೧. ನಾನು ನಿನ್ನ ಬಾಯಿಯ ಕೆತ್ತಿದೆ

ನಾನು ನಿನ್ನ ಬಾಯಿಯ ಕೆತ್ತಿದೆ
ಅದರೊಳಗೆ ಸ್ವರವ ತುಂಬಿದೆ
ಅದಕೆ ಮೌನವ ಅಂಟಿಸಿದೆ
ಅದರ;
ಮೇಲೆ
ಕೆಳಗೆ
ಆಚಿಗೆ
ಈಚಿಗೆ
ಇದ್ದ
ಮಿರಮಿರ ಮಿಂಚುವ ದಂತಪಂಕ್ತಿಗೆ
ಏಟಾಗದಂತೆ ಅದರೊಳಗೆ ಪ್ರವೇಶಿಸಿದೆ;
ಮೃದು ಗುಹೆ ನೈಸರ್ಗಿಕ ಗುಹೆ ಹಾಗೆ
ರಚನೆ ಮಾಡಿದ ಬಾಯಿ

ನಿರಾಕಾರ ಮಜ್ಜೆಯ
ಕಡೆದು ಕುದಿಸಿ
ತಣಿಸಿ ತಲ್ಲಣಿಸಿದ
ಲಾಳಾಕಾರದ
ಹೆಚ್ಚಿಲ್ಲದ
ಕಮ್ಮಿ ಇರದ
ತುಪ್ಪಳ ಶೇಖರಿಸಿ ಉಬ್ಬದ
ಆ ತ್ವಚೆ
ಆ ಮೋರೆ
ಅದರ ಮೇಲೆ ಅಲೆಗಳಂತೆ ನರ್ತಿಸುವ ಕೂದಲು
ಒಂದು ಹಿಡಿಮಾಡಿ ಮುಡಿ ಕಟ್ಟಿದರೆ
ಸುರಲೋಕದ ನರ್ತಕಿಯರ
ಕಾಲ ಹೆಜ್ಜೆ ತಪ್ಪಿ
ಗೆಜ್ಜೆಯ ಕೊಂಡಿ
ಕಳಚಿ ಬೀಳಬೇಕು
ಅಂತಹ ಅನ್ಯೂಹ್ಯ ಲೋಕದರಸಿ
ಛೆ ಛೇ ನಾನು ರಚನೆ ಮಾಡಿದ್ದಲ್ಲ
ನನಗೆ ಯಾರೋ ಮಾಟ ಮಾಡಿಸಿ
ನನ್ನಿಂದ
ಅಪ್ರಯತ್ನ ಪೂರ್ವಕವಾಗಿ
ಪಶ್ಚಿಮದಲ್ಲಿ ಪ್ರಕೃತಿ ರಹಸ್ಯದಂತೆ
ಮೂಡುವ ಚಂದಿರನಂತೆ
ಉಂಟಾದ
ಸಹಜ ಬೊಂಬೆಯದು

 

 

 

 

 

 

 

 

 

 

೨. ಅಜ್ಜಯ್ಯ

“ನಿನ್ನ ಅಜ್ಜಯ್ಯ ನಲವತ್ತು ಐವತ್ತರ ಗಡಿಯಲ್ಲಿ
ದೃಢವಾಗಿದ್ದರು ಒಬ್ಬ ದ್ರೋಣನಂತೆ ಭೀಷ್ಮನಂತೆ
ಕಲ್ಲುಬಂಡೆಯಂತೆ”
ಹಾಗಂತ ಅಪ್ಪ ನನಗೆ ಹೇಳುತ್ತಿದ್ದರು

ನಾನು ಹುಟ್ಟಿ ಒಂದು ಹಂತ ಬರುವಾಗ
ನೆನಪುಗಳು ಖಡ್ಗದಂತೆ ಗೀರಿ
ಅಚ್ಚಾಗುವ ಸಮಯದ ಹದವಾದ ಪ್ರಾಯದಲ್ಲಿ
ಅಜ್ಜ ಹಾಸಿಗೆ ಹಿಡಿದಿದ್ದರು
ನನ್ನಪ್ಪ ಆ ಹಾಸಿಗೆಯ ಹರಡಿದ ಮಂಚಕ್ಕೆ ತಲೆಚಚ್ಚುತ್ತಿದ್ದರು

