ನಾವು ಮಾಡುವ ಕೊಳಕನ್ನು ಶುಚಿಗೊಳಿಸಿ, ಎಷ್ಟೋ ರೀತಿಯಲ್ಲಿ ಉಪಕಾರಿಯಾದ ಹದ್ದುಗಳನ್ನು ದೂರವೇ ಇಟ್ಟಿದ್ದೇವೆ. ನಮ್ಮಲ್ಲಿ ‘ಹದ್ದು ಮೀರುವುದು’, ‘ಹದ್ದು ಬಸ್ತಿನಲ್ಲಿಡು’ ಎಂಬ ವಾಕ್ಯಗಳ ಪ್ರಯೋಗವಿದೆ. ಅವುಗಳಿಗೂ ಈ ಹದ್ದಿಗೂ ಯಾವುದೇ ಸಂಬಂಧವಿಲ್ಲ. ಸಾಮಾನ್ಯವಾಗಿ ಹದ್ದು ಎನ್ನುವುದು ನೆಗೆಟಿವ್ ಆಗಿಯೇ ಬಳಕೆಯಾಗುತ್ತದೆ. ಹದ್ದು ಎಂದರೆ ಅದರ ಚೂಪಾದ ಕೊಕ್ಕು, ಉದ್ದವಾದ ಉಗುರು, ಬಲವಾದ ಹಿಡಿತ ನೆನಪಾಗುತ್ತದೆ. ಈಗ ಹದ್ದುಬಸ್ತಿನಲ್ಲಿಡಬೇಕಾದದ್ದು ಯಾರ ವರ್ತನೆ ಎನ್ನುವುದನ್ನು ನೀವೇ ಯೋಚಿಸಿ. ಪಕ್ಷಿ ಛಾಯಾಚಿತ್ರಗ್ರಾಹಕಿ ಹಾಗೂ ಕವಯಿತ್ರಿ ಎಂ.ಆರ್.ಭಗವತಿ ಬರೆಯುವ ಅಲಕ್ಷಿತ ಹಕ್ಕಿಯೊಂದರ ಫೋಟೋ ಕಥನ.

 

ಮನೆಯ ಮಹಡಿ ಮೇಲೆ ನಿಂತು ನೀಲಿ ಆಕಾಶದಲ್ಲಿ ಕತ್ತೆತ್ತಿ ನೋಡಿದರೆ ಬಹುದೂರದಲ್ಲಿ ಹದ್ದುಗಳು ಹಾರುತ್ತಾ, ಸುತ್ತು ಹಾಕುತ್ತಾ ಇರುವುದನ್ನು ನೋಡಬಹುದು. ಹಾಗೆ ಸುತ್ತು ಹಾಕುತ್ತಿರುವ ಮೂರ್ನಾಲ್ಕು ಹದ್ದುಗಳಾದರು ಅಲ್ಲಿ ಇರುತ್ತವೆ. ಸಾಮಾನ್ಯವಾಗಿ ಈ ಹದ್ದುಗಳು ಒಂಟಿಯಾಗಿಯೂ, ಕೆಲವೊಮ್ಮೆ ಜೋಡಿಯಾಗಿಯೂ ಇರುತ್ತವೆ. ಎತ್ತರದ ಮರದಕೊಂಬೆಗಳ ಮೇಲೆ ಅಲ್ಲಲ್ಲಿ ಕುಳಿತಿರುತ್ತವೆ. ಕೆಲವೊಂದು ಮನೆಗಳ ಮೇಲೆ ನೀರಿನ ತೊಟ್ಟಿಯ ಮೇಲೆ ಒಂಟಿಯಾಗಿ ಕೂತಿರುತ್ತವೆ.

