ಅಣ್ಣನ ಉಪನಯನದ ಹೊತ್ತಿಗೆ ಅದೇ ಕನಸು, ಅದೇ ಆಸೆಯಿಂದ ಬೆತ್ತದ ಪೆಟ್ಟಿಗೆಯ ಮುಚ್ಚಳ ತೆಗೆದು ಸ್ಕರ್ಟ್ನ್ನು ತೆಗೆಯುತ್ತೇನೆ. ಎಲ್ಲಿದೆ ಅಲ್ಲಿ? ಅರ್ಧಕ್ಕರ್ಧ ಸ್ಕರ್ಟ್ ಅನ್ನು ಇಲಿ ತಿಂದು ಹಾಕಿತ್ತು. ಅಲ್ಲಿ ದೊಡ್ಡದಾದ ಬಿಳಿಯ ಹೂವಿನ ಡಿಸೈನ್ ಕೂಡ ಇದ್ದ ಕುರುಹೂ ಇಲ್ಲದ ಹಾಗೆ ಸ್ಕರ್ಟ್‍ ಅನ್ನು ಇಲಿ ಕಚ್ಚಿಹಾಕಿತ್ತು. ಆ ದೃಶ್ಯ ನೋಡಿದವಳಿಗೆ ಅಳು ತಡೆಯಲಾಗಲಿಲ್ಲ. ‘ಸಂಕ್ರಾಂತಿ ಹಬ್ಬಕ್ಕೂ ಹಾಕ್ಯಂಬ್ಲೆ ಕೊಟ್ಟಿದ್ದಿಲ್ಲೆ ನೀನು, ಈಗ ಉಪನೇನಕ್ಕೂ ಹಾಕ್ಯಂಬ್ಲೆ ಎಂಗೆ ಅಂಗಿನೇ ಇಲ್ಲೆ’ ಎಂದು ಜೋರಾಗಿ ಅಳಲು ಶುರುಮಾಡಿದ ನನ್ನನ್ನು ಸುಮ್ಮನಿರಿಸಲು ಅಮ್ಮನಿಗೂ ಸಾಧ್ಯವಾಗಲಿಲ್ಲ.
ಪತ್ರಕರ್ತೆ ಭಾರತಿ ಹೆಗಡೆ ಬರೆಯುವ ಸಿದ್ದಾಪುರ ಸೀಮೆಯ ಕಥೆಗಳ ಹತ್ತನೆಯ ಕಂತು.

 

ಪ್ರತಿಸಲ ಸಂಕ್ರಾಂತಿಯ ದಿವಸ ಬಿಡದೆ ಕಾಡುವ ನೆನಪೆಂದರೆ ಒಂದು ಅಪ್ಪನದ್ದು, ಇನ್ನೊಂದು ಪ್ರೀತಿಯಿಂದ ಹೊಲಿಸಿಕೊಂಡ ನಶೆಪುಡಿ ಬಣ್ಣದ ಸ್ಕರ್ಟ್ ನದ್ದು. ಜೊತೆಗೆ ಕರಿಬಣ್ಣಕ್ಕೆ ತಿರುಗಿದೆ ಹಿತ್ತಾಳೆ ಲೋಟ ಮತ್ತು ಸಂಕ್ರಾಂತಿ ಕಾರ್ಡುಗಳು.

ಇದು ಸೂರ್ಯ ಪಥ ಬದಲಿಸುವ ದಿಕ್ಕಂತೆ. ಆ ದಿನ ಕೃಷಿಕರ ಹಬ್ಬವೂ ಹೌದು. ಜತೆಗೆ ಹೆಣ್ಣುಮಕ್ಕಳ ಹಬ್ಬವಿದು ಹೀಗೆಲ್ಲ ತಿಳಿದದ್ದು ತೀರ ಇತ್ತೀಚೆಗೆ. ಅದು ಹೆಣ್ಣುಮಕ್ಕಳ ಹಬ್ಬ ಮತ್ತು ಮನೆಮನೆಗೆ ಎಳ್ಳು-ಬೆಲ್ಲವನ್ನು ಹಂಚುವ ಹಬ್ಬವೆಂದು ತಿಳಿದದ್ದು ಮಾತ್ರ ತೀರ ಎಳವೆಯಲ್ಲಿ.

ಅದು ನಾವೆಲ್ಲ ಆಗ ಇಟಗಿ ಸಮೀಪದ ತಾರಗೋಡೆಂಬ ಊರನ್ನು ನಮ್ಮದೇ ಊರೆಂದು ಭ್ರಮಿಸಿದ್ದ ದಿನಗಳವು. ಇಡೀ ಪ್ರಪಂಚವೆಂದರೆ ಅದು ತಾರುಗೋಡು ಮತ್ತು ಪ್ರಪಂಚದ ತುಂಬೆಲ್ಲ ಇರುವವರು ಹವ್ಯಕರು ಮಾತ್ರ ಎಂದು ತಿಳಿದಿದ್ದ ಕಾಲ. ತಾರಗೋಡಿನಲ್ಲಿ ನನ್ನ ಸೋದರತ್ತೆಯ ಮನೆಯಿಂದ ರಾತ್ರೋರಾತ್ರಿ ಹೊರಬಿದ್ದು ಸಿದ್ದಾಪುರಕ್ಕೆ ಬಂದಾಗಲೇ ತಿಳಿದದ್ದು ಹೊಸದೊಂದು ಜಗತ್ತಿದೆ ಎಂದು. ಆಗ ನಾನು ಮೂರನೇ ಕ್ಲಾಸ್ ಪಾಸ್ ಆಗಿ ನಾಲ್ಕನೇ ಕ್ಲಾಸ್‍ ಗೆ ಹೋಗೋಳಿದ್ದೆ. ಸಿದ್ದಾಪುರದಲ್ಲಿದ್ದ ಬಾಲಿಕೊಪ್ಪ ಶಾಲೆಗೆ ನನ್ನನ್ನು ಅಮ್ಮ ಸೇರಿಸಿದ್ದು, ಜಗತ್ತಿನಲ್ಲಿ ಹವ್ಯಕ ಭಾಷೆ ಮಾತ್ರ ಇದೆ ಎಂದು ತಿಳಿದ ನನಗೆ ಮೊಟ್ಟ ಮೊದಲ ಬಾರಿಗೆ ಅಲ್ಲಿರುವ ಹುಡುಗಿಯರ ಹತ್ತಿರ ಪೇಟೆ ಭಾಷೆ ಮಾತನಾಡಬೇಕಾದ ಅನಿವಾರ್ಯತೆ ಹೇಗಿತ್ತೆಂದರೆ, ಒಂಥರದಲ್ಲಿ ಬೆಂಗಳೂರಿಗೆ ಬಂದಾಗ ಇಂಗ್ಲಿಷ್ ಕಲಿಯಬೇಕಾದ ಅನಿವಾರ್ಯತೆಯಂತಾಗಿತ್ತು.

