ಸಮಂತಾ ಬೆಳೆಯುತ್ತಾ ‘ಹನಿ’ ಎನ್ನುವ ಹೆಂಗಸಿನೊಡನೆ ಸಲಿಂಗ ಸಂಬಂಧದಲ್ಲಿ ಜೊತೆಯಾಗುತ್ತಾಳೆ. ತನ್ನ ಪ್ರಿಯತಮೆ ಹನಿಯ ಕಲೆಗಳನ್ನು ಹೋಗಲಾಡಿಸಲು ಪ್ಲಾಸ್ಟಿಕ್ ಸರ್ಜರಿಗೆಂದು ಮಲೀಕನ ಹತ್ತಿರ ಬರುತ್ತಾಳೆ. ಮಲೀಕ ಹನಿಗೆ ಪ್ಲಾಸ್ಟಿಕ್ ಸರ್ಜರಿ ಮಾಡುವಾಗ, ತಕ್ಕ ಮಟ್ಟಿಗೆ ಧಡೂತಿ ತೂಕದ ಸಮಂತಾಳಿಗೂ ಪ್ಲಾಸ್ಟಿಕ್ ಸರ್ಜರಿಗೆ ಪ್ರಚೋದಿಸಿ ಒಪ್ಪಿಸುತ್ತಾನೆ; ಸಮಂತಾಳಿಗೆ ಮೇಲಿನಿಂದ ಕೆಳಗಿನವರೆಗೂ ಕಾಸ್ಮೆಟಿಕ್ ಸರ್ಜರಿ ಮಾಡುತ್ತಾನೆ. ಸಮಂತಾಳ ಪ್ಲಾಸ್ಟಿಕ್ ಸರ್ಜರಿಯ ಹೊತ್ತಿಗೆ ಮಲೀಕ ಮತ್ತು ಸಮಂತಾ ಇಬ್ಬರೂ ಜೊತೆಗಿದ್ದು ಮದುವೆಯಾಗುತ್ತಾರೆ.
‘ಇಂಗ್ಲೆಂಡ್‌ ಪತ್ರ’ ಅಂಕಣದಲ್ಲಿ ಕೇಶವ ಕುಲಕರ್ಣಿ ಬರಹ

 

ಗುರುಪ್ರಸಾದ್ ಕಾಗಿನೆಲೆಯವರು ಇತ್ತೀಚೆಗೆ ಬರೆದ ಕಾದಂಬರಿ, ‘ಕಾಯಾ’ (ಕಳೆದ ಸಲದ ಅಂಕಣದಲ್ಲಿ ಅವರ ‘ಲೋಲ’ ಕಥಾಸಂಕಲನದ ಬಗ್ಗೆ ಬರೆದಿದ್ದೆ; ಈ ಸಲದ ಅಂಕಣ ಅದರ ಮುಂದುವರಿದ ಭಾಗ ಎಂದುಕೊಂಡರೂ ಆಗಬಹುದು). ಗುರು ಅವರ ಇದರ ಮೊದಲು ಬರೆದ ‘ಹಿಜಾಬ್’ ಕಾದಂಬರಿಯು ಇಂಗ್ಲೀಷಿಗೆ ಅನುವಾದವಾಗಿ ಬೇರೆ ಭಾಷಿಗರಲ್ಲೂ ಕುತೂಹಲ ಕೆರಳಿಸಿದೆ.

