ಬೇಸಿಗೆ ರಜೆ ಬಂದರೆ ಸಾಕು ನಾನು ಅಮ್ಮನ ತವರೂರಿಗೆ ದೌಡಾಯಿಸುತ್ತಿದ್ದೆ. ಅಂಥದ್ದೇ ಒಂದು ಬೇಸಿಗೆ ರಜೆಯಲ್ಲಿ ತಿಂಗಳೆಲ್ಲ ಅಲ್ಲೇ ಟಿಕಾಣಿ ಹೂಡಿದ್ದ ನನ್ನ ಬಿಟ್ಟಿರಲಾಗದ ಅಪ್ಪ ಅಚಾನಕ್ಕಾಗಿ ನೋಡಲೆಂದು ಊರಿಗೆ ಬಂದಿದ್ದಾರೆ. ತಾತ ಮಾವಂದಿರು ಹೊಲಕ್ಕೆ ಹೋಗಿದ್ದು ಮನೆಯಲ್ಲಿದ್ದು ಅವ್ವ ಮಾತ್ರ. ಅಲ್ಲೇ ಹಜಾರದ ಬಾಗಿಲ ಬಳಿ ಮೊರದಲ್ಲಿ ರಾಗಿ ಕೇರುತ್ತಾ ಕುಳಿತಿದ್ದ ಅಳಿಯನ ನಿರೀಕ್ಷೆ ಇಲ್ಲದವಳ ಮುಂದೆ ಪ್ಯಾಂಟ್ ತೊಟ್ಟ ಎರಡು ಕಾಲುಗಳು ಕಾಣಿಸಿಕೊಂಡಿವೆ. ಮನೆಯ ಹೊಸಲು ಸ್ಪರ್ಶಿಸುವ ಪ್ಯಾಂಟುಧಾರನ ಪಾದಗಳೆಂದರೆ ಅದು ಅಳಿಯನೊಬ್ಬನದ್ದೆ ಎಂಬುದನ್ನು ಗ್ರಹಿಸಿದ ಅವಳು ತಲೆಯೆತ್ತಿಯೂ ನೋಡದೆ ಕೈಯಲ್ಲಿದ್ದ ಮೊರವನ್ನು ಗಾಬರಿಯಿಂದ ಬಿಸಾಡಿ ಓಡಿ ಹೋಗಿ ನಡುಮನೆಯನ್ನು ಸೇರಿಕೊಂಡಿದ್ದಳು.
ಮಾಲತಿ ಶಶಿಧರ್‌ ಬರಹ ನಿಮ್ಮ ಓದಿಗೆ

ಹೆತ್ತವರೇ ಮಗಳಿಗೆ ನೆಂಟರಾಗೋದು ಎಂಥ ಅಮಾನುಷ ಸಂಗತಿ ಅಲ್ವಾ. ಮದುವೆಯಾಗಿ ದಶಕ ಕಳೆದರೂ ಇನ್ನೂ ಉತ್ತರ ಸಿಗದೆ ಉಳಿದಿರೋ ಪ್ರಶ್ನೆಯೆಂದರೆ ಒಂಬತ್ತು ತಿಂಗಳು ಹೊತ್ತು ಹೆತ್ತ ಮಗಳ ಚಂದ್ರನಂತ ಅಂಗಾಲಿಗೆ ಕಪ್ಪಿಟ್ಟು, ಹಾಲ್ಗೆನ್ನೆಗೆ ಮುತ್ತಿಟ್ಟು, ಸಕ್ಕರೆ ನಿದ್ರೆಯಲ್ಲಿರುವಾಗ ದೃಷ್ಟಿ ತೆಗೆದು ಬೆಳಿಸಿದ ಅಮ್ಮ, ಮಡಿಲ ಮೇಲೆ ಸೂಸು ಮಾಡಿದಾಗ ಹೆಮ್ಮೆಯಿಂದ ನಕ್ಕು, ಪಾ ಎಂದು ತೊದಲಿದ ಒಂದೇ ಅಕ್ಷರಕ್ಕೆ ಜಗತ್ತನ್ನೇ ಗೆದ್ದ ಹಾಗೆ ಸಂಭ್ರಮಿಸಿ ಕುಣಿದು, ಹೆಗಲ ಮೇಲೆ ಹೊತ್ತು ಜಾತ್ರೆ ತೋರಿಸಿ ಬೆಳೆಸಿದ ಅಪ್ಪ ಈ ಇಬ್ಬರೂ ನನಗೆ ನೆಂಟರಾದದ್ದು ಹೇಗೆ? ಇದು ಬಹುಷಃ ಪ್ರತಿ ಹೆಣ್ಣುಮಗಳ ಪ್ರಶ್ನೆಯೂ ಆಗಿರುತ್ತದೆ.

