ತ್ರಿಪುರಾ ವಿಶ್ವವಿದ್ಯಾಲಯದಿಂದ ನೀರ್ ಮಹಲ್ ಮೂವತ್ತು ಕಿಲೋಮೀಟರುಗಳಷ್ಟು ದೂರವಿತ್ತು. ಹಾದಿಯುದ್ದಕ್ಕೂ ಅಲ್ಲಲ್ಲಿ ಹಸುರು ಗದ್ದೆಗಳು, ಕೈಕಾಲು ಮುರಿದುಕೊಂಡು ಬೀದಿಗೆ ಬಿದ್ದ ಬಂಗಾಳಿ ದೇವತೆಯರು, ಮೆಟಲ್ ಶೀಟಿನ ಅಂಗಡಿಗಳು, ಮನೆಗಳು, ಕಾಡು ಕಡಿದು ಎದೆಯುಬ್ಬಿಸಿಕೊಂಡು ಎದ್ದು ನಿಂತಿದ್ದ ರಬ್ಬರ್ ತೋಟಗಳು ಸಿಕ್ಕವು. ಪ್ರವಾಸಿಗರ ಕೊರತೆಯಿಂದ ಹಾಗೂ ಬಡತನದ ಹೊಡೆತದಿಂದ ಅಗರ್ತಲಾ ಬೀದಿಗೆ ಬಿದ್ದ ಬಂಗಾಳಿ ದೇವತೆಯಂತೆಯೇ ಕಾಣುತ್ತಿತ್ತು. ನಡುವೆ ಬರುವಾಗ ಎಡಭಾಗದಲ್ಲಿ ಕಂಡ ಸಿಫಾಹಿ ಜಾಲಾ ವೈಲ್ಡ್ ಲೈಫ್ ಸ್ಯಾಂಕ್ಚುವರಿಯ ಕ್ಲೌಡೆಡ್ ಲೆಪರ್ಡ್ ನ್ಯಾಷನಲ್ ಪಾರ್ಕ್ ಬೋರ್ಡು ನನ್ನನ್ನೂ ವಿಪಿನ್ ಅನ್ನೂ ಪಟ್ಟನೆ ಸೆಳೆದಿತ್ತು!
ರೂಪಶ್ರೀ ಕಲ್ಲಿಗನೂರ್ ಅಂಕಣ

 

ಕಳೆದ ವಾರ ಕಾರ್ಯಕ್ರಮದ ಸಲುವಾಗಿ ತ್ರಿಪುರಾದ ರಾಜಧಾನಿ ಅಗರ್ತಲಾಕ್ಕೆ ಹೋಗಬೇಕಾಯಿತು. ಅದು ಅಚಾನಕ್ ಒದಗಿ ಬಂದ ಸಂದರ್ಭ. ಹೀಗೊಮ್ಮೆ ಜನ್ಮದಲ್ಲಿ ಅಗರ್ತಲಾ ಇರಲಿ, ತ್ರಿಪುರಾಕ್ಕೆ ಹೋಗಬಹುದು ಎಂದು ನಾವು ಎಣಿಸಿರಲಿಲ್ಲ. ಯಾಕಂದ್ರೆ ಮೊದಲನೆಯದಾಗಿ ತ್ರಿಪುರಾದ ಹೆಸರನ್ನು ಶಾಲೆಯ ಪಠ್ಯದಲ್ಲಿ ಓದಿದ್ದೆನಾದರೂ, ಅಗರ್ತಲಾದ ಹೆಸರು ಅದರಲ್ಲಿ ಇತ್ತೋ ಇಲ್ಲವೋ ನನಗೆ ನೆನಪಿರಲಿಲ್ಲ. ಮತ್ತೊಂದು ಕಾರಣವೆಂದರೆ ಅಗರ್ತಲಾ ಆಗಲೀ ತ್ರಿಪುರಾ ಆಗಲೀ, ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಅವುಗಳ ಹೆಸರನ್ನು ಎಂದೂ ಕಾಣದಿದ್ದುದ್ದು ಎರಡನೆಯ ಕಾರಣ. ಬೆಂಗಳೂರಿನಿಂದ ಅಗರ್ತಲಾಕ್ಕೆ ಹೋಗಬೇಕೆಂದರೆ 3.521 ಕಿಲೋ ಮೀಟರಿನಷ್ಟು ದಾರಿ ಸವೆಸಬೇಕು. ಆದಾಗ ಒಮ್ಮೆ ಮೆಘಾಲಯ, ಮಣಿಪುರಗಳಿಗೆ ಭೇಟಿ ನೀಡಬೇಕು ಅಂದುಕೊಂಡಿದ್ದ ನಮಗೆ, ಅಷ್ಟು ದೂರ ಹೋಗುವುದರ ಬಗ್ಗೆ ಗೊಂದಲವೇನೂ ಇರಲಿಲ್ಲ. ವಿಮಾನಯಾನ ಸಾಮಾನ್ಯವಾಗುತ್ತಿರುವ ಈ ದಿನಗಳಲ್ಲಿ ಸಾವಿರ ಕಿ.ಮೀ. ನಷ್ಟು ದೂರಗಳಿಗೆ ತಲೆಕೆಡಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾದರೂ, ಅಲ್ಲಿ ಹೆಚ್ಚಿನ ಪ್ರವಾಸಿ ತಾಣಗಳಲ್ಲಿದೇ ಇರೋ ವಿಷಯಗ ಬಗ್ಗೆ ಮಾತ್ರ ಸ್ವಲ್ಪ ಅಸಮಾಧಾನವಿತ್ತು.

ಬೆಂಗಳೂರಿನಿಂದ ಅಗರ್ತಲಾಕ್ಕೆ ರೈಲ್ವೇ ಮಾರ್ಗದಲ್ಲಿ ಹೋಗಬೇಕಾದರೆ ಮೂರೂವರೆ ದಿನಗಳು ಹಿಡಿಯುತ್ತವೆ. ಆದರೆ ವಿಮಾನದಲ್ಲಿ ಕೇವಲ ಎರಡು ಗಂಟೆ ನಲ್ವತ್ತು ನಿಮಿಷಗಳು ಮಾತ್ರ ಸಾಕು! ಬೆಂಗಳೂರಿನಿಂದ ಮೈಸೂರಿಗೆ ಹೋಗುವವರು ಮೂರು ತಾಸು ರಸ್ತೆಗಳಲ್ಲಿ ಕಳೆದರೂ ಕೆಲವೊಮ್ಮೆ ಮೈಸೂರಿನ ಮುಖ ಕಾಣಿಸುವುದೇ ಇಲ್ಲ. ಅಂಥ ಅನುಭವವಿರುವವರಿಗೆ ಈ ವಿಮಾನ ಮಾರ್ಗ ಅಚ್ಚರಿ ಹುಟ್ಟಿಸುತ್ತೆ.

