ಬಸವನಗುಡಿಯ ಎರಡು ಹೆಗ್ಗುರುತಗಳು ಬಸವನ ದೇವಸ್ಥಾನ ಮತ್ತು ಪೊಲೀಸ್ ಸ್ಟೇಷನ್. ಬಸವನಗುಡಿ ಯನ್ನು ಬೆಳೆಸಿದವರು ಹಲವಾರು ಜನರಿದ್ದಿರಬೇಕು. ಅವರಲ್ಲಿ ಬೆಳ್ಳಾವೆ ವೆಂಕಟನಾರಾಯಣಪ್ಪನವರು ಮುಖ್ಯರು. ಬಹುಮುಖಿ ಆಸಕ್ತಿಗಳಿದ್ದ ವೆಂಕಟನಾರಾಯಣಪ್ಪನವರು ಭೌತ ವಿಜ್ಞಾನದ ಪ್ರಾಧ್ಯಾಪಕರಾಗಿದ್ದರು. ವಿಜ್ಞಾನ ಸಂವಹನೆಯ ಕಾರ್ಯದಲ್ಲೂ ಪ್ರಾತಃಸ್ಮರಣೀಯರು; ಕನ್ನಡದಲ್ಲಿ ಎರಡು ವರ್ಷ ಕಾಲ ವೈಜ್ಞಾನಿಕ ಮಾಸಿಕ ಪತ್ರಿಕೆಯನ್ನು ನಡೆಸಿಕೊಂಡು ಬ೦ದರು. ಡಿ.ವಿ.ಗುಂಡಪ್ಪನವರು ಅವರನ್ನು ತಮ್ಮ ಬರವಣಿಗೆಗಳಲ್ಲಿ ನೆನೆಸಿಕೊಂಡಿದ್ದಾರೆ.
ಪಾಲಹಳ್ಳಿ ವಿಶ್ವನಾಥ್ ಬರೆದ ಹೀಗೊಂದು ಕುಟುಂಬದ ಕಥೆ ಪುಸ್ತಕದಿಂದ ಮತ್ತೊಂದು ಅಧ್ಯಾಯ ನಿಮ್ಮ ಓದಿಗೆ

 

ಆ ಕಾಲದಲ್ಲಿ (~1935) ರಾಮಯ್ಯ ಮತ್ತು ಸಂಸಾರ ಜೀವಿಸುತ್ತಿದ್ದ ಊರು – ಬೆಂಗಳೂರು – ಹೇಗಿತ್ತು? ಜನಸಂಖ್ಯೆ ಮೂರೂವರೆ ಲಕ್ಷ ( 1931,1941 ಮತ್ತು 1951 ರಲ್ಲಿ ಕ್ರಮವಾಗಿ 3.1,4.1 ಮತ್ತು 7.8 ಲಕ್ಷಗಳು, ಹೋಲಿಕೆಗೆ ಮೈಸೂರು – 1.1,1.5, ಮತ್ತು 2.4 ಲಕ್ಷಗಳು ) ಅದರಲ್ಲಿ ಅಂಕಿ ಅಂಶಗಳ ಪ್ರಕಾರ ಒಂದು ಲಕ್ಷ ಓದು ಬರಹ ಬಲ್ಲವರು. ಈಗ ಸ್ವಲ್ಪ ಊಹೆ ಮಾಡೋಣ: ಮೂರು (ಕನ್ನಡ, ತೆಲುಗು ಮತ್ತು ತಮಿಳು) ಮುಖ್ಯ ಭಾಷೆಗಳಿದ್ದವು. ಆದ್ದರಿಂದ ಕನ್ನಡ ಬಲ್ಲವರು 35000; 5-6000 ತಾಯಿನಾಡು ಪತ್ರಿಕೆಗಳನ್ನು ಮುದ್ರಿಸುತ್ತಿದ್ದರು; ಒಂದು ಪತ್ರಿಕೆಯನ್ನು ಇಬ್ಬರು ಓದುತ್ತಿದ್ದರು ಎಂದುಕೊಂಡರೆ, ತಾಯಿನಾಡು ಪತ್ರಿಕೆ ಕನ್ನಡ ಬಲ್ಲವರಲ್ಲಿ `30-35 % ಜನರನ್ನು ತಲಪುತ್ತಿತ್ತು ಎಂದುಕೊಳ್ಳಬಹುದು.

