”ಶನಿವಾರ ಸ್ಕೂಲ್ ನಿಂದ ಬಂದಾಗ ಅಂಗಳದಲ್ಲಿ ಕುಂಬಾರ ಸೀನ ಕುಡಿಕೆ ಮಡಿಕೆ ಇಟ್ಟುಕೊಂಡು ಕುಳಿತಿದ್ದ. ನಾನಾ ಆಕಾರದ ಕೆಂಪು ಕಪ್ಪು ಬಣ್ಣದ ಕುಡಿಕೆ ಮಡಿಕೆಗಳು ಹರಡಿಕೊಂಡು ಕುಳಿತಿದ್ದವು. ಅಜ್ಜಿ ಆಯ್ದ ಮಡಕೆಯನ್ನು ತಿರುಗಿಸಿ ಮುರುಗಿಸಿ ನೋಡಿ, ಬೆರಳಿನಿಂದ ಬಾರಿಸಿ, ಟಣ್ ಶಬ್ದ ಬರಿಸಿ ಪರೀಕ್ಷಿಸಿದರು. ರುಕ್ಕು ಕುಳ್ಳಗೆ ಅಗಲ ಬಾಯಿಯಿದ್ದ ಮಡಕೆಯೊಂದನ್ನು ತೋರಿಸಿ ಮೀನು ಬತ್ತಿಸಲು ಲಾಯ್ಕಿದೆ ತಗಣಿ ಅಂದಳು”
ಡಾ. ಎಲ್. ಸಿ. ಸುಮಿತ್ರಾ ಬರೆದ ಪ್ರಬಂಧಗಳ ಸಂಕಲನದಿಂದ ಒಂದು ಅಧ್ಯಾಯ.

(ಚಿತ್ರ: ಸಹ್ಯಾದ್ರಿ ನಾಗರಾಜ್)

ಅಂಗಳದಲ್ಲಿ ಕುಳಿತು ಕುಳಿತು ವಾಟೆಕಾಯಿ ಹೆಚ್ಚುತ್ತಿದ್ದ ಚೆನ್ನಿ ಮತ್ತು ಅಮ್ಮ ಇಬ್ಬರೂ ಮೌನವಾಗಿ ತಮ್ಮ ಕೆಲಸ ಮಾಡುತ್ತಿದ್ದರು. ಬೇಸಿಗೆಯ ಮಧ್ಯಾಹ್ನದ ಮೌನ ತಾನೆತಾನಾಗಿತ್ತು. ಬೇಲಿಯ ಮೇಲೆ ಕುಕಿಲುತ್ತಿದ್ದ ಪಿಕಳಾರಗಳ ಮಧುರಮಾತು, ದಾಸವಾಳ ಪೊದೆಯ ಮೇಲೆ ಒಂದನ್ನೊಂದು ಅಟ್ಟಾಡಿಸುತ್ತಿದ್ದ ಹೂಹಕ್ಕಿಗಳ ಕಿಚಪಿಚ ಬಿಟ್ಟರೆ ಬೇರೆ ಸದ್ದಿಲ್ಲ. ಟಿ ವಿ, ಮೊಬೈಲ್ ಯಾವುದೂ ಇಲ್ಲದೆ ಕೆಲಸ ಮಾಡಲು ಬೇಕಷ್ಟು ಸಮಯವಿತ್ತು. ಪ್ರತಿಮೆಯಂತೆ ಕುಳಿತಿದ್ದ ಚೆನ್ನಿ ಮೌನ ಮುರಿದು, ‘ಬುಟ್ಟಿ ತುಂಬಿತಲ್ಲ ಚಪ್ಪರದಲ್ಲಿ ಹರಡಿ ಬತ್ತೀನ್ರ’ ಅಂದು ತೆಳ್ಳಗೆ ಬಿಲ್ಲೆಯಂತೆ ಹೆಚ್ಚಿದ ವಾಟೆಕಾಯಿಯನ್ನು ಬುಟ್ಟಿಯಲ್ಲಿ ತುಂಬಿಕೊಂಡು ಹುಷಾರಾಗಿ ಅಡಿಕೆ ಚಪ್ಪರ ಹತ್ತಿದಳು. ಅಡಿಕೆ ಕೊಯಿಲು ಮುಗಿದಿದ್ದರಿಂದ ಅಲ್ಲಿ ಮೂಲೆಯ ತಟ್ಟಿಯಲ್ಲಿದ್ದ ಸ್ವಲ್ಪ ಗೋಟಡಿಕೆ ಬಿಟ್ಟರೆ ಉಳಿದದ್ದೆಲ್ಲ ಒಣಗಲು ಹಾಕಿದ್ದ ಕಾಳು ಮೆಣಸು, ಯಾಲಕ್ಕಿ, ಕಾಫಿಬೀಜ, ಜೀರಕನ ಹುಳಿ ಹೀಗೆ ಅಡಿಕೆಯೊಂದನ್ನು ಬಿಟ್ಟು ಬೇರೆಲ್ಲ ಇತ್ತು. ಖಾಲಿಯಿದ್ದ ತಟ್ಟಿಯಲ್ಲಿ ವಾಟೆಹುಳಿಯನ್ನು ಅವಳು ಬಿಡಿಸಿ ಬಿಡಿಸಿ ಒಣಗಲು ಹರಡಿ ಮತ್ತೆ ಬಂದು ವಾಟೆಕಾಯಿ ಹೆಚ್ಚತೊಡಗಿದಳು.

