ಹೆಣ್ಣು ಮಾಡುವುದೆಲ್ಲ ಕಾಯಕವೇ ಎಂದು ತಮ್ಮ ಬಾಲ್ಯದಿಂದ ತಾವು ಇಂದಿನವರೆಗೆ ಕಂಡ ಹೆಂಗಸರನ್ನೆಲ್ಲ ಪುರುಷರು ನೆನೆದರು. ಯಾವ ಸ್ವಾರ್ಥವೂ ಇಲ್ಲದೆ, ಕಾಯಕ ಎಂಬ ಹೆಸರಿಲ್ಲದೆ, ಗುರುತಿಲ್ಲದೆ, ಸಂಭಾವನೆಯಿಲ್ಲದೆ, ರಜೆಯಿಲ್ಲದೆ, ವಿರಾಮವಿಲ್ಲದೆ ಸಾಯುವ ತನಕ ಒಂದಲ್ಲ ಒಂದು ಕೆಲಸ ಮೈಮೇಲೆಳೆದುಕೊಂಡು ಮಾಡುವ ಹೆಂಗಸರಿಲ್ಲದಿದ್ದರೆ ಲೋಕ ನಡೆಯುವುದೇ ಇಲ್ಲ ಎಂದ ಮಾರಯ್ಯ. ತನ್ನ ತಾಯಿಯು ಏನಾದರೂ ಮಾತಾಡುವಾಗ, ಕತೆ ಹೇಳುವಾಗ ಕೈಗೊಂದು ಕೆಲಸ ಅಂಟಿಸಿಕೊಂಡುಬಂದು ಕೂರುತ್ತಿದ್ದಳೆಂದೂ, ಕೆಲಸವಿಲ್ಲದಿದ್ದರೆ ಅವಳ ಬಾಯಿಂದ ಮಾತೇ ಬರುತ್ತಿರಲಿಲ್ಲವೆಂದೂ ಉಗ್ಘಡಿಸುವ ಗುಬ್ಬಿದೇವಯ್ಯ ನೆನಪಿಸಿಕೊಂಡು ಹೇಳಿದ.
ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಡಾ. ಎಚ್.ಎಸ್. ಅನುಪಮಾ ಅವರ “ಬೆಳಗಿನೊಳಗು ಮಹಾದೇವಿಯಕ್ಕ” ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ

ಮಹಾಮನೆಯಲ್ಲಿ ದಾಸೋಹದ ಅಡಿಗೆಯ ಹದ ನೋಡುವ ಹೊಣೆ ಕಾಳವ್ವೆಯದು. ಅವಳೋ ನಿಜ ಕಾಯಕಿ. ಅಡುಗೆಯಾಗುವ ಪ್ರತಿ ಪದಾರ್ಥವನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುವಳು. ಅನ್ನದಗುಳು ಹಿಸುಕುವಳು. ಸುಟ್ಟ ರೊಟ್ಟಿಯ ದಪ್ಪ ನೋಡುವಳು. ಬೇಳೆ ತೊಗೆಯ ಪರಿಮಳ ಹೇಗಿದೆಯೆಂದು ಕೇಳುವಳು. ಕಾರ ಮಸಾಲೆಯ ಹದ, ಪಲ್ಲೆಗೆ ಬೆಂದ ತರಕಾರಿಗಳ ಗುಣ ಎಲ್ಲವನ್ನೂ ನೋಡಿ, ನೋಡಿ ಚೆನ್ನಾಗಿಲ್ಲವೆನಿಸುವುದನ್ನು ಬಿಟ್ಟುಬಿಡಲು ಸೂಚಿಸುವಳು. ಹುಳಿತ, ಕೊಳೆತ ಹಣ್ಣು, ತರಕಾರಿಗಳನ್ನು ತಿಪ್ಪೆಗೆ ಹಾಕಿಸುವಳು. ಮೊದಲ ಬಾರಿ ಬೆಂದ ಅನ್ನವನ್ನು ಮೊದಲ ಪಂಕ್ತಿಗೇ ಬಡಿಸುವಂತೆ ಹೇಳುವಳು. ಅಡುಗೆ ಮಾಡುವ ತನಕ ಒಲೆಯೆದುರು ಅಡುಗೆಯವರೊಡನೆ, ಅನ್ನಬೇಳೆಯೊಡನೆ, ತಾನೂ ಬೆಂದು, ಉಣಬಡಿಸುವಾಗ ಪ್ರತಿ ಪಂಕ್ತಿಯಲ್ಲೂ ಸುತ್ತಾಡುವಳು. ಯಾರೂ ಎಲೆಯಲ್ಲಿ ಒಂದಗುಳನ್ನೂ ವ್ಯರ್ಥ ಮಾಡಬಾರದು. ಅರ್ಧಹೊಟ್ಟೆಯಲ್ಲೆದ್ದು ಹೋಗುವಂತೆಯೂ ಆಗಬಾರದು. `ಬೇಕಿದ್ದು ಕೇಳರಿ. ನಿಧಾನ ಪ್ರಸಾದ ತಗೋರಿ, ನೀಡಿದ್ನ ಎಲಿಯಾಗ ಚಲ್ಲಬ್ಯಾಡರಿ’ ಮೊದಲಾಗಿ ಪ್ರತಿನಿತ್ಯ ಅವಳು ಕೊಡುವ ಸೂಚನೆಗಳು ಕೇಳುವ ಎಲ್ಲರಿಗೂ ಬಾಯಿಪಾಠವಾಗಿದ್ದವು.

ಕಾಳವ್ವೆಯು ತಾನೇ ಖುದ್ದಾಗಿ ನಿಂತು ಕಾರ ಕುಟ್ಟುವಳು. ಬೆಳಿಗ್ಗೆ ಮೊದಲ ತಪ್ಪಲೆ ಅನ್ನ ಬೇಯುವುದರಲ್ಲಿ, ಬೇಳೆ ಬೆಂದು ತರಕಾರಿ ಹೆಚ್ಚುವುದರಲ್ಲಿ ಕಾಳವ್ವನ ತಂಡದ ಕಾರ ಕುಟ್ಟಿ, ಅರೆದು ಮುಗಿಯುತ್ತದೆ. ಕಾಳವ್ವೆ ಇಲ್ಲ ಎಂದರೆ ಒಂದು ದಿನ ಮಹಾಮನೆ ಮೌನದಲ್ಲಿ ಸೊರಗುತ್ತದೆ. ಕಾಳವ್ವೆ ಇಲ್ಲದ ದಿನ ಮೇಲೋಗರ ಸಪ್ಪಗೆಟ್ಟಿರುತ್ತದೆ. ಉಳಿದವರು ಸಪ್ಪೆ ತಿನ್ನಿ, ಉಪ್ಪು ಬಿಡಿ ಎಂಬಿತ್ಯಾದಿ ವ್ರತನೇಮಗಳ ಬಗೆಗೆ ಮಾತನಾಡಿದರೆ ಕಾಳವ್ವೆ ಅದಕ್ಕೆ ವಿರುದ್ಧ. ಹೊಟ್ಟೆಯೊಳಗಿನ ಶಿವನನ್ನು ತೃಪ್ತಿಪಡಿಸದೇ ಭಕ್ತಿ ಮಾಡುವುದು ಹೇಗೆ? ಕಾಯಕ, ಸಂಸಾರ ನಡೆಸುವುದು ಹೇಗೆ ಎಂದು ಪ್ರಶ್ನಿಸುವಳು. ಸಪ್ಪೆ ಊಟ, ಉಪ್ಪು ಹಾಳು ಎಂದು ಸದಾ ಊಟದ ವ್ರತದ ಬಗೆಗೆ ಹೇಳುತ್ತಿದ್ದ ಶರಣೆ ಅಕ್ಕಮ್ಮನೊಡನೆ ಒಂದು ದಿನ ಇದೇ ಸಲುವಾಗಿ ಬಿರುಸು ವಾದವೇ ನಡೆದಿತ್ತು. `ಬಾಯಿ ಕಟ್ಟಾಕ ನಾವ್ಯೇನು ಸನ್ಯಾಸಿಗುಳಾ’ ಎನ್ನುವಳು ಕಾಳವ್ವೆ. ಅತಿಯಾಗಿ ತಿನ್ನಬಾರದು, ದನ ಹುಲ್ಲು ಮೇಯುವಂತೆ ಯಾವಾಗಲೂ ಬಾಯಾಡಿಸುತ್ತ ಇರಬಾರದು. ಆದರೆ ತಿನ್ನುವುದನ್ನು ಅಚ್ಚುಕಟ್ಟಾಗಿ, ಶ್ರದ್ಧೆಯಿಂದ ಮಾಡಿ, ಉಣಿಸಿ, ಉಣ್ಣಬೇಕು ಎನ್ನುವುದು ಅವಳ ನಿಲುವು.

