ನಾವು ಈಗಲೂ ಪ್ರಜೆಗಳೇ, ಮುಂದೆಯೂ ಪ್ರಜೆಗಳೇ. ಈಗ ನಾವು ಕ್ರಮ ಕೈಗೊಳ್ಳದಿದ್ದರೆ ಈ ದಿನವೂ ಕೆಟ್ಟದ್ದೇ, ಮುಂದಿನ ದಿನಗಳಂತೂ ಇನ್ನೂ ಭಯಂಕರ. ನಮ್ಮ ಸರ್ಕಾರಗಳು, ಜನ ಪ್ರತಿನಿಧಿಗಳು ಈ ದಿನವನ್ನೂ, ನಾಳೆಯನ್ನೂ ಎರಡನ್ನೂ ಕುರಿತು ಆಲೋಚಿಸಬೇಕು, ಅಲ್ಲವೇ. ಅವರು ಈಗ ನಿಷ್ಕ್ರಿಯರಾದರೆ ನಮ್ಮ ಮತ್ತು ಮುಂದಿನ ಪೀಳಿಗೆಗಳ ಭವಿಷ್ಯವೇನಾಗುತ್ತದೆ, ಎಂದು ತನ್ನ ವಾದವನ್ನು ಮುಂದಿಟ್ಟಳು. ಹೌದು ಅನ್ನದೆ ಸುಮ್ಮನಿರಲಾದೀತೇ?! ಪ್ರಧಾನಮಂತ್ರಿಗಳ ಕೋಪತಾಪ, ಗುಡುಗು ಎಲ್ಲವೂ ಈ ಸತ್ವವಿರುವ ಮಾತುಗಳ ಮುಂದೆ ನಿಲ್ಲದೆ ಹೋಯಿತು.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ.

 

ಕಳೆದ ನವೆಂಬರ್ ತಿಂಗಳ ಕೊನೆಯ ಶುಕ್ರವಾರದಂದು ಆಸ್ಟ್ರೇಲಿಯಾದ ಪ್ರಮುಖ ನಗರಗಳಲ್ಲಿ ಮತ್ತು ಕೆಲಪಟ್ಟಣಗಳಲ್ಲಿ ನೂರಾರು ಮಕ್ಕಳು ಶಾಲೆ ಬಿಟ್ಟು ಹೊರಬಂದರು. ದೇಶದ ಪ್ರಧಾನಮಂತ್ರಿಗಳಿಗೆ ಇನ್ನಿಲ್ಲದಷ್ಟು ಕೋಪ ಬಂತು. ಮಕ್ಕಳು ಶಿಸ್ತಿನಿಂದ ಶಾಲೆಗೆ ಹೋಗಿ ಕಲಿಯುವುದರ ಕಡೆಗೆ ಗಮನ ಕೊಡಬೇಕು. ಹೀಗೆಲ್ಲಾ ಚಳವಳಿ, ಹೋರಾಟ ಅಂತ ಸಮಯ ಹಾಳುಮಾಡಬಾರದು ಎಂದು ಗುಡುಗಿದರು. ಆ ಶಾಲಾಮಕ್ಕಳು ಸುಮ್ಮನಾದರೇ?! ಮಕ್ಕಳು ಭಯಪಡದೆ, ಸುಮ್ಮನಾಗದೇ ಪ್ರಧಾನಮಂತ್ರಿಗಳ ಮಾತು ಮುಗಿದ ಮರುಕ್ಷಣದಲ್ಲೇ ಅವರ ವಾದವನ್ನೂ ಅಷ್ಟೇ ತೀಕ್ಷ್ಣವಾಗಿ ಮಂಡಿಸಿದರು. ಮಕ್ಕಳ ಜೊತೆ ಒಂದಷ್ಟು ಜನ ದೊಡ್ಡವರು ಕೂಡ ಕೈ-ಬಾಯಿ ಜೋಡಿಸಿ ದನಿಯೇರಿಸಿದ್ದು, ಆ ದಿನದ ಚಳವಳಿಯನ್ನು ರಂಗೇರಿಸಿತ್ತು. ಸಿಡ್ನಿ ಮತ್ತು ಮೆಲ್ಬೋರ್ನ್ ನಗರಗಳಲ್ಲಿ ಅವರ ಸಂಖ್ಯೆ ಸಾವಿರಾರು ಇತ್ತು ಎಂದು ಮಾಧ್ಯಮಗಳು ಅಚ್ಚರಿಪಟ್ಟವು. ಬ್ರಿಸ್ಬನ್ ನಗರದಲ್ಲಿ ನಮ್ಮ ಕೆಲ ಸ್ನೇಹಿತರು, ಅವರ ಮಕ್ಕಳು ಚಳವಳಿಯಲ್ಲಿದ್ದರು.

