ಅಜ್ಜಯ್ಯ ನೆಂಟರ ಮನೆಗೆ ಹೋದರೂ ತಮ್ಮ ದಿನಚರಿಯನ್ನು ಬದಲಿಸಿದವರಲ್ಲ. ಸಂಜೆಹೊತ್ತಿಗೆ ಮನೆಯ ಸುತ್ತಮುತ್ತ ಇರುವ ಕೋಲು, ಕಡ್ಡಿ, ತೆಂಗು, ಅಡಿಕೆಮರಗಳ ಒಣಗಿದ ತುಂಡು ಹೀಗೆ ಬಚ್ಚಲೊಲೆಗೆ ಬೇಕಾಗುವ ಎಲ್ಲವನ್ನು ಒಟ್ಟುಗೂಡಿಸುತ್ತಿದ್ದರು. ಅವನ್ನೆಲ್ಲ ಬಚ್ಚಲ ಒಲೆಯ ಹತ್ತಿರ ಜೋಡಿಸಿಡುತ್ತಿದ್ದರು. ಬೆಳಗ್ಗೆ ಐದುಗಂಟೆಗೆ ಎದ್ದು ಒಲೆಗೆ ಉರಿ ಮಾಡುವುದು ಅವರ ರೂಢಿ. ರಾತ್ರೆ ಮಲಗುವಾಗ ತಲೆಯ ಹತ್ತಿರ ತಮ್ಮ ಲಾಟೀನನ್ನು ಸಣ್ಣಗೆ ಉರಿಸುವ ಅವರಿಗೆ ಒಲೆಗೆ ಬೆಂಕಿ ಹಿಡಿಸುವುದು ಸುಲಭವಾಗಿತ್ತು.
ಚಂದ್ರಮತಿ ಸೋಂದಾ ಬರೆದ ಪ್ರಬಂಧ

 

`ಏ ಪಾಟಿ ಹಿಡದ್ಕೂಸೆ ಬಾ ಇಲ್ಲಿ’ ಅಂತ ಕರೆದಾಗ ನಾನು ಸುತ್ತಮುತ್ತ ನೋಡಿದ್ದೆ. ಅಜ್ಜಯ್ಯ ಕರೆಯುತ್ತಿದ್ದುದು ನನ್ನನ್ನೇ ಅಂತ ಅವರ ಕಡೆ ನೋಡಿದಾಗ ಗೊತ್ತಾಗಿತ್ತು. ಕೈಯಲ್ಲಿದ್ದ ಪಾಟಿ ಹಿಡಿದೇ ಅಜ್ಜಯ್ಯನ ಹತ್ತಿರ ಹೋಗಿದ್ದೆ. ನನ್ನ ಕೈಯಿಂದ ಪಾಟಿ ತೆಗೆದುಕೊಂಡ ಅಜ್ಜಯ್ಯ ನಾನು ಬರೆಯುತ್ತಿದ್ದುದು ಏನು ಅಂತ ನೋಡಲು ಪ್ರಯತ್ನಿಸಿದರೂ ಅವರಿಗೆ ಕಣ್ಣು ಅಷ್ಟಾಗಿ ಕಾಣಿಸುತ್ತಿರಲಿಲ್ಲ. ಹಾಗಾಗಿ ಒಮ್ಮೆ ಬರೆದುದನ್ನು ನೋಡಿದಂತೆ ಮಾಡಿ ನಕ್ಕು ಸುಮ್ಮನಾಗಿದ್ದರು.

ನಾನಾಗ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ. ಅಜ್ಜಯ್ಯ ಹಾಗೆಯೇ, ಓದುವವರನ್ನು, ಬರೆಯುವವರನ್ನು ಕಂಡರೆ ಅವರಿಗೆ ಅಭಿಮಾನ. ನಮ್ಮೂರಿನಲ್ಲಿ ಕನ್ನಡ ಶಾಲೆ ಶುರುವಾದುದೇ ನಾನು ಶಾಲೆಗೆ ಸೇರುವ ವರ್ಷ. ಹಾಗಂತ ನನ್ನ ಅಕ್ಕಂದಿರು, ಅಣ್ಣಂದಿರು ಅನಕ್ಷರಸ್ಥರಾಗಿರಲಿಲ್ಲ. ಗಂಡುಮಕ್ಕಳನ್ನು ಹೊರ ಊರಿನಲ್ಲಿ ಬಿಟ್ಟು ಶಿಕ್ಷಣ ಕೊಡಿಸಿದ್ದರು. ಅಕ್ಕಂದಿರಿಗೆಲ್ಲ ಮನೆಯಲ್ಲಿಯೇ ಓದುಬರಹಗಳನ್ನು ಕಲಿಸಲಾಗಿತ್ತು. ಮೊದಲು ಅಜ್ಜಯ್ಯ, ಆನಂತರ ಅಪ್ಪಯ್ಯನಿಂದ ಅವರೆಲ್ಲ ಓದಲು, ಬರೆಯಲು ಕಲಿತಿದ್ದರು. ನನ್ನ ದೊಡ್ಡಪ್ಪನ ಮಗಳು ಅಷ್ಟೊಂದು ಜಾಣೆಯಾಗಿರಲಿಲ್ಲ. ಅಜ್ಜಯ್ಯ ಅವಳ ಅಕ್ಷರ ಅಂಕುಡೊಂಕು ಅಂತ ಅವಳಿಗೆ ಹೇಳಿದರಂತೆ `ದುಂಡಗೆ ಬರಿ’ ಅಂತ. ಆಕೆ ಲಂಗ ಬಿಚ್ಚಿಟ್ಟು ಬರೆದಳಂತೆ. ನಮ್ಮ ಕಡೆ ದುಂಡಗೆ ಎನ್ನುವುದಕ್ಕೆ ಬತ್ತಲೆ ಎನ್ನುವ ಅರ್ಥವೂ ಇದೆ. ಪಾಪ! ಅವಳು ಅದನ್ನೇ ಮಾಡಿದ್ದಳು.

