ನಾಯಕಿ ನೇಯ್ಗೆ ಮಾಡಿದ ಕೆಂಪು ವಸ್ತ್ರವನ್ನು ಶಾಲಾ ಕಟ್ಟಡದಲ್ಲಿ ಕಟ್ಟಲಾಗುತ್ತದೆ. ಈ ಎಲ್ಲ ಘಟನೆಗಳು ಜರುಗಿದರೂ ಒಮ್ಮೆಯೂ ನಾಯಕ-ನಾಯಕಿಯರ ಮುಖಾಮುಖಿಯಾಗಿರುವುದಿಲ್ಲ. ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವುದರಿಂದ ಉಂಟಾಗುವ ಕಲರವವನ್ನು ಮನೆಯಲ್ಲಿರುವ ನಾಯಕಿ ತನ್ನಜ್ಜಿಯ ಜೊತೆಗೆ ಕೇಳಿಸಿಕೊಳ್ಳುತ್ತ ತನ್ನಷ್ಟಕ್ಕೆ ಸಂಭ್ರಮಿಸುತ್ತಾಳೆ. ಶಿಕ್ಷಕ ನಾಯಕನಿಗೆ ಪ್ರತಿದಿನ ಮಕ್ಕಳ ಜೊತೆ ಊರಾಚೆ ಓಡಾಡುವುದು ವಾಡಿಕೆ. ಅವನು ಹೀಗೆ ಮಾಡುವುದನ್ನು ನಿರೀಕ್ಷೆಯಿಂದ ಕಾಯುವ ಆತಂಕ, ಲಜ್ಜೆ ಸಂತೋಷ ಇವುಗಳನ್ನು ಒಳಗೊಂಡ ನಾಯಕಿಗೆ ನಾಯಕನ ಪ್ರಥಮ ಭೇಟಿಯಾಗುತ್ತದೆ. ನಿರ್ದೇಶಕ ನಾಯಕಿಯ ಈ ಎಲ್ಲ ಭಾವಗಳನ್ನು ಪ್ರತ್ಯೇಕವಾಗಿ ದಾಖಲಿಸುತ್ತಾನೆ.
ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಸರಣಿʼಯಲ್ಲಿ ಚೀನಾದ ʻದ ರೋಡ್ ಹೋಮ್ʼ ಸಿನಿಮಾದ ವಿಶ್ಲೇಷಣೆ

ಚೀನಾದ ಯಾಂಗ್ ಇಮೋವು ಬೀಜಿಂಗ್ ಫಿಲ್ಮ್‌ ಅಕಾಡೆಮಿಯ ತನ್ನ ಸಹಪಾಠಿ ಚೆನ್ ಕೆಯ್ಗೆ ಮತ್ತಿತರ ಕೆಲವರಂತೆ ವಿಶ್ವವಿಖ್ಯಾತ ಚಲನಚಿತ್ರ ನಿರ್ದೇಶಕ. ಅಕಾಡೆಮಿ ಮೂಲಕ 1982ರಲ್ಲಿ ಪದವಿ ಪಡೆದ ಕೆಲವರು ಸ್ಥಾಪಿಸಿದ ಫಿಫ್ತ್ ಜನರೇಷನ್ 1980ರ ದಶಕದಲ್ಲಿ ಮಧ್ಯದಲ್ಲಿ ಇಡೀ ಪ್ರಪಂಚದಲ್ಲಿ ಭಿನ್ನ ಸ್ವರೂಪದ ಚಿತ್ರಗಳನ್ನು ನಿರ್ಮಿಸಿ ತನ್ನ ವೈಶಿಷ್ಟತೆಯನ್ನು ಮೆರೆಯಿತು. 1987ರ ಇಮೋವುನ ಸಂಪ್ರದಾಯಿಕ, ಸಾಂಸ್ಕೃತಿಕ ಅಲಿಖಿತ ಕಟ್ಟಲೆಗಳನ್ನು ಮೀರಿದ `ರೆಡ್ ಶೋರ್ಗಮ್’ ಈ ಸಂಸ್ಥೆಯ ಮೊದಲ ಚಿತ್ರ. ಚೀನಾದ ಖ್ಯಾತ ನಟಿ ಗಾಂಗ್ ಲಿ ಅಭಿನಯಿಸಿದ ಈ ಚಿತ್ರದ ನಂತರ ಆಕೆಯ ಅಭಿನಯದ `ಜುಡೋವು’ ಮತ್ತು `ರೈಸ್ ದ ರೆಡ್ ಲ್ಯಾಟರ್ನ್’ ಚಿತ್ರಗಳು ಒಗ್ಗೂಡಿ ತ್ರಿವಳಿಯೆನಿಸಿದವು. ಈ ತ್ರಿವಳಿ ಜಾಗತಿಕ ಖ್ಯಾತಿ ತಂದುಕೊಟ್ಟರೂ ಹೆಣ್ಣಿನ ಪಾತ್ರ ನಿರೂಪಣೆಯಲ್ಲಿ ಏಕತಾನತೆಯನ್ನು ಹೊಂದಿದೆಯೆಂದು ಇಮೋವು ಹೇಳಿಕೊಂಡಿದ್ದಾನೆ. ಈ ತ್ರಿವಳಿಯಲ್ಲಿ ಹೆಚ್ಚಾಗಿ ಭೂತಕಾಲದಲ್ಲಿ ಸಂಭವಿಸಿದ್ದೆನ್ನುವ ವಿಷಯಗಳಿಂದ ಕೂಡಿದೆ. ಈ ಬಗೆಯ ವಸ್ತುಗಳಿಂದ ಭಿನ್ನವಾಗಿ ಸಮಕಾಲೀನ ವಿಷಯ, ವಸ್ತುಗಳ ಕಡೆ ಗಮನ ಹರಿಸಿ ಅವನ ವೃತ್ತಿ ಜೀವನದ ಎರಡನೆಯ ದಶಕದಲ್ಲಿ `ಒನ್ ಅಂಡ್ ಎಯ್ಟ್’, `ಎಲ್ಲೊ ಅರ್ಥ್‌’ ಮುಂತಾದ ಅತ್ಯಂತ ಕಡಿಮೆ ಕಥಾ ಹಂದರದ, ಸಂದಿಗ್ಧ ಅಂತ್ಯವುಳ್ಳ ಚಿತ್ರಗಳನ್ನು ನಿರ್ಮಿಸಿದ.

