ಸೂರ್ಯ ಕೆಂಪಗಾಗುತ್ತಿದ್ದ. ಹಿಂದಿನ ಸುಮಾರು ಎರಡೂವರೆಕೆರೆ ಜಾಗದಲ್ಲಿ ಸಪಾಟಾಗಿಸಿದ ಹುಲ್ಲು. ಋತುಮಾನಕ್ಕನುಗುಣವಾಗಿ ತನ್ನ ಬಣ್ಣವನ್ನು ಕಳೆದುಕೊಳ್ಳುತ್ತಿತ್ತು. ಅದರ ಹಿಂದೆ ನಿಂತ ನೂರೈವತ್ತು ಮೇಪಲ್ ಮರಗಳು. ಎಲ್ಲವೂ ಎಲೆಗಳನ್ನು ಕಳಕೊಳ್ಳುತ್ತಾ ಮುಂಬರುವ ಹಿಮವನ್ನು ಎದುರಿಸಲು ಬತ್ತಲಾಗುತ್ತಿದ್ದವು. ಕೆಳಗೆ ಬಿದ್ದ ಹಣ್ಣೆಲೆಗಳ ಮೇಲಿನ ಸಂಜೆಯ ತೇವ ವಾತಾವರಣಕ್ಕೆ ಕೊಟ್ಟಿದ್ದ ಒಂದು ಸಿಹಿಯಾದ, ಒಗರಾದ ವಾಸನೆ ಸನ್‌ರೂಮಿನ ಕಿಟಕಿಯ ಸೀಲುಗಳ ಮೂಲಕ ಮನೆಯೊಳಗೆ ಹಣಿಕಿಹಾಕಿತ್ತು.
ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್”ನ ಮೂರನೆಯ ಕಂತು ನಿಮ್ಮ ಓದಿಗಾಗಿ

ಅರವಿಂದನಿಗೆ ಈಗ ಅರವತ್ತೊಂಬತ್ತು, ಸುಕನ್ಯಾಗೆ ಅರವತ್ತಐದು. ಶಾರದತ್ತೆಗೆ ಎಂಬತ್ತೈದಾದರೂ ಆಗಿರಬೇಕು. ವಿನಯನಿಗೆ ಮೂವತ್ತಐದು, ವಿಶೂಗೆ ಇಪ್ಪತ್ತಾರು. ಶಾರದತ್ತೆಗೆ ಹುಷಾರು ತಪ್ಪಿದಾಗ ಆಕೆಯ ಪರಿಸ್ಥಿತಿ ಕೇಳಿ ಸುಕನ್ಯಾಳಿಗೆ ಅಳುವೇ ಬಂದುಬಿಟ್ಟಿತ್ತು. ಶಾರದತ್ತೆಯ ಮೈಕೈ ಎಲ್ಲ ನೀರು ತುಂಬಿ ಬಚ್ಚಲಮನೆತನಕ ನಡೆದರೆ ಏದುಸಿರು ಬರುತ್ತಿತ್ತಂತೆ. ಊತಕ್ಕೆ ಕಾಲಿನ ಚರ್ಮ ಒಡೆದು ನೀರು ಒಸರುತ್ತಿತ್ತಂತೆ. ಕೂತು ಕೂತು ಹಿಂಭಾಗವೆಲ್ಲ ಸೆಳೆತುಹೋಗಿತ್ತಂತೆ. ಶಾರದತ್ತೆಯನ್ನು ಅಲ್ಲಿಯೇ ಭದ್ರಾವತಿಯಲ್ಲಿ ಡಾಕ್ಟರ ಹತ್ತಿರ ತೋರಿಸಿದಾಗ ಅವರು, ಇನ್ನು ಉಳಿಯುವ ಅವಕಾಶಗಳು ಬಹಳ ಕಡಿಮೆ ಎಂದು ಹೇಳಿದ್ದರು. ಡಾಕ್ಟರಿಗೆ ಸುಕನ್ಯಾಳೇ ಫೋನುಮಾಡಿ ‘ಎಷ್ಟು ಖರ್ಚಾದರೂ ಪರವಾಗಿಲ್ಲ. ಆಕೆಗೆ ಸರಿಯಾದ ಟ್ರೀಟ್‌ಮೆಂಟ್ ಮಾಡಿ’ ಎಂದು ಹೇಳಿದ್ದಳು. ಆ ಡಾಕ್ಟರು ಯಾರೋ ಕೊಂಚ ಸಿಡುಕ. ‘ನೀವು ಅಬ್ರಾಡಲ್ಲಿದ್ದುಕೊಂಡು ಎಲ್ಲ ದುಡ್ಡಿಂದ ಸರಿ ಮಾಡಬಹುದೂ ಅಂತ ತಿಳಕೊಂಡಿದ್ದೀರ. ನಿಮ್ಮಮೆರಿಕಾಕ್ಕೆ ಕರಕೊಂಡು ಹೋದರೂ ಉಳಕೊಳ್ಳೋ ಅವಕಾಶ ಕಮ್ಮಿ’ ಎಂದು ಫೋನಿನಲ್ಲಿ ಶಾರದತ್ತೆ ಮುಂದೆಯೇ ಹೇಳಿದ್ದ. ಅದಾದ ಮೂರನೇ ದಿನಕ್ಕೆ ಶಾರದತ್ತೆ ಎಂದೂ ಇಲ್ಲದವಳು ಅಂದು ಫೋನು ಮಾಡಿ ‘ಸ್ವಲ್ಪ ದಿನ ಬಂದು ಇದ್ದು ಹೋಗು’ ಎಂದು ಹೇಳಿದ್ದಳು.

ವಿಷಯ ಇಷ್ಟೇ ಆಗಿದ್ದರೆ ಯಾವ ಕಷ್ಟವೂ ಇರುತ್ತಿರಲಿಲ್ಲ. ಸುಕನ್ಯಾ ಬೇಕಾದಷ್ಟು ಬಾರಿ ಒಬ್ಬಳೇ ಬೆಂಗಳೂರಿಗೆ ಹೋಗಿ ಬಂದಿದ್ದಾಳೆ. ಆದರೆ ಈ ಬಾರಿ ಸುಕನ್ಯಾಳ ಜತೆ ಇಂಡಿಯಾಕ್ಕೆ ನಾನೂ ಬರುತ್ತೇನೆ ಎಂದು ಅರವಿಂದ ಹೇಳಿದಾಗ ಅವನ ಮಾತಿನಲ್ಲಿ ಅಥವಾ ನಿರ್ಧಾರದಲ್ಲಿ ಯಾವ ಅರ್ಥವನ್ನೂ ಹುಡುಕಲು ಹೋಗಿರಲಿಲ್ಲ. ಮಕ್ಕಳು ಥ್ಯಾಂಕ್ಸ್ ಗಿವಿಂಗ್ ರಜಾಕ್ಕೆ ಮನೆಗೆ ಬರುವುದನ್ನು ಎದುರು ನೋಡುತ್ತಿದ್ದಳು. ಈ ಬಾರಿ ಸುಪ್ರೀತ ಕೂಡಾ ಬರುತ್ತಿರುವುದು ಸುಕನ್ಯಾಳ ಟೆನ್‌ಶನ್ ಅನ್ನು ಜಾಸ್ತಿ ಮಾಡಿತ್ತು. ಈಗ ತಲೆ ಕೆಡಿಸಿಕೊಳ್ಳುವುದು ಬೇಡ, ಮಕ್ಕಳು ಬಂದು ಹೋದ ಮೇಲೆ ತಮ್ಮ ಇಂಡಿಯಾ ಪ್ರವಾಸದ ವಿವರಗಳನ್ನು ನೋಡಬಹುದು ಎನಿಸಿತ್ತು. ಆದರೆ ಅರವಿಂದ ಎರಡು ವಾರದ ಹಿಂದೆ ಆತ ಬಹಳ ದಿನಗಳಿಂದ ಮನಸ್ಸಿನಲ್ಲಿ ಇಟ್ಟುಕೊಂಡ ವಿಷಯವೊಂದನ್ನು ಸ್ಫುಟವಾಗಿ ವಿವರಿಸಿ ಹೇಳಿದ್ದ.