ನಾವು ಅಗರ್ತಲಾದ ನೆಲಕ್ಕೆ ಕಾಲಿಟ್ಟಾಗ ನಡು ಮಧ್ಯಾಹ್ನ ಎರಡು ಗಂಟೆಯಾಗಿತ್ತು. ಬಿರುಬಿಸಿಲಿರಬೇಕಾದ ಸಮಯದಲ್ಲಿ ಒಂದು ಮಳೆಬಿದ್ದು, ಇಡೀ ವಾತಾವರಣವನ್ನು ತಂಪಾಗಿದ್ದರಿಂದ, ನಮಗೆ ಎಲ್ಲಿಲ್ಲದ ಖುಷಿ. ನಮಗೆ ಗೈಡ್ ಮಾಡುವವರನ್ನು ಕೇಳಿಕೊಂಡು ಟ್ಯಾಕ್ಸಿ ಹಿಡಿದು, ತ್ರಿಪುರಾ ವಿಶ್ವವಿದ್ಯಾಲಯವನ್ನು ತಲುಪುವಷ್ಟರಲ್ಲಿ ಗಂಟೆ ಮೂರಾಗಿತ್ತು. ಬೆಳಗ್ಗೆ ಮನೆ ಬೇಗಬಿಟ್ಟಿದ್ದರಿಂದ, ಎಂಟು ಗಂಟೆಯ ಹೊತ್ತಿಗೇ, ಏರ್ಪೋರ್ಟಿನಲ್ಲಿ ಸಬ್ ವೇ ಸ್ಯಾಂಡ್ವಿಚ್ಚನ್ನಷ್ಟನ್ನು ಹೊಟ್ಟೆಗಿಳಿಸಿಕೊಂಡಿದ್ದ ನಮಗೆ, ಗಂಟೆ ಮೂರು ಎಣಿಸುವಷ್ಟರಲ್ಲಿ ಹೊಟ್ಟೆಯಿಂಡ ಡಣಡಣ ಶಬ್ದ ಕೇಳಿಸಲಾರಂಭಿಸಿತ್ತು. ಹಾಗಾಗಿ ಅಲ್ಲಿಗೆ ಹೋದವರೆ, ಪರಿಚಯದವರನ್ನು ಸಸ್ಯಾಹಾರಿ ಊಟ ಎಲ್ಲಿ ಸಿಗಬಹುದು ಅಂತ ಕೇಳಿದೆವು. “ವೆಜಿಟೇರಿನ್ ಜನರಿಗೆ ಇದು ಊರು ಅಲ್ಲವೇ ಅಲ್ಲ ಮೇಡಂ. ನಿಮಗೆ ಹೊರಗೆಲ್ಲೂ ವೆಜ್ ಊಟ ಸಿಗಲ್ಲ” ಅಂತಂದುಬಿಟ್ಟರು. ಅರೇ ವಿದೇಶಗಳಲ್ಲಿ ಸಸ್ಯಾಹಾರ ಸಿಗೋದು ಕಡಿಮೆ ಅಂತ ಕೇಳಿದ್ದೀವಿ. ಆದ್ರೆ ಇಲ್ಲಿ ಸಿಗೋಲ್ಲ ಅಂದ್ರೆ… ಬಹುಷಃ ಅಷ್ಟು ಸರಿಯಿಲ್ಲದಿರಬಹುದು… ಆದ್ರೆ ಸಿಕ್ಕದ್ದನ್ನು ತಿಂದ್ರಾಯ್ತು ಅಂತಂದುಕೊಂಡು, ಹೊರಗೆ ಹೋದರೆ ನಾಲ್ಕೈದು ಕಿಲೋಮೀಟರ್ ದೂರದಲ್ಲೆಲ್ಲೂ ಸಸ್ಯಾಹಾರಿ ಹೋಟೆಲ್ ಯಾವುದೂ ನಮ್ಮ ಕಣ್ಣಿಗೆ ಕಾಣಲೇ ಇಲ್ಲ. ಆದರೆ ಸಮಯ ನಾಲ್ಕಕ್ಕೆ ತಿರುಗುವ ಹೊತ್ತಿಗೆ, ಹೊಟ್ಟೆಯ ಪರಿಸ್ಥಿತಿ ಬಿಗಡಾಯಿಸಿದ್ದರಿಂದ, ಮುಂದೆ ಸಿಕ್ಕ ನಾನ್ ವೆಜಿಟೇರಿಯನ್ ಹೋಟೆಲ್ಲಿನ ಬಾಗಿಲಿಗೇ ನಾವು ಎಡತಾಕಬೇಕಾಯಿತು.

(ಉಜ್ಜಯಂತ್ ಪ್ಯಾಲೇಸ್)

