ಕಾದಂಬರಿಕಾರನಾಗಬೇಕೆಂದು ಬಯಸಿದ್ದ ಹಿರೊಕುಜು಼ ಕೊರೀಡ ಚಿತ್ರರಂಗಕ್ಕೆ ಪ್ರವೇಶಿಸಿದ್ದು ದೃಶ್ಯ ಮಾಧ್ಯಮದ ಪರಿಕರಗಳನ್ನು ಕುರಿತು ಅವನಿಗಿದ್ದ ಭರವಸೆಯ ಬಲದಿಂದ. ಅವನು ಚಿತ್ರದ ನಿರೂಪಣೆಯಲ್ಲಿ ಓಜು಼ನಿಂದ ಪ್ರಭಾವಿತನಾಗಿದ್ದಾನೆ ಎಂದು ಅವನು ಚಿತ್ರಗಳಿಗೆ ಆರಿಸಿಕೊಂಡಿರುವ ವಸ್ತುಗಳು ಮತ್ತು ಅವನ ನಿರೂಪಣಾ ವಿಧಾನದಿಂದ ತಿಳಿಯಬಹುದು. ಅವನ ಚಿತ್ರಗಳು ಸಾಮಾನ್ಯವಾಗಿ ಮಧ್ಯಮ ವರ್ಗದ ಸಾಂಸಾರಿಕ ವಸ್ತುವನ್ನು ಹೊಂದಿರುತ್ತದೆ.
ಎ.ಎನ್.‌ ಪ್ರಸನ್ನ ಬರೆಯುವ ʻಲೋಕ ಸಿನಿಮಾ ಟಾಕೀಸ್‌ʼ ನಲ್ಲಿ ಜಪಾನ್‌ ನ ʻಸ್ಟಿಲ್‌ ವಾಕಿಂಗ್‌ʼ ಸಿನಿಮಾದ ಕುರಿತ ವಿಶ್ಲೇಷಣೆ

 

ಸಿನಿಮಾ ನಿರ್ಮಾಣ ಕುರಿತಂತೆ ಜಪಾನ್‌ ನಲ್ಲಿ ಎಂದಿಗೂ ಯಾವುದೇ ರೀತಿ ನಿರ್ಬಂಧವಿರದೇ ಹೋದದ್ದು ಅಲ್ಲಿನ ಚಿತ್ರ ನಿರ್ಮಾಪಕರಿಗೆ ಅನುಕೂಲವಾಯಿತು. ಜಗತ್ತಿನ ಅನೇಕ ದೇಶಗಳಲ್ಲಿ ಇದೇ ಬಗೆಯ ಮುಕ್ತ ವಾತಾವರಣವಿಲ್ಲದೆ, ಧಾರ್ಮಿಕ ಅಥವ ರಾಜಕೀಯ ಕಾರಣಗಳಿಂದ ಸೀಮಿತ ಅವಕಾಶ ಉಂಟಾದದ್ದು ತಿಳಿದ ವಿಷಯವೇ. ಸರಿಸುಮಾರು ಅದೇ ವೇಳೆಗೆ ಇಟಲಿಯ ವಿಟ್ಟೋರಿಯೋ ಡಿಸೀಕ ʻಬೈಸಿಕಲ್‌ ಥೀಫ್‌ʼ ಮತ್ತು ಅಮೆರಿಕದ ಆರ್ಸನ್‌ ವೆಲೆಸ್‌ ʻಸಿಟಿಜೆ಼ನ್‌ ಕೇನ್‌ʼ ಚಿತ್ರಗಳ ಮೂಲಕ ಚಲನಚಿತ್ರ ಸ್ವರೂಪದಲ್ಲಿ ಅಳವಡಿಸಿದ ಹೊಸ ಪರಿಯನ್ನು ಸಿನಿಮಾ ಜಗತ್ತಿನಲ್ಲಿ ಸಮರ್ಥವಾಗಿ ಪ್ರಚುರಪಡಿಸಿದ್ದರು.

ಜಪಾನ್ ತನ್ನದೇ ಆದ ಸಾಂಸ್ಕೃತಿಕ ಹಿನ್ನೆಲೆ ಮತ್ತಿತರ ವೈಯಕ್ತಿಕ‌ ಹಿರಿಮೆಯನ್ನು ಸಿನಿಮಾದಲ್ಲಿ ಪ್ರಸ್ತುತ ಅಕಿರ ಕುರೊಸಾವನ ʻರಾಶೋಮನ್ʼ, ಓಜುನ ʻಟೋಕಿಯೋ ಸ್ಟೋರಿʼ ಮತ್ತು ಕೆಂಜಿ ಮಿಜೊಗುಚಿಯ ʻಉಗೆಟ್ಸುʼ ಚಿತ್ರಗಳು ಐವತ್ತರ ದಶಕದ ಮಹೋನ್ನತ ಚಿತ್ರಗಳು. ಜಪಾನ್‌ ಚಲನಚಿತ್ರ ನಿರ್ಮಾಣದ ಸ್ವರ್ಣ ಕಾಲ ಎನ್ನಬಹುದಾದ ಈ ಚಿತ್ರಗಳ ನಿರ್ದೇಶಕರು ತಮ್ಮ ಚಿತ್ರಗಳಿಗೆ ಪ್ರಾದೇಶಿಕ ಹಿನ್ನೆಲೆಯುಳ್ಳ ವಸ್ತುಗಳನ್ನು ಆರಿಸಿಕೊಂಡಿದ್ದರೂ ಅವರುಗಳು ಆ ವಸ್ತುವನ್ನು ಪರಿಕಲ್ಪಿಸುತ್ತಿದ್ದ ಬಗೆಯಲ್ಲಿ ಅವು ಸಾರ್ವಕಾಲಿಕ ಎನಿಸುವಂತಿದ್ದವು. ಕುರೋಸಾವಾನ ʻರಾಶೊಮಾನ್ʼ ನಲ್ಲಿ ಸತ್ಯವನ್ನು ಕುರಿತು ಖಚಿತವಾಗಿ ಹೇಳಲು ಅಸಾಧ್ಯ ಮತ್ತು ಅದು ವೈಯಕ್ತಿಕ ಪರಿಧಿಯೊಳಗೆ ಪರಿಮೂಡುವ ಬಗೆಯನ್ನು ತೆರೆದು ತೋರಿಸಿದ್ದಾನೆ.

