ಒಂದು ಕಾಲದಲ್ಲಿ ಬಹಳ ಜನಪ್ರಿಯವಾಗಿದ್ದ ತಾಯಿನಾಡು ಪತ್ರಿಕೆಯನ್ನು ಆರಂಭಿಸಿ ಮುನ್ನಡೆಸಿದ ಪಾಲಹಳ್ಳಿ ರಾಮಯ್ಯ ಅವರ ಮಗ ಪಾಲಹಳ್ಳಿ ವಿಶ್ವನಾಥ್ ಅವರು ಭೌತವಿಜ್ಞಾನದ ಪ್ರಾಧ್ಯಾಪಕರಾಗಿ ದೇಶವಿದೇಶಗಳಲ್ಲಿ ವಿಜ್ಞಾನವನ್ನು ಬೋಧಿಸಿದವರು. ತಮ್ಮ ವಿಭಿನ್ನ ಶೈಲಿಯಲ್ಲಿ ವಿಜ್ಞಾನ ಬರಹಗಳನ್ನು ಬರೆಯಬಲ್ಲವರು. ತಮ್ಮ  ತಂದೆಯವರು ಆ ಕಾಲಕ್ಕೇ ಪ್ರಭುತ್ವವನ್ನು ಎದುರು ಹಾಕಿಕೊಂಡು ಪತ್ರಿಕೋದ್ಯಮವನ್ನು ನಿಭಾಯಿಸಿದ ಬಗೆ ಹಾಗೂ ಸರ್ವರಿಗೆ ಆಸರೆಯಂತಿದ್ದ ತುಂಬು ಕುಟುಂಬವನ್ನು ಮುನ್ನಡೆಸಿದ ರೀತಿಯನ್ನು ವಿಶ್ವನಾಥ್ ಹತ್ತಿರದಿಂದ ಗಮನಿಸಿದವರು. ಕುಟುಂಬದೊಳಗಿನ ಪಲ್ಲಟಗಳನ್ನೂ ಗಮನಿಸಿದವರು. ಅವರು ಬರೆದ ‘ಹೀಗೊಂದು ಕುಟುಂಬದ ಕಥೆ’ ಪುಸ್ತಕದ ಆಯ್ದ ಭಾಗ ಇನ್ನು ಮುಂದೆ ಪ್ರತಿ ಬುಧವಾರ ಪ್ರಕಟವಾಗಲಿದೆ.

 

ಭೌಮನೆ ಮತ್ತು ಸುತ್ತಮುತ್ತ:

೧೯೪೦ ರ ಮೊದಲ ದಶಕಗಳಲ್ಲಿ ಚಾಮರಾಜಪೇಟೆ ಮನೆ ಚಿಕ್ಕದಾಗತೊಡಗಿತು. ನಮ್ಮ ಚಿಕ್ಕಪ್ಪಂದಿರೆಲ್ಲಾ ಮದುವೆ ಮಾಡಿಕೊಳ್ಳಲು ಶುರುಮಾಡಿದ್ದರು (1941ರಲ್ಲಿ ಮೊದಲ ಚಿಕ್ಕಪ್ಪ ನಾರಾಯಣರ ಮದುವೆ – ನಂತರ ಎರಡನೆಯ (1942) ಮತ್ತು ಮೂರನೆಯ (1946) ಚಿಕ್ಕಪ್ಪಂದಿರ – ವೆಂಕಟೇಶ ಮತ್ತು ಶ್ರೀನಿವಾಸ) … ಅದರ ಜೊತೆ ಮಕ್ಕಳೂ ಬರತೊಡಗಿದ್ದವು. ೧೯೪೫ ರಲ್ಲಿ ರಾಮಯ್ಯ ದಂಪತಿಗಳು ಬಸವನಗುಡಿಯಲ್ಲಿ ಒಂದು ಮನೆ ಕಟ್ಟಿದರು. ಸುಮಾರು 20-30 ಜನ ವಾಸಿಸಬಹುದೆಂಬ ಆಲೋಚನೆಯಿದ್ದಿರಬೇಕು. ಈ ಸೈಟಿನ ಅಳತೆ ೬೪ x ೮೦; ವಿಸ್ತೀರ್ಣ ಸುಮಾರು ೫೦೦೦ ಚದುರ ಅಡಿಗಳು. ಅದು ಇದ್ದದ್ದು ಬಸವನಗುಡಿ ಪೋಲೀಸ್ ಸ್ಟೇಷನ್ ಹತ್ತಿರದ ಕಾಲಪ್ಪ ಬ್ಲಾಕ್ ಎಂಬ ರಸ್ತೆಯಲ್ಲಿ. ಅವರು ಸೈಟಿಗೆ ಕೊಟ್ಟ ಹಣ-1000 ರೂಪಾಯಿಗಳು (ಚೆಕ್) . ಅಲ್ಲಿ ಹಿಂದೆ ಮಾವಿನ ತೋಟವಿತ್ತೆಂದು ಯಾರೊ ಹೇಳಿದ್ದ ಜ್ಞಾಪಕ. ಪ್ರಾಯಶಃ ಕಸಿನ್ ರಾಮೂರ್ತಿ ಬರೆದಿರುವ ಮನೆಯ ನಕ್ಷೆಯನ್ನು ಚಿತ್ರದಲ್ಲಿ ತೋರಿಸಿದೆ. ಮನೆ ಕಟ್ಟಲು ಸುಮಾರು 40000 ರೂಪಾಯಿ (ಈಗಿನ ದುಡ್ಡಿನಲ್ಲಿ 60-70 ಲಕ್ಷ) ಖರ್ಚಾಯಿತು ಎಂದು ಯಾರೋ ಹೇಳಿದ ನೆನಪು. ಕಂಟ್ರಾಕ್ಟರೂ ಬಹಳ ದುಡ್ಡು ಮಾಡಿಕೊಂಡು ಒಂದು ಮನೆ ಕಟ್ಟಿಕೊಂಡ ಎಂದೂ ಕೇಳಿದ್ದೆ.(ನಿಜವಿರಬಹುದೋ ಏನೋ. ಆದರೆ ಕಂಟ್ರಾಕ್ಟರೂ ಎಂದಾದರೂ ಮನೆ ಕಟ್ಟಿಕೊಳ್ಳಬೇಕಲ್ಲವೇ?).

