ಸಂಸಾರಕ್ಕೆ ಯೋಗ್ಯವೆನಿಸುವ ಲಕ್ಷಣಗಳಾವುವೂ ಶಿವನಲ್ಲಿ ಇರುವಂತೆ ನಮಗೆ ಕಾಣಿಸುವುದಿಲ್ಲ. ಅವಳ ಅಪ್ಪನಾದ ದಕ್ಷನಿಗೂ ಹಾಗೆ ಕಂಡಿರಬೇಕು. ಇಲ್ಲಿ ನಾವು ಗಮನಿಸಬೇಕಾದ್ದು, ಶಿವನ ಅಲೆಮಾರಿತನ, ಒರಟುತನವು ‘ಗೃಹಸ್ಥ’ ನ ಲಕ್ಷಣಕ್ಕೆ ತೀರಾ ವಿರುದ್ಧವಾದುದು ಎನ್ನುವುದನ್ನು. ಲಹರಿಯಲ್ಲಿ ಯೋಚಿಸುತ್ತಾ ಹೋದರೆ, ಇದು ಹಲವು ಉತ್ತರಗಳನ್ನು ಮೇಲಿನ ಪ್ರಶ್ನೆಗಳಿಗೆ ಕೊಡುತ್ತಾ ಹೋಗುತ್ತದೆ. ದಾಕ್ಷಾಯಿಣಿಗೆ ಗೃಹಣಿಯಾಗುವುದು ಬೇಡವಾಗಿತ್ತು; ಹೆಂಡತಿ ಆಗಿರುವುದರ ಮಿತಿಗಳ ಬಗ್ಗೆ ಅವಳು ಯೋಚಿಸಿರಬಹುದು.
‘ಯಕ್ಷಾರ್ಥ ಚಿಂತಾಮಣಿ’ಯಲ್ಲಿ ಕೃತಿ ಪುರಪ್ಪೇಮನೆ ಲೇಖನ

 

ಒಂದು ಸಮುದಾಯದ ಘನೀಭವಿಸಿದ ಭಾವನೆ, ಚಿಂತನೆಗಳು ಪುರಾಣದಲ್ಲಿ ಅಡಕವಾಗಿರುವುದರಿಂದಲೇ ಅದು ಭಾಷೆಯಂತೆ ಹಲವು ನೆಲೆಗಳಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವಂತದ್ದು. ಪುರಾಣವು ಒಂದು ಸಮುದಾಯದ ಸಾರ್ವತ್ರಿಕ ಜ್ಞಾನವಾಗಿ ನಮ್ಮ ಲೋಕದೃಷ್ಟಿಯನ್ನು ರೂಪಿಸಿದ ಬಗ್ಗೆ, ಮತ್ತು ನಮ್ಮ ಚಿಂತನೆಗಳು, ಪ್ರತಿಕ್ರಿಯೆಗಳು, ಭಾವನೆಗಳು ಹೇಗೆ ಪ್ರತಿಯೊಂದು ಕಾಲದ, ಪ್ರದೇಶದ ಪುರಾಣಗಳಲ್ಲಿ ಅಡಕವಾಗಿರುತ್ತವೆ ಎನ್ನುವುದನ್ನು ಹಲವು ಪ್ರದೇಶಗಳ ಪುರಾಣಗಳನ್ನು ಅಧ್ಯಯನ ಮಾಡಿದವರು ಬರೆದಿದ್ದಾರೆ. ಹಾಗಾಗಿಯೇ ಪುರಾಣಗಳು ಆಯಾ ಕಾಲಕ್ಕೆ ತಕ್ಕಂತೆ ಮರುನಿರೂಪಣೆಯಾಗುತ್ತಾ ಹೋಗುವುದು.

