ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತೆರೆ ಕಂಡ ಆರ್. ಕೆ. ನಾರಾಯಣ್ ರವರ ಕಾದಂಬರಿ ಆಧಾರಿತ ಸಿನೆಮಾ ‘ಗೈಡ್’ ಭರ್ಜರಿ ಯಶಸ್ಸೇನೋ ಕಂಡಿತು, ಆದರೆ ಪಾತ್ರಗಳ ಆಶಯ, ಹುನ್ನಾರ ಎಲ್ಲವು ಕಾದಂಬರಿಯ ಚಿತ್ರಣದಿಂದ ದೂರ ಅತಿ ದೂರ. ಆರ್.ಕೆ. ನಾರಾಯಣ್ ಗೆ ಬಲು ಬೇಸರ ತಂದ ಸಿನೆಮಾ. ದೀರ್ಘ ಕಾಲದ ಪೂರ್ವ ತಯ್ಯಾರಿಗೆ ಒತ್ತು ಕೊಡುವ ಮೀರಾ ತಮ್ಮ ಬೇಕು ಬೇಡಗಳನ್ನು ಸ್ಪಷ್ಟವಾಗಿ ಅಭಿವ್ಯಕ್ತಗೊಳಿಸುವುದರಿಂದಲೋ ಏನೋ ಝುಂಪಾ ಲಹಿರಿ, ಮೋಷಿನ್ ಹಮೀದ್, ಟಿಮ್ ಕ್ರೋದರ್ಸ್, ವಿಕ್ರಂ ಸೇಠ್ ಮೊದಲಾದ ಕತೆಗಾರರೊಂದಿಗೆ ಐಡಿಯಾಲಜಿಗಳ ತಾಕಲಾಟಗಳಿಲ್ಲದೆ ಕೆಲಸ ಮಾಡಿದ್ದಾರೆ.
ವಲಸೆ ಹಕ್ಕಿ ಬರೆದ ಲೇಖನ

 

ವಿಕ್ರಮ ಸೇಠರ ಕಾದಂಬರಿ ‘ಅ ಸೂಟಬಲ್ ಬಾಯ್’ 1993ರಲ್ಲಿ ಪ್ರಕಾಶನಗೊಳ್ಳುವ ಮುನ್ನವೇ ಹಲವಾರು ಕಾರಣಗಳಿಂದ ಚರ್ಚೆಗೆ ಗ್ರಾಸವಾಗಿತ್ತು. ಕಾದಂಬರಿಯ ಉದ್ದ, ಸಟಾನಿಕ್ ವರ್ಸೆಸ್ ಬರೆದ ಸಲ್ಮಾನ್ ರಷ್ದಿಗೂ ಕೊಡದಂತಹ ದೊಡ್ಡ ಮೊತ್ತವನ್ನು ಮುಂಗಡವಾಗಿ ಕೊಟ್ಟು ನಾಮುಂದು ತಾಮುಂದು ಎಂದು ಹಸ್ತಪ್ರತಿಗಾಗಿ ಹಪಹಪಿಸುವ ಅಂತಾರಾಷ್ಟ್ರೀಯ ಪ್ರಕಾಶಕರು, ಬಾಬ್ರಿ ಮಸ್ಜಿದ್ ವಿವಾದ ಕನಲಿ ಕೆಂಡವಾದ ಹೊತ್ತಿನಲ್ಲಿ ಮತ್ತೆ ಹಿಂದೂ ಮುಸ್ಲಿಂ ಕೋಮುವಾದದ ಹಿನ್ನೆಲೆ ಹೊತ್ತು ಅರಳುವ ಕಥಾ ಹಂದರ. ಹೀಗೆ ಹತ್ತು ಹಲವಾರು ಕಾರಣಗಳು. ಈ ಎಲ್ಲ ಕಾರಣಗಳ ಹುಟ್ಟಿಗೆ ಕಾರಣವಾದ ಮುಖ್ಯ ಕಾರಣ ಏನಪ್ಪಾ ಅಂದರೆ ಬಗಲಿಗೆ ಜೋಳಿಗೆ ಜೋಡಿಸಿಕೊಂಡು ಜೋಲು ಮುಖ ಹೊತ್ತು ತಿರುಗುವ ಬರಹಗಾರರ ಇಮೇಜನ್ನು ಧೂಳಿಪಟ ಮಾಡಿ ವಿಕ್ರಂ ಬಳಿ ಮುಂಗಡ ಗೌರವಧನವಾಗಿ ಬಂದ ಮಿಲಿಯನ್ ಡಾಲರ್ ಮಿಣಮಿಣ ಕಾಂಚಾಣ!