ಮೆಟ್ಕತ್ತಿಯ ಮೇಲೆ ಕುಳಿತಿದ್ದ ಅಮ್ಮ ಕಾಯಿಗಳನ್ನು ಒಂದೇ ಗಾತ್ರದಲ್ಲಿ ಹೆಚ್ಚುತ್ತ, ಮಧ್ಯೆ ಮಧ್ಯೆ ಅಡಿಕೆ ಹಾಳೆಯ ಬೀಸಣಿಗೆಯಿಂದ ಗಾಳಿ ಬೀಸಿಕೊಳ್ಳುತ್ತಿದ್ದರು. ಒಳಗಡೆಯಿಂದ ಬಂದ ಅಜ್ಜಿ ಬೆಲ್ಲ, ಹೆಸರುಬೇಳೆಯ ಪಾನಕ ತಂದುಕೊಟ್ಟರು. ಗೇಟಿನ ಬಳಿ ಟೈಗರ್ ಬೊಗಳಿದ ಸದ್ದು ಕೇಳಿ ಎಲ್ಲರು ಕತ್ತು ಚಾಚಿ ನೋಡಿದರು.
‘ಇದಕ್ಕೇನು ಬುದ್ದಿಯಿಲ್ದ, ನಾನಲ್ದ’
ಅಂತ ಟೈಗರ್ ನ ಸಮಾಧಾನ ಮಾಡ್ತ ಬಂದವಳು ಬಳೆಗಾರ್ತಿ ಪದ್ದು. ಇನ್ನೂ ಬೊಗಳುತ್ತಿದ್ದ ಜೂಲುನಾಯಿ ಬೆಳ್ಳಿಯನ್ನು ನೋಡಿ ಅಲ್ಲೆ ನಿಂತಳು, ‘ಅದನ್ನು ಕಟ್ಟಿಹಾಕಿದಾರೆ ಬಾ ಮಾರಾಯ್ತಿ‘ ಅಂದಾಗಲೇ, ಹುಷಾರಾಗಿ ಹೆಗಲ ಮೇಲಿದ್ದ ಬಳೆಚೀಲವನ್ನು ಇಳಿಸಿ ಕೆಂಪು ಸಿಮೆಂಟ್ ನೆಲದ ಮೇಲಿಟ್ಟು ತಾನೂ ಕುಳಿತು ಸೆರಗಿನಿಂದ ಗಾಳಿ ಬೀಸಿಕೊಂಡು ಸುಧಾರಿಸಿಕೊಂಡು ಸುತ್ತಲೂ ನೋಡಿ  ‘ಸ್ವಲ್ಪ ನೀರು ಕೊಡಿ ಅಮ್ಮ’ ಅಂದಳು, ನೀರಿನ ಜತೆಗೆ ಪಾನಕವೂ ಬಂತು. ಕುಡಿದು ಸುಧಾರಿಸಿದ ಮೇಲೆ ‘ಓ ಸ್ಯಣಮ್ಮಂಗ್ ರಜ ಇವತ್ತು ಭಾನುವಾರ’ ಹೇಳ್ತಾ ನಿಧಾನವಾಗಿ ಬಳೆ ಚೀಲ ತೆರೆದಳು. ಮೆಟ್ಟುಗತ್ತಿ ಮಡಚಿಟ್ಟು ಮೊದಲು ಬಂದವಳು ಚೆನ್ನಿ. ಆಮೇಲೆ ಅಂಗಳ ಗುಡಿಸುವುದನ್ನು ನಿಲ್ಲಿಸಿ ಅಕ್ಕಣಿ ಬಂದು ಚೆನ್ನಿಯ ಪಕ್ಕ ಕುಳಿತುಕೊಳ್ಳುವಾಗ ಇನ್ನೊಂದು ದಿಕ್ಕಿನಲ್ಲಿ ಅಜ್ಜಿ ಆಮೇಲೆ ಅಮ್ಮ ಬಂದು ಕುಳಿತರು. ಆದರೆ ಪದ್ದು ಮೊದಲು ಕೇಳಿದ್ದು ಸಣ್ಣಮ್ಮನಿಗೆ. ಯಾವ ಬಳೆ? ವರ್ಕಿಂದಾ? ಸಾದಾವ? ಹಸಿರು, ನೀಲಿ, ಕೆಂಪು ಸಾಣಿ ಬಳೆಗಳು, ಚುಕ್ಕಿ ಬಳೆಗಳು, ದಪ್ಪ ಪ್ಲಾಸ್ಟಿಕ್ ಬಳೆಗಳು. ಯಾವುದು? “ನನಗೆ ನೀಲಿ ಬಣ್ಣದ್ದು ಇರಲಿ” ಅವಳು ಕೈಗೆ ನೀಲಿ ಬಣ್ಣದ ಬಳೆ ತೊಡಿಸಲು ಬಂದಳು. ‘ನಾನು ಆಮೆಲೆ ಇಟ್ಟುಕೊಳ್ಳುತ್ತೇನೆ ಕೈಲಿ ಕೊಡು’. ‘ಆಯಿತು ತೆಕ್ಕಣಿ ಎರಡು ಜಾಸ್ತಿ ತೆಕ್ಕಣಿ, ಇಡ್ವಾಗ ಒಡೀಬಹುದು’. ಅಮ್ಮನ ಕೈಗೂ ಅಜ್ಜಿ ಕೈಗೂ, ಕೆಂಪು, ಹಸಿರು ಬಳೆ ಆದ ಮೇಲೆ ಅಕ್ಕಣಿ ತೊಟ್ಟುಕೊಂಡಳು. ಚೆನ್ನಿ ಬಳೆ ಇಡುವಂತಿಲ್ಲ. ಎಲ್ಲ ಆದಮೇಲೆ ಬಳಗಾರ್ತಿ ಅಪ್ಪನ ಬಳಿ ದುಡ್ದು ತೆಗೆದುಕೊಂಡು, ಅಜ್ಜಿ ಕೊಟ್ಟ ಎಲಡಿಕೆಯನ್ನು ಹಾಕಿಕೊಂಡು ಅಮ್ಮನ ಹತ್ತಿರ ಸ್ವಲ್ಪ ಬಸಳೆಸೊಪ್ಪು ಕೇಳಿ ತೆಗೆದುಕೊಂಡು ಹೊರಟಳು. ಅವಳು ಮೆಟ್ಟಿಲಿಳಿದಳೊ ಇಲ್ಲವೋ, ಕೊರಗರ ಸೇಸಿಯ ಆಗಮನವಾಯಿತು. ಟೈಗರ್ ಸೇಸಿಯ ಬುಟ್ಟಿಯ ಕಡೆಗೊಮ್ಮೆ, ಗೇಟಿನಾಚೆಗೆ ಹೋಗುತ್ತಿದ್ದ ಪದ್ದುವಿನ ಕಡೆಗೊಮ್ಮೆ ನೋಡುತ್ತ ಲಯಬದ್ಧವಾಗಿ ಬೊಗಳುತ್ತಿತ್ತು. ಗದರಿದಾಗ ಸುಮ್ಮನಾಯಿತು. ನಾಯಿ ಕಟ್ಟಿರುವುದನ್ನು ಖಚಿತಪಡಿಸಿಕೊಂಡು ಸೇಸಿ ಅಂಗಳದೊಳಗೆ ಬಂದು ಮೆಟ್ಟಿಲ ಬಳಿ ಬುಟ್ಟಿ ಕೆಳಗಿಟ್ಟಳು.