ಪುರಾಣದ ಕತೆಗಳನ್ನು ಯಕ್ಷಗಾನವು, ಅದರಲ್ಲೂ ಮಾತಿನಲ್ಲೇ ಪಾತ್ರ ಕಟ್ಟುವ ತಾಳಮದ್ದಲೆಯಂತಹ ಪ್ರಕಾರವು, ಪುರಾಣದ ಅರ್ಥವನ್ನು ವಿಸ್ತರಿಸಿ, ವ್ಯಾಖ್ಯಾನಿಸಿ, ಅದನ್ನು ಭಾವದ ಜೊತೆಗೆ ಸೇರಿಸಿ ಕೊಡುವುದಕ್ಕೆ ಪ್ರಯತ್ನಿಸುತ್ತದೆ. ಒಂದು ಪ್ರದರ್ಶನವನ್ನೂ ನಾವು ಹಾಗೆಯೇ ನೋಡಬಹುದು. ಒಂದು ಪಾತ್ರ ಮಾಡಿದವರು ಕೊಟ್ಟ ಅರ್ಥ, ತರ್ಕ, ಭಾವನೆಗಳು ಪ್ರಸಂಗ ಪಠ್ಯವನ್ನು ಅನುಸಂಧಿಸಿದ್ದರಿಂದ ಬಂದುದಾಗಿದ್ದರೆ, ಅದನ್ನು ನೋಡಿದ ಪ್ರೇಕ್ಷಕನು ಅದರ ಮೂಲಕವೇ ಪಾತ್ರದ ಒಳಹೊಕ್ಕರೂ, ಅವರ ಮಾತೇ ಮೂಲ ಪಠ್ಯದಂತಾಗಿ, ಅದರ ವ್ಯಾಖ್ಯಾನ, ಅರ್ಥ ಮತ್ತು ಭಾವನೆಗಳು ಅವಳೊಳಗೆ ವಿಸ್ತರಿಸುತ್ತಾ ಹೋಗುತ್ತದೆ. ಅದು ಅಂತಿಮವೆಂದಲ್ಲ, ಅಥವಾ ತಪ್ಪು ಸರಿಯೆಂದೂ ಅಲ್ಲ. ಅದು ಈ ಕಾಲದ ಅನುಭವಕ್ಕೆ ತೆರೆದುಕೊಂಡು ಬದುಕುವ ಸಾಮಾಜಿಕರು ಪುರಾಣವನ್ನು ಅರ್ಥ ಮಾಡಿಕೊಳ್ಳುವ ಬಗೆ, ಮತ್ತು ಅದರ ಮೂಲಕ ಅರಿವನ್ನು ವಿಸ್ತರಿಸಿಕೊಳ್ಳುವ ಬಗೆ. ಇವೆಲ್ಲವೂ ಪುರಾಣದ ಭಾಗವೇ ಎಂದೂ ಹೇಳಬಹುದು.

ಕಳೆದ ತಿಂಗಳು ನೋಡಿದ ತಾಳಮದ್ದಲೆಯ ದಾಕ್ಷಾಯಿಣಿಯ ಪಾತ್ರ, ಆ ಪ್ರಸಂಗದ ಪಠ್ಯದೊಳಗೆ ದಾಕ್ಷಾಯಿಣಿಗೊಂದು ಸ್ವಾಯತ್ತತೆಯನ್ನು ತಂದು ಕೊಟ್ಟದ್ದು ಗಮನಿಸಿದ್ದರಿಂದಲೇ, ಅದು ಪ್ರೇಕ್ಷಕಳಾದ ನನ್ನೊಳಗೆ ಅವಳ ಕಥೆಯಲ್ಲಿ ಇನ್ನೇನು ಅಡಕವಾಗಿದೆಯೆಂದು ನೋಡುವುದಕ್ಕೆ ಪ್ರೇರೇಪಿಸಿತು. ಅಲ್ಲದೇ ಇದನ್ನು ಮುಂದುವರೆಸಿದರೆ ದಾಕ್ಷಾಯಿಣಿಗೆ ಹೊಸ ಕಥೆಯೂ ಹುಟ್ಟಬಹುದು. ಆದರೆ ಇದು ಬರೀ ತರ್ಕದ ಮೂಲಕವೇ ಬರುವುದಲ್ಲ. ಚಿಂತನೆಯೇ ತೋರಿಸುವುದಲ್ಲ, ಪ್ರದರ್ಶನದೊಂದಿಗಿನ ತನ್ಮಯತೆಯೂ, ಭಾವನೆಗಳೊಂದಿಗೆ ಹುಟ್ಟಿದ ತಾದಾತ್ಮ್ಯತೆಯೂ ನಮ್ಮ ಈವರೆಗಿನ ಅನುಭವಕ್ಕೆ ಸೇರಿಕೊಂಡು ತರ್ಕ-ಭಾವ ಎನ್ನುವುದು ಬೇರೆಯಾಗದೆ ಹುಟ್ಟುವಂತದ್ದು.