ಮನೆಗೆ ಮೂರು ದಿಕ್ಕುಗಳಲ್ಲಿ ಬಾಗಿಲುಗಳಿದ್ದವು – ಪೂರ್ವ(ಹಿಂದಿನ), ಪಶ್ಚಿಮ (ಮುಂದಿನ) ಮತ್ತು ಉತ್ತರ. ಉತ್ತರದ ಬಾಗಿಲನ್ನು ಹೆಚ್ಚು ಜನ ಬಳಸುತ್ತಿದ್ದು ಪಶ್ಚಿಮದ ಬಾಗಿಲು ತಂದೆಯವರ ಮತ್ತು ಇತರ ವಿಶೇಷ ಅತಿಥಿಗಳಿಗೆ ಮೀಸಲಾಗಿತ್ತು. ಪೂರ್ವಕ್ಕೆ (ಹಿಂದುಗಡೆ) ಇಲ್ಲೂರು ಶೆಟ್ಟರ ಮನೆ ಇದ್ದು ಎರಡು ಮನೆಗಳ ಮಧ್ಯೆ ಒಂದು ಎತ್ತರದ ಗೋಡೆ ಇದ್ದಿತು. ಮನೆಯ ದಕ್ಷಿಣಕ್ಕೆ ಒಂದು ಕನ್ಸರ್ವೆನ್ಸಿ ಗಲ್ಲಿ ಮತ್ತು ಪಶ್ಚಿಮಕ್ಕೆ ಕಾಲಪ್ಪ ಬ್ಲಾಕ್ ರಸ್ತೆ ಇದ್ದವು ನಮ್ಮ ರಸ್ತೆಗೆ ಟಾರ್ ಹಾಕಿದ್ದು ಇನ್ನೂ ನೆನಪಿನಲ್ಲಿದೆ. ಆಗೆಲ್ಲ ನಾವು ಚಪ್ಪಲಿ ಹಾಕಿಕೊಳ್ಳುತ್ತಿರಲಿಲ್ಲ. ಟಾರ್ ಹಾಕಿದ ದಿನ ಪಾದವೆಲ್ಲಾ ಕಪ್ಪಾಗಿ ಮನೆಯಲ್ಲಿ ಬೈಸಿಕೊಂಡು ಆಮೇಲೆ 2-3 ದಿನ ಸೀಮೆಎಣ್ಣೆ ಹಾಕಿ ಕೆರೆಯುತ್ತಿರಬೇಕಾಯಿತು..

ಉತ್ತರ ದಿಕ್ಕಿಗೆ, ನಮ್ಮ ಬಲ ಪಕ್ಕಕ್ಕೆ ಮುತ್ಯಾಲನಾಯ್ಡು ಅವರ ಗಾರೆ ಕಾಲುವೆ ಇದ್ದಿತು. ಅವರು ಚಿತ್ತೂರು ಕಡೆಯವರಾಗಿದ್ದು ಮುಂದಿನ ದಶಕಗಳಲ್ಲಿ ಅಲ್ಲಿಂದ ಹಲವಾರು ಕುಟುಂಬಗಳು ಬಂದು ಈ ಕಾಲಪ್ಪ ಬ್ಲಾಕ್‌ ರಸ್ತೆಯಲ್ಲಿ ನೆಲೆಸಿದರು. ನಮ್ಮ ಎದಿರು ಎರಡು ಅಂತಸ್ತಿನ 600-700 ಚದುರಡಿಯ ಮನೆ ಮತ್ತು ವಿಶಾಲವಾದ ಕಾಂಪೌಂಡು ಇದ್ದಿತು. ಮೇಲೆ ಅದರ ಮಾಲೀಕರು ಗೋಡ್ಸೆ ಕುಟುಂಬ- ಅವರು, ಪತ್ನಿ (ಅಕ್ಕ ಎಂದು ಕರೆಯುತ್ತಿದ್ದೆವು), ಮಗ ರಾಮಕೃಷ್ಣ, ಸಂಬಂಧಿ ಸುಶೀಲ. ಗೋಡ್ಸೆಯವರು ಕರಿ ಟೋಪಿ ಹಾಕಿಕೊಂಡು ಸೈಕಲ್ ಬಳಸುತ್ತಿದ್ದು ಸೌಮ್ಯವಾಗಿರುತ್ತಿದ್ದರು (ಗಾಂಧಿಹತ್ಯೆಯ ಸಮಯದಲ್ಲಿ ಈ ಕುಟುಂಬಕ್ಕೆ ಏನಾದರೂ ತೊಂದರೆ ಬಂದಿತೆ? ಪ್ರಾಯಶಃ ಇಲ್ಲ.) ಕೆಳಗಡೆ ದೇವರಾಯಸಮುದ್ರದ ಒಂದು ಅಯ್ಯರ್ ಕುಟುಂಬ – ರಾಮಚಂದ್ರ ಅಯ್ಯರ್ ಮತ್ತು ತಂಗಮ್ಮ ಮತ್ತು ಅವರ 6 ಮಕ್ಕಳು; ತಂಗಮ್ಮನವರ ಕುಟುಂಬ 6-7 ವರ್ಷಗಳಿದ್ದು ಬೇರೆ ಹೋದಾಗ ಗೋಡ್ಸೆ ಕುಟುಂಬ ಕೆಳಗೆ ಬಂದಿತು. ಮತ್ತೊಂದು ಮಹಾರಾಷ್ಟ್ರದ ಕುಟುಂಬ – ಬಾಪಟ್ – ಮೇಲಿನ ಮನೆಯನ್ನು ತೆಗೆದುಕೊಂಡರು. ಪತಿ ಬಿಟಿಎಸ್ ನಲ್ಲಿದ್ದರು; ಪತ್ನಿ ಗೌರಾತಾಯಿ (ನಿಜವಾಗಿಯೂ ಗೌರ ವರ್ಣದ ಮಹಿಳೆ). ಮತ್ತೊಂದು ಕುಟುಂಬ ಸಾವಿತ್ರಮ್ಮನವನರದ್ದು. ಅವರ ಪತಿ ರಂಗಸ್ವಾಮಿ ಬ್ಯಾರಿಸ್ಟರ್ ಆಗಿದ್ದರು. ಮನೆಯೂ ಬಹಳ ದೊಡ್ಡದಿತ್ತು. ಈ ಕುಟುಂಬಗಳೆಲ್ಲಾ ನಿಧಾನವಾಗಿ ನಮಗೆ ಹತ್ತಿರವಾದವು. ಅದನ್ನು ಮುಂದೆ ನೋಡೋಣ. ಈಗಂತೂ ಮನೆಯ ಅಕ್ಕಪಕ್ಕ ಬೇಕಾದಷ್ಟು ಕುಟುಂಬಗಳು ಇವೆ, ಆದರೆ ಹಿಂದೆ ಇದ್ದಂಥ ಬಾಂಧವ್ಯವಿಲ್ಲ. ಅವರುಗಳ ಗುರುತೂ ಇಲ್ಲ. ಇದು ಎಲ್ಲ ಪಟ್ಟಣಗಳೂ ಮಹಾನಗರಗಳಾಗಿ ಪರಿವರ್ತನೆಯಾಗಲು ಕೊಡಬೇಕಾದ ಶುಲ್ಕ!

