ಅವಳನ್ನು ಬಹುವಾಗಿ ಪ್ರೀತಿಸುವ ಗಂಡ ಲಿಯೊನಾರ್ಡ್‌ಗೆ ಯಾವಾಗಲೂ ಆತಂಕದ ಗಳಿಗೆಗಳೇ ಹೆಚ್ಚು. ಅವಳ ಬಗ್ಗೆ ಅವನದು ಇನ್ನಿಲ್ಲದಷ್ಟು ಕಾಳಜಿ. ಸಾಧ್ಯವಾದಷ್ಟೂ ಅವಳ ವರ್ತನೆಗಳನ್ನು ಅವಲೋಕಿಸಿ ಅವಳ ಅಂತರಂಗವನ್ನು, ಮಾನಸಿಕ ತುಮುಲವನ್ನು ತಕ್ಕಷ್ಟು ಮಟ್ಟಿಗೆ ಸರಿಯಾಗಿ ಊಹಿಸುವುದೇ ಅವನ ಮುಖ್ಯ ಕರ್ತವ್ಯಗಳಲ್ಲೊಂದು. ಅವಳ ಮನಸ್ಸಿನಲ್ಲಾಗುವ ಏರು ಪೇರುಗಳಿಗೆ ತನ್ನ ಕೈಲಾದಷ್ಟು ಸಮಾಧಾನ ತರಲು ಪ್ರಯತ್ನಿಸುವುದು ತನ್ನ ಜವಾಬ್ದಾರಿ ಎಂದು ಭಾವಿಸಿದ ವ್ಯಕ್ತಿ. ಆದರೆ ವರ್ಜಿನಿಯಾ ವೂಲ್ಫ್ ಗೆ ಅವನ ಪ್ರೀತಿಯನ್ನು ಸರಿಯಾಗಿ ಸ್ವೀಕರಿಸುವ ಮನಸ್ಥಿತಿಯ ಅಭಾವ.
ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಟಾಕೀಸ್‌ʼನಲ್ಲಿ ಇಂಗ್ಲೆಂಡ್‌ ನ ʻದ ಅವರ್ಸ್ʼ ಸಿನಿಮಾದ ವಿಶ್ಲೇಷಣೆ

 

ಅವಳು ಇಂಗ್ಲೆಂಡಿನ ಇಪ್ಪತ್ತನೇ ಶತಮಾನದ ಮೊದಲ ಭಾಗದಲ್ಲಿನ ಖ್ಯಾತ ಬರಹಗಾರ್ತಿ ವರ್ಜೀನಿಯಾ ವೂಲ್ಫ್. ಅವಳ ವಾಸ ಲಂಡನ್ನಿನ ಸಮೀಪದಲ್ಲಿ. ತನ್ನ ಸೃಜನಾತ್ಮಕ ಬರವಣಿಗೆಯಿಂದ ಪ್ರಪಂಚದೆಲ್ಲೆಡೆ ಹಬ್ಬುವಂಥ ಕೆಲಸ ಮಾಡಿ 1941ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಮರ್ಥ ಲೇಖಕಿ. ಅವಳು 1925ರಲ್ಲಿ ಬರೆದ ʻಮಿಸೆಸ್‌ ಡಾಲೋವೆʼ ಕಾದಂಬರಿಯ ವೃತ್ತಾಂತಗಳು ಬಹುಪಾಲು ಅತ್ಮ ವೃತ್ತಾಂತದಂತಿದೆ ಎನ್ನುವುದು ಸಾಮಾನ್ಯವಾದ ಅಭಿಪ್ರಾಯ. ವರ್ಜಿನಿಯಾ ವೂಲ್ಫ್ ಪ್ರತಿಭಾವಂತೆಯಾದರೂ ಅವಳ ಜೀವನದ ಬಹುಭಾಗವನ್ನು ಆಕ್ರಮಿಸಿದ್ದು ಖಿನ್ನತೆ, ವಿಷಾದ, ಭಾವನೆಗಳ ಉಬ್ಬರ ಮತ್ತು ಅವುಗಳೊಂದಿಗಿನ ಹೋರಾಟ. ಹೋರಾಟವೆಂದರೆ ಅಷ್ಟಿಷ್ಟಲ್ಲ. ಸುಲಭವಾಗಿ ಬಿಡಿಸಿಕೊಳ್ಳಲು ಆಗದಂಥವನ್ನು, ಅವಡುಗಚ್ಚಿ ತನ್ನೆಲ್ಲ ಶಕ್ತಿಗಳನ್ನು ಒಗ್ಗೂಡಿಸಿ ಅದರೊಡನೆ ಕಾದಾಡುತ್ತ ಮಾನಸಿಕ ಸ್ಥಿಮಿತವನ್ನು ಕೂಡ ಕಳೆದುಕೊಂಡಂತೆ ಕಾಣುವಂಥಾದ್ದು.