ಪುರಾಣದಲ್ಲಿ ಬರುವ ಹೆಚ್ಚಿನ ಸ್ತ್ರೀಯರ ಪಾತ್ರಗಳು ಅವರ ಭೌತಿಕತೆಗೆ ಮತ್ತು ಫಲವಂತಿಕೆಗೆ ಸಂಬಂಧ ಪಟ್ಟೇ ಇರುತ್ತದೆ. ಅವರಿಗೆ ಅದು ಬಿಟ್ಟು ಉಳಿದೆಡೆ ಅಸ್ತಿತ್ವ ಇಲ್ಲ. ಯಕ್ಷಗಾನದಲ್ಲೂ ಹಾಗೆಯೇ ಇದೆ. ಹೆಂಗಸರ ದೇಹ ಕೊಡಬಹುದಾದ ಸುಖ ಮತ್ತು ಅದರಿಂದಾಗುವ ಸಂತಾನೋತ್ಪತ್ತಿ ಇವೆರಡರ ಸುತ್ತವೇ ಹೆಚ್ಚಿನ ಸ್ತ್ರೀ ಪಾತ್ರಗಳು ಸುತ್ತುತ್ತಾ ಇರುತ್ತವೆ. ಪ್ರೇಯಸಿಯಾಗಿ, ಅಪ್ಸರೆಯಾಗಿ, ಮಕ್ಕಳನ್ನು ಬಯಸುವ ಹೆಂಡತಿಯಾಗಿ, ಯುದ್ಧಕ್ಕೆ ಮಗನನ್ನು ಅಳುತ್ತಾ ಕಳಿಸುವ ತಾಯಿಯಾಗಿ ಅಥವಾ ಸೀತೆ ದ್ರೌಪದಿಯರಂತೆ ಪತಿವ್ರತೆಯಾಗಿ-ಅಂದರೆ, ಗಂಡಸಿಗೆ ಅವರು ಕೊಡುವ ಪ್ರಾಮುಖ್ಯತೆಯಿಂದ ಅಸ್ತಿತ್ವ ಪಡೆದುಕೊಳ್ಳುವ ಸ್ಥಾನದಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ. ಈ ಸಂಬಂಧಗಳಲ್ಲದೇ ಬೇರೆ ರೀತಿಯ ಸಂಬಂಧಗಳು ಬಹಳ ಕಡಿಮೆ. ಇದರ ಬಗ್ಗೆ ಇನ್ನೊಮ್ಮೆ ವಿಸ್ತಾರವಾಗಿ ಬರೆಯುವುದಿದೆ.

ಒಂದು ಪಾತ್ರ ಮಾಡಿದವರು ಕೊಟ್ಟ ಅರ್ಥ, ತರ್ಕ, ಭಾವನೆಗಳು ಪ್ರಸಂಗ ಪಠ್ಯವನ್ನು ಅನುಸಂಧಿಸಿದ್ದರಿಂದ ಬಂದುದಾಗಿದ್ದರೆ, ಅದನ್ನು ನೋಡಿದ ಪ್ರೇಕ್ಷಕನು ಅದರ ಮೂಲಕವೇ ಪಾತ್ರದ ಒಳಹೊಕ್ಕರೂ, ಅವರ ಮಾತೇ ಮೂಲ ಪಠ್ಯದಂತಾಗಿ, ಅದರ ವ್ಯಾಖ್ಯಾನ, ಅರ್ಥ ಮತ್ತು ಭಾವನೆಗಳು ಅವಳೊಳಗೆ ವಿಸ್ತರಿಸುತ್ತಾ ಹೋಗುತ್ತದೆ. ಅದು ಅಂತಿಮವೆಂದಲ್ಲ.

ಆದರೆ ದೇವರ ಹೆಂಡತಿಯಾಗಿರುವ ದಾಕ್ಷಾಯಣಿ ಬೇರೆ ರೀತಿಯವಳು. ಅವಳು ಹೆಂಡತಿಯಾದರೂ, ಮಾತೆಯಾದರೂ ಅವಳೇ ಮಕ್ಕಳನ್ನು ಹೆತ್ತು ಕೊಡಬೇಕಾಗಿಲ್ಲ. ಪುರಾಣದ ಭಾಷೆಯಲ್ಲಿ ಅವಳು ‘ಸ್ತನದಾಯಿ ದೇವತೆ’. ಕ್ರಿ. ಶ. 300-600 ರ ಕಾಲದಲ್ಲಿ ಈ ಸ್ವತಂತ್ರ ದೇವತೆಗಳು ಬಂದವೆಂದೂ, ಮಾರ್ಕಾಂಡೇಯ ಪುರಾಣದ ಕಾಲದಲ್ಲಿ ನಗರ ಮತ್ತು ಗ್ರಾಮಗಳಲ್ಲೂ ಪೂಜಿಸ್ಪಟ್ಟಳೆಂದೂ, ಅದಕ್ಕೂ ಹಿಂದೆ ಅವರು ಜನಪದರ, ಗಿರಿಜನರ ದೇವತೆಗಳೂ ಆಗಿರಬಹುದೆಂದೂ ಕೆಲವರು ಅಭಿಪ್ರಾಯ ಪಡುತ್ತಾರೆ. ಶಿವ, ಸತಿಯ ಶವವನ್ನು ಹೊತ್ತು ತಿರುಗುವುದೂ, ದೇವತೆಗಳು ಕಳವಳಗೊಂಡು ವಿಷ್ಣುವಿನ ಮೂಲಕ ಅವಳ ದೇಹವನ್ನು ಚೂರಾಗಿಸಿ, ಮುಂದೆ ಅವುಗಳು ಚದುರಿ ಬಿದ್ದಲ್ಲೆಲ್ಲಾ ಶಿವನೂ ವಿಯೋಗ ಭಾವವನ್ನು ಅನುಭವಿಸುತ್ತ ನೆಲೆಸಿ, ನಂತರದ ಕ್ರಿ. ಶ. 600 ರಿಂದ 900 ರ ಕಾಲದಲ್ಲಿ ಅವೆಲ್ಲವೂ ಶಾಕ್ತ್ಯ ಪಂಥದ ಸತಿ-ಶಿವರ ದೇವಾಲಯಗಳಾದವೆಂದೂ ಕೆಲವೆಡೆ ಉಲ್ಲೇಖವಾಗಿದೆ. ಮುಂದೆ ಪಾರ್ವತಿಯೂ ಮಕ್ಕಳನ್ನು ಹೆರುವುದಿಲ್ಲ. ಸುಬ್ರಮಣ್ಯ ಶಿವನ ಮಗನಾಗಿಯು, ಗಣಪತಿ ಪಾರ್ವತಿಯ ಮಗನಾಗಿಯು ಹುಟ್ಟಿದ ಕತೆ ನಮಗೆಲ್ಲ ತಿಳಿದೇ ಇದೆ. ಇದಕ್ಕೂ ಹಲವು ಆವೃತ್ತಿಗಳಿರಬಹುದು.

