ಇಲ್ಲಿನ ಮಲ್ಲಿಕಾರ್ಜುನ ಗುಡಿಯ ಮೂರೂ ಶಿಖರಗಳು ಕಳಶಸಮೇತವಾಗಿ ಸುಸ್ಥಿತಿಯಲ್ಲಿದ್ದು ಹೊಯ್ಸಳ ವಾಸ್ತುಶಿಲ್ಪದ ಉತ್ತಮ ಮಾದರಿಗಳಾಗಿ ಉಳಿದುಕೊಂಡಿವೆ. ಎಡಭಾಗದ ಶಿಖರದ ಸುಖನಾಸಿಯ ಮುಂದೆ ಹೊಯ್ಸಳ ಲಾಂಛನವಿದೆ. ನಾಲ್ಕು ಸ್ತರಗಳ ವಿನ್ಯಾಸವಿರುವ ಶಿಖರಗಳು, ಶಿಖರಗಳ ಮೇಲಿನ ಕಿರುಕೋಷ್ಠಗಳಲ್ಲಿ ವೇಣುಗೋಪಾಲ, ನರಸಿಂಹ, ಲಕ್ಷ್ಮೀನಾರಾಯಣ, ಗಣಪತಿ, ಶಿವ, ಭೈರವ, ಹನುಮ, ಬ್ರಹ್ಮ, ಸರಸ್ವತಿ ಮೊದಲಾದ ಮೂರ್ತಿಗಳು ಗಮನಸೆಳೆಯುತ್ತವೆ. ಸಿಂಹಮುಖದ ಮೇಲುಸಿಂಗಾರವಿರುವ ಚಿಕ್ಕದೊಂದು ಕೋಷ್ಠದೊಳಗೆ ಕೊಳಲು ನುಡಿಸುತ್ತಿರುವ ಕೃಷ್ಣನೊಡನೆ ವೇಣುಗಾನದಿಂದ ಆಕರ್ಷಿತರಾದ ಗೋಪಿಕೆಯರು ಹಾಗೂ ಗೋವುಗಳನ್ನು ಚಿತ್ರಿಸಿರುವ ಬಗೆ ಮೋಹಕವಾಗಿದೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಇಪ್ಪತೈದನೆಯ ಕಂತು

 

ಹೊಯ್ಸಳರು ನಿರ್ಮಿಸಿದ ದೇವಾಲಯಗಳಲ್ಲಿ ಏಕಕೂಟ ಎಂದರೆ ಒಂದೇ ಶಿಖರವಿರುವ ಅನೇಕ ಗುಡಿಗಳೂ ತ್ರಿಕೂಟಾಚಲ ಎಂದರೆ ಮೂರು ಶಿಖರಗಳುಳ್ಳ ದೇವಾಲಯಗಳೂ ಸೇರಿವೆ. ಮಂಡ್ಯದ ಗೋವಿಂದನಹಳ್ಳಿಯ ದೇಗುಲವಂತೂ ಐದು ಶಿಖರಗಳಿರುವ ಗುಡಿ. ಶತಶತಮಾನಗಳನ್ನು ದಾಟಿ ಬಂದಿರುವ ಈ ಹೊಯ್ಸಳ ದೇಗುಲಗಳಲ್ಲಿ ಎಲ್ಲ ಶಿಖರಗಳೂ ಸುರಕ್ಷಿತವಾಗೇನೂ ಉಳಿದಿಲ್ಲ. ಗೋಡೆಯ ಮೇಲಿನ ಶಿಲ್ಪಗಳು ಜನರ ದುಷ್ಟವರ್ತನೆ, ಅವಿವೇಕತನಗಳಿಂದ ಹಾನಿಗೀಡಾದರೆ, ಶಿಖರನಿರ್ಮಿತಿಗಳು ಹವಾಮಾನ ವೈಪರೀತ್ಯದಿಂದ ಸವೆದು ನವೆದು ಕುಸಿದಿರುವುದೇ ಹೆಚ್ಚು. ಆದರೂ ಕೆಲವು ಶಿಖರಗಳು ಕಾಲದ ಹೊಡೆತವನ್ನು ಧೈರ್ಯವಾಗಿ ಎದುರಿಸಿ ಗಟ್ಟಿಮುಟ್ಟಾಗಿ ಉಳಿದುಕೊಂಡಿವೆ. ಇಂತಹ ದೇವಾಲಯಗಳಲ್ಲಿ ಹಿರೇನಲ್ಲೂರಿನ ಮಲ್ಲಿಕಾರ್ಜುನ ದೇಗುಲವೂ ಒಂದು.