(ಸ್ಟೀಫನ್ ಡಾಲ್ಡ್ರಿ)

ಅವಳನ್ನು ಬಹುವಾಗಿ ಪ್ರೀತಿಸುವ ಗಂಡ ಲಿಯೊನಾರ್ಡ್‌ಗೆ ಯಾವಾಗಲೂ ಆತಂಕದ ಗಳಿಗೆಗಳೇ ಹೆಚ್ಚು. ಅವಳ ಬಗ್ಗೆ ಅವನದು ಇನ್ನಿಲ್ಲದಷ್ಟು ಕಾಳಜಿ. ಸಾಧ್ಯವಾದಷ್ಟೂ ಅವಳ ವರ್ತನೆಗಳನ್ನು ಅವಲೋಕಿಸಿ ಅವಳ ಅಂತರಂಗವನ್ನು, ಮಾನಸಿಕ ತುಮುಲವನ್ನು ತಕ್ಕಷ್ಟು ಮಟ್ಟಿಗೆ ಸರಿಯಾಗಿ ಊಹಿಸುವುದೇ ಅವನ ಮುಖ್ಯ ಕರ್ತವ್ಯಗಳಲ್ಲೊಂದು. ಅವಳ ಮನಸ್ಸಿನಲ್ಲಾಗುವ ಏರು ಪೇರುಗಳಿಗೆ ತನ್ನ ಕೈಲಾದಷ್ಟು ಸಮಾಧಾನ ತರಲು ಪ್ರಯತ್ನಿಸುವುದು ತನ್ನ ಜವಾಬ್ದಾರಿ ಎಂದು ಭಾವಿಸಿದ ವ್ಯಕ್ತಿ. ಆದರೆ ವರ್ಜಿನಿಯಾ ವೂಲ್ಫ್ ಗೆ ಅವನ ಪ್ರೀತಿಯನ್ನು ಸರಿಯಾಗಿ ಸ್ವೀಕರಿಸುವ ಮನಸ್ಥಿತಿಯ ಅಭಾವ. ಅವಳು ಹೋರಾಡುತ್ತಿದ್ದದ್ದು ಅವನ ಬಗ್ಗೆ ಅಲ್ಲ; ತನ್ನೊಂದಿಗಷ್ಟೆ. ಜೊತೆಗೆ ಎಲ್ಲರನ್ನೂ ದೂರ ಮಾಡಿದಾಕೆ. ಅವಳು ಓಡಾಡುತ್ತಿದ್ದದ್ದು ತನ್ನೊಂದಿಗೆ ಮಾತ್ರ. ಇಡೀ ವಿಶ್ವವೇ ತನ್ನ ಮನಸ್ಸಿನಲ್ಲಿ, ಮೈಯಲ್ಲಿ ಆವರಿಸಿ ಅದೆಲ್ಲವನ್ನೂ ಗುಟುಕರಿಸಿ ಸಮಾಧಾನದಿಂದ ಅಲ್ಪ ಸ್ವಲ್ಪ ನೆಮ್ಮದಿಯನ್ನು ಪಡೆಯುವ ಶಕ್ತಿಯ ಮೂಲ ಅವಳಲ್ಲಿ ನಾಪತ್ತೆ. ಅವಳದು ತಾನು ಯಾವ ಸಮಯದಲ್ಲಿ ಹೇಗೆ ವರ್ತಿಸುತ್ತೇನೆ ಎನ್ನುವುದೇ ತಿಳಿಯದಂತಹ ಮಾನಸಿಕ ಚೌಕಟ್ಟು.

ವರ್ಜಿನಾ ವೂಲ್ಫ್‌ಳ ಬರಹಗಳನ್ನು ಮುದ್ರಿಸಿ ಪ್ರಕಟಿಸುವ ಜವಾಬ್ದಾರಿಯು ಡಾನ್‌ನದು. ತಾನು ಮಾಡಬೇಕಾದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಅವನಿಗೆ ಅವಳ ವರ್ತನೆ ಮತ್ತು ಆಲೋಚನೆಗಳನ್ನು ಅರಿಯುವುದೇ ಮಹಾ ಕಷ್ಟ. ಎಲ್ಲೋ ನೋಡುವಂತೆ, ಎಲ್ಲಿಯೂ ನೋಡದೆ ದೃಷ್ಟಿ ಹರಿಸುವ ಅವಳ ಬಗ್ಗೆ ಅವನಿಗೆ ಇನ್ನಿಲ್ಲದಂತಹ ಭಯ. ಅನಿರೀಕ್ಷಿತಗಳಿಗೆ ಎದುರಾಗುವ ಸಾಮರ್ಥ್ಯವಿಲ್ಲವೆಂಬ ಭಾವನೆ ಕೂಡ.