ಅಮ್ಮನ ಬೆರಳುಗಳು ಅಪ್ಪನ ಬೆನ್ನ ನೇವರಿಸುತ್ತಿತ್ತು

ಕವನ ಬರೆಯುವ ಚಟ ಹೊಂದಿದ್ದ ಅಣ್ಣನು
ಒಂದು ಮೂಲೆಯಲ್ಲಿ ಕುಳಿತು ಹೀಗೆ ನಡುಗುತ್ತಾ
ಬರೆಯುತ್ತಿದ್ದನು;

“ಅಜ್ಜಯ್ಯ ಬೆಳೆದು ಬೆಳೆದು ಮಗುವಿನಂತಹ ಎಳೆಯ ದೇಹದ ಹಿಡಿಯಾದರು…
ಮನಸು ಮಾತ್ರ ಹಾಸಿಗೆಯಷ್ಟು ವಿಶಾಲವಾಗಿ ಹರಡಿತ್ತು….
ಈಗ ಅಪ್ಪ ಚೆನ್ನಾಗಿ ಬೆಳೆದಿದ್ದಾರೆ ಮುಂದೆ…?
ನಾನು ಬೆಳೆಯುತ್ತಿದ್ದೇನೆ ಮುಂದೆ…?
ತಮ್ಮ ಎಳೆಯವನಿದ್ದಾನೆ ಅಜ್ಜನ ಕೊನೆ ಗಳಿಗೆಯ ದೇಹದ ಹಾಗೆ ನಯವಾದ ಸೂಕ್ಷ್ಮವಾದ ತೊಗಲನ್ನು ಹೊದ್ದುಕೊಂಡವ ಮುಂದೆ…?

೩. ಒಂದು ಹಪಹಪಿ

ಒಂದು ಅನಾದಿ ಕಾಲದ
ಶೃಂಗಾರದ ಕಸೂತಿ ಹೊತ್ತ
ಬಾಟಲಿಯ ಶರೀರದ ಒಳಗೆ
ಪುರಾಣ ಷರಾಬು
ತುಂಬಿದಂತೆ
ಪ್ರಾಯ ತುಂಬಿದ
ಆ ಚರ್ಮದ ಹಿರಿಯ ಕಂಪು

ಆ ಎರಡು ಕಣ್ಣುಗಳು;
ತುಟಿಯ ಅಂತರಾಳದ
ನಾಲಗೆಯ ತಪಸ್ಸು ತೀರಲು
ಒಂದಾಗಿ ಒಂದು
ಹಪಹಪಿಸುವ
ಕಪ್ಪು ದ್ರಾಕ್ಷಿ

ಷರಾಬು ಬುರುಗುತ್ತಾ
ಚೆಲ್ಲಿದ ಗುಳ್ಳೆಗಳು
ಏಳುತ್ತಾ ಅಮಲು
ಹೊಡೆಸುತ್ತಾ
ಪ್ರಾಯವನ್ನು ಹೀರಿ
ಯವ್ವನ ಅವಳಿಗೆ
ಹಾಗು
ಹರೆಯದಲ್ಲೇ
ಮುದಿತನ
ನನಗೆ.

 

ಅಕ್ಷಯ ಕಾಂತಬೈಲು ತರುಣ ಕವಿ.
ಎಂಜಿನಿಯರಿಂಗ್ ಪದವಿಯ ನಂತರ ಅಪ್ಪನಿಗೆ ಕೃಷಿಯಲ್ಲಿ ಸಹಾಯ ಮಾಡುತ್ತಿರುವವರು.
ಸಾಹಿತ್ಯ, ಕೃಷಿ ಇಷ್ಟದ ವಿಷಯಗಳು.

 

 

(ಇಲ್ಲಷ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)