(ಚಿತ್ರ: 1930ರ ದಶಕದ ಬೆಂಗಳೂರಿನ ಹೊಸ ಸಾರ್ವಜನಿಕ ಕಟ್ಟಡಗಳು- ಟೌನ್ ಹಾಲ್,ಮುನಿಸಿಪಲ್ ಕಚೇರಿ,ವಾಣಿವಿಲಾಸ್ ಆಸ್ಪತ್ರೆ)

ಬೆಂಗಳೂರಿನಲ್ಲಿ ಸೌಕರ್ಯಗಳನ್ನು ಹೆಚ್ಚುಮಾಡಲು ಮಿರ್ಜಾ ಸಾಹೇಬರು ಹಲವಾರು ಯೋಜನೆಗಳನ್ನು ಶುರುಮಾಡಿದ್ದರು. ಸುಂದರೀಕರಣ ಮಾಡಲೆಂದೇ ಅವರು ಇಬ್ಬರು ವಿದೇಶೀಯರನ್ನು ಕರೆಸಿಕೊಂಡಿದ್ದರು: ತೋಟಗಾರಿಕೆ ವಿಷಯಕ್ಕೆ ಸಸ್ಯಶಾಸ್ತ್ರಜ್ಞ ಗಸ್ಟಾಫ್ ಕ್ರಂಬೀಗಲ್ ಮತ್ತು ವಾಸ್ತುಶಿಲ್ಪಿ ಆಟೊ ಕೋನಿಗ್ಸಬರ್ಗರ್. ಮೊದಲನೆಯವರು ಲಾಲ್ಬಾಗ್ ಮತ್ತು ಇತರ ಉದ್ಯಾನಗಳನ್ನು ನೋಡಿಕೊಳ್ಳುತ್ತಾರೆ ಮತ್ತು ಕೋನಿಗಸಬರ್ಗ್‌ರ್ ಕಲಾಸಿಪಾಳ್ಯ ಬಸ್ ನಿಲ್ದಾಣ ಇತ್ಯಾದಿ ಜಾಗಗಳನ್ನು ಅಭಿವೃದ್ಧಿಗೊಳಿಸುತ್ತಾರೆ. (ಕೋನಿಗ್ಸಬರ್ಗರ್ ಅವರ ತಂದೆಯ ಸಹೋದರ ಖ್ಯಾತ ಭೌತವಿಜ್ಞಾನಿ ಮ್ಯಾಕ್ಸ್‌ ಬಾರ್ನ್ ಸ್ವಲ್ಪ ಸಮಯ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸರ್ ರಾಮನ್ ರ ಅತಿಥಿಯಾಗಿದ್ದರು. ಮಿರ್ಜಾರವರು ಅವರನ್ನು ಜರ್ಮನಿಯ ವಾಸ್ತುಶಿಲ್ಪಿಗಳ ಬಗ್ಗೆ ಕೇಳಿದಾಗ ಬಾರ್ನ್ ರವರು ಓಟೊ ಅವರ ಹೆಸರು ಹೇಳಿದ್ದರಂತೆ) ಇದಲ್ಲದೆ ನಗರದಲ್ಲಿ ಹೊಸ ಹೊಸ ಕಟ್ಟಡಗಳು ಬರುತ್ತಿದ್ದವು. ಇವು ಬೆಂಗಳೂರಿಗೆ ತನ್ನದೇ ವ್ಯಕ್ತಿತ್ವವನ್ನು ಮೂಡಿಸಿದವು. ಕೋಟೆಗೂ ಪೇಟೆಗಳಿಗೂ ಮಧ್ಯವಿದ್ದ ಜಾಗದಲ್ಲಿ 1921ರಲ್ಲಿಯೇ ಕೆ.ಆರ್‌.