(ಯಾಂಗ್ ಇಮಾವು)

ಸಾಮಾನ್ಯವಾಗಿ ಅವನ ಚಿತ್ರಗಳಲ್ಲಿ ಸ್ತ್ರೀ ಪಾತ್ರಗಳಿಗೆ ಪ್ರಾಮುಖ್ಯತೆ ಹೆಚ್ಚು. ವಿವಿಧ ಪೀಳಿಗೆಯ ಗಂಡು ಪಾತ್ರಗಳು ಸ್ತ್ರೀ ಪಾತ್ರಗಳ ವ್ಯಕ್ತಿತ್ವ ಪೋಷಣೆಯನ್ನು ಪೂರೈಸುತ್ತವೆ. ಪ್ರಸ್ತುತ `ದ ರೋಡ್ ಹೋಮ್’ನಲ್ಲಿ ಕೂಡ ಹಾಗೆಯೇ ಆಗಿದೆ.

2001ರಲ್ಲಿ ಬರ್ಲಿನ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ವಿದೇಶಿ ಚಿತ್ರ ಪ್ರಶಸ್ತಿ, ಚಿಕಾಗೊ ಚಿತ್ರ ವಿಮರ್ಶಕರ ಸಂಘದ ಪ್ರಶಸ್ತಿ, ಗೋಲ್ಡನ್ ರೂಸ್ಟರ್ ಪ್ರಶಸ್ತಿಯೂ ಸೇರಿದಂತೆ ಇನ್ನಿತರ ಹನ್ನೊಂದು ಅಂತರ ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ 89 ನಿಮಿಷಗಳ ʻದ ರೋಡ್ ಹೋಮ್ʼ ಚಿತ್ರದಲ್ಲಿ ಪ್ರಸ್ತುತಪಡಿಸಿದ್ದು ಗಂಡು-ಹೆಣ್ಣಿನ ಪ್ರೇಮ ಕುರಿತಂತೆ ಅವನ ಕಲ್ಪನೆಯ ಸ್ವರೂಪವನ್ನು.

ಯಾಂಗ್ ಇಮಾವು ಹುಟ್ಟಿದ್ದು 1951ರಲ್ಲಿ. ಮೇಜರ್ ಆಗಿದ್ದ ತಂದೆ ಮತ್ತು ನ್ಯಾಷನಲಿಸ್ಟ್ ಪಾರ್ಟಿ ಒಡನಾಟವಿದ್ದ ಅಣ್ಣ ಇವರ ಕಾರಣದಿಂದ ಅವನಿಗೆ ಬಾಲ್ಯ ಹಿತವೆನಿಸಿರಲಿಲ್ಲ. 1978ರಲ್ಲಿ ಬೀಜಿಂಗ್ ಅಕಾಡೆಮಿಯಲ್ಲಿ ಸಿನಿಮಾಟೊಗ್ರಾಫರ್ ಆಗಿ ನಿಯುಕ್ತನಾದ ಅವನಿಗೆ ಪ್ರಪಂಚದ ಪ್ರಸಿದ್ಧ ಚಿತ್ರಗಳನ್ನು ಅಭ್ಯಸಿಸುವ ಅವಕಾಶ ಉಂಟಾಯಿತು. ಗಾಕ್ಸಿ ಸ್ಟುಡಿಯೋದಲ್ಲಿ ಕೆಲ ಕಾಲ ಛಾಯಾಗ್ರಾಹಕನಾದ ನಂತರ 1987ರಲ್ಲಿ ಮೊದಲ ಚಿತ್ರ ʻರೆಡ್ ಸರ್ಗಂʼ ನಿರ್ಮಿಸಿದ. ಇದಕ್ಕೆ ಬರ್ಲಿನ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ದೊರಕಿತು. ಅವನ ಚಿತ್ರಗಳಲ್ಲಿ ಚೀನಾ ಜನಾಂಗದವರ ಕಷ್ಟ ಸಹಿಷ್ಣತೆ ಮತ್ತು ಛಲ ಸಾಧನೆಯ ಅಂಶಗಳನ್ನು ಮತ್ತೆ ಮತ್ತೆ ಬಳಸುತ್ತಾನೆ. 1992ರ `ಸ್ಟೋರಿ ಆಫ್ ಕ್ಯುಜು’ ಅವನ ಪ್ರಾರಂಭಿಕ ಚಿತ್ರಗಳಿಗಿಂತ ಭಿನ್ನವಾಗಿದೆ. ತೆಳು ಹಾಸ್ಯ ಪ್ರಧಾನವಾದ ಈ ಚಿತ್ರದಲ್ಲಿ ಅಧಿಕಾರಿಶಾಹಿ ವ್ಯವಸ್ಥೆಯಲ್ಲಿ ಸಾಮಾನ್ಯರು ಪಾಡುಪಡುವುದನ್ನು ಬಿಂಬಿಸಲಾಗಿದೆ. ವೃತ್ತಿಪರ ನಟರಲ್ಲದವರನ್ನು ಬಳಸಿಕೊಂಡಿರುವುದು ಈ ಚಿತ್ರದ ವಿಶೇಷ. ಇದಕ್ಕೆ ವೆನಿಸ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿತು. ಅವನ 2002ರ ʻಹೀರೋʼ ಚಿತ್ರ ಚೀನಾ ಪ್ರಭುತ್ವದ ಸ್ವಾಯುತ್ತತೆಯನ್ನು ಎತ್ತಿ ಹಿಡಿದಿರುವುದಾಗಿ ಭಾವಿಸಲಾಗಿದೆ. ಅವನ ಪ್ರಖ್ಯಾತ ಚಿತ್ರಗಳಲ್ಲಿ ʻಶಾಂಗೈ ಟ್ರಿಯಡ್ʼ (1994), `ಟು ಲಿವ್’(1994), `ನಾಟ್ ವನ್ ಲೆಸ್’(1999), `ಹ್ಯಾಪಿ ಟೈಮ್ಸ್’(2000), `ಎ ವುಮನ್, ಎ ಗನ್ ಅಂಡ್ ಎ ನೀಡಲ್ ಶಾಪ್’(2007) ಮತ್ತು ಕಮಿಂಗ್ ಹೋಮ್’(2014) ಸೇರಿವೆ.

