ದೇವಾಲಯವಿರುವ ಮುಖ್ಯಬೀದಿಯಲ್ಲಿ ಎತ್ತರವಾದ ಧ್ವಜಸ್ತಂಭವೊಂದು ಮೊದಲಿಗೇ ನಿಮ್ಮ ಕಣ್ಸೆಳೆಯುತ್ತದೆ. ಸ್ತಂಭದ ನಾಲ್ಕು ಬದಿಗಳಲ್ಲಿ ಆಯುಧಧಾರಿ ಭೈರವ, ಮೋದಕವನ್ನು ಮೆಲ್ಲುತ್ತಿರುವ ಗಣಪತಿ, ಶಿವದೇಗುಲದತ್ತ ಮೊಗಮಾಡಿ ಹೊರಟ ನಂದಿ ಹಾಗೂ ಕಡುಗತ್ತಿ ಹಿಡಿದ ವೀರಭದ್ರರ ಆಕರ್ಷಕ ಕೆತ್ತನೆಗಳಿವೆ. ಬಗೆಬಗೆಯ ಬಣ್ಣಗಳ ದೆಸೆಯಿಂದ ಐದು ಸ್ತರಗಳ ರಾಯಗೋಪುರವು ಆಧುನಿಕ ಸ್ಪರ್ಶತಾಳಿಕೊಂಡಿದೆ. ಗೋಪುರದ ಮೇಲಿನ ಗಾರೆಶಿಲ್ಪಗಳು ಸುಸ್ಥಿತಿಯಲ್ಲಿವೆ. ಕೆಳಗಿನ ಶಿಲಾಮಂಟಪದ ಮುಖ್ಯದ್ವಾರದ ಇಕ್ಕೆಲಗಳಲ್ಲಿ ಮಂಟಪದೆತ್ತರಕ್ಕೆ ಬೆಳೆದ ಹೂಬಳ್ಳಿಗಳನ್ನು ಆಧರಿಸಿ ನಿಂತ ಶಿಲಾಸುಂದರಿಯರು ನಿಮ್ಮನ್ನು ಸ್ವಾಗತಿಸುತ್ತಾರೆ. ಅಲ್ಲೇ ಮುಂದೆ ಮಂಟಪದ ಕೆಳಗಿಂದ ಮೇಲಕ್ಕೆ ಹರಡಿಕೊಂಡ ಇನ್ನೊಂದು ಪಟ್ಟಿಕೆಯ ಮೇಲೆ ಯಕ್ಷ, ವಿದೂಷಕ, ಋಷಿ, ಗಣಪತಿ ಮತ್ತಿತರ ಉಬ್ಬುಶಿಲ್ಪಗಳು ಆಸಕ್ತಿಮೂಡಿಸುವಂತಿವೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಐವತೈದನೆಯ ಕಂತು

 

ಬೆಂಗಳೂರಿಗೆ ಅತ್ಯಾಧುನಿಕ ಸಾರಿಗೆಸೌಲಭ್ಯವೊದಗಿಸುತ್ತಿರುವ ಮೆಟ್ರೋ ರೈಲು ನಾಯಂಡಹಳ್ಳಿಯಿಂದ ಬೈಯಪ್ಪನಹಳ್ಳಿಯವರೆಗೆ ಸಂಚರಿಸುತ್ತಿದೆಯಲ್ಲ, ಆ ರೈಲಿನಲ್ಲಿ ಎಂ.ಜಿ. ರಸ್ತೆಯನ್ನು ದಾಟಿ ಹಲಸೂರು ಸ್ಟೇಷನ್ನಿನಲ್ಲಿ ಇಳಿಯಿರಿ. ಅಲ್ಲೇ ತುಸು ಮುಂದೆ ಎಡಕ್ಕೆ ತಿರುಗಿ ಅಂಗಡಿಗಳ ಸಾಲಿನ ಇಕ್ಕಟ್ಟು ರಸ್ತೆಯಲ್ಲಿ ನಡೆದು ಮೆಟ್ರೋ ಹಾದಿಗೆ ಸಮಾಂತರ ರಸ್ತೆಯತ್ತ ತಿರುಗಿದರೆ ಬೆಂಗಳೂರಿನ ಅತಿ ಹಳೆಯ ದೇವಾಲಯವೊಂದನ್ನು ತಲುಪುತ್ತೀರಿ. ಇದೇ ಹಲಸೂರಿನ ಸೋಮೇಶ್ವರ ದೇವಾಲಯ.

