”ಆ ಅಜ್ಜನಲ್ಲಿ ಹೂವಿಗೆ ಬೇಡಿಕೆಯಿಟ್ಟದ್ದು ಶಾಲೆಗೆ ಹೋಗುವ ಪುಟ್ಟಪುಟ್ಟ ಮಕ್ಕಳು. ಆ ಮಕ್ಕಳು ಶಾಲೆಯ ಸಮವಸ್ತ್ರದಲ್ಲಿರುತ್ತಿದ್ದರೇ ಹೊರತು, ಯಾವುದೇ ತುಂಡುಡುಗೆಗಳಲ್ಲಿರಲಿಲ್ಲ. ಮತ್ತೆ ಹೇಗೆ ಒಬ್ಬ ಮುದಿ ಮುದುಕನಿಗೆ ತೀರಾ ತನ್ನ ಮೊಮ್ಮಕ್ಕಳಂಥಾ ಮಕ್ಕಳ ಮೇಲೆ ಕಣ್ಣುಬೀಳುತ್ತದೆ? ಇದು ಕೇವಲ ವಯಸ್ಸು ಅಥವಾ ಎದುರಿಗಿರುವ ಹುಡುಗಿ ತೊಡುವ ಬಟ್ಟೆಯ ಬಗೆಗಿನ ಸಮಸ್ಯೆಯಲ್ಲ. ಕೆಲವು ಮನಸ್ಥಿತಿಗಳ ತಿದ್ದಲಾಗದ ಸಮಸ್ಯೆ,ತಿದ್ದಲು ಹಾದಿಗಳಿವೆ ಅಂದರೆ ಯಾವ ಹಾದಿಗಳಿವೆ ಅನ್ನೋದು ಪ್ರಶ್ನೆ”
ರೂಪಶ್ರೀ ಕಲ್ಲಿಗನೂರು ಬರೆಯುವ ಪಾಕ್ಷಿಕ ಅಂಕಣ.

ಅದು ನಾನಿನ್ನೂ ಐದು ಅಥವಾ ಆರನೇ ತರಗತಿಯಲ್ಲಿ ಓದುತ್ತಿದ್ದ ಸಂದರ್ಭ. ಅಕ್ಕ ನಾನು ಮತ್ತು ತಮ್ಮ ಮೂವರೂ ಒಂದೇ ಶಾಲೆಯಲ್ಲಿ ಓದುತ್ತಿದ್ವಿ. ಮನೆಯಿಂದ ಸುಮಾರು ಒಂದೂವರೆ ಎರಡು ಕಿಲೋಮೀಟರ್ ದೂರವಿದ್ದ ಶಾಲೆಗೆ ನಡೆದುಕೊಂಡೇ ಹೋಗುವುದು ರೂಢಿ. ನಮಗೆ ದಾರಿಗುಂಟ ಮಾತಾಡಲು ಸಿಗುವ ವಿಷಯಗಳಿಗೆ ಯಾವತ್ತೂ ಬರವಿರಲಿಲ್ಲ. ಅದೂ ಅಲ್ಲದೇ ಅದೇ ದಾರಿಯಲ್ಲಿ ಅಕ್ಕ ಹಾಗೂ ನನ್ನ ಗೆಳತಿಯರೂ ಸಿಗುತ್ತಿದ್ದರಿಂದ ಮಾತಿಗೆ ಮತ್ತಷ್ಟು ವಿಷಯಗಳು ಸಿಗುತ್ತಿದ್ದವು. ಅದರಲ್ಲಿ ಬಹುತೇಕವಾಗಿ ಪಾಠಗಳ ವಿಷಯ ಬಿಟ್ಟರೆ ಶಾಲೆಯ ಪೊಲಿಟಿಕ್ಸ್ ಬಗ್ಗೆಯೇ ನಮ್ಮ ವಿಚಾರಗಳು ಚರ್ಚಿಸಲ್ಪಡುತ್ತಿದ್ದವು.