ಮಾರ್ಕೆಟ್ಟನ್ನು ಕಟ್ಟಲಾಗಿತ್ತು. ಅದೇ ಮಾರ್ಕೆಟ್ಟಿನ ಬಳಿ ಇದ್ದ ಸ್ಮಶಾನವಿದ್ದ ಜಾಗದಲ್ಲಿ 1935ರಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ವಾಣಿವಿಲಾಸ್ ಆಸ್ಪತ್ರೆ ಕಟ್ಟಲಾಯಿತು; ಉದ್ಘಾಟನೆ ಮಾರ್ಚ್ 8, 1935ರಂದು ಮಹಾರಾಜರಿಂದ ನಡೆಯಿತು. ಇದನ್ನು ಬೆಳೆಸಿದವರು ಮುಖ್ಯಸ್ಥೆಯಾಗಿದ್ದ ಡಾಕ್ಟರ್ ಆಲ್ಬುಕರ್ಕ್‌. ಮೊದಲ ಕೆಲವು ವರ್ಷಗಳಲ್ಲಿ ಭಯದಿಂದಾಗಿ ಹೆಚ್ಚು ಜನ ಅಲ್ಲಿಗೆ ಹೋಗುತ್ತಿರಲಿಲ್ಲವಂತೆ! ಆದರೂ ನಮ್ಮಅಮ್ಮ ಧೈರ್ಯ ಮಾಡಿದ್ದರಿಂದ ಅಕ್ಕ ರಾಮೇಶ್ವರಿ 1936ರಲ್ಲಿ ಅಲ್ಲಿ ಹುಟ್ಟಿದಳು! ಮುಂದಿನ ಹದಿನೈದು ವರ್ಷಗಳಲ್ಲಿ ನಮ್ಮ ಮನೆಯ ಮಕ್ಕಳೆಲ್ಲಾ (ನಾನೂ ಸೇರಿ) ಹುಟ್ಟಿದ್ದು ಆ ಆಸ್ಪತ್ರೆಯಲ್ಲಿಯೇ. 1950/60 ರ ದಶಕದಲ್ಲಿ ನಮ್ಮ ತಾಯಿ ಜಯಲಕ್ಷಮ್ಮ ವಾಣಿವಿಲಾಸ್ ಮತ್ತು ವಿಕ್ಟೋರಿಯ ಆಸ್ಪತ್ರೆಗಳ ಸಂದರ್ಶಕರ ಸಮಿತಿಯಲ್ಲಿ ಕೆಲಸ ಮಾಡುತ್ತಿದ್ದರು. ಆ ಕೆಲವು ವರ್ಷಗಳು ಕ್ರಿಸ್‌ಮಸ್ ಹಿಂದಿನ ದಿನದಂದು ನಮ್ಮ ಮನೆಗೆ 2-3 ಬಸ್ ತುಂಬ ನರ್ಸುಗಳು ಬಂದು ಕ್ರಿಸ್‌ಮಸ್ ಕರೋಲ್ ಗಳನ್ನು ಹಾಡಿ ಹೋಗುತ್ತಿದ್ದರು.)

1936ರಲ್ಲಿ ಬೆಂಗಳೂರಿನಲ್ಲಿ ಮತ್ತೊಂದು ಭವ್ಯ ಕಟ್ಟಡ ಸಾರ್ವಜನಿಕರಿಗೆ ಅರ್ಪಿತವಾಯಿತು. ಅದೇ ಗ್ರೀಕ್‌-ರೋಮನ್ ಕಟ್ಟಡಗಳ ಕಳೆಯಿರುವ ಪುಟ್ಟಣ್ಣಚೆಟ್ಟಿ ಟೌನ್ ಹಾಲ್! 1933ರಲ್ಲಿ ಇದರ ಕೆಲಸ ಶುರುವಾಗಿ ಎರಡೇ ವರ್ಷಗಳಲ್ಲಿ ಕಟ್ಟಡ ತಯಾರಾಗಿತ್ತು. ಕೆ.ಸಿ.ಪುಟ್ಟಣ್ಣ ಚೆಟ್ಟಿಯವರು ಆ ಕಾಲದ ಗಣ್ಯ ವ್ಯಕ್ತಿಯಾಗಿದ್ದರಲ್ಲದೆ, ಮುನಿಸಿಪಾಲಿಟಿಯ ಅಧ್ಯಕ್ಷರೂ ಆಗಿದ್ದರು. ನಗರದ ಕೆಲಸಗಳನ್ನು ನೋಡಿಕೊಳ್ಳಲು 1850ರಲ್ಲಿ ಮುನಿಸಿಪಲ್ ಬೋರ್ಡ್ ಶುರುವಾಗಿತ್ತಂತೆ. 20ನೆಯ ಶತಮಾನದ ಮೊದಲ ದಶಕಗಳಲ್ಲಿ ಸಿಟಿ ಮತ್ತು ಕಂಟೋನ್ಮೆಂಟು ಗಳಿಗೆ ಬೇರೆ ಬೇರೆ ಆಡಳಿತವಿರುತ್ತಿತ್ತಂತೆ. 