ಹೇಳಿಕೇಳಿ, ಆಸ್ಟ್ರೇಲಿಯಾದ ಪರಿಸರ ಬಹು ಸೂಕ್ಷ್ಮವಾದದ್ದು, ಬೇರೆ ಖಂಡಗಳಿಗಿಂತ ಭಿನ್ನವಾದದ್ದು. ಪರದೇಶದಿಂದ ಆಮದಾಗಿ ಬಂದ ಕಪ್ಪೆ ಈ ದೇಶದ ಸ್ವಾಭಾವಿಕ ಪರಿಸರಕ್ಕೆ ಮತ್ತು ಜೀವಚರಗಳಿಗೆ ದುಃಸ್ವಪ್ನವಾಗಿಬಿಟ್ಟಿತು. ಈ ಕಪ್ಪೆಯ ವಂಶಾಭಿವೃದ್ದಿಯನ್ನ ತಡೆಗಟ್ಟಲು, ಅದನ್ನು ಧೈರ್ಯದಿಂದ ಎದುರಿಸಿ ನುಂಗಿ ನೀರುಕುಡಿಯಲು ಇಲ್ಲಿ ಯಾವುದೇ ಪರಭಕ್ಷಕ ಪ್ರಾಣಿ ಇರಲಿಲ್ಲ. ಕಪ್ಪೆಗೆ ಆಸ್ಟ್ರೇಲಿಯಾದಲ್ಲಿ ಯಾವ ಎದುರಾಳಿಯೂ ಇಲ್ಲವಾಗಿ, ಇಲ್ಲಿನ ಸ್ವಾತಂತ್ರ್ಯ ಅದಕ್ಕೆ ತುಂಬಾ ಇಷ್ಟವಾಗಿಹೋಯ್ತು. ದುರಾದೃಷ್ಟವಶಾತ್, ಅದರ ಕಾಟ ತಡೆಯಲಾರದೆ ಹಲವಾರು ಕೀಟಗಳ ವಂಶವೇ ನಶಿಸಿಹೋಯಿತು. ಹಾವುಗಳ, ಕೆಲ ಪಕ್ಷಿಗಳ ಸಂತತಿ ಕ್ಷೀಣಿಸಿತು. ಮನುಷ್ಯರು ಹೆದರಿದರು.
ಡಾ.ವಿನತೆ ಶರ್ಮಾ ಬರೆವ ಆಸ್ಟ್ರೇಲಿಯಾ ಅಂಕಣ

 

ಹೋದವಾರಪೂರ್ತಿ ಗುಡುಗು, ಸಿಡಿಲು ಸಮೇತ ಮಳೆ ಬರುತ್ತದೆ ಅನ್ನೋ ವಾರ್ತೆಯನ್ನ ಕೇಳಿಕೇಳಿ ದಿನದಿನವೂ ಕಾದು ಆಕಾಶವನ್ನ ದಿಟ್ಟಿಸಿದ್ದೇ ದಿಟ್ಟಿಸಿದ್ದು. ಬಡಪಾಯಿ ದಿಟ್ಟಿಗೆ ದಿವ್ಯ ಆಕಾಶವೇನೂ ಬೆದರಲಿಲ್ಲ, ಮಳೆ ಕರುಣಿಸಲಿಲ್ಲ. ದಿನ ಬಿಟ್ಟು ದಿನ ಒಂದಷ್ಟು ಆಕಳಿಸುತ್ತಾ ಮೈಕೆರೆದುಕೊಳ್ಳುತ್ತಾ ಸ್ವಲ್ಪ ನೀಲಿಮೋಡ, ಕಪ್ಪುಮೋಡದ ಪರದೆಗಳನ್ನ ಸರಿಸುತ್ತಾ ಮಗ್ಗುಲು ಬದಲಾಯಿಸಿತು. ತಮಾಷೆ ನೋಡೋಣ ಅನ್ನೋಥರ ತಾನು ಕ್ಯಾಕರಿಸಿ ಉಗಿದಂತ ಎಂಜಲು ಮಳೆಹನಿಗಳನ್ನು ಉದುರಿಸಿ ತೆಪ್ಪಗಾಯಿತು. ಇನ್ನು ಉಳಿದಿದ್ದು ಬಿಸಿಲಿನ ಝಳವಷ್ಟೇ ಎಂದರಿವಾಗಿ ಆಕಾಶದಲ್ಲಿ ನೆಟ್ಟಿದ್ದ ಕಣ್ಣು ವಾಪಸ್ ನೆಲಕ್ಕಂಟಿಕೊಂಡಿತು.

