“ನಮ್ಮ ವೃತ್ತಿಯನ್ನು ಯಾವತ್ತೂ ಕಾಡುವ ಸಮಸ್ಯೆ ಇದು. ಕಟ್ಟಡ ಕಲೆಯ ಇತಿಮಿತಿಗಳನ್ನು ಪ್ರಶ್ನಿಸುವಾಗ ಇಂಥ ಎಗ್ಗಿಲ್ಲದ ಮಾತುಗಳು ತಂತಾವೇ ದೂರುಗಳಂತೆ ಎಸಗಿಕೊಳ್ಳುತ್ತವೆ! ಒಂದು ಕಟ್ಟಡ ಬರೇ ಕಟ್ಟಡವೆನಿಸಿಕೊಳ್ಳುವುದಕ್ಕೂ ಮತ್ತು ತನ್ನ ಕಟ್ಟಡತನವನ್ನು ಮೀರಿ ಕಲಾತ್ಮಕವೆನಿಸುವುದಕ್ಕೂ ನಡುವಿನ ಮೇರೆಯನ್ನೇ ತಂತಮ್ಮ ನೇರಕ್ಕೆ ತನಿಖೆ ಮಾಡಿ ಬಾಯಿಗೆ ಬಂದದ್ದು ಹೇಳುತ್ತಾರೆ. ಇವೆರಡರ ನಡುವೆ ಗೆರೆ ತಿದ್ದಿ ಇದು ಇಷ್ಟೇ ಅಂತ ಯಾವತ್ತೂ  ಹೇಳಲಾಗುವುದಿಲ್ಲ.”
ಕಥೆಗಾರ ಮತ್ತು ಆರ್ಕಿಟೆಕ್ಟ್ ನಾಗರಾಜ ವಸ್ತಾರೆ ಬರೆದ ‘ಪಟ್ಟಣ ಪುರಾಣ’ ಅಂಕಣ..

 

‘ಮಾರ್ವಾಡಿಗೂ ಪಾರಿವಾಳಕ್ಕೂ ಏನು ಸಂಬಂಧ ಗೊತ್ತಾ ಸರ್?’ ಅಂತ ಅವತ್ತು ನನ್ನೀ ಕ್ಲಯಂದೇವರು ಕೇಳಿದರು. ಅವರ ಕಾಲೇಜಿನ ‘ಅಡ್ಮಿನ್ ಬ್ಲಾಕ್’ನಲ್ಲಿ ವಿಪರೀತ ಪಾರಿವಾಳಗಳ ಕಾಟವೆಂದು ಹಿಂದಿನ ಇಳಿಯಿರುಳಿಗೆ ಫೋನಿಸಿ ತುಸು ಹೆಚ್ಚೇ ಅಸಮಾಧಾನ ಬಿತ್ತರಿಸಿದ್ದರು. ಬೆಳಿಗ್ಗೆ ಬೇರೆ ಮೀಟಿಂಗುಗಳನ್ನು ರದ್ದು ಮಾಡಿ ಕ್ಯಾಂಪಸ್ಸಿಗೆ ಬಂದಿದ್ದೆ. ಅವರ ಆಡಳಿತ ಕಟ್ಟಡದ ಒಳಗಿನ ಅಂಗಳವನ್ನು ಮೇಲಿನಿಂದ ಮುಚ್ಚಿಯೂ ಬಿಚ್ಚಿರುವ ಹಾಗೆ ಮೂವತ್ತೈದು ಅಡಿಯೆತ್ತರದಲ್ಲಿ ನಾವು ಹರವಿದ್ದ ಗಾಜಿನ ಹಾಳೆಗಳಿರುವ ಛಾವಣಿಯಲ್ಲಿ ಉಕ್ಕಿನ ತೊಲೆಗಳ ಮೇಲೆ ಒಂದಷ್ಟು ಪಾರಿವಾಳಗಳು ಬಿಡದಿ ಮಾಡಿದ್ದನ್ನು ನೋಡಿದೆ. ಇನ್ನು ಕೇಳಲೇಬೇಕಿಲ್ಲವಲ್ಲ! ಎಗ್ಗಿಲ್ಲದೆ ಫಡಫಡ… ಗುಟುರ್ ಗುಟುರ್!! ಅಷ್ಟು ಎತ್ತರದಿಂದ ಹಿಕ್ಕೆಯುದುರಿಸುವ ಈ ಹಕ್ಕಿಗಳು ಅಲ್ಲಿನ ಹೊಸ ಗೋಡೆಗಳ ಮೇಲೆ, ಮುಂಗಚೇರಿಯ ಮೇಜು ಕುರ್ಚಿಗಳ ಮೇಲೆ ತಮ್ಮ ಇರವಿನ ಮುದ್ರೆಯೊತ್ತಿದ್ದವು. ಸಾಲದಕ್ಕೆ ಕೊಕ್ಕು, ರೆಕ್ಕೆಗಳ ಸದ್ದು ಅಷ್ಟು ದೊಡ್ಡ ವಾಲ್ಯೂಮಿನಲ್ಲಿ ಮಾರ್ದನಿಸಿ ದುಪ್ಪಟ್ಟು ಮುಪ್ಪಟ್ಟು ಹೆಚ್ಚಿ ಕೇಳುತ್ತಿತ್ತು. ಗೋಲಗುಂಬಜಿನೊಳಗೆ ಹತ್ತಾರು ಮಂದಿ ಒಟ್ಟಿಗೇ ಕೇಕೆಯಿಟ್ಟರೆ ಆಗುವುದಲ್ಲ ಥೇಟು ಹಾಗೆ- ಕಲಕಿದ ಸದ್ದುಗಳ ಗಲಗಲ ರಾಡಿ!

ಎಲ್ಲಿ ತಪ್ಪಾಗಿದ್ದೆಂದು ಕಾಲೇಜಿನ ಪೀಆರ್ ಮುಖೇಶನ ಜತೆ ಅಷ್ಟೂ ಮಹಡಿಗಳಲ್ಲಿ ಒಂದು ಸುತ್ತು ಬಂದು, ‘ಈ ಕೋರ್ಟ್ ಯಾರ್ಡ್ ಇದೆಯಲ್ಲ, ಮುಖ್- ಇದನ್ನು ನಿಮ್ಮ ಛೇರ್ಮನ್ ಎಷ್ಟು ಹೇಳಿದರೂ ಕೇಳದೆ ಮೇಲಿನಿಂದ ಗ್ಲ್ಯಾಸ್ ಹಾಕಿ ಮುಚ್ಚಿಬಿಡಿ ಅಂದರು… ತೊಂದರೆ ಆಗಿದ್ದೇ ಅಲ್ಲಿ. ಈ ರೂಫನ್ನು ಗೋಡೆಗಳ ಜತೆ ಬೆರೆಸಿದರೆ ಅಲ್ಲೆಲ್ಲ ಬಿರುಕು ಬರಬಹುದು ಅಂತ ಬೇಕೂಂತಾನೇ ಸಂದು ಬಿಟ್ಟಿದ್ದೇ ಎಡವಟ್ಟಾಯಿತು. ಅಲ್ಲಿಂದ ಈ ಹಕ್ಕಿಗಳು ಬರುತ್ತಿವೆ…’ ಎಂದೆ. ಇದಕ್ಕೆ ಸುಲಭವಾದ ಪರಿಹಾರ ಇಲ್ಲ, ಮಾಡಿದರೂ ತೇಪೆ ಹಾಕಿದ ಹಾಗೆ ಕಾಣುತ್ತೆ ಅಂತ ವಿವರಿಸಿದೆ. ‘ನಿನ್ನೆ ಛೇರ್ಮನ್ ತುಂಬಾ ಕಿಡಿಕಿಡಿ ಮಾಡಿದರು..’ ಅಂತ ಮುಸುಡಿ ಕೊಂಕಿಸಿದ. ‘ಬರೇ ಏಸ್ಥೆಟಿಕ್ಸ್ ನೋಡಿಕೊಂಡು ಬೇಸಿಕ್ಸೆಲ್ಲ ಕಾಂಪ್ರೊಮೈಸ್ ಮಾಡಿದರೆ ಹೇಗೆ ಅಂತೆಲ್ಲ ಬೇಜಾರು ಮಾಡಿಕೊಂಡರು…’

ನಮ್ಮ ವೃತ್ತಿಯನ್ನು ಯಾವತ್ತೂ ಕಾಡುವ ಸಮಸ್ಯೆ ಇದು. ಕಟ್ಟಡ ಕಲೆಯ ಇತಿಮಿತಿಗಳನ್ನು ಪ್ರಶ್ನಿಸುವಾಗ ಇಂಥ ಎಗ್ಗಿಲ್ಲದ ಮಾತುಗಳು ತಂತಾವೇ ದೂರುಗಳಂತೆ ಎಸಗಿಕೊಳ್ಳುತ್ತವೆ! ಒಂದು ಕಟ್ಟಡ ಬರೇ ಕಟ್ಟಡವೆನಿಸಿಕೊಳ್ಳುವುದಕ್ಕೂ ಮತ್ತು ತನ್ನ ಕಟ್ಟಡತನವನ್ನು ಮೀರಿ ಕಲಾತ್ಮಕವೆನಿಸುವುದಕ್ಕೂ ನಡುವಿನ ಮೇರೆಯನ್ನೇ ತಂತಮ್ಮ ನೇರಕ್ಕೆ ತನಿಖೆ ಮಾಡಿ ಬಾಯಿಗೆ ಬಂದದ್ದು ಹೇಳುತ್ತಾರೆ. ಇವೆರಡರ ನಡುವೆ ಗೆರೆ ತಿದ್ದಿ ಇದು ಇಷ್ಟೇ ಅಂತ ಯಾವತ್ತೂ  ಹೇಳಲಾಗುವುದಿಲ್ಲ… ಇಲ್ಲಿ ಈ ತನಕ ಆಕಾಶಕ್ಕೆ ತೆರೆದುಕೊಂಡಿದ್ದ ಈ ಬೆಳಕಿನ ತೊಟ್ಟಿ ನಮಗೆ ಅಂಗಳವಾಗೂ ಉಳಿಯಬೇಕು ಮತ್ತು ಈ ಕ್ಲಯಂದೇವರಿಗೆ ಮುಚ್ಚಿಗೆಯೂ ಆಗಬೇಕು. ಇಂತಹ ‘ಟೂ ಇನ್ ಒನ್’ ಪರಿಹಾರದ ಭರಾಟೆಯಲ್ಲಿ ಹುಟ್ಟಿಕೊಂಡ ಸಮಸ್ಯೆಯಿದು. ಮುಖೇಶ್‍ಗೆ ಮತ್ತೊಂದಿಷ್ಟು ಸಮಜಾಯಿಷಿ ಹೇಳುತ್ತಿರುವಾಗಲೇ ಛೇರ್ಮನ್ ನನಗೆ ಹೇಳಿಕಳಿಸಿದರು.

