ನಮ್ಮ ಮನೆಯಿಂದಲೂ ಹೊರಟಿದ್ದವು ಪುಟಾಣಿ ಮಾಟಗಾತಿ, ಬ್ಯಾಟ್ ಮ್ಯಾನ್ ಗಳು, ಊರಿನ ಹಲವು ಡ್ರಾಕುಲ, ಭೂತ, ಪ್ರೇತ, ರಾಣಿ, ರಾಜಕುಮಾರಿಯರೊಂದಿಗೆ, ಮನೆಮನೆಗಳ ಹೆದರಿಸಿ ಸಿಹಿ ಸಂಗ್ರಹಿಸಲು. ಈಗ ಅಡಿಗೆ ಕಟ್ಟೆಯ ಮೇಲೆ ದೊಡ್ಡ ಬುಟ್ಟಿ ತುಂಬಾ ಕೂತ ಚಾಕಲೇಟ್ಗಳು, ಮನೆತುಂಬ ಚೆಲ್ಲಿಹರಡಿರುವ ರಾಪೆರ್ ಗಳು, ಸರಿಯಾಗಿ ಊಟ ಮಾಡದೆ ಚಾಕಲೇಟ್ ಮುಕ್ಕುತ್ತಿರುವ ಮಗ, ತನ್ನ ಬುಟ್ಟಿಯ ಚಾಕಲೇಟಿನ ಲೆಕ್ಕವಿಟ್ಟು ದಿನವೂ ಎಣಿಸುವ ಮಗಳು. ಈ ಸಿಹಿಸಂತೆಯ ಗೋದಾಮನ್ನು ನಿಕಾಲಿ ಮಾಡಲು ಕುತಂತ್ರಿಸುತ್ತಿರುವ ನಾನು.  ಇಲ್ಲಿನ ಬಹುತೇಕ ಮನೆಗಳಲ್ಲಿ ಇದೊಂದು ಬಗೆಯ ಪೋಸ್ಟ್ ಹ್ಯಾಲೋವೀನ್ ಸಿಂಡ್ರೋಮ್.

ಪ್ರತಿ ವರ್ಷ ಅಕ್ಟೋಬರ್ ೩೧ ಹ್ಯಾಲೋವೀನ್. ಇದರ ಅರ್ಥ “ಸಂತರ ದಿನದ ಹಿಂದಿನ ರಾತ್ರಿ”. ಈ ಹೆಸರು ಈ ಹಬ್ಬಕ್ಕೆ ಅಂಟಿಕೊಂಡಿದ್ದು ಸುಮಾರು ೧೬ನೆ ಶತಮಾನದಲ್ಲಿ. ಅದಕ್ಕೂ ಮುಂಚೆಯೇ ಈ ಹಬ್ಬದ ಮೂಲ ಬೇರುಗಳು ಕಂಡುಬರುವುದು ರೋಮನ್ನರ ಹಬ್ಬ “ಸತ್ತವರ ದಿನ” ಹಾಗೂ ಮುಖ್ಯವಾಗಿ ಕೆಲ್ಟಿಕ್ ಜನಾಂಗದ ಐರಿಶರ ಹಬ್ಬ “ಬೇಸಿಗೆಯ ಮುಕ್ತಾಯ”ದಲ್ಲಿ. ಕೆಲ್ಟಿಕ್ ಜಾನಪದ ನಂಬಿಕೆಯ ಪ್ರಕಾರ ಈ ದಿನದಂದು ನಮ್ಮ ಜಗತ್ತಿಗೂ ಆತ್ಮಗಳ ಜಗತ್ತಿಗೂ ನಡುವಿನ ಅಂತರ ಮಾಯವಾಗಿ ಆ ದಿನ ದುಷ್ಟಶಕ್ತಿಗಳ ಜೊತೆಗೆ ಪೂರ್ವಿಕರ ಹಾಗೂ ಉತ್ತಮ ಆತ್ಮಗಳೆಲ್ಲ ಸೇರಿ ಆತ್ಮಗಳ ಜಗತ್ತೇ ನಮ್ಮ ಜಗತ್ತಿನ ಮೂಲಕ ಸಂವಹಿಸುತ್ತದೆ. ಅಂದು ಪೂರ್ವಿಕರ ಆತ್ಮಗಳಿಗೆ ಗೌರವ ಸಲ್ಲಿಸಿ ದುಷ್ಟಾತ್ಮಗಳನ್ನು ಹೊಡೆದೋಡಿಸುವ ಪದ್ಧತಿಯಿತ್ತು. ದುಷ್ಟ ಆತ್ಮಗಳನ್ನು ಹೆದರಿಸುವ, ಯಾಮಾರಿಸುವ ಸಾಧನವಾಗಿ ಬಗೆಬಗೆಯ ವೇಷಧಾರಣೆ, ಭಯಂಕರ ಮುಖವಾಡಗಳು, ಮನೆಯನ್ನು ಸ್ಮಶಾನದಂತೆ ಕಾಣುವ ಹಾಗೆ ಸಿಂಗರಿಸುವುದು ಅಸ್ತಿತ್ವಕ್ಕೆ ಬಂತು. ಬೀದಿಗೆ ಬಂದ ದುಷ್ಟಶಕ್ತಿಗಳು ತಮ್ಮಂತೆಯೇ ತೋರುವವರನ್ನು ನೋಡಿ ಏನೂ ಹಾನಿ ಮಾಡದೆ ಮುಂದೆ ಹೋಗುತ್ತಿದ್ದವು ಎಂಬ ನಂಬಿಕೆಯಿತ್ತು.  ಸ್ಕಾಟ್ಲೆಂಡಿನಲ್ಲಿ ಪುಟ್ಟ ಮಕ್ಕಳನ್ನು ರಕ್ಷಿಸಲು ಅವರಿಗೆ ಒಂದು ಬಿಳಿಯ ಚಾದರ ತೊಡಿಸಿ ಭೂತಗಳಂತೆ ಮಾಡಿ ಬೀದಿಬೀದಿ ಸುತ್ತಿಸುತ್ತಿದ್ದರಂತೆ. ಹಾಗೆ ಆರಂಭವಾದ ಒಂದು ಜಾನಪದ ಸಂಸ್ಕೃತಿಯ ಹಬ್ಬ, ಇಂದು ಬಹುದೊಡ್ಡ ಕಮರ್ಷಿಯಲ್ ಹಬ್ಬವಾಗಿ ಹಬ್ಬಿದೆ.

