ನಕ್ಷತ್ರಾಕಾರದ ತ್ರಿಕೂಟಾಚಲ ದೇಗುಲ. ಮುಖ್ಯ ಗರ್ಭಗುಡಿಗೆ ಮಾತ್ರ ಶಿಖರವಿದೆ. ಗರ್ಭಗುಡಿಯಲ್ಲಿ ಕೇಶವನೂ ಉಳಿದೆರಡು ಗರ್ಭಗುಡಿಗಳಲ್ಲಿ ವೇಣುಗೋಪಾಲ, ಲಕ್ಷ್ಮೀನರಸಿಂಹರೂ ನೆಲೆಸಿದ್ದಾರೆ. ಗರ್ಭಗುಡಿಯ ದ್ವಾರಪಟ್ಟಕದ ಮೇಲಿನ ಕೆತ್ತನೆ ಸೊಗಸಾಗಿದೆ. ಒಳಗುಡಿಯ ಕೋಷ್ಠಗಳಲ್ಲಿ ಗಣೇಶ, ಸರಸ್ವತಿಯರ ವಿಗ್ರಹಗಳಿವೆ. ನವರಂಗದಲ್ಲಿ ತಿರುಗಣೆಯ ಯಂತ್ರದಿಂದ ಕೊರೆದ ಕಂಬಗಳು. ಕಂಬಗಳ ವಿನ್ಯಾಸ ಒಂದಕ್ಕಿಂತ ಒಂದು ಭಿನ್ನ, ವಿಶಿಷ್ಟ ಕೆತ್ತನೆಯಿಂದ ಮನಸೆಳೆಯುವ ಭುವನೇಶ್ವರಿಯ ಕೆತ್ತನೆ ಈ ದೇಗುಲದ ಆಕರ್ಷಣೆಗಳಲ್ಲೊಂದು. ನಡುವಣ ಗರ್ಭಗುಡಿಯ ಮೇಲೆ ಐದು ಸ್ತರದ ಅಲಂಕರಣದ ಗೋಪುರವಿದ್ದು ಮೇಲುಭಾಗದಲ್ಲಿ ಶೋಭಿಸುವ ಕಳಶವಿದೆ.
ಟಿ.ಎಸ್‌. ಗೋಪಾಲ್‌ ಬರೆಯುವ ದೇಗುಲಗಳ ಸರಣಿಯ ಎಂಭತ್ತೊಂದನೆಯ ಕಂತು

 

ಹೊಯ್ಸಳ ರಾಜಧಾನಿ ದ್ವಾರಸಮುದ್ರದ ಸುತ್ತಲಿನ ಅನೇಕ ಊರುಗ್ರಾಮಗಳಲ್ಲಿ ಆಗಿನ ಅರಸರಲ್ಲದೆ ದಣ್ಣಾಯಕರೇ ಮೊದಲಾದ ಜನಪ್ರತಿನಿಧಿಗಳೂ ಸೊಗಸಾದ ದೇವಾಲಯಗಳನ್ನು ಕಟ್ಟಿಸಿ ದತ್ತಿಯನ್ನು ಒದಗಿಸಿದರು. ರಾಜಪ್ರತಿನಿಧಿಗಳ ಈ ಉತ್ಸಾಹಕ್ಕೆ ಇತರ ಕಾರಣಗಳೂ ಇದ್ದವು. ತಂತಮ್ಮ ಗ್ರಾಮಪರಿಸರದಲ್ಲಿ ದೇವಾಲಯವೊಂದನ್ನು ಕಟ್ಟಿಸುವುದರ ಜೊತೆಗೆ ಪೂರಕವಾಗಿ ಕೆರೆಯ ನಿರ್ಮಾಣವೂ, ದೇವಾಲಯದ ನಿರ್ವಹಣೆಗಾಗಿ ಭೂಮಿಕಾಣಿಯೂ ಲಭ್ಯವಾಗುವುದರಿಂದ ಸಂಸ್ಕೃತಿಯ ಉಳಿವಿನೊಡನೆ ಜೀವನಸೌಕರ್ಯವೂ ಹೆಚ್ಚಿದಂತಾಯಿತು, ಜನಪ್ರೀತಿಯ ಜೊತೆಗೆ ರಾಜಾನುಗ್ರಹವೂ ಲಭ್ಯವಾಗುವಂತಾಯಿತು.