ಹದ್ದುಗಳ ಬಾಲದ ತುದಿ ಕತ್ತರಿಯ ಅಲಗಿನಂತೆ ಎರಡು ಕಡೆ ಚಾಚಿಕೊಂಡಿರುತ್ತದೆ. ಕಪ್ಪುಮಿಶ್ರಿತ ಬೂದುಬಣ್ಣ ಹದ್ದಿನ ಬಣ್ಣ. ಸಾಮಾನ್ಯವಾಗಿ ಹದ್ದಿನ ಜಾತಿಗೆ ಸೇರಿದ ಇತರೆ ಹಕ್ಕಿಗಳನ್ನು ಬಹುತೇಕರು ಹದ್ದು ಎಂದೇ ತಿಳಿಯುತ್ತಾರೆ.ದೂರದಿಂದ ನೋಡಿದರೆ ಇವು ಕಪ್ಪು ಬಣ್ಣದ ಹಕ್ಕಿಯಂತೆಯೇ ಕಾಣುತ್ತವೆ. ಹತ್ತಿರದಿಂದ ಗಮನಿಸಿದಾಗ ಮಾತ್ರ ಅದರ ಮೈಮೇಲಿನ ಕಪ್ಪು ಮಿಶ್ರಿತ ಕಂದುಬಣ್ಣವು ಕಾಣಸಿಗುತ್ತದೆ. ಅದರ ಕಣ್ಣು ಮತ್ತು ಕಿವಿ ಮಾತ್ರವೇ ಕಪ್ಪುಬಣ್ಣ.

ನಮ್ಮ ಅನುಕೂಲಕ್ಕೆ ಪಕ್ಷಿಗಳ ಸಂತತಿ ಬಲಿಯಾಗುತ್ತಿವೆ. ಅವುಗಳನ್ನು ನಾವು ನಮ್ಮ ದೊಡ್ಡ ಶತ್ರು ಎನ್ನುವ ರೀತಿಯಲ್ಲಿ ನೋಡುತ್ತಿದ್ದೇವೆ. ಮೊದಲೆಲ್ಲ ಅವುಗಳ ಬಗ್ಗೆ ಕುತೂಹಲ, ಆಸಕ್ತಿ ಎಲ್ಲವೂ ಇತ್ತು. ಆದರೀಗ ಅವುಗಳನ್ನು ನಾವು ನೋಡುವ ದೃಷ್ಟಿಕೋನವೇ ಬದಲಾಗಿ ಹೋಗಿದೆ. ಹದ್ದುಗಳನ್ನು ಕೂಡ ಇದೇ ದೃಷ್ಟಿಯಿಂದಲೇ ನೋಡುತ್ತಿದ್ದೇವೆ. ಹದ್ದುಗಳು ವಿಮಾನಗಳಿಗೆ ಡಿಕ್ಕಿ ಹೊಡೆಯುವ ಪ್ರಸಂಗಗಳನ್ನು ನಾವು ಕೇಳುತ್ತಿರುತ್ತೇವೆ. ಹೆಚ್ಚುತ್ತಿರುವ ವಾಯುಯಾನ ಇದಕ್ಕೆ ಕಾರಣವಿರಬಹುದು. ಜೊತೆಗೆ ವಿಮಾನ ಮತ್ತು ಹದ್ದುಗಳು ಭೂಮಿಗಿಳಿಯುವ ಅಥವ ಮೇಲಕ್ಕೆ ಹಾರುವ ಸಂದರ್ಭದಲ್ಲಿ ಒತ್ತಡ ಜಾಸ್ತಿಯಿರುತ್ತದೆ. ಹದ್ದುಗಳು ಮಧ್ಯಮ ಗಾತ್ರದ ಪಕ್ಷಿಗಳು. ಅವುಗಳ ಗಮನ ಕೆಳಗಿರುವ ಆಹಾರದ ಮೇಲಿರುತ್ತದೆ. ಅದಕ್ಕಾಗಿ ಅವು ಆಹಾರ ಇರುವಲ್ಲಿಗೆ ರಭಸವಾಗಿ ಮುನ್ನುಗ್ಗುವಾಗ ಇಂಥ ಅವಘಡಗಳು ಜರುಗುತ್ತವೆ. ಕೆಲವೊಮ್ಮೆ ವಿಮಾನಗಳು ಕೆಳಗಿಳಿಯುವಾಗ ಆಹಾರಕ್ಕಾಗಿ ಮುನ್ನುಗ್ಗುವ ಹದ್ದುಗಳು ವಿಮಾನದ ರೆಕ್ಕೆಗೆ ಸಿಕ್ಕಿ, ಅಥವ ಗಾಳಿಯ ಒತ್ತಡಕ್ಕೆ ಸಿಲುಕಿ ಸಾಯುವ ಸಾಧ್ಯತೆ ಇರುತ್ತದೆ. ತಜ್ಞರೊಬ್ಬರ ಪ್ರಕಾರ ವಿಮಾನಕ್ಕೆ ಸಿಕ್ಕಿ ಹಾಕಿಕೊಳ್ಳುವುದು ಹದ್ದುಗಳಲ್ಲ, ಗಿಡುಗಗಳು. ವಿಮಾನಗಳು೩೫೦೦ ಎತ್ತರದಲ್ಲಿ ಹಾರುತ್ತವೆ. ಹದ್ದುಗಳಿಗೆ ಅಷ್ಟು ಎತ್ತರಕ್ಕರ ಹಾರಲು ಸಾಧ್ಯವಿಲ್ಲ. ಆದರೆ, ವಿಮಾನಗಳು ಕೆಳಗಿಳಿಯುವಾಗ, ಇದು ಸಾಧ್ಯ. ಪಟ್ಟಣಗಳಲ್ಲಿ ಕಸಾಯಿಖಾನೆಯ ವೇಸ್ಟ್ ಗಳನ್ನು ಖಾಲಿ ಜಾಗಗಳಲ್ಲಿ ಎಸೆಯುವ ಪರಿಪಾಠವಿದೆ. ಅಂಥ ಸ್ಥಳಗಳಲ್ಲಿ ವಿಮಾನಗಳು ಹಾಯುವಾಗ, ಅಲ್ಲಿಗೆ ಬರುವ ಹದ್ದುಗಳು ಸಿಲುಕಿಕೊಳ್ಳುವ ಸಾಧ್ಯತೆಯಿದೆ. ಹದ್ದಾಗಲಿ, ಗಿಡುಗಗಳಾಗಲಿ ಡಿಕ್ಕಿ ಹೊಡೆದರೆ ಅಪಾಯ ಆ ಹಕ್ಕಿಗಳಿಗೇ ಹೊರತು ವಿಮಾನಕ್ಕಲ್ಲ.

