ರಂಗಸ್ವಾಮಣ್ಣ ಮಾವನ ಬಗೆಗೆ ಕೊಟ್ಟಿದ್ದ ಬಿಲ್ಡಪ್‌ನಿಂದ ರೂಮಿನವರಾದ ನಾವಷ್ಟೆ ಅಲ್ಲದೆ ಅಕ್ಕಪಕ್ಕದವರೂ ಸೈಲೆಂಟಾಗಿದ್ದರು. ಗಂಟೆ ಗಟ್ಟಲೆ ಇದ್ದ ತಿಮ್ಮರಾಯಪ್ಪನವರು ಬಹಳ ಹೊತ್ತು ಭಾಮೈದುನನನ್ನು ಮಾತ್ರವಲ್ಲದೆ ನಮ್ಮನ್ನೂ ವಿಚಾರಿಸಿಕೊಂಡರು. ಕುಂದೂರು ತಿಮ್ಮಯ್ಯನವರ ಮಗ ಮತ್ತು ಭಾಮೈದ ಎಂದು ತಿಳಿದ ನಂತರ ನಮ್ಮನ್ನೂ ಕಾಳಜಿಯಿಂದ ಮಾತಾಡಿಸಿದರು. ಭಾಮೈದನ ವಿದ್ಯಾಭ್ಯಾಸದ ಸ್ಥಿತಿಗತಿಯನ್ನ ಒಂದಷ್ಟು ಒಳಹೊಕ್ಕೆ ಕೆದಕಿದ ನಂತರವೂ ಜೋಬಿಗೆ ಕೈ ಹಾಕಿ ಏನನ್ನೂ ತೆಗೆದಿದ್ದು ಕಾಣಲಿಲ್ಲ. ಹೊರಡಲು ಸಿದ್ಧರಾದ ತಿಮ್ಮರಾಯಪ್ಪನವರನ್ನ ಬೀಳ್ಕೊಡಲು ನಾವೂ ಕೆಳಗಿಳಿದೆವು.
‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಬರೆದ ಹದಿನಾರನೆಯ ಕಂತು

ರಂಗಸ್ವಾಮಿಯ ತಾಯಿಯ ತಮ್ಮನಾದ ತಿಮ್ಮರಾಯಪ್ಪನವರು ಮೈಸೂರು ವಿಶ್ವವಿಧ್ಯಾನಿಲಯದಲ್ಲಿ ಕಾಮರ್ಸ್ ಪ್ರೊಫೆಸರ್ ಆಗಿದ್ದರು. ಅವರು ವರ್ಷಕ್ಕೋ ಆರು ತಿಂಗಳಿಗೋ ಭಾಮೈದುನನ ಓದನ್ನ ವಿಚಾರಿಸಿಕೊಳ್ಳಲು ಬರುತ್ತಿದ್ದರು. ಅಂತೆಯೇ ಒಮ್ಮೆ ರಂಗಸ್ವಾಮಿಗೆ ನಾಳೆ ಮಾವ ಬರುತ್ತಾರೆಂಬ ಸುದ್ದಿ ಸಿಕ್ಕಿತ್ತು. ಆತ ಮಾವನಿಗೆ ತಾನು ಶ್ರದ್ಧೆಯಿಂದ ಓದುತ್ತಿದ್ದೇನೆಂದು ತೋರಿಸಿಕೊಳ್ಳಬೇಕಿತ್ತು. ಅಕಸ್ಮಾತ್ ತಾನು ಹಲವು ಸಬ್ಜೆಕ್ಟ್‌ಗಳನ್ನ ಉಳಿಸಿಕೊಂಡಿರುವುದಾಗಲಿ, ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದಾಗಲೀ ತಿಳಿಯಿತೆಂದರೆ ಮಾವನಿಂದ ಸಿಗಬಹುದಾದ ಆರ್ಥಿಕ ನೆರವು ನಿಂತು ಹೋಗುವ ಸಾಧ್ಯತೆ ಇತ್ತು. ಅದಕ್ಕಾಗಿ ರಂಗಸ್ವಾಮಣ್ಣ ಅಂದು ವಿಶೇಷವಾಗಿ ತಯಾರಿ ನಡೆಸಿದ್ದ. ಮೊದಲಿಗೆ ಸ್ನೇಹಿತ ಕೃಷ್ಣಮೂರ್ತಿಗೆ ಹೇಳಿ ಆ ದಿನದ ಮಟ್ಟಿಗೆ ಬೀಡಿ ಸೇದುವುದನ್ನ ನಿಷೇಧಿಸಿದ್ದ. ಕಿರಿಯರಾದ ನಮಗೆ ಅಚ್ಚುಕಟ್ಟಾಗಿ ಕಸ ಹೊಡೆಯಲು ನೇಮಿಸಿದ್ದ. ಆತನೂ ಬೇಗನೆ ಸ್ನಾನ ಮುಗಿಸಿಕೊಂಡು ಬಂದು ತನ್ನ ಟೇಬಲ್ ಮೇಲೆ ದೊಪ್ಪ ಗಾತ್ರದ ಹಲವು ಪುಸ್ತಕಗಳನ್ನ ಜೋಡಿಸಿಕೊಂಡ. ಸಾಕಷ್ಟು ವರ್ಕ್ ಮಾಡಿರುವುದು ಮಾವನ ಕಣ್ಣಿಗೆ ರಾಚುವಂತೆ ಮಾಡಲು ಅಕ್ಕ ಪಕ್ಕದ ಸ್ನೇಹಿತರು ಮಾಡಿ ಬಿಸಾಕಿರುವ ವರ್ಕ್ ಶೀಟ್‌ಗಳನ್ನೆಲ್ಲ ತಂದು ತನ್ನ ಟೇಬಲ್ ಕೆಳಗಿನ ಡಸ್ಟ್ ಬಿನ್‌ಗೆ ತುಂಬಿಕೊಂಡ. ಮಾವನಿಂದ ಹೊಸ ಬಟ್ಟೆ ಕೊಡಿಸಿಕೊಳ್ಳುವ ಆಲೋಚನೆ ಇದ್ದುದರಿಂದ ಇನ್ನೂ ಹಳೆಯದಾದ, ಅಲ್ಲಲ್ಲೆ ಅರಿದು ಹೋಗಿರುವ ಅಂಗಿಯನ್ನು ತೊಟ್ಟು ಟೇಬಲ್‌ಗೆ ಓದಲು ಕುಳಿತ. ಮಾವನ ಆಗಮನವನ್ನ ಪತ್ತೆ ಹಚ್ಚಲು ಗೇಟ್ ಕಡೆಗೆ ಗಮನ ಹರಿಸುತ್ತಿರುವಂತೆ ಒಬ್ಬನನ್ನ ನೇಮಿಸಿದ್ದ.

ಎಷ್ಟೊತ್ತಾದರೂ ಬಾರದ ಮಾವನನ್ನು ನೋಡಲು ತಾನೆ ಕೆಲವೊಮ್ಮೆ ಹೊರ ಬಂದು ನೋಡಿಕೊಂಡು ಹೋಗುತ್ತಿದ್ದ. ಎಲ್ಲದ್ದಕ್ಕಿಂತ ಹೆಚ್ಚಿನದ್ದಾಗಿ ಗೂಳಿಯಂತೆ ನುಗ್ಗುವ ತನ್ನ ದೋಸ್ತ್‌ಗಳಿಗೆ ಈ ದಿನದ ಮಟ್ಟಿಗೆ ತಮ್ಮ ದೋಸ್ತಿ ಲಾಂಗ್ವೇಜ್‌ನಿಂದ ದೂರವಿರುವಂತೆ ಮನವಿ ಮಾಡಿಕೊಂಡಿದ್ದ. ಮಧ್ಯಾಹ್ನ ಮೂರರ ಸುಮಾರಿಗೆ ತಿಮ್ಮರಾಯಪ್ಪನವರು ಮೆಟ್ಟಿಲೇರಿ ಮೇಲೆ ಬಂದೆ ಬಿಟ್ಟರು. ಅವರ ಹಿಂದುಗಡೆ ಇನ್ನೊಬ್ಬರೂ ಇದ್ದು ಅದು ಸಾಲ್ಕಟ್ಟೆ ಶಾಂತಣ್ಣನವರಾಗಿದ್ದರು. ಇವರೂ ಸಹ ಕನ್ನಡದಲ್ಲಿ ಎಮ್.ಎ ಮುಗಿಸಿದವರಾಗಿದ್ದು, ಹೊಗಳಿಕೆಗೆ ಮನಸೋಲುತ್ತಾರೆಂಬ ಪುಕಾರು ಇವರಮೇಲಿತ್ತು.