ಅಜ್ಜಯ್ಯ ಗೋಕರ್ಣದಲ್ಲಿದ್ದು ಕನ್ನಡ, ಸಂಸ್ಕೃತಗಳನ್ನು ಕಲಿತಿದ್ದರಂತೆ. ಅಷ್ಟೇ ಅಲ್ಲ, ಅವರು `ಸನಾತನ ಧರ್ಮ ಸೂಕ್ಷ್ಮದರ್ಶನ’ ಎನ್ನುವ ಪುಸ್ತಕವನ್ನೂ ಬರೆದಿದ್ದರೆಂದು ಅಮ್ಮ ಹೇಳುತ್ತಿದ್ದಳು. ನನ್ನ ಅಪ್ಪಯ್ಯ, ದೊಡ್ಡಪ್ಪ, ಚಿಕ್ಕಪ್ಪಂದಿರನ್ನು ಬನವಾಸೆಯಲ್ಲಿಟ್ಟು ಓದಿಸಿದ್ದರು ಅಜ್ಜಯ್ಯ. ಅತ್ತೆಯರಿಗೆ ಅಜ್ಜಯ್ಯನೇ ವಿದ್ಯಾಗುರು. ಓದುಬರಹ ಅವರ ಪ್ರಿಯ ವಿಷಯವಾಗಿದ್ದರೂ ಅಜ್ಜಯ್ಯ ಕೃಷಿಯನ್ನು ಆತುಕೊಂಡಿದ್ದವರು. ಕುಟುಂಬದ ಆದಾಯ ಕೃಷಿಯನ್ನೇ ಅವಲಂಬಿಸಿತ್ತು. ಜಮೀನನ್ನು ಗೇಣಿಗೆ ನೀಡದೆ ತಾವೇ ಕೃಷಿಯಲ್ಲಿ ತೊಡಗಿದ್ದ ಅಜ್ಜಯ್ಯ ಮಕ್ಕಳು ಪ್ರಾಯಕ್ಕೆ ಬರುತ್ತಿದ್ದಂತೆ ಎಲ್ಲ ಹೊಣೆಯನ್ನೂ ಅವರಿಗೆ ವಹಿಸಿ ತಾನು ಸಲಹೆ ಕೊಡುತ್ತ ತನಗೆ ಬೇಕೆಂದಲ್ಲಿಗೆ ಹೋಗಿಬರುವ ರಿವಾಜನ್ನು ಇರಿಸಿಕೊಂಡಿದ್ದವರು.

ಮನೆಯ ಯಜಮಾನಿಕೆಯನ್ನು ಬಿಟ್ಟುಕೊಟ್ಟಿದ್ದರೂ ಅಜ್ಜಯ್ಯನ ಮಾತಿಗೆ ಎದುರಾಡುವ ಧೈರ್ಯ ಯಾರಿಗೂ ಇರಲಿಲ್ಲ. ಮೂವರು ಗಂಡುಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳ ತುಂಬಿದ ಕುಟುಂಬ. ಆದರೂ ಅವರು ಒಬ್ಬಂಟಿ. ಸುಮಾರು ತೊಂಬತ್ತೈದು ವರ್ಷದವರೆಗೆ ಬದುಕಿದ್ದ ಅಜ್ಜಯ್ಯ ಅರವತ್ತು ತುಂಬುವುದರಲ್ಲಿಯೇ ಪತ್ನಿಯನ್ನು ಕಳೆದುಕೊಂಡಿದ್ದರೆಂದು ಅಪ್ಪಯ್ಯ ಹೇಳುತ್ತಿದ್ದರು. ತುಂಬಿದ ಮನೆಯಲ್ಲಿ ಅಜ್ಜಯ್ಯ ತಮ್ಮದೇ ಆದ ಒಂದು ಜಾಗವನ್ನು ನಿರ್ಮಿಸಿಕೊಂಡಿದ್ದರು. ಅವರೆಲ್ಲ ಚಟುವಟಿಕೆಗಳ ಕೇಂದ್ರ ಅದೇ ಆಗಿತ್ತು. ಅವರು ಮಲಗುತ್ತಿದ್ದುದು ನಡುಮನೆಯಲ್ಲಿ. ಒಂದು ಹೆಬ್ಬೆರಳು ಗಾತ್ರದ ಕೋಲು, ಒಂದು ಪೊರಕೆ, ಸಣ್ಣ ಲಾಟೀನು ಅವರ ಸಂಗಾತಿಗಳು. ಹಾಸಿಗೆಯ ಪಕ್ಕದಲ್ಲಿ ಅವುಗಳ ವಾಸ್ತವ್ಯ. ಇವೆಲ್ಲ ಮನೆಗಷ್ಟೆ ಸೀಮಿತವಾಗಿರಲಿಲ್ಲ. ಅಜ್ಜಯ್ಯ ಎಲ್ಲಿಗೆ ಹೊರಟರೂ ಅವರ ಜೊತೆಯಲ್ಲಿ ಇವೆಲ್ಲ ಇರುತ್ತಿದ್ದವು. ನೆಂಟರ ಮನೆಯಲ್ಲಿಯೂ ಇವೆಲ್ಲವಕ್ಕೂ ಜಾಗಬೇಕು.

ಮಳೆಗಾಲದ ಆರ್ಭಟ ಮುಗಿಯಿತೆಂದರೆ ಅಜ್ಜಯ್ಯನ ಸವಾರಿ ಹೊರಡುತ್ತದೆ ಎನ್ನುವುದು ಮನೆಮಂದಿಗೆ ಗೊತ್ತಿತ್ತು. ಆಗೆಲ್ಲ ಮಲೆನಾಡಿನಲ್ಲಿ ಮಳೆ ಬಿಡುವು ಕೊಡುತ್ತಿದ್ದುದೇ ದೊಡ್ಡಬ್ಬ (ದೀಪಾವಳಿ) ಮುಗಿದ ಮೇಲೆ. ಹಬ್ಬ ಮುಗಿದು ವಾರ ಅಥವಾ ಎರಡು ವಾರದಲ್ಲಿ `ನಾಳೆ ಆನು ಹೋಗವ್ವು, ಹೋಪ್ಲೆ ಗಾಡಿ ಸರಿಮಾಡು’ ಎಂದು ಗಂಡುಮಕ್ಕಳಲ್ಲಿ ಯಾರಿಗಾದರೂ ಹೇಳುತ್ತಿದ್ದರು. ಮೊಮ್ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ಅವರ ಜೊತೆಗೆ ಹೋಗುವುದೂ ಇತ್ತು. ಮಳೆ ಬಂದರೆ ಎನ್ನುವ ಭಯದಲ್ಲಿ ಅವರು ಹೊರಟರೆ ಸವಾರಿ ಗಾಡಿ ಸಿದ್ಧವಾಗುತ್ತಿತ್ತು. `ಈ ಬಾರಿ ಸವಾರಿ ಎಲ್ಲಿಗೋ? ಎಷ್ಟು ದಿವಸ್ವೋ?’ ಎಂದು ಸೊಸೆಯರು ತಮ್ಮಷ್ಟಕ್ಕೆ ಮಾತಾಡಿಕೊಳ್ಳುತ್ತಿದ್ದರೇ ವಿನಾ ಅಜ್ಜಯ್ಯನನ್ನು ಕೇಳುತ್ತಿರಲಿಲ್ಲ. ಅಜ್ಜಯ್ಯನೂ ಹಾಗೆಯೇ, ಹೇಳಿಯೇ ಹೋಗುತ್ತಿದ್ದರು ಎನ್ನುವಂತಿಲ್ಲ. ಕೆಲವೊಮ್ಮೆ ಹೇಳುವುದೂ ಇತ್ತು. ಅವರು ಎಲ್ಲೆಲ್ಲಿಗೆ ಹೋಗುತ್ತಾರೆ ಎನ್ನುವುದರ ಅಂದಾಜು ಮನೆಯವರಿಗೆ ಇತ್ತು. ಅಲ್ಲದೆ, ಅಜ್ಜಯ್ಯ ಹೋದ ಊರಿನಲ್ಲಿಯೇ ಇರುತ್ತಿದ್ದರು ಎನ್ನುವಂತಿರಲಿಲ್ಲ. ಮನೆಗೆ ವಾಪಸ್ಸು ಬರಬೇಕೆನಿಸಿದಾಗ ಸಂದೇಶ ಕಳಿಸುತ್ತಿದ್ದರು.

ಆ ಕಾಲಕ್ಕೆ ಒಂದೂರಿನಿಂದ ಇನ್ನೊಂದೂರಿಗೆ ಸಂದೇಶ ಒಯ್ಯುವವರು ಸಂತೆಗೆ ಹೋಗುವ ಜನ. ಸಾಧಾರಣವಾಗಿ ಪಟ್ಟಣಕ್ಕೆ ಸಂತೆಗೆ ಹೋಗುವ ಜನಕ್ಕೆ ಪಟ್ಟಣದ ಸುತ್ತಲಿನೂರಿನವರ ಪರಿಚಯವಿರುತ್ತಿತ್ತು. `ದೊಡ್ಡ ಹೆಗಡೇರು ನಾಳಿಕೆ ಗಾಡಿ ತಗಂಡು ಬರಕ್ಕೆ ಹೇಳು ಅಂತ ಅಂದಾರಂತೆ’ ಅನ್ನೋ ಸಂದೇಶ ಬಂತು ಅಂದ್ರೆ ಮರುದಿನ ಸವಾರಿ ಗಾಡಿ ಅಲ್ಲಿಗೆ ಹೊರಡುತ್ತಿತ್ತು.