ಹಾಗೂ ಹೀಗೂ ಸಂಬಾಳಿಸಿಕೊಂಡು ಬಂದ ಮೊದಲ ದಿನವೇ ಅಪ್ಪ ಊಟ ಮಾಡುತ್ತ ಹೇಗಿತ್ತು ಶಾಲೆ ಎಂದು ಕೇಳಿದ್ದ. ಸಿದ್ದಾಪುರದ ಹೊಸಪೇಟೆ ಎಂಬಲ್ಲಿ ಚಾ ಪೆಟ್ಟಿಗೆಯಂಥ ಒಂದು ಮನೆಯಲ್ಲಿ ನಮ್ಮ ವಾಸ. ಮನೆಯಲ್ಲಿ ಇದ್ದದ್ದು ಒಂದೇ ದೊಡ್ಡ ಹಾಲ್. ಅದಕ್ಕೆ ಮರದ ಹಲಗೆಯನ್ನು ಒಂದು ಗೋಡೆಯ ರೀತಿ ಇಳಿಬಿಟ್ಟಿದ್ದಕ್ಕೆ ಅದು ಅಡುಗೆ ಕೋಣೆಯಾಗಿತ್ತಷ್ಟೆ.

ಹೀಗೆ ಹೊಸ ವಾತಾವರಣ, ಹೊಸ ಸಂಭ್ರಮದಲ್ಲಿ ಶಾಲೆಗೆ ಹೋಗುತ್ತಿರುವಾಗ ಮೊದಲು ಪರಿಚಯವಾದಳು ಶಾಮಲಾ. ಜನವರಿ ತಿಂಗಳ ಒಂದು ದಿನ ಗೆಳತಿ ಶಾಮಲಾ “ಸಂಕ್ರಾಂತಿ ಹಬ್ಬ ಬರುತ್ತಿದೆ. ನೀನು ಹೊಸಲಂಗ ಹೊಲಿಸ್ತೀಯ”, ಎಂದು ಕೇಳಿದಳು. ಅದುವರೆಗೆ ಚೌತಿ ಹಬ್ಬ ಅಥವಾ ದೊಡ್ಡಹಬ್ಬಕ್ಕೆ ಮಾತ್ರ, ಅದೂ ವರುಷಕ್ಕೊಮ್ಮೆ ಬಟ್ಟೆ ತಂದು ಗೊತ್ತಿದ್ದ ನನಗೆ ಈ ಸಂಕ್ರಾಂತಿಗೆ ಹೊಸಬಟ್ಟೆ ಎಂಬುದು ಹೊಸವಿಷಯ. “ಗೊತ್ತಿಲ್ಲ ಅಮ್ಮನನ್ನು ಕೇಳಬೇಕು…” ಎಂದು ಅವತ್ತೇನೆಲ್ಲ ಮಾಡ್ತಾರೆ ಅಂತ ಕುತೂಹಲದಿಂದ ಕೇಳಿದೆ. ‘ಎಲ್ಲರೂ ಹೊಸಬಟ್ಟೆ ಹಾಕ್ಕೊಂಡು ಸಂಕ್ರಾಂತಿ ಕಾಳನ್ನು ಎಲ್ಲರಿಗೂ ಹಂಚ್ತೀವಿ’ ಎಂದಳು ಶಾಮಲಾ. ‘ಸಂಕ್ರಾಂತಿ ಕಾಳಾ… ಹಾಗಂದ್ರೇನು, ಅದೆಲ್ಲಿ ಸಿಗುತ್ತೆ?’ ಇದು ಕೂಡ ನಂಗೆ ಹೊಸವಿಷಯ. ಅಂಗಡಿಲಿ ಸಿಗತ್ತೆ ತಂದ್ರಾಯ್ತು ಎಂದಳು ಶಾಮಲಾ.