ಹದ್ದು ವಿಮಾನಕ್ಕೆ ಡಿಕ್ಕಿ ಹೊಡೆಯಿತು ಎನ್ನುತ್ತಿದ್ದೇವಲ್ಲಾ, ಹಾಗೆ ಡಿಕ್ಕಿ ಹೊಡೆದದ್ದು ಹದ್ದಲ್ಲ. ಹದ್ದಿಗೆ ವಿಮಾನವು ಡಿಕ್ಕಿ ಹೊಡೆಯಿತು ಎಂದು ವಾಕ್ಯವನ್ನು ಬದಲಾಯಿಸಬೇಕಾಗಿದೆ! ಅವುಗಳದು ಸಹಜ ಮಾರ್ಗ;ನಮ್ಮದು ಕೃತಕ ಮಾರ್ಗ!!
ನಗರೀಕರಣದಿಂದಾಗಿ ನಗರದಲ್ಲಿ ವಾಸಿಸುವ ಹಕ್ಕಿಗಳ ಗೂಡುಕಟ್ಟುವ ವಿನ್ಯಾಸವೂ ಬದಲಾಗುತ್ತಿದೆ. ಮೊಬೈಲ್ ಟವರ್, ಲೈಟು ಕಂಬಗಳ ಮೇಲೆ ಹದ್ದುಗಳು ಗೂಡು ಕಟ್ಟುತ್ತಿವೆ. ನಮ್ಮ ಮನೆಯ ಮುಂದಿನ ಸರ್ವೆಮರದ ಮೇಲೆ ಹದ್ದುಗಳು ಗೂಡುಕಟ್ಟಿದ್ದವು. ನನ್ನ ಮೊದಲ ಡಿಎಸ್ ಎಲ್ ಆರ್ ಕ್ಯಾಮರಾದ ಉಪಯೋಗ ಈ ಹದ್ದುಗಳ ಫೋಟೋತೆಗೆಯುವುದರೊಂದಿಗೆ ಪ್ರಾರಂಭವಾಯಿತು. ಇಡೀ ದಿನ ಅವುಗಳ ಕೀಚಲು ಸದ್ದು. ಹದ್ದುಗಳು ಕುದುರೆ ಕೆನೆತದಂತ ಸುಂಯ್ ಸುಂಯ್ಯ್ ಸದ್ದನ್ನು ಹೊರಡಿಸುತ್ತವೆ. ಮರಿಗೆ ಆಹಾರ ಒದಗಿಸುವುದು, ಮರಿಯನ್ನು ರಕ್ಷಿಸಲು ಗೂಡಿನ ಸುತ್ತ ಹಾರಾಟ ನಡೆದೇ ಇರುತ್ತಿತ್ತು. ಗಂಡು ಹಕ್ಕಿ ಆಹಾರ ಒದಗಿಸಿದರೆ ಹೆಣ್ಣು ತನ್ನ ಮೊಟ್ಟೆಗಳಿಗೆ ಕಾವು ಕೊಡಲು ಕೂರುತ್ತದೆ. ಮೊಟ್ಟೆ ಇಟ್ಟು ಮರಿಯಾದ ಮೂವತ್ತು ದಿನಕ್ಕೆ ಆ ಮರಿಗಳು ಸ್ವತಂತ್ರವಾಗುತ್ತವೆ.