ಕ್ರಿ.ಶ. 13ನೆಯ ಶತಮಾನದ ಎರಡನೆಯ ನರಸಿಂಹನೆಂಬ ಹೊಯ್ಸಳ ಅರಸನ ಕಾಲದಲ್ಲಿ ಹಾರನಹಳ್ಳಿಯ ಕೇಶವಗುಡಿಯ ನಿರ್ಮಾಣವಾದ ಹಿನ್ನೆಲೆಯೂ ಹೀಗೆಯೇ. ಆಗ ಈ ಗ್ರಾಮಕ್ಕೆ ಹಾರುವನಹಳ್ಳಿ ಎಂಬ ಹೆಸರಿತ್ತಂತೆ. ಪೆದ್ದಣ್ಣ, ಕೇಸಣ್ಣ ಹಾಗೂ ಸೋಮಣ್ಣರೆಂಬ ಹೆಗ್ಗಡೆ ಸೋದರರು ತಮ್ಮ ತಂದೆಯ ನೆನಪಿಗಾಗಿ ಇಲ್ಲಿ ದೇವಾಲಯ ನಿರ್ಮಾಣಕ್ಕೆ ಮುಂದಾದರು. ಇವರ ಉತ್ಸಾಹಕ್ಕೆ ಸ್ಪಂದಿಸಿದ ಊರವರು ದೇಗುಲ ಕಟ್ಟಲು ಅಗತ್ಯವಾದ ಭೂಮಿಯನ್ನು ನೀಡಿದರು. ಸೋದರರ ಅದೃಷ್ಟ ಚೆನ್ನಾಗಿತ್ತು. ಆ ಕಾಲಕ್ಕೆ ಅತ್ಯುತ್ತಮ ಶಿಲ್ಪಿಯೆಂದು ಹೆಸರುಪಡೆದಿದ್ದ ಮಲ್ಲಿತಂಮ ಅಮೃತಾಪುರ, ನುಗ್ಗೇಹಳ್ಳಿ, ಸೋಮನಾಥಪುರಗಳಂಥ ದೇಗುಲಗಳ ನಿರ್ಮಾಣಮಾಡಿದ್ದವನು. ಅಂಥವನು ಈ ದೇವಾಲಯ ನಿರ್ಮಾಣದ ನೇತೃತ್ವವನ್ನು ವಹಿಸಿಕೊಳ್ಳಲು ಒಪ್ಪಿಕೊಂಡ ಮೇಲೆ ಇನ್ನೇನು? ಕ್ರಿ.ಶ 1234ರಲ್ಲಿ ಹಾರನಹಳ್ಳಿಯಲ್ಲಿ ಚನ್ನಕೇಶವ ಗುಡಿಯ ನಿರ್ಮಾಣ ಸಾಂಗವಾಗಿ ನೆರವೇರಿದ್ದೇ ಅಲ್ಲದೆ, ಊರಿನ ಮತ್ತೊಂದು ಬದಿಯಲ್ಲಿ ಸೋಮೇಶ್ವರ ದೇಗುಲವನ್ನೂ ಕಟ್ಟಲಾಯಿತು.


ಹೆಗ್ಗಡೆ ಸೋದರರ ಸಾಧನೆಗೆ ಮೆಚ್ಚಿದ ದೊರೆ ನರಸಿಂಹನು ದೇವಾಲಯಕ್ಕಾಗಿ ಹೆಚ್ಚಿನ ಭೂಮಿಯನ್ನೂ ದತ್ತಿಯನ್ನೂ ನೀಡಿದ್ದೂ ಆಯಿತು. ಅರಸನ ಸೋದರಿ ಸೋಮಲದೇವಿ ಎಂಬಾಕೆ ಇಲ್ಲಿ ಸೋಮನಾಥ ಅಗ್ರಹಾರವನ್ನು ನಿರ್ಮಿಸಿದಳಂತೆ.

ಹಾಸನದಿಂದ ಅರಸೀಕೆರೆಗೆ ಹೋಗುವ ಹೆದ್ದಾರಿಯಲ್ಲಿ ಬಾಗೇಶಪುರ ದಾಟಿ ಐದು ಕಿಲೋಮೀಟರ್ ಮುಂದಕ್ಕೆ ಸಿಗುವ ಹಾರನಹಳ್ಳಿಗೆ ಅರಸೀಕೆರೆಯಿಂದ ಎಂಟು ಕಿಲೋಮೀಟರುಗಳಷ್ಟು ದೂರ.