ಇನ್ನೂ ಬೊಗಳುತ್ತಿದ್ದ ಜೂಲುನಾಯಿ ಬೆಳ್ಳಿಯನ್ನು ನೋಡಿ ಅಲ್ಲೆ ನಿಂತಳು, ‘ಅದನ್ನು ಕಟ್ಟಿಹಾಕಿದಾರೆ ಬಾ ಮಾರಾಯ್ತಿ‘ ಅಂದಾಗಲೇ, ಹುಷಾರಾಗಿ ಹೆಗಲ ಮೇಲಿದ್ದ ಬಳೆಚೀಲವನ್ನು ಇಳಿಸಿ ಕೆಂಪು ಸಿಮೆಂಟ್ ನೆಲದ ಮೇಲಿಟ್ಟು ತಾನೂ ಕುಳಿತು ಸೆರಗಿನಿಂದ ಗಾಳಿ ಬೀಸಿಕೊಂಡು ಸುಧಾರಿಸಿಕೊಂಡು ಸುತ್ತಲೂ ನೋಡಿ  ‘ಸ್ವಲ್ಪ ನೀರು ಕೊಡಿ ಅಮ್ಮ’ ಅಂದಳು, ನೀರಿನ ಜತೆಗೆ ಪಾನಕವೂ ಬಂತು. ಕುಡಿದು ಸುಧಾರಿಸಿದ ಮೇಲೆ ‘ಓ ಸ್ಯಣಮ್ಮಂಗ್ ರಜ ಇವತ್ತು ಭಾನುವಾರ’ ಹೇಳ್ತಾ ನಿಧಾನವಾಗಿ ಬಳೆ ಚೀಲ ತೆರೆದಳು. ಮೆಟ್ಟುಗತ್ತಿ ಮಡಚಿಟ್ಟು ಮೊದಲು ಬಂದವಳು ಚೆನ್ನಿ. ಆಮೇಲೆ ಅಂಗಳ ಗುಡಿಸುವುದನ್ನು ನಿಲ್ಲಿಸಿ ಅಕ್ಕಣಿ ಬಂದು ಚೆನ್ನಿಯ ಪಕ್ಕ ಕುಳಿತುಕೊಳ್ಳುವಾಗ ಇನ್ನೊಂದು ದಿಕ್ಕಿನಲ್ಲಿ ಅಜ್ಜಿ ಆಮೇಲೆ ಅಮ್ಮ ಬಂದು ಕುಳಿತರು. ಆದರೆ ಪದ್ದು ಮೊದಲು ಕೇಳಿದ್ದು ಸಣ್ಣಮ್ಮನಿಗೆ. ಯಾವ ಬಳೆ? ವರ್ಕಿಂದಾ? ಸಾದಾವ? ಹಸಿರು, ನೀಲಿ, ಕೆಂಪು ಸಾಣಿ ಬಳೆಗಳು, ಚುಕ್ಕಿ ಬಳೆಗಳು, ದಪ್ಪ ಪ್ಲಾಸ್ಟಿಕ್ ಬಳೆಗಳು. ಯಾವುದು? “ನನಗೆ ನೀಲಿ ಬಣ್ಣದ್ದು ಇರಲಿ” ಅವಳು ಕೈಗೆ ನೀಲಿ ಬಣ್ಣದ ಬಳೆ ತೊಡಿಸಲು ಬಂದಳು.