1930ರ ದಶಕದಲ್ಲಿ ನಗರಸಭೆ (ಮುನಿಸಿಪಾಲಿಟಿ) ಗೆ ಹೊಸ ಕಟ್ಟಡವೂ ದೊರಕಿತು. (ಶುರುವಾದ ಇಸವಿ ಸಿಗಲಿಲ್ಲ). 1937ರ ಪುಸ್ತಕವೊಂದರಲ್ಲಿ ನಗರಸಭೆ ಒಂದು ಹೊಸ ಕಟ್ಟಡ ಎಂದು ತೋರಿಸಲಾಗಿದೆ. ಮುಂದೆ 1940ರ ದಶಕದಲ್ಲಿ ರಾಮಯ್ಯನವರೂ ಮತ್ತು 1950/60ರ ದಶಕದಲ್ಲಿ ಜಯಲಕ್ಷಮ್ಮನವರೂ ಈ ಕಟ್ಟಡದಲ್ಲಿ ನಗರಸಭೆಯ ಸದಸ್ಯರಾಗಿ ಕೆಲಸಮಾಡುತ್ತಾರೆ. ಒಟ್ಟಿನಲ್ಲಿ ಈ ಕಟ್ಟಡಗಳ ಉದ್ಘಾಟನೆ ಇತ್ಯಾದಿ ಘಟನೆಗಳನ್ನೆಲ್ಲಾ ತಾಯಿನಾಡು ಪತ್ರಿಕೆ ವರದಿ ಮಾಡಿದ್ದಿರಬೇಕು. ನಮಗೆ ಆ ಸುದ್ದಿಗಳಿರುವ ಪ್ರತಿಗಳು ಸಿಗದಿರುವುದು ಒಂದು ದುರಂತ.

(ಅಂದಿನ ಬೆಂಗಳೂರಿನ ನಕ್ಷೆ)

ಅಂದಿನ ಬೆಂಗಳೂರಿನ ನಕ್ಷೆಯನ್ನುಮೇಲೆ ತೋರಿಸಿದೆ( 1950ರ ಗೈಡ್ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ.) ಅಳತೆ (‘ಸ್ಕೇಲ್ʼ)ಇಲ್ಲದಿರುವುದರಿಂದ ದೂರಗಳನ್ನು ತಿಳಿಯುವುದು ಕಷ್ಟ. ಆದರೂ ದಕ್ಷಿಣದ ತುದಿ (‘ಸೌತ್ ಎಂಡ್’) ಯಿಂದ ಉತ್ತರದ ತುದಿ (ಯಶವಂತಪುರ) ಗೆ ಸುಮಾರು 10-11 ಕಿಮೀಗಳುಎಂದು ನಮಗೆ ಗೊತ್ತಿರುವುದರಿಂದ ಊಹೆಗಳನ್ನು ಮಾಡಬಹುದು. ರಾಜಾಜಿನಗರ (ಉತ್ತರ/ನೈರುತ್ಯ) ಮತ್ತು ಜಯನಗರ (ದಕ್ಷಿಣ/ಆಗ್ನೇಯ) ಆಗತಾನೇ ಹುಟ್ಟಲಿದ್ದವು. ಪಶ್ಚಿಮದಲ್ಲಿ ಮೈಸೂರು ರಸ್ತೆಯೇ ಕೊನೆ ಮತ್ತು ಪೂರ್ವದಲ್ಲಿ ವಿಲ್ಸನ್‌ ಗಾರ್ಡನ್ ಕೊನೆ. 