ಚನ್ನಕೇಶವ ದೇವಾಲಯದ ಆವರಣ ಸಾಕಷ್ಟು ವಿಶಾಲವಾಗಿದೆ. ಢಾಳವಾಗಿ ಮೆರೆಯುವ ಹಸಿರುಹುಲ್ಲಿನ ಹಾಸು. ನಾಲ್ಕಡಿ ಎತ್ತರದ ಜಗತಿಯ ಮೇಲೆ ಕಟ್ಟಿರುವ ಆಕರ್ಷಕ ಕಟ್ಟಡ. ಗುಡಿಯೊಳಕ್ಕೆ ಹೋಗಲು ನಾಲ್ಕಾರು ಮೆಟ್ಟಿಲು ಹತ್ತಬೇಕು. ಸೋಪಾನದ ಎರಡೂ ಬದಿಗೆ ಕಿರುದೇವಕೋಷ್ಠಗಳು ಇದ್ದು ಗುಡಿಯ ಸುತ್ತ ಬರಲು ವಿಶಾಲವಾದ ಪ್ರದಕ್ಷಿಣಾಪಥವಿದೆ. ಕೆಳಗೋಡೆಯಲ್ಲಿ ಆರು ಸಾಲುಗಳ ಅಲಂಕಾರಪಟ್ಟಿಕೆಗಳ ಜೊತೆ  ಆನೆ, ಯಕ್ಷಯಕ್ಷಿಣಿಯರು, ಕುದುರೆ, ಹೂಬಳ್ಳಿಗಳು, ಮಕರ ಹಾಗೂ ಹಂಸ, ದೇಗುಲವು ಎರಡು ಸ್ತರದ ಎತ್ತರವಾದ ಕಟ್ಟಡವೆಂಬ ಭ್ರಮೆ ಹುಟ್ಟಿಸುವಂತೆ ನಡುಗೋಡೆಯಲ್ಲಿ ಕಿರುಸೂರು(ಕೂಟಛಾದ್ಯ) ಇದೆ.


ಭಿತ್ತಿಯ ಮೇಲುಭಾಗದಲ್ಲಿ ಗೋಪುರಗಳೂ ಕಿರುಗಂಬಗಳೂ ಮೇಲುಸೂರಿನವರೆಗೆ ವಿಸ್ತರಿಸಿವೆ. ಕೆಳಭಿತ್ತಿಯ ಮೇಲೆ ದೇವಾಲಯದ ಸುತ್ತಲೂ ಆಕರ್ಷಕ ಶಿಲ್ಪಗಳಿವೆ. ಇವರಲ್ಲಿ ನಾಟ್ಯ ಗಣಪತಿ, ನಾಟ್ಯ ಸರಸ್ವತಿ, ಭೂದೇವಿಯನ್ನು ರಕ್ಕಸನಿಂದ ಕಾಪಾಡಿ ತರುತ್ತಿರುವ ವರಾಹಾವತಾರಿ ವಿಷ್ಣು, ಭೈರವ, ಕಾಳಿಂಗ ಮರ್ದನ ಕೃಷ್ಣ, ಮಹಾವಿಷ್ಣುವಿನ ಬಗೆಬಗೆಯ ರೂಪಗಳು ವಾದ್ಯಗಾರರು, ದೇವಪರಿಜನರು, ಹನುಮ ಗರುಡರು, ನರಸಿಂಹನೂ ಸೇರಿದಂತೆ ಸ್ಥಾನಕ ಅಂದರೆ ನಿಂತ ಸ್ಥಿತಿಯಲ್ಲಿರುವ ವಿಷ್ಣುವಿನ ದಶಾವತಾರರೂಪಗಳು, ತ್ರಿವಿಕ್ರಮ, ಮಹಿಷಮರ್ದಿನಿ, ನಾಟ್ಯಲಕ್ಷ್ಮಿ, ಯೋಗಾನರಸಿಂಹ ಮೊದಲಾದವರು ಕಂಡುಬರುತ್ತಾರೆ.