ಚೋಳ ಅರಸರ ನಿರ್ಮಿತಿಗಳಲ್ಲೊಂದೆಂದು ಹೇಳಲಾಗಿರುವ ಈ ದೇವಾಲಯವು ವಿಜಯನಗರ ಶೈಲಿಯನ್ನು ಪ್ರಧಾನವಾಗಿ ತೋರ್ಪಡಿಸುತ್ತಿದ್ದು, ಬಹುಶಃ ಪುರಾತನ ದೇವಾಲಯವೊಂದು ವಿಜಯನಗರದ ಅರಸರ ಕಾಲದಲ್ಲಿ ಜೀರ್ಣೋದ್ಧಾರಗೊಂಡಿರಬಹುದೆಂದು ಊಹಿಸಲು ಅವಕಾಶವಿದೆ. ಯಲಹಂಕ ನಾಡಪ್ರಭುಗಳು ಈ ದೇವಾಲಯದ ಪುನರ್ನಿಮಾಣದಲ್ಲಿ ತೊಡಗಿಕೊಂಡ ಬಗೆಗೆ ಐತಿಹ್ಯಗಳೂ ಪ್ರಚಲಿತವಾಗಿವೆ.

ಹದಿನೈದನೆಯ ಶತಮಾನದಲ್ಲಿ ಯಲಹಂಕನಾಡನ್ನು ಆಳುತ್ತಿದ್ದ ಜಯಪ್ಪಗೌಡನೆಂಬ ಅರಸನು ಈ ದೇಗುಲದ ಪುನರ್ನಿರ್ಮಾಣಕ್ಕೆ ಕಾರಣಕರ್ತನೆಂದು ಹೇಳಲಾಗಿದೆ. ಮುಂದೆ ಹಿರಿಯ ಕೆಂಪೇಗೌಡ ಪ್ರಭುಗಳ ಕಾಲದಲ್ಲಿ ಈ ದೇವಾಲಯಸಂಕೀರ್ಣವು ಅಭಿವೃದ್ಧಿಗೊಂಡಿತು. ಪೌರಾಣಿಕವಾಗಿ ಮಾಂಡವ್ಯಋಷಿ ನೆಲೆಸಿದ ಕ್ಷೇತ್ರವೆಂಬ ಸ್ಥಳಪುರಾಣವೂ ಇದೆ.

ರಾಜಗೋಪುರ, ಧ್ವಜಸ್ತಂಭ, ವಿಶಾಲವಾದ ಒಳಾವರಣ, ಮುಖಮಂಟಪ, ಒಳಮಂಟಪ, ಗರ್ಭಗೃಹ, ಪ್ರದಕ್ಷಿಣಾಪಥಗಳೆಲ್ಲವನ್ನೂ ಒಳಗೊಂಡಿರುವ ಈ ದೇವಾಲಯ ಸಂಕೀರ್ಣವು ಮೊದಲು ಹೇಳಿದಂತೆ ವಿಜಯನಗರದ ವಾಸ್ತುಶೈಲಿಯನ್ನು ಪ್ರಧಾನವಾಗಿ ಬಿಂಬಿಸುತ್ತದೆ. ವ್ಯಾಳ ಅಥವಾ ಯಾಳಿಯೆಂಬ ಕಾಲ್ಪನಿಕ ಪ್ರಾಣಿಯ ಶಿಲ್ಪವಿರುವ ಕಂಬಗಳೂ ವಿವಿಧ ಉಬ್ಬುಶಿಲ್ಪಗಳನ್ನು ಚಿತ್ರಿಸಿರುವ ಕಂಬಗಳೂ ಇಲ್ಲಿನ ಮಂಟಪಗಳಲ್ಲಿ ಕಂಡುಬರುತ್ತವೆ. ದೇಗುಲದ ಹೊರಾವರಣದಲ್ಲಿ ಪುರಾತನ ಕೊಳವೊಂದಿದೆ.

ದೇವಾಲಯವಿರುವ ಮುಖ್ಯಬೀದಿಯಲ್ಲಿ ಎತ್ತರವಾದ ಧ್ವಜಸ್ತಂಭವೊಂದು ಮೊದಲಿಗೇ ನಿಮ್ಮ ಕಣ್ಸೆಳೆಯುತ್ತದೆ. ಸ್ತಂಭದ ನಾಲ್ಕು ಬದಿಗಳಲ್ಲಿ ಆಯುಧಧಾರಿ ಭೈರವ, ಮೋದಕವನ್ನು ಮೆಲ್ಲುತ್ತಿರುವ ಗಣಪತಿ, ಶಿವದೇಗುಲದತ್ತ ಮೊಗಮಾಡಿ ಹೊರಟ ನಂದಿ ಹಾಗೂ ಕಡುಗತ್ತಿ ಹಿಡಿದ ವೀರಭದ್ರರ ಆಕರ್ಷಕ ಕೆತ್ತನೆಗಳಿವೆ. ಬಗೆಬಗೆಯ ಬಣ್ಣಗಳ ದೆಸೆಯಿಂದ ಐದು ಸ್ತರಗಳ ರಾಯಗೋಪುರವು ಆಧುನಿಕ ಸ್ಪರ್ಶತಾಳಿಕೊಂಡಿದೆ. ಗೋಪುರದ ಮೇಲಿನ ಗಾರೆಶಿಲ್ಪಗಳು ಸುಸ್ಥಿತಿಯಲ್ಲಿವೆ.

