ನನ್ನ ಆಸ್ಟ್ರೇಲಿಯಾದ ಆರಂಭದ ದಿನಗಳಲ್ಲಿ ಒಬ್ಬ ಹೆಂಗಸಾಗಿ ಮೊದಲ ಬಾರಿಗೆ ‘ಅಯ್ಯೋ, ಅವನು/ಅವರು ನನ್ನ ದೇಹದ ಮೇಲೆ ಕೈಹಾಕಬಹುದು, ಬೇಕಂತಲೇ ಮೈ ತಾಕಿಸಬಹುದು, ಅಲ್ಲಲ್ಲಿ ಮುಟ್ಟಬಹುದು, ಕೆಟ್ಟದಾಗಿ ಅಂಗಾಂಗಗಳನ್ನು ದಿಟ್ಟಿಸಬಹುದು, ಅಶ್ಲೀಲವಾಗಿ ಮಾತನಾಡಬಹುದು’ ಎಂಬ ಆತಂಕವಿಲ್ಲದೆ, ಅನುಮಾನವಿಲ್ಲದೆ ಆರಾಮಾಗಿ ವಲೊಂಗೊಂಗ್ ಬೀದಿಗಳಲ್ಲಿ, ಯೂನಿವರ್ಸಿಟಿಯಲ್ಲಿ ಓಡಾಡುವುದು ನನಗೆ ವಿಪರೀತ ಖುಷಿ ಕೊಟ್ಟಿತ್ತು. ಯಾರೊಬ್ಬರ ಜಡ್ಜ್ ಮೆಂಟ್ ಇಲ್ಲದ ಹೊಸರೀತಿಯ ಸ್ವಾತಂತ್ರ್ಯದ ಭಾವನೆಯನ್ನು ಎರಡು ವರ್ಷ ಚೆನ್ನಾಗಿ ಅನುಭವಿಸಿ ಮೊದಲ ಬಾರಿ ವಾಪಸ್ ನನ್ನೂರು ಬೆಂಗಳೂರಿಗೆ ಬಂದರೆ ಪುನಃ ಅದೇ ಗೋಳಿನ ಅನುಭವ!
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಅಂಕಣ.

ಕೆಲವರ್ಷಗಳ ಹಿಂದೆ ನಡೆದ ಘಟನೆ ಇದು. ಯೂನಿವರ್ಸಿಟಿಯ ಮುಖ್ಯದ್ವಾರದ ಮುಂದೆ ನಾನು ಮತ್ತು ಮಕ್ಕಳು ಟ್ಯಾಕ್ಸಿಗಾಗಿ ಕಾಯುತ್ತಿದ್ದೆವು. ಸಂಜೆ ಐದು ಗಂಟೆಯಾಗಿತ್ತು. ಚಳಿಗಾಲದ ಕತ್ತಲು ಅದೇನೋ ಅವಸರದಿಂದ ಎಲ್ಲವನ್ನೂ ಮಸುಕಾಗಿಸಲು ಹೊರಟಂತಿತ್ತು. ಸೆಮಿಸ್ಟರ್ ನಡುವಿನ ರಜಾದಿನಗಳಾದ್ದರಿಂದ ಅಲ್ಲೊಬ್ಬರು, ಇಲ್ಲೊಬ್ಬರು ಇಣುಕಿ ಮಾಯವಾಗುತ್ತಿದ್ದರು. ನನ್ನ ಚಡಪಡಿಕೆ ಹೆಚ್ಚುತ್ತಿತ್ತು. ಆಗ ಇದ್ದಕ್ಕಿದ್ದಂತೆ ಆ ಹೆಂಗಸು ಹೇಳಿದ ಮಾತು ನನ್ನನ್ನು ತಬ್ಬಿಬ್ಬು ಮಾಡಿ ಕಕ್ಕಾಬಿಕ್ಕಿಯಾಗಿಸಿತು. ಅವಳು ಅಲ್ಲಿ ಕುಳಿತಿದ್ದಳು ಎನ್ನುವುದು ಆಗಷ್ಟೇ ನನ್ನ ಪೂರ್ಣ ಅರಿವಿಗೆ ಬಂತು ಎನ್ನುವ ಸತ್ಯ ಗಾಬರಿಗೊಳಿಸಿತ್ತು. ಅವಳ ಇನ್ನೊಂದು ಕಡೆ ನಿಂತು ತನ್ನ ಫೋನ್ ನೋಡುತ್ತಿದ್ದ ಹುಡುಗಿ ಚಕ್ಕನೆ ಕತ್ತು ತಿರುಗಿಸಿ ನಮ್ಮ ಕಡೆ ನೋಡಿದಳು.

