ಹಿತ್ತಲ ಗಿಡ
ತನ್ನದೇ ತಂಗಿಯೋ ಸಂಗ್ತಿಯೋ
ಆಚೆಮನೆಯ ತುಂಗೆಯೋ
ತಣ್ಣೀರು ಪಳಚಿ
ಗೋಮಯ ಹಚ್ಚಿ
ಹೊಕ್ಕಿರಲಿ ರಂಗೋಲೆ ಹುಂಡೊಳಗೇ
ಎಂಬುವರು..
ಅವಳ್ಯಾರೋ
ಆಕಾಶಯಾನ ಮಾಡಿದರೆ
ಗೆದ್ದರೆ ಸಿನೆಮತಾರೆ
ಅಬ್ಬ! ಶಹಭ್ಭಾಷ್ ತಟ್ಟುವರೆ!!
ಮದ್ದಲ್ಲ ಹಿತ್ತಲಗಿಡ
ಹೀಗೇ ಇನ್ನೆಷ್ಟು ದಿನ?
ಹೊತ್ತುಹೊತ್ತಿಗೆ ಶಿದ್ದಕ್ಕಿ ಬೇಯಬೇಕಿದೆ ನಿಮಗೆ
ವಗ್ಗರಣೆ ಘಾಟು
ಫಳಫಳನೆ ತಾಟು
ಮೂಗುತಿಯ ಮಿನುಗು ದಣಪೆಯೊಳಗಷ್ಟೇ…
ಕಚ್ಚುವುದೆ ಉರಿಸೊಣಗೆ
ನಿಮ್ಮಂತರಂಗಕ್ಕೆ
ಹಾಡಿದರೆ ನಿಮ್ಮವಳೆ
ಅವಳೆ ಕನಸಿದ ಸೊಲ್ಲು?
ಇಲ್ಲಿಲ್ಲ.. ಕೆಳಗಿರಲೇಬೇಕು
ಒಂದಾದರೂ ಮೆಟ್ಟಿಲು!!
ಹರಿದುಹೋಗಲಿ ಇನ್ನು
ಹಾವಸೆಯ ನೀರೆಲ್ಲ;
ಜಣಕುಗಟ್ಟಿದ ಮಂಡೆ
ನುಣುಪಾಗಲಿ..
ರೊಟ್ಟಿ ತಟ್ಟುವ ಕೈಯ್ಯೂ
ಸಟ್ಟುಗದ ತುದಿಯಿಂದ
ಸಾಧನೆಯ ಗೆರೆಗಳನು ಕೊರೆಯುತಿರಲಿ…
ಚಂದ ಪದ್ಯ