ಅಕ್ಟೋಬರ್ ಮೊದಲನೇ ದಿನದಿಂದಲೇ ಇಲ್ಲಿನ ಪುಟ್ಟ ಶಾಪಿಂಗ್ ಮಳಿಗೆಗಳಲ್ಲಿ, ದೊಡ್ಡ ಮಾಲ್ ಗಳಲ್ಲಿ, ಚಿತ್ರಮಂದಿರಗಳಲ್ಲಿ, ಟೀವಿಯಲ್ಲಿ ಎಲ್ಲಿ ನೋಡಿದರೂ ಹ್ಯಾಲೋವೀನ್ ಆಚರಣೆ ಮೊದಲಾಗಿರುತ್ತದೆ. ಟೀವಿ ಚಾನೆಲ್ ಗಳು ತಿಂಗಳಿಡೀ “ಸ್ಕೆರೀ ಮೂವಿ ಮಾರಾಥನ್” ನಡೆಸುತ್ತವೆ. ಬಹಳಷ್ಟು ಜನ ಹ್ಯಾಲೋವೀನ್ ಡ್ರೆಸ್ ಅಪ್ ಪಾರ್ಟಿ ಆಚರಿಸುತ್ತಾರೆ. ಹಾಂಟೆಡ್ ಹೌಸ್ ಎಂದು ಹಲವಾರು ಭಾರೀ ಶುಲ್ಕದ ರೈಡ್ ಗಳು,  ಪಾರ್ಕ್ ಗಳು ಸಿದ್ಧಗೊಳ್ಳುತ್ತವೆ. ಮೊನ್ನೆ ಪತ್ರಿಕೆಯೊಂದರಲ್ಲಿ ನಮ್ಮ ಚಿತ್ರತಾರೆಯರೂ ಹ್ಯಾಲೋವೀನ್ ಆಚರಿಸಿದರೆಂದು ಓದಿ ಆಶ್ಚರ್ಯದ ಜೊತೆಗೆ ನಗುವೂ ಬಂತು. ಕಮರ್ಶಿಯಲೈಸಶನ್ನಿನ ಇನ್ನೊಂದು ಹಂತ ಅಷ್ಟೇ ಎಂದುಕೊಂಡೆ. ಬರೀ ಈ ತಿಂಗಳಷ್ಟೇ ಎದ್ದು ಭೂಗತವಾಗುವ ಬಗೆಬಗೆಯ ವಸ್ತ್ರ ವೇಷ ಮುಖವಾಡ, ವಿಗ್ ಗಳನ್ನು ಮಾರುವ ಹಲವಾರು ಟೆಂಟ್ ಅಂಗಡಿಗಳು ಹುಟ್ಟಿಕೊಳ್ಳುತ್ತವೆ. ಆ ಅಂಗಡಿಗಳನ್ನು ಒಂದು ಸುತ್ತು ಬರುವುದೇ ವಿಚಿತ್ರ ಅನುಭವ. ಎದುರಿನ ಬಾಗಿಲಲ್ಲೇ ಕೈಯೆತ್ತಿ ತನ್ನ ತಲೆಯನ್ನೇ ಕಿತ್ತು ಗಹಗಹಿಸಿ ನಗುವ ಒಂದು ಮಾಟಗಾತಿ ಬೊಂಬೆ. ಮತ್ತೊಂದು ಬದಿಗೆ ಗಿರಗಿಟ್ಟಿಯಂತೆ ಗರಗರ ತಿರುಗಿಸುವ ತಲೆ ವಾರೆಯಾಗಿ ಮುರಿದುಬಿದ್ದು ಬುಳಬುಳ ರಕ್ತಹಾರುವ ಪಿಚಕಾರಿಯ ಕುತ್ತಿಗೆಯ ಒಬ್ಬ ಮನುಷ್ಯ. ಒಂದು ದೊಡ್ಡ ಪಾತ್ರೆಯಲ್ಲಿ ರಕ್ತದಂತೆ ಕಾಣುವ ನೀರು, ಅದರಲ್ಲಿ ತೇಲುವ ಕಣ್ಣುಗುಡ್ಡೆಗಳು. ಕೀಚ್ ಕೀಚ್ ಎಂದು ಸದ್ದು ಹೊರಡಿಸುತ್ತ ಹೆದರಿಸುವ ಬಾವಲಿಗಳು, ಚಿತ್ರ ವಿಚಿತ್ರ ಕೀಟಗಳು. ಇನ್ನೊಂದು ಮೂಲೆಯಲ್ಲಿ ಖಡ್ಗ ಹಿಡಿದು ಹೊಡೆಯಲು ನಿಂತಿರುವಂತೆ ತೋರುವ ಒಂದು ಪ್ರೇತದಂತೆ ಕಾಣುವ ಗೊಂಬೆ. ಅವುಗಳಿಗಿಂತಲೂ ಹೆಚ್ಚಾಗಿ ಅವುಗಳ ಬೆಲೆಯೇ ಭಯ ಹುಟ್ಟಿಸುವಂತಿರುತ್ತದೆ. 