ಹೀಗೆ ಹೋಗುವ ಹಾದಿಯಲ್ಲೊಂದು ಗುಲಾಬಿಯ ಗಿಡವೊಂದಿತ್ತು. ಅದೂ ಮನೆಯೊಂದರ ಕಾಂಪೌಡಿನಲ್ಲಿದ್ದದ್ದು. ಅದು ಗಿಡ ಅಂದರೆ ಗಿಡವೂ ಅಲ್ಲ ಮರ ಎಂದರೆ ಮರವೂ ಅಲ್ಲ. ಅಷ್ಟುದ್ದದ ಮಿನಿಮರವದು. ಅದರ ತುಂಬ ಅರಳಿ ಸುರಿಯುತ್ತಿದ್ದ ತಿಳಿ ಹಳದಿ ಗುಲಾಬಿಗಳು ನಮ್ಮೆಲ್ಲರನ್ನೂ ಬಹಳ ಆಕರ್ಷಿಸುತ್ತಿದ್ದವು. ಆ ಗಿಡವಷ್ಟೇ ಅಲ್ಲದೇ ಇನ್ನೂ ನಾಲ್ಕೈದು ಬಣ್ಣದ ಗುಲಾಬಿ ಗಿಡಗಳು ಆ ಮನೆಯ ಕಾಂಪೌಂಡಿನ ತುಂಬ ಹಬ್ಬಿ ನಿಂತಿದ್ದವು. ಬೆಳಗ್ಗೆ ಮತ್ತು ಸಂಜೆ ಆ ಹೂಗಳನ್ನು ನೋಡೋದಂದ್ರೆ ನಮಗೆಲ್ಲ ಖುಷಿಯ ವಿಷಯ. ನನ್ನಮ್ಮನಿಗಂತೂ ಹೂಗಳೆಂದರೆ ಪ್ರಾಣ. ಹಾಗಾಗಿ ಅವರೂ ನಮ್ಮ ಕಾಂಪೌಡಿನಲ್ಲಿ ಮಲ್ಲಿಗೆ, ಸೇವಂತಿಗೆ, ಗುಲಾಬಿ, ದಾಸವಾಳ ಸೇರಿದಂತೆ ಹತ್ತು ಹಲವು ಹೂಗಿಡಗಳನ್ನು ಪಾಟ್ ನಲ್ಲಿ ಹಾಕಿಕೊಂಡರು. ಈ ಹೂಗಳು ಬಹಳ ಸುಂದರವಾಗಿದ್ದರಿಂದ ಅದರ ಕೊಂಬೆಯೊಂದನ್ನು ಕೇಳಿ ಅಮ್ಮನಿಗೆ ಕೊಡಬೇಕು ಅನ್ನಿಸುತ್ತಿತ್ತು. ಆದರೆ ಯಾರ ಬಳಿಯಾದರೂ ಏನು ಕೇಳಲೂ ಹಿಂದೇಟು ಹಾಕುತ್ತಿದ್ದ ನಾನು ಒಬ್ಬರ ಮನೆಯ ಮುಂದೆ ಗುಲಾಬಿ ಕೇಳೋದಂದ್ರೆ ಅವಮಾನದ ಸಂಗತಿ ಅನ್ನಿಸಿತ್ತು. ಹಾಗಾಗಿ ನಾನದರ ಬಗ್ಗೆ ಯೋಚನೆಯನ್ನೂ ಮಾಡಲಿಲ್ಲ.

ಆದರೆ ನನ್ನ ಗೆಳತಿಯೊಬ್ಬಳಿಗೆ ಎಂದಾದರೂ ಆ ಗಿಡದ ಹೂವನ್ನು ಕೇಳಲೇಬೆಕೆಂಬ ಆಸೆ. ತನ್ನ ಮೋಟು ಜುಟ್ಟಿಗೆ ಆ ಹೂವನ್ನು ಸಿಕ್ಕಿಸಿಕೊಳ್ಳಲೇಬೇಕೆಂಬ ಹಠ. ಆದರೆ ಆ ಮನೆಯ ಮುಂದೆ ಒಬ್ಬ ಅಜ್ಜನಿರುತ್ತಿದ್ದ. ನೋಡಲವನು ಥೇಟ್ ನಮ್ಮ ಹಿರಿಯ ಜನಪ್ರಿಯ ಕವಿಯೊಬ್ಬರ ಹಾಗೇ ಹಾಗೇ ಇದ್ದ. ನಾವು ಶಾಲೆಗೆ ಹೋಗುವಾಗ ಬರುವಾಗ, ಗುಲಾಬಿ ಗಿಡಗಳತ್ತ ಕಣ್ಣು ಹಾಯಿಸಿದಾಗಲೆಲ್ಲ ಅವನೂ ಅಲ್ಲೇ ನಿಂತಿರುತ್ತಿದ್ದ. ಹಾಗಾಗಿ “ಏಯ್ ಹಂಗೆಲ್ಲಾ ಹೋಗ್ಬೇಡ್ವೇ, ಯಾವಾಗ್ಲೂ ಆ ಮುದ್ಕಾ ಒಬ್ಬನೇ ಇರ್ತಾನೆ ಅಲ್ಲಿ. ಒಳಗೆ ಕರ್ಕೊಂಡ್ಬಿಟ್ರೆ ಏನ್ ಮಾಡ್ತಿಯಾ?” ಅಂತ ನನ್ನಕ್ಕ ಅವಳಿಗೆ ಹೇಳಿದ್ದಳು. “ಇಲ್ಲಾ ಅಕ್ಕಾ. ಅವ್ರನ್ನ ನೋಡಿದ್ದೀರಾ ನೀವು. ಸೇಮ್ ನಮ್ಮ ಪಾಠದಲ್ಲಿ ಬರೋ ಹಿರಿಯ ಕವಿಗಳ ಥರಾನೇ ಇದ್ದಾರೆ” ಅಂದಿದ್ಲು. ನಾವು ಗಮನಕೊಟ್ಟು ನೋಡಿದಾಗ, ಓ ಹೌದಲ್ವ. ಹಾಗಾದ್ರೆ ಹೋಗ್ಬಹುದು ಅನ್ಸತ್ತೆ ಅಂದುಕೊಂಡ್ವಿ.