`ದ ರೋಡ್ ಹೋಮ್’ ಚಿತ್ರಕಥೆಯಲ್ಲಿ ಪಾಲುಗೊಂಡ ಶಿಬಾವೊನ `ರಿಮೆಂಬೆರೆನ್ಸ್’ ಎಂಬ ಕಾದಂಬರಿಯನ್ನು ಆಧರಿಸಿದೆ. ಚಿತ್ರದ ಕಥಾ ಚೌಕಟ್ಟು ತೀರ ಸರಳ. ಪಟ್ಟಣದಲ್ಲಿ ಮೃತನಾದ ತಂದೆಯ ಪಾರ್ಥಿವ ಶರೀರವನ್ನು ತರಲು ತಾಯಿಯೊಡ್ಡುವ ಷರತ್ತನ್ನು ಸ್ವೀಕರಿಸುವ ಮಗ ತನ್ನ ತಂದೆ ತಾಯಿಯರ ಮದುವೆಗೆ ಮುಂಚಿನ ಪ್ರೇಮ ಪ್ರಕರಣವನ್ನು ನಿರೂಪಿಸುತ್ತಾನೆ. ಅದೇ ಇಪ್ಪತ್ತರ ಗಂಡು ಮತ್ತು ಹದಿನೆಂಟರ ಹೆಣ್ಣಿನ ಪ್ರೇಮವನ್ನು ಒಳಗೊಂಡಿದ್ದು. ಶಾಲಾ ಕಟ್ಟಡವೇ ಇರದ ಹಳ್ಳಿಯೊಂದಕ್ಕೆ ಶಿಕ್ಷಕನಾಗಿ ಬರುವ ಇಪ್ಪತ್ತರ ಹರೆಯದ ಲುವೊ ಚಾಂಗ್ರುನಲ್ಲಿ ಅಲ್ಲಿನ ಹದಿನೆಂಟರ ಹುಡುಗಿ ಯಾದ್ ದಿ ಅನುರಕ್ತಳಾಗುತ್ತಾಳೆ. ಹಂತ ಹಂತವಾಗಿ ಪ್ರೇಮದ ತೀವ್ರತೆಗೆ ಒಳಗಾಗುವ ಅವಳು ಅವನಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಗಳಿಸಲು ಸಮರ್ಥಳಾಗುತ್ತಾಳೆ. ತನ್ನ ಜೀವನದ ಎಲ್ಲ ಗಳಿಕೆಯನ್ನು ಹೊಸ ಶಾಲಾ ಕಟ್ಟಡಕ್ಕೆ ದೇಣಿಗೆಯಾಗಿ ಕೊಡುವ ತಾಯಿಯ ಆಶಯವನ್ನು ಮಗ ಪೂರೈಸುತ್ತಾನೆ.