ಹೈಟೆಕ್ ಆಗುತ್ತಿರುವ ಹಬ್ಬಗಳಲ್ಲಿ ಹ್ಯಾಲೋವೀನ್ ಕೂಡ ಹೊರತಲ್ಲ. ಭಯಾನಕ ಶಬ್ದ ಹೊರಡಿಸುವ ಚಿಕ್ಕ ಚಿಕ್ಕ ಸಾಧನಗಳು, ಮನೆಯೆಲ್ಲ ಹೊಗೆ ಹಾಕಿದಂತೆ ತೋರುವ ಲೈಟಿಂಗ್, ಲೇಸರ್ನಿಂದ ಭಯಾನಕ ಮುಖಗಳನ್ನು ಪರದೆಯ ಮೇಲೆ, ಕಿಟಕಿಯ ಮೇಲೆ ಮೂಡಿಸುವ ಸಾಧನಗಳು. ಹಾರುವ ಆತ್ಮಗಳು, ಕುದಿಯುವ ರಕ್ತದ ಕೊಳಗಳು, ತಟ್ಟೆತುಂಬ ಹರಿದಾಡುವ ಜಿರಳೆ, ಜೇಡ, ಹಾವುಗಳು. ಏನೇನೋ ಆಟಿಗೆ ಆಯುಧಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಪುರಾಣ ಕತೆಗಳಾಗಲೀ, ಪುರಾತನ ಇತಿಹಾಸವಾಗಲೀ ಇಲ್ಲದ ಈ ದೇಶದಲ್ಲಿ, ವೇಷಭೂಷಣಕ್ಕೆ ಸ್ಫೂರ್ತಿ ಸಿನಿಮಾಗಳು, ಟೀವಿ ಶೋಗಳು. ಆ ವರ್ಷ ಬಂದ ಹಾರರ್ ಸಿನಿಮಾದ ಪಾತ್ರಗಳೆಲ್ಲವೂ ಗ್ಯಾರಂಟಿಯಾಗಿ ಆ ವರ್ಷ ಹಾಲೊವೀನ್ ಅಂಗಡಿಯಲ್ಲಿರುತ್ತವೆ ಎಲ್ಲ ಹಳೆ ಸಿನಿಮಾದ ಜೊತೆಗಾರರೊಂದಿಗೆ. ಮಕ್ಕಳ ವೇಷಭೂಷಣಗಳಂತೂ ಹೆಚ್ಚಿನವು ಡಿಸ್ನಿ, ನಿಕಲೋಡಿಯನ್ ಮಯವಾಗಿವೆ. ಒಳ್ಳೊಳ್ಳೆ ಜಾನಪದ ಕತೆಗಳು, ಫೆರಿಟೇಲ್ ಗಳನ್ನೂ ಮಕ್ಕಳ ಧಾರಾವಾಹಿ ಇಲ್ಲವೇ ಸಿನಿಮಾವಾಗಿ ಪರಿವರ್ತಿಸಿಬಿಟ್ಟಿದ್ದಾರೆ. ಕೆಲವರು ಇನ್ನೂ ಮನೆಯಲ್ಲಿ ಚಾದರ ಕತ್ತರಿಸಿ, ರಟ್ಟಿಗೆ ಬಣ್ಣದ ಕಾಗದ ಹಚ್ಚಿ, ಬಗೆಬಗೆಯ ಕಾಲ್ಪನಿಕ ವೇಷಧರಿಸಿದರೆ, ಹೆಚಿನವರಿಗೆ ಸಿದ್ಧ ಉಡುಪುಗಳೇ ಸೈ.