ಏನೇ ಬರಲಿ ಹೋಗಲಿ ಜೀವನಚಕ್ರ ಉರುಳುವುದು ಗ್ಯಾರಂಟಿ ಅಂತ ಎಲ್ಲಾ ತತ್ವಗಳೂ ಹೇಳಿದ್ದಾಗಿದೆ. ಅದು ನಿಜವೇನೋ ಎಂಬಂತೆ ಈಗಾಗಲೇ ಒಂದಷ್ಟು ಒಣಗಿರುವ ವಸಂತಋತುವಿನ ಈ ಕಾಲದಲ್ಲಿ ಜನ ಉತ್ಸಾಹದಿಂದ ತರಕಾರಿ, ಸೊಪ್ಪು, ಹರ್ಬ್ಸ್, ಹಣ್ಣು, ಅಲಂಕಾರಿಕ ಗಿಡಗಳನ್ನು ನೆಡುತ್ತಿದ್ದಾರೆ. ಕಾಂಪೋಸ್ಟ್ ಮಾಡುವುದು, ವಿವಿಧ ರೀತಿಗಳ mulch ಹರಡುವುದು, ಬೆಳೆಯುವುದು, ಬೆಳೆದದ್ದನ್ನು ಹಂಚುವುದು, ಅದರ ಕುರಿತು ಮಾತನಾಡುವುದು ಮಾಡುತ್ತಿದ್ದಾರೆ. ಇವೆಲ್ಲಾ ಜನರಿಗೆ ಖುಷಿ ಕೊಡುವುದನ್ನ ನೋಡಿದರೆ ಅವರ ಉತ್ಸಾಹದ ಅಮಲು ನಮ್ಮ ಮೈಗೂ, ತಲೆಗೂ ಏರಿಬಿಡುತ್ತದೆ. ಲೆಕ್ಕಾಚಾರದಂತೆ ನವೆಂಬರ್, ಡಿಸೆಂಬರ್ ತಿಂಗಳಿನಲ್ಲೇನಾದರೂ ಮಳೆ ಬಂದರೆ ಎಲ್ಲವೂ ಸರಿಹೋಗುತ್ತದೆ ಎನ್ನುವ ಆಶಾಭಾವವೇ ಮನೆಮನೆಯ ಅಂಗಳಗಳಲ್ಲಿ ಅರಳುತ್ತಿರುವ ಕೈತೋಟಗಳನ್ನ ಮುನ್ನಡೆಸುತ್ತಿದೆ.

(ಕೇನ್ ಟೋಡ್ (cane toad)

ಕೈತೋಟದ ನಶೆ ಏರಿಸಿಕೊಂಡಿರುವ ನಾವೂ ಕೂಡಾ ಪ್ರತಿ ವಾರಾಂತ್ಯದಲ್ಲಿ ಅಲ್ಲಿಇಲ್ಲಿ ನೆಲಕೆರೆಯುತ್ತಾ ಇದೀವಿ. ಎರಡು ಬಾರಿ ನೆಟ್ಟರೂ ಸತ್ತುಹೋದ ಬಾಳೆಕಂದನ್ನು ನೆನೆಸಿಕೊಂಡು ಕೋಪಿಸಿಕೊಂಡು ತಪಿಸುತ್ತಾ ಛಲಬಿಡದೆ ಮೂರನೇ ಬಾರಿ ಬೇರೆ ಕಡೆಯಿಂದ ತಂದು ನೆಟ್ಟಿದ್ದೀವಿ. ಅದೋ, ಜಪ್ಪಯ್ಯ ಅಂದರೂ ತಾನು ಬದುಕುತ್ತೀನೋ ಇಲ್ಲಾ ಸಾಯುತ್ತೀನೋ ಎಂಬ ಗುಟ್ಟನ್ನು ಬಿಟ್ಟುಕೊಡದೆ ಇನ್ನೂ ಧ್ಯಾನಸ್ಥ ಸ್ಥಿತಿಯಲ್ಲೇ ನಿಂತಿದೆ. ಮರವಾಗಲು ಧಾವಿಸುತ್ತಾ ತನ್ನದೇ ಸ್ಟೈಲಿನಲ್ಲಿ ಚೆನ್ನಾಗಿ ಬೆಳೆಯುತ್ತಿದ್ದ ಮಾವಿನ ಗಿಡವನ್ನು ನಮ್ಮ ಕಮಂಗಿತನದಿಂದ ಯಾಕೋ ಆ ಜಾಗ ಸರಿಯಿಲ್ಲ ಎಂದು ಅದನ್ನು ಕೇಳದೆ ಆ ಜಾಗದಿಂದ ಇನ್ನೊಂದು ಕಡೆಗೆ ಸ್ಥಳಾಂತರ ಮಾಡಿಬಿಟ್ಟೆವು. ಹಾಗೆ ಮಾಡಿದ್ದು ಅದಕ್ಕೆ ಇಷ್ಟವಾಗದೆ ಥೂ ನಿಮ್ಮಂಥ ಅವಿವೇಕಿಗಳ ಮನೆಯಂಗಳದಲ್ಲಿ ನಾನಿರಲಾರೆ ಎಂದು ಪ್ರಾಣತ್ಯಾಗ ಮಾಡಿದ್ದನ್ನು ನೋಡನೋಡುತ್ತಾ ನಾವುಗಳು ವಿಲಿವಿಲಿ ಒದ್ದಾಡಿದೆವು. ಆ ಮಾವಿನಮರಕ್ಕೆ ನಮ್ಮ ದುಃಖ, ಸಂಕಟ ತಲುಪಿತೋ ಇಲ್ಲವೋ ನಾವಂತೂ ಇನ್ನೂ ಅದನ್ನು ನೆನೆಸಿಕೊಂಡು ಕೊರಗುತ್ತಾ ಇದೀವಿ. ಪಾಪಪರಿಹಾರ ಪ್ರಾಯಶ್ಚಿತ್ತವೆಂಬಂತೆ ಅಪಾರ ದುಡ್ಡುಕೊಟ್ಟು ಸರ್ಟಿಫೈಡ್ organic ಮಾವಿನಗಿಡವನ್ನು ತಂದು ನೆಟ್ಟು, ಏನಾದರೂ ಸರಿ ಎಂತಾದರೂ ಸರಿ ನೀ ಬದುಕಲೇಬೇಕು, ಎಂದು ಪ್ರಾರ್ಥಿಸುತ್ತಾ ದಿನವೂ ಅದಕ್ಕೆ ಕೈಮುಗಿಯುತ್ತಿದ್ದೀವಿ.