ನಿರ್ಭಿಡೆಯ ಮಾತು ಹಾಗು ಸ್ವಭಾವದ ಪ್ರಸಿದ್ಧ ಲೇಖಕ ಖುಷ್ವಂತ್ ಸಿಂಗ್, ವಿಕ್ರಂ ಗೆ ದೊರಕಿದ ಹಣದ ಹತ್ತನೇ ಒಂದು ಭಾಗದಷ್ಟು ಕೂಡ ನನ್ನ ಪುಸ್ತಕಗಳಿಗೆ ಎಂದೂ ದೊರಕಿಲ್ಲ. ಕಷ್ಟ ಪಟ್ಟು ಹೊಟ್ಟೆ ಕಿಚ್ಚು ತಡೆದುಕೊಂಡು ಭಾರತೀಯ ಲೇಖಕನೊಬ್ಬನಿಗೆ ಸಿಕ್ಕ ಮನ್ನಣೆ ಕಂಡು ಹೆಮ್ಮೆ ಪಡಲು ಪ್ರಯತ್ನಿಸುತ್ತಿರುವೆ ಎಂದು ಹೇಳಿಕೆ ಕೊಟ್ಟಿದ್ದರು.

ಪ್ರಕಟಣೆಯ ಮುಂಚಿನ ಭಾರಿ ಗಾತ್ರದ ಹೈಪಿಗೆ ಮೋಸವಾಗದಂತೆ ‘ಸೂಟಬಲ್ ಬಾಯ್’ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಗೆದ್ದು ತಿಂಗಳಾನುಗಟ್ಟಲೆ ಇಂಟರ್‌ ನ್ಯಾಷನಲ್ ಬೆಸ್ಟ್ ಸೆಲ್ಲರ್ ಸ್ಥಾನದಲ್ಲಿ ರಾರಾಜಿಸಿತು.

******

500 ರೂಪಾಯಿ ಕೊಟ್ಟು 1300 ಪುಟಗಳ ಸುದೀರ್ಘ ಕಾದಂಬರಿಯನ್ನು ಓದಲು ಹಿಂಜರಿಯುವ ಓದುಗನ ಅಳುಕನ್ನು ಅರ್ಥಮಾಡಿಕೊಂಡು ಯಾವ ಪುಸಲಾಯಿಸುವಿಕೆಯು ಇಲ್ಲದೆ ಚಿಕ್ಕ ಚೊಕ್ಕ ಪ್ರಾಸಬದ್ಧ ಸಾಲುಗಳಿಂದ ವಿಕ್ರಂ ಸೇಠ್ ಮುನ್ನುಡಿಯಲ್ಲಿ ಹೀಗೆ ಮನವಿ ಮಾಡುತ್ತಾರೆ.

“Buy me before good sense insists
You will strain your purse and sprain your wrist”

ಐವತ್ತರ ದಶಕದ ಮೊದಲ ಭಾಗದಲ್ಲಿ ತೆರೆದುಕೊಳ್ಳುವ ಕತೆ ಓದುಗರಿಗೆ ನಾಲ್ಕು ಅವಿಭಕ್ತ ಕುಟುಂಬಗಳ ಪರಿಚಯ ಮಾಡಿಸುತ್ತ ಶುರುವಾಗುತ್ತದೆ. ವಿಕ್ರಂಗೆ ಈ ಕಾದಂಬರಿಯನ್ನು ಬರೆಯಲು ಸುಮಾರು ಹತ್ತು ವರುಷಗಳ ಕಾಲ ತೆಗೆದುಕೊಂಡಿದ್ದಂತೆ! ಲೇಖಕನ ಮಿದುಳಲ್ಲಿ ಕುಳಿತು ಚನ್ನಾಗಿ ಕಳಿತ ಪಾತ್ರಗಳು ಯಾವುದೇ ತಾರಾತುರಿಯಿಲ್ಲದೆ ಜೀವನ ಚದುರಂಗದ ಸವಾಲುಗಳನ್ನು ಬಿಡಿಸುತ್ತ, ಬೆದರುತ್ತಾ, ನಲಿಯುತ್ತ ಹೊಂದಾಣಿಕೆ ಮಾಡಿಕೊಳ್ಳುತ್ತ ಸಾಗುತ್ತವೆ. ಅತಿ ವಿಸ್ತಾರವಾದ ವಿವರಣೆಗಳು ಕೆಲವೆಡೆ ಬೋರು ಹೊಡೆಸಿದರು ಮತ್ತೆ ಕೆಲವೆಡೆ ರಸಗವಳದ ಸವಿಯ ಅನುಭೂತಿ ನೀಡುತ್ತವೆ.