ಮೊದಲ ಬಾರಿ ನನ್ನ ಗಂಡನ ಮನೆಗೆ ಬಂದ ಅಪ್ಪ ಅಮ್ಮನನ್ನ ನನಗೇ ಗೊತ್ತಿಲ್ಲದಂತೆ ನೆಂಟರ ಹಾಗೆ ಆತಿಥ್ಯ ಮಾಡಿದ್ದೆ. ಅವರು ಬರುತ್ತಿದ್ದಂತೆ ಅವರ ಬ್ಯಾಗ್ ತೆಗೆದುಕೊಂಡು ತುಂಬಾ ಫಾರ್ಮಲ್ಲಾಗಿ ಈಗ ಬಂದ್ರ, ಚೆನ್ನಾಗಿದ್ದೀರಾ, ಕಾಲು ತೊಳೀರಿ ಕೂತ್ಕೋಳಿ ಅಂತೆಲ್ಲ ಅಸಹಜವಾಗಿ ಕೇಳಿದ್ದೆ. ಮದುವೆಗೆ ಮುಂಚೆ ಅಂದರೆ ನಾನು ಕಾಲೇಜಿನಲ್ಲಿ ಓದುವಾಗ ಮನೆ ಕೆಲಸ ಕಲಿಯೇ, ಅಡುಗೆ ಕಲಿಯೇ ಕೊನೆಗೆ ಕಾಫಿ ಟೀ ಆದ್ರೂ ಮಾಡೋದು ಕಲಿಯೇ ಸೋಂಬೇರಿ, ಗಂಡನ ಮನೆಯಲ್ಲಿ ನಮ್ಮನ್ನ ಬೈಯಿಸಬೇಡ ಎಂದೆಲ್ಲಾ ಅಮ್ಮ ಸದಾ ಗೊಣಗುತ್ತಲೆ ಇದ್ದಳು. ಆಗೆಲ್ಲ ಅಪ್ಪ ನನ್ನ ಭುಜ ಹಿಡಿದು ತನ್ನತ್ತ ಎಳೆದುಕೊಂಡು “ನೀನಿರೋದ್ಯಾಕೆ? ಮಾಡು… ನನ್ನ ರಾಜಕುಮಾರಿ ಯಾಕೆ ಮಾಡ್ಬೇಕು” ಅಂತ ನನ್ನ ಪರ ವಹಿಸಿಕೊಳ್ಳೋರು. ಅಣ್ಣ ನಾನು ಟಿವಿ ರಿಮೋಟ್‌ಗಾಗಿ ಪ್ರಾಣಿಗಳಂತೆ ಜಗಳಕ್ಕೆ ನಿಂತಾಗ ಅಪ್ಪ ಹೇಳೋರು, “ಬಿಡೋ ಮಗನೆ ಇನ್ನೆಷ್ಟು ದಿನ ಇರ್ತಾಳೆ ನಮ್ಮ ರಾಜಕುಮಾರಿ. ಮದುವೆ ಆಗೋವರೆಗಷ್ಟೇ ತಾನೇ…” ಎನ್ನುತ್ತಾ ಅಣ್ಣನ ಕೈಲಿದ್ದ ರಿಮೋಟನ್ನು ಕಿತ್ತು ನನ್ನ ಕೈಯಲ್ಲಿಡೋರು.