ಆಗ ನೆನಪಾಯಿತು. ತಾರಗೋಡಿನಲ್ಲಿ ನನ್ನ ಅತ್ತಿಗೆ ಹಾಗೂ ಊರಿನ ಅನೇಕ ಹೆಣ್ಣುಮಕ್ಕಳಿಗೆ, ಚೆಂದನೆಯ ಗ್ರೀಟಿಂಗ್ ಕಾರ್ಡ್ ಜೊತೆಗೆ ನಾಲ್ಕಾರು ಸಂಕ್ರಾಂತಿಕಾಳು ಇರುತ್ತಿದ್ದ ಉದ್ದವಾದ ಕವರ್ ಒಂದನ್ನು ಪೋಸ್ಟ್ ಮ್ಯಾನ್ ತಂದುಕೊಡುತ್ತಿದ್ದುದು, ನಾವೆಲ್ಲ ಕುತೂಹಲದಿಂದ ಅದನ್ನು ಒಡೆದು ಇರುವ ನಾಲ್ಕಾರು ಸಂಕ್ರಾಂತಿ ಕಾಳುಗಳ ಪೈಕಿ ಒಂದೇಒಂದು ಕಾಳನ್ನು ತಿಂದು ಬಾಯಿ ಸಿಹಿ ಮಾಡಿಕೊಳ್ಳುತ್ತಿದ್ದುದು, ಅತ್ತಿಗೆ ಮತ್ತು ಊರ ಹೆಣ್ಣುಮಕ್ಕಳು ಆ ಗ್ರೀಟಿಂಗ್ ಕಾರ್ಡ್‍ ಗಳನ್ನಿಟ್ಟುಕೊಂಡು ಯಾವುದೋ ಕನಸಲ್ಲಿ ಜಾರಿಹೋಗುತ್ತಿದ್ದುದು, ಜೊತೆಗೆ ಈ ಹೆಣ್ಣುಮಕ್ಕಳೂ ಹದಿನೈದು ದಿವಸ ಮುಂಚೆಯೇ ಕವರ್, ಕಾರ್ಡ್ ಕೊಂಡು ಅವರೂ ನಾಲ್ಕಾರು ಸಂಕ್ರಾಂತಿಕಾಳನ್ನು ಹಾಕಿ ಪೋಸ್ಟ್ ಮಾಡುತ್ತಿದ್ದುದೆಲ್ಲ ನೆನಪಾಗಿ, ಸಂಕ್ರಾಂತಿ ಕಾಳೆಂದರೆ ಅದೆಂಥದ್ದೋ ಬೆಚ್ಚನೆಯ ನೆನಪಾಗಿ ಮನೆಗೆ ಬಂದೆ.

ಬಂದವಳೇ ಮೊದಲು ಪಾಟಿಚೀಲ ಬಿಸಾಕಿ ಅಮ್ಮನ ಹತ್ರ, ‘ಅಮ್ಮಾ, ಶಾಲೇಲಿ ಸಂಕ್ರಾಂತಿ ಹಬ್ಬಕ್ಕೆ ಹೊಸಬಟ್ಟೆ ಹಾಕ್ಯಂಡು ಬತ್ವಡ, ಜೊತಿಗೆ ಸಂಕ್ರಾಂತಿ ಕಾಳನ್ನೂ ಹಂಚುತ್ವಡ. ಆನೂ ಹಂಚ್ತಿ…’ ಎಂದದ್ದಕ್ಕೆ ಅಮ್ಮ ಹೂಂ ಎಂದಳು ಅಷ್ಟೇ. ಯಾಕೆಂದರೆ ಹೊಸಬಟ್ಟೆ ಎಂದರೆ ಅದು ಅಮ್ಮನಿಂದ ಅಪ್ಪನಿಗೆ ವಿಷಯ ರವಾನಿಸಬೇಕು. ಅಪ್ಪನಿಂದ ಹುಕುಂ ಬರಬೇಕು. ತಾನೇ ಹೊಸಬಟ್ಟೆ ಹೊಲಿಸಿಕೋ ಎಂದು ಹೇಳುವಷ್ಟು ಅಮ್ಮ ಸ್ವತಂತ್ರಳಲ್ಲ. ಹಾಗಾಗಿ ಅವತ್ತು ಮಧ್ಯಾಹ್ನ ಹಿರಿಯ ಸಚಿವರ ಸಭೆಯಂತೆ ಎಲ್ಲರೂ ಊಟಕ್ಕೆ ಕುಳಿತಾಗ, ಅಪ್ಪನ ಬಳಿ ಅಮ್ಮ ನಿಧಾನಕ್ಕೆ ನಾನು ಹೇಳಿದ್ದೆಲ್ಲವನ್ನೂ ಹೇಳಿದಳು. ಅಪ್ಪ ಏನು ಹೇಳಿಬಿಡುತ್ತಾನೋ, ಬೇಡ ಎಂದುಬಿಟ್ಟರೆ ಎಂಬ ಭಯ. ಪ್ರತಿಬಾರಿಯೂ ಇಂಥ ಏನೇ ಬೇಡಿಕೆ ಇಟ್ಟಾಗಲೂ ಅಪ್ಪ ‘ಬೇಡ’ ಎಂದುಬಿಡುತ್ತಾನೆಂಬ ಭಯ. ಆದರೆ ಅಪ್ಪ ನಮ್ಮ ಬೇಡಿಕೆಗೆ ಯಾವತ್ತೂ ಇಲ್ಲವೆಂದವನೇ ಅಲ್ಲ. ಆದರೂ ನಮ್ಮ ಬೇಡಿಕೆ ಅಮ್ಮನಿಂದಲೇ ಅಪ್ಪನಿಗೆ ಹೋಗಬೇಕೆಂಬ ನಿಯಮ ಕಡ್ಡಾಯ.

ಕಡೆಯಲ್ಲಿ ಅಮ್ಮನ ಬಳಿ ‘ಬಟ್ಟೆ ಕೃಷ್ಣನ ಹತ್ರ ಹೋಗಿ ಬನ್ನಿ. ಅವಳಿಗೆ ಒಂದು ಲಂಗ ಹೊಲಿಸು’ ಎಂದ್ಹೇಳಿ ಊಟದಿಂದ ಎದ್ದ ಅಪ್ಪ. ಆ ಒಂದು ಮಾತಿಗಾಗಿಯೇ ಕಾಯುತ್ತಿದ್ದವಳಂತೆ ಛಂಗನೆ ಎದ್ದು ಶಾಲೆಗೆ ಓಡಿದೆ. ಶಾಮಲಳ ಹತ್ರ ಎಲ್ಲವನ್ನೂ ಹೇಳಲು… ಅವತ್ತೆಲ್ಲ ಕನಸೋ ಕನಸು. ಹೊಸ ಲಂಗ ಹಾಕಿಕೊಂಡು ಸಂಕ್ರಾಂತಿ ಕಾಳನ್ನು ಶಾಲೆಯಲ್ಲಿ ಹಂಚುವುದೇ ದೊಡ್ಡ ಕನಸು.