ರಂಗಸ್ವಾಮಣ್ಣ ಮಾವನ ಬಗೆಗೆ ಕೊಟ್ಟಿದ್ದ ಬಿಲ್ಡಪ್‌ನಿಂದ ರೂಮಿನವರಾದ ನಾವಷ್ಟೆ ಅಲ್ಲದೆ ಅಕ್ಕಪಕ್ಕದವರೂ ಸೈಲೆಂಟಾಗಿದ್ದರು. ಗಂಟೆ ಗಟ್ಟಲೆ ಇದ್ದ ತಿಮ್ಮರಾಯಪ್ಪನವರು ಬಹಳ ಹೊತ್ತು ಭಾಮೈದುನನನ್ನು ಮಾತ್ರವಲ್ಲದೆ ನಮ್ಮನ್ನೂ ವಿಚಾರಿಸಿಕೊಂಡರು. ಕುಂದೂರು ತಿಮ್ಮಯ್ಯನವರ ಮಗ ಮತ್ತು ಭಾಮೈದ ಎಂದು ತಿಳಿದ ನಂತರ ನಮ್ಮನ್ನೂ ಕಾಳಜಿಯಿಂದ ಮಾತಾಡಿಸಿದರು. ಭಾಮೈದನ ವಿದ್ಯಾಭ್ಯಾಸದ ಸ್ಥಿತಿಗತಿಯನ್ನ ಒಂದಷ್ಟು ಒಳಹೊಕ್ಕೆ ಕೆದಕಿದ ನಂತರವೂ ಜೋಬಿಗೆ ಕೈ ಹಾಕಿ ಏನನ್ನೂ ತೆಗೆದಿದ್ದು ಕಾಣಲಿಲ್ಲ. ಹೊರಡಲು ಸಿದ್ಧರಾದ ತಿಮ್ಮರಾಯಪ್ಪನವರನ್ನ ಬೀಳ್ಕೊಡಲು ನಾವೂ ಕೆಳಗಿಳಿದೆವು. ಗೇಟ್ ಬಳಿ ಬಂದಾಗ ‘ನೀವಿನ್ನು ಹೋಗಿ ಓದ್ಕಳಿ’ ಎನ್ನುತ್ತ ತಿಮ್ಮರಾಯಪ್ಪನವರು ನನಗೂ ಭಗತ್‌ಗು ತಲಾ ನೂರರಂತೆ ದುಡ್ಡು ಕೊಟ್ಟರು. ಹಿಂದೆಯೇ ಇದ್ದ ಶಾಂತಣ್ಣನವರು ತಾವೂ ಐವತ್ತರಂತೆ ಜೋಬಿಗಿಕ್ಕಿದರು. ಬೇಡ ಬೇಡವೆನ್ನುತ್ತಲೆ ಜೋಬು ತುಂಬಿಸಿಕೊಂಡ ನಾವು ಖುಷಿಯಾಗಿ ರೂಮು ಸೇರಿಕೊಂಡೆವು. ಮಾವನ ಹಿಂದೆಯೇ ಹೋದ ಸೀನಿಯರ್ಸ್ ರಂಗಸ್ವಾಮಣ್ಣ, ಕೃಷ್ಣಮೂರ್ತಣ್ಣ ತುಂಬ ತಡವಾಗಿ ರೂಮಿಗೆ ವಾಪಾಸ್ ಆದರು. ಅವರಿಗೆ ಬಂಪರ್ ಲಾಟರಿಯೇ ಹೊಡೆದಿತ್ತು. ತಿಮ್ಮರಾಯಪ್ಪನವರು ಭಾಮೈದುನನ ಬಟ್ಟೆಗೆ, ಟ್ಯೂಷನ್ಗೆ, ಲ್ಯಾಬ್‌ಗೆ, ಖರ್ಚಿಗೆ ಎಂದೆಲ್ಲ ಹಣ ಕೊಟ್ಟಿದ್ದರು. ಅದರಲ್ಲಿ ಸ್ವಲ್ಪ ಭಾಗ ಕೃಷ್ಣ ಮೂರ್ತಣ್ಣನಿಗೂ ಸಿಕ್ಕಿತ್ತು. ನಮ್ಮ ಸೀನಿಯರ್ಸ್ ಬಹಳ ದಿನಗಳ ವರೆಗೆ ಮಾವ ಬಂದೋದ ಗುಂಗಿನಲ್ಲೇ ಕಾಲ ಕಳೆದರು.

ವಿ.ಸಿ.ಡಿ ತಂದ ಕ್ರಾಂತಿ

ನಾವು ಹೈಸ್ಕೂಲ್ ಓದುವವರೆಗು ವಿ.ಸಿ.ಪಿ ಎಂದರೆ ತಲೆ ಉಯಿಸಿಕೊಳ್ಳುತ್ತಿದ್ದೆವು. ಅದರಲ್ಲಿ ಬರುವ ಪಿಚ್ಚರ್‍ಗಳು ಅದೆಷ್ಟೆ ಕೆಟ್ಟದಾಗಿ ಪ್ರಸಾರವಾದರೂ ನಿದ್ದೆಗೆಟ್ಟು ನೋಡುತ್ತಿದ್ದೆವು. ಚಿತ್ರಗಳು ಮೇಲಕ್ಕು ಕೆಳಕ್ಕು ಓಡುವುದು, ಪರದೆ ತುಂಬ ಗುಳ್ಳೆಗಳೇಳುವುದು, ಸೌಂಡ್ ಬಂದರೆ ಚಿತ್ರ ಬಾರದಿರುವುದು, ಚಿತ್ರ ಕಂಡರೆ ಸೌಂಡ್ ಬಾರದಿರುವುದು ಇಂಥ ಹತ್ತು ಹಲವು ತೊಂದರೆಗಳಿದ್ದರೂ ಅವೆಲ್ಲವನ್ನು ಮೆಟ್ಟಿ ವಿ.ಸಿ.ಪಿಯಲ್ಲಿ ಬರುವ ಪಿಚ್ಚರ್‍ಗಳನ್ನ ನೋಡುತ್ತಿದ್ದೆವು. ಮೊದಲ ಬಾರಿಗೆ ಈ ಥರದ ಯಾವುದೇ ತೊಂದರೆಗಳಿರದೆ ಅಚ್ಚುಕಟ್ಟಾಗಿ ಸಿನಿಮಾ ನೋಡಿದ ಅನುಭವವೊಂದು ಆಯಿತು. ನಮ್ಮ ಸೈನ್ಸ್‌ ಹಾಸ್ಟೆಲ್ ಡೈನಿಂಗ್ ಹಾಲ್ ಈ ಥರಹದ ಪ್ರದರ್ಶನ ಒಂದಕ್ಕೆ ಸಾಕ್ಷಿಯಾಯಿತು. ಆಗ ತಾನೆ ಸಿ.ಡಿ ಪ್ಲೇಯರ್‍ಗಳೆಂಬ ಹೊಸ ಉಪಕರಣ ಮಾರುಕಟ್ಟೆಗೆ ಬಂದು ನುಣ್ಣಗೆ ಅಚ್ಚುಕಟ್ಟಾಗಿ ಸಿನಿಮಾ ನೋಡುವ ಕ್ರಾಂತಿ ಶುರುವಾಗಿತ್ತು. ಅದೇ ಮೊದಲಬಾರಿಗೆ ಹಾಸ್ಟೆಲ್ ಹುಡುಗರೆಲ್ಲ ಹಣ ಎತ್ತಿ ಡೈನಿಂಗ್ ಹಾಲ್‌ನಲ್ಲಿ ಇಂತದ್ದೊಂದು ಪ್ರದರ್ಶನ ಏರ್ಪಡಿಸಿದ್ದರು. ಕಹೋನಾ ಪ್ಯಾರ್ ಹೈ ಸಿನಿಮಾ ನೋಡಿ ಬೆರಗಾಗಿ ಹಾಡಿ ಹೊಗಳಿದೆವು. ಅದಾದ ನಂತರ ನಮ್ಮ ಹಾಸ್ಟೆಲ್‌ನಲ್ಲಿ ಸಿನಿಮಾ ನೋಡುವ ಪರ್ವವೇ ಶುರುವಾಯಿತು. ಪ್ರತಿ ರೂಮಿನವರೂ ಅಕ್ಕಪಕ್ಕದವರ ಸಹಕಾರದಿಂದ ಹಣ ಎತ್ತಿ ವಾರ ಹದಿನೈದು ದಿನಕ್ಕೆಲ್ಲ ಸಿ.ಡಿ ಪ್ಲೇಯರ್ ತರಿಸಿ ಸಿನಿಮಾಗಳನ್ನು ನೋಡುವುದನ್ನ ರೂಢಿಸಿಕೊಂಡರು. ಇದು ಯಾವ ಮಟ್ಟದ ಕಾಂಪಿಟೇಷನ್‌ಗೆ ಕಾರಣವಾಯಿತೆಂದರೆ ನಮ್ಮ ರೂಮಿನ ರಂಗಸ್ವಾಮಣ್ಣನು ಒಂದು ದಿನ ಇದ್ದಕ್ಕಿದ್ದಂತೆ ರೂಮಿಗೆ ಬಂದು ‘ಮರಿ, ಇವತ್ತ ಏನಾರ ಮಾಡಿ ನಮ್ಮ ರೂಮಲ್ಲು ಸಿ.ಡಿ ಪ್ಲೇಯರ್ ತಂದು ಹಾಕಲೇ ಬೇಕು’ ಎಂದು ಕೃಷ್ಣಮೂರ್ತಣ್ಣನನ್ನು ಪ್ರಚೋದಿಸಿದ. ಬಹುಶಃ ಯಾರೊ ಬಿಟ್ಟಿಯಾಗಿ ನೋಡಲು ಹೋದ ಇವರಿಗೆ ಅವಮಾನವಾಗುವಂತೆ ನಡೆದುಕೊಂಡಿರಬೇಕು! ಒಬ್ಬರಿಗೊಬ್ಬರು ಸಹಕಾರದ ಮಾತುಗಳು ನಡೆದು ಹಣ ಎತ್ತಿಯೆ ಬಿಟ್ಟರು. ನಾವೂ ಕೊಟ್ಟೆವು.

ಸಾಕಷ್ಟು ವರ್ಕ್ ಮಾಡಿರುವುದು ಮಾವನ ಕಣ್ಣಿಗೆ ರಾಚುವಂತೆ ಮಾಡಲು ಅಕ್ಕ ಪಕ್ಕದ ಸ್ನೇಹಿತರು ಮಾಡಿ ಬಿಸಾಕಿರುವ ವರ್ಕ್ ಶೀಟ್‌ಗಳನ್ನೆಲ್ಲ ತಂದು ತನ್ನ ಟೇಬಲ್ ಕೆಳಗಿನ ಡಸ್ಟ್ ಬಿನ್‌ಗೆ ತುಂಬಿಕೊಂಡ. ಮಾವನಿಂದ ಹೊಸ ಬಟ್ಟೆ ಕೊಡಿಸಿಕೊಳ್ಳುವ ಆಲೋಚನೆ ಇದ್ದುದರಿಂದ ಇನ್ನೂ ಹಳೆಯದಾದ, ಅಲ್ಲಲ್ಲೆ ಅರಿದು ಹೋಗಿರುವ ಅಂಗಿಯನ್ನು ತೊಟ್ಟು ಟೇಬಲ್‌ಗೆ ಓದಲು ಕುಳಿತ.