(ಡಾ. ಎಚ್.ಎಸ್. ಅನುಪಮಾ)

ಅವಳು ತಾ ಕುಟ್ಟುವ ಕಾರದಂತೆಯೇ ಸ್ವಲ್ಪ ಕಟು ಮಾತಿನ ಅವ್ವೆ. ಶರಣರಲ್ಲಿ ಅಂಬಿಗರಣ್ಣ ಚೌಡಯ್ಯ, ಶರಣೆಯರಲ್ಲಿ ಕಾಳವ್ವಕ್ಕ ಎಂದು ಎಲ್ಲರೂ ನಗೆಯಾಡಿ ಅವರನ್ನು ಹುರಿದುಂಬಿಸುವರು. ದುರುದ್ದೇಶದಿಂದ ಚುಚ್ಚಬೇಕೆಂದೇ ಮಾತನಾಡುವವರಿಗೆ ಕಾರ ಕುಟ್ಟಿದ ಒನಕೆಯಿಂದ ಬೀಸಿ ಹೊಡೆದರೆ ಎಷ್ಟು ನೋವು, ಉರಿಯಾಗುವುದೋ ಅವಳ ಮಾತಿನಿಂದ ಅಷ್ಟೇ ಉರಿಯಾಗುವುದು. ಒಮ್ಮೆ ಅವಳ ಕಿವಿಗೆ ಬಸವಣ್ಣನಿಗೆ ಯಾರೋ ಏನೋ ಅಂದರೆಂಬ ಸುದ್ದಿ ಬಿದ್ದಿತು. ಬಸವಣ್ಣ ತೋರಿಕೆಗಾಗಿ ದಾಸೋಹ ಮಾಡುತ್ತಾನೆ. ತಾನೇ ರಾಜನಾಗುವ ಇಚ್ಛೆಯಿಂದ ಶರಣರನ್ನು ಗುಡ್ಡೆ ಹಾಕಿಕೊಳ್ಳುತ್ತಿದ್ದಾನೆ; ಬಿಜ್ಜಳನ ವೈರಿಗಳೆಲ್ಲ ಮಹಾಮನೆಯಲ್ಲಿ ಒಟ್ಟುಗೂಡುತ್ತಿದ್ದಾರೆ ಮುಂತಾಗಿ. ಶರಣರನ್ನು ರಾಜನ ಕಡೆಯ ಗೂಢಚಾರರು ನಾನಾರೀತಿಗಳಲ್ಲಿ ಪರೀಕ್ಷಿಸುವ ಕೆಲಸ ನಡೆಯುತ್ತಿದೆ ಎಂದೂ ತಿಳಿಯಿತು. ಕಾಳವ್ವಕ್ಕ ಎಷ್ಟು ಕೋಪಗೊಂಡಳೆಂದರೆ ಮಹಾಮನೆಯ ಕೆಲಸದ ನಡುವೆ ಅನುಭವ ಮಂಟಪಕ್ಕೆ ಸೆರಗಿಗೆ ಕೈಯೊರೆಸಿಕೊಳ್ಳುತ್ತ ಹೋಗಿ ಒಂದು ಗಂಟೆ ಕೂತಳು.

`ಊರು ಉಪಕಾರ ಅರೀದು, ಹೆಣಾ ಶೃಂಗಾರ ಅರೀದು. ಭಾಗ್ಯವುಳ್ಳ ಪುರುಷಂಗೆ ಕಾಮಧೇನು ಕಾಮಿಸಿದುದನೀವುದಯ್ಯಾ./ನಿರ್ಭಾಗ್ಯ ಪುರುಂಷಗೆ ಕಾಮಧೇನು ತುಡುಗುಣಿಯಾಗಿ ತೋರುವುದಯ್ಯಾ./ಸತ್ಯಪುರುಷಂಗೆ ಕಲ್ಪವೃಕ್ಷ ಕಲ್ಪಿಸಿದುದನೀವುದಯ್ಯಾ./ಅಸತ್ಯಪುರುಷಂಗೆ ಕಲ್ಪವೃಕ್ಷ ಬೊಬ್ಬುಳಿಯಾಗಿ ತೋರುವುದಯ್ಯಾ./ಧರ್ಮಪುರುಷಂಗೆ ಚಿಂತಾಮಣಿ ಚಿಂತಿಸಿದುದನೀವುದಯ್ಯಾ./ಅಧರ್ಮಪುರುಷಂಗೆ ಚಿಂತಾಮಣಿ ಗಾಜಿನಮಣಿಯಾಗಿ ತೋರುವುದಯ್ಯಾ./ಶ್ರೀಗುರು ಕಾರುಣ್ಯವುಳ್ಳ ಸದ್ಭಕ್ತಂಗೆ ಜಂಗಮಲಿಂಗವಾಗಿ ತೋರುವುದಯ್ಯಾ./ಭಕ್ತನಲ್ಲದ ಪಾಪಿಷ್ಠಂಗೆ ಜಂಗಮಲಿಂಗ ಮಾನವನಾಗಿ ತೋರುವುದಯ್ಯಾ./ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ’

ಎಂದು ಬಸವಣ್ಣನನ್ನು ಕೊಂಡಾಡಿ ಪದ ಕಟ್ಟಿ ಹೇಳಿದಳು. ಅಸೂಯೆಯಿಂದ ಕುರುಡರಾದವರಿಗೆ ದೀಪ ಬೇಡವಾದರೆ ಊರಿಗೆಲ್ಲ ಬೇಡವೇ? ಅನ್ಯಾಯವಾಗಿ ಬಸವ ಮೂದಲಿಕೆ ನಡೆದರೆ ಸುಮ್ಮನಿರಲಾರೆವೆಂದು ಗುಡುಗಿ ಹೋದಳು. ಕಾಳವ್ವನೆಂಬ ಕಾರದ ಜೊತೆ ರೆಮ್ಮವ್ವಕ್ಕನ ನೂಲೂ ಸೇರಿದರೆ ಮುಗಿಯಿತು, ಮತ್ಯಾರೂ ಸುಲಭಕ್ಕೆ ಬಾಯಿ ತೆಗೆಯಲಾರರು.

ಕದಿರೆ ರೆಮ್ಮವ್ವೆ ಹೆಂಗಸರ ಪರವಿರುವವಳು ಎಂದು ಪ್ರಸಿದ್ಧಳು. ಅವಳ ಮಾತುಗಳು ಕೈಯೆತ್ತುವ, ದನಿಯೆತ್ತುವ ಪುರುಷರನ್ನು ಚಾಟಿಯಿಂದ ಬಾರಿಸಿ ಸುಮ್ಮನೆ ಕೂರಿಸುವುದಿದೆ. ಆ ದಿನ ಕಾಳವ್ವೆ ಕಾರ ಕುಟ್ಟುತ್ತ ಬುಸುಬುಸು ಉಸುರು ಬಿಡುತ್ತಿದ್ದಳು. ದಪ್ಪ ಕಬ್ಬಿಣದ ಹಾರೆಯನ್ನು ಎರಡೂ ಕೈಯಿಂದ ಎತ್ತಿ ಹಾಕುತ್ತ, ಹಾರುವ ಕಾರ ಮೂಗು, ಬಾಯಿಗಡರದಿರಲೆಂದು ಸೆರಗು ಕಟ್ಟಿಕೊಂಡು ಒಂದೇಸಮ ಏಟು ಹಾಕುತ್ತಿದ್ದಳು. `ಏ, ಇವತ್ ಜಗ್ಗಿ ಕಾರ ಐತಿ ಕುಟ್ಟಾಕ. ಈಸೊಂದು ನಿನಗ ಕುಟ್ಟಾಕಾಗಂಗಿಲ್ಲ ತಗಿ’ ಅಂದ ಅಲ್ಲೇ ಹೋಗುತ್ತಿದ್ದ ಹಂಪಣ್ಣ.

`ಯಾಕಣಾ, ನಿಂ ಮನೆ ಒಳಗೆ ಕುಟ್ಟೂ ಕೆಲ್ಸಾನೆಲ್ಲಾ ನೀನ ಮಾಡತೀಯ? ಹೋಗ್ ಹೋಗ್, ನಿನ ಕಂಡನಿ’ ರೆಮ್ಮವ್ವೆ ಹಂಗಿಸಿದಳು.

`ಅಕ್ಕೋ, ನೀವು ಕುಟ್ಟತೀರೋ, ಬೀಸತೀರೋ, ನಾದತೀರೊ. ಏಸರೆ ಗುದ್ಯಾಡ್ರಿ, ಏನರೆ ಹೇಳರಿ. ನಿಮಗಿಂತ ಗಣಸು ಮಕ್ಳ ಒಂದು ತೊಲಿ ಹೆಚ್ಚು. ಒಳ್ಳಿಗಿಂತ ಒನಕಿನ ಹೆಚ್ಚ. ಏಳಬೆ, ನಿಂಗಾಗಂಗಿಲ್ಲ, ನಾ ಕುಟ್ಟತೇನಿ’ ಅಂದ ಹಂಪಣ್ಣ.

