ತಂದೆಗೆ ಅಪರಾಧಿ ಪ್ರಜ್ಞೆ ಕಾಡುತ್ತಿರುತ್ತದೆ. ಹದಿನೈದು ವರ್ಷ ವಿಕಲಾಂಗನನ್ನು ಸಹಿಸಲಾರೆ ಎಂಬ ಕಾರಣದಿಂದ ದೂರ ಮಾಡಿ ನಿಶ್ಚಿಂತನಾಗಿ ಜೀವಿಸಿದ್ದ ಸಂಗತಿ ಅವನನ್ನು ಕಾಡುತ್ತದೆ. ತಂದೆಯ ಕರ್ತವ್ಯಗಳನ್ನು ನಿರ್ವಹಿಸುವುದಷ್ಟೇ ಅಲ್ಲ ಅದಕ್ಕಿಂತ ತಂದೆಯಾಗಿ ಪ್ರಾಮಾಣಿಕವಾಗಿ ಪರಿಭಾವಿಸುವುದು ಹೆಚ್ಚಾಗಿ ಸದ್ಯದ ಅಗತ್ಯ. ಇದರಿಂದಾಗಿಯೇ ವಿಕಲಾಂಗನ ಜೊತೆ ಆಡುವ ಮಾತುಗಳು ಕಡಿಮೆ ಇದ್ದರೂ ಅವುಗಳ ಭಾವಲಯದಲ್ಲಿ ವಿವರಣೆಗೆ ಮೀರಿದ ಅಂಶ ಇರಬೇಕಾಗುತ್ತದೆ. ಇದಕ್ಕೆ ಅತ್ಯಂತ ಸಹಜವಾಗಿ ಅಪಾರ್ಥಕ್ಕೆ ಅವಕಾಶವಿಲ್ಲದಂತೆ ಒಳಮಾಡಿಕೊಳ್ಳುವ ಮನಸ್ಥಿತಿ ವಿಕಲಾಂಗನಿಗೆ ಇರುವುದೂ ಅಷ್ಟೇ ಅವಶ್ಯ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಇಟಲಿಯ ʻಕೀಸ್ ಟು ದ ಹೌಸ್‌ʼ ಸಿನಿಮಾ ಕುರಿತ ಬರಹ 

ಈಗ ಹದಿನೈದು ವರ್ಷದವನಾಗಿರುವ ಪಾಲ್ ಹುಟ್ಟಿನಿಂದಲೇ ವಿಕಲಾಂಗ. ಅಲ್ಲದೆ ಹುಟ್ಟುವಾಗಲೇ ತಾಯಿಯನ್ನು ಕಳೆದುಕೊಂಡವನು. ತಂದೆ ಗಿಯಾನಿ ಅವನನ್ನು ಆ ಸ್ಥಿತಿಯಲ್ಲಿ ಸ್ವೀಕರಿಸಲಾಗದೆ ಬಿಟ್ಟು ಹೋದವನು. ಅವನು ಅಷ್ಟು ವರ್ಷಗಳ ಕಾಲ ಬೆಳೆದದ್ದು ಸಂಬಂಧಿ ಆಲ್ಬರ್ಟೋನ ಆಶ್ರಯದಲ್ಲಿ. ಇಷ್ಟು ದೀರ್ಘ ಕಾಲದ ಬಳಿಕ ಆಲ್ಬರ್ಟೋ ಮತ್ತು ಗಿಯಾನಿ ಪರಸ್ಪರ ಸಂಪರ್ಕಿಸಿ ಒಂದು ಅಭಿಪ್ರಾಯಕ್ಕೆ ಬಂದಿರುತ್ತಾರೆ. ಅದರಂತೆಯೇ ರೈಲ್ವೆ ಸ್ಟೇಷನ್ ನಲ್ಲಿ ಕುಳಿತು ಮಾತನಾಡುತ್ತಿರುತ್ತಾರೆ.

(ಗಿಯಾನಿ ಅಮೆಲಿಯೋ)

ʻನಿನಗೆ ಕಷ್ಟವಾದ ಅನುಭವವನ್ನು ಕೊಡುತ್ತಿದ್ದೇನೆ. ಜವಾಬ್ದಾರಿಯಿಂದ ಅದನ್ನು ನಿರ್ವಹಿಸುವ ಹೊಣೆ ನಿನ್ನದುʼ ಎನ್ನುತ್ತಾನೆ ಆಲ್ಬರ್ಟೋ. ಇಷ್ಟು ವರ್ಷ ಪಾಲ್‌ನನ್ನು ಸಲಹಿದ ಆಲ್ಬರ್ಟೋ ವಹಿಸಿಕೊಂಡ ಜವಾಬ್ದಾರಿಯಿಂದ ಕೊಂಚ ಕುಗ್ಗಿದವನಂತೆ ಕಾಣುತ್ತಾನೆ. ಆಡಿದ ಮಾತುಗಳನ್ನು ಕೇಳಿಸಿಕೊಂಡು ಗಂಭೀರನಾಗಿ ಕುಳಿತ ಗಿಯಾನಿಯಿಂದ ಸಮ್ಮತಿ ಸೂಚಿಸುವ ಸನ್ನೆ. ಆಲ್ಬರ್ಟೋ ಹೇಳಿದ ಅನುಭವವೆಂದರೆ ಪಾಲ್‌ಗೆ ತಂದೆಯಾಗಿ ಅನುಭವಿಸುವ ಜವಾಬ್ದಾರಿ. ಇದಾದ ನಂತರ ಅಧಿಕ ಮಾತುಗಳಿಲ್ಲದೆ ಹೊರಟು ರೈಲಿನಲ್ಲಿ ಪಾಲ್ ಹಾಗೂ ಗಿಯಾನಿಯರ ಪ್ರಯಾಣ ಪ್ರಾರಂಭ.