‘ನೋಡು ಸುಕನ್ಯಾ. ನಮಗೂ ವಯಸ್ಸಾಯಿತು. ಬೇಕಾದಷ್ಟು ದುಡ್ಡು ಮಾಡಿಯಾಗಿದೆ. ಪ್ರಪಂಚವನ್ನೆಲ್ಲಾ ನೋಡಿಯೂ ಆಗಿದೆ. ಮಕ್ಕಳೂ ಅವರವರ ಹಾದಿ ಹಿಡಿದಿದ್ದಾರೆ. ಈ ಜನ್ಮದಲ್ಲಿ, ಈ ದೇಶದಲ್ಲಿ ಅರ್ಥಪೂರ್ಣವಾದದ್ದು ಏನೂ ಮಾಡಲು ಉಳಿದಿಲ್ಲ ಅನಿಸುತ್ತೆ. ನಾನು ಬಹಳ ದಿನದಿಂದ ಅಂದುಕೊಂಡಿದ್ದೇನೆ. ಈ ಸಲ ಮಕ್ಕಳು ಥ್ಯಾಂಕ್ಸ್‌ಗಿವಿಂಗಿಗೆ ಬಂದಾಗ ಅವರ ಜತೆಯೂ ಮಾತಾಡುತ್ತೇನೆ. ನಾನು ಇಲ್ಲಿನ ಕಮಿಟ್‌ಮೆಂಟುಗಳನ್ನೆಲ್ಲಾ ಮುಗಿಸಿ ಮೈಸೂರಿನ ರಮಾನಂದಾಶ್ರಮಕ್ಕೆ ಹೋಗಿ ಅಲ್ಲಿಯೇ ಇದ್ದುಬಿಡೋಣ ಅಂತ ಅಂದುಕೊಂಡಿದ್ದೀನಿ.’ ಅದೂ ಆತ ಇದರಲ್ಲಿ ಸುಕನ್ಯಾಳದ್ದು ಯಾವ ಪಾತ್ರವೂ ಇಲ್ಲವೇನೋ ಎನ್ನುವಂತೆ ಮಾತಾಡಿದ್ದ.

ಸುಕನ್ಯಾ ಏನೂ ಮಾತಾಡಿರಲಿಲ್ಲ. ಅರವಿಂದನೇ ಹೇಳಿದ. ‘ವಿನಯ, ಅಲಿಶಾಳಿಗೆ ನಮ್ಮ ದುಡ್ಡಿನ ಅವಶ್ಯಕತೆಯಿಲ್ಲ. ಆ ಗುರುಗಳ ದಯೆಯಿಂದ ವಿಶೂಗೂ ಬೇಕಾಗೋದಿಲ್ಲ ಅನಿಸುತ್ತೆ. ನಾನು ಲಾಯರ್ ಹತ್ತಿರ ಮಾತಾಡಿದೀನಿ. ನಮಗೆ ಈ ದೇಶದಲ್ಲಿ ಇರೋ ಮುಖ್ಯವಾದ ಆಸ್ತಿ ಅಂದರೆ ಈ ಮನೆ, ರಿಟೈರ್ಮೆಂಟ್ ಅಕೌಂಟು. ಈ ಮನೆ ಮಾರಿ ಬಂದ ದುಡ್ಡಲ್ಲಿ ವಿಶೂನ ಹೆಸರಲ್ಲಿ ಒಂದಿಷ್ಟು ತೆಗೆದಿಟ್ಟು ಉಳಿದದ್ದನ್ನೆಲ್ಲಾ ಆಶ್ರಮಕ್ಕೆ ಬರೆದುಬಿಡೋಣ ಅಂತಿದೀನಿ. ಮನೆ ಒಳ್ಳೆ ರೇಟಲ್ಲಿ ಹೋಗುತ್ತಂತೆ. ಮೊನ್ನೆ ಆ ರಿಯಲ್ ಎಸ್ಟೇಟ್ ಏಜೆಂಟ್ ಜತೆ ಸುಮ್ಮನೆ ಹಾಗೇ ಮಾತಾಡಿದ್ದೆ. ನಮ್ಮ ರಿಟೈರ್‍ಮೆಂಟ್ ಅಕೌಂಟಲ್ಲಿರೋ ದುಡ್ಡನ್ನು ಹಾಗೇ ಬಿಟ್ಟಿರೋಣ. ಉಳಿದ ಮನೆಯ ಫರ್ನಿಚರು, ಕಾರುಗಳು ಎಲ್ಲಕ್ಕೂ ಒಂದು ಗತಿ ಕಾಣಿಸಬೇಕು. ಇಂಟರ್ನೆಟ್ಟಲ್ಲಿ ಹಾಕಿದರೆ ನಾಲ್ಕು ದಿನದಲ್ಲಿ ಎಲ್ಲ ಹೋಗುತ್ತೆ. ನಿನ್ನ ಒಡವೆಗಳನ್ನು ಏನು ಮಾಡಬೇಕು ಅಂತ ನೀನೇ ನಿರ್ಧಾರ ಮಾಡು. ಎಲ್ಲ ಬಿಟ್ಟು ಅಲ್ಲಿ ಹೋಗಿ ಇದ್ದುಬಿಡೋಣ. ನಾವೆಲ್ಲ ಹೋಗಿ ಅಲ್ಲಿ ಸೆಟಲ್ ಆಗೋಕೆ ಏನಿಲ್ಲ ಅಂದರೂ ಒಂದು ವರ್ಷವಾದರೂ ಬೇಕು. ಅಷ್ಟರಲ್ಲಿ ಶಾರದತ್ತೇದೂ ಒಂದು ನಿರ್ಧಾರ ಆಗಿರುತ್ತೆ’ ಎಂದ.

ಈ ಬಗ್ಗೆ ಹಿಂದೆ ಅರವಿಂದ ಬಹಳ ಬಾರಿ ‘ನನ್ನ ಜವಾಬ್ದಾರಿ ಎಲ್ಲ ಮುಗೀತು. ಇಂಡಿಯಾಕ್ಕೆ ಹೋಗಿ ರಾಮಾ, ಕೃಷ್ಣ ಅಂತ ಆಶ್ರಮದಲ್ಲಿ ಇದ್ದುಬಿಡ್ತೀನಿ’ ಎಂದು ಹೇಳುತ್ತಿದ್ದರೂ ಅದರ ಬಗ್ಗೆ ಇಷ್ಟು ಕಟ್ಟುನಿಟ್ಟಾಗಿ ಪ್ಲಾನು ಹಾಕಿಕೊಂಡು ಯಾವತ್ತೂ ಮಾತಾಡಿರಲಿಲ್ಲ.

ಸುಕನ್ಯಾ ಏಕ್‌ದಂ ಅವಾಕ್ಕಾದಳು. ‘ಏನ್ರೀ ಇದು. ನೀವೇ ಎಲ್ಲ ನಿರ್ಧಾರ ಮಾಡಿಕೊಂಡು ನನಗೆ ವಿಷಯ ತಿಳಿಸ್ತಾ ಇದ್ದೀರಾ. ಇಂಥ ದೊಡ್ಡ ನಿರ್ಧಾರದಲ್ಲಿ ನನ್ನ ಮನಸ್ಸಿನಲ್ಲೇನಿದೆ ಎಂದು ಒಂದು ಬಾರಿಯೂ ಕೇಳಬೇಕು ಅಂತ ನಿಮಗನಿಸಲಿಲ್ಲವಾ? ನಾವು ಆಶ್ರಮದಲ್ಲಿ ಹೋಗಿ ಸೆಟಲ್ ಆಗೋದು ಅಂದ್ರೆ?’

