಲಾ ಕಸರತ್ತುಗಳನ್ನು ಮಾಡಿದ್ದರು!!

ಅದೇನೇ ಇರಲಿ, ಬಿಳಿಯರಂತೆ ಹೊರಗಿನಿಂದ ಬಂದು ಇಲ್ಲಿ ನೆಲೆಸಿರುವ ಎಲ್ಲರಿಗೂ ಈ ದೇಶದ ಸೌಂದರ್ಯ ಯಾವಾಗಲೂ ಆಕರ್ಷಕವೇ!! ಕಾಲ ಹೋದಂತೆ, ಪರಿಸ್ಥಿತಿ ಸುಧಾರಿಸಿದರೆ, ಈಗಾಗಲೇ ಸಡಿಲವಾಗಿರುವ ಬೇರುಗಳನ್ನು ಕಳಚುತ್ತಾ ಬಹುಶಃ ಅಬರಿಜಿನಿ ಕಿರಿಯರು, ಅವರ ಮುಂದಿನ ಪೀಳಿಗೆಗಳು ಕೂಡ ಅವರದೇ ದೇಶದ ಸೌಂದರ್ಯವನ್ನು ಬೇರೆ ದೃಷ್ಟಿಕೋನದಿಂದ ನೋಡಬಹುದೇನೋ.