ʻನಿಮ್ಮ ಕಾವ್ಯದಲ್ಲಿ ನೀವು ಬರೆಯಲೇಬೇಕೆಂಬ ಮಾತುಗಳು ಇರುವಂತೆಯೇ ನೀವು ಬರೆದೂ ಬರೆದೂ ಜಾಳಾಗಬಹುದಾದ ಕೆಲವು ಸಂವೇದನೆಗಳು ಸಹ ಜಾಗ ಪಡೆದಿವೆ. ಇದು ಪ್ರತಿ ಕವಿಗೂ ಇರುವ ತೊಡಕು. ನೀವು ಬರೆಯಲಾರಂಭಿಸಿದ ತಕ್ಷಣ ನಿಮಗೆ ಒಂದು ಶೈಲಿಯು ಸಿದ್ಧಿಸುತ್ತದೆ. ಅದನ್ನು ಬಳಕೆ ಮಾಡುತ್ತಾ ಹೋದಂತೆ ಅದರ ಸಾರ ಕಡಿಮೆಯಾದಂತೆ ಅನ್ನಿಸುತ್ತದೆ. ಪ್ರಾಯಶಃ ನೀವು ಆವಾಹಿಸಿಕೊಳ್ಳುವ ಪ್ರೀತಿಯ ವ್ಯಾಮೋಹ ಅನೇಕ ಕವಿತೆಗಳಲ್ಲಿ ಪುನಾರಾವರ್ತನೆ ಆಗುವ ಅಪಾಯದಲ್ಲಿವೆ. ಒಂದು ವಿಷಯವನ್ನು ವೃತ್ತಾಕಾರವಾಗಿ ನಿಧನಿಧಾನವಾಗಿ ಪ್ರವೇಶಿಸಿ ಅದರ ಗಾಢತೆಯನ್ನು ಅರಿಯುವುದು ಒಂದು ತಂತ್ರʼ.
ಚೈತ್ರ ಶಿವಯೋಗಿಮಠ ಕವನ ಸಂಕಲನ “ಪೆಟ್ರಿಕೋರ್‌”ಗೆ ತಾರಿಣಿ ಶುಭದಾಯಿನಿ ಬರೆದ ಮಾತುಗಳು

