ಭೌಗೋಳಿಕ ವೈವಿಧ್ಯತೆ, ಸೃಷ್ಟಿ ಸೌಂದರ್ಯ, ಅಪರೂಪದ ಸಸ್ಯ-ವನ್ಯ ಸಂಪತ್ತು ಉತ್ತರಕನ್ನಡವನ್ನು ವಿಶಿಷ್ಟ ಜಿಲ್ಲೆಯನ್ನಾಗಿಸಿದೆ. ಇತ್ತೀಚೆಗೆ ಅದಿರು ಸಾಗಾಟ, ಅರಣ್ಯ ನಾಶ, ಸ್ಥಳೀಯರನ್ನು ಎತ್ತಂಗಡಿ ಮಾಡುವ ಯೋಜನೆಗಳು, ಜಿಲ್ಲೆ ಇಬ್ಬಾಗಿಸುವ ಹುನ್ನಾರ ಜನತೆಯನ್ನು ಕಂಗೆಡಿಸಿವೆ. ಗಣಿಗಾರಿಕೆ ಎಬ್ಬಿಸಿದ ಧೂಳು ಜಿಲ್ಲೆಯ ರಾಜಕಾರಣದ ಸ್ವರೂಪವನ್ನು ಬದಲಿಸುತ್ತಿದೆ. ಸಾಹಿತಿಗಳು, ಸಮಾಜವಾದಿಗಳು, ಕಲಾವಿದರು ಈ ಜಿಲ್ಲೆಯ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದ ಕಾಲವೊಂದಿತ್ತು. ಚುಟುಕು ಬ್ರಹ್ಮ ದಿನಕರ ದೇಸಾಯಿ, ಕಡಲ ತೀರದ ಭಾರ್ಗವ ಡಾ. ಶಿವರಾಮ ಕಾರಂತ, ನಟರಾದ ಅನಂತನಾಗ್, ರಾಮಕೃಷ್ಣ ಇವರೆಲ್ಲ ಈ ಜಿಲ್ಲೆಯ ರಾಜಕೀಯ ರಂಗವನ್ನೇರಿದವರು. ಶಿವರಾಮ ಕಾರಂತ, ಅನಂತನಾಗ್, ರಾಮಕೃಷ್ಣ ಇವರು ಚುನಾವಣಾ ರಾಜಕಾರಣಕಷ್ಟೇ ಜಿಲ್ಲೆಗೆ ಬಂದವರು. ಆದರೆ ರೈತರ, ಬಡವರ, ನೊಂದವರ ಪರವಾಗಿ ಕಳಕಳಿ ಹೊಂದಿದ್ದ, ಸ್ಥಳೀಯ ಹೋರಾಟಗಳನ್ನು ಹಮ್ಮಿಕೊಂಡ ಜಿಲ್ಲೆ ಕಂಡ ಅಪರೂಪದ ಇಬ್ಬರು ರಾಜಕಾರಣಿಗಳೆಂದರೆ ದಿನಕರ ದೇಸಾಯಿ ಮತ್ತು ಬಿ.ವಿ.ನಾಯಕ. ಇವರು ಶ್ರೇಷ್ಠ ರಾಜಕಾರಣಿಗಳು ಹೇಗೋ ಹಾಗೇ ಶ್ರೇಷ್ಠ ಲೇಖಕ, ಚಿಂತಕರೂ ಹೌದು.

ದಿನಕರ ದೇಸಾಯಿ ತಮ್ಮ ಸಮಾಜವಾದದ ಹೋರಾಟ ಹಾಗೂ ಚುಟುಕುಗಳ ಮೂಲಕ ನಾಡಿಗೇ ಪರಿಚಿತರಾದವರು. ಆದರೆ ಅವರ ಕಾಲದಲ್ಲಿ ರಾಜಕೀಯ ಪ್ರವೇಶ ಮಾಡಿದ, ತಮ್ಮ ಹರಿತ ರಾಜಕೀಯ ಚಿಂತನೆಗಳಿಂದ, ಜನಸಾಮಾನ್ಯರೊಂದಿಗಿನ ನೇರ ಸಂಪರ್ಕದಿಂದ ವಿಶಿಷ್ಟರಾದ ಬಿ.ವಿ.ನಾಯಕ ಜಿಲ್ಲೆ ಹೊರಗೆ ಅಷ್ಟೇನು ಪ್ರಸಿದ್ದಿ ಪಡೆಯಲಿಲ್ಲ. ಗೋಕರ್ಣ ಸಮೀಪದ ಗೊನೆಹಳ್ಳಿಯವರಾದ ಬಿ.ವಿ.ನಾಯಕ (ಇವರ ತಂದೆ ವೆಂಕಣ್ಣ ನಾಯಕರು ಕಲೆಕ್ಟರ್ ಆಗಿದ್ದವರು) ಜಾಯಿಂಟ್ ರಿಜಿಸ್ಟ್ರಾರ್ ಆಗಿ ಸರಕಾರಿ ಸೇವೆಯಲ್ಲಿದ್ದಾಗ ಹುಲಕೋಟಿ ಹುಲಿ ಎಂದು ಪ್ರಸಿದ್ಧರಾದ ಕೆ.ಎಚ್.ಪಾಟಿಲರ ಪ್ರೇರಣೆಯಿಂದ ಸ್ವಯಂ ನಿವೃತ್ತಿ ಪಡೆದು ರಾಜಕೀಯ ಪ್ರವೇಶಿಸಿದರು. 1971 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆನರಾ ಕ್ಷೇತ್ರದಿಂದ ನಿಂತು ಆಯ್ಕೆಯಾದರು.