ಹಿರೇನಲ್ಲೂರು- ಇದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಒಂದು ಗ್ರಾಮ. ಕಡೂರಿನಿಂದ ಬೀರೂರು ರಸ್ತೆಯಲ್ಲಿ ಬಲಕ್ಕೆ ಸಿಗುವ ದಾರಿಯಲ್ಲಿ ಹೊರಳಿ ಹನ್ನೆರಡು ಕಿ.ಮೀ. ಸಾಗಿದರೆ ಈ ಗ್ರಾಮವನ್ನು ತಲುಪಬಹುದು. ಇಲ್ಲಿನ ಪ್ರಾಚೀನ ದೇವಾಲಯದ ನಿರ್ಮಿತಿಯನ್ನು ಕಾಪಾಡಿಕೊಳ್ಳುವಲ್ಲಿ ಸ್ಥಳೀಯರ ಸಹಕಾರದೊಂದಿಗೆ ಸರ್ಕಾರವೂ ಆಸ್ಥೆವಹಿಸಿ ಉತ್ತಮವಾಗಿ ನಿರ್ವಹಿಸುತ್ತಿದೆ.

ಮೊದಲಿಗೇ ಹೇಳಿದಂತೆ, ಇಲ್ಲಿನ ಮಲ್ಲಿಕಾರ್ಜುನ ಗುಡಿಯ ಮೂರೂ ಶಿಖರಗಳು ಕಳಶಸಮೇತವಾಗಿ ಸುಸ್ಥಿತಿಯಲ್ಲಿದ್ದು ಹೊಯ್ಸಳ ವಾಸ್ತುಶಿಲ್ಪದ ಉತ್ತಮ ಮಾದರಿಗಳಾಗಿ ಉಳಿದುಕೊಂಡಿವೆ. ಎಡಭಾಗದ ಶಿಖರದ ಸುಖನಾಸಿಯ ಮುಂದೆ ಹೊಯ್ಸಳ ಲಾಂಛನವಿದೆ. ನಾಲ್ಕು ಸ್ತರಗಳ ವಿನ್ಯಾಸವಿರುವ ಶಿಖರಗಳು, ಶಿಖರಗಳ ಮೇಲಿನ ಕಿರುಕೋಷ್ಠಗಳಲ್ಲಿ ವೇಣುಗೋಪಾಲ, ನರಸಿಂಹ, ಲಕ್ಷ್ಮೀನಾರಾಯಣ, ಗಣಪತಿ, ಶಿವ, ಭೈರವ, ಹನುಮ, ಬ್ರಹ್ಮ, ಸರಸ್ವತಿ ಮೊದಲಾದ ಮೂರ್ತಿಗಳು ಗಮನಸೆಳೆಯುತ್ತವೆ.

ಸಿಂಹಮುಖದ ಮೇಲುಸಿಂಗಾರವಿರುವ ಚಿಕ್ಕದೊಂದು ಕೋಷ್ಠದೊಳಗೆ ಕೊಳಲು ನುಡಿಸುತ್ತಿರುವ ಕೃಷ್ಣನೊಡನೆ ವೇಣುಗಾನದಿಂದ ಆಕರ್ಷಿತರಾದ ಗೋಪಿಕೆಯರು ಹಾಗೂ ಗೋವುಗಳನ್ನು ಚಿತ್ರಿಸಿರುವ ಬಗೆ ಮೋಹಕವಾಗಿದೆ. ಮೂರೂ ಶಿಖರಗಳ ಮೇಲೆ ಕೋಷ್ಠಗಳಲ್ಲಿರುವ ದೇವತೆಗಳನ್ನೂ ಅಕ್ಕಪಕ್ಕದ ವಿಸ್ತರಣದ ಮೇಲೆ ಬಳ್ಳಿಗಳ ವಿನ್ಯಾಸದೊಳಗೆ ದೇವಪರಿವಾರ, ಸಂಗೀತಗಾರರು, ವ್ಯಾಳ, ಆನೆ, ಹಂಸ ಮೊದಲಾದವನ್ನೂ ಚಿತ್ರಿಸಿರುವ ಬಗೆ ಶಿಖರಗಳ ಸೊಬಗಿಗೆ ಮೆರುಗು ನೀಡಿವೆ. ಶಿಖರದ ಎರಡನೆಯ ಸ್ತರದ ಅಂಚಿಗೆ ಕಿರುಕಳಶಗಳನ್ನು ಇರಿಸಿದೆ.