ಪ್ರೀತಿಯ ಚೈತ್ರಾ,

ನಿಮ್ಮ ತಾಳ್ಮೆಗೆ ಶರಣು. ನೀವು ಈ ವೇಗದ ಯುಗದ Hurry up, it’s time ಎನ್ನುವ ಆಮಿಷಕ್ಕೆ ಒಳಗಾಗದೆ ನಿಲ್ಲುವ ಧೋರಣೆ ಹೊಂದಿದ್ದೀರಿ ಎಂದರೆ ರೆಬೆಲ್ ಎಂದಲ್ಲ. ಹೂವು ಅರಳುವುದಕ್ಕೆ ಅದರದೇ ಸಮಯ ಇರುವಂತೆ ಸೃಜನಶೀಲತೆಯು ಅರಳುವುದಕ್ಕೆ ತಾಳ್ಮೆ ಬೇಕೆಂಬ ಒಳಗುಟ್ಟನ್ನು ನೀವು ಕಂಡುಕೊಂಡಿದ್ದೀರಿ ಎಂದು ಅನ್ನಿಸಿದೆ. ಇದು ನಿಮ್ಮ ಬದುಕಿನ ಪ್ರಾಥಮಿಕ ಪಾಠವೂ ಹೌದು; ಕಾವ್ಯದ ಕುರಿತಾದ ಪ್ರಾಥಮಿಕ ತಿಳಿವಳಿಕೆಯೂ ಹೌದು. ವಾಸ್ತವವಾಗಿ ನಿಮಗೆಂದು ಈ ಬರಹವನ್ನು ಬರೆಯುತ್ತಿದ್ದರೂ ನನಗೆ ನನ್ನೊಳಗೆ ಇರುವ ಸ್ವಗತವನ್ನೇ ನಿಮ್ಮ ಮುಂದೆ ಇಡುತ್ತಿದ್ದೇನೆಂಬ ಅಳುಕು ಇದೆ. ಕಾವ್ಯ ಎನ್ನುವ ತೀವ್ರ ವ್ಯಾಮೋಹದ ಸೆಳೆತಕ್ಕೆ ಒಳಗಾಗಿ ಕಾವ್ಯ ಬರೆಯಲು ತೊಡಗಿದವರೆಲ್ಲರಿಗೂ ಕಾವ್ಯದ ಕುರಿತ ಮೀಮಾಂಸೆಯ ನಿಯಮಗಳು, ಸಮಕಾಲೀನರ ಕಾವ್ಯದ ಒತ್ತಡಗಳು ಒಂದು ಬಗೆಯ ಆತಂಕವನ್ನೆ ಸೃಷ್ಟಿ ಮಾಡಿರುತ್ತವೆ. ‘ನಾನು ಒಲಿದಂತೆ ಹಾಡುವೆ’ ಎಂದು ಹೊರಟರೂ ಜಗತ್ತು ಸೃಷ್ಟಿಸುವ ಮಾನದಂಡಗಳನ್ನು ನನ್ನ ಕಾವ್ಯ ಎದುರಿಸುವುದೇ? ಎನ್ನುವ ಆತಂಕ, ಸಣ್ಣದಾದ ಭಯ ಇರುತ್ತದೆ. ಇದನ್ನು ನೀವೂ ಹೊಸದಾಗಿ ಬರೆಯುತ್ತಾ ಅನುಭವಿಸುತ್ತಿದ್ದೀರಿ ಎಂದು ಭಾವಿಸುವೆ. ಈಗಾಗಲೇ ಬರೆದು ಬರೆದು ಒಂದು ಹಾದಿ ನಿರ್ಮಾಣವಾಗಿರುವಾಗ ಎಲ್ಲರ ನೆರಳಿನ ಬೆರಳಿನಲ್ಲಿ ಬರೆಯಬೇಕಾದುದೇನು ಎಂದು ಕುಶಲಿಯಾದ ಕವಿ ಕೇಳಿಕೊಳ್ಳುವುದು ಸಹಜ. ಅಂತೆಯೇ ಈ ಒತ್ತಡಗಳ ನಡುವೆಯೇ ಒಂದಿಷ್ಟು ತಾಜಾಭಾವನೆಗಳೊಂದಿಗೆ ಸರಳ ಸುಂದರ ಬರವಣಿಗೆ ಮಾಡುವುದು ಸಾಧ್ಯವಿದೆ ಎನ್ನುವುದನ್ನು ನೀವು ಮುಗ್ಧವಾಗಿ ಒಪ್ಪಿಕೊಂಡು ಬರೆಯುತ್ತೀದ್ದೀರಿ. ನಿಮ್ಮ ಮುಗ್ಧತೆ, ಸರಳತೆ ನಿಮ್ಮ ಹೊಸ ಸಂಕಲನದ ಕವಿತೆಗಳಲ್ಲಿ ಕಾಣುತ್ತವೆ.