ಛೇಂಬರಿನಲ್ಲಿ ಕ್ಲಯಂದೇವರು ತಮ್ಮೆಲ್ಲ ವಂದಿಮಾಗಧರ ಜತೆ ವಿರಾಜಿಸುತ್ತಿದ್ದರು. ಅವರೆದುರಿನ ಮಾತೆಲ್ಲ ಬರೇ ಹಕ್ಕಿಗಳ ಬಗ್ಗೆಯೇ ಜರುಗಿದ್ದವು. ಇನ್ನೇನು ಕಾದಿದೆಯೋ ಅಂತ ಅನುಮಾನಿಸುತ್ತಲೇ ಎದುರು ಕೂತಾಗ ಈ ಪ್ರಶ್ನೆ! ಪಾರಿವಾಳಕ್ಕೂ ಮಾರವಾಡಿಗೂ ನಡುವಿನ ಸಂಬಂಧವಿದೆಯೆ?! ಅಮ್ಮ ಹೇಳುವ ಇಮಾಮ್ ಸಾಹೇಬರ ಗೋಕುಲಾಷ್ಟಮಿಯ ಗಾದೆ ನೆನಪಾಯಿತು. ಸೂಕ್ತವಾಗಿ ಉತ್ತರಿಸಿಬಿಟ್ಟರೆ ಎಲ್ಲಕ್ಕೂ ಮಾಫಿ ಅನ್ನುವಂತಿತ್ತು ಅವರ ಧಾಟಿ. ಕೊನೆಗೆ ಅವರೇ ವಿವರಿಸಿದರು. ಪಾರಿವಾಳಗಳು ಪಕ್ಷಿಸಂಕುಲದ ಏಕಮಾದ್ವಿತೀಯ ಸಸ್ಯಾಹಾರಿಗಳಂತೆ. ಬರೇ ಕಾಳು ಕಡ್ಡಿ ತಿಂದು ಬದುಕುವ ಜೀವಗಳಂತೆ ಅಂದರು. ಹುಳುಹುಪ್ಪಟೆ ಅವುಗಳಿಗೆ ಅಪಥ್ಯವಂತೆ. ‘ರಿಯಲೀ..!?’ ಎಂದು ಅಚ್ಚರಿಯರಳಿಸಿದೆ. ‘ಅಷ್ಟೇ ಅಲ್ಲ ಸರ್… ಈ ಹಕ್ಕಿ ಸಾಯಂಕಾಲ ಆದ ಮೇಲೆ ಏನೂ ತಿನ್ನೋಲ್ಲವಂತೆ. ಮತ್ತೇನಿದ್ದರೂ ಬೆಳಕು ಹರಿದ ಮೇಲೇ…! ಅದಕ್ಕೆ ಮುಂಬೈ ಸೇಠುಗಳೆಲ್ಲ ಇದನ್ನ ತಮ್ಮ ಜಾತಿಯ ಎಂಬ್ಲಮ್ಮ್ ಅಂದುಕೊಂಡು ತಮ್ಮ ಮನೆಯ ಟೆರೇಸಿನ ಮೇಲೆ ಕಾಳು ಹಾಕಿ ಬೆಳೆಸೋದು!!’ ಸಾಮಾನ್ಯವಾಗಿ ಈ ಪಕ್ಷಿಪ್ರಿಯರೆಲ್ಲ ಮಾರವಾಡಿಗಳು ಅಂತ ಗೊತ್ತಿತ್ತು. ಆದರೆ ಇದರಲ್ಲೊಂದು ಸಾಮಾಜಿಕ ಲೇವಾದೇವಿಯಿದೆಯೆಂದು ಅನಿಸಿರಲಿಲ್ಲ. ಹೀಗೆ ಹೇಳುವಾಗ ಕ್ಲಯಂದೇವರು ಇಷ್ಟಗಲಕ್ಕೆ- ಈವರೆಗೆ ಏನೂ ಪ್ರಮಾದವೇ ಆಗಿಲ್ಲವೆನ್ನುವ ಹಾಗೆ ನಕ್ಕರು. ಒಂದು ಕ್ಷಣ ಈ ಮುಖೇಶ್ ಹೇಳಿದ್ದೆಲ್ಲ ಸುಮ್ಮನೆ ನಾನು ಮುಜುಗರಕ್ಕೀಡಾಗಲಿಕ್ಕೆ? -ಅನಿಸಿತು. ನಾನೂ ನಕ್ಕೆ.

