ಕಾಡಿನ ಇಂತಹ ಯಾವುದೋ ಒಂದು ಜಲಪಾತ, ಒಂದೇ ಒಂದು ನೋಟ, ಒಂದೇ ಒಂದು ಹೂವು, ನಮ್ಮನ್ನು ಅಮೂರ್ತವಾಗಿಸಿ ಅಲ್ಲೇ ನಿಲ್ಲಿಸಿಬಿಡುತ್ತದೆ. ಈ ಕಾಡಿನ ಜಲಪಾತವೂ ಹಾಗೇ ನಿಲ್ಲಿಸಿಬಿಟ್ಟಿತು. ಒಮ್ಮೆ ಆಕಾಶದ ನೀಲಿಯನ್ನು ಸ್ವಲ್ಪ ಬಾಡಿಗೆಗೆ ತಗೊಂಡು ಪೂರ್ತಿ ನೀಲಿಯಾಗಿ ಹರಿಯುತ್ತಿದ್ದಂತೆ ಕಂಡಿತು. ಆಕಾಶ ನೋಡಿದರೆ ಜಲಪಾತದ ಬಿಳುಪನ್ನು ತಗೊಂಡು ಬಿಮ್ಮಗೇ ನಿಂತಿದೆ. ಇವರಿಬ್ಬರೂ ಏನೋ ಒಂದು ಷಡ್ಯಂತ್ರ್ಯ ಮಾಡಿ ನಮ್ಮನ್ನೆಲ್ಲಾ ತಮ್ಮ ಸೌಂದರ್ಯದಿಂದ ಮರುಳು ಮಾಡುತ್ತಿದ್ದಾರೆ ಅನ್ನಿಸಿತು. 
ಪ್ರಸಾದ್ ಶೆಣೈ
ಬರೆಯುವ ಮಾಳ ಕಥಾನಕದ ಹದಿನೈದನೆಯ ಕಂತು.

 

ನಾವು ಚಾರ್ಮಾಡಿಯ ಬಂಜಾರುಮಲೆ ತಿರುವಿನ ಬಳಿ ತಲುಪುವಾಗ ಚಳಿ ಒಮ್ಮೆಲೇ ಮೈ ಕೊರೆಯಲು ಶುರುವಾಗಿತ್ತು. ಹೆಬ್ಬಂಡೆಗಳಲ್ಲಿ, ಮೇಲೆ ಆಕಾಶಬುಟ್ಟಿಯಂತೆ ಹರಡಿಕೊಂಡಿದ್ದ ದೊಡ್ಡ ದೊಡ್ಡ ಮರಗಳಲ್ಲಿ, ಇಬ್ಬನಿ ಹಗುರನೇ ಉದುರಿ, ತರಗೆಲೆಗಳ ಮೇಲೆ ಬೀಳುತ್ತಿತ್ತು, ಒಮ್ಮೆಲೇ ಚೂರು ಚೂರೇ ಬಿಸಿಲು ಮೂಡುವಾಗ ಆ ಇಬ್ಬನಿಗಳು ಮಣ್ಣಲ್ಲಿ ಲೀನವಾಗಿ ಹೋಗುತ್ತಿತ್ತು. ಆದರೆ ಇಬ್ಬನಿ ಕೊಟ್ಟ ಮುತ್ತಿನ ಪಸೆ, ಜೋರಾಗಿ ಬಿಸಿಲು ಬಿದ್ದರೂ ಮಣ್ಣಿನ ಗುಳಿಕೆನ್ನೆಯಲ್ಲಿ ಕಾಣುತ್ತಿತ್ತು.

ಚಾರ್ಮಾಡಿಯ ಕಾಡು ಕೂಡ ಆಗ ತಾನೇ ಎದ್ದು ಅಮ್ಮನನ್ನು ಕಾಣುವ ಆಸೆಯಿಂದ ಅಂಗಳಕ್ಕೆ ಬಂದ ಮಗುವಿನಂತೆ ಆ ಬೆಳಗ್ಗೆ ಕಾಣುತ್ತಿತ್ತು. ದೂರದಿಂದ ಇಷ್ಟಿಷ್ಟೇ ಮಿನುಗುತ್ತಿದ್ದ ಜೇನುಕಲ್ಲಿನ ನೆತ್ತಿಯಲ್ಲಿ ಸೂರ್ಯ ಚಾರಣ ಮಾಡುತ್ತಿದ್ದ. ನಮ್ಮನ್ನು ಬಂಜಾರು ಮಲೆಯೊಳಿರುವ ಪುಟ್ಟ ಊರೊಂದಕ್ಕೆ ಕರೆದುಕೊಂಡು ಹೋಗಲು ಆ ಊರಿನ ಸ್ಥಳೀಯರೊಬ್ಬರು ತಮ್ಮ ಜೀಪಿನಲ್ಲಿ ದೂರದಿಂದ ಬರುತ್ತಿದ್ದುದು ಈ ತಿರುವಿನಿಂದಲೇ ಕಾಣುತ್ತಿತ್ತು. ನೋಡ ನೋಡುತ್ತಿದ್ದಂತೆಯೇ ಜೀಪು ಹತ್ತಿರವಾಯ್ತು. ಜೀಪೇರಿ ಮಧ್ಯವಯಸ್ಸಿನ ಆ ಚಾಲಕನ ಬಳಿ ಊರಿನ ಕುರಿತು ಅದು ಇದು ಮಾತಾಡುತ್ತ, ನಮ್ಮ ದಾರಿ ತೀರಾ ಅಂಕುಡೊಂಕಾಗಿದ್ದ ಕಾಡ ದಾರಿಯತ್ತ ಸಾಗಿತು. ಅಷ್ಟೊತ್ತಿಗೆ ಅಲ್ಲಲ್ಲಿ ಮುಸುಕಿದ್ದ ಮಂಜೆಲ್ಲವೂ ಕಳೆದು, ಕಾಡು ಶುಭ್ರವಾಗಿ ಕಾಣುತ್ತಿತ್ತು. ಆ ವ್ಯಕ್ತಿ, ಅಲ್ಲೇ ನೂರಾರು ವೃಕ್ಷ ರಾಶಿಗಳ ನಡುವಲ್ಲಿದ್ದ, ಚಾರ್ಮಾಡಿಯ ಭಾರೀ ಗುಡ್ಡಗಳೆಲ್ಲಾ ಕಾಣುತ್ತಿದ್ದ ತನ್ನ ಪುಟ್ಟ ಮನೆಯ ಬಳಿ ಕರೆದುಕೊಂಡು ಹೋದ. ಮನೆಯಲ್ಲಿ ಒಂದಷ್ಟು ಹೆಂಗಸರು, ಅಜ್ಜಿ ಹಾಗೂ ಪುಟ್ಟ ಪುಟ್ಟ ಮಕ್ಕಳಿದ್ದರು. ನಾವು ಮನೆಯೊಳಗೆ ಹೋಗಿ ಒಂದು ತಂಬಿಗೆ ನೀರು ಕುಡಿದದ್ದೇ, ಆ ಮಕ್ಕಳಿಗೆ “ಇವರು ಇಲ್ಲೇ ಇರಲಿಕ್ಕೆ ಬಂದವರು, ಒಂದೆರಡು ದಿನವಾದ್ರೂ ಇದ್ದು ಹೋಗುವವರು” ಅಂತ ಖಾತ್ರಿಯಾಗಿ ನಮ್ಮನ್ನೇ ನೋಡಿದ ಅವರ ಎಳೆಗಣ್ಣುಗಳು, ಅನಾದಿ ಕಾಲದಿಂದಲೂ ತಮಗೆ ಪರಿಚಯವಿರುವವರು ನಾವೆಂಬಂತೆ ಮಿನುಗಿದವು.