ಅವತ್ತೇ ಸಂಜೆಗೆ ಬಟ್ಟೆ ಕೃಷ್ಣನ ಅಂಗಡಿಗೆ ಅಮ್ಮನ ಜೊತೆ ಹೋಗಿ ನಶೆಪುಡಿ ಬಣ್ಣದ ಅದರ ಮೇಲೆ ದೊಡ್ಡದೊಡ್ಡ ಬಿಳಿಯ ಹೂವುಗಳಿರುವ ಸ್ಕರ್ಟ್, ಅದಕ್ಕೆ ಅದೇ ಬಣ್ಣದ ಗುಬ್ಬಿ ತೋಳಿನ ಪ್ಲೇನ್ ಬ್ಲೌಸ್ ಹೊಲಿಸಲು ಹೇಳಿ ಬಂದಾಗಿತ್ತು. ಸಂಕ್ರಾಂತಿಯ ಮುನ್ನಾ ದಿನವೇ ಅಂಗಡಿಗೆ ಹೋಗಿ ಬಣ್ಣಬಣ್ಣದ ಸಂಕ್ರಾಂತಿ ಕಾಳು ಮತ್ತು ಕೃಷ್ಣನ ಅಂಗಡಿಗೆ ಹೋಗಿ ಬಟ್ಟೆ ತಂದದ್ದಾಗಿತ್ತು. ಅಮ್ಮ ಹೊಸಬಟ್ಟೆಯನ್ನು ಒಮ್ಮೆ ಮಾತ್ರ ನೋಡಿ ಅದನ್ನು ಹಾಗೆಯೇ ಬೆತ್ತದ ಪೆಟ್ಟಿಗೆಯಲ್ಲಿ ಮಡಚಿಟ್ಟಿದ್ದಳು. ಆ ರಾತ್ರಿಯಿಡೀ ನಿದ್ದೆ ಬರಲಿಲ್ಲ.

ಹೊಸಬಟ್ಟೆ ಎಂದರೆ ಅದು ಅಮ್ಮನಿಂದ ಅಪ್ಪನಿಗೆ ವಿಷಯ ರವಾನಿಸಬೇಕು. ಅಪ್ಪನಿಂದ ಹುಕುಂ ಬರಬೇಕು. ತಾನೇ ಹೊಸಬಟ್ಟೆ ಹೊಲಿಸಿಕೋ ಎಂದು ಹೇಳುವಷ್ಟು ಅಮ್ಮ ಸ್ವತಂತ್ರಳಲ್ಲ. ಹಾಗಾಗಿ ಅವತ್ತು ಮಧ್ಯಾಹ್ನ ಹಿರಿಯ ಸಚಿವರ ಸಭೆಯಂತೆ ಎಲ್ಲರೂ ಊಟಕ್ಕೆ ಕುಳಿತಾಗ, ಅಪ್ಪನ ಬಳಿ ಅಮ್ಮ ನಿಧಾನಕ್ಕೆ ನಾನು ಹೇಳಿದ್ದೆಲ್ಲವನ್ನೂ ಹೇಳಿದಳು.

ಬೆಳಗ್ಗೆ ಬೇಗ ಏಳಬೇಕು, ಹೊಸಬಟೆ ಹಾಕಿಕೊಳ್ಳಬೇಕು, ಸಂಕ್ರಾಂತಿ ಕಾಳನ್ನು ಊರೆಲ್ಲ ಹಂಚಿಬರಬೇಕು ಎಂದುಕೊಂಡು ಬೆತ್ತದ ಪೆಟ್ಟಿಗೆ ನೋಡುತ್ತಲೇ ಹಾಗೇ ನಿದ್ದೆ ಹೋದವಳಿಗೆ ಬೆಳಗ್ಗೆ ಅಮ್ಮ ಬಂದು ಎಚ್ಚರಿಸಿದಾಗಲೇ ಎಚ್ಚರವಾದದ್ದು. ಆಗೆಲ್ಲ ಬೆಳಗ್ಗೆ ಬೇಗನೇ ಏಳಲೇಬೇಕಿತ್ತು. ಯಾಕೆಂದರೆ ಶಾಲೆ ಶುರುವಾಗುತ್ತಿದ್ದುದೇ ಬೆಳಿಗ್ಗೆ 8.30ಗೆ. ಹಾಗಾಗಿ ಬೇಗ ಎದ್ದು ಸ್ನಾನ ಮಾಡಿ, ತಿಂಡಿ ತಿಂದು ಇನ್ನೇನು ಹೊಸ ಸ್ಕರ್ಟ್ ಹಾಕಿಕೊಳ್ಳಬೇಕೆಂದು ಬೆತ್ತದ ಪೆಟ್ಟಿಗೆಗೆ ಕೈ ಹಾಕುವ ಮೊದಲೇ ಅಮ್ಮ, ‘ಕೂಸೆ, ಈಗ ನೀನು ಆ ಸ್ಕರ್ಟ್‍ ನ್ನು ಹಾಕ್ಯಂಬ್ದು ಬ್ಯಾಡ. ಇನ್ನೊಂದು 15 ದಿವ್ಸಕ್ಕೆ ಅಣ್ಣನ ಉಪನೇನ (ಮುಂಜಿ) ಇದ್ದು. ಅದಕ್ಕೆ ಮತ್ತೆ ಹೊಸಬಟ್ಟೆ ಹೊಲಿಸಲಾಗ್ತಿಲ್ಲೆ. ಅದಕ್ಕೆ ಆವಾಗ್ಲೇ ಹಾಕ್ಯಳ್ಳಕ್ಕಡ. ಈಗ ಹಾಕ್ಯಂಬಿಟ್ರೆ ಅಣ್ಣನ ಉಪನೇನದ ಹೊತ್ತಿಗೆ ಅಂಗಿ ಹಳತಾಗ್ಹೋಗ್ತು, ಅದಕ್ಕೆ ಆಗಲೇ ಹಾಕ್ಯಂಡ್ರಾತು…’ ಎಂದು ಮುದ್ದುಮಾಡಿ ಅನುನಯಿಸಿದಳು. ಅಮ್ಮನ ಪ್ರೀತಿಗೆ ಇಲ್ಲವೆನ್ನಲಾಗದೆ, ಹೊಸಬಟ್ಟೆಯನ್ನೂ ಬಿಡಲಾರದೆ ನಿರಾಶೆಯಿಂದಲೇ ಆಯಿತೆಂದು ತಲೆ ಅಲ್ಲಾಡಿಸಿದೆ. ಹೇಗಿದ್ದರೂ ಇನ್ನೊಂದು 15 ದಿವ್ಸ ತಾನೇ ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ.