ಯಸಿಜಿರು ಓಜುನ ʻಟೋಕಿಯೊ ಸ್ಟೋರಿʼನಲ್ಲಿ ಮಾನವ ಸಂಬಂಧಗಳು ಔದ್ಯೋಗೀಕರಣದ ಕಾರಣದಿಂದ ಕುಟುಂಬ ವ್ಯವಸ್ಥೆಯಲ್ಲಿ ಉಂಟು ಮಾಡುವ ಮಾರ್ಪಾಡುಗಳ ಪರಿಯನ್ನು ನಿರ್ಭಾವದಿಂದ, ಅತ್ಯಂತ ವಸ್ತುನಿಷ್ಠ ನೆಲೆಯಲ್ಲಿ ನಿರೂಪಿಸಿದ್ದಾನೆ. ಮನುಷ್ಯನ ಮೂಲಭೂತ ಗುಣಗಳಿಂದಾಗಿ ಕುಟುಂಬದಲ್ಲಿಯೇ ವಿವಿಧ ಪೀಳಿಗೆಗಳ ನಡುವೆ ತಲೆದೋರುವ ಭಾವಕಂದರಗಳನ್ನು ಮನಮುಟ್ಟುವಂತೆ ತೋರಿಸಿದ್ದಾನೆ. ಹೀಗುಂಟಾಗುವುದು ಕೇವಲ ಜಪಾನ್ ದೇಶಕ್ಕೆ ಮಾತ್ರವಲ್ಲ ಇಡೀ ನಾಗರಿಕ ಪ್ರಪಂಚಕ್ಕೆ ಅನ್ವಯಿಸುತ್ತದೆ ಎನ್ನುವುದನ್ನು ಸೂಚಿಸಿದ್ದಾನೆ. ಮಿಜೋಗುಚಿ ತನ್ನ ʻಉಗೆಟ್ಸುʼ ದಲ್ಲಿಯೂ ಕಾಲ ದೇಶಗಳನ್ನು ಮೀರಿದ ವಸ್ತು ನಿಭಾಯಿಸಿದ್ದಾನೆ. ಇವೆಲ್ಲ ಚಿತ್ರಗಳ ಮೇಲೆ ಇಟಲಿಯ ನವವಾಸ್ತವತಾವಾದದ ಅಂಶಗಳು ಎದ್ದು ತೋರುತ್ತವೆ.

ಈ ಚಿತ್ರಗಳು ಜಪಾನ್ ದೇಶದ ಚಿತ್ರ ನಿರ್ಮಾಪಕರಿಗೆ ಅಗತ್ಯವಾದ ಅಡಿಗಲ್ಲನ್ನು ನಿರ್ಮಿಸಿಕೊಟ್ಟಿದ್ದವು. ಹಾಗೆಂದೇ ಅವುಗಳ ಹಿನ್ನೆಲೆಯಲ್ಲಿ ಚಿತ್ರನಿರ್ಮಾಣಕ್ಕೆ ತೊಡಗುವ ಪ್ರತಿಭಾವಂತರನ್ನು ಕಾಣಲು ತೊಂಭತ್ತರ ದಶಕದ ತನಕ ಕಾಯಬೇಕಾಯಿತು. ಆ ದಶಕದಲ್ಲಿ ಹಲವಾರು ಸಮರ್ಥ ನಿರ್ದೇಶಕರು ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ಸಾರಿದರು. ಅವರಲ್ಲಿ ʻಈಲ್‌ʼ, ʻದ ಬಲಾಡ್‌ ಆಫ್‌ ನರಾಯಾಮʼ ಚಿತ್ರಗಳ ಶೋಯಿ ಇಮಾಮುರೆ ಪ್ರಮುಖ. ಅವನು ೧೯೯೭ರ ಕಾನ್‌ ಚಿತ್ರೋತ್ಸವದ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಇರಾನಿನ ʻಟೇಸ್ಟ್‌ ಆಫ್‌ ಚೆರಿʼ ಚಿತ್ರ ಅಬ್ಬಾಸ್‌ ಕೈರೋಸ್ತಮಿಯೊಂದಿಗೆ ಹಂಚಿಕೊಳ್ಳಬೇಕಾಯಿತು. ಇದಲ್ಲದೆ ಕವಾಸಿ ನವೋಮಿಯ, ʻಸುಜಾ಼ಕುʼ ಕಿಟಾನೋ ತಕೇಶಿಯ, ʻಬೀಟ್ʼ ಮತ್ತು ಸುವೋ ಮಸಾಯುಕಿಯ ʻಶಲ್‌ ವಿ ಡಾನ್ಸ್‌ʼ ಚಿತ್ರಗಳು ಪ್ರಮುಖವೆನಿಸಿದವು.