ಅಗರ್ತಲಾದಲ್ಲಿ ಬಂಗಾಳಿ ಬ್ರಾಹ್ಮಣರೂ ಮೀನು ತಿನ್ನುತ್ತಾರಂತೆ. ಹಾಗಾದ್ರೆ ಅಲ್ಲಿ ಸಸ್ಯಾಹಾರದ ಕಾನ್ಸೆಪ್ಟ್ ಅನ್ನೋದು ಇಲ್ಲವೇ ಇಲ್ಲವೇನೋ! ಬಹುತೇಕ ಖಾಲಿಯಿದ್ದ ಆ ಹೋಟೆಲ್ಲಿಗೆ ಹೋಗಿ, ಟೇಬಲ್ ಒಂದನ್ನು ಹಿಡಿದು ಕುಳಿತ ನಮ್ಮನ್ನು, ಸುತ್ತಮುತ್ತೆಲ್ಲ ಹರಡಿದ್ದ ಹುರಿದ ಮೀನಿನ ಘಾಟು ಆವರಿಸಿಕೊಂಡಿತ್ತು. ಹಸಿದ ಹೊಟ್ಟೆ… ಹುರಿದ ಮೀನು ಘಾಟು… ಹೊಟ್ಟೆಯಲ್ಲಿ ಏನೋ ವಿಚಿತ್ರ ಭಾವ ನನಗೆ. ನನ್ನ ಮುಖದ ಭಾವವನ್ನು ಗಮನಿಸಿದ ವಿಪಿನ್ “ಮೂಗಿಗೊಂದು ಕ್ಲಿಪ್ ಹಾಕ್ಕೊಂಡು ಊಟ ಮಾಡು.. ಅಷ್ಟೇ..” ಅಂತ ರೇಗಿಸುವಷ್ಟರಲ್ಲಿ, ನಮ್ಮ ಬಳಿ ಸಪ್ಲಯರ್ ಬಂದಿದ್ದ. “ವೆಜ್ ಥಾಲಿ ಹೇ ಕ್ಯಾ” ಅಂತ ಕೇಳಿದಾಗ, ಅವನು ಅರೆಬರೆ ಮನಸ್ಸಿನಿಂದ ಹೂಂ ಅಂದ. ಅಂದ್ರೆ ಆ ಹೋಟೆಲ್ಲಿಗೆ ಸಸ್ಯಾಹಾರ ಹುಡುಕಿಕೊಂಡು ಬಂದ ಪ್ರಾಣಿಗಳು ನಾವಷ್ಟೇ ಇರಬೇಕು. ಹಿಂದಿಯಲ್ಲಿ ಊಟ ಆರ್ಡರ್ ಮಾಡಿದ ನಮಗೆ ಬಂಗಾಳಿ ಬರೋದಿಲ್ಲ ಅನ್ನೋದು ಅವನಿಗೆ ಖಾತ್ರಿಯಾಗಿರಬೇಕು. ಏನನ್ನೋ ಒಬ್ಬನೇ ಮಾತಾಡಿಕೊಂಡು ಅಡುಗೆಮನೆಗೆ ಹೋದ. ವಾಪಾಸ್ಸು ಬರುವಾಗ ಪುಟ್ಟ ತಟ್ಟೆಯ ಮುಕ್ಕಾಲುಭಾಗ ಅನ್ನ, ಅದರ ಸುತ್ತ ಮೂರು ಪಲ್ಯಗಳು, ಮತ್ತು ಬಟ್ಟಲೊಂದರಲ್ಲಿ ದಾಲ್ ತಂದು ನಮ್ಮಗಳ ಮುಂದೆ ಇಟ್ಟ. ಹರಕುಮುರುಕು ಹಿಂದಿ ಪ್ರವೀಣೆ ನಾನು. ಆದರೂ ಖಾತ್ರಿ ಮಾಡಿಕೊಳ್ಳಬೇಕಲ್ಲ, ಅಂವಾ ತಂದಿಟ್ಟದ್ದು ಸಸ್ಯಾಹಾರವೇ ಅಂತ.. ಅದಕ್ಕೆ ತಟ್ಟೆಯನ್ನೊಮ್ಮೆ ಸಮಗ್ರವಾಗಿ ಪರಿಶೀಲಿಸಿ “ಏ ವೇಜ್ ಹೀ ಹೇ ನಾ ಭೈಯಾ” ಅಂತ ಕೇಳಿದೆ. ಅದಕ್ಕವನು ಬಂಗಾಳಿ ಮಿಶ್ರಿತ ಹಿಂದಿಯಲ್ಲಿ “ವೇಜ್ ಹೇ ಮೇಡಂ…” ಅಂತಂದು ಮುಂದೆ ಹೋದ. ಮೀನು ಘಾಟಿನ ಜೊತೆಗೆ ತಟ್ಟೆಯಲ್ಲಿದ್ದ ಅನ್ನ ಅರ್ಧಂಬರ್ದ ಒಳಗೆ ಹೋಗುವಷ್ಟರಲ್ಲೇ ನಾನು ಸುಸ್ತು ಹೊಡೆದಿದ್ದೆ. ಪೂರಾ ತಿಂದದ್ದು ಹಪ್ಪಳವನ್ನು ಮಾತ್ರ…

ಇದು ಈಶಾನ್ಯ ಭಾರತದ ಪ್ರದೇಶ. ಅಗರ್ತಲಾದಿಂದ ತೊಂಭತ್ತು ಕಿಲೋಮೀಟರ್ ದೂರದಲ್ಲಿ ಬಾಂಗ್ಲಾದೇಶದ ಗಡಿ ಸಿಗುತ್ತದೆ. ಬಾಂಗ್ಲಾದೇಶದ ಕಾರ್ಮಿಕ ವರ್ಗದ ಕೆಲಜನರು ದಿನವೂ ಪಾಸ್ ಪೋರ್ಟ್ ತೋರಿಸಿ ಅಗರ್ತಲಕ್ಕೆ ಬಂದು ಕೆಲಸ ಮುಗಿಸಿ ಸಂಜೆ ಕೆಲಸ ಮುಗಿದ ಮೇಲೆ ಗಡಿಗೆ ತೆರಳಿ, ಪಾಸ್ ಪೋರ್ಟ್ ತೋರಿಸಿ ಬಾಂಗ್ಲಾದೇಶಕ್ಕೆ ತೆರಳುತ್ತಾರೆ ಅಂತ ಅಗರ್ತಲಾದ ಸ್ಥಳೀಯರು ಹೇಳಿದಾಗ ನಿಜಕ್ಕೂ ಆಶ್ಚರ್ಯವಾಯಿತು. ಹಾಗಾಗಿ ಅಲ್ಲಿಗೆ ಹೋದ ಬಹುತೇಕ ಜನ ಗಡಿಯನ್ನು ನೋಡಿಕೊಂಡೇ ಹೋಗುವುದು ರೂಢಿಯಂತೆ. ನಮಗೆ ಅಷ್ಟು ಸಮಯವಿರಲಿಲ್ಲ. ಎರಡು ದಿನದ ಪ್ರವಾಸದಲ್ಲಿ ಒಂದಿಡೀ ದಿನ ಕಾರ್ಯಕ್ರಮವಿತ್ತು ಮತ್ತು ಎರಡು ಅರ್ಧ ದಿನಗಳಷ್ಟು ಮಾತ್ರ ನಮಗೆ ಪ್ರವಾಸಿ ತಾಣಗಳನ್ನು ನೋಡಲು ಅವಕಾಶವಿತ್ತು.

ಊಟ ಮುಗಿದದ್ದೇ ನಾವು ನೇರವಾಗಿ ಅಗರ್ತಲಾದ ಉಜ್ಜಯಂತ ಪ್ಯಾಲೆಸ್ ಮ್ಯೂಸಿಯಂನತ್ತ ಹೆಜ್ಜೆ ಹಾಕಿದ್ದೆವು. ತ್ರಿಪುರಾ ವಿಶ್ವವಿದ್ಯಾಲಯ ಊರ ಹೊರಗಿದ್ದ ಕಾರಣ ಬೇರಾವ ಜಾಗವೂ ನಮಗೆ ಹತ್ತಿರದಲ್ಲಿರಲಿಲ್ಲ. ಮತ್ತೆ ಊರಲ್ಲಿ ನೋಡಲಿದ್ದುದು ಮ್ಯೂಸಿಯಂ ಮಾತ್ರವೇ. ಉಜ್ಜಯಂತ ಪ್ಯಾಲೆಸ್ ತ್ರಿಪುರಾದ ಮಾಣಿಕ್ಯ ರಾಜವಂಶಜರ ಅರಮನೆಯಾಗಿತ್ತು. ಎರಡನೂರ ಐವತ್ತು ಎಕರೆಗಳಲ್ಲಿರುವ ಉಜ್ಜಯಂತ ಅರಮನೆಯೀಗ ರಾಜ್ಯ ಸರ್ಕಾರದ ಅಧೀನದಲ್ಲಿದ್ದು, ತ್ರಿಪುರಾ ರಾಜ್ಯದ ಜನಜೀವನ, ಕಲೆ, ಸಂಸ್ಕೃತಿ, ರಾಜ ಮನೆತನದ ವಿವರಗಳನ್ನೊಳಗೊಂಡ ಮ್ಯೂಸಿಯಂ ಆಗಿ ಮಾರ್ಪಟ್ಟಿದೆ.