ಆದರೂ ಅಪ್ಪನ ಮನೆಗೆ ಹೋಗಬೇಕೆಂಬ ಸತಿಯ ಆಸೆ ಮತ್ತು ಅವಳು ಸಾಯುವುದನ್ನು ಸಾಧ್ಯವಾಗಿಸಲು, ಶಿವನನ್ನು ದೇವನಾಗಿಯೂ ದಾಕ್ಷಾಯಣಿಯನ್ನು ಜೀವವಾಗಿಯು ತಾಳಮದ್ದಲೆಗಳಲ್ಲಿ ಚಿತ್ರಿಸಲಾಗುತ್ತದೆ. ಜೀವಿಗಷ್ಟೇ ಸಾಯಲು ಸಾಧ್ಯ. ಸತಿ ಸಹಗಮನವನ್ನು ಮಾಡಲು ಸಾಧ್ಯ. ಹಾಗಿದ್ದರೂ ಅವಳು ಪತಿಗೆ ವಿಧೇಯಳೇ. ಅವನನ್ನು ವಿರೋಧಿಸಿ ಹೋಗಿದ್ದರಿಂದಲೇ ಅವಳು ಅವಮಾನ ಅನುಭವಿಸಬೇಕಾಯಿತು. ಅಪ್ಪನ ವಿರೋಧವನ್ನು ಲೆಕ್ಕಿಸದೆ ಪ್ರೀತಿಸಿದವನನ್ನೇ ಮದುವೆಯಾಗುವುದಕ್ಕೆ ಮಾದರಿಯಾಗಿ ದಾಕ್ಷಾಯಿಣಿಯ ಕತೆ ಕಾಣಿಸುವುದರ ಜೊತೆಗೇ, ಗಂಡನ ಮಾತನ್ನು ಮೀರಿದರೆ ಹೆಣ್ಣಿಗೆ ಕೆಡುಕಾಗುತ್ತದೆ ಎನ್ನುವುದನ್ನೂ ಕಥೆ ಹೇಳುತ್ತದೆ. ಒಟ್ಟಿನಲ್ಲಿ ಅಪ್ಪ ಅಥವಾ ಗಂಡ ಯಾರಾದರೊಬ್ಬರು ಅವಳನ್ನು ನಿಯಂತ್ರಿಸಲು ಇರಲೇಬೇಕು. ಈ ಕಾಲದಲ್ಲಿಯು ಪ್ರೇಮವಿವಾಹವಾದರೂ ಮುಂದೆ ಇದೇ ರೀತಿಯ ಕುಟುಂಬದ ಸಾಂಪ್ರದಾಯಿಕ ಒಳಚಲನೆಗಳಲ್ಲೇ ಮುಂದುವರಿಯುವುದನ್ನು ನಾವು ಕಾಣುತಿದ್ದೇವೆ. ಪ್ರೇಮಿಸುವಲ್ಲಿ ತಮ್ಮತನವನ್ನು ತೋರಿಸುವ ಹೆಂಗಸರು ಮತ್ತೆ ಅದನ್ನು ಮರೆತವರಂತೆ ಬದುಕುತ್ತಾರೆ.