ಹೀಗಿರುವಾಗ ಒಂದುದಿನ ನೆಲ ಕೆರೆಯುತ್ತಾ ಅಲ್ಲೇ ಇದ್ದ ಕಲ್ಲೊಂದನ್ನು ಎತ್ತಿ ಪಕ್ಕಕ್ಕಿಟ್ಟೆ. ಅಡಿಯಲ್ಲಿ ತಣ್ಣಗೆ ನೆಮ್ಮದಿಯಿಂದ ಬಾಳುತ್ತಿದ್ದ ಹತ್ತು ಸೆಂಟಿಮೀಟರ್ ಉದ್ದದ ಮೂರು ಜರಿಗಳು ಚೆಲ್ಲಾಪಿಲ್ಲಿಯಾಗಿ ಹರಿದಾಡಿವು. ಚಕ್ಕನೆ ಹಿಂದಕ್ಕೆ ನೆಗೆದೆ. ಕೆಲವರ್ಷಗಳ ಹಿಂದೆ ಬಲಗೈಗೆ ಅದೇನೋ ಕುಟುಕಿ ನಿಧಾನವಾಗಿ ನಂಜೇರಿ ಆಸ್ಪತ್ರೆ ಸೇರಿದ್ದು ನೆನಪಾಯಿತು. ಆ ಜರಿಗಳ ಸಂಸಾರ ನಾವು ಓಡಾಡುವ ಜಾಗದಲ್ಲೇ ಇದ್ದಿದ್ದರಿಂದ ಚಪ್ಪಲಿ ಹಾಕಿಕೊಂಡು ಓಡಾಡುವಂತೆ ಮನೆಯವರಿಗೆಲ್ಲ ಹೇಳಿದರೆ, ಅಯ್ಯೋ ನಮ್ಮ ಮನೆಯಂಗಳದಲ್ಲಿ ಚಪ್ಪಲಿ ಹಾಕಿಕೊಳ್ಳುವ ದೌರ್ಭಾಗ್ಯ ಯಾತಕ್ಕೆ, ಅನ್ನೋ ಉತ್ತರ ಬಂತು. ಎರಡು ವಾರದ ಹಿಂದೆ ಚಿಕ್ಕ ಕೆರೆಯೊಂದರ ಬಳಿ ಕಲ್ಲನ್ನು ಎತ್ತಿದ ಮಗನಿಗೆ ಎರಡು ಕಪ್ಪು ಚೇಳುಗಳು ಹಲೋ ಅಂದವಂತೆ. ಆಗಲೂ ಬರಿಕಾಲಿನಲ್ಲೇ ನಡೆದಾಡುತ್ತಿದ್ದನಂತೆ. ಕಪ್ಪೆ, ಕೇನ್ ಟೋಡ್ (ನೆಲಗಪ್ಪೆ), ವಿವಿಧ ಜಾತಿಯ ಹಲ್ಲಿಗಳು, ಆಗಾಗ ಕಾಣಿಸಿಕೊಳ್ಳುವ ಕಾರ್ಪೆಟ್ ಪೈಥಾನ್ (ಚಿಕ್ಕ ಗಾತ್ರದ ಹೆಬ್ಬಾವು), ಬೇರೆಬೇರೆ ಹಾವುಗಳು, ಚೇಳು, ಲೆಕ್ಕವಿಲ್ಲದಷ್ಟು ಜೇಡಗಳು ಇನ್ನೂ ಅದೇನೇನೋ ರೀತಿಯ ಕ್ರಿಮಿಕೀಟಗಳು ತುಂಬಿರುವ ಸ್ವಲ್ಪ ಸಮಾಧಾನ ತರುವ ನಗರಜೀವನವಿದು ಎಂದುಕೊಂಡು ಸುಮ್ಮನಾದೆ.