ಮಕ್ಕಳಿಗೆ ಮನೆಗೆ ಯಾವ ಜೀವಗಳೂ ಬಂದರೂ ಎಷ್ಟೊಂದು ಖುಷಿಯಾಗುತ್ತೆ. ಗೊತ್ತಾಗದೇ ಬೀಳುವ ಹಿತವಾದ ಕನಸು ನಿಜವಾದಂತೆ ಅವರ ಮನಸ್ಸು ನಮ್ಮನ್ನೇ ನೋಡಿ ಸುಖಪಡುತ್ತದೆ. ಸುಮ್ಮನೇ ಆ ಕಾಡಂಚಿನಲ್ಲಿ ಮುಗ್ದವಾಗಿ ಬದುಕುವ ಆ ಮಕ್ಕಳನ್ನು ಕಂಡು ಕಿರುನಗೆ ಕೊಟ್ಟರೂ ಸಾಕು, ಅವರಿಗೆ ನಾವು ಆ ಕ್ಷಣ ಪ್ರತ್ಯಕ್ಷರಾದ ದೇವರಂತೆ ಕಾಣಲು ಶುರುವಾಗುತ್ತೇವೆ, ಈ ಕಾಡಂಚಿನ ಪುಟ್ಟಪುಟ್ಟ ಮಕ್ಕಳು ಕೂಡ ನಮ್ಮನ್ನು ಪ್ರೀತಿಯಿಂದ ನೋಡುತ್ತಲೇ ಇದ್ದರು. ಸ್ವಾರ್ಥವಿಲ್ಲದ, ಆಸೆಯ ಗಂಧವಿಲ್ಲದ, ಪೂರ್ವಾಗ್ರಹದ ಲವಲೇಶವೂ ಇಲ್ಲದ, ಅವರ ನೋಟಗಳು ದೊಡ್ಡವರ ನೋಟಕ್ಕಿಂತಲೂ ಅದೆಷ್ಟು ದೊಡ್ಡದು ಎನ್ನುವ ಅರಿವಾಯ್ತು. ಸಹಜವಾದ ಮನುಷ್ಯ ಸಂಬಂಧಗಳನ್ನು ಸಹಜವಾಗಿಯೇ ನೋಡಿ ಸಂಭ್ರಮಪಡುವ ಆ ಕಾಡಿನ ಮಕ್ಕಳಂತೆ ನಮ್ಮ ಮನಸ್ಸೂ ಇದ್ದರೆ ಜಗತ್ತು ಎಷ್ಟೊಂದು ಸುಂದರವಾಗಿ ಕಾಣುತ್ತಿತ್ತಲ್ಲ ಅಂತ ಯೋಚಿಸುತ್ತಲೇ ನಿಂತಿದ್ದಾಗ, ಗಾಳಿ ರೊಯ್ಯನೇ ಬೀಸಿ ಕಾಡಲ್ಲಿ ದೊಡ್ಡದ್ದೊಂದು ಮರದ ಗೆಲ್ಲೋ, ಚಳಿಗಾಲಕ್ಕೆ ಒಣಗಿದ ಮರವೋ ಬಿದ್ದ ಸದ್ದು ಕೇಳಿ ಎಲ್ಲರೂ ಒಮ್ಮೆ ಮೌನವಾದೆವು.

“ಚಳಿಗಾಲ ಅಲ್ವಾ? ಕಾಡಲ್ಲಿ ಒಣಗಿ ಮಣ್ಣು ತಿಂದ ಮರಗಳು ತುಂಬಾ ಇವೆ. ಅವುಗಳು ಹೀಗೆ ಬೀಳುವಾಗ ಸದ್ದು ಕೇಳೋದು ಸಾಮಾನ್ಯ” ಎಂದಿತು ಮನೆಯ ಗಂಡಸಿನ ಸ್ವರ. ಸೂರ್ಯ ಈಗ ಇಡೀ ಕಾಡ ಮನೆಯನ್ನು ಆಕ್ರಮಿಸಿಕೊಂಡಿದ್ದರೂ ಚಳಿಗೆ ಮೈ ಮತ್ತೂ ತಣ್ಣಗಾಗುತ್ತಲೇ ಇತ್ತು. ಈ ಬೆಟ್ಟದ ಕೆಳಗಿರುವ ಊರಿನ ಚಳಿ ಅಂದ್ರೆ ಹಾಗೇ, ಐಸ್ ಕ್ಯಾಂಡಿಯೇ ಬಂದು ನಮ್ಮನ್ನು ಚೀಪಿದ ಹಾಗೇ, ಈ ಕಾಡ ಚಳಿಯ ಚಳುವಳಿ ಅಷ್ಟು ಸುಲಭಕ್ಕೆ ನಿಲ್ಲುವ ಪ್ರಮೇಯವೇ ಇಲ್ಲ. ಬೇಡವೆಂದರೂ ಕಾಡ ಮನೆಯವರು ಬೆಚ್ಚ ಬೆಚ್ಚಗೇ ಟೀ ಮಾಡಿಕೊಟ್ಟರು. ಟೀ ಕುಡಿದು ಇಲ್ಲೇ ಒಂದಷ್ಟು ದೂರದಲ್ಲಿ ಜಲಪಾತವಿದೆಯೆಂದೂ, ಅದನ್ನು ನೋಡುತ್ತ ನೋಡುತ್ತ ಅಲ್ಲಿನ ಕಾಡನ್ನೂ, ಹೊಳೆಯನ್ನೂ, ಅಲ್ಲಿಂದಲೇ ಚಾರ್ಮಾಡಿಯ ಗುಡ್ಡಗಳನ್ನೂ ನೋಡಬಹುದೆಂದೂ ಮನೆಯ ಯಜಮಾನ ಅಭಯಕೊಟ್ಟ, ನಮ್ಮ ಜೊತೆಗೆ ಅವರ ಮನೆಯ ಮನೋಜ ಎನ್ನುವ ಹುಡುಗನನ್ನು ನಮ್ಮ ಜೊತೆ ದಾರಿ ತೋರಿಸಲು ಕಳುಹಿಸಿಕೊಟ್ಟರು.