ದಾಕ್ಷಾಯಿಣಿಯಲ್ಲಿ ಇನ್ನೊಂದು ಆಯಾಮವೂ ಇದೆ. ಅದು ಶೃಂಗಾರ- ಪ್ರೀತಿಯದ್ದು. ಇದಕ್ಕೆ ಶಿವನೂ ಕಾರಣ. ಅಥವಾ ಅಂತಹವನನ್ನು ಆರಿಸಿಕೊಂಡು ಅವನಲ್ಲಿರುವ ಉತ್ಕಟತೆಯನ್ನು, ಅರ್ಧನಾರೀಶ್ವರನಾಗಬಹುದಾದ ಸಾಧ್ಯತೆಯನ್ನು, ಅವನೇ ಅನ್ವೇಷಿಸಿಕೊಳ್ಳಲು ಅಥವಾ ತೋರಿಸಿಕೊಳ್ಳಲು ದಾಕ್ಷಾಯಿಣಿಯೇ ಕಾರಣಳಾಗಿರಬಹುದು. ಶಿವನ ದೈಹಿಕ ಚರ್ಯೆಗಳು ಉಳಿದ ದೇವತೆಗಳಂತಲ್ಲ. ಹಿಂದೆಯೇ ಹೇಳಿದಂತೆ ಅವನ ವಾಸಸ್ಥಾನವಾಗಲಿ, ಬಾಹ್ಯ ಅಲಂಕಾರಗಳಾಗಲಿ ಎಲ್ಲರೂ ಒಪ್ಪುವಂಥದ್ದಲ್ಲ. ಸ್ನಾನ ಜಪ ತಪ ಇಲ್ಲದವನು, ಮಾಂಸ ತಿನ್ನುವವರ ದೇವರು, ಅವನ ಸಹಚರರೆಲ್ಲಾ ಭೂತ, ಗಣಗಳು ಇತ್ಯಾದಿ. ಅಂದರೆ ಒಮ್ಮೆಗೇ ಮರುಳಾಗುವಂತದ್ದು ಏನೂ ಇಲ್ಲವೆಂದೆನಿಸುವ ಬಾಹ್ಯ ರೂಪ. ಅಂತಹವನನ್ನು ದಾಕ್ಷಾಯಿಣಿ ಯಾಕೆ ಆರಿಸಿಕೊಂಡಳು? ಗಂಡಸರ ಬಗ್ಗೆ, ಸಂಸಾರದ ಬಗ್ಗೆ ಅವಳಿಗಿರುವ ಅಭಿರುಚಿ ಎಂತದ್ದು?

ಸಂಸಾರಕ್ಕೆ ಯೋಗ್ಯವೆನಿಸುವ ಲಕ್ಷಣಗಳಾವುವೂ ಶಿವನಲ್ಲಿ ಇರುವಂತೆ ನಮಗೆ ಕಾಣಿಸುವುದಿಲ್ಲ. ಅವಳ ಅಪ್ಪನಾದ ದಕ್ಷನಿಗೂ ಹಾಗೆ ಕಂಡಿರಬೇಕು. ಇಲ್ಲಿ ನಾವು ಗಮನಿಸಬೇಕಾದ್ದು, ಅವನ ಅಲೆಮಾರಿತನ, ಒರಟುತನವು ‘ಗೃಹಸ್ಥ’ ನ ಲಕ್ಷಣಕ್ಕೆ ತೀರಾ ವಿರುದ್ಧವಾದುದು ಎನ್ನುವುದನ್ನು. ಲಹರಿಯಲ್ಲಿ ಯೋಚಿಸುತ್ತಾ ಹೋದರೆ, ಇದು ಹಲವು ಉತ್ತರಗಳನ್ನು ಮೇಲಿನ ಪ್ರಶ್ನೆಗಳಿಗೆ ಕೊಡುತ್ತಾ ಹೋಗುತ್ತದೆ. ದಾಕ್ಷಾಯಿಣಿಗೆ ಗೃಹಣಿಯಾಗುವುದು ಬೇಡವಾಗಿತ್ತು; ಹೆಂಡತಿ ಆಗಿರುವುದರ ಮಿತಿಗಳ ಬಗ್ಗೆ ಅವಳು ಯೋಚಿಸಿರಬಹುದು; ಪ್ರೇಯಸಿಯಾಗಿ ಮತ್ತು ಹೆಂಡತಿಯಾಗಿ ವಿಹರಿಸುವ ಶೃಂಗಾರದ ಗುಣವಿಶೇಷಗಳಲ್ಲಿ ಭೇದಗಳಿರಬಹುದು. ಗೃಹಣಿಯಾಗುವುದೆಂದರೆ ನಮಗೆ ತಕ್ಷಣ ಕಲ್ಪನೆಗೆ ಬರುವುದು ಗಂಡನ ವಂಶವನ್ನು ಮುಂದುವರಿಸಬೇಕಾದ ಗಂಡು ಮಕ್ಕಳನ್ನು ಹೆರುವುದು, ಅವರನ್ನು ನೋಡಿಕೊಳ್ಳುವುದು. ಗಂಡನ ಬೇಕು ಬೇಡಗಳನ್ನು ಪೂರೈಸುವುದು, ಅವನ ಇಷ್ಟಕ್ಕೆ ತಕ್ಕಂತೆ ನಡೆಯುವುದು, ಅವನಿಗಾಗಿ ಅಲಂಕರಿಸಿಕೊಳ್ಳುವುದು, ಅವನ ಮನೆಯನ್ನು ಒಪ್ಪವಾಗಿಡುವುದು, ಬಂದವರಿಗೆ ಆತಿಥ್ಯ ಮಾಡುವುದು. ಅವನ ಅಸ್ತಿತ್ವದಡಿಯಲ್ಲಿ ನೆರಳಾಗಿ ಬದುಕುವುದು ಮತ್ತು ಯಾವುದೇ ಸಮಯದಲ್ಲೂ ಅವನಿಗೆ, ಅವನ ಕುಟುಂಬಕ್ಕೆ ಅವಮರ್ಯಾದೆ ಆಗುವಂತಹ ಕೆಲಸ ಮಾಡದೇ ಇರುವುದು.

ಸತಿಯಾದವಳು ಪತಿಯ ಮಾತನ್ನು ಮೀರಿದರೆ ಆಗುವ ಅನಾಹುತವನ್ನು ಸಾರುವುದನ್ನು ಈ ಕಥೆ ಹೇಳ ಹೊರಟಿದ್ದರೂ, ಉತ್ತಮ ಸತಿಯಾದವಳು ಹೇಗಿರಬೇಕೆಂದು ಅವಳ ಮೂಲಕವೇ ‘ಸತಿ ಧರ್ಮ’ ದ ಸ್ಥಾಪನೆಯಾಗಿದ್ದು ಎಂದು ನಮಗೆ ಅನ್ನಿಸಿದರೂ (ಆರಂಭ ಕಾಲದ ಒಂದು ಪುರಾಣ ಕಥೆಯಲ್ಲಿ ಹಾಗೂ ಇದೆಯಂತೆ), ಅದಕ್ಕೂ ಮೊದಲೇ, ಸತಿಯೇ, ಗೃಹಸ್ಥಧರ್ಮಕ್ಕೆ ವಿರುದ್ಧವಾದ ನಡವಳಿಕೆಯುಳ್ಳ ಒಂದು ಗಂಡನ್ನು ಆಯ್ಕೆ ಮಾಡಿಕೊಂಡಿರುವುದು ವಿಶಿಷ್ಟವಾಗಿ ಕಾಣುತ್ತದೆ.

