ಇಂದು ಹಳ್ಳಿಗಳಲ್ಲಿ ಕನ್ನಡ ಶಾಲೆಯಲ್ಲಿ ಓದುವ ಮಕ್ಕಳು ಅತೀ ನಿಕೃಷ್ಟ ಜೀವಿಗಳು ಎಂಬ ಅಭಿಪ್ರಾಯ ಸರ್ವತ್ರವಾಗಿ ಹಬ್ಬುತ್ತಿದೆ. ‘ಕಾನ್ವೆಂಟ್’ ಎಂಬ ಅಪಭ್ರಂಶ ಹೆಸರಿನಿಂದ ಗುರುತಿಸಿಕೊಳ್ಳುವ ಇಂಗ್ಲಿಷ್ ಮಾಧ್ಯಮದ ದುಬಾರಿ ಖಾಸಗಿ ಶಾಲೆಗಳು ಪ್ರತೀ ಹೋಬಳಿಗಳಲ್ಲೂ ತಲೆ ಎತ್ತಿವೆ. ಇಂತಹಾ ಶಾಲೆಗಳು ಮಾತ್ರ ನಮ್ಮ ಗ್ರಾಮೀಣ ಮಕ್ಕಳಿಗೆ ಉಜ್ವಲ ಭವಿಷ್ಯ ನೀಡಬಲ್ಲವು ಎಂದು ಗ್ರಾಮೀಣ ಪ್ರದೇಶದ ಇಂದಿನ ಹೆತ್ತವರ ಅಭಿಪ್ರಾಯ.

ಇತ್ತೀಚೆಗೆ ಪ್ರತೀ ಹಳ್ಳಿಯ ಕೂಲಿ ಕೆಲಸದ ಆಳು ಕೂಡಾ ತನ್ನ ಮಕ್ಕಳನ್ನು ಕಾನ್ವೆಂಟ್ ನಲ್ಲಿ ಓದಿಸ ಬಯಸುತ್ತಾನೆ.  ತನ್ನ ಆದಾಯದ ೬೦% ಮಕ್ಕಳ ಕಾನ್ವೆಂಟ್ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತಾನೆ. ಕಾನ್ವೆಂಟುಗಳಲ್ಲಿ ಎಸ್.ಎಲ್.ಸಿ. ತನಕ ಓದಿದ ಮಕ್ಕಳಿಗೆ ಮುಂದಕ್ಕೆ ತಾಲೂಕು ಕೇಂದ್ರಗಳಲ್ಲಿ ತಲೆ ಎತ್ತಿರುವ ಸರಕಾರೀ ಜೂನಿಯರ್ ಕಾಲೇಜುಗಳು ರುಚಿಸುವುದಿಲ್ಲ. ಅವರು ಪಟ್ಟಣ ಸೇರುತ್ತಾರೆ.

ಹೆಚ್ಚಿನ ಗ್ರಾಮೀಣ ತಂದೆ ತಾಯಿಯರಿಗೆ ತಮ್ಮ ಮಕ್ಕಳು ಹುಟ್ಟಿದಾಗಿನಿಂದಲೇ ‘ಅವರು ಐಟಿ ಉದ್ಯೋಗಗಳನ್ನು ಸೇರಿ ಪ್ರವರ್ಧಮಾನಕ್ಕೆ ಬರಬೇಕು’ ಎಂಬ ಹಂಬಲ. ಪಟ್ಟಣದ ಕಾಲೇಜುಗಳು ಗ್ರಾಮೀಣ ಪ್ರದೇಶದವರನ್ನು ಸ್ವಾಗತಿಸುವುದಿಲ್ಲ. ಹೆತ್ತವರಿಂದ ವಿಪರೀತ ಖರ್ಚು ಮಾಡಿಸಿ ಓದಿದರೂ ಮುಂದಕ್ಕೆ ಈ ಗ್ರಾಮೀಣ ವಿದ್ಯಾರ್ಥಿಗಳಿಗೆ ಐಟಿ ಉದ್ಯೋಗ ಸಿಗುವ ಭರವಸೆ ಏನೂ ಇಲ್ಲ. ವಿಪರೀತ ಡೊನೇಶನ್ ನೀಡಿ ಕಾಲೇಜು ಓದಿಸಿದ ಹೆಚ್ಚಿನ ಹೆತ್ತವರಿಗೆ ಭ್ರಮನಿರಸನ ಆಗುವುದು ಸಹಜ. ವಿದ್ಯಾರ್ಥಿಗಳಲ್ಲೂ ಕೆಲವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ!