(ಚಿತ್ರ: ಮೇಲಿನ ಎರಡು ಚಿತ್ರಗಳು ‘ನಮ್ಮ ಮನೆ’ ಪುಸ್ತಕದಿಂದ 1946/47) ಕೆ:ಮನೆಯ ಮುಂಭಾಗ (1967) ಮತ್ತು ಒಳಗಿನ ಹಾಲು/ಹಜಾರ (2008) ಹಜಾರದ ಒಂದು ನೋಟ (2008), ಆ ದಿನಗಳಲ್ಲಿ ಇಷ್ಟು ಖಾಲಿ ಇರುತ್ತಿರಲಿಲ್ಲ! ಮಧ್ಯದಲ್ಲಿ ಹೂವುಗಳ ಪೋರ್ಸಲೈನ್ ಚಿತ್ತಾರ)

ನಮ್ಮ ಪಕ್ಕದ ಗಲ್ಲಿಗೂ ಪೋಲೀಸ್ ಸ್ಟೇಷನ್ ರಸ್ತೆಗೂ ಮಧ್ಯೆ ಒಂದು ಪುಟ್ಟ ಮೈದಾನವಿತ್ತು. ಅದು ನಿಜವಾಗಿಯೂ ಜಗನ್ನಾಥರಾಯರು ಎಂಬುವರಿಗೆ ಸೇರಿದ್ದ ದೊಡ್ಡ ಸೈಟಿನ ಭಾಗ. ಆದರೆ ಸುಮಾರು ಖಾಲಿ ಇತ್ತು. ಅಲ್ಲಿ ನಾವೆಲ್ಲ 6-5 ವರ್ಷ ಕ್ರಿಕೆಟ್ ಆಡುತ್ತಿದ್ದೆವು. ಮುಂದೆ ಅ ಜಾಗದಲ್ಲಿ ಅನೇಕ ಮನೆಗಳು ಬಂದವು.

ನಾವು ಅಲ್ಲಿ ಹೋದ 4-5 ವರ್ಷಗಳು ಅಕ್ಕ ಪಕ್ಕದ ಹಲವಾರು ಮಕ್ಕಳು ಗಲ್ಲಿಯನ್ನು ಕಕ್ಕಸಿಗೆ ಉಪಯೋಗಿಸುತ್ತಿದ್ದವು. ನಮ್ಮ ಮನೆಗೂ ಗಲ್ಲಿಗೂ ಮಧ್ಯೆ ಒಂದು ಗೋಡೆ ಇದ್ದಿತು. 60ರ ದಶಕದಲ್ಲಿ ಬಸವನಗುಡಿಯ ಎಲ್ಲ ಕನ್ಸರ್ವೆನ್ಸಿ ಗಲ್ಲಿಗಳನ್ನು ಪುಟ್ಟರಸ್ತೆಗಳಾಗಿ ಪರಿವರ್ತಿಸಲು ಕಾರ್ಪೊರೇಷನ್ ಪ್ರಾರಂಭಿಸಿತು. ಆದರೆ ನಮ್ಮದು ಅದಕ್ಕೆ ಸೂಕ್ತವಾಗಿರದಿದ್ದರಿಂದ ಅದನ್ನು ಶರತ್ತುಗಳ ಮೇಲೆ ನಮ್ಮ ಅಧೀನಕ್ಕೆ(99 ವರ್ಷಗಳ ಗುತ್ತಿಗೆ) 1960ರ ದಶಕದಲ್ಲಿ ಕೊಟ್ಟರು. ಅನಂತರ ಅಲ್ಲಿ ಬರೇ ಗಿಡಗಳನ್ನು ನೆಡಲಾಯಿತು. ಹಾಗೇ ಮಾವು, ಹಲಸು ಮತ್ತು ಬೇವಿನ ಮರಗಳೂ ಬೆಳೆದುಕೊಂಡವು.

ಮನೆಯ ಒಳಗೆ

ಮನೆಯ ಮಧ್ಯದಲ್ಲಿನ ಜಾಗವನ್ನು ನಾವು ಹಾಲು/ಹಜಾರ ಎಂದು ಕರೆಯುತ್ತಿದ್ದೆವು (ಅಲ್ಲೇ ಮೊದಲು ಒಂದು ದೊಡ್ಡ ಹುತ್ತವಿತ್ತಂತೆ); ಹಾಲಿನ (ವಿಸ್ತೀರ್ಣ-500-600 ಚದುರ ಅಡಿ) ಗೋಡೆಗಳ (ಮತ್ತು ಕೆಲವು ಕೋಣೆಗಳ) ಎತ್ತರ-13 ಅಡಿ ಮತ್ತು 12 ಅಡಿ ಗವಾಕ್ಷಿಗಳಿದ್ದವು. ಇದರಿಂದಾಗಿ ಹಾಲು ಯಾವಾಗಲೂ ತಣ್ಣಗೆ ಇರುತ್ತಿತ್ತು. 1970ರಲ್ಲಿ ಹಾಲಿನಲ್ಲಿ ಮನೆಯ ಮೊದಲ ಎಲೆಕ್ಟ್ರಿಕ್ ಫ್ಯಾನ್ ಅಳವಡಿಸಲಾಯಿತು. ಹಾಲಿನ ಗೋಡೆಗಳ ಮೇಲೆ ಹಲವಾರು ಪೋರಸಲೈನ್ ಚದುರಬಿಲ್ಲೆ (ಟೈಲು) ಗಳ ದೇವರ – ಗಣೇಶ, ಸರಸ್ವತಿ, ಸತ್ಯನಾರಾಯಣ, ಲಕ್ಷ್ಮಿ, ದತ್ತಾತ್ರೇಯ ಇತ್ಯಾದಿ- ಚಿತ್ರಗಳು ಮತ್ತು ನಮ್ಮ ತಾಯಿ ಚಿಕ್ಕಂದಿನಲ್ಲಿ ಮಾಡುತ್ತಿದ್ದ ಕಟ್ಟು ಹಾಕಿಸಿದ ಕೆಲವು ಎಂಬ್ರಾಯಡರಿ ಚಿತ್ರಗಳು ಇದ್ದವು. ಆ ಹಾಲಿಗೆ 10 ಬಾಗಿಲುಗಳು ಇದ್ದು ಅದರ ಸುತ್ತ 4 ಮಲಗುವ ಕೋಣೆಗಳು, 3 ವರೆಂಡಾ, ಒಂದು ಬಚ್ಚಲ ಮನೆ, ಅಡಿಗೆಯ ಮನೆ, ಒಂದು ಊಟದ ಮನೆ (ಆದರೂ ಈ ಕೋಣೆಯಲ್ಲಿ ಜಾಗ ಹೆಚ್ಚಿಲ್ಲದಿದ್ದರಿಂದ ಹಾಲಿನಲ್ಲೇ ಜನ ಊಟ ಮಾಡುತ್ತಿದ್ದರು) ಒಂದು ದೇವರ ಮನೆ.