ಮಕ್ಕಳು ಅಷ್ಟೆಲ್ಲಾ ಸದ್ದು ಮಾಡಿದ್ದು ನ್ಯಾಯೋಚಿತವಾಗೇ ಇತ್ತು. ಅವರ ಚಳವಳಿಯ ಹೆಸರು ಸ್ಟ್ರೈಕ್ 4 ಕ್ಲೈಮೇಟ್ ಆಕ್ಷನ್. ನಮ್ಮ ದೇಶದ ಸರ್ಕಾರಗಳು ಹವಾಮಾನ ಬದಲಾವಣೆ ಎಂಬ ಸಮಸ್ಯೆಯೆಡೆಗೆ ಕೊಡಬೇಕಾದಷ್ಟು ಗಮನ ಕೊಡುತ್ತಿಲ್ಲ, ತೆಗೆದುಕೊಳ್ಳಬೇಕಾದಷ್ಟು ಕ್ರಮಗಳನ್ನ ತೆಗೆದುಕೊಂಡಿಲ್ಲ, ಸಮಸ್ಯೆಯ ಗಂಭೀರತೆಯನ್ನು ಅವರು ಅಲ್ಲಗಳೆಯುತ್ತಿದ್ದಾರೆ ಎಂದೆಲ್ಲಾ ಆರೋಪಗಳನ್ನು ಆದಿನ ಮಕ್ಕಳು ಸರಕಾರದ ಮೇಲೆ, ರಾಜಕೀಯ ನಾಯಕರ ಮೇಲೆ ಹೊರಿಸಿದರು. ಅದಕ್ಕೆ ಪ್ರತಿಯಾಗಿ ಪ್ರಧಾನಿಗಳು, ನಾವು ಮಾಡಬೇಕಾದ್ದನ್ನ ಮಾಡುತ್ತಿದ್ದೀವಿ, ಮಕ್ಕಳು ನಮಗೆ ಅದನ್ನು ನೆನಪಿಸುವ ಅಗತ್ಯವಿಲ್ಲ, ಎಂದು ತಳ್ಳಿಹಾಕುವ ಧೋರಣೆ ತೋರಿಸಿದರು. ಮಕ್ಕಳ ಗಲಾಟೆ ಎಂದರೆ ಗೊತ್ತಿದೆಯಲ್ಲಾ, ಸಲ್ಲಬೇಕಾದ ಗೌರವದ ಗಮನ ಸಿಕ್ಕದಿದ್ದರೆ ಏನಾಗುತ್ತದೆ? ಅದು ಇನ್ನಷ್ಟು ಜಾಸ್ತಿಯಾಯಿತು.


ಈ ದೇಶಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲಿ ನನಗೆ ಹೊರಗಿನ ಪರಿಸರದಲ್ಲಿ ಅದೇನೋ ದೊಡ್ಡ ಬದಲಾವಣೆ ಇದೆ ಅಂತ ಅನ್ನಿಸುತಿತ್ತು. ಅಕ್ಷರಶಃ ಕಣ್ಣು ಕುಕ್ಕುವ ಆಕಾಶದ ಬೆಳಕು!! ಜೊತೆಗೆ ಆಕಾಶ ಯಾಕೋ ಸ್ವಲ್ಪ ಕೆಳಗಿದೆ ಅನ್ನುವ ವಿಚಿತ್ರ ಭಾವನೆ. ದಕ್ಷಿಣ ಭೂಗೋಳದಲ್ಲಿರುವುದರಿಂದ ಈ ಭಾವನೆ ಬರುವುದು ಸಹಜ ಎಂದು ಸ್ನೇಹಿತರು ಹೇಳಿದ್ದರು. ಆದರೂ ಕೂಡ, ಬಿಸಿಲಿಗೆ ಬಂದರೆ ಎಲ್ಲರ ಕಣ್ಣಿಗೂ ಕಪ್ಪು ಕನ್ನಡಕ – ಸನ್ನೀಸ್! ಹಾಕಿಕೊಳ್ಳದಿದ್ದರೆ ಕಿರುವಯಸ್ಸಿನಲ್ಲೇ ಕಣ್ಣಿಗೆ ಕ್ಯಾಟರಾಕ್ಟ್ ಪರದೆ ಬರುತ್ತದೆ ಎನ್ನುತ್ತಿದ್ದರು. ಆಸ್ಟ್ರೇಲಿಯಾದ ಆಕಾಶದ ಓಝೋನ್ ವಲಯಕ್ಕೆ ತೂತು ಬಿದ್ದಿದೆ, ಆದ್ದರಿಂದ ನಮ್ಮ ಆಕಾಶ ಸ್ವಲ್ಪ ಕೈಗೆಟಕುವಂತೆ ಇದೆ ಎಂದು ತಮಾಷೆ ಮಾಡುತ್ತಿದ್ದರು. ನಿಜವೇನೋ ಅನ್ನುವಷ್ಟು ಆ ಕೈಗೆಟಕುವ ಆಕಾಶದ ಅನುಭವ ಆಗುತ್ತಿತ್ತು. ಅದರ ಮೇಲೆ ಮರುಭೂಮಿ ವಾತಾವರಣ – ಒಣಹವೆ, ಸಿಹಿನೀರಿನ ಸೆಲೆಗಳು ಮತ್ತು ಮಳೆ ಕಡಿಮೆ, ಬಿಸಿಲು ಮೈಕೈ ಸುಡುತ್ತಾ ಚರ್ಮದ ಕ್ಯಾನ್ಸರ್ ತರುತ್ತದೆ, ದೇಶದ ಉಷ್ಣದ ಬಗ್ಗೆ ಎಲ್ಲರೂ ಕಾಳಜಿ ವಹಿಸದೇ ಇದ್ದರೆ ಅಪಾಯ ಕಟ್ಟಿಟ್ಟದ್ದೇ ಎಂಬ ಮಾತುಗಳು ಸಾಮಾನ್ಯವಾಗಿದ್ದವು.

