ಅಜ್ಜಿ ಹೋಳಿಗೆಯ ಮೇಲಿನ ಆಸೆ ಎಂದೂ ಬಿಟ್ಟಿರಲೆ ಇಲ್ಲ. ಯುಗಾದಿ ಹಬ್ಬದ ದಿನಗಳಲ್ಲಿ ಹೋಳಿಗೆ ಸಿಹಿ ಮಾಡುವುದು ವಾಡಿಕೆ. ಬಹುಃಶ ನಾವೆಲ್ಲಾ ಬಾಲ್ಯದ ದಿನಗಳಲ್ಲಿ ಸಿಹಿಯೂಟ ಸವಿಯುತ್ತಿದ್ದುದೆ ವರ್ಷಕ್ಕೊಮ್ಮೆ. ಮನೆಯಲ್ಲಿ ಸಿಹಿ ಮಾಡುವಷ್ಟು ಆರ್ಥಿಕ ಅನುಕೂಲತೆಯ ಕೊರತೆಯಿಂದಾಗಿ ಪಾಯಸವನ್ನಷ್ಟೇ ಮಾಡುತ್ತಿದ್ದರು. ಅಜ್ಜಿ ಎಂಬತ್ತರ ಆಸು ಪಾಸಿನಲ್ಲಿದ್ದರೂ ಇನ್ನೂ ಗಟ್ಟಿಯಾಗಿದ್ದರು ನಡಿಗೆಯಲ್ಲಿ ಸ್ವಲ್ಪ ನಿಧಾನವಿತ್ತು ಅಷ್ಟೇ. ಆದರೆ ಮೊದಲಿನಂತೆ ಅಷ್ಟೊಂದು ಲವಲವಿಕೆ ಇರಲಿಲ್ಲ ಯಾವಾಗಲೂ ಸುಮ್ಮನೆ ಕೂರುತ್ತಿದ್ದಳು. ಆಕೆಗೆ ಇದೊಂದು ಅಭ್ಯಾಸವು ಇತ್ತು. ಮಧ್ಯ ರಾತ್ರಿಗೆ ಎಚ್ಚರವಾಗುತ್ತಿದ್ದಳು. ಸುಮ್ಮನೆ ಕೂರುತ್ತಿದ್ದಳು. ಕುಳಿತುಕೊಂಡು ನಿದ್ರೆಯ ಜೊಂಪು ಕಳೆದುಕೊಳ್ಳುತ್ತಿದ್ದಳು.
ಮಾರುತಿ ಗೋಪಿಕುಂಟೆ ಬರೆದ ಪ್ರಬಂಧ ನಿಮ್ಮ ಓದಿಗೆ

ನನ್ನಜ್ಜಿ ನೋಡಲು ಎಷ್ಟು ಸುಂದರ ಎಂದರೆ ಇಳಿವಯಸ್ಸಿನಲ್ಲಿಯೂ ಮುಖದ ತುಂಬಾ ಸದಾ ನಗು ತುಂಬಿಕೊಂಡು ಸ್ಥಿತಪ್ರಜ್ಞಳಾಗಿ ಬಂದದ್ದೆಲ್ಲಾ ಬರಲಿ ಎಂದು ಬದುಕಿದವಳು. ನನ್ನಜ್ಜನಿಗೆ ಮೊದಲ ಹೆಂಡತಿಯಾಗಿ ಬಂದವಳು ನನ್ನಜ್ಜಿ. ಬಿಳಿಬಣ್ಣದ ಸುಂದರ ಕಣ್ಣುಗಳ ನೀಳನಾಸಿಕ ಗುಂಡನೆಯ ಮುಖದ ನನ್ನಜ್ಜಿಗೆ ನಾನು ಎಂಟನೇ ವರ್ಷದವನಿರುವಾಗಲೆ ವಯಸ್ಸಾಗಿತ್ತು. ಹಲ್ಲುಗಳೆಲ್ಲ ಉದುರಿ ಬೊಚ್ಚು ಬಾಯಿಯ ನನ್ನಜ್ಜಿ ಆಹಾರವನ್ನು ಮೆದ್ದು ತಿನ್ನುತ್ತಿದ್ದನ್ನು ನೋಡುವುದೇ ಒಂದು ಚೆಂದ. ಎಂಭತ್ತು ವರ್ಷಕ್ಕೂ ಹೆಚ್ಚು ಬದುಕಿದ ಈ ಅಜ್ಜಿಯ ನೆನಪುಗಳು ಇಂದು ಮನೆಯಲ್ಲಿ ‘ಹೋಳಿಗೆ’ ಸಿಹಿಯನ್ನು ಮಾಡಿದಾಗಲೆಲ್ಲಾ ನೆನಪಾಗುತ್ತದೆ. ಯಾವುದಕ್ಕೂ ಬೇಸರವಾಗದೆ ನಿಷ್ಕಲ್ಮಶ ಪ್ರೀತಿಯನ್ನು ಇಟ್ಟುಕೊಂಡು ಬದುಕಿದ ಅವಳು, ಯಾರಿಗೂ ಯಾವತ್ತೂ ಕೇಡನ್ನು ಬಯಸದವಳು. ಆಕೆ ಇತರರೊಂದಿಗೆ ಜಗಳವಾಡಿದ್ದು ತುಂಬಾ ಕಡಿಮೆ. ನನ್ನ ಬಾಲ್ಯದ ದಿನಗಳಲ್ಲಿ ಆಕೆಯ ಬಗ್ಗೆ ಅಷ್ಟು ವಿವರಗಳು ತಿಳಿಯುತ್ತಿರಲಿಲ್ಲ. ಆದ್ದರಿಂದ ನನ್ನ ಅನುಭವಕ್ಕೆ ಬಂದವಷ್ಟೇ ನನ್ನ ನೆನಪಿನಲ್ಲಿ ಉಳಿದಿವೆ.

