ಮೈಲಿಗೆಯ ನಿತ್ಯಸೂತಕವನ್ನು ಮೆಟ್ಟಿನಿಲ್ಲಲು ಅವನೊಳಗಿನ ಅಸಲು ಮಾನವೀಯಗುಣ ಸಹಾಯಕವಾಗಿ ನಿಂತಿದೆ. ತನ್ನನ್ನು ಅಮಾನವೀಯವಾಗಿ ನಡೆಸಿಕೊಳ್ಳುವವರ ವಿರುದ್ಧ ಮಾತನಾಡುವಾಗಲೂ ಮನುಷ್ಯತ್ವದ ಘನತೆಯನ್ನು ಬಿಟ್ಟುಕೊಡದೆ ಇಲ್ಲಿನ ಕವಿತೆಗಳು ಜಾತಿಸಂಘರ್ಷದ ಸಮೀಕರಣಗಳನ್ನು ಹೊಸರೀತಿಯಲ್ಲಿ ನೋಡಿವೆ. ಇವು ದಲಿತತ್ವದ ಅಸ್ಮಿತೆಯನ್ನೂ, ಸಹಜ ಮನುಷ್ಯನಾಗಿರಬೇಕಾದ ಅನಿವಾರ್ಯತೆಯನ್ನೂ ಏಕಕಾಲಕ್ಕೆ ಎತ್ತಿಹಿಡಿಯುವಂತಿವೆ.
ಎಸ್‌. ಸಿರಾಜ್‌ ಅಹಮದ್‌ ಬರೆಯುವ ಅಂಕಣ

ಸುಬ್ಬು ಹೊಲೆಯಾರರ ಮೊದಲ ಸಂಕಲನ “ಸೂಜಿಗಾತ್ರದ ಕೊಳವೆಯಿಂದ ಮನುಷ್ಯನೊಬ್ಬನ ಹಾಡು”(2003) ಹಾಗೂ ಹತ್ತು ವರ್ಷಗಳ ನಂತರ ಪ್ರಕಟವಾಗಿರುವ “ಎಲ್ಲರ ಬೆರಳಲ್ಲೂ ಅಂಟಿಕೊಂಡಿರುವ ದುಃಖವೇ”(2013) ಸಂಕಲನಗಳೆರಡನ್ನೂ ನೋಡಿದರೆ ಅಲ್ಲಿ ನಿರಂತರವಾಗಿ ಅನ್ಯಾಯ-ಹಿಂಸೆಗೆ ಗುರಿಯಾದ ಸಮುದಾಯವೊಂದು ತನಗಾದ ಅವಮಾನಗಳನ್ನು ನಿಧಾನವಾಗಿ ಕರಗಿಸಿಕೊಂಡು ತನ್ನ ಮೇಲೆ ದಬ್ಬಾಳಿಕೆ ನಡೆಸುವವರ ಅಂತಃಸ್ಸಾಕ್ಷಿಯನ್ನು ಕಲಕುತ್ತ ಅವರ ಮನಪರಿವರ್ತನೆ ಮಾಡುವ ಹಾದಿಯಲ್ಲಿವೆ. ಹಾಗಾಗಿಯೇ ಸುಬ್ಬುರವರ ಪದ್ಯಗಳು ದಲಿತರ ಮೇಲಾಗುವ ದಾರುಣ ಕ್ರೌರ್ಯವನ್ನು ಹೇಳುತ್ತಲೇ, ಎಲ್ಲ ಬಗೆಯ ಎಲ್ಲೆಗಳನ್ನು ಮೀರಿದ ಅಖಂಡವಾದ ಮಾನವತ್ವವನ್ನು ಮುಟ್ಟಲು ಬೇಕಾದ ಸಿದ್ಧತೆಯನ್ನೂ ಸಹ ನಡೆಸುವಂತಿವೆ. ಆದ್ದರಿಂದ ಅವರ ಕಾವ್ಯದಲ್ಲಿ ಆಳವಾದ ವಿಷಾದ-ಯಾತನೆ, ಪ್ರಚಂಡ ಆತ್ಮವಿಶ್ವಾಸ, ನಿರಂತರ ಆತ್ಮಶೋಧನೆ, ಅಗಾಧ ಅಂತಃಕರಣದ ಗುಣಗಳಿವೆ. ಮೊದಲ ಸಂಕಲನದಲ್ಲಿಯೇ