ಭೂಮಿಗೆ ಕನ್ನ ಕೊರೆದು ನಡೆಸುವ ಗಣಿಗಾರಿಕೆ, ಕಲ್ಲಿದ್ದಲು ಬಳಸುವ ಶಕ್ತಿ ಉತ್ಪಾದನಾ ಘಟಕಗಳು ಮುಂತಾದುವನ್ನು ಕಟ್ಟೆಚ್ಚರದಿಂದ ನಿಯಂತ್ರಿಸಬೇಕು. ಮನುಷ್ಯರ ಚಟುವಟಿಕೆಗಳಿಂದ ಭೂಮಿ ಗ್ರಹದ ವಾತಾವರಣದ ಶಾಖ ಹೆಚ್ಚಿದರೆ ಎಲ್ಲಾ ಜೀವಜಾಲಕ್ಕೂ ಆಪತ್ತು. ಖನಿಜ ಮೂಲದ ಇಂಧನಗಳನ್ನು ಮಿತಿಮೀರಿ ಬಳಸುವುದು ನಮಗೆ ಮುಳುವಾಗುತ್ತದೆ. ಪರ್ಯಾಯ ವಿಧಾನಗಳಿಂದ ಮತ್ತು ಜೈವಿಕ ವಸ್ತುಗಳಿಂದ ಇಂಧನವನ್ನು ತಯಾರಿಸುವ ಕ್ರಮಗಳು ಹೆಚ್ಚಬೇಕು, ಎಂದು ಪರಿಸರವಾದಿಗಳು ಹೇಳುತ್ತಲೇ ಇದ್ದಾರೆ. ಆದರೂ ಗಣಿಗಾರಿಕೆ ತಂದುಕೊಡುವ ಸಂಪತ್ತಿನ ಮೇಲೆ ಇರುವ ಕಣ್ಣುಗಳು, ಮನಸ್ಸುಗಳು ಅವರ ಮಾತನ್ನ ಕೇಳಿಲ್ಲ. ವಿಸ್ತಾರವಾದ ಈ ದೇಶದಲ್ಲಿ ಅದೆಲ್ಲೋ ನಾಲ್ಕಾರು ಕಡೆ ಗಣಿಗಾರಿಕೆ ನಡೆಯುತ್ತಿದ್ದರೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಎನ್ನುವ ನಗರನಿವಾಸಿಗಳ ಉಪೇಕ್ಷೆ, ದಶಕಗಳಿಂದ ಹಾಗೆಯೇ ಇದೆ.