‘ಒಂಥರಾ ವಾನಪ್ರಸ್ಥ ಇದ್ದ ಹಾಗೆ. ಇಡೀ ಜೀವನ ಹೋರಾಡಿಕೊಂಡು ಬದುಕಿದ್ದೀವಿ. ಅರವತ್ತೈದಕ್ಕೆ ಹಾರ್ಟ್ ಅಟ್ಯಾಕೂ ಆಗಿಹೋಯ್ತು. ಉಳಿದಿರುವಷ್ಟು ದಿನ ಆ ಸ್ವಾಮಿ ಸೇವೆ ಮಾಡಿಕೊಂಡು ಆರಾಮಾಗಿದ್ದುಬಿಡ್ತೀನಿ.’

‘ಏನು ಆರಾಮಾಗಿರೋದು? ಎರಡ್ವರ್ಷಕ್ಕೋ, ಮೂರು ವರ್ಷಕ್ಕೋ ಒಂದು ಸಾರಿ ಬೆಂಗಳೂರಿಗೋ, ಭದ್ರಾವತಿಗೋ ಹೋದಷ್ಟು ಸುಲಭಾ ಎಂದುಕೊಂಡಿರಾ. ಮನೆ ಮಾರಿದ ದುಡ್ಡನ್ನೆಲ್ಲಾ ಆ ಆಶ್ರಮಕ್ಕೆ ಕೊಡ್ತೀನಿ ಅಂತೀರಲ್ಲ. ಎಷ್ಟು ದುಡ್ಡು ಬರುತ್ತೆ ಅನ್ನೋ ಅಂದಾಜಿದೆಯಾ ನಿಮಗೆ. ಆ ಸ್ವಾಮೀಜಿ ತಮ್ಮಆಶ್ರಮದ ಪಕ್ಕ ಇನ್ನೊಂದು ಆಶ್ರಮ ಕಟ್ಟಿಸ್ತಾರಷ್ಟೇ.’

‘ಸೂ. ಆ ಥರ ಮಾತಾಡಬೇಡ. ದುಡ್ಡು ಸದ್ವಿನಿಯೋಗ ಆಗುತ್ತೆ. ಅಥವಾ ಹಾಗಂದುಕೊಂಡು ನಾವು ಕೊಡೋದು. ಕೊಟ್ಟಮೇಲೆ ಅದೇನಾಯಿತು ಅಂತ ವಿಚಾರ ಮಾಡೋಕೆ ನಾವು ಹೋಗಬಾರದಂತೆ. ಸ್ವಾಮೀಜಿ ಮಾತೂಂದ್ರೆ ನಿನಗೂ ನಂಬಿಕೆ ಇದೆ. ಅವರ ಅಪ್ಪಣೆ ಇಲ್ಲದೆ ನಾವು ಯಾವ ಒಳ್ಳೇ ಕೆಲಸಾನೂ ಮಾಡಲ್ಲ. ಅವರ ಆಶೀರ್ವಾದದಿಂದಲೇ ನಮಗೆ ಒಳ್ಳೇದಾಗ್ತಾ ಇದೆ. ಇಷ್ಟು ದಿನದ ನಮ್ಮ ನಂಬಿಕೆಗೆ ನಾವು ವಾಪಸ್ ಏನಾದರೂ ಕೊಡಬೇಕಲ್ಲವಾ?’

‘ಕೊಡಬೇಕು ಸರೀರಿ. ಆದರೆ ಹಿಂಗೆ ಇಡೀ ಆಸ್ತೀನ ಆಶ್ರಮಕ್ಕೆ ಬರಕೊಡೋದು ಅಂದ್ರೆ. ಆ ಗಾಲೀ ಜನಾರ್ಧನ ರೆಡ್ಡೀನೂ ತಿಮ್ಮಪ್ಪಂಗೆ ಕಿರೀಟ ಮಾಡಿಸಿ ಕೈ ತೊಳ್ಕೊಂಡ. ಜೈಲಿಂದ ಬಿಡುಗಡೆ ಆಗಿದ್ದಕ್ಕೆ, ಬಳ್ಳಾರಿ ಗಣೀನೇ ಬರೆದುಕೊಡ್ತಾನೇನು?’

‘ಸೂ, ನೀನು ಹೀಗೆ ಮಾತಾಡಿದರೆ, ಏನು ಹೇಳಲಿ? ನನ್ನ ಈ ಕೆಲಸದಿಂದ ನಿನಗೆ ಖುಷಿ ಆಗುತ್ತೆ ಎಂದುಕೊಂಡಿದ್ದೆ. ನನಗೆ ಆ ಸ್ವಾಮಿಗಳನ್ನು ಪರಿಚಯ ಮಾಡಿಸಿದವಳೇ ನೀನು. ನಾವೇನು ಅವರಿಗೆ ದುಡ್ಡು ಕೊಟ್ಟು ಬೀದೀಗೆ ಬರಲ್ಲ.’

‘ಅಲ್ಲಾರೀ. ನಿಮಗೆ ಇಲ್ಲೇ ಪಾಸ್ತುರೋಪೆಡಿಕ್ ಹಾಸಿಗೇ ಇದ್ದರೂ ರಾತ್ರಿ ನಿದ್ದೆ ಬರೊಲ್ಲ. ಅಲ್ಲಿ ಏಕ್‌ದಂ ಹೋಗಿ ಜೀವನ ಪರ್ಯಂತ ಇದ್ದುಬಿಡ್ತೀನಿ ಅಂದರೆ? ಇದೆಲ್ಲ ಒಂದಿನದಲ್ಲಿ ಮಾಡೋ ನಿರ್ಣಯಾ ಏನ್ರೀ?’

‘ನಾನೇನು ಹೋಗಿ ನಾಳೇನೇ ಅಲ್ಲಿ ಸೆಟಲ್ ಆಗಿ ಬಿಡ್ತೀನಿ ಅಂತಲ್ಲ. ನೀ ಹೇಗೂ ಭದ್ರಾವತಿಯಲ್ಲಿ ಇರ್ತೀಯ. ನಾನು ಒಂದೆರಡು ತಿಂಗಳು ಆಶ್ರಮದಲ್ಲಿದ್ದು ನೋಡ್ತೀನಿ. ಇಷ್ಟು ಡೊನೇಷನ್ ಕೊಟ್ಟಿರ್ತೀವಿ. ಎನ್ನಾರೈಗಳಿಗೆ ಎಂದರೆ ಉಳ್ಕೊಳೋಕೆ ವಿಶೇಷವಾದ ವ್ಯವಸ್ಥೆ ಇದ್ದೇ ಇರುತ್ತೆ ಅಂತ ಅಂದ್ಕೊಂಡಿದೀನಿ’

‘ಆಹ. ಏನು ವಾನಪ್ರಸ್ಥ, ಏನು ವೈರಾಗ್ಯಾನ್ರೀ ನಿಮ್ದು. ರಾಮ ಕಾಡಿಗೆ ಹೋದಾಗ ಖಾಲೀನೆಲದ ಮೇಲೆ ಮಲಕ್ಕೊಳ್ತಿದ್ದನಂತೆ. ಗಡ್ಡೆ, ಗೆಣಸು ತಿಂತಿದ್ದನಂತೆ. ಇಲ್ಲಿ ಪ್ರತಿರಾತ್ರಿ ಸ್ಕಾಚು ಕುಡೀತೀರ. ಅಲ್ಲಿ ಆಶ್ರಮಕ್ಕೆ ಚ್ಯಾರಿಟಿ ಕೊಟ್ಟು ಉಪಚಾರ ಮಾಡ್ಸಿಕೊಳ್ಳೋದು ಎಂಥ ವೈರಾಗ್ಯ?’