“ನಿಷೇಧ ಮಾಡಬೇಡಿ ಕೊಲ್ಲುವವರನ್ನ
ಇನ್ನಷ್ಟು ಕೊಲ್ಲಬೇಕು ನನ್ನಂತಹವರನ್ನ
ಕೊಲ್ಲುವವರು ಹಸುವಿನ ಹಾಲು ಕುಡಿಯುತ್ತಾರೆ
ಕೊಲ್ಲಲ್ಪಡುವವರು ತಾಯಿಹಾಲು ಕುಡಿಯುತ್ತಾರೆ” (ಕೊಲ್ಲುವವರು ಹಸುವಿನ ಹಾಲು ಕುಡಿಯುತ್ತಾರೆ) ಎಂಬ ಮಾತುಗಳಲ್ಲಿರುವ ಆಕ್ರೋಶ ಮತ್ತು ಅಂತಃಸ್ಸಾಕ್ಷಿಯನ್ನು ಎಚ್ಚರಿಸುವ ಧಾಟಿಗಳೆರಡನ್ನೂ ನೋಡಬಹುದು. ಅಷ್ಟೇಅಲ್ಲ ಇನ್ನೊಂದು ಪದ್ಯದಲ್ಲಿ ಕಾಗೆಯಂತೆ ನಿರಂತರ ಕರೆಯುತ್ತಿರುವ ಹಸಿವು, ಒಡೆದ ಮಡಿಕೆಯಲ್ಲಿ ಗಂಜಿ ಚಪ್ಪರಿಸುವ ಮುರುಕು ಜೋಪಡಿಯ ನಾಯಿಗಳ ಐಭೋಗದ ನಡುವೆ ಬದುಕುತ್ತಿರುವ ಕವಿಗೆ
“ಸೋಗೆ ಸೂರಲ್ಲಿ
ಮಿಣುಕು ದೀಪದ ಬೆಳಕು
ಯಾವ ಲೋಕದ ನಕ್ಷತ್ರ
ಬೆಳ್ಳಿ ತಟ್ಟೆಯಲ್ಲಿಟ್ಟು
ಯಾವ ಲೋಕ ಬೆಳಗಲು ನಿಂತಿದ್ದು
ನನ್ನ ಹೊಲಗೇರಿ?”(ಕಣ್ಣು ಬಿಟ್ಟು ನೋಡಿದರೆ)ಎಂಬ ಸಾಲುಗಳಲ್ಲಿ ಖಾಲಿತಟ್ಟೆಯ ತುಂಬ ನಕ್ಷತ್ರಗಳನ್ನು ಕಾಣಬಲ್ಲ, ಹರಕಲು ಸೋಗೆಮಾಡಿನ ಕಿಂಡಿಗಳಿಂದಲೇ ದೇ(ಯಾ)ವಲೋಕದಲ್ಲಿ ಬೆಳಗುವ ಚಂದ್ರನನ್ನು ಕಾಣಬಲ್ಲ ತೀವ್ರ ಹಂಬಲಗಳಿವೆ. ಹಾಗೆಯೇ ಹೊಲಗೇರಿಯ ಬಗೆಗಿನ ಸ್ವಾಭಿಮಾನ ಮತ್ತು ಅದನ್ನು ನಿಕೃಷ್ಟವಾಗಿಸಿರುವ ಜಾತಿಜಗತ್ತಿನ ಬಗೆಗಿನ ಅಸಹನೆಯನ್ನೂ ಇಲ್ಲಿ ಅಷ್ಟೇ ಗಾಢವಾಗಿ ಕಾಣಬಹುದು.

ಹತ್ತುವರ್ಷಗಳ ನಂತರ ಪ್ರಕಟವಾಗಿರುವ “ಎಲ್ಲರ ಬೆರಳಲ್ಲೂ…..” ಸಂಕಲನದಲ್ಲಿಯೂ ಮೊದಲ ಸಂಕಲನದ ಹಲವಾರು ಆಶಯಗಳು ಇನ್ನಷ್ಟು ಗಟ್ಟಿಯಾಗಿ, ಪರಿಣಾಮಕಾರಿಯಾಗಿ ಮೂಡಿವೆ. ಇಲ್ಲಿಯೂ ಸಹ ಇರುವಿಕೆಯನ್ನು ನಾಶಮಾಡಬಲ್ಲ ಅವಮಾನದ ಹತಾಶ ಸಂದರ್ಭದಲ್ಲಿಯೂ ದೈನ್ಯತೆಗೆ ಆತುಕೊಳ್ಳದ ಅದಮ್ಯ ಚೈತನ್ಯವೊಂದು ಕವಿಯನ್ನು ಕಾಪಾಡಿದೆ.