‘ಕಾಯಾ’ ಇಲ್ಲಿಯವರೆಗೂ ಗುರು ಅವರು ಬರೆದಿರುವ ಅತ್ಯಂತ ಸಂಕೀರ್ಣ ಮತ್ತು ಮಹತ್ವಾಕಾಂಕ್ಷೆಯ ಕೃತಿ. ಅವರ ಬೇರೆಲ್ಲ ಕಾದಂಬರಿಗಳಂತೆ ಇದೂ ಅಮೇರಿಕದಲ್ಲಿ ನಡೆಯುತ್ತದೆ ಮತ್ತು ವೈದ್ಯಕೀಯ ಕ್ಷೇತ್ರದ ಸುತ್ತಮುತ್ತ ಜರುಗುತ್ತದೆ. ‘ಕಾಯಾ’ ಕನ್ನಡದ ಮಟ್ಟಿಗೆ ಅನನ್ಯವಾದ ಕಾದಂಬರಿ. ಪಾಶ್ಚಾತ್ಯ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರಿಗಂತೂ ಈ ಕಾದಂಬರಿಯ ಕತೆಯು ಕಣ್ಣಮುಂದೆ ಪ್ರಚಲಿತ ಕಾಲದಲ್ಲಿ ನಡೆದಂತೆ ಕಾಣಿಸುತ್ತದೆ. ಕತೆಯ ವಸ್ತು, ಹಂದರ, ಆಳ ಮತ್ತು ಅಗಲ ತುಂಬ ಮಹತ್ವಾಕಾಂಕ್ಷೆಯುಳ್ಳದ್ದಾಗಿದೆ.

(ಗುರುಪ್ರಸಾದ್ ಕಾಗಿನೆಲೆ)

ಕತೆಯ ಹಂದರ:

ಇದು ಅಮೇರಿಕದಲ್ಲಿ ನೆಲೆಸಿರುವ ‘ಕನ್ನಡಿಗರ’ ಕಥೆ. ಕಾದಂಬರಿಯು ಅಮೇರಿಕಾದಲ್ಲಿ ಆರಂಭವಾಗಿ ಅಮೇರಿಕಾದಲ್ಲೇ ಮುಗಿಯುತ್ತದೆ (ಒಂದೇ ಒಂದು ಸಲವೂ ಯಾವ ಪಾತ್ರಗಳೂ ಭಾರತಕ್ಕೆ ‘ರಜೆ’ಗೆ ಕೂಡ ಬರುವುದಿಲ್ಲ ಅಥವಾ ಅದರ ಪ್ರಸ್ತಾಪದ ಅವಶ್ಯಕತೆ ಬರುವುದಿಲ್ಲ). ಈ ಕಥಾನಕದಲ್ಲಿ ಮೂರು ಮುಖ್ಯ ಪಾತ್ರಗಳಿವೆ ಮತ್ತು ಈ ಮೂರು ಮುಖ್ಯ ಪಾತ್ರಗಳ ಮುಖೇನ ಕತೆಯನ್ನು ಹೇಳುತ್ತಾ ಸಾಗುತ್ತಾರೆ.

ಮಲಿಕ್, ಅಮೇರಿಕಾ ನ್ಯೂಯಾರ್ಕ್ ನಗರದ ಪ್ರತಿಷ್ಠಿತ ಕಾಸ್ಮೆಟಿಕ್ ಸರ್ಜನ್; ಅವನ ಮೂಲ/ನಿಜವಾದ ಹೆಸರು ’ಭೀಮಸೇನರಾವ ಜಯತೀರ್ಥಚಾರ್ಯ ಮಲಖೇಡ’. ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಕರ್ನಾಟಕದಲ್ಲಿ ಎಂ.ಬಿ.ಬಿ.ಎಸ್. ಓದಿದ ಮೇಲೆ ಅಮೇರಿಕಾಕ್ಕೆ ಬಂದು, ಪ್ಲಾಸ್ಟಿಕ್ ಸರ್ಜರಿಯಲ್ಲಿ ಪರಿಣಿತಿಯನ್ನು ಪಡೆದು, ಕೋಟ್ಯಧಿಪತಿಯಾಗಿರುವ ಸೌಂದರ್ಯವರ್ಧಕ ವೈದ್ಯನೀತ. ಅವನ ಮೊದಲ ಹೆಂಡತಿ, ಕರ್ನಾಟಕದಿಂದ ಬಂದ ಕನ್ನಡದ ಹುಡುಗಿ, ‘ಪರಿ’. ಅವಳ ಮೇಲೆ ಸಾಕಷ್ಟು ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡಿ ಅವಳನ್ನು ಇನ್ನೂ ಸುಂದರವಾಗಿಸಿದ್ದಾನೆ. ಅವಳಿಗೆ ವಿಚ್ಛೇದನವನ್ನು ಕೊಟ್ಟಾದ ಮೇಲೆ, ಅಮೇರಿಕಾದಲ್ಲೇ ಹುಟ್ಟಿ ಬೆಳೆದ ಕನ್ನಡತಿಯ ಮಗಳು ‘ಸಮಂತಾ’ಳನ್ನು ಮದುವೆಯಾಗಿ, ಅವಳಿಗೂ ವಿಚ್ಛೇದನ ಕೊಡುವ ಹಂತಕ್ಕೆ ಬಂದಿದ್ದಾನೆ. ಈ ಹಂತದಲ್ಲಿ ಕಾದಂಬರಿ ಆರಂಭವಾಗುತ್ತದೆ.