ಶಾಲೆಗೆ ಹೋಗದೇ ಕಾಡಿನ ಪಕ್ಕದಲ್ಲಿರುವ ಎಸ್ಟೇಟ್ ಹಾಗೂ ತಮ್ಮ ಕೃಷಿ ಭೂಮಿಯಲ್ಲೇ ಕೆಲಸ ಮಾಡಿಕೊಂಡಿದ್ದ ಮನೋಜ, ಕಾಡು ನೋಡಬೇಕೆಂದಿದ್ದ ನಮ್ಮ ಆಸೆಗಳಿಗೆ, ಕಾಡಿನ ಮೌನದಲ್ಲಿ ಬದುಕುವ, ಯಾವ ಜಂಜಡವೂ ಇಲ್ಲದೇ ಸುತ್ತೋದು ಎಷ್ಟು ಚೆಂದ ಅಲ್ವಾ ಎನ್ನುವ ನಮ್ಮ ಚಿಂತನೆಗಳಿಗೆ ಕೆಲವೇ ಕ್ಷಣಗಳಲ್ಲಿ ಜೀವಕೊಟ್ಟ. ಕಾಡು ನೋಡುತ್ತ ಬೆಳೆದಿರುವ ಆ ಹುಡುಗ ಸಹಜವಾಗಿ ತನಗೆ ವಿಶೇಷ ಕಂಡ ಪೊದೆಗಳನ್ನು, ಕಾಡು ಹೂವುಗಳನ್ನು, ವಿಚಿತ್ರವಾಗಿ ಸದ್ದು ಮಾಡುತ್ತಿದ್ದ ಹಕ್ಕಿಗಳನ್ನೂ, ಸುತ್ತಿದಂತೆಲ್ಲಾ ನಮ್ಮ ಕಾಲನ್ನು ಸುತ್ತು ಹಾಕಿಕೊಳ್ಳುತ್ತಿದ್ದ ಬಳ್ಳಿಗಳನ್ನು, ತನ್ನದ್ದೇ ಹೊಸತೊಂದು ಕತೆಯಂತೆ ಹೇಳುತ್ತ ಹಸಿರಿನ ನಿಗೂಢ ದಾರಿಗಳಿಗೆ ಕರೆದುಕೊಂಡು ಹೋಗುತ್ತಿದ್ದ. ನಮ್ಮ ದಾರಿಗೆ ಯಾವುದಾದರೂ ದೊಡ್ಡ ಪೊದೆಗಳು ಎದುರಾದರೆ ಕತ್ತಿಯಿಂದ ಆ ಪೊದೆಗಳನ್ನು ಸರಿಸುತ್ತಾ, ಕಾಡಿನ ಕತ್ತಲೆಯನ್ನೂ ಬೆಳಕಿನ ದಾರಿಯಾಗಿಸುತ್ತಿದ್ದ. ಅವನಿಗೆ ಬೇಸರವಾಗದಿರಲೆಂದು ನಾವೆಲ್ಲಾ ತುಳುವಿನಲ್ಲಿ ಅದು ಇದು ಜೋಕು ಹೇಳುತ್ತ, ಕೊನೆಗೆ ಎಲ್ಲರೂ ನಗುವಿನಲ್ಲೇ ಜೀಕುತ್ತಿದ್ದೆವು. ಕೆಲವೇ ಕ್ಷಣಗಳಲ್ಲಿ ಕಾಡಿನ ಒಂದು ಪುಟ್ಟ ತುಣುಕಿನಂತಿದ್ದ ಮನೋಜನೊಳಗೆ ನಾವೂ, ನಮ್ಮೊಳಗೆ ಮನೋಜನೂ ಇಳಿದುಬಿಟ್ಟಿದ್ದೇ ಗೊತ್ತಾಗಲಿಲ್ಲ. ಆ ವರೆಗೂ ಪರಿಚಯವೇ ಇಲ್ಲದ ಮನುಷ್ಯ, ಒಂದೇ ಕ್ಷಣ, ಯಾವುದೋ ಒಂದು ಮಾಯೆಯಲ್ಲಿ ನಮ್ಮೊಳಗೆ ಇಳಿದುಬಿಡುವ ಪ್ರಕ್ರಿಯೆಯೇ ನನಗೆ ಬೆರಗು ಅನ್ನಿಸಿತು.

ನಮ್ಮನ್ನು ಹಾಗೆ ಆಪ್ತತೆಯ ಕೊಳದಲ್ಲಿ ಇಳಿಸಿಬಿಟ್ಟಿದ್ದು ಕಾಡಾ? ಹಕ್ಕಿ ಹಾಡಾ? ಮಾತಿನ ಜಾಡಾ? ಅಥವಾ ಪೂರ್ವಜನ್ಮದ ಯಾವುದೋ ಒಂದು ಬಂಧವಾ? ಎನ್ನುವ ಪ್ರಶ್ನೆ ಹುಟ್ಟಿಸಿಕೊಂಡೇ ನಾನು ಕಾಡ ದಾರಿಯ ಏರು ಏರಿದ್ದೆ.
“ಬನ್ನಿ ನಾವೀಗ ಇಲ್ಲೇ ಒಂದು ಜಲಪಾತಕ್ಕೆ ಹೋಗುವ, ನೋಡ್ಲಿಕ್ಕೆ ಭಾರೀ ಚೆಂದ ಉಂಟು’ ಎಂದ ಮನೋಜ, ನಮ್ಮ ಮುಂದೆ ಹರಡಿದ್ದ ದೊಡ್ಡ ಮರವೊಂದರ ಬೀಳಲುಗಳನ್ನು ಹಿಡಿದು ಬಂಡೆಯೊಂದರ ಮೇಲೆ ಸರಿದುಹೋದ. ನಾವೂ ಅದೇ ರೀತಿ ತ್ರಾಸದಲ್ಲಿ ಬಂಡೆ ಏರಿದೆವು. ಮತ್ತೊಂದಷ್ಟು ಬಂಡೆಗಲ್ಲುಗಳನ್ನು ಏರಿ, ಇಳಿದು, ಮತ್ತೆ ಹತ್ತಿದಾಗ ನಮ್ಮೆದುರಿಗೆ ಸ್ವರ್ಗದಂತಹ ನೀರು ಒಂದೇ ಸಮನೆ ಬೀಳುತ್ತಿತ್ತು. ಆ ನೀರು ಎಷ್ಟು ಹಿತವಾಗಿ ಉದುರುತ್ತಿತ್ತೆಂದರೆ, ಯಾವುದೋ ಮರಕ್ಕೆ ಹತ್ತಿಕೊಂಡ ಕಾಡ ಮಲ್ಲಿಗೆ ಬಳ್ಳಿಯನ್ನು, ಬೇಕಂತೆಲೇ ಯಾವುದೋ ಹಕ್ಕಿ ಅಲುಗಾಡಿಸಿದಾಗ ಮಲ್ಲಿಗೆಯೇ ಧಾರೆಯಾಗಿ ಬೀಳುತ್ತಲ್ಲ ಹಾಗಿತ್ತು.