ಹೆಂಗಸು ಹೇಳಿದ I was raped yesterday ಎಂಬ ಮಾತನ್ನ ಕೇಳಿಸಿಕೊಂಡಿದ್ದ ಮಕ್ಕಳು ನನ್ನ ಮುಖ ನೋಡಿದರು. ಕ್ಷಣಮಾತ್ರದಲ್ಲೇ ಅವರಿಂದ ಬರುವ ಪ್ರಶ್ನೆಯನ್ನ ಎದುರಿಸುವ ಸಿದ್ಧತೆಯನ್ನು ಮನಸ್ಸಿನಲ್ಲಿ ಮಾಡಿಕೊಳ್ಳುತ್ತಲೇ ನಾನು ಅವಳಿಗೆ ಉತ್ತರಿಸಿದೆ – “ಪೊಲೀಸರನ್ನು ಸಂಪರ್ಕಿಸಿದ್ದೀಯಾ? ಇಲ್ಲಿನ ಸೆಕ್ಯೂರಿಟಿಯವರಿಗೆ ಹೇಳಿದೆಯಾ? ಅದರ ಬಗ್ಗೆ ನಿನ್ನ ಕುಟುಂಬದವರಿಗೋ ಅಥವಾ ಸ್ನೇಹಿತರಿಗೋ ತಿಳಿಸಿದೆಯಾ? ಡಾಕ್ಟರ್ ಬಳಿ ಹೋದೆಯಾ?” ಅವಳು “ಪೊಲೀಸರಿಗೆ ಹೇಳಿದೆ” ಅಂದಳು. ಮುಂದಿನ ಮಾತು ಬೆಳೆಯುವಷ್ಟರಲ್ಲಿ ನಮ್ಮ ಟ್ಯಾಕ್ಸಿ ಬಂದು ಗಡಿಬಿಡಿಯಲ್ಲಿ ಬ್ಯಾಗ್ ಗಳೆಲ್ಲವನ್ನೂ ತುಂಬಿಕೊಂಡು ನಾವು ಹೊರಟುಹೋದೆವು. ಅವಳ ಮ್ಲಾನ ಮುಖ, ಚೇತನವೇ ಇಲ್ಲದಂತೆ ಕುಳಿತಿದ್ದ ಭಂಗಿ, ಯಾರನ್ನೂ ನೇರವಾಗಿ ದೃಷ್ಟಿಸದೇ ಎಲ್ಲೋ ಶೂನ್ಯದಲ್ಲಿ ಕಣ್ಣನ್ನ ನೆಟ್ಟು ಅವಳು ತಣ್ಣನೆ ದನಿಯಲ್ಲಿ ಆ ಮಾತನ್ನು ಹೇಳಿದ ಪರಿ-ಎಲ್ಲವೂ ಮಬ್ಬುಗತ್ತಲಿನ ಸಂಜೆಯ ನಿಶ್ಯಬ್ದ ವಾತಾವರಣದಲ್ಲಿ ಅಯೋಮಯವಾಗಿ ಕಂಡಿತ್ತು. ಅವಳು ಹೇಳಿದ ಮಾತು ನಿಜವೋ ಸುಳ್ಳೋ ಎಂದು ನಾನು ಚಿಂತಿಸಲಿಲ್ಲ.

ನನ್ನ ಜೀವನದಲ್ಲಿ ಒಬ್ಬ ಹೆಂಗಸು ಬಾಯಿಬಿಟ್ಟು ನೇರವಾಗಿ “ನಾನು ರೇಪ್ ಗೊಳಗಾಗಿದ್ದೀನಿ,” ಅಂತ ಹೇಳಿದ್ದು, ಅದನ್ನ ನಾನು ಕೇಳಿದ್ದು ಅದೇ ಮೊದಲ ಬಾರಿ. ಎಲ್ಲಾ ಬಿಟ್ಟು ಆಸ್ಟ್ರೇಲಿಯಾದಲ್ಲಿ ಆ ಕ್ಷಣ ಬರಬಹುದು ಎಂಬ ಕಲ್ಪನೆ ಕನಸಲ್ಲೂ ಕೂಡ ಇರಲಿಲ್ಲ. ವಲೊಂಗೊಂಗ್ ಪಟ್ಟಣದಲ್ಲಿ ವಾಸವಾಗಿದ್ದಾಗ ಪರಿಚಯದ ಒಬ್ಬರು ಒಂದು ಸಂದರ್ಭದಲ್ಲಿ ಬಹಳ ಸಿಟ್ಟಿನಿಂದ ಹಾರಾಡಿದ್ದರು. ಮಧ್ಯಪೂರ್ವ ದೇಶದ ಕುಟುಂಬಗಳಿಗೆ ಸೇರಿದ್ದ ಕೆಲ ಯುವಕರು ಸಿಡ್ನಿ ನಗರದಲ್ಲಿ ಇಬ್ಬರು ಹುಡುಗಿಯರನ್ನ ರೇಪ್ ಮಾಡಿದ್ದರು. ಅದು ದೊಡ್ಡ ಸುದ್ದಿಯಾಗಿ ಸ್ಥಳೀಯ ಸಮುದಾಯಗಳಲ್ಲಿ ಬಹಳ ಗಲಾಟೆಯ ವಿಷಯವಾಗಿ, ಒಬ್ಬರ ಮೇಲೊಬ್ಬರು ಸಾಕಷ್ಟು ರಾಡಿಯನ್ನ ಚೆಲ್ಲಾಡಿದ್ದರು. ನನ್ನ ಪರಿಚಯದ ಹೆಂಗಸಿಗೆ ಹದಿಹರೆಯದ ಮಗಳಿದ್ದಳು. ಹಾಗಾಗಿ ಅವರ ಕೋಪ ಇನ್ನೂ ಕೆಂಪು ಖಾರವಾಗಿತ್ತು. ಅವರು ಹೇಳಿದ್ದರು- “ಹುಡುಗಿಯರು ಎಂಬ ಕಾರಣದಿಂದಲೇ ಸಲಿಗೆಯಿಂದ ಅವರನ್ನು ಮುಟ್ಟಲು ಆ ದುರಳರಿಗೆ ಅದೆಷ್ಟು ಧೈರ್ಯ ಬಂತು?! ನಮ್ಮ ಸಂಸ್ಕೃತಿಯಲ್ಲಿ ಮತ್ತೊಬ್ಬರ ಮಕ್ಕಳನ್ನು ಅವರ ಅನುಮತಿಯಿಲ್ಲದೆ ನಾವು ಮುಟ್ಟುವುದಿಲ್ಲ.”