ಮಲೀಕನ ಎರಡನೇ ಹೆಂಡತಿಯಾದ ಸಮಂತಾಳ ತಾಯಿ, ಕಸ್ತೂರಿ. ಕಸ್ತೂರಿಯು ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಕನ್ನಡತಿ. ಹರೆಯ ಇನ್ನೂ ಅರಿವಾಗುವ ಮೊದಲೇ, ಅಮೇರಿಕಾದಲ್ಲಿ ಹುಟ್ಟಿ ಬೆಳೆದ ಎರಡನೇ ಪೀಳಿಗೆಯ ಕನ್ನಡದ ಹುಡುಗನೊಡನೆ ಮದುವೆಯಾದ ನಿಮಿತ್ತ ಅಮೇರಿಕಾಕ್ಕೆ ಬಂದಿಳಿಯುತ್ತಾಳೆ. ಗಂಡ ಬಿಟ್ಟು ಹೋಗುತ್ತಾನೆ; ಗಂಡ ಬಿಟ್ಟ ಮೇಲೆ ಇಟಾಲಿಯವನ್‌ನೊಡನೆ ಇರುತ್ತಾಳೆ. ಆತ ‘ಏಡ್ಸ್’ ಬಂದು ಸಾಯುತ್ತಾನೆ. ಸಾಯುವ ಮೊದಲು ಕಸ್ತೂರಿಯನ್ನು ಗರ್ಭಿಣಿಯನ್ನಾಗಿ ಮಾಡಿದುದಲ್ಲದೆ ‘ಎಚ್.ಐ.ವಿ’ (ಏಡ್ಸ್ ಕಾಯಿಲೆ ತರುವ ವೈರಾಣು)ಯನ್ನು ದಯಪಾಲಿಸಿ ಸಾಯುತ್ತಾನೆ. ಮಗಳು ‘ಸಮಂತಾ’ ಮತ್ತು ‘ಎಚ್ ಐ ವಿ – ಪೊಸಿಟಿವ್’ಗಳೊಡನೆ ಹೆಣಗುತ್ತಾ ಕಸ್ತೂರಿ ತನ್ನ ಪರಿಶ್ರಮದಿಂದ ನ್ಯೂಯಾರ್ಕ್ ನಗರದಲ್ಲಿ ಪ್ರತಿಷ್ಠಿತ ‘ಅನಿವಾಸಿ ಭಾರತೀಯ’ಳಾಗುತ್ತಾಳೆ.