ಒಮ್ಮೆ ಮ್ಯೂಸಿಯಮ್ಮಿನ ಒಳಗೆ ಹೋದರೆ, ಪ್ರದರ್ಶನಕ್ಕಿಟ್ಟ ಪ್ರತಿಯೊಂದನ್ನೂ ನೋಡಿಕೊಂಡು ಹೊರಬರೋಕೆ ಕನಿಷ್ಟ ಎರಡು ತಾಸಾದರೂ ಬೇಕು. ಅಲ್ಲಿ ಜನ ಸಂಸ್ಕೃತಿಯ ಮೆಲುಕು ಹಾಕುವುದರ ಜೊತೆಗೆ ರವೀಂದ್ರನಾಥ ಠ್ಯಾಗೂರರ ಒಂದಷ್ಟು ಅಪರೂಪದ ಫೋಟೋಗಳು, ಅಲ್ಲದೇ ಅವರು ಮಾಡಿದ ಮೂರ್ನಾಲ್ಕು ಕಲಾಕೃತಿಗಳನ್ನೂ ನೋಡಬಹುದು. ಮತ್ತೆ ಕೊನೆಕೊನೆಗೆ ರಾಜರುಗಳು ಬೃಹತ್ ಪೋಟ್ರೇಟ್ ಕಲಾಕೃತಿಗಳು ನಮ್ಮ ಗಮನವನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳುತ್ತವೆ. ನಾವು ಇಡೀ ಪ್ಯಾಲೇಸ್ ನೊಳಗಿದ್ದ ಅಷ್ಟೂ ಕೊಣೆಯೊಳಗಿದ್ದವನ್ನೆಲ್ಲ ನೋಡಿ ಹೊರಬರುವಷ್ಟರಲ್ಲಿ ಕತ್ತಲಾಗಿತ್ತು. ಅರೇ ಎಷ್ಟು ಸಮಯ ಕಳಿದ್ವಿ ಒಳಗೆ ಅಂತ ವಾಚ್ ನೋಡಿಕೊಂಡರೆ, ಸಮಯವಿನ್ನೂ ಏಳು ಗಂಟೆಯಷ್ಟೂ ಆಗಿರಲಿಲ್ಲ. ಈಶಾನ್ಯ ರಾಜ್ಯಗಳಲ್ಲಿ ಸೂರ್ಯ ಬೇಗ ಮುಳುಗುತ್ತಾನೆ ಅನ್ನೋದು ನಮಗೆ ಆಗ ಹೊಳೆಯಿತು.

ಹೊರಗೆ ಬಂದವರು ಆವೂರಿನ ತಿನಿಸುಗಳ ಜೊತೆಗೆ ಅಲ್ಲಿನ ನೆನಪಿಗೆ ಏನನ್ನಾದರೂ ಕೊಂಡುಕೊಳ್ಳಬೇಕು ಅಂತು ಐದಾರು ಕಿಲೋಮೀಟರ್ ನಷ್ಟು ಅಲ್ಲಿನ ಬೀದಿಗಳಲ್ಲಿ ಅಡ್ಡಾಡಿದೆವು. ಎಲ್ಲಿಯೂ ಏನೊಂದೂ ಸಿಗುವಂತೆ ಕಾಣಲಿಲ್ಲ. ಸಿಟಿಯಲ್ಲಿನ ಮಂದಿಗೂ ಹಿಂದಿ ಭಾಷೆ ಅಷ್ಟಕ್ಕಷ್ಟೇ ಗೊತ್ತಿದ್ದರಿಂದ, ನಾವು ಹೇಳೋದನ್ನು ಅವರು ಅರ್ಥಮಾಡಿಕೊಂಡು, ಅವರು ಹಾಕಿಕೊಟ್ಟ ಮಾರ್ಗ ತಲುಪಿದಾಗ ನಾವು ಗಲ್ಲಿಯೊಂದಲ್ಲಿ ಸಿಕ್ಕಿಹಾಕಿಕೊಂಡಿರುತಿದ್ದೆವು. ಎಲ್ಲೋ ಒಂದೊಂದು ಕಡೆ ಚಾಟ್ಸ್ ಅಂತ ಸಿಗುತ್ತಿತ್ತು. ಆದರದರ ಅಕ್ಕಪಕ್ಕವೆಲ್ಲ ಗಲೀಜುಮಯವಾಗಿರುತ್ತಿತ್ತು. ಸಿಟಿ ಸೆಂಟರ್ ಅಂತ ಕರೆಸಿಕೊಳ್ಳುವ ಆ ಜಾಗದಲ್ಲಿ ಒಂದೇಒಂದು ಹೋಟೆಲ್ ಸಹ ನಮಗೆ ಸಿಕ್ಕಲಿಲ್ಲ. ಅಲ್ಲಿನ ನೋಟ, ಯಾವುದೋ ಪ್ರದೇಶವೊಂದು ಪಟ್ಟಣವಾಗುವ ಹಂಬಲದಲ್ಲಿರುವಂತೆ ತೋರುತ್ತಿತ್ತು. ಅಚಾನಕ್ ಆ ಊರಿಗೆ ಹೆಜ್ಜೆಯಿಟ್ಟವರಿಗೆ ಸ್ಥಳೀಯ ತಿಂಡಿ ತೀರ್ಥದ ಸವಿಯಾಗಲೀ, ಅಲ್ಲಿನ ನೆಲದ ದೇಸಿಯ ಘಮಲಾಗಲಿ ಒಂದಿಷ್ಟೂ ನಮ್ಮೆದೆಗೆ ದಕ್ಕುವುದಿಲ್ಲ.


ಕಿಲೋಮೀಟರ್ ಗಟ್ಟಲೆ ತಿರುಗಾಡಿ, ಬರೀಗೈಯಲ್ಲಿ ಗೆಸ್ಟ್ ಹೌಸಿಗೆ ಹೋದಾಗ, ಅನ್ನ ಮತ್ತೆ, ದಾಲ್, ಜೊತೆಗೆ ಮಿಶ್ರ ತರಕಾರಿಗಳ ಪಲ್ಯ ನಮ್ಮ ಊಟಕ್ಕೆ ಕಾದಿತ್ತು. ಕೌಂಟರಿನಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಇದ್ದದ್ದರಿಂದ, ತಟ್ಟೆ ಅವರ ಮುಂದೆ ಹಿಡಿಯುವುದಕ್ಕೆ ಮುನ್ನವೇ “ಓನ್ಲೀ ವೆಜ್” ಅಂತಂದೆ. ಅದಕ್ಕವನು “ಚಿಕ್ಕನ್ ಬೀ ನಹೀ ಖಾತೇ ಮೇಡಂ?” ಅಂತ ಕೇಳೋದ…? ಮತ್ತೆ ಮಾರನೆ ದಿನ ಊಟದ ಸಮಯದಲ್ಲಿ ಮತ್ತೊಬ್ಬ ಹುಡುಗನಿಗೂ ಅದೇ ಮಾತು ಹೇಳಿದ್ದೇ… “ಫಿಶ್ ಖಾತೇ ಹೇನಾ ಮೇಡಂ..!” ಅಂತಾನೆ.. ಅರೇ.. ಇವರ ಪ್ರಕಾರ ಸಸ್ಯಾಹಾರ ಅಂದ್ರೆ ಏನು ಅಂತ ತಲೆ ವಿಪರೀತ ಕೆಟ್ಟುಹೋಗಿತ್ತು…