ಇದಿಷ್ಟು ಕಥೆಯ ಎಳೆಯನ್ನು ದೃಶ್ಯ ಮಾಧ್ಯಮಕ್ಕೆ ಪರಿವರ್ತಿಸಬೇಕಾದಾಗ ಚಿತ್ರಕಥೆ ಅದರ ಜೀವಾಳವಾಗುತ್ತದೆ. ಭಾಷೆಯನ್ನು ಅವಲಂಬಿತ ಕಾದಂಬರಿಯಲ್ಲಿ ಅನೇಕ ರೀತಿಯ ಸ್ವಾತಂತ್ರ್ಯಗಳಿರಲು ಸಾಧ್ಯ. ಭಾಷೆಯಲ್ಲಿ ಪಾತ್ರಗಳ ಭಾವ ಪ್ರಪಂಚದ ಅಭಿವ್ಯಕ್ತಿಗೆ ರೂಪಕಗಳು, ಸಂಕೇತಗಳು ಮತ್ತು ಭಾಷಾ ಸಾಮರ್ಥ್ಯ ಕಾದಂಬರಿಕಾರನ ಪ್ರತಿಭೆಯ ಮಟ್ಟವನ್ನು ಅವಲಂಬಿಸಿರುತ್ತದೆ. ಆದರೆ ದೃಶ್ಯ ಮಾಧ್ಯಮದಲ್ಲಿ ಭಾಷೆ ಒಂದಂಶ ಮಾತ್ರ. ಮುಖ್ಯವಾದ ಇನ್ನಿತರ ಪರಿಕರಗಳಲ್ಲಿ ಸಾಮಾನ್ಯವಾಗಿ ಚಿತ್ರಕಥೆ ಪ್ರಮುಖ. ಉಳಿದಂತೆ ನಟನೆ ಛಾಯಾಗ್ರಹಣದ ಜೊತೆಯಲ್ಲಿ ಸಂಕಲನ ಮತ್ತು ಹಿನ್ನೆಲೆ ಸಂಗೀತ ಜೊತೆಗೂಡುತ್ತವೆ. ನಿದೇಶಕನ ಸಾಮರ್ಥ್ಯ ಇವೆಲ್ಲವನ್ನು ತನ್ನ ಪರಿಕಲ್ಪನೆಗೆ ಅನುಸಾರವಾಗಿ, ಉದ್ದೇಶ ಈಡೇರಿಕೆಗಾಗಿ ಬಳಸಿಕೊಳ್ಳುವಂತಿರಬೇಕು. ಚಿತ್ರಕಥೆಯ ರಚನೆಯಲ್ಲಿ ನಿರ್ದೇಶಕ ಯಾಂಗ್ ಇಮೋವು ಜೊತೆಗೆ ಕಾದಂಬರಿಕಾರ ಪಾಲ್ಗೊಂಡಿರುವುದು ಗಮನಿಸಬೇಕಾದ ಅಂಶ.

ಹಳ್ಳಿಗೆ ಹಿಂತಿರುಗಿ ಬಂದಿರುವ ಮಗ ಲು ಚಾಂಗ್ರು ಅಲ್ಲಿನ ಹಿರಿಯರ ಜೊತೆ ಸಂಭಾಷಿಸುವ ಕಪ್ಪು-ಬಿಳುಪು ದೃಶ್ಯದೊಂದಿಗೆ ಚಿತ್ರ ಪ್ರಾರಂಭವಾಗುತ್ತಿದ್ದಂತೆ ನಮಗೆ ನೋಡುವುದನ್ನು ಮುಂದುವರಿಸುವುದರ ಬಗ್ಗೆ ಉತ್ಸಾಹ ಕಡಿಮೆಯಾಗುತ್ತದೆ. ಅವನು ಕೊರೆಯುವ ಚಳಿಯಲ್ಲಿ ಕುಳಿತ ತಾಯಿಯನ್ನು ಮನೆಗೆ ಕರೆತಂದು ತಂದೆಯ ಪಾರ್ಥಿವ ಶರೀರವನ್ನು÷ತರುವುದರ ಬಗ್ಗೆ ತಾಯಿಯ ಜೊತೆ ಚರ್ಚಿಸುವ ಭಾವಸಾಂದ್ರತೆಯ ದೃಶ್ಯದಲ್ಲಿ ಕೂಡ ಅವರಿಬ್ಬರ ಮುಖಗಳಲ್ಲಿ ಭಾವಾತಿರೇಕದ ಸೋಂಕಿರುವುದಿಲ್ಲ. ನಲವತ್ತು ವರ್ಷಗಳ ಕಾಲ ಹಳ್ಳಿಯ ಮಕ್ಕಳಿಗೆ ಪಾಠ ಹೇಳಿದ್ದರಿಂದ ಒಂದು ರೀತಿಯಲ್ಲಿ ಋಣ ಪೂರೈಕೆಗಾಗಿ ಅವನ ಶರೀರವನ್ನು ಊರಿನವರು ಹೊತ್ತು ತರಬೇಕೆಂದು ಆಕೆ ಒತ್ತಾಯಿಸುತ್ತಾಳೆ. ಹಳ್ಳಿಯ ಯಜಮಾನನೊಂದಿಗೆ ಚರ್ಚಿಸಿ ಅದಕ್ಕಾಗಿ ತಗಲುವ ವೆಚ್ಚ ಕೊಟ್ಟು ವ್ಯವಸ್ಥೆ ಮಾಡಲು ಹೇಳುತ್ತಾನೆ. ಅನಂತರ ಫ್ಲಾಷ್ ಬ್ಯಾಕ್‌ನಲ್ಲಿ ತಂದೆ-ತಾಯಿಯ ಪ್ರೇಮ ವೃತ್ತಾಂತವನ್ನು ಮಗನ ನಿರೂಪಣೆಯಲ್ಲಿ ಕಾಣುತ್ತೇವೆ.