‘ಸೂ, ಸ್ವಲ್ಪ ಅರ್ಥ ಮಾಡ್ಕೋ. ನಾನು ಹಾರ್ಟ್ ಪೇಶೆಂಟು’ ಬೇರೆ ಏನೂ ಮಾತಾಡಲಿಕ್ಕೆ ಗೊತ್ತಾಗದೇ ಹೇಳಿದ್ದ.

‘ನೋಡಿ, ಮಕ್ಕಳು ದೊಡ್ಡವಾಗಿವೆ. ಅಲಿಶಾ ಬಸುರಿ. ಈಗ ಅವಳನ್ನು ಬಿಟ್ಟು ಸ್ವಲ್ಪ ದಿನಾ ಹೋಗೋದೇ ಹೇಗೆ ಅಂತ ನಾನು ಯೋಚನೆ ಮಾಡ್ತಾ ಇದೀನಿ. ಇನ್ನು ವಿಶೂ ಬಗ್ಗೆ ಏನಾರ ಯೋಚನೆ ಮಾಡಿದೀರ, ನೀವು. ಅವನು ಜೀವಮಾನ ಪೂರ್ತಿ ಒಬ್ಬಂಟಿ ಅಲ್ವೇನ್ರಿ. ಅವನನ್ನ ಈ ಸುಪ್ರೀತನೋ ದುಪ್ರೀತನೋ ಆ ಸರದಾರನನ್ನು ನಂಬಿಕೊಂಡು ಅವನ ಕೈಯಲ್ಲಿ ಒಪ್ಪಿಸಿ ಬಿಟ್ಟುಹೋಗಕ್ಕಾಗತ್ತೇನ್ರೀ’ ಕಣ್ಣಂಚು ಮತ್ತೆ ತೇವವಾಯಿತು.

ಅರವಿಂದನಿಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ‘ಮಕ್ಕಳನ್ನು ಕೊನೇತನಕ ನಾವು ನೋಡಿಕೊಳ್ಳೋಕೆ ಆಗಲ್ಲ, ಸೂ. ವಿಶೂ ಬೆಳೆದ ಹುಡುಗ. ಆತನ ಆಯ್ಕೆ ಅವನನ್ನು ಇಡೀ ಜೀವನ ಒಬ್ಬಂಟಿಯಾಗಿ ಮಾಡುತ್ತೋ ಬಿಡುತ್ತೋ ಅನ್ನೋ ಯೋಚನೆಯನ್ನು ಆತ ಮಾಡಿರ್ತಾನೆ ಅಲ್ವಾ. ನಾನು ನೀನು ಏನು ಮಾಡಿದರೂ ಅದು ಬದಲಾಗೊಲ್ಲ. ನಿನಗೂ ಈಗ ಮೊದಲ ತರ ಕೈಲಾಗೊಲ್ಲ. ಯಾವಾಗಂದ್ರೆ ಆಗ ತಲೆಸುತ್ತು ಅಂತಿರ್ತೀಯ’

‘ಎಲ್ಲ ಸರೀರಿ. ನೀವು ಒಂದು ಚೂರೂ ಸುಳಿವು, ಸೂಕ್ಷ್ಮ ಕೊಡದೇ ಏಕ್‌ದಂ ಈಗ ಶಾಶ್ವತವಾಗಿ ಊರನ್ನೇ ಬಿಟ್ಟು ಹೋಗೋ ಮಾತಾಡಿದ್ರೆ ಏನಂದುಕೊಳ್ಳೋಲ್ಲ. ಎಲ್ಲ ನಿಧಾನವಾಗಿ ಯೋಚನೆ ಮಾಡಿ ನಿರ್ಧಾರ ಮಾಡೋಣ. ಈಗ ಮಕ್ಕಳು ಬಂದಾಗ ಸುಮ್ಮನೆ ಇಲ್ಲಸಲ್ಲದ ಸಮಸ್ಯೆಗಳನ್ನು ಅವುಗಳ ತಲೆಗೆ ತುಂಬಿ ಅವುಗಳೂ ಚಿಂತೆ ಮಾಡೋ ಹಾಗೆ ಮಾಡಬೇಡಿ. ಮೊದಲು ನಾನು, ನೀವು ಕೂತುಕೊಂಡು ನಿಧಾನವಾಗಿ ಮಾತಾಡೋಣ. ಆಮೇಲೆ ಎಲ್ಲರ ಜತೆ ಮಾತಾಡಿದರೆ ಆಯಿತು.’ ಎಂದು ಆ ವಿಷಯವನ್ನು ತಣ್ಣಗೆ ಮಾಡಿದ್ದಳು.

ಈ ಮಾತುಕತೆ ಆಗಿ ಹದಿನೈದು ದಿನವಾಗಿದೆ. ಪ್ರತಿದಿನವೂ ಮಕ್ಕಳಿಗೆ ಈ ವಿಷಯ ಯಾವಾಗ ಹೇಳಬೇಕು ಎನ್ನುವುದನ್ನು ಬಹಳ ಚರ್ಚೆ ಮಾಡಿದ್ದಾರೆ. ಒಂದು ನಿರ್ಧಾರಕ್ಕೆ ಬರಲಾಗಿಲ್ಲ. ಆದರೂ ಏನೋ ಆತಂಕ. ಮಕ್ಕಳು ಮೂರು ದಿನ ರಜೆಗೆ ಎಂದು ಬಂದು ಮನೆಯಲ್ಲಿದ್ದಾಗ ಇಂಥ ಒಂದು ವಿಷಯ ತಲೆಯಲ್ಲಿ ಕೊರೆಯುತ್ತಿಲ್ಲ ಎಂದು ತೋರಿಸಿಕೊಳ್ಳುವುದಾದರೂ ಹೇಗೆ? ಅರವಿಂದನಿಗೂ ತಾನು ಸುಕನ್ಯಾಳ ಹತ್ತಿರ ಈ ವಿಷಯ ಪ್ರಸ್ತಾಪ ಮಾಡುವ ಮೊದಲು ಇನ್ನೊಂದಿಷ್ಟು ತಯ್ಯಾರಿ ಮಾಡಿಕೊಳ್ಳಬೇಕಾಗಿತ್ತು ಅನಿಸಿತ್ತು.

ಸುಕನ್ಯಾ ಏಕ್‌ದಂ ಅವಾಕ್ಕಾದಳು. ‘ಏನ್ರೀ ಇದು. ನೀವೇ ಎಲ್ಲ ನಿರ್ಧಾರ ಮಾಡಿಕೊಂಡು ನನಗೆ ವಿಷಯ ತಿಳಿಸ್ತಾ ಇದ್ದೀರಾ. ಇಂಥ ದೊಡ್ಡ ನಿರ್ಧಾರದಲ್ಲಿ ನನ್ನ ಮನಸ್ಸಿನಲ್ಲೇನಿದೆ ಎಂದು ಒಂದು ಬಾರಿಯೂ ಕೇಳಬೇಕು ಅಂತ ನಿಮಗನಿಸಲಿಲ್ಲವಾ? ನಾವು ಆಶ್ರಮದಲ್ಲಿ ಹೋಗಿ ಸೆಟಲ್ ಆಗೋದು ಅಂದ್ರೆ?’