ಅದೆಷ್ಟೇ ಗೋಗರೆದರೂ ಒಂದು ಕಪ್ ಚಹಾ ಮಾಡಿಕೊಡದ ನಾನು ನನ್ನ ಗಂಡನ ಮನೆಗೆ ಬಂದ ಅವರನ್ನ ಕಾಫಿ ಕುಡಿತೀರಾ.. ಟೀ ಕುಡಿತೀರಾ.. ಅಂತ ಕೇಳಿದ್ದನ್ನ ನೆನೆಸಿಕೊಂಡರೆ ನಿಜಕ್ಕೂ ಕೃತಕವೆನಿಸುತ್ತೆ.

ಇನ್ನೊಮ್ಮೆ ಮದುವೆಯಾದ ಹೊಸದರಲ್ಲಿ ಮಗಳು-ಅಳಿಯನನ್ನ ಮೊದಲ ದೀಪಾವಳಿ ಹಬ್ಬಕ್ಕೆ ಕರೆಯಲೆಂದು ಬಂದ ನನ್ನ ಅಪ್ಪ ಅಮ್ಮ ಕೈಯಲ್ಲಿದ್ದ ನನಗಿಷ್ಟಿದ ಚಕ್ಕುಲಿ ನಿಪ್ಪಟ್ಟು ಹೂವು ಹಣ್ಣಿದ್ದ ಬ್ಯಾಗನ್ನು ಎಲ್ಲಿಡಬೇಕೆಂದು ಅತ್ತಿತ್ತ ನೋಡುತ್ತಿದ್ದದ್ದು, ಬಹಳಾ ಮುಜುಗರದಿಂದ ಕೂರುವುದೆಲ್ಲಿ ನಿಲ್ಲುವುದೆಲ್ಲಿ ಎಂದು ಕಸಿವಿಸಿಗೊಂಡು ಬಾಗಿಲ ಒಳಗೆ ಕಾಲಿಟ್ಟವರು ತಡಕಾಡಿದ್ದು, ಅವರಿಗೆ ಆ ಸಂಕೋಚ ಹೋಗಿಸಲು ಮಾಡುತ್ತಿದ್ದ ನನ್ನ ಪ್ರಯತ್ನ ಇವೆಲ್ಲವೂ ನೆನಪಾಗಿ ಹೆಣ್ಣು ಮಗಳಿಗೆ ಇದು ಮದುವೆಯ ನಂತರ ಬಂದ ಪ್ರಭುದ್ಧತೆಯೋ ಅಥವಾ ಹೆತ್ತವರನ್ನ ಸಂತಸ ಪಡಿಸಬೇಕು ಅನ್ನೊ ಜವಾಬ್ದಾರಿಯೋ, ಇಲ್ಲ ಸಮಾಜ ಹೆಣ್ಣು ಹೀಗೆ ಇರಬೇಕೆಂದು ಮಾಡಿರುವ ಕಟ್ಟುಪಾಡುಗಳ ಹೇರಿಕೆಯೋ ತಿಳಿಯುತ್ತಿಲ್ಲ.