ಹಳ್ಳಯಾಚೆಯ ಉದ್ದಾನುದ್ದ ನೇರವಲ್ಲದ ಮಣ್ಣಿನ ರಸ್ತೆಯಲ್ಲಿ ಕಣ್ಣಳತೆಗೂ ಹಬ್ಬಿದ ವಿಸ್ತಾರದಲ್ಲಿ ದೂರದ ಗಾಡಿಯಲ್ಲಿ ಬರುವ ಶಾಲಾ ಶಿಕ್ಷಕ ಲು ಚಾಂಗ್ರು ಮತ್ತು ಮುನ್ನೆಲೆಯಲ್ಲಿ(ಫೋರ್ ಗ್ರೌಂಡ್) ಯಾದ್ ದಿಯನ್ನು ಕಾಣುವ ಮೊದಲ ದೃಶ್ಯದಲ್ಲಿಯೇ ನಮ್ಮ ಮುಂಚಿನ ಅಭಿಪ್ರಾಯ ಬುಡಮೇಲಾಗುತ್ತದೆ. ಊರಿಗೆ ಬಂದ ದಿನವೇ ನಾಯಕ-ನಾಯಕಿಯರ ನೋಟ ಸಂಪರ್ಕವಾಗುವುದಾದರೂ ಅದು ಕೇವಲ ಕುತೂಹಲ ಮಟ್ಟದಲ್ಲಿರುತ್ತದೆ. ಇದು ಪ್ರೇಮಾಂಕುರದ ಹಂತ ತಲುಪಲು ಇಡೀ ಚಿತ್ರದಲ್ಲಿ ಕೇವಲ ಮೂರು ಹೆಚ್ಚಿ ವಿಸ್ತಾರದ ಘಟನೆಗಳ ಮೂಲಕ ನಿರ್ದೇಶಕ ನಮಗೆ ಮನದಟ್ಟು ಮಾಡುತ್ತಾನೆ. ದೃಶ್ಯ ಸಂಯೋಜನೆಯಲ್ಲಿ ಊರಾಚೆ ಸಮೃದ್ಧವಾಗಿರುವ ಮರ, ಗಿಡ, ಬಳ್ಳಿ; ಉದ್ದದ ಏಳುಬೀಳು ರಸ್ತೆ, ಸ್ಕೂಲ್ ಕಟ್ಟಡ, ನೀರು ಸೇದುವ ಬಾವಿ ಇವುಗಳನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡಿದ್ದಾನೆ. ಇವಿಷ್ಟೂ ಪೂರಕ ಸಂಗತಿಗಳಾದರೆ ಚಿತ್ರದ ಮುಕ್ಕಾಲು ಭಾಗವನ್ನು ಆಕ್ರಮಿಸಿಕೊಳ್ಳುವ ನಾಯಕಿಯ ಬೆರಗುಗೊಳಿಸುವ ಅಭಿನಯದ ಸಾಮರ್ಥ್ಯ. ಓರೆಗಣ್ಣಿನ ನೋಟ, ಸಂತೋಷಕ್ಕೆ ರೆಪ್ಪೆಯಂಚುಗಳು ಚಲಿಸುವ ಪರಿ, ಕಾತರ, ದುಗುಡ, ದುಮ್ಮಾನಕ್ಕೆ ಕಣ್ಣು ಗುಡ್ಡೆಗಳು ಅರೆಕ್ಷಣ ಹೆಚ್ಚಾಗಿ ಅಲುಗದೆ ನಿಲ್ಲುವ ರೀತಿ ಇವೆಲ್ಲವುಗಳನ್ನು ಸನ್ನಿವೇಶ ಮತ್ತು ಅಗತ್ಯದ ಅವಧಿಗೆ ತಕ್ಕಂತೆ ಹತ್ತಿರ ದೃಶ್ಯಗಳನ್ನು ಯುಕ್ತವಾಗಿ ಒಗ್ಗೂಡಿಸಿದ್ದಾನೆ ನಿರ್ದೇಶಕ ಯಾಂಗ್ ಇಮಾವು. ನಾಯಕನ ಪಾತ್ರ ಅಲ್ಲಲ್ಲಿ ಅಗತ್ಯಕ್ಕೆ ತಕ್ಕ ಹಾಗೆ ಪೋಷಕವಾಗಿರುವುದಷ್ಟಕ್ಕೆ ಸೀಮಿತವಾಗಿ ಕಂಡುಬರುತ್ತದೆ.

ಪಟ್ಟಣದಲ್ಲಿ ಮೃತನಾದ ತಂದೆಯ ಪಾರ್ಥಿವ ಶರೀರವನ್ನು ತರಲು ತಾಯಿಯೊಡ್ಡುವ ಷರತ್ತನ್ನು ಸ್ವೀಕರಿಸುವ ಮಗ ತನ್ನ ತಂದೆ ತಾಯಿಯರ ಮದುವೆಗೆ ಮುಂಚಿನ ಪ್ರೇಮ ಪ್ರಕರಣವನ್ನು ನಿರೂಪಿಸುತ್ತಾನೆ. ಅದೇ ಇಪ್ಪತ್ತರ ಗಂಡು ಮತ್ತು ಹದಿನೆಂಟರ ಹೆಣ್ಣಿನ ಪ್ರೇಮವನ್ನು ಒಳಗೊಂಡಿದ್ದು. ಶಾಲಾ ಕಟ್ಟಡವೇ ಇರದ ಹಳ್ಳಿಯೊಂದಕ್ಕೆ ಶಿಕ್ಷಕನಾಗಿ ಬರುವ ಇಪ್ಪತ್ತರ ಹರೆಯದ ಲುವೊ ಚಾಂಗ್ರುನಲ್ಲಿ ಅಲ್ಲಿನ ಹದಿನೆಂಟರ ಹುಡುಗಿ ಯಾದ್ ದಿ ಅನುರಕ್ತಳಾಗುತ್ತಾಳೆ.