ಹಿರೋಕುಜು಼ ಕೊರೀಡ ತನ್ನ ಚಿತ್ರಗಳಿಂದ ಪ್ರವರ್ಧಮಾನಕ್ಕೆ ಬಂದ ೨೧ನೇ ಶತಮಾನದ ಮೊದಲ ದಶಕದಲ್ಲಿಯೇ ಇನ್ನೂ ಕೆಲವು ಚಿತ್ರಗಳು ಜಗತ್ತಿನ ಸಿನಿಮಾಸಕ್ತರ ಗಮನ ಸೆಳೆದಿದ್ದವು. ಅವುಗಳಲ್ಲಿ ಪ್ರಮುಖವಾಗಿ ಯುಕಿ ತನಾಡನ ʻಮೂನ್‌ ಅಂಡ್ ಚೆರಿʼ, ನೊಬುಹಿರೋ ಯಮಾಶಿತನ ʻಲಿಂಡ ಲಿಂಡ ಲಿಂಡʼ, ತೋಶಿಯಾಕಿ ತಯೋಡನ ʻಹ್ಯಾಂಗಿಂಗ್‌ ಗಾರ್ಡನ್ʼ ಮುಂತಾದವು.

ಕಾದಂಬರಿಕಾರನಾಗಬೇಕೆಂದು ಬಯಸಿದ್ದ ಹಿರೊಕುಜು಼ ಕೊರೀಡ ಚಿತ್ರರಂಗಕ್ಕೆ ಪ್ರವೇಶಿಸಿದ್ದು ದೃಶ್ಯ ಮಾಧ್ಯಮದ ಪರಿಕರಗಳನ್ನು ಕುರಿತು ಅವನಿಗಿದ್ದ ಭರವಸೆಯ ಬಲದಿಂದ. ಅವನು ಚಿತ್ರದ ನಿರೂಪಣೆಯಲ್ಲಿ ಓಜು಼ನಿಂದ ಪ್ರಭಾವಿತನಾಗಿದ್ದಾನೆ ಎಂದು ಅವನು ಚಿತ್ರಗಳಿಗೆ ಆರಿಸಿಕೊಂಡಿರುವ ವಸ್ತುಗಳು ಮತ್ತು ಅವನ ನಿರೂಪಣಾ ವಿಧಾನದಿಂದ ತಿಳಿಯಬಹುದು. ಅವನ ಚಿತ್ರಗಳು ಸಾಮಾನ್ಯವಾಗಿ ಮಧ್ಯಮ ವರ್ಗದ ಸಾಂಸಾರಿಕ ವಸ್ತುವನ್ನು ಹೊಂದಿರುತ್ತದೆ. ಅವುಗಳಲ್ಲಿ ಹಿರಿಯ ವಯಸ್ಸಿನ ಮತ್ತು ಕಿರಿಯ ವಯಸ್ಸಿನವರ ಬಾಂಧವ್ಯದಲ್ಲಿ ಪೀಳಿಗೆಯ ಅಂತರದಿಂದ ತಲೆದೋರುವ ಕಂದಕ, ತಂದೆತಾಯಿಯರ ಬಗ್ಗೆ ಮಕ್ಕಳಲ್ಲಿ ಅವರದೇ ಕಾರಣಗಳಿಂದಾಗಿ ಉಂಟಾಗುವ ಮಮತೆಯ ಕೊರತೆ ಮುಂತಾದವುಗಳಿಂದ ಹಬ್ಬಿರುವ ವಿಷಾದದ ಛಾಯೆ ವ್ಯಕ್ತವಾಗಿದೆ.

ಅವನು ಸಂಬಂಧಿತ ವ್ಯಕ್ತಿಗಳ ನಡುವೆ ತೀವ್ರತರ ಭಾವಸ್ಪಂದನವನ್ನು ನಿರ್ವಹಿಸಿ, ಮಾನವೀಯ ಅಂಶಗಳನ್ನು ವಿವಿಧ ನೆಲೆಗಳಲ್ಲಿ ಪರೀಕ್ಷೆಗೆ ಒಳಪಡಿಸುತ್ತಾನೆ. ಇವೆಲ್ಲವನ್ನು ಒಳಗೊಂಡಿದ್ದರೂ ಅವನ ಚಿತ್ರದಲ್ಲಿ ಘಟನೆಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಇರುತ್ತವೆ. ಜೊತೆಗೆ ಅಂಥ ಸಂಭವವೇ ಕಥನಕ್ರಮದಲ್ಲಿರುವುದಿಲ್ಲ.