ರಾತ್ರಿ ಊಟವೆಲ್ಲ ಆದ ನಂತರ ಹದಿಮೂರನೇ ರೂಮಿನಲ್ಲಿ ಸಿ.ಡಿ ನೋಡುವುದು ಮುಂದುವರೆಯಿತು. ಒಂದೆರೆಡು ಸಿನಿಮಾ ನೋಡುವಷ್ಟರಲ್ಲಿ ಹನ್ನೆರೆಡು ಗಂಟೆ ತಲುಪಿತು. ನಾವು ಬೇರೆ ರೂಮಿನಲ್ಲಿ ಸಿ.ಡಿ ಹಾಕಿದಾಗ ಹನ್ನೆರೆಡು ಗಂಟೆ ಸುಮಾರಿಗೆ ಹಣ ಕೊಟ್ಟಿದ್ದರು ಸರಿಯೆ ಇತರೆ ಸೀನಿಯರ್‍ಗಳು ನಮ್ಮನ್ನ ‘ನಡ್ರಿ ಸಾಕು ಮನಿಕಳ್ರಿ’ ಎಂದು ಒತ್ತಾಯವಾಗಿ ಆಚೆಗೆ ಕಳುಹಿಸಿ ಬಾಗಿಲು ಹಾಕಿಕೊಳ್ಳುತ್ತಿದ್ದರು. ಆದರೆ ಈಗ ನಮ್ಮ ರೂಮಿನಲ್ಲೆ ಸಿ.ಡಿ ಹಾಕಿರುವಾಗ ಸೀನಿಯರ್‍ಗಳು ಇತರೆ ರೂಮಿನ ಜೂನಿಯರ್ಸ್‌ಗಳನ್ನ ಹೊರ ಕಳುಹಿಸಿದರು. ಪಿ.ಯು.ಸಿಯವರಾದ ನಮ್ಮನ್ನ ಹೊರಹಾಕುವ ವಿಚಾರದಲ್ಲಿ ಈಗ ಗೊಂದಲಕ್ಕೆ ಬಿದ್ದರು. ಯಾಕೆಂದರೆ ಆಕಡೆ ಕಾಟ್‌ನ ಮೇಲಿನ ಮಂಚದಲ್ಲಿ ಮಲಗಿದ್ದ ಪ್ರಭ ಅದಾಗಲೆ ಗೊರಕೆ ಹೊಡೆಯುತ್ತಿದ್ದ. ಈಕಡೆ ಕಾಟಿನ ಮೇಲು ಮಂಚದಲ್ಲಿದ್ದ ನಾನು ಮತ್ತು ಭಗತ್ ರಗ್ಗು ಕವಚಿಕೊಂಡು ಮಲಗಿರುವಂತೆ ನಟಿಸುತ್ತಿದ್ದೆವು. ಯಾವುದೋ ಒಂದು ದನಿ ‘ಅವ್ರು ಆಗ್ಲೆ ಮಲ್ಗೆವ್ರೆ, ಏನು ಆಗಲ್ಲ ಆಕ್ರಲೆ’ ಎಂದಿತು. ಹೀಗೆ ಏನೇನೊ ಮಾತುಗಳಾದ ನಂತರ ಹಾಕಿಯೇ ಬಿಟ್ಟರು. ಮತ್ತೊಂದು ದನಿ ಸೌಂಡ್ ಕಮ್ಮಿ ಮಾಡ್ರಿ ಎಂದು ಕಮ್ಮಿ ಮಾಡಿಸಿದರೆ ಇನ್ನೊಂದು ಲೈಟ್ ಆಫ್ ಮಾಡ್ರಿ ಎಂದು ಕತ್ತಲು ತರಿಸಿತು. ಈಗ ನಿಧಾನಕ್ಕೆ ಚೂರುಚೂರೆ ರಗ್ಗು ಸರಿಸಿ ನೋಡಿದರೆ ಎಲ್ಲರೂ ಸೇರಿ ತಮ್ಮ ವಯಸ್ಸಿಗನುಗುಣವಾಗಿ ಯಾವುದನ್ನು ನೋಡಬೇಕಿತ್ತೊ ಅದನ್ನೆ ನೋಡುತ್ತಿದ್ದರು. ಆಕಡೆ ಕಾಟ್ ಕಡೆ ನೋಡಿದರೆ ಪ್ರಭ ಬಾಯಲ್ಲಿ ಗೊರಕೆ ಹೊಡೆಯುತ್ತಿದ್ದರೂ ಕಣ್ ಮಾತ್ರ ಬಿಟ್ಟೆ ಇದ್ದ. ನಾವು ಸುಮಾರು ಹೊತ್ತು ನೋಡಿದ ನಂತರ ಏದುಸಿರು ಬಿಟ್ಟೆವು.