ಮೊದಲನೆಯದಾಗಿ ನಿಮ್ಮ ಕವಿತೆಗಳು ಒಂದು ಪ್ರಾರ್ಥನೆಯಂತಿವೆ. ಹಾಗೆ ನೋಡಿದರೆ ಕವಿವಾಣಿಯಂತೆ ಪ್ರತಿ ಕವಿತೆಯೂ ಪ್ರಾರ್ಥನೆಯೇ. ನಿಮ್ಮ ಕವಿತೆಗಳು ಉದ್ದೇಶಪೂರ್ವಕವಾಗಿ ಮಾಡುವ ಪ್ರಾರ್ಥನೆಯಂತಲ್ಲ; ಅಥವಾ ಆಚರಣಾಮೂಲದ ಒಂದು ಯಾಂತ್ರಿಕ ಕ್ರಿಯೆಯೂ ಅಲ್ಲ. ಅವು ಒಂದು ಬಗೆಯ ಪ್ಯಾಶನ್‌ನಿಂದ ಕೂಡಿದ ಪ್ರಾರ್ಥನೆ. ಅದರಲ್ಲಿ ಆರ್ತತೆಯನ್ನು ಹದವಾಗಿ ಬಗ್ಗಿಸಿ ಒಂದು ಪ್ರಾರ್ಥನೆಯನ್ನು ಸಲ್ಲಿಸುತ್ತೀರಿ. ಪ್ರೀತಿಸುವವರೊಂದಿಗೆ ಎಲ್ಲವನ್ನೂ ಹಂಚಿಕೊಂಡು, ಎಲ್ಲವನ್ನೂ ನಿವೇದಿಸಿಕೊಂಡು ಹೋಗುವ ದಿಟ್ಟತೆ ಅಲ್ಲಿ ಕಾಣುತ್ತದೆ. ಆದರೆ ಅದು ಸಂಪೂರ್ಣ ವಿನಯದಿಂದ ತನ್ನನ್ನು ತಾನು ಮರೆಯುವಂತದ್ದಲ್ಲ. ನಿಮ್ಮತನವನ್ನು ಉಳಿಸಿಕೊಂಡು ಇತರರನ್ನು ಪ್ರೀತಿ ಜಗತ್ತಿನಲ್ಲಿ ನೋಡಲು ಬಯಸುತ್ತೀರಿ. ಹಾಗಾಗಿ ಇಲ್ಲಿ ನಿಮ್ಮ ಭಾವನೆಗಳು ತಣ್ಣಗೆ ಎನ್ನಿಸಿದರೂ ಶಕ್ತಿಶಾಲಿಯಾಗಿವೆ. ಝೆನ್ ಉಕ್ತಿಯೊಂದು ಹೇಳುತ್ತದೆ: “ನೀರು ತುಂಬ ಮೃದು ಆದರೆ ಬಲಶಾಲಿ”. ಚೈತ್ರಾ ಇಲ್ಲಿ ನೀವು ಹೆಣ್ಣಾಗಿದ್ದೀರಿ ಎಂದು ನನಗೆ ಅನ್ನಿಸಿದೆ. ನೀವು ಪ್ರೀತಿಯನ್ನೇ ಧ್ಯಾನಿಸಿದ್ದೀರಿ, ಶರಣಾಗತಿಯ ಭಾವವನ್ನು ವಿಜೃಂಭಿಸಿದ್ದೀರಿ. ಆದರೆ ಮಿಲನದ ಆತ್ಯಂತಿಕ ತುದಿಯಲ್ಲಿಯೂ ನಿಮ್ಮ ಅಸ್ಮಿತೆಯ ಕುರುಹು ಇರಬೇಕೆಂಬ ಅಪೇಕ್ಷೆಯನ್ನು ಹೊಂದಿದ್ದೀರಿ. ನಿಮ್ಮ ಕವಿತೆಗಳು ಮತ್ತೊಬ್ಬನನ್ನು ಕುರಿತು ಧ್ಯಾನಿಸುವ ಸ್ಥಾಯಿಭಾವದಲ್ಲಿ ನಿಂತಂತೆ ತೋರಿದರೂ ಅವು ಆಳದಲ್ಲಿ ಅನೇಕ ಸಂಚಾರಿ ಭಾವಗಳನ್ನು ಹೊಂದಿವೆ. ಇದು ನೀವು ಕವಿತೆ ಬರೆಯುವಾಗ ಕಂಡುಕೊಳ್ಳುವ ಸಣ್ಣ ಸಣ್ಣ ಶೃತಿಗಳು.

ಧಗಧಗಿಸುವ ಕಿಡಿಯನು
ಕೊಳದ ನೀರಿನಲಿ ನೆನಸಿ
ತೆಗೆಯುವ ಹುಚ್ಚುತನಕೆ ಏನೆನ್ನಲಿ?
ಪ್ರತಿಫಲನದಲಿ ಕಂಡದ್ದೆಲ್ಲ ಎಟುಕುವಂತಿದ್ದರೆ?
(ಪ್ರತಿಫಲನ)

ಈ ವ್ಯಾಮೋಹವನ್ನು ಸದಾ ಅದರ ಬಿಸುಪಿನಲ್ಲಿಯೇ ಕಾದಿಟ್ಟುಕೊಳ್ಳುವ ಪ್ರಯತ್ನವನ್ನು ನೀವು ನಿಮ್ಮ ಬಹುತೇಕ ಕವಿತೆಗಳಲ್ಲಿ ಮಾಡುತ್ತಾ ಹೋಗಿದ್ದೀರಿ. ಅದು ಇಲ್ಲಿ ಎದ್ದು ಕಾಣುವಂತದ್ದು.