ಆ ದಿನ ಅವಳು ಗಂಡ ಲಿಯೊನಾರ್ಡ್ ಮತ್ತು ಮಕ್ಕಳನ್ನು ಬಿಟ್ಟು ಮನೆಯಿಂದ ಹೊರಟು ಉದ್ದಾನುದ್ದ ಚಿಕ್ಕ ರಸ್ತೆಯಲ್ಲಿ ನಡೆದು ಒಬ್ಬಳೇ ಹೊರಟುಬಿಡುತ್ತಾಳೆ. ಸ್ವಲ್ಪ ಸಮಯದ ನಂತರ ಮನೆಗೆ ಬಂದ ಅವನಿಗೆ ವರ್ಜಿನಿಯಾ ಇಲ್ಲದಿರುವುದು ಗೊತ್ತಾಗಿ ಓಡೋಡುತ್ತ ಎಲ್ಲಿರಬಹುದೆಂದು ಹುಡುಕುತ್ತಾನೆ. ಅವಳು ಕೊನೆಗೂ ಸಿಕ್ಕುತ್ತಾಳೆ, ಲಂಡನ್ನಿನ ರೈಲ್ವೆ ಸ್ಟೇಷನ್ನಿನಲ್ಲಿ. ಅವನಿಗೆ ಅವಳು ಸಿಕ್ಕಳೆಂಬ ಎಂಬ ಸಂತೋಷದ ಜೊತೆಗೆ ಅವಳ ಒಳಮನಸ್ಸಿನ ಪರಿಯನ್ನು ಕಂಡು ಗಾಬರಿ ಮತ್ತು ರೋಷ. ಅವನಿಗೆ ಅಚ್ಚರಿಯಾಗುವಂತೆ ಆಗಲೂ ಅವಳು ಅವನ ಮಾತನ್ನು ಕೇಳುವುದಿಲ್ಲ. ಅವಳು ಹೇಳುವುದಿಷ್ಟೆ: ತಾನು ಅವನನ್ನು ಬಿಟ್ಟು ಹೋಗಬೇಕು. ಅದರರ್ಥ ಅವನ ಪ್ರೀತಿಯನ್ನು ಅತ್ತ ತಳ್ಳಿ ಹೋಗಬೇಕು ಎಂಬ ಉದ್ದೇಶ ಖಂಡಿತವಾಗಿಯೂ ಅಲ್ಲ. ಅವಳಿಗೆ ಪ್ರೀತಿಯ ಬಂಧನದಿಂದ ಬಿಡುಗಡೆ ಹೊಂದಿ ಸ್ವತಂತ್ರಳಾಗುವ ಅತೀವವಾದ ಹಂಬಲ. ಯಾವಾಗಲೂ ಅದನ್ನು ಪಡೆಯುವ ಪ್ರಯತ್ನದಲ್ಲಿಯೇ ಇರುತ್ತಾಳೆ. ಹಾಗಾಗಿ ಅವರದು ಸಾಮಾನ್ಯವಾಗಿ ಎಲ್ಲ ಬಗೆಯ ಹೋರಾಟವೂ ಕೂಡ ಸೋಲುವ ಹೋರಾಟವೇ. ಆದರೂ ಅದೆಂಥಾ ಸೋಲು! ಮುಖದಲ್ಲಿದ್ದ ಸ್ನಾಯುಗಳೆಲ್ಲವೂ, ಕಣ್ಣಿನ ಕಣಗಳೆಲ್ಲವೂ ಒಂದಕ್ಕೊಂದು ಬೆರೆತು ಬಿಗಿತಗೊಂಡು, ಎಲ್ಲೋ ನೋಟವಿಟ್ಟು ನಿಲ್ಲುವ ಅವಳು ಈ ಲೋಕಕ್ಕೆ ಸಂಬಂಧಿಸಿದಂತೆ ಕಾಣುವುದಿಲ್ಲ.

1998 ರ ಪುಲಿಟ್ಸರ್ ಪ್ರಶಸ್ತಿ ವಿಜೇತ ಮೈಕೇಲ್ ಕನ್ನಿಂಗ್ ಹ್ಯಾಮ್ ರಚಿಸಿದ ʻದ ಅವರ್ಸ್‌ʼ ಕಾದಂಬರಿಯನ್ನು ಆಧರಿಸಿ ಸ್ಟೀಫನ್ ಡಾಲ್ಡ್ರಿ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ವರ್ಜಿನಿಯಾ ವೂಲ್ಫ್ (ನಿಕೋಲೆ ಕಿಡ್‌ಮನ್) ಒಂದು ಪ್ರಮುಖ ಪಾತ್ರವಾದರೆ ಇನ್ನೆರಡು ಅದಕ್ಕೆ ಸರಿದೂಗುವಂತಹ, ತಕ್ಕಷ್ಟು ಭಾವನಾ ಪದರುಗಳುಳ್ಳ ಪಾತ್ರಗಳಿವೆ. 1950ರ ದಶಕದ ಲಾರಾ ಬ್ರೌನ್(ಜುಲಿಯನ್‌ ಮೂರ್‌) ಮತ್ತು ಮೂರನೆಯದಾಗಿ ಸಮಕಾಲೀನ ದಶಕದಲ್ಲಿ ಕ್ಲಾರಿಸಾ ವಾನ್(ಮೆರಿಲ್‌ ಸ್ಟ್ರೀಪ್‌) ಎಂಬ ಮಹಿಳೆ. ವರ್ಜೀನಿಯಾ ವೂಲ್ಫ್ ಗೆ ಇರುವ ಮಾನಸಿಕ ಅತಿರೇಕಗಳ ಪದರುಗಳನ್ನು ಹೋಲುವ ವ್ಯಕ್ತಿತ್ವ ಈ ಇಬ್ಬರು ಮಹಿಳೆಯರದು. ʻದ ಅವರ್ಸ್ʼ ಚಿತ್ರದ ಈ ಮೂರೂ ಮಹಿಳೆಯರು ಪ್ರಾರಂಭದಲ್ಲಿ ಬ್ರೇಕ್‌ ಫಾಸ್ಟ್‌ ಸಿದ್ಧಗೊಳಿಸುವ ಕೆಲಸದಲ್ಲಿ ತೊಡಗುವುದು ಮತ್ತು ಅದಕ್ಕೆ ಬೇಕಾದ ಸಲಕರಣೆಗಳನ್ನು ಒದಗಿಸುವುದು.

