ಹೆಣ್ಣುಮಕ್ಕಳಿಗೆ ಅವರ ದೇಹ ವರವೂ ಹೌದು ಶಾಪವೂ ಹೌದು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಣ್ಣುಮಕ್ಕಳಿಗೆ ಹಿಂದೆಂದಿಗಿಂತಲೂ ಹೆಚ್ಚು ಸವಾಲುಗಳಿವೆ. ಅದರಲ್ಲೂ ಹೊರಗೆ ದುಡಿಯುವ ಹೆಣ್ಣುಮಕ್ಕಳಿಗೆ ದಿನದಲ್ಲಿ ಒಂದು ತಾಸು ಸಮಾಧಾನದಿಂದ ಕೂರಲು ನಿಲ್ಲಲೂ ಸಮಯ ಸಿಗುವುದಿಲ್ಲ. ಹಿಂದೆಲ್ಲ ನಟಿಯರು, ಮಾಡೆಲಿಂಗ್‌ ಕ್ಷೇತ್ರದಲ್ಲಿರುವವರು ಮಾತ್ರವೇ ಹೆಚ್ಚಾಗಿ ತಮ್ಮ ದೇಹ ಸೌಂದರ್ಯವನ್ನು ಕಾಪಿಟ್ಟುಕೊಳ್ಳುವಲ್ಲಿ ಕೆಲಸ ಮಾಡುತ್ತಿದ್ದರು. ಈಗ ಹಾಗಿಲ್ಲ. ಫೇಸ್‌ಬುಕ್ಕು, ಇನ್ಸ್ಟಾಗ್ರಾಂಗಳ ರಂಗುರಂಗಿನ ಜಗತ್ತು ಎಲ್ಲರ ಮೇಲೂ ಪರೋಕ್ಷ ಒತ್ತಡ ಸೃಷ್ಟಿಸುತ್ತಿದೆ.   ಅದರ ಆಕರ್ಷಣೆಯಿಂದ ಸೌಂದರ್ಯ ಪ್ರಜ್ಞೆ ಎಲ್ಲರಲ್ಲೂ, ಎಲ್ಲಾ ಕ್ಷೇತ್ರಗಳಲ್ಲೂ ಜಾಗೃತವಾಗಿದೆ ಎನ್ನುತ್ತಾರೆ ರೂಪಶ್ರೀ ಕಲ್ಲಿಗನೂರ್‌

“ಮಗು ಆದ್ಮೇಲೆ ನೀವು ಮತ್ತೆ ಆಕ್ಟಿಂಗ್‌ ಮುಂದುವರೆಸ್ತೀರಾ ಅಥವಾ ನಿಮ್ಮ ಕರಿಯರ್‌ಗೆ ಗುಡ್‌ಬೈ ಹೇಳ್ತಿರಾ ಮೇಡಂ….” ಎಂಬ ಪ್ರಶ್ನೆ ತನ್ನತ್ತ ತೂರಿ ಬಂದದ್ದೇ ಬಾಲಿವುಡ್‌ ನಟಿ ಅಲಿಯಾ ಭಟ್‌ ಕೋಪಗೊಂಡು “ಹೆಣ್ಣುಮಕ್ಕಳು ಏನು ಮಾಡಿದ್ರೂ ಹೆಡ್‌ಲೈನ್‌ ಆಗ್ತಾರೆ. ಅವರು ತಾಯಿಯಾಗ್ತೀನಿ ಅಂತ ತೀರ್ಮಾನಿಸಲಿ, ಅಥವಾ ಬೇಡ ಅಂತ ನಿರ್ಧರಿಸಲಿ, ಎಲ್ಲಾದ್ರೂ ಪ್ರವಾಸಕ್ಕೆ ಹೋಗಲಿ, ಅಥವಾ ಕ್ರಿಕೆಟ್‌ ನೋಡೋಕ್ಕೆ ಅಂತಲೇ ಹೋಗಲಿ, ಜನರ ಕಣ್ಣುಗಳು ಹೆಣ್ಣುಮಕ್ಕಳು ಏನು ಮಾಡ್ತಿದ್ದಾರೆ ಅಂತಲೇ ನೋಡ್ತಿರುತ್ತವೆ. ಯಾಕೆ ಹಾಗೆ? ಮಗು ಆದ ತಕ್ಷಣ ಗಂಡುಮಕ್ಕಳು ಕೆಲಸ ಬಿಟ್ಟು ಬಿಡುತ್ತಾರ? ಮಕ್ಕಳಾಗೋದು ತಾಯಿಗೆ ಮಾತ್ರವಾ? ಗಂಡಸಿಗೆ ಮಗು ಆಗೋದಿಲ್ವ? ಅವರ್ಯಾಕೆ ಕೆಲಸ ಬಿಡೋದಿಲ್ಲ? ಅವರನ್ಯಾಕೆ ನೀವು ಇಂಥ ಪ್ರಶ್ನೆಗಳನ್ನ ಕೇಳೋದಿಲ್ಲ?” ಎಂದು ಸಿಡಿಮಿಡಿಗೊಂಡಿದ್ದಳು. ಆದರೆ ಇದೇ ಪ್ರಶ್ನೆಯನ್ನ ಸರೋಗಸಿ (ಬಾಡಿಗೆ ತಾಯ್ತನ) ಮೂಲಕ ಮಗು ಪಡೆದ ಪ್ರಿಯಾಂಕಾ ಚೋಪ್ರಾಳಿಗೆ ಯಾರೂ ಕೇಳುವುದಿಲ್ಲ… ಆದರೆ ಗರ್ಭ ಧರಿಸಿದ ನಟಿಗೆ ಆಮೇಲೆ ಕೆಲ್ಸ ಬಿಡ್ತೀರಾ ಅಂತ ಕೇಳೋ ಜನರೇ “ಅಬ್ಬಬ್ಬಾ ನೋಡು… ತಾನು ಮಗು ಹಡೆಯೋದು ಬಿಟ್ಟು ಬಾಡಿಗೆ ತಾಯಿ ಮೂಲಕ ಮಗೂ ಪಡೀತಿದ್ದಾಳೆ” ಅಂತ ಮೂಗು ಮುರಿಯುತ್ತಾರೆ.

ಈ ಪ್ರಶ್ನೆಯನ್ನು ಅಲಿಯಾ ಭಟ್‌ ಅಷ್ಟೇ ಅಲ್ಲ, ಚಿತ್ರರಂಗದಲ್ಲಿದ್ದುಕೊಂಡು ಮದುವೆಯ ನಂತರ ತಾಯಿಯಾಗಲು ಬಯಸುವ ಎಲ್ಲ ನಟಿಯರನ್ನೂ ಅಟ್ಟಿಸಿಕೊಂಡು ಹೋಗುತ್ತದೆ. ಮಕ್ಕಳಾದಮೇಲೆ ತಾಯಿಯೇ ಮಕ್ಕಳನ್ನ ನೋಡಿಕೊಳ್ಳಬೇಕಲ್ವ? ಮಕ್ಕಳಿಗೆ ತಾಯಿಯೇ ಬೇಕು ಅಲ್ವ ಅನ್ನುವ ಮಾತುಗಳೊಂದಿಗೆ ಜನ ಅವರ ಬೆಂಬೀಳುತ್ತಾರೆ. ಮತ್ತೆ ಹಾಗೆ ಮಕ್ಕಳಾದ ನಂತರ ಒಂಚೂರು ದೇಹ ದಪ್ಪಗಾದರೂ ಸಾಕು. ಅದಕ್ಕೂ ಮೂದಲಿಸುತ್ತಾರೆ. “ನೋಡು ಮಗು ಆದ್ಮೇಲೆ ಹೇಗೆ ಊದ್ಕೊಂಡ್‌ಬಿಟ್ಟಿದಾಳೆ! She’s not in form anymore… ಮತ್ತಿನ್ನ ಯಾರು ಇವಳನ್ನ ಹೀರೋಯಿನ್‌ ಮಾಡ್ತಾರೆ? ನೆಕ್ಸ್ಟ್‌ ಇವ್ಳಿಗೆ ಹೀರೋನ ತಾಯಿ ಪಾತ್ರವೇ ಗ್ಯಾರಂಟಿ…!” ಎಂದು ಕುಹಕವಾಡುತ್ತಾರೆ. ದೇಹವೇ ಆಯುಧವಾಗಿರುವ ಈ ಕ್ಷೇತ್ರದಲ್ಲಿ ಇಂಥ ಪ್ರಶ್ನೆಗಳಿಂದ, ಮೂದಲಿಕೆಯಿಂದ ಮದುವೆಯಾದ ಯಾವ ನಟಿಯಾದರೂ ತಪ್ಪಿಸಿಕೊಂಡಿದ್ದರೆ ಕೇಳಿ. ಆದರೆ ಹೀರೋ ಮಾತ್ರ, ಮದುವೆಯಾಗಿ, ಮಕ್ಕಳಾಗಿ, ಮೊಮ್ಮಕ್ಕಳ ಪಡೆದು, ಅರವತ್ತು ವರ್ಷಗಳ ಗೆರೆದಾಟಿ, ಮುಖದ ತುಂಬಾ ಸುಕ್ಕುಗಳ ಸರಮಾಲೆ ಮೂಡಿಸಿಕೊಂಡು, ದಪ್ಪ ಹೊಟ್ಟೆ ಹಿಡಿಕೊಂಡು ಮೆಲ್ಲನೆ ವ್ಯಾಯಾಮ ಮಾಡುವ, ಬಾತುಕೋಳಿಯ ಹಾಗೆ ಆಚೀಚೆ ನಾಲ್ಕು ಹೆಜ್ಜೆ ಹಾಕಿದರೂ ಅವನು ಹೀರೋನೇ! ಅವನಿಗೆ ಈ ಪ್ರಶ್ನೆ ಬರೋದಿಲ್ಲ… ಆದರೆ ನಟಿಯೊಬ್ಬಳು ಮದುವೆಯಾಗದಿದ್ದರೂ. ಮದುವೆಯಾಗಿ ಮಕ್ಕಳನ್ನು ಮಾಡಿಕೊಳ್ಳಲು ತಡವಾದರೂ, ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆದರೂ.. ಕೊನೆಗೆ ಸರಿಯಾದ ಸಮಯದಲ್ಲಿ ಮಗು ಮಾಡಿಕೊಂಡರೂ ಅವಳು ಜನರ ಬಾಯಿಗೆ ಆಹಾರವಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಹೆಣ್ಣಿನ ದೇಹದ ಸುತ್ತಲೇ ಇವರ ವಿಚಾರಗಳು ಸುತ್ತುತ್ತಿರುತ್ತವೆ!

ಹೆಣ್ಣುಮಕ್ಕಳಿಗೆ ಅವರ ದೇಹ ವರವೂ ಹೌದು ಶಾಪವೂ ಹೌದು. 10-12 ವಯಸ್ಸಿನಿಂದಲೇ ಪೀರಿಯಡ್ಸ್‌ಗೆ ಪ್ರತಿತಿಂಗಳು ಒಂದೊಂದು ವಾರ ನಮ್ಮ ದೇಹವನ್ನು ಒಪ್ಪಿಸಬೇಕು. ಎಲ್ಲರಿಗೂ ಅಲ್ಲದಿದ್ದರೂ 60% ಹೆಣ್ಣು ಮಕ್ಕಳು ಪೀರಿಯಡ್ಸಿನ ಬಾಧೆಗಳಿಗೆ ಒಳಗಾಗಿ, ಆ ಸಮಯದಲ್ಲಿ ದೈಹಿಕ ಹಾಗೂ ಮಾನಸಿಕ ಕ್ಷೋಭೆಗೆ ಒಳಗಾಗುತ್ತಾರೆ. “ಯಾರಿಗೆ ಬೇಕಿತ್ತು ಇದು? How to unsubscribe this? Can I have my uterus removed?” ಅನ್ನುವ ಯೋಚನೆಗೆ ಬೀಳುತ್ತಾರೆ. ಪ್ರತಿ ಪ್ರವಾಸವನ್ನು ಪೀರಿಯಡ್ಸಿನ ದಿನಗಳನ್ನು ಗಮನದಲ್ಲಿಟ್ಟುಕೊಂಡೇ ಯೋಜನೆ ಮಾಡಿಕೊಳ್ಳಬೇಕು. ಅದೇ ಸಮಯದಲ್ಲಿ ಯಾವುದಾದ್ರೂ ಮುಖ್ಯವಾದ ಕಾರ್ಯಕ್ರಮ ಬಿದ್ದರೇ?