ಆಹಾರ ಪ್ರಿಯಳಾಗಿದ್ದ ನನ್ನಜ್ಜಿಗೆ ಸಿಹಿ ತಿನಿಸುಗಳಲ್ಲಿ ಹೋಳಿಗೆ ಎಂದರೆ ಬಲು ಇಷ್ಟ. ಈಗಿನಂತೆ ತರಾವರಿ ತಿನಿಸುಗಳು ಎಂಬತ್ತರ ದಶಕದಲ್ಲಿ ಹೇಗೆ ಸಿಗಬೇಕು? ಹೊಟ್ಟೆ ತುಂಬಾ ಊಟ ಸಿಕ್ಕರೆ ಅದೇ ಭಾಗ್ಯ ಎನ್ನುವಂತಹ ದಿನಗಳು ಅವು. ಅದನ್ನೇ ತಿಂದುಂಡು ತುಂಬು ಜೀವನ ಮಾಡುತ್ತಿದ್ದದ್ದು ಒಂದು ಪವಾಡ. ಈಗಾದರೆ ಬೇಡವಾದದ್ದನ್ನೆಲ್ಲಾ ತಿಂದು ಅರ್ಧಕ್ಕೆ ಬದುಕಿನ ಪಯಣವನ್ನು ಮುಗಿಸಿ ಹೋಗುತ್ತಾರೆ. ಆದರೆ ಹಿಂದಿನವರ ಜೀವನ ಪದ್ಧತಿಯೇ ಒಂದು ಅಚ್ಚರಿ. ಅವರ ಆಹಾರದ ಬಯಕೆಗಳು ಸೀಮಿತವಾದವುಗಳೇ ಆಗಿರುತ್ತಿದ್ದವು. ಇಷ್ಟೆಲ್ಲಾ ವಿವರಗಳು ಏಕೆಂದರೆ ನನ್ನಜ್ಜಿಯು ಹೋಳಿಗೆಗಾಗಿ ಚಡಪಡಿಸುತ್ತಿದ್ದ ರೀತಿ ಇಂದಿಗೂ ನನಗೆ ಕಣ್ಣಿಗೆ ಕಟ್ಟಿದಂತಿದೆ.

ಮನೆಯಲ್ಲಿ ಬಡತನವೇ ಹಾಸಿ ಹೊದ್ದು ಮಲಗಿ ಕೇಕೆಹಾಕುತ್ತಿತ್ತು. ಇನ್ನು ಪುಷ್ಕಳ ಊಟವೆಲ್ಲಿಂದ ಬರಬೇಕು. ಮೊದಮೊದಲು ಅಪ್ಪ ಅಮ್ಮ ಕೂಲಿ ಮಾಡಿ ಮನೆಯನ್ನು ನಡೆಸುತ್ತಿದ್ದರು. ಕ್ರಮೇಣ ಗುಡಿ ಕೈಗಾರಿಕೆಯಾಗಿ ಬೀಡಿಸುತ್ತುವ ಕಾಯಕದಿಂದ ಎರಡ್ಹೊತ್ತು ಉಣ್ಣುವ ಸ್ಥಿತಿಗೆ ಬಂದೆವು. ಆಗಲು ಸಹ ಸಾಂಪ್ರದಾಯಿಕವಾದ ಊಟವಷ್ಟೇ ದಿನ ನಿತ್ಯ ಮಾಡುತ್ತಿದ್ದದ್ದು. ಹಬ್ಬ ಹರಿ ದಿನಗಳಲ್ಲಿ ಮಾತ್ರ ಪಾಯಸ ಮಾಡಿ ಹಬ್ಬದ ಸಡಗರ ನಮ್ಮ ಹೊಟ್ಟೆಯು ಸೇರಿ ಸಂತೋಷಪಟ್ಟು ಸುಮ್ಮನೆ ಆಗುತ್ತಿತ್ತು. ಆದರೆ ನನ್ನಜ್ಜಿಯ ಮುಖದಲ್ಲಿ ಯಾವ ಉಲ್ಲಾಸವೂ ಇರುತ್ತಿರಲಿಲ್ಲ. ಅದಕ್ಕೆ ಕಾರಣವಾಗುತ್ತಿದ್ದದ್ದು ‘ಹೋಳಿಗೆ’.