ಪದ್ದು ಬಂದುಹೋಗಿದ್ದೆ ಸುಳ್ಳೆನ್ನುವಂತೆ ಕೊರಾತಿಯ ಬುಟ್ಟಿಯ ಲೋಕ ಅಲ್ಲೆಲ್ಲ ವಿಸ್ತರಿಸಿಕೊಂಡಿತು. ಗುಂಡನೆಯ ಗೆರಸಿ, ಚಪ್ಪಟೆ ಆಕಾರದ ಬುಟ್ಟಿ, ಸಿಬ್ಬಲ, ದೊಡ್ದ ಬುಟ್ಟಿ, ಚಿಕ್ಕ ಬುಟ್ಟಿ, ಹೂವಿನಬುಟ್ಟಿ ಎಲ್ಲವನ್ನು ದರಗಿನ ಜಲ್ಲೆಯಲ್ಲಿ ಅಡಕವಾಗಿಟ್ಟುಕೊಂಡಿದ್ದನ್ನು ಹೊರಗೆ ತೆಗೆದು ಬಿಡಿಸಿ ಇಟ್ಟಳು. ಎತ್ತುಗಳಿಗೆ ಹುರುಳಿ ಕೊಡಲು ಬೇಕೆಂದು ಮಂಜ ಎರಡು ಬುಟ್ಟಿ ತೆಗೆದಿಟ್ಟುಕೊಂಡ. ಅಕ್ಕಣಿ ದರಗಿನ ಜಲ್ಲೆ ಚೆನ್ನಾಗವೆ ಅಮ್ಮಾ ತಗಳಿ ಅಂದ ತರಗು ತುಂಬುವ ಜಲ್ಲೆಗಳೆರಡನ್ನು ಪ್ರತ್ಯೇಕವಾಗಿಟ್ಟಳು. ದೊಡ್ದ ಗೆರಸಿ ಮೆಣಸು ಕಾಳು, ಏಲಕ್ಕಿ ಒಣಗಿಸಲು ಚೆನ್ನಾಗಿದೆ ಅಂತ ತೆಗೆದುಕೊಂಡರು. ಅಜ್ಜಿಯ ಕಣ್ಣು ಹೂಬುಟ್ಟಿಯ ಮೇಲೆ ಇರುವುದನ್ನು ಗಮನಿಸಿ ಸೇಸಿ “ಅಮ್ಮ ಸಣ್ಣ ಸಲಕಿನಿಂದ ಹೆಣೆದಿದ್ದು, ಗಟ್ಟಿಯಾಗಿದೆ, ನಾನ್ ಸತ್ರು ಬುಟ್ಟಿ ನನ್ ನೆನಪು ಮಾಡ್ತದೆ”. ಬುಟ್ಟಿಯನ್ನು ಅಜ್ಜಿಯ ಕೈಗೆ ಕೊಟ್ಟಳು. ರಸ್ತೆಯಲ್ಲಿ ಹೋಗುತ್ತಿದ್ದ ತಮ್ಮಯ್ಯ ಬುಟ್ಟಿ ನೋಡಿ ಬಂದು ಚೌಕಾಸಿ ಮಾಡಿ ಎರಡು ಬುಟ್ಟಿ ಕೊಂಡಾಗ ಸೇಸಿಯ ಬುಟ್ಟಿಗಳೆಲ್ಲ ಖಾಲಿಯಾಗಿ ಎರಡು ಮೊರ ಮಾತ್ರ ಉಳಿದವು. ಕುಳ್ಳಗಿದ್ದ ಸೇಸಿಯ ಕೂದಲು ಗುಂಗುರಾಗಿದ್ದವು. ಅವಳು ಸೀರೆಯನ್ನು ಕಾಲು ಕಾಣುವಷ್ಟು ಗಿಡ್ಡ ಉಟ್ಟುಕೊಂಡಿದ್ದಳು. ಅವಳು ಹಿತ್ತಿಲಬಾಗಿಲ ಕಡೆ ಹೋಗಿ ಮಜ್ಜಿಗೆ ಕೇಳಿ ಕುಡಿದು, ದುಡ್ದು ಅಕ್ಕಿ ತೆಗೆದುಕೊಂಡು ಹೊರಟಳು. ಅವಳು ಹೋದ ಮೇಲೂ ತಾವು ಕೊಂಡ ಬುಟ್ಟಿಗಳ ಕುರಿತು ಮಾತು ಮುಂದುವರೆಯಿತು.

ಶನಿವಾರ ಸ್ಕೂಲ್ ನಿಂದ ಬಂದಾಗ ಅಂಗಳದಲ್ಲಿ ಕುಂಬಾರ ಸೀನ ಕುಡಿಕೆ ಮಡಿಕೆ ಇಟ್ಟುಕೊಂಡು ಕುಳಿತಿದ್ದ. ನಾನಾ ಆಕಾರದ ಕೆಂಪು ಕಪ್ಪು ಬಣ್ಣದ ಕುಡಿಕೆ ಮಡಿಕೆಗಳು ಹರಡಿಕೊಂಡು ಕುಳಿತಿದ್ದವು. ಅಜ್ಜಿ ಆಯ್ದ ಮಡಕೆಯನ್ನು ತಿರುಗಿಸಿ ಮುರುಗಿಸಿ ನೋಡಿ, ಬೆರಳಿನಿಂದ ಬಾರಿಸಿ, ಟಣ್ ಶಬ್ದ ಬರಿಸಿ ಪರೀಕ್ಷಿಸಿದರು. ರುಕ್ಕು ಕುಳ್ಳಗೆ ಅಗಲ ಬಾಯಿಯಿದ್ದ ಮಡಕೆಯೊಂದನ್ನು ತೋರಿಸಿ ಮೀನು ಬತ್ತಿಸಲು ಲಾಯ್ಕಿದೆ ತಗಣಿ ಅಂದಳು. ಅಜ್ಜಿ ಮೊಸರು ಇಡಲು ಕಪ್ಪಗೆ ಬೇಯಿಸಿದ ಮಡಕೆಯನ್ನು ತೆಗೆದುಕೊಂಡರು, ಹಾಲು ಹೆಪ್ಪು ಹಾಕಿಡಲು ಬಳಸುತ್ತಿದ್ದ ಜಿಡ್ಡಿನಿಂದ ಹೊಳೆಯುತ್ತಿದ್ದ ಮೊಸರು ಮಡಕೆಯನ್ನು ಬೆಕ್ಕು ಒಡೆದುಹಾಕಿತ್ತು. ಜೊತೆಗೆ ಎರಡು ಗುಂಡನೆಯ ಗುಂಡಾಲಗಳು. ಅವುಗಳ ಒಳಗೆ ಅಕ್ಕಿಕಾಳು ಹಾಕಿ ಒಳಗೆ ತೆಗೆದುಕೊಂಡು ಹೋದರು. ರುಕ್ಕು ನನಗೊಂದು ‘ಕೊಡ’ ಬೇಕು ಎಂದು ಬಂದು ಕೊಡ ನೋಡುವ ಗಡಿಬಿಡಿಯಲ್ಲಿ ಹೂಜಿಯ ಮೂತಿ ಮುಕ್ಕಾಗಿಸಿದಳು. ಮಡಕೆ ವ್ಯಾಪಾರ ಮುಗಿಸಿ ಸೀನ ಹೆಂಡತಿ ಜತೆ ಹಿತ್ತಿಲಕಡೆ ಹೋಗಿ ಕಾಫಿ ತಿಂಡಿ ತಿಂದು ಹೊರಟ. ಪ್ರತಿದಿನ ಎರಡು ಅಥವ ಮೂರು ಮನೆಗೆ ಹೋದರೆ ಅವರ ವ್ಯಾಪಾರ ಮುಗಿಯಿತು.

ಜೈನ ಮುನಿಗಳು ಆಚರಿಸುವ ‘ಚರಿಗೆ’ ಎಂಬ ಹೆಸರಿನ ಭಿಕ್ಷೆಯಂತೆ ಅಂದಿನ ಅಗತ್ಯಕ್ಕೆ ಬೇಕಾದಷ್ಟೆ ಆದರೆ ಸಾಕು. ಆಗ ಟೈಮ್ ಪಾಸ್, ಬೋರ್ ಎಂಬ ಶಬ್ದಗಳೇ ನಮ್ಮ ಪರಿಸರದಲ್ಲಿರಲಿಲ್ಲ. ಎಲ್ಲರೂ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಕೊಂಡಿರುತ್ತಿದ್ದರು. ಇತ್ತೀಚೆಗೆ ಪ್ರೈಮರಿ ಸ್ಕೂಲ್ ಓದುತ್ತಿದ್ದ ಮಗುವಿನ ಬಾಯಿಯಲ್ಲಿ ಈ ಪದ ಕೇಳಿ ಆಶ್ಚರ್ಯವಾಯಿತು. ಅಜ್ಜಿಯ ಮನೆಗೆ ಹಳ್ಳಿಗೆ ಬಂದಿದ್ದ ಆ ಮಗು ಅಲ್ಲಿ ಯಾವಾಗಲೂ ಕರೆಂಟ್ ಇರಲ್ಲ. ಟಿ ವಿ ಇಲ್ಲ ಬೋರ್ ಆಗುತ್ತೆ ನನಗೆ ಎಂದು ಹಠ ಮಾಡಿ ಎರಡೆ ದಿನಕ್ಕೆ ವಾಪಸ್ ಹೋದಳು ಅಂತ ಅವಳಜ್ಜಿ ಬೇಸರಪಟ್ಟುಕೊಂಡರು.

(ಚಿತ್ರ: ಪ್ರವರ ಕೊಟ್ಟೂರು)

ಪದ್ದು ಬಂದುಹೋಗಿದ್ದೆ ಸುಳ್ಳೆನ್ನುವಂತೆ ಕೊರಾತಿಯ ಬುಟ್ಟಿಯ ಲೋಕ ಅಲ್ಲೆಲ್ಲ ವಿಸ್ತರಿಸಿಕೊಂಡಿತು. ಗುಂಡನೆಯ ಗೆರಸಿ, ಚಪ್ಪಟೆ ಆಕಾರದ ಬುಟ್ಟಿ, ಸಿಬ್ಬಲ, ದೊಡ್ದ ಬುಟ್ಟಿ, ಚಿಕ್ಕ ಬುಟ್ಟಿ, ಹೂವಿನಬುಟ್ಟಿ ಎಲ್ಲವನ್ನು ದರಗಿನ ಜಲ್ಲೆಯಲ್ಲಿ ಅಡಕವಾಗಿಟ್ಟುಕೊಂಡಿದ್ದನ್ನು ಹೊರಗೆ ತೆಗೆದು ಬಿಡಿಸಿ ಇಟ್ಟಳು. ಎತ್ತುಗಳಿಗೆ ಹುರುಳಿ ಕೊಡಲು ಬೇಕೆಂದು ಮಂಜ ಎರಡು ಬುಟ್ಟಿ ತೆಗೆದಿಟ್ಟುಕೊಂಡ. ಅಕ್ಕಣಿ ದರಗಿನ ಜಲ್ಲೆ ಚೆನ್ನಾಗವೆ ಅಮ್ಮಾ ತಗಳಿ ಅಂದ ತರಗು ತುಂಬುವ ಜಲ್ಲೆಗಳೆರಡನ್ನು ಪ್ರತ್ಯೇಕವಾಗಿಟ್ಟಳು. ದೊಡ್ದ ಗೆರಸಿ ಮೆಣಸು ಕಾಳು, ಏಲಕ್ಕಿ ಒಣಗಿಸಲು ಚೆನ್ನಾಗಿದೆ ಅಂತ ತೆಗೆದುಕೊಂಡರು. ಅಜ್ಜಿಯ ಕಣ್ಣು ಹೂಬುಟ್ಟಿಯ ಮೇಲೆ ಇರುವುದನ್ನು ಗಮನಿಸಿ ಸೇಸಿ “ಅಮ್ಮ ಸಣ್ಣ ಸಲಕಿನಿಂದ ಹೆಣೆದಿದ್ದು, ಗಟ್ಟಿಯಾಗಿದೆ, ನಾನ್ ಸತ್ರು ಬುಟ್ಟಿ ನನ್ ನೆನಪು ಮಾಡ್ತದೆ”. ಬುಟ್ಟಿಯನ್ನು ಅಜ್ಜಿಯ ಕೈಗೆ ಕೊಟ್ಟಳು.

ಸ್ಟೀಲ್ ಪಾತ್ರೆಗಳ ಬಳಕೆ ಸುಲಭವಾದಮೇಲೆ ಈಗ ಮನೆಗೆ ಯಾರೂ ಮಡಕೆ ಮಾರಲು ತರುವುದಿಲ್ಲ. ಮನೆಯಲ್ಲಿ ಬಳಸುವುದೂ ಇಲ್ಲ. ‘ದೀಪಾವಳೀ ಹಣತೆ’ ಎಂದು ಕೂಗುತ್ತಾ ಬರುವ ಹಣತೆ ಮಾರುವವರ ಬಳಿ ಬೇಕಿಲ್ಲದಿದ್ದರೂ ಜಾಸ್ತಿ ಹಣತೆಗಳನ್ನು ಕೊಳ್ಳುತ್ತೇನೆ. ‘ಅಕ್ಕ ಈ ಹಣತೆ ಮಾಡಲು ಕೆಲಸ ಜಾಸ್ತಿ ಏನೂ ಗಿಟ್ಟುವುದಿಲ್ಲ. ಮೊದಲಿನಿಂದ ಮಾಡಿದ್ದನ್ನು ಬಿಡಬಾರದು ಅಂತ ಮಾಡ್ತಿದೀವಿ’. ಅನ್ನುವವರ ಎದುರು ಆ ಕಾಲದ ಮಾತೇ ಇಲ್ಲದೆ ಮಡಕೆ ಮಾರುತ್ತಿದ್ದ ಕುಂಬಾರ ಕಲಾವಿದನಂತೆ ಕಾಣುತ್ತಿದ್ದ. ಪುಂಗಿ ಊದಿ ಹಾವು ತೋರಿಸುವ ಹಾವಾಡಿಗನಿಗಿಂತ ಅವನ ಹೆಂಡತಿ ಮಾರುತ್ತಿದ್ದ ಮಣಿಸರಕಿನ ಪಿನ್ನು, ಚೌರಿರಿಬ್ಬನ್ನು ಇತ್ಯಾದಿಗಳೇ ಆಕರ್ಷಕವಾಗಿರುತ್ತಿದ್ದವು.