ಹ್ಯಾಲೋವೀನಿನ ಇನ್ನೊಂದು ಪ್ರಮುಖ ಪದ್ಧತಿಯೆಂದರೆ ಕುಂಬಳಗಳನ್ನು ಮೆಟ್ಟಿಲ ಮೇಲೆ ಇರಿಸುವುದು. ದೊಡ್ಡ ದೊಡ್ಡ ಕುಂಬಳಗಳನ್ನು ಕೊರೆದು, ಒಳಗೆ ದೀಪ ಹಚ್ಚಿಟ್ಟರೆ ನಿಜವಾದ ಮುಖದಂತೆ ಕಾಣುತ್ತದೆ. ಇವುಗಳನ್ನು ಜಾಕ್ – ಓ – ಲಾಂಟರ್ನ್ ಎನ್ನುತ್ತಾರೆ. ಈ ಪದ್ಧತಿ ಬಂದಿದ್ದು ಮಿಡೀವಿಯಲ್ ಸಂಸ್ಕೃತಿಯಿಂದ. ಆಗಿನ ಜನ ಟರ್ನಿಪ್ ಗಳನ್ನು ಕೊರೆದು ದೀಪಹಚ್ಚುತ್ತಿದ್ದರಂತೆ. ಬಗೆಬಗೆಯ ಮುಖಗಳಂತೆ ಕಾಣುವ ಇವುಗಳನ್ನು ಮೆಟ್ಟಿಲ ಮೇಲೆ, ಕಿಟಕಿಕಟ್ಟೆಯ ಮೇಲೆ ಇಡುವುದು ಕೂಡ ದುಷ್ಟಶಕ್ತಿಗಳನ್ನು ಹೆದರಿಸಲು. ಈಗೆಲ್ಲ ಕುಂಬಳ ಕೊರೆಯುವ ಸಾಧನಗಳ ಕಿಟ್ ಕೂಡ ದೊರೆಯುತ್ತದೆ. ಬಹಳಷ್ಟು ಕಡೆ ಕುಂಬಳ ಕೊರೆಯುವ ಸ್ಪರ್ಧೆಯೂ ನಡೆಯುತ್ತದೆ. ಇಲ್ಲಿನ ಸಮೀಪದ ಕೀನ್ ಎಂಬ ಊರಲ್ಲಿ ಜಾಕ್-ಓ-ಲಾಂಟರ್ನ್ ಜಾತ್ರೆ ನಡೆಯುತ್ತದೆ. ಯಾರು ಬೇಕಾದರೂ ತಮ್ಮ ಕುಂಬಳದೀಪವನ್ನು ಒಯ್ದು ಇಡಬಹುದು. ಈ ವರ್ಷ ಅಲ್ಲಿ ಬೆಳಗಿದ ಕುಂಬಳಗಳು ಒಟ್ಟೂ ೨೨,೯೪೯!

ಈ ಕುಂಬಳ ಕೊರೆಯುವುದೇ ಒಂದು ಮಜಾ ಮಕ್ಕಳಿಗೆ. ದೊಡ್ದಕುಂಬಳಗಳ ತಲೆಕೊರೆದು, ಒಳಗಿನ ಗುಳವನ್ನೆಲ್ಲ ಎಳೆದೆಳೆದು ಹೊರತೆಗೆದು, ಬೀಜಗಳನ್ನೆಲ್ಲ ಆರಿಸಿ (ಚಳಿಗಾಲದಲ್ಲಿ ಒಣಗಿದ ಪಂಪ್ಕಿನ್ ಬೀಜಗಳನ್ನು ಅಗ್ಗಿಷ್ಟಿಕೆಯ ಮುಂದೆ ಬಿಡಿಸಿ ತಿನ್ನಲು ಚೆನ್ನಾಗಿರುತ್ತದೆ.) ಸ್ವಚಗೊಳಿಸಿದರೆ ಈಗ ಕುಂಬಳ ಜಾಕ್ ಆಗಲು ರೆಡಿ. ಮುಂದಿನ ಕೆಲಸ ಚೂಪು ಚಾಕುವಿನಿಂದ ದಪ್ಪ ಮೇಲ್ಮೈಯನ್ನು ಕೊರೆಕೊರೆದು ಕಣ್ಣು, ಮೂಗು ಬಾಯಿಯನ್ನು ಮೂಡಿಸುವುದು. ಒಳಗೆ ದೀಪ ಹಚ್ಚಿಟ್ಟು ತಲೆಜುಟ್ಟು ಮುಚ್ಚಿಬಿಟ್ಟರೆ ಜಾಕ್-ಓ-ಲಾಂಟರ್ನ್ ಮೆಟ್ಟಿಲಮೇಲೆ ವಿರಾಜಮಾನ. ನಮ್ಮ ಮನೆಯ ಮೆಟ್ಟಿಲ ಮೇಲೂ ಒಂದು ಕಡೆ ನಗುವ ಜಾಕ್ ಅದೇ ಅವನನ್ನು ತಿರುಗಿಸಿದರೆ ಚೂಪುಹಲ್ಲುಗಳ ಗಹಗಹಿಸುವ ಜಾಕ್ ದೀಪಬೆಳಗಿಕೊಂಡು ಕುಳಿತಿದ್ದಾನೆ.

