ಕಾವ್ಯ, ಪ್ರಬಂಧ, ನಾಟಕ, ಪದ್ಯ, ಕಂದ ಪದ್ಯಗಳು, ಚುಟುಕು, ಸುನೀತ ಎಂದೆಲ್ಲ ಹತ್ತಾರು ಪ್ರಕಾರಗಳನ್ನು ನಾವು ಸಾಹಿತ್ಯ ಲೋಕದಲ್ಲಿ ಗುರುತಿಸಿದರೂ, ಈ ಕತೆಯೆಂಬ ಮಾಯಾವಿ ಮಾತ್ರ ಈ ಎಲ್ಲ ಪ್ರಕಾರದೊಳಗೂ, ಹೂವೊಳಗೆ ಕಂಪು ಸೇರಿದಂತೆ ವ್ಯಾಪಿಸಿಕೊಂಡುಬಿಡುತ್ತದೆ. ಕಾವ್ಯದೊಳಗೊಂದು ಕತೆಯ ಛಾಯೆಯಿರುತ್ತದೆಯಲ್ಲವೇ. ಪ್ರಬಂಧಗಳ ಬಿಗಿಯಲ್ಲಿಯೂ ಕತೆಯೊಂದು ಸೂತ್ರದಂತೆ ಅಡಕವಾಗಿದ್ದುಕೊಂಡು ಓದುಗರನ್ನು ರಮಿಸುತ್ತಿರುತ್ತದೆ. ಪ್ರಸ್ತುತ ಸಾಹಿತ್ಯ ಲೋಕದ ಸ್ಪರ್ಧೆಗಳನ್ನು ತೆಗೆದುಕೊಂಡರೂ, ಕಥಾ ಸ್ಪರ್ಧೆಗಳು ಸದ್ದು ಮಾಡಿದಷ್ಟು ಇತರ ಸ್ಪರ್ಧೆಗಳು ಸದ್ದು ಮಾಡುವುದು ಅಪರೂಪ. ಕೋಡಿಬೆಟ್ಟು ರಾಜಲಕ್ಷ್ಮಿ ಬರಹ ಇಲ್ಲಿದೆ.

ಎರಡೇ ವರ್ಷಗಳ ಹಿಂದೆ ಕನ್ನಡದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡ ಪತ್ರಿಕೆಗಳೆಲ್ಲ ಸಾಹಿತ್ಯ ಪುರವಣಿಯನ್ನು ನಿಲ್ಲಿಸಿದಾಗ, ಅಥವಾ ಸಾಹಿತ್ಯ ಪುರವಣಿಯ ಪುಟಗಳನ್ನು ಕಡಿಮೆ ಮಾಡಿದಾಗ, ಸಾಹಿತ್ಯಾಸಕ್ತ ಓದುಗರಲ್ಲಿ ಒಂದು ಬೇಸರ ಕವಿದಿತ್ತು. ಅದರಲ್ಲಿಯೂ ಸಣ್ಣ ಕತೆಗಳ ಪ್ರಕಟಣೆಯನ್ನು ನಿಲ್ಲಿಸಿದ್ದುಕಂಡು ಬಹುಶಃ ಹೆಚ್ಚು ಬೇಸರಕ್ಕೊಳಗಾದವರು ಕನ್ನಡದ ಸಣ್ಣಕತೆಗಾರರಿರಬೇಕು. ಇನ್ನೇನು ಕಥಾಕ್ಷೇತ್ರಕ್ಕೆ ಕಾಲಿಡಬೇಕು ಎಂದುಕೊಳ್ಳುತ್ತಿದ್ದ ಅನೇಕ ಉದಯೋನ್ಮುಖ ಬರಹಗಾರರಿಗೆ ಪತ್ರಿಕೆಗಳಲ್ಲಿ ತಮ್ಮ ಕತೆಯೊಂದನ್ನು ಪ್ರಕಟಿಸಬೇಕು ಎಂಬ ಸದ್ಯದ ಗುರಿಯೊಂದು ಸದಾ ಮನದೊಳಗೆ ಗಿರಕಿ ಹೊಡೆಯುತ್ತಿರುತ್ತದಲ್ಲ. ಅಂತಹ ಅವಕಾಶಗಳೆಲ್ಲ ಕೈ ತಪ್ಪಿ ಹೋದಂತೆ ಕಂಡಿದ್ದುಂಟು. ಹಾಗೆಂದು ಕತೆಗಳೇನೂ ಈ ಬೇಸರದ ಚಾದರಹೊದ್ದು ಅವಿತು