ಅಜ್ಜಯ್ಯ ನೆಂಟರ ಮನೆಗೆ ಹೋದರೂ ತಮ್ಮ ದಿನಚರಿಯನ್ನು ಬದಲಿಸಿದವರಲ್ಲ. ಸಂಜೆಹೊತ್ತಿಗೆ ಮನೆಯ ಸುತ್ತಮುತ್ತ ಇರುವ ಕೋಲು, ಕಡ್ಡಿ, ತೆಂಗು, ಅಡಿಕೆಮರಗಳ ಒಣಗಿದ ತುಂಡು ಹೀಗೆ ಬಚ್ಚಲೊಲೆಗೆ ಬೇಕಾಗುವ ಎಲ್ಲವನ್ನು ಒಟ್ಟುಗೂಡಿಸುತ್ತಿದ್ದರು. ಅವನ್ನೆಲ್ಲ ಬಚ್ಚಲ ಒಲೆಯ ಹತ್ತಿರ ಜೋಡಿಸಿಡುತ್ತಿದ್ದರು. ಬೆಳಗ್ಗೆ ಐದುಗಂಟೆಗೆ ಎದ್ದು ಒಲೆಗೆ ಉರಿ ಮಾಡುವುದು ಅವರ ರೂಢಿ. ರಾತ್ರೆ ಮಲಗುವಾಗ ತಲೆಯ ಹತ್ತಿರ ತಮ್ಮ ಲಾಟೀನನ್ನು ಸಣ್ಣಗೆ ಉರಿಸುವ ಅವರಿಗೆ ಒಲೆಗೆ ಬೆಂಕಿ ಹಿಡಿಸುವುದು ಸುಲಭವಾಗಿತ್ತು. ರಾತ್ರಿ ಏಳುವ ಪ್ರಮೇಯ ಬಂದರೂ ಅವರು ಯಾರನ್ನೂ ಕರೆಯುತ್ತಿರಲಿಲ್ಲವಂತೆ.  ಬಚ್ಚಲೊಲೆಗೆ ಬೆಂಕಿಹಾಕಿ ನೀರು ಕಾಯಿಸುವಷ್ಟಕ್ಕೆ ಅವರ ಕೆಲಸ ಮುಗಿಯುತ್ತಿರಲಿಲ್ಲ. ಚುಮುಚುಮು ಬೆಳಗಾಗುತ್ತಿದ್ದಂತೆ ತಮ್ಮ ಸಂಗಡವೇ ಒಯ್ಯುವ ಕೋಲನ್ನು ಹಂಡೆಗೆ ಬಡಿದು `ಏಳಿ ಬೆಳಗಾತು’ ಎಂದು ಗಟ್ಟಿಯಾಗಿ ಕೂಗುವುದು ಅವರ ರೀತಿ. ಅಷ್ಟರಲ್ಲಿ ಎದ್ದಿರುತ್ತಿದ್ದ ಆ ಮನೆಯ ಹೆಂಗಸರು ತಮ್ಮ ಮಕ್ಕಳನ್ನು ಎಬ್ಬಿಸುತ್ತಿದ್ದರು. ಕಣ್ಣುಜ್ಜುತ್ತ ಬಂದ ಮಕ್ಕಳ ಕೈಗೆ ಹಲ್ಲುಪುಡಿ ಕೊಟ್ಟು ಹಲ್ಲುಜ್ಜಿಸುತ್ತಿದ್ದರು. ಆನಂತರ ಜಳಕ. `ಪುಟ್ಟ ಪುಟ್ಟ ಮಕ್ಕಳು, ಬನ್ನಿ ಬನ್ನಿ’ ಅಂತ ಹೇಳುತ್ತ ಅಜ್ಜಯ್ಯ ಎಲ್ಲರ ಮೈತೊಳೆಯುತ್ತಿದ್ದರು. `ಕಂತ್ನಳ್ಳಿ ಮಾವಯ್ಯ ಬಂದ್ರೆ ಮಕ್ಳ ಮೈತೊಳೆಯ ಕೆಲ್ಸಿಲ್ಲೆ’ ಅಂತ ಹೆಂಗಸರಿಗೆ ನಿರಾಳ.