ವಿನಯ, ಅಲಿಶಾ ಹೇಳಿದ್ದಕ್ಕಿಂತ ಮುಂಚೆಯೇ ಬಂದಿದ್ದರು. ಶಿಕಾಗೋದಿಂದ ಮಿನಿಯಾಪೊಲಿಸ್‌ಗೆ ಡ್ರೈವ್ ಮಾಡುವ ಯೋಚನೆಯಿತ್ತು. ಕಡೆ ಗಳಿಗೆಯಲ್ಲಿ ಅಲಿಶಾಳಿಗೆ ಆರುಗಂಟೆಯ ಕಾರಿನ ಪ್ರಯಾಣ ಪ್ರಯಾಸವಾಗುತ್ತದೆ ಎಂದು ಪ್ಲೇನಿನಲ್ಲಿ ಬಂದಿದ್ದರು. ಅಲಿಶಾ ಬಂದವಳೇ ಒಂದು ಗಂಟೆ ನಿದ್ರೆಮಾಡಿ, ಸ್ನಾನ ಮಾಡಿ ಒಂದು ಜೀನ್ಸ್ ಮತ್ತು ಕಿತ್ತಳೆ ಬಣ್ಣದ ಸ್ವೆಟರ್ ಒಂದನ್ನು ಹಾಕಿ ಬಂದು ಮಾವನ ಜತೆ ಸನ್ ರೂಮಿನಲ್ಲಿ ಕೂತಳು. ‘ಸಾರಿ ಡ್ಯಾಡ್. ನಿದ್ರೆ ಬಂದು ಬಿಡ್ತು.’ ಎಂದಳು. ಕೈಯಲ್ಲಿದ್ದ ಸ್ಕಾಚ್ ನೋಡಿ ‘ಏನು ಬಹಳ ಜೋರಾಗಿ ನಡೆಸಿದ್ದೀರಾ?’ ಎಂದಳು. ಅರವಿಂದ ತನ್ನ ಡ್ರಿಂಕ್ ನೋಡಿ ‘ಆ ಹಾ.. ಏನಿಲ್ಲ, ಹಾಗೇ ಸುಮ್ಮನೆ. ನಿನಗೆ ಬರೇ ಕಿತ್ತಳೇರಸವೇ ಗತಿ.’ ಎಂದು ಮರುನಕ್ಕ.

‘ಕಿತ್ತಳೆ ರಸ ಯಾಕೆ? ಮೊದಲೇ ಬಸುರಿ ಅವಳು. ಅದೂ ಈ ಥಂಡೀಲಿ. ಕೊಂಚ ಬಿಸಿಬಿಸಿಯಾಗಿರೋದು ಕುಡಿಯಮ್ಮ. ವಿನಯ ನನ್ನ ಬಸುರಲ್ಲಿದ್ದಾಗ ಶಾರದತ್ತೆ ಬಂದಿದ್ದಳು. ದಿನಾ ಹಾಲಿಗೆ ಕೇಸರಿ ಹಾಕಿ ಕೊಡುತ್ತಿದ್ದಳು. ಯು ನೋ ಸ್ಯಾಫ್ರಾನ್ ಅಂಡ್ ಮಿಲ್ಕ್. ಮಗೂಗೆ ಒಳ್ಳೇ ಕಲರ್ ಬರುತ್ತೆ.’

ಕೆಂಪಗೆ ಟೊಮೇಟೋ ಹಣ್ಣಿನಂತೆ ಲಕಲಕಿಸುತ್ತಿದ್ದ ಅಲಿಶಾಳಿಗೆ ನಗು ಬಂದು ಬಿಟ್ಟಿತು. ‘ಯು ಆರ್ ಸೋ ಕ್ಯೂಟ್, ಮಾ. ನಂಗೆ ಹಾಟ್ ಚಾಕೊಲೆಟ್ ಕೊಡಿ. ರತ್ನಾ ಹಾಲನ್ನು 75 ಸೆಕೆಂಡ್ ಬಿಸಿ ಮಾಡಿದರೆ ಸಾಕು. ಮೇಲೆ ಸಕ್ಕರೆ ಹಾಕಬೇಡ. ಒಂದು ಸ್ಪೂನು ಕೊಟ್ಟುಬಿಡು. ನಾನೇ ಕೂಡಿಸಿಕೋತೀನಿ’ ಎಂದಳು.

‘ನಂರತ್ನಾ ಫಸ್ಟ್‌ಕ್ಲಾಸ್ ಹಾಟ್ ಚಾಕೊಲೇಟ್ ಮಾಡ್ತಾಳೆ. ನೀನೇನೂ ಯೋಚ್ನೆ ಮಾಡಬೇಡಮ್ಮ. ತಿನ್ನೋಕೇನಾರಾ ಕೊಡ್ಲಾ?’ ಸುಕನ್ಯಾ ಕೇಳಿದಳು.

‘ನಂಗೇನೂ ಬೇಡ ಮಾ.’ ಎನ್ನುತ್ತಾ ಅರವಿಂದನ ಮುಂದಿದ್ದ ಟೀಪಾಯಿಯ ಮೇಲೆ ತನ್ನ ಕಾಲುಗಳನ್ನು ಇಟ್ಟು ಚಾಚಿದಳು. ಸುಕನ್ಯಾಳನ್ನು ವಿನಯ ಹೇಗೆ ಕರೆಯುತ್ತಾನೋ ತಾನೂ ಹಾಗೇ ಕರೆಯುತ್ತೀನಿ ಎಂದು ‘ಅಮ್ಮಾ’ ಅನ್ನಲಾಗದೇ ‘ಅಮಾ’ ಎನ್ನುತ್ತಿದ್ದುದ್ದು ಸುಕನ್ಯಾಳಿಗೆ ‘ಏಮಾ’ ಎಂದು ಕೇಳಿಸಿ ಕೊನೆಗೆ ಆಕೆಯೇ ಬರೀ ‘ಮಾ’ ಎಂದು ಕರಿ ಸಾಕು ಅಂದು ತಾನೇ ‘ಮಾ’ ಆಗಿದ್ದಳು. ಆಗ ತಾನೇ ಸ್ನಾನ ಮಾಡಿ ಬಂದದ್ದಕ್ಕೇನೋ, ಅಲಿಶಾಳ ಕೆಂಪು ಮುಖ ಇನ್ನೂ ಕೆಂಪಗಾಗಿತ್ತು. ಹೊರಗಿನ ಚುಮುಚುಮು ಚಳಿಯ ನಡುವೆಯೂ ಸನ್‌ರೂಮಿನ ಬಿಸಿಗಾಳಿಗೆ ಹಣೆಯ ಮೇಲೆ ಸಣ್ಣ ಬೆವರಿನ ಮಣಿಯಿತ್ತು. ರತ್ನ ತಂದುಕೊಟ್ಟ ಚಾಕೊಲೆಟ್ ಮಿಲ್ಕನ್ನು ಕುಡಿಯುತ್ತಾ ಹೊರಗಿನ ಸರೋವರವನ್ನು ದಿಟ್ಟಿಸಿನೋಡಿದಳು.