ಹದ್ದುಗಳು ವಿಮಾನಗಳಿಗೆ ಡಿಕ್ಕಿ ಹೊಡೆಯುವ ಪ್ರಸಂಗಗಳನ್ನು ನಾವು ಕೇಳುತ್ತಿರುತ್ತೇವೆ. ಹೆಚ್ಚುತ್ತಿರುವ ವಾಯುಯಾನ ಇದಕ್ಕೆ ಕಾರಣವಿರಬಹುದು. ಜೊತೆಗೆ ವಿಮಾನ ಮತ್ತು ಹದ್ದುಗಳು ಭೂಮಿಗಿಳಿಯುವ ಅಥವ ಮೇಲಕ್ಕೆ ಹಾರುವ ಸಂದರ್ಭದಲ್ಲಿ ಒತ್ತಡ ಜಾಸ್ತಿಯಿರುತ್ತದೆ. ಹದ್ದುಗಳು ಮಧ್ಯಮ ಗಾತ್ರದ ಪಕ್ಷಿಗಳು. ಅವುಗಳ ಗಮನ ಕೆಳಗಿರುವ ಆಹಾರದ ಮೇಲಿರುತ್ತದೆ. ಅದಕ್ಕಾಗಿ ಅವು ಆಹಾರ ಇರುವಲ್ಲಿಗೆ ರಭಸವಾಗಿ ಮುನ್ನುಗ್ಗುವಾಗ ಇಂಥ ಅವಘಡಗಳು ಜರುಗುತ್ತವೆ. ಕೆಲವೊಮ್ಮೆ ವಿಮಾನಗಳು ಕೆಳಗಿಳಿಯುವಾಗ ಆಹಾರಕ್ಕಾಗಿ ಮುನ್ನುಗ್ಗುವ ಹದ್ದುಗಳು ವಿಮಾನದ ರೆಕ್ಕೆಗೆ ಸಿಕ್ಕಿ, ಅಥವ ಗಾಳಿಯ ಒತ್ತಡಕ್ಕೆ ಸಿಲುಕಿ ಸಾಯುವ ಸಾಧ್ಯತೆ ಇರುತ್ತದೆ.

ಹದ್ದು ಕೂಡ ಬುದ್ದಿವಂತ ಪಕ್ಷಿ ಎಂದು ತಿಳಿದದ್ದು ಕಬ್ಬನ್ ಪಾರ್ಕಿನಲ್ಲಿ ಹಕ್ಕಿಗಳನ್ನು ಹಿಡಿಯಲು ಮರಕ್ಕೆ ಕಟ್ಟಿದ್ದ ದಾರಕ್ಕೆ ಹದ್ದೊಂದು ಸಿಲುಕಿದಾಗಲೇ… ಅದರ ಒಂದು ರೆಕ್ಕೆ ದಾರಕ್ಕೆ ಸಿಲುಕಿ ಹತ್ತಿರದ ಮರವೊಂದರ ಮೇಲೆ ನೇತಾಡುತ್ತಿತ್ತು. ಗಟ್ಟಿಯಾದ ಆದರೆ ಅತಿ ತೆಳುವಾದ ಕಪ್ಪುದಾರ ಅದು. ಹಕ್ಕಿಗಳನ್ನು ಬೀಳಿಸಲೆಂದೇ ಅದನ್ನು ಮರಗಳಿಗೆ ಕಟ್ಟಿಹಾಕಲಾಗಿತ್ತು. ಗಟ್ಟಿಯಾಗಿ ತಾಗಿದರೆ ನಮ್ಮ ಕೈಯಿ ಕುಯ್ದಂತೆ ಆಗುವುದು ಖಂಡಿತ. ಅಂತ ಬಲವಾದ ದಾರ. ನನಗೆ ಅದನ್ನು ನೋಡಿ ಒಂದು ಕ್ಷಣ ಏನು ತೋಚದಂತಾಗಿತ್ತು.