ಈ ಸಂಭಾಷಣೆ ಬೆಳಗ್ಗೆ ಆ ಮನೆಯ ಮುಂದೆ ಹಾದು ಹೋಗುವ ಸಮಯದಲ್ಲಿ ನಡೆದಿತ್ತು. ಸಂಜೆ ಶಾಲೆ ಬಿಟ್ಟದ್ದೇ ನನ್ನ ಗೆಳತಿ ಶಾಲೆಯ ಕಾಂಪೌಂಡ್ ದಾಟಿ, ರಸ್ತೆಗಿಳಿಯಲು ನಮ್ಮೆಲ್ಲರಿಗೂ ಅವಸರಿಸಿದ್ದಳು. ಆದರೆ ನನಗೂ ಅಕ್ಕನಿಗೂ ಹಾಗೆ ಹೋಗೋಕೆ ಅರೆ ಮನಸ್ಸು. ಯಾಕಂದ್ರೆ ಯಾರಲ್ಲಾದ್ರೂ ಏನನ್ನಾದ್ರೂ ಕೇಳಿದ್ರೆ ಅಮ್ಮನಿಂದ ಬೈಸಿಕೊಳ್ತಿದ್ವಿ. ಹಾಗಾಗಿ ಅದನ್ನ ಹೇಳಲಾಗದೇ ಆ ಗುಲಾಬಿ ಮನೆಯತ್ತ ಅವಳೊಟ್ಟಿಗೆ ಹೆಜ್ಜೆ ಹಾಕಿದ್ದೆವು. ಅಷ್ಟರಲ್ಲಿ ದೂರದಲ್ಲಿ ಅಮ್ಮ ಬರುತ್ತಿರೋದು ನಮಗೆ ಕಂಡಿತ್ತು. ಕೆಲವೊಮ್ಮೆ ಅಮ್ಮ ವಾಕಿಂಗ್ ಅಂತ ಬಂದು ನಮ್ಮನ್ನೆಲ್ಲ ಶಾಲೆಯಿಂದ ವಾಪಾಸ್ಸು ಕರೆದುಕೊಂಡು ಹೋಗುತ್ತಿದ್ದರು. ಹಾಗಾಗಿ ದೂರದಿಂದ ಅಮ್ಮನನ್ನ ನೋಡಿದ್ದೇ, “ಏ ನಮ್ಮಮ್ಮ ಬಂದಿದಾರೆ ಕಣೇ. ನಾವು ಮನೆಗೆ ಹೋಗ್ತೀವಿ” ಅಂದು ನಾನು ಅಕ್ಕನನ್ನೂ ತಮ್ಮನನ್ನೂ ಕರೆದುಕೊಂಡು ಅಮ್ಮನತ್ತ ಧಾವಿಸಿದ್ದೆ. ಆಗ ಅವಳೊಟ್ಟಿಗೆ ಇನ್ನೂ ಇಬ್ಬರು ಹುಡುಗಿಯರು ಇದ್ದುದ್ದರಿಂದ, ನನ್ನ ಗೆಳತಿ ಅಷ್ಟೇನೂ ಬೇಸರಿಸಿಕೊಂಡಿರಲಿಲ್ಲ.

“ಏಯ್ ಹಂಗೆಲ್ಲಾ ಹೋಗ್ಬೇಡ್ವೇ, ಯಾವಾಗ್ಲೂ ಆ ಮುದ್ಕಾ ಒಬ್ಬನೇ ಇರ್ತಾನೆ ಅಲ್ಲಿ. ಒಳಗೆ ಕರ್ಕೊಂಡ್ಬಿಟ್ರೆ ಏನ್ ಮಾಡ್ತಿಯಾ?” ಅಂತ ನನ್ನಕ್ಕ ಅವಳಿಗೆ ಹೇಳಿದ್ದಳು. “ಇಲ್ಲಾ ಅಕ್ಕಾ. ಅವ್ರನ್ನ ನೋಡಿದ್ದೀರಾ ನೀವು. ಸೇಮ್ ನಮ್ಮ ಪಾಠದಲ್ಲಿ ಬರೋ ಹಿರಿಯ ಕವಿಗಳ ಥರಾನೇ ಇದ್ದಾರೆ” ಅಂದಿದ್ಲು.