ಸೂರ್ಯ ಕೆಂಪಗಾಗುತ್ತಿದ್ದ. ಹಿಂದಿನ ಸುಮಾರು ಎರಡೂವರೆಕೆರೆ ಜಾಗದಲ್ಲಿ ಸಪಾಟಾಗಿಸಿದ ಹುಲ್ಲು. ಋತುಮಾನಕ್ಕನುಗುಣವಾಗಿ ತನ್ನ ಬಣ್ಣವನ್ನು ಕಳೆದುಕೊಳ್ಳುತ್ತಿತ್ತು. ಅದರ ಹಿಂದೆ ನಿಂತ ನೂರೈವತ್ತು ಮೇಪಲ್ ಮರಗಳು. ಎಲ್ಲವೂ ಎಲೆಗಳನ್ನು ಕಳಕೊಳ್ಳುತ್ತಾ ಮುಂಬರುವ ಹಿಮವನ್ನು ಎದುರಿಸಲು ಬತ್ತಲಾಗುತ್ತಿದ್ದವು. ಕೆಳಗೆ ಬಿದ್ದ ಹಣ್ಣೆಲೆಗಳ ಮೇಲಿನ ಸಂಜೆಯ ತೇವ ವಾತಾವರಣಕ್ಕೆ ಕೊಟ್ಟಿದ್ದ ಒಂದು ಸಿಹಿಯಾದ, ಒಗರಾದ ವಾಸನೆ ಸನ್‌ರೂಮಿನ ಕಿಟಕಿಯ ಸೀಲುಗಳ ಮೂಲಕ ಮನೆಯೊಳಗೆ ಹಣಿಕಿಹಾಕಿತ್ತು.

‘ಆ… ನನ್ನ ಭಾರಾನೇ ಹೊರೊಕ್ಕಾಗಲ್ಲ. ಈ ಬಸಿರು ಮುಗಿದರೆ ಸಾಕಾಗಿದೆ, ಹನೀ… ಬೆನ್ನಿಗೆ ಒಂದು ದಿಂಬು ತರ್ತೀಯಾ?’ ಎಂದು ವಿನಯನಿಗೆ ಕೇಳಿಸುವ ಹಾಗೆ ಸ್ವಲ್ಪ ಎತ್ತರದ ಧ್ವನಿಯಲ್ಲಿ ಕೂಗಿದಳು. ಮೈಭಾರದಿಂದ ಖುರ್ಚಿಯ ಮೇಲೆ ಸರಿಯಾಗಿ ಕೂರಲಾಗಲಿಲ್ಲ, ಆಕೆಗೆ.

ವಿನಯನ ಸುಳಿವು ಕಾಣಲಿಲ್ಲ. ಅರವಿಂದನೇ ಖುರ್ಚಿಯ ಮೆತ್ತೆಯನ್ನು ತಂದು ಆಕೆಗೆ ಕೊಟ್ಟ. ಪ್ರಯಾಣದಿಂದಲೋ ಏನೋ ಊದಿದ್ದ ಆಕೆಯ ಕಾಲುಗಳನ್ನು ನೋಡಿ ‘ನಿನ್ನ ಆರೋಗ್ಯ ನೋಡಿಕೋಬೇಕಮ್ಮ, ನೀನು. ನಮ್ಮ ವಿನಯನಿಗೂ ಏನೂ ಗೊತ್ತಾಗೊಲ್ಲ’ ಎಂದ. ಆತ್ಮೀಯತೆ, ಗೌರವ ಎರಡೂ ಸೇರಿತ್ತು, ಅವನ ಮಾತಿನಲ್ಲಿ.

‘ನಾನು ಆರಾಮಿದ್ದೇನೆ, ಡ್ಯಾಡಿ. ಹೊರಗೆ ನೋಡಿದಿರಾ? ಎಷ್ಟು ಚೆನ್ನಾಗಿದೆ, ಅಲ್ವಾ? ನನಗೆ ಮಿನೆಸೊಟ ಈ ಥ್ಯಾಂಕ್ಸ್‌ಗಿವಿಂಗ್‌ ಸಮಯದಲ್ಲಿ ಬಹಳ ಇಷ್ಟ. ತೀರ ಚಳಿ ಇನ್ನೂ ಶುರು ಆಗಿರೊಲ್ಲ. ಶೆಕೆಯೂ ಇರೊಲ್ಲ. ಒಂದು ಸ್ವೆಟರ್ರೋ, ಸ್ವೆಟ್‌ಶರ್ಟೋ ಹಾಕಿಕೊಂಡು ಜಾಗಿಂಗ್ ಹೋಗಬಹುದು. ಇಲ್ಲಿನ ಮೆರಥಾನ್ ಮುಗೀತಲ್ಲವಾ?’

‘ನೀನು ಮೆರಥಾನ್ ಓಡ್ತೀಯಾ?ʼ ಅರವಿಂದ ಆಶ್ಚರ್ಯದಿಂದ ಕೇಳಿದ.

‘ಓ ಡ್ಯಾಡಿ. ನೀನು ಅವಳಿಗೆ ಮೆರಥಾನ್ ಬಗ್ಗೆ ಕೇಳಿದರೆ ಮುಗೀತು ಕಥೆ. ಒಂದೂವರೆ ಗಂಟೆ ಮಾತಾಡ್ತಾಳೆ, ಬೇಕಿದ್ರೆ. ಆಕೆ ಮಿನಿಯಾಪೊಲಿಸ್‌ನಲ್ಲಿದ್ದಾಗ ಪ್ರತಿವರ್ಷ ಓಡ್ತಾ ಇದ್ದಳು. ಹೋದವರ್ಷ ಶಿಕಾಗೋ ಮೆರಥಾನನ್ನು ಕೇವಲ ಎರಡೂವರೆ ಗಂಟೆಯಲ್ಲಿ ಮುಗಿಸಿದ್ದಳು. ಇನ್ನು ಮೂರು ವರ್ಷ ಎಲ್ಲ ಓಟಕ್ಕೂ ರೆಸ್ಟಲ್ಲವಾ?’ ಒಂದು ಶಾಲನ್ನು ತಂದು ಅವಳಿಗೆ ಹೊದಿಸಿ, ಮೇಲಿಂದ ಅಲಿಶಾಳೇ ಶಿಕಾಗೋದಿಂದ ತಂದಿದ್ದ ದಿಂಬನ್ನು ಆಕೆಯ ಕುತ್ತಿಗೆಯ ಹಿಂದೆ ಇಟ್ಟು, ಭುಜವನ್ನು ಮಸಾಜ್ ಮಾಡತೊಡಗಿದ.

‘ಥ್ಯಾಂಕ್ ಯು, ಹನಿ’ ಅವನ ಮುಂಗೈಯನ್ನು ಪಕ್ಕಕ್ಕೆಳೆದು ಸಣ್ಣ ಮುತ್ತುಕೊಟ್ಟಳು.

‘ಇನ್ನು ಮೂರು ವರ್ಷ ಯಾಕೋ, ಮಾರಾಯ. ಈಗ ಆಕೆಗೆ ಏಳು ತಿಂಗಳು. ಏನಿದ್ದರೂ ಇನ್ನೆರಡು ತಿಂಗಳಿಗೆ ಹಡೀತಾಳೆ. ಅದೇನು ಭೀಮ ಬಸಿರೇ? ಮೂರುಮೂರು ವರ್ಷ ಆಗೋಕ್ಕೆ?’ ಕಾಂಗ್ರೆಸ್ ಕಡ್ಲೆಕಾಯಿಗೆ ಕೊಂಚ, ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿ ಮೇಲೆ ನಿಂಬೆಹಣ್ಣು ಹಿಂಡಿ ತಂದು ಮುಂದೆ ಹಿಡಿದಳು, ಸುಕನ್ಯಾ.

‘ಏನದು?’ ಅಲಿಶಾ ಕೇಳಿದಳು.

‘ಸ್ಪೈಸಿ ಪೀನಟ್ಸ್ ವಿತ್ ಆನಿಯನ್ಸ್ ಅಂಡ್ ಕೊರಿಯಾಂಡರ್ ಲೀವ್ಸ್.. ಸಾರಿ ಸಿಲಾಂಟ್ರೋ ಟಾಪ್ಡ್ ವಿತ್ ಅ ಟ್ವಿಸ್ಟ್ ಆಫ್‌ ಸ್ಕ್ವೀಸ್ಡ್‌ ಲೈಮ್’ ಮೊದಲೇ ಉರುಹೊಡೆದಿಟ್ಟುಕೊಂಡ ಹಾಗೆ ಹೇಳಿದಳು. ಕೈ ಏಕೋ ಕೊಂಚ ನಡುಗಿದಂತಿತ್ತು, ಸುಕನ್ಯಾಳಿಗೆ.