“ಮುಟ್ಟಿಸಿಕೊಳ್ಳಬೇಡಿ
ಕೆಂಡದಂತ ಮಾತು ಕೇಳಿ
ಸುಟ್ಟುಕೊಂಡೆ ನನ್ನನ್ನೆ
ಬೂದಿಯಾಗಿ ಉಳಿದ ಮಸಿ ಒಳಗುಳಿದ ಹಸಿ
ಮತ್ತೆ ಚಿಗುರಲು
ಆಡಿದವರ ಮಾತಿನಿಂದ
ಕುದಿಸಿ ಬೇಯಿಸಿ ಆವಿಯಾಗಿಸಿ
ಕೆಂಡಸಂಪಿಗೆಯಾಗಿದ್ದೇನೆ”(ಹವಿಸ್ಸೇ ಇಲ್ಲದೆ ಉರಿಯುತ್ತಿದ್ದೇನೆ).

ಈ ದೇಶದ ಸಂಸ್ಕೃತಿಯಲ್ಲಿ ಮೈಲಿಗೆಯ ಮಹಾರೋಗ ಎಷ್ಟು ಆಳವಾಗಿ ಬೇರೂರಿದೆಯೆಂದರೆ ಹೊಲಗೇರಿಯಲ್ಲಿ ಹುಟ್ಟಿದ ಜೀವವೊಂದಕ್ಕೆ ಅವ್ವ ಕರೆಯುವ ಹೆಸರಿಗಿಂತ ಅಸ್ಪೃಶ್ಯನೆಂಬ ಹೆಸರೇ ಗಟ್ಟಿಯಾಗಿ ಅಂಟಿಕೊಳ್ಳುತ್ತದೆ. ಅಂಥ ಮೈಲಿಗೆಯ ನಿತ್ಯಸೂತಕವನ್ನು ಮೆಟ್ಟಿನಿಲ್ಲಲು ಅವನೊಳಗಿನ ಅಸಲು ಮಾನವೀಯಗುಣ ಸಹಾಯಕವಾಗಿ ನಿಂತಿದೆ. ತನ್ನನ್ನು ಅಮಾನವೀಯವಾಗಿ ನಡೆಸಿಕೊಳ್ಳುವವರ ವಿರುದ್ಧ ಮಾತನಾಡುವಾಗಲೂ ಮನುಷ್ಯತ್ವದ ಘನತೆಯನ್ನು ಬಿಟ್ಟುಕೊಡದೆ ಇಲ್ಲಿನ ಕವಿತೆಗಳು ಜಾತಿಸಂಘರ್ಷದ ಸಮೀಕರಣಗಳನ್ನು ಹೊಸರೀತಿಯಲ್ಲಿ ನೋಡಿವೆ. ಇವು ದಲಿತತ್ವದ ಅಸ್ಮಿತೆಯನ್ನೂ, ಸಹಜ ಮನುಷ್ಯನಾಗಿರಬೇಕಾದ ಅನಿವಾರ್ಯತೆಯನ್ನೂ ಏಕಕಾಲಕ್ಕೆ ಎತ್ತಿಹಿಡಿಯುವಂತಿವೆ.

ಸುಬ್ಬು ಅವರ ಪದ್ಯಗಳು ಗಾಢನೋವಿನ ದಲಿತತ್ವದ ನೆಲೆಯಿಂದ ಹೊರಟು ಮಾನವೀಯ ಅಂತಃಕರಣದ ಕಂಪನಗಳನ್ನು ಸೃಷ್ಟಿಸುವುದು ಹೀಗೆ. ನಿಜವಾಗಿ ಕೇವಲ ಮನುಷ್ಯನಾಗುವುದೆಂದರೆ ಎಲ್ಲ ಬಡದಲಿತಶೋಷಿತರ ದುಃಖದಲ್ಲಿ ಪಾಲುದಾರನಾಗುವುದೆಂದೇ ಅರ್ಥ.