ಕೂರಲಿಲ್ಲ. ಶಾಶ್ವತವಾಗಿ ಮರೆಯಾಗಲಿಲ್ಲ. ಸ್ಥಳೀಯ ಪತ್ರಿಕೆಗಳು, ಅಂತರ್ಜಾಲ ತಾಣಗಳು ವಿಫುಲ ಅವಕಾಶಗಳನ್ನು ಸೃಷ್ಟಿಸಿದವು. ಹಾಗೆಯೇ ಮತ್ತೆ ಕಥಾ ಸ್ಪರ್ಧೆಗಳ ಸುಗ್ಗಿಯು ಹಸಿರುಗಟ್ಟತೊಡಗಿದೆ. ನಿಧಾನವಾಗಿ ಆರಂಭವಾದ ಕತೆಗಳ ಗುಂಗು ಈಗಂತೂ ದಟ್ಟವಾಗಿದೆಯೆನಿಸುತ್ತಿದೆ.
ಕಾವ್ಯ, ಪ್ರಬಂಧ, ನಾಟಕ, ಪದ್ಯ, ಕಂದ ಪದ್ಯಗಳು, ಚುಟುಕು, ಸುನೀತ ಎಂದೆಲ್ಲ ಹತ್ತಾರು ಪ್ರಕಾರಗಳನ್ನು ನಾವು ಸಾಹಿತ್ಯ ಲೋಕದಲ್ಲಿ ಗುರುತಿಸಿದರೂ, ಈ ಕತೆಯೆಂಬ ಮಾಯಾವಿ ಮಾತ್ರ ಈ ಎಲ್ಲ ಪ್ರಕಾರದೊಳಗೂ, ಹೂವೊಳಗೆ ಕಂಪು ಸೇರಿದಂತೆ ವ್ಯಾಪಿಸಿಕೊಂಡುಬಿಡುತ್ತದೆ. ಕಾವ್ಯದೊಳಗೊಂದು ಕತೆಯ ಛಾಯೆಯಿರುತ್ತದೆಯಲ್ಲವೇ. ಪ್ರಬಂಧಗಳ ಬಿಗಿಯಲ್ಲಿಯೂ ಕತೆಯೊಂದು ಸೂತ್ರದಂತೆ ಅಡಕವಾಗಿದ್ದುಕೊಂಡು ಓದುಗರನ್ನು ರಮಿಸುತ್ತಿರುತ್ತದೆ. ಅಷ್ಟಲ್ಲದೆ ಕುಮಾರವ್ಯಾಸ ಹೇಳಿದ್ದಾನೆಯೇ, ತಿಳಿಯಪೇಳುವೆ ಕೃಷ್ಣ ಕತೆಯ ಇಳೆಯ ಜಾಣರು ಮೆಚ್ಚುವಂದದಿ ಅಂತ. ಆದರೂ ಸಹೃದಯ ಓದುಗರು ಕಾವ್ಯವನ್ನು ಕತೆಯಿಂದ ಸ್ವಲ್ಪ ದೂರವಿಟ್ಟು ನೋಡುವುದು ಪರಿಪಾಠವಾಗಿದೆ. ಹೀಗೆ ಎಲ್ಲ ಪ್ರಕಾರಗಳಲ್ಲಿಯೂ ತನ್ನದೇ ಆದ ವಿಶೇಷ ಕಂಪು ಬೀರುವ ಮೂಲಕವೋ ಏನೋ, ಸಾಹಿತ್ಯ ಲೋಕವು ಸದಾ ಕಥಾಪ್ರಧಾನ ಅಂತ ಬೀಗುವುದುಂಟು. ಹಾಗಾದರೆ ಕತೆ ಬರೆಯುವುದು ಸುಲಭವೇ ಎಂದರೆ ಹಾಗೇನು ಅಲ್ಲ ಎಂದು ಕತೆಗಾರರು ಅನೇಕ ಕಡೆ ಹೇಳಿಕೊಂಡಿದ್ದಾರೆ. ಬೃಹತ್ ಕ್ಲಾಸಿಕ್ಸ್ ಕಾದಂಬರಿಗಳನ್ನೇ ಕನ್ನಡ ಕ್ಕೆ ಕೊಟ್ಟಿರುವ ತರಾಸು ಅವರು ಸ್ವಲ್ಪ ಕಾಲ ಕಥಾ ಪ್ರಕಾರದಲ್ಲಿ ಕೈಯ್ಯಾಡಿಸಿದ್ದರು. ಆದರೆ ‘ಕಾದಂಬರಿಯನ್ನು ಬರೆಯುವುದಕ್ಕಿಂತಲೂ ಸಣ್ಣ ಕತೆಯನ್ನು ಬರೆಯುವುದು ಕಠಿಣವಾದ ಕಲಾಮಾರ್ಗ ಎಂಬ ಸತ್ಯ ನನಗೆ ಗೋಚರಿಸಿದೆ’ ಎಂದು ಹೇಳಿ ಕಥಾ ಪ್ರಯಾಣವನ್ನು ನಿಲ್ಲಿಸಿದ್ದರು.