ಇದು 2004ರ ವೆನಿಸ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ವಿಜೇತ ಗಿಯಾನಿ ಅಮೆಲಿಯೋ ನಿರ್ದೇಶನದ ʻದ ಕೀಸ್‌ ಟು ದ ಹೌಸ್ʼ ಚಿತ್ರದ ಪ್ರಾರಂಭದ ದೃಶ್ಯ. ವಿಕಲಾಂಗ ಪಾಲ್ ಮತ್ತು ಅವನ ತಂದೆ‌ ಗಿಯಾನಿ ನಡುವೆ ಏರ್ಪಡುವ ಬಾಂಧವ್ಯ ಒಂದು ನಿಶ್ಚಿತ ಹಂತ ತಲುಪುವುದನ್ನು ಪ್ರಸ್ತುತಪಡಿಸುವ ಚಿತ್ರವಿದು. ಪ್ರಾರಂಭದಲ್ಲಿ ಪಾಲ್‌ ಮತ್ತು ಗಿಯಾನಿಯರ ಭಾವನಾ ಪ್ರಪಂಚಗಳ ನಡುವೆ ಸಾಕಷ್ಟು ಅಂತರ. ಬುದ್ಧಿಪೂರ್ವಕವಾಗಿಯೇ ಪರಸ್ಪರ ಸ್ವೀಕರಿಸುವ ಸ್ಥಿತಿಯಿಂದ ಹೊರಟರೂ ಭಾವನಾತ್ಮಕವಾಗಿ ಅದು ಮಾರ್ಪಾಡಾಗಲು ಕ್ರಮಿಸುವುದು ಕಷ್ಟದ ದಾರಿಯೇ. ಈ ಬಗೆಯ ಅತ್ಯಂತ ಗಂಭೀರ, ತೀವ್ರತರವಾದ ಕೇವಲ ಭಾವನೆಯ ವಿವಿಧ ನೆಲೆಗಳನ್ನು ಕುರಿತ ಚಿತ್ರವಾದರೂ ಎಲ್ಲಿಯೂ ವಿಷಾದವನ್ನು ನೇಯುವ, ದುರಂತ ಛಾಯೆಯುಳ್ಳ ಚಿತ್ರವಲ್ಲ. ಅಷ್ಟೇಕೆ ಅದರ ಎಳ್ಳಷ್ಟು ಸೋಂಕು ಕೂಡ ಕಾಣಲು ಸಿಗುವುದಿಲ್ಲ. ಬಹಳ ಕಾಲದ ನಂತರ ಭೇಟಿಯಾದ ತಂದೆ-ಮಗನ ತೀವ್ರ ಸ್ವರೂಪದ ಭಾವನಾತ್ಮಕ ಏರಿಳಿತಗಳಿಲ್ಲ. ಅವರಿಬ್ಬರ ಪರಸ್ಪರ ಸಂಬಂಧ ದಯನೀಯ ಹಂತಕ್ಕೆ ತಲುಪಿಸಲು ನಿರ್ದೇಶಕರಿಗೆ ಇಚ್ಛೆಯಿಲ್ಲ. ಅದು ಅವರ ಆಶಯ ಪ್ರಬುದ್ಧತೆಯ ನೆಲೆಯಲ್ಲಿ ಪರಿಗ್ರಹಿಸಲಾಗಿದೆ.. ಸಹಜತೆಗೆ ಮತ್ತು ವಾಸ್ತವತೆಗೆ ಅನುಗುಣವಾಗಿ ಪಾತ್ರಗಳ ಪರಿಕಲ್ಪನೆ ಮತ್ತು ನಿರೂಪಣೆಯನ್ನು ನಿರ್ವಹಿಸುವ ರೀತಿ ಇಟಲಿಯಲ್ಲಿಯೇ ಹುಟ್ಟಿದ ನವವಾಸ್ತವತೆಯ ಮಾರ್ಗಕ್ಕೆ ಹತ್ತಿರವಾದದ್ದು. ಆ ಮಾರ್ಗದ ಪ್ರಮುಖ ಲಕ್ಷಣಗಳಲ್ಲಿ ಒಂದಾದಂತೆ ಚಿತ್ರದ ಅತಿ ಮುಖ್ಯ ಪಾತ್ರಗಳಲ್ಲಿ ಒಂದಾದ ಪಾಲ್ ವಾಸ್ತವಿಕವಾಗಿ ವಿಕಲಾಂಗ.