ಇಲ್ಲಿ ಸ್ವಲ್ಪ cane toad ರೋಚಕ ಕತೆ ಹೇಳಲೇಬೇಕು. ಆಸ್ಟ್ರೇಲಿಯಾದಲ್ಲಿ ಈಗ ಸಿಗುವ ಕೇನ್ ಟೋಡ್ (cane toad) ಇಲ್ಲಿಯ ಸ್ವಾಭಾವಿಕ ಜೀವಚರವಲ್ಲ. ದಕ್ಷಿಣ ಅಮೆರಿಕಾದ ಮೂಲನಿವಾಸಿಯಾದ ಈ ನೆಲಕಪ್ಪೆಯನ್ನ ಉದ್ದೇಶಪೂರ್ವಕವಾಗಿ ೧೯೩೫ರಲ್ಲಿ ಆಸ್ಟ್ರೇಲಿಯ ದೇಶಕ್ಕೆ ತಂದರಂತೆ. ಮೊಟ್ಟಮೊದಲು ಅದನ್ನು ಬಿಟ್ಟದ್ದು ಈ ನಮ್ಮ ರಾಣಿನಾಡಿನಲ್ಲೆ! ದೇಶದ ಆದಾಯಕ್ಕೆ ಬಲುಮುಖ್ಯವಾದ ಕಬ್ಬು ಬೆಳೆಯನ್ನ ನಾಶಮಾಡುತ್ತಿದ್ದ cane beetle ಹಾವಳಿಯನ್ನ ತಡೆಯಲು ಈ ಕಪ್ಪೆ ಸಹಾಯಕವಾಗಬಹುದು ಅನ್ನೋ ಲೆಕ್ಕಾಚಾರವಿತ್ತು. ಆದರೆ ಜೀವಜಾಲದಲ್ಲಿ ಅವಶ್ಯವಿರುವ ಸ್ವರಕ್ಷಣಾ ಪದ್ಧತಿಯನ್ನು ಚಾಚೂ ತಪ್ಪದೆ ಅನುಸರಿಸಿದ್ದ ಈ ಕಪ್ಪೆಯೋ ಅದರ ತಲೆ ಹಿಂದೆ ರಹಸ್ಯವಾಗಿ ವಿಷದ ಗ್ರಂಥಿಯನ್ನ ಹೊಂದಿತ್ತು.

ಈ ವಿಷದ ಅಥವಾ ನಂಜಿನ ಪರಿಣಾಮದ ಪ್ರಮಾಣ ಒಂದೊಂದು ಪ್ರಾಣಿಯ ಮೇಲೂ ಒಂದೊಂದು ರೀತಿಯಾಗುತ್ತದೆಯಂತೆ. ಹೇಳಿಕೇಳಿ, ಆಸ್ಟ್ರೇಲಿಯಾದ ಪರಿಸರ ಬಹು ಸೂಕ್ಷ್ಮವಾದದ್ದು, ಬೇರೆ ಖಂಡಗಳಿಗಿಂತ ಭಿನ್ನವಾದದ್ದು. ಪರದೇಶದಿಂದ ಆಮದಾಗಿ ಬಂದ ಕಪ್ಪೆ ಈ ದೇಶದ ಸ್ವಾಭಾವಿಕ ಪರಿಸರಕ್ಕೆ ಮತ್ತು ಜೀವಚರಗಳಿಗೆ ದುಃಸ್ವಪ್ನವಾಗಿಬಿಟ್ಟಿತು. ಈ ಕಪ್ಪೆಯ ವಂಶಾಭಿವೃದ್ದಿಯನ್ನ ತಡೆಗಟ್ಟಲು, ಅದನ್ನು ಧೈರ್ಯದಿಂದ ಎದುರಿಸಿ ನುಂಗಿ ನೀರುಕುಡಿಯಲು ಇಲ್ಲಿ ಯಾವುದೇ ಪರಭಕ್ಷಕ ಪ್ರಾಣಿ ಇರಲಿಲ್ಲ. ಕಪ್ಪೆಗೆ ಆಸ್ಟ್ರೇಲಿಯಾದಲ್ಲಿ ಯಾವ ಎದುರಾಳಿಯೂ ಇಲ್ಲವಾಗಿ, ಇಲ್ಲಿನ ಸ್ವಾತಂತ್ರ್ಯ ಅದಕ್ಕೆ ತುಂಬಾ ಇಷ್ಟವಾಗಿಹೋಯ್ತು. ದುರಾದೃಷ್ಟವಶಾತ್, ಅದರ ಕಾಟ ತಡೆಯಲಾರದೆ ಹಲವಾರು ಕೀಟಗಳ ವಂಶವೇ ನಶಿಸಿಹೋಯಿತು. ಹಾವುಗಳ, ಕೆಲ ಪಕ್ಷಿಗಳ ಸಂತತಿ ಕ್ಷೀಣಿಸಿತು. ಮನುಷ್ಯರು ಹೆದರಿದರು. ಇದರ ಸಂತತಿಯನ್ನು ತಡೆಯಲು ಸರ್ಕಾರಗಳು ಬೇಕಾದಷ್ಟು ಹಣಖರ್ಚು ಮಾಡಿವೆ. ತಲೆಹಿಂಬದಿ ಇರುವ ವಿಷಗ್ರಂಥಿಯಿಂದ ಒಸರುವ toxic ನಂಜು ಮನುಷ್ಯರಿಗೂ ಪ್ರಾಣಕಂಟಕವಾಗಿದೆ. ಹಾಗಾಗಿ ಬಾಲ್ಯದಲ್ಲೇ ಮಕ್ಕಳಿಗೆ cane toad ಕಂಡರೆ ದೂರ ಸರಿಯಿರಿ, ಮುಟ್ಟಬೇಡಿ ಎನ್ನುವ ಕಡ್ಡಾಯ ಪಾಠ ನಡೆದು ಅದು ಅವರ ತಲೆಯಲ್ಲಿ ಅಚ್ಚೊತ್ತುತ್ತದೆ.