ನಾನು ಇನ್ನೂ ಆಗಷ್ಟೇ ಆಸ್ಟ್ರೇಲಿಯನ್ ಸಂಸ್ಕೃತಿ ಅಂದರೆ ಇಂಗ್ಲೀಷ್ ಭಾಷೆ ಪ್ರಭಾವದ, ಬಿಳಿಯರ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ಕಲಿಯಲಾರಂಭಿಸಿದ್ದೆ. ಅವರಲ್ಲಿ ಹಲೋ ಅಥವಾ ಹಾಯ್ ಹೇಳುತ್ತಾ, ಪರಸ್ಪರ ಪರಿಚಯ ಚೆನ್ನಾಗಿದ್ದರೆ, ವಿಶ್ವಾಸವಿದ್ದರೆ ಅಥವಾ ಸ್ನೇಹ ಬಲಿತಿದ್ದರೆ ಚಿಕ್ಕದಾಗಿ ತೋಳುಗಳನ್ನು ಚಾಚಿ ಅವರನ್ನು ಬಳಸಿ, ಕೆನ್ನೆಯ ಮೇಲೊಂದು ಚಿಕ್ಕ ಮುತ್ತು ಕೊಟ್ಟಂತೆ ಮಾಡುತ್ತಾರೆ. ಪರಿಚಯವೋ, ವಿಶ್ವಾಸವೋ, ಸ್ನೇಹವೋ ಅಥವಾ ಬಂಧುತ್ವದ ಬಂಧ ಇನ್ನೂ ಹೆಚ್ಚಿನ ಮಟ್ಟದ್ದಾದರೆ ಒಬ್ಬರನೊಬ್ಬರು ಇನ್ನೂ ಬಳಸಿ ಹಿಡಿಯುವುದು, ಎರಡೂ ಕೆನ್ನೆಗೂ ಒತ್ತಿ ಮುತ್ತು ಕೊಡುವುದು ಇರುತ್ತದೆ. ಅದೆಲ್ಲದಕ್ಕೆ ಸೂಚ್ಯವಾಗಿ ಪರಸ್ಪರ ಒಪ್ಪಿಗೆ ಮತ್ತು ಅಭಿಮತ ಇರಬೇಕು.

ಅಪರಿಚಿತರಾಗಿದ್ದು ಅಕಸ್ಮಾತ್ ನಮ್ಮ ಕೈ ಅವರ ಮೈ ತಾಕಿದರೆ, ಅರಿವಿಲ್ಲದೆ ನಾವು ಅವರನ್ನ ಮುಟ್ಟಿದರೆ ತಕ್ಷಣ ಸಾರಿ (sorry) ಗಳ ವಿನಿಮಯವಾಗುತ್ತದೆ. ಸಾರೀ ಎನ್ನುವುದನ್ನ ಒಪ್ಪಿಕೊಳ್ಳುವವರು ಅದು ನಿಜವಾದ ಸಾರಿ ಭಾವನೆಯೋ ಅಥವಾ ಬೇಕೆಂತಲೇ ಮುಟ್ಟಿದ್ದೋ ಅನ್ನುವುದನ್ನ ಮುಟ್ಟಿದವರ ಮುಖವನ್ನು ನೋಡಿ ನಿರ್ಧರಿಸುತ್ತಾರೆ. ಆಗ ಮೃದುವಾದ no worries, that’s alright ಅಥವಾ ಅಸಮಾಧಾನದ watch it, watch your move, look around ಎಂಬಂಥ ಪ್ರತಿಕ್ರಿಯೆಗಳು ಬರುತ್ತವೆ. ಅದಕ್ಕೆ ತಕ್ಕಂತೆ ಮುಖಭಾವಗಳು ಮೃದು, ಮೆದು, ಮಿಶ್ರ, ತೀಕ್ಷ್ಣ, ಕಟು, ಕೆಕ್ಕರಿಸುವುದು, ಕಣ್ಣು ದೊಡ್ಡದು ಮಾಡುವುದು, ವಕ್ರಮುಖ ಮಾಡುವುದು ಇತ್ಯಾದಿ ಜೊತೆಯಾಗುತ್ತವೆ. ಅಷ್ಟೆಲ್ಲಾ ಕಲಿಯುವಷ್ಟರಲ್ಲಿ ನನ್ನ ಒಂದು ಪಾದ ಗೋರಿಯಲ್ಲಿರುತ್ತದೆ (one foot in the grave) ಎಂದು ನಾನು ತಮಾಷೆ ಮಾಡುತ್ತಿದ್ದೆ. ಆದರೆ ಒಬ್ಬರನ್ನೊಬ್ಬರು ಮುಟ್ಟುವುದು ಸೂಕ್ಷ್ಮದ ವಿಷಯ ಅನ್ನುವುದಂತೂ ಮನದಟ್ಟಾಗಿತ್ತು.