ʻಸ್ಟಿಲ್‌ ವಾಕಿಂಗ್‌ʼ ಚಿತ್ರದ ಕಥಾವಸ್ತು ಹಿರೊಕುಜು಼ನ ಈ ಮೊದಲಿನ ಚಿತ್ರಗಳಂತೆ ತೀರ ಸರಳ. ಅದು ಸಾಮಾನ್ಯ ಕುಟುಂಬವೊಂದರಲ್ಲಿ ಆಕಸ್ಮಿಕವಾಗಿ ತೀರಿಕೊಂಡ ಮಗನೊಬ್ಬನ ತಿಥಿಯ ಸಂದರ್ಭ. ಅದಕ್ಕಾಗಿ ತಂದೆಯ ಮನೆಗೆ ಸಂಸಾರದ ಸಮೇತ ಬಂದ ಇನ್ನೊಬ್ಬ ಮಗ, ಅವನ ಸಂಸಾರ ಮತ್ತು ಆ ದಿನ ವಿಧ್ಯುಕ್ತ ಕ್ರಿಯೆಯಲ್ಲಿ ಆಹ್ವಾನಿತನಾಗಿ ಬಂದ ಸತ್ತ ಮಗ ಬದುಕುಳಿಸಿದ ವ್ಯಕ್ತಿಗಳಿರುತ್ತಾರೆ. ಇವರೆಲ್ಲರ ನಡುವೆ ಸಂಬಂಧಗಳಲ್ಲಿ ಉಂಟಾಗುವ ಪಲ್ಲಟಗಳೇ ಚಿತ್ರದ ಜೀವಾಳ. ಸರಿಸುಮಾರು ಈ ಬಗೆಯ ಪರಿಸ್ಥಿತಿ ಯಾವುದೇ ದೇಶದ ಆಧುನಿಕ ಮಧ್ಯಮ ವರ್ಗದ ಕುಟುಂಬದಲ್ಲಿ ಜರುಗುವಂಥಾದ್ದು. ಜನಜಂಗುಳಿ, ವಾಹನಗಳ ಆರ್ಭಟ ಮುಂದಾದವುಗಳಿಲ್ಲದೆ ತಮಗೊದಗಿದ ಅನುಭವವನ್ನು ಮತ್ತೆ ಮತ್ತೆ ಪುರಾಲೋಚಿಸುತ್ತ, ನಿಧಾನ ಲಯದ ಬದುಕಿನ ಗತಿಯಲ್ಲಿ ಉಳಿದ ಕಾಲವನ್ನು ನೂಕುತ್ತಿರುವ ಹಿರಿಯ ಜೀವಗಳು ಒಂದು ಕಡೆ. ಇನ್ನೊಂದು ಕಡೆ ನಗರದ ಒತ್ತಡದ ಬದುಕಿಗೆ ಒಗ್ಗಿ ಹೋಗಿ, ಎಳವೆಯಲ್ಲಿ ಒದಗಿದ ಮುದಕೊಡುವ ಅನುಭವಗಳ ಕಡೆಗೆ ಪೂರ್ಣ ವಿಮುಖವಾಗುವುದಲ್ಲದೆ ಹಿರಿಯರ ಅಪೇಕ್ಷೆಗಳಿಗೆ ಕಿವುಡಾಗಿ, ಸ್ವಾರ್ಥದ ಪರಿಧಿಯಲ್ಲೇ ವೃತ್ತ ತಿರುಗುತ್ತ ಕಾಲವನ್ನು ಹಿಮ್ಮೆಟ್ಟಿಸುವ ಭರದಲ್ಲಿ ಜೀವಿಸುವ ಕಿರಿಯ ಪೀಳಿಗೆಯವರು. ಇವರಿಬ್ಬರ ನಡುವೆ ಉಂಟಾಗುವ ವಿವಿಧ ರೀತಿಯ ತಿಕ್ಕಾಟ, ಘರ್ಷಣೆ, ಮಾನಸಿಕ ಹಿಂಸೆ, ಮಾನವೀಯತೆಯ ಅಭಾವ – ಇಂಥವುಗಳನ್ನು ವಿಸ್ತೃತವಾಗಿ ತೆರೆದಿಡುತ್ತಾನೆ ಹಿರೊಕುಜು಼ ಕೊರೀಡ.

ಅದೊಂದು ಸಾಧಾರಣ ಅನುಕೂಲವಿರುವ ಮಧ್ಯಮ ವರ್ಗದವರು ವಾಸಿಸುವ ಮನೆ. ಮನೆಯೊಡೆಯ ಎಪ್ಪತ್ತು ದಾಟಿದ ರ್ಯೋಹೆ ಯೋಕೊಹಾಮ, ಹೆಂಡತಿ ಯುಕಾರಿ ಯೋಕೊಹಾಮ ಮುಂತಾದವರು. ವರ್ಷಕ್ಕೊಮ್ಮೆ ಸಮುದ್ರದಲ್ಲಿ ಬೇರೊಬ್ಬನನ್ನು ಉಳಿಸಲು ಹೋಗಿ ಸತ್ತ ಹಿರಿಮಗನ ತಿಥಿ ಮಾಡುವ ಸಮಯಕ್ಕೆ ಬೇರೆ ಊರಿನಿಂದ ವಿಧವೆಯೊಬ್ಬಳನ್ನು ಮದುವೆಯಾದ ಮಗ ಸಾಮಾನ್ಯ ಮೈಕಟ್ಟಿನ ರ್ಯೋಟಾ ಯೋಕೊಹಾಮ ಬರುತ್ತಾನೆ. ಅವನಿಗೆ ಈಗಾಗಲೇ ಸುಮಾರು ಎಂಟು ವರ್ಷದ ಮಗನಿರುತ್ತಾನೆ. ವರ್ಷಕ್ಕೊಮ್ಮೆ ಜರುಗುವ ಈ ವಿಧ್ಯುಕ್ತ ಕ್ರಿಯೆಯಲ್ಲಿ ವರ್ಷಗಳ ಹಿಂದೆ ಸತ್ತ ಮಗ ಬದುಕುಳಿಸಿದ ವ್ಯಕ್ತಿಯೂ ಆಹ್ವಾಹಿತನಾಗಿ ಬರುವುದು ವಾಡಿಕೆ. ದಢೂತಿ ವ್ಯಕ್ತಿಯಾದ ಅವನು ಮತ್ತು ಯೋಕೋಹಾಮ ಕುಟುಂಬದವರ ಜೊತೆ ನಡೆದುಕೊಳ್ಳುವುದು ಒಂದು ನೆಲೆಯಲ್ಲಾದರೆ, ಕುಟುಂಬದ ಸದಸ್ಯರ ನಡುವೆ ಜರುಗುವ ಸಾಂದರ್ಭಿಕ ಮಾತುಗಳು ಮತ್ತೊಂದು ನೆಲೆಯಲ್ಲಿರುತ್ತವೆ. ಅವರುಗಳ ನಡುವಿನ ಸಂಬಂಧದ ಸಿಹಿ-ಕಹಿ ಪದರುಗಳ ಬಗೆಯನ್ನು ಚಿತ್ರ ತೆರೆದಿಡುತ್ತದೆ. ಇಡೀ ಚಿತ್ರದಲ್ಲಿ ಯಾವ ಘಟನೆಯೂ ನಡೆಯುವುದಿಲ್ಲ.