ಈ ಹೋಳಿಗೆಯನ್ನು ಗ್ರಾಮೀಣ ಭಾಗದಲ್ಲಿ ‘ಒಬ್ಬಟ್ಟು’ ಎಂದು ಕರೆಯುತ್ತಿದ್ದರು. ಹೋಳಿಗೆಯಲ್ಲಿ ಕಡಲೆಬೇಳೆ ಹೋಳಿಗೆ ಕಾಯಿಹೋಳಿಗೆ ಬೇಳೆ ಹೋಳಿಗೆ ಹೆಸರುಬೇಳೆ ಹೋಳಿಗೆ ಮುಂತಾದ ಬಗೆ ಬಗೆಯ ಹೋಳಿಗೆಯನ್ನು ಮಾಡಬಹುದು. ಇದಕ್ಕೆ ಪರ್ಯಾಯ ಹೆಸರುಗಳಿವೆ. ಬೊಬ್ಬಟ್ಟು ಒಬ್ಬಟ್ಟು, ಉಬ್ಬತ್ತಿ, ವೆಡ್ಮಿ, ಪೊಲಿ, ಪುರಾಣಚೆ ಪೊಲಿ, ಪಪ್ಪು ಬಕ್ಷಲು, ಒಲಿಗ, ಇತ್ಯಾದಿಯಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಇದನ್ನೆಲ್ಲಾ ಏಕೆ ಹೇಳಿದೆ ಅಂದರೆ ವಿವರಗಳಿಗಷ್ಟೇ. ಇಷ್ಟೆಲ್ಲ ನನ್ನಜ್ಜಿಗೆ ಖಂಡಿತ ತಿಳಿದಿರಲಿಲ್ಲ. ಬಾಯಿ ಸಿಹಿ ಮಾಡಿಕೊಳ್ಳುವ ಆಸೆ ಅಷ್ಟೇ ಆಕೆಯದು. ಬಹುತೇಕ ಹಬ್ಬಗಳಲ್ಲಿ ಪಾಯಸವೆ ಸಿಹಿ ಊಟವಾಗಿತ್ತು. ಹಾಗೆಲ್ಲ ಅಜ್ಜಿ ಚಡಪಡಿಸುತ್ತಿದ್ದಳು. ನನಗೆ ಹೋಳಿಗೆ ಬೇಕೆಂದು ಹಠ ಹಿಡಿದು ಉಪವಾಸ ಇದ್ದಿದ್ದು ನೆನಪಿದೆ. ಆದರೆ ಆಕೆಯ ಆಸೆಯನ್ನು ಪೂರೈಸುವಷ್ಟು ಶಕ್ತಿ ನಮ್ಮಪ್ಪನಿಗೆ ಇರಲಿಲ್ಲ. ಆಕೆಯು ಯಾರ ಮೇಲೂ ಕೋಪಗೊಳ್ಳುತ್ತಿರಲಿಲ್ಲ. ಸುಮ್ಮನೆ ಕುಳಿತುಕೊಳ್ಳುತ್ತಿದ್ದಳು. ಇದೆಂತಹ ಪ್ರತಿಭಟನೆಯೆಂದು ನನಗೂ ಅನಿಸಿದ್ದುಂಟು. ತಣ್ಣಗೆ ಪ್ರತಿಭಟಿಸುವುದೆಂದರೆ ಇದೇ ಇರಬೇಕು. ಒಂದು ದಿನ ಉಪವಾಸ ಇದ್ದರೆ, ಮರುದಿನ ಮನೆಯಲ್ಲಿದ್ದದನ್ನು ಊಟಮಾಡಿ ತನ್ನಷ್ಟಕ್ಕೆ ತಾನಿರುತ್ತಿದ್ದಳು. ಇದು ಆಕೆಯ ಆಸೆಯನ್ನು ಆಕೆಯೆ ಗೆಲ್ಲುವ ತಂತ್ರವೊ ಪ್ರತಿಭಟನೆಯ ಅಸ್ತ್ರವೊ. ಪ್ರತಿಭಟನೆಯಿಂದ ಮನೆಯವರಿಗೆ ನೋವಾಗಲಿ ಎಂಬ ಸಣ್ಣ ಬಯಕೆ ಇತ್ತೊ ತಿಳಿಯುತ್ತಿರಲಿಲ್ಲ. ಆದರೆ ಆಕೆಯದು ಯಾವುದಕ್ಕೂ ಸ್ಥಿತಪ್ರಜ್ಞೆಯ ಸ್ಮಿತವದನ. ಅದಕ್ಕೆ ಈ ಮೊದಲೇ ನಾನು ಹೇಳಿದ್ದು ಆಕೆ ನಗುವ ಹೊತ್ತ ಸುಂದರಿಯೆಂದು ಪ್ರತಿಭಟನೆಯಲ್ಲಿ ಗಂಭೀರವಾದ ಮುಖದಲ್ಲಿ ಕಂಡೂ ಕಾಣದ ನಗು ಇರುತ್ತಿತ್ತು. ಅದು ಅವಳ ಬದುಕಿನ ನಿಗೂಢತೆ ಇರಬಹುದು ಎಂದು ನಾನು ಯೋಚಿಸಿದ್ದು ಇದೆ.

ಸಾಂಪ್ರದಾಯಿಕವಾದ ಊಟವಷ್ಟೇ ದಿನ ನಿತ್ಯ ಮಾಡುತ್ತಿದ್ದದ್ದು. ಹಬ್ಬ ಹರಿ ದಿನಗಳಲ್ಲಿ ಮಾತ್ರ ಪಾಯಸ ಮಾಡಿ ಹಬ್ಬದ ಸಡಗರ ನಮ್ಮ ಹೊಟ್ಟೆಯು ಸೇರಿ ಸಂತೋಷಪಟ್ಟು ಸುಮ್ಮನೆ ಆಗುತ್ತಿತ್ತು. ಆದರೆ ನನ್ನಜ್ಜಿಯ ಮುಖದಲ್ಲಿ ಯಾವ ಉಲ್ಲಾಸವೂ ಇರುತ್ತಿರಲಿಲ್ಲ. ಅದಕ್ಕೆ ಕಾರಣವಾಗುತ್ತಿದ್ದದ್ದು ‘ಹೋಳಿಗೆ’.

ಇಂತಹ ಸಂದರ್ಭದಲೆಲ್ಲಾ ಅಜ್ಜಿಗೊಂದು ವರದಾನವು ಇತ್ತು, ಮನೆಯಲ್ಲಿ ಹಬ್ಬದ ಸಂದರ್ಭದಲ್ಲಿ ಹೋಳಿಗೆ ಮಾಡಿಲ್ಲ ಎಂದಾದರೆ ಹಿಂದಿನಿಂದಲೂ ಕೈವಾಡದ ಕೆಲಸವನ್ನು (ಊರಿನ ದೇವರ ಕೆಲಸ) ನಾವೇ ಮಾಡಬೇಕಾಗಿತ್ತು. ಅದರಂತೆ ಹಬ್ಬದ ದಿನಗಳಲ್ಲಿ ಮನೆ ಮನೆಗೆ ಹೋಗಿ ಕೈವಾಡಿಕೆ ಪರವಾಗಿ ಕಾಳು ಕಡಿ ಪಡೆಯುವ ರೂಢಿ ಇತ್ತು. ನನಗೆ ಬುದ್ಧಿ ಬರುವ ವೇಳೆಗೆ ಅದನ್ನು ನನ್ನ ತಂದೆಯೆ ನಿಲ್ಲಿಸಿದ್ದರು. ಆದರೆ ಅಜ್ಜಿ ಆಗಾಗ ಊರನ್ನು ನೋಡುವ ನೆಪದಿಂದ ಕೆಲವು ಮನೆಗಳಿಗೆ ಭೇಟಿ ಕೊಟ್ಟು ಏನೇನೊ ಸಬೂಬು ಹೇಳಿ ‘ಹೋಳಿಗೆ’ ಯನ್ನು ಪಡೆಯದೆ ಬಿಡುತ್ತಿರಲಿಲ್ಲ. ಇದಕ್ಕಾಗಿ ಒಂದೆರಡು ಬಾರಿ ನನ್ನ ತಂದೆಯೂ ಗದರಿದ್ದು ಇದೆ. ಅವಾಗೆಲ್ಲಾ ನನ್ನಜ್ಜಿ “ಬಿಡಪ್ಪ ತಿನ್ನೊ ವಸ್ತು ಯಾರ್ ಕೊಟ್ರೇನು. ನಮ್ಮ ಹೊಟ್ಟೆ ತುಂಬಿಸ್ಕಬೇಕು ಅಷ್ಟೇ, ಇಲ್ಲಿ ಯಾರು ಹಿಂಗೆ ಬದುಕಬೇಕು ಅಂತ ಇಲ್ಲ” ಎಂದು ಬದುಕಿನ ಪಾಠ ಮಾಡುತ್ತಿದ್ದಳು. ಬೇರೆಯವರ ಮನೆಯಲ್ಲಿ ಆಹಾರ ಎತ್ಕೊಂಡು ತಿನ್ನೋದು ಸ್ವಾಭಿಮಾನಕ್ಕೆ ಧಕ್ಕೆ ಎಂದುಕೊಂಡಿದ್ದರು ನನ್ನಪ್ಪ. ಇಬ್ಬರದು ಸರಿಯೇ ಅನಿಸಿದ್ದು ನನಗೆ ಇತ್ತೀಚೆಗಷ್ಟೇ. ನನ್ನ ಅನುಭವಗಳು ವಿಸ್ತರಿಸಿ ನನ್ನೊಳಗೊಬ್ಬ ಅರಿವಿನ ಹರಿಕಾರ ಹುಟ್ಟಿದಾಗ…. ಆದರೆ ನನ್ನ ಅಜ್ಜಿ ಇರುವವರೆಗೂ ನಮ್ಮ ಬದುಕಿನ ಸ್ಥಿತಿ ಅಷ್ಟಕಷ್ಟೆ ಇದ್ದದ್ದು ನಮ್ಮ ಬದುಕಿನ ದುರಾದೃಷ್ಟವೊ ಅಥವಾ ನಮ್ಮ ದುರಾದೃಷ್ಟವೊ ಗೊತ್ತಿಲ್ಲ.

ನಮ್ಮೊಂದಿಗೆ ಹರಟುವಾಗ ನಿಮ್ಮಜ್ಜ ಇರುವಾಗ ನಮ್ಮ ಬದುಕು ಚೆಂದವಾಗಿತ್ತು ಆದರೆ ಕ್ರಮೇಣ ಬಡತನದ ಹೆಬ್ಬಾವು ನಮ್ಮನ್ನು ಈ ಸ್ಥಿತಿಗೆ ತಂದಿದೆ. ನಿಮ್ಮಜ್ಜನ ಸಾವಿನ ನಂತರ ಅದು ಇನ್ನು ಹೆಚ್ಚಾಯಿತು ಎಂದು ಚುಟುಕಾಗಿ ಹೇಳಿ ಸುಮ್ಮನಾಗುತ್ತಿದ್ದಳು. ನಾನು ನನ್ನ ಶಾಲೆಗೆ ಹೋಗುವಾಗ ಬೆಳಗಿನ ಊಟ ಮಾಡುತ್ತಿದ್ದದ್ದು ಕಡಿಮೆ. ಏಕೆಂದರೆ ಮನೆಯಲ್ಲಿ ಅಡಿಗೆ ಆಗುತ್ತಿರಲಿಲ್ಲ. ನಾನು ಅಕ್ಕ ಶಾಲೆಗೆ ಉಪವಾಸವೇ ಹೋಗುತ್ತಿದ್ದೆವು. ನನ್ನಜ್ಜಿ ಮನೆಯಲ್ಲಿ ಅಡಿಗೆಯಾದಾಗ ಶಾಲೆಯ ಹತ್ತಿರ ಬಂದು ಮೇಷ್ಟ್ರೇ ನಮ್ ಹುಡುಗ್ರು ಊಟ ಮಾಡಿಲ್ಲ. ಊಟ ಮಾಡಿ ಬರ್ತಾರೆ ಕಳಿಸಿ ಎಂದು ಕೇಳಿ ನಮ್ಮನ್ನು ಕರೆದುಕೊಂಡು ಬಂದು ಊಟ ಬಡಿಸುತ್ತಿದ್ದಳು. ಅವಾಗಲೆಲ್ಲ ಆಕೆಯ ಮುಖ ಅರಳುತ್ತಿತ್ತು. ಮೊಮ್ಮಕ್ಕಳು ಊಟ ಮಾಡಿದರೆಂಬ ಸಂತೃಪ್ತ ಭಾವ ಇರಬೇಕು. ಇದು ನಿತ್ಯವೂ ನಡೆಯುತ್ತಿತ್ತು. ಅಜ್ಜಿ ನೀನು