ಅಕ್ಷಯ ಪಾತ್ರೆ

ನನ್ನ ಹೃದಯ ಹೂತು ಹೋಗಿದೆ!
ಬಾಯೊಳಗೆ ಕೈ ತುರುಕಿ
ಇಡೀ ದೇಹದೊಳಗೆ ಎಲ್ಲಿ ತಡಕಾಡಿದರೂ
ವೈದ್ಯರಿಗೇ ಸಿಗುತ್ತಿಲ್ಲ!
ಲೋಕಕ್ಕೆ ಇದೊಂದು ನಿಗೂಢ
ಪ್ರಶ್ನೆಯಾಗಿಬಿಟ್ಟಿದೆ ಈಗ!

ತಮ್ಮ ತಮ್ಮ ಹೃದಯವನ್ನು ಗಡಿಗಡಿಗೆ ಮುಟ್ಟಿಕೊಳ್ಳುತ್ತ… ಶೋಧಕ್ಕೆ ಹೊರಟವರೆಲ್ಲ
ಬೇಟೆಗಾರರಂತೆ
ನೆತ್ತರು ಮಾಂಸ ಎಲುಬು ಅಸ್ಥಿಮಜ್ಜೆ ಕರುಳು ನರನಾಡಿ ಮಲಮೂತ್ರ ಕಫ ವಾಂತಿ ಶೀತ ಪಿತ್ಥ ಗ್ರಂಥಿ ಗ್ರಂಥಿ ಗಂಟು ಗಂಟು ರಸರಸ ಕಣಕಣ
ಅಣು ರೇಣು ತೃಣ ಕಾಷ್ಠಗಳಲ್ಲೆಲ್ಲ ಎಡೆಬಿಡದೆ
ಹುಡುಕುತ್ತಿದ್ದಾರೆ ಹೃದಯವನ್ನು!

“ಹೊರಗೆ ಹಾರಿದ್ದನ್ನು ಒಳಗೆ
ಹುಡುಕಿದರೆ ಸಿಕ್ಕಲಿಕ್ಕುಂಟ?
ಇವಕ್ಕೆಲ್ಲ ಭ್ರಾಂತು!” ಎನ್ನುತ ಮುದಿ ಕೊರಪೊಲು ಪೊರಕೆ ಮೈಸೆಟೆದು ಕುಪುಳು ಕಣ್ಣನ್ನು
ಆಗಸಕ್ಕೆ ನೆಟ್ಟು ನಿಂತಿದ್ದಾಳೆ ಅಂಗಳದಲ್ಲಿ.

ವೈದ್ಯರು “ಇವಳಿಗೆ ಹುಟ್ಟುವಾಗಲೇ ಇರಲಿಲ್ಲ ಬಿಡಿ!” ಎಂದರೆ ವಿಜ್ಞಾನಿಗಳಿಗೆ “ಹೃದಯ ಎಂಬುವುದೇ ಇರದಿದ್ದ ಕಾಲದವಳು ಒಂದು ಪ್ರಾಚೀನ ಪಳೆಯುಳಿಕೆ!”
ಕಮ್ಯುನಿಸ್ಟ್ ಗಳು” ಇವಳೊಂದು ಪ್ರಾಣಿ, ಮನುಷ್ಯಳಲ್ಲ!” ಎಂದರೆ
ಹ್ಯೂಮನಿಸ್ಟುಗಳಿಗೆ “ಇವಳೊಂದು ಮನುಷ್ಯ, ಪ್ರಾಣಿಯಲ್ಲ. ಅದಕ್ಕೇ ಹೃದಯವಿಲ್ಲ!”

ನಾಸ್ತಿಕರು “ಇವಳ ಸ್ಥಾವರ ಆಲಯದಲ್ಲಿ ದೇವರಿಲ್ಲ, ಅದಕ್ಕೇ ದೇವರೆಂಬುದೇ ಇಲ್ಲ!” ಎಂದರೆ ಆಸ್ತಿಕರಿಗೆ “ಈಶಾವಾಸ್ಯಂ ಇದಂ ಸರ್ವಂ! ಇವಳೇ ಒಂದು ಹೃದಯ! ಶೂನ್ಯ !”
ಬಡವರು “ಇವಳು ದೇವರು ಅದಕ್ಕೇ ಹೃದಯವಿಲ್ಲ” ಎಂದರೆ
ವೈದ್ಯರದ್ದೋ ಅದ್ವಾನ “ಸ್ಟೆತೋಸ್ಕೋಪಿಗೇ ಸಿಕ್ಕುತ್ತಿಲ್ಲ! ಇದು ಹೆಣ!ಶವಾಗಾರ!”

ತತ್ವಜ್ಞಾನಿಗಳದ್ದೋ ವೇದಾಂತ, “ಅನುದಿನವು ತನುವಿನೊಳಗೇ ಇದ್ದು ಮನಕೆ ಹೇಳದೆ ಹೋದೆಯಲ್ಲೋ ಹಂಸ?” ಎನ್ನುತ್ತ ಅದರ ಹಿಂದೆ ಮನವೂ ಹಾರಬಾರದು ಎಂಬ ಕಾಳಜಿಯಲ್ಲಿ ಪೇಪರ್ವೆಯಿಟ್ ಹುಡುಕುತ್ತಿದ್ದಾರೆ.

ಅದುವರೆಗೂ ಮೆದುಳಲ್ಲಿ ಅವಿತಿದ್ದ ಹೃದಯ
ಮೂಲಸ್ಥಾನಕ್ಕಿಳಿದು ಮಿಡಿದದ್ದೇ ತಡ
“ಇವಳಿಗೆ ಹೃದಯವಿದೆ!… ಅಯ್ಯೋ…!” ಸದ್ದುಗದ್ದಲ ಮಾಧ್ಯಮ … ಗಲಾಟೆ ಹೊರಗೆ

ಬಡಕಲು ಮಗುವೊಂದು ಕೈ ಹಿಡಿದು, “ಅಕ್ಕಾ… ಅಕ್ಕಾ… ನನಗೂ ಹೃದಯವನ್ನು ತಿನ್ನಲು ಹೇಳಿಕೊಡುತ್ತೀರ? ಹಸಿವು” ಎಂದು ಅಳುತ್ತ ಕಂಬನಿಯನ್ನೇ ಕುಡಿಯತೊಡಗಿತು.
ನನ್ನ ಹೃದಯವನ್ನೇ ಕಿತ್ತು ಆ ಮಗುವಿನ ಕೈಯಲ್ಲಿಟ್ಟೆ.

ಮಗುವಿನ ಕೈಯಲ್ಲಿ ಹೃದಯವೀಗ
ಅಕ್ಷಯ ಪಾತ್ರೆಯಾಗಿಬಿಟ್ಟಿದೆ!

ಕಾತ್ಯಾಯಿನಿ ಕುಂಜಿಬೆಟ್ಟು ಉಡುಪಿಯ ಕಾಪು ಬಳಿಯ ಕರಂದಾಡಿಯವರು
ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತದಲ್ಲಿ ಪದವಿ ಪಡೆದಿದ್ದಾರೆ
ಕನ್ನಡ ಮತ್ತ ತುಳು ಎರಡೂ ಭಾಷೆಯ ಲೇಖಕಿ
ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ೨೬ ಕೃತಿಗಳು ಪ್ರಕಟವಾಗಿವೆ