ಕತೆಗಾರರ ಅನುಭವಗಳ ಸಂಗ್ರಹ ‘ಕಥೆ ಹುಟ್ಟುವ ಪರಿ’ ಎಂಬ ಪುಸ್ತಕವನ್ನು ಸಂಪಾದಿಸಿರುವ, ಕತೆಗಾರ ಅಮರೇಶ ನಗುಡೋಣಿ ಅವರು ಗಮನಿಸಿದ ಪ್ರಕಾರ, ‘ಕತೆ ಕಟ್ಟುವಾಗ ಕತೆಗಾರರಿಗೆ ಇರಬೇಕಾದ್ದು ಸಂಯಮ ಮತ್ತು ತನ್ಮಯ. ಒಂದು ಘಟನೆಯೇ ಕತೆಗೆ ಕೇಂದ್ರವಾಗಬಹುದು. ಕಂಡ ಪಾತ್ರವೊಂದು ಅನನ್ಯವಾಗಿ ಕಂಡು ಆ ಪಾತ್ರವನ್ನೇ ಕೇಂದ್ರೀಕರಿಸಿ ಕತೆ ಹುಟ್ಟಬಹುದು. ಯಾರದೋ ಒಂದು ಮಾತು ಕತೆಗೆ ವಸ್ತುವಾಗಬಹುದು. ಘಟನೆ ಮುಖ್ಯವಾದರೂ, ಪಾತ್ರ ಮುಖ್ಯವಾದರೂ ಒಂದು ಮಾತು ಅಥವಾ ತತ್ವ ಮುಖ್ಯವಾದರೂ ಅದನ್ನು ಕತೆ ಕಟ್ಟುವಾಗ ಅದಕ್ಕೆ ಸಂಬಂಧಿಸಿದ ಪರಿಕರಗಳನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಸಂಯಮ ಬೇಕು, ತನ್ಮಯ ಬೇಕು’. ಹೀಗೆ ಕತೆಗೆ ಹತ್ತಾರು ವ್ಯಾಖ್ಯಾನಗಳನ್ನು ಅನ್ವಯಿಸಬಹುದಾದರೂ, ಕತೆ ಮಾತ್ರ ಮಣ್ಣಿನೊಳಗೆ ಅಂತರ್ಜಲದಂತೆ ತನ್ನ ಪಾಡಿಗೆ ತಾನು ಹರಿಯುತ್ತಲೇ ಇರುತ್ತದೆ. ಈಗ ಸಾಹಿತ್ಯ ಲೋಕದ ಸ್ಪರ್ಧೆಗಳನ್ನು ತೆಗೆದುಕೊಂಡರೂ, ಕಥಾ ಸ್ಪರ್ಧೆಗಳು ಸದ್ದು ಮಾಡಿದಷ್ಟು ಇತರ ಸ್ಪರ್ಧೆಗಳು ಸದ್ದು ಮಾಡುವುದು ಅಪರೂಪ. ಸ್ಪರ್ಧೆಗಳಿಂದಾಗಿ ಕನ್ನಡ ಕಥಾ ಲೋಕ ಹೆಚ್ಚು ಶ್ರೀಮಂತವಾಯಿತು ಎಂದರೂ ಸರಿಯೇ, ಅಥವಾ ಅತ್ಯುತ್ತಮ ಕತೆಗಳಿಂದಾಗಿ ಈ ಕಥಾ ಸ್ಪರ್ಧೆಗಳು ಇನ್ನಷ್ಟು ಬಲಿಷ್ಟ ರೀತಿಯಲ್ಲಿ ಗುರುತಿಸಿಕೊಂಡವು ಎಂದರೂ ಸರಿಯೇ. ಒಟ್ಟಿನಲ್ಲಿ ಅತ್ಯುತ್ತಮ ಕತೆಗಳು ಸೃಷ್ಟಿಯಾಗಲು ಸ್ಪರ್ಧೆಗಳೇ ನೆಪವಾಗಿದ್ದುಕೊಂಡು ಉತ್ತಮ ವಾತಾವರಣ ನಿರ್ಮಾಣ ಮಾಡಿವೆ.