ಸುಮ್ಮನೇ ಆ ಕಾಡಂಚಿನಲ್ಲಿ ಮುಗ್ದವಾಗಿ ಬದುಕುವ ಆ ಮಕ್ಕಳನ್ನು ಕಂಡು ಕಿರುನಗೆ ಕೊಟ್ಟರೂ ಸಾಕು, ಅವರಿಗೆ ನಾವು ಆ ಕ್ಷಣ ಪ್ರತ್ಯಕ್ಷರಾದ ದೇವರಂತೆ ಕಾಣಲು ಶುರುವಾಗುತ್ತೇವೆ, ಈ ಕಾಡಂಚಿನ ಪುಟ್ಟಪುಟ್ಟ ಮಕ್ಕಳು ಕೂಡ ನಮ್ಮನ್ನು ಪ್ರೀತಿಯಿಂದ ನೋಡುತ್ತಲೇ ಇದ್ದರು.

ಕಾಡಿನ ಇಂತಹ ಯಾವುದೋ ಒಂದು ಜಲಪಾತ, ಒಂದೇ ಒಂದು ನೋಟ, ಒಂದೇ ಒಂದು ಹೂವು, ನಮ್ಮನ್ನು ಅಮೂರ್ತವಾಗಿಸಿ ಅಲ್ಲೇ ನಿಲ್ಲಿಸಿಬಿಡುತ್ತದೆ. ಈ ಕಾಡಿನ ಜಲಪಾತವೂ ಹಾಗೇ ನಿಲ್ಲಿಸಿಬಿಟ್ಟಿತು. ಒಮ್ಮೆ ಆಕಾಶದ ನೀಲಿಯನ್ನು ಸ್ವಲ್ಪ ಬಾಡಿಗೆಗೆ ತಗೊಂಡು ಪೂರ್ತಿ ನೀಲಿಯಾಗಿ ಹರಿಯುತ್ತಿದ್ದಂತೆ ಕಂಡಿತು. ಆಕಾಶ ನೋಡಿದರೆ ಜಲಪಾತದ ಬಿಳುಪನ್ನು ತಗೊಂಡು ಬಿಮ್ಮಗೇ ನಿಂತಿದೆ. ಇವರಿಬ್ಬರೂ ಏನೋ ಒಂದು ಷಡ್ಯಂತ್ರ್ಯ ಮಾಡಿ ನಮ್ಮನ್ನೆಲ್ಲಾ ತಮ್ಮ ಸೌಂದರ್ಯದಿಂದ ಮರುಳು ಮಾಡುತ್ತಿದ್ದಾರೆ ಅನ್ನಿಸಿತು. ಅಲ್ಲೇ ಬಹಳ ಹೊತ್ತು ಕೂತು ಜಲಪಾತವನ್ನು ನೋಡುತ್ತಲೇ ಹೊತ್ತು ಕಳೆದೆವು. ಅದರ ಚೆಲುವಿನ ಎದುರು ಬೇರೆಲ್ಲಾ ಅಂದವೂ ಗೌಣ ಅನ್ನಿಸಲು ಶುರುವಾಯ್ತು. ನಮ್ಮೊಳಗಿನ ಸ್ವಾರ್ಥ, ತುಮುಲ, ಕಲಹ, ಅಸಹನೆ ಎಲ್ಲವನ್ನೂ ಹಿಂಡಿ ಹಿಪ್ಪೆ ಮಾಡಿಬಿಡುವ ಶಕ್ತಿ ಜಲಪಾತಕ್ಕಿದೆ. ಒಂದು ಕಾಡಿನ ರಮಣೀಯ ಜಲಪಾತ, ಬರೀ ತಾನಷ್ಟೇ ಧುಮುಕುವುದಿಲ್ಲ ನಮ್ಮನ್ನು ಧುಮುಕಿಸುತ್ತದೆ. ನಮ್ಮ ಮನವನ್ನೂ ಧಾರೆಯಾಗಿಸುತ್ತದೆ. ಅದರ ಗಾಢ ತಂಪು ದೇಹಕ್ಕೆ ಇಂಪು ಕೊಡುವಷ್ಟು ಬೇರ್ಯಾವ ವಸ್ತು ಕೊಟ್ಟೀತು ಹೇಳಿ. ನಾವು ಅದರಲ್ಲೆ ಅದ್ದಿ ಹೋದೆವು, ಹರಿದೆವು, ತಂಪಾದೆವು ಕೊನೆಗೆ ಜಲಪಾತವೇ ಆಗಿ ಹೋದೆವು. ನಾವು ಏನೂ ಮಾತಾಡಲು ಹೋಗಲಿಲ್ಲ. ಆ ಜಲಪಾತದ ಮಾತಿನ ಎದುರು ನಾವು ಮಾತಾಡಿದರೆ ಅದು ಎಷ್ಟೊಂದು ಮೂರ್ಖತನ ಅಲ್ವಾ ಅನ್ನಿಸಿತು. ಕೊನೆಗೆ ಮೌನವಾಗಿ ಅಲ್ಲೇ ಕೂತೆವು. ದಣಿವಾಗಿ ಹೊಟ್ಟೆ ಬುಳುಬುಳು ಅನ್ನುತ್ತಿತ್ತು. ಕಟ್ಟಿ ತಂದಿದ್ದ ತಿಂಡಿಯ ಬುತ್ತಿಯನ್ನು ಬಿಡಿಸಿ ಎಲ್ಲರೂ ಸ್ವಾಧಿಷ್ಟವಾಗಿ ತಿಂದೆವು. ಮತ್ತೆ ಅಲ್ಲೇ ಬಂಡೆಗೊರಗಿ ಆಕಾಶ ದಿಟ್ಟಿಸುತ್ತಲೇ ನಿದ್ದೆ ಹೋದೆವು. ಮದ್ಯಾಹ್ನದ ಮಂಪರು ಚೆನ್ನಾಗಿತ್ತು. ಚಳಿಗಾಲದ ಚೆಂದ ಬಿಸಿಲು, ಸನಿಹದಲ್ಲೇ ಜಲಪಾತದ ಮೆಲ್ಲನೆಯ ಉಸಿರು, ನೆರಳ ಜೊತೆ ಮಲಗಿದಂತಿದ್ದ ಕಾಡು, ಯಾವುದೋ ಹೂವಿನ ಹಿತವಾದ ಪರಿಮಳ ಇವೆಲ್ಲ ಅನುಭವಿಸುತ್ತಲೇ ಯಾವುದ್ಯಾವುದೋ ಕತೆಗಳು ನೆನಪಾದವು.