ಹಳ್ಳಿಯಲ್ಲಿ ಶಾಲೆಗೆಂದು ಕಟ್ಟಡವೇ ಇರದೆ ಶಿಕ್ಷಕನನ್ನೂ ಸೇರಿದಂತೆ ಊರಿನ ಗಂಡಸರೆಲ್ಲ ಸೇರಿ ಕಟ್ಟಡ ಕಟ್ಟುವ ಕೆಲಸದಲ್ಲಿ ತೊಡಗುತ್ತಾರೆ. ಕಟ್ಟಿದ ಕಟ್ಟಡದಲ್ಲಿ ಕೆಂಪು ವಸ್ತ್ರವನ್ನು ಕಟ್ಟುವುದು ಅಲ್ಲಿನ ಸಂಪ್ರದಾಯ. ಹಳ್ಳಿಯಲ್ಲಿನ ಅತ್ಯಂತ ಚೆಲುವೆಯಾದ ನಾಯಕಿಗೆ ಅದನ್ನು ಸಿದ್ಧಪಡಿಸಲು ಒದಗುತ್ತದೆ. ಅವಳು ಅದರಲ್ಲಿ ಉತ್ಸಾಹದಿಂದ ತೊಡಗುತ್ತಾಳೆ. ಕಟ್ಟುವ ಕಟ್ಟಡದ ಬಳಿ ಇರುವ ಬಾವಿಯಿಂದ ನೀರಿಗಾಗಿ ಬರುವ ನಾಯಕಿಯ ಕಣ್ಣು ಸಾಕಷ್ಟು ದೂರದಲ್ಲಿರುವ ನಾಯಕನನ್ನು ಹುಡುಕುತ್ತದೆ. ನಾಯಕನಿಗೂ ಅಷ್ಟೇ ಅಪೇಕ್ಷೆ ಇದ್ದರೂ ಅದು ಕೈಗೂಡಲು ನಾಯಕನ ಸಹಾಯಕನಿಂದ ಅಡಚಣೆ ಉಂಟಾಗುತ್ತದೆ. ಅಲ್ಲಿನ ಪದ್ಧತಿಯಂತೆ ಕೆಲಸಮಾಡುತ್ತಿರುವವರ ಊಟಕ್ಕಾಗಿ ಪ್ರತಿಯೊಂದು ಮನೆಯವರು ಮಾಡಿದ ಅಡುಗೆಯನ್ನು ಪಿಂಗಾಣಿ ಪಾತ್ರೆಗಳಲ್ಲಿ ಅಲ್ಲಿ ಮರದ ಬೆಂಚಿನಂತಿರುವುದರ ಮೇಲೆ ತಂದಿಡುತ್ತಾರೆ. ಕಟ್ಟಡ ಕೆಲಸದವರು ಅನಂತರ ಬಂದು ಹಳ್ಳಿಯ ಹೆಣ್ಣು ಮಕ್ಕಳು ನೋಡುತ್ತ ನಿಂತಿರುವಂತೆ ಅವುಗಳಲ್ಲೊಂದನ್ನು ತೆಗೆದುಕೊಂಡು ಹೋಗುತ್ತಾರೆ. ತನ್ನ ಆಸಕ್ತಿಗೆ ಪಾತ್ರನಾದ ಚಾಂಗ್ರುಗಾಗಿ ಯಾದ್ ದಿ ತಿನಿಸುಗಳನ್ನು ಸಿದ್ಧಪಡಿಸುವ ಅನೇಕ ದೃಶ್ಯಗಳಿವೆ. ಪದಾರ್ಥ ಮತ್ತು ನಾಯಕಿ ಇಬ್ಬರನ್ನೂ ಸರಿಸಮನಾಗಿ ಸಮೀಪದಿಂದ (ಕ್ಲೊಸಪ್‌ನಲ್ಲಿ) ಚಿತ್ರಿಸುವುದರ ಮೂಲಕ ಸಂತೋಷ ಹಾಗು ನಿರೀಕ್ಷೆ ಬೆರೆತ ಅವಳ ಅಂತರಂಗವನ್ನು ಬಿಂಬಿಸುತ್ತಾನೆ. ಅವುಗಳನ್ನು ಅಲ್ಲಿಗೆ ಹೋಗಿ ಇಡುವುದರ ಜೊತೆಗೆ ಬೇಕಾದವನಿಗೆ ತಲುಪಿತೇ ಇಲ್ಲವೇ ಎಂದು ಕಾತರಿಸುತ್ತಾಳೆ ಯಾದ್ ದಿ.