ಕನ್ನಡ ಸಾಹಿತ್ಯ ಲೋಕದಲ್ಲಿ ದಿಗ್ಗಜರಾಗಿ ಮೆರೆದವರಲ್ಲಿ ಅನೇಕರು 1957ರಲ್ಲಿಯೇ ಆರಂಭವಾದ ಪ್ರಜಾವಾಣಿಯ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದುಕೊಂಡು ಸಾಹಿತ್ಯ ಲೋಕದ ಗಮನ ಸೆಳೆದವರು. ಹೊಸ ಬರಹಗಾರರಿಗೆ ಒಂದು ಆಕರ್ಷಣೆಯಾಗಿ, ಪ್ರೇರಣೆಯಾಗಿ ನಿಲ್ಲುವ ಈ ಸ್ಪರ್ಧೆಯಲ್ಲಿಬಹುಮಾನ ಪಡೆದವರು, ಮುಂದಿನ ದಿನಗಳಲ್ಲಿ ಅದೇ ಸ್ಪರ್ಧೆಯ ತೀರ್ಪುಗಾರರಾಗಿ ಗುರುತಿಸಿಕೊಳ್ಳುವಷ್ಟು ಬೆಳೆದರು. ಸಮೇತನ ಹಳ್ಳಿ ರಾಮರಾಯರು, ಭಾರತೀಸುತ, ರಾಮಚಂದ್ರ ಶರ್ಮ, ಪಿ.ಲಂಕೇಶ್, ಸುಧಾಕರ, ಶ್ರೀಕೃಷ್ಣ ಆಲನಹಳ್ಳಿ, ಸುಮತೀಂದ್ರ ನಾಡಿಗರು, ವೀರಭದ್ರ, ಜಿ.ಕೆ. ಗೋವಿಂದರಾವ್, ರಾಘವೇಂದ್ರ ಪಾಟೀಲ, ಎಸ್. ದಿವಾಕರ್, ವೈದೇಹಿ, ಜಯಂತ ಕಾಯ್ಕಿಣಿ, ಅಬ್ದುಲ್ ರಶೀದ್, ವಿವೇಕ ಶಾನುಭಾಗ, ಮೊಗಳ್ಳಿ ಗಣೇಶ್, ಅಮರೇಶ ನುಗಡೋಣಿ, ಎಚ್. ನಾಗವೇಣಿ..ಹೀಗೆ ಸಾಲು ಸಾಲು ಕಥೆಗಾರರು ಬಹುಮಾನವನ್ನುಗೆದ್ದವರು. ಕನ್ನಡ ಸಾಹಿತ್ಯ ಲೋಕವನ್ನು ತಮ್ಮ ನಿರಂತರ ಬರವಣಿಗೆಯಿಂದ ಶ್ರೀಮಂತಗೊಳಿಸಿದವರು.

