ಎಲ್ಲದರಲ್ಲೂ ಹುಳುಕು ಹುಡುಕುತ್ತಾ, ಗೋಳುಗುಟ್ಟುತ್ತಾ, ಆಪಾದಿಸುತ್ತಾ, ಕೊಂಕು ತೆಗೆಯುತ್ತಾ ಕೂರುವುದು ಸರಿಯಲ್ಲ. ಆದರೆ ಬದುಕೆಂದರೆ ಸಿಹಿ-ಕಹಿಗಳೆರಡೂ ಇರುವಾಗ, ಸಿಹಿಯ ಮಾತನ್ನೇ ಹಂಚುತ್ತಾ, ಕಹಿಯನ್ನೆಲ್ಲಾ ಒಳಗೇ ನುಂಗಿ ನುಂಗಿ ನಂಜುಂಡರಾಗುವುದು ನಮ್ಮ ಮೇಲೆ ನಾವೇ ಹೊರೆಸಿಕೊಳ್ಳುವ ಭಾರ. ಹತ್ತರಲ್ಲಿ ಒಂದು ಸಲವಾದರೂ ನೋವನ್ನು ನೋವಾಗಿ, ಅಳುವನ್ನು ಅಳುವಾಗಿ, ಸೋಲನ್ನು ಸೋಲಾಗಿ ತೋರಿಸಿಕೊಳ್ಳುವ ಸ್ವಾತಂತ್ರ್ಯ ನಾವು ರೂಢಿಸಿಕೊಳ್ಳಬೇಕಿದೆ. ನಗುವಿನಂತೆಯೇ ಅಳು, ಗೆಲುವಿನಂತೆಯೇ ಸೋಲು ಸಹಜ ಸುಂದರ ಎಂಬ ಅರಿವು ಬೆಳೆಸಿಕೊಳ್ಳದಿದ್ದರೆ ಬದುಕು ಉಸಿರುಗಟ್ಟಿಸುತ್ತದೆ. ಹಾಗಂತ ಸೋಷಿಯಲ್ ಮೀಡಿಯಾದಲ್ಲಿ ನನಗೆ ನೋವಾಗಿದೆ, ನನಗೆ ಹೆದರಿಕೆ, ನಾನು ಸೋತೆ ಎಂದು ಡಂಗೂರ ಹೊಡೆಯಬೇಕಿಲ್ಲ.
ಎಸ್ ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ

“ಮತ್ತೆ ಬಾಲ್ಯಕ್ಕೆ ಹೋಗುವ ಹಾಗಿದ್ದಿದ್ದರೆ ಎಷ್ಟು ಚೆನ್ನಾಗಿರೋದು. ಸಹಜವಾಗಿ, ಸರಳವಾಗಿ, ಮುಕ್ತವಾಗಿ ನಾವಿದ್ದ ಹಾಗೆ ಇದ್ದುಬಿಡೋದು ವಯಸ್ಸಾದ ಹಾಗೆಲ್ಲ ಕ್ಲಿಷ್ಟವಾಗುತ್ತಾ ಹೋಗತ್ತೆ. ಕಲಿಯಬಾರದು ಅಂತೇನಿಲ್ಲ ಕಣೆ. ಆದರೂ ಕೆಲವೊಮ್ಮೆ ನಿರಂತರ ಬದಲಾವಣೆ, ಕಲಿಕೆಗಳು ಸಾಕು ಸಾಕು ಎನ್ನಿಸುವಷ್ಟು ಚಿಟ್ಟು ಹಿಡಿಸುತ್ತೆ ಗೊತ್ತಾ?” ಅವಳು ಹೇಳುತ್ತಿದ್ದರೆ ಒಂದರೆಕ್ಷಣ ಎಲ್ಲರ ಮಾತೂ ಕಲಸಿದಂತೆ, ನಮ್ಮೆಲ್ಲರ ಬಿಂಬವೂ ಅವಳ ಕನ್ನಡಿಯಲ್ಲಿ ಪ್ರತಿಫಲನವಾದಂತೆ ಮಾತು ಮರೆತು ಕುಳಿತಿದ್ದೆ.