ಮುಂಚಿನ ದಿವಸದ ರಾತ್ರಿಯೇ ಅಮ್ಮ ಸಂಕ್ರಾಂತಿ ಕಾಳನ್ನು ಹಾಕಿಕೊಂಡು ಹೋಗಲೆಂದು ತಟ್ಟೆಯಾಕಾರದ ದೊಡ್ಡದಾದ ಹಿತ್ತಾಳೆ ಲೋಟವೊಂದನ್ನು ಎತ್ತಿಟ್ಟಿದ್ದಳು. ಹಿತ್ತಾಳೆಯ ಆ ಲೋಟ ಆಗಲೇ ಕಿಲುಬಿಹೋಗಿ ಕರಿಯ ಬಣ್ಣಕ್ಕೆ ತಿರುಗಿ, ಹಳದಿಬಣ್ಣ ಇತ್ತು ಎಂಬುದರ ಗುರುತು ಕೂಡ ಇರಲಿಲ್ಲ. ಅಷ್ಟು ಕರಿಯಬಣ್ಣಕ್ಕೆ ಅದು ತಿರುಗಿತ್ತು. ಅಮ್ಮ ಹೇಳಿದ್ದೆಲ್ಲ ಆಗ ವೇದವಾಕ್ಯ ತಾನೆ? ಅದು ಬೇಡ, ಇದು ಬೇಡವೆಂದು ಹಠಮಾಡಬೇಕೆಂದೂ ಆಗೆಲ್ಲ ತಿಳಿಯುತ್ತಿರಲಿಲ್ಲ. ಹಾಗಾಗಿ ಅದನ್ನೇ ತೆಗೆದುಕೊಂಡು ಹೋಗಲು ಒಪ್ಪಿದೆ.

ಮಾರನೇ ದಿನ ಅಂದರೆ ಸಂಕ್ರಾಂತಿ ಹಬ್ಬದ ದಿವಸ ಬೆಳಿಗ್ಗೆ ಹೊಸ ಸ್ಕರ್ಟ್ ಕೂಡ ಇಲ್ಲದೆ, ಎಂದಿನಂತೆ ಶಾಲೆಯ ಸಮವಸ್ತ್ರವಾದ ನೀಲಿ ಸ್ಕರ್ಟ್, ಗುಬ್ಬಿ ತೋಳಿನ ಬಿಳಿ ಸ್ಕರ್ಟ್ ಹಾಕಿಕೊಂಡು ಅಮ್ಮ ಕೊಟ್ಟ ಕರಿಬಣ್ಣಕ್ಕೆ ತಿರುಗಿದ ಹಿತ್ತಾಳೆಯ ಲೋಟಕ್ಕೆ ಸಂಕ್ರಾಂತಿ ಕಾಳನ್ನು ತುಂಬಿಕೊಂಡು ಶಾಲೆಗೆ ಹೊತ್ತಾಯಿತೆಂದು ಅವಸರಅವಸರದಿಂದ ಓಡಿದೆ. ಹಾಗೆ ಓಡುವ ಅಬ್ಬರದಲ್ಲಿ ಎಡವಿ ಬಿದ್ದುಬಿಟ್ಟೆ. ಕೈಯ್ಯಲ್ಲಿದ್ದ ಹಿತ್ತಾಳೆ ತಟ್ಟೆಯೂ ಬಿದ್ದು ಸಂಕ್ರಾಂತಿ ಕಾಳೆಲ್ಲ ಚೆಲ್ಲಿಹೋಯಿತು. ಕಲ್ಲು, ಮಣ್ಣುಗಳಿಲ್ಲದೆ ಮೇಲಕ್ಕಿರುವ ಕಾಳುಗಳನ್ನು ಮಾತ್ರ ಹೆಕ್ಕಿಕೊಂಡು ಲೋಟಕ್ಕೆ ತುಂಬಿಕೊಂಡು ಉಳಿದವುಗಳನ್ನೆಲ್ಲ ಹಾಗೆಯೇ ಬಿಟ್ಟು ಮುಂದೆ ಹೆಜ್ಜೆಹಾಕಿದೆ ಪೆಚ್ಚುಮೋರೆ ಹಾಕಿಕೊಂಡು. ಅಷ್ಟೊತ್ತಿಗೆ ತುಂಬ ಇದ್ದ ಕಾಳುಗಳು ಈಗ ಅರ್ಧಲೋಟಕ್ಕೆ ಬಂದಿತ್ತು. ಮುಖ್ಯ ರಸ್ತೆಗೆ ಬರುವಷ್ಟರಲ್ಲಿ ಶಾಮಲಾ ನನಗಾಗಿ ಕಾಯುತ್ತಿದ್ದಳು. ಅವಳು ಒಂದು ಚಿಕ್ಕ ಸ್ಟೀಲ್ ಲೋಟದಲ್ಲಿ ಸಂಕ್ರಾಂತಿ ಕಾಳುಗಳನ್ನು ತುಂಬಿಕೊಂಡು ಬಂದಿದ್ದಳು. ಅವಳ ಲೋಟ ತುಂಬಿದ್ದನ್ನು ನೋಡಿ ಸ್ವಲ್ಪ ಪೆಚ್ಚಾದರೂ, ನಾನು ಬಿದ್ದ ಕತೆ ಹೇಳಿ ತಟ್ಟೆ ತೋರಿಸಿದೆ. ನೀನು ಬೀಳದೇ ಹೋಗಿದ್ದಿದ್ದರೆ ನಿನ್ನ ಬಳಿಯೂ ಸಂಕ್ರಾಂತಿ ಕಾಳು ಹೆಚ್ಚಿರುತ್ತಿದ್ದವು ಅಲ್ವಾ? ಎಂದು ಕೇಳಿದಳು. ಹೌದೆಂದು ತಲೆ ಅಲ್ಲಾಡಿಸುತ್ತ ಅವಳಜೊತೆ ಶಾಲೆಗೆ ಹೆಜ್ಜೆ ಹಾಕಿದೆ.