‘ನಿನ್ನೆ ಏನಾಯಿತು ಗೊತ್ತಾ ಸರ್?  ಕಾಲೇಜಿನಲ್ಲಿ ಟ್ಯಾಂಜೇನಿಯಾದ ಪ್ರೈಮ್ ಮಿನಿಸ್ಟರ್ ವಿಸಿಟ್ ಇತ್ತು. ಪಿಎಮ್ ಅಂದಮೇಲೆ ಗೊತ್ತಲ್ಲ- ಎಷ್ಟು ಪ್ರೋಟೋಕಾಲೂ.. ಏನು ಕತೇ? ಈ ಮನುಷ್ಯ ಅಡ್ಮಿನ್ ಒಳಗೆ ಬಂದಿದ್ದಷ್ಟೆ- ಈ ಹಕ್ಕಿ ಮೇಲಿಂದ ಗಲೀಜು ಮಾಡಿಬಿಡ್ತು! ನನಗೆ ಒಂದು ಕ್ಷಣ ಏನು ಮಾಡಬೇಕು ಗೊತ್ತಾಗಲಿಲ್ಲ. ಆತ ನಿಜಕ್ಕೂ ಒಳ್ಳೇ ಮನುಷ್ಯ… ಅಷ್ಟು ತಲೆಗೆ ಹಚ್ಚಿಕೊಳ್ಳಲಿಲ್ಲ…’ ಅಂತ ನಕ್ಕರು. ‘ತಲೆಗೆ ಹಚ್ಚಿಕೊಳ್ಳೋದೇನು? ಬಿದ್ದಿದ್ದೇ ತಲೇ ಮೇಲೆ ಅಂದರಲ್ಲ…!!’ ಎಂದು ನಾನೂ ನಕ್ಕೆ. ಕ್ಲಯಂದೇವರ ಸೈಡ್‍ಕಿಕ್ಕುಗಳೆಲ್ಲವೂ ನಕ್ಕವು.

‘ಅಷ್ಟೇ ಅಲ್ಲ ಸರ್… ಈ ಹಕ್ಕಿ ಸಾಯಂಕಾಲ ಆದ ಮೇಲೆ ಏನೂ ತಿನ್ನೋಲ್ಲವಂತೆ. ಮತ್ತೇನಿದ್ದರೂ ಬೆಳಕು ಹರಿದ ಮೇಲೇ…! ಅದಕ್ಕೆ ಮುಂಬೈ ಸೇಠುಗಳೆಲ್ಲ ಇದನ್ನ ತಮ್ಮ ಜಾತಿಯ ಎಂಬ್ಲಮ್ಮ್ ಅಂದುಕೊಂಡು ತಮ್ಮ ಮನೆಯ ಟೆರೇಸಿನ ಮೇಲೆ ಕಾಳು ಹಾಕಿ ಬೆಳೆಸೋದು!!’

‘ಆದರೂ ಸರ್, ಇದು ಸೀರಿಯಸ್ ವಿಷಯ. ಇದಕ್ಕೇನಾದರೂ ಮಾಡಬೇಕು.’  ಅವರು ಗಂಭೀರವಾಗಿ ಹೇಳಿದಾಗ ‘ನೆಟ್‍ನಲ್ಲಿ ಬರ್ಡ್ ರಿಪೆಲ್ಲೆಂಟ್ ಏನಾದರೂ ಸಿಗುತ್ತಾ ಅಂತ ನೋಡುತೀನಿ.’ -ಅಂತ ನನ್ನ ವೃತ್ತಿಪರತೆಯನ್ನು ಮೆರೆದೆ. ‘ಆಕ್ಚುಅಲೀ ಈ ಹಕ್ಕಿಗಳು ಒಂಥರಾ ಚಂದ. ಈ ಗಲೀಜು ಅಂತನ್ನದೊಂದು ಬಿಟ್ಟರೆ. ಈ ಗಲೀಜು ಎಷ್ಟು ಕಾಸ್ಟಿಕ್ ಅಂದರೆ ಗೋಡೆಗಳೆಲ್ಲ ಕಲೆ ಆಗುತಿವೆ. ತೊಳೆದರೂ ಹೋಗುಲ್ಲ…’ ಅಂದರು. ಗೋಡೆಗಳು ಹೀಗೆ ಕಲೆಯಾಗುವುದಕ್ಕೆ ಪಕ್ಷಿತ್ಯಾಜ್ಯದ ಕ್ಷಾರಗುಣ ಕಾರಣವೆಂದು ನನಗೆ ಹೊಳೆದಿರಲಿಲ್ಲ. ಇನ್ನೆಲ್ಲಿಯ ರಾದ್ಧಾಂತವೋ ಅಂದುಕೊಂಡು ಬಂದಿದ್ದ ನನಗೆ ಅವರು ಇಷ್ಟು ಸಲೀಸು ಮಾತನಾಡಿದಾಗ ನಿರಾಳವಾಯಿತು. ‘ನಾವು ಹೀಗೆ ಕಾಡೆಲ್ಲ ಊರು ಮಾಡಿದರೆ ಅವು ತಾನೇ ಏನು ಮಾಡುತ್ವೇ?’ ಎಂದಾಗ ಅವರು ಇದ್ದಕ್ಕಿದ್ದಂತೆ ಗಂಭೀರವಾದರು. ‘ಈ ತೊಂದರೇನೇ ಇರಲಿಲ್ಲ ಸರ್… ಎಲ್ಲಾ ನನ್ನ ಹೆಂಡತಿಯಿಂದ ಆಗಿದ್ದು. ಹೋದಸಲ ಕಾಲೇಜ್ ಫೆಸ್ಟ್ ಇತ್ತಲ್ಲ ಆಗ ಅವಳು ಶಿವಾಜಿನಗರದಿಂದ ನಾಲ್ಕು ಪಾರಿವಾಳ ತರಿಸಿ ಚೀಫ್‍ಗೆಸ್ಟ್ ಕಡೆಯಿಂದ ಹಾರಿಬಿಡಿಸಿದ್ದು ನೋಡಿ. ಮುಂಡೇವು ಹಾರೇ ಹೋಗಲಿಲ್ಲ. ಖಾಯಂ ಇಲ್ಲೇ ಉಳಿದವು.. ಇಲ್ಲೊಂದೇ ಕಡೆ ಅಲ್ಲ. ಎಲ್ಲ ಬ್ಲಾಕುಗಳಲ್ಲೂ ತೊಂದರೆ ಆಗಿಬಿಟ್ಟಿದೆ!’ ಅಂತ ಮತ್ತೂ ಫಜೀತಿ ಪಟ್ಟರು. ಎಷ್ಟೋ ಹೊತ್ತು ಕುಳಿತು ಆ ಛಾವಣಿ ಕೆಳಗಿನ ಸಂದುಗಳನ್ನು ಮುಚ್ಚುವ ಲೆಕ್ಕಾಚಾರ ಹಾಕಿದೆವು. ಇಬ್ಬರಿಗೂ ಯಾವ ಪರಿಹಾರವೂ ಸರಿದೋರಿ ಒಮ್ಮತವಾಗಲಿಲ್ಲ. ‘ಸರಿ. ಯೋಚನೆ ಮಾಡಿ ಏನಾದರೂ ಮಾಡುತೀನಿ’ ಅಂತ ಕೈ ಕುಲುಕಿದೆ. ಅಷ್ಟರಲ್ಲಿ ಅವರ ಕೇಬಿನ್ನಾಚೆಯ ಮರದಿಂದ ಕುಹೂ ಕುಹೂ ಕೇಳಿತು. ‘ಎಷ್ಟು ಚಂದ ಅಲ್ಲವೆ!’ ಅಂತ ಆ ಸುಮ್ಮನೆ ಹೇಳಿದೆ. ‘ಈ ಹಕ್ಕಿ ಕೂಗಿದರೆ ಚಂದ ಅಂದುಕೋಬೇಡಿ. ಇದು ಕೋಗಿಲೆಯೇ ಆಗಿದ್ದರೆ ನಮ್ಮ ಕ್ಯಾಂಪಸ್ ಕ್ಲೀನ್ ಆಗಿಲ್ಲ ಅಂತ ಅರ್ಥ. ಅಂದರೆ ಇಲ್ಲಿ ಕಾಗೆ ಜಾಸ್ತಿಯಾಗಿದೆ ಅಂತ…’ -ಎಂಬ ಹೊಸ ವಿಶ್ಲೇಷಣೆಯಿಟ್ಟು ಒಂದಷ್ಟು ತಲೆ ಕೆಡಿಸಿದರು.