ನಕ್ಷತ್ರಾಕಾರದ ತ್ರಿಕೂಟಾಚಲ ದೇಗುಲ. ಮುಖ್ಯ ಗರ್ಭಗುಡಿಗೆ ಮಾತ್ರ ಶಿಖರವಿದೆ. ಗರ್ಭಗುಡಿಯಲ್ಲಿ ಕೇಶವನೂ ಉಳಿದೆರಡು ಗರ್ಭಗುಡಿಗಳಲ್ಲಿ ವೇಣುಗೋಪಾಲ, ಲಕ್ಷ್ಮೀನರಸಿಂಹರೂ ನೆಲೆಸಿದ್ದಾರೆ. ಗರ್ಭಗುಡಿಯ ದ್ವಾರಪಟ್ಟಕದ ಮೇಲಿನ ಕೆತ್ತನೆ ಸೊಗಸಾಗಿದೆ. ಒಳಗುಡಿಯ ಕೋಷ್ಠಗಳಲ್ಲಿ ಗಣೇಶ, ಸರಸ್ವತಿಯರ ವಿಗ್ರಹಗಳಿವೆ. ನವರಂಗದಲ್ಲಿ ತಿರುಗಣೆಯ ಯಂತ್ರದಿಂದ ಕೊರೆದ ಕಂಬಗಳು. ಕಂಬಗಳ ವಿನ್ಯಾಸ ಒಂದಕ್ಕಿಂತ ಒಂದು ಭಿನ್ನ, ವಿಶಿಷ್ಟ ಕೆತ್ತನೆಯಿಂದ ಮನಸೆಳೆಯುವ ಭುವನೇಶ್ವರಿಯ ಕೆತ್ತನೆ ಈ ದೇಗುಲದ ಆಕರ್ಷಣೆಗಳಲ್ಲೊಂದು. ನಡುವಣ ಗರ್ಭಗುಡಿಯ ಮೇಲೆ ಐದು ಸ್ತರದ ಅಲಂಕರಣದ ಗೋಪುರವಿದ್ದು ಮೇಲುಭಾಗದಲ್ಲಿ ಶೋಭಿಸುವ ಕಳಶವಿದೆ.

(ಫೋಟೋಗಳು: ಲೇಖಕರವು)

ಗುಡಿಯಿಂದ ಹೊರಬರುವಾಗ ಒಂದು ಬದಿಯಲ್ಲಿ ಪುಸ್ತಕಗಳ ಕಪಾಟು ಕಂಡಿತು. ಏನೆಂದು ನೋಡುವಾಗ  ನಾಡಿನ ಹಲವು ದೇಗುಲಗಳ ಪರಿಚಯ, ಶಿಲ್ಪಕಲೆ, ಹೊಯ್ಸಳ ವಾಸ್ತುಶಿಲ್ಪ ಮೊದಲಾದವುಗಳಿಗೆ ಸಂಬಂಧಿಸಿದ ಹಲವು ಗ್ರಂಥಗಳು ಕಂಡವು. ತಮ್ಮ ಸ್ವಂತ ಹಣದಿಂದ ಇವನ್ನೆಲ್ಲ ಕೊಂಡುತಂದ ಅರ್ಚಕ ನಾಗೇಂದ್ರರಿಗೆ ದೇಗುಲಕ್ಕೆ ಬರುವವರಲ್ಲಿ ಒಬ್ಬಿಬ್ಬರಾದರೂ ಈ ಪುಸ್ತಕಗಳ ಹಾಳೆ ಮೊಗುಚಿ ನೋಡಿ ಆಸಕ್ತಿ ತೋರಿದರೆ ಸಾಕು ಎಂಬ ನಿರೀಕ್ಷೆ.


ಈ ದೇಗುಲಗಳನ್ನು ಕಟ್ಟುವ ಕಾಲದಲ್ಲಿ ಜನಮನದಲ್ಲಿದ್ದ ಅಭಿಮಾನ ಹುರುಪುಗಳು ಈ ಪುರಾತನ ಸ್ಮಾರಕಗಳನ್ನು  ಉಳಿಸಿಕೊಳ್ಳಬೇಕಾದ ಆಧುನಿಕರಲ್ಲಿ ಕಿಂಚಿತ್ತಾದರೂ ಕಂಡೀತೇ ಎಂಬ ಅವರ ಹಂಬಲ ನಿಜವಾಗಲೆಂದು ಆಶಿಸೋಣ.