ನಾಯಕಿ ನೇಯ್ಗೆ ಮಾಡಿದ ಕೆಂಪು ವಸ್ತ್ರವನ್ನು ಶಾಲಾ ಕಟ್ಟಡದಲ್ಲಿ ಕಟ್ಟಲಾಗುತ್ತದೆ. ಈ ಎಲ್ಲ ಘಟನೆಗಳು ಜರುಗಿದರೂ ಒಮ್ಮೆಯೂ ನಾಯಕ-ನಾಯಕಿಯರ ಮುಖಾಮುಖಿಯಾಗಿರುವುದಿಲ್ಲ. ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವುದರಿಂದ ಉಂಟಾಗುವ ಕಲರವವನ್ನು ಮನೆಯಲ್ಲಿರುವ ನಾಯಕಿ ತನ್ನಜ್ಜಿಯ ಜೊತೆಗೆ ಕೇಳಿಸಿಕೊಳ್ಳುತ್ತ ತನ್ನಷ್ಟಕ್ಕೆ ಸಂಭ್ರಮಿಸುತ್ತಾಳೆ. ಶಿಕ್ಷಕ ನಾಯಕನಿಗೆ ಪ್ರತಿದಿನ ಮಕ್ಕಳ ಜೊತೆ ಊರಾಚೆ ಓಡಾಡುವುದು ವಾಡಿಕೆ. ಅವನು ಹೀಗೆ ಮಾಡುವುದನ್ನು ನಿರೀಕ್ಷೆಯಿಂದ ಕಾಯುವ ಆತಂಕ, ಲಜ್ಜೆ ಸಂತೋಷ ಇವುಗಳನ್ನು ಒಳಗೊಂಡ ನಾಯಕಿಗೆ ನಾಯಕನ ಪ್ರಥಮ ಭೇಟಿಯಾಗುತ್ತದೆ. ನಿರ್ದೇಶಕ ನಾಯಕಿಯ ಈ ಎಲ್ಲ ಭಾವಗಳನ್ನು ಪ್ರತ್ಯೇಕವಾಗಿ ದಾಖಲಿಸುತ್ತಾನೆ. ಆಗಷ್ಟೆ ನಾಯಕನಿಗೆ ನಾಯಕಿಯ ಹೆಸರು ಗೊತ್ತಾಗುತ್ತದೆ. ಊಟಕ್ಕೆಂದು ಯಾದ್ ದಿ ಮನೆಗೆ ಚಾಂಗ್ರು ಬರುವ ಮುಂಚಿನ ಅಡುಗೆಯ ಸನ್ನಿವೇಶ ಸಾಕಷ್ಟು ವಿಸ್ತಾರವಾಗಿದೆ. ಅಜ್ಜಿಯಿಂದ ಅವನಿಗಿನ್ನೂ ಮದುವೆಯಾಗಿಲ್ಲ ಮತ್ತು ಗೊತ್ತಾಗಿಲ್ಲ ಎನ್ನುವ ಸಂಗತಿ ನಾಯಕಿಗೆ ತಿಳಿದಾಗಲೇ ನಮಗೂ ತಿಳಿಯುತ್ತದೆ.

ನಾಯಕ ತನ್ನೊಡನೆ ಮಾತನಾಡಲು ಕರೆದಾಗ ಪುಟಿದು ಬರುವ ನಾಯಕಿಗೆ ತಾನು ಒಂದಷ್ಟು ದಿನ ಪಟ್ಟಣ್ಣಕ್ಕೆ ಹೋಗಿ ನಿಗದಿತ ದಿನದೊಳಗೆ ಬರುವುದಾಗಿ ತಿಳಿಸುತ್ತಾನೆ. ಅವನು ಹೋಗುವ ಮುಂಚೆ ಅವಳು ಸದಾ ತೊಡುವ ಕೆಂಪು ಜರ್ಕಿನ್‌ಗೆ ಹೊಂದುವಂತೆ ಕೆಂಪು ಹೇರ್ ಕ್ಲಿಪ್ ಕೊಡುತ್ತಾನೆ. ಅದನ್ನು ತೊಟ್ಟು ಸಂಭ್ರಮಿಸುವ ಅವಳು ಅವನು ಊರಿಗೆ ಹೋಗುವ ದಿನ ತಯಾರಿಸಿದ ಅವನ ಮೆಚ್ಚುಗೆಯ ತಿನಿಸನ್ನು ಓಡೋಡಿ ಹೋಗಿ ಕೊಡಲು ಇನ್ನಿಲ್ಲದಷ್ಟು ಶ್ರಮಿಸುತ್ತಾಳೆ. ಆದರೆ ಸಾಧ್ಯವಾಗುವುದಿಲ್ಲ. ಅದನ್ನು ತೆಗೆದುಕೊಂಡು ಹೋಗಿದ್ದ ಪಿಂಗಾಣಿ ಬೋಗುಣಿಯೂ ಅವಳು ಬಿದ್ದಾಗ ತುಂಡಾಗುತ್ತದೆ ಮತ್ತು ಹೇರ್ ಕ್ಲಿಪ್ ಕಳೆದು ಹೋಗುತ್ತದೆ. ನಾಯಕಿಗೆ ವಿಷಾದ ಮುತ್ತುತ್ತದೆ. ಅಜ್ಜಿ ರಿಪೇರಿಯವನಿಂದ ಬೋಗುಣಿಯನ್ನು ಸರಿಪಡಿಸಲು ಪ್ರಯತ್ನಿಸುವುದು ರಿಪೇರಿಯವನಿಗೆ ಅಸಂಗತವಾಗಿ ಕಾಣುತ್ತದೆ. ಕಳೆದಿದ್ದ ಹೇರ್ ಕ್ಲಿಪ್ ಮನೆಯ ಗೇಟಿನ ಬಳಿಯೇ ಸಿಗುತ್ತದೆ. ಒಮ್ಮೆ ಮಕ್ಕಳು ಮಗ್ಗಿ ಹೇಳುವುದು ಕೇಳಿಸಿದಂತಾಗಿ ಅವನು ಬಂದನೆಂದು ಭ್ರಮಿಸುತ್ತಾಳೆ. ಅನಂತರ ತನ್ನ ಪ್ರೀತಿಯ ಭಾಗವಾದ ಶಾಲೆಯ ಒಳ ಭಾಗವನ್ನು ಸಿಂಗರಿಸುತ್ತಾಳೆ.