ಹಾಲಿನಲ್ಲಿ ಸುಲಭವಾಗಿ 50 ಜನ ಕೂರಬಹುದಿತ್ತು. ಮುಂದೆ ಅಲ್ಲಿ ಬೇಕಾದಷ್ಟು ಸಮಾರಂಭಗಳು ನಡೆಯಲಿದ್ದವು: ನಾಮಕರಣಗಳು, ನಿಶ್ಚಿತಾರ್ಥಗಳು, ಮದುವೆಗಳು (ನನ್ನ +), ರಾಜಕೀಯ ಸಭೆಗಳು ಇತ್ಯಾದಿ. ನಮ್ಮ ತಾಯಿ ಮತ್ತು ಅಣ್ಣ ಬ್ರಹ್ಮಾನಂದರ ಅಂತಿಮ ಪ್ರಯಾಣದ ಮುಂಚೆ ಅವರ ಮರಣ ಶಯ್ಯೆಯೂ ಆ ಹಾಲಿನಲ್ಲೇ ಇತ್ತು. ನನ್ನ ಚಿಕ್ಕಂದಿನಲ್ಲಿ (10-12 ವರ್ಷಗಳ ತನಕ) ನಾವೆಲ್ಲಾ ಹಾಲಿನಲ್ಲಿ ಸಾಲಾಗಿ ಮಲಗಿರುತ್ತಿದ್ದೆವು. ಕಡೆ ಕಡೆಯಲ್ಲಿ ನಮ್ಮ ತಾಯಿ 2-3 ಸಹಾಯಕರ ಜೊತೆ ಹಾಲಿನಲ್ಲೇ ಮಲಗುತ್ತಿದ್ದರು. ಮನೆಯಲ್ಲಿ ಅಂತಹ ಆಧುನಿಕ ಪೀಠೋಪಕರಣಗಳೇನೂ ಇರಲಿಲ್ಲ. ಹಳೆಯಕಾಲದ ಸೋಫ ಮತ್ತು ಕೆಲವು ಕಿರಲೋಸಕರ ಕಬ್ಬಿಣದ ಕುರ್ಚಿಗಳು ಇದ್ದವು. ಬಂದವರು ಎಷ್ಟೋ ಜನ ನೆಲದಮೇಲೆ/ಮಣೆಗಳ ಮೇಲೆ ಕೂರುತ್ತಿದ್ದರು.

ಹಿಂಭಾಗದಲ್ಲಿ ಎರಡು ಕೋಣೆಗಳಿದ್ದವು. ಅಲ್ಲಿ ಕೆಲವು ಸಮಯ ಬಾಡಿಗೆಗೆ ಯಾರಾದರೂ ಇರುತ್ತಿದ್ದರು. ಬಾಡಿಗೆಯವರು ಯಾರೂ ಇಲ್ಲದಿದ್ದರೆ ಮುಟ್ಟಾದ ಹೆಂಗಸರು ಇರುತ್ತಿದ್ದರು. 1980ರ ದಶಕದಲ್ಲಿ ಅಣ್ಣ ಬ್ರಹ್ಮಾನಂದ ಮುಂಬಯಿಯಿಂದ ವಾಪಸ್ಸು ಬಂದ ಮೆಲೆ ತನ್ನ ಪುಸ್ತಕಗಳು, ಪೇಪರುಗಳನ್ನು ಹರಡಿಕೊಂಡು ಇರುತ್ತಿದ್ದನು. ಆ ಜಾಗ ನಮ್ಮ ಮನೆಯ ಹಿತ್ತಲು. ಅಲ್ಲಿಯೇ ಒಂದು ಒಗೆಯುವ ಕಟ್ಟೆ. ಅದು ಸ್ವಲ್ಪ ‘ಮೈಲಿಗೆʼ ಜಾಗ. ಅಲ್ಲೇ ಎರಡು ಕಕ್ಕಸುಗಳೂ ಇದ್ದವು. ಕಕ್ಕಸಿಗೆ ನೀರು ಹಾಕಬೇಕಿತ್ತು; ಫ್ಲಷ್ ಇರಲಿಲ್ಲ(ನಾನು ಆ ವ್ಯವಸ್ಥೆಯನ್ನು ಮೊದಲು ನೋಡಿದ್ದು ಮಂಬಯಿಯಲ್ಲಿ) ನಮ್ಮ ಅಜ್ಜಿಯರ ಕೇಶಮುಂಡನವೂ ಅಲ್ಲೇ ನಡೆಯುತ್ತಿತ್ತು. ಕೆಲಸದವರೂ ಸಾಮಾನ್ಯವಾಗಿ ಆ ಕಡೆಯ ( ಫೂರ್ವದ) ಬಾಗಿಲಿಂದಲೇ ಬರುತ್ತಿದ್ದರು.