ಜಪಾನ್‌ ಚಲನಚಿತ್ರ ನಿರ್ಮಾಣದ ಸ್ವರ್ಣ ಕಾಲ ಎನ್ನಬಹುದಾದ ಈ ಚಿತ್ರಗಳ ನಿರ್ದೇಶಕರು ತಮ್ಮ ಚಿತ್ರಗಳಿಗೆ ಪ್ರಾದೇಶಿಕ ಹಿನ್ನೆಲೆಯುಳ್ಳ ವಸ್ತುಗಳನ್ನು ಆರಿಸಿಕೊಂಡಿದ್ದರೂ ಅವರುಗಳು ಆ ವಸ್ತುವನ್ನು ಪರಿಕಲ್ಪಿಸುತ್ತಿದ್ದ ಬಗೆಯಲ್ಲಿ ಅವು ಸಾರ್ವಕಾಲಿಕ ಎನಿಸುವಂತಿದ್ದವು.

ʻಸ್ಟಿಲ್‌ ವಾಕಿಂಗ್‌ʼ ಚಿತ್ರದಲ್ಲಿ ಪ್ರಧಾನ ಪಾತ್ರವೆಂದರೆ ಮನೆಯೊಡೆಯ ಯೋಕೋಹಾಮ. ಸದಾ ಭೂತ ಕಾಲದಲ್ಲೇ ಜೀವಿಸುತ್ತಿರುವ ಅವನು ವೃತ್ತಿಯಿಂದ ಡಾಕ್ಟರ್‌ ಆಗಿದ್ದವನು. ಒಟ್ಟಾರೆಯಾಗಿ ಅವನ ಮನೋಭೂಮಿಕೆಯೆಲ್ಲ ಕಳೆದ ದಿನಗಳಲ್ಲಿದೆ ಎನ್ನುವುದನ್ನು ಸೂಚಿಸಲು ಮತ್ತು ಅವನಿನ್ನೂ ಅದೇ ಮಾರ್ಗದಲ್ಲಿ ಒಬ್ಬಂಟಿಯಾಗಿ ನಡೆಯುತ್ತಿದ್ದಾನೆ ಎಂಬುದರ ಪುರಾವೆಯೂ ನಿರೂಪಿಸಲ್ಪಟ್ಟಿದೆ.

ಅವನು ಮನೆಯಲ್ಲಿ ವಿಧ್ಯುಕ್ತ ಕ್ರಿಯೆಗಾಗಿ ಎಲ್ಲರೂ ಸೇರಿರುವ ಸಮಯದಲ್ಲಿಯೂ ʻಸ್ಟಿಲ್‌ ವಾಕಿಂಗ್‌ʼ ಎಂಬ ಹಾಡಿನ ಹೆಸರನ್ನು ಬರೆದಿರುವ ಹಳೆಯ ಗ್ರಾಮಫೋನ್‌ ರೆ‌ಕಾರ್ಡನ್ನು ಹಾಕಿದಾಗ ಇದು ವ್ಯಕ್ತವಾಗುತ್ತದೆ. ಇಷ್ಟೇ ಅಲ್ಲದೆ ಚಿತ್ರ ಅವನಿಂದಲೇ ಪ್ರಾರಂಭವಾಗಿ, ಉದ್ದಾನುದ್ದ ರಸ್ತೆಯಲ್ಲಿ, ಏಕಾಂಗಿಯಾಗಿ, ನಿಧಾನ ನಡಿಗೆಯ ಅವನ ಮನಸ್ಥಿತಿಗೆ ಬರಿದೋ ಬರಿದಾಗಿರುವ ರಸ್ತೆಗಳು, ಪಾರ್ಕೊಳಗೆ ಅತ್ತಿತ್ತ ಯಾರೂ ಇಲ್ಲದೆ ಮೆಟ್ಟಿಲುಗಳನ್ನು ಭಾರ ಹೆಜ್ಜೆಗಳನ್ನಿಟ್ಟು ಇಳಿಯುವ ರೀತಿ ಮುಂತಾದವು ರೂಪಕವಾಗುತ್ತದೆ. ಜೊತೆಗೆ ಅವನ ಈ ಮನಸ್ಥಿತಿ ಚಿತ್ರದುದ್ದಕ್ಕೂ ಬದಲಾಗುವುದಿಲ್ಲ. ಅಷ್ಟೇ ಅಲ್ಲದೆ ಅದರ ವಿವಿಧ ರೂಪುರೇಷೆಗಳನ್ನು ಅವನಾಡುವ ಒಂದೆರಡು ಮಾತುಗಳಲ್ಲಿ, ಉಳಿದವು ಅತ್ತಿತ್ತ ಚಲಿಸುವ ಕಣ್ಣೋಟಗಳಲ್ಲಿ ವ್ಯಕ್ತವಾಗಿವೆ.