“ನಿಜ ಹೇಳಿ ಜ್ಞಾನಕ್ಕೆ ಜನಿಸಿದವರೆ
ನನ್ನ ಉದ್ಧಾರ ಯಾವ ಕಡೆಯಿಂದ
ಕಾಲಿನಿಂದ ಹುಟ್ಟಿದವನು ನಾನು
ಕೆರ ಕಳಚಿ ಕೈಯಲ್ಲಿ ಹಿಡಿದುಕೊಂಡಿದ್ದೇನೆ
ಹಸುವಿನ ಕೆಚ್ಚಲಿನ ಹಾಗೆ ಹಾಲು ತುಂಬಿಕೊಂಡಿರುವ ನಿಮ್ಮ

*****

ನನ್ನ ಹೆಸರು ಕೇಳಿದಿರಿ?
ನೀವೇ ಇಟ್ಟಿದ್ದೀರಲ್ಲ ನಾನು ಹುಟ್ಟುವ ಮುಂಚೆಯೇ

*****

ನೀವೇ ಕೊಟ್ಟ ಹೆಸರು ಮರೆಯುವುದೇ?
ಅಸ್ಪೃಶ್ಯ
ಸಂತೋಷವಾಗಿರಬಹುದು
ಮಹಾನ್ ಭಾರತೀಯರು ನೀವು
ಅಸ್ಪೃಶ್ಯ ಖಂಡದವನು ನಾನು
ಹೊಲಗೇರಿಯಾಗಿದ್ದೇನೆ
ಅಪ್ಪಟ ಮನುಷ್ಯನ ಹಾಗೆ
ಇದೇ ಹೆಸರಿನೊಂದಿಗೆ”(ಮಲಿನದ ಮಹಾಕುಹಕ).

*****

“ಕನಿಷ್ಠ ಪೊರಕೆ ಹಿಡಿದು
ಈ ನೆಲದ ಕಸವನ್ನೆಲ್ಲ ಗುಡಿಸಿ
ಕೇವಲ ಮನುಷ್ಯನಾಗಿಬಿಡುವ ಆಸೆಯಲ್ಲಿ ನಿಂತಿದ್ದೇನೆ” (ಚಮ್ಮಾಳಿಗೆಯ ಚೆಲುವೋ ಜ್ಞಾನದ ಕೊಳವೋ)

ತನ್ನ ಮೇಲಿನ ದೌರ್ಜನ್ಯವನ್ನು ಪ್ರತಿಭಟಿಸಲು ಮನುಷ್ಯ ನಾಗರಿಕತೆಯ ಚರಿತ್ರೆಯಲ್ಲಿ ಎರೆಹುಳು, ಇರುವೆಗಳಂಥ ತೀರ ಸಾಮಾನ್ಯ ಜೀವಿಗಳ ಮೂಲಕ ಅಗಾಧ ಶಕ್ತಿಸಂಚಯನ ಮಾಡಿಕೊಂಡು ಬರೆಯುವುದು ಸುಬ್ಬು ಕವಿತೆಗಳ ಮತ್ತೊಂದು ಗುಣ. ಅಸ್ಪೃಶ್ಯನೆಂದು ಹೀಯಾಳಿಸುವವರ ವಿರುದ್ಧ ಮೈಪರಚಿಕೊಂಡು ಆರ್ಭಟಿಸುವವರ ನಡುವೆ ಮಣ್ಣಿನ ಚರಿತ್ರೆಯಲ್ಲಿ ನಿಶ್ಶಬ್ದವಾಗಿರುವ ಎರೆಹುಳುಗಳು ಕವಿಯನ್ನು ತನ್ನ ಬಾಂಧವನೆಂದು ಅಪ್ಪಿಕೊಳ್ಳುವುದಿಲ್ಲ. ಯಾರನ್ನೂ ಕ್ಯಾಕರಿಸಿ ಉಗುಳುವುದಿಲ್ಲ. ಪ್ರಾರ್ಥನೆಯ ದೈನ್ಯಕ್ಕೆ ಒಳಗಾಗಿಲ್ಲ. ಶೋಷಿತನೆಂಬ ಗುರುತನ್ನೇ ಗುರಾಣಿಯಾಗಿಸಿಕೊಂಡು ಸ್ವಾರ್ಥ ಸಾಧಿಸಿಕೊಳ್ಳುವ ಸಮಯಸಾಧಕತನವೂ ಅದಕ್ಕಿಲ್ಲ.

ಸುಬ್ಬುರವರ ಪದ್ಯಗಳು ದಲಿತರ ಮೇಲಾಗುವ ದಾರುಣ ಕ್ರೌರ್ಯವನ್ನು ಹೇಳುತ್ತಲೇ, ಎಲ್ಲ ಬಗೆಯ ಎಲ್ಲೆಗಳನ್ನು ಮೀರಿದ ಅಖಂಡವಾದ ಮಾನವತ್ವವನ್ನು ಮುಟ್ಟಲು ಬೇಕಾದ ಸಿದ್ಧತೆಯನ್ನೂ ಸಹ ನಡೆಸುವಂತಿವೆ.

“ಮೀನು ಹಿಡಿಯಲು
ಗಾಳಕ್ಕೆ ಎರೆಹುಳುವಿನ ದೇಹವನ್ನು ತೂರಿಸಿದರೂ
ಮಿಸುಕಾಡದೆ ಜೀವ ಕೊಟ್ಟ ಜೀವವೇ
ನಿನ್ನನ್ನು ಮೀನನ್ನು ತಿಂದು ತೇಗಿದ ನನ್ನ ಜೀವವೆ
ಇಷ್ಟಗಲ ಬಾಯಿಗೆ ಎಷ್ಟೊಂದು ಸ್ವಾರ್ಥ?(ಮಣ್ಣಿನ ಚರಿತ್ರೆಯಲ್ಲಿ ಎಷ್ಟೊಂದು ಎರೆಹುಳುಗಳು).

ದರ್ಪ, ಆರ್ಭಟ, ಅಧಿಕಾರವನ್ನೇ ನಂಬಿ ಬದುಕುವವರ ಆಟಾಟೋಪಗಳ ನಡುವೆ ಸಾಮಾನ್ಯ ಇರುವೆಯೊಂದು ತನ್ನ ಇರುವಿಕೆಯ ಸಾಮಾನ್ಯತೆಯಲ್ಲಿಯೇ ಘನತೆಯಿಂದ ಬದುಕುವುದು, ಕಷ್ಟಗಳೊಡನೆ ಸೆಣೆಸುವುದು ಇಲ್ಲಿನ ಕವಿತೆಗಳಲ್ಲಿ ಮತ್ತೆಮತ್ತೆ ಕಾಣುತ್ತದೆ.

ಇರುವೆ, ಎರೆಹುಳ, ಗುಲಗಂಜಿ, ಸೂಜಿಗಳಂಥ ಮಾನವಚರಿತ್ರೆಯ ನಿರ್ಲಕ್ಷಿತ ಸಂಗತಿಗಳ ಮೂಲಕವೇ ತನ್ನ ಜೀವನದೃಷ್ಟಿಯನ್ನು ಕಟ್ಟಿಕೊಂಡಿರುವ ಕವಿಗೆ ಸಾಮಾಜಿಕ ಕ್ರಾಂತಿ-ಶೋಷಿತಕುಲದ ಪಲ್ಲಟಗಳು ಮನುಷ್ಯಅಂತಃಕರಣದ ಪರಿವರ್ತನೆಯಿಂದ ಸಾಧ್ಯವಾಗುತ್ತವೆಯೇ ಹೊರತು ಹಿಂಸೆ-ರಕ್ತಪಾತಗಳಿಂದಲ್ಲ.

“ಕ್ರಾಂತಿಯೆಂದರೆ ತಾಯಂದಿರ ತಾಯಾಗುವುದು
ನನ್ನ ಹಾಗೆ ದುಃಖಕ್ಕೆ ಒಡೆಯರಾಗುವುದು”(ದುಃಖ ಇಲ್ಲದವನ ಹಾಡು).

ಜಾತಿಜಗತ್ತಿನ ವಿರುದ್ಧದ ಆಕ್ರೋಶವನ್ನು ಅಂತಃಕರಣದ ಭಾಷೆಯಲ್ಲಿ ವ್ಯಕ್ತಪಡಿಸಿರುವ ಕಾರಣದಿಂದಲೇ ಇಲ್ಲಿನ ಹಲವಾರು ಕವಿತೆಗಳು ಮನಕಲಕುವ ತೀವ್ರತೆಯನ್ನು ಪಡೆದುಕೊಂಡಿವೆ. ಇವುಗಳಿಗೆ ಅಂತಃಸ್ಸಾಕ್ಷಿಯನ್ನು ಕಲಕುವುದೇ ಮುಖ್ಯವಾಗಿರುವುದರಿಂದ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಕೆದಕುವುದರಲ್ಲಿ ಆಸಕ್ತಿಯಿಲ್ಲ. ಗಾಂಧಿ ಎಲ್ಲರಿಗಿಂತ ನನಗೆ ಗೊತ್ತು ಯಾಕೆಂದರೆ ನಾನವರ ಕಾಲುಗಳಲ್ಲೇ ನಿಂತಿದ್ದೇನೆ ಎನ್ನುತ್ತಲೇ, ಗಾಂಧಿ ಮನೆಗೆ ಬಂದಾಗ ಅಂಬೇಡ್ಕರ್ ಆಗಲೇ ಒಳಗಿದ್ದರು ಎಂಬ ಸಾಲುಗಳಲ್ಲಿ ತಾತ್ವಿಕಸಂಘರ್ಷವನ್ನು ಮೀರಿದ ಅಂತರ್‍ ಸಂಬಂಧವನ್ನು ತೋರಿಸುವುದೇ (ಗಾಂಧಿ ಬಂದಾಗ ಅಂಬೇಡ್ಕರ್ ಒಳಗಿದ್ದರು) ಕವಿಗೆ ಮುಖ್ಯವಾಗಿದೆ.