ಕೈತೋಟದ ನಶೆ ಏರಿಸಿಕೊಂಡಿರುವ ನಾವೂ ಕೂಡಾ ಪ್ರತಿ ವಾರಾಂತ್ಯದಲ್ಲಿ ಅಲ್ಲಿಇಲ್ಲಿ ನೆಲಕೆರೆಯುತ್ತಾ ಇದೀವಿ. ಎರಡು ಬಾರಿ ನೆಟ್ಟರೂ ಸತ್ತುಹೋದ ಬಾಳೆಕಂದನ್ನು ನೆನೆಸಿಕೊಂಡು ಕೋಪಿಸಿಕೊಂಡು ತಪಿಸುತ್ತಾ ಛಲಬಿಡದೆ ಮೂರನೇ ಬಾರಿ ಬೇರೆ ಕಡೆಯಿಂದ ತಂದು ನೆಟ್ಟಿದ್ದೀವಿ. ಅದೋ, ಜಪ್ಪಯ್ಯ ಅಂದರೂ ತಾನು ಬದುಕುತ್ತೀನೋ ಇಲ್ಲಾ ಸಾಯುತ್ತೀನೋ ಎಂಬ ಗುಟ್ಟನ್ನು ಬಿಟ್ಟುಕೊಡದೆ ಇನ್ನೂ ಧ್ಯಾನಸ್ಥ ಸ್ಥಿತಿಯಲ್ಲೇ ನಿಂತಿದೆ.

ವಿಷಯ ಹೀಗಿದ್ದರೂ ನಮ್ಮ ಮನೆ ಮಕ್ಕಳು ಅವರ ಬಾಲ್ಯದಲ್ಲಿ ಒಬ್ಬಂಟಿಯಾಗಿ ಇಲ್ಲವೇ ಸ್ನೇಹಿತರೊಂದಿಗೆ ಸೇರಿಕೊಂಡು ಹಲ್ಲಿಗಳನ್ನು ಹಿಡಿಯಲು ಕಲ್ಲುಗಳನ್ನು, ಬಂಡೆಗಳನ್ನು ಸರಿಸುತ್ತಾ ಆಗಾಗ ಸಿಕ್ಕಿದ cane toad ಗಳನ್ನೂ ಕೈಯಲ್ಲಿ ಹಿಡಿದುಕೊಂಡು ಆಟವಾಡಿದ್ದಿದೆ. ಕುಪ್ಪಳಿಸಿ ಹೋಗಿ ತಪ್ಪಿಸಿಕೊಳ್ಳದೆ ದಿವ್ಯ ನಿರ್ಲಕ್ಷ್ಯ ತೋರುತ್ತಾ ಕೂರಿಸಿದ ಕಡೆಯೇ ಇನ್ನಷ್ಟು ಅಡ್ಡರಿಸಿಕೊಂಡು ಕೂತುಬಿಟ್ಟ ಸೋಮಾರಿ toad ಗಳನ್ನ ಚುಡಾಯಿಸುತ್ತಾ ತಮ್ಮ ಆಟದ ವಾಹನಗಳ ಮೇಲಿಟ್ಟು ಮೆರವಣಿಗೆ ಮಾಡಿದ್ದಾರೆ. ತರಾವರಿ ನೈಸರ್ಗಿಕ ವಸ್ತುಗಳನ್ನ ಬಳಸಿ ರಚನಾತ್ಮಕವಾಗಿ habitat ಗಳನ್ನ ನಿರ್ಮಿಸಿ ಅದರೊಳಗೆ ಈ ಕಪ್ಪೆ ರಾಜ-ರಾಣಿಯರನ್ನ ಕೂರಿಸಿ ಪ್ರತಿದಿನವೂ ಅದರ ಯೋಗಕ್ಷೇಮವನ್ನ ವಿಚಾರಿಸಿದ್ದಾರೆ. ಆಗಾಗ ಚಡ್ಡಿಯ ಜೇಬಿನಲ್ಲೂ toad ಠಿಕಾಣಿ ಹೂಡಿದ ಪ್ರಸಂಗಗಳಿವೆ. ಈ ಮಕ್ಕಳ ಗುಂಪು ಡೆಮಕ್ರಾಟಿಕ್ ಎಜುಕೇಶನ್ ಪದ್ಧತಿಯಿದ್ದ ಶಾಲೆಯಲ್ಲಿ ಕಲಿಯುತ್ತಿದ್ದದ್ದು. ಅನುಭವಕಲಿಕೆಯೇ ಅಲ್ಲಿ ಚಲಾವಣೆಯಲ್ಲಿದ್ದದ್ದು. ನಾವು ಕೆಲ ತಂದೆತಾಯಿಯರು/ಪೋಷಕರು ಕೆಲವೊಂದು ಬಾರಿ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗದಲ್ಲಿ ಗಂಟೆಗಳನ್ನ ಕಳೆದಿದ್ದೀವಿ. ನಮ್ಮಗಳ ಪುಣ್ಯಕ್ಕೆ ಆ ಎಲ್ಲಾ ಮಕ್ಕಳೂ ನೆಟ್ಟಗೇ ಬೆಳೆದು ದೊಡ್ಡವರಾಗಿ ಚೆನ್ನಾಗಿ ನಳನಳಿಸುತ್ತಿದ್ದಾರೆ.