ಆ ಜಾಗದಲ್ಲಿಯೇ ಒಂದು ಬಾವಿಯೂ ಇದ್ದಿತು. ಬೆಂಗಳೂರಿನಲ್ಲಿ ಮೊದಲಿಂದಲೂ ಅನೇಕ ಕೆರೆಗಳು ಇದ್ದವಂತೆ. 1960ರ ದಶಕದಲ್ಲಿ 920 ಕೆರೆಗಳಿದ್ದವಂತೆ(1993ರಲ್ಲಿ ಅದು 583ಕ್ಕೆ ಇಳಿದಿತ್ತು). 20ನೆಯ ಶತಮಾನದ ಶುರುವಿನ ತನಕ ಕೆರೆಗಳಿಂದಲೇ ಮನೆಗೆ ನೀರು ಸರಬರಾಜು ನಡೆಯುತ್ತಿಂತೆ (ಧರ್ಮಾಂಬುಧಿ, ಸ್ಯಾಂಕಿ, ಹಲಸೂರು, ಮಿಲ್ಲರ್ ಇತ್ಯಾದಿ. ನಾನೂ ಚಿಕ್ಕಂದಿನಲ್ಲಿ ಈ ಕೆಲವು ಕೆರೆಗಳನ್ನು ನೋಡಿದ್ದೇನೆ). ಆಮೇಲೆ 1933ರಿಂದ ನೀರು ಸರಬರಾಜು ಆಗುತ್ತಿದ್ದು ತಿಪ್ಪಗುಂಡನಹಳ್ಳಿ ರಿಸರ್ವಾಯರಿನಿಂದ. ಅದು ಬೆಂಗಳೂರಿಗ ಪಶ್ಚಿಮ ದಿಕ್ಕಿನಲ್ಲಿ ಸುಮಾರು 35 ಕೀಮೀ ದೂರದಲ್ಲಿತ್ತು. 1970ರಲ್ಲಿ 100ಕಿಮೀ ದೂರದಿಂದ ಕಾವೇರಿ ನದಿಯ ನೀರನ್ನು ತರಲು ಶುರುವಾಯಿತು. ಆಗಲೂ (-1950) ಪ್ರತಿ ದಿನ ನೀರು ಬರುತ್ತಿರಲಿಲ್ಲ. ಬಂದಿದ್ದರೂ 20-30 ಜನರ ಸ್ನಾನಕ್ಕಂತೂ ಸಾಕಾಗುತ್ತಿರಲಿಲ್ಲ. ಆದ್ದರಿಂದ ಬಾವಿಯಿಂದ ನೀರು ಸೇದುವುದು ಅನಿವಾರ್ಯವಾಗಿತ್ತು. ಆತುರವಿದ್ದಲ್ಲಿ ಕೆಲವರು ಬಾವಿಯ ಪಕ್ಕವೇ ಸ್ನಾನ ಮಾಡಿ ಹೋಗುತ್ತಿದ್ದರು. ಅಲ್ಲಲ್ಲೇ 3-4 ಸಿಮೆಂಟು ಟ್ಯಾಂಕುಗಳಿದ್ದು ಬಾವಿಯ ನೀರನ್ನು ಶೇಖರಿಸಿಡುತ್ತಿದ್ದೆವು. ಮಳೆಗಾಲದಲ್ಲಂತೂ ಬಾವಿಯ ನೀರು ಬಹಳ ಮೇಲೆ ಇರುತ್ತಿತ್ತು ಮತ್ತು ಹಾಗೇ ಚೊಂಬಿನಿಂದ ನೀರನ್ನು ತೆಗೆದುಕೊಳ್ಳಬಹುದಿತ್ತು. ಬಾವಿಯ ನೀರೂ ಸಿಹಿಯಾಗಿದ್ದು ಕುಡಿಯಲೂ ಬಳಸುತ್ತಿದ್ದೆವು. ಬಾವಿಯ ನೀರು ಸುಮಾರು 60 ವರ್ಷ ಚೆನ್ನಾಗಿದ್ದು ಅನಂತರ (2007/2008) ಕೆಟ್ಟುಹೋಯಿತು.

ಅಷ್ಟು ಜನಕ್ಕೆ ಇದ್ದಿದ್ದು ಮೂರು ಕಕ್ಕಸಾದರೂ ಒಂದೇ ಬಚ್ಚಲು ಮನೆ. ಅದರಲ್ಲಿ ಒಂದು ಭಾಗದಲ್ಲಿ ದೊಡ್ಡ ಹಂಡೆಯಿಟ್ಟು ಅದರ ಸುತ್ತ ಸಿಮೆಂಟಿನಿಂದ ಕಟ್ಟಿದ್ದರು. ಸೌದೆಯಲ್ಲಿ ನೀರು ಕಾಸಿಸುತ್ತಿದ್ದೆವು (60/70ರ ದಶಕದಲ್ಲಿ ‘ಬಾಯ್ಲರ್’ ಬಂತು ಅಂತ ಕಾಣುತ್ತೆ.) (ಬಹಳ ಚಿಕ್ಕವರಾಗಿದ್ದಾಗ ನಮಗೆ ಒಂದು ಸಿಗರೇಟು ಕಾಣಿಸಿದ್ದು ಕಾಶಿ ಮತ್ತು ನಾನು ಅದನ್ನು ಬಚ್ಚಲ ಮನೆಗೆ ತಂದು ಉರಿಯುತ್ತಿದ್ದ ಸೌದೆಯ ಮೇಲೆ ಇಟ್ಟಾಗ ಅದು ಸುಟ್ಟು ಹೋಗಿತ್ತು!) ಹಂಡೆಯ ಪಕ್ಕ ನೀರಿನ ತೊಟ್ಟಿ. ಹೊರಗಡೆಯ ಬಾವಿ ನೀರು ಅಲ್ಲಿಗೆ ಬಂದು ಬೀಳುತ್ತಿತ್ತು. ಸಾಮಾನ್ಯವಾಗಿ ಒಂದು ಬಕೆಟ್ಟು (ಕಬ್ಬಿಣದ್ದು) ನೀರು ಒಬ್ಬರಿಗೆ. ಕ್ಷೌರಕ್ಕೆ ಹೋಗಿ ಬಂದಾಗ (ಅಥವಾ ಮುಟ್ಟಾದ ಹೆಂಗಸರಿಗೆ – ಅವರಿಗೆ ಮೂರು ದಿನಗಳ ಪ್ರತ್ಯೇಕ ವಾಸ ಕಡ್ಡಾಯವಾಗಿತ್ತು) ಇನ್ನೂ ಹೆಚ್ಚು ನೀರು ಬೇಕಾಗುತ್ತಿತ್ತು. ಬಚ್ಚಲು ಮನೆಯಲ್ಲೇ ಒಂದು ಪುಟ್ಟ ‘ಮಡಿ’ ಕಕ್ಕಸ್ಸು ಇತ್ತು. ಬಚ್ಚಲ ಮನೆಗೆ ಎರಡು ಬಾಗಿಲುಗಳಿದ್ದವು. ಮಡಿ ಸ್ನಾನ ಮಾಡಿದವರು ಎಡಗಡೆಯ ಬಾಗಿಲಿನಿಂದ ಅಡುಗೆ/ದೇವರ ಮನೆಗೆ ಹೋಗುತ್ತಿದ್ದರು. ಆಗೆಲ್ಲಾ ಟೂತ್‌ಪೇಸ್ಟ್ ಇನ್ನೂ ಜನಪ್ರಿಯವಾಗಿರಲಿಲ್ಲ. ಬಚ್ಚಲ ಮನೆಯ ಗೂಡಿನಲ್ಲಿ ನಂಜನಗೂಡು ಬಿವಿ.ಪಂಡಿತರ ಎರಡು ತರಹದ ಹಲ್ಲುಪುಡಿಗಳೂ ಇರುತ್ತಿದ್ದವು: ನಸು ಗುಲಾಬಿ (ಪಿಂಕ್) ಬಣ್ಣದ್ದು ಕಂದು ಬಣ್ಣದ ಪೇಪರ್ ಪೊಟ್ಟಣಗಳಲ್ಲಿ ಮತ್ತು ಕರಿ ಪುಡಿ ಬಾಟಲುಗಳಲ್ಲಿ. ಎರಡನೆಯದ್ದು ಹೆಚ್ಚು ಖಾರ ಇರುತ್ತಿತ್ತು. ನಾವೆಲ್ಲಾ ಪಿಂಕ್ ಬಣ್ಣದ್ದನ್ನು ಬಳಸುತ್ತಿದ್ದೆವು. ಸ್ನಾನಕ್ಕೆ ಇನ್ನೂ ಕಡಲೆಹಿಟ್ಟು, ಸೀಗೆಕಾಯಿಪುಡಿ, ಸಾಣೆ ಕಲ್ಲು ಇತ್ಯಾದಿ ಬಳಕೆಯಲ್ಲಿದ್ದವು. ಸೋಪು (ಹಮಾಮ್, ಸ್ಯಾಂಡಲ್) ನಿಧಾನವಾಗಿ ಮನೆಯನ್ನು ಪ್ರವೇಶಿಸುತ್ತಿತ್ತು.