ಮಾರನೇಯ ದಿನ ಅವಳು ಎಂದಿನಂತೆ ನಮಗೆ ಆ ರಸ್ತೆಯಲ್ಲಿ ಭೇಟಿಯಾಗಲಿಲ್ಲ. ಮೊದಲೇ ಶಾಲೆಗೆ ಹೋಗಿರಬೇಕು, ಅಥವಾ ತಡವಾಗಿ ಬರಬಹುದು ಅಂತಂದುಕೊಂಡಿದ್ದೆ. ನಾನೆಣಿಸಿದಂತೆ ಅವಳು ಆಗಲೇ ಶಾಲೆಗೆ ಬಂದಾಗಿತ್ತು. ಹೂವಿನ ಬಗ್ಗೆ ಕೇಳೋಣ ಅನ್ನುವಷ್ಟರಲ್ಲಿ ಬೆಲ್ ಹೊಡೆದಿತ್ತು. ಹಾಗಾಗಿ ಮಧ್ಯಾಹ್ನದ ಊಟದ ಬಿಡುವಿನಲ್ಲಿ ಅವಳನ್ನು ಮಾತಾಡಿಸಿದ್ದೆ. ಆಗಲೇ ಅವಳು ಕೊಂಚ ಮಂಕಾಗಿದ್ದದ್ದು ಕಂಡದ್ದು. ಹಾಗಾಗಿ ಅದರ ಬಗ್ಗೆ ವಿಚಾರಿಸುತ್ತ “ಏನಾಯ್ತೇ, ಆ ತಾತ ಹೂ ಕೊಡಲ್ಲ ಅಂದ್ನಾ?” ಅಂತ ಕೇಳಿದ್ದೆ. ಆಗವಳು “ಇಲ್ಲ ಕಣೇ. ನಾನು ಕೇಳಿದ ತಕ್ಷಣ, ಅಯ್ಯೋ ಬಾ, ಅದ್ಕೇನಂತೆ, ಎಷ್ಟು ಬೇಕಾದ್ರೂ ತಗೋ ಅಂತಂದು ನನ್ನನ್ನೇ ಎತ್ತಿ ಹೂಗಳಿದ್ದ ಕಡೆ ನಿಂತಿದ್ದ. ಅವನು ಸುಮ್ಮನೇ ಎತ್ತಿಕೊಂಡಿರಲಿಲ್ಲ.. ಒಂಥರಾ ಎಲ್ಲೆಲ್ಲೋ ಮುಟ್ಟಿದ… ತುಂಬಾ ಹೊತ್ತು ನಾನು ಸಾಕು ಅಂದ್ರೂ ಕೇಳಲಿಲ್ಲ… ಆಮೇಲೆ ಅಶ್ವಿನಿಯನ್ನೂ ಹಾಗೇ ಎತ್ತಿಕೊಂಡು… ಎಲ್ಲೆಲ್ಲೋ…” ಅಂತ ಹೇಳುವಷ್ಟರಲ್ಲಿ ಅವಳ ಮುಖ ಇನ್ನೂ ಕಪ್ಪಿಟ್ಟಿತ್ತು. ಆ ಘಟನೆ ನಡೆದಾಗಿನಿಂದ ನಾವೆಲ್ಲ ರಸ್ತೆಯಲ್ಲಿ ಓಡಾಡುವುದನ್ನೇ ನಿಲ್ಲಿಸಿಬಿಟ್ಟೆವು. ಪುಣ್ಯಕ್ಕೆ ಪಕ್ಕದಲ್ಲೊಂದು ರಸ್ತೆಯೂ ನಮ್ಮ ಮನೆಯನ್ನು ತಲುಪುತ್ತಿತ್ತು. ಹಾಗಾಗಿ ನಾವಲ್ಲದೇ ನಮ್ಮ ಗೆಳತಿಯರೂ ಸಹ ಆ ರಸ್ತೆಯಲ್ಲಿ ಓಡಾಡುವುದನ್ನು ಬಿಟ್ಟುಬಿಟ್ಟೆವು.

*********************
ಈ ಘಟನೆಯಾಗಿ ಸುಮಾರು 17-18 ವರ್ಷಗಳೇ ಕಳೆದುಹೋಗಿವೆ. ಆದರೆ ಸದಾ ಬಿಳಿ ಬನಿಯನ್ ಮತ್ತು ಬಿಳಿಪಂಚೆಯುಟ್ಟು, ಶಾಲೆ ಬಿಡುವ ಹೊತ್ತಿಗೆ ಹೊರ ನಿಲ್ಲುತ್ತಿದ್ದ ಆ ಮುದುಕನ ಮುಖ ಇನ್ನೂ ನೆನಪಿಂದ ಅಳಿಸಿ ಹೋಗಿಲ್ಲ. ಬಹುಶಃ ಅವನು ಹಿರಿಯ ಕವಿಯೊಬ್ಬರನ್ನು ಹೋಲುತ್ತಿದ್ದುದೇ ಕಾರಣವಿರಬೇಕು. ಅದರಲ್ಲೂ ನಾ ನೋಡಿದಾಗ ಅವನದ್ದೂ ಬಿಳಿ ಗುಂಗುರುಗುಂಗುರ ಕೂದಲು.