ಈ ಚಿತ್ರದ ಮೂಲ ಭಾಗವನ್ನು ಈ ರೀತಿ ಸ್ಥಿರಪಡಿಸಿದ ನಂತರ ಮುಂದಿನ ದೃಶ್ಯಗಳು ಕ್ರಮೇಣ ತೆರೆದುಕೊಳ್ಳುತ್ತವೆ. ಆಧುನಿಕ ಛಾಯೆಯ ಎರಡನೆಯ ಮಗ ಬೇರೆ ಊರಿಂದ ಸಂಸಾರದೊಂದಿಗೆ ರೈಲಿನಲ್ಲಿ ಬರುವುದನ್ನು ಕಾಣುತ್ತೇವೆ. ಹಾಗೆ ಬರುತ್ತಿರುವಾಗಲೇ ಅವನು ಒಂದು ರೀತಿಯ ಸಮಾಧಾನಕರ ಸ್ಥಿತಿಯಲ್ಲಿ ಇರುವುದಿಲ್ಲ. ಇದಕ್ಕೆ ಪೂರಕವಾಗಿ ಅವನು ಊರಿಗೆ ಬಂದ ಮೇಲೆ, ತಂದೆಯ ಹಾಗೂ ಇತರರ ಜೊತೆ ನಡೆಯುವ ಸಣ್ಣಪುಟ್ಟ ಮಾತಿನ ನಡುವೆ ಯಾವ ಬಗೆಯ ವಿಶ್ವಾಸ ಮತ್ತು ಆತ್ಮೀಯತೆಯೂ ಕಂಡುಬರುವುದಿಲ್ಲ. ಆಹ್ವಾನಿತ ವ್ಯಕ್ತಿಯೂ ಸೇರಿದಂತೆ ತಾಯಿ, ತಂದೆ ಇತ್ಯಾದಿ ಕುಟುಂಬದ ಸದಸ್ಯರ ಜೊತೆ ಸಹಜ ರೀತಿಯಲ್ಲಿ ಬೆರೆಯುವುದಿಲ್ಲ. ತನ್ನ ಹೆಂಡತಿ, ಮಗನೊಂದಿಗೇ ವ್ಯವಹರಿಸುತ್ತ ಕಾಲ ದೂಡುತ್ತಾನೆ. ಅವನೂ ಸೇರಿದಂತೆ ಇತರ ವಯಸ್ಕರೆಲ್ಲರೂ ತಮ್ಮ ಸುತ್ತ ನಿರ್ಮಿಸಿಕೊಂಡ ವೃತ್ತದಲ್ಲಿಯೇ ಚಲಿಸುತ್ತಿರುವಂತೆ ಕಾಣಿಸುತ್ತದೆ. ಬದುಕಿರುವ ಇಷ್ಟೂ ವ್ಯಕ್ತಿಗಳು ಸತ್ತ ವ್ಯಕ್ತಿಯ ತಿಥಿಯಲ್ಲಿ ಒಟ್ಟಾಗಿ ಸೇರಿದ್ದರೂ ಕಟ್ಟು ಹಾಕಿದ ಭಾವನೆಗಳಲ್ಲಿ ಉಸಿರು ಇಂಗಿದವರಂತೆ ಕಾಣುವುದು ವಿಪರ್ಯಾಸವೆನಿಸಿ ನಿರ್ದೇಶಕನ ಆಶಯವನ್ನು ಪೂರೈಸುತ್ತದೆ.

ಮನೆಗೆ ಹೆಂಡತಿಯ ಜೊತೆ ಎರಡನೆಯ ಮಗ ಬರುವುದಕ್ಕೆ ಮುಂಚೆಯೇ ಮನೆಯೊಡತಿ ಅವನು ವಿಧವೆಯನ್ನು ಮದುವೆಯಾಗಿರುವುದು ಇಷ್ಟವಿಲ್ಲವೆನ್ನುವುದನ್ನು ಚಿತ್ರದ ಪ್ರಾರಂಭದ ಹಂತದಲ್ಲಿಯೇ ವ್ಯಕ್ತಪಡಿಸುತ್ತಾಳೆ. ಅವನು ಮದುವೆ ಆಗುವುದೇನೋ ಸರಿ. ಆದರೆ ವಿವಾಹ ವಿಚ್ಛೇದನ ತೆಗೆದುಕೊಂಡವಳನ್ನು ಮದುವೆಯಾಗಿದ್ದರೆ ಒಳಿತಾಗುತ್ತಿತ್ತು ಎನ್ನುವ ಭಾವನೆ ಅವಳಿಗೆ. ಮನೆಯೊಡೆಯ ಮಗ ತನ್ನ ಸಂಸಾರದೊಂದಿಗೆ ಊರಿಗೆ ಬರುವುದಕ್ಕೆ ಮುಂಚೆಯೇ ಅವನ ಬಗ್ಗೆ ಇರುವ ಅಸಹನೆಯನ್ನು ಬೇರೆ ಮಾತುಗಳಿಂದ ವ್ಯಕ್ತಪಡಿಸುತ್ತಾನೆ. ಈಗ ಇರುವ ಮಗ ಸತ್ತು, ಸತ್ತಿರುವ ಮಗ ಇರಬಾರದಿತ್ತೆ ಎಂದು ಹಂಬಲಿಸುತ್ತಾನೆ. ಕಾರಣ ಸತ್ತು ಹೋದವನ ಬಗ್ಗೆ ಅವರಿಗಿರುವ ಅಗಾಧ ಪ್ರೀತಿ. ಅವನು ತಾನು ಇಷ್ಟಪಡುವಂತೆ ಡಾಕ್ಟರ್ ಆಗುತ್ತಿದ್ದ ಎಂಬ ಭಾವನೆ ಅವನಿಗೆ. ಇದಕ್ಕೂ ಕೂಡ ಕಾರಣವೊಂದಿದೆ. ಈಗಿರುವ ಮಗ ಪೇಂಟರ್ ಆಗುವ ನಿರೀಕ್ಷೆ ಬಯಕೆ ಇಟ್ಟುಕೊಂಡಿರುತ್ತಾನೆ. ಅದನ್ನೂ ಕೂಡ ಮನೆಯೊಡೆಯನಿಗೆ ಸಹಿಸಲು ಅಸಾಧ್ಯವಾಗುತ್ತದೆ.