ಕಲ್ಕತ್ತೆಯ ಬುದ್ಧಿಜೀವಿಗಳು, ವೇಶ್ಯೆಯರು, ರಾಜಕಾರಣಿಗಳು, ಅಸ್ಪೃಶ್ಯರು, ನೀರಸ ಬದುಕಿನ ಸಾಮಾನ್ಯರು ಹೀಗೆ ಸಮಾಜದ ವಿವಿಧ ಪದರಿನ ಜನರ ಜೊತೆ ವಿಕ್ರಮರ ಕಾದಂಬರಿ ಸವಿಸ್ತಾರವಾಗಿ ಅಂದಿನ ದೇಶ ಕಾಲಗಳ ಗತಿ ವಿಧಿಗಳಿಗೆ ಅನುಗುಣವಾಗಿ ವ್ಯವಹರಿಸುತ್ತದೆ. ತಕ್ಕ ವರನೊಂದಿಗೆ ಬದುಕು ಕಟ್ಟಿಕೊಳ್ಳುವ ಕಥಾ ನಾಯಕಿಯ ಪ್ರಯತ್ನ ಮತ್ತು ಪ್ರಪ್ರಥಮ ಸಾರ್ವತ್ರಿಕ ಚುನಾವಣೆಯ ಮೂಲಕ ತನ್ನದೇ ಆದ ಹಾದಿ ಕಂಡುಕೊಳ್ಳುವ ನವಭಾರತದ ಪ್ರಯಾಸವನ್ನು ಸಮಾನಾಂತರವಾಗಿ ಹೆಣಿದಿರುವುದು ವಿಕ್ರಮರ ಬರವಣಿಗೆಯ ಮೇಧಾವಿತನವನ್ನು ತೋರಿಸುತ್ತದೆ.

******

(ವಿಕ್ರಮ್‌ ಸೇಠ್)

ಹಲವಾರು ವರುಷಗಳ ಹಿಂದೆ ಹಾರಿಸಿ ಓಡಿಸಿ ಕೆಲ ಕಡೆ ಅತಿ ತನ್ಮಯತೆಯಿಂದ ಓದಿದ್ದ ಈ ಅತಿ ಉದ್ದದ ಕಾದಂಬರಿಯ ಪ್ರಸ್ತಾಪಕ್ಕೆ ಕಾರಣ ಇತ್ತೀಚಿಗೆ ಬಿಡುಗಡೆಯಾದ ಮೀರಾ ನಾಯರ್ ನಿರ್ದೇಶನದ ಅದೇ ಹೆಸರಿನ ಬ್ರಿಟಿಷ್ ಸೀರಿಯಲ್ ನಿಂದ.