ಶಾಲೆಗೆ ಬಂದು ನೋಡುತ್ತೇನೆ… ಸಂಕ್ರಾಂತಿ ಕಾಳು ಮಾತ್ರ ಬಣ್ಣಬಣ್ಣದ್ದಾಗಿರಲಿಲ್ಲ. ಅವರು ತೊಟ್ಟ ಬಟ್ಟೆ, ಸಂಕ್ರಾಂತಿ ಕಾಳನ್ನು ತುಂಬಿಕೊಂಡು ಬಂದ ಕರಡಿಗೆ(ಡಬ್ಬಿ) ಕೂಡ ಬಣ್ಣಬಣ್ಣದ್ದಾಗಿದ್ದವು. ವಿವಿಧ ಆಕಾರದ, ವಿವಿಧ ಬಣ್ಣದ ಆ ಡಬ್ಬಿಗಳು ಮತ್ತು ಅವರೆಲ್ಲರ ಹೊಸಬಟ್ಟೆ ನೋಡಿ ಒಮ್ಮೆ ಕರಿಕೆಟ್ಟ ನನ್ನ ಹಿತ್ತಾಳೆ ಲೋಟ ಮತ್ತು ಅದೇ ಸಮವಸ್ತ್ರದ ನೀಲಿ ಅಂಗಿ ನೋಡಿಕೊಂಡೆ. ಯಾಕೋ ಆ ಕರಿ ತಟ್ಟೆಯನ್ನು ಮುಂದೆ ಹಿಡಿಯುವ ಮನಸ್ಸೇ ಆಗಲಿಲ್ಲ. ಆದರೂ ಎಲ್ಲರೂ ಶಾಲೆಯ ಹೆಡ್‍ ಮಾಸ್ತರಿಗೆ, ಬೇರೆ ಮಾಸ್ತರು, ಅಕ್ಕೋರಿಗೆ, ಶಾಲೆಯಲ್ಲಿರುವ ಎಲ್ಲ ಮಕ್ಕಳಿಗೂ ಸಂಕ್ರಾಂತಿ ಕಾಳನ್ನು ಕೊಡುತ್ತಾ, ಎಳ್ಳುಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡು… ಅಂತ್ಹೇಳಿ ಕೊಡುವಾಗ ನನಗೆ ಸುಮ್ಮನಿರಲು ಮನಸ್ಸೇ ಆಗಲಿಲ್ಲ. ತಟ್ಟೆಯನ್ನು ಮುಚ್ಚಿಟ್ಟುಕೊಂಡೆ ಕಾಳನ್ನು ಎಲ್ಲರಿಗೂ ಕೊಟ್ಟೆ. ಅಷ್ಟೇ ಸಾಲದೆಂಬಂತೆ, ಗೆಳತಿಯರೊಂದಿಗೆ ಹೈಸ್ಕೂಲಿಗೆ, 2 ಮೈಲು ದೂರದ ಕಾಲೇಜಿಗೂ ಹೋಗಿ ಕೊಟ್ಟುಬಂದೆವು. ಅಷ್ಟೇ ಅಲ್ಲದೆ ತಹಸೀಲ್ದಾರ್ ಆಫೀಸ್, ಕೃಷಿ ಅಧಿಕಾರಿಗಳು ಕಚೇರಿ ಸೇರಿದಂತೆ ಸಿದ್ದಾಪುರದ ಎಲ್ಲ ಮುಖ್ಯವಾದ ಕಚೇರಿಗಳಿಗೂ ಕೊಟ್ಟುಬರುವಷ್ಟರಲ್ಲಿ ಮಧ್ಯಾಹ್ನವಾಯಿತು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಕರಿ ತಟ್ಟೆಯಲ್ಲಿ ಸಂಕ್ರಾಂತಿ ಕಾಳು ಕೊಟ್ಟರೇನು, ಬಣ್ಣದ ಹೊಸ ಡ್ರೆಸ್ ಹಾಕದಿದ್ದರೇನು, ನನ್ನ ಉತ್ಸಾಹಕ್ಕೇನೂ ಕಡಿಮೆ ಇರಲಿಲ್ಲ. ಮೊದಲಬಾರಿಗೆ ಅಷ್ಟೊಂದು ಜನರಿಗೆ ಸಂಕ್ರಾಂತಿ ಕಾಳು ಕೊಟ್ಟದ್ದು, ಅಷ್ಟೆಲ್ಲ ಜಾಗಗಳಲ್ಲಿ ಓಡಾಡಿದ್ದೆಲ್ಲ ಹೊಸ ಉತ್ಸಾಹ ತಂದಿತ್ತು. ಅದೇ ಉತ್ಸಾಹದಲ್ಲಿ ಮನೆಗೆ ಬಂದವಳೇ ಕೈಕಾಲು ತೊಳೆದು ಊಟಕ್ಕೆ ಕೂತಾಗ ಅಪ್ಪನೂ ಇದ್ದ. ಅವತ್ತಿನ ಎಲ್ಲ ವರದಿಯನ್ನೂ ಅಪ್ಪ ಅಮ್ಮನಿಗೆ ಬಹು ಉತ್ಸಾಹದಿಂದ ಒಪ್ಪಿಸಿದೆ. ನಗುನಗುತ್ತಲೇ ಎಲ್ಲ ಕೇಳಿಸಿಕೊಂಡ ಅಪ್ಪ, ತಕ್ಷಣ ‘ನೀನು ಈ ಹಿತ್ತಾಳೆ ತಟ್ಟೆಯಲ್ಲಿ ಸಂಕ್ರಾಂತಿ ಕಾಳನ್ನು ತಗೊಂಡು ಹೋಗಿದ್ದೇ…?’ ಎಂದು ಕೇಳಿದ. ಹೂಂ.. ಎಂದು ತಲೆ ಅಲ್ಲಾಡಿಸಿದೆ. ತಕ್ಷಣ ಅಪ್ಪ ‘ಅದರ ಬದಲು ಗರಟೆ (ತೆಂಗಿನ ಚರಟ) ಅದರಲ್ಲಾದರೂ ತಗಂಡು ಹೋಗ್ಲಾಗಿತ್ತು…? ಹೋಗಿ ಹೋಗಿ ಈ ಕರಿ ಲೋಟದಲ್ಲಿ ತಗಂಡು ಹೋಯ್ದ್ಯಲೇ…’ ಎಂದ. ಆಗ ಅಪ್ಪ ಹಾಗೆ ಹೇಳಿದ್ದರ ಬಗ್ಗೆ ಏನೂ ಅನಿಸಲೇ ಇಲ್ಲ.