(ನೀಲಿ ನಾಲಗೆಯ ಹಲ್ಲಿ)

ಆಸ್ಟ್ರೇಲಿಯಾ ಬಣ್ಣಬಣ್ಣದ ಹಲ್ಲಿಗಳ (lizard) ತೌರೂರು. ಚಟಾಕು, ಪಾವು, ಸೇರುಗಾತ್ರದಿಂದ ಹಿಡಿದು ನಮಗಿಂತಲೂ ದೊಡ್ಡ ಹಲ್ಲಿಗಳು ಇಲ್ಲಿ ಸಾಮಾನ್ಯ. ಅನುಭವಕಲಿಕೆ ಮೂಸೆಯಲ್ಲಿ ತಮ್ಮ ಕೌತುಕ ಮತ್ತು ಕಲ್ಪಾನಾಶಕ್ತಿಯನ್ನು ವಿಕಸಿಸಿಕೊಂಡು ಭಾರಿ ಜೋಶಿನಿಂದ ಜೀವಿಸುತ್ತಿದ್ದ ಮಕ್ಕಳ ಗುಂಪು ಹಲ್ಲಿ ಹಿಡಿಯುವುದರಲ್ಲಿ ಪ್ರವೀಣರಾಗಿದ್ದರು.

ಒಮ್ಮೆ ನಾನು ಶಾಲೆಮುಗಿದ ನಂತರ ಆರು ಮಕ್ಕಳನ್ನು ಪಿಕ್ ಅಪ್ ಮಾಡಿ ಕಾರಿನಲ್ಲಿ ತುಂಬಿಸಿಕೊಂಡು ಒಂದು ಪಾರ್ಕಿಗೆ ಕರೆದುಕೊಂಡು ಹೋಗುತ್ತಿದ್ದೆ. ಮೂವರು ಹುಡುಗಿಯರು, ಮೂವರು ಹುಡುಗರು. ಇದ್ದಕ್ಕಿದ್ದಂತೆ ಕಾರಿನಲ್ಲಿ ಭಾರಿ ಕೋಲಾಹಲ. ಮಕ್ಕಳ ಜೇಬಿನಲ್ಲಿದ್ದ ಎರಡು ಡ್ರ್ಯಾಗನ್ ಹಲ್ಲಿಗಳು ತಪ್ಪಿಸಿಕೊಂಡಿದ್ದವು. ಅವನ್ನು ಹುಡುಕುವ ಅವರ ಆತುರ ಹೇಳಲಸಾಧ್ಯವಾಗಿತ್ತು. ಸೀಟ್ ಬೆಲ್ಟ್ ಬಿಚ್ಚುವ ಹಾಗಿಲ್ಲ. ಆದರೂ ಕೂಡ ತಮ್ಮ ಪುಟಾಣಿದೇಹಗಳನ್ನು ಹಿಗ್ಗಿಸಿ ಕುಗ್ಗಿಸಿ ಬಗ್ಗಿಸಿ ಉಬ್ಬಿಸಿ ಎತ್ತರಿಸಿ ಅರಚುತ್ತಾ, ಕಿರುಚುತ್ತಾ ಸಂಭ್ರಮಿಸುತ್ತಾ ಆರೂ ಮಕ್ಕಳೂ ಕಾರಿನೊಳಗಡೆ ಹಲ್ಲಿಗಳನ್ನು ಹುಡುಕುವುದರಲ್ಲಿ ಮಗ್ನರಾದರು. ಎಲ್ಲೂ ಅಪಘಾತ ಮಾಡಿಕೊಳ್ಳದೆ ಪಾರ್ಕಿನ ಬಾಗಿಲತನಕ ಕಾರು ಓಡಿಸಿದ್ದನ್ನು ನಂತರ ನೆನೆದು ಕಾಣದ ದೇವರುಗಳಿಗೆ ಕೈಮುಗಿದಿದ್ದೀನಿ. ಒಂದುವಾರದ ನಂತರ ಆ ಎರಡು ಹಲ್ಲಿಗಳು ಕಾರಿನ ಸೀಟಿನ ಮೇಲೆ ರಾಜನಂತೆ ವಿರಾಜಿಸಿದ್ದ ಸುಸ್ಥಿತಿಯಲ್ಲೇ ಪ್ರತ್ಯಕ್ಷವಾದವು. ಆಸ್ಟ್ರೇಲಿಯಾದ ಮರುಭೂಮಿ ಹವಾಮಾನಕ್ಕೆ ಒಗ್ಗಿರುವ ಹಲ್ಲಿಗಳಿಗೆ ಕಾರಿನ ಪರಿಸರ ಹಾಲಿಡೇ ಹೋಮ್ ಅಂತೆನಿಸಿತ್ತೇನೋ!