ಉತ್ತಮ ವಾಗ್ಮಿಗಳಾಗಿದ್ದ ಇವರು ಸಂಸತ್ತಿನಲ್ಲಿ ತಮ್ಮ ಪ್ರಖರ ವಿಚಾರಧಾರೆಯಿಂದ ಮಿಂಚಿದರು. ಸ್ಥಳೀಯ, ರಾಷ್ಟೀಯ, ಅಂತರ್ರಾಷ್ಟೀಯ ಸಮಸ್ಯೆ-ವಿಷಯಗಳಿಗೆಲ್ಲ ಸಮರ್ಥವಾಗಿ ಧ್ವನಿ ನೀಡಿದರು. ತಮ್ಮ ಜನಪರ ಧೋರಣೆ, ಸ್ವಾಭಿಮಾನ, ನೇರ ನಡೆ ನುಡಿಯಿಂದಾಗಿ ಇಂದಿರಾ ಕೆಂಗಣ್ಣಿಗೂ ಗುರಿಯಾದರು. 1975 ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಅದನ್ನು ವಿರೋಧಿಸಿ ಲಾಂಗ್ ಲಾಂಗ್ ವೇ ಟು ಗೋ ಎನ್ನುವ ಪುಸ್ತಕ ಬರೆದಿದ್ದರು.

ಸಹಜವಾಗಿಯೇ ಅವರಿಗೆ ಕಾಂಗ್ರೆಸ್ಸು ಟಿಕೇಟು ನೀಡಲಿಲ್ಲ. ಯಾವುದೇ ರಾಜಕೀಯ ಲಾಬಿ, ಕ್ಷುಲ್ಲಕ ರಾಜಕಾರಣ ಮಾಡಲು ಬಯಸದ ಬಿ.ವಿ.ನಾಯಕ ಅಧಿಕಾರ ರಾಜಕಾರಣದಲ್ಲಿ ಅಪ್ರಸ್ತುತ ಆಗತೊಡಗಿದರು. ಗೋಕರ್ಣ ಸಮೀಪದ ಕೊಂಟಿನಕೇರಿಯ ಗುಡಿಸಲಲ್ಲಿ ಸರಳ ಜೀವನ ನಡೆಸುತ್ತಾ ಜೀವನೋಪಾಯಕ್ಕಾಗಿ ಎಮ್ಮೆ, ಆಕಳು ಸಾಕಿ ಸೈಕಲ್ ಮೇಲೆ ಸಾಗಿ ಹಾಲು ಮಾರಿದರು. ಹಳ್ಳೇರರು, ಹಾಲಕ್ಕಿಗಳು ಕಗ್ಗ ಎನ್ನುವ ವಿಶಿಷ್ಟ ಭತ್ತ ಬೆಳೆಯುತ್ತಿದ್ದ ಅಘನಾಶಿನಿ ನದಿ ಹಿನ್ನೀರಿನ ಮಾದನಗೇರಿ ಸಮೀಪದ ಸುಮಾರು 2000 ಎಕರೆ ಗಜನಿ ಭೂಮಿಯನ್ನು ಸರಕಾರ ವಶಪಡಿಸಿಕೊಂಡಾಗ ರೈತರ ಪರವಾಗಿ ಅವಿರತ ಹೋರಾಟ ನಡೆಸಿದರು.

ರಾಜಕಾರಣದಿಂದ ಎಂದು ನಿವೃತ್ತರಾಗದಿದ್ದರೂ ಭೋಪರಾಕು ರಾಜಕೀಯ ಸಂಸ್ಕೃತಿಯಿಂದ ದೂರವುಳಿದು ಫಕೀರನಂತೆ ಕೊಂಟಿನಕೇರಿಯಲ್ಲಿ ಜೀವಿಸುತ್ತಿದ್ದ ಇವರ ಅಪಾರ ಪ್ರತಿಭೆಯ ಅರಿವಿದ್ದ ಆಯುರ್ವೇದ ವೈದ್ಯ ಡಾ. ಬ್ರಹ್ಮಾನಂದ ಕಾರವಾರದಿಂದ ಪ್ರಕಟವಾಗುವ ಕರಾವಳಿ ಮುಂಜಾವು ದೈನಿಕಕ್ಕೆ ಇವರಿಂದ ಅಂಕಣ ಬರೆಸಲು ಕಾರಣರಾದರು.