ಮಾರನೆಯ ದಿನಪೂರ್ತಿ ಭಾರತದ ಎಲ್ಲ ಭಾಷೆಗಳ ಕವಿತೆ-ಕತೆಗಳನ್ನು ಕೇಳುವ ಹಬ್ಬವಿತ್ತು. ಕನ್ನಡದ ಕಂಪಿನಿಂದ ಕಾರ್ಯಕ್ರಮ ಆರಂಭವಾದದ್ದು ಖುಷಿಯ ವಿಷಯ. ಡೋಗ್ರಿ, ಸಂತಲಿ, ಚಕ್ಮಾ, ಮಣಿಪುರಿ, ಗುಜರಾತ್, ನೇಪಾಳಿ, ಸಿಂಧಿ, ರಾಜಸ್ಥಾನಿ, ಸಂಸ್ಕೃತ, ಮೋಗ್, ಅಸ್ಸಾಮೀ, ಕಾಶ್ಮೀರಿ, ಹಿಂದಿ, ತೆಲುಗು ಭಾಷೆಗಳ ಸಾಹಿತ್ಯವನ್ನ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕೇಳಿದ್ದು ರೋಮಾಂಚನ ತರುವ ಅನುಭವ.

ಕಾರ್ಯಕ್ರಮದ ಮರುದಿನ ಸಂಜೆ ಐದು ಗಂಟೆಗೆ ನಮ್ಮ ವಿಮಾನವಿದ್ದದ್ದರಿಂದ, ಕೇವಲ ಎರಡು ಗಂಟೆಯವರೆಗೆ ಮಾತ್ರ ಬೇರೆ ಸ್ಥಳಗಳನ್ನು ನೋಡಲು ಅವಕಾಶವಿತ್ತು. ಬೆಳಗ್ಗೆ ಪೂರಿ ಜೊತೆ, ಬೇಳೆ-ಪಪ್ಪಾಯಿ ಕಾಯಿಯ ಸಾಗು (ಬೇಳೆ ಮತ್ತು ಪಪ್ಪಾಯಿ ಕಾಯಿಯ ಅಡುಗೆಯೇ ಪ್ರಧಾನವಲ್ಲಿ) ತಿಂದು ನೀರ್ ಮಹಲ್ ನೋಡಲು ಹೊರಟೆವು. ತೆಲುಗಿನ ಕವಿ ದಂಪತಿಗಳಾದ ಶಿಲಾಲೋಲಿತ ಮೇಡಂ ಹಾಗೂ ಯಾಕೂಬ್ ಸರ್ ನಮ್ಮ ಅಂದಿನ ಪ್ರಯಾಣದ ಜೊತೆಗಾದದ್ದು ಈ ಒಟ್ಟು ಪ್ರವಾಸದ ವಿಶೇಷತೆಗಳಲ್ಲೊಂದಾಗಿತ್ತು.

ಅಗರ್ತಲಾದಿಂದ ತೊಂಭತ್ತು ಕಿಲೋಮೀಟರ್ ದೂರದಲ್ಲಿ ಬಾಂಗ್ಲಾದೇಶದ ಗಡಿ ಸಿಗುತ್ತದೆ. ಬಾಂಗ್ಲಾದೇಶದ ಕಾರ್ಮಿಕ ವರ್ಗದ ಕೆಲಜನರು ದಿನವೂ ಪಾಸ್ ಪೋರ್ಟ್ ತೋರಿಸಿ ಅಗರ್ತಲಕ್ಕೆ ಬಂದು ಕೆಲಸ ಮುಗಿಸಿ ಸಂಜೆ ಕೆಲಸ ಮುಗಿದ ಮೇಲೆ ಗಡಿಗೆ ತೆರಳಿ, ಪಾಸ್ ಪೋರ್ಟ್ ತೋರಿಸಿ ಬಾಂಗ್ಲಾದೇಶಕ್ಕೆ ತೆರಳುತ್ತಾರೆ ಅಂತ ಅಗರ್ತಲಾದ ಸ್ಥಳೀಯರು ಹೇಳಿದಾಗ ನಿಜಕ್ಕೂ ಆಶ್ಚರ್ಯವಾಯಿತು.

ತ್ರಿಪುರಾ ವಿಶ್ವವಿದ್ಯಾಲಯದಿಂದ ನೀರ್ ಮಹಲ್ ಮೂವತ್ತು ಕಿಲೋಮೀಟರುಗಳಷ್ಟು ದೂರವಿತ್ತು. ಹಾದಿಯುದ್ದಕ್ಕೂ ಅಲ್ಲಲ್ಲಿ ಹಸುರು ಗದ್ದೆಗಳು, ಕೈಕಾಲು ಮುರಿದುಕೊಂಡು ಬೀದಿಗೆ ಬಿದ್ದ ಬಂಗಾಳಿ ದೇವತೆಯರು, ಮೆಟಲ್ ಶೀಟಿನ ಅಂಗಡಿಗಳು, ಮನೆಗಳು, ಕಾಡು ಕಡಿದು ಎದೆಯುಬ್ಬಿಸಿಕೊಂಡು ಎದ್ದು ನಿಂತಿದ್ದ ರಬ್ಬರ್ ತೋಟಗಳು ಸಿಕ್ಕವು. ಪ್ರವಾಸಿಗರ ಕೊರತೆಯಿಂದ ಹಾಗೂ ಬಡತನದ ಹೊಡೆತದಿಂದ ಅಗರ್ತಲಾ ಬೀದಿಗೆ ಬಿದ್ದ ಬಂಗಾಳಿ ದೇವತೆಯಂತೆಯೇ ಕಾಣುತ್ತಿತ್ತು. ನಡುವೆ ಬರುವಾಗ ಎಡಭಾಗದಲ್ಲಿ ಕಂಡ ಸಿಫಾಹಿ ಜಾಲಾ ವೈಲ್ಡ್ ಲೈಫ್ ಸ್ಯಾಂಕ್ಚುವರಿಯ ಕ್ಲೌಡೆಡ್ ಲೆಪರ್ಡ್ ನ್ಯಾಷನಲ್ ಪಾರ್ಕ್ ಬೋರ್ಡು ನನ್ನನ್ನೂ ವಿಪಿನನ್ನೂ ಪಟ್ಟನೆ ಸೆಳೆದಿತ್ತು!