ಆ ಅಜ್ಜನಲ್ಲಿ ಹೂವಿಗೆ ಬೇಡಿಕೆಯಿಟ್ಟದ್ದು ಶಾಲೆಗೆ ಹೋಗುವ ಪುಟ್ಟಪುಟ್ಟ ಮಕ್ಕಳು. ಆ ಮಕ್ಕಳು ಶಾಲೆಯ ಸಮವಸ್ತ್ರದಲ್ಲಿರುತ್ತಿದ್ದರೇ ಹೊರತು, ಯಾವುದೇ ತುಂಡುಡುಗೆಗಳಲ್ಲಿರಲಿಲ್ಲ. ಮತ್ತೆ ಹೇಗೆ ಒಬ್ಬ ಮುದಿ ಮುದುಕನಿಗೆ ತೀರಾ ತನ್ನ ಮೊಮ್ಮಕ್ಕಳಂಥಾ ಮಕ್ಕಳ ಮೇಲೆ ಕಣ್ಣುಬೀಳುತ್ತದೆ? ಇದು ಕೇವಲ ವಯಸ್ಸು ಅಥವಾ ಎದುರಿಗಿರುವ ಹುಡುಗಿ ತೊಡುವ ಬಟ್ಟೆಯ ಬಗೆಗಿನ ಸಮಸ್ಯೆಯಲ್ಲ. ಕೆಲವು ಮನಸ್ಥಿತಿಗಳ ತಿದ್ದಲಾಗದ ಸಮಸ್ಯೆ. ತಿದ್ದಲು ಹಾದಿಗಳಿವೆ ಅಂದರೆ ಯಾವ ಹಾದಿಗಳಿವೆ ಅನ್ನೋದು ಪ್ರಶ್ನೆ. ಏಕೆಂದರೆ ಒಬ್ಬ ಹುಡುಗಿ ತೊಟ್ಟುಕೊಳ್ಳುವ ಬಟ್ಟೆಯ ಬಗ್ಗೆ ನೂರಾರು ತಕರಾರು ಒಡ್ಡುವ ಜನಗಳು ಒಂದು ಹಸುಳೆಯ ಮೇಲೆ ಬಲಾತ್ಕಾರವಾದಾಗ ಏನೆಂದು ಹೇಳಬಹುದು? ಏಕೆಂದರೆ ಈ ತೆರನಾದ ಸಂಕಟಗಳನ್ನು ಪ್ರತಿಯೊಂದು ಹೆಣ್ಣುಮಗುವೂ ಅನುಭವಿಸಿರುತ್ತದೆ. ಯಾರೋ ದಾರಿಹೋಕರಲ್ಲ. ಅಪ್ಪ-ಅಮ್ಮನ ಮುಂದೆ ಎತ್ತಿ ಆಡಿಸುವ ಮನೆಮಂದಿಯೇ ಸದ್ದಿಲ್ಲದೇ ಇಂಥ ಕೆಲಸಗಳನ್ನು ಮಾಡಿರುತ್ತಾರೆ. ಅದು ಸರಿಯಲ್ಲ ಅಂತ ಆಗಲೇ ಅನ್ನಿಸಿದರೂ ಅದನ್ನು ಹೇಳಿಕೊಳ್ಳುವ ಧೈರ್ಯವಾಗಲೀ ಬುದ್ದಿಯಾಗಲೀ ಬಂದಿರಲ್ಲ.

#Me Too ವಿಷಯವಾಗಿ ನಟಿಯೊಬ್ಬರು ತಮ್ಮ ಅನುಭವವನ್ನು ಹೇಳಿಕೊಂಡಾಗ “ಓಹ್ ಆಗ ಹೇಳೋಕೆ ಏನಾಗಿತ್ತೋ” ಅಂತೆಲ್ಲ ಹಲವು ಜನ ಅವರನ್ನೇ ಅನುಮಾನದ ದೃಷ್ಟಿಯಲ್ಲಿ ನೋಡಿದ್ದಾರೆ. ಸತ್ಯಾಸತ್ಯತೆಯ ವಿಷಯ ಬೇರೆ. ಆದರೆ ಚಿಕ್ಕ ವಯಸ್ಸಿನಲ್ಲಿ ಅನುಭವಿಸುವ ಇಂಥ ಸಂಕಟಗಳಿಗೆ ಮದ್ದು ಏನು? ಅನುಭವಿಸೋದೊಂದೇ ದಾರಿಯೇ? ಈ ಪ್ರಶ್ನೆಗೆ ಗಂಡಸರೇ ಉತ್ತರಿಸಬೇಕಿದೆ. ಏಕೆಂದರೆ ಅವರ ಮಕ್ಕಳಿಂದ ಹಿಡಿದು ಬೇರೆ ಯಾವ ಮಕ್ಕಳೂ ಇಂಥ ಘಟನೆಗಳ ಬಗ್ಗೆ ಹೊರಗೆ ಹೇಳಿಕೊಳ್ಳಲಾಗದೇ ವಿಲವಿಲನೇ ಪರಿತಪಿಸಿರುತ್ತಾರೆ. ಹಾಗಾಗಿ ಇದು ಕುತೂಹಲದ ಪ್ರಶ್ನೆಯಷ್ಟೇ.

ಆ ಅಜ್ಜನಲ್ಲಿ ಹೂವಿಗೆ ಬೇಡಿಕೆಯಿಟ್ಟದ್ದು ಶಾಲೆಗೆ ಹೋಗುವ ಪುಟ್ಟಪುಟ್ಟ ಮಕ್ಕಳು. ಆ ಮಕ್ಕಳು ಶಾಲೆಯ ಸಮವಸ್ತ್ರದಲ್ಲಿರುತ್ತಿದ್ದರೇ ಹೊರತೇ, ಯಾವುದೇ ತುಂಡುಡುಗೆಗಳಲ್ಲಿರಲಿಲ್ಲ. ಮತ್ತೆ ಹೇಗೆ ಒಬ್ಬ ಮುದಿ ಮುದುಕನಿಗೆ ತೀರಾ ತನ್ನ ಮೊಮ್ಮಕ್ಕಳಂಥಾ ಮಕ್ಕಳ ಮೇಲೆ ಕಣ್ಣುಬೀಳುತ್ತದೆ?