1941ರಲ್ಲಿ ಜನಸಂಖ್ಯೆ- 4 ಲಕ್ಷ ಮತ್ತು 1951ರಲ್ಲ 7.8 ಲಕ್ಷ. ಅಂದರೆ ಆ ದಶಕದಲ್ಲಿ ಜನಸಂಖ್ಯೆ ಸುಮಾರು ಎರಡರಷ್ಟಾಗುತ್ತದೆ (ಸ್ವಾತಂತ್ರ್ಯ ಬಂದ ನಂತರ ಅಖಿಲ ಭಾರತೀಯ ಉದ್ಯಮಗಳು, ಕಾರ್ಖಾನೆಗಳು ಶುರುವಾಗಿದ್ದು ಕಾರಣವಿರಬಹುದು! ನಗರವನ್ನು ಸಿಟಿ ಮತ್ತು ಕಂಟೋನ್ಮೆಂಟ್ ಎಂದು ಎರಡು ಭಾಗಗಳಾಗಿ ಅನೌಪಚಾರಿಕವಾಗಿಯಾದರೂ ವಿಂಗಡಿಸಬಹುದಿತ್ತು. ನಮಗೆಲ್ಲಾ ಹೆಚ್ಚು ಪರಿಚಯವಿದ್ದದ್ದು ಸಿಟಿಯ ಸಂಸ್ಕೃತಿ. ಕಂಟೋನ್ಮೆಂಟ್ ನಲ್ಲಿ ಇಂಗ್ಲಿಷಿನವರು, ಆಂಗ್ಲೊ ಇಂಡಿಯನ್ ಜನ, ಸೇನೆಯ ಜನ ಮತ್ತು ತಮಿಳಿನವರು ಹೆಚ್ಚು ಇರುತ್ತಿದ್ದರು. ತಾಯಿನಾಡು ಪತ್ರಿಕೆಗೆ ಆ ಪ್ರದೇಶದಲ್ಲಿ ಹೆಚ್ಚು ಓದುಗರಿರುವ ಸಾಧ್ಯತೆ ಇಲ್ಲ.. ಆ ಸಮಯದಲ್ಲಿ ಭಾಷಾವಾರು ವಿಂಗಡಣೆ ಸುಮಾರು ಈ ತರಹ ಇದ್ದಿರಬಹುದು: ಕನ್ನಡ -35 %, ತಮಿಳು ಮತ್ತು ತೆಲುಗು -60% . ಉಳಿದವರು -5 %.

ಕೋಟೆಗೂ ಪೇಟೆಗಳಿಗೂ ಮಧ್ಯವಿದ್ದ ಜಾಗದಲ್ಲಿ 1921ರಲ್ಲಿಯೇ ಕೆ.ಆರ್‌.ಮಾರ್ಕೆಟ್ಟನ್ನು ಕಟ್ಟಲಾಗಿತ್ತು. ಅದೇ ಮಾರ್ಕೆಟ್ಟಿನ ಬಳಿ ಇದ್ದ ಸ್ಮಶಾನವಿದ್ದ ಜಾಗದಲ್ಲಿ 1935ರಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ವಾಣಿವಿಲಾಸ್ ಆಸ್ಪತ್ರೆ ಕಟ್ಟಲಾಯಿತು

೧೮೯೬ರಲ್ಲಿ ಬೆಂಗಳೂರಿನಲ್ಲಿ ಪ್ಲೇಗ್‌ ಮಾರಿ ಶುರುವಾಗಿ ಮೂವತ್ತು ಸಾವಿರಕ್ಕೂ ಹೆಚ್ಚು ಜನ ಸತ್ತರು. ಆಗ ಬೆಂಗಳೂರು ಎಂದರೆ ಮಾವಳ್ಳಿ, ಪೇಟೆಗಳು ಇತ್ಯಾದಿ… ಆ ಪ್ರದೇಶಗಳಲ್ಲಿ ಜನಸಾಂದ್ರತೆ ಹೆಚ್ಚಿದ್ದರಿಂದ ಆಗ ಡೆಪ್ಯುಟಿ ಕಮಿಷನರಾಗಿದ್ದ ವಿ. ಪಿ. ಮಾಧವರಾವ್ ಜನರನ್ನು ಸುತ್ತಮುತ್ತ ಪ್ರದೇಶಗಳಿಗೆ ಹೋಗಲು ಆಜ್ಞೆ ಮಾಡಿದರು. ಅದೇ ಸಮಯದಲ್ಲಿ ಅವರು ಎರಡು ಆಧುನಿಕ ಬಡಾವಣೆಗಳನ್ನು ಸ್ಥಾಪಿಸಬೇಕೆಂಬ ಯೋಜನೆಯನ್ನು