‘ಸ್ಲಂ ಡಾಗ್ ಮಿಲಿಯನೇರ್’ ಚಿತ್ರಕ್ಕೆ ಒಂಟು ಎಂಟು ಪ್ರಶಸ್ತಿಗಳು ದೊರೆತು, ಭಾರತಕ್ಕೆ ಆಸ್ಕರ್ ಸಿಗುವುದಿಲ್ಲ ಎಂಬ ಅನಾದಿ ಕಾಲದ ಮಿಥ್ಯೆಯನ್ನು ಸುಳ್ಳು ಮಾಡಿದೆ. ‘ಲಗಾನ್ ’ ಸೇರಿದಂತೆ ಅನೇಕ ಭಾರತೀಯ ಚಿತ್ರಗಳು ಈ ಒಂದು ಪ್ರಶಸ್ತಿಗಾಗಿ ಕಾದಿದ್ದು, ಅದಕ್ಕಾಗಿ ಆದ ಚರ್ಚೆ ಎಲ್ಲವೂ ಈ ಸಲದ ಪ್ರಶಸ್ತಿಗಳ ಸಂಖ್ಯೆಗಳ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ.

ಆದರೆ ಸ್ಲಂಡಾಗ್ ನ ಶ್ರೇಷ್ಠತೆ ಕುರಿತಂತೆ ಹಲವು ಪರ ವಿರೋಧ ನಿಲುವುಗಳು ಇದ್ದೇ ಇವೆ. ಒಂದು ಕಡೆ ಚಿತ್ರ ಅದ್ಭುತ ಎಂಬ ವಾದ ಇದ್ದರೆ ಇನ್ನೊಂದು ವರ್ಗದಿಂದ ಕಳಪೆ ಚಿತ್ರ ಎಂಬ ಮಾತು ಕೇಳಿ ಬಂದಿದೆ. ಆದರೆ ಇನ್ನೊಂದು ಕಡೆಯ ವಾದ ಎಂದರೆ ‘ಈ ಚಿತ್ರ ತಾಂತ್ರಿಕವಾಗಿ ಚೆನ್ನಾಗಿದೆಯೇ ವಿನಃ ಅದರ ಕಥೆಯ ಗಟ್ಟಿತನ, ಅದು ಪ್ರತಿಪಾದಿಸುವ ವಿಚಾರದಿಂದಲ್ಲ’ ಎಂಬುದು.

ಸರಿಯಾಗಿ ನೋಡಿದರೆ ಈ ವಾದವೇ ಹೆಚ್ಚು ಸತ್ಯ. ಅಲ್ಲಿ ರಿಯಾಲಿಟಿ ಶೋನಲ್ಲಿ ಕೇಳುವ ಪ್ರಶ್ನೆಗಳಿಗೆ ಜಮಾಲ್ ಕೊಡುವ ಉತ್ತರವಾಗಿ ಕತೆ ಹೆಣೆದುಕೊಳ್ಳುತ್ತಾ ಹೋಗುತ್ತದೆ ವಿನಃ ಕತೆ ತಾನೇ ತಾನಾಗಿ ಹೆಣೆದುಕೊಳ್ಳುತ್ತಾ ಒಬ್ಬ ಸ್ಲಂ ಹುಡುಗನ ಪಕ್ವ ಜೀವನದ ಕತೆ ಆಗುವುದೇ ಇಲ್ಲ. ‘ಸಲಾಂ ಬಾಂಬೆ’ ಯ ಕೃಷ್ಣ, ‘ದೇವೀರಿ’ಯ ಕ್ಯಾತನಂಥ ಪಾತ್ರಗಳಲ್ಲಿ ಇರುವ ಆಳ, ಅಗಲ, ದುಃಖ, ದುಗುಡಗಳು, ‘ಸ್ಲಂಡಾಗ್’ನ ಜಮೀಲ್ ಮಲ್ಲಿಕ್ ನಲ್ಲಿ ಕಾಣುವುದಿಲ್ಲ. ಪ್ರಶ್ನೆಗೊಂದು ಉತ್ತರದಂತೆ ಚಿತ್ರದ ವರ್ತಮಾನ ಮತ್ತು ಫ್ಲಾಷ್ ಬ್ಯಾಕ್ ಗಳು ಮಲ್ಲಿಕ್ ನ ಕತೆಯಾಗುತ್ತಾ ಹೋಗುತ್ತವೆ. ಫೈರಿ ಟೇಲ್ ಕತೆಯಂತೆ ರಮ್ಯ ಲೋಕದ ಕತೆಯಾಗಿ ನಿರ್ದೇಶಕರು ಮಲ್ಲಿಕ್ ನ ಕತೆ ಹೇಳಿ ಪ್ರೇಕ್ಷಕರನ್ನು ನಂಬಿಸುತ್ತಾ ಹೋಗುತ್ತಾರೆ.