ಹ್ಯಾಲೋವೀನಿನಲ್ಲಿ ಮುಖ್ಯಕಾರ್ಯವೆಂದರೆ ಮಕ್ಕಳು ಟ್ರಿಕ್ -ಆರ್-ಟ್ರೀಟ್ ಎನ್ನುತ್ತಾ ಬಗೆಬಗೆಯ ವೇಷಧಾರಿಗಳಾಗಿ ಮನೆಮನೆ ತಿರುಗುವುದು. ಒಂದು ಕುಂಬಳದ ಆಕಾರದ ಬುಟ್ಟಿ ಹಿಡಿದುಕೊಂಡು ಸಂಜೆ ಸುಮಾರು ೫-೬ ಗಂಟೆಗೆ ಸುತ್ತಲು ತೊಡಗಿದವೆಂದರೆ ಬುಟ್ಟಿತುಂಬ ಚಾಕಲೇಟ್ ತುಳುಕಿ ಕೈಕಾಲು ಸೋತು ನಿದ್ದೆ ಬಂದು ತೂಗುವವರೆಗೆ ಸಾಕೆಂದರೂ ನಿಲ್ಲಿಸುವುದಿಲ್ಲ. ದೊಡ್ಡ ಮಕ್ಕಳೆಲ್ಲ ಅವರದ್ದೇ ಗುಂಪುಕಟ್ಟಿಕೊಂಡು ತಿರುಗಿದರೆ, ಚಿಕ್ಕಮಕ್ಕಳು ಅಪ್ಪ ಅಮ್ಮಂದಿರು ಜೊತೆಯಲ್ಲಿ ತಿರುಗುತ್ತಾರೆ. ಮನೆಯೊಳಗಿನ ಪುಟ್ಟ ರಕ್ಕಸೆರೆಲ್ಲ ರಾಕ್ಷಸವೇಶಧಾರಿಗಳಾಗಿ ಸಿಹಿಬೇಡಲು ಸಜ್ಜಾಗುತ್ತಾರೆ. ರಸ್ತೆಯ ತುಂಬೆಲ್ಲ ಪುಟ್ಟ ರಾಜಕುಮಾರಿಯರು, ದೇವದೂತೆಯರು, ಜೊತೆಗೆ ಮಾಟಗಾತಿಯರು, ಸೈತಾನರು, ಪಿಶಾಚಿಗಳು, ಬ್ಯಾಟ್ ಮ್ಯಾನ್, ಸ್ಪೈಡರ್ಮ್ಯಾನ್ ಗಳು, ಭೂತಗಳು, ರಾಕ್ಷಸರು. ಹಾಗೆ ಸುತ್ತುವಾಗ, ಮನೆಮುಂದೆ ಕುಂಬಳದೀಪವಿಲ್ಲದಿದ್ದರೆ ಅಂಥವರ ಮನೆಗೆ ಹೋಗುವಂತಿಲ್ಲ. ಭಾರತೀಯ ಮೂಲದವರ್ಯಾರೂ ಮನೆಮುಂದೆ ಒಂದು ಬೆಚ್ಚು ಇಲ್ಲ ಕುಂಬಳ ಬಿಟ್ಟರೆ ಭೀತವಾಗಿ ಅಲಂಕರಿಸುವುದಿಲ್ಲ. ಮನೆಯಲ್ಲಿ ಹೆಣದಂತ ಗೊಂಬೆ, ಅಸ್ಥಿಪಂಜರವೆಲ್ಲ ನಮ್ಮ ಮಾನಸಿಕ ಸ್ಥಿತಿಗೆ ಸರಿಹೊಂದುವುದಿಲ್ಲ. ಕೆಲವರ ಮನೆಯಂತೂ ಪೂರ್ತಿ ಸ್ಮಶಾನದಂತೆಯೋ, ರಾಕ್ಷಸಗುಹೆಯಂತೆಯೋ, ಮಾಟಗಾತಿ ರಹಸ್ಯ ಸ್ಥಳದಂತೆಯೋ ಅಲಂಕೃತವಾಗಿರುತ್ತದೆ. ಕೆಲವರು ತಮ್ಮ ಮನೆಯ ಟೂರ್ ಕೂಡ ಹೋಗಿಬನ್ನಿ ಪರವಾಗಿಲ್ಲ ಎನ್ನುತಾರೆ. ನೋಡಲು ಮಜವೆನಿಸಿದರೂ,  ವಾರಗಟ್ಟಲೆ ಹಾಗೆಲ್ಲ ಅಲಂಕರಿಸುತ್ತ ರಾತ್ರಿಯೆಲ್ಲ ಆ ಮನೆಯಲ್ಲಿ ಹೇಗೆ ಮಲಗುತ್ತಾರೋ! ಕೆಲವರ ಚಾಕಲೇಟ್ ಹಂಚುವ ಪಾತ್ರೆಯಲ್ಲಿ ಹರಿದಾಡುವ ಪ್ಲಾಸ್ಟಿಕ್ ಜೇಡ, ಹಾವುಗಳೂ ಇರುತ್ತವೆ. ಕೆಲವರ ಕ್ಯಾಂಡಿ ಬೊಲಿನಲ್ಲಿ ಚಾಕಲೇಟ್ ಎತ್ತಿಕೊಳ್ಳಲು ಕೈಯಿಟ್ಟ ತಕ್ಷಣ ಕೈಯೊಂದು ಬೋವ್ಲಿನಿಂದಲೇ ಎದ್ದು ಗಬಕ್ಕನೆ ಹಿಡುಕೊಳ್ಳುತ್ತದೆ. ಕೆಲವರ ಮನೆ ಬಾಗಿಲು ತೆರೆಯುತ್ತಿದ್ದಂತೆ ಅಸ್ಥಿಪಂಜರವೊಂದು ಹೊರಬಂದು ನಗುತ್ತದೆ. ಮಕ್ಕಳಿಗಂತೂ ಇವೆಲ್ಲ ಬಹುಮೋಜಿನ ಸಂಗತಿ. ಅವುಗಳಿಗಿಂತ ಹೆಚ್ಚು ಅಪ್ಪ ಅಮ್ಮಂದಿರೆ ಹೆದರಿಕೊಳ್ಳುತ್ತಾರೆ. ಹಬ್ಬ ಮುಗಿದು ಬಹಳದಿನಗಳವರೆಗೂ ಪ್ರಿಯವಾದ ಕ್ಯಾನ್ಡಿಗಳೆಲ್ಲ ತಿಂದು ಖಾಲಿಯಾದ ಮೇಲೆ ಯಾರಿಗೂ ಬೇಡದ ಪ್ರಾಕಾರದವುಗಳು ಎಲ್ಲರ ಮನೆಯಿಂದ ಉಚ್ಚಾಟಿತವಾಗಿ ಆಫೀಸ್ ಕ್ಯಫೆಟೇರಿಯಾ, ಬ್ರೇಕ್ ರೂಂಗಳಲ್ಲಿ ಗೋಚರಿಸುತ್ತಿರುತ್ತವೆ.

ಪ್ರತೀ ಹ್ಯಾಲೋವೀನಿನಲ್ಲಿ ನೆನಪಾಗುವುದು ನನಗೆ ಅಂಕೋಲಾದ ಸುಗ್ಗಿ ಹಬ್ಬ. ಹೋಳಿಹಬ್ಬವನ್ನು ಅಲ್ಲಿ ಸುಗ್ಗಿಹಬ್ಬ ಎನ್ನುತ್ತಾರೆ. ಮುಖ್ಯವಾಗಿ ಕೊಯಿಲಿನ ನಂತರದ ಬಿಡುವಿನ ಹಬ್ಬವಾಗಿ ಆಚರಿಸುವ ಅಲ್ಲಿ ವಾರಗಟ್ಟಲೆ ನಡೆಯುವ ಹೆಸರಾಂತ ಸುಗ್ಗಿಕುಣಿತದಿಂದಾಗಿ ಈ ಹೆಸರು. ಹೋಳಿಹಬ್ಬದ ಕಾಮದಹನದವರೆಗೂ ಸುಗ್ಗಿಯಾಡುತ್ತಾರೆ. ಅದರ ಬಗ್ಗೆ ಈಗಾಗಲೇ ಹಲವಾರು ಮಾಹಿತಿಗಳೂ ಲಭ್ಯವಿವೆ. ಅಲ್ಲಿನ ವಿಶೇಷವೆಂದರೆ ಇತರ ಕಡೆಗಳಂತೆ ಬಣ್ಣವಾಡುವುದಿಲ್ಲ. ಈಗೀಗ ಟೀವಿ ಪ್ರಭಾವದಿನದ ಆರಂಭವಾಗಿದೆ. ಮುಂಚೆಲ್ಲಾ ಗಂಡಸರು, ಮಕ್ಕಳು ವೇಷಧರಿಸಿ ಹೋಳಿಹಬ್ಬದ ದಿನ ಮನೆಮನೆ ಬೇಡುತ್ತಿದ್ದರು. ಈ ಆಚರಣೆಯ ಹಿಂದಿನ ಕತೆಯೂ ಅಂದು ದುಷ್ಟಶಕ್ತಿಗಳು ಕಾಡಿನಿಂದ ನಾಡಿಗೆ ನುಗ್ಗಿ ಧಾಂಧಲೆ ಎಬ್ಬಿಸುತ್ತವೆ ಎಂದೇ ಆಗಿದೆ!