ಸದಾ ಕಾಲವೂ
ಸೋನೆಗೆ ಕಾಯುವ
ಹಚ್ಚಹಸುರಾಗಿಯೇ ಇರಲು ಹವಣಿಸುವ ಈ ಭೂಮಿ
(ಆತ್ಮಸಖ)
– ಎನ್ನುವ ಸಾಲುಗಳು ಪ್ರಾಯಶಃ ಇವನ್ನು ಸಮರ್ಥಿಸುವಂತೆ ಇವೆ. ನಿಮ್ಮ ಕವಿತೆಗಳಲ್ಲಿ ಪ್ರೀತಿ, ವ್ಯಾಮೋಹಗಳ ಬಗೆಗೆ ಒಂದು ಸಣ್ಣ ಹಟ ಇದೆ. ಇದೇ ನಿಮ್ಮ ಪ್ರತಿ ಕವಿತೆಗಳ strength.

ಸಲ್ಲಾಪದ ಸೂಳ್ನುಡಿಗಳನು
ಭರಪೂರ
ಹೃದಯದೆಸಳುಗಳಿಗೆ
ಚಿಮುಕಿಸಿರಬಹುದು ನೀನು

ಆದರೆ
ಸರಾಗ ನಿನ್ನ ಆಂತರ್ಯಕೆ
ಇಳಿದು ಹೋದ
ಮಿದುಮಾತು ನಾನು
(ಬಯಲ ಹಕ್ಕಿ)

ಹೀಗೆ ಉದ್ದಕ್ಕೆ ನಿಮ್ಮ ಕವಿತೆಗಳನ್ನು ನಿಮಗೇ ಒಪ್ಪಿಸುವ ಗೋಜಿಗೆ ಹೋದರೆ ಇಡೀ ಸಂಕಲನ ಕವಿತೆಗಳಿಗೇ ಕೈಹಾಕಬೇಕಾದೀತು. ಅದ ನಾ ಮಾಡಲೊಲ್ಲೆ. ನಾನು ನಿಮ್ಮ ಕವಿತೆಗಳ ಕುರಿತು ಧೇನಿಸುವಾಗ ಅನ್ನಿಸಿದ್ದ ಕೆಲವು ಮಾತುಗಳಿಗೆ ಸಮರ್ಥನೆ ನೀಡಬೇಕೆಂದು ಬಳಸಿದ ಕವಿತೆಗಳೇ ಈ ಸಂಕಲನದ ಒಳ್ಳೆಯ ಕವಿತೆಗಳು ಎಂದೇನೂ ಇಲ್ಲ. ನಿಮ್ಮ ಕವಿತೆಗಳಿಗೆ ಅವುಗಳದೇ ಆದ ಗತಿಯಿದೆ. ಅದು ಎಂತಹುದು ಎಂದು ನಾನು ಗ್ರಹಿಸಿದ ರೀತಿ ಇದು.

(ಆರ್.ತಾರಿಣಿ ಶುಭದಾಯಿನಿ)

ನಿಮ್ಮ ಕಾವ್ಯದಲ್ಲಿ ನೀವು ಬರೆಯಲೇಬೇಕೆಂಬ ಮಾತುಗಳು ಇರುವಂತೆಯೇ ನೀವು ಬರೆದೂ ಬರೆದೂ ಜಾಳಾಗಬಹುದಾದ ಕೆಲವು ಸಂವೇದನೆಗಳು ಸಹ ಜಾಗ ಪಡೆದಿವೆ. ಇದು ಪ್ರತಿ ಕವಿಗೂ ಇರುವ ತೊಡಕು. ನೀವು ಬರೆಯಲಾರಂಭಿಸಿದ ತಕ್ಷಣ ನಿಮಗೆ ಒಂದು ಶೈಲಿಯು ಸಿದ್ಧಿಸುತ್ತದೆ. ಅದನ್ನು ಬಳಕೆ ಮಾಡುತ್ತಾ ಹೋದಂತೆ ಅದರ ಸಾರ ಕಡಿಮೆಯಾದಂತೆ ಅನ್ನಿಸುತ್ತದೆ. ಪ್ರಾಯಶಃ ನೀವು ಆವಾಹಿಸಿಕೊಳ್ಳುವ ಪ್ರೀತಿಯ ವ್ಯಾಮೋಹ ಅನೇಕ ಕವಿತೆಗಳಲ್ಲಿ ಪುನಾರಾವರ್ತನೆ ಆಗುವ ಅಪಾಯದಲ್ಲಿವೆ. ಒಂದು ವಿಷಯವನ್ನು ವೃತ್ತಾಕಾರವಾಗಿ ನಿಧನಿಧಾನವಾಗಿ ಪ್ರವೇಶಿಸಿ ಅದರ ಗಾಢತೆಯನ್ನು ಅರಿಯುವುದು ಒಂದು ತಂತ್ರ. ಆದರೆ ಆ ಕಾವ್ಯತಂತ್ರ ಕೊಂಚ ಮುಗ್ಗರಿಸಿದರೆ ಕವಿಯ ಆಶಯವು ಒಂದೇ ತೆರನಾದದ್ದೆಂಬ ಸಂದೇಶವನ್ನು ಹೊಮ್ಮಿಸುತ್ತದೆ. ನಿಮ್ಮ ಕಾವ್ಯಯಾನದಲ್ಲಿ ಇನ್ನಷ್ಟು ಒಳಸುಳಿಗಳನ್ನು ಹಾಯುವ ಮೂಲಕವೇ ಇವನ್ನೆಲ್ಲ ಬಗೆಹರಿಸಿಕೊಳ್ಳಬೇಕಿದೆ.