ಬೇರೆ ದೇಶಗಳ ಕಥೆ ಗೊತ್ತಿಲ್ಲ. ಆದರೆ ಹೆಣ್ಣನ್ನು ಪೂಜಿಸುವ ನಮ್ಮ ಭಾರತದಲ್ಲಂತೂ ಹೆಣ್ಣು ಮಕ್ಕಳನ್ನು ಬೆಳೆಸುವ ರೀತಿಯಲ್ಲೇ ತಪ್ಪಾಗ್ತಿದೆ ಅನ್ನಿಸುತ್ತೆ. ಪ್ರತಿಯೊಂದು ಹೆಣ್ಣುಮಗುವನ್ನೂ “ಏ ಅಲ್ಲಿ ಹೋಗ್ಬೇಡ, ಇಲ್ಲಿ ಹೋಗ್ಬೇಡ” ಅನ್ನುವ ಬದಲು, ಯಾವ್ಯಾವ ಪರಿಸ್ಥಿತಿಗಳನ್ನು ಹೇಗೆಲ್ಲ ಎದುರಿಸಬಹುದು ಅಂತ ಹೇಳಿಕೊಡಬೇಕಾಗಿದೆ. “ಹುಡುಗ್ರ ಜೊತೆ ಮಾತಾಡೋಹಾಗಿಲ್ಲ” ಅಂತ ನಿಷಿದ್ಧ ಹೇರುವ ಬದಲು, ಅವರ ಮಾತುಕತೆಯಾಗಲೀ, ನಡೆಯಾಗಲೀ.. ಅದರ ಇತಿ-ಮಿತಿಗಳ ಬಗ್ಗೆ ತಿಳಿಹೇಳಬೇಕು. ಆಗ ಹುಡುಗರಿಗೂ, ಹುಡುಗಿಯರ ಬಗ್ಗೆ ಇರುವ ಕುತೂಹಲ ತೀವ್ರತೆ ತಗ್ಗಿ, ಅವರನ್ನು ಎಲ್ಲ ಸ್ನೇಹಿತರಲ್ಲಿ ಒಬ್ಬರನ್ನಾಗಿ ನೋಡುವ ಸಾಧ್ಯತೆಗಳಿರುತ್ತವೆ. ಗುಡ್ ಟಚ್ ಬ್ಯಾಡ್ ಟಚ್ ಬಗ್ಗೆ ಅಂತೂ ಹೆಣ್ಣುಮಗುವಿಗೆ ಹೇಳಿಕೊಡಬೇಕಾದ ಅಗತ್ಯವಿಲ್ಲ. ಒಂದು ಸ್ಪರ್ಶವಷ್ಟೇ ಅಲ್ಲ, ಒಬ್ಬ ವ್ಯಕ್ತಿ ನಮ್ಮನ್ನು ನೋಡುವ ರೀತಿಯಲ್ಲೇ ಅವನ ಭಾವನೆಗಳನ್ನು ಹೇಳಿಬಿಡಬಹುದು. ಅವನ ದೃಷ್ಟಿಕೋನ ಎಂಥದ್ದು ಅಂತ.

ಎಂದೋ ಒಮ್ಮೆ ಬೇಸರವಾದಾಗಲೋ ಅಥವಾ ಖುಷಿಯಾದಾಗಲೋ ನಮ್ಮ ಪಾಡಿಗೆ ನಾವು ಒಂದಿಷ್ಟು ಆರಾಮವಾಗಿ ಫುಟ್‍ಪಾತಿನ ಮೇಲೆ ನಡೆದಾಡುವಂತಿಲ್ಲ. ಕೆಲಸಮುಗಿಯೋದು ಒಂದಷ್ಟು ತಡವಾದರೆ, ಬಸ್ಟ್ಯಾಂಡಿನಲ್ಲಿ ನೆಮ್ಮದಿಯಿಂದ ನಿಲ್ಲುವಹಾಗಿಲ್ಲ. ಒಬ್ಬೊಬ್ಬರೇ ನಿಂತಾಗಲೋ, ಅಥವಾ ಓಡಾಡುವಾಗಲೋ ಮೇಲಿಂದ ಕೆಳಗೆ ಸ್ಕ್ಯಾನ್ ಮಾಡುವವರನ್ನು ಕಂಡರೆ ಅಲ್ಲೇ ಕಪಾಳ ಊದಿಕೊಳ್ಳುವಂತೆ ಹೊಡೆಯಬೇಕು ಅನ್ನಿಸೋದು ಸಹಜವೇ.