ಹಾಗಾಗಿಯೇ ಪ್ರಾಣಿ, ಪ್ರೇತಗಳ ವೇಷಧಾರಣೆ. ಮುಖ್ಯವಾದ ವೇಷವೆಂದರೆ ಕರಡಿ ವೇಷ. ಈ ಕರಡಿಯ ವೇಷವನ್ನು ತೆಂಗಿನಸಿಪ್ಪೆಯ ಕತ್ತವನ್ನು ಬಣ್ಣದಲ್ಲಿ ಅದ್ದಿ ಒಣಗಿಸಿ ಅವನ್ನು ಗೋಣೀತಾಟಿನಿಂದ ತಯಾರಿಸಿದ ಅಂಗಿ ಪ್ಯಾಂಟಿಗೆ ಹೊಲಿದು ಜೋಡಿಸುತ್ತಾರೆ. ಅವರವರ ವೇಷವನ್ನು ಬಹುತೇಕ ಜನರು ಅವರೇ ತಯಾರಿಸಿಕೊಳ್ಳುತ್ತಾರೆ. ಜೊತೆಗೊಂದು ಕರಡಿಮುಖದಂತಿರುವ ಮುಖವಾಡ. ಸೊಂಟದ ಸುತ್ತ ಹಗ್ಗಕ್ಕೆ ಕಟ್ಟಿದ ಹಸುವಿನ ಗಂಟೆಗಳು. ಭರ್ಜರಿ ಕರಡಿವೇಷಧಾರಿಗಳು ಭಯಹುಟ್ಟಿಸುವತೆ ಗೇಟು ತೆಗೆದು ಓಡಿಬಂದು ಮೆಟ್ಟಿಲಿನಿಂದ ಸೀದಾ ಜಗಲಿಗೆ ಹಾರಿ ಝಲ್ಲೆಂದು ನಿಂತರೆ ಒಮ್ಮೆ ಎಂಥವರ ಎದೆಯೂ ಝಲ್ಲೆನ್ನಬೇಕು, ಚಿಕ್ಕ ಮಕ್ಕಳು ಕೂತಲ್ಲೇ ಚಳ್ಳೆನ್ನಬೇಕು. ಬಣ್ಣಬಣ್ಣದ ಭಯಂಕರ ಗಾತ್ರದ ಕರಡಿಗಳು ಸೊಂಟದ ಸುತ್ತ ಗಂಟೆ ಗಟ್ಟಿಕೊಂಡು ಟಣಟಣ ಕುಂಡೆ ಕುಣಿಸುತ್ತ “ಟರ್ರ್ ಟರ್ರ್” ಎಂದು ಗುಟುರು ಕೂಗುತ್ತ ಮನೆಮುಂದೆ ಬಂದು ನಿಂತಿತೆಂದರೆ ನಾವೆಲ್ಲಾ ಸೇರುತ್ತಿದ್ದುದು ಮಂಚದ ಅಡಿಗೆ. ಅದೂ ಮನುಷ್ಯನೇ ಎಂದು ಗೊತ್ತಿದ್ದರೂ “ಅಮ್ಮ ದುಡ್ಡುಕೊಟ್ಟು ಕಳಿಸೆ ಪ್ಲೀಸ್” ಎಂದು ಅಳುತ್ತಿದ್ದೆವು. ದೊಡ್ಡವರಾಗುತ್ತ ಕರಡಿಗಳು ಮೋಜಿನ ಸಂಗತಿಯಾಗುತ್ತ ಮುಖವಾಡ ಕಳಚು, ಇಲ್ಲದಿದ್ದರೆ ದುಡ್ಡಿಲ್ಲ ಎಂದು ಸತಾಯಿಸುತಿದ್ದೆವು. ಪಪ್ಪನ ಪೇಷೆಂಟ್ ಗಳು, ಅಮ್ಮನ ಪರಿಚಯದವರು ಯಾರೂ ೧೦-೨೦ ರೂಪಾಯಿಯ ಕಡಿಮೆ ಜಾಗ ಬಿಡುತ್ತಿರಲಿಲ್ಲ. ಶಾಲೆಗೇ ಹೋಗುವಾಗ ಯಾರ ಮನೆಗೆ ಜಾಸ್ತಿ ಭಯಂಕರ ಕರಡಿಗಳು ಬರುತ್ತವೋ ಅವರಿಗೊಂದು ಹೆಮ್ಮೆ.  ಮನೆಗೆ ಬಂದ ಕತ್ತದ ಕರಡಿ ಲೆಕ್ಕ ಇಟ್ಟು ಮಾರನೆ ದಿನ ಕ್ಲಾಸಿನಲ್ಲಿ ಯಾರು ಹೆಚ್ಚು ಎಂದು ಹೋಲಿಸಿಕೊಳ್ಳುತ್ತಿದ್ದೆವು. ಅದಕ್ಕಾಗಿಯೇ ಒಮ್ಮೊಮ್ಮೆ ರಸ್ತೆಲಿ ಹೋಗುತ್ತಿದ್ದ ಕರಡಿಗಳನ್ನು ಗೇಟಿನವರೆಗೆ ಹೋಗಿನಿಂತು ಒಳಕರೆದಿದ್ದೂ ಇದೆ. ಪಾಪ ಬಹಳಷ್ಟು ಸಾರಿ ಅವರು ಪ್ರಾಮಾಣಿಕವಾಗಿ ಬೆಳಿಗ್ಗೆ ಬಂದಿದ್ದೆ ನಿಮ್ಮನೆಗೆ ಅನ್ನುತ್ತ ಮುಂದೆ ಹೋಗುತ್ತಿದ್ದರು. ಮಧ್ಯರಾತ್ರಿಯಾದರೂ ಕೆಲವರಿಗೆ ಪಪ್ಪನೆ ಬಂದು ದುಡ್ಡು ಕೊಡಬೇಕಿತ್ತು. ಕೆಲವರು ರಸ್ತೆಯಲ್ಲಿ ಸೈಕಲ್, ಮೋಟಾರು ಬೈಕ್ ಗಳನ್ನೂ ಹಿಡಿದು ನಿಲ್ಲಿಸಿ ದುಡ್ದು ಕೀಳುತ್ತಿದ್ದರು. ಹುಡುಗರು ಈ ಗೋಣೀತಾಟಿನ ವಸ್ತ್ರಕ್ಕೆ ಕಾಗದಗಳನ್ನು ಸಣ್ಣದಾಗಿ ಉದ್ದುದ್ದ ಕತ್ತರಿಸಿ ಅಂಟಿಸಿಕೊಳ್ಳುತ್ತಿದ್ದರು. ಇಂಥವರನ್ನು ಪೇಪರ್ ಕರಡಿ ಎನ್ನುತ್ತಿದ್ದೆವು.   ಇವರ ಜೊತೆಗೆ ಭೂತ ಪ್ರೇತ ವೇಷಧಾರಿಗಳೂ, ಹೆಂಗಸರಂತೆ ವೇಷ ಧರಿಸಿದ “ಫ್ಯಾಶನ್ ಲೇಡಿ” ಪಾತ್ರದವರೂ ಇರುತ್ತಿದ್ದರು. 