ಸಂಜೆಯೊಳಗೆ ರೂಮು ಕಾಲಿ ಮಾಡಿರಬೇಕು

ಆ ದಿನಗಳಲ್ಲಿ ನಮ್ಮ ವಿದ್ಯಾಭ್ಯಾಸವನ್ನ ವಿಚಾರಿಸಿಕೊಳ್ಳಲು ನಮ್ಮ ಮಾವ ಕುಂದೂರು ತಿಮ್ಮಯ್ಯ ವಾರಕ್ಕೆ ಒಂದು ಬಾರಿಯಾದರೂ ಹಾಸ್ಟೆಲ್‌ಗೆ ಬರುತ್ತಿತ್ತು. ಮಾವ ಬಂದದ್ದು ಕಂಡರೆ ಸಾಕು ಅಕೌಂಟೆಂಟ್ ರಂಗಪ್ಪನವರು ಎರೆಡು ಪ್ಲೇಟ್ ಊಟವನ್ನ ರೂಮಿಗೆ ಕಳುಹಿಸುತ್ತಿದ್ದರು. ಚಳವಳಿ ಹಿನ್ನೆಲೆಯ ರಂಗಪ್ಪನವರು ದ.ಸಂ.ಸ ಹೋರಾಟಗಾರರಾದ ನಮ್ಮ ಮಾವನಿಗೆ ಗೌರವ ಕೊಡುತ್ತಿದ್ದರು. ಮಾವನ ಜೊತೆ ಯಾರಾದರೊಬ್ಬರು ಇದ್ದೆ ಇರುತ್ತಿದ್ದರು. ಒಮ್ಮೆ ರೈತ ಸಂಘದ ಎನ್.ಜಿ ರಾಮಚಂದ್ರರವರು ಮಾವನ ಜೊತೆ ರೂಮಿಗೆ ಬಂದಿದ್ದರು. ಅವರು ಕೋಟಗಾನಹಳ್ಳಿ ರಾಮಯ್ಯ, ದೇವನೂರು ಮಾದೇವ, ಲಂಕೇಶ್, ನಂಜುಂಡಸ್ವಾಮಿ, ಕೆ.ಬಿ ಸಿದ್ದಯ್ಯ ಎಂದೆಲ್ಲ ಮಾತಾಡುತ್ತಿದ್ದರೆ ನಾವು ಮಕ ಮಕ ನೋಡುತ್ತಿದ್ದೆವು.

ನಾವು ಸೆಕೆಂಡ್ ಪಿಯುಸಿಗೆ ಬಂದಾಗ ಒಂದು ಸಮಸ್ಯೆ ತಲೆದೋರಿತು. ನಮ್ಮ ಸೀನಿಯರ್ಸ್ ಅಂತಿಮ ವರ್ಷದ ಓದು ಮುಗಿಸಿಕೊಂಡು ಹಾಸ್ಟೆಲ್ ಖಾಲಿ ಮಾಡಿಕೊಂಡು ಹೋದುದರಿಂದ ಹದಿಮೂರನೇ ರೂಮಿಗೆ ನಾವೇ ವಾರಸುದಾರರಾದೆವು. ಬಿಎಸ್ಸಿ ಹಾಸ್ಟೆಲ್‌ನಲ್ಲಿ ಪಿಯುಸಿಯವರು ಅದರಲ್ಲೂ ಆರ್ಟ್ಸ್ ಓದುವವರೇ ಒಂದು ರೂಮಿನಲ್ಲಿ ಓನರ್ ಶಿಪ್ ಮಾಡುತ್ತಿರುವುದು ಹದಿನೈದನೆ ರೂಮಿನ ನಾಗರಾಜನಿಗೆ ಸಹಿಸಲಾಗಲಿಲ್ಲ. ಫೈನಲ್ ಯಿಯರ್‍ಗೆ ಬಂದವರು ಲೀಡರ್ ಶಿಪ್ ವಹಿಸಿಕೊಳ್ಳಲು ತಾಮೇಲು ನಾಮೇಲು