ಅಮ್ಮ ಹೇಳುತ್ತಿದ್ದಳು ಅಜ್ಜಯ್ಯನ್ನ ಅರ್ಥಮಾಡಿಕೊಳ್ಳೋದೇ ಕಷ್ಟ ಅಂತ. ಆ ಕಾಲಕ್ಕೆ ಬೆಳಗ್ಗೆ ಗಂಡಸರ ಹೊರತಾಗಿ ಉಳಿದವರು ತಿಂಡಿತಿನ್ನುವ ರೂಢಿ ಇರಲಿಲ್ಲವಂತೆ. ಮಕ್ಕಳು, ಹೆಂಗಸರಿಗೆ ಗಂಜಿಯೂಟ. ಗಂಜಿಯೂಟ ಮಾಡಲು ಹಟಮಾಡುತ್ತಾರೆಂದು ಅಮ್ಮ ಮತ್ತು ದೊಡ್ಡಮ್ಮ ಅಜ್ಜಯ್ಯನಿಗೆ ತಿಳಿಯದಂತೆ ಮಕ್ಕಳಿಗೆ ತಿಂಡಿ ಮಾಡಿಕೊಡುವುದೂ ಇತ್ತಂತೆ. ಒಮ್ಮೆ ಇದನ್ನು ಕಂಡ ಅಜ್ಜಯ್ಯ ಸಿಟ್ಟಿನಿಂದ ಅಣ್ಣನ ಮಗನಿಗೆ ಎರಡೆಕರೆ ಗದ್ದೆ ಬರೆದುಕೊಟ್ಟರಂತೆ. ಹಾಗಂತ ಖರ್ಚಿಗೆ ಹಿಂದೇಟು ಹಾಕಿದವರಲ್ಲ ಅಂತ ಅಪ್ಪಯ್ಯ ಹೇಳುತ್ತಿದ್ದುದು ನೆನಪಿದೆ. ಸ್ವಾತಂತ್ರ್ಯ ಹೋರಾಟದ ಸಮಯ. ಹೋರಾಟಗಾರರು ಎಲ್ಲೆಲ್ಲಿಯೋ ಹಳ್ಳಿಯ ಭಾಗದಲ್ಲಿದ್ದು ತಮ್ಮ ಕೆಲಸ ಮಾಡುತ್ತಿದ್ದರಂತೆ. ಕಾನಕಾನಹಳ್ಳಿ ವೆಂಕಟರಾಮಯ್ಯನರು, ಮೈಸೂರಿನ ಎಮ್.ಎನ್ ಜೋಯಿಸರು ಪತ್ನಿ ಸಮೇತ ತಿಂಗಳಾನುಗಟ್ಟಲೆ ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟಿದ್ದರಂತೆ ಅಜ್ಜಯ್ಯ. ತಮ್ಮ ಮಾತೇ ನಡೆಯಬೇಕೆಂಬುದು ಅವರ ಇರಾದೆಯಾಗಿತ್ತು ಅಷ್ಟೆ.

ಅತ್ತೆಯರಿಗೆ ಅಜ್ಜಯ್ಯನೇ ವಿದ್ಯಾಗುರು. ಓದುಬರಹ ಅವರ ಪ್ರಿಯ ವಿಷಯವಾಗಿದ್ದರೂ ಅಜ್ಜಯ್ಯ ಕೃಷಿಯನ್ನು ಆತುಕೊಂಡಿದ್ದವರು. ಕುಟುಂಬದ ಆದಾಯ ಕೃಷಿಯನ್ನೇ ಅವಲಂಬಿಸಿತ್ತು.

ಚಿಕ್ಕಮ್ಮ ಅವರ ಮಾವನನ್ನು ನೆನೆಸಿಕೊಂಡು ನಗುತ್ತಿದ್ದರು. ನಮ್ಮ ಸಣ್ಣತ್ತೆ ತವರಿಗೆ ಬಂದರೆ ಹೆಚ್ಚು ದಿನ ಇರುತ್ತಿರಲಿಲ್ಲವಂತೆ. ಎರಡ್ಮೂರು ದಿನವಿದ್ದು ಹೊರಟುಬಿಡುತ್ತಿದ್ದರಂತೆ. ಅಪರೂಪಕ್ಕೊಮ್ಮೆ ಹೊರಡದೆ ಉಳಿದುಕೊಂಡರೆ ಅಜ್ಜಯ್ಯ ಕೇಳುತ್ತಿದ್ದರಂತೆ. `ಗೌರಿ, ಗಂಡನ ಹತ್ರ ಜಗಳ ಮಾಡಿಕ್ಯಂಡು ಬಂದ್ಯಾ?’ ಅಂತ. `ಹೌದು, ಇನ್ಮೇಲೆ ಇಲ್ಲೆ ಇರ್ತಿ’ ಅಂತ ಅಷ್ಟೇ ಜೋರಾಗಿ ಅವರೂ ಉತ್ತರಿಸುತ್ತಿದ್ದರಂತೆ. ಅಜ್ಜಯ್ಯ ಆಚೆ ಹೋದ್ಮೇಲೆ `ಅತ್ತಿಗೆದಿರು ಯಾವತ್ತು ಯಾವಾಗ ಹೋಗ್ತೀಯೆ ಅಂತ ಕೇಳದಿದ್ರೂ ಈ ಅಪ್ಪಯ್ಯಗೆ ಮಗಳು ಎರಡು ದಿವ್ಸ ಹೆಚ್ಗೆ ಉಳಕಂಡ್ರೆ ಸಂಶಯ’ ಅಂತ ಗೊಣಗುತ್ತಿದ್ದರಂತೆ.