ಸ್ಪರ್ಧೆಗಳಿಂದಾಗಿ ಕನ್ನಡ ಕಥಾ ಲೋಕ ಹೆಚ್ಚು ಶ್ರೀಮಂತವಾಯಿತು ಎಂದರೂ ಸರಿಯೇ, ಅಥವಾ ಅತ್ಯುತ್ತಮ ಕತೆಗಳಿಂದಾಗಿ ಈ ಕಥಾ ಸ್ಪರ್ಧೆಗಳು ಇನ್ನಷ್ಟು ಬಲಿಷ್ಟ ರೀತಿಯಲ್ಲಿ ಗುರುತಿಸಿಕೊಂಡವು ಎಂದರೂ ಸರಿಯೇ. ಒಟ್ಟಿನಲ್ಲಿ ಅತ್ಯುತ್ತಮ ಕತೆಗಳು ಸೃಷ್ಟಿಯಾಗಲು ಸ್ಪರ್ಧೆಗಳೇ ನೆಪವಾಗಿದ್ದುಕೊಂಡು ಉತ್ತಮ ವಾತಾವರಣ ನಿರ್ಮಾಣ ಮಾಡಿವೆ.

 

ಹೀಗೆ ಬಹುಮಾನ ಗೆದ್ದ ಹಿರಿಯರ ಅನುಭವಗಳೂ ವಿಶೇಷವಾದುವು. ಬಹುಮಾನ ಬಂದಿರುವ ಸುದ್ದಿ ಪ್ರಕಟವಾದ ಬಳಿಕ ಬೆಸಗರ ಹಳ್ಳಿ ರಾಮಣ್ಣಅವರಿಗೆ, ರಸ್ತೆಯಲ್ಲಿ ನಡೆದುಕೊಂಡು ಹೋಗುವವರು ತಮ್ಮನ್ನೆ ಗಮನಿಸುತ್ತಿದ್ದಾರೇನೋ ಎಂಬಂತೆ ಅನಿಸಿತ್ತಂತೆ. ಹಿರಿಯ ಕತೆಗಾರ ಅಮರೇಶ್ ನುಗಡೋಣಿ ಅವರು, ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲಿ ಬಹುಮಾನ ಬಂದುದರಿಂದಲೇ ತಾವು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡು, ಉದ್ಯೋಗ ಪಡೆಯುವುದು ಕೂಡ ಸುಲಭ ಸಾಧ್ಯವಾಯಿತು ಎಂದೊಮ್ಮೆ ಹೇಳಿಕೊಂಡಿದ್ದಾರೆ.
ಇಂತಹುದೇ ಹೆಮ್ಮೆಯ ಕ್ಷಣಗಳನ್ನು ಅನುಭವಿಸಿದವರು ಮತ್ತೋರ್ವ ಹಿರಿಯ ಕತೆಗಾರ ಮೊಗಳ್ಳಿ ಗಣೇಶ್. ಅವರು ಮೂರು ಬಾರಿ ಸ್ಪರ್ಧೆಯಲ್ಲಿ ಬಹುಮಾನ ಗೆದ್ದ ಹ್ಯಾಟ್ರಿಕ್ ಹೀರೋ. ಪ್ರಜಾವಾಣಿ ಕಥಾ ಸ್ಪರ್ಧೆಯಷ್ಟೇ ಅಲ್ಲ, ಯಾವುದೇ ಒಂದು ಸಾಹಿತ್ಯ ಸ್ಪರ್ಧೆಯು ಬರಹಗಾರರಿಗೆ ಹೇಗೆ ಪ್ರೋತ್ಸಾಹದಾಯಕ ವಾತಾವರಣವನ್ನು ಕಲ್ಪಿಸಿಕೊಡುತ್ತದೆ ಎನ್ನುವುದನ್ನು ಅವರು ಹೇಳುತ್ತಾರೆ. ‘ಒಂದು ಕಥಾಸ್ಪರ್ಧೆಯ ಮಹತ್ವವೇನು, ಅದರ ಪರಿಕಲ್ಪನೆಯೇನು ಎಂಬ ಅರಿವಿಲ್ಲದ ಕಾಲದಲ್ಲಿ ಅಂದರೆ ನನ್ನ ಕಾಲೇಜು ಜೀವನದಲ್ಲಿಯೇ ನಾನು ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಅದರ ಗೆಲುವು ಎಷ್ಟೊಂದು ಸಂತೋಷವನ್ನು ಕೊಟ್ಟಿದೆ. ನಮ್ಮ ಕಾಲೇಜಿನಲ್ಲಿ ಅದಾಗಲೇ ಈ ಸ್ಪರ್ಧೆಯಲ್ಲಿ ಗೆದ್ದವರಿದ್ದರು. ಅಬ್ದುಲ್ ರಶೀದ್ ಸ್ಪರ್ಧೆ ಯಲ್ಲಿ ಗೆದ್ದು ಕಾಲೇಜಿನ ಸಾಹಿತ್ಯ ಪ್ರಿಯ ವಿದ್ಯಾರ್ಥಿಗಳ ಪೈಕಿ ಹೀರೋ ಆಗಿದ್ರು. ಹಾಗಾಗಿ ಇದೊಂದು ಉತ್ತಮ ಸ್ಪರ್ಧೆ ಎಂದು ಅನಿಸಿ ಕತೆಯನ್ನು ಕಳಿಸಿದ್ದೆ. ಅದೃಷ್ಟವಶಾತ್ ಹೀಗೆ ಕತೆ ಕಳಿಸಿ ಯಶಸ್ವಿಯಾಗಿದ್ದೆ. ಮೂರು ಬಾರಿ ಬಹುಮಾನವು ನನಗೇ ಬಂದಿತ್ತು ಎನ್ನುವುದು ಇಂದಿಗೂ ಪುಳಕ ಮೂಡಿಸುವ ನೆನಪುಗಳು.’

‘ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆ ಎನ್ನುವುದು ಕನ್ನಡದ ದೊಡ್ಡ ಹೆಗ್ಗುರುತು. ಸಾಹಿತ್ಯ ವಾಹಿನಿಯಲ್ಲಿ ಹೊಸಬಗೆಯ ಹೊಳೆನೀರು ಹರಿವಿಗೆ ಅದೊಂದು ಮಾಧ್ಯಮವಾಗಿತ್ತು. ಇತರ ಪತ್ರಿಕೆಗಳೂ ಇಂತಹ ಸ್ಪರ್ಧೆಯನ್ನು ಮಾಡುತ್ತಿದ್ದವು. ಆದರೆ ಪ್ರಜಾವಾಣಿ ಆಯೋಜಿಸುತ್ತಿದ್ದ ಸ್ಪರ್ಧೆ ಹೊಸ ಸಂವೇದನೆಯನ್ನು ಸೃಷ್ಟಿ ಮಾಡಲು ಅವಕಾಶ ಮಾಡಿಕೊಡುತ್ತಿತ್ತು.ಅದಾಗಲೇ ಪ್ರಚಲಿತವಾದ ನವೋದಯ, ನವ್ಯ, ಬಂಡಾಯ ಎಂಬೆಲ್ಲ ಚೌಕಟ್ಟನ್ನು ಮೀರಿ ಹೊಸಬಗೆಯ ಬರವಣಿಗೆಯನ್ನು ಈ ಸ್ಪರ್ಧೆಯು ಗುರುತಿಸಲು ಇದು ವೇದಿಕೆಯಾಗಿತ್ತು. ಹಾಗಾಗಿ ಕನ್ನಡ ದ ಪ್ರಸಿದ್ಧ ಲೇಖಕರು ಕೂಡ ಈ ಸ್ಪರ್ಧೆಯಲ್ಲಿ ಗೆಲ್ಲುವವರ ಕತೆಗಳನ್ನು ಓದಲು ಕಾಯುತ್ತಿದ್ದರು. ಕನ್ನಡ ಲೋಕದ ದಿಗ್ಗಜರನೇಕರು ಪ್ರಜಾವಾಣಿ ಸ್ಪರ್ಧೆಯ ಮೂಲಕವೇ ಬಂದರು.’