ಓದು, ಕೆಲಸ, ಮದುವೆ, ಮಕ್ಕಳು, ಅತ್ತೆ-ಮಾವ, ತಂದೆ-ತಾಯಿ, ಹವ್ಯಾಸ, ಆರೋಗ್ಯ ಎಂಬ ನಿಲ್ಲದ ಚಕ್ರದೊಳಗೆ ಬಂಧಿಯಾದ ಹುಡುಗಿಯವಳು. ತೀರ ಏಳೆಂಟು ವರ್ಷದ ಹಿಂದಿನವರೆಗೂ ಚಟಪಟ ಮಾತಾಡುತ್ತಾ, ಹಕ್ಕಿಯಂತೆ ಸ್ವಚ್ಛಂದವಾಗಿ ಹಾರಾಡಿಕೊಂಡಿದ್ದ ಗೆಳತಿ ಇವಳೇನಾ ಎನ್ನಿಸುವಂತಿತ್ತು. ಮತ್ತೆ ಮುಂಚಿನ ಹಗುರ ಮನಸ್ಸಿನ ದಿನಗಳು ಬರಲು ಹತ್ತು ಹದಿನೈದು ವರ್ಷಗಳಾದರೂ ಬೇಕು ಎಂಬುದು ಇಬ್ಬರಿಗೂ ಗೊತ್ತು. ಹಾಗಿದ್ದೂ ಸದಾ ನಗುವಿನ ಮುಖವಾಡ ಹೊತ್ತು, ಸಂಭ್ರಮದ ವಾತಾವರಣ ಸೃಷ್ಟಿಸಲೆಂದೇ ನಿಯೋಜಿತವಾದಂತೆ ವರ್ತಿಸುವ ಎರಡು ಜೀವಗಳು ಅಪರೂಪಕ್ಕಾದರೂ ಒಮ್ಮೆ ಸರಿಯೆನಿಸದ ವಿಷಯಗಳ ಬಗ್ಗೆ ಚರ್ಚಿಸುವುದುಂಟು. ಅಂತಹ ಚರ್ಚೆಯಲ್ಲಿ ಹಾದುಹೋಗುವ ವಿಷಯಗಳಿಂದ ಸಮಸ್ಯೆಗೆ ಪರಿಹಾರ ದೊರೆಯದಿದ್ದರೂ, ಕಡೆಪಕ್ಷ ನಮ್ಮಂತೆಯೇ ಯೋಚಿಸುವ ಇನ್ನೊಂದು ಜೀವವಿದೆ ಎಂಬ ನೆಮ್ಮದಿ ಲಭಿಸುವುದು ಸತ್ಯ.

“ಈ ತಲೆಮಾರಿನ ಮಕ್ಕಳಿಗೆ ಕೌಟುಂಬಿಕ ಮೌಲ್ಯಗಳ ಅರಿವಿಲ್ಲ. ಮದುವೆ ಮಾಡಿಕೊಂಡರೂ ನೆಟ್ಟಗೆ ಸಂಸಾರ ಮಾಡುತ್ತಾರೆಂಬ ಖಾತರಿಯಿಲ್ಲ. ಸದಾ ಹಣ, ಅಧಿಕಾರ, ಸ್ಥಾನಮಾನ ಅಂತ ತಮ್ಮ ಸುಖ, ನೆಮ್ಮದಿಯ ಹಿಂದೆ ಓಡುವ ಸ್ವಾರ್ಥಿಗಳು. ಎಲ್ಲವನ್ನೂ ದುಡ್ಡಿನಿಂದಲೇ ಕೊಳ್ಳಬಹುದೆಂಬ ಭ್ರಮೆ ಅವರಿಗೆ. ಸದಾಕಾಲ ಮೊಬೈಲ್, ಲ್ಯಾಪ್ ಟಾಪ್ ಅಂತ ವಾಸ್ತವ ಜಗತ್ತಿನಿಂದ ದೂರವೇ ಬದುಕುವ ವಿಚಿತ್ರ ಜೀವಿಗಳು.” ಹೀಗೆ ನಮ್ಮ ಬಗ್ಗೆ ಪ್ರತಿದಿನ ತಿವಿಯುವ ದೊಡ್ಡವರು, ಯಾವಾಗಲೂ ಎಲ್ಲವೂ ಸರಿಯಿದೆ‌. ನಮ್ಮಂತಹ ಸಂತೋಷಪರರು ಮತ್ತೊಬ್ಬರಿಲ್ಲ ಎಂದು ಜಗತ್ತಿಗೆ ‘ತೋರಿಸಿ’ ಕೊಳ್ಳುವುದರಲ್ಲೆ ನಿರತರಾಗಿರುವ ಸಮಕಾಲೀನರು ಮತ್ತು ಹುಟ್ಟುತ್ತಲೇ ಪ್ರಬುದ್ಧತೆಯನ್ನು ಆವಾಹಿಸಿಕೊಂಡಂತೆ ಕಾಣುವ ಮುಗ್ಧತೆ ಮಾಯವಾದ ಮಕ್ಕಳು. ಈ ಮೂರು ದ್ವೀಪಗಳನ್ನು ಬೆಸೆಯುವ ನೌಕೆ ಮುವ್ವತ್ತರ ಹೊಸ್ತಿಲಲ್ಲಿ ನಿಂತವರು.