ಅವೆಲ್ಲ ಮಧ್ಯಾಹ್ನದ ಕತೆಗಳು, ಮಧ್ಯಾಹ್ನ ದೂರದೂರಿಗೆ ಹೊರಟ ದಾರಿಹೋಕ ದಣಿದು ಅಲ್ಲೇ ಇರುವ ಮನೆಯೊಂದಕ್ಕೆ ಹೋದದ್ದು, ಆ ಮನೆಯಲ್ಲಿ ಊಟ ಮಾಡಿ ಅಲ್ಲೇ ವಿಶ್ರಮಿಸಿ ಮತ್ತೆ ಪಯಣ ಬೆಳೆಸಿದ್ದು, ಈಚಲು ಮರದ ಕೆಳಗೆ ದಾರಿಹೋಕ ನಿದ್ದೆ ಹೋಗಿದ್ದು, ಅವನಿಗೆ ಅಲ್ಲಿ ಏನೇನೋ ಕನಸು ಬಿದ್ದಿದ್ದು, ಇಂತದ್ದೇ ಕತೆಗಳು ನೆನಪಾದವು. ಮಧ್ಯಾಹ್ನ ಅಂದರೆ ದಣಿವಿನ ಸಂಕೇತ. ನೀವೂ ಇಂತದ್ದೇ ಮಧ್ಯಾಹ್ನದಲ್ಲಿ ಕಾಡಿನ ದೊಡ್ಡ ಮರವೊಂದರ ಕೆಳಗೆ ಮಲಗಿ ನೋಡಿ, ಅದರ ಖುಷಿಯೇ ಬೇರೆ. ನಾವು ಒಂದಷ್ಟು ಹೊತ್ತಲ್ಲಿ ಅಲ್ಲಿಂದ ಮತ್ತೊಂದು ಕಾಡ ಮಗ್ಗುಲಿಗೆ ಸಾಗಿದೆವು. ಅಲ್ಲೊಂದಿಷ್ಟು ಹೊತ್ತು ಕಾಡು, ಬಳ್ಳಿ, ಮರಗಳನ್ನು ನೋಡಿದೆವು. ಮನೋಜ ತಮ್ಮ ಊರಲ್ಲಿ ಕಷ್ಟವಿದೆಯೆಂದೂ, ಸರಕಾರದಿಂದ ಯಾವ ಸೌಲಭ್ಯವೂ ಇಲ್ಲಿಗೆ ಸಿಗುತ್ತಿಲ್ಲವೆಂದೂ ಊರಿನ ಕತೆ ಹೇಳಲು ಶುರುಮಾಡಿದ. ಸಂಜೆ ಕವಿಯುತ್ತಿದ್ದಂತೆಯೆ ಅವರ ಮನೆಗೆ ತಲುಪಿದೆವು. ನಾವು ಮನೆ ಮುಟ್ಟಿದ್ದೇ, ಮನೆ ಮಕ್ಕಳ ಹುಮ್ಮಸ್ಸು ಜಾಸ್ತಿಯಾಯ್ತು.

ನೀವು ಇವತ್ತು ನಮ್ಮ ಮನೆಲೇ ಉಳೀರಿ, ಊಟ ಇಲ್ಲೇ ಮಾಡಿದ್ರಾಯ್ತು ಎಂದರು ಮನೆ ಮಂದಿ. ಪಾಪ, ಕಷ್ಟದಲ್ಲೇ ಇರುವ ಅವರಿಗೆ ನಾವು ಕಾಟ ಕೊಡುವುದು ಸರಿ ಎನ್ನಿಸಲಿಲ್ಲ. ನಿರಾಕರಿಸಲೂ ಸರಿ ಆಗಲಿಲ್ಲ. ಕೊನೆಗೆ ನಮಗೆ ಕಾಡಲ್ಲಿ ಏಕಾಂತದ ರಾತ್ರಿ ಕಳೆಯಬೇಕೆಂದೂ, ಎಲ್ಲಾದ್ರೂ ಕೋಣೆ, ಹೊರಚಾವಡಿ ಇದ್ರೂ ಸಾಕೆಂದು ಹೇಳಿದವು. ಅಯ್ಯೋ ಬೇಡಪ್ಪಾ “ಕಾಡಿದು ರಾತ್ರಿ ಹೊರಗೆ ನಿಮ್ಮನ್ನು ಹೇಗೆ ಮಲಗಿಸೋದು?” ಅಂತವರು ಸುತರಾಂ ಒಪ್ಪಲಿಲ್ಲ. ನಾವು “ನಮಗೆ ಅಭ್ಯಾಸವಿದೆಯೆಂದೂ, ರಾತ್ರಿ ಊಟ ಮಾತ್ರ ಇಲ್ಲೇ ಮಾಡ್ತೆವೆಂದೂ ಹೇಳಿದವು. ಕಡೆಗೆ “ಇಲ್ಲೇ ಒಂದು ಪುಟ್ಟ ಅಂಗನವಾಡಿ ಕೇಂದ್ರವಿದೆ, ಅದರ ಉಸ್ತುವಾರಿ ನೋಡಿಕೊಳ್ಳುವುದು ನಾವೇ, ಆದರೀಗ ಅಲ್ಲಿ ಮಕ್ಕಳಿಲ್ಲ. ಅಲ್ಲಿ ಮಲಗಲೇನೂ ತೊಂದ್ರೆ ಇಲ್ಲ”. ಅಂತ ಹೇಳಿದ ಮೇಲೆ ನಮಗೆ ಸಮಾದಾನವಾಯ್ತು. ಅಲ್ಲೇ ರಾತ್ರಿ ಕಳೆಯುದೆಂದೂ ನಿರ್ಧಾರವಾಯ್ತು.

ಸಂಜೆ ಅಲ್ಲೇ ಕಾಡಲ್ಲಿ ಸುತ್ತಿ, ಹಳ್ಳಗಳ ಸನಿಹದಲ್ಲಿ ಅಲೆದಾಡಿದೆವು. ಅಲ್ಲೇ ನಾವು ತಂಗುವ ಅಂಗನವಾಡಿ ಕೇಂದ್ರ ಕೂಡ ಇತ್ತು, ಕಾಡಿನ ಹೆಂಗಸರು ಮನೆಗೆ ಕಟ್ಟಿಗೆ ರಾಶಿ ತೆಗೆದುಕೊಂಡು ಹೋಗುವುದನ್ನು, ಹಳ್ಳದಲ್ಲಿ ನೀರಕ್ಕಿಗಳು ಮೀನು ಹಿಡಿಯುವುದನ್ನು ನೋಡುತ್ತಿದ್ದಂತೆ ಮುಸ್ಸಂಜೆ ಕವಿಯಲು ಶುರುವಾಯ್ತು. ಗೆಳೆಯ ಸದಾಶಿವ ಇಲ್ಲಿ ಒಂದಷ್ಟು ಹಳ್ಳೇಡಿಗಳು ಇವೆಯಂದೂ, ಅದರ ರುಚಿ ಸೂಪರ್ರಾಗಿ ಇವತ್ತದೆಂದೂ ಹೇಳಿ, ಇನ್ನೇನು ಕವಿಯಲಿರುವ ಇರುಳಲ್ಲಿ ಹಳ್ಳೇಡಿ ಹಿಡಿದ. ನಮ್ಮ ತಂಡದಲ್ಲಿರುವ ಏಡಿ ಪಲ್ಯ ಸ್ಪೆಷಲಿಸ್ಟ್ ಗಿರೀಶ, ರಾತ್ರಿ ಇಲ್ಲೇ ಸಣ್ಣ ಬೆಂಕಿ ಹಾಕಿ ನಾವು ಏಡಿ ಪಲ್ಯ ಮಾಡ್ತೆವೆಂದೂ, ಏಡಿ ಬೇಕಾದವರು ಈಗಲೇ ಹೇಳಿರೆಂದೂ ಫರ್ಮಾನು ಹೊರಡಿಸಿದ. ಕೆಲವೇ ಹೊತ್ತಲ್ಲಿ ಇರುಳಾಯಿತು. ಮನೆಯವರು ಊಟಕ್ಕೆ ಬರಲೇಬೇಕು ಎಂದು ಹೇಳಿದ್ದರಿಂದ ತಪ್ಪಿಸಿಕೊಳ್ಳಲು ಮನಸ್ಸಾಗದೇ, ಸೀದಾ ಅಲ್ಲಿಗೆ ಹೊರಟೆವು. ಸರಳವಾದ ಭೋಜನ ನಮಗಾಗಿ ಕಾದಿತ್ತು. ಅನ್ನ, ಸಾಂಬಾರು, ಸೌತೆಕಾಯಿ ಪಲ್ಯ, ಉಪ್ಪಿನ ಕಾಯಿ, ಹಪ್ಪಳಗಳನ್ನು ಪ್ರೀತಿಯಿಂದ ಬಡಿಸಿದರು. ಯಾಕೋ ಕಾಡಂಚಿನ ಮನೆಗಳಲ್ಲಿ ಪ್ರೀತಿಯಿಂದ ಮಾಡುವ ಸರಳ ಸತ್ಕಾರ ಬೇರೆಲ್ಲಿಯೂ ಸಿಗಲಾರದು ಅನ್ನಿಸಿತು. ಮನುಷ್ಯ ಸಂಬಂಧಗಳಿಗೆ ಅವರು ಸ್ಪಂದಿಸುವ, ಯಾವ ಸ್ವಾರ್ಥವೂ ಇಲ್ಲದೇ ನಮ್ಮನ್ನು ಒಂದಷ್ಟು ಹೊತ್ತು ಪೊರೆಯುವ ಅವರ ಬಗ್ಗೆ ಹೆಮ್ಮೆ ಅನ್ನಿಸಿತು. ಅಲ್ಲೇ ಸ್ವಲ್ಪ ಹೊತ್ತು ಕೂತು ಮಕ್ಕಳ ಜೊತೆ ಆಟ ಆಡಿ, ಮತ್ತೆ ಅಂಗನವಾಡಿ ಕೇಂದ್ರದತ್ತ ಬರುವಾಗ ಸುತ್ತಲೂ ಗಾಢ ಕತ್ತಲು. ಹಳ್ಳ ಆ ನಿಗೂಢ ರಾತ್ರಿಯಲ್ಲಿ ಮೈಮರೆತು ಹರಿಯುತ್ತಲೇ ಇತ್ತು. ಅಷ್ಟೊತ್ತು ಇಲ್ಲದಿದ್ದ ಚಳಿ ಇದೀಗ ಒಮ್ಮೆಲೇ ಹರಿಯಲು ಶುರುಮಾಡಿತು. ಗೆಳೆಯ ಗಿರೀಶ, ಸದಾಶಿವ, ಅಲ್ಲೇ ಕಲ್ಲು ಕೂಡಿಸಿ ಬೆಂಕಿ ಹಾಕಿ ಏಡಿ ಸುಡಲು ಹೊಂಚು ಹಾಕುತ್ತಿದ್ದರು. ನಾನು, ಗೆಳೆಯ ಕೀರ್ತಿ, ಸಚ್ಚಿ ಅಲ್ಲೇ ಒಂದು ದಾರಿಯಲ್ಲಿ ಹೋಗಿಬಿಟ್ಟೆವು.

(ಚಿತ್ರಗಳು: ಪ್ರಸಾದ್ ಶೆಣೈ)

ನಮ್ಮ ತಂಡದಲ್ಲಿರುವ ಏಡಿ ಪಲ್ಯ ಸ್ಪೆಷಲಿಸ್ಟ್ ಗಿರೀಶ, ರಾತ್ರಿ ಇಲ್ಲೇ ಸಣ್ಣ ಬೆಂಕಿ ಹಾಕಿ ನಾವು ಏಡಿ ಪಲ್ಯ ಮಾಡ್ತೆವೆಂದೂ, ಏಡಿ ಬೇಕಾದವರು ಈಗಲೇ ಹೇಳಿರೆಂದೂ ಫರ್ಮಾನು ಹೊರಡಿಸಿದ. ಕೆಲವೇ ಹೊತ್ತಲ್ಲಿ ಇರುಳಾಯಿತು. ಮನೆಯವರು ಊಟಕ್ಕೆ ಬರಲೇಬೇಕು ಎಂದು ಹೇಳಿದ್ದರಿಂದ ತಪ್ಪಿಸಿಕೊಳ್ಳಲು ಮನಸ್ಸಾಗದೇ, ಸೀದಾ ಅಲ್ಲಿಗೆ ಹೊರಟೆವು.