ಬರ್ಬೇಡ ನೀನು ಬಂದು ಕರೆದರೆ ಶಾಲೆಯಲ್ಲಿ ಎಲ್ರೂ ನಮ್ಮನ್ನೆ ನೋಡುತ್ತಾರೆ ಎಂದು ಎಷ್ಟೋ ಬಾರಿ ಹೇಳಿದ್ದೆವು. ಆದರೆ ಮನೆಯಲ್ಲಿ ಎಂದೂ ಸರಿಯಾದ ಸಮಯಕ್ಕೆ ಅಡಿಗೆಯು ಆಗಲಿಲ್ಲ, ಅಜ್ಜಿ ಕರೆಯುವುದು ಬಿಡಲಿಲ್ಲ. ಶಾಲೆಯಲ್ಲಿ ಎಲ್ರೂ ನಮ್ಮನ್ನು ನೋಡುವುದನ್ನೂ ಬಿಡಲಿಲ್ಲ.. ಮೇಷ್ಟ್ರೆಲ್ಲ ಅಷ್ಟೊಂದು ದೂರ ಬರುವಾಗಲೇ ಕೂಗಿಕೊಂಡು ಬರುತ್ತಿದ್ದ ಅಜ್ಜಿಯ ಧ್ವನಿಯ ಕೇಳಿ ಹೋಗ್ರಪ್ಪ ನಿಮ್ಮಜ್ಜಿ ಬಂದಳು ಎನ್ನುತ್ತಿದ್ದರು.

ಅಜ್ಜಿ ಹೋಳಿಗೆಯ ಮೇಲಿನ ಆಸೆ ಎಂದೂ ಬಿಟ್ಟಿರಲೆ ಇಲ್ಲ. ಯುಗಾದಿ ಹಬ್ಬದ ದಿನಗಳಲ್ಲಿ ಹೋಳಿಗೆ ಸಿಹಿ ಮಾಡುವುದು ವಾಡಿಕೆ. ಬಹುಃಶ ನಾವೆಲ್ಲಾ ಬಾಲ್ಯದ ದಿನಗಳಲ್ಲಿ ಸಿಹಿಯೂಟ ಸವಿಯುತ್ತಿದ್ದುದೆ ವರ್ಷಕ್ಕೊಮ್ಮೆ. ಮನೆಯಲ್ಲಿ ಸಿಹಿ ಮಾಡುವಷ್ಟು ಆರ್ಥಿಕ ಅನುಕೂಲತೆಯ ಕೊರತೆಯಿಂದಾಗಿ ಪಾಯಸವನ್ನಷ್ಟೇ ಮಾಡುತ್ತಿದ್ದರು. ಅಜ್ಜಿ ಎಂಬತ್ತರ ಆಸು ಪಾಸಿನಲ್ಲಿದ್ದರೂ ಇನ್ನೂ ಗಟ್ಟಿಯಾಗಿದ್ದರು ನಡಿಗೆಯಲ್ಲಿ ಸ್ವಲ್ಪ ನಿಧಾನವಿತ್ತು ಅಷ್ಟೇ. ಆದರೆ ಮೊದಲಿನಂತೆ ಅಷ್ಟೊಂದು ಲವಲವಿಕೆ ಇರಲಿಲ್ಲ ಯಾವಾಗಲೂ ಸುಮ್ಮನೆ ಕೂರುತ್ತಿದ್ದಳು. ಆಕೆಗೆ ಇದೊಂದು ಅಭ್ಯಾಸವು ಇತ್ತು. ಮಧ್ಯ ರಾತ್ರಿಗೆ ಎಚ್ಚರವಾಗುತ್ತಿದ್ದಳು. ಸುಮ್ಮನೆ ಕೂರುತ್ತಿದ್ದಳು. ಕುಳಿತುಕೊಂಡು ನಿದ್ರೆಯ ಜೊಂಪು ಕಳೆದುಕೊಳ್ಳುತ್ತಿದ್ದಳು. ಅವಳ ಅಂತರಂಗದಲ್ಲಿ ಯಾವ ನೆನಪುಗಳು ತೇಲಿ ಹೋಗುತ್ತಿದ್ದವೊ ಏನೋ… ಬದುಕಿನಲ್ಲಿ ನಡೆದ ಘಟನೆಗಳು ಅವಳನ್ನು ಯೋಚನೆಗೀಡು ಮಾಡುತ್ತಿದ್ದವು ಎಂದು ಕಾಣುತ್ತದೆ.