ಮನೆಯಲ್ಲಿ ನಡೆಯುವ ವಿಧ್ಯುಕ್ತ ಕ್ರಿಯೆಗಳಲ್ಲಿ ಭಾಗವಹಿಸುವ ಸತ್ತ ಮಗ ಉಳಿಸಿದಾತ ನಡೆದುಕೊಳ್ಳುವ ವರ್ತನೆಯಲ್ಲಿ ಅವನು ಮುಜುಗರದಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ ಎನ್ನುವುದು ಸ್ಪಷ್ಟವಾಗುತ್ತದೆ. ಅವನಿಗೆ ತಾನು ಆಜೀವ ಪರ್ಯಂತ ಋಣಿಯಾಗಬೇಕಾದ ಮನೆಯಿದು ಎನ್ನುವುದು ಒಂದು ಭಾಗವಾದರೆ, ಇಂಥ ಸಂದರ್ಭಕ್ಕೆ ನಾನು ಸಿಕ್ಕಿ ಹಾಕಿಕೊಂಡಿರುವುದನ್ನು ತೀವ್ರವಾಗಿ ವಿರೋಧಿಸುವ ಇನ್ನೊಂದು ಭಾಗ ಅವನಲ್ಲಿ. ಹೀಗಾಗಿ ಧಡೂತಿ ಮೈಯ ಅವನು ಹೇಳಲಾಗದೆ ಸಂಕಟಪಟ್ಟಕೊಳ್ಳುವುದರ ಜೊತೆಗೆ ಮನೆಯವರೂ ಕೂಡ ಸಂಕಟಪಡುವಂತೆ ಮಾಡುತ್ತಾನೆ. ಇದು ಅವನು ಆಡುವ ಅರ್ಥರಹಿತ ಮಾತುಗಳು ಮತ್ತು ಕಾರಣವಿಲ್ಲದ ವರ್ತನೆಗಳಲ್ಲಿ ಎದ್ದುತೋರುತ್ತದೆ. ತಂದೆಯ ಮನೆಗೆ ನಿಯೋಜಿತ ಕಾರ್ಯಕ್ಕೆ ಬಂದಿರುವ ಮಗನಂತೂ ಇಡೀ ದಿನ ಆ ಮನೆಯಲ್ಲಿ ಇರುವುದಕ್ಕೆ ಸಿದ್ಧನಿಲ್ಲ ಎಂದು ಹೆಂಡತಿಯ ಜೊತೆ ಮಾತಿನಲ್ಲಿ ಹಾಗೂ ವರ್ತನೆಯಲ್ಲಿ ತೋರಿಸುತ್ತಾನೆ. ಇವುಗಳೊಂದನ್ನೂ ಅರಿಯದ ಅವನ ಮಗ ತನಗೆ ತೋಚಿದಂತೆ ಸಣ್ಣ ಸಣ್ಣ ರಂಪ ಮಾಡುತ್ತಿರುತ್ತಾನೆ. ಅವನು ಅಜ್ಜನಿಂದಲೂ ದೂರವಾಗಿಯೇ ಇರುತ್ತಾನೆ. ಕಾರಣ ಹಿರಿಯನ ಗಾಂಭೀರ್ಯ ತಡೆಯುತ್ತದೆ.

ಇವೆಲ್ಲದರ ನಡುವೆ ಮನೆಯಲ್ಲಿ ಮತ್ತು ಹೊರಗಡೆ ಹಾರಾಡುವ ಚಿಟ್ಟೆಗಳ ಪ್ರಸಂಗ ಬರುತ್ತದೆ. ಅವುಗಳ ಬಣ್ಣ ಹೋದ ವರ್ಷ ಇದ್ದಂತಿರದೆ ಬದಲಾಗಿರುವುದನ್ನು ಗುರುತಿಸುತ್ತಾರೆ. ಇದು ಅವರೆಲ್ಲರ ಸಂಬಂಧದ ಸ್ಥಿತಿಗೆ ರೂಪಕವಾಗುತ್ತದೆ.