ನಿಮ್ಮ ಕವಿತೆಗಳನ್ನು ಓದುತ್ತಿದ್ದಾಗ ನನ್ನ ಗ್ರಹಿಕೆಯಲ್ಲಿ ಕಂಡುಕೊಂಡಿದ್ದೇನೆಂದರೆ ನೀವು ಉದ್ದೇಶಪೂರ್ವಕವಾಗಿ ಎಲ್ಲಿಯೂ ಸಾಮಾಜಿಕವಾಗಲು ಯತ್ನಿಸಿಲ್ಲ. ನಿಮ್ಮ ಸಮಕಾಲೀನರನೇಕರು ಸ್ತ್ರೀ ಎಂಬ ಅಸ್ಮಿತೆಯನ್ನು ಹಿಡಿದುಕೊಂಡು ಒಂದು ವಾದಕ್ಕೆ ಆನಿಸಿಕೊಂಡ ಕವಿತೆಗಳನ್ನು ಬರೆಯುತ್ತಿರುವಾಗ ನಿಮಗೆ ಅದರ ಕಡೆ ಗಮನ ಹೋಗದಿರುವುದು ಆಶ್ಚರ್ಯ ಎನ್ನಿಸಿತು. ಸ್ತ್ರೀಯಾಗಿ ಹುಟ್ಟಿದ ತಕ್ಷಣ ಆಕೆಗೆ ಒದಗಿ ಬರುವ ಹೆಣ್ತನದ ಸಾಮರ್ಥ್ಯ ಹಾಗೂ ಆಕೆಯನ್ನು ಬಾಧಿಸುವ ಸಾಮಾಜಿಕ ಪೀಡನೆಗಳು ಇವುಗಳ ನಡುವೆ ಇಟ್ಟು ನೋಡುವ ದ್ವಿತ್ವದ ಮಾರ್ಗವೊಂದು ನಮ್ಮ ಮುಂದು ಈಗಾಗಲೇ ತೆರೆದುಕೊಂಡಿದೆ. ಈ ದಿಸೆಯಲ್ಲಿ ಹೆಣ್ಣನ್ನು ಶೋಷಿತಳನ್ನಾಗಿ ನೋಡುವುದೊ ಅಥವಾ ದೇವಿಯನ್ನಾಗಿ ಪರಿಭಾವಿಸುವುದನ್ನೊ ಕನ್ನಡದ ಸ್ತ್ರೀ ಕವಿತೆಗಳು ಮಾಡುತ್ತಾ ಬಂದಿವೆ. ಇದನ್ನು ಮುಟ್ಟಿಯೂ ಮುಟ್ಟಿಕೊಳ್ಳದಂತೆ ನೀವು ಹೆಣ್ಣಾಗುವ ಹೊಸ ರೀತಿಯನ್ನು ನಿಮ್ಮ ಈ ಕವಿತೆಗಳಲ್ಲಿ ಕಾಣಿಸುತ್ತೀರಿ. ಅದು ಮೆಚ್ಚುಗೆಯ ಅಂಶ. ಒಂದು ಅಭಿವ್ಯಕ್ತಿಯ ಮಾರ್ಗ ಕ್ಲೀಷೆಯಾಗುವಾಗ ಸಹಜವಾಗಿ ಇನ್ನೊಂದು ಕಡೆ ಹೊರಳುವುದು ಸೃಜನಶೀಲತೆಯ ಲಕ್ಷಣವೇ. ಅದರ ಸೆಳಕು ನಿಮ್ಮಲ್ಲಿ ಕಾಣಿಸಿತು.