(ಫೋಟೋಗಳು:ಎಂ.ಆರ್.ಭಗವತಿ )

ಕಬ್ಬನ್ ಪಾರ್ಕಿನ ಆ ನಿರ್ದಿಷ್ಟ ಜಾಗದಲ್ಲಿ ಹದ್ದುಗಳು ಸಾಕಷ್ಟು ಸಂಖ್ಯೆಯಲ್ಲಿದ್ದವು. ಹದ್ದಿಗೆ ಏನಾಗಿದೆ ಎಂದು ನೋಡಲು ಅದು ನೇತಾಡುತ್ತಿದ್ದ ಮರದ ಬಳಿ ಹೋಗಲು ಪ್ರಯತ್ನಿಸಿದಾಗ ಮರಕ್ಕೆ ಕಟ್ಟಿದ್ದ ದಾರ ಅಡ್ದ ಬಂದಿತ್ತು. ಹತ್ತಿರ ಹೋಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗಲೆ ಗೊತ್ತಾಗಿದ್ದು. ದಾರಕ್ಕೆ ಸಿಲುಕಿ ನೇತಾಡುತ್ತಿದ್ದ ಆ ಹದ್ದನ್ನು ಇನ್ನೊಂದು ಹದ್ದು ರೆಕ್ಕೆ ತಾಗಿಸಿಬಿಡಿಸಲು ಹೆಣಗಾಡುತ್ತಿತ್ತು. ಅಲ್ಲದೇ ಅದಕ್ಕೆ ಆಹಾರ ಉಣಿಸಲು ಪ್ರಯತ್ನ ಪಡುತ್ತಿತ್ತು.(ಸತತ ಮೂರು ದಿನ ಆಹಾರ ಉಣಿಸುತ್ತಿದ್ದುದ್ದನ್ನು ನೋಡಿದವರಿದ್ದಾರೆ. ಅದೇ ಕಾರಣಕ್ಕೆ ಇಂಥ ಕಡೆ ಸಿಲುಕಿಕೊಂಡ ಹಕ್ಕಿಗಳು ಮೂರ್ನಾಲ್ಕು ದಿನ ಬದುಕಲು ಸಾಧ್ಯ.) ಬಲೆಗೆ ಸಿಲುಕಿದ್ದ ಹಕ್ಕಿಯೂ ಕೂಡ ರೆಕ್ಕೆಯನ್ನು ಪಟಪಟ ಹೊಡೆಯುತ್ತ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಸ್ವಯಂಸೇವಕರಿಗೆ ಫೋನ್ ಮಾಡಿ ಅವರು ಬರುವಷ್ಟರಲ್ಲಿ ಅದು ಸುಸ್ತಾಗಿತ್ತು. ಅಲ್ಲಿಯೇ ಇದ್ದ ನಾಲ್ಕೈದು ಕೆಲಸಗಾರ ಹುಡುಗರು ನಮ್ಮ ಚಲನವಲನ ನೋಡಿ ಕುತೂಹಲಗೊಂಡು ಹತ್ತಿರ ಬಂದರು. ಅವರಲ್ಲಿ ಒಬ್ಬ ಮರ ಹತ್ತಿಯೇ ಬಿಟ್ಟ. ಟೊಂಗೆಗಳು ತುಂಬಾ ಕಮ್ಮಿಯಿದ್ದ ಗಟ್ಟಿಮುಟ್ಟಾದ ಮರ ಅದು. ದೊಡ್ಡ ಗಾತ್ರದ್ದು. ಕಬ್ಬನ್ ಪಾರ್ಕಿನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರನೊಬ್ಬ ಒಂದು ದೊಡ್ಡ ‘ಗಳು’ ತಂದು ಅದಕ್ಕೆ ಇನ್ನೊಂದು ಕೋಲು ಕಟ್ಟಿ, ಅದನ್ನು ಉದ್ದ ಮಾಡಿ, ಮರ ಹತ್ತಿದ ಹುಡುಗನಿಗೆ ರವಾನಿಸಿದ. ಇದನ್ನೆಲ್ಲ ನೋಡುತ್ತಿದ್ದ ನಮ್ಮ ಮನಸ್ಸಿನಲ್ಲಿ ಪಾಪ ಹದ್ದು ಸತ್ತೇ ಹೋಗುತ್ತದೆ ಎನ್ನುವ ಭಾವ ಇತ್ತು. ಹಾಗೆ ಮರುಕದಿಂದ ನೋಡ ನೋಡುತ್ತಿದ್ದಂತೆ ಆ ಹುಡುಗ ಹದ್ದನ್ನು ಸಿಕ್ಕಿ ಹಾಕಿಕೊಂಡ ದಾರದಿಂದ ಬಿಡಿಸಿಯೇ ಬಿಟ್ಟ. ಕಾಲಿಗೆ ಸಿಕ್ಕಿಕೊಂಡ ಉಳಿದ ದಾರದ ಸಮೇತ ಆ ಹದ್ದು ಹತ್ತಿರದಲ್ಲೇ ಇದ್ದ ಮತ್ತೊಂದು ಮರದ ಮೇಲೆ ಹಾರಿ ಹೋಯಿತು. ಉಳಿದ ದಾರವನ್ನು ಹದ್ದು ತನ್ನ ಕೊಕ್ಕಿನಿಂದ ಬಿಡಿಸಿಕೊಳ್ಳಲು ಕಷ್ಟವೇನು ಆಗದು. ಆ ಹುಡುಗರ ಸ್ವಯಂ ಸ್ಪೂರ್ತಿಯಿಂದ ಹದ್ದು ಬದುಕಿಉಳಿದಿತ್ತು.