… ಹೇಗೆ ಮ್ಯಾನೇಜ್‌ ಮಾಡಿಕೊಳ್ಳಲಿ ಎನ್ನುವ ಆತಂಕ. ಅಲ್ಲದೇ ಮನೆ ಕೆಲಸ, ಆಫೀಸಿನ ಕೆಲಸದ ಜೊತೆ ಅರ್ಧದಿನ ಹಾಸಿಗೆಯಲ್ಲಿ ಬಿದ್ದುಕೊಂಡು, ತಮ್ಮ ದೇಹವನ್ನು ಸಂತೈಸಿಕೊಳ್ಳುವಷ್ಟರಲ್ಲಿ, ಹೆಣ್ಣು ಜನ್ಮದ ಬಗೆಗೇ ಬೇಸರಿಕೆ ಬಂದಿರುತ್ತದೆ. ತಿಂಗಳಿನಲ್ಲಿ ಒಂದು ವಾರವನ್ನ ನಾವು ಬೇಡದೇ ಬಂದಿರೋದಕ್ಕೆ ಬಲಿ ಕೊಡೋದು. ಆಮೇಲೆ ಮೂಡುವ ಒಂದೊಂದು ಪಿಂಪಲ್ಲಿಗೂ ಏನೇನೋ ಮದ್ದುಸವರಿ, ಅದರ ಪರಿಣಾಮವನ್ನು ಆದಷ್ಟೂ ಕಡಿಮೆ ಮಾಡೋದು… ಇದನ್ನ ಇಡೀ ಜಗತ್ತು ನೋಡುತ್ತಿರುವಾಗಲೂ ಎಲ್ಲೋ ಒಂದು ಕಂಪೆನಿಯೋ ಮತ್ತೊಂದು ಸಂಸ್ಥೆಯೋ, ಹೆಣ್ಣುಮಕ್ಕಳಿಗೆ ಆ ದಿನಕ್ಕೆ ಒಂದು ದಿನದ ರಜೆ ಘೋಷಿಸಿದ್ದನ್ನ ಬಿಟ್ಟರೆ ಮತ್ಯಾವ ಸಹಾಯವೂ ಇಲ್ಲದೇ, ತನ್ನ ದೇಹದ ಸಾಧ್ಯತೆ-ತೊಡಕುಗಳನ್ನು ಸರಿದೂಗಿಸಿಕೊಂಡು ನಡೆಯಬೇಕಾದರೆ, ಜಗತ್ತು ಮಾತ್ರ ಅವಳು ಕಡ್ಡಿ, ಇವಳು ಏಣಿ, ಅವಳು ದಪ್ಪ, ಇವಳು ಕುಳ್ಳಿ ಎಂದು ಹೆಸರಿಡುತ್ತದೆ ಎಂದರೆ -ಬೇಸರ ಮೂಡದೇ ಇರುತ್ತದೆಯೇ?

ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಣ್ಣುಮಕ್ಕಳಿಗೆ ಹಿಂದೆಂದಿಗಿಂತಲೂ ಹೆಚ್ಚು ಸವಾಲುಗಳಿವೆ. ಅದರಲ್ಲೂ ಹೊರಗೆ ದುಡಿಯುವ ಹೆಣ್ಣುಮಕ್ಕಳಿಗೆ ದಿನದಲ್ಲಿ ಒಂದು ತಾಸು ಸಮಾಧಾನದಿಂದ ಕೂರಲು ನಿಲ್ಲಲೂ ಸಮಯ ಸಿಗುವುದಿಲ್ಲ. ಹಿಂದೆಲ್ಲ ನಟಿಯರು/ ಮಾಡೆಲಿಂಗ್‌ ಕ್ಷೇತ್ರದಲ್ಲಿರುವವರು ಮಾತ್ರವೇ ಹೆಚ್ಚಾಗಿ ತಮ್ಮ ದೇಹ ಸೌಂದರ್ಯವನ್ನು ಕಾಪಿಟ್ಟುಕೊಳ್ಳುವಲ್ಲಿ ಕೆಲಸ ಮಾಡುತ್ತಿದ್ದರು. ಈಗ ಹಾಗಿಲ್ಲ. ಫೇಸ್‌ಬುಕ್ಕು, ಇನ್ಸ್ಟಾಗ್ರಾಂಗಳ ರಂಗುರಂಗಿನ ಜಗತ್ತು ಯಾರನ್ನೂ ಬಿಡುವುದಿಲ್ಲ. ಅದರ ಆಕರ್ಷಣೆಯಿಂದ ಸೌಂದರ್ಯ ಪ್ರಜ್ಞೆ ಎಲ್ಲರಲ್ಲೂ/ ಎಲ್ಲಾ ಕ್ಷೇತ್ರಗಳಲ್ಲೂ ಜಾಗೃತವಾಗಿದೆ. ಕೆಲಸದಲ್ಲಿರುವ ಹೆಣ್ಣುಮಕ್ಕಳಷ್ಟೇ ಅಲ್ಲ, ಮನೆಯಲ್ಲಿರುವ ಹೆಣ್ಣುಮಕ್ಕಳೂ, ಮಕ್ಕಳನ್ನು ಹೆತ್ತ ನಂತರ ತಮ್ಮ ಕೆಲಸ ಹಾಗೂ ಮಗುವಿನ ಲಾಲನೆ ಪಾಲನೆಯೊಟ್ಟಿಗೆ, ಪ್ರಸವದ ನಂತರ ಇಳಿಬಿದ್ದ ಅಥವಾ ದಪ್ಪಗಾದ ದೇಹವನ್ನು ಮತ್ತೆ ಗಟ್ಟಿಮುಟ್ಟಾಗಿಸಿಕೊಳ್ಳುವಲ್ಲಿ ಶ್ರಮವಹಿಸಬೇಕು ಎಂಬ ಪರೋಕ್ಷ ಒತ್ತಡ ಸೃಷ್ಟಿಯಾಗಿದೆ. ಇಲ್ಲವಾದರೆ ಎಲ್ಲಿ ಜಗತ್ತು ತನ್ನನ್ನು ಕಡೆಗಣಿಸಿಬಿಡುತ್ತದೋ ಎನ್ನುವ ಆತಂಕ ಎದೆಯಲ್ಲಿ ಕುಟ್ಟುತ್ತಿರುತ್ತದೆ. ಹಾಗಾಗಿ ದೇಹಕ್ಕೆ ಮನಸ್ಸಿಗೆ ನೆಮ್ಮದಿ ಮತ್ತೂ ಕಡಿಮೆಯಾಗುತ್ತಿದೆ.

ಊರಲ್ಲಿ ಒಬ್ಬ ಹೆಣ್ಣು ಮಗಳ ಜೊತೆ ಏನನ್ನೋ ಮಾತನಾಡುವಾಗ ಅವಳು ಹೇಳಿದ ಮಾತುಗಳು ಯಾವಾಗಲಾದರೂ ನೆನಪಿಗೆ ಬರುತ್ತದೆ. ನಾನು ಅವಳಿಗೆ ಏನು ಹೇಳಿದ್ದೆನೆಂದು ನೆನಪಿಲ್ಲ. ಅದಕ್ಕೆ ಅವಳು “ಅಯ್ಯ ಗಂಡಸರನ್ನ ಹೆಂಗದಾರ ಏನ್ಮಾಡ್ತಾರ ಅಂತ ಯಾರ್‌ ನೋಡ್ತಾರ ಬಿಡ್ರೀ ಅಕ್ಕ… ಮದುವಿ ಅಂದ್ರ ಹೆಣ್ಣಮಕ್ಕಳನ್ನ ನೋಡಾಕ ಬರ್ತಾರ ಅಷ್ಟ. ಗಂಡ್ಮಕ್ಕಳನ್ನಲ್ಲ” ಅಂದಿದ್ಲು. ಜನರ ಈ  ನಡೆಯೂ ಪರೋಕ್ಷವಾದ ಆಗ್ರಹವೇ ಅಲ್ಲವೇ.