ನಿಧಾನಕ್ಕೆ ಕಾಲೇಜಿನ ದಿನಗಳ ಹುಡುಗಾಟಿಕೆ, ಉದ್ಯೋಗಕ್ಕೆ ಸೇರಿದಾಗ ಸಿಕ್ಕ ಆರ್ಥಿಕ ಸ್ವಾತಂತ್ರ್ಯ, ಪ್ರೇಮದ ನಶೆ, ತಾಯ್ತನದ ಆನಂದ ಎಲ್ಲವೂ ಹೊಳಪು ಕಳೆದುಕೊಂಡು ನಿತ್ಯಜೀವನದಲ್ಲಿ ಸಮಸ್ಯೆ, ಸವಾಲುಗಳು ಮಾತ್ರ ರೋಚಕವೆನಿಸುವ ಹೊತ್ತು. ಎಲ್ಲೆಡೆಯೂ ಸ್ವಂತಿಕೆಯನ್ನು ಬಿಟ್ಟುಕೊಡದೆ, ಹಲವು ಬದಲಾವಣೆಗಳ ನಡುವೆಯೂ ವಿವೇಚನೆಯನ್ನು ಭದ್ರವಾಗಿ ನೆಚ್ಚಿಕೊಂಡು ಪ್ರಬುದ್ಧವಾಗಿ ವರ್ತಿಸಬೇಕಾಗಿನ ಒತ್ತಡ ಹೆಣ್ಣು-ಗಂಡುಗಳನ್ನು ಸಮಾನವಾಗಿ ಕಾಡುವ ವಯಸ್ಸು. ಅರವತ್ತು- ಎಪ್ಪತ್ತರ ಪೋಷಕರು ಮಕ್ಕಳಂತೆ ಹಠ ಮಾಡುವಾಗ, ದೈಹಿಕವಾಗಿ ಮಾನಸಿಕವಾಗಿ ಸೋತು ಅವಲಂಬಿತರಾದಾಗ, ಪುಟ್ಟಮಕ್ಕಳ ಬಾಲ್ಯವನ್ನು ಎಚ್ಚರದಲ್ಲಿ ಅರಳಿಸುವ ಕನಸು, ಉದ್ಯೋಗದಲ್ಲೂ ಪದೇಪದೇ ಸಾಮರ್ಥ್ಯವನ್ನು ಋಜುವಾತು ಮಾಡಿಕೊಳ್ಳಬೇಕಾದ ಅಗತ್ಯತೆ, ಸಂಗಾತಿಯೊಂದಿಗಿನ ಹೊಂದಾಣಿಕೆ ಹಾಗೂ ಆರ್ಥಿಕ, ಸಾಮಾಜಿಕ ಜವಾಬ್ದಾರಿಗಳು ನೀನಿನ್ನು ಎಳೆಯನಲ್ಲ ಎಂದು ಎಚ್ಚರಿಸಿದಂತಾಗುತ್ತದೆ. ಎಷ್ಟೋ ಸಲ ಅನುದಿನದ ಯುದ್ಧಗಳ ಅರಿವು ಹಿರಿಜೀವಗಳ ಗಮನಕ್ಕೆ ಬಂದ ಹಾಗನ್ನಿಸುವುದಿಲ್ಲ. “ನಮ್ಮ ಕಾಲವೇ ಚೆನ್ನಿತ್ತು. ನಾವು ಪಟ್ಟ ಕಷ್ಟದ ಮುಂದೆ ನಿಮ್ಮದೇನು? ಏನಾದರೂ ನಾವು ನಿಭಾಯಿಸಿದ ಹಾಗೆ ನೀವು ನಿಭಾಯಿಸಲಾರಿರಿ. ಸಣ್ಣ ವಯಸ್ಸಿಗೆ ಮುದುಕರ ಹಾಗೆ ನೂರೆಂಟು ಖಾಯಿಲೆ. ಹೊರಗೆ ತಿನ್ನುತ್ತೀರಿ. ಎಲ್ಲ ಮನೆ ಬಾಗಿಲಿಗೆ ತರಿಸುತ್ತೀರಿ. ಆಚರಣೆಗಳ ಬಗ್ಗೆ ಶ್ರದ್ಧೆಯಿಲ್ಲ. ನಮಗೆ ಸಮಯ ಕೊಡುವುದಿಲ್ಲ. ನಾವಿದ್ದಾಗಲೇ ಹೀಗೆ. ನಮ್ಮ ನಂತರ ಮುಂದಿನ ತಲೆಮಾರಿಗೆ ಏನು ಉಳಿಸುತ್ತೀರಿ?” ಎಂದು ತಮ್ಮ ಆಲೋಚನೆಗಳಲ್ಲೇ ಬಂಧಿಯಾಗಿ ಕುಟುಕುವಾಗ, ನೇರವಾಗಿ ಉತ್ತರಿಸಲೂ ಆಗದ, ಕೇಳಿದಂತೆ ನಟಿಸಿ ಸುಮ್ಮನಿರಲೂ ಆಗದ ಅತಂತ್ರ ಸ್ಥಿತಿ. ಹಿರಿಯರ ಆಸೆಯ ಪ್ರಕಾರ ಓದು, ಕೆಲಸ, ಮನೆ, ಸಂಸಾರ, ಮಕ್ಕಳು ಎಂದೆಲ್ಲವೂ ಸಾಕಾರಗೊಂಡವರ ಕಥೆಯೇ ಹೀಗಿರುವಾಗ, ಅವರ ವೇಳಾಪಟ್ಟಿಯ ಪ್ರಕಾರ ಮದುವೆ, ಕೆಲಸ, ಮಕ್ಕಳು ಆಗದ ಅವಿವಾಹಿತರು, ನಿರುದ್ಯೋಗಿಗಳು, ವಿಚ್ಚೇದಿತರು, ಮಕ್ಕಳಿಲ್ಲದವರ ವ್ಯಥೆ ಕಾದಂಬರಿಯಾಗಬಹುದು. ಹಿರಿಯರಿಗಂತೂ ನೀವು ಹೀಗಿರಿ. ಹೀಗೆ ಮಾಡಿ ಎಂದು ಹೇಳಲಾಗುವುದಿಲ್ಲ. ಆದರೆ ಸರೀಕರ ಜೊತೆಗೆ ಮುಕ್ತಸ್ನೇಹ ಏರ್ಪಟ್ಟರೆ ಎಷ್ಟು ಚೆಂದ.

ಎಲ್ಲದರಲ್ಲೂ ಹುಳುಕು ಹುಡುಕುತ್ತಾ, ಗೋಳುಗುಟ್ಟುತ್ತಾ, ಆಪಾದಿಸುತ್ತಾ, ಕೊಂಕು ತೆಗೆಯುತ್ತಾ ಕೂರುವುದು ಸರಿಯಲ್ಲ. ಆದರೆ ಬದುಕೆಂದರೆ ಸಿಹಿ-ಕಹಿಗಳೆರಡೂ ಇರುವಾಗ, ಸಿಹಿಯ ಮಾತನ್ನೇ ಹಂಚುತ್ತಾ, ಕಹಿಯನ್ನೆಲ್ಲಾ ಒಳಗೇ ನುಂಗಿ ನುಂಗಿ ನಂಜುಂಡರಾಗುವುದು ನಮ್ಮ ಮೇಲೆ ನಾವೇ ಹೊರೆಸಿಕೊಳ್ಳುವ ಭಾರ. ಹತ್ತರಲ್ಲಿ ಒಂದು ಸಲವಾದರೂ ನೋವನ್ನು ನೋವಾಗಿ, ಅಳುವನ್ನು ಅಳುವಾಗಿ, ಸೋಲನ್ನು ಸೋಲಾಗಿ ತೋರಿಸಿಕೊಳ್ಳುವ ಸ್ವಾತಂತ್ರ್ಯ ನಾವು ರೂಢಿಸಿಕೊಳ್ಳಬೇಕಿದೆ. ನಗುವಿನಂತೆಯೇ ಅಳು, ಗೆಲುವಿನಂತೆಯೇ ಸೋಲು ಸಹಜ ಸುಂದರ ಎಂಬ ಅರಿವು ಬೆಳೆಸಿಕೊಳ್ಳದಿದ್ದರೆ ಬದುಕು ಉಸಿರುಗಟ್ಟಿಸುತ್ತದೆ. ಹಾಗಂತ ಸೋಷಿಯಲ್ ಮೀಡಿಯಾದಲ್ಲಿ ನನಗೆ ನೋವಾಗಿದೆ, ನನಗೆ ಹೆದರಿಕೆ, ನಾನು ಸೋತೆ ಎಂದು ಡಂಗೂರ ಹೊಡೆಯಬೇಕಿಲ್ಲ. ತೀರ ಆತ್ಮೀಯರಲ್ಲಿಯಾದರೂ ಮನಸ್ಸು ಬಿಚ್ಚಿ ಭಾವನೆಗಳನ್ನು ಹಂಚಿಕೊಂಡರೆ ಅನುದಿನದ ಹೋರಾಟದ ಮಧ್ಯೆಯೂ ಪ್ರಫುಲ್ಲತೆ ಮೈಗೂಡುತ್ತದೆ. ಅಂತಹ ಬಂಧವೊಂದು, ಬಂಧುವೊಬ್ಬರು ನಮಗಿದ್ದರೆ ಎನ್ನಿಸುವಾಗ ನಾವೇ ಆ ಅನುಬಂಧದ ಮೊದಲ ಸುಮವನ್ನು ಅರಳಿಸಬೇಕಿದೆ. ಎಷ್ಟೋ ಸಲ ನಾವು ಹಾಕಿಕೊಂಡ ಮುಖವಾಡ ಕಳಚದ ಹೊರತು, ಎದುರಿನವರ ಅಂತರಂಗ ದರ್ಶನವಾಗುವುದಿಲ್ಲ. ಇಬ್ಬರೂ ಎದುರುಬದುರು ನಿಂತು ನಾನು ಆರಾಮು… ನೀವು ಆರಾಮು ಎಂದು ಅಹಂಕಾರ ತಣಿಸುವ ಮಾತಾಡುವ ಬದಲು, ಮುಕ್ತವಾಗಿ ಸುಖದುಃಖದ ವಿನಿಮಯ ಮಾಡಿಕೊಳ್ಳಬಹುದು. ಹಿಂದಿನವರಿಗಿದ್ದ ಆ ಸರಳ ಸೌಕರ್ಯವನ್ನೇ ನಾವಿಂದು ದುಬಾರಿ ಸರಕಾಗಿಸಿಕೊಂಡಿದ್ದೇವೆ. ಮತ್ತೊಮ್ಮೆ ಅಂತಹ ಸಹಜ ಸ್ನೇಹ ಸಂಬಂಧಗಳನ್ನು ಬೆಳೆಸುವ ಜರೂರತ್ತು ಹಿಂದೆಂದಿಗಿಂತ ಹೆಚ್ಚಾಗಿದೆ.

ಸದಾ ನಗೆಯ ಮುಖವಾಡ ಹೊತ್ತು ಬದುಕುವವರಲ್ಲೊಂದು ವಿನಂತಿ. ನಿಮ್ಮ ನಗುವನ್ನು ಮೆಚ್ಚಿ ಜೊತೆಯಾದ ಜೀವಗಳೊಂದಿಗೆ ಆಗೀಗ ನೋವನ್ನು ಹಂಚಿಕೊಳ್ಳುವ ಮುಕ್ತತೆ ರೂಢಿಸಿಕೊಳ್ಳಿ. ಈ ಪ್ರಪಂಚಕ್ಕೆ ನಿಮ್ಮಂತಹವರು ಬೇಕು. ನೋವು ನುಂಗಿ ನುಂಗಿ ಸೊರಗಿದರೆ ನಗೆಮಲ್ಲಿಗೆಯ ಘಮ ಕಡಿಮೆಯಾಗುವುದು.