ನನ್ನ ಆಸ್ಟ್ರೇಲಿಯಾದ ಆರಂಭದ ದಿನಗಳಲ್ಲಿ ಒಬ್ಬ ಹೆಂಗಸಾಗಿ ಮೊದಲ ಬಾರಿಗೆ ‘ಅಯ್ಯೋ, ಅವನು/ಅವರು ನನ್ನ ದೇಹದ ಮೇಲೆ ಕೈಹಾಕಬಹುದು, ಬೇಕಂತಲೇ ಮೈ ತಾಕಿಸಬಹುದು, ಅಲ್ಲಲ್ಲಿ ಮುಟ್ಟಬಹುದು, ಕೆಟ್ಟದಾಗಿ ಅಂಗಾಂಗಗಳನ್ನು ದಿಟ್ಟಿಸಬಹುದು, ಅಶ್ಲೀಲವಾಗಿ ಮಾತನಾಡಬಹುದು’ ಎಂಬ ಆತಂಕವಿಲ್ಲದೆ, ಅನುಮಾನವಿಲ್ಲದೆ ಆರಾಮಾಗಿ ವಲೊಂಗೊಂಗ್ ಬೀದಿಗಳಲ್ಲಿ, ಯೂನಿವರ್ಸಿಟಿಯಲ್ಲಿ ಓಡಾಡುವುದು ನನಗೆ ವಿಪರೀತ ಖುಷಿ ಕೊಟ್ಟಿತ್ತು. ಯಾರೊಬ್ಬರ ಜಡ್ಜ್ ಮೆಂಟ್ ಇಲ್ಲದ ಹೊಸರೀತಿಯ ಸ್ವಾತಂತ್ರ್ಯದ ಭಾವನೆಯನ್ನು ಎರಡು ವರ್ಷ ಚೆನ್ನಾಗಿ ಅನುಭವಿಸಿ ಮೊದಲ ಬಾರಿ ವಾಪಸ್ ನನ್ನೂರು ಬೆಂಗಳೂರಿಗೆ ಬಂದರೆ ಪುನಃ ಅದೇ ಗೋಳಿನ ಅನುಭವ! ಅವೆನ್ಯೂ ರಸ್ತೆಯಲ್ಲಿ ನಡೆಯುತ್ತಿದ್ದಾಗ ನನ್ನ ಎದೆಯ ಮೇಲೆ ಕೈಹಾಕಿ ಬಿರುಸಾಗಿ ನಡೆದುಹೋದ ಒಬ್ಬನನ್ನ ಬೆನ್ನಟ್ಟಿ ಅವನ ಬೆನ್ನಿನ ಮೇಲೆ ಹೊಡೆದಿದ್ದೆ.

ಆಸ್ಟ್ರೇಲಿಯಾದ ಆರಂಭದ ದಿನಗಳಲ್ಲಿ ಒಬ್ಬ ಹೆಂಗಸಾಗಿ ಮೊದಲ ಬಾರಿಗೆ ‘ಅಯ್ಯೋ, ಅವನು/ಅವರು ನನ್ನ ದೇಹದ ಮೇಲೆ ಕೈಹಾಕಬಹುದು, ಬೇಕಂತಲೇ ಮೈ ತಾಕಿಸಬಹುದು, ಅಲ್ಲಲ್ಲಿ ಮುಟ್ಟಬಹುದು, ಕೆಟ್ಟದಾಗಿ ಅಂಗಾಂಗಗಳನ್ನು ದಿಟ್ಟಿಸಬಹುದು, ಅಶ್ಲೀಲವಾಗಿ ಮಾತನಾಡಬಹುದು’ ಎಂಬ ಆತಂಕವಿಲ್ಲದೆ, ಅನುಮಾನವಿಲ್ಲದೆ ಆರಾಮಾಗಿ ವಲೊಂಗೊಂಗ್ ಬೀದಿಗಳಲ್ಲಿ, ಯೂನಿವರ್ಸಿಟಿಯಲ್ಲಿ ಓಡಾಡುವುದು ನನಗೆ ವಿಪರೀತ ಖುಷಿ ಕೊಟ್ಟಿತ್ತು.

ಅವನಿಗೆ ಹೊಡೆದ ಮೇಲೆ ನನಗೆ ಸೀಟಿ ಹಾಕುವಷ್ಟು ಸಂತೋಷವಾಗಿತ್ತು. ಹದಿಹರೆಯದಲ್ಲಿ ಒಮ್ಮೆ ಧರ್ಮಸ್ಥಳ ದೇವಸ್ಥಾನಕ್ಕೆ ಹೋಗಿದ್ದೆ. ಅಲ್ಲಿ ಮುಖ್ಯದೇವರ ಗರ್ಭಗುಡಿಯ ಹಿಂದೆ ಪುಟ್ಟ ಗುಡಿಗಳಲ್ಲಿ ಇರುವ ದೇವರುಗಳನ್ನ ನೋಡಿ ನಮಸ್ಕರಿಸಿ ಪೂಜಾರಿ ಕೊಡುವ ಹೂವು, ಕುಂಕುಮ ಪಡೆದು ಸಾಗುತ್ತಿದ್ದೆ. ಹಾಗೆ ಮಾಡುತ್ತಾ ಒಂದು ಕಡೆ ನಮಿಸಿ, ಹೂವು, ಕುಂಕುಮಕ್ಕಾಗಿ ಕೈ ಚಾಚಿದೆ. ದೇವರಿಗೆ ಅರ್ಪಿಸಿ ಪೂಜೆಮಾಡಿದ್ದ ಹೂವು, ಕುಂಕುಮವನ್ನು ಹಿಡಿದ ಕಾಮುಕ ಪೂಜಾರಿಯ ಕೈ ನೇರ ನನ್ನ ಬಲಸ್ತನದ ಮೇಲೆ ಕೂತು ಸ್ತನವನ್ನು ಅಮುಕಿತು. ತತ್ ಕ್ಷಣದ ಪ್ರತಿಕ್ರಿಯೆಯಾಗಿ ಹಿಂದೆ ಸರಿದು ಆ ಹೂ, ಕುಂಕುಮವನ್ನು ಅವನ ಕೈಯಿಂದ ಬಿಡಿಸಿಕೊಂಡು ಅವನ ಮುಖವನ್ನ ದುರುಗುಟ್ಟಿಕೊಂಡು ನೋಡಿದೆ. ಅವನ ಬಾಯಲ್ಲಿ ‘ಹೂಂ, ಮುಂದೆ ಹೊರಡು,’ ಎಂಬ ಆಜ್ಞೆ. ಹೆಚ್ಚಿನ ಹುಡುಗಿಯರಿಗೆ ದುರುಗುಟ್ಟುವುದಷ್ಟೇ ಆಗ ಆಗುತ್ತಿದ್ದದ್ದು. ಪ್ರತಿದಿನವೂ ನಮ್ಮ ಮೈಪೂರ್ತಿ ಹರಿವ ಅವರ ನೋಟಗಳನ್ನ, ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ಮೈ ತಡವುತ್ತಾ, ಅಂಗಾಂಗ ಮುಟ್ಟುವ ಕೇಡಿಗರನ್ನ ಎದುರಿಸಿ ನಮ್ಮನ್ನು ನಾವೇ ರಕ್ಷಿಸಿಕೊಳ್ಳುತ್ತಾ ಬದುಕುವುದು ನಿತ್ಯಜೀವನವಾಗಿತ್ತು. ಅಂತಹ ನರಕದಿಂದ ಹೋಗಿ ಆತಂಕವಿಲ್ಲದೆ ವಲೊಂಗೊಂಗ್ ನಲ್ಲಿ ನಡೆದಾಡಿದ ಖುಷಿಯನ್ನ ಅನುಭವಿಸಿದ್ದು ಹೇಗೆ ಮರೆಯಲಿ!

ಹಾಗೆ ನೋಡಿದರೆ ಭಾರತದಲ್ಲಿ ಜನರು ಹೆಣ್ಣುಮಕ್ಕಳನ್ನ, ಹುಡುಗಿಯರನ್ನ ಮತ್ತು ಹೆಂಗಸರನ್ನ ಲೀಲಾಜಾಲವಾಗಿ ಯಾವುದೇ ಹಿಂಜರಿಕೆಯಿಲ್ಲದೆ ಮುಟ್ಟುತ್ತಾರೆ. ಅದಕ್ಕೆ ಯಾವ ಸಂಸ್ಕೃತಿಯೂ,ಧರ್ಮವೂ, ಭಾಷೆಯೂ, ಅಧಿಕಾರವೂ, ಅಂತಸ್ತೂ, ವಿದ್ಯೆಯೂ, ಅದೆಲ್ಲಾ ಯಾಕೆ, ವಯಸ್ಸೂ ಕೂಡ ಅಡ್ಡಿ ಬರುವುದಿಲ್ಲ. ಹೆಣ್ಣಿನ ದೇಹದ ಮೇಲೆಲ್ಲಾ ಕಣ್ಣಾಡಿಸುವುದು, ಕೈಯಾಡಿಸುವುದು ಮತ್ತು ಹೆಣ್ಣುದೇಹವನ್ನು ಇಷ್ಟಾನುಸಾರವಾಗಿ ಮುಟ್ಟಿ ಬಳಸುವುದು ರೂಢಿಯ ವಿಷಯ. ಮರ್ಯಾದಸ್ತರು ಇದ್ದರೂ ಅವರಿಗಿಂತ ಜಾಸ್ತಿ ಇರುವುದು ಕೇಡಿಗ ಪಿಶಾಚಿಗಳೇ!