ನೀರ್ ಮಹಲ್ ಒಂದು ಪುಟ್ಟ ದ್ವೀಪದ ತರಹದ್ದು. ಮೇಲ್ ಘರ್ ಅನ್ನೋ ಊರಿನ ರುದ್ರಸಾಗರ ಹೆಸರಿನ ಕೆರೆಯ ನಡುವಲ್ಲಿದೆ. ಇದು ತ್ರಿಪುರಾದ ಮಹಾರಾಜ ಬೀರ್ ಬಿಕ್ರಮ್ ಕಿಶೋರ್ ಮಾಣಿಕ್ಯ ದೇಬರಾಮ್ ನ ಬೇಸಿಗೆಕಾಲದ ವಾಸಸ್ಥಾನ (Summer Residence) ವಾಗಿತ್ತು. 1930ರ ಇಸವಿಯಲ್ಲಿ ಎಂಟುವರ್ಷಗಳ ಕಾಲ, 10 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಈ ಅರಮನೆಯನ್ನು ನಿರ್ಮಿಸಲಾಗಿತ್ತಂತೆ. ಈ ಮಹಲನ್ನು ನೋಡಲು ಅಂದಾಜು ಮುಕ್ಕಾಲು ಕಿಲೋಮೀಟರಿನಷ್ಟು ದೂರ ದೋಣಿಯಲ್ಲಿಯೇ ಹೋಗಬೇಕು. ಹಾಗಾಗಿ, ಪ್ರವಾಸಿಗರ ಬರುವಿಕೆಗಾಗಿಯೇ ಕಾದು ಕುಳಿತಿದ್ದ ಪುಟ್ಟ ದೋಣಿಯ ಮಾಲೀಕನೊಬ್ಬ, ನಮ್ಮನ್ನು ಮಾತನಾಡಿಸಿ, ತಗಲುವ ವೆಚ್ಚದ ಬಗ್ಗೆ ತಿಳಿಸಿ ನಮ್ಮನ್ನು ತನ್ನ ದೋಣಿಯಲ್ಲಿ ಕೂರಿಸಿಕೊಂಡು ಹೊರಟ.

ಆ ಕ್ಷಣದಲ್ಲಿ ಇತರೆ ಪ್ರವಾಸಿಗರ ಹಾವಳಿಯಿಂದ ಕೆರೆಯ ನೀರೂ, ಸುತ್ತ ಮುತ್ತಲ ವಾತಾವರಣವೂ ಕಲುಷಿತಗೊಳ್ಳದಿದ್ದದ್ದು ಕಂಡು ನಮ್ಮಗಳ ಮನಸ್ಸಿಗೆ ಕೊಂಚ ನೆಮ್ಮದಿ ಎನ್ನಿಸಿತು. ನಾವು ಕುಳಿತ ದೋಣಿಯ ನಾವಿಕ, ಬಹುಷಃ ಎಪ್ಪತ್ತರ ಮುದುಕನಿರಬೇಕು. ಮೈಯಲ್ಲಿನ ಕಸುವನ್ನೆಲ್ಲಾ ಹಾಕಿ ಹುಟ್ಟು ಹಾಕುತ್ತಿದ್ದ. ಆದರೂ ಅವನ ವಯಸ್ಸಿಗೆ ತಕ್ಕಂತೆ ನಮ್ಮ ಪ್ರಯಾಣ ಆದಷ್ಟು, ಸಾಕಷ್ಟು ನಿಧಾನವೇ ಆಗಿ, ನೀರ್ ಮಹಲ್ ಮುಟ್ಟಲು ಮೂವತ್ತೈದು ನಲವತ್ತು ನಿಮಿಷಗಳು ಹಿಡಿಯಿತು. ಸುಡುಸುಡುವ ಬಿಸಿಲಿತ್ತಾದರೂ ದೋಣಿಯಲ್ಲಿ ಇರುವಷ್ಟೂ ಹೊತ್ತು, ಅದರ ಬಿಸಿ ನಮ್ಮನ್ನು ಮುಟ್ಟಿರಲಿಲ್ಲ.

ಥಳಥಳ ಹೊಳೆವ ಶ್ವೇತ ವರ್ಣದ ಈ ನೀರ್ ಮಹಲ್ ಇಂಡೋ-ಇಸ್ಲಾಮಿಕ್ ಮತ್ತೂ ಇತರ ಶೈಲಿಯನ್ನೊಳಗೊಂಡು ರೂಪಿಸಲಾದ ಅರಮನೆ. ಒಟ್ಟು ಇಪ್ಪತ್ನಾಲ್ಕು ಕೋಣೆಗಳಿರುವ ಈ ಅರಮನೆಯಾಗಲೀ ಅಲ್ಲಿನ ರಾಜರ ಕೋಣೆಗಳಾಗಲೀ ರಾಜರ ಮಟ್ಟಿಗೆ ಕಟ್ಟಲಾಗುವ ದೊಡ್ಡ ಅರಮನೆಗಳಂತಿಲ್ಲ. ಎಲ್ಲಾ ಮೂಲೆಗಳಲ್ಲೂ ಎರಡು ಮೂರು, ಸುಂದರ ಬಾಲ್ಕನಿಗಳನ್ನು ಮಾಡಲಾಗಿದ್ದು, ಎಲ್ಲಿ ನಿಂತು ನೋಡಿದರೂ ಸುತ್ತಮುತ್ತೆಲ್ಲ ನೀರೆ… ಮನೆಯ ಪಕ್ಕದಲೊಂದು ಹರಿವ ನದಿಯೋ, ಕೆರೆಯೋ ಇರುವುದರ ಖುಷಿಯೇ ಬೇರೆ. ನೀರು ಕಂಡರೆ ಮನಸ್ಸೆಷ್ಟು ಉಲ್ಲಸಿತಗೊಳ್ಳತ್ತೆ? ಹಾಗಾಗಿಯೇ ಇರಬೇಕು, ರಾಜ ಬೀರ್ ಬಿಕ್ರಮ್ ಕಿಶೋರ್ ಮಾಣಿಕ್ಯ ಅಲ್ಲೊಂದು ಪುಟ್ಟ ಅರಮನೆಯನ್ನ ಕಟ್ಟಿಸಿಕೊಂಡದ್ದು.

ನೀರ್ ಮಹಲ್ ನೋಡಿ, ವಾಪಸ್ಸು ದೋಣಿಯೇರಿ ದಡಕ್ಕೆ ತಲುಪುವ ಹೊತ್ತಿಗೆ, ಬಿಸಿಲು ಧಗಧಗಿಸಲಾರಂಬಿಸಿತ್ತು. ಅಲ್ಲಿಂದ ಮತ್ತೊಂದು ತಾಸು ದೂರ ಕ್ರಮಿಸಿದರೆ ‘ಮಾತಾಬರಿ’ ಅನ್ನುವ ದೇವಸ್ಥಾನವಿತ್ತಂತೆ. ಆದರೆ ಅಲ್ಲಿಗೆ ಹೋಗಿಬರಲಿಕ್ಕೇ ಎರಡು ತಾಸು ಹಿಡಿಯೋದ್ರಿಂದ, ದಾರಿಯಲ್ಲಿ ಬರುವಾಗ ಕಂಡ ಸಿಫಾಹಿ ಜಾಲಾ ವೈಲ್ಡ್ ಲೈಫ್ ಸ್ಯಾಂಕ್ಚುವರಿಯ ಕ್ಲೌಡೆಡ್ ಲೆಪರ್ಡ್ ನ್ಯಾಷನಲ್ ಪಾರ್ಕಿಗೆ ಭೇಟಿ ನೀಡೋಣ ಅಂತ ನಿರ್ಧರಿಸಿ ಅದರತ್ತ ಹೊರಟೆವು.