ಇಲ್ಲೊಂದು ಘಟನೆ ಹೇಳಬೇಕಿದೆ. ಅವತ್ತೊಂದಿನ ಕೆಲಸದ ಮೇಲೆ ಮೆಜೆಸ್ಟಿಕ್ ಗೆ ಹೋಗಿದ್ದೆ. ಅಲಂಕಾರ್ ಪ್ಲಾಜಾದ ಫುಟ್ ಪಾತಿನಲ್ಲಿ ಅಕ್ಕನೊಟ್ಟಿಗೆ ಪಾರ್ಕಿಂಗ್ ನತ್ತ ಹೆಜ್ಜೆಹಾಕುತ್ತಿದ್ದೆ. ಆ ಕಡೆ ಈಕಡೆ ನೋಡುವಾಗ, ಹುಡುಗನೊಬ್ಬ ಏನೋ ಅದ್ಭುತ ಕಂಡಂತೆ ತುಂಬು ಖುಷಿಯಲ್ಲಿ ಮುಗುಳ್ನಗುತ್ತ ನಿಂತಿದ್ದ. ಥೇಟ್ ಭಾರತೀಯ ಸಿನಿಮಾ ಹೀರೋನ ಹಾಗೆ. ಅರೇ ಯಾರಪ್ಪ ಈ ಹೀರೋ. ಹೀಗೆ ರಸ್ತೆ ಪಕ್ಕದಲ್ಲಿ ನಿಂತು ನಗ್ತಿದ್ದಾನಲ್ಲ. ಅದೂ ಗಿಜಿಗಿಜಿ ಎನ್ನುವ ಜನಸಾಗರದ ನಡುವೆ ನಿಂತು! ಅಂತ ಅಚ್ಚರಿಯಾಗಿತ್ತು. ಸರಿ ಅಲ್ಲೇನೋ ನೋಡ್ತಿದ್ದಾನಲ್ಲ ಅಂತ ಅವನ ದೃಷ್ಟಿಯ ಜಾಡು ಹಿಡಿದು, ಅವನ ಎದುರಿನ ಫುಟ್‍ಪಾತಿನತ್ತ ನನ್ನ ದೃಷ್ಟಿ ಹಾಯಿತು. ಅಲ್ಲಿ ಮುದ್ದಾದ ಹುಡುಗಿಯೊಬ್ಬಳು ಗೆಳತಿಯೊಬ್ಬಳಿಗೆ ಏನನ್ನೋ ಹೇಳುತ್ತ ಹುಚ್ಚು ನಗುತ್ತಿದ್ದಾಳೆ. ಅವಳ ನಗುವಿನಲ್ಲಿದ್ದ ಪ್ರಫುಲ್ಲತೆ… ಅಬ್ಬ ನನಗೇ ಇಷ್ಟವಾಗಿಹೋಯ್ತು. ಆ ಹುಡುಗನೋ ಅವಳ ನಗುವನ್ನು ಸಂಭ್ರಮಿಸುತ್ತಾ ನಿಂತಿದ್ದಾನೆ. ಮತ್ತು ನಾನು ಅವರಿಬ್ಬರನ್ನು ನೋಡಿ ಖುಷಿಯಾಗಿದ್ದೆ…. ಒಂದು ಸೌಂದರ್ಯವನ್ನು ನೋಡಿ ಖುಷಿಪಡುವುದಕ್ಕೂ ಅಥವಾ ಮೆಚ್ಚಿಕೊಳ್ಳುವುದಕ್ಕೂ ಮತ್ತು ರಸ್ತೆಯಲ್ಲಿ ಸಿಕ್ಕಸಿಕ್ಕ ಹೆಣ್ಣುಮಕ್ಕಳನ್ನು ಮುಟ್ಟಿ, ಸರಸರನೇ ಓಡಿಹೋಗುವುದಕ್ಕೂ ಎಷ್ಟೊಂದು ವ್ಯತ್ಯಾಸವಿದೆ. ಅದೊಂದು ಟಚ್ ಅವರಿಗೆ ಅದೆಂಥ ಖುಷಿಕೊಡಬಲ್ಲದು? ಹಾಗೆ ಮಾಡುವವರ ಬೆರಳನ್ನೊಮ್ಮೆ ಹಿಡಿದು ತಿರುಗಿಸಿ ಕೇಳಲೇಬೇಕು. ಆದರೆ ಅವರೆಷ್ಟು ಪುಕ್ಕುಲರು ಮತ್ತು ಹೇಡಿಗಳು ಅಂತ ಹುಡುಗಿಯರಿಗೆ ಚೆನ್ನಾಗಿ ಗೊತ್ತು!

ನಮ್ಮನೆಯ ವಿಷಯಕ್ಕೆ ಬಂದರೆ ನನ್ನಕ್ಕನೇ ತುಂಬಾ ಬೋಲ್ಡ್. ಹಗಲಿರಲಿ ಅಥವಾ ರಾತ್ರಿಯಾಗಿರಲಿ, ಅವಳ ತಂಟೆಗೆ ಹೋದವರ ಕಪಾಳಕ್ಕೆ ಎರಡು ಬಿಗಿದು ಬರುವಂಥಾ ಧೈರ್ಯವಂತೆ. ಚಿಕ್ಕಂದಿನಲ್ಲಿ ಕಟ್ಟೆಯ ಮೇಲಿಂದ ಬಿದ್ದು ಕಾಲಿಗೆ ಪೆಟ್ಟುಮಾಡಿಕೊಂಡಿದ್ದಳು ಅವಳು. ಹಾಗಾಗಿ ಅವಳನ್ನು ಯಾರೂ ಪ್ರಶ್ನಿಸದಂತೆ ಅವಳನ್ನು ಅವಳೇ ಕಾಪಾಡಿಕೊಳ್ಳುವಂತೆ ಅಪ್ಪ ಅವಳನ್ನು ಧೈರ್ಯಶಾಲಿಯನ್ನಾಗಿ ಬೆಳೆಸಿದರು. ಯಾವ ಅಣ್ಣನಿಗಿಂತಲೂ ಕಡಿಮೆಯಿಲ್ಲದಂತೆ ಅವಳು ನನ್ನನ್ನು ಸುತ್ತಾಡಿಸುತ್ತಾಳೆ. ನೋಡಿಕೊಳ್ಳುತ್ತಾಳೆ. ಅವಳ ಆರೈಕೆಯಲ್ಲಿ ನಾನೊಂಚೂರು ಮೆತ್ತಗೇ ಬೆಳೆದುಬಿಟ್ಟಿದ್ದೆ! ಆದರೂ ನನ್ನ ತಂಟೆಗೆ ಬಂದವರನ್ನು ಸರಿಯಾಗಿ ವಿಚಾರಿಸಿಕೊಳ್ಳುವ ಧೈರ್ಯವನ್ನಂತೂ ಅಕ್ಕನಿಂದಲೇ ಕಡ ಪಡೆದಿದ್ದೇನೆ.