ಕರ್ನಾಟಕದಲ್ಲಿ ತೊಂಭತ್ತರ ದಶಕದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಗಮನಾರ್ಹ ಕೆಲಸಗಳು ನಡೆಯಲಾರಂಭಿಸಿದಾಗ ಮಕ್ಕಳ ಹಕ್ಕುಗಳನ್ನು ಅನುಮೋದಿಸುತ್ತಿದ್ದವರು “ದಯವಿಟ್ಟು ಮಕ್ಕಳನ್ನು ಇಷ್ಟಾನುಸಾರ ಮುಟ್ಟಬೇಡಿ, ಮುತ್ತುಕೊಡಬೇಡಿ, ಎಳೆದಾಡಬೇಡಿ, ಕೆನ್ನೆಯನ್ನು ಚಿವುಟಬೇಡಿ, ಮಕ್ಕಳಿಗೆ ನೋವಾಗುತ್ತದೆ,” ಎಂದೆಲ್ಲಾ ಹೇಳಿದರೆ ಜನ ಕೆಕ್ಕರಿಸಿ ನೋಡುತ್ತಿದ್ದರು. ಎಲ್ಲರೂ ಸಲೀಸಾಗಿ ಹಾಗೆಲ್ಲಾ ಮಾಡುತ್ತಿದ್ದರು. ಈಗ #metoo ಅಭಿವ್ಯಕ್ತಿಯಲ್ಲಿ ಹೆಂಗಸರು ಮತ್ತೊಮ್ಮೆ ಬಾಯಿ ತೆರೆದು, ದನಿ ಎತ್ತಿ ತಾವುಗಳು ಅನುಭವಿಸುತ್ತಿರುವ ನೋವು, ಅವಮಾನಗಳ ಬಗ್ಗೆ ಮಾತನಾಡುತ್ತಿದ್ದಾರೆ. ತಮಗಾಗಿದ್ದ ಲೈಂಗಿಕ ಶೋಷಣೆಯ ಅನುಭವಗಳ ಬಗ್ಗೆ ಬಹಿರಂಗವಾಗಿ ಮಾತನಾಡಿ ಹಂಚಿಕೊಳ್ಳುತ್ತಿದ್ದಾರೆ. ಈ ದಿಟ್ಟ ನಡೆಯಿಂದ ಸಮಾಜಕ್ಕೆ ಗರಬಡಿದಂತಾಗಿದೆ. ಇವರೆಲ್ಲ ಯಾಕೀ ಥರ ಮಾತನಾಡುತ್ತಿದ್ದಾರೆ, ನಾವು ಅದನ್ನ ಹೇಗೆ ಕೇಳಿಸಿಕೊಳ್ಳಬೇಕು ಎನ್ನುವ ಪ್ರಯತ್ನಗಳು ಸಾಕಷ್ಟು ನಡೆಯುತ್ತಿಲ್ಲ. #metoo ಎಂದರೆ ಜನ ಕೆಕ್ಕರಿಸಿ ನೋಡುತ್ತಿದ್ದಾರೆ. ನನಗಿಂಥ ಕೆಟ್ಟ ಅನುಭವವಾಯ್ತು ಎಂದು ಒಬ್ಬ ಹೆಣ್ಣು ಹೇಳಿದರೆ ಹೌದಾ, ಎಂದು ಅವಳ ಮಾತನ್ನು ಕೇಳಿಸಿಕೊಳ್ಳುವ ಅವಕಾಶವನ್ನು ನಮಗೇ ನಾವು ಕಡ್ಡಾಯವಾಗಿ ಕೊಟ್ಟುಕೊಳ್ಳಬೇಕು. #metoo ನಮಗೆ ಒಳ್ಳೆಯ ಕಾರಣವನ್ನ ಕೊಟ್ಟಿದೆ.

ಹಾಗೆ ನೋಡಿದರೆ ಭಾರತದಲ್ಲಿ ಜನರು ಹೆಣ್ಣುಮಕ್ಕಳನ್ನ, ಹುಡುಗಿಯರನ್ನ ಮತ್ತು ಹೆಂಗಸರನ್ನ ಲೀಲಾಜಾಲವಾಗಿ ಯಾವುದೇ ಹಿಂಜರಿಕೆಯಿಲ್ಲದೆ ಮುಟ್ಟುತ್ತಾರೆ. ಅದಕ್ಕೆ ಯಾವ ಸಂಸ್ಕೃತಿಯೂ,ಧರ್ಮವೂ, ಭಾಷೆಯೂ, ಅಧಿಕಾರವೂ, ಅಂತಸ್ತೂ, ವಿದ್ಯೆಯೂ, ಅದೆಲ್ಲಾ ಯಾಕೆ, ವಯಸ್ಸೂ ಕೂಡ ಅಡ್ಡಿ ಬರುವುದಿಲ್ಲ.

ಕತ್ತಲಾದ ಮೇಲೆ ಹೊರಗಡೆ ಇದ್ದರೆ ಜೋಪಾನ, ಗುಂಪಿನಲ್ಲೇ ಇರಬೇಕು, ರಾತ್ರಿ ತಡವಾಗಿ ಮನೆಗೆ ಬರುವಂತಿಲ್ಲ, ಮೈತುಂಬಾ ಬಟ್ಟೆ ಹಾಕಿಕೊಂಡೇ ಇರಬೇಕು, ಮರ್ಯಾದಸ್ತ ಹೆಣ್ಣುಮಗಳ ನಡೆನುಡಿ, ಚಹರೆಚರ್ಯಗಳನ್ನ ತೋರಿಸಬೇಕು, ಹಾಗಿರಬೇಕು, ಹೀಗಿರಬೇಕು ಎಂಬೆಲ್ಲ ಗೆರೆಗಳನ್ನು ಎಳೆದು, ಹಾಕಿ, ಅದಕ್ಕೆ ಇನ್ನಷ್ಟು, ಮತ್ತೊಂದಷ್ಟು ಸೇರಿಸಿ ಕಟೆಕಟೆಗಳನ್ನ ಪೇರಿಸಿ, ಈ ಪೆಟ್ಟಿಗೆಯಲ್ಲಿ ಮಾತ್ರ ಹೆಣ್ಣಿಗೆ ಸ್ಥಾನ, ಹೆಣ್ಣೆಂದರೆ ಹೀಗಿರಬೇಕು ಎಂದು ಆಜ್ಞಾಪಿಸಿದ ಸಮಾಜದಲ್ಲಿ ನಾವೆಲ್ಲಾ ಹೆಂಗಳೆಯರು ಬದುಕುತ್ತಿದ್ದೀವಿ. ಅದು ಭಾರತ, ಆಸ್ಟ್ರೇಲಿಯಾ ಎಂಬಂತೆ ಎಲ್ಲ ಸಮಾಜಗಳನ್ನೂ ಒಳಗೊಂಡಿದೆ.