ಹದಿನೈದು ವರ್ಷಗಳಿಂದ ದೂರವಿಟ್ಟು ಈಗ ಮಗನೆಂದು ಅವನನ್ನು ಜೊತೆಯಿದ್ದು ಬಾಳುವ ಮನಸ್ಸು ಮಾಡಿದ ನಂತರ ಅವರಿಬ್ಬರ ಭಾವನಾತ್ಮಕ ಸಂಬಂಧ ಬೆಳೆಯುವ ಬಗೆ ತೀರಾ ವೈಯಕ್ತಿಕವಾದದ್ದು ಎನ್ನುವುದು ಸರಿಯೆ. ಆದರೆ ಅದು ಅಷ್ಟಕ್ಕೇ ನಿಲ್ಲುವುದಿಲ್ಲ. ಒಂದಿಲ್ಲೊಂದು ಬಗೆಯಲ್ಲಿ ದೈಹಿಕವಾಗಿಯೂ ಮಾನಸಿಕವಾಗಿಯೂ ದುರ್ಬಲರಾದ ಜೀವಿಗಳೊಂದಿಗೆ ಜೀವಿಸಬೇಕಾದ ಜವಾಬ್ದಾರಿಯನ್ನು ನಿರ್ವಹಿಸುವ ಸಹಜೀವಿಗಳನ್ನಾಗಿಯೂ ಈ ಚಿತ್ರವನ್ನು ಪರಿಗಣಿಸಬಹುದು. ಹೀಗಾಗಿ ಇದು ವಿಶ್ವವ್ಯಾಪಿ ಸಮಸ್ಯೆಯನ್ನು ಕುರಿತದ್ದು. ವಿಕಲಾಂಗನನ್ನು ಜೊತೆಗಿರಿಸಿಕೊಂಡು ಬದುಕುತ್ತೇನೆ ಎನ್ನುವುದು ಒಂದು ಭಾಗವಾದರೆ ಹಾಗೆ ಪ್ರಯತ್ನಿಸುವವರ ಜೊತೆ ಜೀವಿಸಲು ಸಿದ್ಧವಾಗುವ ಇನ್ನೊಂದು ವ್ಯಕ್ತಿಯ ಭಾವನೆಗಳ ಪ್ರತಿಕ್ರಿಯೆ ಮತ್ತು ಸಹಯೋಗ ಮುಖ್ಯವಾಗುತ್ತದೆ. ಹೊಂದಾಣಿಕೆಯ, ಕಷ್ಟದ ಪದರುಗಳನ್ನು ಮೃದುವಾಗಿಸುವ, ಎದುರಾಗುವ ವಿಚಿತ್ರ ಸಂಕಷ್ಟಗಳನ್ನು ಸಹಿಸುವ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತನ್ನಿಂದ ಪ್ರಪಂಚಕ್ಕೆ ಕಾಲಿಟ್ಟ ಜೀವಿ ತನ್ನೊಂದಿಗಿದೆ ಎನ್ನುವ ಅರಿವು, ಪಡಬೇಕಾದ ಪರಿಶ್ರಮವನ್ನು ಸಾಕಷ್ಟು ಕಡಿಮೆ ಮಾಡುತ್ತದೆ.