ಇಲ್ಲಿರುವ ಹಲ್ಲಿಗಳ ಗುಂಪಿನಲ್ಲಿ ಮನೆಯೊಳಗೆ ಕಾಣುವ ಬಿಳಿಹಲ್ಲಿ, ಮನೆ ಹೊರಗಡೆಯಿರುವ ಸಣ್ಣ ದೇಹ-ಉದ್ದ ಬಾಲವಿರುವ ಬಲೇ ಚುರುಕಾದ ಸಣ್ಣ ಕಂದು ಬಣ್ಣದ ಹಲ್ಲಿ, ಓತಿಕ್ಯಾತ, ಹಾವುರಾಣಿ, ಎಲ್ಲಾ ಇವೆ. ಇವನ್ನು ಗೆಕೊ, goanna, skinks, lizards, dragons ಎಂಬ ಬೇರೆಬೇರೆ ವಂಶಗಳಿಂದ ಕರೆಯುತ್ತಾರೆ. ಪಾರ್ಕಿಗೆ ಹೋಗಿ ಸುಮ್ಮನೆ ಕೂತಿದ್ದರೆ ಈ ಹಲ್ಲಿಗಳು ಸುಲಭವಾಗಿ ಕಾಣಿಸುತ್ತವೆ. ಆಗಾಗ ನೀಲಿ ನಾಲಗೆಯಿರುವ ಹಲ್ಲಿ ಕಾಣಿಸಿದರೆ ನಮಗೆ ಖುಷಿಯೋ ಖುಷಿ. ಡ್ರ್ಯಾಗನ್ ಹಲ್ಲಿಗಳನ್ನ ನೋಡುತ್ತಾ ಕೂತರೆ ಹೊತ್ತು ಸಾಗುವುದೇ ತಿಳಿಯುವುದಿಲ್ಲ ಅವಕ್ಕೆ ಒಂಥರದ ಮಾಯಾ ವ್ಯಕ್ತಿತ್ವವಿದೆ. ತಲೆಯನ್ನು ನಾಟಕೀಯವಾಗಿ ತಿರುಗಿಸಿ ಕಣ್ಣು ಪಿಳುಕಿಸುವ ಪರಿ ತುಂಬಾ ನಗು ತರಿಸತ್ತೆ.

ಚೇಳುಗಳಲ್ಲಿ ಸುಮಾರು ಆರೇಳು ವಿಧಗಳಿದ್ದರೂ ಅವು ಅಷ್ಟೇನೂ ವಿಷಕಾರಿಯಲ್ಲ ಎಂದು ಕೇಳಿದ್ದೀನಿ. ಜನ ಚೇಳಿನ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಜೇಡಗಳಿಗೆ ಮತ್ತು ಹಾವುಗಳಿಗೆ ಹೆದರುತ್ತಾರೆ. ಅದರಲ್ಲೂ ಸುಮಾರು ಹತ್ತು ವಿಧದ ಜೇಡಜಾತಿ ಮನುಷ್ಯರಿಗೆ ಮಾರಕವಾದವು. ಅವುಗಳಲ್ಲಿ ರೆಡ್ ಬ್ಯಾಕ್, ಫನಲ್ ವೆಬ್, ವೈಟ್ ಟೇಲ್ ಜೇಡಗಳೆಂದರೆ ನಾವೆಲ್ಲರೂ ಎಚ್ಚರವಹಿಸುತ್ತೀವಿ. ಅವಲ್ಲಿ ರೆಡ್ ಬ್ಯಾಕ್ ಜೇಡ ಒಳ್ಳೆ ಗಾತ್ರದಲ್ಲಿದ್ದು ಅಂಡಿನ ಹತ್ತಿರ ಕೆಂಪುಬಣ್ಣವಿರುವುದು ನಮ್ಮ ಕಣ್ಣಿಗೆ ಕಾಣಿಸುತ್ತದೆ. ಅವುಗಳಿಂದ ದೂರವಿರುವುದು ಸುಲಭ. ಆದರೆ ವೈಟ್ ಟೇಲ್ ಮತ್ತು ಫನಲ್ ವೆಬ್ ಜೇಡಗಳು ಸುಲಭವಾಗಿ ನಮಗೆ ಕಣ್ಣಿಗೆ ಸಿಕ್ಕುವುದಿಲ್ಲ ಅಥವಾ ನಾವು ಅವನ್ನು ಸರಿಯಾಗಿ ಗುರ್ತಿಸುವುದಿಲ್ಲ. ಹಿಂದೊಮ್ಮೆ ನಾವಿದ್ದ ಮನೆಯ ಗ್ಯಾರೇಜಿನಲ್ಲಿ ರೆಡ್ ಬ್ಯಾಕ್ ಜೇಡಗಳ ದೊಡ್ಡ ಸಂಸಾರವೊಂದು ಗೂಡು ಕಟ್ಟಿತ್ತು. ಗೂಡಿನ ಹೊರಗಡೆ ಪದರಕ್ಕೆ ಮಗರಾಯ ಕೈಹಾಕಿ ಕೆದಕಿದ್ದ. ಹೊರಬಂದ ಹಿರಿಯ ರೆಡ್ ಬ್ಯಾಕ್ ಜೇಡ ಗುರ್ ಅಂತು. ಮುಂದಿನ ದಿನಗಳಲ್ಲಿ ಅವನ್ನು ಸಾಯಿಸದೇ ಬೇರೆದಾರಿಯೇ ಇಲ್ಲವಾಗಿ ಬೇಸರವಾಗಿತ್ತು. ಕಣ್ಣಿಗೆ ಕಾಣಿಸದೆ ಎಲ್ಲೋ ಅಡಗಿರುವ ವೈಟ್ ಟೇಲ್ ಜೇಡದ ಬಗ್ಗೆ ಅಣಕವಾಡಿದ್ದೆ. Queensland ನಲ್ಲಂತೂ ಮರದಿಂದ ಕಟ್ಟಿರುವ ಮನೆಗಳೇ ಜಾಸ್ತಿ. ಜೇಡಗಳಿಗೆ ಪ್ರಿಯವಾದ ಪರಿಸರವೂ ಇಲ್ಲಿದೆ. ಹಾಗಾಗಿ ಅವುಗಳ ಜೊತೆ ರಾಜಿ ಮಾಡಿಕೊಂಡು ಬದುಕುವುದೇ ಸರಿ ಎಂಬ ತೀರ್ಮಾನವನ್ನು ಜನ ಒಪ್ಪುತ್ತಾರೆ.