ಎಂಬತ್ತು ವರ್ಷ ಆಗುವವರೆಗೂ ಹೀಗೆಯೇ ಇದ್ದ ಅಜ್ಜಯ್ಯ ಗಂಡುಮಕ್ಕಳ ನಡುವೆ ಭಿನ್ನಾಭಿಪ್ರಾಯ ಬಂದು ಅವರೆಲ್ಲ ಬೇರೆಯಾದಾಗ ಬಹಳ ನೊಂದುಕೊಂಡಿದ್ದರೆಂದು ಅಮ್ಮ ಹೇಳುತ್ತಿದ್ದಳು. ಮಕ್ಕಳು ಒಟ್ಟಾಗಿಯೇ ಇರಬೇಕೆಂದು ಬಯಸುತ್ತಿದ್ದ ಅವರು `ಇಲ್ಲೆಲ್ಲೂ ನೀರು ಬರದಿಲ್ಲೆ. ಕೆರೆ ಬಯಲಲ್ಲಿ ನೀರು ಸಿಗದು. ಅಲ್ಲೇ ಒಂದು ಗುಡುಸ್ಲು ಕಟ್ಟಿಕ್ಯಳಿ ಸಾಕುʼ ಎಂದು ಹೇಳಿದ್ದರಂತೆ. ಆ ಕಾಲದ ರೂಢಿಯಂತೆ ಅಜ್ಜಯ್ಯನೂ ಮಕ್ಕಳು ಬೇರೆಯಾದಾಗ, `ಆನು ಕೃಷ್ಣನ ಜೊತಿಗೆ ಇದೇ ಮನೆಲ್ಲಿ ಇರ್ತಿ. ನಿಂಗ ಬ್ಯಾರೆ ಹೋಪೋರು ಯಂತಾರು ಮಾಡಿಕ್ಯಳಿ’ ಎಂದು ಹಿರಿಯರಿಂದ ಬಂದ ಅದೇ ಮನೆಯಲ್ಲಿ ಹಿರಿಯ ಮಗನ ಜೊತೆಯಲ್ಲಿ ಉಳಿದರಂತೆ. ಆಗಾಗ ನಮ್ಮನೆಗೆ ಬಂದು ವಾರವೋ ಎರಡು ವಾರವೋ ಇರುತ್ತಿದ್ದರು. ಇರುವಷ್ಟು ದಿವಸ ಮೊಮ್ಮಕ್ಕಳೊಡನೆ ಅವರ ಒಡನಾಟವಿರುತ್ತಿತ್ತು.

ಹೊಸಮಗು ಬಂತೆಂದರೆ ಅವರಿಗೆ ಅದನ್ನು ಎತ್ತಾಡುವ ಖಯಾಲಿ ಬರುತ್ತಿತ್ತಂತೆ. ಸೊಸೆಯರು ಕೈಗೆ ಮಗುಕೊಟ್ಟು ನಮಸ್ಕರಿಸಿದರೆ `ಎಂಥ ಹೆಸರು?’ ಅಂತ ಕೇಳುತ್ತಿದ್ದರಂತೆ. ಅಮ್ಮ ಹೇಳುತ್ತಿದ್ದಳು, ಶಿಶುವಾದ ನನ್ನನ್ನು ಅವರ ಕೈಗೆ ಕೊಟ್ಟಾಗ ಮಾಮೂಲಾಗಿ ಹೆಸರು ಕೇಳಿದರಂತೆ. `ಚಂದ್ರಮತಿ’ ಅಂತ ಅಮ್ಮ ಹೇಳುತ್ತಿದ್ದಂತೆ `ಚಂದ್ರನಂಥ ಮುಖವುಳ್ಳವಳು ಚಂದ್ರಮುಖಿ ಅಂತ ಇಡಬೇಕಿತ್ತು’ ಎಂದಿದ್ದರಂತೆ. ಎತ್ತರವಿದ್ದ ಅಜ್ಜಯ್ಯನಿಗೆ ನಾನು ನೋಡುವಷ್ಟರಲ್ಲಿ ನಡುಬಾಗಿತ್ತು. ಕಣ್ಣು ಮಂಜಾಗಿತ್ತು.