ಕಳೆದ ಮತ್ತು ಈ ವರ್ಷ British Broadcasting Company ಯ ಮೇಲ್ವರ್ಗದ ಹುದ್ದೆಗಳಲ್ಲಿರುವ ಸಿಬ್ಬಂದಿಯಲ್ಲಿ ಹೆಣ್ಣು ಮತ್ತು ಗಂಡು ನೌಕರರ ಸಂಬಳದ ವಿಷಯದಲ್ಲಿ ಭಿನ್ನಾಭಿಪ್ರಾಯವುಂಟಾಗಿತ್ತು. ಮಾಮೂಲಿನಂತೆ ಅಲ್ಲೂ ಕೂಡ ತಮ್ಮ ಗಂಡು ಸಹೋದ್ಯೋಗಿಗಳ ಸಮ ಜವಾಬ್ದಾರಿ ಕೆಲಸ ನಿರ್ವಹಿಸುತ್ತಿದ್ದರೂ ಅದೇ ಗ್ರೇಡ್ ಇರುವ ಮಹಿಳಾ ಸಿಬ್ಬಂದಿಗೆ ಕಡಿಮೆ ಸಂಬಳ! ಆ ಸಂಬಳದ ತಾರತಮ್ಯವನ್ನು ಸರಿಪಡಿಸುವ ಕೆಲಸ ಇನ್ನೂ ನಡೆಯುತ್ತಿದೆ. ಅತ್ತ ಅಮೆರಿಕೆಯ ಹಾಲಿವುಡ್ – ಲೈಂಗಿಕ ಶೋಷಣೆಯ ಗಲಾಟೆ ಇನ್ನೂ ಜೀವಂತವಿದೆ. ಇತ್ತ ಭಾರತದಲ್ಲಿ #metoo ದನಿ ಜೋರಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ Domestic Abuse ಬಗ್ಗೆ ಬಹಳಷ್ಟು ಜಾಗೃತಿಯ ಕೆಲಸ ನಡೆಯುತ್ತಿದೆ.

ನಾನೊಂದು ಜೆಂಡರ್ ಅಂಡ್ ಡೆಮಾಸ್ಟಿಕ್ ವಯೋಲೆನ್ಸ್ (Gender & Domestic Violence) ಕಮ್ಮಟದಲ್ಲಿ ಭಾಗವಹಿಸಿದ್ದೆ. ಮಹಿಳೆಯೊಬ್ಬರು ನಲವತ್ತು ವರ್ಷಗಳ ಹಿಂದೆ ತಾನು ಹುಡುಗಿಯಾಗಿದ್ದಾಗ ನಡೆದಿದ್ದ Stalking ಅನುಭವದ ಬಗ್ಗೆ ಮಾತನಾಡಿದರು. ತನ್ನನ್ನು ಎಲ್ಲೆಲ್ಲೂ ಹಿಂಬಾಲಿಸಿದ ವ್ಯಕ್ತಿಯ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ಅವರು “ನೀನು ಹಾಕಿಕೊಳ್ಳುವ ಉಡುಪು, ಮಾತು, ನಿನ್ನ ವರ್ತನೆ ಅವನಿಗೆ ಮತ್ತು ಇತರರಿಗೆ ನೀನು ಲಭ್ಯವಿದ್ದೀಯ ಎಂಬ ಸಂದೇಶವನ್ನು ಕೊಡುತ್ತಿವೆ. ಮೂಲತಃ ನೀನೇ ಬದಲಾಯಿಸಬೇಕು,” ಎಂದರಂತೆ! ಆ ದಿನಗಳಿಂದ ಇಂದಿನವರೆಗೆ ಜನಜೀವನದಲ್ಲಿ ಮಾರ್ಪಾಡುಗಳಾಗಿವೆ. ಆಸ್ಟ್ರೇಲಿಯಾದ ಬೆಚ್ಚಗಿನ ಹವಾಮಾನ, ಬಿಸಿಲು, ಬೀಚ್ ಹತ್ತಿರದ ಪಟ್ಟಣ, ನಗರಗಳಲ್ಲಿ ಬೆಳೆಯುವ ಹುಡುಗ ಹುಡುಗಿಯರು ಶಾರ್ಟ್ಸ್ ಮತ್ತು ತೋಳಿಲ್ಲದ ಟಾಪ್ ಹಾಕಿಕೊಂಡೆ ಬೆಳೆಯುತ್ತಾರೆ. ಅಪ್ಪಅಮ್ಮಂದಿರೂ,ಅಜ್ಜಅಜ್ಜಿಯಂದಿರೂ ಶಾರ್ಟ್ಸ್, ಸ್ಕರ್ಟ್, ಟಾಪ್ ನಲ್ಲಿರುತ್ತಾರೆ. ಹುಡುಗಹುಡುಗಿಯರು ಯೂನಿವರ್ಸಿಟಿಯ ಕ್ಲಾಸ್ ರೂಮ್ ನಲ್ಲಿ ಚಿಕ್ಕ ಚೆಡ್ಡಿ, ಟಾಪ್ ಹಾಕಿಕೊಂಡೇ ಕೂತಿರುತ್ತಾರೆ. ಅವರ ಪದ್ಧತಿಯಲ್ಲಿ ತಪ್ಪು ಹುಡುಕಲು ಹೊರಟರೆ ನಾವೇ ಪೆದ್ದರಾಗುತ್ತೀವಿ.

