ಕವಿತೆ-1

ಕಾಯಬಾರದು ಗೆಳತೀ …
ಹೊತ್ತು ದಾಟಿದ ಕನಸಮೂಟೆಗಾಗಿ.
ಎತ್ತಿಟ್ಟ ನೆನಪಮುತ್ತುಗಳ
ಹುಡುಕಬಾರದು ಹಾಗೆ.

ಬಾಕಿಯಿದೆ ಮೈ ಮನಗಳ ನೇವರಿಕೆಗೆ
ಇನ್ನೂ ನೂರು ನೆಪ…
ಬದುಕು;
ಸವೆಯುವುದು ಹೇಗೋ!

ಮಾಗಿ ಹದವಾದ ಬಯಲಿನಲ್ಲಿ
ಕಣ್ಣುಮುಚ್ಚಾಲೆಯಾಟ ಏಕೆ?
ಕ್ಷಣಮಾತ್ರ ಸಾಕಲ್ಲ
ಬೊಗಸೆಯಾಗಲು ಆಗಸಕ್ಕೆ …

ಕಾಯುತ್ತಿರುವುದು,
ಅವನು;
ಫಲಿಸಲಾಗದ ಶಾಪಕ್ಕಾಗಿ.
ಗಂಧರ್ವನ ಇರವನ್ನು ಸಾರಿಹೇಳಬೇಕೇ, ಅಭಿಸಾರಿಕೆ?

ಕೇಳು,
ಪರಿತಪನವೊಂದೇ ಪ್ರೇಮಕ್ಕೆ ಗುರುತು!

ಕವಿತೆ-2

ಕಡಲಿಗೇಕೆ ಸುಮ್ಮಸುಮ್ಮಗೆ ತೆರೆಗಳನ್ನು ದಡ ಮುಟ್ಟಿಸುವ ತವಕ.

ಗೊತ್ತೇ ಇಲ್ಲದ ಹಾಗೆ ಎದ್ದ
ಪ್ರೀತಿ ಬಿರುಗಾಳಿಯ ನಡುವೆ
ತೀರದಾಹದ ಮೌನ…

ಅಲ್ಲೇ ಕರಿ ಬಂಡೆಯ ಕೆಳಗೆ ಮರಳಲ್ಲಿ ಹುಡುಕು
ನಮ್ಮ ಪಾದಗಳ ಗುರುತನ್ನು.
ತೆರೆಗಳಿಗೆ ಅದೇನು ಮೋಹವೋ,
ಅಳಿಸಲೇ ಇಲ್ಲ ಅವು ಮೀನಹೆಜ್ಜೆಯನ್ನು.

ತಣಿಯದ ಸುಖಸಲ್ಲಾಪದಲ್ಲಿ
ಬೆರಗಾದ ನೀರದೋಣಿಗೆ
ಈಜಿ ದಡ ಸೇರುವುದು ಬೇಡವಾಗಿದೆ.

ಆದರೂ…
ಈ ಕಡಲಿಗೇಕೆ ಸುಮ್ಮಸುಮ್ಮಗೆ ತೆರೆಗಳನ್ನು ದಡ ಮುಟ್ಟಿಸುವ ತವಕ.

ಕವಿತೆ-3

ನಾನು ಕಳುಹಿಸುತ್ತಲೇ ಇರುತ್ತೇನೆ
ರಾಶಿ ರಾಶಿ ಮಾತಿನ ಮೋಡಗಳನ್ನು.
ಕೇಳುವುದೇ ಇಲ್ಲ ಅವನು …
ಕಿವಿಗೊಟ್ಟು!

ಎಲ್ಲ ಮಾತುಗಳೂ ಮಳೆಯಾಗಿ
ನೆಲ ಒದ್ದೆಯಾದ ಮೇಲೆ ಹೇಳುತ್ತಾನೆ…
ಓಹ್‌! ಇಲ್ಲಿ ಜೋರು ಮಳೆ.
ಥಂಡಿಯಾಗಿದೆ ಎದೆನೆಲ. ನಿನ್ನ ಬಿಸಿಯುಸಿರ ಶಾಖ ನೀಡೆಂದು.

ಅವನ ತುಟಿ ತಾಕುವ ಮೊದಲೇ ನಾನು ಕಣ್ಣು ಮುಚ್ಚಿಕೊಳ್ಳುತ್ತೇನೆ.
ನನ್ನ ಕನಸುಗಳಿಗೆ ಅವನು ಆಗಸವಾಗುತ್ತಾನೆ.

ಚಂದಿರನಿಲ್ಲದ ಇರುಳಿನಲ್ಲಿ ಇಬ್ಬರೂ ಹೀಗೆ ಬೆವರಿದರೆ ಹೇಗೆ?

 

ಹೇಮಶ್ರೀ ಸಯೆದ್ ಮೂಲತಃ ಮಂಗಳೂರಿನವರಾಗಿದ್ದು ಈಗ ಕ್ಯಾಲಿಫೋರ್ನಿಯಾದ ಫ್ರಿಮೋಂಟ್‌ ನಲ್ಲಿದ್ದಾರೆ.
ಮಾಧ್ಯಮ ಮತ್ತು ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಫ್ರೀಲಾನ್ಸರ್‌ ಆಗಿ ಕಿರುಚಿತ್ರ, ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ ನಿರ್ದೇಶನ ಮಾಡಿರುವ ಇವರಿಗೆ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಬರವಣಿಗೆಯಲ್ಲಿ ಆಸಕ್ತಿ