ಅಲ್ಲೊಂದು ಪುಟ್ಟ ಮನೆ, ಸುರಿಯುತ್ತಿದ್ದ ರಾತ್ರಿಯ ಚಳಿಯಲ್ಲಿ ಹೆದರಿಸುವಂತೆ ನಿಂತಿತ್ತು. ಮನೆಯ ಒಳಗೆ ಹಗುರನೇ ಹಾಡು ಕೇಳುತ್ತಿದೆ “ಸ್ವಾಮಿಯೇ ಅಯ್ಯಪ್ಪೋ.. ಅಯ್ಯಪ್ಪೋ ಸ್ವಾಮಿಯೇ.. ಒಳಗೆ ಕಣ್ಣು ಹಾಕಿದರೆ ಅಲ್ಲೊಂದು ಮಬ್ಬಾಗಿ ಬಲ್ಪು ಉರಿಯುತ್ತಿದೆ. ಅದರ ಕೆಳಗೆ ಅಷ್ಟಿತ್ತು ದೇವರುಗಳ ಫೋಟೋ, ಊದುಬತ್ತಿಯ ಪರಿಮಳ, ಇವೆಲ್ಲಾ ಕತ್ತಲ್ಲಲ್ಲಿ ಭಾರೀ ಭಯಾನಕವಾಗಿ ಕಾಣುತ್ತಿತ್ತು. ಮನೆ ನೋಡುತ್ತಲೇ ನಮಗೊಂದೇ ಸಲ ಪುಕುಪುಕು ಆಯ್ತು. ಕಾಡಿನಲ್ಲಿ ಮಾಟ ಮಾಡುವ ಮಂತ್ರವಾದಿಯ ಮನೆಗೇನಾದರೂ ಬಂದೆವಾ? ಅಂತ ಭಯವಾಯ್ತು. ನಮ್ಮನ್ನು ನೋಡಿದ ಕುರುಚಲು ಗಡ್ಡದ ಒಬ್ಬ ಮನುಷ್ಯ, ಮನೆಯಿಂದ ಹೊರಬಂದು ವಿಚಾರಿಸಿದ. ಆ ರಾತ್ರಿಯ ಕತ್ತಲಲ್ಲಿ ಅಯ್ಯಪ್ಪ ಮಾಲೆ ಧರಿಸಿದ್ದ ಆತ, ಹಣೆ ತುಂಬಾ ಕುಂಕುಮ ಲೇಪಿಸಿದ್ದ, ಯಾವುದೋ ದೈವಿಕ ಲೋಕದಿಂದ ಇಳಿದುಬಂದವನಂತೆ ಕಂಡ. ಕೊನೆಗೆ, “ಬನ್ನಿ ಒಳಗೆ ಬನ್ನಿ, ಪಾಪದವರ ಮನೆ” ಅಂತ ಆಹ್ವಾನಿಸಿದ, ನಾವು ಒಳಗೆ ಹೋದೆವು. ಅವನ ಕೇರಳ ಶೈಲಿಯ ಕನ್ನಡ ನೋಡಿ ಇವನು ಕೇರಳದವನು ಅಂತ ಗೊತ್ತಾಗಲು ತುಂಬಾ ಹೊತ್ತು ಹಿಡಿಯಲಿಲ್ಲ. ನಾನು ಬೆಳ್ತಂಗಡಿಯ ಹತ್ತಿರ ಮೇಸ್ರ್ತಿಯೆಂದೂ, ಇಲ್ಲಿ ಮನೆಕಟ್ಟಿ ತುಂಬಾ ಸಮಯ ಆಯ್ತೆಂದೂ ಹೇಳಿದ. “ಈ ಕಾಡಲ್ಲಿ ಏನು ಭಯವಿಲ್ಲ. ನಾನು ರಾತ್ರಿ ೧-೨ ಗಂಟೆಗೆಲ್ಲಾ ಈ ಕಾಡಿನ ಏರಲ್ಲಿ ಬೈಕೇರಿಸಿ ಬರುತ್ತೇನೆ. ಕಾಡು ಪ್ರಾಣಿಗಳ ಕಾಟ ಅಷ್ಟಿಲ್ಲ” ಎಂದ. ಅವನ ಆ ಮಲೆಯಾಳಿ ಮಿಶ್ರಿತ ಕನ್ನಡ, ತುಳು, ಅಲ್ಲಲ್ಲಿ ವಿಚಿತ್ರವಾಗಿ ಸಾಮಾನುಗಳನ್ನು ಜೋಡಿಸಿಟ್ಟ ಅವನ ಮನೆ, ಮನೆ ತುಂಬಾ ಸದ್ದು ಮಾಡುತ್ತಿದ್ದ ಇಲಿಗಳು, ಆ ರಾತ್ರಿಯಲ್ಲಿ ಮಿಯಾವ್ ಅಂತ ಕೂಗುತ್ತಾ ಮನೆ ಮಾಡಿನಲ್ಲಿ ಕರಗಿಹೋದ ಬೆಕ್ಕಿನ ಸ್ವರ, ಒಂದಾದ ಮೇಲೊಂದರಂತೆ ಬರುತ್ತಿದ್ದ ಟೇಪ್ ರೆಕಾರ್ಡರ್ ಗೀತೆಗಳು, ಇವೆಲ್ಲ ನೋಡುತ್ತ ನಾನ್ಯಾವುದೋ ಲೋಕದಲ್ಲಿ ತೂಗುತ್ತಿರುವಂತೆ ಅನ್ನಿಸಿತು. “ಇಂದೊಂಥರಾ ಮಜವಾಗಿದೆ ಮನೆ” ಅಂದ ಗೆಳೆಯ ಕೀರ್ತಿ. ಅಷ್ಟೊತ್ತಿಗೆ “ನಿಮಗೆ ಟೀ ಮಾಡಲಾ” ಅಂದ ಆ ವ್ಯಕ್ತಿ, ನಾವು, ಬೇಡವೆಂದರೂ ಕೇಳದೇ, ಅಲ್ಲೇ ಇದ್ದ ಪುಟ್ಟ ಅಡಿಗೆ ಮನೆಗೆ ಹೋಗಿ ಪಾತ್ರೆ ದಡಬಡಮಾಡಲು ಶುರುಮಾಡಿದ.

ಬಲ್ಬ್ ನ ಮಬ್ಬ ಬೆಳಕಲ್ಲಿ ನಾವೀಗ ಅಲ್ಲೇ ಮರೆಯಲ್ಲಿದ್ದ ಮೇಜಿನ ಕೆಳಗೆ ನೋಡಿದಾಗ ನಮ್ಮ ಎದೆ ಧಸಕ್ಕೆಂದಿತು. ಅಲ್ಲಿ ಸಾಲಾಗಿ ತೂಗುಹಾಕಿದ ವಿಧವಿಧ ಕತ್ತಿ, ಮಚ್ಚು, ಚೂರಿಗಳನ್ನು ಭಯಾನಕವಾಗಿ ಜೋಡಿಸಿಡಲಾಗಿತ್ತು. ಮೊದಲೇ ಈ ವ್ಯಕ್ತಿಯ ಮನೆಯ ವಿಚಿತ್ರ ವಾತಾವರಣವನ್ನು ನೋಡಿ ಸಹಜವಾಗಿ ಭಯಗೊಂಡು, ಈಗತಾನೇ ಚೇತರಿಸಿಕೊಂಡಿದ್ದ ನಮಗೆ, ಈಗ ಈ ಮಚ್ಚು, ಚೂರಿ, ಅದೂ ಇಷ್ಟೊಂದು ಪ್ರಮಾಣದಲ್ಲಿ ನೋಡಿದ ಮೇಲೆ ಭಯವಾಗದೇ ಇರುತ್ತದಾ? ಹೇಳಿ. ಈ ವ್ಯಕ್ತಿ ಡಕಾಯಿತನಿರಬಹುದೇ? ಕಾಡುಗಳ್ಳನಿರಬಹುದೇ? ಇವನಿಗ್ಯಾಕೆ ಇಷ್ಟೊಂದು ಮಾರಕಾಸ್ತ್ರಗಳು ಅಂತೆಲ್ಲಾ ಯೋಚಿಸಿದೆವು. ಕೊನೆಗೆ ಅನುಮಾನದಿಂದಿದ್ದ ನಮಗೆ ಆತ ಹಾಲು ಸೇರಿಸದ ಕಪ್ಪು ಟೀ ಮಾಡಿಕೊಟ್ಟ, ನಾವು ಕುಡಿದೇ ಕುಡಿದೆವು. ಕೊನೆಗೆ ನಾನು ಕೇಳಿಬಿಟ್ಟೆ, “ಇಷ್ಟೊಂದೆಲ್ಲಾ ಕತ್ತಿ ಇವೆ ಇಲ್ಲಿ, ಅದೆಂಥಕ್ಕೆ”? ಅಂದೆ. ಹೋ ಅದಾ?ಅವೆಲ್ಲಾ ನನ್ನ ರಕ್ಷಣೆಗೆ, ಕಾಡಲ್ಲಿ ಇವೆಲ್ಲಾ ಬೇಕು ನಮಗೆ” ಎಂದು ಮಲೆಯಾಳಿ ಶೈಲಿಯಲ್ಲಿ ನಗುತ್ತಲೇ ಹೇಳಿದ.