ತಮ್ಮ ಸರಳತೆ ನಿರ್ಭಿಡೆಯ ಬದುಕು ಒಂದಿಷ್ಟು ವಿಕ್ಷಿಪ್ತತೆಯಿಂದಾಗಿ ಮತ್ತು  ಕುಡಿತ ಮಿಡಿತಗಳ ಬಗೆಗಿನ ಕಥೆ ಉಪಕಥೆಗಳಿಂದಾಗಿ ಜನರ ಅವಗಣನೆಗೆ ಅಪಹಾಸ್ಯಕ್ಕೆ ಮರುಕಕ್ಕೆ ಒಳಗಾಗಿದ್ದ ಈ ವ್ಯಕ್ತಿಯ ಲೇಖನಗಳಲ್ಲಿ ಮಿಂಚಿದ ವೈಚಾರಿಕತೆ, ಮಿಡಿದ ಜೀವಂತಿಕೆ, ತೀವ್ರ ಜೀವನ ಪ್ರೀತಿ ಕಂಡು ಜಿಲ್ಲೆಯ ಜನತೆ ಚಕಿತರಾದರು. ಲೇಖನಗಳಲ್ಲಿ ಹೊಳೆಯುತ್ತಿದ್ದ ವಿಷಯ ವಿಸ್ತಾರ, ಮಾರ್ಗದರ್ಶನದಿಂದ ಯುವ ಜನತೆ ಆಕರ್ಷಿತರಾಗಿ ಅವರ ಅಭಿಮಾನಿಗಳಾದರು. ಸ್ಥಳೀಯ ಬದುಕು, ಸಂಸ್ಕೃತಿಯನ್ನು ವಿವರಿಸುವ ಹಾಗೆ ಖಲೀಲ ಗಿಬ್ರಾನ್, ಶೇಕ್ಸ್ ಪಿಯರ್, ಬೊದಿಲೇರ್, ಗಾಂಧಿ, ನ್ಯೂಟನ್ ಇಂತಹ ದೇಶ ವಿದೇಶಗಳ ಚಿಂತಕರ ದರ್ಶನಗಳನ್ನು ಸರಳವಾಗಿ ತೆರೆದಿಟ್ಟರು.

ಕೋಶ ಓದಿದ ದೇಶ-ವಿದೇಶ ತಿರುಗಿದ  ಅನುಭವ ಅವರಿಗಿತ್ತು. ಜಾಗತೀಕರಣದಿಂದ ಜಗತ್ತೆ ಹಳ್ಳಿಯಾಗಿ ಪರಿವರ್ತನೆಯಾಗಿರುವ ಹಿನ್ನೆಲೆಯಲ್ಲಿ ಅವರು ಜಾಗತಿಕ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ಹುಡುಕುವ ಹಾಗೂ ಸ್ಥಳೀಯ ಸಮಸ್ಯೆಯನ್ನು ಜಾಗತಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಪ್ರಯತ್ನ ಮಾಡುತ್ತಿದ್ದರು. ಗಾಂಧಿ, ನೆಹರು, ಕೃಷ್ಣ, ಯೇಸು, ಎಲ್ಲರನ್ನೂ ಮೆಚ್ಚುವ, ವಿಮರ್ಶಾತ್ಮಕವಾಗಿ ನೋಡುವ ಗುಣ ಅವರದಾಗಿತ್ತು. ಪರಂಪರೆಯ ಜ್ಞಾನ ಭವಿಷ್ಯದ ಆಸೆ ಈ ಕ್ಷಣದ ಬದುಕಿಗೆ ಉತ್ಸಾಹ ತುಂಬುಬೇಕೆನ್ನುವ ಅನನ್ಯ ಬಯಕೆ ಅವರದಾಗಿತ್ತು. 