ಒಮ್ಮೆ ಪಿಯುಸಿ ಮುಗಿದಿದ್ದರೂ ಅಪ್ಪ ಕೊಡಿಸಿದ್ದ ನೀಲಿ ಬಣ್ಣದ ಲೇಡಿಬರ್ಡ್ ಸೈಕಲ್ನಲ್ಲೆ ಓಡಾಡುತ್ತಿದ್ದ ನಾನು ಡಿಗ್ರಿ ಸೇರುವ ಹೊತ್ತಿಗೆ ಸ್ಕೂಟಿ ಬೇಕೇ ಬೇಕೆಂದು ಹಠ ಹಿಡಿದೆ. ಅದ್ಯಾಕೋ ಅಪ್ಪ ಬಗ್ಗುವಂತೆ ಕಾಣಲಿಲ್ಲ. ಆಗ ಒಂದು ವಾರ ಊಟ ಬಿಟ್ಟಂತೆ ಮಾಡಿ ಕದ್ದು ಏನಾದರೂ ಬಾಯಾಡಿಸಿಕೊಂಡು ಯಾಮಾರಿಸಿದಾಗಾಲೆ ಕೆಂಪು ಬಣ್ಣದ ಬಜಾಜ್ ವೇವ್ ಸ್ಕೂಟಿ ಮನೆಗೆ ಬಂದದ್ದು. ಅಪ್ಪನೊಂದಿಗೆ ಮೂರು ಮೂರು ದಿನಕ್ಕೂ ಮುನಿಸಿಕೊಂಡು ಮಾತು ಬಿಡುತ್ತಿದ್ದ ಹುಡುಗಿ, ಅಮ್ಮನ ಮೇಲಿನ ಕೋಪಕ್ಕೆ ಊಟ ಬಿಟ್ಟು ಕೈಗೆ ಸಿಕ್ಕಿದನ್ನೆಲ್ಲಾ ನೆಲಕ್ಕೆ ಕುಕ್ಕುತ್ತಿದ್ದ ಅದೇ ಹುಡುಗಿ ಗಂಡನ ಮನೆಯಲ್ಲಿ ಎಲ್ಲವನ್ನೂ ಎಲ್ಲರನ್ನೂ ಅನುಸರಿಸಿಕೊಂಡು ತಗ್ಗಿಬಗ್ಗಿ ನಡೆವುದು, ಅತ್ತೆ ಮಾವ ಗಂಡನನ್ನ ಮೆಚ್ಚಿಸಲು ಅದೆಷ್ಟೋ ಸರ್ಕಸ್‌ಗಳನ್ನು ಮಾಡಬೇಕೆಂಬುದನ್ನು ಮುಚ್ಚಿಡಲು, ಹಿಂದಿನ ರಾತ್ರಿ ಗಂಡನೊಂದಿಗೆ ಜಗಳವಾಡಿಕೊಂಡದ್ದನ್ನು ಬಚ್ಚಿಡಲು, ಆಗಾಗ ಅಮ್ಮನ ಮುಖ ನೋಡಿ ಬಾರದ ನಗುವನ್ನು ತುಟಿಯಂಚಿಗೆ ಎಳೆದುಕೊಂಡು ಮಾಡುತ್ತಿದ್ದ ಅವಳ ನಟನೆ, ಅಡುಗೆಯೇ ಬಾರದ ಅವಳು ಸ್ಟವ್ ಮುಂದೆ ನಿಂತು ಈರುಳ್ಳಿ ಹೆಚ್ಚುತ್ತಾ ಅಳುವುದು, ಸಣ್ಣ ಎಡವಟ್ಟಿಗೆ ಅತ್ತೆಯಿಂದ ಗದರಿಸಿಕೊಂಡದ್ದು ಈ ಎಲ್ಲವೂ ಅಮ್ಮನ ಕರುಳಲ್ಲೊಂದು ಸಂಕಟ ಹುಟ್ಟಿಸಿ ಹಿಂಡಿದಂತಾಗಾದೆ ಇರಲು ಸಾಧ್ಯವೇ?

ತಾನು ಕಾಫಿ ಕುಡಿದ ಲೋಟವನ್ನೂ ಸಹ ತೊಳೆಯದ ಅದೇ ಹುಡುಗಿ ಸಿಂಕಿನಲ್ಲಿ ತುಂಬಿದ ರಾಶಿ ಪಾತ್ರೆಗಳ ತಿಕ್ಕುತ್ತಾ ಹಣೆಯಲ್ಲಿ ಹರಿವ ಬೆವರೊರೆಸಿಕೊಳ್ಳುತ್ತಾ ಅಣ್ಣ ಅತ್ತಿಗೆಯ ಯೋಗಕ್ಷೇಮ, ಅಪ್ಪನ ಬಿಪಿ ಶುಗರ್ ಬಗೆಗಿನ ಮಾಹಿತಿ, ಪಕ್ಕದ ಮನೆಯ ಅಜ್ಜಿಯ ಆರೋಗ್ಯಗಳನ್ನೆಲ್ಲಾ ಕೇಳುವಾಗ ಪುಟ್ಟ ಮಗಳ ಆ ಪ್ರೌಢಿಮೆ ಕಂಡು ಹೆತ್ತವನ ಕಣ್ಣಂಚಲ್ಲಿ ಕಂಬನಿಯೊಂದು ಚದುರಿಕೊಂಡು ಹೊರ ಬಾರದೆ ಇರಲು ಸಾಧ್ಯವೇ?

ಮಗಳ ಸಣ್ಣ ಪುಟ್ಟ ಖುಷಿಗೂ ತೋಳಿನಿಂದ ಬಳಸಿ ಮುದ್ದಿಸುತ್ತಿದ್ದ ಅಪ್ಪ, ಮಗಳು ತನ್ನ ಮಾತು ಮೀರಿದಾಗ ಮನಸೋ ಇಚ್ಛೆ ಬೈಯುತ್ತಿದ್ದ ಅಮ್ಮ, ಅಳಿಯನ ಮನೆಗೆ ಬಂದಾಗ ನೆಂಟರಂತೆ ವರ್ತಿಸುವುದು ಅಸ್ವಾಭಾವಿಕವಾದರೂ ಅನಿವಾರ್ಯವಾಗಿಬಿಟ್ಟಿದೆ.

ಇತ್ತೀಚಿನ ಹುಡುಗರು ಅತ್ತೆ, ಮಾವ, ಹೆಂಡತಿಯನ್ನು ಸ್ನೇಹಿತರಂತೆ ಕಂಡರೂ ತವರು ಮನೆಯಲ್ಲಿನ ಆ ಬಾಂಧವ್ಯ, ಬೆಸುಗೆ ಮತ್ತು ಹುಡುಗಾಟಿಕೆಗಳು ಅಳಿಯನ ಮನೆಯಲ್ಲಿರಲು ಸಾಧ್ಯವೇ?? ಇನ್ನು ತಮಾಶೆಯ ವಿಷಯವೆಂದರೆ ನಮ್ಮವ್ವ ತಾತನದು… ಅಂದರೆ ನನ್ನ ಅಮ್ಮನ ಪೋಷಕರು.

ಅದೆಷ್ಟೇ ಗೋಗರೆದರೂ ಒಂದು ಕಪ್ ಚಹಾ ಮಾಡಿಕೊಡದ ನಾನು ನನ್ನ ಗಂಡನ ಮನೆಗೆ ಬಂದ ಅವರನ್ನ ಕಾಫಿ ಕುಡಿತೀರಾ.. ಟೀ ಕುಡಿತೀರಾ.. ಅಂತ ಕೇಳಿದ್ದನ್ನ ನೆನೆಸಿಕೊಂಡರೆ ನಿಜಕ್ಕೂ ಕೃತಕವೆನಿಸುತ್ತೆ.

ನನ್ನ ಅಪ್ಪ-ಅಮ್ಮ ಅಳಿಯನೊಂದಿಗೆ ನಾಲ್ಕು ಮಾತನ್ನಾದರೂ ಆಡುತ್ತಾರೆ. ಆದರೆ ನಮ್ಮವ್ವ ತಾತ ನನ್ನ ಅಪ್ಪನನ್ನು ಕಂಡರೆ ಚೇಳು ಮೈಮೇಲೆ ಎಸೆದಂತೆ ಆಡುತ್ತಿದ್ದರು. ಅಳಿಯ ಮನೆಗೆ ಕಾಲಿಡುತ್ತಿದ್ದ ಹಾಗೆ ಚದುರಿಕೊಂಡು ಓಡಿ ಹೋಗಿ ಅವ್ವ ನಡುಮನೆ ಸೇರಿಕೊಂಡರೆ ತಾತ ಮನೆಯಿಂದಲೇ ಪರಾರಿಯಾಗುತ್ತಿದ್ದದ್ದು ಹಾಸ್ಯಾಸ್ಪದವೇ ಸರಿ.