ಆ ದಿನ ಕ್ಲಾರಿಸಾ ವಾನ್ ಹೆಚ್ಚಿನ ಪ್ರಮಾಣದ ಹೂಗಳನ್ನು ಖರೀದಿ ಮಾಡುತ್ತಾಳೆ. ಅದಕ್ಕೆ ಅವಳ ಅಭಿಮಾನಿ ಮತ್ತು ಹಿಂದೊಮ್ಮೆ ಮದುವೆಯಾಗಿದ್ದ ಸಾಹಿತಿ ರಿಚರ್ಡ್‌ ಗೆ ಸಾಹಿತ್ಯಕ್ಕಾಗಿ ಪ್ರಶಸ್ತಿ ಲಭಿಸಿರುತ್ತದೆ. ಲಾರಾ ಬ್ರೌನ್ ಗೆ ತಾನು ಸ್ವತಂತ್ರಳಾಗಿರಬೇಕೆಂಬ ತೀವ್ರವಾದ ಅಪೇಕ್ಷೆ. ಅವಳಿಗೆ ಪ್ರೀತಿಸುವ ಗಂಡ ಡಾನ್ ಮತ್ತು ನಾಲೈದು ವರ್ಷದ‌ ಮಗ ರಿಚರ್ಡ್ ಇರುತ್ತಾರೆ. ಡಾನ್‌ನ ಪ್ರೀತಿ ಮತ್ತು‌ ರಿಚರ್ಡ್ ಮೇಲಿನ ಮಮತೆಗಳಿಂದ ದೂರವಾಗಿ ತನ್ನದೇ ಪ್ರಪಂಚವನ್ನು ಪ್ರತ್ಯೇಕವಾಗಿ ಕಟ್ಟಿಕೊಳ್ಳಬೇಕೆಂಬ ತೀವ್ರವಾದ ಹಂಬಲ ಅವಳಿಗೆ. ಇದು ಎಟುಕದಿದ್ದರೆ ಸಾವನ್ನು ಆಹ್ವಾನಿಸುವ ಛಲ ಆಕೆಯದು. ಅವಳು ಎಲ್ಲರನ್ನೂ ತ್ಯಜಿಸಿ ಹೋಗುವ ಮುನ್ನ ಆತ್ಮಹತ್ಯೆಗೂ ಪ್ರಯತ್ನಿಸುತ್ತಾಳೆ. ಹೋಟೆಲ್‌ ಒಂದರಲ್ಲಿ ಒಬ್ಬಳೇ ಕುಳಿತು ಮೂರ್ನಾಲ್ಕು ಬಾಟಲುಗಳಲ್ಲಿ ಗುಳಿಗೆಗಳನ್ನು ಇಟ್ಟುಕೊಂಡು ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಾಳೆ. ಆದರೆ ಸ್ವತಂತ್ರಳಾಗುವ ಹಂಬಲದ ಒತ್ತಡ ಹೆಚ್ಚಾಗಿ ಅದನ್ನು ಕೈಬಿಡುತ್ತಾಳೆ.

ಹೇಳಲಾರದಂಥ ತುಮುಲದಲ್ಲಿರುವ ಅವಳು ತನ್ನ ಹಂಬಲದ ಮೊದಲ ಭಾಗವವನ್ನು ಕೈಗೂಡಿಸಿಕೊಳ್ಳುತ್ತಾಳೆ. ಅವಳು ಡಾನ್‌ನಿಂದ, ಮಗು ರಿಚರ್ಡ್‌ ರಿಂದ ದೂರ ಹೋಗುತ್ತಾಳೆ. ಮಗುವನ್ನು ಬಿಟ್ಟು ಹೋಗಬೇಕಾದ ಭಾವನಾತ್ಮಕ ಅಂಶಗಳು ಹೆಚ್ಚಾಗಿರುವ ದೃಶ್ಯದಲ್ಲಿ ನಿರ್ದೇಶಕ ಕ್ಲೋಸ್‌ ಅಪ್‌ನಲ್ಲಿ ಭಾವನೆಗಳ ವೈಪರಿತ್ಯವನ್ನು ಮನದಟ್ಟು ಮಾಡುತ್ತಾನೆ.

 

ಅವನಿಗೆ ಅವಳು ಸಿಕ್ಕಳೆಂಬ ಎಂಬ ಸಂತೋಷದ ಜೊತೆಗೆ ಅವಳ ಒಳಮನಸ್ಸಿನ ಪರಿಯನ್ನು ಕಂಡು ಗಾಬರಿ ಮತ್ತು ರೋಷ. ಅವನಿಗೆ ಅಚ್ಚರಿಯಾಗುವಂತೆ ಆಗಲೂ ಅವಳು ಅವನ ಮಾತನ್ನು ಕೇಳುವುದಿಲ್ಲ. 