ತೀರ ವಯಸ್ಸಾದ ಮೇಲೂ ಅವರು ನಮ್ಮನೆಗೆ ಬರುತ್ತಿದ್ದರು. ದೊಡ್ಡಪ್ಪನ ಮನೆಗೂ ನಮ್ಮನೆಗೂ ಅರ್ಧಫರ್ಲಾಂಗಿಗೂ ಕಡಿಮೆ ದೂರ. ತೆವಳಿಕೊಂಡು ಹೊರಟರೆ ಮೊಮ್ಮಕ್ಕಳು ಯಾರಾದರೂ ನೋಡಿ ನಮಗೆ ತಿಳಿಸುವುದಿತ್ತು. ಅಣ್ಣಂದಿರು ಅವರನ್ನು ಗೋಣಿಯಲ್ಲಿ ಕೂರಿಸಿಕೊಂಡು ಹೊತ್ತುತರುತ್ತಿದ್ದರು. `ಇಷ್ಟು ವರ್ಷ ಆದ್ಮೇಲೆ ಒಂದ್ಕಡೆ ಇರಕ್ಕೆ ಏನಪಾ?’ ಅಂತ ಅಪ್ಪಯ್ಯ ಹೇಳುತ್ತಿದ್ದರು. ಅಜ್ಜಯ್ಯ ಬರುತ್ತಿದ್ದುದರ ಒಳಗುಟ್ಟು ಅಮ್ಮನಿಗೆ ಗೊತ್ತಿತ್ತು. ಅಮ್ಮ ಮಾಡುತ್ತಿದ್ದ ಮಾವಿನಕಾಯಿ ಗೊಜ್ಜು, ಕೊತ್ತಂಬರಿಸೊಪ್ಪಿನ ಚಟ್ನಿ, ಹಾಗಲಕಾಯಿ ಪಲ್ಯ ಅಂದರೆ ಅಜ್ಜಯ್ಯನಿಗೆ ಪಂಚಪ್ರಾಣ. ವಯಸ್ಸಾದಮೇಲೆ ಅದನ್ನು ತಿಂದರೆ ಅವರ ಹೊಟ್ಟೆ ಕೆಡುತ್ತಿತ್ತು. ಆದರೂ ತಿನ್ನುವ ಖಯಾಲಿ. ಅವರ ಊಟ ನಿಧಾನ. `ಅಪ್ಪಯ್ಯ ಊಟಮಾಡಿ ಹೋದ್ನಾ?’ ಅಂತ ನಮ್ಮನ್ನು ಕೇಳುತ್ತಿದ್ದರು. `ಹೌದು’ ಅಂದರೆ `ಇನ್ನೊಂಚೂರು ಗೊಜ್ಜು ಹಾಕು’ ಅಂತಲೋ, `ಚಟ್ನಿ ಬಡಿಸು’ ಅಂತಲೋ `ಪಲ್ಯ ಇದ್ರೆ ಸ್ವಲ್ಪ ಹಾಕತ್ಯಾ?’ ಅಂತ ಅಮ್ಮನನ್ನು ಕೇಳುತ್ತಿದ್ದರು. ಅವರ ಆರೋಗ್ಯ ಏರುಪೇರು ಆದರೆ `ಅಂವ ಕೇಳ್ತಾ, ನೀನು ಬಡುಸ್ತೆ’ ಅಂತ ಅಪ್ಪಯ್ಯನಿಂದ ಅಮ್ಮನಿಗೆ ಮಂತ್ರಾಕ್ಷತೆ. `ಪಾಪ! ವಯಸ್ಸಾದವರಿಗೆ ಬಾಯಿ ಚಪ್ಪೆ, ತಿನ್ನಲಿಬಿಡಿ’ ಎನ್ನುತ್ತಿದ್ದ ಅಮ್ಮ ಅವರಿಗೆ ಮನೆಮದ್ದು ಮಾಡಿಕೊಟ್ಟು ಹುಷಾರಾಗಿ ನೋಡಿಕೊಳ್ಳುತ್ತಿದ್ದಳು.

ಆ ಕಾಲದಲ್ಲಿ ವಯಸ್ಸಾದವರು ಬಾಯಲ್ಲಿ ಕವಳ (ಎಲೆಯಡಿಕೆ) ತುಂಬುವುದು ಸಾಮಾನ್ಯವಾಗಿತ್ತು. ಆದರೆ ಅಜ್ಜಯ್ಯ ಅದರಿಂದ ದೂರ. ಪುಸ್ತಕ ಓದುವ ಹವ್ಯಾಸವಿದ್ದ ಅಜ್ಜಯ್ಯನೊಂದಿಗೆ ಪುಸ್ತಕವೂ ಇರುತ್ತಿತ್ತು. ಆದರೂ ಸಂಜೆ ಹೊತ್ತಿನಲ್ಲಿ ಮಕ್ಕಳಿಂದ ಮಗ್ಗಿ, ವಾರ, ನಕ್ಷತ್ರ, ರಾಶಿ, ಸಂವತ್ಸರಗಳ ಬಾಯಿಪಾಠ ಹೇಳಿಸುತ್ತಿದ್ದ ಅಜ್ಜಯ್ಯ ಮಕ್ಕಳಿಗೆ ಕತೆ ಹೇಳುವುದೂ ಇತ್ತು. ನೆಂಟರ ಮನೆ ಮಕ್ಕಳು ಅಜ್ಜಯ್ಯನ ಕತೆಗಾಗಿ ಕಾಯುತ್ತಿದ್ದರಂತೆ. ಮನೆಲ್ಲಿರುವಾಗ ನಾವೆಲ್ಲ ಆಗಾಗ ಅಜ್ಜಯ್ಯ ಹೇಳುತ್ತಿದ್ದ ಕತೆ ಕೇಳಲು ಅವರ ಸುತ್ತ ಕೂರುತ್ತಿದ್ದೆವು. ವಾರ, ನಕ್ಷತ್ರ, ಸಂವತ್ಸರ ಎಂದಾಗ ನೆನಪಾಗುತ್ತದೆ. ನಾವೆಲ್ಲ ಚಿಕ್ಕವರಿರುವಾಗ ಪ್ರತಿ ದಿನವೂ ಅದದೇ ವಾರ, ನಕ್ಷತ್ರ, ತಿಂಗಳು ಅಂತ ಬಾಯಿಪಾಠ ಹೇಳುವುದು ನಮಗೆ ಬೇಸರವೇ ಆದರೂ ಅದು ಅನಿವಾರ್ಯದ ಕ್ರಿಯೆ. ಪ್ರತಿದಿನ ಸಂಜೆ ಬಾಯಿಪಾಠ ಹೇಳಲೇಬೇಕಿತ್ತು, ತಪ್ಪಿಸಿಕೊಳ್ಳುವಂತಿರಲಿಲ್ಲ. `ಕೈಕಾಲ್ಮುಖ ತೊಳಕಂಡು ಬಂದು ಬಾಯಿಪಾಠ ಹೇಳಿ’ ಅಂತ ಹೇಳುತ್ತಿದ್ದರು. ಅಣ್ಣಂದಿರೋ ಅಕ್ಕಂದಿರೋ ನಮಗೆ ಮಾರ್ಗದರ್ಶಕರು. ಹಾಗಾಗಿ, ನನ್ನ ತಲೆಮಾರಿನವರಿಗೆ ಈಗಲೂ ಅರವತ್ತು ಸಂವತ್ಸರಗಳ ಹೆಸರು ಬಾಯತುದಿಯಲ್ಲಿಯೇ ಇವೆ.