`ಆಂ, ಯಾನಂದೆ ಹಂಪ? ನಮಗ ಆಗಂಗಿಲ್ಲಂದ? ಎತ್ತು ಹೌದು, ಕೋಡು ಅಲ್ಲ ಅಂತೀಯ? ಬಾಯಿಲ್ಲೆ’ ಎಂದು ಕಾಳವ್ವೆ ಸೀರೆ ಮೇಲೆತ್ತಿ ಕಟ್ಟಿ, ಹಾರೆ ಹಿಡಿದು ಸಾಕ್ಷಾತ್ ಕಾಳಿಯಂತೆಯೇ ನಿಂತುಬಿಟ್ಟಳು. ಹಂಪಣ್ಣ ತಪ್ಪಾಯಿತೆಂದು ಕೈಮುಗಿವ ನಾಟಕ ಮಾಡಿದ. ಕೊನೆಗೆ ಹಾರೆ ಬಿಟ್ಟು ಒನಕೆ ತೆಗೆದುಕೊಂಡು ಇಬ್ಬರೂ ಕುಟ್ಟಿ ಮುಗಿಸಿದರು. ಒಬ್ಬರಾದ ಮೇಲೊಬ್ಬರು ಉಸ್‌ಉಸ್ ಎನ್ನುತ್ತ ಲಯಬದ್ಧವಾಗಿ ಕಾರ ಕುಟ್ಟುತ್ತಿರಲು, ಮಹಾದೇವಿಯಕ್ಕ ಬಂದಳು. ಅಂದು ಬೆಳಿಗ್ಗೆ ಮುಂಚೆಯಿಂದಲೇ ಅವಳಿಗೆ ಪುರುಸೊತ್ತು ಇಲ್ಲ. ನಸುಕಿನಲ್ಲೇ ಕಾಳವ್ವನ ಹಟ್ಟಿಯಿಂದ ಬಟ್ಟೆ ಒಯ್ದು ಮಡಿ ಮಾಡಿ ತಂದಿದ್ದಳು. ಹಂಪಣ್ಣನ ಚಪ್ಪಲು ಹರಿದು ಹೋಗಿದ್ದುದನ್ನು ಸಮಗಾರಣ್ಣನ ಬಳಿ ಹೊಲಿಸಿ ತಂದಿದ್ದಳು. ಅನ್ನ ಬಾಗುವ ಬಿದಿರ ತಟ್ಟು ಮುರಿದು ಹೋಗಿತ್ತಾಗಿ ಮ್ಯಾದಾರ ಹಟ್ಟಿಯಿಂದ ಕೇಳಿ ಹೊಸದನ್ನು ತಂದಿದ್ದಳು. ರೊಟ್ಟಿ ಬಡಿಯುವವರಿಗೆ ಒಲೆಗೆ ನೂಕಲು ಮೋಳಿಗಣ್ಣ ತಂದು ಹಾಕಿದ ಕಟ್ಟಿಗೆ ಹೊರೆಯಿಂದ ಸಣ್ಣಸಣ್ಣ ತುಂಡು ಎತ್ತಿ ಆರಿಸಿ ಅವರ ಬುಡಕ್ಕಿಟ್ಟು ಬಂದಿದ್ದಳು. ಮಹಾಮನೆಯ ಬಾಗಿಲಿಗಿದ್ದ ಗಬ್ಬಿದೇವಣ್ಣನ ಮಗುವಿಗೆ ಆರಾಮವಿಲ್ಲವೆಂದು ತಿಳಿದು ವೈದ್ಯ ರಾಮಯ್ಯನ ಬಳಿ ಕಷಾಯ ಪಡೆದು ಮಗುವಿಗೆ ಕೊಟ್ಟು ಬಂದಿದ್ದಳು. ಈಗ ಸರಸರ ತರಕಾರಿ ಹೆಚ್ಚುತ್ತಿದ್ದ ರೆಮ್ಮವ್ವೆಯ ಕೆಲಸಕ್ಕೆ ಸೇರಿಕೊಂಡಳು.

`ಹಂಪಣ್ಣಾ, ನೀ ಯಾವಾಗೂ ಹೀಂಗ ನೋಡು. ಹೆಂಗಸರಂದ್ರ ಕೈಲಾಗದರು ಅನಕೊಂಡಿರಿ. ಒಳ್ಳುಕಲ್ಲು ಮಿಗಿಲೋ ಒನಕೆ ಮಿಗಿಲೋ ಅಂತ ಕೇಳಿದ್ರೆ ಏನು ಹೇಳದ ಯಣ್ಣ? ಕುಟ್ಟುವ ಕಾರವೇ ಮಿಗಿಲು, ಹಾರುವ ಹೊಟ್ಟು ಮಿಗಿಲು. ಯಾರು ಮಿಗಿಲು ಅಂಬ ಪ್ರಶ್ನೆನೇ ಸರಿ ಅಲ್ಲ. ಎರಡೂ ತತ್ತ್ವ. ಅವೆರೆಡು ಕೂಡಿ ಹುಟ್ಟೋ ರುಚಿ ಇದೆಯಲ್ಲ ಅದೇ ಮಿಗಿಲು. ಒಳ್ಳು ಕಲ್ಲೇ ನೀ ತಳಗದಿ, ನೀನು ಕೀಳು. ನಾ ಮ್ಯಾಲಿಂದ ಕುಟ್ಟತೇನಿ, ನಾ ಒನಕಿ, ನಾನ ಮಿಗಿಲು ಅಂದ್ರ ಏನರ್ಥ? ಹುಚ್ಚರ ಸಂತಿ.’

ರೆಮ್ಮವ್ವೆ ಚಟಪಟವೆಂದಳು.

`ನೀವ್ ಹೆಂಗಸ್ರು ಹೀಂಗ ನೋಡರಿ. ಒಬ್ರಿದ್ರೆ ಹೆದರಿ ಸಾಯದು, ಇಬ್ರಿದ್ರೆ ಜಗಳಾಡಿ ಸಾಯದು’ ಎಂಬ ಹಂಪಣ್ಣನ ಗಾದೆ ಕೇಳಿ ಕಾಳವ್ವಕ್ಕನಿಗೆ ಸಿಟ್ಟು ಬಂತು. `ಗಾದಿ ಹೇಳಾಕ ನಿಂಗೊಬ್ನಿಗೇ ರ‍್ತತಿ ಅಂತ ತಿಳದ್ಯಾ? ಬರೀ ಗಾದಿ ಹೇಳೋ ಬಾಯ್ಗೆ ಬೂದಿ ಬೀಳ್ತಾವ ನೆಪ್ಪಿರ್ಲಿ.’

ಈ ಚರ್ಚೆ ಇಲ್ಲಿ ನಡೆದರೆ ಸಾಲದು, ಇದನ್ನೀಗ ನಿಲ್ಲಿಸಬೇಕು ಎಂದು ಅಕ್ಕನಾದ ಮಹಾದೇವಿ ಮಾತು ತೆಗೆದಳು.

`ಹೆಣ್ಣು ಎಂದರೆ ಕಾಮದ ಬಲೆ, ಸಂಸಾರವೆಂದರೆ ಕಾಮದ ಬಲೆ ಅಂತ ಅಂದ್ಕೊಂಡಿದ್ದೀರಿ. ಅದಕ್ಕೇ ಹೆಚ್ಚುಕಮ್ಮಿ, ಮೇಲೆಕೆಳಗೆ ವಿಚಾರ ಬರತಾವೆ. ಗಂಡಿಗೆ ಹೆಣ್ಣು ಕಾಮದ ಬಲೆ, ಹೆಣ್ಣಿಗೆ ಗಂಡು ಕಾಮದ ಬಲೆ. ಕಾಮವಿಲ್ಲದೆಯೂ ಸಂಸಾರ ಇದೆ. ಇದು ಸೃಷ್ಟಿಯ ನಿಯಮ’ ಎಂದು ಬಿಸಿಯನ್ನು ಕಡಿಮೆ ಮಾಡಿದಳು. ಇದು ಬರಿಯ ಹಂಪಣ್ಣನೊಬ್ಬನ ವಿಚಾರವಲ್ಲ, ಪುರುಷರು ತಾವೇ ಒಂದು ಕೈಮೇಲೆಂಬ ಅಹಮನ್ನು ಒಳಗೇ ಪೋಷಿಸಿಕೊಂಡಿರುತ್ತಾರೆ. ಅದಕ್ಕೇ ಈ ವಿಷಯವನ್ನು ಅನುಭವ ಮಂಟಪದಲ್ಲಿ ಎತ್ತಬೇಕು ಎಂದು ಅಲ್ಲಿದ್ದ ಹೆಣ್ಣುಗಳು ಯೋಜನೆ ಹಾಕಿಕೊಂಡರು. ಅಂದು ರೆಮ್ಮವ್ವೆ, ಕಾಳವ್ವೆ, ಮಹಾದೇವಿಯಕ್ಕ ಮೂವರೂ ಸೇರಿ ಯಾವ ನುಡಿಮಾಲೆಯಿಂದ ಇದನ್ನು ಎತ್ತುವುದು ಎಂದು ಮಾತಾಡಿಕೊಂಡರು.

ಮರುದಿನ `ಹೆಸರಿಸಲಾಗದ ಎಷ್ಟೆಷ್ಟೋ ಕಾಯಕಗಳಿದಾವೆ. ಹೆಣ್ಣುಕುಲದ ಕಾಯಕನ ಕಾಯಕ ಅಂತ ಯಾರೂ ಹೇಳಲ್ಲ. ಆ ಬಗ್ಗೆ ನುಡಿಮಾಲೆ ಕಟ್ಟರಿ’ ಎಂದು ಕದಿರೆ ರೆಮ್ಮವ್ವೆ ಒಂದು ಮಾತಂದು ಕೂತಳು. ಅದನ್ನೇ ಕಾಯುತ್ತಿದ್ದವಳಂತೆ ಮಹಾದೇವಿ ಎದ್ದಳು.’

`ಅಟ್ಟು ಉಣಿಸಿ, ಹೊತ್ತು ಹೆತ್ತು ಮಕ್ಕಳ ಸಂಭಾಳಿಸಿ, ಸಂಸಾರ ನಿಭಾಯಿಸೋ ಕೆಲಸಗಳನ್ನ ಯಾರೂ ಕಾಯಕ ಅನ್ನಲ್ಲ. ಮನೆಗೆಲಸ ಅನ್ನೋದು ಸಂಬಳವೇ ಇಲ್ಲದ ಕೀಳು ಕೆಲಸ ಅನ್ನೋ ಭಾವನೆ ಎಲ್ಲರ ಮನದಲ್ಲಿದೆ. ಸ್ವತಃ ಹೆಣ್ಣುಗಳಿಗೂ ತಾವು ಮಾಡೋ ಕೆಲಸದ ಮೇಲೆ ಗೌರವ ಇಲ್ಲ. ಯಾವ ಹೆಣ್ಣೂ ಮನೆಗೆಲಸಾನ ತನ್ನ ಕಾಯಕ ಅಂತ ಹೆಸರ ಹಿಂದೆ ಸೇರಿಸಿಕೊಳ್ಳಲ್ಲ. ಮನೆಗೆಲಸದ ಮಹಾದೇವಿ, ಮನೆಗೆಲಸದ ಕಾಮಮ್ಮ, ಅಡುಗೆ ಕಾಯಕದ ಬಸಮ್ಮ, ಪಾತ್ರೆ ತೊಳೆಯುವ ಪಂಪಮ್ಮ, ಬಟ್ಟೆ ಒಗೆಯುವ ಬಸಮ್ಮಗಳು ಕಾಣಲ್ಲ. ಆದರೆ ಸಂಸಾರ ನಡೆಸೋರೇ ಹೆಣ್ಣುಗಳು. ಹೆಂಗಸರು ಮಾಡುವುದೆಲ್ಲ ಕಾಯಕವೇ’ ಎಂಬ ದೀರ್ಘ ನುಡಿಮಾಲೆಯನ್ನು ಮಹಾದೇವಿಯಕ್ಕ ಎತ್ತಿದಳು. ಹೆಂಗಸರ ಕಡೆಯಿಂದ ಕರತಾಡನ, ಹರ್ಷೋದ್ಗಾರ. ಕೆಲ ಪುರುಷರೂ ಅದಕ್ಕೆ ದನಿಗೂಡಿಸಿದರು.