ಮತ್ತೊಂದಿಷ್ಟು ಜನ ಗುಂಪಿನಲ್ಲಿ ಬಂದು ಚಿತ್ರನಟ ನಟಿಯರಂತೆ ವೇಷಧರಿಸಿ ನರ್ತಿಸುತ್ತಿದ್ದರು. ಇವರಿಗೆಲ್ಲ ಕತ್ತದ ಕರಡಿಗಳಿಗಿಂತ ಸ್ವಲ್ಪ ಕಮ್ಮಿಯೇ ಸಿಗುತ್ತಿತ್ತು. ಪೇಟೆಯ ಮಧ್ಯೆ ವೇಷಧಾರಿಗಳ ಮೆರವಣಿಗೆಯಿರುತ್ತಿತ್ತು. ಮಾರ್ಚ್ ನಲ್ಲಿ ಬರುವ ಹಬ್ಬದ ಒಂದೇ ಬೇಜಾರೆಂದರೆ  ಪರೀಕ್ಷಾ ಸಮಯ. ರಾತ್ರಿಯಿಡೀ ನೆಪಕ್ಕೆ ಪುಸ್ತಕ ಹಿಡಿದು ಪಕ್ಕಕ್ಕೆ ದುಡ್ಡಿನ ಬಟ್ಟಲಿಟ್ಟುಕೊಂಡು ಮೆಟ್ಟಿಲಮೇಲೆ ಕುಳಿತಿರುತ್ತಿದ್ದೆವು. ಕೆಲವರು ಆರಾಮವಾಗಿ ಕುಳಿತು ಕೈಚೀಲ ತೆರೆದು ದುಡ್ಡು ಎಣಿಸಿಕೊಡು, ಒಂದು ಲೋಟ ನೀರುಕೊಡು ಎಂದೆಲ್ಲ ಹೇಳಿ ಅಪ್ಪ, ಅಮ್ಮನೊಡನೆ ಒಂದಿಷ್ಟು ಹರಟೆ ಹೊಡೆದು ಹೋಗುತ್ತಿದ್ದರು. ದಿನದ ದುಡಿಮೆಯನ್ನೆಲ್ಲ ಮಧುಪಾನಕ್ಕೆ ಮುಗಿಸಿ ಮಧ್ಯರಾತ್ರಿಯಮೇಲೆ ಮತ್ತೊಂದು ರೌಂಡ್ ಸಂಪಾದನೆಗೆ ಹೊರಡುವ ಕರಡಿಗಳೂ ಇದ್ದವು.

ಜಾನಪದವಾಗಲೀ ಆಧುನಿಕವಾಗಲೀ ಒಂದು ದಿನದ ಮಟ್ಟಿಗಾದರೂ ಮನುಷ್ಯಸಹಜ ಕೆಟ್ಟಭಾವನೆಗಳನ್ನು ಮುಖವಾಡದ ಹಿಂದಾದರೂ ಅಡಗಿಸಿ ಹೊರಹಾಕುವಲ್ಲಿ ಈ ಹಬ್ಬಗಳು ಸಹಕಾರಿ. ಭಯಾನಕ ವೇಷಧಾರಿಗಳಾಗಿ ದುಡ್ಡು ಬೇಡಲಿ, ಚಾಕಲೇಟ್ ಬೇಡಲಿ, ಅದನ್ನು ಆಚರಿಸುವವರಿಗೂ, ನೋಡುಗರಿಗೂ ಸಿಗುವ ಮೋಜು ಸಹಜ ಸುಂದರ ಸಾಂಸ್ಕೃತಿಕ ಸಂಭ್ರಮ.