ಸಮಂತಾ ಬೆಳೆಯುತ್ತಾ ‘ಹನಿ’ ಎನ್ನುವ ಹೆಂಗಸಿನೊಡನೆ ಸಲಿಂಗ ಸಂಬಂಧದಲ್ಲಿ ಜೊತೆಯಾಗುತ್ತಾಳೆ. ತನ್ನ ಪ್ರಿಯತಮೆ ಹನಿಯ ಕಲೆಗಳನ್ನು ಹೋಗಲಾಡಿಸಲು ಪ್ಲಾಸ್ಟಿಕ್ ಸರ್ಜರಿಗೆಂದು ಮಲೀಕನ ಹತ್ತಿರ ಬರುತ್ತಾಳೆ. ಮಲೀಕ ಹನಿಗೆ ಪ್ಲಾಸ್ಟಿಕ್ ಸರ್ಜರಿ ಮಾಡುವಾಗ, ತಕ್ಕ ಮಟ್ಟಿಗೆ ಧಡೂತಿ ತೂಕದ ಸಮಂತಾಳಿಗೂ ಪ್ಲಾಸ್ಟಿಕ್ ಸರ್ಜರಿಗೆ ಪ್ರಚೋದಿಸಿ ಒಪ್ಪಿಸುತ್ತಾನೆ; ಸಮಂತಾಳಿಗೆ ಮೇಲಿನಿಂದ ಕೆಳಗಿನವರೆಗೂ ಕಾಸ್ಮೆಟಿಕ್ ಸರ್ಜರಿ ಮಾಡುತ್ತಾನೆ. ಸಮಂತಾಳ ಪ್ಲಾಸ್ಟಿಕ್ ಸರ್ಜರಿಯ ಹೊತ್ತಿಗೆ ಮಲೀಕ ಮತ್ತು ಸಮಂತಾ ಇಬ್ಬರೂ ಜೊತೆಗಿದ್ದು ಮದುವೆಯಾಗುತ್ತಾರೆ.

ಇದೆಲ್ಲ ಹೀಗೆ ನಡೆದಿರುವಾಗ ಮಲೀಕನು ಸ್ತನದ ಪ್ಲಾಸ್ಟಿಕ್ ಸರ್ಜರಿ ಮಾಡಿದ ‘ಲೀಸಾ ಸಾಲಿಂಗರ್’ ಎನ್ನುವ ಮಹಿಳೆಗೆ ಸ್ತನದ ಪ್ಲಾಸ್ಟಿಕ್ ಸರ್ಜರಿ ಮಾಡಿರುತ್ತಾನೆ; ಆ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಲೀಸಾಳ ಮೊಲೆಗಳನ್ನು ‘ವೈದ್ಯನ ರೀತಿಯಲ್ಲಿ ಮುಟ್ಟಲಿಲ್ಲ’ ಎನ್ನುವ ಕಾರಣಕ್ಕೆ, ಲೀಸಾಳು ಮಲೀಕನ ಮೇಲೆ ಕೇಸು ಹಾಕುತ್ತಾಳೆ. ಆ ಕೇಸು ಏನು ಆಯಿತು, ಮಲೀಕ ಮತ್ತು ಸಮಂತಾ ವಿಚ್ಛೇದನ ಕೊಟ್ಟರೆ? ಮಲೀಕನ ಮೊದಲ ಹೆಂಡತಿ ಪರಿ ಏನಾದಳು? ಸಮಂತಾಳ ತಾಯಿ ಕಸ್ತೂರಿಗೆ ಏನಾಯಿತು/ ಸಮಂತಾಳ ಸಲಿಂಗಪ್ರೇಮಿ ಹನಿ ಏನಾದಳು? ಎನ್ನುವುದು ಕಾದಂಬರಿಯ ಕತೆ.

ಪಾಶ್ಚಾತ್ಯ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರಿಗಂತೂ ಈ ಕಾದಂಬರಿಯ ಕತೆಯು ಕಣ್ಣಮುಂದೆ ಪ್ರಚಲಿತ ಕಾಲದಲ್ಲಿ ನಡೆದಂತೆ ಕಾಣಿಸುತ್ತದೆ. ಕತೆಯ ವಸ್ತು, ಹಂದರ, ಆಳ ಮತ್ತು ಅಗಲ ತುಂಬ ಮಹತ್ವಾಕಾಂಕ್ಷೆಯುಳ್ಳದ್ದಾಗಿದೆ.