ಆ ಮಟ್ಟಿಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಸ್ಪರ್ಧೆಗಳನ್ನು ಆಯೋಜಿಸುವುದು, ಅವುಗಳಿಗೆ ದೊಡ್ಡ ಬಹುಮಾನ ವಿರಿಸಿ ಕಾರ್ಪೊರೇಟ್ ಲೋಕಕ್ಕೆ ಸಮನಾಗಿ ಗೌರವಿಸುವುದು- ಇಂಥದ್ದೆಲ್ಲ ನಡೆಯುತ್ತ ಬಂದಿದೆ. ಇದು ಕನ್ನಡದ ಅದೃಷ್ಟವೂ ಹೌದು. ಕಾದಂಬರಿ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಕಾವ್ಯ ಸ್ಪರ್ಧೆಗಳೂ ಸಾಹಿತ್ಯದ ಮೌಲ್ಯವರ್ಧಿಸಲು ಪ್ರಯತ್ನಿಸುತ್ತಿವೆ. 22 ವರ್ಷಗಳ ಹಿಂದೆ ವಿಜಯಕರ್ನಾಟಕವೂ ದೊಡ್ಡ ಮೊತ್ತದ ಬಹುಮಾನ ಘೋಷಿಸಿ ಕಥಾಸ್ಪರ್ಧೆ ಏರ್ಪಡಿಸಿತ್ತು. ಕನ್ನಡ ಪ್ರಭ, ಉತ್ಥಾನ, ಸುಧಾ ಮುಂತಾಗಿ ಅನೇಕ ಪತ್ರಿಕೆಗಳು ಸ್ಪರ್ಧೆಗಳನ್ನು ಆಯೋಜಿಸಿದರೆ, ಸ್ಥಳೀಯ ಪ್ರಸಾರಕ್ಕೆ ಸೀಮಿತವಾಗಿರುವ ಪತ್ರಿಕೆಗಳು ಕೂಡ ಇಂತಹ ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಿವೆ. ಇದೀಗ ಬುಕ್ ಬ್ರಹ್ಮ ಅಂತರ್ಜಾಲ ತಾಣವು ಸ್ವಾತಂತ್ರ್ಯೋತ್ಸವ ಕಥಾಸ್ಪರ್ಧೆಯನ್ನು ಆಯೋಜಿಸಿ ಸಾಹಿತ್ಯ ಲೋಕದಲ್ಲಿ ಹೊಸ ನಿರೀಕ್ಷೆಯನ್ನು ಮೂಡಿಸಿದೆ. ಅದರೊಂದಿಗೆ ವರ್ಷಂಪ್ರತಿ ಪತ್ರಿಕೆಗಳು ಆಯೋಜಿಸುವ ಸ್ಪರ್ಧೆಗಳು ಸಾಹಿತ್ಯಲೋಕದ ಕೃಷಿಕರಲ್ಲಿ ಉತ್ಸಾಹ ಮೂಡಿಸಿದೆ.
‘ಆದರೆ ಸ್ಪರ್ಧೆ ಎನ್ನುವುದು ಹಣದ ಮೊತ್ತವೆಷ್ಟು ಎಂಬ ವಿಷಯಕ್ಕಷ್ಟೇ ಸೀಮಿತವಾದುದೇನೂ ಅಲ್ಲ. ಈ ನೆಪದಲ್ಲಿ ಅತ್ಯುನ್ನತ ಕತೆಯನ್ನು ಸೃಷ್ಟಿಸಿದ್ದೇ ಮುಖ್ಯವಾಗುತ್ತದೆ. ಸಂವೇದನೆಯನ್ನು ಪಲ್ಲಟಿಸುವ ಕತೆಗಳು ಬರುತ್ತಿವೆ ಎಂಬುದು ಗಮನಾರ್ಹ. ಭಾರೀ ಹೆಸರು ಮಾಡಿರುವ ಕತೆಗಾರರೂ ಈ ಸ್ಪರ್ಧೆಯಲ್ಲಿ ಬರೆಯಬಹುದು. ಯಾವುದೋ ದೂರದ ಹಳ್ಳಿಯ ಬರಹಗಾರರೊಬ್ಬರು ಬರೆದಿದ್ದರೂ ಅದು ಉತ್ತಮ ಕತೆಯಾಗಿಯೇ ಗುರುತಿಸಿಕೊಲ್ಳುತ್ತದೆ. ಅಂದರೆ ಹಣವನ್ನು ಮೀರಿ ಕತೆಗಳು ಬದುಕಿನ ಪ್ರತಿಫಲನವಾಗಿ, ಉತ್ತಮ ರೀತಿಯಲ್ಲಿ ಬರುತ್ತಿವೆಯೆಂಬುದೂ ಮುಖ್ಯವಾಗುತ್ತದೆ’ ಎಂದು ಮೊಗಳ್ಳಿ ವಿವರಿಸುತ್ತಾರೆ.