ಅಡಿಗೆಯ ಮನೆಯ/ಊಟದ ಮನೆಯ ಪಕ್ಕವೇ ಒಂದು ಓಣಿ. ಅಡಿಗೆ ಮನೆಯ ಹೊರಗೆ ಒಂದು ಗೂಡು-ಇದ್ದಿಲು ಶೇಖರಣೆಗೆ. ಅದಕ್ಕೆ ಅಡಿಗೆ ಮನೆಯಿಂದಲೇ ಇದ್ದಿಲು ತೆಗೆಯುವಂತೆ ಒಂದು ಕಿಂಡಿ. ಆ ಓಣಿಯಲ್ಲೂ ಪಾತ್ರೆ ತೊಳೆಯುವ ಸ್ಥಳ. ಕೆಲಸದವರು ಬಚ್ಚಲುಮನೆಯಿಂದಲೇ ಇಲ್ಲಿಗೆ ಬಂದು ಪಾತ್ರೆ ತೊಳೆಯಬೇಕಿತ್ತು. ಕೆಲಸದವರಿಗೆ ಅಡಿಗೆ, ಊಟ ಮತ್ತು ದೇವರ ಕೋಣೆಗಳಲ್ಲಿ ಪ್ರವೇಶವಿರಲಿಲ್ಲ. ಓಣಿಯಿಂದಲೇ ಪಕ್ಕದ ಕನ್ಸೆರ್ವೆನ್ಸಿಗೆ (ಗಲ್ಲಿ) ಊಟದ ಎಲೆಗಳನ್ನು ಎಸೆಯಲು ಒಂದು ಕಿಂಡಿ (ಚಿತ್ರದಲ್ಲಿ ಎಡ ಭಾಗದ ಕಿಟಕಿ). ಸಾಮಾನ್ಯವಾಗಿ ಮುತ್ತುಗದ ಎಲೆಗಳನ್ನು ಬಳಸುತ್ತಿದ್ದರು.

(ಚಿತ್ರ: ಹಜಾರದ ಒಂದು ಗೋಡೆ- ಸರಸ್ವತಿಯ ಚಿತ್ರ ಮತ್ತು ಗವಾಕ್ಷಿ; ಮೆಟ್ಟಲುಗಳು, ಮನೆಯ ಉತ್ತರದ ಬಾಗಿಲು; ಊಟದೆಲೆಗಳನ್ನ ಎಸೆಯಲು ಕಿಟಕಿ(ಎಡ ಗೋಡೆ), ಬಾವಿ ಓಣಿ, ದೇವರ ಮನೆ) 

ಪ್ರತಿ ದಿನ ನೀರು ಬರುತ್ತಿರಲಿಲ್ಲ. ಬಂದಿದ್ದರೂ 20-30 ಜನರ ಸ್ನಾನಕ್ಕಂತೂ ಸಾಕಾಗುತ್ತಿರಲಿಲ್ಲ. ಆದ್ದರಿಂದ ಭಾವಿಯಿಂದ ನೀರು ಸೇದುವುದು ಅನಿವಾರ್ಯವಾಗಿತ್ತು. ಆತುರವಿದ್ದಲ್ಲಿ ಕೆಲವರು ಭಾವಿಯ ಪಕ್ಕವೇ ಸ್ನಾನ ಮಾಡಿ ಹೋಗುತ್ತಿದ್ದರು. ಅಲ್ಲಲ್ಲೇ 3-4 ಸಿಮೆಂಟು ಟ್ಯಾಂಕುಗಳಿದ್ದು ಭಾವಿಯ ನೀರನ್ನು ಶೇಖರಿಸಿಡುತ್ತಿದ್ದೆವು. ಮಳೆಗಾಲದಲ್ಲಂತೂ ಭಾವಿಯ ನೀರು ಬಹಳ ಮೇಲೆ ಇರುತ್ತಿತ್ತು ಮತ್ತು ಹಾಗೇ ಚೊಂಬಿನಿಂದ ನೀರನ್ನು ತೆಗೆದುಕೊಳ್ಳಬಹುದಿತ್ತು.

ದೇವರ ಮನೆಯಲ್ಲಿ ಅನೇಕ ವಿಗ್ರಹಗಳು, ದೇವರ ಫೋಟೋಗಳು ಇದ್ದವು. ಗೋಡೆಗಳಲ್ಲಿ ಖಾಲಿ ಜಾಗವೆ ಇರಲಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಸಾಮಾನ್ಯವಾಗಿ ಎಲ್ಲ ಮನೆಗಳಲ್ಲೂ ಇರುವ ಪಟಗಳಲ್ಲದೆ