ದೇಹಸೌಂದರ್ಯ, ಲೈಂಗಿಕತೆ ಮತ್ತು ರೋಗ:

ಮಲೀಕ, ಕಸ್ತೂರಿ ಮತ್ತು ಸಮಂತಾ ಎನ್ನುವ ಮೂರು ಪಾತ್ರಗಳ ಮೂಲಕ, ಒಂದು ಓಟಿಟಿ ಸೀರಿಯಲ್ಲಿನಂತೆ ಓದಿಸಿಕೊಂಡು ಹೋಗುವ ‘ಕಾಯಾ’ ಕಾದಂಬರಿಯಲ್ಲಿ ಮೊದಲಿನಿಂದ ಕೊನೆಯವರೆಗೂ ‘ಕಾಯಾ’(ದೇಹ)ದ ಹತ್ತು ಹಲವು ಮಗ್ಗಲುಗಳನ್ನು ಲೇಖಕರು ಜಾಲಾಡಿಸುತ್ತ ಹೋಗುತ್ತಾರೆ. ಇದು ಇಲ್ಲಿಯವರೆಗೆ ಗುರು ಅವರು ಬರೆದಿರುವ ಅತ್ಯಂತ ಸಂಕೀರ್ಣ ಕೃತಿ ಮತ್ತು ಎರಡು ತಲೆಮಾರುಗಳನ್ನು ದಾಖಲಿಸುವ ಕಾಲಘಟ್ಟದ ಕತೆ. ಆಧುನಿಕ ಸಂಸ್ಕೃತಿಯಲ್ಲಿ (ಇದನ್ನು ಪಾಶ್ಚಾತ್ಯ ಸಂಸ್ಕೃತಿಯೆಂದೂ ಕರೆಯುವವರುಂಟು) ದೇಹವನ್ನು ಕೇಂದ್ರವನ್ನಾಗಿಟ್ಟುಕೊಂಡು ಕಾದಂಬರಿಯ ಆದಿಯಿಂದ ಅಂತ್ಯದವರೆಗೆ ‘ದೇಹ’ದ ಬಗ್ಗೆ ಆಳವಾದ ಚಿಂತನೆಗಳಿವೆ, ಪ್ರಶ್ನೆಗಳಿವೆ.

ಎಲ್ಲೂ ವ್ಯಾಚ್ಯವಾಗದೆ, ಉಪದೇಶ ಮಾಡದೇ, ಆದರೆ ಯಾವುದೋ ತುರಾತುರಿಯಲ್ಲಿ ಇರುವಂತೆ ಬರೆಯುತ್ತಾ ಹೋಗುತ್ತಾರೆ.

‘ಕಾಯಾ’ದಲ್ಲಿ ಕಾಯದ ಸೌಂದರ್ಯ, ಲೈಂಗಿಕತೆ ಮತ್ತು ಕಾಯಿಲೆ- ಎನ್ನುವ ಮೂರು ವಿಷಯಗಳ ತಾಕಲಾಟಗಳಿವೆ, ಸಂಘರ್ಷವಿದೆ, ಸುಖವಿದೆ, ದುಃಖವಿದೆ, ವಿಷಾದವಿದೆ, ಹಣವಿದೆ, ಶೂನ್ಯತೆಯಿದೆ.