ಬಾಲಭವನದ ಮುಂಭಾಗದಲ್ಲಿರುವ ನೀರಿನ ಹೊಂಡವೊಂದಿದೆ. ಆ ಪ್ರದೇಶದಲ್ಲಿ ಹಲವಾರು ಹಕ್ಕಿಗಳು ವಾಸವಾಗಿವೆ. ಅವುಗಳಲ್ಲಿ ಹದ್ದುಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅಲ್ಲಿ ಪ್ರತಿದಿನ ಹದ್ದುಗಳಿಗೆ ಆಹಾರವಾಗಿ ಬ್ರೆಡ್ದು ಮತ್ತು ಬನ್ ಗಳನ್ನು ಒದಗಿಸುವ ಜನರಿದ್ದಾರೆ. ಅಲ್ಲಿಗೆ ವಾಕಿಂಗ್ ಬರುವ ಅನೇಕರು ಪ್ರತಿನಿತ್ಯ ಅವುಗಳಿಗೆ ಆಹಾರ ಒದಗಿಸುವುದು ವಾಡಿಕೆ. ಪಕ್ಷಿಗಳಿಗೆ ಆಹಾರ ಒದಗಿಸಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯೇ ಇದಕ್ಕೆ ಮುಖ್ಯ ಕಾರಣ. ಇವರು ಬರುವ ಸಮಯಕ್ಕೆ ಸರಿಯಾಗಿ ಹದ್ದುಗಳು ಕಾದು ಕುಳಿತು ಅವರು ಹಾಕುವ ಬನ್ ಅನ್ನು ಹಿಡಿದು ತಿನ್ನುತ್ತವೆ.

ನೀರಿರುವ ಜಾಗದಲ್ಲಿ, ಬೆಸ್ತರು ಮೀನುಗಳನ್ನು ಹಿಡಿದು ಅವುಗಳನ್ನು ಕ್ಲೀನ್ ಮಾಡುವ ಜಾಗಗಳಲ್ಲಿ ಸುತ್ತುತ್ತಾ ಅವರು ಉಳಿಸಿದ ಮೀನಿಗಾಗಿ, ಮೀನು ಹಿಡಿಯಲು ಹಾಕುವ ಮಾಂಸದ ಚೂರುಗಳಿಗಾಗಿ ಕಾದು ಗಕ್ಕನೆ ಹಿಡಿದು ಮಿಂಚಿನಂತೆ ಬಂದೆರಗುತ್ತವೆ. ಇದೇ ಪ್ರಭೇದದ ಎಲ್ಲಾ ಹಕ್ಕಿಗಳಂತೆ ಹದ್ದುಗಳ ಕಣ್ಣು ತೀಕ್ಷ್ಣವಾಗಿರುತ್ತವೆ. ಆಹಾರವನ್ನು ಬಹುದೂರದಿಂದಲೇ ಗಮನಿಸಿ ಹಿಡಿಯಲು ಕಾಯುತ್ತವೆ. ಕೆ ಆರ್ ಮಾರ್ಕೇಟ್ ನ ಹತ್ತಿರ ಕಸಾಯಿಖಾನೆಯ ವೇಸ್ಟ್ ಗಳನ್ನು ಎಸೆಯುವ ಜಾಗವೊಂದಿದೆ. ಆ ಜಾಗದ ಹತ್ತಿರವೂ ಹತ್ತು ಹಲವು ಹದ್ದುಗಳು ಸಾಲಾಗಿ ಮಾಂಸಕ್ಕಾಗಿ ಕಾದು ಕುಳಿತಿರುವುದನ್ನು ನೋಡಬಹುದು.