‘ಸಾರಿ, ಮಾ.. ನನಗೆ ಹೊಟ್ಟೆ ಹಸಿವಿಲ್ಲ. ನನಗೆ ಇಷ್ಟು ಹೊತ್ತಿನ ಮೇಲೆ ಖಾರದ್ದು ತಿಂದರೆ ರಾತ್ರಿಯೆಲ್ಲ ಎದೆ ಉರಿ ಬರುತ್ತೆ. ನೀವೆಲ್ಲಾ ಯಾವಾಗಂದ್ರೆ ಆವಾಗ ಈ ಕಾಫಿ ಹೇಗೆ ಕುಡೀತೀರೋ? ನನಗಂತೂ ಸಾಧ್ಯವೇ ಇಲ್ಲ. ಅದಕ್ಕೇ ಚಾಕೊಲೇಟ್ ಮಿಲ್ಕ್ ಕುಡೀತಾ ಇರೋದು. ಇನ್ನೇನು ವಿಶೂ ಬರ್ತಾನಲ್ಲ. ಒಟ್ಟಿಗೇ ಊಟ ಮಾಡಿಬಿಡೋಣ’ ಎಂದು ತನ್ನ ಪ್ಲೇಟನ್ನು ಪಕ್ಕಕ್ಕೆ ಸರಿಸಿದಳು.

‘ಊಟಕ್ಕೆ ವೆಜಿಟೇರಿಯನ್ ಪಾಸ್ತಾ ಮಾಡಿಸಿದ್ದೇನಿ, ಪರವಾಗಿಲ್ಲವಾ’ ಎಂದು ತಲೆ ಎತ್ತದೇ ಕೈಗೆ ಸಿಕ್ಕಿದ ಪೇಪರ್ ನ್ಯಾಪ್‌ಕಿನ್ನಿನಿಂದ ಮತ್ತೆ ಟೀಪಾಯಿಯನ್ನು ಒರೆಸತೊಡಗಿದಳು.

‘ಓ ಶ್ಯೂರ್ ಮಾ’ ಎಂದಳು, ಅಲಿಶಾ.

‘ನಿಂಗೆ ಇಂಥದು ಇಷ್ಟ, ಇಂಥದು ಇಷ್ಟ ಇಲ್ಲ ಅಂತ ಮೊದಲೇ ಗೊತ್ತಾಗಿದ್ರೆ ಅದನ್ನೇ ಮಾಡಿಸ್ತೀನಮ್ಮ. ಇನ್ನು ಮೂರು ದಿನ ಸೌತ್ ಇಂಡಿಯನ್ ವೆಜಿಟೇರಿಯನ್ ಊಟ ಅನುಸರಿಸಿಕೊ. ನಾಳೇಗೆ ನಿನ್ನೂಟ ಬರುತ್ತೆ, ಅದಕ್ಕೇನೂ ತೊಂದರೆ ಇಲ್ಲ.’ ಎಂದಳು, ಟೇಬಲ್ಲನ್ನು ಒರೆಸುತ್ತಲೇ, ಸುಕನ್ಯ.
‘ಓಕೆ’ ಎಂದಳು, ಅಲಿಶಾ ಸುಮ್ಮನೆ.

ವಿನಯ ತಾನು ಆರಂಭಿಸಿದ್ದ ಮಾತು ಅಡುಗೆ, ಊಟಗಳ ಭರಾಟೆಯಲ್ಲಿ ಮರೆತುಹೋಗದಿರಲಿ ಎಂದು ‘ಅಮ್ಮ. ಅಲಿಶಾಗೆ ಮನೆತುಂಬಾ ಮಕ್ಕಳಿರಬೇಕೆಂದು ಇಷ್ಟ. ಅದಕ್ಕೆ ಈ ಮಗೂ ಆದ ತಕ್ಷಣ ಚಕಾಚಕ್ ಅಂತ ಇದರ ಜತೆಜತೆಗೇ ಇನ್ನೂ ಎರಡು ಮಕ್ಕಳನ್ನು ಸಾಲಾಗಿ ಮಾಡ್ಕೊಂಬಿಡಣ ಅಂತ ಆಕೆ ಯೋಚನೆ. ನನಗೂ ಅದು ಸರಿಯಾದ ಯೋಚನೆ ಅನಿಸುತ್ತೆ. ಒಟ್ಟಿಗೇ ಇನ್ನು ಮೂರು ವರ್ಷದಲ್ಲಿ ಇನ್ನು ಮೂರೋ ನಾಲ್ಕೋ ಮಕ್ಕಳು ಆಗಿಬಿಟ್ಟರೆ ಎಲ್ಲ ಒಟ್ಟೊಟ್ಟಿಗೇ ಬೆಳ್ಕೋತಾವೆ. ಆಮೇಲೆ ನಾವೂ ನಮ್ಮ ಕೆರೀರ್ ಬಗ್ಗೆ ಗಮನ ಕೊಡಬಹುದು. ಒಟ್ಟು ಇನ್ನು ಮೂರು ವರ್ಷ ಜಾಗಿಂಗು, ಮೆರಥಾನು ಎಲ್ಲ ಬಂದ್’ ಎಂದ.

ಹೌಹಾರಿಹೋದಳು, ಸುಕನ್ಯಾ ‘ಏನೋ ಇದು, ನಾನು ಕೆಲಸಕ್ಕೆ ಹೋಗದೇ ಮನೇಲೇ ಇದ್ದವಳು. ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ಮಕ್ಕಳನ್ನು ಬೆಳೆಸೋದು ಕಷ್ಟ ಅಂತ ಎಷ್ಟೋ ವರ್ಷದ ಹಿಂದೇನೇ ಎರಡೇ ಮಕ್ಕಳು ಸಾಕು ಅಂತ ನಿರ್ಧಾರ ಮಾಡಿದ್ವು. ನೀವಿಬ್ಬರೂ ಕೆಲಸಕ್ಕೆ ಹೋಗ್ತೀರಿ. ಇಬ್ಬರೂ ಡಾಕ್ಟರುಗಳು ಬೇರೆ. ಮೂರೋ ನಾಲ್ಕೋ ಮಕ್ಕಳಾದರೆ ಏನು ಗತಿ? ಮಕ್ಕಳನ್ನು ಯಾರೋ ನೋಡಿಕೊಳ್ಳೋದು?’

‘ನೀನಿದ್ದೀಯಲ್ಲಮ್ಮ. ಶಿಕಾಗೋ ಎಷ್ಟು ಮಹಾ ದೂರ? ನಾನು ಫ್ಲೈಟು ಬುಕ್ ಮಾಡಿಸ್ತೀನಿ. ಡ್ಯಾಡಿ, ನೀವೂ ಏನು ಮಾಡ್ತೀರಾ, ಇಲ್ಲಿ. ವ್ಯವಹಾರಾನೆಲ್ಲ ಬಂದ್ ಮಾಡಿ ಶಿಕಾಗೋಕೆ ಬಂದು ಸೆಟಲ್ ಆಗೋಕೆ ಏನು ತೊಂದರೆ? ನಮ್ಮ ಏರಿಯಾದಲ್ಲೇ ಬೇಕಾದಷ್ಟು ಕಾಂಡೋಗಳು ಖಾಲಿ ಇದ್ದಾವೆ. ನಾನೇ ಬೇಕಾದರೆ ನೋಡಿಡುತ್ತೀನಿ. ಅಜ್ಜಿ, ತಾತ ಮೊಮ್ಮಕ್ಕಳನ್ನು ಬೆಳೆಸಿದರೆ ಅವುಗಳು ಸೀರಿಯಲ್ ಕಿಲ್ಲರ್‌ಗಳಾಗುವುದಿಲ್ಲವಂತೆ, ಮೊನ್ನೆ ಸೈಂಟಿಫಿಕ್ ಅಮೆರಿಕನ್ ಮ್ಯಾಗಜೀ಼ನಲ್ಲಿ ಓದಿದ್ದೆ.’