ಮಂಡಿಸಿ ಸರಕಾರವನ್ನು ಒಪ್ಪಿಸಿದರು. ಹಾಗೆ ನಿರ್ಮಾಣವಾಗಿದ್ದು – ಮಲ್ಲೇಶ್ವರ ಮತ್ತು ಬಸವನಗುಡಿ. ಅಗಲದ ರಸ್ತೆಗಳ ಮತ್ತು ಎರಡೂ ಕಡೆ ಮರಗಳು ಈ ಬಡಾವಣೆಗಳ (ಮುಂದಿನ ಪುಟದಲ್ಲಿನ ನಕ್ಷೆ) ವೈಶಿಷ್ಟ್. ಬಸವನಗುಡಿಯ ಹೆಸರು ಬಂದಿರುವುದು ೧೬ ನೆಯ ಶತಮಾನದಲ್ಲಿ ಕಟ್ಟಿದ ಗುಡ್ಡದ ಮೇಲಿನ ಬಸವ/ನಂದಿಯ ದೇವಸ್ಥಾನದಿಂದ! ಇದು ಬ್ಯೂಗಲ್ ರಾಕ್ (ಕಹಳೆ ಬಂಡೆ) ಎನ್ನುವ ಬಂಡೆಗಳಿರುವ ದಿಣ್ಣೆಯ ಪ್ರದೇಶದಲ್ಲೇ ಎತ್ತರದ ಜಾಗದಲ್ಲಿರುವ ಗುಡ್ಡ. ನಕ್ಷೆಯ ಮಧ್ಯದಲ್ಲಿಯ ಖಾಲಿ ಪ್ರದೇಶ ಈಗಿನ ಎಂ. ಎನ್. ಕೃಷ್ಣರಾವ್‌ ಪಾರ್ಕ್. (ರಾಮಯ್ಯನವರು ೧೯೪೫ ರಲ್ಲಿ ತೆಗೆದುಕೊಂಡ ಸೈಟು ಮತ್ತು ಅಲ್ಲಿ ನಿರ್ಮಾಣವಾದ ಮನೆ ಇರುವುದು ಎಡಗಡೆಯ ದೇವಸ್ಥಾನಗಳು ಮತ್ತು ಬಲಗಡೆಯ ಪಾರ್ಕಿನ ಮಧ್ಯದ ಒಂದು ಪುಟ್ಟ ಬೀದಿಯಲ್ಲಿ, ಪೋಲೀಸ್ ಸ್ಟೇಷನ್ ರಸ್ತೆಗೆ ಲಂಬವಾಗಿ). ಅಂದಿನ ಪದ್ಧತಿಯ ಪ್ರಕಾರ ವಿವಿಧ ರಸ್ತೆಗಳನ್ನು ವಿವಿಧ ಜಾತಿಗಳಿಗೆ ಮೀಸಲಾಗಿಟ್ಟಿದ್ದರು. ಎಡಗಡೆಯಲ್ಲಿ ಡಯಾಗನಲ್ (ಕರ್ಣರೇಖೆ) ಆಗಿ ಹೋಗುತ್ತಿರುವ ರಸ್ತೆ ಇಂದಿನ ಗಾಂಧೀಬಜಾರ್‌ ಮುಖ್ಯ ರಸ್ತೆ. (ಬಲಗಡೆಯದು ಲಾಲ್ ಬಾಗಿಗೆ ) ಆ ಭಾಗದಲ್ಲಿ ಪುರಾತನ (16ನೆ ಶತಮಾನ?) ಕಾರಂಜಿ ಆಂಜನೇಯ ದೇವಸ್ಥಾನವನ್ನು ಗಮನಿಸಬಹುದು. ೧೯ ನೆಯ ಶತಮಾನದ ಕಡೆಯಲ್ಲಿ ಇಂದಿನ ನ್ಯಾಷನಲ್ ಮೈದಾನದ ಸ್ಥಳದಲ್ಲಿ ಒ೦ದು ಕೆರೆ – ಕಾರಂಜಿ – ಇದ್ದಿತಂತೆ. ಅದು ಪ್ರಾಯಶಃ ಬಹಳ ದೊಡ್ಡದಿದ್ದು ಒಂದು ದಿಕ್ಕಿನಲ್ಲಿ ಇಂದಿನ ಗಾಂಧೀಬಜಾರಿನ ತನಕ, ಇನ್ನೊಂದು ದಿಕ್ಕಿನಲ್ಲಿ ಸಜ್ಜನರಾವ್‌ ವೃತ್ತದ ತನಕ ಹರಡಿದ್ದಿರಬಹುದು. “ವಿನ್ಯಾಸವು ವಸತಿ ಮತ್ತು ತೆರೆದ ಸ್ಥಳಗಳ ಸರಿಯಾದ ಸಮತೋಲನವನ್ನು ಹೊಂದಿತ್ತು. ಸಾಂಸ್ಕೃತಿಕ ಚಟುವಟಿಕೆಗಳು, ಧಾರ್ಮಿಕ ರಚನೆ, ಶಾಲೆಗಳು ಮತ್ತು ಕ್ಲಬ್‌ಗಳಿಗೆ ಬೇರೆ ಬೇರೆ ಪ್ರದೇಶಗಳು ಇದ್ದವು. ಇದು ಎಲ್ಲಾ ಸೌಕರ್ಯಗಳುಳ್ಳ ಸ್ಥಳಗಳನ್ನು ಹೊಂದಿದ್ದು ಒಳ್ಳೆಯ ನೆರೆಹೊರೆಯ ಯೋಜನೆಯಾಗಿತ್ತು. “(ಡೆಕ್ಕನ್‌ ಹೆರಾಲ್ಡ್‌)

ಗಾಂಧಿಬಜಾರು ಬಸವನಗುಡಿಯ ವಾಣಿಜ್ಯ ಕೇಂದ್ರ. ಆ ಸಮಯದಲ್ಲಿ ಇಡೀ ನಗರದ ಒಂದು ಮುಖ್ಯ ವಾಣಿಜ್ಯ ಕೇಂದ್ರವೂ ಆಗಿತ್ತು. ಆ ಕಾಲದ ಒಂದು ಪ್ರಮುಖ ಅಂಗಡಿಬೀದಿಯಾಗಿದ್ದು ಮುಂದಿನ ಅಧ್ಯಾಯಗಳಲ್ಲಿ ನೋಡುವ ಹಾಗೆ ಆ ಕಾಲದ ಮುಖ್ಯ ಸಾಹಿತಿಗಳು ಸೇರುವ ಸ್ಥಳ ಮತ್ತು ಸಾಂಸ್ಕೃತಿಕ ಕೆಂದ್ರವೂ ಆಗಿತ್ತು. ಚಿತ್ರ: ಬಸವನ ಗುಡಿ (ಮೇಲೆ) ಮತ್ತು ಆದುನಿಕಗೊಂಡಿರುವ ಪೋಲೀಸ್ ಸ್ಟೇಷನ್ (ಕೆಳಗೆ)

(ಚಿತ್ರ: ಬೆಳ್ಳಾವೆ ವೆಂಕಟನಾರಣಪ್ಪ)

ಬಸವನಗುಡಿಯ ಎರಡು ಹೆಗ್ಗುರುತಗಳು ಬಸವನ ದೇವಸ್ಥಾನ ಮತ್ತು ಪೊಲೀಸ್ ಸ್ಟೇಷನ್. ಬಸವನಗುಡಿ ಯನ್ನು ಬೆಳೆಸಿದವರು ಹಲವಾರು ಜನರಿದ್ದಿರಬೇಕು. ಅವರಲ್ಲಿ ಬೆಳ್ಳಾವೆ ವೆಂಕಟನಾರಾಯಣಪ್ಪನವರು ಮುಖ್ಯರು. ಅನೇಕ ಆಸಕ್ತಿಗಳಿದ್ದ ವೆಂಕಟನಾರಾಯಣಪ್ಪನವರು ಭೌತ ವಿಜ್ಞಾನದ ಪ್ರಾಧ್ಯಾಪಕರಾಗಿದ್ದರು. ವಿಜ್ಞಾನ ಸಂವಹನೆಯ ಕಾರ್ಯದಲ್ಲೂ ಪ್ರಾತಃಸ್ಮರಣೀಯರು; ಕನ್ನಡದಲ್ಲಿ ಎರಡು ವರ್ಷ ಕಾಲ ವೈಜ್ಞಾನಿಕ ಮಾಸಿಕ ಪತ್ರಿಕೆಯನ್ನು ನಡೆಸಿಕೊಂಡು ಬ೦ದರು. ಡಿ.ವಿ.