ಎತ್ತರದ ಜಗತಿ (ಜಗಲಿ)ಯ ಮೇಲೆ ದೇವಾಲಯದ ಗೋಡೆ ಹಾಗೂ ಕಂಬಗಳನ್ನು ನಿರ್ಮಿಸಿರುವುದರಿಂದ ದೇವಾಲಯ ಆಕರ್ಷಕವಾಗಿ ಕಾಣುತ್ತದೆ, ಜಗತಿಯ ಸ್ತರಗಳು ಒಂದರಮೇಲೊಂದರಂತೆ ಒಳಹೊರಗೆ ಚಾಚಿಕೊಂಡಂತಿದ್ದು ಕಟ್ಟಡ ಎತ್ತರವಾಗಿರುವಂತೆ ತೋರಿಕೆಯುಂಟುಮಾಡುತ್ತವೆ. ಗೋಡೆಯ ಮೇಲಂಚಿನಿಂದ ಚಾವಣಿ ಇಳಿಜಾರಾಗಿ ಕಟ್ಟಡದ ಸುತ್ತ ಹರಡಿಕೊಂಡಿರುವುದು ಈ ಶೋಭೆಯನ್ನು ಇನ್ನಷ್ಟು ಹೆಚ್ಚಿಸಿದೆ. ಗರ್ಭಗುಡಿಯಲ್ಲಿ ಇರುವ ಶಿವಲಿಂಗವು ಮಲ್ಲಿಕಾರ್ಜುನನೆಂಬ ಹೆಸರಿನಿಂದ ಖ್ಯಾತಿಪಡೆದಿದೆ. ಗರ್ಭಗುಡಿಯ ದ್ವಾರಪಟ್ಟಕದ ಮೇಲೆ ಗಜಲಕ್ಷ್ಮಿ, ನವರಂಗದಲ್ಲಿ ತಿರುಗಣೆಯಂತ್ರದಿಂದ ಸಜ್ಜುಗೊಳಿಸಿದ ಕಂಬಗಳೂ ಅವುಗಳ ಮೇಲಿನ ಸೂಕ್ಷ್ಮ ಕೆತ್ತನೆಯೂ ಮನಸೆಳೆಯುತ್ತವೆ. ಇಲ್ಲೇ ಪಕ್ಕದಲ್ಲಿ ಸುಮಾರು ಎಂಟು ಅಡಿ ಎತ್ತರವಿರುವ ಸುಂದರವಾದ ನಂದಿಯ ವಿಗ್ರಹವೂ ಇದ್ದು, ಅದರ ಅಲಂಕಾರ, ಆಭರಣಾದಿಗಳ ಕೆತ್ತನೆಯ ಸೊಬಗು ಕಣ್ತುಂಬುವಂತಿದೆ.