ಹವಾಮಾನ ಬದಲಾವಣೆಯನ್ನು ದೊಡ್ಡ ಸಮಸ್ಯೆಯೆಂದು ಪರಿಗಣಿಸಿ ಜಾಗತಿಕ ಮಟ್ಟದಲ್ಲಿ ನಡೆದಿರುವ ಸಮಾವೇಶಗಳಲ್ಲಿ ಹಲವಾರು ನಡಾವಳಿಕೆಗಳನ್ನು, ಒಪ್ಪಂದಗಳನ್ನೂ ತರಲಾಗಿದೆ. ಒಪ್ಪಂದಗಳ ಪ್ರಕಾರ ಪ್ರತಿಯೊಂದೂ ದೇಶವೂ ಪರಿಸರದ ವಾತಾವರಣದ ತಾಪಮಾನವನ್ನು ಕಡಿಮೆಮಾಡಲು ತತ್ ಕ್ಷಣವೇ ಕ್ರಮಗಳನ್ನು ಕೈಗೊಳ್ಳಬೇಕು. ಇಂಗಾಲಾಮ್ಲದ ಒಸರುವಿಕೆಯನ್ನು ಕೂಡಲೇ ಕಡಿಮೆ ಮಾಡುವಲ್ಲಿ ಎಲ್ಲಾ ದೇಶಗಳ ಸರಕಾರಗಳೂ ಬದ್ಧತೆ ತೋರಬೇಕು ಎಂದೆಲ್ಲಾ ಚರ್ಚೆಗಳು ನಡೆದಿವೆ. ಅದರ ಪ್ರಕಾರ ಆಸ್ಟ್ರೇಲಿಯಾ ಸರ್ಕಾರಗಳು ಬೇರೆ ದೇಶಗಳೊಡನೆ ಸೇರಿಕೊಂಡು, ಇಸವಿ ೨೦೫೦ರೊಳಗೆ ಜಾಗತಿಕ ತಾಪಮಾನವು ೧.೫ ಡಿಗ್ರಿಗಿಂತಲೂ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ವಿದ್ಯುಚ್ಛಕ್ತಿ ಉತ್ಪಾದನೆಯಲ್ಲಿ ಇರುವ ಕಲ್ಲಿದ್ದಲು ಬಳಕೆಯನ್ನು ಸಂಪೂರ್ಣವಾಗಿ (ಹಂತಹಂತವಾಗಿ) ಕೈಬಿಡಬೇಕು.

ಆಸ್ಟ್ರೇಲಿಯಾದ ಆಕಾಶದ ಓಝೋನ್ ವಲಯಕ್ಕೆ ತೂತು ಬಿದ್ದಿದೆ, ಆದ್ದರಿಂದ ನಮ್ಮ ಆಕಾಶ ಸ್ವಲ್ಪ ಕೈಗೆಟಕುವಂತೆ ಇದೆ ಎಂದು ತಮಾಷೆ ಮಾಡುತ್ತಿದ್ದರು. ನಿಜವೇನೋ ಅನ್ನುವಷ್ಟು ಆ ಕೈಗೆಟಕುವ ಆಕಾಶದ ಅನುಭವ ಆಗುತ್ತಿತ್ತು. ಅದರ ಮೇಲೆ ಮರುಭೂಮಿ ವಾತಾವರಣ – ಒಣಹವೆ, ಸಿಹಿನೀರಿನ ಸೆಲೆಗಳು ಮತ್ತು ಮಳೆ ಕಡಿಮೆ, ಬಿಸಿಲು ಮೈಕೈ ಸುಡುತ್ತಾ ಚರ್ಮದ ಕ್ಯಾನ್ಸರ್ ತರುತ್ತದೆ, ದೇಶದ ಉಷ್ಣದ ಬಗ್ಗೆ ಎಲ್ಲರೂ ಕಾಳಜಿ ವಹಿಸದೇ ಇದ್ದರೆ ಅಪಾಯ ಕಟ್ಟಿಟ್ಟದ್ದೇ ಎಂಬ ಮಾತುಗಳು ಸಾಮಾನ್ಯವಾಗಿದ್ದವು.

ಇದೇ ವರ್ಷ ಆಗಸ್ಟ್ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ಹೊಸ ಪ್ರಧಾನಿ ಅವರ ನೇತೃತ್ವದಲ್ಲಿ ಹವಾಮಾನ ಬದಲಾವಣೆಗೆ ಸಂಬಂಧಿಸಿದ ವರದಿಯೊಂದನ್ನು ಬಿಡುಗಡೆ ಮಾಡಿದರು. ವರದಿಯಲ್ಲಿ ಸರಕಾರವು ತಾನು ಇಸವಿ ೨೦೩೦ ರ ವೇಳೆಗೆ ಹೆಚ್ಚುತ್ತಿರುವ ಹವಾಮಾನದ ತಾಪವನ್ನು ನಿಯಂತ್ರಿಸುವ ಬದ್ಧತೆ ತೋರಿಲ್ಲ, ಎಂದು ಜನರು ಕೋಪಿಸಿಕೊಂಡರು. ಇಸವಿ ೨೦೫೦ ರ ವೇಳೆಗೆ ಖನಿಜ-ಆಧಾರಿತ ಇಂಧನ ಉತ್ಪಾದನೆಯನ್ನು ಸಂಪೂರ್ಣವಾಗಿ ತ್ಯಜಿಸಿ ಪುನರ್ಬಳಕೆಯಾಗುವ ಇಂಧನಗಳನ್ನು ನಾವೆಲ್ಲರೂ ಬಳಸಬೇಕು ಎಂದು ಒಂದಷ್ಟು ಜನರು ಮಾತನಾಡಿಕೊಂಡರು. ಅದಾದ ಹೊಸತರಲ್ಲೇ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಅದಾನಿ ಸಂಸ್ಥೆಯ ಕಲ್ಲಿದ್ದಲ ಗಣಿಗಾರಿಕೆ ಗುತ್ತಿಗೆ ವಿಷಯ ಮುಕ್ತಾಯಕ್ಕೆ ಬಂತು.