ರಜೆಯಲ್ಲಿ ಅಜ್ಜಿ ಮನೆಗೆ ಹೋದಾಗ ಅಲ್ಲಿ ತೀರ್ಥಹಳ್ಳಿಯಿಂದ ಬಿದಿರಿನ ಗೂಡೆಯಲ್ಲಿ ತಿಂಡಿ ಪದಾರ್ಥಗಳನ್ನು ಹೊತ್ತುಕೊಂಡು ಮಾರಲು ತರುತ್ತಿದ್ದ ಪುಟ್ಟಯ್ಯನೆಂಬುವನು, ಅವನು ಬರವುದು ಅವನು ಹೊತ್ತುಕೊಂಡಿರುತ್ತಿದ್ದ ದೊಡ್ದ ಗೂಡೆಯಿಂದಾಗಿ ಬಹಳ ದೂರಕ್ಕೆ ಕಾಣುತ್ತಿತ್ತು. ಮಿಠಾಯಿ, ಕಾರಶೇವು. ಕಮ್ಮರ್ಕಟ್, ಕಡಲೆಪುರಿಗಳ ಆಸೆಯಿಂದ ಅವನು ಅಂದು ಬುಟ್ಟಿ ಇಳಿಸುವುದನ್ನೇ ಕಾಯುತ್ತಿದ್ದೆವು. ಆ ದೊಡ್ಡ ಬಿದಿರನ ಬುಟ್ಟಿಯಿಂದ ಹೊರಬರುತ್ತಿದ್ದ ತಿಂಡಿಗಳು ಎಲ್ಲೆಲೋ ಇದ್ದ ಮಕ್ಕಳನ್ನೆಲ್ಲ ಆಕರ್ಷಿಸುತ್ತಿತ್ತು, ಅಮ್ಮನೋ ಅಜ್ಜಿಯೋ ಕೆಲವು ತಿಂಡಿಗಳನ್ನು ಕೊಡಿಸುತ್ತಿದರು. ತೀರ್ಥಹಳ್ಳಿಯ ಬಟ್ಟೆ ವ್ಯಾಪಾರಿಯೊಬ್ಬರು ತಲೆಯ ಮೇಲೆ ಸೀರೆ ಗಂಟನ್ನು ಹೊತ್ತು ಮಾರಲು ತರುತ್ತಿದ್ದರು. ಅವರ ಹತ್ತಿರ ರೇಶ್ಮೆ ಸೀರೆಗಳೂ ಇರುತ್ತಿದ್ದವು. ಹೀಗೆ ಒಮ್ಮೆ ಇಳಿಮಧ್ಯಾಹ್ನದ ಸಮಯ ಚಿಕ್ಕು ಕಾಯಿ ತಿಂದು ಮನೆಯೊಳಗೆ ಬರುವಾಗಲೇ ಜಗುಲಿಯಲ್ಲಿ ಸೀರೆ ಹರಡಿಕೊಂಡು ಕುಳಿತಿದ್ದು ಕಣ್ಣಿಗೆ ಬಿದ್ದಾಗ ನಾವೆಲ್ಲ ಸುತ್ತಲೂ ನೆರೆದೆವು. ಅಜ್ಜಿ ಬೀಟ್ರೂಟ್ ಬಣ್ಣದ ಸೀರೆಯನ್ನು ಕೈಲಿ ಹಿಡಿದು ಪರೀಕ್ಷಿಸುತ್ತಿದ್ದರು. ನೀಲಿ, ನೇರಳೆ ಬಣ್ಣದ ಸೀರೆಗಳನ್ನು ನೋಡುತ್ತಿದ್ದ ನಮಗೆ ಕೈಯಲ್ಲಿನ ಚಿಕ್ಕೂ ಮೇಣ ಸೀರೆಗೆ ಹಿಡಿಯುತ್ತೆ ಮುಟ್ಟಬೇಡಿ ಎಂಬ ಆದೇಶ ಬಂತು. ‘ಬಣ್ಣ ಹೋಗಲ್ಲ ತಾನೆ?’, ಅಜ್ಜಿಯ ಪ್ರಶ್ನೆ, ‘ಬಣ್ಣ ಹೋದರೆ ನಿಮ್ಮ ದುಡ್ಡು ವಾಪಸ್’. ಅಜ್ಜಿ ಸೀರೆಗೆ ಹಣ ಕೊಟ್ಟ ಮೇಲೆ ಅದರ ಒಂದು ತುದಿಯನ್ನು ನೀರಿನಲ್ಲಿ ನೆನೆಸಿ ಹಿಂಡಿದರು. ತೆಳುವಾಗಿ ಕಂಡೂ ಕಾಣದಂತೆ ನೀರಿಗೆ ಬಣ್ಣ ಬಂತು. ಆ ಸೀರೆ ಬಹಳ ಇಷ್ಟವಾಗಿದ್ದರಿಂದ ಅಜ್ಜಿ ತೊಗೊಂಡರು.. ಸೀರೆಗಳು ಮಧ್ಯಾಹ್ನವನ್ನೆಲ್ಲ ಬಣ್ಣದಿಂದ ತುಂಬಿದ್ದವು.