1) ಸೌಂದರ್ಯ: ಕಾಯಕ್ಕೆ ಯಾವಾಗಲೂ ಸೌಂದರ್ಯದ್ದೇ ಚಿಂತೆ. ಅದಕ್ಕೆ ತಕ್ಕಂತೆ ಬೆಳೆದುನಿಂತ ಕಾಸ್ಮೆಟಿಕ್ ಚಿಕಿತ್ಸೆ. ಈ ಕಾಸ್ಮೆಟಿಕ್ ಚಿಕಿತ್ಸೆ ಎನ್ನುವುದು ದೇಹದ ಕಲೆಗಳನ್ನು ತೆಗೆದು ಸಹಜಸುಂದರವಾಗಿಸುವ ವೈಜ್ಞಾನಿಕತೆಯೇ, ಸುಂದರಿಯರನ್ನು ಅತಿಸುಂದರಿಯನ್ನಾಗಿಸುವ ಕೃತಕತೆಯೇ, ‘ಶಾಶ್ವತಸುಂದರಿ’ಯನ್ನಾಗಿಸುವ ಧಿಮಾಕೇ ಎನ್ನುವ ಪ್ರಶೆಗಳನ್ನು ಈ ಕಾದಂಬರಿಯಲ್ಲಿ ಎತ್ತುತ್ತಾರೆ.

2) ಲೈಂಗಿಕತೆ: ‘ಕಾಯ’ಕ್ಕೆ ಯಾವಾಗಲೂ ‘ಕಾಮ’ದ್ದೇ ಆಸೆ ಇರುವುದು ಸಹಜವೇ. ಸಲಿಂಗಕಾಮ, ತೆರೆದ ದಾಂಪತ್ಯದ ವಿವರಗಳೂ, ಅವು ತರುವ ಪ್ರಶ್ನೆಗಳೂ ಈ ಕಾದಂಬರಿಯಲ್ಲಿ ಪಾತ್ರಗಳ ಮೂಲಕ ಘಟಿಸಿ ಮಾತಾಡಿಸಿ ‘ಕಾಮ’ದ ಬಗ್ಗೆ ಆಧುನಿಕ ಕಾಲದ ಪ್ರಶ್ನೆಗಳನ್ನು ಎತ್ತಿದ್ದಾರೆ.

3) ಕಾಯಿಲೆ: ಕಾಯಕ್ಕೆ ಕಾಯಿಲೆ ಕಟ್ಟಿಟ್ಟ ಬುತ್ತಿ. ಎಚ್.ಐ.ವಿ. ಪಾಸಿಟಿವ್ ಇದ್ದವರಿಗೆಲ್ಲ ಏಡ್ಸ್ ಕಾಯಿಲೆ ಬರುವುದಿಲ್ಲ, ಆದರೆ ಎಚ್.ಐ.ವಿ. ಪೊಸಿಟಿವ್ ಬಂದರೆ ಸಮಾಜ ಆ ದೇಹವನ್ನು ಹೇಗೆ ನೋಡಿಕೊಳ್ಳುತ್ತದೆ, ಮತ್ತು ಎಚ್.ಐ.ವಿ. ಪಾಸಿಟಿವ್ ಇದ್ದವರ ಮಾನಸಿಕ ತುಮುಲಗಳೇನು ಎನ್ನುವುದನ್ನು ವಿವರಿಸುತ್ತ ಹೋಗುತ್ತಾರೆ.

ಕಾದಂಬರಿಯ ವೈಶಿಷ್ಟ್ಯಗಳು:

ಈ ಕಾದಂಬರಿಯಲ್ಲಿ ಪ್ರತಿ ಅಧ್ಯಾಯಕ್ಕೂ ಒಂದೊಂದು ಹೆಸರುಗಳನ್ನು ಕೊಟ್ಟಿದ್ದಾರೆ. ಕೆಲವು ಹೆಸರುಗಳಂತೂ ತುಂಬ ವಿಶೇಷವಾಗಿವೆ: ಉದಾಹರಣೆಗೆ, ಕುಚೋನ್ನತಿ, ಮೀಟೂ, ಸಖೀಗೀತ, ತುಂಬುತುಟಿ, ನನ್ನ ಬೆರಳ್ಮಡಿಸ್.