ಬೇಸಿಗೆ ರಜೆ ಬಂದರೆ ಸಾಕು ನಾನು ಅಮ್ಮನ ತವರೂರಿಗೆ ದೌಡಾಯಿಸುತ್ತಿದ್ದೆ. ಅಂಥದ್ದೇ ಒಂದು ಬೇಸಿಗೆ ರಜೆಯಲ್ಲಿ ತಿಂಗಳೆಲ್ಲ ಅಲ್ಲೇ ಟಿಕಾಣಿ ಹೂಡಿದ್ದ ನನ್ನ ಬಿಟ್ಟಿರಲಾಗದ ಅಪ್ಪ ಅಚಾನಕ್ಕಾಗಿ ನೋಡಲೆಂದು ಊರಿಗೆ ಬಂದಿದ್ದಾರೆ. ತಾತ ಮಾವಂದಿರು ಹೊಲಕ್ಕೆ ಹೋಗಿದ್ದು ಮನೆಯಲ್ಲಿದ್ದು ಅವ್ವ ಮಾತ್ರ. ಅಲ್ಲೇ ಹಜಾರದ ಬಾಗಿಲ ಬಳಿ ಮೊರದಲ್ಲಿ ರಾಗಿ ಕೇರುತ್ತಾ ಕುಳಿತಿದ್ದ ಅಳಿಯನ ನಿರೀಕ್ಷೆ ಇಲ್ಲದವಳ ಮುಂದೆ ಪ್ಯಾಂಟ್ ತೊಟ್ಟ ಎರಡು ಕಾಲುಗಳು ಕಾಣಿಸಿಕೊಂಡಿವೆ. ಮನೆಯ ಹೊಸಲು ಸ್ಪರ್ಶಿಸುವ ಪ್ಯಾಂಟುಧಾರನ ಪಾದಗಳೆಂದರೆ ಅದು ಅಳಿಯನೊಬ್ಬನದ್ದೆ ಎಂಬುದನ್ನು ಗ್ರಹಿಸಿದ ಅವಳು ತಲೆಯೆತ್ತಿಯೂ ನೋಡದೆ ಕೈಯಲ್ಲಿದ್ದ ಮೊರವನ್ನು ಗಾಬರಿಯಿಂದ ಬಿಸಾಡಿ ಓಡಿ ಹೋಗಿ ನಡುಮನೆಯನ್ನು ಸೇರಿಕೊಂಡಿದ್ದಳು. ಸ್ನೇಹಿತೆಯರೊಂದಿಗೆ ಊರು ತಿರುಗಲು ಹೋಗಿ ಒಂದು ತಾಸಿನ ನಂತರ ಮನೆಗೆ ಬಂದ ನನಗೆ ಮನೆಯನ್ನು ಆವರಿಸಿದ್ದ ನಿಶ್ಯಬ್ದ ಒಂದು ರೀತಿಯ ಭಯ ಹುಟ್ಟಿಸಿತ್ತು. ಇದೇನಪ್ಪಾ ಇಷ್ಟು ನಿಶ್ಯಬ್ದ ಎಂದು ಕಳ್ಳ ಹೆಜ್ಜೆ ಹಾಕುತ್ತಾ ಮೆಲ್ಲಗೆ ಅವ್ವಾ ಅವ್ವಾ ಎನ್ನುತ್ತಾ ಒಳಹೊಕ್ಕರೆ ರೂಮಿನ ಮಂಚದ ಮೇಲೆ ಅಪ್ಪ ಅರೆ ಮುಚ್ಚಿದ ಕಂಗಳಲ್ಲಿ ತೂಕಡಿಸುತ್ತಾ ಕುಳಿತಿದ್ದರು. ರೂಮಿನ ಬಾಗಿಲ ಬಳಿ ಇದ್ದ ಒಂದು ಮೇಜಿನ ಮೇಲೆ ತಣ್ಣಗಾದ ಕಾಫಿ ಲೋಟ ಮತ್ತು ಒಂದು ತಟ್ಟೆಯ ತುಂಬಾ ಬೋಂಡಾ ಇನ್ನೊಂದು ತಟ್ಟೆಯ ತುಂಬಾ ಕಡಲೆಪುರಿ ಇಡಲಾಗಿತ್ತು.