ಇನ್ನುಳಿದ ಕವಿತೆಗಳು ಜಾತಿಸೂತಕದ ನೆರಳು ದೇಶ, ಭಾಷೆ, ನಗರೀಕರಣ, ಪ್ರಗತಿಯ ಇತರ ಸಂದರ್ಭಗಳಲ್ಲಿಯೂ ವ್ಯಾಪಿಸಿಕೊಂಡು ಅಸಮಾನತೆಯ ಕಂದರಗಳು ಹೆಚ್ಚಾಗಿರುವುದನ್ನು ತೋರಿಸುತ್ತವೆ. ಇದು ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ವಿಶ್ಲೇಷಣೆಯೂ ಹೌದು. “ದೇವರನ್ನು ಸಾಕಿಕೊಂಡವರಲ್ಲಿ” ಎಂಬ ಕವಿತೆಯಲ್ಲಿ ದಲಿತರನ್ನು ಒಳಗೆ ಸೇರಿಸದ ದೇಶ ತನ್ನ ಮಾನಸಿಕ ವಿಸ್ತೀರ್ಣವನ್ನೇ ಕಳೆದುಕೊಂಡು ಬಡವಾಗಿದೆ ಎಂಬ ಸಾಲುಗಳಿವೆ. “….ಅಷ್ಟು ಕಿರಿದಾಗಿದೆಯೇ ಈ ದೇಶ?” ಎಂದು ಶುರುವಾಗುವ ಪದ್ಯ ಹೇಗಾದರೂ ಈ ದೇಶವನ್ನು ಸ್ವಲ್ಪ ದೊಡ್ಡದುಮಾಡಿ ಎಂಬ ಅಹವಾಲಿಡುತ್ತದೆ. ಅಷ್ಟೇ ಅಲ್ಲ ದೇವರನ್ನು ಸಾಕಿಕೊಂಡವರಿಗೆ, ದೇವರಂಥ ಸರ್ಕಾರಕ್ಕೆ ನನ್ನಂತಹ ಸಣ್ಣವರು ಸತ್ತಾಗಲಾದರೂ ಮಣ್ಣಾಗಲು ಜಾಗ ಕೊಡಿ ಎಂಬ ಅರ್ಜಿ ಸಲ್ಲಿಕೆಯಾಗಿದೆ…!!

ಅಸ್ಪೃಶ್ಯ ಭಾರತವನ್ನು ಉದ್ಧರಿಸದ ಪ್ರಭುತ್ವ-ಸಂಸ್ಕೃತಿಗಳು ಎಷ್ಟು ಜ್ವಾಜ್ಯಲ್ಯಮಾನವಾಗಿದ್ದರೂ ಅರ್ಥಹೀನವೆಂಬ ವ್ಯಂಗ್ಯ ಇಲ್ಲಿದೆ. ಮಾಲುಗಳ ಮಹಲಿನಲ್ಲಿ, ನಗುವಿಗೂ ಬಿಡುವಿಲ್ಲದೆ ಬದುಕುವ ನಗರದ ಜನ ಮ್ಯಾನ್‍ ಹೋಲಿನಲ್ಲಿ ಇಳಿದು ಉಸಿರುಗಟ್ಟಿ ಸತ್ತವನಿಗಾಗಿ ಯಾರೂ ಕಂಬನಿ ಮಿಡಿಯದಿರುವುದನ್ನು ಕಂಡು ಮನುಷ್ಯ ನಾಗರಿಕತೆಯೇ ಸ್ಥಗಿತಗೊಂಡಿದೆ ಅನಿಸುತ್ತದೆ. ಮೈಲಿಗೆಯ ಸೂತಕ ಹಳ್ಳಿಗಳಿಂದ ಮಹಾನಗರಗಳವರೆಗೆ ವ್ಯಾಪಿಸಿರುವುದನ್ನು ತೋರಿಸುವ ಪದ್ಯಗಳು ನಗರೀಕರಣ-ಪ್ರಗತಿಗಳು ಜಾತಿಕೊಳಚೆಯನ್ನು ಇನ್ನಷ್ಟು ಉಲ್ಬಣಗೊಳಿಸಿರುವುದನ್ನು ಸೂಚಿಸುತ್ತವೆ. ಹಾಗಾದರೆ ನಗರಗಳೆಡೆಗೆ ನಡೆಯುತ್ತಿರುವ ದಲಿತರ ಮಹಾಪ್ರಯಾಣ ನೀಡಿರುವ ಫಲವಾದರೂ ಏನು? ಮಹಾನಗರಗಳಲ್ಲಿ ಜಾತಿಯ ಅಸಮಾನತೆ ಭಾಷೆಗೂ ತಗುಲಿ ಮನುಷ್ಯರ ನಡುವಿನ ಕಂದರಗಳು ಇನ್ನಷ್ಟು ವಿಕಾರಗೊಳ್ಳುವ ದುರಂತವನ್ನು “ಹಾಗೆಲ್ಲ ಜರಿಯಬೇಡಿ ನನ್ನ ದೇವರು ಕನ್ನಡ” ಎಂಬ ಕವಿತೆ ಬಹಳ ಪರಿಣಾಮಕಾರಿಯಾಗಿ ವಿವರಿಸುತ್ತದೆ.