ಗುಂಡಪ್ಪನವರು ಅವರನ್ನು ತಮ್ಮ ಬರವಣಿಗೆಗಳಲ್ಲಿ ನೆನೆಸಿಕೊಂಡಿದ್ದಾರೆ. ಕ್ಲಬ್ (ಬಸವನಗುಡಿಯ ಕ್ಲಬ್) ಮತ್ತು ದೇವಾಲಯ (ಮಲ್ಲಿಕಾರ್ಜುನಸ್ವಾಮಿ ದೇವಾಲಯ) – ಎರಡಕ್ಕೂ ಅವರು ಕಾರಣರು! (ವೆಂಕಟನಾರಣಪ್ಪನವರ ಮನೆಗೂ ಪಿ.ಆರ್.ರಾಮಯ್ಯನವರ ಮನೆಗೂ 1980ರ ದಶಕದಲ್ಲಿ ಸಂಬಂಧ ಕೂಡಿಬಂದಿತು! ಅವರ ಮಗಳ ಮಗ ಜಗದೀಶ್ ಗುರುದತ್ ಮತ್ತು ರಾಮಯ್ಯನವರ ಕಡೆಯ ತಮ್ಮ ಗೋವಿಂದನ್ ರ ಮಗಳು ಅಲಕನಂದಾರ ಮದುವೆ 1986ರಲ್ಲಿ ನಡೆಯಿತು!

ಆ ಪೀಳಿಗೆಯ ನಂತರ ಬಂದ ಮತ್ತು ಸುಮಾರು ರಾಮಯ್ಯನವರ ವಯಸ್ಸಿನ (ನಾನು ಬಹಳ ಚಿಕ್ಕವನಾಗಿದ್ದಾಗ ನೋಡಿದ್ದ) ಅಂದಿನ ಬಸವನಗುಡಿಯ ಕೆಲವು ಗಣ್ಯರನ್ನು ನೆನೆಸಿಕೊಳ್ಳೋಣ: ಗುಂಡಪ್ಪನವರು, ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಕರಿ ಕೋಟು ಮತ್ತು ಕೊಡೆ, ಎಷ್ಟೋ ಬಾರಿ ಬ್ಯೂಗಲ್ ರಾಕ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು), ನವನೀತ ರಾಮರಾಯರು (ಆಡಳಿತದಲ್ಲಿ ಕೆಲಸ ಮಾಡಿದ್ದ ಎತ್ತರದ ಆಕರ್ಷಕ ವ್ಯಕ್ತಿ, ಆಲಸೇಷನ್ ನಾಯಿಯ(ಗಳ)ನ್ನು ಕರೆದುಕೊಂಡು ಹೋಗುತ್ತಿದ್ದರು) ಲಾಯರ್ ಎಮ್.ಪಿ. ಸೋಮಶೇಖರರಾವ್ (ಪಕ್ಕದ ಪುಟ್ಟಣ್ಣ ರಸ್ತೆಯಲ್ಲಿದ್ದರು ಮತ್ತು ಖ್ಯಾತ ಕಾದಂಬರಿಕಾರ ಎಮ್.ಎ.ಎಸ್. ಪುಟ್ಟಣ್ಣನವರ ಪುತ್ರ), ಕಲಾಮಂದಿರ ಸುಬ್ಬರಾಯರು, ಪಿ.ಕೋದಂಡರಾಯರು(ಪೇಟ ಹಾಕಿಕೊಂಡು ಪತ್ನಿ (ವಿದೇಶಿ?)ಯ ಜೊತೆ ಸಂಜೆ ವಾಕಿಂಗ್ ಹೋಗುತ್ತಿದ್ದರು) ವಾಡಿಯ ದಂಪತಿ, ಇತ್ಯಾದಿ. ಕೈಲಾಸಂ ದೂರದ ಚಾಮರಾಜಪೇಟೆಯಲ್ಲಿದ್ದರೆಂದು ಕೇಳಿದ್ದೆವು. ನಾನು ಬೆಳೆಯುತ್ತ ಇತರ ಗಣ್ಯರೂ ಈ ಪಟ್ಟಿಗೆ ಸೇರುವುದನ್ನು ಮುಂದಿನ ಅಧ್ಯಾಯಗಳಲ್ಲಿ ನೋಡೋಣ!