ನಾನು ಸಹಜವಾಗಿ ಅಪ್ಪನನ್ನು ಕೂಗಿ ಯಾಕೆ ಏನನ್ನು ತಿಂದಿಲ್ಲ ಎಂದು ಕೇಳಿದರೆ ಅವರಿಗೆ ಅರ್ಧ ತಾಸಿನ ಹಿಂದೆಯೇ ನಮ್ಮವ್ವ ಅದನ್ನೆಲ್ಲಾ ಇಟ್ಟು ಹೋಗಿರುವುದು ಗೊತ್ತೇ ಇರಲಿಲ್ಲ. ಒಂದಷ್ಟು ಹೊತ್ತು ನನ್ನೊಟ್ಟಿಗೆ ಹರಟಿ, ಅವಳು ಮತ್ತೊಮ್ಮೆ ಮಾಡಿಕೊಟ್ಟ ಕಾಫಿ ಕುಡಿದು ಹೊರಡುವಾಗ ತನ್ನ ಅತ್ತೆಗೆ ಹೇಳಿ ಹೋಗೋಣವೆಂದು ನಡು ಮನೆಯತ್ತ ಕಾಲಿಡುತ್ತಿದ್ದ ಅಳಿಯನನ್ನು ಕಂಡು ಅವಳು ಅಲ್ಲಿಂದ ಛಂಗನೆ ನೆಗೆದು ಅಡುಗೆ ಮನೆ ಸೇರಿಕೊಂಡದ್ದನ್ನು ಕಂಡ ನಾನು ಹೊಟ್ಟೆ ಹುಣ್ಣಾಗುವವರೆಗೂ ನಕ್ಕಿದ್ದೇನೆ.

ತನ್ನ ಮನೆಗೆ ಬಂದ ಅಳಿಯನ ಮುಂದೆ ಹೀಗೆ ನಾಚಿಕೊಳ್ಳುವವಳು ಅವರ ಮನೆಗೆ ಹೋಗಿದ್ದಾಗ ಅದೇನೆಲ್ಲಾ ಅವಾಂತರ ಮಾಡಿಕೊಂಡಿದ್ದಳೋ. ಇವತ್ತಿಗೂ ಅವಳು ತನ್ನ ಅಳಿಯನ ಮುಖವನ್ನು ಸರಿಯಾಗಿ ನೋಡಿಲ್ಲವೆಂದರೆ ಅದು ವಿಪರ್ಯಾಸವೊ ಹಾಸ್ಯಾಸ್ಪದವೋ ತಿಳಿಯುತ್ತಿಲ್ಲ.

ನನ್ನ ಅಮ್ಮ ಅವ್ವನಷ್ಟಲ್ಲದೇ ಇದ್ದರೂ ಇಂದಿಗೂ ನನ್ನ ಗಂಡನ ಮುಂದೆ ಕುಳಿತುಕೊಳ್ಳುವುದಿಲ್ಲ, ಎಂತಹ ಅನಿವಾರ್ಯವೇ ಇರಲಿ ಅವರ ಬೈಕ್ ಹತ್ತುವುದಿಲ್ಲ ಮತ್ತು ಅಳಿಯ ಕಾರ್ ಓಡಿಸುವಾಗ ಮುಂದಿನ ಸೀಟ್‌ನತ್ತಾ ನೋಡುವುದು ಪಾಪವೆಂಬಂತೆ ಆಡುವಾಗೆಲ್ಲ ಹುಬ್ಬುಗಳ ಗಂಟಿಕ್ಕಿ ನಿಟ್ಟುಸಿರು ಬಿಡುತ್ತಾ ಕೇಳುತ್ತೇನೆ “ನೀವೆಲ್ಲ ಸುಧಾರಿಸುವುದು ಯಾವಾಗ?” ಎಂದು.