ಜಗತ್ತು ಎಷ್ಟೆಲ್ಲ ಬೆಳೆದರೂ ಮನೆಯಲ್ಲಿ ಹೆಣ್ಣುಮಕ್ಕಳ ಸ್ಥಾನ ಎಲ್ಲೆಲ್ಲಿ ಎಷ್ಟಿದೆ ಅನ್ನೋದು ಹೆಣ್ಣುಮಕ್ಕಳಿಗೆ ಗೊತ್ತು ಅಷ್ಟೇ. ಹೊರಗೆ ದುಡಿಯುವ ಗಂಡಸರು, ತಾವು ದುಡಿದು ಬರುತ್ತೇವೆಂಬ ಮದದಲ್ಲಿ ಮನೆಯಲ್ಲಿ ಒಂದೂ ಕೆಲಸಕ್ಕೆ ಕೈ ಹಾಕುವುದಿಲ್ಲ. ಆದರೆ ಹೊರಗಡೆ ದುಡಿಯುವ ಹೆಣ್ಣುಮಕ್ಕಳು? ಅವರು ಹಾಗೆ ಇದ್ದರಾಗುತ್ತದೆಯೇ! ಹೆಣ್ಣುಮಕ್ಕಳಿಗೆ ಸಹನೆ ಜಾಸ್ತಿ.. She’s super woman! ಹೊರಗೆ ಒಳಗೆ ಎಲ್ಲವನ್ನ ಅದೆಷ್ಟು ಅಚ್ಚುಕಟ್ಟಾಗಿ ನಿಭಾಯಿಸ್ತಾಳೆ? ಎಂದು ಬೆನ್ನು ತಟ್ಟುತ್ತಾ ಅವಳಿಂದಲೇ ಸಕಲ ಕೆಲಸಗಳನ್ನು ಮಾಡಿಸುತ್ತಾರೆ. ಬೆಳಗ್ಗೆ ಎಲ್ಲರಿಗಿಂತ ಬೇಗ ಎದ್ದು, ದೊಡ್ಡವರಿಗೊಂದು ಅಡುಗೆ, ಮಕ್ಕಳಿಗೊಂದು ಅಡುಗೆ, ತಿಂಡಿ ಬೇರೆ, ಡಬ್ಬಿ ಕಟ್ಟು, ಮಕ್ಕಳನ್ನ ಶಾಲೆಗೆ ಅಟ್ಟು, ಗಂಡನಿಗೆ ಟಾಟಾ ಹೇಳಿ, ಆಮೇಲೆ ಅವಸರದಲ್ಲಿ ನಾಲ್ಕು ಹನಿ ನೀರು ಮೈಗೆ ಹಾಕಿಕೊಂಡು, ಸೀರೆ, ಬೊಟ್ಟು ಓಲೆಗಳನ್ನು ಏರಿಸಿಕೊಂಡು ಓಡಬೇಕು. ವಾಪಾಸ್‌ ಬಂದಮೇಲೆ ರಾತ್ರಿಗೆ ಅಡುಗೆ ಮಾಡು…

ತೀರಾ ಸಿಕ್ಕಾಪಟ್ಟೆ ಸಂಬಳ ಬರುವ ಹೆಣ್ಣುಮಕ್ಕಳು ಅಡುಗೆಯವರನ್ನಿಟ್ಟು ಒಂದಷ್ಟು ಸಂಭಾಳಿಸುತ್ತಾರೆ. ಆದರೆ ಕೆಲವು ಮನೆಗಳಲ್ಲಿ ಹೊರಗಡೆಯವರಿಂದ ಅಡುಗೆ ಮಾಡಿಸಿದರೆ ಇಷ್ಟವಾಗುವುದಿಲ್ಲ. ಹಾಗಾಗಿ ಮನೆಯಾಕೆಯೇ ಅಡುಗೆ ಮಾಡಬೇಕು ಎಂದು ಬಯಸುತ್ತಾರೆ. ಗಂಡನಿಗೆ ಕೆಲಸವಿಲ್ಲದೇ, ಮನೆಯಲ್ಲೇ ಇರುವ ಅಥವಾ ಸಣ್ಣ ಕೆಲಸದಲ್ಲಿದ್ದೂ ಹೆಂಡತಿ ದೊಡ್ಡ ಕೆಲಸದಲ್ಲಿದ್ದಾಗ್ಯೂ ಹೆಂಡತಿಯೇ ಅಡುಗೆ ಮನೆಯಲ್ಲಿ ಬೇಯಬೇಕು ಎಂಬ ನಿಬಂಧನೆಗಳನ್ನ ಸಮಾಜ ಅಚ್ಚುಕಟ್ಟಾಗಿ ಪಾಲಿಸುತ್ತದೆ. ಈಗಂತೂ ಅಪ್ಪ-ಅಮ್ಮನ ಸಂಬಂಧಗಳನ್ನು ನೋಡಿಕೊಂಡು ಬೆಳೆದಿರುವ ಹೆಣ್ಣುಮಕ್ಕಳು ಕೆಲಸಕ್ಕೆ ಸೇರಿ, ದುಡಿದು, ತನ್ನ ಕಾಲಮೇಲೆ ತಾನು ನಿಲ್ಲುವ ಗುರಿಹೊತ್ತುಕೊಂಡೇ ಓದಿನಲ್ಲಿ ಮುಂದಿದ್ದಾಳೆ.