ಹಾಗೆ ಓಡುವ ಅಬ್ಬರದಲ್ಲಿ ಎಡವಿ ಬಿದ್ದುಬಿಟ್ಟೆ. ಕೈಯ್ಯಲ್ಲಿದ್ದ ಹಿತ್ತಾಳೆ ತಟ್ಟೆಯೂ ಬಿದ್ದು ಸಂಕ್ರಾಂತಿ ಕಾಳೆಲ್ಲ ಚೆಲ್ಲಿಹೋಯಿತು. ಕಲ್ಲು, ಮಣ್ಣುಗಳಿಲ್ಲದೆ ಮೇಲಕ್ಕಿರುವ ಕಾಳುಗಳನ್ನು ಮಾತ್ರ ಹೆಕ್ಕಿಕೊಂಡು ಲೋಟಕ್ಕೆ ತುಂಬಿಕೊಂಡು ಉಳಿದವುಗಳನ್ನೆಲ್ಲ ಹಾಗೆಯೇ ಬಿಟ್ಟು ಮುಂದೆ ಹೆಜ್ಜೆಹಾಕಿದೆ ಪೆಚ್ಚುಮೋರೆ ಹಾಕಿಕೊಂಡು. ಅಷ್ಟೊತ್ತಿಗೆ ತುಂಬ ಇದ್ದ ಕಾಳುಗಳು ಈಗ ಅರ್ಧಲೋಟಕ್ಕೆ ಬಂದಿತ್ತು.

ಆದರೆ ಈಗ ಅಪ್ಪ ಹೇಳಿದ ಆ ಮಾತು ನೆನೆದು ನಗು ಬರುತ್ತದೆ. ಅಷ್ಟು ಬೆಳ್ಳಗಿರುವ ಸಂಕ್ರಾಂತಿ ಕಾಳನ್ನು ಆ ಬಣ್ಣಗೆಟ್ಟ ಹಿತ್ತಾಳೆಯ ಕರಿಲೋಟದಲ್ಲಿ ಹಾಕಿಕೊಂಡು ಹೋಗುವುದಿಲ್ಲ, ನನಗೆ ನಾಚಿಕೆಯಾಗುತ್ತದೆ. ಬೇರೆ ಕರಡಿಗೆ ಕೊಡು ಅಂತ ಅಮ್ಮನ ಬಳಿ ಕೇಳಬೇಕು ಎಂದೂ ತಿಳಿಯಲಿಲ್ಲವಲ್ಲ ಎಂದು ಈಗಲೂ ಹೇಳಿಕೊಂಡು ನಗುತ್ತೇನೆ. ಆದರೆ ಅಷ್ಟರ ನಂತರ ಜನವರಿ ಮೊದಲ ವಾರದಲ್ಲೇ ಬಣ್ಣಬಣ್ಣದ ವಿವಿಧ ಆಕಾರದ ಡಬ್ಬಿಗಳು ನಮ್ಮ ಮನೆ ತುಂಬಿಕೊಂಡಿದ್ದವು.