ಹೆಣ್ಣು ಮಾಡುವುದೆಲ್ಲ ಕಾಯಕವೇ ಎಂದು ತಮ್ಮ ಬಾಲ್ಯದಿಂದ ತಾವು ಇಂದಿನವರೆಗೆ ಕಂಡ ಹೆಂಗಸರನ್ನೆಲ್ಲ ಪುರುಷರು ನೆನೆದರು. ಯಾವ ಸ್ವಾರ್ಥವೂ ಇಲ್ಲದೆ, ಕಾಯಕ ಎಂಬ ಹೆಸರಿಲ್ಲದೆ, ಗುರುತಿಲ್ಲದೆ, ಸಂಭಾವನೆಯಿಲ್ಲದೆ, ರಜೆಯಿಲ್ಲದೆ, ವಿರಾಮವಿಲ್ಲದೆ ಸಾಯುವ ತನಕ ಒಂದಲ್ಲ ಒಂದು ಕೆಲಸ ಮೈಮೇಲೆಳೆದುಕೊಂಡು ಮಾಡುವ ಹೆಂಗಸರಿಲ್ಲದಿದ್ದರೆ ಲೋಕ ನಡೆಯುವುದೇ ಇಲ್ಲ ಎಂದ ಮಾರಯ್ಯ. ತನ್ನ ತಾಯಿಯು ಏನಾದರೂ ಮಾತಾಡುವಾಗ, ಕತೆ ಹೇಳುವಾಗ ಕೈಗೊಂದು ಕೆಲಸ ಅಂಟಿಸಿಕೊಂಡುಬಂದು ಕೂರುತ್ತಿದ್ದಳೆಂದೂ, ಕೆಲಸವಿಲ್ಲದಿದ್ದರೆ ಅವಳ ಬಾಯಿಂದ ಮಾತೇ ಬರುತ್ತಿರಲಿಲ್ಲವೆಂದೂ ಉಗ್ಘಡಿಸುವ ಗುಬ್ಬಿದೇವಯ್ಯ ನೆನಪಿಸಿಕೊಂಡು ಹೇಳಿದ. ಒಬ್ಬರಾದ ಮೇಲೊಬ್ಬರು ಹೆಂಗಸರ ಕೆಲಸವನ್ನು ಸ್ಮರಿಸುತ್ತಾ ತಮ್ಮ ತಾಯಿಯನ್ನು ನೆನೆದು ಕಣ್ಣು ಒದ್ದೆ ಮಾಡಿಕೊಂಡರು. ಆಗ ಅದು ಎಲ್ಲಿಂದ, ಯಾರಿಂದ ಬಂತೆಂದು ಗೊತ್ತಾಗದ ಒಂದು ಮಾತು ಕೇಳಿ ಬಂತು.

`ಹೌದು, ಹೆಂಗಸ್ರು ಅಂದ್ರ ಬರೀ ಅಬ್ಬೇನ ನೆಪ್ಪಾಗತಾಳಲ ನಿಮ್ಗೆ. ಅಪ್ಪ ಅಬ್ಬೆ ಬಿಟ್ಟು ನಿಂ ಹಿಂದ ಬಂದ ಹೇಂತಿ, ಮಗಳು, ಅಕ್ಕ, ತಂಗಿ, ದಾಸಿ, ವೇಶಿ ಮಾಡಿದ್ ಸೇವಾನ ಒಬ್ರರೆ ನೆಪ್ಪು ಮಾಡ್ಕ್ಯಂಡ್ರ ನೋಡ್?’

ಯಾರು ಹೇಳಿರಬಹುದು ಇದನ್ನು ಎಂದು ಎಲ್ಲ ನೋಡುತ್ತ, ಹುಡುಕುತ್ತ, ಊಹಿಸುತ್ತ ಇರುವಾಗ ಮತ್ತೊಂದು ದನಿ ಕೇಳಿಬಂತು.

`ಹೌದೌದು ಹೆಂಗಸರು ಮಾಡೂದೆಲ್ಲ ಕಾಯಕಾನಾ. ಹಂಗಾರ, ವೇಶಿಯರು ಮಾಡೂದು ಕಾಯಕಾನನು? ಗರತೇರು ಹೇಳ್ರಿ’

ಹೆಣ್ಣುಗಳನ್ನು ಗರತಿಯರು, ವೇಶ್ಯೆಯರೆಂದು ಇಬ್ಭಾಗಿಸುವ ಈ ವಾಕ್ಯ ಹೊರಬಿದ್ದದ್ದೇ ನಿರ್ಭರ ಮೌನ ಅಲ್ಲಿ ನೆಲೆಸಿತು. ವೇಶ್ಯೆಯರ ಬಗೆಗೆ ಕೆಲವೊಮ್ಮೆ ಹೆಂಗಸರೇ ನಿಕೃಷ್ಟವಾಗಿ ಮಾತನಾಡುವುದಿತ್ತು. ಈಗ ಈ ಸಾಲು ಕೇಳಿದ್ದೇ ಮೌನ ಹೆಪ್ಪುಗಟ್ಟಿ, ದೊಡ್ಡ ಬಂಡೆಯಾಗಿ ಬೆಳೆಯಿತು. ಯಾರೂ ಮಾತನಾಡುತ್ತಿಲ್ಲ, ಎಲ್ಲರಿಗೂ ಅವರವರ ಉಸಿರ ಸದ್ದು ಕೇಳಿಸುತ್ತಿದೆ. ಪಿಸುಪಿಸು ಇಲ್ಲ, ಗುಸುಗುಸುವೂ ಇಲ್ಲ. ಮೌನಬಂಡೆ ಎತ್ತರೆತ್ತರ ಬೆಳೆದು ಶೂನ್ಯ ಸಿಂಹಾಸನದ ಎತ್ತರವನ್ನೂ ಮೀರಿ ಬೆಳೆಯಿತು. ಶೂನ್ಯದಾಚೆಗಿನ ಶೂನ್ಯಪೀಠವಾಗಿ ಮೌನಪೀಠವು ಹುಟ್ಟಿತು. ಅದರ ಮೇಲೆ ವಿರಾಜಿಸಿ ಸಭೆ ಮುನ್ನಡೆಸುವವರಾರಿಲ್ಲ. ಇವತ್ತಿನ ನುಡಿಮಾಲೆಯ ವಾಕ್ಯವೋ ಉರಿಬೆಂಕಿಯ ಜ್ವಾಲೆ. ಅದ ಹಿಡಿದು ನೇವರಿಸಿ ಅನುನಯಿಸಿ ಮುನ್ನಡೆಸುವುದು ಅಲ್ಲಮಯ್ಯನಿಗೇ ಆದರೂ ಸುಲಭವಿಲ್ಲ. ಆಗ ನಿಶ್ಶಬ್ದ ಬಯಲಿನಿಂದ ಒಂದು ಧ್ವನಿ ಕೇಳಿ ಬಂತು.

`ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ/ಹಿಡಿದೆಡೆ ಬತ್ತಲೆ ನಿಲಿಸಿ ಕೊಲುವರಯ್ಯಾ./ವ್ರತಹೀನನನರಿದು ಬೆರೆದಡೆ/ಕಾದ ಕತ್ತಿಯಲ್ಲಿ ಕೈ ಕಿವಿ ಮೂಗ ಕೊಯ್ವರವ್ವಾ/ಒಲ್ಲೆನೊಲ್ಲೆ ಬಲ್ಲೆನಾಗಿ ನಿಮ್ಮಾಣೆ ನಿರ್ಲಜ್ಜೇಶ್ವರಾ’

ನಾಲ್ಕಾರು ಹೆಣ್ಣು ದನಿಗಳು ಸಣ್ಣಕ್ಕೆ ಸಿಳ್ಳು ಹಾಕಿ ತಮ್ಮ ಖುಷಿ, ಸಹಮತ ತೋರಿಸಿದವು.