ಉದ್ಯೋಗ ಸಿಗದ ವಿದ್ಯಾರ್ಥಿಗಳು ‘ಅಲ್ಲಿಗೂ ಸಲ್ಲದವರು ಇಲ್ಲಿಗೂ ಸಲ್ಲದವರು’ ಆಗುತ್ತಾರೆ. ಇಂದಿನ ಸರಕಾರಿ ಪ್ರಾಥಮಿಕ ಶಾಲೆಗಳ ಗುಣಮಟ್ಟ ಹೆಚ್ಚಿದೆ. ಪ್ರಾಥಮಿಕ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ ಕೂಡಾ ಸಿಗುತ್ತಾ ಇದೆ. ಧರ್ಮಾರ್ಥ ಪ್ರೌಢಶಾಲಾ ವಿದ್ಯಾಭ್ಯಾಸ ಸಿಗುತ್ತಾ ಇದೆ. ಏಳನೇ ಕ್ಲಾಸಿನ ನಂತರದ ಅರ್ಹ ವಿದ್ಯಾರ್ಥಿಗಳಿಗೆ ಸರಕಾರವು ಧರ್ಮಾರ್ಥವಾಗಿ ಸೈಕಲ್ ನೀಡುವ ಆಮಿಷವನ್ನೂ ನೀಡುತ್ತಿದೆ.

ಈ ದಿನಗಳಲ್ಲಿ ಹಳ್ಳಿಯ ಅತೀ ಬಡವನು ಕೂಡಾ ತನ್ನ ಮಕ್ಕಳನ್ನು ಸರಕಾರೀ ಶಾಲೆಗೆ ಕಳುಹಿಸುವ ಯೋಚನೆ ಮಾಡುತ್ತಿಲ್ಲ. ಸರಕಾರ ಕೊಡುತ್ತಾ ಇರುವ ಸೌಲಭ್ಯಗಳನ್ನು ಕಡೆಗಣಿಸಿ, ಅವನು ತನ್ನ ಮಕ್ಕಳನ್ನು ಹತ್ತಿರದ ‘ಕಾನ್ವೆಂಟ್’ಗೆ ಕಳುಹಿಸಲೇ ಬಯಸುತ್ತಿದ್ದಾನೆ. ಹಳ್ಳಿಯ ಜನರ ‘ಮಕ್ಕಳ ಮೇಲಿನ ಪ್ರೀತಿ ಮತ್ತು ಅವರ ಉಜ್ವಲ ಭವಿಷ್ಯದ ಆಸೆ’ ತಪ್ಪಲ್ಲ. ಈ ಆಕಾಂಕ್ಷೆ ಸಹಜವೇ.

ಖಾಸಗಿ ಹೈಸ್ಕೂಲ್ ಗಳಲ್ಲಿ ಓದಿದ ಮೇಲೆ ಆ ಮಕ್ಕಳು ಪಟ್ಟಣಗಳ ದುಬಾರಿ ಕಾಲೇಜುಗಳಲ್ಲಿ ಓದಲು ಬಯಸುತ್ತಿದ್ದಾರೆ. ಅವರಿಗೆ ಸರಕಾರೀ ಕಾಲೇಜ್ ಬೇಡ ಎನ್ನಿಸುತ್ತೆ. ಅದೇ ರೀತಿ ಖಾಸಗಿ ಕಾಲೇಜುಗಳಲ್ಲಿ ಓದಿಸಿದರೂ, ಗ್ರಾಮೀಣ ವಿದ್ಯಾರ್ಥಿಗಳ ಅಭಿಲಾಷೆಗೆ ತಕ್ಕ ಉದ್ಯೋಗಗಳು ಅವರಿಗೆ ದಕ್ಕುವುದಿಲ್ಲ.  ಹೆಚ್ಚಿನ ಮಕ್ಕಳಿಗೆ ಭ್ರಮನಿರಸನ ಕಟ್ಟಿಟ್ಟ ಬುತ್ತಿ. ಸಾಲ ಸೋಲ ಮಾಡಿ ಓದಿಸಿದ ಹೆತ್ತವರಿಗೆ ಕೂಡಾ ಅದೇ.

ಪಟ್ಟಣಗಳಲ್ಲಿ ಓದಿದವರೇಕೆ, ಗ್ರಾಮೀಣ ಪ್ರದೇಶದ ಸರಕಾರೀ ಕಾಲೇಜುಗಳಲ್ಲಿ ಓದಿದ ಯುವ ಜನರಲ್ಲಿ ಬಹುತೇಕ ಮಂದಿ ಇಂದು ಹಳ್ಳಿಗೆ ಮರಳುವುದಿಲ್ಲ. ಹಾಗಾಗಿ, ಹೆತ್ತವರ ವಂಶ ವೃತ್ತಿಯಾದ ವ್ಯವಸಾಯದ ಬಗ್ಗೆ ಆಸಕ್ತಿ ತೋರುವ ವಿದ್ಯಾವಂತ ಯುವಕರು ಹಳ್ಳಿಗಳಲ್ಲಿ ಕಾಣಸಿಗುತ್ತಾ ಇಲ್ಲ.