ಅದನ್ನೇನೋ ಸರಿಮಾಡಿಕೊಂಡುಬಿಟ್ಟೆ. ಆದರೆ ಅಷ್ಟು ಆಸೆಪಟ್ಟು ಹೊಲಿಸಿಕೊಂಡ ನಶೆಪುಡಿ ಬಣ್ಣದ ಸ್ಕರ್ಟ್ ಮಾತ್ರ ಹಾಕಿಕೊಳ್ಳಲು ಆಗಲೇ ಇಲ್ಲ. ಕಾರಣ, ಅವತ್ತು ಅಮ್ಮ ಹೇಳಿದಂತೆ ಅಣ್ಣನ ಉಪನಯನಕ್ಕೆಂದು ಬೆತ್ತದ ಪೆಟ್ಟಿಗೆಯಲ್ಲೇ ತೆಗೆದಿಟ್ಟ ಸ್ಕರ್ಟ್ ಬಿಟ್ಟು ಸಮವಸ್ತ್ರವನ್ನೇ ಧರಿಸಿ ಶಾಲೆಗೆ ಹೋಗಿದ್ದೆ. ಆದರೆ ಅಣ್ಣನ ಉಪನಯನದ ಹೊತ್ತಿಗೆ ಅದೇ ಕನಸು, ಅದೇ ಆಸೆಯಿಂದ ಬೆತ್ತದ ಪೆಟ್ಟಿಗೆಯ ಮುಚ್ಚಳ ತೆಗೆದು ಸ್ಕರ್ಟ್ನ್ನು ತೆಗೆಯುತ್ತೇನೆ. ಎಲ್ಲಿದೆ ಅಲ್ಲಿ? ಅರ್ಧಕ್ಕರ್ಧ ಸ್ಕರ್ಟ್ ಅನ್ನು ಇಲಿ ತಿಂದು ಹಾಕಿತ್ತು. ಅಲ್ಲಿ ದೊಡ್ಡದಾದ ಬಿಳಿಯ ಹೂವಿನ ಡಿಸೈನ್ ಕೂಡ ಇದ್ದ ಕುರುಹೂ ಇಲ್ಲದ ಹಾಗೆ ಸ್ಕರ್ಟ್‍ ಅನ್ನು ಇಲಿ ಕಚ್ಚಿಹಾಕಿತ್ತು. ಆ ದೃಶ್ಯ ನೋಡಿದವಳಿಗೆ ಅಳು ತಡೆಯಲಾಗಲಿಲ್ಲ. ‘ಸಂಕ್ರಾಂತಿ ಹಬ್ಬಕ್ಕೂ ಹಾಕ್ಯಂಬ್ಲೆ ಕೊಟ್ಟಿದ್ದಿಲ್ಲೆ ನೀನು, ಈಗ ಉಪನೇನಕ್ಕೂ ಹಾಕ್ಯಂಬ್ಲೆ ಎಂಗೆ ಅಂಗಿನೇ ಇಲ್ಲೆ’ ಎಂದು ಜೋರಾಗಿ ಅಳಲು ಶುರುಮಾಡಿದ ನನ್ನನ್ನು ಸುಮ್ಮನಿರಿಸಲು ಅಮ್ಮನಿಗೂ ಸಾಧ್ಯವಾಗಲಿಲ್ಲ. ವರ್ಷಕ್ಕೊಂದು ಬಟ್ಟೆ ತರುವುದೇ ದುಸ್ತರ ಎಂಬಂತಿದ್ದ ಆ ಕಾಲದಲ್ಲಿ ಇನ್ನೊಂದು ಹೊಸ ಬಟ್ಟೆಯಂತೂ ತಂದುಕೊಡುವುದಿಲ್ಲವೆಂಬುದು ನನಗೆ ಗೊತ್ತಿತ್ತು. ಆದರೆ ಹರಕು ಸ್ಕರ್ಟ್‍ ಅನ್ನು ಹೇಗೆ ಹಾಕಿಕೊಳ್ಳಲಿ. ಅವತ್ತೆಲ್ಲ ಊಟವೂ ಸೇರಲಿಲ್ಲ. ನಿದ್ದೆಯೂ ಬರಲಿಲ್ಲ. ಅಳುತ್ತಲೇ ಬೆಳಗು ಮಾಡಿದೆ. ನನ್ನ ಅಳು ಕಂಡ ಅಪ್ಪನಿಗೂ ಮನಸ್ಸು ಕರಗಿ, ನಿಂಗೆ ಅವತ್ತೇ ಅವಳಿಗೆ ಹಾಕ್ಯಂಬ್ಲೆ ಕೊಡಲಾಯ್ದಿಲ್ಯ ಎಂದು ಅಮ್ಮನಿಗೆ ಬೈದು, ಇರು, ಬಟ್ಟೆ ಕೃಷ್ಣಂಗೆ ಹೇಳಿ ಹೊಸ ಅಂಗಿ ನಿಂಗೆ ತೆಕ್ಕೊಡ್ತಿ, ಅಳಡ ಎಂದು ಸಮಾಧಾನಿಸಿದ್ದು ಇಂದಿಗೂ ನೆನಪಾಗಿ ನನ್ನ ಕಣ್ಣು ಹನಿಗೂಡುತ್ತದೆ.

ಆದರೆ ಹೊಸಬಟ್ಟೆ ತರಲು ಅಮ್ಮ ಒಪ್ಪಲಿಲ್ಲ. ಇದನ್ನೇ ಏನಾದರೂ ಮಾಡೋಣ ಎಂದು ಮಾರನೇ ದಿನ ಒಂದು ಉಪಾಯಮಾಡಿದಳು. ಬಟ್ಟೆ ಕೃಷ್ಣನ ಬಳಿ ಇಲಿ ತಿಂದುಹಾಕಿದ ಅರ್ಧ ಸ್ಕರ್ಟ್ನ್ನು ತೋರಿಸಿ ಇದನ್ನು ಏನು ಮಾಡಬಹುದು ಎಂದು ಕೇಳಿದಳು. ಕೃಷ್ಣ ಇರಲಿ, ಸರಿಮಾಡಿಕೊಡುತ್ತೇನೆಂದು ನನ್ನನ್ನ ಸಮಾಧಾನ ಮಾಡಿ ಕಳುಹಿಸಿದ. ಆದರೆ ಆಶ್ಚರ್ಯವೆಂಬಂತೆ ಅಮ್ಮನ ಉಪಾಯ ಫಲಿಸಿತ್ತು. ಅದಕ್ಕೆ ದೊಡ್ಡ ಹೂವಿನ ಥರವೇ ಪ್ಯಾಚ್ವೇರ್ಕ್ ಮಾಡಿಕೊಟ್ಟ. ಇಲಿತಿಂದ ಗುರುತೂ ಇಲ್ಲದ ಹಾಗೆ ಹೊಸ ಡಿಸೈನ್ನಫಲ್ಲಿ ಕಂಗೊಳಿಸಿತು ನನ್ನ ನಶೆಪುಡಿ ಸ್ಕರ್ಟ್. ಮತ್ತೆ ಅದೇ ಖುಷಿಯಿಂದ ಸ್ಕರ್ಟ್ ಹಾಕಿಕೊಂಡು ಅಣ್ಣನ ಉಪನಯನವನ್ನು ಪೂರೈಸಿದೆ.

ಅದಕ್ಕೇ ಈಗಲೂ ನನಗೆ ಸಂಕ್ರಾಂತಿ ಹಬ್ಬ ಬಂತೆಂದರೆ ನೆನಪಾಗುವುದೇ ಕರಿಬಣ್ಣಕ್ಕೆ ತಿರುಗಿದ ಹಿತ್ತಾಳೆ ಲೋಟ ಮತ್ತು ಇಲಿ ತಿಂದ ನಶೆಪುಡಿ ಬಣ್ಣದ ಸ್ಕರ್ಟ್.