ಅಂದು ಆ ಹಬ್ಬದ ದಿನವೂ ಹೋಳಿಗೆ ಸಿಗಲಿಲ್ಲ ಎಂಬ ನೋವು ಆಕೆಯನ್ನು ಕಾಡಿರಬೇಕು. ಮನೆಯಲ್ಲಿ ಇದ್ದುದನ್ನೆ ಊಟಮಾಡಿದ್ದಳು. ಆದರೆ ಅವಳ ಆಸೆ ಗರಿಗೆದರಿ ಕುಣಿಯುತ್ತಿತ್ತು ಎನಿಸುತ್ತದೆ. ಊರು ಈಗಿನಷ್ಟೂ ದೊಡ್ಡದೇನಲ್ಲ. ಬೆರಳೆಣಿಕೆಯ ಮನೆಗಳಷ್ಟೆ ಇದ್ದವು. ಸುಮ್ಮನೆ ಆಗಾಗ ಹೊರಗಡೆ ಹೋಗುತ್ತಿದ್ದಳು. ಬೇರೆಯವರ ಮನೆಯವರೊಂದಿಗೆ ಮಾತಾಡಿಕೊಂಡು ಬರುತ್ತಿದ್ದಳು. ಆ ದಿನವೂ ಹಾಗೆ ಹೋದವಳು ಕೈಯಲ್ಲಿ ಎರಡು ಹೋಳಿಗೆಗಳನ್ನು ಹಿಡಿದು ತಂದಳು. ಇದನ್ನೆಲ್ಲ ಬೇಡವೆನ್ನುತಿದ್ದ ಅಪ್ಪ ನೋಡಿ ಕೆಂಡಾಮಂಡಲವಾದ. ಎಲ್ಲಿಂದ ತಂದಿದ್ದು ಎಂದು ಕಟುವಾಗಿ ಕೇಳಿದ. ಆದರೆ ಆಕೆಯದು ಯಾವಾಗಲೂ ನಿರ್ಲಿಪ್ತ ಗಾಬರಿ ಇಲ್ಲದ ವ್ಯಕ್ತಿತ್ವ. ಪಕ್ಕದ ಕೇರಿಯ ಗೌರಮ್ಮನ ಮನೆಯಲ್ಲಿ ಎರಡೇ ಎರಡು ಹೋಳಿಗೆ ಕೊಟ್ಟರು. ಚಿಕ್ಕ ಹುಡುಗರು ತಿನ್ನಲಿ ಎಂದು ತಂದೆ ಎಂದಳು. ಅಪ್ಪನಿಗೆ ಉರಿದು ಹೋಯಿತು.. ಅದನ್ನು ಕಿತ್ತುಕೊಳ್ಳಲು ಹೋದರು ಅದನ್ನು ತಪ್ಪಿಸಿಕೊಳ್ಳುವ ಬರದಲ್ಲಿ ಅಜ್ಜಿ ಹಟ್ಟಿಯಂಗಳದ ಕಲ್ಲನ್ನು ಎಡವಿ ಬಿದ್ದಳು. ಇದೆಲ್ಲಾ ಕ್ಷಣಮಾತ್ರದಲ್ಲಿ ನಡೆದು ಹೋಳಿಗೆಯ ತುಂಡುಗಳು ಚೆಲ್ಲಾಪಿಲ್ಲಿಯಾಗಿದ್ದವು. ಹೋಳಿಗೆ ನೆಲಕ್ಕೆ ಬಿದ್ದ ಕಾರಣಕ್ಕೆ ಬೇಸರಿಸಿಕೊಂಡ ಅಜ್ಜಿ ಅದೇ ನೆಪದಲ್ಲಿ ಜ್ವರ ಬಂದು ಹಾಸಿಗೆ ಹಿಡಿದಳು.