ಮೂರನೆಯವಳು ಕ್ಲಾರಿಸಾ ವಾನ್ (ಮೆರಿಲ್‌ ಸ್ಟ್ರೀಪ್‌). ಅವಳು ಕೂಡ‌ ತಾನು ಪ್ರೀತಿಸಿದವನನ್ನು ಮದುವೆಯಾಗಲು ಸಾಧ್ಯವಾಗಲಿಲ್ಲ ಎನ್ನುವ ಚಿಂತೆಯ ತಿರುಗಣಿಯಲ್ಲಿರುತ್ತಾಳೆ. ಅವಳಿಗೆ ಸಂತೋಷವೆನ್ನುವುದು ಮರೀಚಿಕೆ. ಪ್ರೀತಿಸುವ ಗಂಡ ಲೂಯಿಸ್ ಬಗ್ಗೆ ಸಂಪೂರ್ಣ ಅಸಡ್ಡೆ. ಸಾಕುತ್ತಿರುವ ನಾಲ್ಕಾರು ವರ್ಷದ ಗಂಡು ಮಗುವಿನ ಜೊತೆ ಕಾಲ ನೂಕಬೇಕಾದ ಪರಿಸ್ಥಿತಿ ಅವಳಿಗೆ. ಈಗ ಅವಳ ಅಭಿಮಾನವೆಲ್ಲ ಸಾಹಿತ್ಯಕ್ಕಾಗಿ ಪ್ರಶಸ್ತಿ ಲಭಿಸಿರುವ, ಮಾಜಿ ಪತಿ ರಿಚರ್ಡ್ ಬಗ್ಗೆ. ಈಗವನಿಗೆ ದುಃಸ್ಥಿತಿ; ಏಡ್ಸ್ ರೋಗ. ಅವನಿನ್ನೂ ಪ್ರಶಸ್ತಿ ಸ್ವೀಕರಿಸಿರುವುದಿಲ್ಲ. ಅವನಿಗೆ ಪ್ರಶಸ್ತಿ ಕೊಟ್ಟಿರುವುದು ತನ್ನ ಕಾವ್ಯದ ಹಿರಿಮೆಗಾಗಿಯೋ ಅಥವಾ ತಾನು ಏಡ್ಸ್‌ ರೋಗಿಯಾಗಿ ಅಷ್ಟರಮಟ್ಟಿಗೆ ಬರೆದದ್ದಕ್ಕೋ ಎನ್ನುವ ಅನುಮಾನ. ಅದರಿಂದಾಗಿಯೇ ಪ್ರಶಸ್ತಿಯ ಬಗ್ಗೆ ಅವನಿಗೆ ಒಂದಿಷ್ಟೂ ಉತ್ಸಾಹವಿಲ್ಲ. ಅ ಕಾರ್ಯಕ್ರಮ ನಡೆಯಬೇಕಾಗಿದೆಯೋ ಅಥವಾ ಮುಗಿದೇ ಹೋಗಿದೆಯೋ ಎನ್ನುವುದೂ ಅರಿವಿಲ್ಲದಂಥ ಸ್ಥಿತಿ.

ಕುರ್ಚಿಯಲ್ಲಿ ಕುಳಿತು ಮೇಲೇಳಲೂ ಕಷ್ಟಪಡುವಂತಹ ಶಿಥಿಲಗೊಂಡ ದೇಹ. ಅತ್ಯಂತ ದೀನಸ್ಥಿತಿಯನ್ನು ತೆರೆದಿಡುವ ಅವನ ಮುಖಭಾವ ಎಂಥವರನ್ನೂ ತಲ್ಲಣಗೊಳಿಸುವಂಥದ್ದು. ಆದರೆ ತನ್ನ ಆಪ್ತರಲ್ಲಿ ಒಬ್ಬಳೆಂದು ಬಗೆದ ಕ್ಲಾರಿಸಾ ವಾಗ್‌ ಜೊತೆ ಆಡುವ ಮಾತುಗಳು ತುಂಬಾ ತೀವ್ರತೆಯಿಂದ ಕೂಡಿರುತ್ತವೆ. ಜೊತೆಗೆ ಅವನು ಅವಳನ್ನು ಪ್ರೀತಿಸುತ್ತಿರುತ್ತಾನೆ ಕೂಡ. ಅದಕ್ಕೆ ತಕ್ಕಂತೆ ಚುಂಬನದ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾಳೆ. ತಾನು ಆಯೋಜಿಸಿದ ಪಾರ್ಟಿಗೆ ಬೇಗನೆ ಬರಬೇಕೆಂದು ಅವನನ್ನು ಒತ್ತಾಯಪಡಿಸಿರುತ್ತಾಳೆ. ಚಿತ್ರದಲ್ಲಿನ ಈ ಮೂರು ಪ್ರಮುಖ ಪಾತ್ರಗಳು ಸಲಿಂಗಿಯರೂ ಹೌದು ಮತ್ತು ದ್ವಿಲಿಂಗಿಯರೂ ಕೂಡ. ಅಂತರಂಗದ ಅಭಿಲಾಷೆಯಂತೆ ಅವರ ಅಪೇಕ್ಷೆ ಮತ್ತು ಭಾವಗಳು ಉದ್ದೀಪನಗೊಳ್ಳುತ್ತವೆ.