ಕಾದಂಬರಿಯು ಎರಡು ಪೀಳಿಗೆಯ ಕತೆಯಾಗಿರುವುದರಿಂದ ಸ್ವಲ್ಪ ಮಟ್ಟಿಗೆ ಐತಿಹಾಸಿಕ ದಾಖಲೆಯೂ ಆಗುತ್ತದೆ. ಹೆಂಗಸರ ಸೌಂದರ್ಯ ಸ್ಪರ್ಧೆಯನ್ನು ವಿರೋಧಿಸಿ ಅಮೇರಿಕದಲ್ಲಿ ಹೆಂಗಸರು ಚಳುವಳಿಯನ್ನು ಆರಂಭಿಸಿದಾಗ, “‘ಸುಮಿತ್ರಾ’ ಎಂಬ ಸ್ಟಿಕರಿದ್ದ ಮೈಸೂರಿನ ಶ್ರೀರಾಮಪೇಟೆಯ ಪ್ರೇಮಚಂದ್ ಜೈನ್ ಅಂಡ್ ಸನ್ಸ್ ನಲ್ಲಿ ಅಮ್ಮ ಕೊಡಿಸಿದ ಬ್ಯಾಕ್‌ಬಟನ್ ಬ್ರಾ ನ್ಯೂಯಾರ್ಕಿನ ಬೀದಿಗಳಲ್ಲಿ ಚಳುವಳಿಯ ಹೆಸರಿನಲ್ಲಿ ಬೆಂದು ಕರಕಲಾಗಿಬಿಟ್ಟಿತು,” ಎಂದು ಒಂದೇ ವಾಕ್ಯದಲ್ಲಿ ಎಷ್ಟೆಲ್ಲ ಇತಿಹಾಸವನ್ನು ಹೇಳಿಬಿಡುತ್ತಾರೆ.

‘ಹಲೋ ಎಂದು ಕೈಕುಲುಕಿ ಅಪ್ಪಿಕೊಂಡಾಗ ಎರಡೂ ದೇಹಗಳಲ್ಲಿದ್ದು ನಾಲ್ಕು ಸಿಲಿಕಾನು ಮುದ್ದೆಗಳನ್ನು ಪರಸ್ಪರ ಡಿಕ್ಕಿ ಹೊಡೆದು ಅವರಿಬ್ಬರ ಈ ಭೇಟಿಯ ಕೃತಕತೆಯನ್ನು, ಢೋಂಗಿತನವನ್ನು ಒತ್ತಿ ಹೇಳಿದವು.’ ಎನ್ನುವಂಥ ವಾಕ್ಯಗಳು ನಗೆ ಉಕ್ಕಿಸುತ್ತವೆ.

ಕಾಸ್ಮೆಟಿಕ್ ಚಿಕಿತ್ಸೆಯನ್ನು ಬೇಲೂರಿನ ಶಿಲಾಬಾಲಿಕೆಗೆ ಹೋಲಿಸಿ ಹೊಸ ಪ್ರತಿಮೆಗಳನ್ನು ಕಟ್ಟುತ್ತಾರೆ. ಮ್ಯಾಡಮ್ ಟುಸಾಡ್ ನಲ್ಲಿರುವ ಪ್ರತಿಮೆಗಳಿಗೆ ಹೋಲಿಸುತ್ತಾರೆ.