ಕಥಾಸ್ಪರ್ಧೆಗಳು ಉದಯೋನ್ಮುಖ ಕತೆಗಾರರಿಗೆ ಒಂದು ಬ್ರೇಕ್ ಕೊಡುತ್ತದೆ ಎಂಬುದು ನಿಜ ಎಂದು ಯುವಕತೆಗಾರ ಗುರುಪ್ರಸಾದ್ ಕಂಟಲಗೆರೆ ಒಪ್ಪಿಕೊಳ್ಳುತ್ತಾರೆ. ಹೊಸದಾಗಿ ಸಾಹಿತ್ಯ ಕ್ಷೇತ್ರಕ್ಕೆ ಅಳುಕಿನಿಂದಲೇ ಹೆಜ್ಜೆಯಿಡುತ್ತಿರುವವರಿಗೆ ಈ ಸ್ಪರ್ಧೆಗಳು ಪ್ರೇರಣೆಯನ್ನೂ ಕೊಡುತ್ತವೆ. ಅಂತಹ ಬಹುಮಾನಗಳು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತವೆ. ಆದರೆ ಈ ಟಾಪ್ ಟೆನ್ ಮಾದರಿಯಲ್ಲಿ ಹಸ್ತಪ್ರತಿಗಳಿಗೆ ಸಂಬಂಧಿಸಿದ ಸ್ಪರ್ಧೆಗಳ ಫಲಿತಾಂಶವನ್ನು ಪ್ರಕಟಿಸುವುದೆಂದರೆ ಅದು ಲೇಖಕರ ವಿಶ್ವಾಸವನ್ನು ಕುಗ್ಗಿಸುತ್ತದೆ. ಕಥೆಗಳು ಒಂದುಕಾಲದಲ್ಲಿ ನಿರ್ದಿಷ್ಟ ಸಂದರ್ಭದಲ್ಲಿ ಚೆನ್ನಾಗಿಲ್ಲ ಎಂದು ಅನಿಸಿದರೆ, ಮತ್ತೊಂದು ಸಂದರ್ಭದಲ್ಲಿ ಅದರ ಮಹತ್ವ ಹೊಳೆಯಬಹುದು. ಹೀಗೆ ಹೊಸ ಆಯಾಮಗಳನ್ನು ಕಂಡುಕೊಂಡು ಕಥೆಗಳ ಸಾಧ್ಯತೆಗಳನ್ನು ವಿಶ್ಲೇಷಿಸಲೂಬಹುದುಲ್ಲವೇ. ಆದ್ದರಿಂದ ಸಾಹಿತ್ಯ ಸ್ಪರ್ಧೆಗಳು ಹೊಸ ಕತೆಗಾರರಲ್ಲಿ ಉತ್ಸಾಹವನ್ನು ತುಂಬುವುದರಲ್ಲಿ ಎರಡು ಮಾತಿಲ್ಲʼ ಎಂದು ಹೇಳುತ್ತಾರೆ ಗುರುಪ್ರಸಾದ್.


ಗದರಿದಂತೆ ಭಾಸವಾದರೂ, ಹುರಿದುಂಬಿಸಿದಂತೆ ಗೋಚರಿಸಿದರೂ, ಅಕ್ಕರೆಯಿಂದ ಕೈ ಹಿಡಿದು ನಡೆಸಿದಂತೆ ಕಾಣಿಸಿದರೂ, ಸಾಹಿತ್ಯ ಸ್ಪರ್ಧೆಗಳು ಬರಹಗಾರರಿಗೆ ಒಂದಿಲ್ಲೊಂದು ಸಕಾರಾತ್ಮಕ ಹಾದಿಯನ್ನೇ ತೋರಿಸಿಕೊಡಬಲ್ಲವು ಎನಿಸುತ್ತದೆ.