ಇಂಥ ಪ್ರಯತ್ನ ಜರುಗುವ ಕ್ರಮದಲ್ಲಿ ತಂದೆಯದೇ ಹೆಚ್ಚು ಸಂಕಿರ್ಣ. ಕಾರಣ ತಂದೆಗೆ ಅಪರಾಧಿ ಪ್ರಜ್ಞೆ ಕಾಡುತ್ತಿರುತ್ತದೆ. ಹದಿನೈದು ವರ್ಷ ವಿಕಲಾಂಗನನ್ನು ಸಹಿಸಲಾರೆ ಎಂಬ ಕಾರಣದಿಂದ ದೂರ ಮಾಡಿ ನಿಶ್ಚಿಂತನಾಗಿ ಜೀವಿಸಿದ್ದ ಸಂಗತಿ ಅವನನ್ನು ಕಾಡುತ್ತದೆ. ತಂದೆಯ ಕರ್ತವ್ಯಗಳನ್ನು ನಿರ್ವಹಿಸುವುದಷ್ಟೇ ಅಲ್ಲ ಅದಕ್ಕಿಂತ ತಂದೆಯಾಗಿ ಪ್ರಾಮಾಣಿಕವಾಗಿ ಪರಿಭಾವಿಸುವುದು ಹೆಚ್ಚಾಗಿ ಸದ್ಯದ ಅಗತ್ಯ. ಇದರಿಂದಾಗಿಯೇ ವಿಕಲಾಂಗನ ಜೊತೆ ಆಡುವ ಮಾತುಗಳು ಕಡಿಮೆ ಇದ್ದರೂ ಅವುಗಳ ಭಾವಲಯದಲ್ಲಿ ವಿವರಣೆಗೆ ಮೀರಿದ ಅಂಶ ಇರಬೇಕಾಗುತ್ತದೆ. ಇದಕ್ಕೆ ಅತ್ಯಂತ ಸಹಜವಾಗಿ ಅಪಾರ್ಥಕ್ಕೆ ಅವಕಾಶವಿಲ್ಲದಂತೆ ಒಳಮಾಡಿಕೊಳ್ಳುವ ಮನಸ್ಥಿತಿ ವಿಕಲಾಂಗನಿಗೆ ಇರುವುದೂ ಅಷ್ಟೇ ಅವಶ್ಯ. ಸಾಕಷ್ಟು ಬೆಳೆದವನಾದರೂ ಭಾವಗಳನ್ನು ಗ್ರಹಿಸುವ ಶಕ್ತಿ ಕಡಿಮೆಯಾಗುವುದಿಲ್ಲ. ಜೊತೆಗೆ ತಂದೆಯಂತೆ ಅನಿವಾರ್ಯವಾಗಿ ಸಿಕ್ಕಿ ಹಾಕಿಕೊಳ್ಳುವ ಗೋಜಲುಗಳು ವಿಕಲಾಂಗರಿಗೆ ಕಡಿಮೆಯೇ. ಕಾಲ ಉರುಳಿದಂತೆ ಪರಸ್ಪರ ಭಾವನೆಗಳು ಹಿಂಜರಿಕೆಯಿಲ್ಲದೆ ಕ್ರಮಿಸುವ ಹಂತವನ್ನು ತಲುಪಿದಾಗ ಪಟ್ಟ ಪರಿಶ್ರಮ ನಿರ್ದಿಷ್ಟ ಹಂತವನ್ನು ಅಪೇಕ್ಷಿತ ರೀತಿಯಲ್ಲಿ ತಲುಪುತ್ತದೆ.

ನಿರ್ದೇಶಕ ಗಿಯಾನಿ ಅಮಿಲಿಯೊ ಚಿತ್ರದಲ್ಲಿ ತಂದೆ-ಮಗನ ಭಾವನೆಗಳು ತುಂಬಿದ ಮನೆಯ ಬಾಗಿಲನ್ನು ತೆರೆಯುವ ಬೀಗದ ಕೀಯನ್ನು ವಿಕಲಂಗನಿಗೆ ಕೊಟ್ಟಿದ್ದಾನೆ. ಅದನ್ನು ನೆರವೇರಿಸಬೇಕಾದ ಪಾಲ್ ತನಗೊದಗಿದ್ದ ಪರಿಸ್ಥಿತಿಯನ್ನು ಚೆನ್ನಾಗಿ ಬಲ್ಲವನು. ಆದರೆ ಅದೆಲ್ಲವನ್ನೂ ಮರೆತು ಹೊಸ ಬದುಕಿಗೆ, ಹೊಸ ಸಂಬಂಧಕ್ಕೆ ಸಿದ್ಧನಾಗಿರುವ ಪಾಲ್ ವಿಕಲಾಂಗನಾದರೂ ಅತ್ಯಂತ ಚಟುವಟಿಕೆಯ, ಸೂಕ್ಷ್ಮ ಮನಸ್ಸಿನ, ಬುದ್ಧಿವಂತ ಹುಡುಗ. ತನ್ನ ಮಗನಿಗೇ ಭಾವನಾತ್ಮಕ ನೆಲೆಯಲ್ಲಿ ತಂದೆಯಾಗಬೇಕಿರುವ ಗಿಯಾನಿ ಪ್ರಾರಂಭದ ಹಂತದಲ್ಲಿ ಹಾಗೆ ತೋರುವುದಿಲ್ಲ. ಅದಕ್ಕೆ ಅಗತ್ಯವಾಗಿ ಬೇಕಾದ ತಿಳಿ ಮನಸ್ಸಿನ, ಸುಲಲಿತ ಭಾವ ಪ್ರದರ್ಶನ ಕಾಣುವುದಿಲ್ಲ. ತಾನೊಂದು ಒತ್ತಡದ ಹಂತದಲ್ಲಿ ಇದ್ದೇನೆ ಎನ್ನುವುದನ್ನು ಅವನ ಕೊಂಚ ಬಿಗಿದ ಮುಖಮುದ್ರಗಳು ವ್ಯಕ್ತಪಡಿಸುತ್ತವೆ. ತನ್ನೊಂದಿಗೆ ತಂದೆ ಎನಿಸಿಕೊಂಡವನು ಹೇಗೆ ನಡೆದುಕೊಳ್ಳುತ್ತಿದ್ದಾನೆ ಎನ್ನುವುದನ್ನು ಸೂಕ್ಷ್ಮವಾಗಿ ಗ್ರಹಿಸುತ್ತವೆ ಪಾಲ್ ನ ಕನ್ನಡಕದಿಂದ ತೂರಿ ಬರುವ ತೀಕ್ಷ್ಣ ಕಣ್ಣುಗಳು. ಪಾಲ್ ಏನನ್ನು ತಿನ್ನಲು ಇಷ್ಟ ಪಡುತ್ತಾನೆ. ಸಮಯ ಕಳೆಯಲು ಮಾಡಿಕೊಂಡಿರುವ ಹವ್ಯಾಸಗಳೇನು, ಅವನಿಗೆ ಕಷ್ಟವೆನಿಸದ ಹಾಗೆ ನಡೆದುಕೊಳ್ಳುತ್ತಿದ್ದೇನೆಯೇ ಎಂದು ಮತ್ತೆ ಮತ್ತೆ ಪರೀಕ್ಷಿಸುಕೊಳ್ಳುತ್ತಾ ನಡೆದುಕೊಳ್ಳುವ ಗಿಯಾನಿ ತನ್ನ ಪ್ರಯತ್ನದಲ್ಲಿ ಸಾಕಷ್ಟು ಯಶಸ್ವಿಯಾಗುತ್ತಾನೆ. ಹೀಗೆ ಮಾಡುತ್ತಿರುವಾಗಲೇ ಪಾಲ್ ತನ್ನೆಲ್ಲ ಇಂದ್ರಿಯಗಳು ಚುರುಕು ಎನ್ನುವುದನ್ನು ಗಿಯಾನಿಗೆ ಮನದಟ್ಟು ಮಾಡುತ್ತಿರುತ್ತಾನೆ. ಹೀಗೆ ಮಾಡುವಾಗೆಲ್ಲ ನಿರೂಪಣೆಯಲ್ಲಿ ಪಾಲ್ ಬಗ್ಗೆಯೇ ಗಮನ ಹೆಚ್ಚು. ಅವನೇ ತಂದೆ ಗಿಯಾನಿಗೆ ಮಾರ್ಗಗಳನ್ನು ಸೂಚಿಸುತ್ತಿದ್ದಾನೆ ಎನಿಸುತ್ತದೆ.

ಈ ಬಗೆಯ ಅತ್ಯಂತ ಗಂಭೀರ, ತೀವ್ರತರವಾದ ಕೇವಲ ಭಾವನೆಯ ವಿವಿಧ ನೆಲೆಗಳನ್ನು ಕುರಿತ ಚಿತ್ರವಾದರೂ ಎಲ್ಲಿಯೂ ವಿಷಾದವನ್ನು ನೇಯುವ, ದುರಂತ ಛಾಯೆಯುಳ್ಳ ಚಿತ್ರವಲ್ಲ. ಅಷ್ಟೇಕೆ ಅದರ ಎಳ್ಳಷ್ಟು ಸೋಂಕು ಕೂಡ ಕಾಣಲು ಸಿಗುವುದಿಲ್ಲ.

ಪಾಲ್ ಮತ್ತು ಗಿಯಾನಿಯರ ಪಯಣ ಮುಂದುವರೆಯುತ್ತಿದ್ದ ಹಾಗೆ ನಡೆಯಲು ಸಾಧ್ಯವಾಗುವಂತೆ ಊರುಗೋಲನ್ನು ಹಿಡಿದುಕೊಳ್ಳುವ ಪಾಲ್‌ ನ ಚಲನೆ ಅಡ್ಡಾದಿಡ್ಡಿ ಎನಿಸಿದರೆ, ಅವನ ಗ್ರಹಿಕೆಗಳು ಆಲೋಚನೆಗಳು ನೇರ ಹಾಗೂ ಪ್ರಬುದ್ಧತೆಯ ಹಂತ ತಲುಪಿರುವುದು ವ್ಯಕ್ತವಾಗುತ್ತದೆ. ಅವರ ಸಂಚಾರ ಮಾರ್ಗದಲ್ಲಿ ಆಗೀಗ ನಮಗೆ ಅವರ ಸುತ್ತಮುತ್ತಲಿನ ಚಟುವಟಿಕೆಯ ಚಿತ್ರಿಕೆಗಳಿವೆ: ಓಡಾಡುವ ಜನರು, ವೀಲ್ ಚೇರಿನಲ್ಲಿ ಕುಳಿತು ಬ್ಯಾಸ್ಕೆಟ್ಬಾಲ್ ಆಡುವವರು, ವಿಕಲಾಂಗ ಹುಡುಗರು ಮುಂತಾದವು. ಇವುಗಳಿಗಿಂತ ಭಿನ್ನವಾಗಿ ದೈಹಿಕ ಚಟುವಟಿಕೆ ಇಲ್ಲದೆ ಕೇವಲ ಭಾವನಾತ್ಮಕವಾಗಿ ಒಬ್ಬರನ್ನೊಬ್ಬರು ಗ್ರಹಿಸುವ, ಪ್ರತಿಕ್ರಿಯಿಸುವ ಅನಿವಾರ್ಯತೆ ಪಾಲ್ ಮತ್ತು ಗಿಯಾನಿಗೆ. ಇಷ್ಟೆಲ್ಲಾ ಸಣ್ಣ ಸಣ್ಣ ಸನ್ನಿವೇಶಗಳ ನಡುವೆಯೂ ಸಾಕಷ್ಟು ಕಾಲ ಅವರಿಬ್ಬರು ಸನಿಹದಲ್ಲಿರುತ್ತಾರೆ. ಆದರೆ ಪರಸ್ಪರ ದೈಹಿಕ ಸ್ಪರ್ಶದ ರೀತಿಯಲ್ಲಿ ಪ್ರೀತಿ ಅಥವಾ ಒಲುಮೆಯನ್ನು ಪ್ರಕಟಿಸುವುದು ಕಾಣುವುದಿಲ್ಲ.