ಸರ್ಕಾರದ ಪಾತ್ರ ಮತ್ತು ಧನಬೆಂಬಲವಿಲ್ಲದಿದ್ದರೂ ತಾನು ಗಣಿಗಾರಿಕೆಯನ್ನು ಕೈಗೆತ್ತಿಕೊಂಡು ಮುಂದುವರೆಯುತ್ತೇವೆ ಎಂದು ಅದಾನಿ ಸಂಸ್ಥೆ ಹೇಳಿಕೊಂಡಿತು. ವರ್ಷಗಳಿಂದ ಇದರ ಬಗ್ಗೆ ಚಿಂತಿತರಾಗಿದ್ದ ಪರಿಸರವಾದಿ ಗುಂಪುಗಳು ನಿರಾಶರಾದರು. ಇದೆಲ್ಲದರ ಪರಿಣಾಮ – ಮಕ್ಕಳು ಶಾಲೆ ತ್ಯಜಿಸಿ ಬೀದಿಗಿಳಿದು, ರಾಜಕೀಯ ನಾಯಕರೇ ನಮ್ಮ ಕಡೆ ನೋಡಿ ಅಂದರು. ನೀವು ನಮ್ಮ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿಲ್ಲ, ಕಾಳಜಿ ವಹಿಸುತ್ತಿಲ್ಲ. ಹಾಗಾಗಿ ನಾವು ನಮ್ಮ ಬಗ್ಗೆ ಬೀದಿಯಲ್ಲಿ ನಿಂತು ಮಾತನಾಡಬೇಕಿದೆ ಎನ್ನುತ್ತಾ ಪ್ರಧಾನಿಗೆ ಬಿಸಿ ಮುಟ್ಟಿಸಿದರು.

ಬೀದಿಗಿಳಿದ ಮಕ್ಕಳ ಬೇಡಿಕೆಗಳು ಮೂರಿದ್ದವು. ಅದಾನಿ ಸಂಸ್ಥೆ ಯೋಜಿಸಿರುವ ಕಲ್ಲಿದ್ದಲ ಗಣಿಗಾರಿಕೆಯನ್ನು ಕೂಡಲೇ ಕೈಬಿಡಬೇಕು; ಭೂಮಿಯ ಹವಾಮಾನದಲ್ಲಿ ಹೆಚ್ಚುತ್ತಿರುವ ಬಿಸಿಯನ್ನು ಕಡಿಮೆ ಮಾಡಲು ಈಗೆಂದರೆ ಈಗಲೇ ಕ್ರಮಗಳನ್ನ ಸರ್ಕಾರ ಜಾರಿಗೊಳಿಸಬೇಕು; ಖನಿಜ ಇಂಧನಗಳ ಬದಲು ಪುನರ್ಬಳಕೆ ಇಂಧನಗಳನ್ನು ಬಳಸುತ್ತೀವಿ ಎಂದು ಕಟಿಬದ್ಧರಾಗಬೇಕು. ಹೆಚ್ಚಿನ ಮಾತುಕತೆಗಾಗಿ ಕೆಲಮಕ್ಕಳು ಮತ್ತೊಂದು ಹೆಜ್ಜೆಯನ್ನೂ ಇಟ್ಟರು. ದೇಶದ ರಾಜಧಾನಿ ಕ್ಯಾನ್ಬೆರಾಗೆ ಹೋಗಿ ಪಾರ್ಲಿಮೆಂಟ್ ನಲ್ಲಿ ಪ್ರಧಾನಿಯನ್ನು ಭೇಟಿಯಾದರು. ಮಕ್ಕಳ ಮಾತನ್ನು ಅವರು ಕೇಳಿಸಿಕೊಂಡು ಹಾಗೋ ಹೀಗೋ ಅನ್ನೋ ಆಶ್ವಾಸನೆಯನ್ನ ಕೊಡುವ ಮಾತುಕತೆ ಇನ್ನೂ ನಡೆಯುತ್ತಲೇ ಇದೆ.