“ಇವರೆಲ್ಲ ಉಗುಳಿದ ನೆಲದಲ್ಲೆ/ ಅಗುಳಾಗಿ ಅರಳಿ”ದರೂ, ಮತ್ತೊಮ್ಮೆ “ಕುಲ ಮೇಲಾಗಿ ನುಡಿ ಕೀಳಾಗಿದೆ”. ತನ್ನ ಅನಾದಿಕುಲವನ್ನೂ ಆದಿಮ ಕನ್ನಡವನ್ನೂ ಕೀಳಾಗಿಕಾಣುವ ಆಧುನಿಕ ನಾಗರಿಕತೆಯನ್ನು ಟೀಕಿಸುವ ಈ ಕವಿತೆ ಅಸ್ಪೃಶ್ಯನೊಬ್ಬ ನವಭಾರತದ ನಡುವೆ ನಿಂತು ನೋವಿನಿಂದ ನುಡಿದ ಭಿನ್ನಶೈಲಿಯ ನಾಡಗೀತೆಯಾಗಿದೆ.

“ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ” ಪದ್ಯದಲ್ಲಿ ಆಧುನೀಕರಣ-ಜಾಗತೀಕರಣಗಳ ಬೃಹತ್ ಕೇಡಿನ ಜಾಲದಲ್ಲಿ ಸಿಲುಕಿದವರೆಲ್ಲರೂ ಸಮಾನ ದುಃಖಿತರೂ-ಶೋಷಿತರಾಗಿ ಅವರೆಲ್ಲರ ಬೆರಳುಗಳಿಗೂ ನೋವಿನಸೂತಕ ಅಂಟಿಕೊಂಡಂತಿದೆ. ಬಾಡಿಗೆಮನೆ ಸಿಗದ ಅಸ್ಪೃಶ್ಯರು, ಗೂಡಿಲ್ಲದ ಗುಬ್ಬಚ್ಚಿಗಳು, ಗರಿಕೆಯೆಸಳೂ ಸಿಗದ ಮಹಾನಗರಗಳು, ಒಬ್ಬರನೊಬ್ಬರು ಸೋಕಲು ಬಿಡದ ಸಾಂಕ್ರಾಮಿಕ ರೋಗಗಳು- ಹೀಗೆ ಜಾತಿ-ಲಿಂಗ-ಅಂತಸ್ತುಗಳೆನ್ನದೆ ಪ್ರತಿಯೊಬ್ಬರನ್ನೂ ಹತಾಶಗೊಳಿಸಿರುವ ನೋವುಗಳ ಜಾಗತೀಕರಣ ಭಯಾನಕವಾದುದು.