‘ಅವಳನ್ನು ಏನಂತ ತಿಳಿದಿದ್ಯಾ? ಒಂದರ ಹಿಂದೆ ಒಂದು ನಾಲ್ಕು ಮಕ್ಕಳಾದರೆ ಬಾಡಿ ಎಲ್ಲ ಲೂಸಾಗಿಹೋಗತ್ತೋ, ಈಗಿನ ಕಾಲದ ಹುಡುಗರು ನೀವು. ತೀರ ಹಳ್ಳಿಗುಗ್ಗುಗಳ ತರ ಮಾತಾಡ್ತೀಯಲ್ಲ’ ಎಂದುಬಿಟ್ಟಳು, ಸುಕನ್ಯಾ. ಶಾರದತ್ತೆ, ವಿಶೂ, ಸುಪ್ರೀತ, ಅರವಿಂದನ ರಮಾನಂದಾಶ್ರಮ ಎಲ್ಲ ಆಲೋಚನೆಗಳೂ ಒಟ್ಟಿಗೆ ಬಂದು ಆಕೆಯ ತಲೆ ಏಕ್‌ದಂ ಕೆಟ್ಟಿತ್ತು.

ಅಮ್ಮ ಒಂದೇ ಏಟಿಗೆ ಇಷ್ಟು ಗಂಭೀರವಾದದ್ದು ಕಂಡು ವಿನಯನಿಗೆ ಆಶ್ಚರ್ಯವಾಯಿತು. ‘ಅಮ್ಮಾ ಇದು ಪ್ಲಾನಷ್ಟೇ. ಮೊದಲನೆಯದಾಗಲೀ, ಆಮೇಲೆ ನೋಡೋಣ’ ಎನ್ನುತ್ತಿರುವಾಗಲೇ ಅಲಿಶಾ, ವಿನಯ, ಅರವಿಂದ ಮತ್ತು ಸುಕನ್ಯಾ ನಾಲ್ಕೂ ಜನರ ಫೋನಿಗೆ ವಿಶೂ ‘ಸಿನ್ಸಿನಾಟಿಯಲ್ಲಿ ವಿಮಾನ ತಡವಾಗಿದೆ. ಇನ್ನೆರಡು ಗಂಟೆಯಲ್ಲಿ ಮಿನಿಯಾಪೊಲಿಸ್‌ನಲ್ಲಿರುತ್ತೀನಿ.’ ಎಂದು ಮೆಸೇಜ್ ಕಳಿಸಿದ್ದ.

ವಿನಯನ ಫೋನು ‘ಡನ್‌ಡನ್‌ಡಡಡ್ಡ… ಡನ್‌ಡನ್‌ಡಡಡ್ಡ’ ಎಂದು ಜೋರಾಗಿ ಮೆಸೇಜು ಬಂದದ್ದನ್ನು ಕೂಗಿ ಹೇಳಿತು. ಎಲ್ಲರ ಫೋನಿಗೆ ಬಂದು ಮೂವತ್ತು ಸೆಕೆಂಡುಗಳ ನಂತರ, ಸುಕನ್ಯಾಳ ಫೋನಿಗೆ ಮೆಸೇಜು ಬಂತು.

ಎಲ್ಲರೂ ಅವರವರ ಫೋನು ಕೈಯಲ್ಲಿ ಹಿಡಿದಾಗ ಅಲಿಶಾ ‘ಸೇವ್ಡ್ ಬೈ ದ ಬೆಲ್.. ಲಿಟರಲಿ’ ಎಂದು, ವಿನಯನ ಕಿವಿಯಲ್ಲಿ ಪಿಸುಗುಟ್ಟಿ ನಕ್ಕಳು.

‘ನನ್ಮಾತು ಕೇಳದೇ ಯಾವುದೋ ಲಡಕಾಸಿ ಏಟಿಅಂಡ್ ಟಿ ಕನೆಕ್ಷನ್ ಇಟ್ಕೊಂಡಿದೀರ. ಈ ಮೆಸೇಜೂ ಲೇಟಾಗಿ ಬರುತ್ತೆ, ಹಾಳಾದ್ದು’ ಎಂದು ತನ್ನ ಹಳೆಯ ಫ್ಲಿಪ್ ಫೋನನ್ನು ಬಿಚ್ಚಿ ಕನ್ನಡಕ ಸರಿ ಮಾಡಿಕೊಂಡು ಮೆಸೇಜನ್ನು ಓದಲು ಪ್ರಯತ್ನ ಪಟ್ಟಳು.

‘ಅಮ್ಮ. ಸಮಸ್ಯೆ ಫೋನ್ ಕಂಪೆನಿದಲ್ಲ, ಫೋನಿಂದು. ಯಾವುದೇ ಹಳೇ ಕಿತ್ತೋಗಿರೋ ಫೋನಿಟ್ಟುಕೊಂಡು ಒದ್ದಾಡ್ತಿ. ಇಡೀ ಜಗತ್ತೇ ಸ್ಮಾರ್ಟಾಗ್ತಾ ಇದೆ. ನಮ್ಮ ಲೋಕಕ್ಕೆ ಕೊಂಚ ಬಾ’ ಎಂದ, ವಿನಯ.

‘ಅಪ್ಪಾ, ಮಾರಾಯ. ಫೋನಿರೋದು ಮಾತಾಡೋಕೆ. ಅದು ಬಿಟ್ಟು ಎಲ್ಲ ಮಾಡ್ತೀರ ನೀವು. ನೂರಾರು ಡಾಲರ್‌ಗಳನ್ನು ಖರ್ಚು ಮಾಡಿ ಫೋನುಗಳನ್ನು ತಗಂತೀರಲ್ಲಪ್ಪ, ನೀವು. ಎಷ್ಟು ಬಾರಿ ಅಮ್ಮಂಗೆ ಫೋನು ಮಾಡ್ತೀಯ?’

ಅಲಿಶಾಳಿಗೆ ಇಂದು ಅಮ್ಮನ ಮೂಡ್ ಯಾಕೋ ಸರಿ ಇಲ್ಲ ಎನಿಸಿತು. ‘ವಿನಯ್, ಹೊರಗೆ ಒಂದು ವಾಕಿಂಗ್ ಹೋಗಿ ಬರೋಣವಾ? ಇನ್ನೂ ವಿಶೂ ಬರೋದು ಲೇಟಲ್ಲ, ಹೇಗೂ? ಈ ಸಂಜೇ ಚಳೀಲಿ ಕೈಯಲ್ಲಿ ಈ ಹಾಟ್ ಚಾಕೊಲೇಟ್ ಹಿಡಕೊಂಡು ವಾಕಿಂಗ್ ಹೋಗೋಕೆ ಚೆನ್ನಾಗಿರುತ್ತೆ’ ಎಂದು ಅವನ ಉತ್ತರಕ್ಕೂ ಕಾಯದೇ ಒಂದು ಜಾಕೆಟ್ಟನ್ನು ಹಾಕಿಕೊಂಡು ಹೊರಟೇ ಬಿಟ್ಟಳು. ವಿನಯನೂ ಆಕೆಯ ಹಿಂದೆ ನಡೆದ.

(ಮುಂದುವರೆಯುವುದು…)