ಈ ಚಿತ್ರದಲ್ಲಿ ಮೂರು ಬಗೆಯ ಆತ್ಮಹತ್ಯೆಯ ಪ್ರಯತ್ನಗಳು ಕಂಡುಬರುತ್ತವೆ. ವರ್ಜಿನಿಯಾ ವೂಲ್ಫ್ ತನ್ನ ಪಾಕೀಟುಗಳಲ್ಲಿ ಕಲ್ಲಿನ ಚೂರುಗಳನ್ನು ಇಟ್ಕೊಂಡು, ಲಿಯೊನಾರ್ಡ್‌ನಿಗೊಂದು ವಿದಾಯ ಪತ್ರವನ್ನು ಬರೆದಿಟ್ಟು ಹರಿಯುತ್ತಿರುವ ಹೊಳೆಯಲ್ಲಿ ಒಂದಿಷ್ಟೂ ಮಾನಸಿಕ ಘರ್ಷಣೆಯಿಲ್ಲದೆ, ಅಲುಗಾಡದಂತೆ ಹೆಜ್ಜೆಗಳನ್ನಿಡುತ್ತ ಮುಂದೆ ಮುಂದೆ ಹೋಗುತ್ತಾಳೆ. ಎರಡನೆಯದು ಪ್ರಯತ್ನ ಪೂರ್ಣಗೊಳ್ಳದ ಲಾರಾಳದು. ಮೂರನೆಯದು ಸಫಲವಾಗುವ ರಿಚರ್ಡ್‌ನದು. ಕ್ಲಾರಿಸಾ ವಾನ್‌ ಅವನ ಭೇಟಿಗೆ ಬಂದಿರುವಾಗ ನಡೆಯುವ ಅನಿರೀಕ್ಷಿತ ಘಟನೆ. ಇದ್ದಕ್ಕಿದ್ದಂತೆ ಅತಿರೇಕದ ವರ್ತನೆಯನ್ನು ಪ್ರದರ್ಶಿಸಿ ತಾನಿರುವ ಅದೆಷ್ಟೋ ಫ್ಲೋರ್‌ಗಳಿರುವ ಕಟ್ಟಡದಿಂದ ದಿಢೀರನೆ ಪಕ್ಕಕ್ಕೆ ಬಿದ್ದು ಬಿಡುತ್ತಾನೆ.

ಎದುರಿಗಿದ್ದ ಕ್ಲಾರಿಸಾ ಒಂದೆರಡು ಕ್ಷಣಗಳ ಮುಂಚೆ ಪ್ರಯತ್ನಪಟ್ಟಿದ್ದರೆ ಅವನನ್ನು ಉಳಿಸಬಹುದಿತ್ತೇನೋ. ಆದರೆ ಅವಳು ಹಾಗೆ ಮಾಡುವುದಿಲ್ಲ. ಸುಮ್ಮನಿರುತ್ತಾಳೆ. ಅಂದರೆ ತನ್ನನ್ನು ಬೇರೊಂದು ರೀತಿಯಲ್ಲಿ ಬಿಗಿದು ಕಟ್ಟಿರುವ ಈ ಅಭಿಮಾನಿ ತನ್ನಿಂದ ಕಣ್ಮರೆಯಾದರೆ ತಾನು ಬಯಸುವ ಸ್ವಾತಂತ್ರ್ಯ ಸಿಗುತ್ತದೆ ಎನ್ನುವ ಉದ್ದೇಶ ಹಾಗೆ ಮಾಡದಂತೆ ತಡೆಯುತ್ತದೆ. ಆತ್ಮಹತ್ಯೆಯ ಅವನ ಪ್ರಯತ್ನ ಕೈಗೂಡಿದ್ದನ್ನು ನಿರ್ಭಾವದಿಂದ ನೋಡಿದ ನಂತರ ಸಂತೋಷದ ಮಿರುಗನ್ನು ಬೀರುವ ಕ್ಲಾರಿಸಾಳ ಅಭಿನಯ ಮೆಚ್ಚತಕ್ಕದ್ದೆ. ಅವಳಿಗೂ ಅತ್ಯಂತ ನಿರೀಕ್ಷೆಯಿಂದ ಎದುರು ನೋಡುತ್ತಿದ್ದ ಸ್ವಾತಂತ್ರ್ಯ ಲಭಿಸುತ್ತದೆ.

ʻದ ಅವರ್ಸ್‌ʼ ಚಿತ್ರದಲ್ಲಿ ಮೂರು ಕಥೆಗಳಿವೆ. ೧೯೨5ರಲ್ಲಿ ವರ್ಜೀನಿಯಾ ವೂಲ್ಫ್‌ ʻಮಿಸೆಸ್ ಡಾಲೋವೆʼ ಕಾದಂಬರಿಯನ್ನು ಬರೆಯುತ್ತಿರುವುದರಿಂದ ಪ್ರಾರಂಭವಾದರೆ ಎರಡನೆಯ ಕಥೆಯಲ್ಲಿನ ಪಾತ್ರ ಲಾರಾ ಬ್ರೌನ್‌ ಆ ಕಾದಂಬರಿಯನ್ನು ಓದುತ್ತಿರುತ್ತಾಳೆ. ಮೂರನೆಯ ಕಥೆಯ ಪಾತ್ರ ಕ್ಲಾರಾ ವಾನ್ ಹೂ ಕೊಳ್ಳುವುದರಿಂದ ಪರಿಚಯವಾಗುತ್ತದೆ. ಈ ಕಾದಂಬರಿಯ ಕಾಲದ ವಿಸ್ತಾರದಲ್ಲಿ ಹಾಸ್ಯ ಲೇಪಿತ ಮಾತುಗಳಾಗಲಿ, ಘಟನೆಯಾಗಲಿ ಸಂಪೂರ್ಣ ಸೊನ್ನೆ. ಮೂರೂ ಪಾತ್ರಗಳು ಬೇರೆ ಬೇರೆ ಕಾರಣಗಳಿಗಾಗಿ ಪಾರ್ಟಿಯನ್ನು ಏರ್ಪಡಿಸುವ ಉದ್ದೇಶ ಹೊಂದಿದ್ದು ಅದರಿಂದ ದೊರಕಬಹುದಾದ ಸಂತೋಷ ಅಥವಾ ಉಲ್ಲಾಸ ಇತ್ಯಾದಿಗಳೆಲ್ಲ ಪೂರ್ತಿಯಾಗಿ ನಾಪತ್ತೆ. ಅದು ಪೂರೈಸುವ ಮುಂಚೆಯೇ ವಿಷಾದ ಮಡುಗಟ್ಟುತ್ತದೆ.