ಮುಂಭಾಗದಲ್ಲಿ ಕೈಮುಗಿದು ಕುಳಿತ ಗರುಡನನ್ನು ಚಿತ್ರಿಸಿರುವ ಎತ್ತರದ ಪೀಠದ ಮೇಲೆ ನಿಂತಿರುವ ವಿಷ್ಣುವಿನ ವಿಗ್ರಹವನ್ನು ಒಂದು ಬದಿಯ ಕೋಷ್ಠದಲ್ಲಿ ಕಾಣಬಹುದು. ಶಿವದೇಗುಲದಲ್ಲಿ ವಿಷ್ಣುವಿನ ರೂಪಗಳನ್ನೂ ನೆಲೆಗೊಳಿಸುವ ಮೂಲಕ ಶೈವ-ವೈಷ್ಣವ ಅನುಯಾಯಿಗಳ ವೈಮನಸ್ಯವನ್ನು ತಗ್ಗಿಸಿ ಸಾಮರಸ್ಯವನ್ನು ಜಾರಿಗೊಳಿಸಲು ಹೊಯ್ಸಳ ಅರಸರು ಮಾಡಿದ ಪ್ರಾಮಾಣಿಕ ಯತ್ನವನ್ನು ಇಲ್ಲೂ ಕಾಣಬಹುದು.

ನವರಂಗದ (ಒಳಚಾವಣಿ) ಭುವನೇಶ್ವರಿಯಲ್ಲಿ ದಿಕ್ಪಾಲರು ಹಾಗೂ ಗಣಗಳ ನಡುವೆ ಶೋಭಿಸುವ ನಟರಾಜ ಶಿವನ ಕೆತ್ತನೆ ಅಪೂರ್ವವಾಗಿದೆ. ಭುವನೇಶ್ವರಿಯ ಕೆಳಪಟ್ಟಿಯ ಮೇಲೆ ಒಂದೆಡೆ ಶಿವಪಾರ್ವತಿಯರನ್ನೂ ಇನ್ನೊಂದೆಡೆ ಅನಂತಪದ್ಮನಾಭನನ್ನೂ ಕಾಣಬಹುದು.

ಹೊರಗೋಡೆಯ ಮೇಲೆದ್ದ ಕಂಬಗಳ ನಡುನಡುವೆ ಸಮಾನಾಂತರವಾಗಿ ಅಲ್ಲಲ್ಲಿ ಕೀರ್ತಿಮುಖ ಅಥವಾ ಕಿರುಗೋಪುರಗಳನ್ನೂ ವಿನ್ಯಾಸಗೊಳಿಸಿದ್ದು ಅವುಗಳ ಕೆಳಭಾಗದಲ್ಲಿ ದೇವತಾಶಿಲ್ಪಗಳನ್ನು ರೂಪಿಸಲಾಗಿದೆ. ಎಡಹೆಗಲ ಮೇಲೆ ಭೂದೇವಿಯನ್ನು ಇರಿಸಿಕೊಂಡು ಬಲಗೈಯಲ್ಲಿ ಗದೆಹೊತ್ತು ಹೊರಟ ವರಾಹಾವತಾರಿ ವಿಷ್ಣು, ಗಣಪತಿ, ಗಜಾಸುರಸಂಹಾರಿ ಶಿವ, ಐರಾವತವನ್ನೇರಿ ಹೊರಟ ಇಂದ್ರ, ಮೊದಲಾದ ಶಿಲ್ಪಗಳಿವೆ. ಈ ಮುಖ್ಯದೇವತಾ ಶಿಲ್ಪಗಳ ಬದಿಗೆ ಬಳ್ಳಿಗಳ ಚಾವಣಿಯಡಿ ದೇವಪರಿವಾರದವರನ್ನೋ ಗರುಡ, ಮತ್ಸ್ಯವನ್ನು ಭೇದಿಸುತ್ತಿರುವ ಅರ್ಜುನ ಮೊದಲಾದವರನ್ನೋ ಕಾಣಬಹುದು.


ದೇವಾಲಯದ ಸಮೀಪದಲ್ಲೇ ಆಂಜನೇಯನ ದೊಡ್ಡ ಮೂರ್ತಿಯಿರುವ ದೇಗುಲವೂ ಇದೆ. ಅನತಿದೂರದಲ್ಲಿ ಆಸಂದಿಯೆಂಬ ಗ್ರಾಮವಿದ್ದು ಅಲ್ಲೂ ಭೈರವೇಶ್ವರನ ಪ್ರಾಚೀನ ಗುಡಿಯಿದೆ. ಕಡೂರಿನತ್ತ ಬರುವಾಗ ಮರೆಯದೆ ಈ ಸ್ಥಳಗಳನ್ನು ಸಂದರ್ಶಿಸಿ.