ಆದರೂ ಕೂಡ ಆಸ್ಟ್ರೇಲಿಯಾದಲ್ಲಿ ಲಿಂಗಾಧಾರಿತ ದೌರ್ಜನ್ಯಗಳು, ಹಿಂಸೆ ಮತ್ತು ನಿಂದನೆ ಅವ್ಯಾಹತವಾಗಿ ನಡೆದಿದೆ. ಅವು ಹೆಚ್ಚಿನಮಟ್ಟಿಗೆ ಹೆಣ್ಣಿನ ಮೇಲೆಯೇ ಆಗುತ್ತಿದೆ. ಬಹಳಷ್ಟು ಜನ ಬೊಟ್ಟು ಮಾಡುವುದು ಪಿತೃ ಪ್ರಧಾನ ಸಾಮಾಜಿಕ ವ್ಯವಸ್ಥೆಯತ್ತ. ಪುರುಷ ತನ್ನ ಕೈಯಲ್ಲಿಯೇ ಅಧಿಕಾರ ಮತ್ತು ಹತೋಟಿ ಇರಬೇಕು ಎಂದು ಪ್ರತಿಪಾದಿಸುತ್ತಾನೆ. ಸ್ವಾಭಾವಿಕವಾಗಿ ತಾನು ಬಲಿಷ್ಠ ಎಂದುಕೊಂಡು ಹೆಣ್ಣಿನ ಮೇಲೆ, ಅವಳ ಜೀವನದ ಮೇಲೆ ಹತೋಟಿ ಸಾಧಿಸುತ್ತಾನೆ. ಅದನ್ನೇ ತನ್ನ ಕ್ರಿಯೆಗಳಲ್ಲಿ ಅವನು ತೋರುವುದು ಲಿಂಗಾಧಾರಿತ ಅಸಮಾನತೆ, ದೌರ್ಜನ್ಯ, ಹಿಂಸೆ ಮತ್ತು ನಿಂದನೆಗಳನ್ನು ಹುಟ್ಟುಹಾಕಿವೆ ಎಂದು ಹೇಳುವ ವಾದಗಳು ಇವೆ. ಪುರುಷನೂ ದೌರ್ಜನ್ಯಕ್ಕೆ, ಹಿಂಸೆಗೆ ಮತ್ತು ನಿಂದನೆಗೆ ಒಳಗಾಗುತ್ತಾನೆ ಎನ್ನುವುದು ಕೂಡ ನಿಜಸ್ಥಿತಿಯೇ ಹೌದು. ಆದರೆ ಅಂಕಿಅಂಶಗಳನ್ನ ಕಲೆಹಾಕಿದರೆ ಮಕ್ಕಳ ಮೇಲೆ ಮತ್ತು ಹೆಂಗಸರ ಮೇಲೆ ನಡೆಯುವುದೇ ಹೆಚ್ಚು ಅನ್ನುವುದು ಕಣ್ಣಿಗೆ ಕಾಣುತ್ತದೆ.

ಈಗೀಗ ಪರಿಸರದ ಮೇಲೆ ಮತ್ತು ಪ್ರಾಣಿಗಳ ಮೇಲೆ ನಡೆಯುವ ಹಿಂಸೆ ಮತ್ತು ನಿಂದನೆಗಳೂ ಕೂಡ ಚರ್ಚೆಗೆ ಬರುತ್ತಿದೆ. ಹೆಂಗಸರಷ್ಟೇ ಅಲ್ಲದೆ ಮಕ್ಕಳು ಮತ್ತು ಪ್ರಾಣಿಗಳು #metoo ಎಂದು ಬಾಯಿಬಿಟ್ಟು ಮಾತನಾಡಿ, ದನಿ ಎತ್ತಿದರೆ ಪ್ರಪಂಚದಾದ್ಯಂತ ನಾವು ಸೃಷ್ಟಿ ಮಾಡಿರುವ ವ್ಯವಸ್ಥೆಗಳ ಒಳಗಿನ ಮತ್ತು ಹೊರಗಿನ ಪದರಗಳು ಪಟಪಟನೆ ಬಿರುಕು ಬಿಡುತ್ತವೆ. ಆ ಬಿರುಕುಗಳು ಹೇಳುವ ಅನುಭವದ ಕಥೆಗಳನ್ನು ನಾವೆಲ್ಲರೂ ಹೇಗೆ ಕೇಳಿಸಿಕೊಳ್ಳಬೇಕು ಎನ್ನುವುದು ನಮ್ಮ ಅಂತರಂಗದ ಸಂವಾದವಾದರೆ ಒಳ್ಳೆಯದೇನೋ.