ಹಾಗೆ ನೋಡಿದರೆ ‘ಸ್ಲಂಡಾಗ್’ ತಾಂತ್ರಿಕವಾಗಿ ಅತ್ಯುತ್ತಮ ಚಿತ್ರ. ಅದು ಮೂರು ಫ್ಲಾಷ್ ಬ್ಯಾಕ್ ಗಳನ್ನು ಏಕಕಾಲದಲ್ಲಿ ನಿಭಾಯಿಸುತ್ತಾ ಹೋಗುತ್ತದೆ. ತಾಂತ್ರಿಕವಾಗಿ ಅತ್ಯಂತ ಕಷ್ಟಕರವಾದ ಅದನ್ನು ನಿರ್ದೇಶಕ ನಿರ್ವಹಿಸುವುದು ಬಹಳ ಸುಲಲಿತವಾಗಿ, ಕಾವ್ಯಾತ್ಮಕವಾಗಿ. ಅಷ್ಟೇ ಅಲ್ಲ, ಚಿತ್ರದ ಸ್ಕ್ರಿನ್ ಪ್ಲೇ, ಎಡಿಟಿಂಗ್, ರೀರೆಕಾರ್ಡಿಂಗ್ ಗಳು ಅದೊಂದು ಸುಂದರ ಕಲಾಕೃತಿಯಾಗಲು ಕಾರಣವಾಗಿದೆ.

ಮೂರನೇ ಫ್ಲಾಷ್ ಬ್ಯಾಕ್ ನಿಂದ ಚಿತ್ರ ಮುಂದುವರಿಯುತ್ತಾ ಹೋಗುವ ತಂತ್ರ ಅತ್ಯಂತ ಆಕರ್ಷಕ. ಅದಲ್ಲದೇ ಚಿತ್ರಕ್ಕೊಂದು ಕಲರ್ ಟೋನ್ ಇದೆ. ಅದನ್ನು ಸ್ಲಂ ಪ್ರತಿನಿಧಿಸುತ್ತದೆ. ಅದು ಇಡೀ ಚಿತ್ರವನ್ನು ಆವರಿಸಿಕೊಂಡು ಹೋಗುವ ರೀತಿ ಆಕರ್ಷಕ.

ಆದರೆ ಒಂದು ಚಿತ್ರ ಅದರ ವಸ್ತು, ಅನುಭವ  ಹಾಗೂ ತಾಂತ್ರಿಕ ಕೌಶಲ್ಯಗಳೆರಡರಲ್ಲೂ ಶ್ರೇಷ್ಠವಾಗಿದ್ದರೆ ಮಾತ್ರ ಅದೊಂದು ಸಾರ್ವಕಾಲಿಕ ಅತ್ಯುತ್ತಮ ಚಿತ್ರ ಆಗಲು ಸಾಧ್ಯ. ಆದರೆ ‘ಸ್ಲಂ’ ವಿಷಯದಲ್ಲಿ ಅದಾಗಿಲ್ಲ. ಒಂದಿಷ್ಟು ಪ್ರಶ್ನೆಗೆ ಒಂದಿಷ್ಟು ಉತ್ತರ ಸೇರಿಕೊಂಡು ಒಬ್ಬನ ಕತೆಯಾಗಿ, ಆ ಕತೆ ಅತ್ಯುತ್ತಮ ತಾಂತ್ರಿಕಾಂಶಗಳ ಜೊತೆ ಸೇರಿ ಸುಂದರವಾಗಿ ಕಂಡಿದೆ. ಯಾವುದೇ ಒಂದು ಕಮರ್ಷಿಯಲ್ ಆದ ಚಿತ್ರ ಅತ್ಯುತ್ತಮವಾಗುವುದು ಹೀಗೆ. ಅದನ್ನು ಬಿಟ್ಟು ‘ಸ್ಲಂ’ ಇನ್ನೇನಿಲ್ಲ.

ಇನ್ನು ಮುಂದೆ ಅಂತೂ ಪ್ರಶಸ್ತಿ ಸಂದ ಕಾರಣಕ್ಕೆ ಆ ಚಿತ್ರ ಇನ್ನೆಷ್ಟು ಶ್ರೇಷ್ಠ ಎಂಬ ಅಭಿಪ್ರಾಯಗಳೊಂದಿಗೆ ಮನ್ನಣೆಗಳನ್ನು ಮೈಗೇರಿಸಿಕೊಳ್ಳುತ್ತದೆ. ಅಂಥ ಪ್ರಶಸ್ತಿಯೊಂದು ಅದಕ್ಕೆ ಸಿಗುವ ಮೂಲಕ ಭಾರತಕ್ಕೆ ಹೆಮ್ಮೆ ಉಂಟು ಮಾಡಿದ್ದಕ್ಕೆ ನಾವು ಆ ಚಿತ್ರವನ್ನು ಅಭಿನಂದಿಸಲೇಬೇಕಾಗುತ್ತದಷ್ಟೇ. ಬಿಟ್ಟರೆ ಪ್ರಶಸ್ತಿಗಳ ಭಾರದಿಂದ ಎಂಬ ಕಾರಣಕ್ಕೆ ಅದು ಅತ್ಯುತ್ತಮ ಆಗಬೇಕಿಲ್ಲ.