ಅವರ ಪ್ರಯಾಣದಲ್ಲಿ ಗಿಯಾನಿಗೆ ನಿಕೋಲೆ ಎಂಬ ಮಧ್ಯ ವಯಸ್ಸಿನ ಮಹಿಳೆಯ ಪರಿಚಯವಾಗುತ್ತದೆ. ಆಕೆ ವಿಕಲಾಂಗ ಮಗಳ ಜೊತೆ ಇಪ್ಪತ್ತು ವರ್ಷಗಳ ಕಾಲ ಕಳೆದ ವ್ಯಕ್ತಿ. ಅಷ್ಟು ದೀರ್ಘ ಕಾಲ ಸ್ಪಷ್ಟ ಮಾತು ಹೊರಡದ ವಿಕಲಾಂಗಿಯನ್ನು ತಾಯಿಯಾಗಿ ಸಲಹುತ್ತಿರುವ ಅವಳದು ವಿವರಣೆಗೆ ಮೀರಿದ ಅನುಭವ. ಅವಳಿಗೆ ತಾನು ಜೀವಿಸಿರುವುದು ಅನಿವಾರ್ಯವಾಗಿದೆ. ಮಗಳಿಗೆ ಸಕಲ ವಿಧದಲ್ಲಿಯೂ ತಾಯಿ ಆಗಿರಬೇಕಾದ ಅಗತ್ಯ. ಇಂಥ ಅನುಭವಕ್ಕೆ, ಸ್ಪಷ್ಟತೆಗೆ ದೂರವಾದ ಗಿಯಾನಿಗೆ ಆಕೆ ತನಗಿಂತ ಭಿನ್ನವಾಗಿ ನಿಗೂಢ ವ್ಯಕ್ತಿಯಂತೆ ಕಾಣಿಸುತ್ತಾಳೆ. ತನ್ನಂತೆ ಒಂದಿಷ್ಟೂ ಆಂತರಿಕ ಹೋರಾಟವಿಲ್ಲದೆ ತಾಯಿಯಾಗಿರುವ ಆಕೆಯ ಅನುಭವದ ವಿಸ್ತಾರ ಮುಖದಲ್ಲಿ ತೋರುವುದೇ ಇಲ್ಲ. ಕೇವಲ ಗಂಭೀರ ವ್ಯಕ್ತಿಯ ಹಾಗೆ ಕಾಣಿಸುತ್ತಾಳೆ. ಗಿಯಾನಿಗೆ ಅದರ ಕಷ್ಟ ಸಾಧ್ಯತೆಯನ್ನು ಒಂದೇ ಮಾತಿನಲ್ಲಿ ತಿಳಿಸುತ್ತಾಳೆ. ಅವಳು ಸತ್ತು ಹೋಗಬಾರದೇಕೆ ಎನ್ನುತ್ತಾಳೆ. ಕೊಂಚವೂ ಮುಖದ ಸ್ನಾಯುಗಳು ಚಲಿಸದ ಅವಳ ಮುಖ ಚಹರೆ ಹಾಗೆ ಹೇಳುವುದು ಕೇಳಿ ನಮಗೆ ಒಳಗೆಲ್ಲೋ ಅಲ್ಲಾಡಿದಂತಾಗುತ್ತದೆ.

ಪಾಲ್ ಎಲೆಕ್ಟ್ರಾನಿಕ್ ಉಪಕರಣದಿಂದ ಸಂಗೀತವನ್ನು ಕೇಳುವ ಅಭ್ಯಾಸ ಮಾಡಿಕೊಂಡಿರುತ್ತಾನೆ. ಒಂದೆರಡು ಬಾರಿ ಗಿಯಾನಿಯನ್ನು ರೇಗಿಸುವಂತೆ ಧ್ವನಿ ಪ್ರಮಾಣವನ್ನು‌ ಹೆಚ್ಚಿಸುತ್ತಾನೆ. ಧ್ವನಿ ಕಡಿಮೆ ಮಾಡು ಎಂದರೂ ಕೇಳದೆ ಇನ್ನಷ್ಟು ಹೆಚ್ಚಿಗೆ ಮಾಡುತ್ತಾನೆ. ಇದರಿಂದ ಗಿಯಾನಿಗೆ ಕೋಪ, ರೋಷಗಳು ಉಂಟಾಗುತ್ತವೆ. ಆದರೆ ಪಾಲ್ ಗೆ ಅವನ ನಡವಳಿಕೆ ಕಂಡು ನಗು ಬರುತ್ತದೆ.