ಕಳೆದ ವಾರ ಒಬ್ಬ ಮಹಿಳೆ ಟ್ವಿಟ್ಟರ್‌ ನಲ್ಲಿ ಹಾಕಿದ್ದರು “ಹಬ್ಬಹರಿದಿನಗಳಲ್ಲಿ ಮನೆಯ ಹೆಣ್ಣುಮಕ್ಕಳೇ ಅಡುಗೆ ಮಾಡಿದರೆ ಚಂದ ಎನ್ನುವ ಎಷ್ಟು ಗಂಡಸರು ಅದೇ ಹಬ್ಬದ ಸಮಯದಲ್ಲಿ ಹೆಣ್ಣುಮಕ್ಕಳಿಗೆ ನೆರವಾಗಲು ಸಿದ್ಧರಿದ್ದೀರಿ?!” ಎಂದು.. ಹೌದಲ್ಲವೇ.. ಭಾರತದ ಹಿಂದೂ ಸಂಪ್ರದಾಯದಲ್ಲಿ ಹಬ್ಬ-ಹರಿದಿನ, ಹುಣ್ಣಿಮೆ ಅಮಾವಾಸ್ಯೆ ಅಂತ ಎಷ್ಟೆಲ್ಲ ಸಡಗರಗಳಿವೆ. ಒಂದೊಂದು ಹಬ್ಬ ಬಂದಾಗಲೂ ಇಡೀ ಮನೆ ಶುದ್ಧಮಾಡಿ, ದೇವರಿಗೆ ಸಾಕಷ್ಟು ಅಲಂಕಾರ, ಪೂಜೆ ಪುನಸ್ಕಾರ ಮಾಡಿ, ಹುಗ್ಗಿ, ಹೋಳಿಗೆ, ಪಲ್ಯ, ಅನ್ನ, ಕಟ್ಟಿನಸಾರು, ಹಪ್ಪಳ ಸಂಡಿಗೆ, ಕೋಸಂಬರಿ ಅಂತೆಲ್ಲ ಮಾಡಿಮುಗಿಸುವ ಹೊತ್ತಿಗೆ ಹೆಣ್ಣುಮಕ್ಕಳ ಹಸಿವೆ ಇಂಗಿ ಹೋಗಿರುತ್ತದೆ. ಶಾಸ್ತ್ರಕ್ಕೊಂಚೂರು ಅದನ್ನ ಇದನ್ನ ತಿಂದು ಒಂದಿಷ್ಟು ಹಾಸಿಗೆಗೆ ಅಡ್ಡವಾದರೆ, ಮೂರ್ನಾಲ್ಕು ದಿನಗಳ ಕೆಲಸ ಸುಸ್ತು ಮೈಮೇಲೆ ಮುರಿದುಬಿದ್ದಂತಾಗಿ ಹಾಸಿಗೆಯನ್ನು ಬಿಟ್ಟು ಏಳಲು ಆಗುವುದಿಲ್ಲ. ಹಾಗಾಗಿ ಈಗೀಗ ಮನೆಯಲ್ಲಿ ಹಬ್ಬಗಳ ಆಚರಣೆಗಳು ಬರುಬರುತ್ತಾ ಸರಳವಾಗುತ್ತಿವೆ. ಅಡುಗೆಗಾಗಿ ಅಷ್ಟೆಲ್ಲ ಶ್ರಮ ಹಾಕಿದರೂ, ಕೊನೆಗೆ ಹಬ್ಬದಂದು  ಉಪವಾಸ ಮಲಗುವ ಅನಿವಾರ್ಯತೆಯನ್ನು ಯಾಕಾದರೂ ಸೃಷ್ಟಿಸಿಕೊಳ್ಳಬೇಕು ಎನಿಸಲಾರಂಭಿಸಿದೆ.