`ನೋಡಿದಿರಾ ಅವ್ವ ಈ ಜಗದ ನೀತಿ! ಕದ್ದು ಕುರೀನಾದ್ರೂ ತರತಾರೆ. ಬೇಡಿದ ಕಾಸನ್ನಾದರೂ ತಂದು ಕೊಡತಾರೆ. ಶಿವನಿಷ್ಠೆಯಿಲ್ಲದೆ ಬಸವಣ್ಣ ಕೊಟ್ಟ ಹೊನ್ನು ಇಸಗೋತಾರೆ. ಹೇಗಾದರೂ ಧನಕನಕವಸ್ತು ಒಟ್ಟುಮಾಡಿ ವೇಶಿ ಮನೆಗೆ ಬರೋರು ಎಷ್ಟು ಜನ ಬೇಕು? ಆದರೆ ಇವತ್ತು ಒಬ್ಬೇ ಒಬ್ರೂ ಹೊಟ್ಟೆ ತಣಿಸೋ ದಾಸೋಹ ಕಾಯಕ ಆದ್ರೆ, ತಮ್ಮ ದೇಹದ ಹಸಿವೆ ತಣಿಸೋ ವೇಶಿಯರದೂ ಕಾಯಕಾಂತ ಬಾಯ್ಬಿಟ್ಟಾರಾ? ನೋಡಿದ್ರಾ ಅವ್ವ? ನೋಡಿದ್ರಾ ಅಕ್ಕಮ್ಮ? ಮನೆಯಾಗೆ ಹೆಂಡತಿ ಮುನಿದರೆ, ಮುದುಡಿದರೆ, ಮಡಿದರೆ, ಮರುಳೆಯಾದರೆ, ಮಗು ಹೆತ್ತರೆ, ಮೈದುಂಬಿ ಬಸುರಾದರೆ, ಕೆರಳಿದರೆ, ಒಲ್ಯಾಂದರೆ ಗಂಡರ ಚಿತ್ತ ವೇಶಿಯರತ್ತ. ನಿಮ್ಮ ಗಂಡರ ಕರಾಳ ಮುಖವನ್ನ ತಡಕೊಂಡು ನಿಮ್ಮನ್ನು ರಕ್ಷಿಸೋರು ವೇಶ್ಯೆಯರು. ಆದರೀಗ ನೋಡಿ. ಯಾರಾದರೂ ಬಾಯ್ಬಿಡತಾರೇನ? ಹೆಣ್ಣುಗಳಾದ ನೀವೇ ಸೂಳೆ, ಸೂಳೆಮಕ್ಳು ಅಂತ ಹೀನಾಯವಾಗಿ ಜರೀತೀರಿ. ಅಕ್ಕಗಳಿರಾ, ಅವ್ವಗಳಿರಾ, ನೀವು ಕಾಲಿಂದ ತೊಳೆಯಕ್ಕಾಗದ ಕೊಳೇನ ನಾವು ಮೈಯುಜ್ಜಿ ತೊಳಿತೀವಿ. ನೀವು ತಣಿಸಕ್ಕಾಗದ ವಿಷಮ ಬೆಂಕೀನ ನುಂಗಿ ಒಡಲು ಸುಟಕೊಂಡೀವಿ. ನೀವು ಸಹಿಸಲಾಗದ ಹೊಲಸನ್ನು ಪರಮ ಪ್ರಸಾದ ಅಂತ ಉಂಡೀವಿ. ಸಿಟ್ಟು, ಹೆದ್ರಿಕೆ, ಉದ್ವೇಗ, ಉದ್ರೇಕ, ಯುದ್ಧ, ಸೋಲು, ಅವಮಾನ ಅಂತ ಗಂಡಸಿನ ಆ ಅರ್ಧಮಖಾನ ತಡಕಂಡೀವಿ. ಶಿವಾ ಒಮ್ಮೆ ವಿಷಕಂಠ ಆದ. ನಾವು ಹಂಗಲ್ಲ, ನಿತ್ಯ ಹಾಲಾಹಲ ಕುಡಿದು ನೀಲಿಗಟ್ತಾ ಅದೀವಿ. ನಾನೆಂದಿಗೂ ಹಣಕ್ಕಂತ ಒತ್ತೆ ಹಿಡಿಯೋಳಲ್ಲ. ಒಂದು ದಿನಕ್ಕೆ ಒಬ್ಬ ವ್ರತಿಯ ಒತ್ತೆ ಅಷ್ಟೆ. ಅವ ಕೊಟ್ಟಿದ್ ತಗಂಡು ಹೊಟ್ಟೆಗೆ, ದಾಸೋಹಕ್ಕೆ ಕೊಡತೀನಿ. ನೀವು ಒಪ್ತಿರೋ, ಇಲ್ಲೋ, ಇದು ನನ್ನ ವ್ರತ. ಇದು ನನ್ನ ಕಾಯಕ. ನಾ ಇನ್ನು ಅಂಜಿಕಿಲ್ಲದಂಗೆ ನನ್ನ ಕಾಯಕಾ ಏನಂತ ಹೇಳತೀನಿ. ನಾನು ಸೂಳೆ. ನಾನು ಸೂಳೆ ಸಂಕವ್ವೆ. ನಾನು ಶರಣೆ, ಸೂಳೆ ಸಂಕವ್ವೆ. ನನ್ನ ಕಾಯಕ ಸೂಳೆಯ ಕಾಯಕ.’

ಸಂಕವ್ವಕ್ಕ ಹಾಗೆ ಹೇಳಿದ್ದೇ ಮತ್ತೆ ನಾಲ್ಕಾರು ಹೆಣ್ಣುಮಕ್ಕಳು ಒಬ್ಬರಾದ ಮೇಲೊಬ್ಬರು ಎದ್ದುನಿಂತರು.

`ನಾನು ಶರಣೆ, ಸೂಳೆ ನಂಬಿಯಕ್ಕ. ನನ್ನ ಕಾಯಕ ಸೂಳೆಯ ಕಾಯಕ.’
`ನಾನು ಶರಣೆ, ಸೂಳೆ ಬೊಮ್ಮಕ್ಕ. ನನ್ನ ಕಾಯಕ ಸೂಳೆಯ ಕಾಯಕ.’
`ನಾನು ಶರಣೆ, ಸೂಳೆ ಚಾಕಲದೇವಿ. ನನ್ನ ಕಾಯಕ ಸೂಳೆಯ ಕಾಯಕ.’
`ನಾನು ಶರಣೆ, ಸೂಳೆ ಪದ್ಮಲಾದೇವಿ. ನನ್ನ ಕಾಯಕ ಸೂಳೆಯ ಕಾಯಕ.’
`ನಾನು ಶರಣೆ, ಸೂಳೆ ಬೊಪಲದೇವಿ. ನನ್ನ ಕಾಯಕ ಸೂಳೆಯ ಕಾಯಕ.’

ದಾಸಿವೇಶಿಯರೆಂದು, ಸೂಳೆಯ ಮಕ್ಕಳು ಎಂದು ಮಾತುಮಾತಿಗೆ ಬೈಯುತ್ತಿದ್ದವರೆಲ್ಲ ಮಾತು ಸತ್ತು ದಂಗು ಬಡಿದು ಕುಳಿತರು. ತಮ್ಮ ನಡುವೆ ಇಷ್ಟು ಜನ ಸೂಳೆ ಕಾಯಕದವರು ಇರಬಹುದೆಂದು ಅಲ್ಲಿದ್ದವರಿಗೆ ತಿಳಿದೇ ಇರಲಿಲ್ಲ. ಸಂಕವ್ವ ಕೂತದ್ದೇ ಮತ್ತೊಬ್ಬ ಅವ್ವ ಎದ್ದು ನಿಂತಳು.

`ಸಂಕವ್ವಕ್ಕ, ನೀನು ನಿಜ ಶರಣೆ. ನಿಜವನ್ನು ಧೈರ್ಯವಾಗಿ ಹೇಳಿದಿ. ನಿನ್ನ ಧೈರ್ಯಕ್ಕೆ ನಾವು ಮೆಚ್ಚಿದೆವು. ಇತ್ತಲಾಗಿ ಧರ್ಮಪತ್ನಿನೂ ಅಲ್ಲ, ಅತ್ತಲಾಗಿ ವೇಶಿನೂ ಅಲ್ಲದೆ ಇರೋರು ಭಾಳ ಹೆಣ್ಣುಗಳು. ಎರಡನೆ ಹೆಂಡ್ತಿಯಾಗಿ, ಮೂರನೆ ನಾಲ್ಕನೆಯವಳಾಗಿ, ಇಟ್ಟುಕೊಂಡೋಳಾಗಿ, ಕೊಂಡು ತಂದೋಳಾಗಿ, ಮನದನ್ನೆಯರಾಗಿ, ಮನೆಮುರುಕಿ ಅನ್ನೋ ಬೈಗುಳ ಕೇಳ್ತ, ಆಟಕ್ಕುಂಟು ಲೆಕ್ಕಕ್ಕಿಲ್ಲ ಆಗಿ, ಪಣ ಕೊಟ್ಟು ತಂದ ಪುಣ್ಣಸ್ತ್ರೀಯರಾಗಿ ಇರೋರು ನಾವು. ಯಾವುದೋ ಸನ್ನಿವೇಶಕ್ಕೆ ಸಿಕ್ಕಂಡು ಸಂಸಾರ ಕಟ್ಟಿಕೊಳ್ಳಲಾಗದ್ದಕ್ಕೆ ಈ ಹಳ್ಳದಲ್ಲಿ ಬಿದ್ದು ತೊಳಲ್ತ ಇದೀವಮ್ಮಾ. ಮಕ್ಕಳು ಮರಿ, ಅವರ ಉದ್ಧಾರದ ಕನಸು ಕೈಬಿಟ್ಟು ಬದುಕಿದೀವಮ್ಮ. ನಾವೂ ಇನ್ನು ನಮ್ಮ ಹೆಸರಿನ ಹಿಂದೆ ನಮ್ಮ ಅರ್ಧಾಂಗನಾದ ಗಂಡಿನ ಹೆಸರಿನ ಜೊತೆ ನಮ್ಮ ಹೆಸರ ಅಂಟಿಸಿಕೊಳ್ತೀವಿ. ನಾವೂ ಪುಣ್ಯಸ್ತ್ರೀಯರು ಅನಿಸಿಕೊಳ್ತೀವಿ. ಇನ್ನು ನಾವು ಪುಣ್ಯಸ್ತ್ರೀಯರಲ್ಲ, ಪುಣ್ಯಸ್ತ್ರೀಯರು. ನಾನು ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ಕಾಳವ್ವೆ’

ಕದಿರೆ ರೆಮ್ಮವ್ವೆ ಹೆಂಗಸರ ಪರವಿರುವವಳು ಎಂದು ಪ್ರಸಿದ್ಧಳು. ಅವಳ ಮಾತುಗಳು ಕೈಯೆತ್ತುವ, ದನಿಯೆತ್ತುವ ಪುರುಷರನ್ನು ಚಾಟಿಯಿಂದ ಬಾರಿಸಿ ಸುಮ್ಮನೆ ಕೂರಿಸುವುದಿದೆ. ಆ ದಿನ ಕಾಳವ್ವೆ ಕಾರ ಕುಟ್ಟುತ್ತ ಬುಸುಬುಸು ಉಸುರು ಬಿಡುತ್ತಿದ್ದಳು. ದಪ್ಪ ಕಬ್ಬಿಣದ ಹಾರೆಯನ್ನು ಎರಡೂ ಕೈಯಿಂದ ಎತ್ತಿ ಹಾಕುತ್ತ, ಹಾರುವ ಕಾರ ಮೂಗು, ಬಾಯಿಗಡರದಿರಲೆಂದು ಸೆರಗು ಕಟ್ಟಿಕೊಂಡು ಒಂದೇಸಮ ಏಟು ಹಾಕುತ್ತಿದ್ದಳು.