ನಿಗದಿತ ದಿನ ನಾಯಕ ಹಿಂತಿರುಗುವುದಿಲ್ಲ. ನಾಯಕಿಗೆ ಅತೀವ ಆತಂಕವಾಗುತ್ತದೆ. ಅವನ ಇಷ್ಟದ ತಿನಿಸು ಮಾಡಿ ಕಟ್ಟಿಕೊಂಡು ಸಂಜೆಯ ಸುರಿಯುವ ಮಂಜಿನಲ್ಲೆ ಹೊರಟು ಬಿಡುತ್ತಾಳೆ. ಮಧ್ಯೆ ದಾರಿಯಲ್ಲಿ ಕುಸಿದು ಬಿದ್ದ ಅವಳು ಬದುಕುಳಿದಿದ್ದು ಪ್ರೇಮದ ಕಾರಣದಿಂದ ಎಂದು ಅವಳಿಗೆ ಶುಶ್ರೂಷೆ ಮಾಡಿದವರು ಅಭಿಪ್ರಾಯಪಡುತ್ತಾರೆ. ಶಕ್ತಿಯುಡುಗಿ ಮಲಗಿದ್ದ ಅವಳಿಗೆ ಎಚ್ಚರವಾದಾಗ ಶಾಲೆಯ ಆವರಣದಿಂದ ಸದ್ದು ಕೇಳಿ ಎದ್ದು ಬೀಳುವಳೇನೋ ಎನ್ನುವಂತೆ ಅತ್ತ ಧಾವಿಸುತ್ತಾಳೆ. ಅವಳು ಬಂದದ್ದನ್ನು ಅಲ್ಲಿ ನೆರೆದಿದ್ದವರೆಲ್ಲ ನಾಯಕನಿಗೆ ಕೂಗಿ ತಿಳಿಸುತ್ತಾರೆ.

ಇದಿಷ್ಟು ಫ್ಲಾಷ್ ಬ್ಯಾಕ್‌ನ ನಂತರ ಕಾಫಿನ್ ಹೊತ್ತು ತರುತ್ತಿರುವವರ ಜೊತೆ ಒಂದು ಗುಂಪನ್ನೂ ಕಾಣುತ್ತೇವೆ. ಮಧ್ಯದಲ್ಲಿ ಶವವನ್ನು ಸಾಗಿಸುವ ವೆಚ್ಚಕ್ಕಾಗಿ ಪಡೆದಿದ್ದ ಹಣವನ್ನು ಹಳ್ಳಿಯ ಮುಖ್ಯಸ್ಥ ಹೊತ್ತು ತರುತ್ತಿರುವವರು ನಾಯಕನ ಹಳೆಯ ವಿದ್ಯಾರ್ಥಿಗಳೆಂದು ತಿಳಿಸಿ ಅದನ್ನು ಹಿಂದಿರುಗಿಸುತ್ತಾನೆ. ಪಟ್ಟಣಕ್ಕೆ ಬರಲು ಮಗನ ಕೋರಿಕೆಯನ್ನು ನಿರಾಕರಿಸಿ ಸತ್ತ ನಂತರ ಅವನ ಪಕ್ಕದಲ್ಲಿ ಹೂಳಬೇಕೆಂದು ಹೇಳುತ್ತಾಳೆ. ತಂದೆಗಾಗಿ ಒಂದು ದಿನದ ಮಟ್ಟಿಗಾದರೂ ಅಲ್ಲಿನ ಮಕ್ಕಳಿಗೆ ಪಾಠ ಹೇಳಬೇಕೆನ್ನುವ ತಾಯಿಯ ಅಭಿಲಾಷೆಯನ್ನು ಮಗ ಪೂರೈಸುತ್ತಾನೆ.

ಯಾವುದೇ ರೀತಿಯ ತಾಂತ್ರಿಕ ಅಥವಾ ಇನ್ನಿತರ ರೋಚಕ ಅಂಶಗಳನ್ನು ಬಳಸದೆ ಭಾಷೆಯ ಮಿತಿಯನ್ನು ಮೀರಿ ಒಂದು ಸುಂದರ ದೃಶ್ಯ ಕಾವ್ಯವನ್ನು ಪ್ರಸ್ತುತಪಡಿಸುವ ನಿರ್ದೇಶಕ ಯಾಂಗ್ ಇಮೋವುನ ಶ್ರಮ ಸಕಲ ರೀತಿಯಿಂದಲೂ ಸಾರ್ಥಕವಾಗಿದೆ ಎಂದು ಮೆಚ್ಚುಗೆಯಿಂದ ತಲೆದೂಗಬೇಕು.