ಕ್ರಾಸ್ ಕಲ್ಚರಲ್ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಆದಂತಹ ವಿಶಿಷ್ಟ ಛಾಪು ಮೂಡಿಸಿರುವ ಮೀರಾ ನಾಯರ್ ಪ್ರತಿಭಾವಂತೆ. ವಿದೇಶಗಳಲ್ಲಿ ತಮ್ಮ ದೇಸೀ ರಂಗನ್ನು ಪರಿಸ್ಥಿತಿಗೆ ಅನುಗುಣವಾಗಿ ಗಾಢ-ತೆಳ್ಳ ಮಾಡಿಕೊಳ್ಳುತ್ತಾ ಐಡೆಂಟಿಟಿ ಕ್ರೈಸಿಸ್ ನಿಂದ ಒದ್ದಾಡುವ ಭಾರತೀಯರ ತುಮುಲ ತಳಮಳಗಳನ್ನು ಸಮರ್ಥವಾಗಿ ತೆರೆಯ ಮೇಲೆ ತರುವ ನಿರ್ದೇಶಕಿ. ಮಿಸ್ಸಿಸಿಪ್ಪಿ ಮಸಾಲಾ, ನೇಮ್ ಸೇಕ್, ಸಲಾಂ ಬಾಂಬೆ, ಮಾನ್ಸೂನ್ ವೆಡ್ಡಿಂಗ್ ಇವರಿಗೆ ಜನಪ್ರಿಯತೆ ತಂದುಕೊಟ್ಟ ಸಿನೆಮಾಗಳು. ಒರಿಸ್ಸಾದಲ್ಲಿ ಹುಟ್ಟಿ ಬೆಳೆದ ಮೀರಾಗೆ ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಓದಲು ಬರುವ ತನಕವೂ ಬಾಲಿವುಡ್ ಸಿನಿಮಾಗಳ ಬಗ್ಗೆ ಸ್ವಲ್ಪವೂ ಒಲವಿರಲಿಲ್ಲವಂತೆ. ವಿದೇಶದಲ್ಲಿ ಓದುತ್ತಾ, ಕೆಲಸ ಮಾಡುತ್ತ, ಅವರಿಗೆ ಭಾರತೀಯ ಸಂಸ್ಕೃತಿ ಹಾಗು ಸಿನಿಮಾಗಳ ಆಕರ್ಷಣೆ ಹುಟ್ಟಿತಂತೆ. ಇತ್ತೀಚಿಗಂತೂ ಹೊಸ ಸಿನೆಮಾ ಪ್ರಾಜೆಕ್ಟಿನಲ್ಲಿ ತೊಡಗಿಕೊಳ್ಳುವ ಮೊದಲು ಕಡ್ಡಾಯವಾಗಿ ಗುರುದತ್, ಸತ್ಯಜಿತ್ ರೇ, ಋತ್ವಿಕ್ ಘಟಕರ ಸಿನೆಮಾಗಳನ್ನು ಪ್ರೇರಣೆ ಪಡೆಯಲು ನೋಡೇ ನೋಡುತ್ತಾರಂತೆ.

ತಕ್ಕ ವರನೊಂದಿಗೆ ಬದುಕು ಕಟ್ಟಿಕೊಳ್ಳುವ ಕಥಾ ನಾಯಕಿಯ ಪ್ರಯತ್ನ ಮತ್ತು ಪ್ರಪ್ರಥಮ ಸಾರ್ವತ್ರಿಕ ಚುನಾವಣೆಯ ಮೂಲಕ ತನ್ನದೇ ಆದ ಹಾದಿ ಕಂಡುಕೊಳ್ಳುವ ನವಭಾರತದ ಪ್ರಯಾಸವನ್ನು ಸಮಾನಾಂತರವಾಗಿ ಹೆಣಿದಿರುವುದು ವಿಕ್ರಮರ ಬರವಣಿಗೆಯ ಮೇಧಾವಿತನವನ್ನು ತೋರಿಸುತ್ತದೆ.