ಆಗೆಲ್ಲ ಮನೆಗೆ ನೆಂಟರು ಬಂದರೆ ಅವತ್ತೇ ಹೋಗುತ್ತಿರಲಿಲ್ಲ. ಸಂಜೆಹೊತ್ತಿಗೆ `ನೀನು ಎಷ್ಟನೆ ಇಯತ್ತೆ? ಮೂರಾ? ಹಂಗಾದ್ರೆ ಎಂಟರ ಮಗ್ಗಿ ಹೇಳು ನೋಡನ’ ಅಂತ ಮಗ್ಗಿ, ಲೆಕ್ಕ, ವಾರ, ನಕ್ಷತ್ರಗಳನ್ನು ಕುರಿತಂತೆ ಮಕ್ಕಳನ್ನು ಪ್ರಶ್ನಿಸುವುದಿತ್ತು. ಸರಿಯಾಗಿ ಉತ್ತರಿಸಿದವರಿಗೆ `ಶಹಬಾಸ್‍ಗಿರಿ’ ದೊರೆಯುತ್ತಿತ್ತು. ಆಗ ಹೆತ್ತವರ ಮುಖ ಹರಿವಾಣವಾಗುತ್ತಿತ್ತು.

ಅಜ್ಜಯ್ಯ ಹೇಳುತ್ತಿದ್ದ ಕತೆ ಕೇಳುವುದೇ ಒಂದು ಸಂಭ್ರಮ. ಪ್ರಾಣಿ, ಪಕ್ಷಿಗಳ ಕತೆಯಲ್ಲಿ ಅವುಗಳ ಕೂಗು, ಗರ್ಜನೆ, ಗುಟರುಗಳನ್ನು ಅನುಕರಿಸುತ್ತಿದ್ದ ಅಜ್ಜಯ್ಯನ ರೀತಿಗೆ ನಮಗೆಲ್ಲ ಬೆರಗು. ಅವುಗಳ ಹಾರಾಟ, ಕುಪ್ಪಳಿಸುವಿಕೆ ಎಲ್ಲವೂ ಅಜ್ಜಯ್ಯನ ಕೈ ಅಭಿನಯದಿಂದ ನಮಗೆ ಕಣ್ಣಾರೆ ಕಂಡಂತಹ ಅನುಭವ. ರಾಮಾಯಣದಲ್ಲಿ ಬರುವ ಕಬಂಧ, ಸುಬಾಹು ಮುಂತಾದ ರಕ್ಕಸರನ್ನು ನಾವು ಅಜ್ಜಯ್ಯನ ಕಣ್ಣಿನಿಂದ ನೋಡುತ್ತಿದ್ದೆವು. ಅವರ ಆಟಾಟೋಪ ಕೇಳಿ ನಮಗರಿವಿಲ್ಲದಂತೆ ಅಜ್ಜಯ್ಯನ ಕಡೆಗೆ ಸರಿಯುತ್ತಿದ್ದೆವು . `ಸಂಜೆ ಹೊತ್ನಲ್ಲಿ ಅಜ್ಜನ ಕತೆ ಕೇಳದು, ರಾತ್ರೆ ನಿದ್ದೆಗಣ್ಣಲ್ಲಿ ಏನೇನೋ ಹಲಬದು’ ಅಂತ ದೊಡ್ಡಮ್ಮ, ಅಮ್ಮ, ಚಿಕ್ಕಮ್ಮಂದಿರ ದೂರು. ಭೀಮ ಬಕಾಸುರನನ್ನು ಕೊಂದ ಕತೆಯನ್ನು ಕೇಳೋಕೆ ಎಲ್ಲರಿಗೂ ಖುಶಿ. ಮತ್ತೆ ಮತ್ತೆ ಅದದೇ ಕತೆಗಳನ್ನು ಕೇಳುವುದು ಬೇಸರ ಅನಿಸುತ್ತಿರಲಿಲ್ಲ. ಹೀಗಿದ್ದ ನಮ್ಮ ಅಜ್ಜಯ್ಯ ಜೋರಾಗಿ ಸುರಿಯುತ್ತಿದ್ದ ಮಳೆಗಾಲದ ಒಂದಿನ ತೀರಿಹೋದಾಗ ನಾವೆಲ್ಲ ಚಿಕ್ಕವರು ಒಂದು ಕಡೆ ಕೂತು `ಅಜ್ಜ ಗೋವಿಂದ ಗೋವಿಂದ ಅಂತ ಸತ್ತೇಹೋದ’ ಅಂತ ಹೇಳಿದ್ದು ಮರೆಯದ ನೆನಪು.