‘ಈ ಹಕ್ಕಿ ಕೂಗಿದರೆ ಚಂದ ಅಂದುಕೋಬೇಡಿ. ಇದು ಕೋಗಿಲೆಯೇ ಆಗಿದ್ದರೆ ನಮ್ಮ ಕ್ಯಾಂಪಸ್ ಕ್ಲೀನ್ ಆಗಿಲ್ಲ ಅಂತ ಅರ್ಥ. ಅಂದರೆ ಇಲ್ಲಿ ಕಾಗೆ ಜಾಸ್ತಿಯಾಗಿದೆ ಅಂತ…’

ಅವತ್ತು ಮುಖೇಶನ ಜತೆ ಕ್ಯಾಂಪಸ್ಸಿನ ಎಲ್ಲ ಕಟ್ಟಡಗಳ ಉಸ್ತುವಾರಿ ಮುಗಿಸಿ ವಾಪಸು ಹೊರಟಾಗ ಇಳಿಸಂಜೆ. ಆಡಳಿತ ಕೇಂದ್ರದೆದುರು ಕಾರು ಬಳಸುತ್ತಿರುವಾಗ ಕ್ಲಯಂದೇವರು ಗಾಜಿನ ಛಾವಣಿಯ ಬದಿಯ ತಾರಸಿಯಲ್ಲಿ ನಿಂತು ಏನೋ ನಿರ್ದೇಶಿಸುತ್ತಿದ್ದುದು ಕಣ್ಣಿಗೆ ಬಿತ್ತು. ಹೊರಡುವ ಮೊದಲು ಅವರನ್ನೊಮ್ಮೆ ಭೇಟಿ ಮಾಡೋಣವೆಂದು ಕಾರಿನಿಂದ ಇಳಿದೆ. ಎರಡು ಮಹಡಿ ಹತ್ತಿ ಅಲ್ಲಿ ಹೋಗುವ ಹೊತ್ತಿಗೆ ಆ ಗಾಜಿನ ಸೂರು ಪೂರ್ತಾ ಮುಚ್ಚುವ ಹಾಗೆ ತೆಳ್ಳನೆ ನೈಲಾನಿನ ಬಲೆಯನ್ನು ಹೊದಿಸಿದ್ದರು. ‘ನೀವು ಪರಿಹಾರ ಕಂಡು ಹಿಡಿದು ಅದಕ್ಕೆ ಡ್ರಾಯಿಂಗ್ ಮಾಡುವ ತನಕ ಇದಿರಲಿ…’ ಅಂತ ನನ್ನ ಕಣ್ಣೊರೆಸಲಿಕ್ಕಷ್ಟೇ ಹೇಳಿದರು. ಇದಾಗಿ ತಿಂಗಳುಗಳೇ ಆಗಿವೆ. ಅವರು ನಿಯೋಜಿಸಿದ ಹಂಗಾಮೀ ಪರಿಹಾರ ಶಾಸನದಂತೆ ಉಳಿದು ತಪ್ಪಲ್ಲದ ನನ್ನ ತಪ್ಪನ್ನು ‘ಫಾಲ್ಟೀ ಡಿಸೈನ್’ ಅಂತ ಬಂದವರೆದುರು ಒದರುತ್ತಲೇ ಇದೆ.

ಸ್ವಂತ ಉದ್ದಿಮೆಯಿರುವ ನನ್ನಂತಹ ವೃತ್ತಿಪರರಲ್ಲಿ ಕ್ಲಯಂಟ್ ಎನ್ನುವ ‘ನಾಗರಿಕ’ ಪದವೊಂದರ ಬಳಕೆಯಿದೆ. ಇದನ್ನು ಕಸ್ಟಮರ್ ಅಂದರೆ ಗಿರಾಕಿಯೆನ್ನುವ ಅರ್ಥದಲ್ಲಿ, ಆದರೆ ಅದಕ್ಕಿಂತ ಹೆಚ್ಚು ಮರ್ಯಾದೆಯಿಂದ ಬಳಸುತ್ತೇವೆ. ಇದನ್ನು ಕ್ಲಯಂದೇವ ಅಂತ ನಾನು ಕನ್ನಡಿಸಿಕೊಂಡಿದ್ದೇನೆ. ಈ ಕ್ಲಯಂಟುಗಳು ನಮ್ಮನ್ನು ಪೋಷಿಸುವ ದೇವರೇ ತಾನೆ?