ಯಕ್ಷಗಾನ ಪ್ರಸಂಗದಲ್ಲಿ ದಾಕ್ಷಾಯಿಣಿ ಮತ್ತು ಶಿವನ ದೃಶ್ಯ, ಒಂದು ಗೃಹಸ್ಥ ಮತ್ತು ಗೃಹಣಿಯ ಮಾತುಕತೆಯಂತೆ ಪ್ರದರ್ಶನಗೊಂಡಿದೆ. ಅಪ್ಪನ ಮನೆಯ ಕಾರ್ಯಕ್ಕೆ ಹೋಗುವುದು, ಅದಕ್ಕಾಗಿ ಶಿವನ ಮನವೊಲಿಸುವುದಕ್ಕೆ ನೋಡುವುದು, ಅವನು ಹೋಗುವುದು ಬೇಡವೆಂದಾಗ ತಾನೊಬ್ಬಳೆ ಹೋಗುವುದು ಇತ್ಯಾದಿ. ಅವಳಿಗೆ ಶಿವನ ಗೃಹಸ್ಥತನ ಸಾಕೆನಿಸಿರಬಹುದೇ? ಅವಳು ಹೋಗುವುದು ಅವಳ ಅಪ್ಪನ ಮನೆಯ ಕಾರ್ಯ ನೋಡುವುದಕ್ಕಲ್ಲ, ಅಲ್ಲಿ ತನ್ನ ಜೀವವನ್ನು ಕೊನೆಗೊಳಿಸಿ ಮತ್ತೆ ಶಿವನಿಗೆ ಅವನ ಗೃಹಸ್ಥನಲ್ಲದ ವ್ಯಕ್ತಿತ್ವವನ್ನು ನೆನಪು ಮಾಡುವುದಕ್ಕಿರಬಹುದೇ ಅನ್ನುವ ಆಲೋಚನೆಗಳು ಬರುತ್ತವೆ.

ಪುರಾಣ, ಮಹಾಕಾವ್ಯಗಳಲ್ಲಿ ಬರೆದ ಆ ಕಾಲದ ಭಾವನೆ ಮತ್ತು ಚಿಂತನೆಗಳು, ಮುಖ್ಯವಾಹಿನಿಯಲ್ಲಿ ಧ್ವನಿ ಸಿಗದ ಪಾತ್ರಗಳು ಇನ್ನೆಲ್ಲಿ ತಮ್ಮನ್ನು ಪ್ರಕಟಿಸಿಕೊಳ್ಳುತ್ತಾರೆಂದು ನೋಡುವಾಗ, ಪುರಾಣವನ್ನು ಮರುನಿರೂಪಿಸಿದ ಮೌಖಿಕ ಪರಂಪರೆಗಳಲ್ಲಿ, ಮತ್ತು ನಾವು ಈಗ ‘ಜಾನಪದ’, ‘ದೇಶಿ’, ‘ಲೌಕಿಕ’ ಎಂದು ಕರೆಯುವ ಹೆಂಗಸರ ಮತ್ತು ಕೆಳ ಜಾತಿಯವರ ಅಭಿವ್ಯಕ್ತಿ ಪ್ರಕಾರಗಳಲ್ಲಿ ಕಾಣಸಿಗಬಹುದು. ಅವುಗಳು, ಶ್ರೇಣಿಯಲ್ಲಿ ಮುಖ್ಯವಾಹಿನಿಯ ‘ಶಾಸ್ತ್ರೀಯ’ ಮಹಾಕಾವ್ಯಗಳಿಗಿಂತಲೂ ಕೆಳಗೆ ಅನ್ನುವಂತೆ ಬದಿಗೆ ಸರಿಸಲಾಗಿದ್ದರೂ ಅವು ಪುರಾಣದ ಎಷ್ಟೊ ಪಾತ್ರಗಳನ್ನು ವೈವಿಧ್ಯಮಯವಾಗಿ ಗ್ರಹಿಸಿರುತ್ತವೆ. ದಾಕ್ಷಾಯಿಣಿ ಮತ್ತು ಶಿವನ ಸಂಬಂಧದ ಬಗ್ಗೆ ಬಂದ ‘ಪ್ರಾದೇಶಿಕ’ ಕತೆಗಳೊ, ಲಾವಣಿ-ಹಾಡುಗಳೊ ಸಿಕ್ಕರೆ, ಅಂತವನ್ನು ನಾವು ಗಮನಿಸಿದರೆ, ಪಾತ್ರಕ್ಕೆ ಇನ್ನಷ್ಟು ಆಯಾಮಗಳು ದಕ್ಕಬಹುದು.