ವಿಚಿತ್ರವೆಂದರೆ ಜಾತಿಯೆಂಬ ಗುಣವಾಗದ ವ್ರಣದಿಂದ ನರಳುತ್ತಿದ್ದ ಸಮಾಜದಲ್ಲೀಗ, ಆಧುನಿಕತೆ-ಪ್ರಗತಿಯ ಫಲವಾಗಿ ಹಬ್ಬುತ್ತಿರುವ ಏಡ್ಸ್, ಎಚ್1ಎನ್1, ಕೊರೋನಾ ಮಹಾಮಾರಿಯಂಥ ಪಿಡುಗುಗಳಿಗೆ ಬಲಿಯಾಗಿ ಒಬ್ಬರು ಇನ್ನೊಬ್ಬರನ್ನು ಮುಟ್ಟಲಾಗದೆ ಎಲ್ಲರೂ ಒಂಟಿಯಾಗಿರಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ! ಇಲ್ಲಿ ಎಲ್ಲರೂ ದುಃಖದಲ್ಲಿ ಮುಳುಗಿದವರೇ. ಇಂಥವರ ನಡುವೆಯೇ, ದುಃಖದಲ್ಲಿ ಮುಳುಗಿದವರು ಯಾರೇ ಇರಲಿ ಅವರೆಲ್ಲ ನಮ್ಮವರೇ ಎಂದು ಪೋಷಿಸಿ ಹಾಲೂಡಿಸುವ ಆಶಯವನ್ನು ಕವಿ ವ್ಯಕ್ತಪಡಿಸುತ್ತಾನೆ.

ಮೈಕೆಲ್ ಜಾಕ್ಸನ್ ಕುರಿತ “ಮಳೆ ಸುರಿಯುವಾಗೆಲ್ಲ ನಿನ್ನ ನೆನೆಪು” ಪದ್ಯದಲ್ಲಿ ಜಾಕ್ಸನ್ನನ ನೃತ್ಯವನ್ನು ಚೋಮನದುಡಿಯ ಡಿಂಡಿಮಕ್ಕೆ, ಶಿವನ ರುದ್ರತಾಂಡವಕ್ಕೆ ಹೋಲಿಸುತ್ತ, ಇಲ್ಲಿ ನನ್ನ ಕಾಡಿನ ಮಕ್ಕಳು ಅತ್ತರೆ ಆಫ್ರಿಕಾದ ತಾಯಂದಿರು ಹಾಲೂಡಿಸುತ್ತಾರೆ ಎಂಬ ಆಶಯವಿದೆ. ಎಷ್ಟಾದರೂ ಜಗದ ಶೋಷಿತರೆಲ್ಲ ಸಮಗಾರ ಭೀಮವ್ವನ ಕುಲದವರೇ ಅಲ್ಲವೇ? ಇಂಥ ಕಡೆಗಳಲ್ಲಿ ಸುಬ್ಬು ಕಾವ್ಯ ಎಲ್ಲ ಮೇರೆಗಳನ್ನು ಮೀರಿದ ಮಾನವೀಯ ಅಂತಃಕರಣದಿಂದ ಮಿಡಿಯುತ್ತದೆ.

ಸಮುದಾಯದ ಆಶಯಗಳನ್ನು ಹೇಳಹೊರಡುವ ಕವಿಯೊಬ್ಬ ಅದಕ್ಕೆ ಪೂರಕವಾದ ಅನುಭವ ವಿವರಗಳು, ಸಾಂಸ್ಕೃತಿಕ ನೆನಪುಗಳನ್ನು ಹೊತ್ತು ತರಬಲ್ಲ ವೈವಿಧ್ಯಮಯ ಭಾಷಿಕಲಯಗಳೆಲ್ಲವನ್ನೂ ಒಳಗೊಂಡಿರುವ ಸಂವೇದನೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ.

ಸುಬ್ಬುರವರ ಮೇಲೆ ಇನ್ನೂ ಆವರಿಸಿರುವ ಬರೀ ನವ್ಯದ ನೆರಳಿನ ಕಾರಣವೋ ಏನೋ, ಇಲ್ಲಿನ ಅನೇಕ ಪದ್ಯಗಳು ಬಹುಸ್ವರದ ವೈವಿಧ್ಯವಿಲ್ಲದ ಏಕತಾರಿಯಲ್ಲಿ ನುಡಿಸಿದ ಏಕವ್ಯಕ್ತಿಯೊಬ್ಬನ ಆಕ್ರಂದನಗಳಂತೆ ಕೇಳಿಸುತ್ತವೆ. ಹಲವುಕೊರಳುಗಳ ದನಿಯನ್ನು ತಮ್ಮ ಕಾವ್ಯಕ್ಕೆ ಆಹ್ವಾನಿಸಿಕೊಂಡಲ್ಲಿ ಸುಬ್ಬು ಕಾವ್ಯಕ್ಕೆ ಇನ್ನಷ್ಟು ವಿಸ್ತಾರ ಸಿಗಬಲ್ಲದು.