ಎಂದು ಜಿದ್ದಿಗೆ ಬಿದ್ದವರಂತೆ ಆಡುತ್ತಿದ್ದರು. ನಾಗರಾಜ ನಮ್ಮನ್ನ ರೂಮಿನಿಂದ ಎತ್ತಂಗಡಿ ಮಾಡಿಸುವ ಮೂಲಕ ಅಧಿಕಾರ ಸ್ಥಾಪಿಸಿಕೊಳ್ಳಬಹುದೆಂದು ಭಾವಿಸಿದಂತಿತ್ತು. ಆದ್ದರಿಂದ ಒಂದು ದಿನ ಮಧ್ಯಾಹ್ನ ರೂಮಿಗೆ ಬಂದು, ಸಂಜೆ ಒಳಗೆ ರೂಮ್ ಖಾಲಿಮಾಡಿರಬೇಕೆಂದು ಆವಾಜ್ ಬಿಟ್ಟು ಹೋದ. ದಿಕ್ಕುತೋಚದಾದ ನಾವು ದಿಕ್ಕಿಗಾಗಿ ರೈಲ್ವೆ ಸ್ಟೇಷನ್ ಹತ್ತಿರ ಇರುತ್ತಿದ್ದ ನಮ್ಮ ಮಾವನ ಶಿಷ್ಯ ಶಾಂತಿನಗರದ ಮಹೇಂದ್ರ ಅವರ ಬಳಿ ಹೋದೆವು. ದಲಿತ ಚಳುವಳಿಯೊಳಗಿದ್ದ ಮಹೇಂದ್ರ, ತುಮಕೂರಿನ ರೌಡಿ ವಲಯದಲ್ಲೂ ಗುರುತಿಸಿಕೊಂಡಿದ್ದರಿಂದ ಅನೇಕರು ಭಯ ಮಿಶ್ರಿತ ಗೌರವ ಕೊಡುತ್ತಿದ್ದರು. ನಮಗಾಗುತ್ತಿರುವ ತೊಂದರೆ ಆಲಿಸಿದ್ದೆ ತಡ ರಾತ್ರಿ ಎಂಟು ಗಂಟೆಗೆ ಬರುವುದಾಗಿ ಧೈರ್ಯ ತುಂಬಿ, ಕಾಫಿ ಕೊಡಿಸಿ ಕಳುಹಿಸಿದರು.


ಅದು ಹೇಗೊ ನಾಗರಾಜ ಮತ್ತು ಇತರರಿಗೆ ನಾವು ಮಹೇಂದ್ರನ ಬಳಿ ಹೋಗಿರುವ ಸುದ್ದಿ ಪಸರಿಸಿ ಅದಾಗಲೆ ಅವರು ಹಾಸ್ಟೆಲ್ ತೊರೆದಿದ್ದರು. ರಾತ್ರಿ ಬರುವಷ್ಟರಲ್ಲಿ ಖಾಲಿ ಮಾಡಿರಬೇಕೆಂದು ಆವಾಜ್ ಬಿಟ್ಟಿದ್ದ ನಾಗರಾಜ ಅತ್ತ ಕೆಲ ದಿನ ಅವನೇ ಪತ್ತೆ ಇಲ್ಲವಾಗಿದ್ದ. ಮಹೇಂದ್ರಣ್ಣ ಹೇಳಿದಂತೆ ನಮ್ಮ ರೂಮಿಗೆ ರಾತ್ರಿ ಎಂಟರ ಸುಮಾರಿಗೆ ಬಂದರು. ತುಂಬ ಹೊತ್ತೆ ಕೂತಿದ್ದ ಅವರು ಹೋಗುವಾಗ ಹಲವರನ್ನ ಗುರಾಯಿಸಿ ಹೋಗಿದ್ದರು. ಅದಾದ ಮೇಲೆ ಯಾರೂ ನಮ್ಮ ತಂಟೆಗೆ ಬರಲಿಲ್ಲ. ನಿರಾಳರಾದೆವು.