ಹನ್ನೆರಡು ವರ್ಷದ ಹಿಂದೆ ನನಗೆ ಮುಟ್ಟು ನಿಂತ ವಿಷಯ ಕೇಳಿದ ಹೆತ್ತವರು ಆ ತಕ್ಷಣವೇ ಸಡಗರದಿಂದ ಹೊರಟು ನಾವಿದ್ದ ತಾಳವಡಿ ಮನೆಗೆ ಬಂದುಬಿಟ್ಟರು. ಅತಿಯಾದ ಸುಸ್ತಾಗುತ್ತಿದ್ದ ನನಗೇ ಅಡುಗೆ ಮಾಡಲಾಗದೆ ಅಮ್ಮನನ್ನು ಒಂದು ವಾರ ಅಲ್ಲೇ ಉಳಿಸಿಕೊಂಡಿದ್ದೆ. ಆಗ ಅತ್ತೆ ಮತ್ತು ಅಳಿಯನ ಪೀಕಲಾಟಗಳ ನೋಡಿಕೊಂಡು ನಗುತ್ತಲೇ ಅರ್ಧ ಹುಷಾರಾಗಿಬಿಟ್ಟಿದ್ದೆ. ಒಬ್ಬರಿಗಷ್ಟೇ ಅವಕಾಶ ಕಲ್ಪಿಸಿಕೊಟ್ಟಿದ್ದ ಪುಟ್ಟ ಅಡುಗೇ ಮನೆಯಲ್ಲಿ ಅಮ್ಮನಿಗೆ ಯಾವುದು ಎಲ್ಲಿದೆ ಎಂಬುದು ಗೊತ್ತಿಲ್ಲ… ಹೇಳಲು ಅಳಿಯ ಒಳ ಹೋದರೆ ಇವಳು ಆಚೆ ಅವರು ಈಚೆ… ಇವಳು ಒಳಗೆ ಮತ್ತೇನೋ ಬೇಕಾದಾಗ ಮತ್ತದೇ ಪೀಕಲಾಟ. ನನಗಿಲ್ಲಿ ಮುಸಿಮುಸಿ ನಗು.

ಆ ಒಂದು ವಾರದಲ್ಲಿ ನನಗೂ ಗಂಡನಿಗೂ ಕೆಲವು ಭಿನ್ನಾಭಿಪ್ರಾಯ ಬಂದರೂ ಅಮ್ಮ ತಲೆ ಹಾಕದೆ ಮಗಳನ್ನು ವಹಿಸಿಕೊಳ್ಳದೆ ನೆಂಟರಂತೆ ಇದ್ದದ್ದು ಆಗ ನನಗೆ ಕೋಪ ತರಿಸಿತ್ತಾದರೂ ಈಗ ಅವಳು ಹಾಗೆ ಮಾಡಿದ್ದೆ ಸರಿ ಎನಿಸುತ್ತದೆ.

ಅದೇನೇ ಇರಲಿ ಇದೆಲ್ಲಾ ವಿಚಿತ್ರ ಅನಿಸಿದರು ಅತ್ತೆ ಮಾವನ ಜೊತೆ ಅಳಿಯನಿಗೆ ಸಲುಗೆ ಇಲ್ಲದಿರುವುದು ಮತ್ತು ಮಗಳ ಮನೆಗೆ ಬಂದ ಅಪ್ಪ ಅಮ್ಮ ನೆಂಟರಂತೆ ಇದ್ದು ಮಗಳು ಅಳಿಯನ ವೈಮನಸುಗಳ ನಡುವೆ ಹೋಗದೆ ಇರುವುದು ಅದೆಷ್ಟೋ ಅನಾಹುತಗಳನ್ನು ತಪ್ಪಿಸಿದೆ ಅನ್ನುವುದಂತೂ ಸತ್ಯ. ಹೆತ್ತವರು ಮಗಳಿಗೆ ನೆಂಟರಾದಾಗ ಆಗುವ ಕಸಿವಿಸಿಗಳನ್ನೆಲ್ಲಾ ಹೆಣ್ಣು ಸಹಿಸಿಕೊಳ್ಳಲೇಬೇಕು.