ವಿವಿಧ ತೀರ್ಥಯಾತ್ರೆಗಳಿಗೆ ಹೋಗಿತಂದ ಫೋಟೋಗಳೂ ಇದ್ದವು. ನನಗೆ ತಕ್ಷಣ ನೆನಪು ಬರುವುದು ದೊಡ್ಡಕಾಮಧೇನುವಿನ ಚಿತ್ರ. ಹಲವಾರು ಕ್ಯಾಲೆಂಡರುಗಳಿಗೆ ಫ್ರೇಮ್ ಹಾಕಿಸಿರುವುದು ಇತ್ಯಾದಿ. ನಮ್ಮ ತಂದೆಯ ಕಡೆ 300 ವರ್ಷ ಹಳೆಯದೆಂದು ಹೇಳುತ್ತಿದ್ದ ಗಣೇಶನ ವಿಗ್ರಹವೂ ಇದ್ದಿತು (ಮನಮೋಹನ್ ಸಿಂಗ್ ಅವರು ಅಣ್ಣ ಬ್ರಹ್ಮಾನಂದ ಅವರನ್ನು ನೋಡಲು ಬಂದಾಗ ಈ ಗಣೇಶನನ್ನು ನೋಡಿದರಂತೆ. ಅನಂತರ ಕೆಲವೇ ವಾರಗಳಲ್ಲಿ ಅವರು ಕೇಂದ್ರದಲ್ಲಿ ವಿತ್ತ ಮಂತ್ರಿಯಾದರೆನ್ನುವುದು ಆ ಗಣೇಶನ ಪ್ರಭಾವಕ್ಕೆ ಸಾಕ್ಷಿ!) ನಾವುಗಳು ದೇವರ ಮನೆಯೊಳಗೆ ಜಾಸ್ತಿ ಹೋಗುತ್ತಿರಲಿಲ್ಲ. ವಿಶೇಷ ದಿನಗಳಲ್ಲಿ(ಉದಾ: ಗಣೇಶನ ಹಬ್ಬ) ಹಿರಿಯರೊಂದಿಗೆ ಕೂರುತ್ತಿದ್ದು ಜಾಗಟೆ ಹೊಡೆಯಬೇಕಾದಾಗ ಹೊಡೆಯುತ್ತಿದ್ದೆವು. ಗಂಡಸರ ಹಬ್ಬಗಳಲ್ಲೆಲ್ಲಾ ನಮ್ಮ ಮೂರನೆಯ ಚಿಕ್ಕಪ್ಪ ಸೀನ (ಶ್ರೀನಿವಾಸನ್) ಮತ್ತು ಗುಂಡಣ್ಣ ಪೂಜೆ ಮಾಡುತ್ತಿದ್ದರು. ಹಬ್ಬಗಳ ಸಂಜೆ ದೇವರ ಮನೆಯ ಇನ್ನೊಂದು ಬಾಗಿಲನ್ನು ತೆಗೆದಿಡುತ್ತಿದ್ದರು. ಆ ಸಮಯದಲ್ಲಿ ಸಾಮಾನ್ಯವಾಗಿ ನಮ್ಮ ತಂದೆ ಹೊರಗಿಂದಲೆ ನಮಸ್ಕಾರ ಮಾಡುತ್ತಿದ್ದರು. ಅವರು ಪೂಜೆ ಮಾಡುತ್ತಿದ್ದಿದ್ದು ಒಂದೇ ದಿನ – ಅನಂತ ಚತುರ್ಥಿಯ ದಿನ! ಬೇರೆ ದಿನಗಳು ಅವರನ್ನು ದೇವರ ಮನೆಯಲ್ಲಿ ನೋಡಿದ ನೆನಪು ಇಲ್ಲ. ನವರಾತ್ರಿಯ ಸಮಯದಲ್ಲಿ ಕಿತ್ತೂರು ಭಾವ ಅಥವಾ ಯಾರಾದರೂ ಬ್ರಹ್ಮಚಾರಿಗಳು ಸಾಲಿಗ್ರಾಮಗಳನ್ನು ತೊಳೆದು ಪೂಜೆ ಮಾಡುತ್ತಿದ್ದರು. ಕೆಲವು ವಿಶೇಷದ ದಿನಗಳಲ್ಲಿ ಪುರೋಹಿತರು ಬಂದು ಪೂಜೆ ಮಾಡಿಸುತಿದ್ದರು. ಅವರಲ್ಲಿ ಒಬ್ಬರ ಹೆಸರು ವೆಂಕಟರಾಯ ವಾದ್ಯಾರ್. ಹಲಸೂರುಪೇಟೆಯವರು, ಎತ್ತರ ಮತ್ತು ಸ್ಥೂಲ ವ್ಯಕ್ತಿ. ಆಗ 50-60 ವಯಸ್ಸು ಇದ್ದಿರಬಹುದು. ಕಿವಿಯಲ್ಲಿ ಕಡಕ ಹಾಕಿಕೊಳ್ಳುತ್ತಿದ್ದರು. ತಿಥಿಗಳನ್ನು ಮಾಡಿಸಲೂ ಅವರೇ ಬರುತ್ತಿದ್ದರು. ಅವರಿಲ್ಲದಾಗ ಅವರ ಸಂಬಂಧಿಕರಲ್ಲೇ ಬೇರೆ ಯಾರಾದರೂ (ಪರಶು, ಮುನಿ..) ಬರುತ್ತಿದ್ದರು. ಇವರುಗಳಿಗೆ ಸಂಭಾವನೆಯಲ್ಲಿ ನಮ್ಮ ತಾಯಿ ಹಿಂದೆಮುಂದೆ ನೋಡುತ್ತಿರಲಿಲ್ಲ. ಹೆಂಗಸರ ಹಬ್ಬಗಳಲ್ಲಿ (ಗೌರಿ, ವರಮಹಾಲಕ್ಷ್ಮಿಇತ್ಯಾದಿ) ಅಮ್ಮ ಚಿಕ್ಕಮ್ಮಂದಿರು, ಮನೆಯ ಹುಡುಗಿಯರು ಇರುತ್ತಿದ್ದರು. ಹಬ್ಬದ ದಿನಗಳಲ್ಲಿ ನಮ್ಮ ತಾಯಿಯ ಉತ್ಸಾಹವಂತೂ ಹೇಳಲು ಬರದು. ಅದೇ ದೇವರ ಮನೆಯೇ ಅವರ ಕೊನೆಗೂ ಕಾರಣವಾಯಿತು.

ಅವರ 83ನೆಯ ವಯಸ್ಸಿನಲ್ಲಿ ಒಂದು ದಿನ ಪೂಜೆಯಲ್ಲಿ ಮಂಗಳಾರತಿ ಮಾಡುತ್ತಿದ್ದಾಗ ಸೀರೆಗೆ ಬೆಂಕಿ ತಗುಲಿ ದೇಹ ಸುಟ್ಟಿತು. ಒಂದು ಕಾಲಘಟ್ಟದಲ್ಲ ಹತ್ತಾರು ಜನ ಇದ್ದ ಮನೆಯಲ್ಲಿ ಈ ಘಟನೆ ನಡೆದಾಗ ಹತ್ತಿರ ಯಾರೂ ಇರಲಿಲ್ಲ. ಆಸ್ಪತ್ರೆಗೆ ಕರೆದುಕೊಂಡುಹೋದ ಎರಡನೆಯ ದಿನವೇ ತೀರಿಹೋದರು. ಅವರು ಹೋದಮೇಲೆ ಆ ದೇವರ ಮನೆಯ ಕಳೆಯೇ ಹೋಯಿತು!