ವಿಕ್ರಮರ ಬರವಣಿಗೆಯ ಕಟ್ಟಾ ಅಭಿಮಾನಿಯಾಗಿರುವ ಮೀರಾ ಕಾದಂಬರಿಯ ಜೀವಾಳಕ್ಕೆ ಧಕ್ಕೆ ತರದಂತೆ ಬರಿಯ ಆರು ಘಂಟೆಗಳಲ್ಲಿ ಕತೆಯನ್ನು ಜಾಣ್ಮೆಯಿಂದ ಹಿಡಿದಿಟ್ಟಿದ್ದಾರೆ. ದೊಡ್ಡ ಕೃತಿಗಳ ಸಾರವನ್ನು ಸಂಕ್ಷಿಪ್ತವಾಗಿ ಹಿಡಿದಿಡುವುದು ಹರಸಾಹಸದ ಕೆಲಸ. ಕತೆಗಾರ ಸೃಷ್ಟಿಸಿದ ಪಾತ್ರ ಮತ್ತು ಘಟನೆಗಳ ಔಚಿತ್ಯಗಳ ‘ಬಿಗ್ ಪಿಕ್ಚರ್’ ತಲೆಯಲ್ಲಿಟ್ಟುಕೊಂಡೇ ಅವುಗಳ ವ್ಯಾಪ್ತಿಯನ್ನು ಸೀಮಿತಗೊಳಿಸಿ ದೃಶ್ಯ ಮಾಧ್ಯಮಕ್ಕೆ ಹೊಂದುವಂತೆ ಅಳವಡಿಸಬೇಕು. ಸೂಕ್ಷ್ಮಗ್ರಾಹಿಯಾದ ಕೆಲ ನಿರ್ದೇಶಕರಿಗೆ ಮಾತ್ರ ಇಂತಹ ಸಾಹಸದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಜನ ಮನ್ನಣೆ ಪಡೆದ ಕತೆ ಕಾದಂಬರಿಗಳನ್ನು ಆಧರಿಸಿ ಮಾಡಿದ ಕೆಲ ಸಿನಿಮಾಗಳು ಸಾರ ಹೀನವಾಗಿ ತೋರುವುದು ಇದೇ ಕಾರಣದಿಂದ. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತೆರೆ ಕಂಡ ಆರ್. ಕೆ. ನಾರಾಯಣ್ ರವರ ಕಾದಂಬರಿ ಆಧಾರಿತ ಸಿನೆಮಾ ‘ಗೈಡ್’ ಭರ್ಜರಿ ಯಶಸ್ಸೇನೋ ಕಂಡಿತು, ಆದರೆ ಪಾತ್ರಗಳ ಆಶಯ, ಹುನ್ನಾರ ಎಲ್ಲವು ಕಾದಂಬರಿಯ ಚಿತ್ರಣದಿಂದ ದೂರ ಅತಿ ದೂರ. ಆರ್.ಕೆ. ನಾರಾಯಣ್ ಗೆ ಬಲು ಬೇಸರ ತಂದ ಸಿನೆಮಾ. ದೀರ್ಘ ಕಾಲದ ಪೂರ್ವ ತಯ್ಯಾರಿಗೆ ಒತ್ತು ಕೊಡುವ ಮೀರಾ ತಮ್ಮ ಬೇಕು ಬೇಡಗಳನ್ನು ಸ್ಪಷ್ಟವಾಗಿ ಅಭಿವ್ಯಕ್ತಗೊಳಿಸುವುದರಿಂದಲೋ ಏನೋ ಝುಂಪಾ ಲಹಿರಿ, ಮೋಷಿನ್ ಹಮೀದ್, ಟಿಮ್ ಕ್ರೋದರ್ಸ್, ವಿಕ್ರಂ ಸೇಠ್ ಮೊದಲಾದ ಕತೆಗಾರರೊಂದಿಗೆ ಐಡಿಯಾಲಜಿಗಳ ತಾಕಲಾಟಗಳಿಲ್ಲದೆ ಕೆಲಸ ಮಾಡಿದ್ದಾರೆ.

ಮೀರಾ ನಾಯರ್ ನಿರ್ದೇಶನದ ಚುಕ್ಕಾಣಿ ಹಿಡಿಯುವ ಮೊದಲೇ, ‘ವಾರ್ ಅಂಡ್ ಪೀಸ್’, ‘ಲೆ ಮಿಸರಬಲ್’ ನಂತಹ ಬೃಹತ್ ಕೃತಿಗಳನ್ನು ಸಮರ್ಥವಾಗಿ ಕಿರುತೆರೆಗೆ ಅಳವಡಿಸಿದ ಸ್ಕ್ರೀನ್ ರೈಟರ್ ಆಂಡ್ರೂ ಡೇವಿಸ್ ಸೂಟಬಲ್ ಹುಡುಗನನ್ನು ಕಿರುತೆರೆಗಾಗಿ ರೆಡಿ ಮಾಡಿದ್ದರು. ಕಾದಂಬರಿಯನ್ನು ಶೋಧಿಸಿ ಜರಡಿ ಹಿಡಿಯುವ ಕಾರ್ಯದಲ್ಲಿ ಪ್ರೇಮ ಹಾಗು ಶೃಂಗಾರ ರಸಗಳನ್ನು ಮಾತ್ರ ಹರಿಯ ಬಿಟ್ಟ ಆಂಡ್ರೂ, ರಾಜಕೀಯ ವಿದ್ಯಾಮಾನಗಳ ವಿವರಗಳನ್ನು ಜರಡಿಯ ಕಸವಾಗಿ ಕಡೆಗಣಿಸಿದ್ದರು. ನವ ಭಾರತ ಮತ್ತು ನವ ತರುಣಿ ಲತಾಳ ‘ಕಮಿಂಗ್ ಟು ಏಜ್ ‘ ಕತೆಯ ಎಳೆಗಳು ಸಮಾನಾಂತರವಾಗಿ ಸಾಗುವುದನ್ನು ಉಪೇಕ್ಷಿಸಲು ಮೀರಾ ಒಪ್ಪಲಿಲ್ಲ. ಕಿರುತೆರೆಗಾಗಿ ತಯ್ಯಾರಾದ ಕತೆಯನ್ನು ಪುನಃ ವಿಕ್ರಂ ಸೇಠ್ ಸಲಹೆ ಸಹಕಾರಗಳೊಂದಿಗೆ ತಿದ್ದಿ ತೀಡಿದ ತರುವಾಯ ಚಿತ್ರೀಕರಣ ಶುರುವಾಯಿತು.