ಪಾತ್ರವರ್ಗದಲ್ಲಿ ಸಾಕಷ್ಟು ಜನರಿದ್ದರೂ ಚಿತ್ರಕಥೆಯ ಹರಹಿನಲ್ಲಿ ಬೇರಾವ ತಿರುವಿನ ಘಟನೆ ಸಂಭವಿಸುವುದಿಲ್ಲ. ಜಗತ್ತಿನಲ್ಲಿ ಉಂಟಾಗಿರುವ ಔದ್ಯೋಗಿಕ ಪ್ರಗತಿ ಮತ್ತು ಕುಟುಂಬ ವ್ಯವಸ್ಥೆಯಲ್ಲಿನ ಶಿಥಿಲತೆ ಇದಕ್ಕೆ ಪ್ರಮುಖ ಕಾರಣವೆಂದು ನಿರ್ದೇಶಕ ಸೂಚಿಸುತ್ತಾನೆ. ಇವಲ್ಲದೆ ವಿವಿಧ ವಯೋಮಾನದವರಲ್ಲಿ ಇರಬೇಕಾದ ವಿಶ್ವಾಸ ಮತ್ತು ಪ್ರೀತಿಯ ಕೊರತೆ ಮತ್ತಷ್ಟು ಹೆಚ್ಚುತ್ತಿವೆ ಎನ್ನುವುದು ನಿರ್ದೇಶಕನ ಅಭಿಪ್ರಾಯ. ಇದಕ್ಕಾಗಿ ಅವನು ಹೆಚ್ಚಾಗಿ ಮಾನಸಿಕ ಕ್ಲೇಷಕ್ಕೊಳಗಾದ ಹಿರಿಯರನ್ನು ಹೆಚ್ಚಿಗೆ ಗಮನಿಸುತ್ತಾನೆ. ಅವರ ಬಗ್ಗೆ ಅವನಿಗೆ ಮರುಕ ಇರುವಂತೆ ತೋರುತ್ತದೆ. ಅವರು ತಮ್ಮ ಭವಿಷ್ಯದಲ್ಲಿ ಬೇರಾವುದನ್ನೂ, ಬೇರಾವ ಸುಖದ ನಿರೀಕ್ಷೆಯನ್ನು ಇಟ್ಟುಕೊಳ್ಳಲು ಅಸಾಧ್ಯ ಎನ್ನುವ ಭಾವನೆಯನ್ನು ಕೂಡ ವ್ಯಕ್ತಪಡಿಸುತ್ತಾನೆ.

ಈ ಬಗೆಯ ಸಂದಿಗ್ಧ ಪರಿಸ್ಥಿತಿಯಲ್ಲಿ ಹಿರಿಯ ಜೀವಿಗಳು ತಮ್ಮೊಳಗೇ ಮುಳುಗಿ, ಸಾಧ್ಯವಾದಷ್ಟು ತಮ್ಮೊಂದಿಗಿರುವ ಇತರ ವ್ಯಕ್ತಿಗಳ ಜೊತೆ, ಪ್ರಕೃತಿಯ ಜೊತೆ, ಮತ್ತು ಒಟ್ಟಾರೆಯಾಗಿ ಜೀವನದ ಮಹಾ ಹರಹಿನಲ್ಲಿ ಕೊಂಚವಾದರೂ ಸಮಾಧಾನವನ್ನು ಕೊಂಡುಕೊಂಡರೆ ಸಾಕು ಎನ್ನುವ ನಿವೇದನೆಯನ್ನು ಮಾಡುತ್ತಾನೆ. ಇದು ನಿರ್ದೇಶಕ ಕೊರೀಡನ ಮುಖ್ಯ ಧೋರಣೆ.

ಕೊರೀಡ ಚಿತ್ರೀಕರಣಕ್ಕೆ ನಿರೂಪಿಸುವುದಲ್ಲಿ ಅವನು ಹೆಚ್ಚಾಗಿ ಮಧ್ಯಮ(ಮೀಡಿಯಯಮ್) ಚಿತ್ರಿಕೆಗಳನ್ನು ಮುಕ್ಕಾಲುಪಾಲು ಬಳಸುತ್ತಾನೆ. ಈ ಕುರಿತು ತನ್ನ ನಿರೂಪಣಾ ವಿಧಾನದ ಬಗ್ಗೆ ತಿಳಿಸುತ್ತಾ ತಾನು ಓಜು಼ಗಿಂತ ಹೆಚ್ಚಾಗಿ ಮೈಕ್‌ ಲೀಯ ನಿರೂಪಣಾ ವಿಧಾನವನ್ನು ಅನುಸರಿಸುತ್ತೇನೆ ಎಂದು ಹೇಳಿದ್ದುಂಟು. ಇದೇನಿದ್ದರೂ ಜಗತ್ತಿನ ಪ್ರಮುಖ ಚಿತ್ರ ವಿಮರ್ಶಕರು, ಅಕಿರಾ ಕುರೋಸಾವಾನ ನಂತರ ಸಾಕಷ್ಟು ಭರವಸೆಯನ್ನು ಹುಟ್ಟಿಸುವ ನಿರ್ದೇಶಕ ಕೊರೀಡ ಎಂದು ಪ್ರಶಂಸಿಸಿದ್ದಾರೆ. ಅವನು ಈ ಚಿತ್ರವಲ್ಲದೇ ʻನೋಬಡಿ ನೋಸ್ʼ, ʻಲೈಕ್ ಫಾದರ್, ಲೈಕ್‌ ಸನ್ʼ, ʻಆಫ್ಟರ್ ದಿ ಸ್ಟಾರ್ಮ್ʼ ಮುಂತಾದ ಚಿತ್ರಗಳನ್ನು ಕೂಡ ಜಗತ್ತಿಗೆ ಸಮರ್ಪಿಸಿದ್ದಾನೆ. ಕೊರೀಡ ಕುರಸಾವನಂತೆಯೇ ಒಂದು ನಿಶ್ಚಿತ ನಟವರ್ಗವನ್ನು ನಿರ್ಮಿಸಿಕೊಂಡು ತನ್ನ ಚಿತ್ರಗಳಿಗೆ ಅವರನ್ನೇ ಬಳಸುವ ಅಭ್ಯಾಸ ಮಾಡಿಕೊಂಡಿದ್ದಾನೆ. ಇದು ಚಿತ್ರ ನಿರ್ಮಾಣ ಹಾಗೂ ನಿರೂಪಣೆಯ ದೃಷ್ಟಿಯಿಂದ ಸ್ವಾಗತಾರ್ಹವೆಂದು ಹೇಳಬಹುದು.