ಈಕೆ ಇಷ್ಟು ಮಾತಾಡಬಲ್ಲಳೇ ಎಂದು ರಾಯಸದ ಮಂಚಣ್ಣನೂ ಸೇರಿದಂತೆ ಎಲ್ಲರೂ ಅಚ್ಚರಿಯಿಂದ ತೆರೆದ ಬಾಯಿ ತೆರೆದೇ ಕುಳಿತುಕೊಂಡಿರಲು ಒಬ್ಬರಾದ ಮೇಲೊಬ್ಬರು ಎದ್ದು ನಿಂತು ಹೇಳತೊಡಗಿದರು:

`ನಾನು ರೇವಣಸಿದ್ದಯ್ಯಗಳ ಪುಣ್ಯಸ್ತ್ರೀ ರೇಕಮ್ಮ’.
`ನಾನು ಸಿದ್ಧಬುದ್ದಯ್ಯಗಳ ಪುಣ್ಯಸ್ತ್ರೀ ಕಾಳವ್ವೆ’.
`ನಾನು ಹಡಪದ ಅಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ ತಾಯಿ’,
`ನಾನು ಹಾದರಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ’,
`ನಾನು ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ಕಾಳವ್ವೆ’,
`ನಾನು ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ’,
`ನಾನು ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ’,
`ನಾನು ಬತ್ತಲೇಶ್ವರಯ್ಯಗಳ ಪುಣ್ಯಸ್ತ್ರೀ ಗುಡ್ಡವ್ವೆ’,
`ನಾನು ಬಾಚಿ ಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ’,
`ನಾನು ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ಕೇತಲದೇವಿ’,
`ನಾನು ಡೋಹರ ಕಕ್ಕಯ್ಯನವರ ಪುಣ್ಯಸ್ತ್ರೀ ಭಿಷ್ಟಾದೇವಿ’,
`ನಾನು ಕೊಂಡೆ ಮಂಚಣ್ಣಗಳ ಪುಣ್ಯಸ್ತ್ರೀ ಲಕ್ಷ್ಮಮ್ಮ’,
`ನಾನು ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ’,
`ನಾನು ಕಾಟಕೂಟಯ್ಯಗಳ ಪುಣ್ಯಸ್ತ್ರೀ ರೇಚವ್ವೆ’,
`ನಾನು ನಾಗಿಮಯ್ಯಗಳ ಪುಣ್ಯಸ್ತ್ರೀ ಮಸಣಮ್ಮ’

ಹೆಣ್ಣುದುಃಖದ ಬಳ್ಳಿ ಕಣ್ಣಿಗೆ ಕಾಣುವಷ್ಟೂ ದೂರ ಎಲ್ಲೆಲ್ಲ ಹಬ್ಬಿರುವುದಲ್ಲ ಎಂದು ನೆರೆದವರು ನಿಟ್ಟುಸಿರಾಗುವಾಗ ಮತ್ತೊಂದು ದನಿ ಕೇಳಿಸಿತು:

`ಸೂಳೆಯಕ್ಕ, ಪುಣ್ಯಕ್ಕಗಳ ಮಾತು ಆಯಿತು. ಸತಿಯರು, ಅವ್ವಂದಿರದಂತೂ ಆಯಿತೇ ಆಯಿತು. ನೀವೆಲ್ಲ ನಿಮಗಾಗಿ ಒಂದು ಕಾಯ, ಒಂದು ಜೀವ, ಒಂದು ಸಂಸಾರ ಇರೋರು. ಮನೆ, ನಂಟು, ಸಂಬಂಧಗಳ ಹೊಂದಿರೋರು. ಆದರೆ ನನ್ನಂತಹ ಹಲವರಿದೇವೆ. ಒಂಟಿ ಹೆಂಗಸರು. ನಮಗಾವ ನಂಟೂ ಇಲ್ಲ. ಒಂದೇ ನಂಟು, ಗಂಡನೆಂದರೂ ಶಿವನೇ. ಮಿಂಡನೆಂದರೂ ಶಿವನೇ. ಅಯ್ಯನೆಂದರೂ ಶಿವನೇ. ಅವ್ವನೆಂದರೂ ಶಿವನೇ. ಅಣ್ಣನೆಂದರೂ ಶಿವನೇ. ಮಾವನೆಂದರೂ ಶಿವನೇ. ಗುರುವೆಂದರೂ ಶಿವನೇ, ಹರನೆಂದರೂ ಶಿವನೇ. ಅಕ್ಕಗಳಿರಾ, ಅವ್ವಗಳಿರಾ. ನೀವು ಬೇಲಿಯೊಳಗಿನ ತೋಟದ ವೃಕ್ಷಗಳು. ಹಬ್ಬಿದರೂ ಹರಡಿದರೂ ಒಂದು ಬೇಲಿಯೊಳಗೆ ಸುರಕ್ಷಿತ ಎಂದುಕೊಂಡಿರೋರು. ನಾವು ಬಯಲಲ್ಲಿ ನಿಂತ ಒಂಟಿಮರಗಳು. ಬಿರುಗಾಳಿ, ಬಿರುಮಳೆ, ಬಿರುಬಿಸಿಲು, ಯಮಚಳಿಗಳನ್ನೆಲ್ಲ ಸಹಿಸೋರು. ಸಿಡಿಲಿಗೂ ಕೊಡಲಿಗೂ ತಲೆಕೊಟ್ಟು ಯಾರದೂ ಅಲ್ಲದ, ಎಲ್ಲರೂ ತಮ್ಮದು ಅಂದುಕೊಳ್ಳಕ್ಕೆ ಹಾತೊರೆಯೋ ಆಸ್ತಿಯಂತೆ ಇರೋರು. ತಾಪತ್ರಯಗಳು ಸಂಸಾರವಂದಿಗರಿಗೆಷ್ಟೋ ಅಷ್ಟೇ ನಮಗೂ ಇದಾವೆ. ಲೋಕಜಂಜಡಗಳು ಮಕ್ಕಳು ಮರಿ ಇಲ್ಲದ ಬಂಜೆಯೆನಿಸಿಕೊಂಬವರಿಗೂ ಇದಾವೆ. ಒಂಟಿನಿಂತ ಮರಗಳಂತಹ ನಮಗೆ ಹಿಂದೆಮುಂದೆ ಯಾವ ಹೆಸರೂ ಬೇಡ. ಯಾವ ಕಾಯಕದ ಹೆಸರೂ ಬೇಡ. ಅಪ್ಪ, ಗಂಡ, ಕುಲ, ಕಾಯಕ ಯಾವುದರ ಹೆಸರೂ ಬೇಡ. ನಾನು ಸತ್ಯಕ್ಕ. ಬರಿಯ ಸತ್ಯಕ್ಕ ನಾನು.’

ಸತ್ಯಕ್ಕ ಇಷ್ಟು ಹೇಳುವುದರಲ್ಲಿ ಉಳಿದವರು ತಮ್ಮ ತಯಾರಿ ನಡೆಸಿಕೊಂಡಿದ್ದಂತೆ ತಾವೂ ಹೇಳಿದರು.

`ನಾನು ಗೊಗ್ಗವ್ವೆ, ಬರಿಯ ಗೊಗ್ಗವ್ವೆ ನಾನು.’
`ನಾನು ಬೊಂತವ್ವೆ, ಬರಿಯ ಬೊಂತವ್ವೆ ನಾನು’
`ನಾನು ಮಹಾದೇವಿ. ಮಹಾದೇವಿ ನಾನು.’

ಶರಣೆಯರ ನಡುವೆ ನಾನಾ ಸ್ವರೂಪಗಳಲ್ಲಿರುವ ಹೆಣ್ಣು ಜೀವಗಳು ತಂತಮ್ಮ ಒಡಲ ಆಳವನ್ನು ಶರಣ ಪಥಿಕರಿಗೆ ತೆರೆದು ತೋರಿಸಿದವು. ಅನುಭವ ಮಂಟಪವು ಎಲ್ಲರೊಂದಿಗೆ ಕುಳಿತುಕೊಳ್ಳಲು, ಕೇಳಲು, ಹೇಳಲು, ಮಾತನಾಡಲು ಅವರಿಗೆಲ್ಲ ಅವಕಾಶ ಕೊಟ್ಟದ್ದಕ್ಕೆ ಸಾರ್ಥಕವಾಯಿತು ಎಂದು ಬಸವಣ್ಣ ಭಾವಿಸಿದನು. ಒಬ್ಬರಾದ ಮೇಲೊಬ್ಬರು ಶರಣರು ಮೇಲೆದ್ದು ಹೆಣ್ಣಿನ ಬಗೆಗೆ ತಮ್ಮ ನಿಲುವನ್ನು ವಿವಿಧ ಮಾತುಗಳಲ್ಲಿ ಹೊರಗೆಡಹಿದರು.