1950ರ ದಶಕದ ಎರಡನೆಯ ಕಥೆಯಲ್ಲಿನ ಪ್ರಮುಖ ಪಾತ್ರ ಲಾರಾ ಬ್ರೌನ್ ಮೂರನೆ ಕಥೆಯ 2000ರ ದಶಕದ ಹೊತ್ತಿಗೆ ಇಳಿವಯಸ್ಸಿನವಳು. ಮೂರನೆಯವಳಾದ ಕ್ಲಾರಿಸಾ ವಾನ್‌ಳನ್ನು ಭೇಟಿಯಾದಾಗ ಭಾವನೆಗಳು ಉತ್ತುಂಗಕ್ಕೇರುತ್ತವೆ. ತಾನು ಅಭಿಮಾನಿಯಾಗಿದ್ದ ರಿಚರ್ಡನ ತಾಯಿ ಎದುರಿಗೆ! ಕ್ಲಾರಿಸಾ ವಾನ್‌ ಮತ್ತು ರಿಚರ್ಡ್‌ರ ಸಂಬಂಧದ ಬಗ್ಗೆ ಲಾರಾ‌ ಬ್ರೌನ್‌ಗೆ ಅರಿವಿರುತ್ತದೆ. ಕ್ಲಾರಿಸಾ ವಾನ್‌ಗೆ ತನ್ನ ಕಣ್ಣೆದುರಿನಲ್ಲಿಯೇ ರಿಚರ್ಡ್ ಆತ್ಮಹತ್ಯೆ ಮಾಡಿಕೊಂಡದ್ದನ್ನು ಮತ್ತೆ ನೆನಪಿಸುವ ಪ್ರಸಂಗ ಅದು. ಮತ್ತೆ ಭುಗಿಲೇಳುವ ಮಿಶ್ರ ಭಾವನೆಗಳು. ಲಾರಾ ಬ್ರೌನ್‌ ಗೆ ಒಂದು ಬಗೆಯಾದರೆ ಕ್ಲಾರಿಸಾ ವಾನ್‌ ಗೆ ಮತ್ತೊಂದು ಬಗೆ.
ಚಿತ್ರದಲ್ಲಿ ಮೂರು ಪ್ರಮುಖ ಪಾತ್ರಗಳಿಗೂ ಭೂತಕಾಲ ಅವರ ಮನಸ್ಸನ್ನು ಆವರಿಸಿರುತ್ತದೆ. ಎಷ್ಟು ಬಗೆಯಿಂದ ಪ್ರಯತ್ನಪಟ್ಟರೂ ಅಪೇಕ್ಷಿಸಿ, ಹಂಬಲಿಸಿ, ಪ್ರಯತ್ನಿಸಿದರೂ ಬದುಕಲಾರದ ಸ್ಥಿತಿ ಅವರಿಗೆ. ಸ್ವಾತಂತ್ರ್ಯವನ್ನು ಪ್ರೇಮಿಸುವುದು, ಎಲ್ಲ ಬಂಧನಗಳಿಂದ ಮುಕ್ತವಾಗಿ ಸಂತೋಷವನ್ನು ಎದುರುಗೊಳ್ಳುವುದು, ಮೂರೂ ಪಾತ್ರಗಳ ಅಪೇಕ್ಷೆ.

ವರ್ಜಿನಿಯಾ ವೂಲ್ಫ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುಂಚೆ ಲಿಯೊನಾರ್ಡ್‌ಗೆ ಬರೆಯುವ ಪತ್ರದಲ್ಲಿ ಪ್ರಸ್ತಾಪ ಮಾಡುವುದು ಪ್ರೇಮದ ಬಗ್ಗೆ ಮತ್ತು ತಾನು ಅದರಿಂದ ಪಡೆಯಬೇಕಾದ ಬಿಡುಗಡೆಯ ಬಗ್ಗೆ; ಸ್ವಾತಂತ್ರ್ಯದ ಬಗ್ಗೆ. ಇವೆರಡರ ಬಗ್ಗೆ ತನ್ನದೇ ಆದ ವ್ಯಾಖ್ಯಾನ ಅವಳದು. ತನ್ನ ಅಪೇಕ್ಷೆಯ ಜೊತೆ ಲಿಯೊನಾರ್ಡ್‌ನನ್ನು ಈ ಬಂಧನದಿಂದ ಬಿಡುಗಡೆ ಮಾಡುವುದು ಕೂಡ ಅವಳ ಉದ್ದೇಶ.