ಜೈನ ಮುನಿಗಳು ಆಚರಿಸುವ ‘ಚರಿಗೆ’ ಎಂಬ ಹೆಸರಿನ ಭಿಕ್ಷೆಯಂತೆ ಅಂದಿನ ಅಗತ್ಯಕ್ಕೆ ಬೇಕಾದಷ್ಟೆ ಆದರೆ ಸಾಕು. ಆಗ ಟೈಮ್ ಪಾಸ್, ಬೋರ್ ಎಂಬ ಶಬ್ದಗಳೇ ನಮ್ಮ ಪರಿಸರದಲ್ಲಿರಲಿಲ್ಲ. ಎಲ್ಲರೂ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಕೊಂಡಿರುತ್ತಿದ್ದರು. ಇತ್ತೀಚೆಗೆ ಪ್ರೈಮರಿ ಸ್ಕೂಲ್ ಓದುತ್ತಿದ್ದ ಮಗುವಿನ ಬಾಯಿಯಲ್ಲಿ ಈ ಪದ ಕೇಳಿ ಆಶ್ಚರ್ಯವಾಯಿತು. ಅಜ್ಜಿಯ ಮನೆಗೆ ಹಳ್ಳಿಗೆ ಬಂದಿದ್ದ ಆ ಮಗು ಅಲ್ಲಿ ಯಾವಾಗಲೂ ಕರೆಂಟ್ ಇರಲ್ಲ. ಟಿ ವಿ ಇಲ್ಲ ಬೋರ್ ಆಗುತ್ತೆ ನನಗೆ ಎಂದು ಹಠ ಮಾಡಿ ಎರಡೆ ದಿನಕ್ಕೆ ವಾಪಸ್ ಹೋದಳು ಅಂತ ಅವಳಜ್ಜಿ ಬೇಸರಪಟ್ಟುಕೊಂಡರು.

ಹಳ್ಳಿ ಮನೆಯ ಪ್ರಶಾಂತ ಅಂಗಳದಲ್ಲಿ ಅಪರಿಚಿತ ಅಥವ ಪರಿಚಿತ ವ್ಯಾಪಾರಿ ಬಂದರೆ ಸಂತಸದ ಸ್ವಾಗತವಿತ್ತು. ವರುಷಕ್ಕೊಮ್ಮೆ ಸಂಕ್ರಾಂತಿಯ ವೇಳೆಗೆ ಬಯಲು ಸೀಮೆಯ ಕಡೆಯಿಂದ ಮಲೆನಾಡಿನಲ್ಲಿ ಬೆಳೆಯದ ಜೀರಿಗೆ, ಕೊತ್ತಂಬರಿ, ಉದ್ದು, ಕಡಲೆ, ಹೆಸರು ಬೇಳೆ, ಬ್ಯಾಡಗಿ ಮೆಣಸಿನಕಾಯಿಗಳನ್ನು ಮಾರುವವರು ಬರುತ್ತಿದ್ದರು. ಗೋಟಡಿಕೆಯನ್ನು ತೆಗೆದುಕೊಂಡು ಬದಲಿಗೆ ಕಾಳು ಬೇಳೆ ಕೊಡುತ್ತಿದ್ದರು. ಅದು ನಮಗೂ ಖುಶಿಯ ಸಮಯ, ಆ ದಿನಸಿ ಪದಾರ್ಥಗಳಲ್ಲಿ ಹುರಿಗಡಲೆ, ಶೇಂಗಾ ಕೂಡ ಇರುತ್ತಿದ್ದವು. ಪೂರ್ತಿ ಅರ್ಧ ದಿನ ಈ ಎಕ್ಸ್ಚೇಂಜ್ ವ್ಯಾಪಾರ ನಡೆಯುತ್ತಿತ್ತು. ಸಂಕ್ರಾಂತಿ ಹೊತ್ತಿಗೆ ತೆಗೆದುಕೊಂಡ ಬೇಳೆಕಾಳುಗಳು ಮುಂದಿನ ದೀಪಾವಳಿಯವರೆಗೂ ಸಾಕಾಗುವಷ್ಟಿರುತ್ತಿತ್ತು. ಈ ವ್ಯಾಪಾರದ ವೇಳೆಯಲ್ಲಿ ಬಯಲು ಸೀಮೆಯ ರೈತರ ಕಷ್ಟಗಳೂ ಮಲೆನಾಡಿನ ರೈತರ ಕಷ್ಟಗಳೂ ಮಾತಿನಲ್ಲಿ ಬರುತ್ತಿದ್ದವು..