ಈ ಕೆಳಗಿನ ವಾಕ್ಯವನ್ನು ಚಿತ್ರರೂಪದಲ್ಲಿ ಕಲ್ಪಿಸಿಕೊಳ್ಳಿ: ಮೇಲಿಂದ ಕೆಳಗಿನವರೆಗೆ ಕಾಸ್ಮಾಟಿಕ್ ಚಿಕಿತ್ಸೆ ಮಾಡಿಕೊಂಡ ಹೆಂಗಸಿನ ಕ್ಯಾನ್ಸರ್ ಆಗಿ ದೇಹದ ತೂಕವೆಲ್ಲ ಇಳಿದಾಗ ಉಳಿಯುವುದೇನು? ಕ್ಯಾನ್ಸರ್ ಬಂದಾಗ ಕೊಡುವ ಕಿಮೊ ಥೆರಪಿ ಕ್ಯಾನ್ಸರ್ ಅನ್ನು ಕೊಲ್ಲುವಾಗ ದೇಹವನ್ನು ಹಿಂಡಿ ಹಿಪ್ಪೆ ಮಾಡುತ್ತದೆ. “ಕಿಮೋಥೆರಪಿಗೆ ಇಡೀ ಮೈ ಒಣಗಿದ್ದರೂ ಗೌನಿನಡೆಯಲ್ಲಿ ಆಕೆಯ ಮೊಲೆಗಳ ಸಿಲಿಕಾನ್ ಇಂಪ್ಲಾಂಟುಗಳು, ಕಾರ್ಟಿಲೇಜು ತುಂಬಿದ ತುಟಿಗಳು, ಮೂಗಿನ ಮೃದ್ವಸ್ಥಿ ಎಲ್ಲ ಸೊರಗಿದ್ದ ದೇಹದ ಮೇಲಿನ ಬೊಕ್ಕೆಗಳಂತೆ, ಗೆದ್ದಲು ಹಿಡಿದ ಮರದ ಬೊಡ್ಡೆಗಳಂತೆ..” ಎಂದು ವಿಕಾರ ಚಿತ್ರವನ್ನು ಸಶಕ್ತವಾಗಿ ಚಿತ್ರಿಸುತ್ತಾರೆ.

ಕೊನೆಮಾತು:

ಕರ್ನಾಟಕದಲ್ಲೆ ಇರುವ ಕನ್ನಡ ಓದುಗರಿಗೆ ಈ ಕಾದಂಬರಿಯ ವಾತಾವರಣ ಮತ್ತು ಕತೆ ತುಂಬ ಅಪರಿಚಿತ ಎನ್ನಿಸಿ ಅವಾಸ್ತವ ಎನಿಸಬಹುದು. ಆದರೆ ಇದೆಲ್ಲ ಪಾಶ್ಚಾತ್ಯ ದೇಶಗಳಲ್ಲಿ ಜನಸಾಮಾನ್ಯರ ಜೀವನದಲ್ಲಿ ಆಗುತ್ತಿರುವುದು ನಿಜ, ಅದಕ್ಕೆ ಅನಿವಾಸಿ ಕನ್ನಡಿಗರೂ ಹೊರತಲ್ಲ. ಆಧುನಿಕ ಲೋಕದ ‘ಪ್ಲಾಸ್ಟಿಕ್’ ಸಂಸ್ಕೃತಿಯನ್ನು ‘ಲೌಲಿಕ’ ಜೀವನ ಶೈಲಿಯಲ್ಲಿ ಅಮೇರಿಗನ್ನಡಿಗರ ಪಾತ್ರಗಳನ್ನು ಕಟ್ಟಿ ಒಂದು ಕಥಾನಕವನ್ನಾಗಿಸಿದ್ದಾರೆ. ಕನ್ನಡಕ್ಕೆ ಇದೊಂದು ವಿಶಿಷ್ಟ ವಿಷಯದ ಕಾದಂಬರಿ. ನನಗೆ ತಿಳಿದ ಮಟ್ಟಿಗೆ ಇಂಥದೊಂದು ಕಥಾವಸ್ತುವನ್ನು ಇಟ್ಟುಕೊಂಡು ಕನ್ನಡದಲ್ಲಿ ಬಂದಿಲ್ಲ. ಓದಿ, ನಿಮಗೂ ಇಷ್ಟವಾಗುತ್ತದೆ, ಹೊಸ ಪ್ರಶ್ನೆಗಳನ್ನು ಎತ್ತುತ್ತದೆ ಎನ್ನುವ ನಂಬಿಕೆಯೊಂದಿಗೆ…