ನಿಮ್ಮ ಕವಿತೆಗಳ ಅಚ್ಚು, ಮಾದರಿ ಹೆಚ್ಚಾಗಿ ಭಕ್ತಿ ಕವಿತೆಗಳಿಗೆ ಹತ್ತಿರವಾದಂತವು. ಭಕ್ತಿಯ ಆರ್ದ್ರತೆ, ವಿನಯ, ತನ್ನ ತಾನರಿವ ಹೊಯ್ದಾಟ ಇವೆಲ್ಲಾ ಭಾವಗಳು ನಿಮ್ಮ ಕವಿತೆಗಳಲ್ಲಿ ನಿರಂತರವಾಗಿ ಕಾಣುತ್ತವೆ. ಕೆಲವೊಮ್ಮೆ ಅವು ಗಾಢವಾಗಿದ್ದರೆ ಇನ್ನೂ ಕೆಲವೊಮ್ಮೆ ಅಳ್ಳಕವೂ ಆಗಿವೆ. ಆದರೆ ನಿಮ್ಮ ತುಡಿತ ನಿಮ್ಮನ್ನು ಕನ್ನಡದ ಭಕ್ತಿ ಪರಂಪರೆಯ ಚುಂಗಿಗೆ ಕಟ್ಟಿಹಾಕುವಂತಿದೆ.

ಚೈತ್ರಾ ನಿಮ್ಮ ಕವಿತೆಗಳನ್ನು ಓದಲು ಹಿಡಿದು ಸರಿಸುಮಾರು ಆರೇಳು ತಿಂಗಳುಗಳೇ ಕಳೆದವು. ಈ ಅವಧಿಯಲ್ಲಿ ನನಗೆ ಕವಿತೆಗಳ ಬಗ್ಗೆ ಅನ್ನಿಸಿದನ್ನು ಬರೆಯುತ್ತಿದ್ದೇನೆ. ಗೊತ್ತಿಲ್ಲ, ಇತ್ತೀಚಿನ ಕವಿತೆಗಳ ಪ್ರವಾಹದಲ್ಲಿ ನೀವು ಬರೆದ ಕವಿತೆ, ನಾನು ಬರೆವ ಮುನ್ ಮಾತುಗಳು ನಮ್ಮನ್ನು ಎಲ್ಲಿ ನಿಲ್ಲಿಸುತ್ತವೆಯೋ ಎಂದು. ಆದರೆ ಪ್ರತಿ ಓಟಕ್ಕೂ ಉಸಿರ‍್ದಾಣವಿರುವಂತೆ ಮತ್ತೆ ಮತ್ತೆ ನಮ್ಮ ತಲೆಮಾರುಗಳು ಕವಿತೆಯ ಕಡೆಗೇ ಹೊರಳುತ್ತಿರುವುದನ್ನು ನೋಡಿದರೆ ಕವಿತೆಯ ಬಗ್ಗೆ ಆಶಾಭಾವ ಹುಟ್ಟುತ್ತದೆ. ನೀವು ಎಂಜಿನಿಯರಿಂಗ್ ಪದವೀಧರರಾಗಿ ಕುಶಲಕರ್ಮದ ಕಡೆ ಚಿತ್ತ ಹರಿಸದೆ ಮನಃಕ್ಷೇಶವ ನೀಗಿಸುವ ಅಮೃತಬಳ್ಳಿಯ ಕಷಾಯದತ್ತ ತಿರುಗಿದ್ದೀರಿ. ಈ ಋಜುಮಾರ್ಗ ನಿಮ್ಮನ್ನು ನಿಮ್ಮ ಬದುಕನ್ನು ನಡೆಯಿಸಲಿ.

(ಕೃತಿ: ಪೆಟ್ರಿಕೋರ್‌ (ಕವನ ಸಂಕಲನ), ಲೇಖಕರು: ಚೈತ್ರ ಶಿವಯೋಗಿಮಠ, ಪ್ರಕಾಶಕರು: ಆತ್ಮಿಕಾ ಪುಸ್ತಕ, ಬೆಲೆ:120)