ಹಾಗೆ ಮರುಕದಿಂದ ನೋಡ ನೋಡುತ್ತಿದ್ದಂತೆ ಆ ಹುಡುಗ ಹದ್ದನ್ನು ಸಿಕ್ಕಿ ಹಾಕಿಕೊಂಡ ದಾರದಿಂದ ಬಿಡಿಸಿಯೇ ಬಿಟ್ಟ. ಕಾಲಿಗೆ ಸಿಕ್ಕಿಕೊಂಡ ಉಳಿದ ದಾರದ ಸಮೇತ ಆ ಹದ್ದು ಹತ್ತಿರದಲ್ಲೇ ಇದ್ದ ಮತ್ತೊಂದು ಮರದ ಮೇಲೆ ಹಾರಿ ಹೋಯಿತು. ಉಳಿದ ದಾರವನ್ನು ಹದ್ದು ತನ್ನ ಕೊಕ್ಕಿನಿಂದ ಬಿಡಿಸಿಕೊಳ್ಳಲು ಕಷ್ಟವೇನು ಆಗದು. ಆ ಹುಡುಗರ ಸ್ವಯಂ ಸ್ಪೂರ್ತಿಯಿಂದ ಹದ್ದು ಬದುಕಿಉಳಿದಿತ್ತು.

ಬೇರೆ ಹಕ್ಕಿಗಳಂತೆ ಹದ್ದುಗಳಿಗೂ ಎತ್ತರದ ಕಟ್ಟಡಗಳ ಗ್ಲಾಸ್ ಗಳು ಮಾರಕವಾಗಿವೆ. ಎಷ್ಟೋ ಹದ್ದುಗಳೂ ಸಹ ಕಟ್ಟಡದ ಗ್ಲಾಸ್ ಗಳಿಗೆ ಬಡಿದು ಸಾಯುತ್ತವೆ. ಸದಾಶಿವನಗರದ ಗಾಲ್ಫ್ ಮೈದಾನದ ಸುತ್ತ ರಕ್ಷಣೆಗಾಗಿ ಕಟ್ಟಿರುವ ಬಲೆಗೆ ದಿನನಿತ್ಯ ಎಷ್ಟೋ ಹಕ್ಕಿಗಳು ಸಿಲುಕಿ ಸಾಯುತ್ತಿವೆ. ಅದರಲ್ಲಿ ಹದ್ದುಗಳ ಸಂಖ್ಯೆಯೇ ಹೆಚ್ಚು. ಅದರ ವಿರುದ್ಧ ವನ್ಯಜೀವಿ ಪರಿಪಾಲಕರು ದನಿಯೆತ್ತಿದ ಪ್ರಕರಣ ವರದಿಯಾಗಿತ್ತು. ಕೆ. ಆರ್ ಮಾರ್ಕೆಟ್, ಮೆಜೆಸ್ಟಿಕ್, ತಿಲಕ ನಗರ, ಶಾಂತಿ ನಗರ, ವಿಲ್ಸನ್ ಗಾರ್ಡನ್ ಗಳಲ್ಲಿ ಇಂಥ ಸಾಕಷ್ಟು ಪ್ರಕರಣಗಳು ವರದಿಯಾಗಿವೆ.