ಹೆಣ್ಮಕ್ಳೇ.. ನಿಮ್ಮ ಬ್ಯಾಗಲ್ಲೊಂದು ಪೆಪ್ಪರ್ ಸ್ಪ್ರೇ ಇರ್ಲಿ..

ಪೆಪ್ಪರ್ ಸ್ಪ್ರೇ. ನನ್ನ ಜೀವನದ ಸಂಗಾತಿ ನನಗೆ ಕೊಟ್ಟ ಮೊದಲ ಉಡುಗೊರೆ. ಮದುವೆಗೂ ಮುಂಚೆ ಮಾತನಾಡುವಾಗ “ನಿನ್ನ ಹತ್ರ ಪೆಪ್ಪರ್ ಸ್ಪ್ರೇ ಇದ್ಯಾ?” ಅಂತ ಕೇಳಿದ್ದರು. “ಇಲ್ಲ” ಅಂತ ಉತ್ತರಿಸಿದಾಗ, ಒಂದಿಷ್ಟು ಗರಂ ಆಗಿ “ಬಸ್ಸು, ಕ್ಯಾಬ್‍ಗಳಲ್ಲಿ ಓಡಾಡೋ ಹುಡುಗೀರು ಪೆಪ್ಪರ್ ಸ್ಪ್ರೇ ಇಟ್ಟುಕೊಳ್ಳದೇ ಹಾಗೇ ಓಡಾಡೋದು ಸೇಫಾ?” ಅಂತ ಪ್ರಶ್ನಿಸಿದ್ದರು. ನಾನು ಏನೂ ಮಾತಾಡದೇ ಸುಮ್ಮನಾಗಿದ್ದೆ. ಅದಾಗಿ ಎರಡೇ ದಿನಗಳಲ್ಲಿ ನಾನು ಕೆಲಸ ಮಾಡುತ್ತಿದ್ದ ಶಾಲೆಗೇ ನನ್ನ ಮೊದಲ ಗಿಫ್ಟ್ “ಪೆಪ್ಪರ್ ಸ್ಪ್ರೇ” ಬಂದು, ನನ್ನ ಕೈ ಸೇರಿತ್ತು. ಅಂದಿನಿಂದ ಮನೆಯಿಂದ ಹೊರಗೆ ಹೆಜ್ಜೆಯಿಡುತ್ತೀನಿ ಅಂದ್ರೆ ಬ್ಯಾಗಿನಲ್ಲಿ ಪೆಪ್ಪರ್ ಸ್ಪ್ರೇ ಇದ್ದೇ ಇರುತ್ತೆ ಅಂತರ್ಥ. ಗಾಡಿ ಓಡಿಸುವಾಗ ಹೆಲ್ಮೆಟ್ ಎಷ್ಟು ಮುಖ್ಯವೋ, ನಾವು ಒಬ್ಬೊಬ್ಬರೇ ಓಡಾಡುವಾಗ ಪೆಪ್ಪರ್ ಸ್ಪ್ರೇ ಕೂಡ ಅಷ್ಟೇ ಮುಖ್ಯ. ಅದೊಂದು ಪುಟ್ಟ ಡಿವೈಸ್. ನಮ್ಮ ಮೊಬೈಲ್ ಗಿಂತ ಚಿಕ್ಕದು. ಬ್ಯಾಗಿನಲ್ಲಿ ನಮ್ಮ ಕೈಗೆಟುಕೋ ಪೌಚಿನಲ್ಲಿ ಇಟ್ಟುಕೊಂಡರೆ ಆಯ್ತು. ತಂಟೆಗೆ ಬಂದವರನ್ನು ಕನಿಷ್ಟ ಒಂದು ತಾಸಾದರೂ ನೆಲಕ್ಕೆ ಕೆಡವಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ನಿಮ್ಮ ಮನೆಯಲ್ಲಿ ಮತ್ತು ಸ್ನೇಹಬಳಗದಲ್ಲಿ ಹೆಣ್ಣುಮಕ್ಕಳಿದ್ದರೆ ಹಬ್ಬದ ನೆಪದಲ್ಲಿ ಒಂದು ಪೆಪ್ಪರ್ ಸ್ಪ್ರೇ ಕೊಡಿಸಿಬಿಡಿ. . ಅವರು ತಮ್ಮನ್ನು ತಾವೇ ರಕ್ಷಿಸಿಕೊಳುವ ಸಮಯವಿದು.