(ಒಣಹುಲ್ಲಿನ ಹಾಸಿಗೆಯ ಮೇಲೆ ಕುಳಿತ ಕ್ಲೌಡೆಡ್ ಲೆಪರ್ಡ್)

ನಾವು ಅಗರ್ತಲಾ ಪ್ರವಾಸಕ್ಕೆ ಹೋಗುವ ವಾರದ ಮುಂಚೆಯಷ್ಟೇ ಸಂದೇಶ್ ಕಡೂರ್ ಅವರ “Wild Cats of India” ಅನ್ನುವ ಡಾಕ್ಯೂಮೆಂಟರಿಯೊಂದನ್ನ ನೋಡಿದ್ದೆವು. ಅದರಲ್ಲಿ ಈಶಾನ್ಯ ಭಾರತದ ಹಲವು ಬೆಕ್ಕುಗಳನ್ನು, ಅವುಗಳ ರೂಪ, ಜೀವನ ಶೈಲಿ, ವಾಸಸ್ಥಾನಗಳನ್ನು ನೋಡಿ ಭಾರತದಲ್ಲಿ ಅದೆಷ್ಟು ವನ್ಯ ಬೆಕ್ಕುಗಳಿವೆಯಲ್ಲ ಅಂತ ಹುಬ್ಬೇರಿಸಿದ್ದೆವು. ಅವುಗಳಲ್ಲಿ ಕ್ಲೌಡೆಡ್ ಲೆಪರ್ಡ್ ನಮಗೆ ಬಹಳ ಅನನ್ಯವೂ ಮತ್ತು ಮುದ್ದೂ ಎನ್ನಿಸಿತ್ತು. ಆದ್ರೆ ಅವುಗಳಿರೋದು ಈಶಾನ್ಯ ಭಾರತದವಲ್ವ? ನಾವು ಅಲ್ಲಿಗೆಲ್ಲ ಅವುಗಳನ್ನು ಹುಡುಕಿಕೊಂಡು ಎಂದಾದರೂ ಹೋಗಬಹುದು ಎಂಬ ಯಾವ ಯೋಚನೆಯೂ ನಮಗೆ ಇರಲಿಲ್ಲ. ಆದರೆ ಯಾವಾಗ ಆ ಮೃಗಾಲಯ ಕಣ್ಣಿಗೆ ಬಿತ್ತೋ, ಇಷ್ಟು ದೂರ ಬಂದು, ನಮ್ಮಂಥವರು ಕ್ಲೌಡೆಡ್ ಲೆಪರ್ಡ್ ನೋಡಿಕೊಂಡು ಹೋಗದೇಇರೋದು ನಮಗೆ ನಾವು ಮಾಡಿಕೊಳ್ಳಬಹುದಾದ ಮೋಸ ಎನ್ನಿಸಿತು. ಹಾಗಾಗಿ ಇನ್ನೂ ಒಂದೂವರೆಗಂಟೆಗಳ ಕಾಲ ಇದ್ದ ಸಮಯನ್ನು ಮೃಗಾಲಯಕ್ಕಂತಲೇ ಮೀಸಲಿಟ್ಟೆವು.

ನಮ್ಮೊಟ್ಟಿಗಿದ್ದ ಯಾಕೂಬ್ ಸರ್ ದಂಪತಿಗಳಿಗೆ ಮೃಗಾಲಯಕ್ಕೆ ನೀಡುತ್ತಿದ್ದ ಭೇಟಿ ವಿಪರೀತ ಆಸಕ್ತಿದಾಯಕ ಅಂತೇನೂ ತೋರಿರಲಿಕ್ಕಿಲ್ಲ. ಅವರಿಬ್ಬರೂ ನಮ್ಮ ಅಪ್ಪ-ಅಮ್ಮಂದಿರಷ್ಟೇ ವಯಸ್ಸಿನ ದೊಡ್ಡವರು. ನೋಡಲಿ ಬಿಡು ಅಂದುಕೊಂಡು ಹೂಂ ಅಂದಿದ್ದರು.

ಆ ನ್ಯಾಷನಲ್ ಪಾರ್ಕಿನಲ್ಲಿ ಕಂಡ ರೀಸೆಸ್ ಮೆಕಾಕ್ ಮಂಗಗಳ ದಂಡು ಕೊಂಚ ದಕ್ಷಿಣ ಭಾರತೀಯ ಮಂಗಗಳಂತೆ ಕಂಡವು. ಆದರೆ ಅಲ್ಲಿದ್ದ ಕಾಮನ್ ಲೆಪರ್ಡ್ ಒಂದನ್ನು ಬಿಟ್ಟು ಫಿಶ್ಶಿಂಗ್ ಕ್ಯಾಟ್, ಲೆಪರ್ಡ್ ಕ್ಯಾಟ್, ಜಂಗಲ್ ಕ್ಯಾಟ್, ಬೇರ್ ಕ್ಯಾಟ್, ಸ್ಲೋ ಲಾರಿಸ್, ನೀಲಗಿರಿ ಮಾರ್ಟಿನ್, ಹಿಮಾಲಯನ್ ಪಾಮ್ ಸಿವೆಟ್, ಏಷಿಯಾಟಿಕ್ ಲಯನ್, ಆಫ್ರಿಕಾದಿಂದ ಆಮದು ಮಾಡಿಕೊಳ್ಳಲಾಗಿದ್ದ ಹಿಪ್ಪೋ ಪೊಟಾಮಸ್, ಗೋಲ್ಡನ್ ಜಕಾಲ್ ಮತ್ತು ಕ್ಲೌಡೆಡ್ ಲೆಪರ್ಡ್ ಇಡೀ ದಕ್ಷಿಣ ಭಾರತದಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ. ಅವುಗಳ ವಾಸಸ್ಥಾನವನ್ನ ಮನುಷ್ಯಪ್ರಾಣಿ ಆಕ್ರಮಿಸಿಕೊಳ್ಳುತ್ತಿರುವುದರಿಂದ ಅವುಗಳ ಸಂತತಿಯು ಅಪಾಯದ ಅಂಚಿನಲ್ಲಿದೆ.