ಒಂದೆರಡು ದಿನ ಚಿಕಿತ್ಸೆಯನ್ನು ಕೊಡಿಸಿದ ಅಪ್ಪ. ಆದರೆ ಅಜ್ಜಿಯು ಗುಣಮುಖರಾಗಲೇ ಇಲ್ಲ. ಹತ್ತು ದಿನಗಳ ಕಾಲ ಹಾಸಿಗೆಯಲ್ಲಿ ಮಲಗಿದ್ದಳು. ಬರ ಬರುತ್ತಾ ಜ್ವರವು ಜಾಸ್ತಿಯಾಗಿ ಊಟವನ್ನೇ ಬಿಡುತ್ತಾ ಬಂದಳು. ನಾನಾಗ ಮೂರನೇ ತರಗತಿಯಲ್ಲಿ ಓದುತ್ತಿದ್ದೆನೆಂದೇ ನನ್ನ ಭಾವನೆ. ಹಾಸಿಗೆಯಲ್ಲಿದ್ದ ಅಜ್ಜಿಯನ್ನು ನೋಡಲು ಹೋಗುತ್ತಿರಲಿಲ್ಲ. ಏನೋ ಒಂಥರಾ ಭಯ ನನ್ನಲ್ಲಿತ್ತು. ಒಂದು ದಿನ ಶಾಲೆ ಮುಗಿಸಿಕೊಂಡು ಬಂದ ನಾನು ಹಟ್ಟಿ ಅಂಗಳದಲ್ಲಿ ಬಹಳಷ್ಟು ಜನ ಸೇರಿದ್ದನ್ನು ನೋಡಿದೆ. ತಂದೆಯವರು ಅಜ್ಜಿಯ ಬಾಯಿಗೆ ನೀರನ್ನು ಬಿಡುತ್ತಿದ್ದರು. ಅಕ್ಕಂದಿರು ಆಗಲೆ ಈ ಕಾರ್ಯ ಮಾಡಿ ಮುಗಿಸಿದ್ದರು. ಅಲ್ಲಿಗೆ ಹೋದ ನನ್ನನ್ನೂ ಕರೆದು ನೀರು ಬಿಡು ಎಂದರು. ನಾನು ನಡುಗುತ್ತಲೆ ಹಾಗೆ ಮಾಡಿದೆ. ಸಣ್ಣಗೆ ಉಸಿರಾಡುತ್ತಿದ್ದ ಅಜ್ಜಿ ಉಸಿರು ನಿಲ್ಲಿಸಿದ್ದಳು. ಇದನ್ನು ನೋಡಿ ಅಲ್ಲಿದ್ದವರೆಲ್ಲಾ ನಿನ್ನ ಮೇಲೆ ಬಹಳ ಪ್ರೀತಿ ಇರಬೇಕು ಎಂದರು. ಇದ್ಯಾವುದು ತಿಳಿಯದ ನಾನು ಸುಮ್ಮನಾಗಿದ್ದೆ. ನಂತರ ದಿನಗಳಲ್ಲಿ ಸಾಕಷ್ಟು ಬಾರಿ ಅಪ್ಪ ಕೊರಗಿದ್ದು ಇದೆ. ನನ್ನಿಂದ ಹೀಗಾಯಿತಲ್ಲ ಎಂಬ ಭಾವ ಅವರನ್ನು ಸದಾ ಕಾಡಿದ್ದನ್ನು ನೋಡಿದ್ದೇನೆ. ದಿನಕಳೆದಂತೆ ಬದುಕಿನ ಬಂಡಿ ಸಾಗುತ್ತ ನಾವು ತಕ್ಕಮಟ್ಟಿಗೆ ಸ್ಥಿತಿವಂತರಾಗಿ ಬದುಕು ಒಂದು ಸ್ಥಿತಿಗೆ ಬಂದ ಮೇಲೆ ಹಬ್ಬದಲ್ಲಿ ಹೋಳಿಗೆ ಮಾಡಿ ತಿನ್ನುವಾಗಲೆಲ್ಲ ಸಾಕಷ್ಟು ಬಾರಿ ಅವರ ಬಗ್ಗೆ ಮಾತಾಡಿಕೊಂಡಿದ್ದೇವೆ. ಯುಗಾದಿ ಹಬ್ಬದ ದಿನಗಳಲ್ಲಿ ಹೋಳಿಗೆಯನ್ನು ಆಕೆಯ ಸಮಾಧಿ ಮೇಲೆ ಇಟ್ಟು ಪೂಜೆ ಮಾಡಿ ಬಂದಾಗಲೆಲ್ಲ ನನ್ನ ಅಜ್ಜಿ ನೆನಪಾಗುತ್ತಾಳೆ. ಅವಳ ಬೊಚ್ಚುಬಾಯಿಯ ನಗು ಅಂದು ಚೆಲ್ಲಿದ ಹೋಳಿಗೆಯ ತುಂಡುಗಳು, ಅವಳು ಬದುಕನ್ನು ಗ್ರಹಿಸುತ್ತಿದ್ದ ರೀತಿ ಅಜ್ಜಿಯ ಗಂಭೀರ ಮುಖ ಎಲ್ಲವೂ ಒಟ್ಟೊಟ್ಟಿಗೆ ನೆನಪಾಗುತ್ತವೆ.