2005ರಿಂದ 2008ರವರೆಗೆ (16/8/2008 ರಂದು ಅವರು ತೀರಿಕೊಡರು) ಪ್ರತಿ ದಿನವೂ ಪತ್ರಿಕೆಗೆ ಅಂಕಣ ಬರೆಯುತ್ತಿದ್ದರು. ಅವರ ಲೇಖನಗಳ ಸಂಖ್ಯೆ 1000 ಕ್ಕೂ ಹೆಚ್ಚಿದೆ. ಕರ್ನಾಟಕ ಅಷ್ಟೇಕೆ ಭಾರತದ ರಾಜಕಾರಣದಲ್ಲಿ ಹೀಗೆ ನಿರಂತರ ವೈಚಾರಿಕ ಲೇಖನಗಳನ್ನು ಬರೆದ ಬೇರೆ ಉದಾಹರಣೆ ಅಪರೂಪವೇನೋ. ಆ ಲೇಖನಗಳಲ್ಲಿ ಅವರ ಬದುಕಿನ ಆಳ ಅನುಭವ, ವಿಸ್ತಾರವಾದ ಓದು, ಅದ್ಭುತ ನೆನಪಿನ ಶಕ್ತಿ, ಸೂಕ್ಷ್ಮ ಗ್ರಹಿಕೆ, ಜಾತ್ಯತೀತತೆ, ವೈಜ್ಞಾನಿಕ ಮನೋಭಾವ ಎದ್ದು ತೋರುತ್ತವೆ. ಭಾಷಾ ಶೈಲಿ ಕೂಡ ವಿಶಿಷ್ಟವಾಗಿದೆ. ಕನ್ ಫ್ಯೂಷಿಯಸ್, ರಸೆಲ್, ಹೆಮಿಂಗ್ವೇ, ರಜನೀಶ್, ನ್ಯಾನ್ಸಿ ಫ್ರಾಯ್ಡ್, ಸಿಗ್ಮಂಡ್ ಫ್ರಾಯ್ಡ್ ಇವರೆಲ್ಲ ಇವರ ಚಿಂತನೆಯನ್ನು ಬೆಳಗಿಸುತ್ತಾರೆ. ಭ್ರಷ್ಟತೆ, ಭಾಷೆ ಹಾಗೂ ಧರ್ಮದ ಅತಿರೇಕಗಳನ್ನು ಕಟು ಶಬ್ದಗಳಲ್ಲಿ ಖಂಡಿಸುತ್ತಿದ್ದರು. ತದಡಿ ಉಷ್ಣ ಸ್ಥಾವರ ವಿರೋಧಿ ಹೋರಾಟಕ್ಕೆ ನೈತಿಕ ಹಾಗೂ ವೈಚಾರಿಕ ನೆಲೆಯೊದಗಿಸಿದರು. ಅಭಿವೃದ್ಧಿಗೆ ಪೂರಕವಾಗಲು ಸಣ್ಣ ರಾಜ್ಯಗಳ ಪರಿಕಲ್ಪನೆಗೆ ಇಂಬುಗೊಡುತ್ತಿದ್ದರು. ಕರಾವಳಿಯ ಬಹುಭಾಷಾ ಸಂಸ್ಕೃತಿಯನ್ನು, ಒಳ ಸಂಬಂಧವನ್ನು ಜೋಪಾನವಾಗಿಡಬೇಕೆಂಬ ಹಂಬಲವಿಟ್ಟುಕೊಂಡಿದ್ದರು.

ಇತ್ತೀಚಿಗೆ ಬಿ.ವಿ.ನಾಯಕರ ಸುಮಾರು 1000 ಲೇಖನಗಳಲ್ಲಿ 74 ಲೇಖನಗಳನ್ನೊಳಗೊಂಡ ಚಿರಂತನ ಚಿಂತನ ಎನ್ನುವ ಪುಸ್ತಕವನ್ನು ಡಾ. ಎಂ.ಎಚ್.ನಾಯ್ಕ ಸಂಪಾದಿಸಿದ್ದಾರೆ. ಕರಾವಳಿ ಮುಂಜಾವು ಸಂಪಾದಕ ಗಂಗಾಧರ ಹಿರೇಗುತ್ತಿ ಅದನ್ನು ಪ್ರಕಟಿಸಿದ್ದಾರೆ. (ಗಂಗಾಧರ ಹಿರೇಗುತ್ತಿ ಉದಯ ಪ್ರಭಾ ಪ್ರಿಂಟರ್ಸ್, ಕುಟ್ಹಿನೋ ರೋಡ್, ಕಾರವಾರ 08382-226676  ಮೊಬೈಲ್ 9902043441 ಬೆಲೆ ರೂ.150)

ಮುಕ್ತವಾಗಿ ನುಡಿದ ಅದರಂತೆ ನಡೆದ, ಇಂತಹ ಅಪರೂಪದ ರಾಜಕೀಯ ಚಿಂತಕನ ಲೇಖನಗಳನ್ನು ಕನ್ನಡಿಗರು ಓದಿ ಚರ್ಚಿಸುವಂತಾಗಬೇಕು ಮತ್ತು ಅವರ ಉಳಿದ ಲೇಖನಗಳೂ ಪುಸ್ತಕರೂಪ ಕಾಣುವಂತಾಗಬೇಕು.