ತಕ್ಕ ವರನ ಆಯ್ಕೆಯ ಸುತ್ತವೇ ಗಿರಕಿ ಹೊಡೆಯುವ ‘ಪ್ರೈಡ್ ಅಂಡ್ ಪ್ರೆಡುಜಿಸ್’ ನಂತಹ ಪ್ರೇಮ ಕತೆಯಂತೆ ‘ಸೂಟಬಲ್ ಬಾಯ್’ ಸೀಮಿತವಾಗಿ ಮೂಡದಿರಲು ಮೀರಾ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಜೀತ ಪದ್ಧತಿಯ ನಿರ್ಮೂಲನೆಗೆ ಹೊರಟ ಜಮೀನ್ದಾರಿ ಅಬೋಲಿಷನ್ ಆಕ್ಟ್ ಪರಿಣಾಮಗಳು, ಕಲೋನಿಯಲ್ ಹ್ಯಾಂಗೊವರ್ ಕೈಬಿಡದವರಿಗೆ ಮುದ ನೀಡುವ ಆಂಗ್ಲ ಸಾಹಿತ್ಯ ಹಾಗು ಸಾಹಿತಿಗಳ ರೆಫರೆನ್ಸ್ ಗಳು, ಹಿಂದು ಮುಸ್ಲಿಮರ ದ್ವೇಷದ ದಳ್ಳುರಿಯಲ್ಲಿ ಸುಟ್ಟು ಕರಕಲಾಗಿ ಮತ್ತೆ ಫೀನಿಕ್ಸ್ ಪಕ್ಷಿಯಂತೆ ಬೆಂಕಿಯಲ್ಲೇ ಅರಳುವ ಸಹಚಾರತ್ವ, ಮಾನವೀಯತೆ ಇವೆಲ್ಲವನ್ನೂ ಪ್ರೇಮ ಕತೆಯ ಜೊತೆ ಜೊತೆಯಲ್ಲೇ ಪರಿಣಾಮಕಾರಿಯಾಗಿ ಅಳವಡಿಸಲಾಗಿದೆ. ತಾರಾಗಣದಲ್ಲಿ ತಬು, ಇಶಾನ್ ಖತ್ತರ್, ಶಹನ ಗೋಸ್ವಾಮಿ, ರಾಮ್ ಕಪೂರ್ ಮತ್ತು ಇತರರು ತಮಗೆ ದೊರೆತ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಚನ್ನಾಚಾರ ಎಲ್ಲ ಎಷ್ಟಾದರೂ ವೈಯುಕ್ತಿಕ ತಾನೇ! ಚಪ್ಪಾಳೆ ತಟ್ಟುವರ ಜೊತೆಗೆ ಮೂಗು ಮುರಿವವರು ಇರಲೇಬೇಕಲ್ಲ! ಲೋಕೋ ಭಿನ್ನೋ ರುಚಿಹಿ. ದೇಗುಲದ ಹಿನ್ನೆಲೆಯಲ್ಲಿ ಮುಸ್ಲಿಂ ಹುಡುಗನ ಜೊತೆ ನಾಯಕಿ ಲತಾಳ ಚುಂಬನ, ಪ್ರಾಣ ಸ್ನೇಹಿತರಾದ ಮಾನ್ ಮತ್ತು ಫಿರೋಜ್ ನಡುವಿನ ಸಲಿಂಗ ಕಾಮದ ಝಲಕ್, ಮನೆಯವರಿಗಿಂತ ಹೆಚ್ಚು ಹಚ್ಚಿಕೊಂಡ ಕಾದಂಬರಿಯ ಪಾತ್ರಗಳು ಹಾಗು ಉಪಕಥೆಗಳನ್ನು ಮೀರಾ ಸರಣಿಯಿಂದ ಕೈ ಬಿಟ್ಟಿದ್ದು ಇವೆಲ್ಲಾ ಹಲವು ನಿಷ್ಠಾವಂತ ಓದುಗರಿಗೆ ಮೊಸರಿನಲ್ಲಿ ಕಲ್ಲು ಸಿಕ್ಕಂತಹ ಅನುಭವ ನೀಡಿದೆ.