ನನ್ನ ಸ್ನೇಹಿತರೊಬ್ಬರು ಅವರ ಮಗಳೊಂದಿಗೆ ನವೆಂಬರ್ ೩೦ರಂದು ಜರುಗಿದ ಮಕ್ಕಳ ಚಳವಳಿಗೆ ಹೋಗಿದ್ದರು. ಮಗಳು ಮತ್ತು ಅವಳ ಸ್ನೇಹಿತರು ಪ್ರಗತಿಪೂರಕ ಆಲೋಚನೆಗಳನ್ನು ಮತ್ತು ದೃಷ್ಟಿಕೋನಗಳನ್ನು ಹೊಂದಿರುವವರು. ದೇಶಾದ್ಯಂತ ಚಳವಳಿ ನಡೆಸಿದ ಮಕ್ಕಳ ನಾಯಕರುಗಳು ಹೇಳಿದಂತೆ ಆ ಮಗಳೂ ಕೂಡ ಹೇಳಿದ್ದು, ಅವರೆಲ್ಲ (ಅಂದರೆ ಮಕ್ಕಳು) ಇಂದಿನ ಪ್ರಜೆಗಳು, ಇವತ್ತಿನ ಬಹುತೇಕ ಸಮಸ್ಯೆಗಳು ದೊಡ್ಡವರನ್ನು ಬಾಧಿಸುವಂತೆ ಮಕ್ಕಳನ್ನೂ ತೊಂದರೆಗೀಡುಮಾಡಿವೆ. ಹವಾಮಾನ ಬದಲಾವಣೆ (ಏರುತ್ತಿರುವ ಶಾಖ) ಮತ್ತು ವೈಪರೀತ್ಯಗಳ ಪರಿಸ್ಥಿತಿ ಇಸವಿ ೨೦೩೦ ಮತ್ತು ೨೦೫೦ ರ ವೇಳೆಗೆ ಸುಧಾರಿಸಲೇಬೇಕು. ಏಕೆಂದರೆ ಈಗ ನಾವು ಮಕ್ಕಳು. ಮುಂದೆ ನಾವೆಲ್ಲಾ ವಯಸ್ಕರಾಗಿ ನಮ್ಮ ಮಕ್ಕಳು ಬೆಳೆಯುತ್ತಿರುತ್ತಾರೆ. ಅಂದರೆ ನಮ್ಮ ಮುಂದಿನ ಪೀಳಿಗೆ ಕಣ್ಣ ಮುಂದಿರುತ್ತದೆ. ನಾವು ಈಗಲೂ ಪ್ರಜೆಗಳೇ, ಮುಂದೆಯೂ ಪ್ರಜೆಗಳೇ. ಈಗ ನಾವು ಕ್ರಮ ಕೈಗೊಳ್ಳದಿದ್ದರೆ ಈ ದಿನವೂ ಕೆಟ್ಟದ್ದೇ, ಮುಂದಿನ ದಿನಗಳಂತೂ ಇನ್ನೂ ಭಯಂಕರ. ನಮ್ಮ ಸರ್ಕಾರಗಳು, ಜನ ಪ್ರತಿನಿಧಿಗಳು ಈ ದಿನವನ್ನೂ, ನಾಳೆಯನ್ನೂ ಎರಡನ್ನೂ ಕುರಿತು ಆಲೋಚಿಸಬೇಕು, ಅಲ್ಲವೇ. ಅವರು ಈಗ ನಿಷ್ಕ್ರಿಯರಾದರೆ ನಮ್ಮ ಮತ್ತು ಮುಂದಿನ ಪೀಳಿಗೆಗಳ ಭವಿಷ್ಯವೇನಾಗುತ್ತದೆ, ಎಂದು ತನ್ನ ವಾದವನ್ನು ಮುಂದಿಟ್ಟಳು. ಹೌದು ಅನ್ನದೆ ಸುಮ್ಮನಿರಲಾದೀತೇ?! ಪ್ರಧಾನಮಂತ್ರಿಗಳ ಕೋಪತಾಪ, ಗುಡುಗು ಎಲ್ಲವೂ ಈ ಸತ್ವವಿರುವ ಮಾತುಗಳ ಮುಂದೆ ನಿಲ್ಲದೆ ಹೋಯಿತು.

ಮಕ್ಕಳು ಶಾಲೆ ತ್ಯಜಿಸಿ ಬೀದಿಗಿಳಿದು, ರಾಜಕೀಯ ನಾಯಕರೇ ನಮ್ಮ ಕಡೆ ನೋಡಿ ಅಂದರು. ನೀವು ನಮ್ಮ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿಲ್ಲ, ಕಾಳಜಿ ವಹಿಸುತ್ತಿಲ್ಲ. ಹಾಗಾಗಿ ನಾವು ನಮ್ಮ ಬಗ್ಗೆ ಬೀದಿಯಲ್ಲಿ ನಿಂತು ಮಾತನಾಡಬೇಕಿದೆ ಎನ್ನುತ್ತಾ ಪ್ರಧಾನಿಗೆ ಬಿಸಿ ಮುಟ್ಟಿಸಿದರು.