ಹಾಗೊಂದು ಸಲ ಮಾತನಾಡುತ್ತಾ ಪಾಲ್ ತನಗೆ ಗರ್ಲ್ ಫ್ರೆಂಡ್ ಇರುವುದನ್ನು ಹೇಳಿ ಗಿಯಾನಿಗೆ ಅವಳ ಚಿತ್ರ ತೋರಿಸುತ್ತಾನೆ. ಅವಳು ನಾರ್ವೆಯಲ್ಲಿರುವ ಹುಡುಗಿ. ಆಗಾಗ ಮೂರ್ಛೆ ರೋಗಕ್ಕೆ ತುತ್ತಾಗುವವಳು. ಪಾಲ್ ಮತ್ತು ಅವಳು ಪರಸ್ಪರ ಭೇಟಿಯಾಗುವ ಸಂದರ್ಭ ಉಂಟಾಗಲು ಸಾಧ್ಯವಿರುವುದಿಲ್ಲ. ಅವರಿಬ್ಬರ ಸಂಪರ್ಕವೆಲ್ಲ ಪತ್ರರೂಪದಲ್ಲಿ. ಇದನ್ನು ಕೇಳಿದ ಗಿಯಾನಿಯಷ್ಟೇ ನಾವೂ ಬೆರಗಾಗುತ್ತೇವೆ. ಪಾಲ್‌ನ ಮಾತಿಗೆ ಹೇಗೆ ಪ್ರತಿಕ್ರಿಯೆ ವ್ಯಕ್ತಪಡಿಸಬೇಕು ಎಂದು ತಿಳಿಯದ ಗಿಯಾನೆಯ ಮುಖವನ್ನು ರೆಪ್ಪೆ ಬಡಿಯದೆ ನೋಡುತ್ತಾನೆ ಪಾಲ್.

ಇಂಥವುಗಳ ಹಿನ್ನೆಲೆಯಲ್ಲಿ ಮುಂದುವರೆದು ಗಿಯಾನಿ ಪಾಲ್‌ನನ್ನು ಬರ್ಲಿನ್‌ನ ಆಸ್ಪತ್ರೆಗೆ ಉನ್ನತಮಟ್ಟದ ಶುಶ್ರೂಷೆಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಅವನಂತೆಯೇ ಅನೇಕ ವಿಕಲಾಂಗ ಮಕ್ಕಳು: ದೊಡ್ಡವರು ಚಿಕ್ಕವರು. ಅವನನ್ನು ನೋಡಿಕೊಳ್ಳುವ ಡಾಕ್ಟರು ಪಾಲ್‌ ಗೆ ಊರುಗೋಲನ್ನು ಹಿಡಿದು ತ್ವರಿತವಾಗಿ ಓಡಾಡುವ ಅಭ್ಯಾಸವನ್ನು ಮಾಡಿಸಲು ಶುರುಮಾಡುತ್ತಾರೆ. ಪಾಲ್ ಸೂಚನೆಗಳಿಗೆ ತಕ್ಕಂತೆ ನಡೆಯುತ್ತಿದ್ದರೂ ಗಿಯಾನಿಗೆ ಅವನು ತುಂಬ ಶ್ರಮ ಪಡುತ್ತಿದ್ದಾನೆ ಎನಿಸುತ್ತದೆ. ಹಾಗೆಂದೇ ಉದ್ವೇಗಗೊಂಡು ಡಾಕ್ಟರು ಅದನ್ನು ಮುಂದುವರಿಸುವುದನ್ನು ತಡೆಯುತ್ತಾನೆ. ಇದರಿಂದ ಅವನು ತಂದೆಯಾಗುವ ಪ್ರಕ್ರಿಯೆಯಲ್ಲಿ ಸಾಕಷ್ಟು ಮುಂದೆ ಬಂದಿದ್ದಾನೆ ಎನ್ನುವುದರ ಸೂಚನೆಯನ್ನು ನೀಡುತ್ತಾನೆ ನಿರ್ದೇಶಕ ಗಿಯಾನಿ ಅಮೆಲಿಯೊ.