ಹೀಗೆ ಬರುವವರು ದೈನಂದಿನ ಬದುಕಿನ ಏಕತಾನತೆಯನ್ನು ಮುರಿಯುತ್ತಿದ್ದರು. ಸಂಜೆ ಮಾತ್ರ ರೇಡಿಯೋ ಕೇಳುವ ಸಮಯ, ನ್ಯೂಸ್ ಪೇಪರ್ ಸಿಗುತ್ತಿದ್ದುದು ಸಂಜೆಯೇ. ಇಂತಹ ಪರಿಸರದಲ್ಲಿ ಹೊರಗಿನಿಂದ ಬರುವ ಹೊತ್ತು ಮಾರುವವರಿಗೆ ಸ್ವಾಗತವಿತ್ತು. ಆ ನಂತರದ ವರ್ಷಗಳಲ್ಲಿ ದೀಪಕ್ ಡೆ, ಎಂಬ ಹೆಸರಿನ ಬಂಗಾಳಿಯೊಬ್ಬ ಬಂಗಾಳಿ ಕೈಮಗ್ಗದ ಸೀರೆಗಳನ್ನು ತಂದು ಮಾರುವವನು ವರ್ಷಕ್ಕೊಮ್ಮೆ ನಮ್ಮ ಮನೆಗೆ ಬರುತ್ತಿದ್ದ. ಅವನು ನಮ್ಮ ಹಳ್ಳಿಗೂ ಬಂದು ಹೋಗುತ್ತಿದ್ದ. ಪುರುಲಿಯ, ಎಂಬ ಬಂಗಾಳದ ಹಳ್ಳಿಯ ಹೆಸರು ಅವನು ತರುತ್ತಿದ್ದ ಆ ಊರಿನಲ್ಲಿ ನೇಯ್ದ ಕೈಮಗ್ಗದ ಸೀರೆಗಳಿಂದಾಗಿ ಪರಿಚಿತವಾಯ್ತು. ಟಾಂಗಾಯಿಲ್, ಜಾಮ್ದಾನಿ, ಶಾಂತಿನಿಕೇತನ ಸೀರೆಗಳು. ಡಾಕ್ಕ ರೇಷ್ಮೆ ಸೀರೆಗಳು ಸುಂದರವಾದ ಕೈಕಸೂತಿ ಹೆಣೆದ ತಿಳಿಬಣ್ಣದ ಬೆಡ್ ಶೀಟ್ ಗಳು ಹೀಗೆ ತರಹೆವಾರಿ ವಸ್ತುಗಳು ಅವನ ಬಟ್ಟೆಗಂಟಿನಲ್ಲಿರುತ್ತಿದ್ದವು. ಸೀರೆಗಳನ್ನು ತೋರಿಸುತ್ತ “ಮೊಮತ ದೀದಿ ಇಂತದೇ ಸೀರೆ ಉಡುವುದು” ಎಂದು ಯಾವುದೊ ಸೀರೆ ತೋರಿಸುತ್ತಿದ್ದ. ಮಮತಾ ಬ್ಯಾನರ್ಜಿಯವರ ಸರಳ ಜೀವನದ ಕುರಿತು ಮಾತಾಡುತ್ತಲೇ ಮತ್ತೆ ಸೀರೆಯ ಗಂಟು ಕಟ್ಟುತ್ತಿದ್ದ. ದುರ್ಗಾಪೂಜೆಯ ಸಮಯಕ್ಕೆ ನೀವು ಬನ್ನಿ ಎಂದು ಆಹ್ವಾನನೀಡುತ್ತಿದ್ದ. ಹೀಗೆ ಹತ್ತು ಹನ್ನೆರಡು ವರ್ಷ ಬಂದವನು ಈ ಸೀರೆ ವ್ಯಾಪಾರ ಬಿಟ್ಟು ನಮ್ಮ ಊರಲ್ಲೆ ಏನಾದರೂ ವ್ಯಾಪಾರ ಮಾಡ್ತೀನಿ ಅಂತ ಹೇಳಿ ಮತ್ತೆ ಬರಲಿಲ್ಲ.

ಟೀ.ವಿ. ಸೀರಿಯಲ್ ಗಳ ಕೃತಕ ಮೇಕಪ್ಪಿನ ಮುಖಗಳು, ಅಪರಾಧದ ಸುದ್ಧಿಗಳನ್ನು ವೈಭವಿಕರಿಸುವ ನ್ಯೂಸ್ ಚಾನಲ್ ಗಳೂ ಇಲ್ಲದಿದ್ದ ಅಂದಿನ ದಿನಗಳಲ್ಲಿ ನಿಜಕ್ಕೊ ಈ ವ್ಯಾಪಾರಿಗಳು ಮಾರುತ್ತಿದ್ದುದ್ದು ಬರೀ ಸರಕಲ್ಲ. ಬೆಲೆಯುಳ್ಳ ‘ಸಮಯ’ವನ್ನು ಗ್ರಾಮೀಣ ಬದುಕಿನ ಮಧ್ಯಾಹ್ನದ ತೆರಪನ್ನು ತಮ್ಮ ಮಾತು ಮತ್ತು ವಸ್ತುಗಳಿಂದ ಜೀವಂತವಾಗಿ ತುಂಬುತ್ತಿದ್ದ ಅವರು ಕಾಲದ ಅಲೆಯಲ್ಲಿ ತೇಲಿ ಹೋಗಿದ್ದಾರೆ. ಈಗ ಚಿತ್ರ ಬದಲಾಗಿದೆ; ಕರಕುಶಲ ವಸ್ತುಗಳು ನಗರದ ಮೇಳಗಳಲ್ಲಿ ಜಾಗ ಪಡೆದಿವೆ. ಮನೆ ಬಾಗಿಲಿಗೆ ಬರುವ ಅಗ್ಗದ ಪ್ಲಾಸ್ಟಿಕ್, ಎಲೆಕ್ಟ್ರಾನಿಕ್ಸ್, ವಸ್ತುಗಳನ್ನು ಮಾರುವವರು, ‘ನಾನುಮಾರ್ಕೆಟಿಂಗ್ ಸ್ಟಡಿಮಾಡುವ ಸ್ಟುಡೆಂಟ್’ ಅಂತ ತಲೆ ತಿನ್ನುವವರು ಪದೇ ಪದೇ ಕಾಲಿಂಗ್ ಬೆಲ್ ಮಾಡಿ ತೊಂದರೆ ಮಾಡ್ತಾರೆ ಅಂತ ಬೆಲ್ ಸ್ವಿಚ್ ಆಫ್ ಮಾಡಿರ್ತೀನಿ. ಮರದ ಕೆತ್ತನೆಯಲ್ಲಿ ಅಳವಡಿಸಿದ ರಾಜಾಸ್ಥಾನಿ ಕುಸುರಿ ಕೆಲಸದ ಗಂಟೆಯೊಂದನ್ನು ತೂಗುಹಾಕಿದ್ದೇನೆ. ಅದು ನಿಧಾನವಾಗಿ ಸದ್ದು ಮಾಡುತ್ತದೆ. ಬಾಗಿಲು ತೆರೆದು ನೋಡಲು ನನಗೆ ಹೊತ್ತಿಲ್ಲ.

ಡಾ. ಎಲ್. ಸಿ. ಸುಮಿತ್ರಾ ಅವರ ಪ್ರಬಂಧಗಳ ಸಂಕಲನ ’ಗದ್ದೆಯಂಚಿನ ದಾರಿ’ ಓದಿ ವಿಮರ್ಶಕ ಓ ಎಲ್ ನಾಗಭೂಷಣ ಸ್ವಾಮಿ ಬರೆದ ಒಂದು ಆಪ್ತ ಪತ್ರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.