ಹಾಗಾಗಿ ಮೃಗಾಲಯದ ಒಳಗೆ ಸಿಗುತ್ತಿದ್ದ ಬೇರೆಲ್ಲ ಪ್ರಾಣಿಗಳೂ ನಮಗೆ ಅಪರೂಪವೇ. ಆದರೂ ಕ್ಲೌಡೆಡ್ ಲೆಪರ್ಡ್ ಅನ್ನು ನೋಡುವ ಆಸೆಯಲ್ಲಿ ಹೋದ ನಾವಿಬ್ಬರೂ, ಕಂಡ ಕಂಡ ಪ್ರತಿ ಸೆಲ್ಲುಗಳಲ್ಲಿ ಅವುಗಳಿಗಾಗಿ ಹುಡುಕುತ್ತಿದ್ದೆವು. ಅತ್ತ ಬೆಕ್ಕುಗಳಷ್ಟು ಚಿಕ್ಕದೂ ಅಲ್ಲದ, ಚಿರತೆಗಳಷ್ಟು ದೊಡ್ಡದೂ ಅಲ್ಲದ ಕ್ಲೌಡೆಡ್ ಲೆಪರ್ಡ್ ಗಳು ಒಣ ಹುಲ್ಲುಹಾಸುಗಳಲ್ಲಿ ಕುಳಿತುಬಿಟ್ಟರೆ ಮುಗಿಯಿತು. ದುರ್ಬೀನು ಹಾಕಿದರೂ ಅವುಗಳನ್ನು ಹುಡುಕುವುದು ಕಷ್ಟ. ಮುಂದೆ ಮುಂದೆ ಹೋದಂತೆ ಪ್ರತ್ಯೇಕ ಎರಡು ಸೆಲ್ ಗಳಲ್ಲಿ ಮೂರು ಮುದ್ದು ಕ್ಲೌಡೆಡ್ ಲೆಪರ್ಡ್ ಗಳು ನಮ್ಮ ಕಣ್ಣಿಗೆ ಬಿದ್ದವು. ಕಣ್ಣಿಗೆ ಬಿದ್ದವು ಎಂದರೆ ಒಂಚೂರು ಕಾಣಲು ಸಿಕ್ಕವು ಅಂತಷ್ಟೇ ಹೇಳಬಹುದು. ಮಧ್ಯಾಹ್ನದ ಬಿಸಿಲಿನಲ್ಲಿ ಊಟ ಮುಗಿಸಿ ಹುಲ್ಲುಹಾಸುಗಳ ಮೇಲೆ ವಿಶ್ರಮಿಸುತ್ತಿದ್ದ ಒಂದನ್ನು ನೋಡಿಯಂತೂ “ಅಬ್ಬಾ.. ಜನ್ಮದಲ್ಲಿ ಒಮ್ಮೆ ಕ್ಲೌಡೆಡ್ ಲೆಪರ್ಡ್ ಅನ್ನು ನೋಡಿದೆವಲ್ಲ” ಅಂತ ಅನ್ನಿಸಿಬಿಟ್ಟಿತು.

ಕೊನೆಗೆ ಬರುವಾಗ ಯುವ ಪುರುಷ ಸಿಂಹವೊಂದು ಹಾಯಾಗಿ ನೆರಳಲ್ಲಿ ಕುಳಿತದ್ದು ಕಣ್ಣಿಗೆ ಬಿತ್ತು. ಇನ್ನೇನು ಅಲ್ಲಿಂದ ಕಣ್ಣು ಕೀಳಬೇಕು… ಅಷ್ಟರಲ್ಲಿ ಮಗುವಂತೆ ಮರದ ಮೇಲೆ ಕುಳಿತ ಆಜಾನುಬಾಹು ಸಿಂಹವೊಂದನ್ನು ಕಂಡು ನಗುವುಕ್ಕಿ ಬಂತು. ಮಂಗವೊಂದು, ಮರದ ಮೇಲೆ ಎಷ್ಟು ಆರಾಮವಾಗಿ ಕುಳಿತುಕೊಳ್ಳಬಹುದೋ, ಹಾಗೇ ಈ ಧಡೂತಿ ಸಿಂಹ ತನ್ನನ್ನು ತಾನು ಮಗುವೆಂದುಕೊಂಡು ಮರದ ಮೇಲೆ ಕುಳಿತಿತ್ತು.

ಯಾರಿಗಾದರೂ ಅವರವರ ಊರು ಅವರವರಿಗೆ ಪ್ರೀಯವೇ. ಅದು ಹೇಗಾದರೂ ಇರಲಿ. ಅಲ್ಲಿನ ಸಂಸ್ಕೃತಿ, ಭಾಷಾ ಶೈಲಿ, ಅದಕ್ಕೆ ತಕ್ಕುನಾದ ಜನರ ನಡವಳಿಕೆಗಳು ಒಂದಕ್ಕೊಂದು ತಳುಕುಹಾಕಿಕೊಂಡಿರುತ್ತವೆ. ಆದರೆ ಬೆಂಗಳೂರಿನಂತೆ, ಕರ್ನಾಟಕದಂತೆ ಎಲ್ಲರನ್ನೂ ಕೈಬೀಸಿ ಕರೆಯುವಷ್ಟು ಮುಕ್ತವಾದ, ಸುಂದರವಾದ ಊರು ಯಾವುದೂ ಇಲ್ಲವೇನೋ ಅಂತ ನನಗನ್ನಿಸಿತು. ಅದರಲ್ಲೂ ಬೆಂಗಳೂರಿನ ಧಾರಾಳತನ ತುಸು ಹೆಚ್ಚೇ ಅಂತ ಅದನ್ನು ಬಲ್ಲ ಎಲ್ಲರಿಗೂ ತಿಳಿದಿರುವ ಸತ್ಯ. ಬಂದವರೆಲ್ಲರನ್ನೂ ಕೈ ಬೀಸಿ ಕರೆಯುವ ಇದರ ವೇಗ ಮತ್ತು ಅಭಿವೃದ್ಧಿ ಅವಶ್ಯಕತೆಗಿಂತಲೂ ಹೆಚ್ಚಾಗಿರುವುದು ತಿಳಿದವರ ಹಳಹಳಿಗೆ ಕಾರಣ.

ಬೆಂಗಳೂರಿನಿಂದ ಅಗರ್ತಲಕ್ಕೆ ದಿನವೂ ನೇರವಾಗಿ ಮೂರ್ನಾಲ್ಕು ವಿಮಾನಗಳು ಹಾರಾಡುತ್ತವಂತೆ! ಮೂರೂವರೆ ಸಾವಿರ ಕಿ.ಮಿ. ದೂರದೂರಿನ ಜನರನ್ನೂ ತನ್ನತ್ತ ಸೆಳೆದುಕೊಂಡಿರುವ ಬೆಂಗಳೂರಿನ ಮಹಿಮೆಗೆ ಮರುಳಾಗದವರೂ ಯಾರೂ ಇಲ್ಲವೇನೋ. ಹಾಗಾಗಿ ಎಲ್ಲರೂ ತಮ್ಮೂರುಗಳನ್ನು ಬಿಟ್ಟು ಇಲ್ಲಿಗೆ ಬಂದು ಠಿಕಾಣಿ ಹೂಡುತ್ತಿದ್ದಾರೆ… ನಾವು ನಮ್ಮಲ್ಲೇ ನಿರ್ಲಕ್ಷ್ಯಕ್ಕೊಳಗಾಗಿಬಿಡುವ ಭಯ ಬೆಂಗಳೂರಿಗರಿಗೆ ಕಾಡುತ್ತಿರುವುದು ಈ ಕಾರಣಕ್ಕಾಗಿಯೇ…