`ಅವ್ವಗಳಿರಾ, ಅಕ್ಕಗಳಿರಾ, ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು/ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು/ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತು/ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು/ಅದು ಕಾರಣ ಹೆಣ್ಣು ಹೆಣ್ಣಲ್ಲ, ಹೆಣ್ಣು ರಾಕ್ಷಸಿಯಲ್ಲ/ಹೆಣ್ಣು ಪ್ರತ್ಯಕ್ಷ ಕಪಿಲ ಸಿದ್ಧ ಮಲ್ಲಿಕಾರ್ಜುನ ನೋಡಾ’ ಎಂದನು ಸಿದ್ಧರಾಮ.

`ಸತ್ವಗೆಟ್ಟಲ್ಲಿ ಕಾಷ್ಟವನೂರಿ ನಡೆಯಬೇಕು/ಮಟ್ಟತ್ವದಲ್ಲಿ ನಿಶ್ಚಯವ ಹೇಳಲಾಗಿ/ಮಹಾಪ್ರಸಾದವೆಂದು ಕೈಗೊಳ್ಳಬೇಕು/ಎನ್ನ ಭಕ್ತಿಗೆ ನೀ ಶಕ್ತಿಯಾದ ಕಾರಣ/ಎನ್ನ ಸತ್ವಕ್ಕೆ ನೀ ಸತಿಯಾದ ಕಾರಣ/ಎನ್ನ ಸುಖದುಃಖ ನಿನ್ನ ಸುಖದುಃಖ ಅನ್ಯವಿಲ್ಲ/ಇದಕ್ಕೆ ಭಿನ್ನ ಭೇದವೇನು ಹೇಳಾ ನಿಃಕಲಂಕ ಮಲ್ಲಿಕಾರ್ಜುನಾ’ ಎಂದು ಮೋಳಿಗೆಯ ಮಾರಯ್ಯ ತನ್ನ ಸತಿ ಮೋಳಿಗೆ ಮಹಾದೇವಿಗೆ ಮತ್ತು ಆ ಮೂಲಕ ಇಡಿಯ ಹೆಣ್ಣುಕುಲಕ್ಕೆ ಶರಣೆಂದನು.

`ಸತಿಯ ಗುಣವ ಪತಿ ನೋಡಬೇಕಲ್ಲದೆ/ಪತಿಯ ಗುಣವ ಸತಿ ನೋಡಬಹುದೆ ಎಂಬರು/ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ/ಪತಿಯಿಂದ ಬಂದ ಸೋಂಕು ಸಂತಿಯ ಕೇಡಲ್ಲವೆ/ಒಂದಂಗದ ಕಣ್ಣು ಉಭಯದಲ್ಲಿ ಒಂದು ಹಿಂಗಲಿಕ್ಕೆ/
ಭಂಗವಾರಿಗೆಂದು ತಿಳಿದಲ್ಲಿಯೆ/ಕಾಲಾಂತಕ ಭೀಮೇಶ್ವರ ಲಿಂಗಕ್ಕೆ ಸಲೆ ಸಂದಿತ್ತು’ ಎಂದು ಸತಿಪತಿಯರಿಬ್ಬರಿಗೂ ಪರಸ್ಪರರ ಮೇಲೆ ಇರುವ ಅವಲಂಬನೆ, ಹಕ್ಕುಗಳ ಬಗೆಗೆ ಹೇಳಿದ ಢಕ್ಕೆಯ ಬೊಮ್ಮಣ್ಣ.

`ಶಿವ ಶಿವ ಎಂಬ ವಚನವ ಬಿಡದಿರು, ಮಡದಿಯರೊಲುಮೆಯ ನಚ್ಚದಿರು ಎಂದು ಹೇಳಿದವರು ನಾವು. ಹೆಣ್ಣನ್ನು ಮಾಯೆಯೆಂದವರು. ಈಗ ನಮ್ಮ ಮಾತನ್ನೂ ಬದಲಿಸಿಕೊಳ್ಳಬೇಕಿದೆ. ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ/ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ/ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ/ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರಾ’

ಎಂದು ಅಲ್ಲಮಯ್ಯ ಹೇಳುವುದರೊಂದಿಗೆ ಅಂದಿನ ನುಡಿಮಾಲೆಯು ಮುಕ್ತಾಯ ಕಂಡಿತು.

ಆದರೆ ಕೆಲವರು ಹೆಣ್ಣುಗಳ ಇರುವಿಕೆಯನ್ನು ಗೌರವಿಸಿ ಮಾತನಾಡಿದರೂ ಮುಕ್ಕಾಲು ಪಾಲು ಜನರ ಮನದಲ್ಲಿ ಅದಕ್ಕೆ ವಿರುದ್ಧ ವಿಚಾರಗಳೇ ತುಂಬಿಕೊಂಡಿದ್ದವು. ಅನುಭವ ಮಂಟಪದಿಂದ ನಿಧಾನಕ್ಕೆ ದಾಸೋಹದ ಮನೆಯತ್ತ ಕಾಲೆಳೆಯುತ್ತ ಹೋಗುತ್ತಿರುವವರು ಅಲ್ಲಲ್ಲಿ ಗುಂಪುಗೂಡಿ ಆಡಿಕೊಂಡ ಮಾತುಗಳನ್ನು ಮಹಾದೇವಿಯೂ, ಶರಣೆಯರೂ ಸೂಕ್ಷ್ಮವಾಗಿ ಗ್ರಹಿಸಿದರು. ಕೆಲವರು ಹೆಣ್ಣನ್ನು ಹಾದರಗಿತ್ತಿಯೆಂಬಂತೆ ಮಾತಾಡಿಕೊಳ್ಳುತ್ತ ಸಾಗಿದರೆ ಚಂದಿಮರಸಯ್ಯನು, `ಕಾಳಕೂಟ ಹಾಳಾಹಳ ವಿಷಂಗಳು ಕುಡಿದವರನಲ್ಲದೆ ಮಿಕ್ಕವರನೇನನೂ ಮಾಡಲಮ್ಮವು. ಸ್ತ್ರೀಯೆಂಬ ಕಡುನಂಜು ನೋಡಿದವರ, ನುಡಿಸಿದವರ, ಕೇಳಿದವರ, ಕೂಡಿದವರ ಗಡಣ ಸಂಗ ಮಾತ್ರದಿಂದ ಮಡುಹಿ ನರಕದಲ್ಲಿ ಕೆಡಹದೆ ಮಾಡಳು’ ಎಂದುಕೊಳ್ಳುತ್ತ ಸಾಗಿದನು. ಹಾದರಗಿತ್ತಿ, ಬೋಸರಗಿತ್ತಿಯೆಂಬ ಪದಗಳನ್ನು ಶರಣೆಯರು ಕೇಳದಿದ್ದೇನಲ್ಲ. ಬಸವಣ್ಣ ಕೂಡ `ಮಾನಿಸಗಳ್ಳಿ’ ಎಂದು, `ಕಂಗಳಲೊಬ್ಬನ ಕರೆವಳು, ಮನದಲೊಬ್ಬನ ನೆರೆವಳು’ ಎಂದು ಮೂದಲಿಸಿದ್ದಿದೆ. ಉರಿಲಿಂಗಪೆದ್ದಿಯು ಒಮ್ಮೆ ನುಡಿಮಾಲೆಯಲ್ಲಿ `ಹೆಣ್ಣ ನಚ್ಚಿ, ಅಶುಭವ ಮಚ್ಚಿ ಮರೆಯಬೇಡ. ಅವಳು ನಿನ್ನ ನಂಬಳು, ನೀನು ತನು ಮನ ಧನವನಿತ್ತಡೆಯೂ ಪರಪುರುಷರ ನೆನೆವುದ ಮಾಣರು’ ಎಂದು ಹೇಳಿ ಸ್ವತಃ ಕಾಳವ್ವೆಯ ಕೋಪಕ್ಕೂ ಗುರಿಯಾಗಿದ್ದಿದೆ. ಪತ್ನಿ ಎಂದರೆ ಪತಿಯನ್ನು ಒಲಿಸಿಕೊಂಡು ವಿನೀತಳಾಗಿ ಬದುಕಬೇಕೆನ್ನುವುದು ಹೆಚ್ಚುಕಡಿಮೆ ಎಲ್ಲರ ಇಂಗಿತಭಾವವಾಗಿದ್ದುದನ್ನು ಮಹಾದೇವಿಯಕ್ಕ ಗಮನಿಸಿದಳು. ಶರಣ ಪಥವು ಇಷ್ಟಲಿಂಗವನರಿತಂತೆ ಹೆಣ್ಣು ಲಿಂಗವನರಿವುದರಲ್ಲಿ ಇನ್ನೂ ಬಹುದೂರವಿದೆ ಎಂದನಿಸಿತು.

ಅಷ್ಟರಲ್ಲಿ ಹಡಪದ ಲಿಂಗಮ್ಮ ಎದುರಾದಳು. ಇಡಿಯ ದಿನ ಅನುಭವ ಮಂಟಪದಲ್ಲಿ ನಡೆದ ಚರ್ಚೆಯ ಸುತ್ತ ಎಲ್ಲರ ಯೋಚನೆಗಳು ತಿರುಗುತ್ತಿದ್ದವು. ಶರಣರು ಯಾಕೆ ಆ ಪರಿ ಹೆಣ್ಣು ಸ್ವಭಾವದ ಬಗೆಗೆ ಉಗ್ರಟೀಕೆ ಇಟ್ಟುಕೊಂಡಿರುವರೋ ಎಂದು ಮಹಾದೇವಿ ಲಿಂಗಮ್ಮನನ್ನು ಕೇಳಿದಳು. `ಘಟ್ಟಿವಾಳಯ್ನ ಕತಿ ಕೇಳೀಯಲವ್ವ ನೀನು. ಅವ್ನ ಪಾಡ ನೋಡಿ ಎಲ್ಲಾರೂ ಹೆಂಗುಸ್ರು ಮ್ಯಾಲ ಸಿಟ್ಟಾಗ್ಯಾರ. ಆದ್ರ ಅದು ಬಾಳೊತ್ತಿನ ಸಿಟ್ಟಲ್ಲ ತಗ. ಉಣ್ಣಾಕ ಬೇಕಾದ್ದು ಮಾಡಿ ಹಾಕಕಿ ಹೆಣ್ಣೇ. ಉಂಡು ಮಲಗಿದ ಬಳಿಕ ಬೇಕಾಗೂದು ಹೇಂತಿನೆ. ಘಟ್ಟಿವಾಳಯ್ಯಗ ಆದದ್ದೇ ತಮಗು ಆದರ ಗತಿ ಏನಂತ ಹೆರ‍್ಯಾರ ಅಷ್ಟ’ ಎಂದು ಲಿಂಗಮ್ಮ ವಿವರವಾಗಿ ಘಟ್ಟಿವಾಳಯ್ಯನ ವಿಷಯ ತಿಳಿಸಿದಳು.