ಇದಾದ ನಂತರವೇ ಗಿಯಾನಿ ನಾರ್ವೆಯ ಕಡೆಗೆ ಪ್ರಯಾಣ ಬೆಳೆಸಲು ಬಯಸುತ್ತಾನೆ. ಕಾರಣ ಸ್ಪಷ್ಟ. ಪಾಲ್‌ ಗೆ ಅವನ ಗರ್ಲ್ ಫ್ರೆಂಡ್ ಭೇಟಿಮಾಡಿಸುವ ಉದ್ದೇಶವಿರುತ್ತದೆ. ಮಾರ್ಗದಲ್ಲಿ ಅಲ್ಲೊಂದು ಕಡೆ ಹಿನ್ನೀರಿನ ಮೇಲೆ ಚಾಚಿದ ಮರದ ನಿರ್ಮಾಣದ ಮೇಲೆ ಪಾಲ್ ಊರುಗೋಲನ್ನು ಹಿಡಿದು ನಡೆಯುತ್ತ ಹೋಗಿ ಅದರಂಚಿಗೆ ನಿಲ್ಲುತ್ತಾನೆ. ಎದುರಿಗೆ ಅಷ್ಟಗಲಕ್ಕೂ ಹರಡಿದ ನೀರು. ದೂರದಲ್ಲೆಲ್ಲೋ ನೀಲಿ ಆಕಾಶ. ಸಮಾಜವನ್ನು ಬಿಂಬಿಸುವಂತೆ ಸುತ್ತಲಿದ್ದ ಮೂರ್ನಾಲ್ಕು ಜನರು. ಇವೆಲ್ಲದರ ಹಿನ್ನೆಲೆಯಲ್ಲಿ ಗಿಯಾನಿ ಪಾಲ್ ಉಪಯೋಸುವ ಊರುಗೋಲನ್ನು ನೀರಿಗೆ ಎಸೆದು ಬರಸೆಳೆದು ಅಪ್ಪಿಕೊಳ್ಳುತ್ತಾನೆ. ಇದು ಗಿಯಾನಿ ತಂದೆಯಾಗಿ ಸಂಪೂರ್ಣ ಜವಾಬ್ದಾರಿಯನ್ನು ಸ್ವೀಕರಿಸಲು ಸಿದ್ಧ ಎನ್ನುವುದನ್ನು ಸೂಚಿಸುತ್ತದೆ. ಅನಂತರ ಅಲ್ಲಿಂದ ಹೊರಟ ಅವರಿಗೆ ಮಾತನಾಡಲು ಏನೂ ಉಳಿದಿರುವುದಿಲ್ಲ. ಮಾತನಾಡುವ ಬದಲು ಭಾವನೆಗಳು ಉಕ್ಕೇರಿದ ಗಿಯಾನಿ ಅಳುತ್ತಾನೆ, ತನ್ನಿಂದ ತಾನು ವಿಶಿಷ್ಟ ಬಗೆಯಲ್ಲಿ ಬಿಡುಗಡೆ ಹೊಂದಿದವನ ರೀತಿಯಲ್ಲಿ.

ಇಡೀ ಚಿತ್ರದಲ್ಲಿ ಪಾಲ್‌(ಆಂಡ್ರಿಯ ರೋಸಿ)ನ ಅಭಿನಯ ಮನಮೆಚ್ಚುವಂತಿದೆ. ಹಾಗೆಯೇ ಗಿಯಾನಿ(ಕಿಮ್‌ ರೋಸಿ ಸ್ಟುವಾರ್ಟ್)ಯದು ಕೂಡ. ವಿಕಲಾಂಗಳ ತಾಯಿಯಾಗಿ ನಿಕೋಲೆ(ಚಾರ್ಲೊಟ್ಟೆ ರಾಂಪಿಗ್‌)ಯ ಅಭಿನಯ ಅಲ್ಪಅವಧಿಯದ್ದಾದರೂ ಸಾಕಷ್ಟು ಪ್ರಭಾವಪೂರ್ಣ. ಚಿತ್ರಕ್ಕೆ ಅತ್ಯಂತ ಮಹತ್ವವಾದ ಕೊಡುಗೆ ಛಾಯಾಗ್ರಾಹಕ (ಲೂಸಾ ಬಿಗಾಜಿ)ರದು. ಸಂಕೀರ್ಣವಾದ ಚಿತ್ರಕ್ಕೆ ನಿರ್ದೇಶಕರ ಜೊತೆ ಸ್ಯಾಂಡ್ರೊ ಪೆಟ್ರಾಗ್ಲಿಯಾ ಅಚ್ಕಕಟ್ಟಾದ ಚಿತ್ರಕಥೆ ರಚಿಸಿದ್ದಾರೆ ಎನ್ನುವುದು ಗಮನಿಸಬೇಕಾದ ಅಂಶ. ಚಲನಚಿತ್ರದ ಎಲ್ಲ ಪರಿಕರಗಳನ್ನು ಉಪಯೋಗಿಸಿಕೊಂಡು ಉನ್ನತಮಟ್ಟದ ಚಿತ್ರವನ್ನು ಪ್ರಸ್ತುತಪಡಿಸಿದ ನಿರ್ದೇಶಕ ಗಿಯಾನಿ ಮಿಲೋಗೆ ದೊರೆತ ಪ್ರಶಸ್ತಿ ಯುಕ್ತವೆನ್ನುವುದರಲ್ಲಿ ಸಂದೇಹವಿಲ್ಲ.