ಕೆಳಗಿನ ಶಿಲಾಮಂಟಪದ ಮುಖ್ಯದ್ವಾರದ ಇಕ್ಕೆಲಗಳಲ್ಲಿ ಮಂಟಪದೆತ್ತರಕ್ಕೆ ಬೆಳೆದ ಹೂಬಳ್ಳಿಗಳನ್ನು ಆಧರಿಸಿ ನಿಂತ ಶಿಲಾಸುಂದರಿಯರು ನಿಮ್ಮನ್ನು ಸ್ವಾಗತಿಸುತ್ತಾರೆ. ಅಲ್ಲೇ ಮುಂದೆ ಮಂಟಪದ ಕೆಳಗಿಂದ ಮೇಲಕ್ಕೆ ಹರಡಿಕೊಂಡ ಇನ್ನೊಂದು ಪಟ್ಟಿಕೆಯ ಮೇಲೆ ಯಕ್ಷ, ವಿದೂಷಕ, ಋಷಿ, ಗಣಪತಿ ಮತ್ತಿತರ ಉಬ್ಬುಶಿಲ್ಪಗಳು ಆಸಕ್ತಿಮೂಡಿಸುವಂತಿವೆ. ಮಂಟಪದ ಸುತ್ತುಗೋಡೆಯ ಮೇಲೆ ಕಿರುಗೋಪುರದ ಆಕೃತಿಗಳೂ ಆನೆ, ಕಪಿ, ಋಷಿ, ಗಣಪತಿ, ವೇಣುಗೋಪಾಲ ಮತ್ತಿತರ ಉಬ್ಬುಶಿಲ್ಪಗಳೂ ಕಣ್ಸೆಳೆಯುತ್ತವೆ.

ದೇವಾಲಯದ ಮುಖಮಂಟಪವಂತೂ ವಿಜಯನಗರ ದೇವಾಲಯಮಂಟಪಗಳ ಪ್ರತಿರೂಪದಂತಿದೆ. ಮಂಟಪದ ಹೊರ ಅಂಚಿನಲ್ಲಿ ವ್ಯಾಳವಿರುವ ಕಂಬಗಳು ಆಕರ್ಷಕವಾಗಿವೆ. ಮಂಟಪದ ಎಲ್ಲ ಕಂಬಗಳ ಮೇಲೆ ಉಬ್ಬುಶಿಲ್ಪಗಳಿದ್ದು ಇವುಗಳಲ್ಲಿ ಬೆಣ್ಣೆಕೃಷ್ಣ, ಗಣೇಶ, ವಿಷ್ಣು, ರಾಮ, ಶಿವಲಿಂಗಾರ್ಚನೆಯಲ್ಲಿ ತೊಡಗಿರುವ ಹನುಮಂತ, ಶಿವ-ಪಾರ್ವತಿಯರೇ ಮೊದಲಾದ ದೇವತೆಗಳೂ ಆನೆ, ಸಿಂಹ, ಕಪಿ ಮತ್ತಿತರ ಪ್ರಾಣಿಸಂಕುಲವೂ ಧ್ಯಾನಸ್ಥ ಋಷಿ, ಯೋಗಿಗಳು, ಯಕ್ಷರು, (ಮನುಷ್ಯಮುಖವಿದ್ದು ಗಂಟೆಬಾರಿಸುತ್ತ ದೇವಸೇವಾತತ್ಪರವಾದ ನಾಲ್ಕುಕಾಲಿನ ಕಾಲ್ಪನಿಕ ಪ್ರಾಣಿ )ಪುರುಷಾಮೃಗ, ಬೇಡರ ಕಣ್ಣಪ್ಪ, ಋಷಿಮುನಿಗಳೇ ಮೊದಲಾದ ಶಿವಭಕ್ತರೂ ಪಡಿಮೂಡಿದ್ದಾರೆ. ನರಸಿಂಹ ವಿವಿಧರೂಪಗಳಲ್ಲಿ ಕಾಣಿಸಿಕೊಂಡಿರುವುದೊಂದು ವಿಶೇಷ. ಕುರುಬರು, ಚಾಮರಧಾರಿ ಪುರುಷರು, ನರ್ತಕರು,ವಾದ್ಯಗಾರರು, ಬೇಟೆಗಾರರು, ಬೇಡಿತಿಯರು, ಹಾವಾಡಿಗರೇ ಮೊದಲಾದ ಜನಸಾಮಾನ್ಯರೂ ಇಲ್ಲಿ ಸ್ಥಾನಪಡೆದಿದ್ದಾರೆ.

ಹೊರಮಂಟಪದ ಕಂಬಗಳೂ ಉಬ್ಬುಶಿಲ್ಪಗಳೂ ಮೂಲರೂಪದಲ್ಲಿ ಉಳಿದುಕೊಂಡಿದ್ದರೆ, ಒಳಮಂಟಪದ ಕಂಬಗಳಿಗೆ ಬಣ್ಣಬಳಿದು ರೂಪಕೆಡಿಸಲಾಗಿದೆ. ಇಲ್ಲಿನ ಉಬ್ಬುಶಿಲ್ಪಗಳಲ್ಲಿ ಮಹಿಷಮರ್ದಿನಿ, ಕೈಲಾಸವನ್ನೆತ್ತಿದ ರಾವಣ, ಕಿರಾತಾರ್ಜುನರೇ ಮೊದಲಾದವರು ಚಿತ್ರಿತರಾಗಿದ್ದಾರೆ. ಗರ್ಭಗುಡಿಯ ಸುತ್ತಲಿನ ಪಥದಲ್ಲಿ ಅರವತ್ನಾಲ್ಕು ಪುರಾತನ ಭಕ್ತಶಿರೋಮಣಿಗಳ ವಿಗ್ರಹಗಳು ಸಾಲಾಗಿ ಕಂಡುಬರುತ್ತವೆ. ಈ ಕ್ಷೇತ್ರದ ಹಿರಿಮೆಗೆ ಕಾರಣನೆನ್ನಲಾದ ಮಾಂಡವ್ಯಋಷಿಯ ವಿಗ್ರಹವೂ ಇದೆ.

(ಫೋಟೋಗಳು: ಲೇಖಕರವು)

ದೇವಾಲಯದ ಹೊರಗೋಡೆಯ ಮೇಲಿನ ಭಿತ್ತಿಶಿಲ್ಪಗಳೂ ಉಲ್ಲೇಖನಾರ್ಹವಾಗಿವೆ. ನಂದಿಗ್ರಾಮದ ಭೋಗನಂದೀಶ್ವರ ದೇಗುಲದಲ್ಲಿ ಚಿತ್ರಿಸಿರುವಂತೆ ಇಲ್ಲಿನ ಹೊರಗೋಡೆಯ ಮೇಲೂ ಗಿರಿಜಾಕಲ್ಯಾಣದ ದೃಶ್ಯಗಳನ್ನು ಸರಣಿ ಉಬ್ಬುಶಿಲ್ಪಗಳ ರೂಪದಲ್ಲಿ ಚಿತ್ರಿಸಿರುವುದನ್ನು ಕಾಣಬಹುದು. ತ್ರಿಮೂರ್ತಿಗಳು ವಾಹನಾರೂಢರಾಗಿ ಹೊರಡುವುದು, ಅವರಿಗೆ ಸ್ವಾಗತ ಕೋರುವ ಸಪ್ತರ್ಷಿಗಳು, ಬ್ರಹ್ಮನ ನೇತೃತ್ವದಲ್ಲಿ ಗಿರಿಜಾಕಲ್ಯಾಣ, ಶಿವಪಾರ್ವತಿಯರ ಪಯಣ-ಎಲ್ಲವೂ ಸೊಗಸಾಗಿ ಮೂಡಿವೆ.

ಹಲಸೂರಿನ ಸೋಮೇಶ್ವರ ಗುಡಿಯಲ್ಲಿ ದಿನನಿತ್ಯ ಪೂಜಾದಿಗಳು ನಡೆಯುವುದರೊಂದಿಗೆ ಚೈತ್ರಮಾಸದಲ್ಲಿ ವಾರ್ಷಿಕ ಬ್ರಹ್ಮೋತ್ಸವವೂ ವಿಜೃಂಭಣೆಯಿಂದ ಜರುಗುತ್ತದೆ. ಬೆಂಗಳೂರಿನ ಜನನಿಬಿಡ ಬಡಾವಣೆಯ ನಡುವೆ ಹುದುಗಿಕೊಂಡಂತಿದ್ದರೂ ಐದುನೂರು ವರುಷಗಳಿಗೂ ಹಿಂದಿನ ಶಿಲ್ಪಕಲಾವೈಭವವನ್ನು ಮೆರೆಸುತ್ತಿರುವ ಈ ತಾಣವನ್ನು ಸಂದರ್ಶಿಸಲು ಮರೆಯದಿರಿ.