ಅಂದ ಹಾಗೆ ಬರೀ ಶಾಖ, ತಾಪಮಾನ ಅಷ್ಟೇ ಅಲ್ಲ, ಹವಾಮಾನ ಬದಲಾವಣೆಯಿಂದ ಉಂಟಾಗುವ ದೈಹಿಕ, ಮಾನಸಿಕ, ಆರ್ಥಿಕ ಪರಿಣಾಮಗಳ ಕುರಿತೂ ಕೂಡ ಈ ಮಕ್ಕಳು ಮಾತನಾಡುತ್ತಿದ್ದಾರೆ. ನಮ್ಮ ಸಂವಿಧಾನ ವ್ಯವಸ್ಥೆ ಮಕ್ಕಳಿಗೆ ಮತ ಚಲಾಯಿಸುವ ಹಕ್ಕನ್ನು ಕೊಟ್ಟಿಲ್ಲ. ಆದರೇನಂತೆ ನಾವು ಮಾತನಾಡುತ್ತಿರುವುದು ಮಕ್ಕಳ ಹಕ್ಕುಗಳ ಕುರಿತು. ಅಲ್ಲಿ ಆ ಸ್ವೀಡನ್ ದೇಶದಲ್ಲಿ ನೋಡಿ – ಗ್ರೇಟ ತನ್ಬರ್ಗ್ ಎಂಬ ೧೫ ವರ್ಷ ವಯಸ್ಸಿನ ಹುಡುಗಿ ಸತತವಾಗಿ ಪ್ರಯತ್ನಿಸಿ, ಕೆಲ ಶುಕ್ರವಾರಗಳಂದು ಶಾಲೆಯನ್ನು ಬಹಿಷ್ಕರಿಸಿ, ಚಳಿಮಳೆಗಾಳಿ ಲೆಕ್ಕಿಸದೆ ಪಾರ್ಲಿಮೆಂಟ್ ಹೊರಗೆ ನಿಂತು ತನ್ನ ದೇಶದ ಸರ್ಕಾರ ಹವಾಮಾನ ಬದಲಾವಣೆ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುವಂತೆ ಹೋರಾಡಿದ್ದಾಳೆ. ಅವಳೇ ನಮಗೆಲ್ಲಾ ಸ್ಪೂರ್ತಿ, ಎಂದಿದ್ದಾರೆ ಆಸ್ಟ್ರೇಲಿಯನ್ ಮಕ್ಕಳು.

ಜಾಗತಿಕ ಮಟ್ಟದ ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನು ಹೆಸರಿಸಿ, ಮಕ್ಕಳ ಹಕ್ಕುಗಳು ಎಂಬ ಶಾಂತಿಯುತ, ಸಂವಿಧಾನಾತ್ಮಕ ಆಯುಧವನ್ನು ಈ ಮಕ್ಕಳು ಕೈಗೆತ್ತಿಕೊಂಡು ಇವತ್ತಿನ ವಾಸ್ತವತೆ ಮತ್ತು ಮುಂದಿನ ಭವಿಷ್ಯದ ಬಗ್ಗೆ ಅದೆಷ್ಟು ಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ! ಕಳೆದ ಹಲವಾರು ದಶಕಗಳಿಂದ ನಮ್ಮ ಕರ್ನಾಟಕದಲ್ಲೂ ಅನೇಕ ಸಮುದಾಯ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು, ಅಷ್ಟೇ ಅಲ್ಲ ಮಕ್ಕಳೂ ಕೂಡ ಮಕ್ಕಳ ಹಕ್ಕುಗಳ ಬಗ್ಗೆ ಗಮನಾರ್ಹ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಒಂದಲ್ಲ ಎರಡಲ್ಲ – ಮಕ್ಕಳಿಗೆ ಸಂಬಂಧಪಟ್ಟ ಬಹುತೇಕ ವಿಷಯಗಳ ಬಗ್ಗೆ ಟೊಂಕಕಟ್ಟಿಕೊಂಡು ಅವಿರತವಾಗಿ ದುಡಿಯುತ್ತಿದ್ದಾರೆ.

ಸಾಕ್ಷರತೆ, ಶಿಕ್ಷಣ, ಮಕ್ಕಳನ್ನು ಬಲವಂತವಾಗಿ ದುಡಿಮೆಗೆ ದೂಡಿರುವ ವಿರುದ್ಧ, ಮಕ್ಕಳ ಗುಲಾಮಗಿರಿಯ ವಿರುದ್ಧ, ದುಡಿಮೆಯಲ್ಲಿರುವ ಮಕ್ಕಳಿಗೆ ಕೊಡಬೇಕಾದ ನ್ಯಾಯಯುತ ಬೆಲೆ, ಹೆಣ್ಣುಮಕ್ಕಳ ಸ್ಥಾನಮಾನ ಸುಧಾರಣೆ, ಭ್ರೂಣಹತ್ಯೆಯ ವಿರುದ್ಧ ಕೆಲಸ, ಶಾಲೆಗಳು ಸಮರ್ಪಕವಾಗಿ ಕೆಲಸಮಾಡಬೇಕೆಂಬುದು, ಶಾಲೆಯಲ್ಲಿ ಶೌಚಾಲಯಗಳು, ಕುಡಿಯುವ ನೀರಿನ ಸೌಲಭ್ಯ, ಮಕ್ಕಳ ಮೇಲಿನ ದೌರ್ಜನ್ಯಗಳ ತಡೆಗಟ್ಟುವಿಕೆ, ಪರಿಸರವನ್ನು ರಕ್ಷಿಸಬೇಕು ಎನ್ನುವ ಆಗ್ರಹ – ಎಷ್ಟೆಲ್ಲಾ ಸಮಸ್ಯೆಗಳನ್ನು ನಿವಾರಿಸಲು, ಬಗೆಹರಿಸಲು ಸಾವಿರಾರು ಜನ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದಾರೆ.