ಮತ್ತೆ ಆತ ಕಾಡು ,ಪೇಟೆ, ರಾಜಕೀಯ, ಕಾಡುಪ್ರಾಣಿ ಅದು ಇದು ಮಾತಾಡಿದ, ಕೊನೆಗೆ ನಮಗೆ ಮಾತಾಡಬೇಕು ಅನ್ನಿಸಲಿಲ್ಲ. ಕಾಡಿನ ಮಾತು ಕೇಳೋಣ ಅನ್ನಿಸಿ, ಅವನನ್ನು ಬೀಳ್ಕೊಟ್ಟು ನಮ್ಮ ಕೋಣೆಯ ದಾರಿ ಹಿಡಿದೆವು. ದೂರದಿಂದ ಚಾರ್ಮಾಡಿ ಘಾಟಿ ಕಾಣುತ್ತಿತ್ತು. ಮೇಲೆ ರಾಶಿ ಸುರಿವ ನಕ್ಷತ್ರ, ಕೆಳಗಡೆ ಗಾಢ ಕಾಡು, ಅಲ್ಲೆಲ್ಲೋ ಸದ್ದು, ಇನ್ನೆಲ್ಲೋ ಗಾಳಿಮಾತು, ಯಾರೋ ಬಂದಂತೆ, ಹೋದಂತೆ, ಮಾತಾಡಿದಂತೆ, ಹಕ್ಕಿ ಕೂಗಿದಂತೆ, ಕೊನೆಗೆಲ್ಲವೂ ಮೌನ.. ಬರೀ ಮೌನ.

ಚಾರ್ಮಾಡಿ ಕಾಡಲ್ಲಿ ಈಗೀಗ ಅಕ್ರಮ ಚಟುವಟಿಕೆಗಳು ಜಾಸ್ತಿಯಾಗಿವೆ. ಕಾಡು ಕಡಿದು ಎಸ್ಟೇಟ್ ಮಾಡುವವರು, ಅಕ್ರಮವಾಗಿ ಯಾರಿಗೂ ತಿಳಯದೇ ಏನೇನೋ ಮಾಡಿಕೊಂಡಿರುವ ಕೇರಳದ ಕಳ್ಳರು, ಇವರಿಗೆ ಬೆಂಬಲ ಕೊಡುವ ಆ ಊರಿನ ಶ್ರೀಮಂತರು, ರಾಜಕಾರಣಿಗಳು, ಸ್ಥಳೀಯರಿಗೆ ಹಣದ ಆಸೆ ತೋರಿಸಿ ಕೆಲಸ ಮಾಡಿಕೊಳ್ಳುವ ದುರುಳರು ಇವರೆಲ್ಲಾ ನೆನಪಾಗಿ ವ್ಯವಸ್ಥೆಯ ಬಗ್ಗೆಯೇ ಬೇಸರವಾಯ್ತು.

ಕೊನೆಗೆ ಕಾಡಿನ ನೂರಾರು ಸದ್ದುಗಳ ನಡುವೆ, ಬೆಚ್ಚಗೇ ಹೊದ್ದುಕೊಂಡು ಅಂಗನವಾಡಿ ಕೇಂದ್ರದಲ್ಲಿ ಮಲಗಿದೆವು. ರಾತ್ರಿ ಚಳಿಗೆ, ಕಾಡಿನ ವಿಚಿತ್ರ ಹೂಂಕಾರಕ್ಕೆ, ಯಾರೋ ಬಂದಂತಾಗುವ ಸದ್ದಿಗೆ, ಆಗಾಗ ಎಚ್ಚರ, ಮತ್ತೆ ನಿದ್ದೆ, ಮತ್ತೆ ಎಚ್ಚರ, ಕೊನೆಗೊಮ್ಮೆ ಗಾಢ ನಿದ್ದೆ ಕರೆದುಬಿಟ್ಟಿತು.

ಬೆಳ್ಳನೆ ಬೆಳಗಾಗಿ ಹಂಚಿನ ತುಂಬಾ ಮಂಜಿನ ಹನಿ ಬೀಳುತ್ತಿದ್ದಾಗ ನಮಗೆ ಎಚ್ಚರಾಯ್ತು. ಬೆಳಗ್ಗಿನ ವಿಧಿ ಎಲ್ಲಾ ಮುಗಿಸಿ ಮನೋಜನ ಮನೆಗೆ ಹೋದಾಗ ಟೀ, ತಿಂಡಿಯ ಆತಿಥ್ಯ ರೆಡಿಯಾಗಿತ್ತು. ಗಟ್ಟಿ ತಿಂದೆವು. ಊರಿಗೆ ಬೇಗನೇ ಮರಳಬೇಕಾಗಿದ್ದರಿಂದ ಖುಷಿಯಿಂದ ಮನೆಯವರನ್ನು ಬೀಳ್ಕೊಟ್ಟೆವು. ಮತ್ತೆ ಜೀಪೇರಿ, ಕೇರೆ ಹಾವಿನಂತಿರುವ ದಾರಿ ದಾಟಿ, ಚಾರ್ಮಾಡಿಯ ರಸ್ತೆಗೆ ಬಂದಾಗ ಜೇನುಕಲ್ಲಿನ ನೆತ್ತಿ, ಆಕಾಶದ ಹಿನ್ನೆಲೆಯಲ್ಲಿ ಪೂರ್ತಿ ನೀಲಿಯಾಗಿತ್ತು.