(ಮೀರಾ ನಾಯರ್)

ರಸಮಯ ಸಂಗೀತ

ಆರು ತಂತುಗಳ ಸರಣಿಯ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ ಸುಮಧುರವಾದ ಸಂಗೀತ. ಪಂಡಿತ್ ರವಿಶಂಕರ್ ಕರ್ತೃತ್ವದ ‘ಸುವರ್ಣ’ ಎಂಬ ರಾಗವನ್ನು ಆಧಾರವಾಗಿಟ್ಟುಕೊಂಡು, ಅನೌಷ್ಕ ಶಂಕರ್ ಮತ್ತು ಅಲೆಕ್ಸ್ ಹೆಫಿಸ್ ಜೊತೆಗೂಡಿ ಸಂಯೋಜಿಸಿದ ಶೀರ್ಷಿಕೆಯ ಟ್ರ್ಯಾಕ್ ಶ್ರೋತೃಗಳಿಗೆ ರೆಟ್ರೋ ಫೀಲ್ ನೀಡಿ ಐವತ್ತರ ದಶಕದಲ್ಲಿ ಕಳೆದುಹೋಗಲು ತಯ್ಯಾರು ಮಾಡುತ್ತದೆ. ಸರಣಿಯುದ್ದಕ್ಕೂ ಮೃದು ಮಧುರ ಭಾಷಿಣಿ ಲತಾಳ ಅಂತರಂಗ ಒಲವು ತುಂಬಿ ಮಿಡಿಯುವಾಗಲೆಲ್ಲ ಹಿನ್ನೆಲೆ ಸಂಗೀತದಲ್ಲಿ ಭಾವ ತುಂಬಿ ಹೊಮ್ಮುವ ಸಿತಾರ್ ಝೇಂಕಾರ. ಇದರ ಜೊತೆಗೆ ಪ್ರಸಿದ್ಧ ಗಾಯಕಿ ಕವಿತಾ ಸೇಠ್ ಕಂಠ ಹೊಮ್ಮಿಸುವ ಪ್ರಣಯದ ರಾಗ ತರಂಗಗಳಲ್ಲಿ ಮುಳುಗಿ ಎದ್ದು ನಳನಳಿಸುವ ಗಾಲಿಬ್ ಮತ್ತು ದಾಗ್ ದೆಹೆಲ್ವಿ ಸಾಹೇಬರ ಗಝಲ್ಗಳು… ವಿಖ್ಯಾತ ಸಿತಾರ್ ವಾದಕ ವಿಲಾಯತ್ ಖಾನರ ಸುಪುತ್ರ ಉಸ್ತಾದ್ ಸುಜಾತ್ ಖಾನ್ ಮೀರಾರ ಕೋರಿಕೆಯಂತೆ ಲೈವ್ ಆಗಿ ಸೆಟ್ಟಿಗೆ ಬಂದು ಸಿತಾರ್ ನುಡಿಸಿದ್ದಾರೆ. ಎಪ್ಪತ್ತು ವರುಷಗಳ ಹಿಂದಿನ ನೈಟ್ ಕ್ಲಬ್ಬುಗಳ ಕಲ್ಚರ್, ಅಲ್ಲಿ ನುಡಿಸುತ್ತಿದ್ದ ಹಿತ್ತಾಳೆ ವಾದ್ಯಗಳು, ಸಂಗೀತ ಇವೆಲ್ಲದರ ಬಗ್ಗೆ ಮಾಹಿತಿ ಕಲೆ ಹಾಕಿ ಯಥಾವತ್ ಆಗಿ ಹಿನ್ನೆಲೆ ಸಂಗೀತದಲ್ಲಿ ಬೆರೆಸಲಾಗಿದೆ. ವಿಶ್ವದ ನಾನಾ ಭಾಗಗಳಿಂದ ಸಂಗೀತಗಾರರನ್ನು ಕಲೆ ಹಾಕಿ ಕತೆಗೆ ಪೂರಕವಾಗಿರುವ ಹಾಗು ಗ್ಲೋಬಲ್ ಸೆನ್ಸಿಬಿಲಿಟಿಯೊಂದಿಗೆ ಕೂಡಿರುವ ಸಂಗೀತವನ್ನು ಹೊರತರಿಸಿದ ಮೀರಾ ನಾಯರ್ ಪ್ರಯತ್ನ ಖಂಡಿತ ಶ್ಲಾಘನೀಯ.

ಸೂಟಬಲ್ ಗರ್ಲ್

ಸೂಟಬಲ್ ಬಾಯ್ ಕಾದಂಬರಿಯ ಮುಂದುವರಿದ ಭಾಗವಾಗಿ ‘ಅ ಸೂಟಬಲ್ ಗರ್ಲ್’ ಬರೆಯಲು ಬ್ರಿಟನ್ ಮೂಲದ ಪೆಂಗ್ವಿನ್ ಪ್ರಕಾಶನ ಕಂಪನಿಯು ವಿಕ್ರಂ ಜೊತೆ ಒಪ್ಪಂದ ಮಾಡಿಕೊಂಡಿತು. ನಿಗದಿತ ಸಮಯದ ಗಡುವು ದಾಟಿದರೂ ವಿಕ್ರಂ ವಧುವನ್ನು ಒಪ್ಪಿಸಲಿಲ್ಲ. ಪೆಂಗ್ವಿನ್ ಜೊತೆ ಒಪ್ಪಂದ ರದ್ದಾದ ನಂತರ ಮತ್ತೊಂದೆರಡು ಪ್ರಕಾಶಕರ ಜೊತೆ ಮಾತು ಕತೆಯಾಯಿತು.


ಕಾರಣಾಂತರಗಳಿಂದ ಹಸ್ತಪ್ರತಿ ವಿಕ್ರಂ ಕೈಯಿಂದ ಹಸ್ತಾಂತರ ಆಗಲೇ ಇಲ್ಲ. ಹಲವು ವರುಷಗಳ ಜೊತೆಗಾರ, ಫ್ರೆಂಚ್ ಪಿಟೀಲು ವಾದಕ ಫಿಲಿಪ್ ಒನೊಹೆ ಜೊತೆಗಿನ ತಮ್ಮ ಸಂಬಂಧ ಮುರಿದು ಬಿದ್ದುದರಿಂದ ಮನಸ್ಸು ಕ್ಷೋಭೆಗೆ ಒಳಗಾಗಿದೆ ‘ರೈಟರ್ಸ್ ಬ್ಲಾಕ್’ ನಿಂದಾಗಿ ಬರೆಯಲಾಗುತ್ತಿಲ್ಲ ಎಂದು ಸಂದರ್ಶನ ಒಂದರಲ್ಲಿ ವಿಕ್ರಂ ಹೇಳಿಕೆ ಕೊಟ್ಟರು. ಕರೋನ ದಯಪಾಲಿಸಿರುವ ಈ ಏಕಾಂತ ಸಮಯದಲ್ಲಾದರೂ ‘ತಕ್ಕ ವಧು’ ವಿಕ್ರಮರ ಪ್ರತಿಬಂಧಕಗಳನ್ನಳಿಸಿ ಅನುರಾಗದ ಅನುಬಂಧ ಮೂಡಿಸಲು ಸಫಲಳಾಗುವಳೇ? ಕಾದು ನೋಡಬೇಕು.