ಲಾರಾ ಬ್ರೌನ್ ಗೆ ಅವಳು ತೀವ್ರವಾಗಿ ಅಪೇಕ್ಷೆಪಟ್ಟ ಬಿಡುಗಡೆ ಮತ್ತು ಸ್ವಾತಂತ್ರ ಲಭಿಸುತ್ತದೆ, ಸರಿ. ಆದರೆ ಅದಕ್ಕೆ ಅವಳು ಕೊಡಬೇಕಾದ ತ್ಯಾಗವೆಷ್ಟು ಎಂದು ಕಲ್ಪಿಸಿಕೊಂಡರೆ ಬೆರಗಾಗುತ್ತದೆ. ಆದರೆ ಅವಳ ವ್ಯಕ್ತಿತ್ವ ಅದನ್ನು ಮಾಡಿಸುತ್ತದೆ. ಅದಕ್ಕವಳು ಸಿದ್ಧ. ಮೂರನೆ ಕಥೆಯ ಕಾಲದಲ್ಲಿ ಇಳಿವಯಸ್ಸಿನ ಅವಳಿಗೆ ಅತೀವ ಬಗೆಯಲ್ಲಿ ಪ್ರೀತಿಸಿದ ಬಿಡುಗಡೆ ಹಾಗೂ ಸ್ವಾತಂತ್ರ್ಯದಿಂದ ಪಡೆದ ಸಂತೋಷ, ನೆಮ್ಮದಿಗಳೆಷ್ಟು ಮತ್ತು ಅವಳು ಅವುಗಳನ್ನು ಅನುಭವಿಸಿದ ಬಗೆಗಳೇನು ತಿಳಿಯುವುದಿಲ್ಲ. ಅವನ್ನು ನಿರ್ದೇಶಕ ನೋಡುಗರ ಕಲ್ಪನೆಗೆ ಬಿಟ್ಟು ಬಿಟ್ಟಿದ್ದಾನೆ.

ವರ್ಜೀನಿಯ ವೂಲ್ಫ್ ತೀವ್ರವಾಗಿ ಬಯಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆದರೆ ಲಾರಾ ಬ್ರೌನ್ ಎಲ್ಲವನ್ನೂ ದೂರ ಸರಿಸಿ ಅಪೇಕ್ಷಿಸಿದ್ದನ್ನು ಪಡೆದು ಇಳಿವಯಸ್ಸಿನ ತನಕ ಜೀವನ ಸಾಗಿಸಿದ್ದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಹೇಗಿದ್ದರೂ ಸತ್ತ ಹಾಗೆಯೇ ಎನ್ನಿಸಿದರೆ ಆಶ್ಚರ್ಯವಿಲ್ಲ. ಹಾಗೆಯೇ ಮಾಜಿ ಪ್ರೇಮಿ ಹಾಗೂ ತೀರಾ ಆಪ್ತನಾದ ರಿಚರ್ಡ್ ಆತ್ಮಹತ್ಯೆ ಮಾಡಿಕೊಂಡ ಮೇಲೆ‌ ಕ್ಲಾರಿಸಾಳಿಗೆ ಅವಳು ಅಪೇಕ್ಷಿಸಿದಂತೆ ಬಂಧನದಿಂದ ಬಿಡುಗಡೆಯ ಲಭಿಸಿದ್ದರೂ ಅದರ ಮೌಲ್ಯವೆಷ್ಟು? ಅದನ್ನು ತಿಳಿಯುವ ಬಗೆ ಹೇಗೆ?

ಚಿತ್ರದಲ್ಲಿ ಪ್ರೇಮಕ್ಕೆ, ಕಾಮಕ್ಕೆ, ಕರ್ತವ್ಯಕ್ಕೆ ಸಂಬಂಧಿಸಿದಂತೆ ತನ್ನದೇ ಆದ ವ್ಯಾಖ್ಯಾನಗಳನ್ನು ಕಾಣುತ್ತೇವೆ. ಪ್ರತಿಯೊಂದು ಪಾತ್ರವು ಆ ಬಗ್ಗೆ ಹೊಂದಿರುವ ಪರಿಕಲ್ಪನೆ ಬೇರೆ ಬೇರೆ. ಪಾತ್ರಗಳನ್ನು ಪೋಷಿಸಿ ಪ್ರೇಕ್ಷಕರು ಸ್ವೀಕರಿಸುವ ಹಾಗೆ ಮಾಡಿರುವ ನಿರ್ದೇಶಕನ ಪ್ರಯತ್ನ ಪ್ರಶಂಸನೀಯ. ಅವನ ಪ್ರಯತ್ನಕ್ಕೆ ಬೆಂಬಲವಾಗಿರುವುದು ಪ್ರಮುಖವಾಗಿ ಪ್ರಜ್ಞಾಪ್ರವಾಹ ತಂತ್ರದಲ್ಲಿ ಬರೆದ ಕಾದಂಬರಿಗೆ ಚಿತ್ರಕಥೆಯ ಸ್ವರೂಪವನ್ನು ರೂಪಿಸಿದ ಡೇವಿಡ್‌ ಹೇರ್ ಮತ್ತು ಒಟ್ಟಾರೆ ಚಿತ್ರದಲ್ಲಿನ ಮತ್ತು ಪಾತ್ರಗಳ ಭಾವಪದರುಗಳಿಗೆ ಫಿಲಿಪ್‌ ಗ್ಲಾಸ್‌ನ ಹಿನ್ನೆಲೆ ಸಂಗೀತದ ಕೊಡುಗೆ ಸಾಮಾನ್ಯದ್ದಲ್ಲ.