ಹದ್ದಿಗೆ Pariah Kite (ಪರೈಯಾ ಕೈಟ್) ಅನ್ನುವ ಹೆಸರೂ ಕೂಡ ಇದೆ. ಈ ಹೆಸರು ನಮ್ಮ ಜಾತಿ ಪದ್ಧತಿಯ ಮೂಲದಿಂದ ಬಂದದ್ದು. ಗರುಡ ಶ್ರೇಷ್ಠ. ಹದ್ದು ಕನಿಷ್ಠ. ಇಲ್ಲೂ ಶ್ರೇಷ್ಠ ಕನಿಷ್ಠವೆಂದು ನೋಡುವ ದೃಷ್ಠಿಯೋ ಏನೋ ಗೊತ್ತಿಲ್ಲ. ಈ ಪದದ ಅಗತ್ಯ ಅಥವ ಔಚಿತ್ಯವೇನೆಂದು ಇನ್ನೂ ಅರ್ಥವಾಗಿಲ್ಲ! ಈ ಪದದ ಅರ್ಥ ಹುಡುಕಿಕೊಂಡು ಹೋದಾಗ ಖ್ಯಾತಪಕ್ಷಿ ಛಾಯಾಗ್ರಾಹಕರಾದ ಡಾ. ಎಂ ವೈ ಘೋರ್ಪಡೆಯವರ ಈ ಮಾತು ಕಣ್ಣಿಗೆ ಬಿತ್ತು: “ನಾವು ನಿರುದ್ದೇಶವಾಗಿಯಾದರೂ ಹೀಗೆ ಮಾತಾಡಿದರೆ ಅದು ಅಜಾಗರೂಕತೆಯಿಂದಾಗಿ ಮನುಷ್ಯ ಮತ್ತು ಹಕ್ಕಿಗಳಿಗೆ ಮಾಡುವ ಅಪರಾಧವೇ ಆಗಿದೆ. ಹಕ್ಕಿಗಳಲ್ಲಿ ಯಾವುದೇ ಜಾತಿಪದ್ಧತಿಯಿಲ್ಲ. ತಳಿಗಳಿರಬಹುದು. ಆದರೆ ಮನುಷ್ಯರಂತೆ ಮೇಲು ಕೀಳೆನ್ನುವ ಕ್ರಮಾಗತ ಪದ್ಧತಿಯಿಲ್ಲ.” ಎನ್ನುತ್ತಾರೆ. ತಮಾಷೆಯೆಂದರೆ, ಹದ್ದು ಮಾಂಸಹಾರಿ; ಹದ್ದಿನ ಜಾತಿಗೇ ಸೇರಿದ ಶ್ರೇಷ್ಠವೆಂದು ಪೂಜಿಸಿಕೊಳ್ಳುವ ಗರುಡ ಕೂಡ ಮಾಂಸಹಾರಿ!

ನಾವು ಮಾಡುವ ಕೊಳಕನ್ನು ಶುಚಿಗೊಳಿಸಿ, ಎಷ್ಟೋ ರೀತಿಯಲ್ಲಿ ಉಪಕಾರಿಯಾದ ಹದ್ದುಗಳನ್ನು ದೂರವೇ ಇಟ್ಟಿದ್ದೇವೆ. ನಮ್ಮಲ್ಲಿ ‘ಹದ್ದು ಮೀರುವುದು’, ‘ಹದ್ದು ಬಸ್ತಿನಲ್ಲಿಡು’ ಎಂಬ ವಾಕ್ಯಗಳ ಪ್ರಯೋಗವಿದೆ. ಅವುಗಳಿಗೂ ಈ ಹದ್ದಿಗೂ ಯಾವುದೇ ಸಂಬಂಧವಿಲ್ಲ. ಸಾಮಾನ್ಯವಾಗಿ ಹದ್ದು ಎನ್ನುವುದು ನೆಗೆಟಿವ್ ಆಗಿಯೇ ಬಳಕೆಯಾಗುತ್ತದೆ. ಹದ್ದು ಎಂದರೆ ಅದರ ಚೂಪಾದ ಕೊಕ್ಕು, ಉದ್ದವಾದ ಉಗುರು, ಬಲವಾದ ಹಿಡಿತ ನೆನಪಾಗುತ್ತದೆ. ಈಗ ಹದ್ದುಬಸ್ತಿನಲ್ಲಿಡಬೇಕಾದದ್ದು ಯಾರ ವರ್ತನೆ ಎನ್ನುವುದನ್ನು ನೀವೇ ಯೋಚಿಸಿ.