ಘಟ್ಟಿವಾಳಯ್ಯನ ಮೊದಲ ಹೆಸರು ಮುದ್ದಣ್ಣ. ಗಂಧ ತೇಯುವುದು, ಭಕ್ತನಾಗಿ ಮದ್ದಳೆಯನ್ನು ಬಾರಿಸುತ್ತ ಶಿವಾನುಭವವನ್ನು ಸಾರುವ ನರ್ತನ ಕಾಯಕವನ್ನು ಮಾಡುತ್ತಿದ್ದ. ಘಟ್ಟಿವಾಳಯ್ಯ ಮದುವೆಯಾದರೂ ಹೆಂಡತಿಯೊಡನೆ ಬಾಳ್ವೆ ಸಾಧ್ಯವಾಗಲಿಲ್ಲ. ಗಂಡನ ಶಿವಭಕ್ತಿ, ಅಧ್ಯಾತ್ಮದ ಹುಚ್ಚು ಅವಳಿಗೆ ಹಿಡಿಸಲಿಲ್ಲ. ಶರಣ ಮಾರ್ಗ ಪ್ರಿಯವಾಗಲಿಲ್ಲ. ಕಾಯಮೋಹಿಯಾಗಿದ್ದ ಅವಳು ಇವನೊಡನೆ ಬಾಳ್ವೆ ಮಾಡಲಾಗದೇ ಅನ್ಯಪುರುಷನಲ್ಲಿ ಅನುರಕ್ತಳಾದಳು. ಅದು ತಿಳಿದ ಘಟ್ಟಿವಾಳಯ್ಯನು ಅವಳ ಮತ್ತೊಂದು ಮದುವೆಗೆ ತಾನೇ ನಿಂತು ಸಹಾಯ ಮಾಡಿದ. ಈ ಘಟನೆಯ ನಂತರ ಘಟ್ಟಿವಾಳಯ್ಯನ ಮನಸ್ಸು ಸಂಪೂರ್ಣವಾಗಿ ವೈರಾಗ್ಯದತ್ತ ತಿರುಗಿತು.

`ಹೊನ್ನು ಭೂಪಾಲರಿಗೆ, ಹೆಣ್ಣೊಲಿದ ಕಾಮುಕಗೆ, ಮಣ್ಣು ಬಲವಂತಂಗಲ್ಲದೆ ಬರಿಯ ಭ್ರಾಂತಿಯಲ್ಲಿ ಕಣ್ಣುಗೆಟ್ಟರೆ ಬರುವುದೇ? ಎನ್ನ ಧನ ಜ್ಞಾನವೆಂಬಾಗಮದ ವಚನ ನಿನ್ನರಿದುಕೋ’ ಎಂದು ಸಾರುತ್ತ ತನ್ನ ಊರುಬಿಟ್ಟು ಕಲ್ಯಾಣಕ್ಕೆ ಬಂದ. ಇಲ್ಲಿ ಹಗಲಿರುಳು ದಾಸೋಹದ ಮನೆಯಲ್ಲಿ ಕಾಯಕ ಮಾಡುತ್ತಿದ್ದಾನೆ. ಉಚಿತ ಪ್ರಸಾದದ ಆಸೆಗಾಗಿ ಬಂದು ನೆರೆಯುವ ವೇಷಧಾರಿ ಜಂಗಮರನ್ನು, ಕಾಮಿಗಳನ್ನು ಕಂಡರೆ ಅವನಿಗೆ ಕೋಪ. ಅಂಥವರಿಗೆ ನಿಷ್ಠುರವಾಗಿ ನುಡಿದು ಹಲವರ ಕೋಪಕ್ಕೆ ಪಾತ್ರನಾಗುವುದೂ ಇದೆ. ಕಪಟ ಜಂಗಮರು ಅವನ ಹಿತನುಡಿಗಳ, ಸದಾಚಾರದ ಪ್ರಭಾವದಿಂದ ಪ್ರಾಮಾಣಿಕ ಜಂಗಮರಾದದ್ದು ಇದೆ. ಅಂಥವನಿಗೆ ಹೆಂಡತಿ ಮಾಡಿದ ಮೋಸ ನೆನಪಾಗಿ ಶರಣರು ಹೆಂಗಸರ ಮೇಲೆ ಕೆಟ್ಟ ಭಾವನೆ ಇಟ್ಟುಕೊಂಡಿರಬಹುದು ಎನ್ನುವುದು ಲಿಂಗಮ್ಮನ ವಿವರಣೆ.

`ಘಟ್ಟಿವಾಳಣ್ಣನಿಗೆ ಆಗಿದ್ದು ಒಂದು ಅಪವಾದ ಅವ್ವಾ. ಹಾಗೆ ಎಷ್ಟು ಪುರುಷರು ತಂತಮ್ಮ ಹೆಂಡತಿಯರಿಗೆ ಮೋಸ ಮಾಡಿಲ್ಲ? ಶರಣರೆಲ್ಲ ಏಕಪತ್ನೀ ವ್ರತಸ್ಥರೇ? ಎಷ್ಟು ಜನ ಎರಡು, ಮೂರು ಲಗ್ನವಾದವರಿಲ್ಲ? ಅದರ ನೆನಪೂ ಇವರಿಗೆ ಆಗಬೇಕಲ್ಲ?’

`ಪ್ರಶ್ನಿ ಕೇಳೂದು ಸೊಲೂಪ್ ಕಮ್ಮಿ ಮಾಡ್ಕಳೆ ಮಾದೇವಿ. ಹಂಗ ನೋಡಿದರ ಬಸಣ್ಣಾರೂ ಎಡ್ಡ ಲಗ್ಣ ಆಗಿಲ್ಲೆನು? ಮಕಾಮಾರಿ ನೋಡ್ದ ಅಡ್ಡಮಾತ ಎತ್ತಬ್ಯಾಡ. ಅಕ್ಕನ ಚಾಳಿ ಮನೆ ಮಂದೀಗೆಲ್ಲಾ ರ‍್ತಾವ. ನಿನ್ನಂಗೇ ಎಲ್ಲಾ ಹೆಣ್ಣುಗುಳೂ ಪ್ರಶ್ನಿ ಒಗದರ? ಈ ಹೆಣಮಕ್ಳ ಕಾಲದಾಗ ಅನಬವ ಮಂಡಪ ನಡಸಾಕ ಕಠೀಣ ಆಗೇದ. ಬಾಳ ದಿನ ನಡೆಂಗಿಲ್ಲ ಅಂತ ಹಿರೇರು ಅನಾಕತಿದ್ರು’

ಲಿಂಗಮ್ಮಕ್ಕ ಪಿಸುಗುಟ್ಟಿದಳು. ಬರಬರುತ್ತ ಅವಳ ದನಿಯಲ್ಲಿ, ಮುಖದಲ್ಲಿ ಅಸಹನೆ ಇಣುಕಿದ್ದನ್ನು ಮಹಾದೇವಿ ಗಮನಿಸಿದಳು. ಈ ಮಾತು ಲಿಂಗಮ್ಮಕ್ಕನ ಬಾಯಿಯಲ್ಲಿ ಬರುವುದರ ಹಿಂದೆ ಹಲವು ಪಿಸುಮಾತುಗಳು ಕೆಲಸ ಮಾಡಿರಬಹುದು ಎಂದು ಮಹಾದೇವಿ ಯೋಚಿಸಿದಳು. ಮೈಯೆಲ್ಲ ಕಿವಿಯಾಗಿ ಕೊನೆತನಕ ಕೂತು ಕೇಳಿ ತಾನು ಪ್ರಶ್ನೆ ಎತ್ತುವುದು ಹಿರಿಯರಿಗೆ ಇರಿಸುಮುರುಸುಂಟಾಗಿದೆಯೇ ಎಂಬ ಅನುಮಾನವಾಯಿತು.

ಹೌದು, ಬಸವಣ್ಣ, ಅಲ್ಲಮಯ್ಯಗಳೂ ತತ್ತರಿಸುವಂತೆ ಕೇಳುವ ಅವಳ ಪ್ರಶ್ನೆಗಳ ಹರಿತ ಅಲಗನ್ನು ಮೊಂಡು ಮಾಡಲೆಂದೇ ಲಿಂಗಮ್ಮ ಆ ಮಾತು ಹೇಳಿದ್ದಳು.

(ರೇಖಾಚಿತ್ರಗಳು: ರೂಪಶ್ರೀ ಕಲ್ಲಿಗನೂರ್)
(ಕೃತಿ: ಬೆಳಗಿನೊಳಗು ಮಹಾದೇವಿಯಕ್ಕ (ಕಾದಂಬರಿ), ಲೇಖಕರು: ಡಾ. ಎಚ್.ಎಸ್.‌ ಅನುಪಮಾ, ಪ್ರಕಾಶಕರು: ಲಡಾಯಿ ಪ್ರಕಾಶನ (9480286844), ಗದಗ, ಬೆಲೆ: 650/-) )