ಭಾರತದ ಕೋಟಿಗಟ್ಟಲೆ ಮಕ್ಕಳಿಗೆ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಸ್ವಾಭಾವಿಕವಾಗಿ ಸಿಗಬೇಕಿದ್ದ ಅನೇಕ ಹಕ್ಕುಗಳಿಂದ ಅವರು ವಂಚಿತರಾಗಿದ್ದಾರೆ ಎನ್ನುವುದನ್ನು ಅಂತಾರಾಷ್ಟ್ರೀಯ ಮಟ್ಟದ ಮಾನವ ಅಭಿವೃದ್ಧಿ ಸೂಚ್ಯಂಕ ಮತ್ತೆ ಮತ್ತೆ ಹೇಳಿದೆ. ಮಕ್ಕಳ ಹಕ್ಕುಗಳ ಕಾರ್ಯಕರ್ತರೂ ಹೇಳುತ್ತಿದ್ದಾರೆ. ಉದಾಹರಣೆಗಳನ್ನು, ಅಂಕಿಅಂಶಗಳನ್ನು ಸರಕಾರದ ಮತ್ತು ಜನಪ್ರತಿನಿಧಿಗಳ ಮುಂದೆ ಬಿಚ್ಚಿಟ್ಟು ತೋರಿ ಗಮನ ಕೊಡಬೇಕೆಂದು ವಿವರಿಸುತ್ತಿದ್ದಾರೆ. ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆ.

ಭಾರತದಲ್ಲಿ ಜ್ವಲಂತವಾಗಿರುವ ಅನೇಕಾನೇಕ ಮಕ್ಕಳ ಸಮಸ್ಯೆಗಳಿಗೆ ಹೋಲಿಸಿದರೆ ಕೆಲ ಪಾಶ್ಚಾತ್ಯ ಸಮಾಜಗಳಲ್ಲಿ ಮಕ್ಕಳು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಅವರ ಹಕ್ಕುಗಳನ್ನು ಪ್ರತಿನಿತ್ಯವೂ (ಬಹುತೇಕ ವಿಷಯಗಳಲ್ಲಿ) ನಿಶ್ಚಿಂತೆಯಿಂದ ಅನುಭವಿಸುತ್ತಿರುವ ಆಸ್ಟ್ರೇಲಿಯನ್ ಮಕ್ಕಳು ಈಗ ಎಲ್ಲರ ಪರವಾಗಿ, ಎಲ್ಲರಿಗೋಸ್ಕರ, ಎಲ್ಲರ ಭವಿಷ್ಯವನ್ನು ಕುರಿತು ಆಲೋಚಿಸುತ್ತಿರುವುದು ಆರೋಗ್ಯಕರ ಸೂಚನೆ. ಅವರ-ನಮ್ಮ ನಾಳೆ ನಮ್ಮೆಲ್ಲರ ಇಂದಿನ ಜೀವನಶೈಲಿಯಲ್ಲಿ, ನಿರ್ಧಾರಗಳಲ್ಲಿ, ಕ್ರಿಯೆಯಲ್ಲಿ ಇದೆ ಅನ್ನುವುದನ್ನು ಮಕ್ಕಳು ಸ್ಪಷ್ಟಪಡಿಸಿದ್ದಾರೆ. ಒಂದು ಕಡೆ ಮಕ್ಕಳ ಭವಿಷ್ಯದ ವಿಷಯ. ಇನ್ನೊಂದು ಕಡೆ ಈ ಇಂದಿನ ಮಕ್ಕಳಿಂದ ದೊಡ್ಡವರು ಅವರುಗಳ ಮುಂದಿನ ಜೀವನದ ಅಂತ್ಯಗಾಲದಲ್ಲಿ ಸ್ವಲ್ಪ ‘ತಣ್ಣ’ಗಿರಬಹುದೇನೋ ಎಂಬ ಆಶೆ ಹುಟ್ಟಿದೆ!