ಹಳ್ಳಿಗಳು ಮುದುಕರ ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳು ವಾಸಿಸುವ ತಾಣಗಳೇ ಆಗಿವೆ. ನಮ್ಮ ದೇಶದ ಆಹಾರ ಉತ್ಪಾದನೆ ಕುಸಿದಿದೆ. ನಾವು ಹೊರ ದೇಶದಿಂದ  ಆಹಾರ ಧಾನ್ಯ ತರಿಸಿಕೊಳ್ಳುತ್ತಾ ಇದ್ದೇವೆ. ನಮ್ಮ ‘ಗ್ರೀನ್ ರಿವೊಲ್ಯೂಶನ್’ ಇಲ್ಲಿಗೆ ಮುಗಿಯಿತೆ?

ಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಶ್ ಕಲಿಸಿದರೆ, ಈ ದುಬಾರಿ ಕಾನ್ವೆಂಟ್ ಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವ ಈ ‘ಲೇಟೆಸ್ಟ್ ಟ್ರೆಂಡ್’ ಕಡಿಮೆ ಆಗಬಹುದೇ? ಇಂದು ಸರಕಾರೀ ಕನ್ನಡ ಶಾಲೆಯಲ್ಲಿ ಓದುವ ಮಕ್ಕಳಿಗೆ ಬೆಲೆ ಇಲ್ಲ. ಕಾರಣ ಅವರಿಗೆ, ‘ಸೂಟ್ ಇಲ್ಲ, ಬೂಟ್ ಇಲ್ಲ, ಟುಸ್ ಫುಸ್ ಇಂಗ್ಲಿಷ್ ಇಲ್ಲ’. ಅವರು ತಾವು ‘ಕನ್ನಡ ಶಾಲೆಯಲ್ಲಿ ಓದುತ್ತಾ ಇದ್ದೀವಿ’ ಎನ್ನಲು ಅವರು ನಾಚಿಕೆ ಪಡುತ್ತಾ ಇದ್ದಾರೆ.

ಈ ಅಸಮತೆ ಯಾಕೆ? ಎಲ್ಲರಿಗೂ ‘ಏಕ ರೀತಿಯ ಶಿಕ್ಷಣ’ ಮತ್ತು ‘ಏಕ ರೀತಿಯ ಅವಕಾಶಗಳ ಹಕ್ಕು’ ನಮ್ಮ ಪ್ರಜಾಪ್ರಭುತ್ವದ ದೇಶದಲ್ಲಿ ಸಿಗಬೇಕು ಅಲ್ಲವೆ? ಯಾವುದೋ ಕಾಲದಲ್ಲಿ ಆಂಗ್ಲರ ಮಕ್ಕಳಿಗೆ ಮತ್ತು ಪರ ಭಾಷಿಕರ ಮಕ್ಕಳಿಗೋಸ್ಕರ ಹುಟ್ಟು ಹಾಕಿದ್ದ ಈ ಆಂಗ್ಲ ಮಾಧ್ಯಮದ ಸ್ಕೂಲ್ ಗಳು ಇಂದೇಕೆ ನಮಗೆ ಪರಬ್ರಹ್ಮ? ಅವುಗಳಿಂದಲೇ ನಮ್ಮ ಸಮಾಜ ಉದ್ಧಾರವಾಗುತ್ತದೆಯೇ? ಉಳ್ಳವರು ಆ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಅಪಾರ ಖರ್ಚು ಮಾಡಿ ಓದಿಸಿ ಮುಂದಕ್ಕೆ ಅವರಿಗೆ ಒಳ್ಳೆಯ ಭವಿಷ್ಯ ರೂಪಿಸಲು ಪ್ರಯತ್ನ ಮಾಡುತ್ತಾ ಇದ್ದಾರೆ. ಆ ಮಕ್ಕಳಲ್ಲಿ ಹೆಚ್ಚಿನವರು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳುತ್ತಲೂ ಇದ್ದಾರೆ. ಯಾಕೆಂದರೆ ಅವರದು : ‘ವನ್ ಅಪ್ ಎಜುಕೇಶನ್’. ಇದರಲ್ಲಿ ಆ ವಿದ್ಯಾರ್ಥಿಗಳ ಅಥವಾ ಹೆತ್ತವರ ತಪ್ಪು ಏನೂ ಇಲ್ಲ. ಇಂದಿನ ನಮ್ಮ ಸಾಮಾಜಿಕ ಪರಿಸ್ಥಿತಿ ಹಾಗೆ ಇದೆ.

ಬಡ ಹಳ್ಳಿಯ ಕನ್ನಡ ಶಾಲೆಯ ಮಕ್ಕಳಿಗೆ ‘ಕಾನ್ವೆಂಟ್’ ಮಕ್ಕಳ ಎದುರು ನಿಲ್ಲುವ ಅಥವಾ  ಕಾಂಪೀಟ್ ಮಾಡುವ ಸದಾವಕಾಶವೇ ಇಲ್ಲ. ಸರಕಾರೀ ಕನ್ನಡ ಶಾಲೆಯಲ್ಲಿ ಓದಿ ಎಷ್ಟು ಒಳ್ಳೆಯ ಕನ್ನಡ ಜ್ಞಾನ ಪಡೆದರೂ ಅವರನ್ನು ಕೇಳುವವರೇ ಇಲ್ಲ. ಈ ಅಸಮತೆ ಯಾಕೆ? ಅದಕ್ಕೇ ನಾನು ನಮ್ಮೂರ ಶಾಲಾ ಮಕ್ಕಳು ಎರಡನೇ ಕ್ಲಾಸಿನಿಂದಲೇ ಇಂಗ್ಲೀಷ್ ಭಾಷೆಯನ್ನು ಕಲಿಯುವ ಅವಕಾಶವನ್ನು ಕಂಡು ಸಂತೋಷವನ್ನು ವ್ಯಕ್ತಪಡಿಸುತ್ತೇನೆ.

‘ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವುದು ತಪ್ಪು’ ಎಂಬ ಅಭಿಪ್ರಾಯ ಈಗ ಕೆಲವು ಸಾಹಿತಿಗಳಲ್ಲಿ ಮತ್ತು ಹಲವು ರಾಜಕಾರಣಿಗಳಲ್ಲಿ ಮೂಡಿಬರುತ್ತಾ ಇದೆ. ‘ಉಳ್ಳವರಿಗೆ ಮಾತ್ರ ಇಂಗ್ಲಿಷ್- ಬಡವರಿಗೆ ಕನ್ನಡ’ ಎಂಬ ಭೇದ ಭಾವ ಯಾಕೆ? ಈ ದ್ವಂದ್ವ ಅಭಿಪ್ರಾಯಕ್ಕೆ ಇಂಥಹಾ ಕೆಲವು ರಾಜಕಾರಣಿಗಳು ಮತ್ತು ಕೆಲವು ಸಾಹಿತಿಗಳು ನೀರೆರೆಯುತ್ತಾ ಇದ್ದಾರೆ. ಇದು ಸರಿಯೆ?

ಕನ್ನಡ ನಾಡಿನಲ್ಲಿ ಎಲ್ಲಾ ಮಕ್ಕಳಿಗೂ ಸಮಾನ ವಿದ್ಯೆ ಮತ್ತು ಸಮಾನ ಅವಕಾಶಗಳು ಇರಬೇಡವೇ? ಚರ್ಚೆಗಳಲ್ಲಿ ಸದಾ ಪರ ಅಥವಾ ವಿರುದ್ಧ ಅಭಿಪ್ರಾಯಗಳು ಇದ್ದೇ ಇರುತ್ತವೆ. ಪ್ರತೀ ನಾಣ್ಯಕ್ಕೂ ಎರಡು ಮುಖಗಳು ಇವೆ. ಭವಿಷ್ಯದಲ್ಲಿ ಏನಾಗುತ್ತೋ ಕಾಲವೇ ನಿರ್ಧರಿಸಬೇಕು.

ನಾನು ಸಮಾಜ ಶಾಸ್ತ್ರದ ವಿದ್ಯಾರ್ಥಿ. ನನಗೆ ನಮ್ಮ ಮಾತೃಭಾಷೆಯಾದ ಕನ್ನಡದ ಮೇಲೆ ಅಪಾರ ಅಭಿಮಾನ ಇದೆ. ಆದ್ದರಿಂದ, ನನಗೆ ಕನ್ನಡದ ಉಳಿವಿನ ಬಗ್ಗೆ ಕಾಳಜಿ. ಕಾಲವೇ ಈ ಸಮಸ್ಯೆಗೆ ತೀರ್ಮಾನ ಹೇಳಬಲ್ಲುದೆ?