ಮನೆಯ ಉತ್ತರದ ಬಾಗಿಲಿನಿಂದ ಒಳಬಂದರೆ (ಮರದ ಜೊತೆ ಇರುವ ಉತ್ತರದ ಬಾಗಿಲಿನ ಚಿತ್ರ 2008ರಲ್ಲಿ ತೆಗೆದಿದ್ದು; ಇಲ್ಲಿ ಕೆಲವು ಚಿತ್ರಗಳೆಲ್ಲಾ 2008ರಲ್ಲಿ ತೆಗೆದಿದ್ದು) ಎಡಗಡೆಯೇ ಮೇಲೆ ಹೋಗುವ ಮೆಟ್ಟಿಲುಗಳು ಸಿಗುತ್ತವೆ. ಹತ್ತಲು ಸ್ವಲ್ಪ ಕಡಿದಾಗಿಯೇ ಇದ್ದಿತು. ಎರಡು ಕಡೆ 70-80 ಡಿಗ್ರಿ ಕೋನವಿತ್ತು. ನಾವು ಚಿಕ್ಕವರೆಲ್ಲಾ ಸಂತೋಷವಾಗಿ ಓಡುತ್ತ ಹತ್ತಿ ಇಳಿಯುತ್ತಿದ್ದೆವು. ವಯಸ್ಸಾದವರು ಹೆಚ್ಚು ಮೇಲೆ ಬರುತ್ತಿರಲಿಲ್ಲ. ನಮ್ಮ ತಂದೆತಾಯಿ ಮೇಲೆ ಬಂದಿದ್ದಂತೂ ಬಹಳ ಕಡಿಮೆ.

ಮಹಡಿಯಲ್ಲಿ 2 ಕೋಣೆಗಳು ಮತ್ತು ಮಧ್ಯೆ ಒಂದು ವರಾಂಡ ಇದ್ದವು. ಅಲ್ಲಿಯ ವರಾಂಡದಲ್ಲಿಯೂ ಟೈಪುರೈಟರುಗಳಿದ್ದ ಪುಟ್ಟ ಆಫೀಸ್ ಮತ್ತು ಮಲಗಲು ಮಂಚ. ಕೆಳಗಿನ ಕೋಣೆಗಳ ಎತ್ತರಗಳು ಒಂದೇ ಇಲ್ಲದಿದ್ದರಿಂದ ನಮ್ಮ ಬಿಸಿಲಮಚ್ಚು (ಟೆರೇಸ್) ಕೂಡ ವಿವಿಧ ಮಟ್ಟಗಳಲ್ಲಿ ಇದ್ದಿತು. ಮೂರು ಮಹಡಿಗಳು ಎಂದು ಲೆಕ್ಕ ಹಾಕುತ್ತಿದ್ದೆವು. ಹಾಲಿನ ಮೇಲೆ ಇದ್ದ ಟೆರೇಸ್ ಹಾಲಿನಷ್ಟೇ ದೊಡ್ಡದಾಗಿದ್ದು ಯಾವುದಾದರೂ ಹಬ್ಬ-ಹರಿದಿನಗಳ ಫೋಟೋಗಳಿಗೆ ಅಲ್ಲೇ ಹೋಗುತ್ತಿದ್ದೆವು. ಸುತ್ತ ಎರಡಡಿಯ ಪ್ಯಾರಾಪೆಟ್ ಗೋಡೆ ಇದ್ದು ಸಂಜೆಯ ಹರಟೆಗಳಿಗೆ ಪ್ರಶಸ್ತವಾದ ಜಾಗವಾಗಿತ್ತು.

(ಚಿತ್ರ: ಬಿಸಿಲುಮಚ್ಚಿನ ಎರಡು ನೋಟಗಳು (ಬ)– ನಾವು ನಾಲ್ಕು ಜನ (ವಿ, ರಾಮೇಶ್ವರಿ, ಬ್ರಹ್ಮಾನಂದ, ಗುಂಡಣ್ಣ (1956); 

ಪ್ಯಾರಾಪೆಟ್ ಗೋಡೆ- ಹರಟೆಗೆ ಪ್ರಶಸ್ತವಾದ ಜಾಗ – ಮನೆಯ ಹೆಣ್ಣು ಮಕ್ಕಳು – ರಾಧಿಕಾ, ಚೂಡಾಮಣಿ, ಮಲ್ಲಿಕಾ, ಲಲಿತು, ಗಾಯತ್ರಿ, ಮತ್ತು ಚಂಪ(~1963)

ನನ್ನ ಚಿಕ್ಕಂದಿನಲ್ಲಿ (~೧೯೫೦) ೨5 ಕ್ಕೂ ಹೆಚ್ಚುಮಂದಿ ಮನೆಯವರೇ ಇದ್ದೆವು – ರಾಮಯ್ಯ (೫-), ನಾರಾಯಣ (೪), ವೆ೦ಕಟೇಶ (೫), ಸೀನ(೩), ಜಯ (೫), ರಾಯಮೂರ್ತಿ, ಬಾಬು, ಸಾಮಿ, ವಿಶ್ವಮೂರ್ತಿ ಮತ್ತು ಕೆಲವು ಸಂಬಂಧಿಕರು ಅಲ್ಲೇ ಓದುತ್ತಿದ್ದರು.. ಅಲ್ಲಿಂದ, ಇಲ್ಲಿಂದ ಅತಿಥಿಗಳೂ ಸೇರಿ ಅಲ್ಲಿ ಮಲಗುವವರು ಸುಮಾರು 30-35 ಮಂದಿ. ಆಮೇಲೆ ವಾರದ ಹುಡುಗರು (೨-೩), ಅಡಿಗೆಯವರು ನಟೇಶ ಅಯ್ಯರ್, ಮಧ್ಯಾಹ್ನದ ಮೇಲೆ ಸೀತಮ್ಮ, ಕೆಲಸದವರು 2-೪. ಮೊದಲ ಚಿಕ್ಕಪ್ಪ ನಾರಾಯಣ ಮತ್ತು ಕುಟುಂಬ ನಮ್ಮ ಜೊತೆ ಹೆಚ್ಚು ಇರಲಿಲ್ಲ. ಪ್ರತಿ ಉಪ ಕುಟುಂಬಕ್ಕೂ ಒಂದು ಕೋಣೆ. ಬೇಸಿಗೆಯ ಸಮಯದಲ್ಲಿ ಚಿಕ್ಕವರೆಲ್ಲಾ ಹೊರಗಡೆ ಬಿಸಿಲುಮಚ್ಚು(ಟೆರೇಸಿನ) ಮೇಲೆ ಮಲಗುತ್ತಿದೆವು. ನಾವೆಲ್ಲಾ ಬೆಳೆಯುತ್ತಿದ್ದಾಗ ನಮ್ಮ ಜೊತೆ ಮನೆಯ ಇಬ್ಬರು ನಮ್ಮ ಜೊತೆ ಹೆಚ್ಚು ಇರಲಿಲ್ಲ: ಕಡೆಯ ಚಿಕ್ಕಪ್ಪ ಗೋವಿಂದ ಮತ್ತು ನಮ್ಮ ಹಿರಿಯಣ್ಣ ಬ್ರಹ್ಮಾನಂದ.