(Goanna)

ಇನ್ನು ಹಾವುಗಳ ವಿಷಯಕ್ಕೆ ಬಂದರೆ ಆಸ್ಟ್ರೇಲಿಯಾ ಖಂಡ-ದೇಶದಲ್ಲಿರುವ ಅನೇಕಾನೇಕ ಹಾವುಜಾತಿಗಳು ದಕ್ಷಿಣ ಅಮೆರಿಕಕ್ಕೆ ಸವಾಲೊಡ್ಡುತ್ತದೆಯೇನೋ. ಅಷ್ಟೊಂದು ವಿಷಹಾವುಗಳು, ಬಣ್ಣದ ಹಾವುಗಳು, ನೆಲ-ನೀರು ಹಾವುಗಳು ಇಲ್ಲಿವೆ. ಬ್ರೌನ್ ಹಾವುಗಳು, ತೈಪಾನ್, ಡೆತ್ ಆಡೆರ್, ಟೈಗರ್ ಹಾವು, ಕೆಂಪುಹೊಟ್ಟೆಯ ಕಪ್ಪು ಹಾವು, ಹೀಗೇ ಸುಮಾರು ವಿಷಹಾವುಗಳಿದ್ದರೂ ಅವು ಜನರಿಗೆ ಕಚ್ಚಿ ತುಂಬಾ ಜನ ಸಾಯುವುದು ಅಪರೂಪ.

ಹೋದವಾರ ಮನೆಗೆ ಬಂದಿದ್ದ ಒಬ್ಬರು red-bellied black ಹಾವಿನ ಕತೆಯೊಂದನ್ನು ಹೇಳಿದರು. ಎಂದೋ ಒಮ್ಮೆ ಅವರು ಹೋಗಿದ್ದ ಸಮುದ್ರತೀರದಲ್ಲಿ ಅದು ಗಾಯಗೊಂಡು ಪ್ರಾಣಬಿಡುತ್ತಾ ಬಿದ್ದಿತ್ತಂತೆ. ಇವರು ಅಯ್ಯೋ ಪಾಪ ಎಂದುಕೊಂಡು ಮುಂದೆ ನಡೆದುಹೋದರಂತೆ. ಸ್ವಲ್ಪಹೊತ್ತಿನ ನಂತರ ಅವರ ಹೆಂಡತಿ ಹಾವು ಅಲ್ಲಿ ಎಂದು ಕೈಮಾಡಿ ತೋರಿಸಿದ ಕಡೆಯಲ್ಲಿ ನೋಡಿದರೆ ಅದೇ ಹಾವು ಬಿದ್ದಕಡೆಯಿಂದ ಸರಿಯುತ್ತಾ ಹೋಗಿ, ಸಮುದ್ರದ ನೀರನ್ನು ಹೊಕ್ಕು ಆರಾಮಾಗಿ ಈಜುತ್ತಾ ಹೋಯಿತಂತೆ. ಸಮುದ್ರದಲ್ಲಿ ಕಾಲಾಡಿಸುತ್ತಿದ್ದ, ಈಜುತ್ತಿದ್ದ ಜನರಿಗೆ ಅವರಿಂದ ಅನತಿದೂರದಲ್ಲಿ ತಮ್ಮಂತೆಯೇ ಈಜಲು ಬಂದಿದ್ದ ಈ ಹಾವಿನ ಅಂದಾಜೇ ಇರಲಿಲ್ಲ, ಎಂದು ಅವರು ನಗಾಡಿದರು. ಅಯ್ಯೋ, ನಾವು ಬರಿ blue bottle ಗಳು, ಜೆಲ್ಲಿ ಮೀನುಗಳ ಬಗ್ಗೆ ಚಿಂತೆ ಮಾಡುತ್ತಿರುವಾಗ ನೀವು ಆ ಪಟ್ಟಿಯಲ್ಲಿ ಹಾವನ್ನೂ ಸೇರಿಸಿದಿರಾ, ಅಂದೆವು.